ಪುಸ್ತಕ ಸಂಗಾತಿ
ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ
ಜ.೩೧ ಶಿಗ್ಗಾವಿಯಲ್ಲಿದ್ದೆ. ಕನಕ ಶರೀಫ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹೀಗೆ ಮೂರು ಆಯಾಮಗಳ ಸಮಾರಂಭವನ್ನು ಉತ್ತರ ಸಾಹಿತ್ಯ ವೇದಿಕೆ ಹಾಗೂ ನೇತಾಜಿ ಪ್ರಕಾಶನದವರು, ಗೆಳೆಯ ರಂಜಾನ್ ಕಿಲ್ಲೆದಾರ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕವನ ವಾಚನದ ನೆಪದಲ್ಲಿ ಶಿಗ್ಗಾಂವ್ ತಲುಪಿದ್ದೆ. ಅಲ್ಲಿದ್ದ ಗೆಳೆಯ ಅಲ್ಲಾಗಿರಿರಾಜ್ ಕನಕಗಿರಿ
” ಸರ್ಕಾರ ರೊಕ್ಕ ಮುದ್ರಿಸಬಹುದು,
ತುಂಡು ರೊಟ್ಟಿಯನ್ನಲ್ಲ .. ” ಎಂಬ ಅವರ ಕವನ ಸಂಕಲನವನ್ನು ನನ್ನ ಕೈಗಿಟ್ಟರು . ಆ ಸಂಕಲನದ ರಕ್ಷಾ ಪುಟದ ಕೊನೆಗೆ ‘ ನೀವು ಎದೆಗೆ ಗುಂಡು ಹೊಡೆದರೆ’ ಎಂಬ ಕವಿತೆ ಮೊದಲ ಓದಿಗೆ ಥಟ್ಟನೆ ನನ್ನ ಗಮನ ಸೆಳೆಯಿತು. ಕ್ರಾಂತಿಯ ಕಿಡಿಯಂತೆ ಇದ್ದ ಆ ಕವಿತೆಯನ್ನು ಓದಿದ ತಕ್ಷಣ, ನನ್ನ ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಹಂಚಿಕೊಂಡೆ. ೨೦೨೦ರಲ್ಲೇ ಎರಡು ಮುದ್ರಣ ಕಂಡ ಕವಿತಾ ಸಂಕಲನ ಇದಾಗಿತ್ತು. ಮೋಹನ್ ಕುರುಡಗಿ ಕಾವ್ಯ ಪ್ರಶಸ್ತಿ ಪಡೆದುಕೊಂಡ ” ತುಂಡು ರೊಟ್ಟಿ ” ಈಗಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದೆ.
ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಸಿಟ್ಟು ,ಆಕ್ರೋಶ, ಕವಿತೆಯಾಗುವ ಪರಿ, ಪ್ರಭುತ್ವ ಹೋರಾಟದ ಧ್ವನಿ ಹತ್ತಿಕ್ಕಿದಾಗ ; ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯ ತುಂಡು ರೊಟ್ಟಿ. ಆಕ್ರೋಶದ ಕಾವ್ಯ ಪ್ರೀತಿ ,ಕರುಣೆ ಹಂಚಿ, ಪ್ರಭುತ್ವದ ಠೇಂಕಾರ ಸಹ ಕರಗುವಂತೆ ಕವಿತೆ ಬರೆಯುವ, ಅಲ್ಲಾಗಿರಿರಾಜ್ ಸಮಾಜದ ನಡುವೆ ನೋವಿನ ಧ್ವನಿಗಳಿಗೆ ಕಿವಿಯಾದವರು.
ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಎಂಬ ಉದ್ದದ ಸಾಲನ್ನು ಕವನ ಸಂಕಲನದ ಮುಖಪುಟ ಆವರಿಸಿದೆ. ತುಂಡು ರೊಟ್ಟಿ ಅಥವಾ ರೊಟ್ಟಿ ಎಂದು ಸಂಕಲನದ ಹೆಸರು ಇದ್ದರೂ ಸಾಕಿತ್ತು. ಸಂಕಲನದ ತಲೆ ಬರಹ ಪರಿಣಾಮಕಾರಿಯಾಗಿಯೇ ಇರುತ್ತಿತ್ತು.
ರೈತ ,ರೊಟ್ಟಿ, ರೊಕ್ಕ,ಪ್ರಭುತ್ವ, ಕುರುಡು ಪ್ರಭುತ್ವ ಮುಖಾಮುಖಿಯಾಗುವ ಪರಿಯೇ ಓದುಗನಲ್ಲಿ ಕಾವ್ಯದ ಎಚ್ಚರ ಮೂಡಿಸುವಂತಹದ್ದು.
ತಾಯ ಮೊಲೆಹಾಲು ವಿಷವಾದ ಕಾಲವಿದು. ಕರುಳು ,ಹೃದಯವಿಲ್ಲದ ಅಧಿಕಾರ , ಆಡಳಿತ ಶಾಹಿಯನ್ನು ಎಚ್ಚರಿಸುವ ಜಾಗೃತ ಕಾವ್ಯ ನಮಗೀಗ ಬೇಕು. ಕನ್ನಡ ಪ್ರಜ್ಞೆ ಪರಿಸರ ಅಂಥದ್ದು. ಅಂತಹ ನಾಡಿ ಮಿಡಿತ ಹಿಡಿದು ಬರೆಯುವ ಕವಿ ಅಲ್ಲಾಗಿರಿರಾಜ್ ರೊಟ್ಟಿ ಕವಿತೆಯಲ್ಲಿ ಅದನ್ನು ಸಾಧಿಸಿದ್ದಾರೆ.
” ನೆತ್ತರಿನ ಮಳೆ ಬಿದ್ದ” ಕವಿತೆಯ ಮೇಲೆ ಲಂಕೇಶರ ಕೆಂಪಾದವೋ ಎಲ್ಲಾ ಕೆಂಪಾದವೋ, ಒಣಗಿದ್ದ ಗಿಡಮರ ನೆತ್ತರ ಕುಡಿದ್ಹಾಂಗ ಕೆಂಪಾದವೋ…ಕವಿತೆಯ ದಟ್ಟ ಛಾಯೆಯಿದೆ. ಲಂಕೇಶರ ಕವಿತೆಯನ್ನು ಮುರಿದು ಕಟ್ಟಿದ ಹಾಗೆ ಇದೆ ನೆತ್ತರಿನ ಮಳೆ ಬಿದ್ದ ಕವಿತೆ.
“ಚಪ್ಪಲಿ ಕಥೆ ” ಎಂಬ ಹೆಸರಿನ ಕವಿತೆ ವಾಚ್ಯ ಎನಿಸಿದರೂ ಅಂತಿಮ ಸಾಲಿನಲ್ಲಿ ಧ್ವನಿ ಕಾರಣ ಗೆಲ್ಲುತ್ತದೆ.
“ಅಪ್ಪ ಎಂದೂ ಮುಗಿಯದ ಕನಸು” ಕವಿತೆ ಅಪ್ತವಾಗಿದೆ. ‘ಅಪ್ಪ ಕವಿತೆಯ ಕೊನೆಯ ಸಾಲಿನಂತೆ’ ಎನ್ನುವ ಸಾಲು ಮನಮೀಟುತ್ತದೆ. ಅಲ್ಲದೇ
” ನನ್ನವ್ವ ತೀರಿಕೊಂಡಾಗ
ನನ್ನಪ್ಪ ಅಂದೇ ಒಳ ಒಳಗೇ
ಸತ್ತಿದ್ದ “
ಎನ್ನುವ ಸಾಲು ಸಹೃದನನ್ನು ಕಾಡದೇ ಇರದು. ಲಾಕ್ ಡೌನ್ ಮತ್ತು ನಾಯಿ ದಿನಚರಿ ಕವಿತೆ ೨೦೨೦ ನೇ ವರ್ಷದ ಕೋವಿಡ್ ಕರಾಳತೆಯನ್ನು ರಾಚುತ್ತದೆ. ಮನುಷ್ಯರಾಗೋಣ ಕವಿತೆ ಕೋಮುಸೌಹಾರ್ದತೆ ಹಾಗೂ ಭಾರತೀಯತೆಯನ್ನು ಕಟ್ಟಿಕೊಡುತ್ತದೆ. ಕವಿಯ ಕಳಕಳಿ , ಉದ್ದೇಶ ಇಂತಹ ಕವಿತೆಗಳ ಮೂಲಕ ದಾಖಲಾಗುತ್ತದೆ.
” ಲಾಲ್ ಸಲಾಂ ಚೆಗು” ಎಂಬ ಕವಿತೆಯಲ್ಲಿ ಕವಿ ಚೆಗೆವಾರನನ್ನು ನೆನಪಿಸಿಕೊಂಡಿದ್ದಾರೆ. ಇದೊಂದು ಸಶಕ್ತ ಕವಿತೆ.ಕ್ರಾಂತಿ ಗೀತೆಯಂತಿದೆ.
” ನಿನ್ನ ಕಣ್ಣ ಕಿಂಡಿಯಲ್ಲಿ ಜಗದ ಹಸಿದವರ ದನಿಯಿದೆ
ಶೋಷಿತರ ಹೆಗಲಮೇಲೆ ನಿನ್ನ ಲಾಲ್ ಝೆಂಡಾ ಇನ್ನೂ ಘರ್ಜಿಸಿದೆ” ಎನ್ನುತ್ತಾನೆ ಕವಿ.
ನನ್ನ ಕವಿತೆಯಲ್ಲಿ
ಎಂಜಲು ಅನ್ನ ಕಾಯುವ ಅನಾಥ ಬೀದಿ ಮಕ್ಕಳ ಎದೆಯ ಹಾಡು ನನ್ನ ಕವಿತೆ
ಅಕ್ಕ ತಂಗುಯರ ಎದೆಯ ಹಾಡು
ಲೋಕದ ಹಸಿವು ನೀಗಿಸಿದ
ಅನ್ನದಾತರ ಎದೆಯ ಹಾಡು
ನನ್ನ ಕವಿತೆ
ನನ್ನದೇ ಅಲ್ಲ
ಹಸಿದವರ ಹಾಡು ” ಎಂಬಲ್ಲಿ ಕವಿತೆ ಸಾರ್ವಜನಿಕರದ್ದು, ಶ್ರಮಜೀವಿಗಳದ್ದು ಎಂಬ ಸಂದೇಶವನ್ನು ಕವಿ ಸಮಾಜಕ್ಕೆ ನೀಡುತ್ತಾ ಸಾಗುತ್ತಾನೆ.
” ಅಲ್ಲಿ ವರ್ಣ- ಇಲ್ಲಿ ಧರ್ಮ ” ಎಂಬ ಕವಿತೆಯಲ್ಲಿ ವರ್ಣ ಬೇಧ , ಧರ್ಮಬೇಧ ಇರುವಾಗ ಮನುಷ್ಯರು ಮನುಷ್ಯರಾಗುವುದು ಯಾವಾಗ ? ಎಂಬ ಪ್ರಶ್ನೆ ಎತ್ತುತ್ತಾನೆ ಕವಿ.
ಧರ್ಮದ ಅಮಲು ಬಣ್ಣದ ಧಿಮಾಕು ಇನ್ನೆಷ್ಟು ದಿನ ? ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಸಕಾಲಿಕ ,ಸಮಾಕಾಲಿನ ಸಮಸ್ಯೆಗೆ ಮುಖಾಮುಖಿಯಾಗಿ ಕಾವ್ಯವನ್ನು ಎಚ್ಚರಿಕೆಯ ಗಂಟೆಯಾಗಿ ಭಾರಿಸಿದ್ದಾರೆ.ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ , ಧರ್ಮದ ವಿಷಗಾಳಿ ಕುಡಿದು ಎನ್ನುವ ಆತಂಕ ಸಹ ಕವಿಗಿದೆ. ಮಂದಿರ ಮಸೀದಿ ಮೇಲಿನ ಬಿಳಿ ಪಾರವಾಳ ರಕ್ತ ಕಾರುವ ಮುನ್ನ ಕಫನ್ ಸುತ್ತಿಕೊಳ್ಳಬೇಕು ಎಂದು ತಮಗೆ ತಾವೇ ಹೇಳಿಕೊಂಡ ಆತ್ಮಾವಾಲೋಕನದ ಕವಿತೆಗಳು ಓದುಗುನಲ್ಲಿ ಅಚ್ಚರಿಯ ಬದಲಾವಣೆ ತರದೇ ಇರಲು ಸಾಧ್ಯವೇ? ಹೀಗೆ ಕವಿ ಆತಂಕವನ್ನು ತೋಡಿಕೊಳ್ಳತ್ತಲೇ ಆಶಾವಾದವನ್ನು ಸಹ ಇಲ್ಲಿನ ಕವಿತೆಗಳು ಸಾರುತ್ತವೆ.
**************************************
ನಾಗರಾಜ ಹರಪನಹಳ್ಳಿ