ಟಿ. ಎಸ್. ಶ್ರವಣಕುಮಾರಿ ಕವಿತೆಗಳು
ನನ್ನೊಳಗಿನವಳು…..
ಏನೋ ಹೊಸತು ಬರೆದೆನೆಂದು ಹಿಗ್ಗಿ ಕುಣಿಯುತಿರುವೆ
ಎಲ್ಲಿ ತೋರು ಸ್ವಲ್ಪ ಹೀಗೆ ಒಮ್ಮೆ ನೋಡಿ ಬಿಡುವೆ
ಹೊಸತು ಬೆಳಕು ಇರುವುದೆಂದೆ? ಕಾಣಲಿಲ್ಲ ನಿಜದಿ!
ತುಸುವೆ ತಿರುಗಿ ನೋಡು ಹಿಂದೆ, ಸರತಿ ಸಾಲ ದೊಂದಿ!
ಹಾಗೆ ಸಾಗಿ ಸಾಲು ಸೇರು, ಬರಲಿ ನಿನ್ನ ಸರದಿ
ಕಾಯುವಷ್ಟು ತಾಳ್ಮೆ ಇರದೆ ಫಲವು ಸಿಗದು ಬನದಿ!
ಕೇಳು ಕವಿಯೆ ಹಿಗ್ಗ ಬೇಡ ಯಾರೆ ಬೆನ್ನ ತಟ್ಟಲಿ;
ಏನೊ ಹೇಳ ಹೊರಟೆಯಲ್ಲ ಓದುಗನಿಗದು ಕೇಳಲಿ.
ಮೂಸೆಯೊಳಗೆ ಕಾದು ಕುಟ್ಟಿ ಪದವು ಹೊರಗೆ ಬರಲಿ
ಅವಸರದಲಿ ಪ್ರಸವ ಬೇಡ ದಿನವು ತುಂಬಿ ಜನಿಸಲಿ…
ಪದದ ಹದದ, ಧ್ವನಿಯ ಇಂಪ, ನಾದವನ್ನು ಮೂಡಿಸು;
ಹೆತ್ತ ಮಗುವ ಜಗಕೆ ತೋರ್ವ ಮುನ್ನ ನನಗೆ ತೋರಿಸು;
ಬೀಜ ಮೊಳೆತು ಚಿಗಿದ ಫಲವ ಮೊದಲು ಇಲ್ಲಿ ಕಾಣಿಸು.
ನಿನ್ನೊಳಗಿನ ಕನ್ನಡಿ ನಾನು; ನೋಡಿ ಶಿರವ ಬಾಗಿಸು
****
ಅಳಿಲೊಂದು ಮನೆಯಲ್ಲಿ…
ಇಂದು…
ಅದು ಎಂತೋ ಏನೋ
ಮುಸ್ಸಂಜೆಯ ಹೊತ್ತಲ್ಲಿ
ಅಳಿಲೊಂದು ಮನೆಗೆ ಬಂದು
ಜಗಲಿ, ಹಜಾರ, ಪಡಸಾಲೆ…
ಎಲ್ಲ ಕಡೆ ದಿಕ್ಕೆಟ್ಟು ಓಡಾಡಿ
ಪರದಾಡಿ ಸೇರಿತು ಕೋಣೆ
ಅಲ್ಲಿರಲಾಗದೆ, ಹೊರಬರಲಾಗದೆ
ತಬ್ಬಿಬ್ಬುಗೊಂಡು ಅಡಗಿಕೊಂಡಿತು
ಯಾವ ಮೂಲೆಯಲ್ಲೋ… ಸ್ತಬ್ಧ, ಮೌನ!
ಆಡುತಿದ್ದ ಹುಡುಗ ಚೆಂಡು ಹುಡುಕಲು
ಹೋಗಿ ಎಲ್ಲೋ ಅಪರಿಚಿತರ ನಡುವೆ
ಸಿಕ್ಕಿಬಿದ್ದು… ತಲೆಮರೆಸಿ ಕೂತಂತೆ!!
ಫಕ್ಕನೆ ದೀಪವಾರಿತು
ಹೇಗೆ ಹುಡುಕಲಿ ಈಗ
ತಾನೇ ಹೊರಹೋದರೂ
ತಿಳಿಯುವುದು ಹೇಗೆ?!
ಕತ್ತಲೆಯಲ್ಲಿ ಯಾರದೋ
ಕಾಲಿಗೆ ಸಿಕ್ಕು ಸತ್ತರೆ?!
ಮುಚ್ಚಿಬಿಟ್ಟೆ ಕೋಣೆಯ ಬಾಗಿಲು
ಯಾವ ಕೆಲಸಕೂ ಮನವಿಲ್ಲ
ಏನು ಪರದಾಡುತಿದೆಯೋ
ಏನನ್ನು ಹುಡುಕುತಿದೆಯೋ
ಗಳಿಗೆಗೊಮ್ಮೆ ಬಾಗಿಲಿಗೆ ಕಿವಿ
ಏನಾದರೂ ಸದ್ದು ಕೇಳೀತೆ???
ಮಲಗುವ ಸಮಯ ಬಂತು…
ಕರೆಂಟಿಗಿನಿತೂ ದಯೆ ಬರಲಿಲ್ಲ
ನಾವು ಉಂಡೆವು ಹೊಟ್ಟೆತುಂಬಾ
ಒಳಗಿರುವ ಜೀವಿಯ ಗತಿಯೇನು
ರಾತ್ರಿ ಉಪವಾಸವೇ ಗತಿಯೆ?
ಯಾವ ತಪ್ಪಿಗೆ ಅದಕೆ ಈ ಶಿಕ್ಷೆ??
ಸದ್ದಾಗದಂತಿನಿತು ಬಾಗಿಲ ಸರಿಸಿ,
ಸುಲಿದ ಬಾಳೆಹಣ್ಣ ಮೆತ್ತಗೆ ಒಳಗಿಟ್ಟೆ,
ಹುಸಿನಗುತಿರುವರ ಗಮನಿಸದಂತೆ.
ಪಾಪ ಅದಕೆ ಬಾಯಾರುವುದಿಲ್ಲವೇ?
ಪ್ರಶ್ನೆಯೊಂದು ತೂರಿಬಂತು ಹಿಂದೆ..
ಹೌದಲ್ಲ?! ನೀರಿನ ಬಟ್ಟಲೂ ಸರಿಸಿದೆ.
ಮಲಗಿದರೂ ಕ್ಷಣ ಮುಚ್ಚಲಿಲ್ಲ ಕಣ್ಣೆವೆ
ಕೇಳಿತೇನು ಕರ್ ಕರ್ ಎಂದ ಸದ್ದು??
ಕಡಿದುಬಿಟ್ಟರೆ ಕಂಪ್ಯೂಟರಿನ ವೈರುಗಳ!
ಫಕ್ಕನೆ ಬಂದು ಕರೆಂಟು ಅದು ಸುಟ್ಟರೆ!?
ಅಯ್ಯೋ ಬೇಡ ಕತ್ತಲೇ ಇರಲಿ ಈ ರಾತ್ರಿ!!
ಪಾಪದ್ದು ಉಂಡು, ಕುಡಿದು ಮಲಗಿರಲಿ…
ಅಬ್ಭಾ ಅಂತೂ ಹುಟ್ಟಿತು ಹೊಸ ಹಗಲು –
ನೋಡೋಣ ಏನಾಯ್ತದರ ಪರಿಪಾಟಲು…
ಮೆತ್ತಗೆ ತೆರೆದರೆ ಕೋಣೆಯ ಬಾಗಿಲು –
ಅಯ್ಯೋ! ತಿಂದಿಲ್ಲ ಹಣ್ಣು ಕದಲಿಲ್ಲ ನೀರು
ಒಂದೊಂದೆ ಸಾಮಾನು ಸರಿದ ಸದ್ದಿಗೆ
ಶಬ್ಧವೆ ಇಲ್ಲ!! ಪಾಪ ಸತ್ತೇ ಹೋಯಿತೇ!?
ಸರಕ್ಕನೆ ಏನೋ ಓಡಿದಂತಾಯ್ತು ಹಿಂದೆ
ಪಕ್ಕನೆ ತಿರುಗಿದೆ ಕಾಣಲಿಲ್ಲ ಏನೂ…
ಚಕ್ಕನೆ ಆಚೆಗೆ… ಓಡಿದಂತಾಯ್ತೆ ಹೊರಗೆ?
ಮುಂಬಾಗಿಲಿಂದ ಹೊರಗೆ ಇಣುಕಿದೆ
ಮರದ ಮೇಲಿದ್ದ ಅಳಿಲು ನೋಡಿದ್ದು ನನ್ನನ್ನೇ?!
ಅದು ನಿಜಕೂ ರಾತ್ರಿಯೆಲ್ಲ ಮನೆಯೊಳಗಿತ್ತೆ?!
*******
ಚದುರಂಗ
ನನ್ನ ನಿನ್ನ ನಡುವೆ ಸದಾ ಚದುರಂಗದಾಟ
ಕಣ್ಣ ಕಣ್ಣ ಭಾಷೆಯಲ್ಲಿ ಮನ ಹೂಡುವ ಹೂಟ
ಮೊದಮೊದಲು ಪದಾತಿಘಾತ ಒಂದೊಂದೇ ಹೆಜ್ಜೆ
ಎದುರೆದುರು ನಿಂತರಿಲ್ಲ; ವಾರೆನೋಟಕ್ಕೆ ಕಾಯೇಟು
ನುಗ್ಗಿ ಬರುವುದಾನೆ, ಹಸ್ತ ಸ್ಪರ್ಷಕ್ಕೆ ಬೇರೆ ಮಾತೇನು
ಒಂದಷ್ಟಾದರೂ ಕಾಯಿ ಉರುಳದಿರುವುದೇನು?!
ಒಂಟೆಗೆ ಡುಬ್ಬದಲೇ ನೀರು; ಆದರೆ ದಾಹವಿರದೇನು?
ಓರೋರೆಯಾಗಿ ನಡೆದರೆ ಎದುರಾಳಿ ಬೀಳನೇನು!
ಕುದುರೆಗಿಲ್ಲ ಲಗಾಮು; ನೆಗೆಯುವುದು ಮನಬಂದತ್ತ
ಕೆಳಗೊರಗುವವರೆಗೆ ತಿಳಿದಿಲ್ಲ ಪಟ್ಟು ಬಿಗಿದದೆಲ್ಲಿಂದ!!
ಮಂತ್ರಿ ಬಲು ಚಾಣಾಕ್ಷ; ಸೆಳೆಯುವನು ಪೂರ ಲಕ್ಷ್ಯ:
ಮತ್ತೇರಿಸುವ ಪಿಸುಮಾತಲ್ಲಿ ಕಟ್ಟಿಹಾಕುವ ಚತುರ.
ಚಿತ್ತಾಗಿ ಎಲ್ಲ ಕಳೆದುಕೊಂಡು ಎದುರೆದುರು ಇರುವಾಗ
ಮತ್ತೇನು ಕಾದಾಟ ಶರಣಲ್ಲದೆ?: ಬರಿ ಚೆಕ್ಕು ಮೇಟು
ಟಿ.ಎಸ್. ಶ್ರವಣ ಕುಮಾರಿ
ಕವನಗಳು ಚೆನ್ನಾಗಿವೆ
ಮನೆಯೊಳಗೊಂದು ಅಳಿಲು ಇಷ್ಟ ವಾಯ್ತು.
ಮೂಸೆಯೊಳಗೆ ಕಾದು ಕುಟ್ಟಿ ಪದವು ಹೊರಬರಲಿ… ಸಾಲುಗಳು ಚಂದ
ನನ್ನೊಳಗಿನವಳು ಅದ್ಭುತವಾಗಿದೆ ಹಾಗೆಯೇ ಉಳಿದ ಕವನಗಳು ಚೆನ್ನಾಗಿವೆ ಮೇಡಂ
ಕವನಗಳು ತುಂಬ ಚೆನ್ನಾಗಿವೆ.