ಕವಿತೆ
ನನ್ನಮ್ಮ
ಶೃತಿ ಎಸ್.ಗೌಡ
ನನ್ನಮ್ಮ ಸೀತೆಯಲ್ಲ ಸಾವಿತ್ರಿಯಲ್ಲ
ಕೈ ಹಿಡಿದ ಪತಿಯೊಡನೆ
ವನವಾಸಕ್ಕೂ ಹೋಗಲಿಲ್ಲ
ಅವನಿಗಾಗಿ ಯಮನನ್ನು ಅಡ್ಡಗಟ್ಟಲಿಲ್ಲ ಇದ್ದಲ್ಲಿಯೇ ವನವಾಸ ಮಾಡಿದವಳು ಕುಡಿದ ಮತ್ತಿನಲ್ಲಿ ನಡೆಯಲಾರದೆ ಎಡವಿ ಬಿದ್ದ ಅಪ್ಪನಿಗೆ ತನ್ನ ಹೆಗಲನ್ನು ಆಸರೆಯಾಗಿ ನೀಡಿದವಳು
ನನ್ನಮ್ಮ ಆಸರೆ ಬಯಸಲಿಲ್ಲ
ಸಂಸಾರದ ನೊಗ ಹೊತ್ತು
ನಮಗಾಸರೆಯಾದವಳು
ತಾನು ನಿಂತು ನಮ್ಮ ನಡೆಸಿ
ತಾನು ಹಸಿದು ನಮಗುಣಿಸಿ
ತನ್ನ ಕಣ್ಣುಗಳಲ್ಲಿ
ಅವಳ ಕನಸುಗಳ ಕಂಡವಳು
ಸಂಸಾರದ ಹಾದಿಯಲ್ಲಿ ನಿಲ್ಲದೆ ನಡೆದವಳು
ನನ್ನಮ್ಮ ಹೆಚ್ಚು ಕಲಿಯಲಿಲ್ಲ
ಗುಡಿಗಳ ಗುಂಡಾರವ ಸುತ್ತಲಿಲ್ಲ
ಸ್ವರ್ಗ ನರಕಗಳ ಕಲ್ಪನೆಯೂ ಅವಳಿಗಿಲ್ಲ ಇರುವಷ್ಟು ದಿನ
ಬಾಳ ಕುಲುಮೆಯಲಿ ಬೆಂದವಳು ಕುಡಿತಕ್ಕೆ ಶರಣಾಗಿ ಬದುಕನ್ನೇ ಬಲಿ ಕೊಟ್ಟ ಅಪ್ಪನ ಕಂಡು ಸತ್ತು ಬದುಕಿದವಳು
ದೇವರು ಕೊಟ್ಟ ಆಯಸ್ಸು
ಮುಗಿಯುವ ಮುನ್ನವೇ ಬದುಕು ಭಾರವೆಂದು
ನೊಂದವಳು
******************