ಕಾವ್ಯ ಸಂಗಾತಿ
ಜಗವು ಬೆಳೆದು ನಿಲ್ಲುವ ಪರಿ
ಭೀಮರಾಯ ಹೇಮನೂರ
ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ
ತನ್ನ ಸುಂದರ ಭವಿಷ್ಯವನ್ನು
ಭದ್ರ ಅಡಿಪಾಯಕ್ಕೆ ಬಳಸಿಕೊಂಡು
ಮಹಾತ್ಮರ ತ್ಯಾಗ ಬಲಿದಾನವನ್ನು.
ಜಗದ ನಿರ್ಮಾಣವೆಂದರೆ ನಮ್ಮನೆಯೆ ?
ಮಾತಾಡುವುದಲ್ಲವದು ಸುಮ್ಮನೆ !
ಸ್ವಾರ್ಥಕ್ಕೆಡೆಯಿಲ್ಲದ, ಟೊಳ್ಳಿಲ್ಲದ
ಗುಂಡಿಗಂಜದ,ಗಂಡೆದೆಯರೇ ಬೇಕು ಬುನಾದಿಗೆ.
ಜಗದ ಜಾಯಮಾನವೇ ಅಂತಹದು
ಅವರಿವರ ಉದಾಹರಿಸಲಾಗದು.
ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ
ಸತ್ಯ, ಧರ್ಮ ,ಅಹಿಂಸೆ ಎಂಬ ಸದೃಢ
ಸೈಜುಗಲ್ಲುಗಳನ್ನು ಬಳಸಿಕೊಂಡು
ಸತ್ಯಾಗ್ರಹವೆಂಬ ತಾತ್ವಿಕ ಸಿಟ್ಟು ಸೆಡವಿನ
ಇಟ್ಟಿಗೆಗಳನ್ನೇರಿಸಿಕೊಂಡು.
ಶಾಂತಿ, ಸಮಾಧಾನದ ಗಚ್ಚಿನೊಳಗೆ
ಗಾಂಧಿಯಂತಹವರ ಮುಚ್ಚಿಕೊಂಡು
ಹಸಿ ಹಸಿ ಗಾರೆಯ ಮೇಲೆ
ಬುದ್ಧ ಬಸವರ ಹೆಜ್ಜೆಗಳನ್ನಿರಿಸಿಕೊಂಡು.
ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ
ಯಾರಿಗೂ ಕೇಡುಂಟು ಮಾಡದ
ಕಾಯಕ ಜೀವಿಗಳೆಂಬ ಕಿಟಕಿ
ಬಾಗಿಲುಗಳನ್ನು ತೆರೆದುಕೊಂಡು
ಕಾಲಕ್ಕೆ ತಕ್ಕ ಬಣ್ಣ ಬಳಿದುಕೊಂಡು.
ಜಗವು ತನ್ನಿಂತಾನೇ ಗಟ್ಟಿಕೊಳ್ಳುತ್ತದೆ
ತನ್ನಿಚ್ಛೆಗೆ ಬೇಕಾದಷ್ಟು ಗಾಳಿ, ಮಳೆ
ಬಿಸಿಲು,ಬೆಳಕು, ಬೆಳದಿಂಗಳ ತರಿಸಿಕೊಂಡು,
ಬಗೆಬಗೆಯ ಬಣ್ಣದ ಹೂವರಳಿಸಿಕೊಂಡು.
ಜಗವೊಂದು ಮನೆಯಾಗಿ ಯುಗಯುಗಕೂ
ಸಕಲ ಜೀವ ಸಂಕುಲವ ಸಾವರಿಸಿಕೊಂಡು
ಸಹಜ ಪ್ರೀತಿಯ ಆವರಿಸಿಕೊಂಡು.
ಜಗದ ಗೋಡೆಗಳ ಮೇಲೆ
ಸ್ವಾರ್ಥಿಗಳ ಭಾವಚಿತ್ರಗಳಿಲ್ಲ.
ಚಿತ್ರವಿಲ್ಲದ ಭಾವ ಜಗಜಗಿಸುತ್ತಿದೆ
ನದಿ, ಹಳ್ಳ ಬಯಲು ಬೆಟ್ಟವಾಗಿ
ಹರಿದು ಹೋಗದ ಹಾಗೆ ರೂಪಿಸಿಕೊಂಡು.
ಗಂಧದಂತೆ ತೇಯ್ದವರ ಮುಂದೆ
ನಂದಾದೀಪವನ್ನಿರಿಸಿಕೊಂಡು.
ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ
ತನ್ನ ಸುಂದರ ಭವಿಷ್ಯವನ್ನು
ಭದ್ರ ಅಡಿಪಾಯಕ್ಕೆ ಬಳಸಿಕೊಂಡು
ಮಹಾತ್ಮರ ತ್ಯಾಗ ಬಲಿದಾನವನ್ನು.
ಚೆನ್ನಾಗಿದೆ
ಧನ್ಯವಾದಗಳು ತಮಗೆ
ತುಂಬಾ ಅರ್ಥಪೂರ್ಣ ಸಾಲುಗಳು ಸರ್ ಅಭಿನಂದನೆಗಳು
ಧನ್ಯವಾದಗಳು
ಅಥ೯ಪೂಣ೯ ಬರವಣಿಗೆ. ಅಭಿನಂದನೆಗಳು ಸರ್
ಧನ್ಯವಾದಗಳು ಮೇಡಂ