ಕಾವ್ಯ ಸಂಗಾತಿ
ಗಜಲ್
ಜ್ಯೋತಿ ಬಿ ದೇವಣಗಾವ
ಬೆಸೆವ ನೆನಪುಗಳಲಿ ಕಾಣಸಿಗುವೆ ದೂಷಿಸಲಿ ಹೇಗೆ
ಮನದ ಕವಿತೆಗಳಲಿ ಮೂಡಿಬರುವೆ ದೂಷಿಸಲಿ ಹೇಗೆ
ಜೊತೆಯನು ತೊರೆದು ಬಹು ದೂರಕೆ ಪಯಣಿಸಿರುವೆ
ಮಧುರ ನೋವುಗಳಲಿ ಕಾಡಿಸಿರುವೆ ದೂಷಿಸಲಿ ಹೇಗೆ
ನಡೆಯುವ ಹಾದಿಗೆ ಶುಭವನು ಹಾರೈಸುವೆ
ಏಕಾಂಗಿ ಬೇಗುದಿಯ ಸಂತೈಸಿರುವೆ ದೂಷಿಸಲಿ ಹೇಗೆ
ಹಳೆಯ ವಾದಗಳಲಿ ಎಳೆಯಲಾರೆ ಹೊಸದಾಗಿ
ಬಿಳಿಯ ಹೂವೊಂದ ಚಿಗುರಿಸಿರುವೆ ದೂಷಿಸಲಿ ಹೇಗೆ
ನದಿಯೊಳಿಣುಕಿದ ಹೋಳು ಚಂದ್ರ ನನ್ನದೆನಬಾರದು
ಚಿಜ್ಜ್ಯೋತಿಯೊಂದು ಬೆಳಗಿಸಿರುವೆ ದೂಷಿಸಲಿ ಹೇಗೆ