ಕವಿತೆ
ಕಲಿಕೆ ಕಸಿದ ಕರೋನ
ಜಿ.ಎಸ್.ಹೆಗಡೆ
ಶಾಲೆಯ ಅಂಗಳದಿ ಬೆಳೆದಿವೆ ಈಗ
ಮುಳ್ಳಿನ ಜೊತೆಗೆ ಕಳ್ಳಿಗಳು
ಕಲಿಕಾಕೋಣೆಯ ಚಪ್ಪರ ತುಂಬಿದೆ
ಜೇಡರ ಬಲೆಯೊಳು ಕೀಟಗಳು
ಹಾಜರಿ ವಹಿಗೆ ಮೆತ್ತುತ್ತಿದೆ ಈಗ
ಮಣಗಟ್ಟಲೆ ಧೂಳು
ಅಡುಗೆ ಮನೆಯಲಿ ಓಡಾಡುತಿವೆ
ಇಲಿ ಜಿರಲೆಗಳು ಜೋರು
ಪರಿಮಳವಾದ ಪೆನ್ಸಿಲ್ ರಬ್ಬರ್
ಬ್ಯಾಗೊಳು ಹಾಗೆ ಇವೆ
ಹೊಸ ಹೊದಿಕೆಯನು ಧರಿಸಿಹ ಪುಸ್ತಕ
ತೆರೆಯಲು ಕಾಯುತಿವೆ
ಅಪ್ಪನು ಕೊಡಿಸಿಹ ಬಣ್ಣದ ಛತ್ರಿ
ಮಳೆಯೊಳು ಆಡು ಎನ್ನುತಿದೆ
ಮಾವನು ಕೊಡಿಸಿಹ ಹೊಸ ಬಟ್ಟೆಯು
ಹುಟ್ಟುಹಬ್ಬವನು ನೆನಪಿಸಿವೆ
ಶಾಲೆಗೆ ಹೋದರೆ ಗುರುಗಳು ಎಂದರು
‘ಬರಬೇಡವೋ ನೀನು ಶಾಲೆ ಕಡೆ,
ನೀನಿದ್ದಲ್ಲಿಗೆ ನಾನೇ ಬರುವೆನು
ನೀಡಿರಿ ಗಮನವ ವಿದ್ಯೆಯೆಡೆ’
ಊರಿನ ಗುಡಿಗೋಪುರ ಅಂಗಣದಲ್ಲಿ
ಮಕ್ಕಳ ಮೊಗಕೆ ಮುಸುಕು
ಕಲಿಯುವ ಆಸೆಗೆ ಮುಸುಕನು ಹಾಕಿತು
ಕರೋನದಿ ಮುದುಡಿತು ಕನಸು
ಮಕ್ಕಳೇ ಬನ್ನಿರಿ ತನ್ನಿರಿ ನೀವು
ಹಳೆ ಪುಸ್ತಕಗಳ ಗಂಟು
ನೆನಪಿಸಿ ಕಲಿಸುವೆ ಮರೆತಿರುವುದನು
ಹೊಸ ಪಠ್ಯಕೆ ನೀಡುವೆ ನಂಟು
ಬೇಡ ಗುರುಗಳೆ ಹಳೆಯ ಪಾಠವು
ಬೇಸರ ತರಿಸುತಿದೆ
ಹೊಸ ಪಾಠಗಳ ದಿನವೂ ಕಲಿಸಿರೆ
ಸಂತಸ ಉಕ್ಕುತಿದೆ
*************
ಕಲಿಕೆ ಕಸಿದ ಕೋರನಾ ಕವನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಇಂತಹ ಮನಮುಟ್ಟುವ, ಮನೆ ತಟ್ಟುವ ಕನ್ನಡಕ್ಕಾಗಿ ಕಾಯುವೆ ಗುರುಗಳೇ.