ಕವಿತೆ
ಬಾಪೂ ಜೊತೆ ಇಂದು
ಇಳಿ ಮದ್ಯಾಹ್ನ
ಪ್ರಜ್ಞಾ ಮತ್ತಿಹಳ್ಳಿ
ಬಾ ಬಾಪೂ ಇಲ್ಲೇ ಕೂಡು
ಇಕ್ಕಟ್ಟಾದರೂ ಅಂಗಳಕ್ಕಿಳಿಯಲು
ವೈರಾಣು ಭಯ
ಗುಂಡು ಕನ್ನಡಕವನು
ಅರ್ಧ ಮುಚ್ಚಿದರೂ
ಮಾಸ್ಕ್ ತೆಗೆಯಬೇಡ
ಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂ
ಹಾರ ಮಂಗಳಾರತಿ
ಸಾಮೂಹಿಕ ಭಜನೆ ರಘುಪತಿ
ಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆ
ಆದರೀ ಸಲ
ಏನೋ ಕಲಮಲ
ಕಳೆದ ವಾರ ನಿನ್ನ ಆತ್ಮಕತೆ ಓದಿ
ಎಲ್ಲರ ನೋವನು ಬಲ್ಲವನೊಬ್ಬನ
ಹುಡುಕುತ್ತ ಹೊರಟಿದ್ದೆ
ನಡುರಾತ್ರಿ ಕಂದೀಲು ಹಚ್ಚಿದ
ದೋಣಿಗಳು ತುಯ್ಯುವ ಅಲೆಯಲ್ಲಿ
ನಿಧಾನಕ್ಕೆ ಹೊರಟಿದ್ದವು.
ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತ
ಹುಟ್ಟು ಹಾಕುವ ಬೆಸ್ತರು ಎಂದೂ
ಮಲಗದ ಮೀನುಗಳ ಹಂಬಲಿಸುತಿದ್ದರು
ಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವ
ಹೆಂಗಸರು ಕೂಳಿಲ್ಲದೇ ಕಂಡವರ
ತೋಟಕ್ಕೆ ಮಣ್ಣು ಹೊರುತ್ತಾ
ಕೆಕ್ಕರಿಸುವ ನೋಟಕ್ಕೆ ಕಾನದಿರುವಂತೆ
ಹರಿದ ಸೆರಗೆಳೆಯಲು ಪರದಾಡುತ್ತಿದ್ದಾರೆ
ಆಡಿನ ಹಾಲು ಕರೆದಿಟ್ಟ ಪಾತ್ರೆಯಲ್ಲಿ
ಸಣ್ಣಗೆ ನೊರೆಯ ಗುಳ್ಳೆಗಳು
ಅಡಗುತ್ತ ಒಳ ಪದರಕ್ಕೆ ಹೈನು
ಗಸಿ ಮೂಡಿಸುತ್ತ ಕುಡಿದ ತುಟಿಯ
ಮೇಲೊಂದು ಹಾಲಿನ ಮೀಸೆ
ನಿನಗೂ ಮೂಡಿರಬಹುದಲ್ಲವೆ ಬಾಪೂ
ಜೊಹಾನ್ಸಬರ್ಗಿನ ಪ್ಲೇಗು ರೋಗಿಗೆ
ಗಂಜಿ ಕಾಯಿಸುವಾಗ ಫೀನಿಕ್ಸ
ಆಶ್ರಮದ ಪುಂಡು ಹುಡುಗರಿಗೆ ಕವಾಯತು
ಮಾಡಿಸುವಾಗ ಬಿಚ್ಚಿಟ್ಟ ಕೋಟಿನ
ಕಿಸೆಯಲ್ಲಿ ತುಂಡು ಹಾಳೆಯ ಕವಿತೆ
ಲೋಟ ನೀರು ಕೊಟ್ಟವನಿಗೆ ಊಟವಿಕ್ಕು
ಕಾಸು ಕೊಟ್ಟವಗೆ ಚಿನ್ನದ ಮೊಹರು
ಹತ್ತು ಪಟ್ಟು ಪ್ರತ್ಯುಪಕಾರಕ್ಕೆ
ತೋಳು ಮಡಚಿ ತಯಾರಾದೆ
ಓ ಅಲ್ಲಿ ರಿಕ್ಷಾದಲ್ಲಿ ಅಡ್ಮಿಶನ್ ಮಾಡಿಸಿ
ಬರುತ್ತಿದ್ದ ಹುಡುಗಿಯನೆಳೆದು ಸಿರಿಂಜು
ಚುಚ್ಚಿ ಈಗ ಮನೆ ಮುಂದೆ ತಂದೊಗೆದ
ರಕ್ತಸಿಕ್ತೆ ಪ್ರಾಣ ಬಿಡುವಾಗ ಕಿವಿಯಲ್ಲಿ
ಹಾಡಬಹುದೇ ಪೀಡಪರಾಯೆ ಜಾನೆ
ಕ್ಷಮೆಯಿರಲಿ ಬಾಪೂ ಈ ಸಲ
ಭಜನೆಗೆ ಧ್ವನಿಗೂಡಿಸುವಾಗ
ಗಂಟಲು ಗೊರಗೊರ ಕಣ್ಣು
ಒದ್ದೆಯಾದರೂ ನಾಲಿಗೆ ನುಡಿಯುತ್ತಿಲ್ಲ
ಹುಲ್ಲು ಕೊಯ್ಯುವ ಹುಡುಗಿಯ
ಕತ್ತರಿಸಿ ಬಿದ್ದ ನಾಲಿಗೆಯದೇ ನೆನಪು
ನೋಡು ಬಾಪೂ ಅಕಾಲದಲ್ಲಿ
ಮೋಡ ಕತ್ತರಿಸಿ ಮಳೆ ಹೊಯ್ಯುತಿದೆ
ಬಾರದುದು ಬಂದಾಗ ಬಪ್ಪುದು ತಪ್ಪದು
ಎನ್ನುತ್ತಾರೆ ಹಿರಿಯರು
ಮಳೆ ನಿಂತ ಕೆಸರು ದಾರಿಯಲಿ
ಹಗೂರಕೆ ಕೋಲೂರಿ ಹೊರಡು
ಮುಂದಿನ ಜಯಂತಿಗಾದರೂ
ಹಾಡಲಾಗುತ್ತದೆಯೆ ನೋಡೋಣ
***************************************