ಕಾವ್ಯ ಸಂಗಾತಿ
ಕೊನರದೆ
ಅಜಿತ್ ಹರೀಶಿ
ಹಳೇ ರೇಡಿಯೋದ ಗಾಲಿ ಗಿರ ಗಿರ ತಿರುಗಿಸಿ
ತಟ್ಟಿ ಕುಟ್ಟಿ ಬ್ಯಾಂಡ್ ಬದಲಿಸಿ
ತೆರೆದ ಬಾಗಿಲ ಹಿಂದೆ ಮುಂದೆ ನಿರುತ್ಸಾಹ
ಕಾಮಗಾರಿಯ ಕಲೆಗಳ ಹಳೆ ಬಟ್ಟೆ ತೊಟ್ಟು
ಮುಖದಲ್ಲಿ ನಟನೆಗೂ ಮೂಡದ ನಗು
ಬಾಯಿ ದುರ್ನಾತ ಎಂದು ಇರದ ನೋವ ಹೇರಿ
ಇನ್ನೊಂದು ಮಗ್ಗುಲಾಗಿ
ಶಯನ ಸೂಕ್ಷ್ಮ ತನುಮನ ವಿದಳನ
ಮಿಲನ ಮುನ್ನುಡಿಯಾಗಿ ವೇಗವರ್ಧಕವಾಗಿ
ಮಾಧುರ್ಯದ ಮಾದರಿಯಾದ
ಗೋಡೆಯ ಜೋಡಿ ಚಿತ್ರವೀಗ
ನಿರ್ಜೀವವಾಗಿ ಮೂಡಿಸದ ಸ್ಪಂದನ
ಬೆಳಗು ಬೈಗುಗಳ ಮಧ್ಯೆ
ಅಭಾವ ಸಮಯಕೂ ಸನಿಹಕೂ
ಗಂಧವಿಲ್ಲದ ಬಂಧ ದುಂಬಿ ಹೀರದ ಮಕರಂದ
ಮುನಿಸು ಒಲುಮೆಯೊಡಲ ಬಸಿರು
ಭಾರವಾಗಿ ಒರತೆ ಬತ್ತಿದ ತೊರೆ
ಕುಡಿಯೊಡೆದ ನೆಲವಿಂದು ನಿಸ್ಸಾರವಾಗ ಹೆಜ್ಜೆ ಹೆಜ್ಜೆಗೂ ಊನ
ಹೆಪ್ಪುಗಟ್ಟಿದ ಮೌನ
ಉಳಿದ ಕೊನೆಯದೊಂದು ಕೊಂಡಿ
ಕಳಚಿ ಬೀಳುವ ಸೂಚನೆ
ತೊಟ್ಟು ಕಾರ್ಕೋಟಕ ವಿಷವಿಟ್ಟು
ಕುಡಿ ಎಂದರೂ ನೋಡಿ
ಕೊಲ್ಲುವಾಸೆ ಕಣ್ಣಲ್ಲಿ ಕಣ್ಣಿಟ್ಟು
ಕಟ್ಟುವಾಸೆ ಮತ್ತೆ ಅಷ್ಟೂ ಗುಟುಕರಿಸಿ
ಅನುಮಾನಗಳ ಕೊಂದು
ಹೊಸ ಟ್ರಾನ್ಸಿಸ್ಟರ್ ಸ್ವಯಂಚಾಲಿತ
ರಿಪೇರಿ ಕಷ್ಟ, ಇಷ್ಟ ರಿಪ್ಲೇಸ್‌ಮೆಂಟ್
**************