ಗಜಲ್
(ಗಾಂಧಿ:ಇನ್ನೊಂದು ನೋಟ)
ಡಾ. ಗೋವಿಂದ ಹೆಗಡೆ
ಚರಕ ನೂಲು ಕೋಲುಗಳಲ್ಲೇ ಅವನ ಕಂಡಿದ್ದೇವೆ
ಕನ್ನಡಕವನ್ನು ಮರೆಯದೇ ಜೇಬಿಗೆ ಇಳಿಸಿದ್ದೇವೆ
ಸ್ವರಾಜ್ಯ ಸತ್ಯಾಗ್ರಹ ಸ್ವದೇಶಿ- ದುಡಿಯುತ್ತ ಹೋದ ಅವನು
ನಾವು ಪುರಸೊತ್ತಾಗಿ ಕೂತು ಅವನ ಟೀಕಿಸುತ್ತೇವೆ
ಒಂದೇ ಮಗ್ಗುಲ ಚಿತ್ರಗಳೆಂದರೆ ನಮಗೆ ಬಹಳ ಪ್ರೀತಿ
ಒಂದು ಕಣ್ಣು ಮುಚ್ಚಿಯೇ ಎಲ್ಲವನ್ನೂ ಅಳೆಯುತ್ತೇವೆ
ಕಪ್ಪು-ಬಿಳುಪುಗಳ ಆಚೆ ಲೋಕವೆಷ್ಟು ಸಂಕೀರ್ಣವಿದೆ
ಕರಿಯ ಕನ್ನಡಕದಲ್ಲಿ ಕಂಡದ್ದು ಮಾತ್ರ ನಿಜವೆನ್ನುತ್ತೇವೆ
ತಪ್ಪು ತೊಡರು ನೆರಳುಗಳನ್ನು ನೋಡುತ್ತ ನೀಡಿ ತೀರ್ಪು
ಬೆಳಕಿನೊಡನೆಯ ಮುಖಾಮುಖಿಗಳ ಬೇಕೆಂದೇ ಮರೆಯುತ್ತೇವೆ
ಸಂಕೇತ-ಸಂಗತಿ, ಭಜನೆ-ಭಂಜನೆಗಳಲ್ಲಿ ನಮ್ಮ ನಡೆ ‘ಜಂಗಮ’
ನಮ್ಮ ನಮ್ಮ ಅಳತೆಗೋಲುಗಳಲ್ಲೇ ಅವನ ಮಥಿಸುತ್ತೇವೆ
*********************************
ವಾಸ್ತವತೆಗೆ ಹಿಡಿದ ಕನ್ನಡಿ
ಧನ್ಯವಾದಗಳು
ಧನ್ಯವಾದ
ಅರ್ಥಪೂರ್ಣ ವಾಗಿದೆ ಸರ್.
ತುಂಬಾ ಮಾರ್ಮಿಕವಾಗಿದೆ