ಗಝಲ್

ಗಝಲ್

ಮರುಳಸಿದ್ದಪ್ಪ ದೊಡ್ಡಮನಿ

ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿ
ಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ

ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲ
ಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ

ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆ
ನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ

ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿ
ಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ

ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವು
ಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ

ಮರುಳ ಸಾಕಿನ್ನೂ ಲೋಕದ ಚುಚ್ಚು ಮಾತಿನ ತಿವಿತ
ಗೋರಿಯ ಹಿಡಿ ಮಣ್ಣಿಗೆ ಜೀವ ಕಾದಿದೆ ಗೆಳತಿ

*******************************

Leave a Reply

Back To Top