ಕನ್ನಡಬಾಷಾಬಳಕೆಯಅಭಿಯಾನದಹಬ್ಬವಾಗಲಿಕರ್ನಾಟಕರಾಜ್ಯೋತ್ಸವ
ಕರ್ನಾಟಕ ರಾಜ್ಯೋತ್ಸವ ಈ ದಿನವನ್ನು ಕನ್ನಡದ ಉತ್ಸವ ಹಬ್ಬವನ್ನಾಗಿ ಆಚರಿಸುತ್ತೇವೆ. 1956ರಲ್ಲಿ ದಕ್ಷಿಣ ಭಾರತದ ಎಲ್ಲಾಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು.
ಉತ್ತರ ಕರ್ನಾಟಕದ ಜನತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂದು 1972ರ ಜುಲೈನಲ್ಲಿ ಚರ್ಚೆ ಭುಗಿಲೆದ್ದಿತು. ಸಾಕಷ್ಟು ದೀರ್ಘಾವಧಿ ಚರ್ಚೆಗಳ ನಂತರ ರಾಜ್ಯವಿಧಾನ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಿತು. ಹಿಂದಿನ ಸಂಸ್ಥಾನ ಮತ್ತು ಹೊಸದಾದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಅನುಗುಣವಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಬದಲಾಯಿಸಲಾಯಿತು..
ಪ್ರತಿ ವರ್ಷ ಇದರ ಸವಿನೆನಪಿಗಾಗಿ ನಾವು ಈ ಕನ್ನಡ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಕನ್ನಡ ನಾಡು ನುಡಿಗಾಗಿ ನಾವು ಇನ್ನೂ ಶ್ರಮಿಸಬೇಕಾಗಿದೆ. ಕನ್ನಡಾಂಬೆಯಾದ ಭುವನೇಶ್ವರಿ ದೇವಿಯ ಪೂಜೆ ಸಲ್ಲಿಸಿ ಭಾಷಣ ಮಾಡಿ ಘೋಷಣೆ ಕೂಗುವ ಕನ್ನಡ ಭಾಷೆ ಕ್ರಾಂತಿ ಕೇವಲ ಇವತ್ತೊಂದೇ ದಿನಕ್ಕೆ ಸೀಮಿತವಲ್ಲ
ಕನ್ನಡನಾಡಿನ ಕೋಟಿ ಕೋಟಿ ಜನರ ಕೊರಳದನಿ ಈ ನಮ್ಮ ಕಸ್ತೂರಿ ಕನ್ನಡ. ಚಲನಶೀಲತೆಯನ್ನು ಪಡೆದಿರುವ ಕರ್ನಾಟಕ ಸಂಸ್ಕೃತಿಯ ಮೂಲಸೆಲೆ. ಭಾಷೆ ಒಂದು ಸಂಪರ್ಕ ಸಾಧನ. ನಮ್ಮೆಲ್ಲರ ನೋವು-ನಲಿವು, ದುಃಖ-ದುಮ್ಮಾನ ಕನಸು-ಕಲ್ಪನೆಗಳನ್ನು ಅಭಿವ್ಯಕ್ತಗೊಳಿಸಲು ಬಳಸುವ ಒಂದು ಸಶಕ್ತ ಮಾಧ್ಯಮವನ್ನು ತಪ್ಪಾಗಲಿಕ್ಕಿಲ್ಲ. ಅದು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಭಾವನಾತ್ಮಕವಾಗಿ ಹೃದಯಗಳು ತಟ್ಟಿ ಮನಮುಟ್ಟಿ ಅಭಿಮಾನದಿಂದ ಮೆಟ್ಟಿ ನಿಲ್ಲುವ ಸವಿಗನ್ನಡವಾಗಿದೆ. ಹಾಗಾದರೆ ಅನವರತ ಕನ್ನಡ ನಾಡು ನುಡಿಯ ಸೇವೆಗೆ ಕಟಿಬದ್ಧರಾಗಬೇಕಾದರೆ ಕನ್ನಡವನ್ನು ನಾವು ಹೆಚ್ಚು ಹೆಚ್ಚು ಬಳಸಬೇಕಾಗಿದೆ. ಪ್ರತಿಯೊಂದು ಭಾಷೆಯೂ ಬಳಕೆಯಿಂದ ಮಾತ್ರವೇ ಬೆಳೆಯುತ್ತದೆ ಉಳಿಯುತ್ತದೆ. ಕನ್ನಡದ ಬಗೆಗಿನ ನಮ್ಮ ಪ್ರೀತಿಗೆ ಮಾನದಂಡ ವ್ಯವಹಾರಲ್ಲಿ ಅದರ ಕಡ್ಡಾಯವಾದ ಬಳಕೆ. ನಾವು ಬರೆಯುವ ಪತ್ರಗಳು, ಮುದ್ರಿಸುವ ಆಹ್ವಾನ ಪತ್ರಗಳು, ತುಂಬುವ ಅರ್ಜಿಗಳು, ಅಲ್ಪಸಂಖ್ಯಾತರು ಮೊದಲ್ಗೊಂಡು ಕನ್ನಡದಲ್ಲಿ ಇರಲೇಬೇಕೆಂಬ ಖಡಕ್ಕಾದ ಕರಾರನ್ನು ಜಾರಿಗೆ ತರಬೇಕು. ಇದರ ಕುರಿತು ಶಾಲೆ, ಕಾಲೇಜುಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನಡೆಸುವದು ಹಾಗೂ ಆಗಮಿಸಿದ ಅತಿಥಿವರೇಣ್ಯರು ಕನ್ನಡದಲ್ಲಿ ಮಾತನಾಡಿದಾಗ ಕನ್ನಡದ ಕಂಪನ್ನು ಹರಡಬಹುದಾಗಿದೆ. ಕನ್ನಡದ ಕವಿಗಳ ಪರಿಚಯ ಅವರ ಕವನಗಳ ಗಾಯನ, ವಾಚನ ವಿಶ್ಲೇಷಣೆ, ಜನಪದಗೀತೆ ಮತ್ತು ನೃತ್ಯ, ಭಾಷಣ, ಪ್ರಬಂಧ, ಆಶುಭಾಷಣ, ಅಂತ್ಯಾಕ್ಷರಿ -ಈ ಎಲ್ಲ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಪರಿಪಾಠವಿರಿಸಿಕೊಂಡು, ಎಲ್ಲಾ ಮಕ್ಕಳೂ ಭಾಗವಹಿಸಿ ಕನ್ನಡ ವಿಷಯದ ಕುರಿತು ಆಸಕ್ತಿ ಬೆಳೆಸಿಕೊಳ್ಳುವಲ್ಲಿ ವಿಶೇಷ ಆಸ್ಥೆ ವಹಿಸಬೇಕಾಗಿದೆ.
ಸುಮಾರು೨೦೦೦ಕ್ಕೂ ಹೆಚ್ಚಿನ ವರ್ಷಗಳಷ್ಟು ಸುದೀರ್ಘ ಇತಿಹಾಸವಿರುವ ಕನ್ನಡ ಒಂದು ಸಮೀಕ್ಷೆಯ ಪ್ರಕಾರ ಕೆಲವೇ ದಿನಗಳ ಕಾಲಘಟ್ಟದಲ್ಲಿ ಕಣ್ಭರೆಯಾಗಲಿರುವ ಜಗತ್ತಿನ ೨೫ ಭಾಷೆಗಳಲ್ಲಿ ಕನ್ನಡವೂ ಸೇರಿರುವದು ವಿಷಾದನೀಯವಾದ ಸಂಗತಿಯಾಗಿದೆ. ಇನ್ನಾದರೂ ಕನ್ನಡಿಗರಾದ ನಾವು ಎಚ್ಚತ್ತುಕೊಳ್ಳೋಣ ಯಾವ ರೀತಿಯಾಗಿ ಲಕ್ಷಕಂಠಗಳ ಗೀತ ಗಾಯನ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆಯೋ ಹಾಗೆಯೇ ಯಾವುದೇ ಆದೇಶಕ್ಕಾಗಿ ಕಾಯದೇ ನಮ್ಮ ಮನೆ, ಮನದಲ್ಲಿ ಕನ್ನಡಾಭಿಮಾನದ ಕೆಚ್ಚು “ಕನ್ನಡ ನಮ್ಮ ಉಸಿರು
ಬಳಸಿ ಉಳಿಸೋಣ ಹೆಸರು”ಎಂದು ಸ್ವಯಂ ಪ್ರೇರಣೆಯಿಂದ ನಮ್ಮತನವನ್ನು ಉಳಿಸಿಕೊಳ್ಳೋಣ. ಅಂದರೆ ಯಾವುದೇ ಬೇರೆ ಭಾಷೆಯನ್ನು ಕಡೆಗಣಿಸಬೇಕಾಗಿಲ್ಲ. ಅವುಗಳನ್ನು ಗೌರವಿಸುತ್ತ ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ ಕನ್ನಡ ಸೇವೆಗೆ ಕಂಕಣ ಬದ್ಧರಾಗೋಣ.
ಭಾರತಿ ಕೇದಾರಿ ನಲವಡೆ