ಕವಿತೆ
ನೆರಳು-ಬೆಳಕು
ಕಾತ್ಯಾಯಿನಿ ಕುಂಜಿಬೆಟ್ಟು
ಕಣ್ಣುಗಳಿಂದ ಉದುರುವ
ನಕ್ಷತ್ರಗಳನ್ನು
ಆಕಾಶಕ್ಕೆ ಸಿಕ್ಕಿಸುತ್ತಿರುವ
ಶಾಂತ ಇರುಳು…
ಮರ ಗಿಡ ಬಳ್ಳಿಗಳು
ತಮ್ಮ ನೆರಳನು ಬಿಟ್ಟು
ಲೋಕ ಸಂಚಾರಕೆ
ಹೊರಡುತ್ತವೆ
ಕಡಲು ಭೋಗ೯ರೆಯುತ
ಮರಳ ತೀರಕೆ
ನೊರೆನೊರೆ ಹಾಲುಣಿಸುತ್ತ
ನೆರಳಾಗಿಬಿಡುತ್ತದೆ
ಹಕ್ಕಿಗಳು ಬೆಳಕು ರೆಕ್ಕೆಗಳನ್ನು
ಬಿಚ್ಚಿ ಹಾರುತ್ತ ಹಾರುತ್ತ
ಕಪ್ಪು ನೆರಳುಗಳಾಗಿ
ಚುಕ್ಕಿಗಳಾಗಿ ಮರೆಯಾಗುತ್ತವೆ
ಈ ದೇಹದಿಂದ ಬೆಳಕೊಂದು
ಲೋಕ ಸಂಚಾರಕೆ ಹೊರಟಾಗ
ನೆರಳು ನಿದ್ರಿಸುತ್ತದೆ
ಮುಂಜಾನೆ ಮತ್ತೆ ಅದು ಮರಳಿ
ನನ್ನನ್ನು ಪ್ರವೇಶಿಸುವವರೆಗೂ…
ಒಂದು ದಿನ ಸಂಚಾರದಲ್ಲೇ ಮೈಮರೆತ ಅದು
ನನ್ನನ್ನೇ ಮರೆತುಬಿಡಬಹುದು
ನಾನು ಅದರ ನೆನಪಲ್ಲೇ ಇರುವಾಗ
ಇನ್ನಾರದ್ದೋ ನೆರಳು ಕೊಳ್ಳಿ ಹಿಡಿದು
ಬೆಳಕು ಹಚ್ಚುವೆನೆಂದು ಬೆಂಕಿ ಹಚ್ಚಬಹುದು
ಇರುಳಲ್ಲಿ ಸೂಯ೯ನ ನೆರಳು
ನಿದ್ರಿಸುತ್ತದೆ
ಭೂಮಿಯ ನೆರಳು ತನ್ನನ್ನು ಭೂಮಿ ಅಂದುಕೊಂಡು
ನಿದ್ದೆಯಲ್ಲೇ ನೆರಳನ್ನೇ ಸೂಯ೯ನೆಂದು ಭ್ರಮಿಸಿ
ಸುತ್ತುತ್ತಲೇ ಇರುತ್ತದೆ..
ಭೂಮಿಯ ಒಳಗೆ ನಾನೂ ಕೂಡ
ನನ್ನ ನೆರಳನ್ನು ನಾನೇ ಎಂದುಕೊಂಡು
ಹಾಯಾಗಿ ಹಾಡನ್ನು ಹಾಡುತ್ತಿರುತ್ತೇನೆ
ದೂರದಲ್ಲಿದ್ದರೂ
ನೀನು ಕೇಳುತ್ತಿರುತ್ತಿ ಎಂಬ
ಭ್ರಮೆಯಲ್ಲಿ
ನಿನ್ನ ನೆರಳು ನಿನ್ನನ್ನೇ ಹುಡುಕುತ್ತಿರುತ್ತದೆ
ನನ್ನದೇ ಬೆಳಕಲ್ಲಿ… ನಕ್ಷತ್ರಗಳಲ್ಲಿ.
********************************
ಇಷ್ಟವಾಯಿತು.