ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ

ಗಾಂಧಿ ವಿಶೇಷ

ಮಹಾತ್ಮಾ ಗಾಂಧೀಜಿ ಮತ್ತು

ರಾಷ್ಟ್ರಧ್ವಜ

This image has an empty alt attribute; its file name is 7dd9c819-7418-4006-8af5-38ce6970c4d9-1024x1024.jpg

ಮೋಹನ್‌ದಾಸ್ ಕರಮಚಂದ ಗಾಂಧಿ ರಾಷ್ಟ್ರೀಯ  ಚಳುವಳಿಯ ನಾಯಕರಾಗಿ ಮಾನ್ಯತೆ ಪಡೆದಾಗ, ೧೯೧೬ರ ಸುಮಾರಿಗೆ ಆಂಧ್ರದ ಮುಸಲಿಪಟ್ಟಣಂನ ಪಿಂಗ್ಲೆ ವೆಂಕಯ್ಯ, ಗಾಂಧೀಜಿಯವರಲ್ಲಿ ತಮ್ಮ ಕಾರ್ಯದ ಬಗ್ಗೆ ಉತ್ಸಾಹ ಮೂಡಿಸಲು ಯತ್ನಿಸಿದರು ಹಾಗೂ ಒಂದು ವಿನ್ಯಾಸ ಸೂಚಿಸಿದರು. ಆದರೆ ಅದು ಗಾಂಧೀಜಿಯವರಿಗೆ ಇಷ್ಟವಾಗಲಿಲ್ಲ. ಅವರು ರಾಷ್ಟ್ರ ಧ್ವಜ ಹೊಂದುವ ಅಭಿಪ್ರಾಯಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ಅವರಿಗೆ ವೆಂಕಯ್ಯನವರ ಧ್ವಜ ವಿನ್ಯಾಸದಲ್ಲಿ ಸಂಪೂರ್ಣ ದೇಶದ ಅಂತರಾತ್ಮ ಕಲಕುವ ವೈಶಿಷ್ಟ್ಯವೇನೂ ಕಾಣಲಿಲ್ಲ.

            ಒಮ್ಮೆ ಗಾಂಧೀಜಿಯವರ ಜೊತೆ ಮಾತನಾಡುತ್ತಿದ್ದಾಗ, ಗುರುದಾಸ್‌ಪುರ್‌ನ ಲಾಲಾಹನ್ಸ್ ರಾಜ್‌ಸೋಂಧಿ ಅವರು ನಮ್ಮ ಸ್ವಾವಲಂಬನೆಯ ಪ್ರತೀಕವಾಗಿ, ಭಾರತದ ರಾಷ್ಟçಧ್ವಜದಲ್ಲಿ ಚರಕ ಇರಬೇಕೆಂದು ಸಲಹೆ ಮಾಡಿದರು. ಈ ಪ್ರಸ್ತಾವ ಗಾಂಧೀಜಿಯವರಿಗೆ ಬಹಳ ಇಷ್ಟವಾಯಿತು. ಗಾಂಧೀಜಿ ೧೯೨೧ರ ಏಪ್ರಿಲ್‌ನಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗೆ ವೆಂಕಯ್ಯ ಅವರನ್ನು ಕರೆಸಿ, ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಬಣ್ಣದಲ್ಲಿ ಚರಕವನ್ನು ಚಿತ್ರಿಸುವಂತೆಯೆ ಹಾಗೂ ಇಸ್ಲಾಂ ಧರ್ಮವನ್ನು ಸಂಕೇತಿಸುವ  ಹಸಿರು ಬಣ್ಣದ ಪಟ್ಟಿಯನ್ನೊಳಗೊಂಡ ರಾಷ್ಟ್ರೀಯ  ಧ್ವಜ ರಚಿಸಬೇಕೆಂದು ತಿಳಿಸಿದರು.

            ಗಾಂಧೀಜಿಯವರ ಮುಂದೆ ಮೂರುತಾಸಿನೊಳಗೆ ವೆಂಕಯ್ಯ ಒಂದು ಧ್ವಜ ತಯಾರಿಸಿ ಇಟ್ಟರು. ಅದರಲ್ಲಿ ಕೇಸರಿ ಮತ್ತು ಹಸಿರಿನ ಎರಡು ಪಟ್ಟಿಗಳ ಮೇಲೆ ಸಮಾನವಾಗಿ ಮೂಡುವಂತೆ ದೊಡ್ಡ ಚರಕವಿತ್ತು. ಆದರೆ ಅದು ಗಾಂಧೀಜಿಯವರ ಕೈ ಸೇರುವಾಗ ಸ್ವಲ್ಪ ತಡವಾದುದರಿಂದ, ಅದನ್ನು ಕಾಂಗ್ರೆಸ್ ಸಮಿತಿಯ ಅನುಮೋದನೆಗಾಗಿ ಸಲ್ಲಿಸಲಾಗಲಿಲ್ಲ. ಆದರೆ ಅದರಿಂದ ಒಳ್ಳೆಯದೇ ಆಯಿತು. ದ್ವಿವರ್ಣದ ಧ್ವಜದಲ್ಲಿ ಇತರೆ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಕೇತ ಇಲ್ಲದಿರುವುದು ಸಮಸ್ಯೆಗೀಡು ಮಾಡುತ್ತಿತ್ತು.

            ಧ್ವಜವನ್ನು ಪಕ್ಷ ಪರಿಶೀಲಿಸಿದ ನಂತರ ಅದರಲ್ಲಿ ಹಿಂದು, ಮುಸ್ಲಿಂ ಮತ್ತು ಇತರ ಧರ್ಮಗಳನ್ನು ಪ್ರತಿನಿಧಿಸುವ ಮೂರು ವರ್ಣಗಳಿರಬೇಕೆಂದು ಗಾಂಧೀಜಿ ಕಂಡುಕೊಂಡರು. ಆದ್ದರಿಂದ ಧ್ವಜಕ್ಕಾಗಿ ಅವರು ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳನ್ನು ಪರಿಗಣಿಸಿದ್ದರು.

            ಭಾರತೀಯ ಧ್ವಜದ ಹಿಂದಿನ ತತ್ವವನ್ನು ಮತ್ತು ಅದರ ವಿನ್ಯಾಸವನ್ನು ಕಂಡುಕೊಂಡ ಮೇಲೆ, ಗಾಂಧೀಜಿಯವರು ಮತ್ತೆ ವೆಂಕಯ್ಯ ಅವರನ್ನು ಕರೆಸಿ, ಮುಂಚಿನ ಧ್ವಜದ ವಿನ್ಯಾಸದಲ್ಲಿ ಬಿಳಿ ಪಟ್ಟಿಯನ್ನು ಸೇರಿಸಿ ಧ್ವಜ ನಿರ್ಮಿಸುವಂತೆ ತಿಳಿಸಿದರು. ಧ್ವಜದಲ್ಲಿ ಮೇಲಿನಿಂದ ಅನುಕ್ರಮವಾಗಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿದ್ದು ಮೂರು ಪಟ್ಟೆಗಳ ಮೇಲೂ ಬರುವಂತೆ ಮಧ್ಯದಲ್ಲಿ ಚರಕವಿರಬೇಕೆಂದು ಅವರು ನಿರ್ದೇಶನವಿತ್ತರು. ಗಾಂಧೀಜಿಯವರ ಇಚ್ಛೆಯಂತೆಯೇ ವೆಂಕಯ್ಯನವರು ಒಟ್ಟು ೩೦ ದೇಶಗಳ ರಾಷ್ಟ್ರ ಧ್ವಜಗಳನ್ನು ೫ ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ಈ ರೀತಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಥಮ ಧ್ವಜ ರೂಪುಗೊಂಡಿತು.

            ಧ್ವಜದಲ್ಲಿ ಎಲ್ಲಾ ವರ್ಗಗಳ ಪ್ರಾತಿನಿಧ್ಯ ತೋರಿ, ಗಾಂಧೀಜಿ ವಿವಿಧ ಧರ್ಮಗಳ ನಡುವೆ ವಿಭಜನೆ ಉಂಟುಮಾಡಲಿಲ್ಲ. ಮೊದಲಬಾರಿಗೆ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳೆನ್ನದೆ ಪ್ರಾಣತ್ಯಾಗ ಮಾಡಲು ಪ್ರೇರೇಪಿಸುವಂತಹ ಧ್ವಜವನ್ನು ಅವರು ನೀಡಿದರು. ಗಾಂಧೀಜಿಯವರೇ (ಎಂ.ಕೆ.ಗಾಂಧಿ, ಯಂಗ್ ಇಂಡಿಯಾ, ದಿ ನ್ಯಾಶನಲ್ ಫ್ಲಾಗ್, ೧೩ ಎಪ್ರಿಲ್ ,೧೯೨೧)  ಹೇಳಿದಂತೆ:

            “ದೀರ್ಘವಾಗಿ ಪರಿಶೀಲನೆ ನಡೆಸಿದ ನಂತರ, ಹಿನ್ನೆಲೆಯಲ್ಲಿ ಇತರ ಧರ್ಮಗಳಿಗೂ ಪ್ರಾತಿನಿಧ್ಯ ಇರಬೇಕೆಂದು ನಾನು ಕಂಡುಕೊಂಡೆ. ಹಿಂದೂ, ಮುಸ್ಲಿಂ ಏಕತೆ ಕೇವಲ ಅವರಿಗೆ ಮಾತ್ರವಲ್ಲ. ಎಲ್ಲರಿಗೂ ಅನ್ವಯವಾಗುವಂತಹುದು. ಭಾರತದಲ್ಲಿ ವಾಸವಾಗುವ ಎಲ್ಲಾ ಧರ್ಮಗಳವರ ಏಕತೆಯ ಪ್ರತೀಕ ಹಿಂದೂ ಮತ್ತು ಮುಸ್ಲಿಂಮರು ಪರಸ್ಪರ ಸಹಿಷ್ಣುತೆ ತೋರಿದರೆ, ಅವರಿಬ್ಬರೂ ಇತರ ಧರ್ಮಗಳ ಬಗ್ಗೆಯೂ ಸಹಿಷ್ಣುತೆ ತೋರಬಹುದು. ಅವರ ಏಕತೆ ಭಾರತದಲ್ಲಿನ ಅಥವಾ ವಿಶ್ವದಲ್ಲಿನ ಇತರ ಧರ್ಮಗಳಿಗೆ ಭಾದಕವಾಗಲಾರದು. ಆದ್ದರಿಂದ ಧ್ವಜದ ಹಿನ್ನೆಲೆಯಲ್ಲಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿರಬೇಕೆಂದು ನನ್ನ ಅಭಿಪ್ರಾಯ.       

ಬಣ್ಣಗಳನ್ನು ವ್ಯವಸ್ಥೆಗೊಳಿಸಿದ ಕ್ರಮವೂ ಅರ್ಥಪೂರ್ಣವಾಗಿತ್ತು. ಗಾಂಧೀಜಿ ಹೀಗೆ ಹೇಳಿದ್ದರು:

            “ದುರ್ಬಲರು ಎಲ್ಲರಿಗಿಂತ ಮೇಲೆ ಇರುತ್ತಾರೆ. ನಂತರ ಮುಸ್ಲಿಮರು ಮತ್ತು ಕೊನೆಯಲ್ಲಿ ಹಿಂದುಗಳ ಬಣ್ಣ ಎಲ್ಲಕ್ಕಿಂತ ಶಕ್ತಿಶಾಲಿ ದುರ್ಬಲರಿಗೆ ಆಧಾರವಾಗಿ ಕೆಳಗಿರಬೇಕು”. ಪ್ರತಿಯೊಂದು ಬಣ್ಣದ ಪಟ್ಟಿಯ ಗಾತ್ರವೂ ಸಮಾನವಾಗಿತ್ತು. ಅದರ ಮಹತ್ವವೇನೆಂದರೆ :

            “ದುರ್ಬಲರೂ ಅತ್ಯಂತ ಶಕ್ತಿಶಾಲಿಗಳೂ ಸಮಾನರೆಂದು ತೋರಿಸಲು ಎಲ್ಲಾ ವರ್ಣಗಳಿಗೂ ಸಮಾನ ಗಾತ್ರ ನೀಡಲಾಯಿತು.” ರಾಷ್ಟ್ರೀಯ  ಧ್ವಜದಲ್ಲಿ ಪೂರ್ಣ ಪ್ರಮಾಣದ ಚರಕ ಇರಬೇಕೆಂದು ನಿಗದಿಯಾಗಿತ್ತು.

            ಗಾಂಧೀಜಿಯವರ ಧ್ವಜವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಅಂಗೀಕರಿಸದಿದ್ದರೂ ಗಾಂಧೀಜಿಯವರು ಅದನ್ನು ಅನುಮೋದಿಸಿದ್ದರಿಂದ ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅದನ್ನು ಕಾಂಗ್ರೆಸ್‌ನ ಎಲ್ಲಾ ಸಮಾರಂಭಗಳಲ್ಲಿ ಹಾರಿಸಲಾಗುತ್ತಿತ್ತು. ಸಮಯ ಕಳೆದಂತೆ ಅದು ರಾಷ್ಟ್ರೀಯ  ಧ್ವಜವೆಂದು ಪ್ರಸಿದ್ಧವಾಯಿತು. ೧೯೨೧ ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮೊದಲಬಾರಿಗೆ ದೊಡ್ಡ ಗಾತ್ರದ ಈ ಚರಕ ಧ್ವಜದ ಆರೋಹಣೆ ನಡೆಯಿತು. ಆನಂತರ ಅದು, ಬೇರೆ ಯಾವುದೇ ಅಧಿಕೃತ ನಿರ್ಣಯವಿಲ್ಲದೇ ಭಾರತದ ರಾಷ್ಟ್ರೀಯ  ಧ್ವಜವೆಂದು ಮಾನ್ಯತೆ ಪಡೆಯಿತು. ೧೯೨೯ರ ಡಿಸೆಂಬರ್ ೩೧ ರಂದು ರಾವಿ ನದಿ ತಟದಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಮಧ್ಯರಾತ್ರಿ ಈ ಧ್ವಜದ ಆರೋಹಣೆ ನಡೆಯಿತು. ಈ ಅಧಿವೇಶನ ಪೂರ್ಣ ಸ್ವರಾಜ್ಯ ಕಾಂಗ್ರೆಸ್‌ನ ಗುರಿಯೆಂದು ಸಾರಿತು. ೨೬ ಜನವರಿ ೧೯೩೦ ರಂದು, ಇದೇ ಧ್ವಜದ ನೆರಳಿನಲ್ಲಿ ಸಾವಿರಗಟ್ಟಲೇ ಭಾರತೀಯರು ಪ್ರತಿಜ್ಞೆ ತೊಟ್ಟರು. ಅಸಹಕಾರ ಚಳುವಳಿಯೊಂದಿಗೆ ಚರಕಧ್ವಜ ನಿಧಾನವಾಗಿ ಜನಪ್ರಿಯವಾಯಿತು.

            ೧೯೩೦ ರ ಮಾರ್ಚ್ ೧೨ ರಂದು ಗಾಂಧೀಜಿ, ಅಸಹಕಾರ ಚಳುವಳಿ ಆರಂಭಿಸಿದರು. ಅವರು ೭೮ ಅನುಯಾಯಿಗಳೊಂದಿಗೆ ಸಾಬರ್‌ಮತಿಯಿಂದ ಗುಜರಾತ್‌ನ ಕರಾವಳಿಯಲ್ಲಿರುವ ದಾಂಡಿ ಎಂಬ ಒಂದು ಹಳ್ಳಿಗೆ ಉಪ್ಪಿನ ಕಾಯ್ದೆ ಮುರಿಯಲು ಯಾತ್ರೆ ನಡೆಸಿದರು. ತಂಡ ೨೫ ದಿನಗಳಲ್ಲಿ ೨೦೦ ಮೈಲು ದೂರ ಕ್ರಮಿಸಿ, ಏಪ್ರಿಲ್ ೫, ೧೯೩೦ ರಂದು ದಾಂಡಿ ತಲುಪಿತು. ಏಪ್ರಿಲ್ ೬ ರಂದು ಉಪ್ಪಿನ ಕಾಯ್ದೆಗೆ ವಿರುದ್ಧವಾಗಿ ಉಪ್ಪು ತಯಾರಿಸಿದರು. ಗುಜರಾತ್‌ನ ಧರಸಾನದಲ್ಲಿರುವ, ಸರ್ಕಾರದ ಉಪ್ಪಿನ ಗೋದಾಮುಗಳ ಮೇಲೆ ದಾಳಿ ಮಾಡುವುದು ಅವರ ಮುಂದಿನ ಹೆಜ್ಜೆಯಾಗಿತ್ತು. ಆದರೆ ಅವರು ಈ ರೀತಿ ಮಾಡುವ ಮುಂಚೆಯೇ ಅವರನ್ನು ಸೆರೆ ಹಿಡಿಯಲಾಯಿತು.

            ಅಗಷ್ಟ ೧೪ ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪುಕೋಟೆಯಲ್ಲಿ ಮೇಲೆರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರö್ಯಕ್ಕೆ ಮುನ್ನ ಭಾರತೀಯ ರಾಷ್ಟಿçÃಯ ಚಳುವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ  ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಮೂಲ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮ ಗಾಂಧಿ ಇಡೀ ರಾಷ್ಟ್ರೀಯ  ಚಳುವಳಿಯಲ್ಲಿ ಬಳಸಿದ ಬಹುಮುಖ್ಯ ದೇಶಿಯ ಸಂಕೇತವಾಗಿದ್ದು, ಚರಕವನ್ನು ರಾಷ್ಟ್ರಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಂದು ಕಾರಣ-ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರ  ಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡುಬಂದಿತು. ಸ್ವಾತಂತ್ರಕ್ಕೆ ಮೂಹೂರ್ತ ನಿರ್ಣಯವಾದ ವೇಳೆ ಮುನ್ನೆಲೆಗೆ ಬಂದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯವಾಗಿ ಪ್ರಶ್ನೆಯೆತ್ತಿದ್ದು ಕುತೂಹಲದ ವಿಷಯ.

            ಕೊನೆಗೆ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ ೧೯೪೭ ರ ಜುಲೈ ೨೨ ರಂದು ನಿರ್ಣಯಿಸುತ್ತದೆ.  ರಾಷ್ಟ್ರ ಧ್ವಜದ ಕುರಿತು ಒಂದೆರಡು ವಿಷಯ ಪಂಡಿತ ಜವಾಹರಲಾಲ್ ನೆಹರು ಹೇಳ ಬಯಸುತ್ತಾರೆ: “ನಾವು ಕಳೆದ ಕೆಲವು ವರ್ಷಗಳಲ್ಲಿ ಬಳಸಿದ ಧ್ವಜದಲ್ಲಿ ಮತ್ತು ಇದರಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ನೀವು ಕಾಣಬಹುದು. ಬಣ್ಣಗಳು ಅವೇ ಕಡು ಕೇಸರಿ, ಬಿಳಿ ಮತ್ತು ಕಡು ಹಸಿರು. ಬಿಳಿಯ ಬಣ್ಣದಲ್ಲಿ ಹಿಂದೆ ಭಾರತದ ಜನಸಾಮಾನ್ಯನ ಪ್ರತೀಕವಾದ ಅವರ ಪರಿಶ್ರಮದ ಪ್ರತೀಕವಾದ ಮತ್ತು ಗಾಂಧೀಜಿಯವರು ನಮಗೆ ಸಂದೇಶದ ಮೂಲಕ ತಿಳಿಸಿದ ಚರಕವೊಂದಿತ್ತು. ಈಗಿನ ಧ್ವಜದಲ್ಲಿ ಈ ಚರಕದ ಲಾಂಛನವನ್ನು ಸ್ವಲ್ಪ ಬದಲಾಯಿಸಲಾಗಿದೆ. ಸಂಪೂರ್ಣ ತೆಗೆದಿಲ್ಲ. ಅದನ್ನು ಏಕೆ ಬದಲಾಯಿಸಲಾಗಿದೆ? ಸಾಧಾರಣವಾಗಿ ಧ್ವಜದ ಒಂದು ಬದಿಯಲ್ಲಿ ಇರುವ ವಿನ್ಯಾಸವೇ ಇನ್ನೊಂದು ಬದಿಯಲ್ಲೂ ಇರಬೇಕು. ಇಲ್ಲವಾದರೆ ಅದು ಪರಂಪರೆಗೆ ವಿರುದ್ಧವಾಗುತ್ತದೆ. ಧ್ವಜದ ಮೇಲಿರುವ ಚರಕದ  ಎರಡು ತುದಿಗಳು, ಇಬ್ಬದಿಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತವೆ. ಇದು ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಬಹಳಷ್ಟು ಗಹನವಾಗಿ ಪರಿಶೀಲಿಸಿದ ನಂತರ, ಜನಸಾಮಾನ್ಯನ ಭಾವನೆಗಳನ್ನು ಬಿಂಬಿಸುವ ಈ ಲಾಂಛನದಲ್ಲಿ ಬದಲಾವಣೆ ಮಾಡಬೇಕಾಯಿತು. ಅದರ ಚಕ್ರ ಮುಖ್ಯ ಭಾಗವನ್ನು ಉಳಿಸಿಕೊಂಡು, ಇತರ ಭಾಗವನ್ನು ತ್ಯಜಿಸಬೇಕಾಯಿತು. ಚರಕದ ಮುಖ್ಯ ಭಾಗವಾದ ಚಕ್ರ ಇರಿಸಿಕೊಂಡೆವು. ಈ ರೀತಿ ಚರಕದ ಪರಂಪರೆಯನ್ನು ಚಕ್ರವನ್ನು ಉಳಿಸಿಕೊಳ್ಳಲಾಯಿತ…”

            ಈ ವಿಷಯ ಗಾಂಧೀಜಿ ಗಮನಕ್ಕೆ ಬರುತ್ತಲೇ ಅವರಿಗೆ ಅಸಮಾಧಾನ ಉಂಟಾಗುತ್ತದೆ. `ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ’ ಎನ್ನುತ್ತಾರೆ. ಚರಕ ಅವರ ಪಾಲಿಗೆ ಬರೀ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ ಸಂಕೇತವಾಗಿತ್ತು. ಗಾಂಧೀಜಿಯನ್ನು ಸಮಾಧಾನಪಡಿಸಲು ನೆಹರೂ ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕಚಕ್ರವೂ ಚಕ್ರ. ಈ ಚಕ್ರವನ್ನು ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಎಂದು ಗಾಂಧೀಜಿಯವರಲ್ಲಿ ಕೇಳಿಕೊಳ್ಳುತ್ತಾರೆ. ಇದನ್ನು ಮನಸ್ಸಿಲ್ಲದೆ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತ್ತಿತ್ತು.

            ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. ೧೯೪೭ ರ ಅಗಸ್ಟ್ ೩ ರಂದು `ಹರಿಜನ ಬಂಧು’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ. “… ಧ್ವಜದ ನಡುವಣ ಆ ಚಕ್ರವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿ ದೂತನಾದದ್ದನ್ನು ನೆನಪಿಸಿಕೊಳ್ಳಬಹುದು.  ಕೆಲವರಾದರೂ ಅಶೋಕನ ದಯಾಮಯ ಹೃದಯವನ್ನು ನೆನಪಿಸಿಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತ್ತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿಗೆ ಅಂತ ನಾನು ಭಾವಿಸುತ್ತೇನೆ.”

            ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. `ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ’ ಎಂದು ಧ್ವಜಾರೋಹಣ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರೂ ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತ್ತಿದ್ದದ್ದು ಭಾರತ. ಸ್ವಾತಂತ್ರಕ್ಕಾಗಿ ಹೋರಾಡಿ ದಣಿದ ದೇಶ ಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಣ ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು. ದೇಶದ ಜನರೊಂದಿಗೆ ಗಾಂಧೀಜಿ ಕೂಡಾ ಮಲಗಿ ನಿದ್ರಿಸುತ್ತಿದ್ದರು.

            ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಗಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳಿಯವೋ ಸ್ವಾತಂತ್ರದ ಅದೇ ದಿನ ಗಾಂಧೀಜಿ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಬಹುಕಾಲ ಗಾಂಧಿಯವರ ಕಾರ್ಯದರ್ಶಿ ಮತ್ತು ಹತ್ತಿರದ ಬೌದ್ಧಿಕ ಒಡನಾಡಿಯಾಗಿದ್ದ ಮಹಾದೇವ ದೇಸಾಯಿ ಅವರು ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ರಾತ್ರಿ ಎದ್ದು ಗಾಂಧೀಯವರು, ಅಗಲಿದ ಆಪ್ತ ಜೀವಕ್ಕಾಗಿ ಪ್ರಾರ್ಥಿಸುತ್ತಾರೆ. ಎಂದಿನಂತೆ ಚರಕದಿಂದ ನೂಲುತ್ತಾರೆ. ಗೀತೆ ಪಠಿಸುತ್ತಾರೆ. ಆದರೆ ಬೆಳಗ್ಗೆ ಅವರು ಯಾವ ಧ್ವಜಾರೋಹಣ ಕಾರ್ಯಕ್ರಮದಲ್ಲಿಯೂ ಭಾಗವಹಿಸುವುದಿಲ್ಲ. ಅಂತೂ ಅಶೋಕಚಕ್ರ ಧ್ವಜದ ಮಧ್ಯೆಯೇ ಉಳಿದಿದೆ. ಅಶೋಕ ಚಕ್ರವರ್ತಿಯ ಪಾಲಿಗೆ ಅದು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗಿದ ಚಕ್ರ. ಭಾರತದ ಪಾಲಿಗೆ ಆ ಚಕ್ರ ಅಹಿಂಸೆಯಿಂದ ಹಿಂಸೆಯತ್ತ ಚಲಿಸುತ್ತಿದೆ ಎಂಬತೆಯು ಭಾಸವಾಯಿತು. ದೇಶ ವಿಭಜನೆ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು ಕಾಲಾನಂತರದಲ್ಲಿ ಶಾಂತಿ ನೆಲೆಯೂರಿ ದೇಶಭಕ್ತರೆಲ್ಲಾ ಮತ್ತೆ ಅಶೋಕ ಚಕ್ರದ ಶಾಂತಿ ಸಂದೇಶದತ್ತವೇ ಗಮನ ಹರಿಸಿ ದೇಶ ಕಟ್ಟಿದರು.

*************************************************

ಡಾ. ಎಸ್.ಬಿ. ಬಸೆಟ್ಟಿ

One thought on “ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ

  1. ರಾಷ್ತ್ರ ದ್ವಜ ಕುರಿತು ಮಾಹಿತಿ ಚೆನ್ನಾಗಿ ವಿವರಿಸಲಾಗಿದೆ

Leave a Reply

Back To Top