ಕವಿತೆ
ಮರ್ದಿನಿ ಆಗಲಿಲ್ಲ
ಡಾ.ಶಿವಕುಮಾರ್ ಮಾಲಿಪಾಟೀಲ
ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗ
ಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ
ನಿನ್ನ ಗರ್ಭದಲ್ಲಿ ಹುಟ್ಟಿದರೂ
ನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣು
ಕಾಳಿಯಾಗಲಿಲ್ಲ
ವರದಕ್ಷಿಣೆಗಾಗಿ ಅವಮಾನಿಸಿ
ಹಿಂಸೆ ಕೊಟ್ಟು
ಕೊಲೆ ಮಾಡುವಾಗ ಹೆಣ್ಣು
ದುರ್ಗೆ ಆಗಲಿಲ್ಲ
ಹೆಣ್ಣು ಬೇಡವೆಂದು
ಭ್ರೂಣವನ್ನು ಗರ್ಭದಲ್ಲೇ
ಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ
ಮಹಾ ಗ್ರಂಥಗಳಲ್ಲಿ ಮರುಳಾಗಿ
ಕಲೆ ,ಶಿಲೆಗಳಲ್ಲಿ ಗೊಂಬೆಯಾಗಿ
ಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆ
ಅರ್ಧ ನಾರೇಶ್ವರಿ…
ಆಗಿದ್ದು ಮಾತ್ರ ದೇವದಾಸಿ.
ಕಾಡು ಮೇಡುಗಳಲ್ಲಿ
ಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿ
ಭೂ ತಾಯಿ ಬಿರುಕೊಡೆಯಲಿಲ್ಲ
ಗಂಗೆ,ತುಂಗೆ,ಕಾವೇರಿ,
ಗೋದಾವರಿ ಎಲ್ಲಾ ಹೆಣ್ಣು
ಹೆಸರಿನ ನದಿಗಳು ಬರಿದಾಗಲಿಲ್ಲ
ಸಾಕ್ಷಿಗಳಿದ್ದರೂ
ಅಪರಾಧಿಗಳಿಗೆ ಶಿಕ್ಷೆ ಇಲ್ಲ..
ನಿರಪರಾಧಿಯಾಗಿ ಬಂದವರನ್ನು
ನೋಡಿ ಓಡುತ್ತಿವೆ ಪ್ರಾಣಿಗಳು
ಮೃಗಗಳು ಬಂದವೆಂದು…
ಮಹಾಭಾರತದಲ್ಲಿ ಅವಮಾನ
ರಾಮಾಯಣದಲ್ಲಿ ಅನುಮಾನ
ನವಭಾರತದಲ್ಲಿ ಅತ್ಯಾಚಾರದ ಬಹುಮಾನ ?
ನಾಗರೀಕರಾಗದೆ
ಎಷ್ಟು ಮುಂದುವರಿದರೇನು?
ಮನುಷ್ಯತ್ವ ಇರದ
ಯಾವ ರಾಜ್ಯ ಕಟ್ಟಿದರೇನು?
ಹೆಣ್ಣು ನಿಜ ದುರ್ಗೆ,ಚಾಮುಂಡಿ,ಕಾಳಿ,
ಮರ್ದಿನಿಯಾಗದೆ
ಶತ ಶತಮಾನದ ಈ ಅನ್ಯಾಯ ತಪ್ಪಿದ್ದಲ್ಲ..
**********************************
ವಾಹ್…. ಹೌದು ಮರ್ದಿನಿ ಆಗಬೇಕು… ಯಾರ ಯಾವ ಅಪ್ಪಣೆಗೂ ಕಾಯದೆ..