ಸಮಯ
ಕವನ ಹುಟ್ಟುವ ಸಮಯ
ನನಗೂ ತಿಳಿದಿಲ್ಲ…..
ನನ್ನ ಭಾವದ ಮೊಟ್ಟೆಗೆ
ನೀ ಪ್ರೇಮದ ಮಾತುಗಳ
ಕಾವು ಕೊಟ್ಟಾಗ
ಅವು ನನ್ನೆದೆಯಲ್ಲಿ
ಚಿಲಿಪಿಲಿ ಗುಟ್ಟುತ್ತವೆ…..!!
ಕವನ ಹುಟ್ಟುವ ಸಮಯ
ನನಗೂ ತಿಳಿದಿಲ್ಲ…. ಮುನಿಕೊಂಡಾಗ ನೀ
ಮುದುರಿದ ಭಾವ ಸೆಲೆಯೊಳಗೆ
ವಿರಹ ಗೀತೆಗಳು ಕಣ್ಣಹನಿಯಾಗಿ
ಒಸರುತ್ತವೆ….!!
ಕವನ ಹುಟ್ಟುವ ಸಮಯ
ನನಗೂ ತಿಳಿದಿಲ್ಲ….
ನೀ ಮೌನಿಯಾದಾಗ
ಚಡಪಡಿಸುವ ಹೃದಯ
ಶಬ್ದವಾಗಿ ಮಿಡಿಯುತ್ತಿವೆ…..!
*****
ಹಾಲು ಪಥ
ಮನೆಯಂಗಳದ
ಮಲ್ಲಿಗೆಯು ಬಳ್ಳಿಯಲಿ
ಅರಳಿದ ಒಂಟಿ ಹೂ
ಅವನಿಗೂ ತಾಗುವಂತೆ
ಪರಿಮಳವ ಸೂಸುತಿದೆ
ಬೆಳದಿಂಗಳ ಬಳಿದುಕೊಂಡೆನೆಂದು
ಬೀಗುತಿದೆ…..!
ಅಡುಗೆಮನೆಯ ಒಲೆಯ
ಮುಂದೆ ಬೇಯು(ಸು)ವವಳ
ಬೆಳಕಿಂಡಿಯಲಿ ಇಣುಕಿ
ಮತ್ತೆ ಮತ್ತೆ ಕೆಣಕಿ ಬಳಿಗೆ
ಕರೆಯುವ ಅವನ
ಚೆಲ್ಲಾಟಟಕೆ ಅವಳದೊ ಚಡಪಡಿಕೆ….!
ಕಣ್ಸನ್ನೆಗೆ ಮರುಳಾಗಿ
ಎಲ್ಲರ ಕಣ್ ತಪ್ಪಿಸಿ
ಸರಿರಾತ್ರಿಯಲಿ ಕದತೆರೆದು
ಅಳುಕು ಅಂಜಿಕೆಯಲಿ
ಹೊರಬಂದವಳಿಗಿಗ
ಚುಮುಚುಮ ಚಳಿಯಲಿ
ಬೆಳದಿಂಗಳ ಬಿಸಿ ಅಪ್ಪುಗೆ…..!
ಅರಳಿದ ಮಲ್ಲಿಗೆಯಂತೆ
ಹಗುರವಿಗ ಅವಳ ಮೈಮನ
ಮನದ ತುಂಬಾ ಘಮಲು
ಪ್ರೇಮದ ಅಮಲು
ಹೊದ್ದು ಮಲಗಿದವಳಿಗ
ಚಂದ್ರನೂರಿನ
ಹಾಲುಪಥದ ಹಾದಿಯಲ್ಲಿದ್ದಾಳೆ…..!
ಇರಳ ಬಾನಂಗಳದಿ
ಹೊಳೆವ ತಾರೆಗಳ ವೈಯಾರದ
ಮಧ್ಯ ನಸುನಗುವ ಚೆಲ್ಲುತ
ಪ್ರಕಾಶಿಸುತ ಕೋಮಲ
ಕಿರಣಗಳ ಪ್ರಭಾವಳಿಯಲ್ಲಿ
ಶೋಭಿಸುತ ಹುಣ್ಣಿಮೆಗೊಮ್ಮೆ
ಕರೆವಅವನಿಗೆ ಅವಳು
ಎಂದೊ ಸೋತಿದ್ದಾಳೆ….!
****
ಮಾತುಮಾತಲ್ಲಿ
ಮಾತು ಮಾತಲ್ಲಿ
ಮಲ್ಲಿಗೆ ಅರಳಿ
ಸಂಪಿಗೆ ಸೌಗಂಧ ಬೀರಿ
ಕರೆದಾವ ನಿನ್ನ ಸನಿಹಕ…..!
ಮಾತು ಮಾತಲ್ಲಿ
ಕೇದಿಗೆಯ ಮೊನಚು
ಸುರಗಿಯ ಪರಿಮಳವು
ಸೆಳೆದಾವು ನಿನ್ನ ಸನಿಹಕ….!
ಮಾತು ಮಾತಲ್ಲಿ
ಪಾರಿಜಾತದ ಗಂಧ
ಕೈ ಬೀಸಿ ಕರೆದಾಂಗ ರಾಜಸುಗಂಧ
ಸುತ್ತಿ ಸಿಳಿದಾವು ನಿನ್ನ ಸನಿಹಕೆ.
ಡಾ. ನಿರ್ಮಲ ಬಟ್ಟಲ
ಚೆಂದದ ಕವಿತೆಗಳು….. ಸುಕುಮಾರ ಭಾವಗಳ ಖಜಾನೆ…. ನಿರ್ಮಲಾ….
ಕವಿಯತ್ರಿ ಆಗಿ ಬಿಟ್ರಿ…
Only creative person can do this