ಕವಿತೆ
ಪ್ರೀತಿಯ ಬಿತ್ತಿ ಬೆಳೆಯಲು

ನಾಗರಾಜ ಹರಪನಹಳ್ಳಿ

ನಾನು ಹೆಣ್ಣಾಗುವೆ
ಗಾಂಧಿಯಂತಹ ಮಗನ ಹೆರಲು
ಹೌದು,
ಗಾಂಧಿಯಂಥ ಮಗ ಬೇಕು
ಈ ನೆಲಕ ದಿಕ್ಕು ತೋರಿಸಲು
ಸಹನೆ ,ಸತ್ಯ ಅಹಿಂಸೆ ಹಂಚುವ
ಗೋಡ್ಸೆ ಮನದ ಬಂದೂಕು
ಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿ
ಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲು
ಗಾಂಧಿಯಂಥ ಮಗನ ಹೆರಬೇಕು
ಗೋಡ್ಸೆ ಮನದ ಗಡಿಗಳ ಅಳಿಸಿ
ಅವನ ಕಣ್ಣಿಗೆ ಕರುಣೆ ತುಂಬಿ
ಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿ
ಬೆಳೆಯಲು ಗಾಂಧಿಯಂತಹ ಮಗ ಬೇಕು
ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ ಜನನಾಯಕರ “ಕ್ಷಮಿಸು ಬಿಡು ಮಗನೆ” ಎನ್ನಲು ಗಾಂಧಿಯಂತಹ ಮಗ ಬೇಕು
ಈ ನೆಲದ ಬೇರುಗಳಿಗೆ ರಕ್ತದ ಕಲೆಗಳಿವೆ ; ಬೆರಳುಗಳಿಗೆ ದ್ವೇಷದ ಹಸಿ ಮಾಂಸವಿದೆ
ಹಿಂಸೆಯ ಭೂಮಿಯಲ್ಲಿ
ಪ್ರೀತಿಯ ಬಿತ್ತಿ ಬೆಳೆಯಲು
ಗಾಂಧಿಯಂತಹ ಮಗನ
ಹೆರಬೇಕು ನಾನು
ಇಲ್ಲಿ ಪ್ರಾರ್ಥನಾ ಮಂದಿರಗಳು ಉರುಳಿವೆ
ಗಲ್ಲಿ ಗಲ್ಲಿಗಳಲ್ಲಿ ಅನುಮಾನದ ಹುತ್ತಗಳೆದ್ದಿವೆ : ಕಾಣದ ಸರ್ಪಗಳು ಎಲ್ಲೋ ಅಡಗಿವೆ
ಹುತ್ತವ ಬಡಿಯದೆ ,ಸರ್ಪಗಳ ಹಿಡಿದು ವಿಷ ತೆಗೆಯಲು
ಗಾಂಧಿಯಂಥ ಮಗ ಬೇಕಿದೆ
ಗುಂಡಿಕ್ಕುವವನನೂ ಕ್ಷಮಿಸುವ ಗಾಂಧಿಯಂತಹ ಮಗನ
ಮತ್ತೆ ಹೆರಬೇಕಿದೆ
ಈ ನೆಲದ ತಾಯಿಯಾಗಿ ತಾಯ್ತನವ ಹಂಚಬೇಕಿದೆ
******************************
ಗಾಂಧಿಯಂಥ ಮಗನ ಹೆರಲು ತಾಯಾಗಬೇಕು…ಎನ್ನುವ ನಿಮ್ಮ ಮಮತೆಗೆ ,ಏನನ್ನುವುದು? ಈ ಸಾಲುಗಳು ಮನಸ್ಸನ್ನು ತಟ್ಟಿದವು.
ಹೆಣ್ಣಿನ ಸಂಕಟ ಅರಿಯಲು ಹೆಣ್ಣಾಗಬೇಕು..