ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್

ಶಿಕ್ಷಣ ಸಂಗಾತಿ ವೀಣಾ ಹೇಮಂತ್‌ ಗೌಡ‌ ಪಾಟೀಲ್ “ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ ಎಲ್ಲವೂ ಆನ್ಲೈನ್ ನಲ್ಲಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಕೂಡ ಆನ್ಲೈನ್ ನಲ್ಲಿ ಕಲಿಯುವ ದಿನಗಳು ಈಗಾಗಲೇ ಬಂದಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ದೊರೆಯುವ ದಿನಗಳು ದೂರವಿಲ್ಲ…. ಹಾಗಾದರೆ ಶಾಲೆಗಳ ಔಚಿತ್ಯವೇನು? ಎಂದು ನೀವು ಕೇಳಬಹುದು ಅಲ್ಲವೇ ? ಇದರ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿ ನಡೆದು ಬಂದ ರೀತಿಯನ್ನು ಅವಲೋಕಿಸೋಣ. ನಮ್ಮ ಭರತ ಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು ಶಿಕ್ಷಣದಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದಾಗಿತ್ತು. ಒಂದು ಕೌಟುಂಬಿಕ ಶಿಕ್ಷಣವಾದರೆ ಮತ್ತೊಂದು ಗುರುಕುಲ ಪದ್ಧತಿಯ ಶಿಕ್ಷಣ. ಕೌಟುಂಬಿಕ ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಆ ಮನೆಯ ರೀತಿ-ನೀತಿ, ಸಂಪ್ರದಾಯಗಳ ಜೊತೆ ಜೊತೆಗೆ ಸಾಮಾಜಿಕ ನಿಯಮಗಳನ್ನು ಪಾಲಿಸುವ ಕುರಿತು ಇಡೀ ಕುಟುಂಬವೇ ಗುರುವಾಗಿ ಪಾಠ ಕಲಿಸುತ್ತಿತ್ತು. ಇಲ್ಲಿ ಕುಟುಂಬದ ಹಿರಿಯರಾಗಲಿ, ಪಾಲಕರಾಗಲಿ, ತಂದೆ-ತಾಯಿಗಳಾಗಲಿ ಕೈಯಲ್ಲಿ ಬಳಪ ಹಿಡಿಸಿ ಪಾಟಿಯ ಮೇಲೆ ಬರೆಸಿ ಇಲ್ಲವೇ ಉರು ಹೊಡೆಸಿ  ಪಾಠಗಳನ್ನು ಹೇಳಿಕೊಡಲಿಲ್ಲ…. ಬದಲಾಗಿ ತಮ್ಮ ನಡೆ ನುಡಿಗಳ ಮೂಲಕ ತಮ್ಮ ಮಕ್ಕಳಿಗೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಬದುಕಿನ ಪರಿಚಯವನ್ನು ಮಾಡಿಕೊಟ್ಟರು. ಇದರ ಜೊತೆ ಜೊತೆಗೆ ಗಂಡು ಮಕ್ಕಳಿಗೆ ಕುಟುಂಬದ ಕುಲ ಕಸುಬನ್ನು ಹಾಗೂ ಹೆಣ್ಣು ಮಕ್ಕಳಿಗೆ ಮನೆ ವಾರ್ತೆಯನ್ನು ಹೇಳಿಕೊಟ್ಟರು. ಒಕ್ಕಲುತನವೇ ಮೂಲ ಉದ್ಯೋಗವಾಗಿದ್ದ ನಮ್ಮ ಭಾರತ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಉದ್ಯೋಗ ಹಾಗೂ ಅದರ ಉಪ ಕಸುಬುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಉಪ್ಪಾರ, ಚಮ್ಮಾರ, ಮ್ಯಾದಾರ ಹೀಗೆ ಹತ್ತು ಹಲವು ಉದ್ಯೋಗಗಳನ್ನು ಕೈಗೊಂಡಿದ್ದು ಅದನ್ನೇ ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಇನ್ನು ರಾಜ ಮಹಾರಾಜರು, ಪಂಡಿತರು, ಜ್ಞಾನಿಗಳು, ಬ್ರಾಹ್ಮಣರು 64 ವಿದ್ಯೆಗಳಲ್ಲಿ ಕೆಲವಷ್ಟನ್ನಾದರೂ ಗುರುಕುಲಗಳಲ್ಲಿ ಇದ್ದು ಕಲಿಯುತ್ತಿದ್ದರು. ಊರಿನಿಂದ ತುಸು ದೂರ ಯಾವುದಾದರೂ ಕಾಡಿನ ಪ್ರಶಾಂತ ವಾತಾವರಣದಲ್ಲಿ ನದಿಯ ಪಕ್ಕದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ನೆಲೆಸಿರುತ್ತಿದ್ದ ಗುರುಗಳಿಗೆ ಋಷಿಮುನಿಗಳಿಗೆ ರಾಜ ಮಹಾರಾಜರುಗಳು ಗುರುಕುಲವನ್ನು ನಡೆಸಲು ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇನ್ನು ಗುರುಕುಲಕ್ಕೆ ಬರುವ ವಿದ್ಯಾರ್ಥಿಗಳು ರಾಜನ ಮಗನಾದರೂ ಸರಿಯೇ ಸೈನಿಕನ ಇಲ್ಲವೇ ಬಡ ಬ್ರಾಹ್ಮಣನ ಮಗನಾದರೂ ಎಲ್ಲರಿಗೂ ಒಂದೇ ನಿಯಮ. ಪ್ರತಿದಿನ ಆಶ್ರಮದ ನಿಯಮದಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದರ ಜೊತೆಗೆ ಶಾಸ್ತ್ರೋಕ್ತವಾಗಿ ವಿವಿಧ ವಿದ್ಯೆಗಳನ್ನು ಕಲಿಯುವುದು ಅತ್ಯವಶ್ಯಕವಾಗಿತ್ತು.ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯ, ಪುರಾಣ ಮತ್ತಿತರ ವಿದ್ಯೆಗಳನ್ನು ಕಲಿಸಿದರೆ ರಾಜ ಮಹಾರಾಜರ,  ಮಂತ್ರಿಗಳ, ಸೇನಾಪತಿಗಳ ಹಾಗೂ ಸೈನಿಕರ ಮಕ್ಕಳುಶಸ್ತ್ರಾಸ್ತ್ರ ವಿದ್ಯೆಗಳಾದ ಧನುರ್ವಿದ್ಯೆ, ಕತ್ತಿ ವರಸೆ, ಭಲ್ಲೆ ಹಾಗೂ ಮತ್ತಿತರ ಆಯುಧಗಳ ಬಳಕೆಯ ಜೊತೆಗೆ ಕಾನೂನು ರಾಜಕೀಯ ನೀತಿಶಾಸ್ತ್ರ ಮುಂತಾದ ರಾಜ್ಯದ ಆಡಳಿತಕ್ಕೆ ಅತ್ಯವಶ್ಯಕವಾದ ವಿದ್ಯೆಗಳನ್ನು ಕಲಿಯುತ್ತಿದ್ದರು.  ಗುರುಗಳು ಹೇಳಿದ ಮಾತುಗಳನ್ನು ವೇದ ವಾಕ್ಯದಂತೆ ಭಾವಿಸುವ, ಆಶ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುವ ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸುಮಾರು 6 ರಿಂದ 12 ವರ್ಷಗಳ ಕಾಲ ಶಾಸ್ತ್ರ ವಿದ್ಯೆಯ ಜೊತೆಗೆ ವೃತ್ತಿ ಶಿಕ್ಷಣವು ಕೂಡ ದೊರೆಯುತ್ತಿತ್ತು ಎಂದರೆ ತಪ್ಪಿಲ್ಲ. ಇದರ ಜೊತೆಗೆ ಕೋಶವನ್ನು ಓದುವ ಹಾಗೂ ದೇಶವನ್ನು ಸುತ್ತುವ ಕೆಲಸವನ್ನು ಅಂತಿಮವಾಗಿ ವಿದ್ಯಾರ್ಥಿಯು ಮಾಡುವ ಮೂಲಕ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ಅರಿಯುವ ಅವಕಾಶ ಕೂಡ ಅವರಿಗೆ ದೊರೆಯುತ್ತಿತ್ತು. ನಂತರದ ಕಳೆದೆರಡು ಶತಮಾನಗಳವರೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅದರಲ್ಲೂ ಮಠಗಳಲ್ಲಿ, ಅಗ್ರಹಾರಗಳಲ್ಲಿ ಆಯಾ ಊರಿನ ಪಂಡಿತರು ಜ್ಞಾನಿಗಳು ಮಕ್ಕಳಿಗೆ ಶಿಕ್ಷಣ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಇಲ್ಲೂ ಕೂಡ ಅದೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ಮಕ್ಕಳು ತಮ್ಮ ಮನೆಯ ವಾತಾವರಣದಲ್ಲಿ ಮುಂಜಾನೆ ಮತ್ತು ರಾತ್ರಿಗಳನ್ನು ಕಳೆಯುತ್ತಿದ್ದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ಶಿಕ್ಷಣ ನಂತರ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪಾಲಕರೊಂದಿಗೆ ವಾಸ ಇರುತ್ತಿತ್ತು. ಅದರ ನಂತರ ಕಳೆದ ಎರಡು ಶತಮಾನಗಳಿಂದ ಆರಂಭವಾಗಿದ್ದು ಇಂದಿಗೂ ಚಾಲ್ತಿಯಲ್ಲಿ ಇರುವುದು ಇಂದಿನ ಪದ್ಧತಿ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲೆ ಕಾಲೇಜು ಸ್ನಾತಕೋತ್ತರ ಹೀಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ನೀಡುವ ಪದ್ಧತಿ ಆರಂಭವಾಯಿತು. ಮೊದಲ ಹತ್ತು ವರ್ಷಗಳವರೆಗೆ ಸಾಂಪ್ರದಾಯಿಕವಾಗಿ ಆಯಾ ಪ್ರದೇಶದ ಆಡಳಿತ ಭಾಷೆ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಗಳ ಜೊತೆ ಜೊತೆಗೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದ್ದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಯಿತು. ಭಾಷೆಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಆ ಭಾಷೆಯ ಕಥೆ,ಕಾವ್ಯ, ಕವನ, ಗದ್ಯ, ಪದ್ಯ, ಹಳಗನ್ನಡ, ನಡುಗನ್ನಡ ನವ್ಯ ಸಾಹಿತ್ಯ, ನಾಟಕ ಇತಿಹಾಸ ವ್ಯಾಕರಣ, ಕವಿ ಕರ್ತೃಗಳ ಪರಿಚಯ, ಬದುಕು ಬರಹ ಇವುಗಳ ಕುರಿತು ಮಕ್ಕಳಿಗೆ ಆಯಾ ತರಗತಿಗಳಿಗೆ ಅನುಸಾರವಾಗಿ ಪಠ್ಯವನ್ನು ಇಡಲಾಗುತ್ತದೆ. ಗಣಿತದಲ್ಲಿ ಅಂಕಿಗಳನ್ನು ಬರೆಯುವ, ಓದುವ  ಎಣಿಸುವ ಹೇಳುವುದರಿಂದ ಆರಂಭಿಸಿ ಕೂಡಿಸುವ ಕಳೆಯುವಾಗ ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳನ್ನು ಇದರ ಮುಂದಿನ ಭಾಗವಾಗಿ ಗಣಿತದ ಮತ್ತೆ ವಿಷಯಗಳಾದ ದಶಮಾಂಶ ಪದ್ಧತಿ ಭಿನ್ನರಾಶಿ ಸಮೀಕರಗಳು ಪ್ರಮೇಯಗಳನ್ನು ಹಂತ ಹಂತವಾಗಿ ಕಲಿಸುವ ಯೋಜನೆಗಳು ರೂಪುಗೊಂಡವು. ಗಣಿತದಲ್ಲಿ ಅಂಕಗಣಿತ ಬೀಜಗಣಿತ ಹಾಗೂ ರೇಖಾಗಣಿತ ಎಂಬ ಮೂರು ವಿಭಾಗಗಳನ್ನು ಮಾಡಿದರು. ಸಮಾಜಶಾಸ್ತ್ರದಲ್ಲಿ ಇತಿಹಾಸ,ಭೂಗೋಳ ಹಾಗೂ ನಮ್ಮ ಸಂವಿಧಾನದ ನೀತಿಗಳನ್ನು ಅರಿಯುವ ಪೌರನೀತಿ ಎಂಬ ಮೂರು ವಿಭಾಗಗಳನ್ನು ಮಾಡಿ ಭೂಗೋಳದಲ್ಲಿ ಭೂಮಿಯ ಸಂರಚನೆಯ ಕುರಿತು ವೈವಿಧ್ಯಮಯ ಪ್ರದೇಶಗಳ ಕುರಿತು ಪ್ರಸ್ಥಭೂಮಿ ಮರುಭೂಮಿ ಕಾಡು ಹುಲ್ಲುಗಾವಲು ಮುಂತಾದ ಪ್ರಾದೇಶಿಕ ವೈವಿಧ್ಯತೆಗಳನ್ನು ಪಠ್ಯದ ಭಾಗವಾಗಿಸಿದರು.  ಹೀಗೆ ಎಲ್ಲ ವಿಷಯಗಳು ಕುರಿತು ನುರಿತ ಭಾಷಾ ತಜ್ಞರನ್ನು, ವಿದ್ವಾಂಸರನ್ನು  ಸಂಶೋಧಕರನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ  ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಗಳನ್ನು  ಮೂಲಭೂತ ವಿಷಯಗಳ ಪಟ್ಟಿಯಲ್ಲಿ ಅಡಕಗೊಳಿಸಿ ವಯೋಮಿತಿಗೆ ತಕ್ಕಂತೆ ಅವುಗಳನ್ನು ಮಕ್ಕಳ ಕಲಿಕೆಯಲ್ಲಿ ಅಳವಡಿಸಿದರು.  ಇದೀಗ ಆನ್ಲೈನ್ ನಲ್ಲಿ ಕೂಡ ವೈವಿಧ್ಯಮಯ ಕೋರ್ಸುಗಳ ವಿಷಯಗಳ ಕುರಿತು ನಾವು ಕಲಿಯಬಹುದು. ಈ ಎಲ್ಲಾ ಕಲಿಕೆಗೆ ಮೂಲ ನಮ್ಮ ಆಸಕ್ತಿ ಆಗಿರಬೇಕು. ಇಂತಹ ಕಲಿಕೆಯನ್ನು ಕಲಿಸಲು ಶಾಲೆ ಪುಸ್ತಕ ಗುರುಗಳು ಬೇಕಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಭೌತಿಕವಾಗಿ ಶಾಲೆಗಳ ಅಸ್ತಿತ್ವ ಇರುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಬಹುಶಹ ಇಲ್ಲ ಎಂದು ಹೇಳಬಹುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮದೇ ಆದ ಅನುಕೂಲಕರ ವಾತಾವರಣದಲ್ಲಿ ಕುಳಿತು ನಿಂತು ಮಲಗಿ ಆನ್ಲೈನ್ ನಲ್ಲಿ ಶಿಕ್ಷಕರ ಪಾಠಗಳನ್ನು ಕೇಳಿ ಪರೀಕ್ಷೆಗಳನ್ನು ಬರೆದು ಪದವಿಗಳಿಸಬಹುದಾದ ದಿನಗಳು ಮುಂದೊಂದು ದಿನ ಬರಬಹುದು. ಹಾಗಾದರೆ ಶಿಕ್ಷಣ ಎಷ್ಟರಮಟ್ಟಿಗೆ ಪ್ರಸ್ತುತ ? ಶಾಲೆಗಳ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸಬಹುದು  ಖಂಡಿತವಾಗಿಯೂ ಶಾಲೆಗಳ ಅವಶ್ಯಕತೆ ಇದೆ. ಮಕ್ಕಳು ಚಿಕ್ಕಂದಿನಿಂದಲೂ ಒಂದು ಸಾಂಫಿಕ ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆಯ ಪಾಠವನ್ನು ಕಲಿಯಲು ಶಿಕ್ಷಣ ಬೇಕು. ಆದರೆ ಅಂತಹ ಶಿಕ್ಷಣ ದೊರೆಯುವುದು ಕೇವಲ ಶಾಲೆಗಳಲ್ಲಿ ಮಾತ್ರ. ಸತ್ಯ,ಧರ್ಮ,ನ್ಯಾಯ, ನೀತಿ, ಕರುಣೆ, ದಯೆ,ಪ್ರೀತಿ, ವಿಶ್ವಾಸ, ನಂಬಿಕೆ, ದೇಶಪ್ರೇಮ, ದೇಶದ ಕುರಿತು ಅಭಿಮಾನ, ರಾಷ್ಟ್ರೀಯ ಜಾಗೃತಿ ಸಂವಿಧಾನದ ಪರಿಕಲ್ಪನೆ  ನಮ್ಮ ರಾಷ್ಟ್ರೀಯ ನಾಯಕರ ಕುರಿತ ಕಥೆಗಳು, ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಬದುಕಿನ ಪಾಠಗಳು, ಆಟಗಳು ಆಟದ ಮೂಲಕ ಒಪ್ಪಿಕೊಳ್ಳಲು ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಅತ್ಯವಶ್ಯಕವಾದ ಎಲ್ಲಾ ಬಗೆಯ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ನಮಗೆ ಶಾಲೆಗಳು ಅತ್ಯವಶ್ಯಕ.  ಶಿಕ್ಷಣವನ್ನು ಬೇಕಾದರೆ ಆನ್ಲೈನ್ ನಲ್ಲಿ ಪಡೆಯಬಹುದು… ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನವನ್ನು ಚಾರಿತ್ರ್ಯ ನಿರ್ಮಾಣವನ್ನು ಶಿಕ್ಷಣದಂತೆ ಕೇವಲ ಒಂದು ಇಲ್ಲವೇ ಎರಡು ವರ್ಷಗಳಲ್ಲಿ ಕಲಿಸಿ ಮುಗಿಸಲು ಸಾಧ್ಯವಿಲ್ಲ ಅದೊಂದು ನಿರಂತರ ಪ್ರಕ್ರಿಯೆ…. ಅದಕ್ಕೆ ತನ್ನದೇ ಆದ ಗತಿಯಿದ್ದು ಆ ಗತಿಯಲ್ಲಿಯೇ ಮಕ್ಕಳು ತಮ್ಮ ಬದುಕಿನಲ್ಲಿ ಶಾಲೆಗಳ ಮೂಲಕ, ಶಿಕ್ಷಕರ ಮೂಲಕ, ಸಹಪಾಠಿಗಳ ಜೊತೆಗೆ, ಹಿರಿಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆ ಎಂಬ ದೊಡ್ಡ ಆವರಣದ ಆಟದ ಮೈದಾನದಲ್ಲಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ನಿರಂತರವಾಗಿ ಕಲಿಯಬೇಕು ಇದಕ್ಕೆ ಶಾಲೆ ಅತ್ಯಂತ ಸೂಕ್ತವಾದ ಸ್ಥಳ.  ಜನನೀ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯನ್ನು ನಮಗೆ ಕಟ್ಟಿಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ನಾಗರಿಕರಾಗಿ ನಮ್ಮ ದೇಶದ ಸಂವಿಧಾನದ ಮೂಲಕ ನಾವೆಲ್ಲರೂ ಒಂದು ಎಂಬ ವಿವಿಧತೆಯಲ್ಲಿ ಏಕತೆಯ ಪಾಠವನ್ನು ಹೇಳಿಕೊಡುವುದು ಶಾಲೆಯೇ. ಸಿರಿವಂತರ ಮಗನಾಗಲಿ ಗುರು ಪುತ್ರನಾಗಲಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯ ಮಗನಾಗಲಿ ಶಾಲೆಯ ವಾತಾವರಣದಲ್ಲಿ ಏಕರೂಪದ ಸಮವಸ್ತ್ರವನ್ನು ಧರಿಸಿ ಮೇಲು-ಕೀಳು, ಬಡವ-ಬಲ್ಲಿದ, ವರ್ಗ-ವರ್ಣ ಎಂಬ ಯಾವುದೇ ಭೇದಗಳಿಲ್ಲದೆ ಕಲಿಯುವ ವಾತಾವರಣವನ್ನು ಕಲ್ಪಿಸಿ ಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ಶಾಲೆಗಳೇ ಮಕ್ಕಳ ವ್ಯಕ್ತಿತ್ವ ವಿಕಸನದ ಅದ್ಭುತವಾದ ಕಾರ್ಯ ಆಧಾರಗಳು ಅಂತಹ ಶಾಲೆಗಳಲ್ಲಿ ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಹೇಗೆ ಇರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಕಲಿಯುತ್ತಾ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಒಂದೊಂದೇ ಹಂತದ ನೈತಿಕ, ಮೌಲಿಕ, ಸಾಮಾಜಿಕ ಐತಿಹಾಸಿಕ ಸಾಂಸ್ಕೃತಿಕ ಜೀವನ ಪಠ್ಯಗಳನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗುತ್ತಾರೆ. ಧೈರ್ಯ, ಸಾಹಸ, ರಾಷ್ಟ್ರೀಯವಾದ, ಸೇವಾ ಮನೋಭಾವ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಯುವ ಮಕ್ಕಳ ಬದುಕಿನಲ್ಲಿ ಮೂಡುವುದು ಶಾಲೆಯ ಮೂಲಕವೇ ಮುಂದೆ ಮಕ್ಕಳು ತಮ್ಮ ಬದುಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಮಿಂಚಿ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು.. ಆದರೆ ಅದೆಲ್ಲಕ್ಕೂ ಮುಖ್ಯವಾದ ಮೂಲಭೂತವಾದ ಅಡಿಪಾಯವನ್ನು ಶಾಲೆಗಳು ಹಾಕಿಕೊಡುತ್ತವೆ. ಸೋಲು ಗೆಲುವಿನ ನೋವು ನಲುವಿನ ನೂರಾರು ಪಾಠಗಳನ್ನು ಕೂಡ ಶಾಲೆಗಳು ಕಲಿಸಿಕೊಡುತ್ತವೆ. ಹೀಗಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳು ಬೇಕೇ ಬೇಕು ಅಂತಹ ಶಾಲೆಗಳ ಅಸ್ತಿತ್ವವನ್ನು ಗುರುತಿಸುವ ಸಂವೇದನಾಶೀಲ ಸಶಕ್ತ ಸಮಾಜದ ಹರಿಕಾರರು ನಾವಾಗಬೇಕು. ಆ ಮೂಲಕ ಶಿಕ್ಷಣ ಪದ್ಧತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತೀಕರಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾಜದ ನಾವೆಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸೋಣ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ರೆಕ್ಕೆ ಮುರಿದ ಹಕ್ಕಿ” ಗುಡಿಸಿಲಿನ ಗುಬ್ಬಚ್ಚಿ ನಾನು.ತಂದೆ–ತಾಯಿಯ ಪ್ರೀತಿ,ಅಪ್ಪನ ದುಡಿಮೆ ದುಡ್ಡಿನಿಂದಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿಹಾರಲು ಕಲಿತೆ. ಗೂಡು ಬಿಟ್ಟು,ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,ಎತ್ತರಕ್ಕೆ ಏರುತ್ತಿದ್ದೆ. ಗುಬ್ಬಚ್ಚಿಯ ಗೂಡಲ್ಲಿಬಡತನ ಇದ್ದರೂ ಬವಣೆ ಇರಲಿಲ್ಲ;ಹಣ ಇರಲಿಲ್ಲ, ಆದರೆ ಆನಂದ ಇತ್ತು.ನೋವಿತ್ತು, ನಂಜಿರಲಿಲ್ಲ;ಕೊಳಕು ಇತ್ತು, ಕತ್ತಲೆ ಇರಲಿಲ್ಲ. ಶುಭ್ರ ನೀಲಿ ಆಕಾಶ,ತಣ್ಣನೆಯ ಗಾಳಿ,ತಳಿರಿನ ತಂಪು,ಮಲ್ಲಿಗೆಯ ಕಂಪು—ಇವೆಲ್ಲಾ ನನಗೆ ಗುರಿಯಾಗಿ,ಗುರುವಾಗಿ,ಗುರಿಯವರೆಗೂ ಕರೆದೊಯ್ದವು. ಆಮೇಲೆ…ಅರಮನೆ ಸೇರಿದೆ.ಅಂದ–ಚಂದದ ಮೈಮಾಟ,ಮೋಹ–ಮಾಯೆಯ ಪಾಶ;ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,ಹಾರಲು ಆಗಲಿಲ್ಲ. ಪಂಜರದೊಳಗೆ ರೆಕ್ಕೆ ಬಡಿಯುತ್ತಾ,ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿನಲಿವು ಕಾಣದೆಕಾದು ಕುಳಿತು ಕಂಗಾಲಾದೆ. ಹೊಸ ಪ್ರಪಂಚದಲ್ಲಿದಾರಿ ತಪ್ಪಿದೆ;ದಾರಿ ತೋರಿಸುವವರೇಕತ್ತಲಿನ ಪರದೆ ಕಟ್ಟಿದರು. ಹಾರಲೂ ಆಗದೆ,ಹೊರಳಲೂ ಆಗದೆ,ಮರುಗುತ, ಸೊರಗುತ, ಕೊರಗುತಕುಳಿತೆ—ರೆಕ್ಕೆ ಮುರಿದ ಹಕ್ಕಿಯಂತೆ. ಪಂಜರದಿಂದ ಬಿಡುಗಡೆ ಯಾವಾಗ?ನಾನು ಹಾರಬೇಕು—ಶುಭ್ರ ಗಾಳಿಯ ತಂಪಿನಲ್ಲಿ,ಸ್ವಚ್ಛ ನೀಲಿ ಆಕಾಶದ ಕಡೆಗೆ. ಮೌನವೇ ಮಾತಾಗಿದೆ.ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?ಒಂದು ದಿನ ಪಂಜರದ ಸರಳು ಮರುಗಿತು“ಬಿಡುಗಡೆ ನೀಡುವೆ ಹೋಗು ನೀನು” ಹಾರುವ ಚೈತನ್ಯ ಇಲ್ಲ;ಅದೇ ಆಕಾಶ, ಅದೇ ಗಾಳಿ—ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದರೆಕ್ಕೆ ಮುರಿದ ಹಕ್ಕಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ” Read Post »

ಕಾವ್ಯಯಾನ

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು

ಕಾವ್ಯ ಸಂಗಾತಿ ಕುವೆಂಪು,ಬೇಂದ್ರೆ ಬಗ್ಗೆ ಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ. ಕನ್ನಡವೆಂದರೆ ಕುವೆಂಪು !ಕವಿಶೈಲದ ಇಂಚರ ಇಂಪುಮಲೆನಾಡಿನ ಹಸಿರಿದೆಜೋಗದ ಭರವಿದೆಕಾಜಾಣದ ಕರೆಯಿದೆಅದರಲಿಅಮ್ಮನ ಲಾಲಿಯ ತಂಪು ಇದೆ ! — ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕನಾಕು ತಂತಿ ಮೀಟುವ ಶಬ್ದ ವೈಣಿಕದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕಪಂಡಿತ ಪಾಮರರ ಪ್ರೀತಿಪಾತ್ರಕನ್ನಡಾಂಬೆಯ ಔರಸ ಪುತ್ರಕಾವ್ಯಾಂತರಿಕ್ಷದ ಧ್ರುವ ನಕ್ಷತ್ರವರಕವಿಯ ಕೀರುತಿ ಸರ್ವತ್ರ ಸುಮತಿ ನಿರಂಜನ್

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಕಾಲ ತಡೆಗೋಡೆ ಕಟ್ಟದು ಒಲವಿನ ಮಳೆ ಜಿನುಗಲು ಒಲವರಸಿಯಾರಿಗೂ ಆಗದು ಮಲ್ಲಿಗೆ ಸುಮ ಕಂಪು ತಡೆಯಲು ಒಲವರಸಿ ನಿನ್ನ ರೂಪವು ಪ್ರೇಮಾಲಯ ನಿರ್ಮಿಸಿ ಯುಗಳ ಗೀತೆ ಹಾಡುತಿದೆಅನುದಿನ ಕಾಯುವೆ ನಿನ್ನ ಚೆಲುವಿನ ಪುಟ ತಿರುವಲು ಒಲವರಸಿ ಆರುಮೆ ಅಂಗಳದಲಿ ಪೂಜಿಸುವೆನು ಮನದುಂಬಿ ದೀಪ ಬೆಳಗುತಭಾವದೀಪ್ತಿಯು ಕೆಂಪೇರುತದೆ ನಿನ್ನಧರಗಳು ಚದುರಲು ಒಲವರಸಿ ತನು ಮನ ಮಿಥುನಕೆ ಹಂಬಲಿಸುತ ಕನಸಿನ ಗೋಪುರ ಕಟ್ಟುತಿದೆನನ್ನ ಬೇಟೆಯಾಡು ವದನದ ಅಂಚು ಅಮೃತ ಸುರಿಸಲು ಒಲವರಸಿ ಮಲ್ಲಿಯ ಉಸಿರಿನ ಉಷ್ಣವು ನಿನ್ನಲಿ ಬೆರೆಯಲು ಕನವರಿಸುತಿದೆಆಲಂಗಿಸು ಬಾ ನನ್ನೆದೆಯ ರಸದೋಕುಳಿ ಎರಚಲು ಒಲವರಸಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ನಿಮ್ಮೊಂದಿಗೆ

“ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್”ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ವಸಂತಿ ಮೂರ್ತಿ ಅವರ ಲೇಖನ

ಹಿರಿಯರ ಸಂಗಾತಿ ವಸಂತಿಮೂರ್ತಿ ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ವಸಂತಿ ಮೂರ್ತಿ ಅವರ ಲೇಖನ 1. ಗೊರೂರು:ಗೊರೂರು ಹಾಸನ ಜಿಲ್ಲೆಯಲ್ಲಿ ಇರುವ ಒಂದು ಸಣ್ಣ ಗ್ರಾಮ.  ಈ ಗ್ರಾಮ ಅಥವಾ ಹಳ್ಳಿ ಕಳೆದ ಒಂದು ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ.  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗೊರೂರಿನ ಕೀರ್ತಿಯೂ ದೊಡ್ಡದೇ. ಈಚೆಗೆ ಇದರ ಕೀರ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದು ದೇಶ ವಿದೇಶಗಳಲ್ಲಿ ಹರಡಿದೆ. ಅದಕ್ಕೆ ಮುಂಚೆಯೂ ಗೊರೂರು ಇದೇ ಜಾಗದಲ್ಲಿಯೇ ಎಷ್ಟೋ ತಲೆಮಾರುಗಳಿಂದ ಇತ್ತು.  ಕರ್ನಾಟಕದಲ್ಲಿ ಇರುವ ಸಾವಿರಾರು ಹಳ್ಳಿಗಳಂತೆ ಇದೂ ಒಂದು ಹಳ್ಳಿ ಎನ್ನಿಸಿಕೊಂಡಿತ್ತು.  ಈಗ ಕಳೆದ ಒಂದು ಶತಮಾನದಲ್ಲಿ ಈ ಊರಿನ ಹೆಸರು  ಕೇಳದೇ ಇರುವ ಕನ್ನಡಿಗರೇ ಅಪರೂಪ ಎನ್ನುವಂತಾಗಿದೆ.  ಗೊರೂರು ಈರೀತಿ ಪ್ರಸಿದ್ಧವಾಗಲು ಅನೇಕ ಕಾರಣಗಳು ಇವೆ.  ಯಥೇಚ್ಛವಾದ ಪ್ರಕೃತಿ ಸೌಂದರ್ಯ, ಜನರಿಗೆ ದಿನನಿತ್ಯಕ್ಕೆ ಬೇಕಾಗುವ ಸ್ನಾನ, ಕುಡಿಯುವ ನೀರು, ರೈತರಿಗೆ ರಾಗಿ, ಭತ್ತ, ತೆಂಗು, ಅಡಿಕೆ, ಬಾಳೆ ತೋಟಗಳಿಗೆ ನೀರು ಸರಬರಾಜು ಮಾಡುವ ಹೇಮಾವತಿ ನದಿ,  ನೋಡಿದರೇ ಕಣ್ಣಿಗೆ ತಂಪು ಕೊಡುವ ನದಿಯ ದಡದಲ್ಲಿ ಭಕ್ತರ ಅಭೀಷ್ಟೆಗಳನ್ನು ನೆರವೇರಿಸಿಕೊಡುವ ಯೋಗಾನರಸಿಂಹ ಸ್ವಾಮಿ, ಪರವಾಸುದೇವ, ತ್ರಿಕೂಟೇಶ್ವರ, ಆಂಜನೇಯ, ಮಾರಿಯಮ್ಮ ಮುಂತಾದ ಅನೇಕ  ದೇವಸ್ಥಾನಗಳು.  ಹೀಗೆ ಗೊರೂರು ಕರ್ನಾಟಕದ ಅನೇಕ ಹಳ್ಳಿಗಳಂತೆ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಂಡಿತ್ತು.  ಮುಂಚಿನಿಂದಲೂ ಗೊರೂರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ಸ್ವಾಮಿಯ ರಥೋತ್ಸವ ಪ್ರಸಿದ್ಧವಾಗಿತ್ತು. ಸುತ್ತಲ ಅನೇಕ ಹಳ್ಳಿಯವರು ಬಂದು ರಥೋತ್ಸವದಲ್ಲಿ ಭಾಗಗೊಂಡು ದೇವಸ್ಥಾನಗಳಲ್ಲಿ ನಡೆಯುವ ಸಮಾರಾಧನೆಯಲ್ಲಿ ಊಟಮಾಡಿ ಸಂತುಷ್ಟರಾಗಿ ಸಂಜೆ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು.  ಸಾಧಾರಣವಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳವರು ಬಂದು ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಿ ಧನ್ಯತೆಯನ್ನುಪಡೆ ಯುತ್ತಿದ್ದರು.  ಆಗಿನಕಾಲದಲ್ಲಿ ಬಸ್ಸು , ಕಾರು ಮುಂತಾದ ಸಾರಿಗೆ ವ್ಯವಸ್ಥೆಗಳು ಇಲ್ಲವಾಗಿದ್ದರಿಂದ ದೂರದ ಬೆಂಗಳೂರು ಮೈಸೂರು ಮುಂತಾದ ಕಡೆಯಿಂದ ಹೆಚ್ಚು ಜನ ಬರುತ್ತಿರಲಿಲ್ಲ.  ಇಳಿದುಕೊಳ್ಳುವುದಕ್ಕೆ ನೆಂಟರ ಮನೆ ಇದ್ದವರು ಮಾತ್ರ ದೂರದ ಊರುಗಳಿಂದ ಬರುತ್ತಿದ್ದರು.  ಹೀಗಾಗಿ ಗೊರೂರು ಬಾಹ್ಯ ಜಗತ್ತಿನ ಪ್ರಭಾವಕ್ಕೆ ಹೆಚ್ಚಾಗಿ ಸಿಕ್ಕದೇ ತನ್ನತನವನ್ನು ಉಳಿಸಿಕೊಂಡಿತ್ತು.  ಇದು ಭಾರತ ದೇಶ ಸ್ವಾತಂತ್ರ ಪಡೆಯುವುದಕ್ಕೆ ಮುಂಚೆ ಇದ್ದ ಗೊರೂರು.  ಈ ಊರಿಗೆ ತನ್ನದೇ ಆದ ಒಂದು ವ್ಯಕ್ತಿತ್ವ ಇತ್ತು.  ಇಂತಹ ಗೊರೂರಿನಲ್ಲಿ 1904 ನೆಯ ಇಸವಿಯಲ್ಲಿ July 4 ನೆಯ ತಾರೀಕು ಒಂದು ಸಂಪ್ರದಾಯಸ್ಥ ಪುರೋಹಿತ ಬ್ರಾಹ್ಮಣ ವಂಶದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸಿದರು. 2.  ಹೇಮಾವತಿ:ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಬರವಣಿಗೆಯಲ್ಲಿ ‘ಹೇಮಾವತಿ ನಮ್ಮ ಊರಿನ ಉಸಿರು ಎಂದಿದ್ದಾರೆ.’  ಅವರು ಹೇಮಾವತಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.  ಹೆಚ್ಚು ಕಡಿಮೆ ಅವರ ಎಲ್ಲಾ ಕೃತಿಗಳೂ ಹೇಮಾವತಿಯ ದೃಷ್ಟಿಕೋನದಿಂದಲೆ ಸ್ಪೂರ್ತಿ ಪಡೆದಂತೆ ತೋರುತ್ತದೆ.  ಅದಲ್ಲದೇ ಹೇಮಾವತಿಯನ್ನೇ ಮುಖ್ಯ ಪಾತ್ರವನ್ನಾಗಿ ಇಟ್ಟುಕೊಂಡು ಅನೇಕ ಪ್ರಬಂಧಗಳನ್ನೂ ಬರೆದಿದ್ದಾರೆ.  ಹೇಮಾವತಿಯ ಸೊಗಸನ್ನು ಗೊರೂರರ ಬರವಣಿಗೆಯಲ್ಲಿ ಓದಿದವರು ನಾವೂ ಹೋಗಿ ಈ ನದಿಯನ್ನು ಈ ಊರನ್ನು ಒಂದು ಸಲ ನೋಡಬೇಕು ಎಂದು ಆಸೆ ಪಡುತ್ತಾರೆ.  ಈಚೆಗೆ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ರೈತರಿಗೆ ಸಮೃದ್ಧವಾಗಿ ನೀರು ದೊರಕಿ ಅವರು ಉತ್ತಮವಾದ ಪೈರು ಬೆಳೆಯಲು ಸಹಾಯಕವಾಗಿದೆ.  ಜನ ಸಂತುಷ್ಟರಾಗಿದ್ದಾರೆ.  ಈ ಅಣೆಕಟ್ಟಿನ ಒಂದು ಕಾಲುವೆಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕಾಲುವೆ ಎಂದು ಹೆಸರಿಡಲಾಗಿದೆ. 3.  ಗೊರೂರು ರಾಮಸ್ವಾಮಿ ಅಯ್ಯಂಗಾರ್: ಇದುವರೆಗೆ ನಾವು ಗೊರೂರು ಮತ್ತು ಹೇಮಾವತಿ ನದಿಯ ವಿಚಾರ ಓದಿದೆವು. ಎರಡೂ ಎಷ್ಟೋ ತಲೆಮಾರುಗಳಿಂದ ಇದ್ದರೂ ಈಚೆಗೆ ಅವುಗಳಿಗೆ ಒಂದು ಹೊಸ ಮೆರಗು ಕೊಟ್ಟಂತಾಗಿದೆ.  ಕಾರಣ ಗೊರೂರರ ಬರಹಗಳು.  ಅವರ ಎಲ್ಲ ಕಥೆಗಳು, ಕಾದಂಬರಿ ಹಾಗೂ ಪ್ರಬಂಧಗಳೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೇಮಾವತಿಯ ಅಸ್ತಿತ್ವದಿಂದ ತುಂಬಿದೆ. ನಾವು ಮಾಡುವ ಎಲ್ಲಾ ಕೆಲಸಗಳ ಹಿನ್ನೆಲೆಯಲ್ಲಿ ತಾಯಿ ಹೇಮಾವತಿ ಹರಿಯುತ್ತಿದ್ದಾಳೆ.  ನಮ್ಮನ್ನು ಆತುಕೊಂಡು ಕಾಪಾಡುತ್ತಾಳೆ ಎಂಬ ಭಾವನೆ ನಂಬಿಕೆಗಳು ಉಂಟಾಗುತ್ತವೆ.  ಗೊರೂರರು ತಮ್ಮ ಸಾಹಿತ್ಯಸೃಷ್ಟಿ ಅಲ್ಲದೇ ಇನ್ನೂ ಅನೇಕ ರೀತಿಯಲ್ಲಿ ದೇಶಸೇವೆ, ರಚನಾತ್ಮಕ ಕಾರ್ಯಗಳನ್ನು ಮಾಡಿದ್ದಾರೆ.  ಅದರಬಗ್ಗೆ ಇನ್ನೊಂದು ಲೇಖನದಲ್ಲಿ ನೋಡೋಣ ನಾನು ಈ ಲೇಖನವನ್ನು ಬರೆಯಲು ತಯಾರಿ ಮಾಡಿಕೊಳ್ಳುತ್ತಿರುವಾಗ ಗೊರೂರು ಗ್ರಾಮದ ವಿಚಾರ ನೋಡೋಣವೆಂದು ಗೂಗಲ್ನಲ್ಲಿ ಹುಡುಕಿದೆ.  ನಾನು ಗೊರೂರು ಎಂದು ಟೈಪ್ ಮಾಡಿದಕೂಡಲೆ ಗೂಗಲ್ನಲ್ಲಿ ಬಂದ ಟೆಕ್ಟ್ ಈರೀತಿ ಇತ್ತು. 1. ಗೊರೂರು ಹಾಸನ ಜಿಲ್ಲೆಯ ಒಂದು ಪ್ರಸಿದ್ಧ ಗ್ರಾಮ.2. ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿದ (ಗೊರೂರು ಅಣೆಕಟ್ಟು, ಹೇಮಾವತಿ ಅಣೆಕಟ್ಟು) ಎಂದು ಹೆಸರುವಾಸಿಯಾಗಿದೆ.3. ಇದು ಪ್ರಖ್ಯಾತ ಕನ್ನಡ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮಸ್ಥಳವಾಗಿದ್ದು ಹಾಸನ ನಗರದಿಂದ 24 ಕಿಲೋಮೀಟರ್ ದೂರದಲ್ಲಿ ಇದೆ.ಇದನ್ನು ಓದಿ ನನಗೆ ಬಹಳ ಆಶ್ಚರ್ಯವುಂಟಾಯಿತು.ಕನ್ನಡದ AI goggle ತಾನಾಗಿಯೇ ಗೊರೂರು, ಹೇಮಾವತಿ ಮತ್ತು ರಾಮಸ್ವಾಮಿ ಅಯ್ಯಂಗಾರ್  ಸಂಬಂಧವನ್ನು  ಗುರುತಿಸಿದೆ.  ಗೂಗಲ್ ಅಲ್ಲಿಂದ ಮುಂದುವರೆದು ಗೊರೂರಿನ ಹಿನ್ನೆಲೆ, ಪರಿಸರ, ಹೇಮಾವತಿ ನದಿ ಮತ್ತು ಅಣೆಕಟ್ಟು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬಗ್ಗೆ ಮಾಹಿತಿ ನೀಡಿದೆ.  ಕನ್ನಡದ ಪ್ರಮುಖ ಹಾಸ್ಯ ಸಾಹಿತಿ, ಶೈಲಿ ಗ್ರಾಮೀಣ, ಉದಾಹರಣೆ ನಮ್ಮ ಊರಿನ ರಸಿಕರು, ಗರುಡಗಂಭದ ದಾಸಯ್ಯ…ಎಂದೆಲ್ಲ ವಿವರಿಸಿದೆ.  ಇದನ್ನು ನೋಡಿ ನನಗೆ ಆಶ್ಚರ್ಯದೊಂದಿಗೆ ಸಂತೋಷವೂ ಆಯಿತು. ಹೀಗೆ ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವು ಒಂದಕ್ಕೊಂದು ಪೂರಕವಾಗಿವೆ.  ಇದು ಅಭೇಧ್ಯ ಸಂಬಂಧ ಎನ್ನಿಸಿದೆ.   ಈಗ ಕಳೆದ ನೂರು ವರ್ಷಗಳಲ್ಲಿ ಹೇಮಾವತಿಯ ಪ್ರಸಿದ್ಧಿ ಶಿಖರಕ್ಕೇರಿದೆ.  ಅದಕ್ಕೆಮುಂಚೆಯೂ ಅವಳು ಜೀವದಾಯಿನಿಯಾಗಿದ್ದಳು.  ಹೇಮಾವತಿ ಎಂಬುದು ಒಂದು ಹೊಸ ಕಲ್ಪನೆ ಅಲ್ಲ.  ಅವಳು ಗೊರೂರಿಗೆ ಮಾತ್ರ ಸೇರಿದವಳಲ್ಲ. ಅವಳು ತನ್ನ ಯಾತ್ರೆಯ ದಾರಿಯಲ್ಲಿ ನೂರಾರು ಹಳ್ಳಿಗಳನ್ನು ಮುಟ್ಟುತ್ತಾಳೆ.  ಆದರೆ ಗೊರೂರು ಎಂದ ಕೂಡಲೇ ಹೇಮಾವತಿ.ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಹೇಮಾವತಿ.  ಗೊರೂರು, ಹೇಮಾವತಿ ಒಂದಿಲ್ಲದೇ ಇನ್ನೊಂದಿಲ್ಲ.  ಅವಳ ಈ ಮಹಿಮೆಯನ್ನು ಜನತೆಯ ಮನಸ್ಸಿಗೆ ಮುಟ್ಟುವಂತೆ ತೋರಿಸಿದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು.  ಅದರಿಂದಲೇ ಅವರನ್ನು ಹೇಮಾವತಿಯ ಚೇತನ ಎಂಬ. ಅನ್ವರ್ಥನಾಮದಿಂದ ಗೌರವಿಸಲಾಗಿದೆ. ಗೊರೂರು ವಸಂತಿ ಮೂರ್ತಿ

“ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್”ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ವಸಂತಿ ಮೂರ್ತಿ ಅವರ ಲೇಖನ Read Post »

ಇತರೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಸಂಸ್ಕೃತಿ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ “ಹಬ್ಬಗಳ ಆಚರಣೆ ಅಂದು ಇಂದು…”   ಹಿಂದೂ ಧಾರ್ಮಿಕತೆ ಸಂಕ್ರಾಂತಿ, ಹೋಳಿ,ಯುಗಾದಿ,ಗಣೇಶ ಚತುರ್ಥಿ, ದಸರಾ,ದೀಪಾವಳಿ ಮುಂತಾದ ಹಬ್ಬಗಳನ್ನೊಳಗೊಂಡಿದೆ.  ಈ ಎಲ್ಲ ಹಬ್ಬಗಳಲ್ಲಿ  ಮೊದಲ ಆಚರಣೆ ಸಂಕ್ರಾಂತಿ. ಅದನ್ನು ಸ್ವಲ್ಪ ವಿವರವಾಗಿ ನೋಡೋಣ.ಸಂಕ್ರಾತಿ ಹಬ್ಬ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳ್ನಾಡು ಮುಂತಾದ ಕಡೆಗಳಲ್ಲಿ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತದೆ.ರೈತರು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲ್ಪಡುವದರಿಂದ ಇದು  ಸಮೃದ್ಧಿಯ ಸಂಕೇತ.               ಸಂಕ್ರಾಂತಿ ಹಬ್ಬವನ್ನು ಎಲ್ಲ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ , ಬೆಳೆ ಪೂಜೆ, ಸೂರ್ಯ ಪೂಜೆ,ನೃತ್ಯ, ಗಾಳಿಪಟ ಹಾರಿಸುವುದು, ನದಿ ಸ್ನಾನ ,ಮುಂತಾದುವುಗಳು. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಹಬ್ಬದ   ದಿನದಿಂದ ಹಗಲು ಜಾಸ್ತಿಯಾಗಿ ರಾತ್ರಿ ಕಡಿಮೆಯಾಗುವುದು.ಅದೇರೀತಿ ಬಿಸಿಲಿನ ತಾಪಮಾನ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ.                ಈ ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು.ಇದು ರೈತರ ಪಾಲಿಗೆ ಸುಗ್ಗಿ ಹಬ್ಬ.ಅಂದರೆ ಅರಿಶಿಣ, ಕಬ್ಬು,ಗೋಧಿ,ಜೋಳ, ಭತ್ತ ಮುಂತಾದ ಭೂಮಿಯ ಮೇಲೆ ಬೆಳೆದ ಇವುಗಳಿಗೆ ಜೀವ ಶಕ್ತಿ  ತುಂಬಿದ ಆ ಸೂರ್ಯ ದೇವನಿಗೆ ಪೂಜೆ ಹಾಗು ನೈವೇದ್ಯದ ಮೂಲಕ ಕೃತಜ್ಞತೆ ಸಮರ್ಪಿಸುವರು.              ಕರ್ನಾಟಕದ ಸಂಕ್ರಾಂತಿಯ ಖಾದ್ಯಗಳು ಎಂತವರಿಗೂ ಬಾಯಲ್ಲಿ ನೀರೂರಿಸುತ್ತವೆ ಹಾಗು ಚಳಿಗಾಲದ ಚಳಿಯಿಂದ ತಣ್ಣಗಾದ ದೇಹವನ್ನು ಬೆಚ್ಚ ಗಿಡಲು ವೈಜ್ಞಾನಿಕ ರೀತಿಯಲ್ಲಿ ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ದೇಹಕ್ಕೆ ಉಷ್ಣತೆ ನೀಡುವ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಶೇಂಗಾ ಮತ್ತು ಎಳ್ಳು ಮಿಶ್ರಣದ ಹೋಳಿಗೆ, ಹೂರಣ ಹೋಳಿಗೆ, ಮಾದಲಿ, ಕಫ ನಿವಾರಿಸುವ ಬದನೆಕಾಯಿ ಭರಿತ ,ಶೇಂಗಾ ಚಟ್ನಿ, ಅಗಸೆ ಚಟ್ನಿ, ಬೆಣ್ಣೆ,ಮೊಸರು, ಜುಣಕದ ವಡಿ, ಮಡಿಕೆ ಕಾಳು ಉಸುಳಿ,ಗಜಿಬಿಜಿ ಪಲ್ಯ,ಪಚಡಿ, ಹುಳಿಬಾನ, ಹೀಗೆ ಹತ್ತು ಹಲವಾರು ಖಾದ್ಯಗಳು.ಇವೆಲ್ಲವನ್ನೂ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹಂಚುವುದರ ಮೂಲಕ ಬಾಂಧವ್ಯ ಬೆಸೆಯಲಾಗುವುದು.           ಸಾಯಂಕಾಲ ಹೊಸ ಬಟ್ಟೆ ತೊಟ್ಟು , ಹಿರಿಯರಿಗೆ ಎಳ್ಳು ಬೆಲ್ಲದ ವಿನಿಮಯದೊಂದಿಗೆ ನಮಸ್ಕಾರ.  ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ, ಎಳ್ಳು ಬೆಲ್ಲ ತೊಗೊಂಡು ಎಳ್ಳು ಬೆಳ್ಳದಂಗಿರೋಣ ಅಂತ ಹೇಳುವುದು.  ಶಾಂತಿ ,ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವೇ ಈ ಮಕರ ಸಂಕ್ರಾಂತಿಯಾಗಿತ್ತು ಅಂದು.                ಇನ್ನು ಹೋಳಿ ಹಬ್ಬ ,ನಾಡಿನಾದ್ಯಂತ ವಸಂತ ಕಾಲದ ಆಗಮನವೆಂದು ಪರಿಗಣಿಸಲಾಗಿದೆ.  ವಿವಿಧ ಬಣ್ಣದ ಓಕುಳಿ ಆಟ ,ಹಲಗೆ ಬರಿಸುವುದು, ಕಾಮ ದಹನ, ಇವೆಲ್ಲವನ್ನೊಳಗೊಂಡಿದೆ. ಅದೇ ರೀತಿ ಯುಗಾದಿ ಹಬ್ಬವನ್ನು ಹಿಂದೂಗಳ ಹೊಸ ವರುಷವೆಂದು ಪರಿಗಣಿಸುತ್ತೇವೆ. ಇದನ್ನು ದೇವರ ಪೂಜೆ, ಹಿರಿಯರ ಪೂಜೆ, ಅಂಗಡಿ ಪೂಜೆಯೊಂದಿಗೆ ಆಚರಿಸಲಾಗುವುದು.  ಅಂಗಡಿಕಾರರು ಹೊಸ ಲೆಕ್ಕ ಪತ್ರ ಪ್ರಾರಂಭಿಸುವರು. ಜೀವನದ ಸಿಹಿ ಕಹಿ ಸಮನಾಗಿ ಕಾಣೋಣ ಅಂತ ಬೇವು ಬೆಲ್ಲ ನೈವೇದ್ಯ ಮಾಡಿ  ಎಲ್ಲರೂ ಸೇವಿಸುವರು.             ಗಣೇಶ್ ಚತುರ್ಥಿಯನ್ನು ನಾಡಿನಾದ್ಯಂತ ಎಲ್ಲೆಡೆ ಆಚರಿಸುವರು. ಮಹಾರಾಷ್ಟ್ರದಲ್ಲಿ ಈ  ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.   ವಿಘ್ನ ನಾಶಕನಾದ ವಿನಾಯಕನಿಗೆ ಧೂಪ, ದೀಪ , ನೈವೇದ್ಯಗಳನ್ನು ಭಕ್ತಿಯಿಂದ ಸಮರ್ಪಿಸುವರು. ಇನ್ನು ನಾಡ  ಹಬ್ಬ ಎಂದು ಕರೆಯುವ ದಸರಾ ಹಬ್ಬವನ್ನು ಹಲವಾರು ದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವರು.ಕರ್ನಾಟಕದ ಮೈಸೂರಿನ ದಸರಾ ಆಚರಣೆ ತುಂಬಾ  ವಿಜೃಂಭಣೆಯಿಂದ ನಡೆಯುತ್ತದೆ. ಹಲವೆಡೆ ನವರಾತ್ರಿಯ ಆಚರಣೆಯ ಮೂಲಕ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುವದು. ಹತ್ತನೇ ದಿವಸ  ರಾವಣನ ಪ್ರತಿಮೆ ದಹನ ಮಾಡುವುದರ ಮೂಲಕ ಶ್ರೀರಾಮನ ವಿಜಯೋತ್ಸವವನ್ನು ಮೆರೆಯಲಾಗುವುದು.                     ವರ್ಷದ ಕೊನೆಯ ಹಬ್ಬವಾಗಿ ದೀಪಾವಳಿಯನ್ನು ಜಗದಾದ್ಯಂತ ಬೆಳಕಿನ ಹಬ್ಬವೆಂದು ಸಂಬ್ರಮಿಸಲಾಗುವದು.  ಐದು ದಿನಗಳ ಹಬ್ಬವಾದ ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬ, ಎರಡನೇ ದಿನ ನರಕಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ, ನಾಲ್ಕನೇ ದಿನ ಬಲಿ ಪಾಡ್ಯ ಹಾಗೂ ಐದನೇ ದಿನ ಕಡೆ ಪಾಡ್ಯ  . ಒಂದೊಂದು ದಿನಕ್ಕೂ  ತನ್ನದೇ ಆದ ಮಹತ್ವ ಇದೆ. ಬಣ್ಣ ಬಣ್ಣದ ರಂಗೋಲಿ, ಹೂವುಗಳ ಅಲಂಕಾರ, ಪೂಜೆ, ಹೊಸ ಬಟ್ಟೆ, ಸಿಹಿ ತಿಂಡಿಗಳ ವಿನಿಮಯ ನವ ವಿವಾಹಿತರಿಗೆ ಪ್ರಾಧಾನ್ಯ. ಮುಂತಾದುವುಗಳನ್ನು ಇಲ್ಲಿ  ಕಾಣಬಹುದು.                      ಆದರೆ ವಿಷಾಧದ ಸಂಗಾತಿ ಎಂದರೆ  ಆಧುನಿಕತೆಯ ಹೆಸರಿನಲ್ಲಿ ಇಂದು ಹಬ್ಬಗಳ ಪ್ರಾಧಾನ್ಯತೆ ಕಡಿಮೆಯಾಗಿದೆ. ನೌಕರಿಯ ಒತ್ತಡದಲ್ಲಿ, ಸಮಯದ ಅಭಾವದಲ್ಲಿ  ಹಬ್ಬಗಳ  ಆಚರಣೆಯ ಹುರುಪು ಉಳಿದಿಲ್ಲ.  ಅವಿಭಕ್ತ ಕುಟುಂಬದಲ್ಲಿ ಎಲ್ಲ ಖಾದ್ಯಗಳನ್ನು ತಯಾರಿಸುತ್ತಿದ್ದರು. ಎಲ್ಲ ಸಂಪ್ರದಾಯಗಳನ್ನು ಸಂಭ್ರಮಿಸುತ್ತಿದ್ದರು.ಈಗಿನ ವಿಭಕ್ತ ಕುಟುಂಬಕ್ಕೆ ಮಾಡುವುದು ತಿನ್ನುವುದು ಎರಡೂ ಗೊತ್ತಿಲ್ಲ.  ಸ್ವಿಗ್ಗಿ, ಜೋಮಾಟೋಗಳಿಂದ ಪಿಜ್ಜಾ,ಬರ್ಗರ್, ಮ್ಯಾಗಿಗಳ ರುಚಿ ಕಂಡೋರಿಗೆ ಮೇಲಿನ ಅಡುಗೆಗಳ ಬೆಲೆಯೇ ಗೊತ್ತಿಲ್ಲ. ಹಬ್ಬದ ಸಿಹಿ ತಿಂಡಿಗಳು ಕೂಡಾ  ಆನ್ಲೈನ್ನಲ್ಲಿಯೇ ತರಿಸುವರು .ಸಂಕ್ರಾಂತಿಯ ಎಳ್ಳು ಬೆಲ್ಲದ ವಿನಿಮಯದಿಂದ  ಹಿಡಿದು ದೀಪಾವಳಿಯ ಸಿಹಿ ತಿಂಡಿಗಳು ಕೂಡಾ ವಾಟ್ಸಾಪ್ನಲ್ಲಿಯೇ ಹಂಚಲಾಗುವುದು. ಹಿರಿಯರ ನಮಸ್ಕಾರ ,        ಆಶೀರ್ವಾದವಂತೂ ತುಂಬಾ ದೂರದ ಮಾತು. ಯಾರಿಗೂ ಉತ್ಸಾಹನೂ ಇಲ್ಲ , ಆಸಕ್ತಿನೂ ಇಲ್ಲ.  ಯುವ ಜನಾಂಗದ ಸೌಹಾರ್ಧ ಭಾವ ಮೆರೆಯುವ ಎಲ್ಲ ಸಂಸ್ಕಾರ ಮತ್ತು ಸಂಪ್ರದಾಯಗಳೂ  ದಿನೇ ದಿನೇ ಮರೆಯಾಗುತ್ತಿವೆ.  ಪ್ರೊ .ರಾಜೇಶ್ವರಿ ಶೀಲವಂತ ಪುಣೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಶೂನ್ಯದ ಸವಿ” ನಿದ್ದೆ ಸುಲಭದಿ ಒಲಿದರೆ ವರಕಳೆವುದು ಬಾಳಿನ ದಿನದ ಭಾರಕನಸ ಕಂಗಳಿಗೆ ಈತ ಸರದಾರಮಂಜಿನಷ್ಟು ಈಗ ಮನ ಹಗುರ. ಕುಳಿತಲ್ಲೇ ತೂಕಡಿಕೆಯ ತಡವರಿಕೆಬೇಸರ ತೀರದ ಬವಣೆಯ ಹರಕೆತಂಗಾಳಿಯ ಸವಿಯ ಬೀಸಣಿಕೆಇರದು ಸಂಕೋಲೆಗಳ ಎಣಿಕೆ. ಜಗವ ಮರೆತು ಶೂನ್ಯವಾಗಿಕಂಡ ಕಲ್ಪನೆಯ ಮಗುವಾಗಿಹಿತವಾಗಿ ಉಸಿರನೇರಿ ಸಾಗಿರೋಗಿಯೂ ಆಗುವನು ಭೋಗಿ. ಕಾಯಕ್ಕಿರಲಿ ವಿರಾಮದ ಜಾಗನಿರಂತರತೆ ತರುವುದು ರೋಗಅಲ್ಪಕಾಲದ ಈ ವೈಭೋಗಸಿಗದಿದ್ದರೆ ಇರದು ಸುಯೋಗ. ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ”

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಜಗದ ಕವಿ” ಓ ಕವಿ ನಾಯಕ ಕುವೆಂಪುನೀವ ಬರೆದ ಕವನಗಳ ಇಂಪುನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪುಪಸರಿಸಿದೆ ಹಾವ ಭಾವಗಳ ಕಂಪು| ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|ಪದಪುಂಜ ನಾದದ ‘ಕೊಳಲು’ಗೆಮೊಳಗಿತು ‘ಪಾಂಚಜನ್ಯ’|ಕನ್ನಡವಾಯಿತು ಧನ್ಯ| ಕನ್ನಡ ನಿಸರ್ಗದಲ್ಲಿಮೂಡಿಬಂದ ‘ಪಕ್ಷಿ ಕಾಶಿ’|ಕನ್ನಡ ಮಾತೆಯ ಮಡಿಲಲ್ಲಿಬೆಳದ  ‘ಷೋಡಶಿ’ ಕನ್ನಡ ಸಾಗರದ ಆಳದಿಂದಹೊರಬಂದ ಮುತ್ತು|ನೀಡಿದ್ದು ನಮ್ಮಗೆಲ್ಲಶಾಶ್ವತ ಸಾಹಿತ್ಯ ಸೊತ್ತು| ಅಮೋಘ ಸೇವೆಯ ಫಲದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|ತಾವು ಎಂದೆಂದು ಮರೆಯಾಲಗದಕನ್ನಡ ಕುಲಕೋಟಿಯ ಆಸ್ತಿ |        ಶ್ರೀದೇವಿ ಗುಮ್ಮಗೋಳ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ” Read Post »

ಕಾವ್ಯಯಾನ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ”

ಕಾವ್ಯ ಸಂಗಾತಿ ಡಾ. ಡೋ. ನಾ. ವೆಂಕಟೇಶ “ಮತ್ತೊಂದು ಶ್ರೀಕಾರ” ನನ್ನಿಂದಾಗುವುದಿಲ್ಲಗೆಳೆಯಾ ಈಗೀಗಬರೆಯಲಿಕ್ಕೆ ಕೊಟ್ಟ ಈ ಚಿತ್ರಕ್ಕೆ ಆ ವಿಚಿತ್ರಕ್ಕೆ! ಹೂ ಹಣ್ಣು ಗಿರಿ ಪಂಕ್ತಿಗಳ ಜಾಡುಹಕ್ಕಿ ಪಿಕ್ಕಿಗಳ ನೃತ್ಯಮನುಜರ ಕೃತ್ಯರಕ್ಕಸರ ಕುಕೃತ್ಯ ಕುರಿತೋದದ ಜೀವನ ಕಹಳೆಗಳುಕೇಳರಿಯದ ಸುಗಂಧದ ಚೆಂದಹೂವಿನ ಪಕಳೆಆಕಾಶದ ನಕ್ಷತ್ರ ರಾತ್ರಿ ಹಗಲುಗನಸು ಹಾಗೂಮತ್ತಷ್ಟು ಬ್ರಹ್ಮಾಂಡಗಳು! ಹೇಗೆ ಬರೆಯಲಿ ಗೆಳೆಯ ಉದ್ದುದ್ದ ಸಾಲುಗಳುನಿರ್ಮೋಹಿ ಮನಸುಗಳುನಿರ್ದಯ ಕನಸುಗಳುಅಗಮ್ಯ ಅನೂಚನ ಕಾಯಗಳುಬಾಡಿದ ಮೊಗ್ಗುಗಳು. ಹೇಗೆ ಬರೆಯಲಿ ಕಥೆಶಾಯಿ ಮುಗಿಯುವ ಮುನ್ನಬರೆದ ಲೆಕ್ಕಣಿಕೆ ಮುರಿದು ಹೋಗುವ ಮುನ್ನ? ಮತ್ತಷ್ಟುಕವನ ಕಗ್ಗಂಟು ಮುಗ್ಗಂಟುಧಾರಾವಾಹಿಯಾಗಿ ಹೊಸತೊಂದು ಅಧ್ಯಾಯಹೊಸೆಯುವ ಮುನ್ನ-ಹೇಗೆ ಹಾಡಲಿ ಹೊಸ ರಾಗ! ಹೇಗೆ ಬರೆಯಲಿ ಚಿನ್ನಮತ್ತೊಂದು ಶ್ರೀಕಾರಕ್ಕೆಚೆನ್ನುಡಿ ಹಾಕುವ ಮುನ್ನಕ್ಕೆ! ಡಾ. ಡೋ. ನಾ. ವೆಂಕಟೇಶ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ” Read Post »

ಅನುವಾದ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ

ಅನುವಾದ ಸಂಗಾತಿ ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆಮನಕ್ಕೆ ನೆನಹಾಗಿ ಕಾಡಿತ್ತು ಮಾಯೆನೆನಹಿಗೆ ಅರಿವಾಗಿ ಕಾಡಿತ್ತು ಮಾಯೆಅರಿವಿಗೆ ಮರೆವಾಗಿ ಕಾಡಿತ್ತು ಮಾಯೆಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು. Illusion had haunted the body as shadowIllusion had haunted the life as mindIllusion had haunted the mind as memoryIllusion had haunted the memory as knowledgeIllusion had haunted the knowledge as oblivionIllusion had haunted the masses of the world rasing the fire stickChennamallikarjuna, no-one should win the illusion that you build. உடலுக்கு நிழலாய் இடற்படுத்தது மாயைஉயிருக்கு மணமாய் இடர்படுத்தது மாயைமனசுக்கு நினைவாய் இடற்படுத்தது மாயைநினைவுக்கு அறிவாய் இடற்படுத்தது மாயைஅறிவுக்கு மரதியாய் இடற்படுத்தது மாயைஉலகத்தின் திரளுக்கு தீவட்டியாய் எடுத்துஇடற்படுத்தது மாயைசெண்ணமல்லிகார்ஜுனா, நீ தந்த மாயேயை யாருக்கும் வெற்றிக்கொள்ளக்கூடாது ಉಡಲುಕ್ಕು ನಿಳಲಾಯ್ ಇಡರ್ಪಡುತ್ತದು ಮಾಯೈಉಯಿರುಕ್ಕು ಮನಮಾಯ್ ಇಡರ್ಪಡುತ್ತದು ಮಾಯೈಮನಸುಕ್ಕು ನಿನೈವಾಯ್ ಇಡರ್ಪಡುತ್ತದು ಮಾಯೈನಿನೈವುಕ್ಕು ಅರಿವಾಯ್ ಇಡರ್ಪಡುತ್ತದು ಮಾಯೈಅರಿವುಕ್ಕು ಮರತಿಯಾಯ್ ಇಡರ್ಪಡುತ್ತದು ಮಾಯೈಉಲಗತ್ತಿನ್ ತಿರಳುಕ್ಕು ತೀವಟ್ಟಿಯಾಯ್ ಎಡುತ್ತು ಇಡರ್ಪಡುತ್ತದು ಮಾಯೈಚೆನ್ನಲ್ಲಿಕಾರ್ಜುನಾ, ನೀ ತಂದ ಮಾಯೆಯೈ ಯಾರುಕ್ಕುಂ ವೆಟ್ರಿಕ್ಕೊಳ್ಳಕ್ಕೂಡಾದು ಅಕ್ಕ ಮಹಾದೇವಿಯ ವಚನಅನುವಾದ : ಶಶಿಕಲಾ ಪಿ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ Read Post »

You cannot copy content of this page

Scroll to Top