ಅಂಕಣ ಬರಹ
ಒಂದು ಹೃದ್ಯ ಕಾವ್ಯ
ರಂಗಮ್ಮಹೊದೇಕಲ್
ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.
ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.
ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ.
ಕವಿತೆಗಳನ್ನು ಯಾಕೆ ಬರೆಯುತ್ತೀರಿ ?
ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ!
ಕವಿತೆ ಹುಟ್ಟುವ ಕ್ಷಣ ಯಾವುದು ?
ಕರುಳು ಕಲಕುವ ಯಾವುದೇ ಸಂಕಟವೂ ನನ್ನೊಳಗೊಂದು ಸಾಲಾಗಿ ಹೊಳೆದು ಹೋಗುತ್ತದೆ!
ದುಃಖಕ್ಕೆ
ದಕ್ಕಿದಷ್ಟು ಕವಿತೆಗಳು
ಖುಷಿಗೆ ಅರಳುವುದೇ ಇಲ್ಲ!
ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?
ಮನುಷ್ಯ ಸಂಬಂಧಗಳು!ಸಂಬಂಧಗಳ ವ್ಯತ್ಯಯಗಳು.ಶಿಥಿಲಗೊಳ್ಳುತ್ತಿರುವ ಜೀವಪ್ರೀತಿ!ಸಹಜತೆಯಾಚೆಗೆ ನಾವೆಲ್ಲ ಬೆರ್ಚಪ್ಪಗಳಾಗುತ್ತಿರುವ ಆತಂಕ!
ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?
ಬಾಲ್ಯವೆಲ್ಲ ಅತ್ಯಂತ
ದಾರಿದ್ರ್ಯದಲ್ಲೇ ಕಳೆದುಹೋಯ್ತು. ಹರೆಯ ಹರೆಯಕ್ಕೂ ಮೀರಿದ ಜವಾಬ್ದಾರಿಗಳನ್ನು ಹೆಗಲಿಗೇರಿಸಿತು.ಬಹುಶಃ ಇವೆಲ್ಲ ಎಂದಾದರೂ ಗದ್ಯ,ಪದ್ಯವಾಗುವ ನಿರೀಕ್ಷೆ ನನ್ನದೂ.
ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ರಾಜಕಾರಣದ ಬಗ್ಗೆ ತೀರಾ ಆಸಕ್ತಿಗಳಿಲ್ಲದೇ ಹೋದರೂ ಬಿದ್ದವರ,ಸೋತವರ,ಕನಸ ಕೊಂದುಕೊಂಡವರ,ಇಲ್ಲದವರ ಬದುಕಿಗೆ ಹೊಸದೊಂದು ಬೆಳಕ ಕಾಣಿಸುವ ರಾಜಕಾರಣವೂ ಒಂದು ಕನಸೇನೋ ಅನ್ಸತ್ತೆ!
ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ಪ್ರೀತಿಯನ್ನ ಧರ್ಮ ಅಂತ ಭಾವಿಸುತ್ತೇನೆ! ಜೀವಪರ ನಿಲುವಿನ ಮನುಷ್ಯರೆಲ್ಲ ದೇವರ ಹಾಗೇ ಅಂದುಪ್ರತತೇನೆ !
ಈಚಿನ ಈ ಪುಸ್ತಕದಲ್ಲಿ
ತರತಮವಿರದೆ
ಪರಿಮಳದ ಬೆಡಗ
ಹರಡುವ
ಹೂಧರ್ಮ ನನ್ನ ದಾರಿ !
ಅಂತ ಬರ್ಕೊಂಡಿದ್ದೇನೆ !
ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?
ನಿಜವಾದ ಪ್ರತಿಭೆಗಳು ನೇಪಥ್ಯದಲ್ಲಿ ಉಳಿಯುತ್ತವನ್ನೋ ವಿಷಾದ ಇದೆ.ನೆಲದ ಸೊಗಡಿನ,ಅಪಾರ ಕನಸಿನ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಲಭ್ಯ ಆಗ್ಬೇಕು.
ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
ಸಾಹಿತ್ಯದಲ್ಲಿ ರಾಜಕಾರಣ ಏನ್ಮಾಡುತ್ತೆ ಅಂತ ಅಂದ್ಕೋತಿದ್ದೆ!ಊಹೂಂ ,ರಾಜಕಾರಣ ಈ ಅಕ್ಷರ ಲೋಕವನ್ನು ಬಿಡದ್ದಕ್ಕೆ ಖೇದವಿದೆ! ಯಾವಾವ ಕಾರಣಗಳಿಗೋ ಏನೇನೆಲ್ಲ ಘಟಿಸಿಬಿಡುವುದನ್ನು ಕಂಡು ಅಕ್ಷರ ಅರಿವಾ? ಅಹಂಕಾರವಾ? ಅನ್ನೋ ಪ್ರಶ್ನೆಗಳೂ ಕಾಡುತ್ವೆ.
ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?
ಆತಂಕವಿದೆ! ಗಡಿಗಳೆಲ್ಲ ಗುಡಿಗಳಾಗಿ,ಎಲ್ಲ ಹೊಟ್ಟೆಗಳಿಗೂ ಅನ್ನ ಸಿಕ್ಕು, ಈ ನೆಲದ ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕುವ ದಿನಗಳು ಬಂದಾವ ಅಂತ ……
ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಕನಸ್ಸಂತ ಏನಿಲ್ಲ ಸರ್,ನಾನು ಬರೆದದ್ದು ಮತ್ತಾರದೋ ಭಾವಕೋಶ ಮೀಟಿ ,ಇನ್ನಾವುದೋ ಜೀವದ ನೋವ ನೀವಿ ಹೋದರೆ ಸಾಕು!
‘ಕವಿತೆ ಚರಿತ್ರೆಯನ್ನ ಬದಲಾಯಿಸ್ತದೋ ಇಲ್ವೋ ಗೊತ್ತಿಲ್ಲ,ಆದರೆ ಕವಿಯನ್ನಂತೂ ಬದಲಾಯಿಸ್ತದನ್ನೋ ಮಾತಿದೆಯಲ್ಲ’ ನನ್ನ ಕವಿತೆ ನನ್ನನ್ನು ಮತ್ತೆ ಮತ್ತೆ ಮನುಷ್ಯಳಾಗಿಸಿದರೆ ಸಾಕು.
ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?
ಆಂಗ್ಲಭಾಷೆಯ ಓದು ಇಲ್ಲ.ಕನ್ನಡ ನನ್ನ ಅಮ್ಮನೂ,ಅನ್ನವೂ ಹೌದಾಗಿರುವುದರಿಂದ ಕನ್ನಡದ ಒಂದಿಷ್ಟು ಪುಸ್ತಕ ಗಳನ್ನು ಓದಿದ್ದೇನೆ.ಆರ್ದ್ರವಾಗಿ,ಚಿಂತನಾರ್ಹವಾಗಿ ಬರೆಯಬಲ್ಲ ಯಾವುದೇ ಕವಿಯ ಎರಡು ಸಾಲೂ ನನ್ನನ್ನು ತಟ್ಟುವ ಕಾರಣ ಇವರೇ ಅಂತ ಹೇಳಲಾರೆ.
ಪರಂಪರೆಯ ಜೊತೆಗೆ ಇವತ್ತಿನ ಎಷ್ಟೋ ಕವಿಗಳೂ ಕೂಡ ನನಗಿಷ್ಟ.
ಈಚೆಗೆ ಓದಿದ ಕೃತಿಗಳಾವವು?
ಶಾಲಾ ಶಿಕ್ಷಕಿಯೂ ಆಗಿರುವ ಕಾರಣ ನಿರಾಳ ಓದಿಗೆ ಬಿಡುವಾಗದು.ಈ ದುರಿತ ಕಾಲದಲ್ಲಿ ಆತ್ಮೀಯರು ಕಳಿಸಿದ ಒಂದಷ್ಟು ಗದ್ಯ ಪದ್ಯ…ಆಗಾಗ ಬ್ರೆಕ್ಟ್,ಗಿಬ್ರಾನ್.ಹೀಗೆ
ನಿಮಗೆ ಇಷ್ಟವಾದ ಕೆಲಸ ಯಾವುದು?
ಟೀಚರ್ ಕೆಲ್ಸ!ಅದರ ಜೊತೆಗೆ ಕನ್ನಡವನ್ನು ಮುದ್ದಾಗಿ ಬರೆಯುವ ಪ್ರಯತ್ನ.
ಹದಿನಾರು ವರ್ಷಗಳಿಂದ ಖ್ಯಾತ ಲೇಖಕಿ ಅಮ್ಮ ಡಾ.ಬಿ.ಸಿ ಶೈಲಾನಾಗರಾಜ್ ರವರ ಜೊತೆಗೆ , ಶೈನಾ ಅನ್ನುವ ಕೈ ಬರಹದ ಪತ್ರಿಕೆಯ ಕೈ ಬರಹ ನನ್ನ ಕೈಗಳದೇ!ಈ ಪತ್ರಿಕೆಯೇ ನಾಡಿಗೆ ನನ್ನನ್ನು ಪರಿಚಯಿಸಿದ್ದು.ಕವಿತೆ ಬರಿತೀನಿ ಅನ್ನೋದ್ಕಿಂತ ಕೈ ಬರಹ ಅನ್ನೊ ಮೂಲಕವೇ ಪ್ರೀತಿ ಗಳಿಸಿದ ಅದೃಷ್ಟ!
ನಿಮಗೆ ಇಷ್ಟವಾದ ಸ್ಥಳ ಯಾವುದು ?
ಸ್ಥಳ ನನ್ನೂರೇ ಸರ್! ಈ ಬೆಟ್ಟ,ಬಯಲು,ಏನೂ ಇರದ ದಿನಗಳಲ್ಲಿ ನಮ್ಮನ್ನು ಪೊರೆದ ಊರಿನ ‘ಮನುಷ್ಯರು’ !!
ಆದರೂ ಮುರ್ಡೇಶ್ವರ ಹೆಚ್ಚು ನೆನಪಾಗುವ ಜಾಗ!
ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು?
ಅಬ್ಬರ ಇಲ್ಲದ,ಅತಿ ಅನ್ನಿಸದ,ನೋಡುತ್ತಲೇ ಭಾವುಕಳಾಗಿಸಿಬಿಡಬಹುದಾದ ,ಒಳಗಿಳಿಯುವ ಒಂದೇ ಸಾಲನ್ನಾದರೂ ಹಾಡಾಗಿಸಿಕೊಂಡ ಯಾವುದೇ ಸಿನೆಮಾ ಆಗ್ಬಹುದು ಸರ್.
ನೀವು ಮರೆಯಲಾರದ ಘಟನೆ ಯಾವುದು?
ಹತ್ತಿರದವರ ಸಾವು ನೋವುಗಳು.ವಿವರಿಸೋದು ಕಷ್ಟ ಸರ್.
ಇನ್ನು ಕೆಲ ಹೇಳಲೇ ಬೇಕಾದ ಸಂಗತಿಗಳಿದ್ದರೂ ಹೇಳಿ….
ಅಣ್ಣನಂತಹ,ಗೆಳೆಯರಂತಹ ವೀರಲಿಂಗನ ಗೌಡರ ಅಕ್ಕರೆ ದೊಡ್ಡದು.ನಿಮ್ಮ ಜತೆಗಿನ ಇಷ್ಟು ಮಾತಿಗೆ ಅವರೇ ಕಾರಣರು.ಅವರ ಮಮಕಾರಕ್ಕೆ ನಿಮ್ಮ ಸಹೃದಯತೆಗೆ ವಂದನೆಗಳು ಸರ್.
ಉಳಿದಂತೆ ‘ ನೋವೂ ಒಂದು ಹೃದ್ಯ ಕಾವ್ಯ’ ನನ್ನ ಇತ್ತೀಚಿನ ಪುಸ್ತಕ.ನಾಲ್ಕು ಸಾಲುಗಳ ಕವಿತೆಗಳು..ಕವಿತೆಗಳಂತಹ ಚಿತ್ರಗಳೂ ….ಪುಸ್ತಕ ದ ಪ್ರತಿ ಅಕ್ಷರವೂ ಕೈ ಬರಹದ್ದೇ ಅನ್ನುವುದು ವಿಶೇಷ.
-************************************
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ಕ ರಂಗಮ್ಮ ಹೊದೇಕಲ್ ಳ ಕವನಗಳು ಮನಸ್ಸನ್ನ ನೀವಿ ಹೋಗುತ್ತವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ಇನ್ನು ಅವಳ ಚಿಂತನಾ ಲಹರಿಯೋ ವಿಭಿನ್ನ ಅಂತೊಪ್ಪಿಕೊಳ್ಳಲು ಈ ಸಂದರ್ಶನಕ್ಕಿಂತ ಉತ್ತಮ ಸಾಲುಗಳಿಲ್ಲ. ಅಭಿನಂದನೆಗಳು ಅಕ್ಕ, ಜೀವ ಪ್ರೀತಿಯ ಹಾಡುತ್ತಾ ನೋವನ್ನೂ ಒಂದು ಹೃದ್ಯ ಕಾವ್ಯವನ್ನಾಗಿಸಿದ್ದಕ್ಕೆ ಧನ್ಯವಾದಗಳು. ಇನ್ನಷ್ಟು ಕವಿತೆಗಳು ಮೂಡಿಬರಲಿ ಎಂದು ಆಶಿಸುತ್ತೇನೆ.
ತುಂಬಾ ತುಂಬಾ ಪ್ರೀತಿ
ರಂಗು ನನ್ನ ಜೀವದ ಗೆಳತಿ..ಅವಳು ಶೈನಾದ ಕೈಬರಹದ ರೂವಾರಿ.ಆತ್ಮೀಯ ಸ್ನೇಹಿತ ಬಳಗದೊಳು ಮೂಂಚೂಣಿಯಲ್ಲಿ ಒಳ್ಳೆಯ ಸಂದರ್ಶನ… ಬ್ರದರ್ …ಖುಷಿಯಾಯಿತು ಶುಭವಾಗಲಿ
ಧನ್ಯವಾದ ಶಿವ….ಪ್ರೀತಿ ಇರಲಿ
ALL THE BEST TO HSR
Best of luck Rangu .It is a great movement . I wish you each and every movement will became successfull journey and always keep rocking.
ಥ್ಯಾಂಕ್ಯು ವರ
ಅಕ್ಕ ರಂಗಮ್ಮ ಹೊದೇಕಲ್ಲರ ಪ್ರತಿಯೊಂದು ಸಾಲು ಅಗಣಿತ ಮನಸ್ಸನ್ನು ನೀವಿ ಹೋಗುವ ಪರಿ ಅಪಾರ…….
ಧನ್ಯವಾದಗಳು
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..
ಸಂಪಾದಕರಿಗೂ..ಸಂದರ್ಶಕರಿಗೂ..ಓದಿ ಪ್ರತಿಕ್ರಯಿಸಿದ ಎಲ್ಲ ಮನಸುಗಳಿಗೂ ವಂದನೆಗಳು
ಅಂತರಾಳದ ಮಾತುಗಳು ಹೃದಯ ತಟ್ಟಿದವು ರಂಗೂ.