ಕವಿತೆ
ಮೌನ ಬೆಳದಿಂಗಳಂತೆ ನಗುತ್ತದೆ…
ಬಿದಲೋಟಿ ರಂಗನಾಥ್
ಮೌನ ಬೆಳದಿಂಗಳಂತೆ ನಗುತ್ತದೆ
ಮಾತಾಡುವುದಿಲ್ಲ
ಎಷ್ಟೋ ದೂರ ನಡೆದು ಮತ್ತೆ ಬಂದು
ಕೂರುತ್ತದೆ ಮಡಿಲ ಮಗುವಂತೆ
ಚಿಂತೆಗಳಿಗೆ ಬಟ್ಟೆ ತೊಡಿಸಿ
ಶೃಂಗಾರ ಮುಡಿಸುತ್ತದೆ
ಎಷ್ಟೊಂದು ಕೈಗಳು ಪರಚಲು ಬರುತ್ತವೆ
ನಗುತ್ತವೆ ಅಳುತ್ತವೆ
ಸೀಳಾದಿಯ ಮೇಲೆ ನಡೆದು
ಮುಗಿಲ ಚುಕ್ಕಿಗಳ ಮುಟ್ಟುತ್ತವೆ
ಕಣ್ಣವೆಗಳ ಒಳಗಿನ ಧ್ಯಾನ
ಬಾಗಿಲ ತೆರೆದು
ನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿ
ಹೂ ಮುಡಿಸುತ್ತದೆ
ನಡುವೆ
ಅಳುವ ಧ್ವನಿಗೆ ಸೋತು
ಕಿವಿಗಳಿಗೆ ರೆಕ್ಕೆ ಬಂದು
ಬಹುದೂರ ನಡೆದು ಬೊಗಸೆ ತುಂಬಿ
ನಿಜತ್ವದ ಸಾರಕೆ ಬುದ್ಧಿಯ ಮೆತ್ತಿ
ನಡೆದು ಬರುವಾಗ ಮೋಡ ಗುಡುಗಿ
ಮಳೆಯ ಬಿಲ್ಲುಗಳು ಬೀರಿದವು
ಭಾವ ಗುಚ್ಚದ ಎದೆಗೆ.
ಮೌನದೊಳಗಿನ ಗೋಡೆಯ ಮೇಲೆ
ಬರೀ ಶಾಂತತೆಯ ಚಿತ್ರ ಮೂಡುವುದಿಲ್ಲ
ಬೆಳಕನು ನುಂಗುವ ಕತ್ತಲೆಗೆ ಕೈ ಇರುವಂತೆ
ಸಿಕ್ಕಲುಗಳೂ ಮಾತಾಡುತ್ತವೆ
ನೋಡಲು ಮಾತ್ರ ಮೌನ
ಅದು ಎಂದಿಗೂ
ಚಾಟಿಯಿಲ್ಲದ ಬುಗುರಿ.
***********************
ಚೆನ್ನಾಗಿದೆ ಕವನ.
ಧನ್ಯವಾದಗಳು ಮೆಡಮ್