ಮನಿಷಾಗೊಂದು ಗಝಲ್
ಅರುಣಾ ನರೇಂದ್ರ
ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆ
ನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ
ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿ
ಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ
ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯ
ಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ
ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆ
ಅಂಗಾಂಗಗಳ ಹರಿದು ತಿನ್ನುವ ಹೃದಯ ಹೀನರು ಪ್ರಶ್ನಿಸಿದರೆ ಪ್ರಾಣ ತಗೆಯುತ್ತಾರೆ
ಭದ್ರತೆ ಬೇಡಿದರೆ ಹೇಗೆ ಸಿಕ್ಕೀತು ಅರುಣಾಗೆ ಕಡತದಲ್ಲೇ ಕಾನೂನಿಗೆ ಕೈ ಕಾಲು ಕಟ್ಟಿದ್ದಾರೆ
ಬೇಲಿ ಇಲ್ಲದ ಹೊಲವ ಗೂಳಿಯಂತೆ ತಿಂದು ಹೆಣ ಮಾಡಿ ಸುಟ್ಟು ಕತೆ ಮುಗಿಸುತ್ತಾರೆ
******************************