ಗಾಂಧಿ ವಿಶೇಷ

ಮಹಾತ್ಮ

ಮಹಾತ್ಮನಾಗಿದ್ದು ಗಾಂಧೀಜಿ
ಸಾಮಾನ್ಯರಲ್ಲಿ ಅಸಾಮಾನ್ಯನಾಗಿದ್ದಕ್ಕೆ !
ದೇವರ ಅಪರಾವತಾರವೆಂದೇನೂ ಅಲ್ಲ
ಅನುಸರಣೆಯಿರಲಿ ಆರಾಧನೆ ಬೇಕಿಲ್ಲ

ನಿನ್ನೊಳಗಿನ ನಿನ್ನ ಕಂಡುಕೊಂಡೆ
ಪತಿತನಾಗಿಯೂ ಪಾವನನಾದೆ
ಮಾರಲಿಲ್ಲ ನಿನ್ನಾತ್ಮಸಾಕ್ಷಿಯ
ಕಕ್ಷಿದಾರರ ವಕಾಲತ್ತಿನ ತಕ್ಕಡಿಯಲ್ಲಿಟ್ಟು
ನಿಯತ್ತಿನದೇ ಮೇಲುಗೈ !

ಘನತೆಯಿತ್ತೆ ಶ್ರಮಿಕನ ಬೆವರಿಗೆ
ದುಡಿವ ತನುವಿನ ಬೆವರ ಹನಿ
ಸುಖದ ವ್ಯಾಧಿಗಳ ಮದ್ದೆಂಬ ಮತಿಯಿದ್ದವ
ದುಡಿಮೆಯ ಹಿರಿಮೆಯರಿತ ಬಹುರೂಪಿ
ತನ್ನುಡುಗೆಯ ತಾನೆ ಹೊಲಿದ ಸಿಂಪಿಗ
ಗೋಖಲೆಯೇ ಮೆಚ್ಚಿದ ಮಡಿವಾಳ
ಸಮಗಾರನ ವೈದ್ಯನಂತೆ ಕಂಡ ಅಸ್ಪೃಶ್ಯತಾ ವಿರೋಧಿ
ಭಂಗಿಗಳ ಹೀನಾಯಕೆ ಮರುಗಿದ ಮಾನವತಾವಾದಿ
ಜೈಲಿಗಟ್ಟಿದವಗೆ ಮೆಟ್ಟು ಹೊಲಿದ ಮೋಚಿ
ಸಹಕಾರ ಕೃಷಿಯ ಲಾಭವರಿತ ಸಾವಯವ ಕೃಷಿಕ
ಬಡವರಿಗಾಗಿ ಚಂದಾ ಎತ್ತಿದ ತಿರುಕ
ಆಹಾರವೇ ರೋಗಕೆ ಮದ್ದೆಂದ ಧನ್ವಂತರಿ
ಉನ್ನತಿಗಾಗಿ ಕಲೆಯೆಂದರಿತ ಲೇಖಕ
ಸಮಾನತೆಗೆ ಹೋರಾಡಿದ ದ.ಆಫ್ರಿಕಾದ ದಳಪತಿ
ಸಿದ್ಧಾಂತಗಳಿಗೆ ಸೆರೆಯಾದ ಜೈಲು ಹಕ್ಕಿ

ದಾಂಪತ್ಯವು ಸೊಗದ ಸಾಂಗತ್ಯವೆಂದು
ದೌರ್ಜನ್ಯವ ದೂರವಿಟ್ಟ ಸಂಸಾರಿಗ
ಯಂತ್ರಕ್ಕಲ್ಲ ಯಂತ್ರ ವ್ಯಾಮೋಹ ದ್ವೇಷಿ
ಧರ್ಮವಾಗಲಿಲ್ಲ ನಿನಗೆ ರಾಮನಾಮ
ಅದೊಂದು ಭರವಸೆಯ ಮಂತ್ರ!
ನೋಡಿದೆವು ‘ಹರಿಶ್ಚಂದ್ರ ನಾಟಕ’ ನಿನ್ನಂತೆ
ತೊಡಲಿಲ್ಲ ಸತ್ಯವ್ರತದ ದೀಕ್ಷೆ ನಿನ್ನಂತೆ
ಸ್ವಾತಂತ್ರ ಗಳಿಕೆಗೆ ಅಹಿಂಸೆಯೇ ಆಯುಧ
ಬ್ರಿಟಿಷರ ನಡುಗಿಸಿದ ಸತ್ಯಾಗ್ರಹದ ಪ್ರವರ್ತಕ
ಸತ್ಯಾನ್ವೇಷಣೆಯೆ ನಿನ್ನ ಬದುಕಿನ ಪ್ರಯೋಗ
ಅರೆಬೆತ್ತಲೆಯೆ ಅರಮನೆಗೆ ಹೋದ ಫಕೀರ
ನಡೆನುಡಿಗಳೊಂದಾದ ದಿಟ್ಟತನದ ಬದುಕು
ಧಿಕ್ಕರಿಸಿ ಅಧಿಕಾರವ ದೂರ ಸರಿದ ಸಂತ

ಮಹಾತ್ಮನ ಸಂಕೀರ್ಣ ಬದುಕಿನ
ಒಳನೋಟಕ್ಕಷ್ಟೆ ದಕ್ಕುವುದು ಕಾಣ್ಕೆ
ಪಕ್ಷಿನೋಟಕ್ಕೆ ಅವರವರ ಎಣಿಕೆ

*******************************

ಎಂ. ಆರ್. ಅನಸೂಯ

Leave a Reply

Back To Top