ಅಂಕಣ ಸಂಗಾತಿ

ತೊರೆಯ ಹರಿವು

ಭಾವಶುದ್ಧ ಇರದವರಲ್ಲಿ….

            ತನು ಕರಗದವರಲ್ಲಿ

ಮಜ್ಜನವನೊಲ್ಲೆಯಯ್ಯಾ ನೀನು.

ಮನ ಕರಗದವರಲ್ಲಿ

ಪುಷ್ಪವನೊಲ್ಲೆಯಯ್ಯಾ ನೀನು.

ಹದುಳಿಗರಲ್ಲದವರಲ್ಲಿ

ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ದೆರೆಯದವರಲ್ಲಿ

ಆರತಿಯನೊಲ್ಲೆಯಯ್ಯಾ ನೀನು.

ಭಾವ ಶುದ್ಭವಿಲ್ಲದವರಲ್ಲಿ

ಧೂಪನೊಲ್ಲೆಯಯ್ಯಾ ನೀನು.

ಪರಿಣಾಮಿಗಳಲ್ಲದವರಲ್ಲಿ

ನೈವೇದ್ಯವನೊಲ್ಲೆಯಯ್ಯಾ ನೀನು.

ತ್ರಿಕರಣ ಶುದ್ಧವಿಲ್ಲದವರಲ್ಲಿ

ತಾಂಬೂಲವನೊಲ್ಲೆಯಯ್ಯಾನೀನು.

ಹೃದಯಕಮಲ ಅರಳದವರಲ್ಲಿ

ಇರಲೊಲ್ಲೆಯಯ್ಯಾ ನೀನು.

ಎನ್ನಲ್ಲಿ ಏನುಂಟೆಂದು

ಕರಸ್ಥಲವನಿಂಬುಗೊಂಡೆ ಹೇಳಾ

ಚೆನ್ನಮಲ್ಲಿಕಾರ್ಜುನಯ್ಯಾ

    – ಅಕ್ಕ ಮಹಾದೇವಿ.

  ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, ತ್ರಿಕರಣ ಶುದ್ಧವಿಲ್ಲದವರು, ಹೃದಯ ಕಮಲ ಅರಳದವರು ಇಂಥವರಿಂದ ಯಾವುದನ್ನೆಲ್ಲಾ ‘ಒಲ್ಲೆ’ ಎನ್ನುವುದು ಕೇವಲ ದೇವರಿಗೆ ಇರಬೇಕಾದ ಭಾವವೇ? ಮಾನವರೂ ಈ ಕುರಿತು ಗಟ್ಟಿ ನಿಲುವನ್ನು ತೆಗೆದುಕೊಳ್ಳಬೇಕೆ, ಬೇಡವೆ? ಎಂದು ಚಿಂತಿಸುವಂತೆ ಈ ವಚನ ಮಾಡುತ್ತದೆ.

    ೧೨ನೆಯ ಶತಮಾನದ ವಚನಕಾರರು, ಸಮಾಜೋ-ಧಾರ್ಮಿಕ ಸುಧಾರಣೆಯ ಹರಿಕಾರರು. ಡಾಂಭಿಕತೆಯ ಕಟು ವಿರೋಧಿಗಳು ಹಾಗೂ ಗೊಡ್ಡು ಆಚರಣೆಯ ತೀವ್ರ ವಿಮರ್ಶಕರು. ವಚನಕಾರರಲ್ಲಿದ್ದ ಈ ಬಗೆಯ ಚಿಕಿತ್ಸಕ ಗುಣವು ಅವರಿಂದ ಅದೆಷ್ಟು ಚೆನ್ನಾದ ವಚನಗಳನ್ನು ರಚಿಸುವಂತೆ ಮಾಡಿದೆ ಎಂದರೆ, ವಚನಕಾರರ ರಚನೆಗಳ ಆಶಯವನ್ನು   ೨೧ ನೆಯ ಶತಮಾನದ ನಮ್ಮ ಜೀವನಕ್ರಮಕ್ಕೆ ಹೊಂದಿಸಿಕೊಳ್ಳಬೇಕಾಗಿ ಬಂದಿರುವುದು  ಆಶ್ಚರ್ಯವಾದರೂ ತೀವ್ರ ವಿಷಾದ ಎನಿಸುತ್ತದೆ. ಏಕೆಂದರೆ, ಹೆಚ್ಚು ಕಡಿಮೆ ಒಂದು ಸಹಸ್ರಮಾನದ ಅಂತರವಿದ್ದರೂ ಮಾನವರ ವ್ಯಕ್ತಿತ್ವಗಳಲ್ಲಿ ಬದಲಾವಣೆ ಆಗದೆ, ಆಗಿನ ರಚನೆಗಳೇ ನಮಗೆ ಇಂದಿಗೂ ಪಾಠಗಳಾಗುತ್ತಿವೆಯಲ್ಲಾ,  ಎಂದು.

 ಒಂದು ಪುಟ್ಟ ಮಗು ಕೂಡ ನಿಸ್ಪೃಹ ಮನಸ್ಸಿಲ್ಲದವರಿಂದ ಮುದ್ದು ಮಾಡಿಸಿಕೊಳ್ಳಲು ನಿರಾಕರಿಸುವುದನ್ನು ನಾವು ಕಾಣಬಹುದು. ಬಸವಣ್ಣ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ….’ ಬೇಡ ಎನ್ನುವ ನಿಷೇಧಾರ್ಥಕ ಪದವನ್ನು ಬಳಸಿ ಹೇಳಿದ ಎಲ್ಲಾ ಬೇಡಗಳೂ ಯಾವ ಕಾಲಕ್ಕೂ ವರ್ಜ್ಯಗಳೇ.. ಬದುಕಿನಲ್ಲಿ ಮೌಲ್ಯಗಳನ್ನು ಸ್ವೀಕರಿಸಬೇಕು. ಮೌಲ್ಯಗಳ ಅಪಮೌಲೀಕರಣ ಮಾಡಬಾರದು. ಆದರೆ ಆಗುತ್ತಿರುವುದೇನು? ಗಾಂಧೀ ಕ್ಲಾಸು, ಸತ್ಯ ಹರಿಶ್ಚಂದ್ರ, ಮಹಾ ಶರಣ.. ಮೊದಲಾದ ಪದಗಳನ್ನು ಮೂದಲಿಕೆಗೆ ಸಂವಾದಿಯಾಗಿ  ಬಳಸುತ್ತಿರುವುದು ಮನೋವ್ಯಾಧಿ ಅಲ್ಲದೆ ಮತ್ತೇನು?

     ನಮ್ಮ ಹಿರಿಯರು, “ಒಳ್ಳೆಯವರು ಇರೋ ಹೊತ್ತಿಗೆ ಕಾಲಕಾಲಕ್ಕೆ ಮಳೆ ಬೆಳೆ ಆಗ್ತಿರೋದು” ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಎಂದರೆ, ಒಳ್ಳೆಯವರಾಗಿ ಇರುವುದು ಅತ್ಯಂತ ಉದಾತ್ತ ಮೌಲ್ಯ. ಹಾಗಾದರೆ, ಒಳ್ಳೆಯತನದ ವ್ಯಾಖ್ಯಾನ ಏನು ಎಂದರೆ ಹೇಗೆ ವಿವರಿಸುವುದು?  ‘ಸರ್ವರೊಳಗೆ ಒಂದಾಗಿ ಬದುಕುವ ಗುಣ’, ‘ಅಂತರಂಗ ಬಹಿರಂಗ ಶುದ್ಧಿ’ ಹೊಂದಿರುವ ಭಾವ, ‘ನಡೆನುಡಿಗಳು ಒಂದಾಗಿಹ ರೀತಿ’… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ‘ಒಳಿತು ಮಾಡು ಮನುಶಾ.. ನೀ ಇರೋದು ನಾಕು ದಿವಸಾ…’ ಎಂಬ ತತ್ವಪದದ ರೀತಿ ಇರುವ ಗೀತೆಯೊಂದು ನಾಕು ದಿನ ಇದ್ದು ಆಮೇಲೆ ಬಿದ್ದು ಹೋಗುವ ಮನುಷ್ಯರು ತಮ್ಮ ಅಶಾಶ್ವತ ಬದುಕಿನಲ್ಲಿ ಒಳಿತು ಮಾಡಬೇಕಾದ ಮಹತ್ವವನ್ನು ಹೃದಯ ತುಂಬಿ ಬರುವಂತೆ ಅಭಿವ್ಯಕ್ತಿಸುತ್ತದೆ. ‘ಮಾನವ ಜನ್ಮ ದೊಡ್ಡದೂ ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ…’ ಎನ್ನುವ ದಾಸವಾಣಿಯೂ ಸಹ ಸಕಲ ಜೀವರಿಗೆ ಲೇಸು ಬಯಸುವಂತೆ ಬದುಕಬೇಕಾದ ಲೋಕ ಧರ್ಮವನ್ನು  ಸಾರುತ್ತದೆ.

 ಲೋಕಧರ್ಮವೆಂದು ಯಾವುದನ್ನು ಕರೆಯುತ್ತೇವೆಯೋ ಅವೆಲ್ಲವೂ ಸಕಲ ಜೀವಾತ್ಮರ ಲೇಸನ್ನು ಬಯಸುವಂತಹವೇ ಆಗಿವೆ. ಸ್ವಾರ್ಥ ಕಳೆದ ಜೀವ ನಿಸ್ವಾರ್ಥದಿಂದ ಹಲವು ಲೋಕೋಪಯೋಗಿ ಕೆಲಸಗಳನ್ನು ಮಾಡುವುದು. ಬಾಗದ ಹೊರತು ಬೀಗಬಾರದು ಎಂಬ ಮಾತೊಂದಿದೆ. ಆದರೆ ಬೀಗುವವರ ಜಾತ್ರೆಯಲ್ಲಿ ಬಾಗುವವರನ್ನು ಯಾರೂ ಕಾಣಲಾರದ ಸ್ಥಿತಿ ಈಗ ನಿರ್ಮಾಣಲಾಗುತ್ತಿದೆ. ಅದೃಷ್ಟವಶಾತ್, ಕೆಲವು ಇ-ಮಾಧ್ಯಮಗಳು ಅವರವರಿಗೆ ವೈಯಕ್ತಿಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಸಮಾಧಾನ ಹೇಳುತ್ತಿವೆ. ಇದು ವಿರೋಧವಾದದ್ದೂ ಉಂಟು. ಇಂಥಾ ಮಾಧ್ಯಮಗಳೂ ಅನಿಯಂತ್ರಿತ ಮನಸ್ಸನ್ನು ಒತ್ತಕ್ಕೆ ದೂಡಿರುವುದುಂಟು.

  ವೈಯಕ್ತಿಕ ನೆಲೆಯ ಉದ್ಧಾರಕ್ಕಿಂತ ಸಮಷ್ಟಿಯ ಲೇಸನ್ನು ಬಯಸಿ ಬದುಕುವವರು ಇಂದು ಬೇಕಾಗಿದ್ದಾರೆ. ನರಮನುಷ್ಯರ ಆಯಸ್ಸು ಅಲ್ಪಕಾಲದ್ದಾದರೂ, ಅವರ ಕೊಡುಗೆ ಸುದೀರ್ಘ ಪರಿಣಾಮಗಳನ್ನು ಬೀರುತ್ತವೆ. ಶುದ್ಧತೆ ಎನ್ನುವುದು ಮೇಲ್ನೋಟದ ಸ್ವಚ್ಛತೆ ಆಗಬಾರದು. ಅಂತರಂಗ ಬಹಿರಂಗ ಶುದ್ಧಿ ಹೊಂದದವರನ್ನು ಮೆಚ್ಚಲಾರನು ಪರಮಾತ್ಮ ಎಂದ ಬಸವಣ್ಣನವರ ವಚನದ ತಿರುಳನ್ನು ಗ್ರಹಿಸಿ, ಗುಣಗ್ರಾಹಿಗಳಾದರೆ ಬದುಕು ನಮ್ಮದೂ ಸಹ್ಯವಾಗುವುದು ಜೊತೆಗೆ ನಮ್ಮೊಡನೆ ಬಾಳುತ್ತಿರುವ ಸಮಾಜ ಜೀವಿಗಳದ್ದೂ ಸುಂದರವಾಗುವುದು. ನಿರ್ಮಾಪಕರು ನಾವೇ ಆಗಿರುವುದರಿಂದ ನಾವು ನಿರ್ಮಿಸುವ ಕೃತಿ ಕಲಾಕೃತಿ ಎನಿಸಿಕೊಳ್ಳುವಂತೆ ಮಾಡುವುದೂ ಸಹ ನಮ್ಮ ಕೈಯಲ್ಲೇ ಇರುತ್ತದೆ.

  ಒಳಗೊಂದು ಹೊರಗೊಂದು ಮಾಡುವವರೇ ಚೆನ್ನಾಗಿ ಬದುಕುತ್ತಾರೆ ಎಂಬ ಅಪಾಯಕಾರಿ ನಿಲುವಿಗೆ ಕೆಲವೊಮ್ಮೆ ಬಂದು ನಿಲ್ಲುತ್ತೇವೆ.  ಇದು ಹತಾಶ ಮನಸ್ಸಿನ ನಿರ್ಧಾರ. ಸುತ್ತಲಿನ ಕ್ರಿಯೆಯು ವ್ಯತಿರಿಕ್ತವಾಗಿದ್ದರೆ ಪ್ರತಿಕ್ರಿಯೆಯೂ ಹಾಗೆಯೇ ಋಣಾತ್ಮಕವಾಗಿರುತ್ತದೆ. ಆದರೆ, ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಬಹಳ ನಿರೀಕ್ಷಿತ ಶುಭ ಫಲವನ್ನು ನೀಡುವಲ್ಲಿ ಸಮಯ ಬೇಡುತ್ತವೆ. ನೆಟ್ಟ ಬೀಜಗಳು ಮೊಳೆತು ಚಿಗುರಿ ಹೂ-ಹಣ್ಣಿನ ಫಲ ನೀಡಲು ಸಮಯಾವಕಾಶ ಕೋರುವುದನ್ನು ನೆನೆದು ಸಮಾಧಾನಿಗಳಾಗಿರಬೇಕು. ಅಲ್ಲಿಯವರೆಗೂ ತನು ಮನ ಭಾವ ಶುಧ್ಧತೆಯನ್ನು ಪರಿಣಾಮಕಾರಿಯಾಗಿ ಹೊಂದಬೇಕು. ತೀವ್ರತೆ ಇರದ ಯಾವುದೂ ಪರಿಣಾಮಕಾರಿಯಲ್ಲ ಎನ್ನುವುದನ್ನು ಮರೆಯಬಾರದು. ಹಾಗೆಂದು ತೀವ್ರತೆ ತರಲೋಸುಗವೇ ಅನಗತ್ಯ ಒತ್ತಡ ನಿರ್ಮಿಸಿಕೊಂಡು ತೊಳಲಾಡಬಾರದು.


ವಸುಂಧರಾ ಕದಲೂರು.

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top