ಕಾವ್ಯ ಸಂಗಾತಿ
ಅದೇ ಅವ್ವನ ತುಂಡಾದ ಸೆರಗು…!!
ದೇವರಾಜ್ ಹುಣಸಿಕಟ್ಟಿ.
ಅವ್ವನ ಆ ಸೆರಗು ಸದಾ
ತಲಿಸುತ್ತಿ ಬಿಸಿಲಿಗೆ ನೆರಳಾಗಿ..!
ಗೌರವಕ್ಕೆ ತಲಿಬಾಗಿ…!
ಬಾಗಿಲಿಗೆ ಕಟ್ಟಿದ ತೋರಣದ ಹಾಗೆ
ಸದಾ ತಲಿ ಮ್ಯಾಲ್ ಇರತಿತ್ತು
ಗರತಿಗೆ ಸೊತ್ತಾಗಿ…!
ಈಗೀಗ ಅದು ತುಂಡಾಗಿ
ಮಗಳ ತೆಲಿ ಮ್ಯಾಲ ಬಂತು
ಹಿಜಾಬ್ ಆಗಿ….!
ನನಗ್ ಈ ಸೆರಗು ಅಂದ್ರ್ ಸಾಕು
ನೂರೆಂಟು ನೆನಪು…..!!
ನಾನು ಅತ್ತಾಗ ಅವ್ವ
ರೊಟ್ಟಿ ಸುಡೋ ಕೈಲಿ ಮೂಗಿನ
ಸಿಂಬಳ ಸೆರಗಿಂದ್ ತೆಗೆದಿದ್ದು…!!
ಅದೇ ಸೆರಗಿಂದ್ ತೊಳದ ಮುಖ
ವರೆಸಿದ್ದು….!
ಬಿದ್ದು ಗಾಯವಾದಾಗ ಅದೇ ಸೆರಗು ಚುಂಗ್ ಹರಿದು ಕಾಲಿಗೆ ಕಟ್ಟಿದ್ದು..!!
ಜ್ವರಾ ಬಂದಾಗ ಅದೇ ಸೆರಗಿನ ತುಂಡನ್ನೇ ಹಸಿ ಬಟ್ಟೆ ಮಾಡಿ
ತಲಿಗಿಟ್ಟಿದ್ದು…!!
ಹೆಕ್ಕಿದಷ್ಟು ಬಿಕ್ಕಿದಷ್ಟು ಒಂದ್ಕಕಿಂತ ಒಂದ್ ಚೆಂದದ ನೆನಪು..!
ಒಂದೊಂದಕ್ಕೂ
ನವಿಲು ಗರಿಯ ಚಿತ್ತಾರದ ಒನಪು….!!
ನನ್ನವ್ವ ಅವರ ಅವ್ವ ಬ್ಯಾರಲ್ಲ…
ತಿನ್ನಿಸಿದವರಾರೋ ಅಫೀಮು…!!
ಇರಬೇಕ್….
ರಾಜಕಾರಣದ ನಮಕ್ ಹರಾಮ್..!!
ಈ ಹರೆಯದ ಕೂಸುಗಳಿಗೊ ಹುಚ್ಚು..!
ನೆತ್ತಿಗೇರಿ ಹತ್ತಿದೆ ಆರದ ಕಿಚ್ಚು….!
ತುಂಡಾದ ಸೆರಗನ್ನ ವಿರೋಧಿಸತಿವಿ
ಅಂತಾ ಗೊತ್ತಾದ್ರ ಅಕೀ ಸುಮ್ನೆ ಇರ್ತಾಳೆ ಅನ್ಕೋ ಬ್ಯಾಡ್ರಿ..!!
ಇವರ ಬಾಲ್ ಕಟ್ ಮಾಡಿ ಕುಂದ್ರಿಸಿಲಿಲ್ಲ ಅಂದ್ರ ಅಕೀ ಮನಿ ಮನಿಯಾಕಿನ ಅವ್ವನ ಅನಬ್ಯಾಡ್ರಿ…
ಅದೇ ಈ ನೆಲದ ಅವ್ವನ ಗುಣ…..!!
ತುಂಡಾದ ಸೆರಗಿನ ಕಿಚ್ಚ ಅದ…
ಸೆರಗಿನೊಳಗೆ ಕಟ್ಟಿ ಕೊಂಡ ಕೆಂಡದ…!!
ಮುಸಿರಿ ಬಾಯಿ ವರೆಸಿದ್ದ ಸೆರಗು
ತೊಳದ ಕುಂಡಿ ವರೆಸಿದ್ದ ಸೆರಗು
ತೊಟ್ಟಿಲ ಕಟ್ಟಿ ಜೋಗಳ ಹಾಡಿದ್ದ ಸೆರಗು…
ಈಗೀಗ ತುಂಡಾಗಿ ಹಿಜಾಬ್ ಆಗಿದ್ದ ಸೆರಗು…!!
( ತಾಯಿ ಸೆರಗಿನ ಸುದ್ದಿಗೆ ಬಂದ್ರ್ ಯಾರಾರ್ ಸುಮ್ನೆ ಇರತಾರ್ ಏನ್…? ಮತ್ತ್…!)