ಅನುವಾದಿತ ಕವಿತೆ
ಮರ ಕಡಿಯುವಾ ನೋಟ
ಇಂಗ್ಲೀಷ್ ಮೂಲ: Clifford Dymont
ಕನ್ನಡಕ್ಕೆ: ಗಣೇಶ್ ವಿ.
ನೂರಾರು ವರುಷಗಳ ಹಿರಿದಾದ ಮರವನ್ನು
ಕಡಿಯುತಿಹ ಕಟುಕನನು ನೋಡುತ್ತ ನಿಂತೆ
ಥಳಥಳನೆ ಹೊಳೆಯುವ ಆ ಕತ್ತಿಯ ಅಲಗು
ಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ
ಗಡಗಡ ನಡುಗುವ ಮರದ ಬುಡದಿಂದ
ಚಕ್ಕೆಗಳು ಚಿಮ್ಮಿದವು ಸಕಲ ದಿಕ್ಕುಗಳಲಿ
ಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿ
ಮರವು ರೋದಿಸುತಲಿತ್ತು ಸಾವಿನಾ ಸಮಯದಲಿ
ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತು
ಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆ
ನೋಡನೋಡುತಿರುವಂತೆ ಬೆಳೆದಿದ್ದ ಆ ಮರವು
ಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು.
ತೂಗಾಡುವಾ ಕತ್ತಿ ಜನರನ್ನು ಸೆಳೆಯುವುದು
ಮರ ಕಡಿಯುವಾ ನೋಟದ ಚೆಂದವ ನೋಡಲು
ನೂರಾರು ಜನರು ಬಂದು ಸೇರಿಕೊಳ್ಳುವರು
ತುಂಬಲಾರದ ನಷ್ಟ ಅರಿಯದಿಹ ಮೂರ್ಖರು
ನಮ್ಮ ಹಿರಿಯರು ಬೆಳಸಿ ಉಳಿಸಿದ್ದ ನಾಡಸಿರಿ
ಮುಂದಿನಾ ಪೀಳಿಗೆಗೆ ಹಸಿರಾಗಿ ಉಳಿಯಲಿ
ಇದನರಿಯದಿರೆ ನಾವು ಮೂರ್ಖರಾಗುವೆವು
ನಮ್ಮ ಸಮಾದಿಯನು ನಾವೇ ಕಟ್ಟಿಕೊಂಡಂತೆ
**********************
ಗಣೇಶ್.ವಿ
ಮನದಾಳದ ಮಾತುಗಳಿಂದ ತುಂಬಿ ಮನ ತಟ್ಟುವಂತೆಇದೆ