ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ

ಲೇಖನ

ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ

ಹಾರೋಹಳ್ಳಿ ರವೀಂದ್ರ

Farmers certainly deserve a better deal than this

ರೈತ ಚಳವಳಿಯು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ.  ಭಾರತದಲ್ಲಿ ಇಲ್ಲಿಯವರೆವಿಗೂ ಸುಮಾರು ನೂರಾರು ರೈತ ಚಳವಳಿಗಳು ನಡೆದಿವೆ. ಮೊಘಲರ ಕಾಲದಿಂದ ಈವರೆವಿಗೂ ಭಾರತದಲ್ಲಿ 77 ರೈತ ಹೋರಾಟಗಳ ದಾಖಲೆಯನ್ನು  ಕ್ಯಾಥಲೀನ್ ಗಾಫೆ ಎಂಬಾಕೆ ಕೊಟ್ಟಿದ್ದಾಳೆ.  ಇಂತಹ  ಚಳವಳಿಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ,

1. ಪುನರುತ್ಥಾಪನ ದಂಗೆಗಳು

2. ಧಾರ್ಮಿಕ ಚಳವಳಿಗಳು

3. ಸಮಾಜನಿಷ್ಠ ದರೋಡೆಗಳು

4. ಭಯೋತ್ಪಾದಕ ಪ್ರತಿಕಾರಗಳು

5. ಸುಧಾರಣಾವಾದಿ ಚಳವಳಿಗಳು

6. ಜನತಾ ಚಳವಳಿಗಳು

ಸ್ವಾತಂತ್ರ್ಯ ಪೂರ್ವ ರೈತ ಚಳವಳಿಗಳು ಹೆಚ್ಚಾಗಿ ಪರಕೀಯರ ವಿರುದ್ಧ ನಡೆದವು. ಭೂ ಸಂಬಂಧವುಳ್ಳ ಎಲ್ಲಾ ವರ್ಗದ ರೈತರೂ ಇಂತಹ ಚಳವಳಿಗಳಲ್ಲಿ ಭಾಗವಹಿಸಿದ್ದರು. ಮೊದಲ ಹಂತದ ಚಳವಳಿಗಳಲ್ಲಿ ಪರಕೀಯರಿಂದಾಗಿ ಭೂಮಿ ಕಳೆದುಕೊಂಡ ಪಾಳೆಯಗಾರರು, ಹಳೆಯ ಪ್ರಭುಗಳು, ಆಡಳಿತಗಾರರು, ದಿವಾಳಿ ಎದ್ದ ರೈತರು, ಕೈ ಕಸುಬುಗಳನ್ನು ಕಳೆದುಕೊಂಡವರು, ಕೂಲಿ ಕಾರ್ಮಿಕರು, ಧರ್ಮ ಗುರುಗಳು ಹಾಗೂ ಆದಿವಾಸಿ ಮುಖಂಡರು ಒಳಗೊಂಡಿದ್ದರು.

ಬಂಡವಾಳಶಾಹಿಗಳು ಹಾಗೂ ಪ್ರಬಲ ಭೂ ಮಾಲೀಕರ ಕಿರುಕುಳದಿಂದ ಹತಾಸೆಗೊಂಡ ಶಕ್ತಿಶಾಲಿಗುಂಪು ಅವರ ವಿರುದ್ಧ ನಿಂತು, ಅವರ ಆಸ್ತಿ ಪಾಸ್ತಿಗಳನ್ನೆಲ್ಲಾ ಲೂಟಿ ಮಾಡಿದರು. ಲೂಟಿ ಮಾಡಿದ ಆಸ್ತಿಯಲ್ಲಿ ಬಹುಪಾಲು ನೊಂದವರಿಗೆ ಹಂಚುತ್ತಿದ್ದರು. ಈ ಕಾರಣಕ್ಕಾಗಿ ಇವರ ಲೂಟಿ ಮತ್ತು ದರೋಡೆಗಳನ್ನು ಸಮಾಜನಿಷ್ಠವಾದವು ಎನ್ನಬಹುದು. 17 ಮತ್ತು 18ನೇಯ ಶತಮಾನದಲ್ಲಿ ಮಧ್ಯಭಾರತದ ಠಕ್ಕರು, ಮದರಾಸು ಪ್ರಾಂತ್ಯದ ಕಳ್ಳರ್, ಕೇರಳಾದ ಸನ್ಯಾಸಿ ಫಕೀರರು ಈ ಕ್ರಿಯೆಯಲ್ಲಿ ತೊಡಗಿದ್ದರು.

ಭಯೋತ್ಪಾದಕ ಪ್ರತಿಕಾರದ ಹಲವು ಹೋರಾಟಗಳು ನಡೆದಿವೆ. ಶ್ರೀಮಂತರು, ಭೂ ಮಾಲೀಕರು, ಸರ್ಕಾರಿ ಅಧಿಕಾರಿಗಳಿಂದ ಒಕ್ಕಲೆಬ್ಬಿಸುವಿಕೆ, ಅಧಿಕ ಕಂದಾಯ, ಬಿಟ್ಟಿ ಕೆಲಸಗಳಂತಹ ಹಿಂಸಾತ್ಮಕ ಒತ್ತಡಗಳಿಂದ ಈ ಹೋರಾಟಗಳು ಹುಟ್ಟಿಕೊಂಡಿವೆ. ತೀವ್ರಗಾಮಿ ಎಡಪಂಥೀಯ ಹೋರಾಟಗಳು ಈ ಗುಂಪಿನಲ್ಲಿ ಬರುತ್ತವೆ. ಸ್ವಾತಂತ್ರ್ಯ ಹೋರಾಟ ಸಂದರ್ಭದ ರೈತ ಚಳವಳಿಗಳು ಜನತಾ ಆಂದೋಲನದೊಳಗೆ ಸೇರಿಕೊಂಡು ಬಂದವು. ಸ್ವಾತಂತ್ರ್ಯ ಪೂರ್ವ ಹಾಗೂ ಅನಂತರದಲ್ಲಿ ಸುಧಾರಣಾ ನೆಲೆಯ ಚಳವಳಿಗಳೂ ನಡೆದಿವೆ.

ಬಹುಶಃ ಮೊಘಲ್ ಸಾಮ್ರಾಜ್ಯದ ಬೆಳವಣಿಗೆಯ ಆರಂಭ ಭಾರತದ ರೈತ ಹೋರಾಟಗಳಿಗೆ ನೆಲೆ ಕಲ್ಪಿಸಿಕೊಟ್ಟಂತೆ ಕಾಣುತ್ತದೆ. ಹೊಸ ರೀತಿಯ ಭೂ ವಿಂಗಡನೆ, ಹಂಚಿಕೆ ಹಾಗೂ ಕಂದಾಯ ನಿಗದಿ ಕ್ರಮ ಭಾರತದ ಭೂ ಒಡೆತನದ ನೆಲೆಯನ್ನು ಅಲ್ಲಾಡಿಸಿತು. ಅದರ ಪರಿಣಾಮವಾಗಿ ಬೇರೆ ಬೇರೆ ರೀತಿಯಲ್ಲಿ ರೈತರು ಸಂಘಟಿತರಾದರು. ಕೆಲ ಮಟ್ಟಿಗೆ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದರು. ಕೈಗಾರಿಕಾ ಕ್ರಾಂತಿಗೆ ಮೊದಲು ಭೂಒಡೆತನದಲ್ಲಿ ಆದ ಬದಲಾವಣೆಗಳು ರಾಜ್ಯಗಳ ನಾಶ ಹಾಗೂ ಉದಯದ ಕಥೆಗಳಾಗಿವೆ. ಇವು ರೈತರ ಭೂಮಿಯನ್ನು ಕುರಿತ ನಿಜ ಕಥೆಗಳು. ಮೊಘಲರು ಈ ದೇಶದ ಪ್ರಜೆಗಳೇ ಆಗಿ ಕರಗಿ ಹೋದ ಕಾರಣದಿಂದ ಆ ಕಾಲದ ರೈತರ ಪ್ರತಿಭಟನೆಗಳು ಹೆಚ್ಚು ಸಾಮೂಹಿಕ ಸ್ವರೂಪ ಪಡೆದುಕೊಂಡಂತೆ ಕಾಣುವುದಿಲ್ಲ.

ಬ್ರಿಟೀಷರು ಕೂಡ ಹೊರಗಿನಿಂದ ಬಂದವರಾದರೂ ಇಲ್ಲಿಯವರಾಗಲು ಪ್ರಯತ್ನಿಸಲಿಲ್ಲ. ಅವರು ಇಲ್ಲಿಂದ ಸಂಪತ್ತನ್ನು ಒಯ್ಯುವ ವ್ಯಾಪಾರಿ ರಾಜಪ್ರಭುಗಳಾಗಿದ್ದರು. ವ್ಯವಸಾಯ ಜೀವನಕ್ಕೆ ಸ್ಪರ್ಧಿಯಾಗಿ ಕೈಗಾರಿಕಾ ಸಂಸ್ಕೃತಿಯನ್ನು ಬೆಳೆಸತೊಡಗಿದರು. ಭಾರತದ ವ್ಯವಸಾಯಿಕ ಉತ್ಪನ್ನಗಳು ಇಂಗ್ಲೆಂಡಿನ ಕೈಗಾರೀಕರಣವನ್ನು ಅಭಿವೃದ್ಧಿಗೊಳಿಸುವ ಸಾಧನವಾದವು. ಸರ್ಕಾರದ ಬೊಕ್ಕಸಕ್ಕೆ ತುಂಬಲು ಹಾಗೂ ತಮ್ಮ ಯುದ್ಧ ವೆಚ್ಚವನ್ನು ಭರಿಸಲು ಇರುವ ಭಾರತದ ವ್ಯವಸಾಯಗಾರರ ಮೇಲೆ ಹೆಚ್ಚು ಕಂದಾಯ ವಿಧಿಸಿದರು. ನೇರ ಕಂದಾಯ ವಸೂಲಿಯಾಗಲು ಕೃಷಿಕರ ಮಧ್ಯೆ ಅನೇಕ ಬಗೆಯ ಮಧ್ಯವರ್ತಿಗಳನ್ನು ತಂದರು. ಹೊಸ ಭೂಮಾಲೀಕರು, ಜಹಗೀರುದಾರರು, ಇನಾಂದಾರರು, ವ್ಯಾಪಾರಿಗಳು, ಅಧಿಕಾರಿಗಳು ಹೀಗೆ ಅನೇಕ ಬಗೆಯಲ್ಲಿ ಸ್ಥಾಪಿತರಾದರು. ಇದರಿಂದ ಅನೇಕ ರೈತರು ಭೂಒಡೆತನ ಕಳೆದುಕೊಂಡು ಕೂಲಿಯಾಳುಗಳಾದರು. ಇದು ಆದಿವಾಸಿಗಳು ಮತ್ತು ರೈತಾಪಿ ವರ್ಗದ ಮೇಲೆ ಗಂಭೀರ ಪರಿಣಾಮ ಬೀರಿತು. ಸ್ವಯಂ ಭೂಒಡೆತನ ಹೊಂದಿದ್ದ ರೈತ ಕಾರ್ಮಿಕನಾಗಿ ಇನ್ನೊಬ್ಬನ ಕೈಕೆಳಗೆ ಬರುವಂತಾಯಿತು. ಸ್ಥಳೀಯ ಗುಡಿ ಕೈಕಾರಿಕೆಗಳು ನಾಶವಾದವು. ಬಟ್ಟೆಗಳನ್ನು ಕೂಡ ಕಂಪನಿಯಿಂದಲೇ ಕೊಂಡುಕೊಳ್ಳುವಂತಾಯಿತು. ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರ ಮೇಲೆ ಹಿಂಸಾತ್ಮಕ ಒತ್ತಡ ತರಲಾಯಿತು. ಆಹಾರ ಬೆಳೆಗಳು ಹಂತಹಂತವಾಗಿ ಕಡಿಮೆಯಾಗುತ್ತ ಹೋದವು. ಸಾಮಾನ್ಯರ ಜೀವನ ತೀರ ಕುಗ್ಗಿ ಹೋಯಿತು. ತೆರಿಗೆ ಕಟ್ಟಿ ಉಳಿದುದುರಲ್ಲಿ ಅವರ ಜೀವನ ಸಾಗಿಸುವುದು ದುಸ್ತರವಾಯಿತು. ಈ ಕಾರಣದ ಮೇಲೆ ಆದಿವಾಸಿ ಕೃಷಿಕರು, ಬೇರೆ ಬೇರೆ ನೆಲೆಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಸ್ಥಳೀಯ ನೆಲೆಯಲ್ಲಿ ಸಂಘಟನೆಗೊಂಡು ಪ್ರತ್ಯಕ್ಷವಾಗಿ ಬಂಡವಾಳಶಾಹಿ ಭೂಮಾಲೀಕರನ್ನು ಹಾಗೂ ಪರೋಕ್ಷವಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯನ್ನು ವಿರೋಧಿಸುವುದು ಅನಿವಾರ್ಯವಾಯಿತು.

ಸ್ವಾತಂತ್ರ್ಯ ಪೂರ್ವ ರೈತ ಹೋರಾಟಗಳು ಪ್ರಾದೇಶಿಕವಾದವು. ಅವುಗಳ ಉದ್ದೇಶ ಕೂಡ ಸೀಮಿತವಾಗಿತ್ತು. ಸದ್ಯದ ನೋವಿಗೆ ಪರಿಹಾರ ಕಂಡುಕೊಳ್ಳುವುದಷ್ಟೇ ಅವರ ಮುಖ್ಯ ಅಪೇಕ್ಷೆಯಾಗಿತ್ತು. ಶತ್ರುಗಳನ್ನು ಹಾಗೂ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಿ ಹೋರಾಡುವ ಭೂಮಿಕೆ ಇನ್ನೂ ಸಿದ್ಧವಾಗಿರಲಿಲ್ಲ. ಬಹಳ ಮುಖ್ಯವಾಗಿ ಈ ಹೋರಾಟಗಳು ತಮ್ಮ ಪೂರ್ವಾಶ್ರಮ ಜೀವತತ್ವ ಹಾಗೂ ವರ್ಗಗಳಿಂದ ಹೊರಗೆ ಬರಲು ಇಚ್ಚಿಸಲಿಲ್ಲ. ಆದುದರಿಂದಲೇ ಈ ರೈತ ಹೋರಟಗಳ ಜೊತೆಗೆ ಮತ, ಧರ್ಮ ಮುಂತಾದ ನಿರ್ಬಂಧಗಳು ಹೇರಿಕೊಂಡಿದ್ದವು. ಈ ಸನ್ನಿವೇಶದಲ್ಲಿ ಕಂಡುಬಂದ ಮುಖ್ಯ ಹೋರಾಟಗಳೆಂದರೆ,

1. 1772-80 ಸನ್ಯಾಸಿ-ಫಕೀರರ ದಂಗೆಗಳು

2. 1855ರ ಸಂತಾಲ ದಂಗೆ

3. 1860ರ ನೀಲಿ ಬೆಳೆಗಾರರ ಚಳವಳಿ

4. 1836-1931ರ ಮಾಪಿಳ್ಳೆ ದಂಗೆ

5. 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ

6. 1945-46ರ ವಾರಲಿ ಆದಿವಾಸಿಗಳ ಹೋರಾಟ

7. 1946-47ರ ತೇಭಾಗ ಚಳವಳಿ

ರೈತರು ತಮ್ಮ ಹಿಂಸೆಗೆ ಸನ್ಯಾಸಿ, ಫಕೀರರ ವೇಷದಲ್ಲಿ ಸಂಘಟನೆಗೊಂಡು ಪ್ರತಿಕ್ರಿಯಿಸಿದ ರೀತಿಯೇ ಸನ್ಯಾಸಿ ಫಕೀರರ ದಂಗೆ. ಇವು ರೈತಾಪಿ ಜನರ ಪ್ರಥಮ ಪ್ರತಿಭಟನೆಗಳು. ಬ್ರಿಟೀಷರ ವಿರುದ್ಧದ ಮೊದಲ ಯುದ್ಧಗಳು. ಬ್ರಿಟೀಷರ ಆಡಳಿತ ಹಾಗೂ ಕಂದಾಯ ನೀತಿಯನ್ನು ಪ್ರತಿಭಟಿಸಿದಾಗ ಬ್ರಿಟೀಷ್ ಸೈನ್ಯ ಹಳ್ಳಿ ಹಳ್ಳಿಗಳನ್ನೆ ನಾಶಮಾಡುತಿತ್ತು. ಈ ಘಟನೆಯಿಂದ ನೆಲೆ ಕಳೆದುಕೊಂಡವರು ಸಂಘಟಿತರಾಗಿ ಬ್ರಿಟೀಷರ ಪರವಾಗಿದ್ದ ಭೂಮಾಲೀಕರನ್ನು, ಆಡಳಿತಗಾರರನ್ನೂ, ಸೇವಕರನ್ನೂ ಹಿಡಿದು ಬಡಿಯುತ್ತಿದ್ದರು. ಬ್ರಿಟಿಷ್ ಸಕರ್ಾರಕ್ಕೆ ಸೇರಬೇಕಾದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು. ಬಿಹಾರ, ಬಂಗಾಲ ಹಾಗೂ ಪೂರ್ವ ಈಶಾನ್ಯ ಭಾರತದ ಹಲವು ಪ್ರದೇಶಗಳಿಗೆ ಈ ದಂಗೆಗಳು ಹರಡಿದ್ದವು.

ಸಂತಾಲರ ದಂಗೆ ಭಾರತದ ಆರ್ಥಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಮೇಲೆ ಬ್ರಿಟೀಷರು ಹಾಕಿದ ದೊಡ್ಡ ಬರೆ. ಸಂತಾಲರು ನಿಜವಾದ ಬೇಸಾಯಗಾರರು. ಇವರದು ಬೇಸಾಯವನ್ನು ಆಧರಿಸಿದ ರಾಜ್ಯ ಪದ್ಧತಿ ಹಾಗೂ ಸಾಂಸ್ಕೃತಿಕ ಜೀವನ. ಬ್ರಿಟೀಷರ ಹೊಸ ಭೂ ಹಂಚಿಕೆ ಹಾಗೂ ಬಡತನದ ಕಾರಣವಾಗಿ ಇವರು ಹೊಸ ಭೂ ಮಾಲೀಕರಿಗೆ ತಮ್ಮ ಜಮೀನಿನ ಒಡೆತನ ಬಿಟ್ಟುಕೊಟ್ಟು ಅವರಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುವ ವರ್ಗವಾಯಿತು. ನೆಲಬಿಡಿ ಇಲ್ಲವೆ ಗೇಣಿ ಕೊಡಿ ಎಂದು ಹೊಸ ಮಾಲೀಕರು ಇವರಿಗೆ ತಾಕೀತು ಮಾಡಿದರು. ಜಮೀನುದಾರರ, ಪೊಲೀಸರ ಅಧಿಕಾರಿಗಳ ಮತ್ತು ಸಾಲಗಾರರ ಹಿಂಸೆ, ಹೆಂಡತಿ ಮಕ್ಕಳ ಮೇಲಿನ ದೌರ್ಜನ್ಯ , ತೂಕ ಮತ್ತು ಮಾರಾಟದಲ್ಲಿ ಮೋಸ. ಈ ಕಾರಣದಿಂದಾಗಿ ರೈತಾಪಿ ವರ್ಗ ತತ್ತರಿಸಿ ಹೋಯಿತು. ಬದುಕುವ ಕೊನೆಯ ಆಸೆಯಾಗಿ ಹೋರಾಟಕ್ಕೆ ನಿಂತರು. ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂಸೆಯ ಮಾರ್ಗ ಹಿಡಿದು ತಮ್ಮ ಅಸ್ಥಿತ್ವ ಸ್ಥಾಪಿಸಿಕೊಳ್ಳಲು ಹೊರಟರು. ಬ್ರಿಟೀಷ್ ಸೈನ್ಯ ಸಂತಾಲ ಸಮುದಾಯವನ್ನು ಸೆದೆ ಬಡಿಯಿತು. ಸಂತಾಲರು ತಮ್ಮ  ಬಿಲ್ಲು ಬಾಣ ಮತ್ತು ದೈಹಿಕ ಶಕ್ತಿಗಳಿಂದಲೇ ನೈತಿಕ ಹೋರಾಟವನ್ನು ಮುಂದುವರಿಸಿದರು. ಈ ಹೋರಾಟದಲ್ಲಿ ಸುಮಾರು 25 ಸಾವಿರ ಸಂತಾಲ ರೈತರು ಮೃತಪಟ್ಟರು.

ಬಂಗಾಲ, ಬಿಹಾರ ಪ್ರದೇಶದ ಬೆಳೆಗಾರರೆಂದರೆ ಅದು ನೀಲಿ ಬೆಳೆಗಾರರು. ಬ್ರಿಟೀಷ್ ಕಾಲದಲ್ಲಿ ಭೂಮಾಲೀಕರು ಸಂಪೂರ್ಣವಾಗಿ ಕಂಪನಿಯ ಗುಲಾಮರಾಗಿದ್ದರು. ಅಲ್ಲಿ ನೀಲಿ ಬೆಳೆಗಾರರು ತಮ್ಮ ಹೊಟ್ಟೆಗೆ ಅನ್ನ ಬೆಳೆದುಕೊಳ್ಳುವುದಕ್ಕೆ ಅವಕಾಶವಿಲ್ಲದೆ ಆಳುವ ಪ್ರಭುಗಳ ಬಟ್ಟೆಗೆ ಬೇಕಾದ ನೀಲಿ ಬಣ್ಣಕೊಡುವ ಬೆಳೆ ಬೆಳೆದು ಕೊಡುವ ಕೈದಿಗಳಂತೆ ಇವರು ದುಡಿಯುತಿದ್ದರು. ಇವರ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಹೇಳತೀರದು.

ದಖನ್ ದಂಗೆಯ ಮೂಲಸ್ಥಾನ ಮುಂಬಯಿ ಪ್ರಾಂತ್ಯದ ಪುಣೆ ಮತ್ತು ಅಲಹಬಾದ್ ನಗರ ಪ್ರದೇಶಗಳು ರೈತವಾರಿ ಜಿಲ್ಲೆಗಳಾಗಿದ್ದು ಮುಂಬಾಯಿ ಸಕರ್ಾರ ಕಂದಾಯ ಹೆಚ್ಚಿಸುತ್ತಾ ಹೋಯಿತು. ಸ್ಥಳೀಯ ಬಂಡವಾಳಶಾಹಿಗಳ ಬಡ್ಡಿ ವ್ಯವಹಾರ ಮೈಮೇಲೆ ಆವರಿಸಿಕೊಂಡಿತು. ಇದರಿಂದಾಗಿ ಚಿಕ್ಕ ಪುಟ್ಟ ರೈತರೆಲ್ಲ ಜಮೀನು ಕಳೆದುಕೊಳ್ಳುತ್ತಾ ಹೋದರು. ಸಿಟ್ಟುಗೊಂಡ ಅವರು ಸಂಘಟಿತರಾಗಿ ಬಡ್ಡಿ ವ್ಯವಹಾರಗಳಿಗೆ ಮುತ್ತಿಗೆ ಹಾಕಿದರು. ಸಾಲ ಪತ್ರಗಳನ್ನು ಕಿತ್ತು ಸುಟ್ಟು ಹಾಕಿದರು. ದಂಗೆ ಅಡಗಿಸಲು ಸೈನ್ಯ ಬಂತು. ಸೆರೆಸಿಕ್ಕವರಿಗೆ ಹಿಂಸೆಯ ಜೊತೆಗೆ ಪುಂಡುಗಂದಾಯ ಹಾಕಲಾಯಿತು.

ಮಾಪಿಳ್ಳೆ ದಂಗೆ ಆರ್ಥಿಕ ಸ್ವರೂಪದಲ್ಲಿ ಕಾಣಿಸಿಕೊಂಡರು ಅದರ ಅಂತರಂಗ ಅವರ ಧಾರ್ಮಿಕ ಅಸ್ಥಿತ್ವದಲ್ಲಿದೆ. ಅರಬ್ ದೇಶಗಳಿಂದ ಬಂದ ವ್ಯಾಪಾರಿಗಳು ಹಾಗೂ ಕೇರಳಾದ ಸ್ಥಳೀಯ ಹೆಣ್ಣುಗಳ ವೈವಾಹಿಕ ಸಂಬಂಧದಿಂದ ಹುಟ್ಟಿದವರು ಮಾಪಿಳ್ಳೆಗಳು. ಇವರು ಕೇರಳಾದ ಆ ಕಾಲದ ಭೂಒಡೆಯರಾದ ನಂಬೂದರಿಗಳು ಹಾಗೂ ಅವರ ಸಹವಾಸಿಗಳಾದ ನಾಯರ್ ಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು. ಇವರು ಹೆಚ್ಚಿನ ಗೇಣಿ ಕೊಡಬೇಕಿತ್ತು, ಕೊಡದಿದ್ದಲ್ಲಿ ಒಕ್ಕಲೆಬ್ಬಿಸುತ್ತಿದ್ದರು. ಸಾಮಾಜಿಕವಾಗಿ ಹೀನಾಯವಾಗಿ ನೋಡುಕೊಳ್ಳುತ್ತಿದ್ದರು. ಬಹಳಕಾಲದ ಈ ಹಿಂಸೆಯಿಂದಾಗಿ ಅವರು ಸಿಡಿದೆದ್ದರು. 1863 ರಿಂದ 1921 ರವರೆಗೆ ಸುಮಾರು ಐವತ್ತು ದಂಗೆಗಳಾದವು. ಅನೇಕ ಹಿಂಸಾಕೃತ್ಯಗಳು ನಡೆದವು. ಸಾವಿರಾರು ಮಾಪಿಳ್ಳೆಗಳು ಸತ್ತರು.

ಗಾಂಧೀಯವರ ಸತ್ಯಾಗ್ರಹ ಪರಿಕಲ್ಪನೆ ರೂಪುಗೊಳ್ಳುವವರೆಗಿನ ರೈತ ಹೋರಾಟಗಳು ದೈಹಿಕ ಹಿಂಸೆಗಳಾಗಿದ್ದವು. ಸತ್ಯಾಗ್ರಹ ರೈತ ಹೋರಾಟದ ಅಸ್ತ್ರವಾದ ಮೇಲೆ ಅವು ಮಾನಸಿಕ ಹಿಂಸೆ- ಪ್ರತಿ ಹಿಂಸೆಯ ಸ್ವರೂಪ ಪಡೆದವು. ಕೆಲಮಟ್ಟಿಗೆ ರೈತರ ಸಮಸ್ಯೆಗಳ ಪರವಾಗಿ ಹೋರಾಡಲು ಕಾಂಗ್ರೇಸ್ ನಿರ್ಧರಿಸಿತು. 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ ಇದಕ್ಕೊಂದು ನಿದರ್ಶನ. ಈ ಹೋರಾಟ ಎರಡು ಹಂತದಲ್ಲಿ ನಡೆಯಿತು. ಇದರ ನೇತೃತ್ವವನ್ನು ಗಾಂಧೀಯವರ ಸಮ್ಮತಿಯಂತೆ ಸರ್ದಾರ್ ವಲ್ಲಭಾಯಿ ಪಟೇಲ್ ವಹಿಸಿದ್ದರು. ಅವರನ್ನು ಬಾರ್ಡೋಲಿಯ ವೀರ ಎಂದು ಕರೆಯಲಾಯಿತು.

ಸೂರತ್ ಪ್ರಾಂತ್ಯದ ಭೂ ಮಾಲೀಕರು ಮತ್ತು ಅವರ ಗೇಣಿದಾರರ ಮಧ್ಯೆ ವೈಮನಸ್ಸು ಉಂಟಾಯಿತು. ದೂಬ್ಸಾ ನಾಯಿಕ, ಚೋಧ್ರಾ, ದೂಧಿಯಾ, ಗಾಮಿಟಿ ಮುಂತಾದ ಕೂಲಿಕಾರ ಜನ ಪಾಟಿದಾರ ಭೂಮಾಲೀಕ-ವ್ಯಾಪಾರಿಗಳ ವಿರುದ್ಧ ತಿರುಗಿ ಬಿದ್ದರು. ಪಾಟಿದಾರರಿಂದ ಪಡೆದ ಸಾಲಕ್ಕೆ ತಮ್ಮ ಚಿಕ್ಕ ಪುಟ್ಟ ಭೂಮಿಯನ್ನು ಕಳೆದುಕೊಂಡರು. ಜೊತೆಗೆ ಮುಂಬಾಯಿ ಸರ್ಕಾರ ಶೇ.22ರಷ್ಟು ಕಂದಾಯ ಏರಿಸಿತು. ಇದರ ಹೊರೆ ಗೇಣಿದಾರ ಕೂಲಿಕಾರ್ಮಿಕರ ಮೇಲೆ ಬಿತ್ತು. ಸಾಯುವವನ ಮೇಲೆ ಕಲ್ಲು ಎತ್ತಿಕ್ಕಿದಂತಾಯಿತು. ಇದನ್ನು ಎಲ್ಲಾ ರೈತರು ವಿರೋಧಿಸಿ ಒಂದಾದರು. ಚಳವಳಿ ಸರ್ಕಾರದ ವಿರುದ್ಧವಾಯಿತು. ಸರ್ಕಾರ ಇವರನ್ನು ಹತ್ತಿಕ್ಕಲು ಅನಾಗರೀಕ ಕ್ರಮಗಳನ್ನು ಅನುಸರಿಸಿತು. ವಲ್ಲಭಾಯಿ ಪಟೇಲ್ ಹಾಗೂ ಇತರ ಕಾಂಗ್ರೇಸ್ ನಾಯಕರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಯಿತು. ಶೇ,22ರಷ್ಟು ಕಂದಾಯ 61/4ಕ್ಕೆ ಇಳಿಸುವ ಮೂಲಕ ಸತ್ಯಾಗ್ರಹ ಯಶಸ್ವಿಕಂಡಿತು.

ವಾರಲಿ ಆದಿವಾಸಿಗಳ ಹೋರಾಟ ಸಂತಾಲ ದಂಗೆಯ ರೀತಿಯಾದರು ಕಮ್ಯುನಿಷ್ಟ್ ಪಕ್ಷದ ಬೆಂಬಲದೊಂದಿಗೆ ವ್ಯವಸ್ಥಿತವಾಗಿ ನಡೆಯಿತು. ಒಂದು ಕಾಲಕ್ಕೆ ಭೂಮಿ ಹೊಂದಿ ಉತ್ತಮ ಸ್ಥಿತಿಯಲ್ಲಿದ್ದ ಇವರನ್ನು ಮುಂಬಯಿಯ ವಿವಿಧ ವರ್ಗದ ಜನ ಶೋಷಣೆ ಮಾಡುತ್ತಿದ್ದರು. ಕೊನೆಗೆ ಅತ್ಯಂತ ದೀನಸ್ಥಿತಿಯ ಕೂಲಿಕಾಮರ್ಿಕರನ್ನಾಗಿ ಮಾಡಿದರು. ಸರ್ಕಾರ, ಸಾಹುಕಾರ, ಅಧಿಕಾರಿ, ದಲ್ಲಾಳಿಗಳು ಸೇರಿಕೊಂಡು ಇವರ ಬದುಕನ್ನು ನರಕ ಮಾಡಿದರು. ಕಮ್ಯುನಿಷ್ಟ್ ಪಕ್ಷದ ತಾತ್ವಿಕತೆಯ ಅಡಿಯಲ್ಲಿ ಒಂದಾಗಿ ತಮ್ಮ ದಾಸ್ಯದ ವಿರುದ್ಧ ಇವರು ತೀವ್ರ ಹೋರಾಟ ನಡೆಸಿದರು. ಭಾರತ್ ಕಿಸಾನ್ ಸಭಾ ನಾಯಕತ್ವದ ಈ ಹೋರಾಟ ಕೆಲ ಮಟ್ಟಿಗಾದರೂ ಸಫಲತೆ ಪಡೆಯಿತು.

ಬಂಗಾಲದಲ್ಲಿ ನಡೆದ ತೇಬಾಗ ರೈತ ಚಳವಳಿ ಮೂರನೇಯ ಎರಡು ಪಾಲು ಫಸಲು ತಮಗೆ ಇರಬೇಕು ಎಂದು ಗೇಣಿದಾರರು ನಡೆಸಿದ ಹೋರಾಟ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಬಂಗಾಲ ಕಿಸಾನ್ ಸಭಾ ನಾಯಕತ್ವದಲ್ಲಿ ಈ ಹೋರಾಟ ತನ್ನ ಬೇಡಿಕೆಯನ್ನು ಈಡೇರಿಸಿಕೊಂಡಿತು.

ಐದು ವರ್ಷಗಳ ಕಾಲ ನಡೆದ ತೆಲಂಗಾಣ ರೈತ ಹೋರಾಟ ವಿಶಿಷ್ಟ ಬಗೆಯದು. ಮೂಲತಹ ಸಾಹಿತ್ಯ ಮತ್ತು ಸಂಸ್ಕೃತಿಯ ಪುನರುತ್ಥಾನ ಇದರ ಗುರಿ. ಉರ್ದು ಭಾಷೆಗಿದ್ದ ರಾಜ ಮನ್ನಣೆಯಿಂದಾಗಿ ತೆಲುಗು ಸಾಹಿತ್ಯ ಸಂಸ್ಕೃತಿ ಕಳಂಕವಾದವು. ಇದನ್ನು ಮನಗಂಡ ಮಧ್ಯಮ ವರ್ಗದ ಸಾಹಿತಿ ಮತ್ತು ಚಿಂತಕರು 1921ರಲ್ಲಿ ಆಂಧ್ರ ಜನಸಂಘಮ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡರು. 1928ರ ಹೊತ್ತಿಗೆ ಇದು ಆಂಧ್ರ ಮಹಾಸಭಾ ಆಗಿ ವಿಸ್ತೃತಗೊಂಡಿತು. ಆರ್ಥಿಕ ಸಮಸ್ಯೆಗಳಾದ ಬಿಟ್ಟಿ ಚಾಕರಿ, ಪುಕ್ಕಟ್ಟೆ ವಸ್ತುಗಳನ್ನು ಕೊಡುವ ಪದ್ಧತಿ ಹಾಗೂ ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ಸಮಸ್ಯೆಯಂತಹ ಸಾಂಸ್ಕೃತಿಕ ಅಂಶಗಳನ್ನು ಈ ಸಭೆ ತನ್ನ ಕಾರ್ಯಕ್ರಮಗಳನ್ನಾಗಿ ಸ್ವೀಕರಿಸಿತು.

ಹೈದರಾಬಾದ್ ನಿಜಾಮ ಅಪಾರ ಆಸ್ತಿ ಹೊಂದಿದ್ದು ಅಲ್ಲಿ ರೈತರು ಪುಕ್ಕಟ್ಟೆ ದುಡಿದು ಬೆಳೆದುಕೊಡಬೇಕಾಗಿತ್ತು. ಭೂಮಾಲೀಕರು ತುಂಡರಸರಾಗಿ ಭೂಮಿಯಲ್ಲಿ ದುಡಿಯುವವರನ್ನು ಜೀವಂತ ಹಿಂಡುತ್ತಿದ್ದರು. ಇದನ್ನು ಆಂಧ್ರ ಮಹಾಸಭಾ ಖಂಡಿಸಿ ಜನಸಂಘಟನೆ ಮಾಡಿತು. ಇದರಲ್ಲಿ ಕಿಸಾನ್ ಮಹಾಸಭಾದ ಕಮ್ಯುನಿಷ್ಟುರು  ಬಹಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 1946 ಜುಲೈ ಹೊತ್ತಿಗೆ ತೆಲಂಗಾಣ ರೈತ ಚಳವಳಿಗೆ ಒಂದು ಸ್ಪಷ್ಟ ರೂಪ ಬಂತು.

ಭಾರತಕ್ಕೆ ಸ್ವಾತಂತ್ರ್ಯ ಬಂದು ಈ ಹೋರಾಟಕ್ಕೆ ಮತ್ತೊಂದು ತಿರುವು ಉಂಟಾಯಿತು. ನಿಜಾಮ ತಾನು ಭಾರತಕ್ಕೆ ಸೇರುವುದಿಲ್ಲವೆಂದ. ದೇಶಿ ಚಿಂತಕರಿಗೂ ಇದು ಸಾಕಾಗಿತ್ತು. ಭಾರತ ಸರ್ಕಾರಕ್ಕೂ ಈ ಸಂದರ್ಭ ಸೂಕ್ತವೆನಿಸಿತು. ಹಲವು ಕಡೆಯಿಂದ ಬೆಂಬಲ ದೊರಕಿತು. ಹೈದ್ರಾಬಾದ್ ಬಿಡುಗಡೆಯೂ ದುಡಿಯುವ ರೈತರ ಬಿಡುಗಡೆಯೂ ಒಂದೇ ವೇದಿಕೆಯ ಆಸಕ್ತಿಗಳಾದವು. ಇದು ಸತ್ಯಾಗ್ರಹವಾಗಿರಲಿಲ್ಲ ಅದರ ಬದಲಾಗಿ ಅಂತರ್ಯುದ್ಧವಾಗಿ ಬದಲಾಗಿತ್ತು. ಹಿಂಸೆಗೆ ಪ್ರತಿಹಿಂಸಿಗಳು ತಾಂಡವಾಡಿದವು. ಹೈದ್ರಾಬಾದ್ ನ ಪ್ರಾಂತ್ಯ ಭಾರತದೊಳಗೆ ವಿಲೀನಗೊಂಡು ಅನಂತರ ಹೋರಾಟ ತಣ್ಣಗಾಯಿತು. ಕಾಂಗ್ರೇಸ್ಸಿಗರು ಮತ್ತು ಇತರರು ಸೇರಿ ಕಮ್ಯುನಿಷ್ಟರನ್ನು ಒಂಟಿ ಮಾಡಿದರು. ಚುನಾವಣಾ ಹೋರಾಟದ ಕಡೆಗೆ ನಡೆದರು.

ಈ ಹೋರಾಟ ಭಾರತದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ರೈತ ಹೋರಾಟಗಳ ಪ್ರವೃತ್ತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಭಾರತೀಯ ಪಕ್ಷ ಸಿದ್ಧಾಂತಗಳ ನೆಲೆಗಳನ್ನು ಪರಿಚಯ ಮಾಡಿಕೊಡುತ್ತದೆ. ವಿವಿಧ ರೈತ ವರ್ಗಗಳ ಹಿತಾಸಕ್ತಿಯನ್ನು ವಿಂಗಡಿಸಿ ತಿಳಸಿಕೊಡುತ್ತದೆ. ನಕ್ಸಲ್ ಬಾರಿ 1960, ಶ್ರೀಕಾಕುಲಂ 1965-70, ರೈತ ಹೋರಾಟಗಳ ಬೀಜಗಳನ್ನು ಹುಟ್ಟಿಸಿತು. ಸಾಮಾಜಿಕ ಆರ್ಥಿಕ ಹೋರಾಟಕ್ಕೆ ರಾಜಕೀಯ ಶಕ್ತಿಯನ್ನು ಬಳಸುವ ಅನಿವಾರ್ಯತೆಯನ್ನು ಈ ಮೂರು ರೈತ ಹೋರಾಟಗಳು ತಿಳಿಸುತ್ತವೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಸಾಧ್ಯತೆ ಕಂಡಂತೆಲ್ಲ, ಸ್ವಾತಂತ್ರ್ಯ ಸಿಕ್ಕಿದ ಆರಂಭದ ದಿನಗಳ ತನಕ ರೈತ ಹೋರಾಟಗಳು ಹೊಸ ದಿಕ್ಕನ್ನು ಪಡೆದವು. ಬೇಡಿಕೆಗಳು ಸಮಾನತಾ ಅವಕಾಶಗಳಾಗಿ ಮಾರ್ಪಟ್ಟವು. ಸರ್ವಾಧಿಕಾರದ ವಿರೊಧ ಪ್ರಜಾಪ್ರಭುತ್ವವನ್ನು ಬಲಪಡಿಸುವ ಶಕ್ತಿಯಾಗಿ ಮಾರ್ಪಟ್ಟಿತು. ಬೇಡಿಕೆಗಳನ್ನು ಹಕ್ಕುಗಳ ಒತ್ತಾಯಗಳಾಗಿ ಈ ಕೆಳಕಂಡಂತೆ ಮಂಡಿಸಲಾಯಿತು.

1. ಉಳುವವನಿಗಾಗಿ ಭೂಮಿ, ಹೆಚ್ಚಿನ ಭೂಮಿಯನ್ನು ಭೂಹೀನರಿಗೆ ಹಂಚುವುದು.

2. ಲಾಭದಾಯಕ ಬೆಲೆಗಾಗಿ ಹೋರಾಟ

3. ಸಾಲದ ಹೊರೆಯಿಂದ ಮುಕ್ತಿ

4. ತೆರಿಗೆ ವಿರುದ್ಧ ಚಳವಳಿ

5. ಕೃಷಿ ಕೂಲಿಗಾಗಿ ಕನಿಷ್ಠ ವೇತನ

6. ಭೂ ಹೀನರಿಗಾಗಿ ನಿವೇಶನ

7. ಗುಡಿ ಕೈಗಾರಿಕೆಗಳಿಗಾಗಿ ಆದ್ಯತೆ

8. ಕೈಗಾರಿಕೆ ಮತ್ತು ಕೃಷಿ ಬೆಲೆಗಳಲ್ಲಿ ಸಮಾನತೆ ತರುವುದು

9. ಸಾಗುವಳಿಯಾಗದ ಭೂಮಿಗೆ ಕೃಷಿ ಸೇನೆ

10. ಚತುಸ್ತಂಭ ರಾಷ್ಟ್ರ ನಿರ್ಮಾಣ

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಕಂಪನಿಯ ವಿರುದ್ಧ ರೈತ ದಂಗೆಗಳು ಇಂದಿಗೂ ಪ್ರಸ್ತುತವಾಗಿವೆ. ಸ್ವಾತಂತ್ರೋತ್ತರ ಭಾರತದಲ್ಲಿ ಅಂತಹದೆ ದಂಗೆ ಭಾರತದಾಧ್ಯಂತ ನಡೆಯುತ್ತಿದೆ. ಲಕ್ಷಾಂತರ ರೈತರು ದೆಹಲಿಯಲ್ಲಿ ಜಮಾಹಿಸಿದ್ದಾರೆ. ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ತಂದಿರುವ ಭೂ ಕಾಯಿದೆ ಮತ್ತು ಕೃಷಿ ನೀತಿಗಳು ರೈತರನ್ನು ಬೆಚ್ಚಿ ಬೀಳಿಸಿವೆ. ಅದರ ಪರಿಣಾಮವೇ ಪಂಜಾಬ್, ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದಾಧ್ಯಂತ ವ್ಯಾಪಕ ದೊಂಬಿ ಹೋರಾಟಗಳು ನಡೆಯುತ್ತಿವೆ.

ಬ್ರಿಟೀಷ್ ಕಂಪನಿಯು ರೈತನ ಭೂಒಡೆತನ ಹಾಗೂ ಕೃಷಿ ಮೇಲಿನ ಹಕ್ಕನ್ನು ಕಸಿದುಕೊಂಡು ಜಹಗೀರದಾರರು ಹಾಗೂ ಇನಾಂದಾರರಿಗೆ ಕೊಟ್ಟಂತೆ ನರೇಂದ್ರ ಮೋದಿ ಸರ್ಕಾರವು ರೈತರ ಕೃಷಿ ಭೂಮಿ ಹಾಗೂ ಕೃಷಿಕನ ಬೆಳೆ ಮೇಲಿನ ಹಕ್ಕನ್ನು ಕಸಿದುಕೊಂಡು ಅದಾನಿ, ಅಂಬಾನಿ ಕಂಪನಿಗೆ ಕೊಡಲು ಮುಂದಾಗಿದೆ. ರೈತಾಪಿ ವರ್ಗದ ಮೇಲಿನ ಹಕ್ಕನ್ನು ಕಸಿದು ಬ್ರಿಟೀಷ್ ಕಂಪನಿ ಶೋಷಣೆ ಮಾಡಿದ ಮಾದರಿಯನ್ನೆ ಇಂದಿನ ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಇಂದಿನ ರೈತನ ದಂಗೆಯು ಭೂಒಡೆತನ ಹಾಗೂ ಬೆಳೆ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವುದೆ ಇಂದು ನಡೆಯುತ್ತಿರುವ ರೈತರ ದಂಗೆಯ ಬಹುಮುಖ್ಯ ಬೇಡಿಕೆಯಾಗಿದೆ. ಸರ್ಕಾರ ರೈತ ಹೋರಾಟವನ್ನು ನಡೆಸಿಕೊಳ್ಳುತ್ತಿರುವ ರೀತಿ ಪರಕೀಯ ಬಿಂಬಿತ ಸ್ಥಾಪಿತ ಹಿತಾಸಕ್ತಿಯಾಗಿದೆ. ರೈತರ ಈ ದಂಗೆ ಅಂಬಾನಿ ಕಂಪನಿ ಮತ್ತು ಸರ್ಕಾರ ಇಬ್ಬರಲ್ಲೂ ಕೂಡಿಕೊಂಡಿರುವ ಜನವಿರೋಧಿ ನೀತಿಯನ್ನು ಮಣಿಸುವುದೇ ಆಗಿದೆ. ರೈತರ ಹಿಡಿ ಹೋರಾಟವು ಬ್ರಿಟೀಷರ ವಿರುದ್ಧ ಹೋರಾಡುತ್ತಿರುವಂತೆಯೆ ಇದೆ.

………..

Leave a Reply

Back To Top