ಕಥಾ ಸಂಗಾತಿ
” ಧವಳಗಿರಿಯ ಹೆಮ್ಮೆಯ ಕುವರಿ ಈ ಬಾಲೆ “
ಅನುಸೂಯ ಯತೀಶ್.
ಪ್ರಕೃತಿಯ ಮಡಿಲಲ್ಲಿ ಇರುವ ಒಂದು ಸುಂದರವಾದ ಹಳ್ಳಿ ಧವಳಗಿರಿ . ಹೆಸರಿಗೆ ತಕ್ಕಂತೆ ಸುತ್ತಲೂ ಗಿರಿಶಿಖರಗಳು ಆ ಊರಿನ ಹೊನ್ನ ಕಳಸದಂತೆ ಕಂಗೊಳಿಸುತ್ತಿದ್ದವು. ಜಲಲ ಜಲಧಾರೆಯೊಂದಿಗೆ ಮಯೂರನಂತೆ ನರ್ತಿಸುತ ಸುಂದರ ಮೈಮಾಟ ತೋರುತ ರಮಣೀಯ ನೋಟ ಬೀರಿ ಕಣ್ಮನ ಸೆಳೆವ ನದಿ ಹೊಳೆಗಳು ಆ ಹಳ್ಳಿಯ ಸೊಬಗನ್ನು ಹೆಚ್ಚಿಸಿದರೆ, ಆಗಾಗ ಕೂಹೂ ಕೂಹೂ ಗಾನದೊಂದಿಗೆ ಕಿವಿಗೆ ತಂಪನೀಯುವ ಕೋಗಿಲೆಗಳ ಸುಮಧುರ ಗಾನ, ವನವೆಲ್ಲಾ ಸುತ್ತಿ ಬೇಸರವಾದಾಗ ಹಳ್ಳಿಯ ಕಡೆ ಬಂದು ತನ್ನ ಸುಂದರ ನಾಟ್ಯದಿಂದ ಊರಿನ ಜನರನ್ನು ರಂಜಿಸುವ ಮಯೂರ ಸಮೂಹ ,ಎತ್ತ ನೋಡಿದರತ್ತ ಹಚ್ಚ ಹಸಿರಿನ ಐಸಿರಿಯ ಹೊದ್ದು ಹಸಿರು ಸೀರೆ ಹಸಿರು ಕುಪ್ಪಸ ತೊಟ್ಟು ಶೃಂಗಾರಗೊಂಡ ಭೂದೇವಿ ಆ ಹಳ್ಳಿಯನ್ನು ಶೋಭಾಯಾನಮಾನವಾಗಿಸಿ ಮಧುವಣಗಿತ್ತಿಯಂತೆ ಹಳ್ಳಿಯನ್ನು ಅಲಂಕರಿಸಿದ್ದವು.
ಇಂತಹ ಹಳ್ಳಿಯಲ್ಲಿ ಶಿವಪ್ಪ ಹಾಗೂ ಮಾದಪ್ಪರ ಎರಡು ಕುಟುಂಬಗಳು ಆಜುಬಾಜಿಗಿದ್ದವು. ಶಿವಪ್ಪ ಒಬ್ಬ ರೈತ ಅವನ ಹೆಂಡತಿ ಪಾರ್ವತಿ ಇಬ್ಬರೂ ಅವಿದ್ಯಾವಂತರಾಗಿದ್ದರು. ಅವರ ಒಬ್ಬಳೆ ಮಗಳು ಲಾವಣ್ಯ . ಮೋನಾಲಿಸಳ ಸೌಂದರ್ಯವನ್ನು ನಾಚಿಸುವಂತಹ ಸುರಧ್ರೂಪಿ ಹೆಣ್ಣು ಮಗಳು . ಬಂಗಾರದಂತಹ ಮೈಬಣ್ಣ, ಕಪ್ಪು ದ್ರಾಕ್ಷಿಯಂತೆ ಮಿರ ಮಿರ ಮಿನುಗುವ ಕಣ್ಣುಗಳು, ಗುಂಗುರು ಕೂದಲ ನೀಳವಾದ ಕೇಶರಾಶಿ, ಸುಂದರ ಮೈಕಟ್ಟು ,ಜಿಂಕೆಯಂತಹ ನಡಿಗೆ , ಒಟ್ಟಾರೆ ಲಾವಣ್ಯಳ ಸೌಂದರ್ಯ ವರ್ಣಿಸಲು ಪದಗಳಿಗೂ ಬಡತನ ಅಷ್ಟು ಅದ್ಭುತ ಚೆಲುವೆ. ಅವಳಿದ್ದ ಪ್ರಕೃತಿಯ ಸೊಬಗನ್ನು ನಾಚಿಸುವಂತಹ ಸೌಂದರ್ಯದ ಗಣಿಯಾಗಿದ್ದಳು .ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಮಂದಿಯೂ ಕೂಡ ಇವಳ ರೂಪರಾಶಿಗೆ ಬೆರಗಾಗಿ ನಮಗೂ ಇಂತಹ ಒಬ್ಬ ಮುದ್ದಾದ ಮಗಳನ್ನು ಕೊಡಬಾರದಿತ್ತೆ ದೇವ ಎಂದು ಹಂಬಲಿಸುವಂತೆ ಮಾಡುವಷ್ಟು ಅಂದಗಾತಿಯಾಗಿದ್ದಳು.
ಲಾವಣ್ಯಳನ್ನು ಬಹಳ ಭಯದ ವಾತಾವರಣದಲ್ಲಿ, ಕಟ್ಟುಪಾಡುಗಳ ಅಧೀನದಲ್ಲಿ, ಮಡಿವಂತಿಕೆಯಿಂದ ಬೆಳೆಸಿದ್ದರು . ಊರಲ್ಲಿ ತಲೆ ಎತ್ತಿ ನಡೆಯುವಂತಿಲ್ಲ , ಗಂಡು ಮಕ್ಕಳ ಜೊತೆ ಮಾತಾಡುವಂತಿಲ್ಲ , ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ, ಹಾಗಾಗಿ ಲಾವಣ್ಯ ಅಮ್ಮ ಅಪ್ಪರ ಕೀ ಕೊಡುವ ಗೊಂಬೆಯಾಗಿದ್ದಳು.ಇದರ ಪರಿಣಾಮ ಧೈರ್ಯ ಸಾಹಸದ ಮನಸ್ಥಿತಿ ಇರಲಿಲ್ಲ . ಆಲೋಚನೆ ಮಾಡುವುದು ಗೊತ್ತೆ ಇರಲಿಲ್ಲಾ . ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವಂತೂ ಮರಿಚಿಕೆಯೇ ಸರಿ .
ಇವರ ಪಕ್ಕದಲ್ಲೇ ಇದ್ದ ಮಾದಪ್ಪನ ಮನೆಯದು ಬೇರೆಯದೆ ಕತೆ. ಮಾದಪ್ಪ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು.ಅವನ ಹೆಂಡತಿ ಗಿರಿಜ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು .ಇಬ್ಬರೂ ಲೋಕ ಜ್ಞಾನವುಳ್ಳ ಚುರುಕು ದಂಪತಿಗಳು .ಇವರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಸುಮತಿ. ಹೆಸರಿಗೆ ತಕ್ಕಂತೆ ಬಹಳ ಕುಶಲಮತಿಯಾಗಿದ್ದಳು. ಸುಮತಿ ಸಾಧಾರಣ ಬಣ್ಣದ ಚಂದದ ಮುಖ ಲಕ್ಷಣವುಳ್ಳ ,ಆಕರ್ಷಕ ಮೈಮಾಟದ ಹುಡುಗಿ . ಕೃಷ್ಣ ಸುಂದರಿಯಾದರೂ ನೋಡಿದವರು ಮತ್ತೆ ಮತ್ತೆ ನೋಡಬೆಕೆನಿಸುವಂತಹ ವ್ಯಕ್ತಿತ್ವ ಅವಳದು .ಗಿರಿಜ ದಂಪತಿಗಳು ಇವಳನ್ನು ಸ್ವತಂತ್ರ ಹಕ್ಕಿಯಂತೆ ಬೆಳೆಸಿದ್ದರು . ಇವಳೊಂದಿಗೆ ಅಪ್ಪ ಅಮ್ಮ ಇಬ್ಬರೂ ಸ್ನೇಹಿತರಂತೆ ಇದ್ದರು . ಲೋಕ ಜ್ಞಾನದ ಅನುಭವಗಳನ್ನು, ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ತುಂಬುತಿದ್ದರು . ಪ್ರಯುಕ್ತ ಇವಳಿಗೆ ಉತ್ತಮ ಆತ್ಮವಿಶ್ವಾಸ ಹಾಗೂ ಏನು ಬೇಕಾದರೂ ಎದುರಿಸುವ ಚಾಕಚಕ್ಯತೆ ಇತ್ತು .
ಲಾವಣ್ಯ ಹಾಗೂ ಸುಮತಿ ಆತ್ಮೀಯ ಗೆಳತಿಯರಾಗಿದ್ದು 10 ನೇ ತರಗತಿಯಲ್ಲಿ ಓದುತ್ತಿದ್ದು ಊರಿಗೆ ಸ್ವಲ್ಪ ದೂರದಲ್ಲಿ ಇದ್ದ ಪ್ರೌಢ ಶಾಲೆಗೆ ಜೊತೆಗೂಡಿ ಹೋಗಿ ಬರುತ್ತಿದ್ದರು. ಲಾವಣ್ಯ ಶಾಲೆಗೆ ಸಿದ್ದಳಾಗಿ ಅಮ್ಮ ನಾನು ಶಾಲೆಗೆ ಹೋಗಿ ಬರುವೆ ಎಂದಳು . ಆಗ ಅಮ್ಮ ಆಯಿತು ಮಗಳೇ ಹೋಗಿ ಬಾ ಆದರೆ ದಾರಿಯಲ್ಲಿ ಸಿಕ್ಕ ಸಿಕ್ಕವರ ಜೊತೆ ಹರಟೆ ಹೊಡಿಯಬೇಡ . ಗಂಡು ಮಕ್ಕಳಿಂದ ದೂರವಿರು ,ಹಲ್ಲಕಿರಿಯುತ ಅವರ ಜೊತೆ ಲಲ್ಲೆ ಹೊಡೆಯಬೇಡ ಎಂದಳು.ಆಗಲಿ ಅಮ್ಮ ಎಂದು ತನ್ನ ಗೆಳತಿ ಸುಮತಿಯ ಮನೆಯ ಬಳಿ ಬಂದಾಗ ಸುಮತಿಯ ಅಮ್ಮ ಗಿರಿಜಳು ನಸುನಗುತ್ತಾ, ಬಾ , ಲಾವಣ್ಯ ಇನ್ನೇನು ಸುಮತಿ ಬರುವಳು ಜೊತೆಯಾಗಿ ಹೋಗಿ ಅಂದರು. ನಂತರ ಇಬ್ಬರನ್ನು ಬೀಳ್ಕೋಡುತ್ತಾ ಗಿರಿಜ ಮಕ್ಕಳೆ ನೀವಿಬ್ಬರೂ ಭಯ ಪಡಬಾರದು . ನಿಮಗೆ ಯಾರಾದರೂ ದಾರಿಯಲ್ಲಿ ತೊಂದರೆ ಮಾಡಿದರೆ ನಿರ್ಭೀತಿಯಿಂದ ಎದುರಿಸಿ , ಏನೇ ಬಂದರು ತಕ್ಕ ಪ್ರತ್ಯುತ್ತರವನ್ನು ಕೊಟ್ಟು ಬನ್ನಿ ಅಂದಳು . ಆಗಲಿ ಬಿಡಮ್ಮ ನಾನು ನಿನ್ನ ಮಗಳು ನಿನ್ನಂತೆ ಧೈರ್ಯಶಾಲಿ ಎಂದು ನಕ್ಕು ಮುಂದೆ ಸಾಗಿದಳು ಸುಮತಿ . ಸುಂದರ ಸೊಬಗಿನ ಕಾನನದ ನಡುವೆ ಗೆಳತಿಯರಿಬ್ಬರು ನಡೆದು ಶಾಲೆಗೆ ಹೋಗುತಿದ್ದರೇ ದಿನಕರನು ಈ ಚೆಲುವೆಯರ ಸೌಂದರ್ಯಕ್ಕೆ ಮನಸೋತು ಗಿಡ ಮರಗಳ ನಡುವೆ ಹಾದು ಬಂದು ತನ್ನ ಹೊಂಬಿಸಿಲ ಕಿರಣಗಳ ಮೂಲಕ ಗೆಳತಿಯರ ನುಣುಪಾದ ಮೊಗವನ್ನು ಚುಂಬಿಸುತಿದ್ದನು .
ಹೀಗೆ ಪ್ರತಿ ದಿನ ಲಾವಣ್ಯ ಹಾಗೂ ಸುಮತಿ ಹಳ್ಳಿಯ ದಾರಿಯಲ್ಲಿ ನಡೆದು ಶಾಲೆಗೆ ಹೋಗಿ ಶಾಲೆ ಮುಗಿದ ಮೇಲೆ ಸಾವಿತ್ರಿ ಬಾಯಿ ಎಂಬ ಅವರ ಶಿಕ್ಷಕಿಯೇ ಮಾಡುತ್ತಿದ್ದ ಉಚಿತ ಮನೆ ಪಾಠಕ್ಕೆ ಹೋಗಿ ಬರುತ್ತಿದ್ದರು. ಆ ಶಿಕ್ಷಕಿ ಮಾನವೀಯತೆಯ ಸಾಕಾರ ಮೂರ್ತಿ, ಪ್ರೀತಿಯ ಗಣಿ , ವಿದ್ಯಾರ್ಥಿಗಳೆಲ್ಲರನ್ನು ತನ್ನ ಮಕ್ಕಳೆಂದು ಭಾವಿಸಿ ನಿಶ್ಕಲ್ಮಷವಾದ ಪ್ರೇಮಭಾವದಿಂದ ಪಾಠ ಮಾಡುತ್ತಾ ಈ ಸಮಾಜಕ್ಕೆ ಉತ್ಕೃಷ್ಟ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದ ಅಕ್ಷರ ಮಾತೆಯಾಗಿದ್ದಳು.
.
ಇಂತಹ ಸದ್ಗುಣಿ ಶಿಕ್ಷಕಿಗೆ ಒಬ್ಬ ಕಾಲೇಜು ಓದುವ ಗುಣೇಶ್ ಎಂಬ ಮಗನಿದ್ದನು . ಅಮ್ಮನ ಸಂಪಾದನೆಯಲ್ಲಿ ಯಾವುದೇ ಚಿಂತಯಿಲ್ಲದೇ ಚನ್ನಾಗಿ ತಿಂದು ಕೊಬ್ಬಿದ ಕುದುರೆಯಂತೆ ದಷ್ಠ ಪುಷ್ಠವಾಗಿ ಬೆಳೆದಿದ್ದನು .ಹೆಂಗೆಳೆಯರನ್ನು ತನ್ನತ್ತ ಸೆಳೆಯುವ ಮಾದಕ ನೋಟ ಬೀರುವ ಚಿಗುರು ಮೀಸೆಯ ಯುವಕ ಇವನಾಗಿದ್ಧನು . ತಾಯಿ ತನ್ನ ಮಗ ಸರ್ವ ಗುಣ ಸಂಪನ್ನನಾಗಲಿ ಅಂತ ಗುಣೇಶ್ ಅಂತ ಹೆಸರಿಟ್ಟರೆ ಇವನೋ ಸಕಲ ದುರ್ಗಣಗಳ ಅಧಿಪತಿಯಾಗಿದ್ದನು .ವಿಕೃತ ಮನಸ್ಸಿನ ಕಾಮ ಪಿಶಾಚಿಯಾಗಿದ್ದನು . ಹೆಣ್ಣು ಮಕ್ಕಳನ್ನು ಕಂಡರೇ ಸಾಕು ಜೊಲ್ಲು ಸುರಿಸುತ್ತ ತನ್ನ ಪೈಶಾಚಿಕ ಮನದೊಳಗೆ ಅವರನ್ನು ವಿವಸ್ತ್ರಗೊಳಿಸಿ ಮೃಗೀಯ ಆನಂದ ಅನುಭವಿಸುತಿದ್ದನು. ಆದರೆ ತನ್ನ ಟೀಚರ್ ತಾಯಿಯ ಮುಂದೆ ಸಜ್ಜನನಂತೆ ಸದ್ಗುಣ ತೋರುತ್ತ ಸದ್ಭಾವದ ಮುಖವಾಡ ಧರಿಸಿ ಅವರು ಮಗನ ಬಗ್ಗೆ ಹೆಮ್ಮೆ ಪಡುವಂತಹ ನಾಟಕೀಯ ಬಾಳು ಬಾಳುತ್ತಿದ್ದನು . ಉತ್ತಮರ ಹೊಟ್ಟೆಯಲ್ಲಿ ಕೆಟ್ಟ ಹುಳು ಹುಟ್ಟುತ್ತದೆ ಎಂಬ ಗಾದೆ ಮಾತಿಗೆ ಅನ್ವರ್ಥಕನಾಗಿದ್ದನು.
ಪ್ರತಿದಿನ ತನ್ನ ಮನೆಗೆ ಪಾಠಕ್ಕೆ ಬರುವ ಲಾವಣ್ಯಳ ಸೌಂದರ್ಯ ಇವನ ಕಣ್ಣು ಕುಕ್ಕಿತಿತ್ತು . ಹೇಗಾದರು ಮಾಡಿ ಅವಳ ಸೌಂದರ್ಯವನ್ನು ಸವಿಯಬೇಕೆಂದು ಮನದಲಿ ಗುಣಿತ ಹಾಕುತ್ತ ಸದಾವಕಾಶಕ್ಕಾಗಿ ಹವಣಿಸುತ್ತಿದ್ದನು . ಲಾವಣ್ಯ ಹೆದರುವ ಗುಣದವಳಾದರೂ ಅವಳ ಗೆಳತಿ ಸುಮತಿ ಸದಾ ಅವಳ ಬೆಂಗಾವಲಾಗಿ ಇದ್ದುದರಿಂದ ಇವನ ಆಸೆ ಫಲಿಸಿರಲಿಲ್ಲಾ. ಕಾರಣ ಸುಮತಿಯನ್ನು ಏಮಾರಿಸುವುದು ಸುಲಭದ ಕೆಲಸವಲ್ಲಾ .ಆದರೂ ಸಮಯಕ್ಕಾಗಿ ನರಿಯಂತೆ ಹೊಂಚು ಹಾಕುತ್ತಿದ್ದನು .
ಅಂತು ಅಂತಹ ದಿನವೊಂದು ಬಂದೇ ಬಿಟ್ಟಿತು . ಒಮ್ಮೆ ಸುಮತಿ ಅನಾರೋಗ್ಯದ ನಿಮಿತ್ತ ಶಾಲೆಗೆ ಬರಲಿಲ್ಲ. ಒಲ್ಲದ ಮನಸ್ಸಿನಿಂದ ಲಾವಣ್ಯ ಗೆಳತಿಯ ಅನುಪಸ್ಥಿತಿಯಲ್ಲಿ ತಾನೊಬ್ಬಳೆ ಶಾಲೆಗೆ ಬರಬೇಕಾಯ್ತು. ಶಾಲೆ ಮುಗಿಸಿ ಇವಳು ಪಾಠದ ಮನೆಗೆ ಬಂದಳು ಅಂದು ಇನ್ನು ಯಾವ ಮಕ್ಕಳು ಬಂದಿರಲಿಲ್ಲಾ. ಶಾಲೆಯಲ್ಲಿ ಶಿಕ್ಷಕರ ಸಭೆ ಕರೆದಿದ್ದರಿಂದ ಅವರ ಟೀಚರ್ ಕೂಡ ಇನ್ನು ಮನೆಗೆ ಬಂದಿರಲಿಲ್ಲ.ಇಂತಹ ಸುವರ್ಣಾವಕಾಶಕ್ಕಾಗಿ ಕಾಯುತ್ತಿದ್ದ ಕಾಮಾಂದ ಗುಣೇಶ್ ಲಾವಣ್ಯಳನ್ನು ನೋಡಿದ ಕೂಡಲೆ ಅವರ ಮನೆಯ ಬಾಗಿಲನ್ನು ಮುಚ್ಚಿದನು.
ಹಸಿದ ಕೂಳ ವಾರ್ಘನು ತನ್ನ ಬೇಟೆಯ ಅರಸಿ ಬಂದಂತೆ ಕಾಣುತಿದ್ದನು. ಸೀದಾ ಲಾವಣ್ಯಳ ಬಳಿ ಬಂದು ನೋಡು ಆ ದೇವರು ಎಷ್ಟು ಕರುಣಾಮಯಿ ನನಗಾಗಿ ನಿನ್ನಂಥ ಅಪ್ಸರೆಯನ್ನು ಸೃಷ್ಟಿಸಿದ್ದಾನೆ .ನಿನ್ನಂದ ಸವಿಯಬೇಕೆಂದು ಬಹಳ ದಿನಗಳಿಂದ ಹಾತೊರೆಯುತ್ತಿದ್ದೆ . ಇಂದು ಆ ಸುವರ್ಣಾವಕಾಶ ಕೂಡಿ ಬಂದಿದೆ. ಲಾವಣ್ಯ ನನ್ನನ್ನು ನಿರಾಶೆಗೊಳಿಸಬೇಡ ಹತ್ತಿರ ಬಾ ಎಂದು ತನ್ನ ಚಿಗುರು ಮೀಸೆಯ ತಿರುವುತ್ತಾ ಅವಳನ್ನೇ ನುಂಗಿ ಬಿಡುವಂತೆ ನೋಡುತಿದ್ದನು . ಇಂದು ನನ್ನಾಸೆ ಪೂರೈಸದ ಹೊರತು ಇಲ್ಲಿಂದ ನೀನು ಹೊರಹೋಗುವುದು ಸಾಧ್ಯವಿಲ್ಲ . ಬಾ ಬೇಗ ಹತ್ತಿರ ಎಂದವನೆ ಅವಳ ಸುಕೋಮಲವಾದ ಗಲ್ಲವನ್ನು ತನ್ನ ಒರಟು ಬಾಯಿಂದ ಕಚ್ಚಿದ .ಅವಳು ಕಿರುಚಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ತನ್ನ ತುಟಿಗಳಿಂದ ಅವಳ ಬಾಯಿಯನ್ನು ಬಿಗಿಯಾಗಿ ಅದುಮಿದ. ಅವನಿಂದ ಬಿಡಿಸಿಕೊಳ್ಳಲು ಲಾವಣ್ಯ ಒದ್ದಾಡುತಿರಲು ಲಾವಣ್ಯಳನ್ನು ಬರ ಸೆಳೆದು ಬಿಗಿಯಾಗಿ ಅಪ್ಪಿಕೊಂಡನು . ಮೊದಲೇ ಭಯ ಬರಿತಳಾಗಿದ್ದ ಇವಳು ಈ ಕಾಮಾಂಧನ ಆಲಿಂಗನದಿಂದ ದಿಗ್ಬ್ರಮೆಗೊಂಡಳು .ಅವನ ಬಿಸಿಯುಸಿರು ಅವಳನ್ನು ಬೆಂಕಿಯ ಜ್ವಾಲೆಯಂತೆ ಸುಡುತಿತ್ತು . ಎಂದೂ ಇಂತಹ ಅನುಭವ ಕಾಣದ ಲಾವಣ್ಯ ಭಯದಿಂದ ತರ ತರ ನಡುಗುತ್ತ ಮತ್ತೊಮ್ಮೆ ಕಿರುಚಿಕೊಳ್ಳಲು ಬಾಯಿ ತೆರೆದಳು. ತಕ್ಷಣ ಕಿರುಚಬೇಡ ಎಂದು ಕಣ್ಸನ್ನೆ ಮಾಡಿದನು. ಅವನ ಮುಖ ಕೋಪದಿಂದ ಕೆಂಪಗೆ ಕಾದ ಕೆಂಡದ ಉಂಡೆಗಳನ್ನು ಉಗಳುತ್ತಿದ್ದವು . ಅಂತಹ ಉಗ್ರರೂಪವನ್ನು ಲಾವಣ್ಯ ಎಂದು ನೋಡಿರಲಿಲ್ಲ . ಅವಳು ದೇಹದ ಮೈ ಮೇಲೆ ಕೈ ಆಡಿಸುತ್ತಾ ಅವಳ ಗುಂಪ್ತಾಂಗಗಳನ್ನು ತನ್ನ ಒರಟು ಕೈಗಳಿಂದ ಸವರಿದ . ಇದರಿಂದ ಅವಳಿಗೆ ತುಂಬಾ ಮುಜುಗರವಾಯಿತು. ಭಯದಿಂದ ದೇಹ ಕಂಪಿಸತೊಡಗಿತು. ಕಾಲುಗಳು ನಿತ್ರಾಣವಾದವು . ಲಾವಣ್ಯಳ ಇಡಿ ದೇಹ ಬೆವರಿನ ಆಗರವಾಯಿತು .
ಈಗ ತಾನು ಹೇಗೆ ಅವನಿಂದ ಪಾರಾಗಬೇಕೆಂದು ತೋಚದೆ ಕೈಮುಗಿಯುತ್ತ ಅಣ್ಣ ದಯಮಾಡಿ ನನ್ನ ಬಿಟ್ಟು ಬಿಡಿ ನಾನು ಮನೆಗೆ ಹೋಗಬೇಕು ನನಗೆ ಭಯವಾಗುತ್ತಿದೆ ಎಂದು ಗಳಗಳನೆ ಅಳತೊಡಗಿದಳು. ನೀನು ನನಗೆ ಒಂದು ಮುತ್ತು ಕೊಡು ಆಗ ನಾನು ನಿನ್ನ ಬಿಟ್ಟುಬಿಡುವೆ ಎಂದು ಅವಳನ್ನು ಅಪ್ಪಿಕೊಳ್ಳಲು ಹೋಗುವ ಸಮಯಕ್ಕೆ ಸರಿಯಾಗಿ ಕಾಲಿಂಗ್ ಬೆಲ್ ರಿಂಗಣಿತು . ಆಗ ಲಾವಣ್ಯಗೆ ಹೋದ ಜೀವ ಬಂದಂತಾಯಿತು . ಅವಳು ನಿಟ್ಟುಸಿರು ಬಿಡುತ್ತಾ ಅವನ ಕಡೆ ನೋಡಿದಳು. ಆಗ ಗುಣೇಶನು ಕೋಪದಿಂದ ನೋಡು ನೀನು ಇಲ್ಲಿ ನಡೆದಿದ್ದನ್ನು ಯಾರಿಗಾದರೂ ಹೇಳಿದರೆ ಚಾಕುವಿನಿಂದ ಕತ್ತು ಕೊಯ್ಯುವೆ ಎಂದು ಚಾಕು ತೋರಿಸಿ ಹೆದರಿಸಿ ಕಳುಹಿಸಿದನು.ಆಗ ಲಾವಣ್ಯ ಬಂದು ಪಾಠದ ಮನೆಯಲ್ಲಿ ಕುಳಿತಳು.
ಆಗ ಗಣೇಶ ಏನು ಅರಿಯದ ಅಮಾಯಕನಂತೆ ಬಾಗಿಲು ತೆರೆದನು . ಶಿಕ್ಷಕಿ ಮನೆಯ ಒಳಗೆ ಬಂದವಳೆ ಅಯ್ಯೋ ಲಾವಣ್ಯ ಇವತ್ತು ಪಾಠ ಇರಲಿಲ್ಲ. ನಾನು ಶಾಲೆಯಲ್ಲಿಯೇ ಹೇಳಿದ್ದೆನು .ಆದರೆ ನೀನು ಆಗ ಆಫೀಸ್ ರೂಮಿಗೆ ಹೋಗಿದ್ದೆ ಅನಿಸುತ್ತೆ ನನಗೆ ಆಮೇಲೆ ನೆನಪಾಯಿತು . ಸರಿ ಪುಟ್ಟ ನೀನು ಮನೆಗೆ ಹೋಗು ಇಂದು ಪಾಠ ಇಲ್ಲ ಅಂದರು.
ಮನೆಗೆ ಬಂದ ಲಾವಣ್ಯ ಮನೆಯಲ್ಲಿ ಭಯದ ವಾತಾವರಣ ಇದ್ದುದರಿಂದ ಯಾರಿಗೂ ಏನೂ ಹೇಳಲಾಗದೆ ಅಮ್ಮ ನನಗೆ ಹಸಿವಿಲ್ಲ ಮಲಗುವೆ ಎಂದು ಹೇಳಿ ಕೋಣೆಗೆ ಹೋಗಿ ಬಾಗಿಲು ಭದ್ರಪಡಿಸಿ ಮಲಗಿದಳು . ಆದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ .ಅದೇ ಭಯಾನಕ ದೃಶ್ಯ ಅವಳ ಕಣ್ಣೆದುರು ಬಂದು ಮೇಳೈಸುತ್ತಿತ್ತು . ಮರೆಯಬೇಕು ಅಂದುಕೊಂಡಷ್ಟು ಪದೇ ಪದೇ ನೆನಪಿನಂಗಳಕ್ಕೆ ಜಾರುತಿದ್ದಳು .
ನಾಳೆ ಎದ್ದ ಕೂಡಲೇ ಅಮ್ಮ ಇಂದು ನಾನು ಶಾಲೆಗೆ ಹೋಗಲ್ಲ ತಲೆನೋವು ಎಂದಳು .ಆಗ ಹೊರಗಿನಿಂದ ಬಂದ ಅಪ್ಪ ಮಗಳೆ ಪರೀಕ್ಷೆ ಹತ್ತಿರ ಬರುತ್ತಿದೆ ಎದ್ದು ಶಾಲೆಗೆ ಹೊರಡು ಅಂದರು. ತಂದೆಯ ಮಾತಿಗೆ ಮರು ಮಾತನಾಡಲು ಸಾಧ್ಯವಿಲ್ಲದೆ ಅನಿವಾರ್ಯವಾಗಿ ಶಾಲೆಗೆ ಹೋದಳು . ಶಾಲೆಯಲ್ಲಿ ಯಾರು ಮುಟ್ಟಿದರೂ ಬೆಚ್ಚಿಬೀಳುತ್ತಿದ್ದಳು. ಇದನ್ನೆಲ್ಲ ಗಮನಿಸುತ್ತಿದ್ದಳು ಸುಮತಿ. ಸಂಜೆ ಮನೆ ಪಾಠಕ್ಕೆ ಹೋಗಲು ಭಯವಾದರೂ ಸುಮತಿ ಜೊತೆಗಿರುವಳಲ್ಲಾ ಎಂದು ಮನದಲ್ಲಿ ಧೈರ್ಯ ತಂದುಕೊಂಡು ಶಿಕ್ಷಕಿಯ ಮನೆ ಕಡೆಗೆ ಹೆಜ್ಜೆ ಹಾಕಿದಳು. ಅವಳ ಕಣ್ಣುಗಳೆಲ್ಲಾ ಗುಣೇಶನನ್ನೆ ಹುಡುಕುತ್ತಿದ್ದವು . ಅವನು ಎಲ್ಲೂ ಕಾಣದಿದ್ದಾಗ ನಿರಾಳವಾಗಿ ಉಸಿರಾಡಿದಳು. ಪಾಠ ಮುಗಿಸಿ ಗೆಳತಿಯರಿಬ್ಬರೂ ಮನೆಯ ದಾರಿ ಹಿಡಿಯಬೇಕು ಎಂದು ಬಾಗಿಲ ಬಳಿ ಬಂದ ಲಾವಣ್ಯ ದೂರದಲ್ಲಿ ಬರುತ್ತಿರುವ ವ್ಯಕ್ತಿಯನ್ನು ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು.
ತಾನು ಯಾರನ್ನೂ ಜೀವನದುದ್ದಕ್ಕೂ ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು ತನ್ನ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಮೈ ಮನವನ್ನು ಆವರಿಸತೊಡಗಿತ್ತು.ಲಾವಣ್ಯ ಗುಣೇಶನನ್ನು ಕಂಡು ಹೆದರಿದಳು.ಆಗ ಸುಮತಿಗೆ ಅವರ ಅಮ್ಮ ಹೇಳುತ್ತಿದ್ದ ಮಾತುಗಳು ನೆನಪಾದವು. ಅವಳಿಗೆ ಲಾವಣ್ಯಳ ಭಯಕ್ಕೆ ಕಾರಣ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ .ಕಾರಣ ಗಿರಿಜ ತನ್ನ ಮಗಳಿಗೆ ಕಿಶೋರ ಶಿಕ್ಷಣ ಅಂದರೆ ಗಂಡು ಮಕ್ಕಳ ಜೊತೆ ವರ್ತಿಸುವಾಗ ಹೇಗೆ ನಡೆದುಕೊಳ್ಳಬೇಕು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಯಾವುದು ಅಂಥ ಸಂದರ್ಭಗಳಲ್ಲಿ ಹೇಗೆ ಅವುಗಳನ್ನು ಎದುರಿಸಬೇಕೆಂದು ಚೆನ್ನಾಗಿ ಅರಿವು ಮೂಡಿಸಿದ್ದರು . ಆದರೆ ಲಾವಣ್ಯಳ ಮನೆಯಲ್ಲಿ ಮಗಳಿಗೆ ಯಾವುದೇ ಜಾಗೃತಿ ಮೂಡಿಸಿರಲಿಲ್ಲ.ಇದರಿಂದ ಅವಳು ಬಹಳವಾಗಿ ಮಾನಸಿಕ ಖಿನ್ನತೆ ಭಯ ಆತಂಕಗಳಿಗೆ ಬಲಿಯಾದಳು.
ಮನೆಯ ದಾರಿಯುದ್ದಕ್ಕೂ ಸುಮತಿ ಲಾವಣ್ಯಳನ್ನು ಏನಾಯಿತು? ಏಕೆ ನೀನು ಗುಣೇಶ ಬಂದಾಗ ಭಯಗೊಂಡೆ ಎಂದು ಪ್ರಶ್ನಿಸುತ್ತಲೆ ಸಾಗಿದಳು. ಆದರೆ ಅವನ ಬೆದರಿಕೆಯ ಮಾತುಗಳು ಅವಳನ್ನು ಮೌನವಾಗಿ ಮನೆ ಸೇರಿಸುವಲ್ಲಿ ಯಶಸ್ವಿಯಾದವು. ಮನೆಗೆ ಬಂದ ಕೂಡಲೆ ಸುಮತಿಯು ಗುಣೇಶನನ್ನು ನೋಡಿದ ಕೂಡಲೇ ಲಾವಣ್ಯಳಲ್ಲಿ ಉಂಟಾದ ಬದಲಾವಣೆ, ಆತಂಕ ಎಲ್ಲವನ್ನೂ ಅಮ್ಮನ ಬಳಿ ವಿವರಿಸಿದಳು. ಆಗ ಗಿರಿಜಳಿಗೆ ಗುಣೇಶನಿಂದ ಆಗಿರುವ ಲೈಂಗಿಕ ಶೋಷಣೆಯ ಅರಿವಾಯಿತು. ಕೂಡಲೇ ತನ್ನ ಮಗಳೊಂದಿಗೆ ಅವರ ಮನೆಗೆ ತೆರಳಿದಳು.
ಗಿರಿಜಳನ್ನು ಕಂಡ ಕೂಡಲೆ ಪಾರ್ವತಿ ಬನ್ನಿ ಗಿರಿಜಕ್ಕ ಅಪರೂಪಕ್ಕೆ ನಮ್ಮ ಮನೆ ಕಡೆ ಬಂದಿದ್ದೀರಿ ಏನು ವಿಷಯ ಅಂದಳು.ಆಗ ಗಿರಿಜ ಕಿಶೋರಿಯರಿಗೆ ಆಗುವ ಲೈಂಗಿಕ ಶೋಷಣೆಯ ಬಗ್ಗೆ ವಿವರಿಸಿದರು . ಏನ್ ಗಿರಿಜಕ್ಕ ನೀವು ಇಂತಹ ಮಾತುಗಳನ್ನು ಮಕ್ಕಳ ಮುಂದೆ ನಾ ಮಾತಾಡೋದು ಎಂದು ಮುಜುಗರ ಪಟ್ಟಳು. ಆಗ ನಡೆದ ವಿಷಯವನ್ನೆಲ್ಲಾ ಹೇಳಿದ ಗಿರಿಜ ನೋಡಿ ಪಾರ್ವತಿಯವರೆ ಎಲ್ಲಾ ತಂದೆ ತಾಯಿಗಳು ಮಾಡುವ ದೊಡ್ಡ ತಪ್ಪು ಇದೆ . ಎಲ್ಲವನ್ನೂ ಗೌಪ್ಯವಾಗಿ ಇಡಲು ಹೋಗಿ ಹರಿಹರೆಯದಲ್ಲಿ ಮಕ್ಕಳಿಗೆ ಬೇಕಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಯ ಮಾಹಿತಿಯನ್ನು ನಾವು ತಿಳಿಸುವುದಿಲ್ಲ. ಹದಿ ಬರೆಯದ ಮಕ್ಕಳಿಗೆ ಮನೆಯ ಪರಿಸರದಲ್ಲಿ ಹಾಗೂ ಹೊರ ಜಗತ್ತಿನಲ್ಲಿ ಅಚಾನಕ್ ಆಗಿ ಒದಗುವ ಲೈಂಗಿಕ ಶೋಷಣೆ ಮತ್ತು ಅದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಮಾರ್ಗೋಪಾಯಗಳ ಅರಿವು ಮೂಡಿಸಬೇಕು .ಇದರಿಂದ ಕಿಶೋರಾಶಸ್ಥೆಯ ಸಮಸ್ಯೆಗಳ ಬಗ್ಗೆ ಜಾಗೃತರಾಗಲು ಸಾಧ್ಯ . ಇಲ್ಲದಿದ್ದರೆ ಮನೆಯ ಒಳಗೆ ಹೊರಗೆ ಪರಿಚಿತರು ಹಾಗೂ ಅಪರಿಚಿತರಿಂದ ನಾನಾ ವಿದಧ ಲೈಂಗಿಕ ಶೋಷಣೆ ಎದುರಿಸುವರು . ಮನೆಯಲ್ಲಿ ಹೆಚ್ಚು ಭಯ ಇದ್ದರಂತೂ ಇದರ ಅರಿವು ನಮಗೆ ಗೋಚರಿಸದು ಮನೆಯವರಿಗೆ ಹೆದರಿ ತಮಗಾದ ಅನ್ಯಾಯದಿಂದ ಹೊರಬರಲಾರದೆ ಆತ್ಮೀಯ ವಾತಾವರಣದ ಕೊರತೆಯಿಂದ ಯಾರ ಬಳಿಯೂ ಹೇಳಿಕೊಳ್ಳಲಾರದೇ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವರು ಈಗ ನಿನ್ನ ಮಗಳಿಗಾಗಿರುವುದು ಕೂಡ ಇದೆ ಎಂದು ವಿವರಿಸಿದರು . ಆಗ ಪಾರ್ವತಿಗೆ ತನ್ನ ತಪ್ಪಿನ ಅರಿವಾಗಿ ಇನ್ನು ಮುಂದೆ ಲಾವಣ್ಯಳನ್ನು ಗೆಳತಿಯಂತೆ ಕಾಣುವುದಾಗಿ ಆಣೆ ಮಾಡಿದಳು.
ಮಾರನೆ ದಿನ ನರ್ಸ್ ಗಿರಿಜ ತನ್ನ ಮಗಳು ಸುಮತಿಯೊಂದಿಗೆ ಪಾರ್ವತಿಯ ಮನೆಗೆ ಬಂದು ಪಾರ್ವತಿ ಹಾಗೂ ಲಾವಣ್ಯಳನ್ನು ಕರೆದುಕೊಂಡು ತನ್ನ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಹದಿ ಹರೆಯದ ಹೆಣ್ಣು ಮಕ್ಕಳ ಜಾಗೃತಿ ಶಿಬಿರಕ್ಕೆ ಬಂದಳು. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತಿನಂತೆ ಪಾರ್ವತಿ ಈಗ ಜಾಣೆಯಾಗಿದ್ದಳು.ಮಡಿವಂತಿಕೆಯ ಭಾವದಿಂದ ಹೊರಬಂದಯೋಚಿಸತೊಡಗಿದ್ದಳು .
ವೈದ್ಯಾದಿಕಾರಿ .ಸುರಭಿ ಬರುವ ವೇಳೆಗೆ ಅಲ್ಲಿ ಸಾಕಷ್ಟು ಹದಿ ಹರೆಯದ ಹೆಣ್ಣುಮಕ್ಕಳು ಹಾಗೂ ಕಿಶೋರಿಯರು ಹಾಜರಿದ್ದರು . ಹಸನ್ಮುಕಿಯಾದ ವೈದ್ಯೆ ಸುರಭಿ ಮಾತು ಪ್ರಾರಂಭಿಸಿ ಕಿಶೋರಾವಸ್ಥೆ ಎಂಬುದು ಮೊಗ್ಗೊಂದು ಅರಳಿ ಹೂವಾಗಿ ನಗುವಂತೆ ಹೆಣ್ಣು ಕೂಡ ವಯೋಸಹಜವಾಗಿ ಬೆಳೆದು ಸುಂದರವಾಗಿ ನಳನಳಿಸುವ ಸುಕೋಮಲೆಯಾಗುವಳು.ಇಂತಹ ಸಂದರ್ಭದಲ್ಲಿ ದುಷ್ಟ ಕಾಮುಖರ ಕಣ್ಣು ಕುಕ್ಕುವುದು ಸಹಜ .ಹೆಣ್ಣನ್ನು ಕಾಮಾಂದತೆಯಿಂದ ನೋಡುವ ಪೈಶಾಚಿಕ ಮನಸುಗಳಿಂದ ಕಾಪಾಡಲು ಮೊದಲು ಪೋಷಕರು ಮಡಿವಂತಿಕೆಯ ಭಾವದಿಂದ ಹೊರಬಂದು ಮಗಳೊಂದಿಗೆ ಸ್ನೇಹಿತೆಯಂತೆ ನಡೆದುಕೊಳ್ಳುತ್ತ ಆಪ್ತ ಸಮಾಲೋಚನೆ ನಡೆಸುವ ಮೂಲಕ ಅವಳ ಮನದ ತುಮುಲಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು . ಹದಿ ಹರೆಯಕ್ಕೆ ಬಂದಾಗ ಮಕ್ಕಳಲ್ಲಿ ಉಂಟಾಗುವ ದೈಹಿಕ, ಮಾನಸಿಕ ,ಭಾವನಾತ್ಮಕ ಬದಲಾವಣೆಗಳು ಸಹಜವಾಗಿ ಕಾಣುತ್ತವೆ . ಆಗ ಮಕ್ಕಳು ಸುಲಭವಾಗಿ ಹೊರಗಿನ ವಿರುದ್ದ ಲಿಂಗದವರೊಂದಿಗೆ ಆಕರ್ಷಿತವಾಗಿ ತಮ್ಮ ಸುಂದರ ಭವಿಷ್ಯವನ್ನು ಬಲಿಕೊಡುತ್ತಾರ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ . ಕಿಶೋರಾವಸ್ಥೆಯ ಮಕ್ಕಳಿಗೆ ಯಾವುದೇ ಅರಿವಿರುವುದಿಲ್ಲ . ಅದನ್ನೆ ಬಳಸಿಕೊಂಡು ತಮ್ಮ ಲೈಂಗಿಕ ಚಾಪಲ್ಯ ತೀರಿಸಿಕೊಳ್ಳಲು ನಮ್ಮ ಸಮಾಜದ ಕಾಮುಕ ವರ್ಗ ಪ್ರಯತ್ನಿಸುವರು. ಸಾಮಾಜಿಕ ಜಾಲತಾಣಗಳು ಅಂತರ್ಜಾಲ ಮೊಬೈಲ್ ಮುಂತಾದ ಕಡೆಗಳಲ್ಲಿ ಸಿಗುವ ಕಾಮಲೀಲೆಯ ದೃಶ್ಯಗಳು ಮಕ್ಕಳಲ್ಲಿ ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತವೆ . ಇದರ ಪರಿಣಾಮ ಮಕ್ಕಳು ಆಕರ್ಷಿತರಾಗಿ ಶೋಷಣೆ ಹೆಚ್ಚಾಗುತ್ತಿದೆ . ಅಂತಹ ಸಂದರ್ಭದಿಂದ ಮಕ್ಕಳನ್ನು ರಕ್ಷಿಸಬೇಕೆಂದು ಅರಿವು ಮೂಡಿಸಿದರು .
ಡಾ : ಸುರಭಿ ಮಕ್ಕಳೆ ನಿಮಗೆ ಯಾರಾದರೂ ಅಶ್ಲೀಲ ಚಿತ್ರಗಳನ್ನು ತೋರಿಸಿದರೆ, ನಿಮಗೆ ಮುಜುಗರ ಉಂಟುಮಾಡುವ ಮಾತುಗಳನ್ನು ಆಡಿದರೆ , ನಿಮ್ಮ ದೇಹದ ಖಾಸಗಿ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದರೆ ಮುತ್ತು ಕೊಡುವಂತೆ ಪ್ರೇರೆಪಿಸಿದರೆ ನೀವು ಅಂತಹ ಸಮಯದಲ್ಲಿ ಪಾರಾಗಲೂ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕು . ಇಂತಹ ವಿಚಾರವನ್ನು ನೀವು ನಿಮಗೆ ಆತ್ಮೀಯರೆನಿಸಿದವರ ಬಳಿ ಹಂಚಿಕೊಂಡು ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ವಿವರಿಸಿದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ಸರ್ಕಾರ ಮತ್ತು ಹಲವಾರು ಸಂಘ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ. ನಿಮಗೆ ಏನಾದರೂ ಅಂತ ಸಮಸ್ಯೆಗಳು ಎದುರಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಲು ತಿಳಿಸಿದರು. ಹೆಣ್ಣು ಎಂದು ಅಬಲೆಯಲ್ಲ, ಅವಳು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಹೆಣ್ಣು ಮಕ್ಕಳನ್ನು ಪ್ರೇರೇಪಿಸುತ್ತಾ ಅನೇಕ ಸಾಧಕರ ನಿದರ್ಶನ ನೀಡಿದರು .ವೈದ್ಯರ ಈ ಮಾತನ್ನು ಕೇಳಿದ ಲಾವಣ್ಯಳಿಗೆ ಈಗ ನಿಜಕ್ಕೂ ಆತ್ಮವಿಶ್ವಾಸ ಮೂಡಿತ್ತು .ಡಾ. ಸುರಭಿಯವರ ಮಾತುಗಳು ಇವಳಲ್ಲಿ ನೂರಾನೆ ಬಲ ತುಂಬಿತು.
ನಾನು ಈ ಸಮಾಜದ ಒಬ್ಬ ಸಾಧಕಳಾಗಬೇಕು ಎಂಬ ದೃಢ ಸಂಕಲ್ಪ ಮಾಡಿಯೇಬಿಟ್ಟಳು.ಮುಂದೆ ಚನ್ನಾಗಿ ಓದಿ ತನ್ನದೇ ಆದ ಒಂದು ಮಹಿಳಾ ವಿಮೋಚನಾ ಸಂಘವನ್ನು ಸ್ಥಾಪಿಸಿ ಆ ಮೂಲಕ ಶೋಷಿತ ಹೆಣ್ಣು ಮಕ್ಕಳ ಧ್ವನಿಯಾಗಿ ನಿಂತಳು. ಬಹಳ ಧೈರ್ಯದಿಂದ ಸವಾಲುಗಳನ್ನು ಎದುರಿಸಲು ಪ್ರಾರಂಭಿಸಿ ತನಗೆ ತೊಂದರೆ ನೀಡಿದ ಗುಣೇಶನಿಗೆ ತಕ್ಕ ಪಾಠ ಕಲಿಸಿದಳು .ನಂತರ ಲೈಂಗಿಕ ಶೋಷಣೆಗಳು ಉಂಟಾಗುವ ಸಮಯಗಳು ಹಾಗೂ ಅವುಗಳನ್ನು ಎದುರಿಸುವ ಪರಿಹಾರೋಪಾಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಧವಳಗಿರಿಯ ಹೆಮ್ಮೆಯ ಕುವರಿಯಾಗಿದ್ದಾಳೆ .
**********
ಅನುಸೂಯ ಯತೀಶ್.