ಕವಿತೆ
ಬೆವರು ಹಾಗೂ ಹೆಣ್ಣು
ನೂತನ ದೋಶೆಟ್ಟಿ
ಹೆಂಟೆಯೊಡೆದು ಮಡಿ ಮಾಡಿ
ಬೆವರ ಧಾರೆ ಎರೆದೆರೆದು
ನೀರುಣಿಸಿದ ಪೈರೀಗ
ಕಾಳುಕಟ್ಟಿ ನಿಂತಿದೆ
ಎದೆಯೆತ್ತರದ ಮಗನಂತೆ
ಕೈಯ ಕೆಸರು
ಮನದ ಕೊಸರು
ಹಚ್ಚಿಟ್ಟ ಕಣ್ಣ ಹಣತೆ
ಹನಿಸಿದ್ದ ಎದೆಯಾಮೃತ
ಹಿಂಡಿ ತೆಗೆದ ಕಾಳ ಹಾಲು
ಸೇರಿ ಸವಿದ ಪಾಯಸಾನ್ನ
ಸಂಭ್ರಮದ ನಗೆಯ ಮೋಡಿ
ಆಳೆತ್ತರ ಬೆಳೆದ ಪೈರು
ಎದೆಯೆತ್ತರ ಬೆಳೆದ ಮಗ
ಹೆಣೆದ ಕನಸುಗಳ ಕೊಂಡಿ
ಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ.
********************************