ಕವಿತೆ
ಒಂದು ಲಸಿಕೆ ಹನಿ
ಕೊಟ್ರೇಶ್ ಅರಸೀಕೆರೆ
ತಮ್ಮದಲ್ಲದ ತಪ್ಪಿಗೆ ಜೀವ ತೆತ್ತವರಿಗಾಗಿ
ಬೂದಿ ಮುಚ್ಚಿದ ಕೆಂಡದ ಬದುಕು
ಒಡಲಲಿಟ್ಟುಕೊಂಡವರಿಗಾಗಿ
ಬರಿಗಾಲಲ್ಲಿ ನಡೆದ ಪುಟ್ಟ ಕಂದಮ್ಮಗಳಿಗೆ
ನನ್ನ ಆತ್ಮಗೌರವ ಬಿಟ್ಟು ಕೇಳಿಕೊಳ್ಳತ್ತೇನೆ
ಒಂದು ಲಸಿಕೆ ಹನಿಯನ್ನು ಚುಮುಕಿಸಿ
ನಿಮಗಾಗಿಯೇ ಓಟು ಒತ್ತುತ್ತೇನೆ!
ರಾತ್ರಿಯೆಲ್ಲ ಕೆಮ್ಮಿ ಉಸಿರಿಗಾಗಿ ಹೋರಾಡಿ
ಪ್ರಾಣ ಬಿಟ್ಟವರಿಗಾಗಿ
ಮಕ್ಕಳನ್ನು ಮನೆಯಲ್ಲಿರಿಸಿ ಸೇವೆಗೈದ ವೈದ್ಯ
ದಾದಿಯರಿಗಾಗಿ
ಸೇವೆ ಮಾಡುತ್ತಲೇ ಪ್ರಾಣ ಬಿಟ್ಟವರ ಪರವಾಗಿ
ಮಂಡಿಯೂರಿ ಕೇಳಿಕೊಳ್ಳುತ್ತೇನೆ ಒಂದು ಹನಿ
ಲಸಿಕೆ ಚುಮುಕಿಸಿ ನಿಮಗಾಗಿ ಓಟು ಒತ್ತುತ್ತೇನೆ!
ನಾನು ಯಾರಲ್ಲೂ ಹೇಳುವುದಿಲ್ಲ ನೀವು ಪರಮ ದ್ರೋಹಿಗಳೆಂದು
ನಾನು ಯಾರಲ್ಲೂ ಹೇಳುವುದಿಲ್ಲ ನೀವು
ಠಕ್ಕ ದೇಶಭಕ್ತರೆಂದು
ನಾನು ಯಾರಲ್ಲೂ ಹೇಳುವುದಿಲ್ಲ ನೀವು
ವಂಚಕರೆಂದು
ಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿ
ನನ್ನ ಓಟು ನಿಮಗಾಗಿ ಎಂದು!
ನಾನೂ ವಂಚಿಸಲು ಸಿದ್ಧನಿದ್ದೇನೆ ಜೀವಕ್ಕಾಗಿ
ನಾನೂ ಮೋಸ ಮಾಡಲು ಸಿದ್ಧನಿದ್ದೇನೆ ಮಡಿದ ಮುಗ್ಧರಿಗಾಗಿ
ನಾನೂ ಪರಮ ಪಾಪಿಯಾಗಲು ಸಿದ್ಧನಿದ್ದೇನೆ ನನ್ನ ಹತ್ತು ಬೆರಳುಗಳಲ್ಲೂ ಓಟು ಒತ್ತುತ್ತೇನೆ
ಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿ!
ನಾನು ಓಟು ಒತ್ತುತ್ತಲೇ ಇರುವೆ
ನಿಮ್ಮ ದಾಹ ತೀರಿಸಿಕೊಳ್ಳಿ
ಬೇಡಿಕೊಳ್ಳುತ್ತೇನೆ ಈ ಜನಾಂಗದ
ಉಳಿವಿಗಾಗಿ ಒಂದು ಲಸಿಕೆ ಹನಿಯ
ಚುಮುಕಿಸಿ ಬಿಡಿ!
*****************************