ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ.

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ”                                                   ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಮರ್ಥ್ಯ ತನ್ನ ಇರುವಿಕೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸಾಮರ್ಥ್ಯವಿಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನೂ ಚೆನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸಮರ್ಥನಾದವನ ಕೆಲಸದ  ಗುಣಮಟ್ಟ ಸೂಜಿಗಲ್ಲಿನಂತೆ  ಸೆಳೆಯುತ್ತದೆ. ಸಾಮರ್ಥ್ಯವೆನ್ನುವುದು ಒಮ್ಮಿಂದೊಮ್ಮೆಲೇ ಉದ್ಭವಿಸುವುದಿಲ್ಲ. ಶ್ರದ್ಧೆಯಿಂದ, ನಿರಂತರವಾಗಿ, ಕಷ್ಟ ಪಟ್ಟು ಶ್ರಮವಹಿಸಿದಾಗ ಮಾತ್ರ ಒಲಿಯುವಂಥದ್ದು. ಮಾನವನ ಅತ್ಯಂತ ಅಗತ್ಯಗಳಲ್ಲಿ ಸಾಮರ್ಥ್ಯ ಅಗ್ರಸ್ಥಾನ ಪಡೆಯುತ್ತದೆ. ಉಪ್ಪಿಲ್ಲದೇ ಅಡುಗೆಯಿಲ್ಲ ಹಾಗೆಯೇ ಸಾಮರ್ಥ್ಯವಿಲ್ಲದೇ ಜೀವನದಲ್ಲಿ ಏನೂ ಇಲ್ಲ. ‘ನಾವು ಕಲಿಯುವುದನ್ನು ಬಿಟ್ಟರೆ ಕೆಲವು ರೀತಿಯಲ್ಲಿ ಸಾಯಲು ಪ್ರಾರಂಭಿಸುತ್ತೇವೆ.’ ನಾವು ಯಾವುದೇ ಪದವಿಯನ್ನು ಗಳಿಸಿದ್ದರೂ ಅಥವಾ ನಮ್ಮ ಹೆಸರಿನ ನಂತರ ಯಾವುದೇ ಮೊದಲಕ್ಷರಗಳು ಬಂದರೂ, ಪ್ರತಿದಿನವೂ ನಾವು ಸಾಮರ್ಥ್ಯವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೇಗೆ ಕಲಿಯುವುದು? ಸಾಮಾನ್ಯನನ್ನು ಅಸಾಮಾನ್ಯನಾಗಿಸುವುದೇ ಸಾಮರ್ಥ್ಯ. ಜಗದ ಬಹುತೇಕ ಸಾಧಕರು ಸಾಧಿಸಿದ ಅತ್ಯದ್ಭುತ ಗೆಲುವು ಅವರ ಸಾಮರ್ಥ್ಯದಿಂದಲೇ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸಾಮರ್ಥ್ಯದ ಸದುಪಯೋಗ ಪ್ರಗತಿಗೆ ದಾರಿ. ಸಮರ್ಥರಾದವರು ಜಗತ್ತಿನ ಎಲ್ಲ ವಸ್ತುಗಳಿಂದಲೂ  ಕಲಿಯುವ  ಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತಾರೆ. ಇದನ್ನೇ ವರಕವಿ ಬೇಂದ್ರೆ ‘ಜಾಣನಾದವನು ಕೋಣನಿಂದಲೂ ಕಲಿಯಬಲ್ಲ.’ ಎಂದು ಹೇಳಿದ್ದಾರೆ. ‘ನಾನು ವಾಚಾಳಿಗಳಿಂದ ಮೌನವನ್ನೂ, ಅಸಹನೆಯ ವ್ಯಕ್ತಿಗಳಿಂದ ಸಹನೆಯನ್ನೂ ಕ್ರೂರಿಗಳಿಂದ ಕರುಣೆಯನ್ನು ಕಲಿತಿದ್ದೇನೆ.’ ಎನ್ನುತ್ತಾನೆ ಜಗತ್ಪ್ರಸಿದ್ಧಚಿಂತಕ ಖಲಿಲ್ ಗಿಬ್ರಾನ್.ಇದನ್ನೇ ಸರ್ವಜ್ಞನ ಒಂದು ವಚನದಲ್ಲಿ ನೋಡಿದರೆ,“ಸರ್ವಜ್ಞನೇನು ಗರ್ವದಿಂದ ಆದವನೆಸರ್ವರೊಳಗೆಒಂದೊಂದು ನುಡಿಗಲಿತುವಿದ್ಯದಾ ಪರ್ವತವೇ ಆದ ಸರ್ವಜ್ಞ .”ಸರ್ವಜ್ಞನ ಪ್ರಕಾರ ಬೇರೆ ಬೇರೆ ವ್ಯಕ್ತಿಗಳಲ್ಲಿ ಪ್ರಾಣಿಗಳಲ್ಲಿ ಬೇರೆ ಬೇರೆ ಉತ್ತಮ ಸಂಗತಿಗಳು ಇರುತ್ತವೆ. ಅವುಗಳನ್ನು ಅಹಂ ಬಿಟ್ಟು ಕಲಿಯಬೇಕೆಂಬುದು ಸ್ಪಷವಾಗಿ ತಿಳಿಯುತ್ತದೆ. ಮೊದಲ ಹೆಜ್ಜೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೊದಲ ಹೆಜ್ಜೆ ನೀವು ಇನ್ನೂ ತಲುಪಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ನೀವು ಬೆಳೆಯಲು ಯಾವುದೇ ಸ್ಥಳವಿಲ್ಲ ಎಂದು ನೀವು ಭಾವಿಸಿದರೆ, ನೀವು ಬೆಳೆಯುವುದಿಲ್ಲ. ನಿಮ್ಮ ಜೀವನದಲ್ಲಿ ಸುಧಾರಣೆಗೆ ಕ್ಷೇತ್ರಗಳಿವೆ ಎಂದು ನೀವು ಒಮ್ಮೆ ನೋಡಿದ ನಂತರ ಆ ಕ್ಷೇತ್ರಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ತುಂಬಾ ಸರಳವಾಗಿದೆ. ಪರಿಗಣಿಸಿ ಯಶಸ್ಸಿನ ಪ್ರಮುಖ ಅಧಿಕಾರಿ ನೆಪೊಲಿಯನ್ ಹಿಲ್ ಹೇಳಿದರು, ’ಪ್ರತಿಯೊಂದು ಪ್ರತಿಕೂಲತೆಯು ಅದರೊಂದಿಗೆ ಸಮಾನ ಪ್ರಯೋಜನದ ಬೀಜವನ್ನು ತರುತ್ತದೆ.’ನೀವು ಪ್ರತಿಯೊಂದು ಸಂಘರ್ಷ, ಪ್ರತಿ ವಿಳಂಬ ಮತ್ತು ಪ್ರತಿ ಹತಾಶೆಯನ್ನು ಈ ಬೆಳಕಿನಲ್ಲಿ ನೋಡಲು ಸಿದ್ಧರಿದ್ದರೆ ನಿಮ್ಮ ಇಡೀ ಜೀವನವು ಕಲಿಕೆಯ ಅವಕಾಶವಾಗುತ್ತದೆ. ಸಾಮರ್ಥ್ಯವು ಇನ್ನಿಲ್ಲದಂತೆ ಬೆಳೆಯುತ್ತದೆ. ನಾಯಕರು ಹುಟ್ಟಿನಿಂದಲೇ ಯಾರೂ ನಾಯಕರು ಆಗಿಲ್ಲ. ನಾಯಕನ ಸಾಮರ್ಥ್ಯವನ್ನು ಬೆಳೆಸಿಕೊಂಡೇ ನಾಯಕರಾಗಿದ್ದಾರೆ. ನಾಯಕ ತನ್ನ ಸಾಮರ್ಥ್ಯದಿಂದ ಕೇವಲ ವ್ಯಕ್ತಿಯಾಗುವುದಿಲ್ಲ. ದೊಡ್ಡದೊಂದು ಶಕ್ತಿಯಾಗಿ ಬೆಳೆಯುತ್ತಾನೆ. ಪ್ರಬಲ ನಾಯಕರು ಚಿಂತಕರು ಅವರ ಹಿಂಬಾಲಕರ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ನಿಮಗಿಂತ ಹೆಚ್ಚು ಯಶಸ್ವಿ ಹೆಚ್ಚು ಸಮರ್ಥ ಮತ್ತು ಹೆಚ್ಚು ಅರ್ಹತೆ ಹೊಂದಿರುವ ಜನರೊಂದಿಗೆ ನೀವಿದ್ದರೆ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು ಖಚಿತ. ಬಹುತೇಕ ಪ್ರತಿಯೊಬ್ಬ ನಾಯಕನು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಗದರ್ಶಕನನ್ನು ಹೊಂದಿಯೇ ಇರುತ್ತಾನೆ. ನೀವು ಬಯಸಿದರೆ ಅದು ಸಿಕ್ಕೇ ಸಿಗುತ್ತದೆ. ದೌರ್ಬಲ್ಯ ಸಾಮರ್ಥ್ಯ ನಮ್ಮಲ್ಲಿರುವ ಮನೋಶಕ್ತಿಯನ್ನು ಸೂಚಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಬದುಕಿಗೆ ಅರ್ಥ ನೀಡುತ್ತದೆ. ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳು ಹಿನ್ನೆಡೆಯನ್ನು ಸಮಸ್ಯೆ ಎಂದು ಕರೆಯದೇ ಅದನ್ನು ತಮ್ಮ ಸಾಮರ್ಥ್ಯವನ್ನು ಎತ್ತರಕ್ಕೇರಿಸಲು ಬಳಸಿಕೊಂಡಿದ್ದಾರೆ. ಸದಾ ನಮ್ಮನ್ನು ಹಿಂಬಾಲಿಸುವ ನೆರಳನ್ನು ಬೆಳಕಿಗೊಡ್ಡಿದರೆ ಮಾಯವಾಗುತ್ತದೆ. ಅದೇ ರೀತಿ ವೈಯುಕ್ತಿಕ ದೌರ್ಬಲ್ಯಗಳನ್ನು ಗುರುತಿಸಿ ಆ ಕುರಿತು ಕಾರ್ಯಪ್ರವೃತ್ತರಾದಾಗ ಪ್ರಾಬಲ್ಯ ಮೆರೆಯಬಹುದು.ತನ್ಮೂಲಕ ಟೀಕಾಕಾರರ ಮುಂದೆಯೂ ತಲೆಯೆತ್ತಿ ನಿಲ್ಲಬಹುದು. ಸಮಯ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಟಿವಿ ನೋಡುವುದು ಅಥವಾ ವಿಡಿಯೋಗಳು ಟ್ರಾಫಿಕ್ ನಲ್ಲಿ ಕುಳಿತುಕೊಳ್ಳುವುದು ಸಭೆ ಪ್ರಾರಂಭವಾಗಲು ಕಾಯುವುದು ಇನ್ನೂ ಮುಂತಾದ ಅರ್ಥಹೀನ ಕೆಲಸಗಳನ್ನು ಮಾಡುತ್ತ ಸಮಯ ವ್ಯರ್ಥವಾಗುತ್ತದೆ. ಕಾರಿನಲ್ಲಿ ಹೋಗುವಾಗ ಪಾಡ್ ಕ್ಯಾಸ್ಟ್ಗಳನ್ನು ಕೇಳುವ ಮೂಲಕ, ಆ ಖಿನ್ನತೆಯ ಕ್ಷಣಗಳಿಂದಾಗಿ ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಪ್ರಸ್ತಕಗಳನ್ನು ಲೋಡ್ ಮಾಡುವ ಮೂಲಕ, ಅವುಗಳನ್ನು ಆಲಿಸಿದರೆ ಜ್ಞಾನ ವೃದ್ಧಿಯಾಗುವುದು. ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವುದು. ವ್ಯರ್ಥ ಕ್ಷಣಗಳ ಲಾಭ ಪಡೆಯಲು ಉಪಯೋಗಿಸಿ. ಇದರಿಂದ ಸಾಮರ್ಥ್ಯ ದಿನೇ ದಿನೇ ಬೆಳೆಯುತ್ತ ಹೋಗುವುದು ಖಂಡಿತ. ತಂತ್ರಜ್ಞಾನ “ಒಳ್ಳೆಯ ಪುಸ್ತಕಗಳನ್ನು ಓದದ ಮನುಷ್ಯನಿಗೆ ಅವುಗಳನ್ನು ಓದಲು ಬಾರದ ಮನುಷ್ಯನಿಗಿಂತ ಯಾವುದೇ ಅನುಕೂಲವಿಲ್ಲ.” ಎಂದು ಮಾರ್ಕ್ ಟ್ವೇನ್ ಹೇಳಿದ್ದಾನೆ. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ. ನಿಮಗೆ ಸವಾಲು ಹಾಕುವ ಪುಸ್ತಕಗಳನ್ನು ಓದಿ. ಇತ್ತೀಚಿಗೆ ಪುಸ್ತಕಗಳನ್ನು ಕೇಳುವ ಅವಕಾಶ ತಂತ್ರಜ್ಞಾನದಿಂದ ಲಭಿಸಿದೆ. ಇದರಿಂದ ಒಂದೇ ಕಡೆ ಕುಳಿತು ಓದಬೇಕಂತಿಲ್ಲ. ಪುಸ್ತಕಗಳನ್ನು ಆಲಿಸಿ ಅದರಲ್ಲಿನ ತಿರುಳನ್ನು ತಿಳಿಯಬಹುದು. ತಂತ್ರಜ್ಞಾನವು ನಿರಂತರವಾಗಿ ಸುಧಾರಿಸುತ್ತಿದೆ. ಕಲಿಯಲು ಅದು ಒದಗಿಸುವ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಸಮಸ್ಯೆಗಳು ಶಕ್ತಿಯ ಮಿತಿಯಾಚೆಗಿರುವ  ಸಮಸ್ಯೆಗಳು ಎಂದು ಭಾವಿಸಿರುವಂಥವು  ನಮ್ಮ ಅಸಾಮರ್ಥ್ಯದ ನೆಪದಲ್ಲಿ ಅಟ್ಟಹಾಸ ಮೆರೆಯುತ್ತಿರುತ್ತವೆ. ನಿಜ ಹೇಳಬೇಕೆಂದರೆ ಇಂಥ ತಲೆ ಕೆಡಿಸುವ ಸಂಗತಿಗಳೇ ನಾವು ಹೆಚ್ಚೆಚ್ಚು ಸಮರ್ಥರಾಗಲು ದೊಡ್ಡ ಅವಕಾಶಗಳಾಗುತ್ತವೆ. ‘ಇತರರ ಬಗ್ಗೆ ನಮ್ಮಲ್ಲಿ ಕಿರಿಕಿರಿ ಉಂಟು ಮಾಡುವ ಸಂಗತಿಗಳು ನಮ್ಮನ್ನು ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಬಹುದು.’  ಎಂದೊಮ್ಮೆ ಪ್ರಸಿದ್ಧಮನಃಶಾಸ್ತ್ರಜ್ಞ ಕಾರ್ಲಜಂಗ್ ಹೇಳಿದ್ದ ಮಾತು ದಿಟವಾದುದು. ಜ್ಞಾಪಿಸಿಕೊಳ್ಳಿ ನಾನು ಸಾಮಾನ್ಯ ನನ್ನಲ್ಲಿ ಹೇಳಿಕೊಳ್ಳುವ ಸಾಮರ್ಥ್ಯಗಳು ಯಾವವೂ ಇಲ್ಲ ಎಂದುಕೊಳ್ಳುವಾಗ ‘ನೀವು ಏನೂ ಪರಿಣಾಮ ಬೀರಲು ಸಾಧ್ಯವಾಗದಷ್ಟು ಸಣ್ಣವರೆಂದು ಭಾವಿಸಿಕೊಳ್ಳುವುದಾದರೆ ಸೊಳ್ಳೆ ಪರದೆಯೊಳಗಿರುವ ಸೊಳ್ಳೆಯನ್ನು ಜ್ಞಾಪಿಸಿಕೊಳ್ಳಿ” ಎಂದು ಮಾರ್ಮಿಕವಾಗಿ ಹೇಳಿದ್ದಾಳೆ ‘ದ ಬಾಡಿ ಶಾಪ್’ನ ಸಂಸ್ಥಾಪಕಿ ಅನಿತಾ ರಾಡಿಕ್. ಆಯ್ಕೆ ಹದ್ದು ಬಾನೆತ್ತರಕ್ಕೆ ಹಾರಬಲ್ಲದು.. ಇರುವೆ ಅತೀ ಚಿಕ್ಕದಾದರೂ, ತನ್ನ ತೂಕಕ್ಕಿಂತ ಹೆಚ್ಚು ಪಟ್ಟು ವಸ್ತುವನ್ನು ಹೊತ್ತೊಯ್ಯುವ ಸಾಮರ್ಥ್ಯ ಗಳಿಸಿಕೊಂಡಿದೆ. ಏನೆಲ್ಲವನ್ನು ದಕ್ಷತೆಯಿಂದ ನಿರ್ವಹಿಸಲು ನಾನು ಸಮರ್ಥ ಎಂಬ ಅಹಂಭಾವ ತಲೆಗೇರಿದರೆ ರಿಚರ್ಡ್ ಕ್ಯಾರಿಯನ್ ಹೇಳಿದಂತೆ, ‘ಯಶಸ್ಸು ಸೋಲನ್ನೂ ಸೃಷ್ಟಿಸುತ್ತದೆ.’ ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆಯೇ ಸರಿ. ನಮ್ಮಲ್ಲಿರುವ ಶಕ್ತಿಯನ್ನು ನಾವೇ ನಿರಾಕರಿಸುವುದು ಅಸಮರ್ಥತೆ. ಅಸಮರ್ಥರಾಗಿ ವೈಫಲ್ಯಗಳಿಗೆ ಬಲಿಪಶುಗಳಾಗುವುದಕ್ಕಿಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗುವುದು ಉತ್ತಮ. ಆಯ್ಕೆ ನಮ್ಮ ಕೈಯಲ್ಲಿದೆ. ಜಯಶ್ರೀ ಜೆ ಅಬ್ಬಿಗೇರಿ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ. Read Post »

ಇತರೆ, ಪರಿಸರ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ.

ಪರಿಸರ ಸಂಗಾತಿ “ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. ‘ಬರದೆಡೆಗೆ ಹಸಿರಿಡುವ’ ಎನ್ನುವ ಪರಿಕಲ್ಪನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಆಲೋಚನೆ ಮಾಡಿದಾಗ, ಬೇರೆ ಬೇರೆ ವಿಚಾರಗಳು ಹೊಳೆಯುತ್ತವೆ. ಬರ ಎಂದರೆ ಬೇಕಾದದ್ದು ಸಿಗದೇ ಇರುವುದು, ಕೊರತೆ ಕಾಣಿಸುವುದು ಎಂದರ್ಥ. ಮಳೆ ಬಾರದೆ, ಬೆಳೆ ಬೆಳೆಯದೆ, ಹಸಿರು ಕಾಣದೆ ಭುವಿಯಲ್ಲಿ ಜೀವಿಗಳು ಬದುಕಲು ಬೇಕಾದ ಎಲ್ಲದರ ಕೊರತೆ ಉಂಟಾಗುವುದೇ ಬರ. ಆ ಬರ ಬರುವಂತಹ ಭುವಿಯಲ್ಲಿ ಹಸಿರಿಟ್ಟರೆ,ಆ ಹಸಿರಿನಿಂದ ಜೀವಸಂಕುಲ ಉಸಿರಾಡುತ್ತಲೇ, ಭುವಿಯಲ್ಲಿ ಆರೋಗ್ಯಯುತವಾಗಿ ಕಾಲ ಕಳೆಯಬಹುದು ಎಂಬುದು ಒಂದು ಆಯಾಮ. ಇನ್ನೊಂದು ರೀತಿಯಲ್ಲಿ ಬರವನ್ನು ಪ್ರೀತಿಯ ಬರ ಎಂದು ಕೂಡ ತೆಗೆದುಕೊಳ್ಳಬಹುದು ಅಥವಾ ಸಂಸ್ಕಾರದ ಪರ ಎಂದು ಕೂಡ ಊಹಿಸಬಹುದು.ಮೊದಲನೆಯದು ಅಂದರೆ ಬರಡು ನೆಲದಲ್ಲಿ ಹಸಿರಿಡುವ, ಮರಗಳ ಗಿಡಗಳನ್ನು ನೆಡುವ, ಜೀವಸಂಕುಲವನ್ನು ಪೋಷಿಸುವ ಕೆಲಸವು ಅಗತ್ಯವಾಗಿಯೇ ಆಗಬೇಕಾಗಿದೆ.ಮನುಷ್ಯನಿಗೆ ಅಥವಾ ಜೀವಿಗಳಿಗೆ ಉಸಿರಾಡಲು ಬೇಕಾದ ಶುದ್ಧ ಗಾಳಿಯ ಬರ ಇವತ್ತು ಭುವಿಯಲ್ಲಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿದರೆ ಮಳೆಯು ಚೆನ್ನಾಗಿ ಸುರಿದು, ಭುವಿಯು ಮತ್ತಷ್ಟು ಹಸಿರಾಗಿ, ಪ್ರಾಣಿಗಳು,ಮನುಷ್ಯರು ಮತ್ತು ಸಸ್ಯಗಳು ಚೆನ್ನಾಗಿ ಬದುಕುವಂತಹ ವಾತಾವರಣವನ್ನು ಕಲ್ಪಿಸಬಹುದು. ಹಾಗಾಗಿ ಪ್ರಸ್ತುತ ಮಲಿನಗೊಂಡ ಪರಿಸರದಲ್ಲಿ,ನಾವು ಪರಿಸರವನ್ನು ಸ್ವಚ್ಛ ಮಾಡಿ ಹಸಿರನ್ನು ಬೆಳೆಸಿದರೆ ಅದು ವಾಸಿಸಲು ಯೋಗ್ಯವಾದ ಪರಿಸರವಾಗುವುದಲ್ಲದೆ, ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸಿದರೆ, ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮನಸು ಅಹ್ಲಾದಕರವಾಗಿರುತ್ತದೆ.ಸ್ವಚ್ಛ ಪರಿಸರದಿಂದ ಸತ್ವಯುತವಾದ ಬೆಳೆಗಳು ಬೆಳೆದರೆ,ಅದು ಮನುಷ್ಯನ ಆಹಾರವಾಗಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ .  ಶುದ್ಧ ಗಾಳಿಯ ಬರದ ಕಡೆಗೆ ಹಸಿರಿಡಿಸುವ ಕೆಲಸ ಮುಗಿದ ಮೇಲೆ, ಮನುಷ್ಯನ ಮನಸ್ಸಲ್ಲಿ ಹಸಿರಿಡುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ನಾವು ಕಂಡುಕೊಂಡಂತೆ ಮನುಷ್ಯನಲ್ಲಿ ಮಾನವೀಯತೆಗೆ ಬರ ಬಂದಿದೆ.”ಮಾನವೀಯತೆ ಇಲ್ಲದ ಮನುಷ್ಯ ಪಶುವಿಗೆ ಸಮಾನ”ನಮ್ಮ ಮನಸ್ಸು ಬೇರೆಯವರ ಕಷ್ಟಕ್ಕೆ ಬೇರೆಯವರ ದುಃಖಕ್ಕೆ ಮಿಡಿಯಬೇಕು.ಅವರ ಕಷ್ಟದಲ್ಲಿ ಸಮಭಾಗಿಗಳಾಗಿ ಎದುರಿಸುವ ಎದೆಗಾರಿಕೆ ನಮ್ಮಲ್ಲಿರಬೇಕು. ಮನೆಯವರೊಂದಿಗೆ ನೆರೆಕೆರೆಯವರೊಂದಿಗೆ ಹಾಗೂ ಇತರರೊಂದಿಗೆ ದ್ವೇಷ- ರೋಷವನ್ನು ಬೆಳೆಸದೆ, ಒಂದಾಗಿ ಬೆರೆತು, ಕೋಪ ತಾಪವನ್ನು ಮರೆತು, ಪ್ರೀತಿ ಪ್ರೇಮವು ಬಲಿತು,ಹಸಿರಿಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಲೇಬೇಕಾಗಿದೆ . ಇನ್ನೂ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತಿನಂತೆ ನಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದಲೇ ಕಾಣಬೇಕು.ಈಗ “ಮಕ್ಕಳಿಗೆ ಹೊಟ್ಟೆಯ ಹಸಿವೆ ಗಿಂತ ಪ್ರೀತಿಯ ಹಸಿವೆಯೇ ಜಾಸ್ತಿ” ಆದಂತೆ ಕಂಡುಬರುತ್ತದೆ. ಪ್ರೀತಿಗೆ ಬರ ಎಲ್ಲೆಲ್ಲಿದೆಯೋ ಗಮನಿಸಬೇಕಾದ ಅನಿವಾರ್ಯತೆ ಇದೆ. ಪ್ರೀತಿಗೆ ಬರ ಇದ್ದಲ್ಲೆಲ್ಲ ಪ್ರೀತಿಯನ್ನು ಕೊಡುವ  ಮೂಲಕ, ಮಕ್ಕಳನ್ನು ಸಮಾಜದ ಯೋಗ್ಯ ಪ್ರಜೆಗಳನ್ನಾಗಿಸುವ ಜವಾಬ್ದಾರಿ ನಮ್ಮದಲ್ಲವೇ? ಹಾಗಾಗಿ ಪ್ರೀತಿಯ ಬರವಿದ್ದಲ್ಲೆಲ್ಲ ಹಸಿರಿಡುವ ಕೆಲಸ ಬಹಳ ಪ್ರಮುಖವಾಗಿ ಆಗಬೇಕಾದ ಅನಿವಾರ್ಯತೆ ಇದೆ . ಮಕ್ಕಳಿಗೆ ತಂದೆ ತಾಯಿ ಹಾಗೂ ಮನೆಯವರು ತೋರಿಸುವ ಪ್ರೀತಿಗೆ ಬರ ಉಂಟಾದರೆ, ಮುಂದೆ ಖಂಡಿತವಾಗಿಯೂ ವಯೋವೃದ್ಧ ಹೆತ್ತವರು ಮತ್ತು ಪೋಷಕರಲ್ಲಿ ಮಕ್ಕಳು ತೋರಿಸುವ ಪ್ರೀತಿಗೆ ಬರ ಬಂದೇ ಬರುತ್ತದೆ. “ಮಾಡಿದ್ದುಣ್ಣೋ ಮಾರಾಯ” ಎಂಬಂತೆ ನಾವು ಮಕ್ಕಳಿಗೆ ಅಗತ್ಯವಾಗಿ ತೋರಬೇಕಾದ ಪ್ರೀತಿಯನ್ನು ನೀಡಿದರೆ ನಮ್ಮನ್ನು ಕೂಡ ನಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ಪ್ರೀತಿಯಿಂದಲೇ ಕಾಣುತ್ತಾರೆ. ನಮಗೆ ಪ್ರೀತಿ ಬೇಕಾದರೆ ನಾವು ಕೂಡ ಅವರನ್ನು ಪ್ರೀತಿಸಬೇಕಾಗುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಒತ್ತಡದ ಬದುಕಿನಲ್ಲಿ ಮಕ್ಕಳನ್ನು ಪ್ರೀತಿಸಲು ಸಮಯ ವೆಲ್ಲಿಯದು,? ಅವರ ಆಗು ಹೋಗುಗಳ ಬಗ್ಗೆ ಅರಿತು,ಆಸೆ ಆಕಾಂಕ್ಷೆಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ  ಕೊಡಬೇಕು ಎಂಬುದನ್ನು ಅರಿತು ತಿಳಿಸುವ ವರಾರು? ಎಲ್ಲಾ ಮನೆಗಳಲ್ಲೂ ಪ್ರೀತಿಗೆ ಬರ ಬಂದಿದೆ ಎಂದು ಹೇಳಿದರೆ ತಪ್ಪಾಗದು ಎಂಬುದು ನನ್ನ ಭಾವನೆ. ಅಂತಹ ಪ್ರೀತಿಯ ಬರದಿಂದ ಪರದಾಡುವ ಮಕ್ಕಳಿಗೆ ಹಸಿರಿಡುವಂತೆ ಪ್ರೀತಿಯನ್ನು ತೋರಿಸಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ . ಇನ್ನು ಇಂದಿನ ಮಕ್ಕಳಲ್ಲಿ ಸಂಸ್ಕಾರದ ಬರ ಇದೆ. ಹೆಚ್ಚಿನ ಮಕ್ಕಳಲ್ಲಿ ಪ್ರೀತಿ, ಕರುಣೆ, ಮಮತೆ ,ಸಹಾಯ ಮಾಡುವ ಗುಣ,ಹಂಚಿ ತಿನ್ನುವ ಮನಸ್ಸು, ಹಿರಿಯರಿಗೆ ಗೌರವ ಕೊಡುವಂತಹ ಗುಣ ಇದಕ್ಕೆಲ್ಲಾ ಕೊರತೆ ಕಂಡು  ಬರುತ್ತಿದೆ.ಅಂದರೆ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ .ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ತೋರಿಸುವ ಪ್ರೀತಿ ಕಾಳಜಿ ಬಗ್ಗೆ ಒಂದಿಷ್ಟನ್ನು ನಾವು ಹೇಳಿಕೊಡಲೇಬೇಕಾಗುತ್ತದೆ .ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ ಎಂದು ಹೇಳಿದರೆ ಸಾಕಾಗಲಾರದು ಅದನ್ನು ಬೆಳೆಸುವಂತಹ ಅಂದರೆ ಸಂಸ್ಕಾರದ ಬರ ಇರುವಲ್ಲಿ ಹಸಿರಿಡುವ ಕೆಲಸವನ್ನು ನಾವು ಮಾಡಬೇಕಾಗಿದೆ ‘ಮಕ್ಕಳು ಹೇಳಿದ್ದನ್ನು ಮಾಡುವುದಕ್ಕಿಂತ ಮಾಡಿದ್ದನ್ನು ನೋಡಿ ಕಲಿತುಕೊಳ್ಳುವ ಕುತೂಹಲದ ಮನಸ್ಸಿನವರು’ಹಾಗಾಗಿ ನಾವು ಮಕ್ಕಳ ಮುಂದೆ ಒಳ್ಳೆಯ ಸಂಸ್ಕಾರವಂತರಾಗಿ ಬದುಕಿದರೆ ಸಂಸ್ಕಾರದ ಬರವಿರುವ ಮಕ್ಕಳ ಮನಸ್ಸಿನಲ್ಲಿ ಹಸಿರಿಡುವಂತಹ ಕೆಲಸ ನಮ್ಮಿಂದ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬರದೆಡೆಗೆ ಹಸಿರಿಡುವ ಎಂದರೆ ಮನುಷ್ಯ ಜೀವನದಲ್ಲಿ ಯೋಗ್ಯ ವ್ಯಕ್ತಿಯಾಗಿ ಬಾಳಬೇಕಾದರೆ ಯಾವುದೆಲ್ಲ ಬೇಕೋ ಅದರಲ್ಲಿ ಕೊರತೆ ಉಂಟಾದರೆ, ಮನುಷ್ಯ ಯೋಗ್ಯತೆಯಿಂದ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಬರವನ್ನು ತೊರೆಸಲು ಹಸಿರಿಡುವ ಅಂದರೆ ಕೊರತೆಯನ್ನು ನೀಗಿಸುವ ಕೆಲಸ ನಮ್ಮಿಂದಾಗಬೇಕು. ಹಾಗಿದ್ದರೆ ಮಾತ್ರ ಈ ಜಗದಲ್ಲಿ ಜನಜೀವನ ಸುಖಮಯವಾಗಲು ಸಾಧ್ಯವಿದೆ. ಸಂಸ್ಕಾರವಂತ ಮಕ್ಕಳು ಬೆಳೆದು ದೇಶದ ಪ್ರಗತಿಯಾಗಲು ಅನುವಾಗುತ್ತದೆ. ಡಾ.ಸುಮತಿ ಪಿ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. Read Post »

ಕಾವ್ಯಯಾನ

“ನನ್ನಾಸೆಗಳು” ಗೀತಾ ಆರ್.

ಕಾವ್ಯ ಸಂಗಾತಿ ಗೀತಾ ಆರ್. “ನನ್ನಾಸೆಗಳು” ನೀ ನನ್ನ ನೆನಪಲ್ಲೇ ಪುನಃ ಪುನಃಉಳಿಯುವಾಸೆ….ನಿನ್ನ ಹಿಂದಿಗಿಂತ ಹೆಚ್ಚು ಹೆಚ್ಚುನಾ ಪ್ರೀತಿಸುವಾಸೆ…ನಿನ್ನ ಹೃದಯದಲ್ಲೇ ಮತ್ತೆ ನಾನೇಬಚ್ಚಿಟ್ಟುಕೊಳ್ಳುವಾಸೆ….ನಿನ್ನ ಮನದಾಳದ ಮಾತುಗಳೆಲ್ಲಾಮತ್ತೊಮ್ಮೆ ಆಲಿಸುವಾಸೆ….ನಿನ್ನ ಆ ನಯನಗಳಲ್ಲಿ ಇನ್ನೊಮ್ಮೆನಾ ಬೆರೆಯುವಾಸೆ….ನಿನ್ನ ಆ ಕುಡಿಮಿಂಚು ನೋಟ ಮತ್ತೆಮತ್ತೆ ನೋಡುವಾಸೆ ….ನಿನ್ನ  ಮೌನವಾ ನಾ ಕೊನೆಯದಾಗಿಅರ್ಥೈಸಿಕೊಳ್ಳುವಾಸೆ….ನಮ್ಮಿಬ್ಬರಲ್ಲಿ ಮತ್ತೆಂದೂ ಅಗಲಿಕೆಬಾರದಿರಲೆಂಬಾಸೆ…. ————– ಗೀತಾ ಆರ್.

“ನನ್ನಾಸೆಗಳು” ಗೀತಾ ಆರ್. Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ- ಹೈದ್ರಾಬಾದ   ಕರ್ನಾಟಕದ ಶ್ರೇಷ್ಠ ಶಿವಯೋಗ ಸಾಧಕ ಭಾಲ್ಕಿ ಡಾ ಡಾ ಶ್ರೀ ಚೆನ್ನಬಸವ ಸ್ವಾಮೀಜಿ .ರಜಾಕಾರ ಮತ್ತು ಮುಸ್ಲಿಮರ ಹಾವಳಿಗೆ ಕನ್ನಡ ಶಿಕ್ಷಣ ತತ್ತರಿಸಿ ಹೋಗಿತ್ತು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡವನ್ನು ಕಲಿಸುವ ದಿಟ್ಟತನವನ್ನು ಪರಮ ಪೂಜ್ಯ ಡಾ ಭಾಲ್ಕಿ ಡಾ ಚೆನ್ನ ಬಸವ ಸ್ವಾಮೀಜಿಯವರು ಕೈಗೊಂಡರು ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು  ಕೇಳದೆ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ  ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು. ಲಿಂಗೈಕ್ಯ ಡಾ|| ಚೆನ್ನಬಸವ ಪಟ್ಟದೇವರು ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು. ಬಾಲ್ಯ ಮತ್ತು ಶಿಕ್ಷಣಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಎಂಬ ವ್ಯಾಪಾರಸ್ಥ  ಮನೆತನದಲ್ಲಿ ತಂದೆ ರಾಜಪ್ಪ- ತಾಯಿ ಸಂಗಮ್ಮಎಂಬ ದಂಪತಿಗಳಿಗೆ  22 ಡಿಸೆಂಬರ್ 1890 ರಂದು  ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ 8 ರಿಂದ 10 ವರ್ಷಗಳವರೆಗೆ  ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕಂತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಯಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರಾದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ  ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಶಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಶೀಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು. ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು. ಗುರು ಲಿಂಗ ಜಂಗಮ ತತ್ವಗಳನ್ನು ನಾಡಿನ ತುಂಬೆಲ್ಲಾ ಪ್ರಸಾರ ಮಾಡಿ 22 ಏಪ್ರಿಲ್ 1999 ರಂದು ತಮ್ಮ ನೂರಾ ಒಂಬತ್ತನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು __________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಕಾವ್ಯಯಾನ

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್

ಕಾವ್ಯ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಹೃದಯದ ದೇವತೆ” ನನ್ನ ಹೃದಯದ ದೇವತೆ ಏಕೆ ನೀ ನಕ್ಕಿದೆಈ ಎದೆಯಲ್ಲಿ ನಿನ್ನ ಪ್ರೀತಿ ಉಕ್ಕಿ ಹರಿಸಿದೆ!ಮುಗಿಲಷ್ಟು ಪ್ರೇಮದ ಕಾಣಿಕೆಯ ನೀಡಿದೆಹಾಲು ಜೇನಂತ ಮನಸು ನಿನ್ನದಾಗಿದೆ!! ಆಸೆ ಕನಸುಗಳೆಲ್ಲ ಹಸಿರಾಗಿ ಚಿಗುರುತಿದೆಮುತ್ತಿನ ಮಳೆಯು ಹೂಗಳಾಗಿ ಸುರಿದಿದೆ!ನನ್ನ ಪ್ರೀತಿ ನಿನ್ನ ನೋಟಕೆ ಸೆರೆಯಾಗಿದೆಹೆಣ್ಣು ದುಂಬಿ ಪ್ರೀತಿ ಆಸರೆ ಬಯಸಿದೆ!! ಸಿಹಿ ತುಪ್ಪ ಸವಿಯುವ ಆಸೆ ಹೆಚ್ಚಾಗಿದೆಗಲ್ಲ ಕರಗುವ ಬೆಣ್ಣೆಯಂತೆ ಮೃದುವಾಗಿದೆ!ಕಣ್ಣು ಮುಚ್ಚಲು ನಿನ್ನ ರೂಪ ಕಾಣುವುದೇನಿನ್ನ ಬಿಂಬ ನನಗೀಗ ಕಚಗುಳಿ ಇಡುತಿದೆ!! ನಿನ್ನ ಮನಸಾರೆ ಸೇರುವ ತವಕ ಹೆಚ್ಚಾಗಿದೆನಾ ಹುಡುಕುವ ಹಾದಿಯ ದಾರಿ ತಪ್ಪಿಸಿದೆ!ಸುಂದರ ಸಾಮರಸ್ಯ ನಡಿಗೆಯು ನಿನ್ನಲ್ಲಿದೆಕಣ್ಣ ಮುಚ್ಚಾಲೆಯ ಆಟ ಏಕೆ ಆಡಿಸಿದೆ!! ನನ್ನೆದೆ ಬಡಿತವು ಜೋರಾಗಿ ತಾಳ ತಪ್ಪಿದೆನಿನ್ನ ಅವರಿಸುವ ಆಸೆಯು ಹೆಚ್ಚಾಗಿದೆ!ಖುಷಿಯಿಂದ ಜಗತ್ತನ್ನೆ ಮರೆಯಬೇಕಿದೆಸಿಹಿ ಮುತ್ತಲ್ಲಿ ನನ್ನ ಬಂದಿ ಮಾಡಿ ಬಿಟ್ಟೆ —— ಕೆ.ಎಂ. ಕಾವ್ಯ ಪ್ರಸಾದ್

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್ Read Post »

ನಿಮ್ಮೊಂದಿಗೆ

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಿನಿಮಾ ಸಂಗಾತಿ ಶಶಿಕಾಂತ್‌ ಪಟ್ಟಣ ರಾಮದುರ್ಗ “ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ” ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿಗುರು ದತ್ತ  ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ  ವಿ ಶಾಂತಾರಾಮ ರೋಹಿಣಿ ಹಟ್ಟಂಗಡಿ ಇನ್ನೂ ಅನೇಕರುಮತ್ತು ಇತ್ತೀಚಿನ ವರ್ಷಗಳಲ್ಲಿ ನಟಿಸಿದ ಸುನೀಲ್ ಶೆಟ್ಟಿ ಐಶ್ವರ್ಯ ರೈ ಶಿಲ್ಪಾ ಶೆಟ್ಟಿ ಮುಂತಾದವರು ಇಂತವರ ಸಾಲಿನಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಚಲನ ಚಿತ್ರದಲ್ಲಿ ನಾಯಕಿ  ನಟಿಸಿದ್ದವರು ನಮ್ಮ ಕರ್ನಾಟಕ ಮೂಲದವರು. ಅವರೇ ಶಾಂತಾ ಹುಬ್ಳಿಕರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹುಟ್ಟಿದ ರಾಜಮ್ಮ ಎಂಬ ಲಿಂಗಾಯತ ಶೆಟ್ಟರ ಹುಡುಗಿ ಮುಂದೆ ಬಾಲಿವುಡ್ ಬೆಡಗಿಯಾಗಿ ಮೆರೆಯುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ರಾಜಮ್ಮ (1914ಏಪ್ರಿಲ್,  – 17 ಜುಲೈ, 1992), ತಮ್ಮ ತೆರೆಮೇಲಿನ ಶಾಂತಾ ಹುಬ್ಳೀಕರ್ ಎಂಬ ಹೆಸರಿನಿಂದ ಖ್ಯಾತರಾದ ಚಿತ್ರನಟಿ ಮತ್ತು ಗಾಯಕಿ. ಸ್ವಾತಂತ್ರ್ಯಪೂರ್ವದ ಭಾರತೀಯ ಚಿತ್ರರಂಗದ ಅಭಿನೇತ್ರಿಯಾಗಿ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕೂ ಮತ್ತು ಹಾಡುಗಾರಿಕೆಗೂ ಹೆಸರಾದ ಶಾಂತಾ ಕನ್ನಡ ಮೂಲದವರು. ನಟಿಗಾಯಕಿಯಾಗಿ ಪ್ರಸಿದ್ಧಿ ಪಡೆದ ಶ್ರೇಷ್ಠ ಕಲಾವಿದೆ. ಬಾಲ್ಯ ಶಾಂತಾ ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿ ಎಂಬ ಊರಿನಲ್ಲಿ 1914 ಏಪ್ರಿಲ್ 14ರಂದು. ಅವರ ಹುಟ್ಟುಹೆಸರು ರಾಜಮ್ಮ ಬಡ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ಜನಿಸಿದಳು.  ಶಾಂತಾ ಮೂರನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ನಿಧನರಾಗಿ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೂವರು ಅಕ್ಕತಂಗಿಯರಲ್ಲಿ ಮಧ್ಯದವರಾದ ಶಾಂತಾ ಮತ್ತು ಅವರ ತಂಗಿಯನ್ನು ಹುಬ್ಬಳ್ಳಿಯ ಹತ್ತಿರದ, ಮಕ್ಕಳಿಲ್ಲದ ಸಂಬಂಧಿಕರೊಬ್ಬರಿಗೆ ದತ್ತು ಕೊಟ್ಟು ಸಾಕುವ ವ್ಯವಸ್ಥೆಯಾಗಿ, ದತ್ತುತಾಯಿಯ ಕಟ್ಟುನಿಟ್ಟಿನ ಪರಿಸರದ ಮಧ್ಯೆಯೇ ಪ್ರೌಢಶಾಲೆಯ ತನಕ ಶಾಂತಾ ಓದಿದರು. ಸಂಗೀತಾಭ್ಯಾಸ ಎಳವೆಯಿಂದ ಹಾಡುವ ಆಸಕ್ತಿ ಹೊಂದಿದ್ದ ಶಾಂತಾ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಅಬ್ದುಲ್ ಕರೀಂ ಖಾನ್ ಸಾಹೇಬರ ಬಳಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಅಜ್ಜಿಯಿಂದ ಜನಪದ ಗೀತೆ ಮತ್ತು ವಚನಗಳನ್ನು ಕಲಿತಿದ್ದ ಅವರಿಗೆ ಮುಂದೆ ಗಾಯಕಿಯಾಗುವ ಅವಕಾಶಗಳಲ್ಲಿ ಈ ಸಂಗೀತಾಭ್ಯಾಸ ನೆರವಾಯಿತು.ಯೌವನಕ್ಕೆ ಕಾಲಿಡುವ ಸಮಯದಲ್ಲಿ ಯಾರೂ ದಿಕ್ಕಿಲ್ಲದ ಈ ಅನಾಥೆ ಹುಡುಗಿಗೆ ಒಬ್ಬ ವೃದ್ಧನಿಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂಬ ವಿಚಾರ ಪ್ರಸ್ತಾಪವಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿ ರಾಜಮ್ಮ ಮನೆ ಬಿಟ್ಟು ಹೋಗಿ ಶ್ರೀ ಗುಬ್ಬಿ ವೀರಣ್ಣನವರ ಆಶ್ರಯ ಪಡೆದಳು. ನಟಿಯಾಗಿ ರಂಗಭೂಮಿ ನಟಿಯಾಗಿ ಶಾಂತಾ ಮೊದಲು ರಂಗನಟಿಯಾಗಿ ಹುಬ್ಬಳ್ಳಿ ಧಾರವಾಡದಾದ್ಯಂತ ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ಗುಬ್ಬಿ ಕಂಪನಿ ಸೇರಿದ ಶಾಂತ, ರಂಗಲೋಕದಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಮುಖ ಪಾತ್ರಗಳನ್ನು ಪಡೆದರು ಮಾತ್ರವಲ್ಲ, ಒಳ್ಳೆಯ ಗಾಯಕಿ ಎಂದೂ ಹೆಸರಾದರು. ಶಾಂತಾ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಗೆ ಬರುತ್ತಲೇ ಪುಣೆಯ ಚಿತ್ರನಿರ್ಮಾಪಕರಿಂದ ಶಾಂತಾ ಅವರಿಗೆ ಅವಕಾಶಗಳು ಬಂದವು. ತಮ್ಮ 18ನೇ ವಯಸ್ಸಿನಲ್ಲಿ ಕರ್ನಾಟಕ ಬಿಟ್ಟು, ಸಿನಿಮಾ ಅವಕಾಶಗಳಿಗೆ ಪುಣೆಗೆ ಶಾಂತಾ ಬಂದರು. ಸಿನಿಮಾ ನಟಿಯಾಗಿ1934ರಲ್ಲಿ ನಿರ್ಮಾಣಗೊಂಡ, ಮರಾಠಿ ಮತ್ತು ಹಿಂದಿ ಎರಡರಲ್ಲೂ ತೆರೆಕಂಡ ಭೇಡಿ ರಾಜಕುಮಾರ/ತಾಕ್ಸೇನ್ ರಾಜಪುತ್ರ ಶಾಂತಾ ಅವರ ಮೊದಲ ಸಿನಿಮಾ. ಇಲ್ಲಿ ಸಣ್ಣ ಪಾತ್ರ ಮಾಡಿದ್ದ ಅವರಿಗೆ ಸಿಕ್ಕ ಮೊದಲ ಗಮನಾರ್ಹ ಸಿನಿಮಾ ಎಂದರೆ 1937ರಲ್ಲಿ ಬಂದ ಮರಾಠಿ ಚಿತ್ರ ಕನ್ಹೋಪಾತ್ರ. ಇದು ಮರಾಠಿ ಸಂತೆ ಕನ್ಹೋಪಾತ್ರಳ ಮೇಲೆ ಮಾಡಿದ ಸಿನಿಮಾವಾಗಿತ್ತು. ಇಲ್ಲಿ ಶಾಂತಾರ ನಟನೆ ಮತ್ತು ಹಾಡುಗಾರಿಕೆ ಹೆಚ್ಚಿನ ಪ್ರಶಂಸೆ ಗಳಿಸಿತು. ಇದು ಪುಣೆಯ ಅತಿದೊಡ್ಡ ಚಿತ್ರಸಂಸ್ಥೆಯಾಗಿದ್ದ ‘ಪ್ರಭಾತ್ ಫಿಲ್ಮ್ ಕಂಪನಿ’ಯವರ ಗಮನ ಸೆಳೆಯಿತು. ಪ್ರಭಾತ್ ಫಿಲ್ಮ್ ಕಂಪನಿಯ, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ವಿ. ಶಾಂತಾರಾಂ ಅವರು ತಮ್ಮ ಮಾಝಾ ಮೂಲಗಾ /ಮೇರಾ ಲಡ್ಕ (1938) ಚಿತ್ರದ ನಾಯಕಿಯಾಗಿ ಶಾಂತಾರನ್ನು ಆಯ್ಕೆ ಮಾಡಿದರು. ಕಂಪನಿಯ ಒಳಗೆ ಮತ್ತು ಹೊರಗೆ ಶಾಂತಾರಾಂ ಅವರ ಈ ನಿರ್ಧಾರ ಜನರಲ್ಲಿ  ಅಚ್ಚರಿಗೆ, ಚರ್ಚೆಗೆ ಕಾರಣವಾಗಿತ್ತು. ಅದಾಗಲೇ ಕಂಪನಿಯ ಬಹುಪಾಲು ಎಲ್ಲಾ ಚಿತ್ರಗಳ ಯಶಸ್ವೀ ನಾಯಕಿಯಾಗಿ ಹೆಸರು ಮಾಡಿದ್ದ ಖ್ಯಾತ ಮರಾಠಿ ನಟಿ ಶಾಂತಾ ಆಪ್ಟೆ ಇದ್ದರೂ ಸಹಿತ  ಅವರನ್ನು ಬಿಟ್ಟು ಹೊಸ ಮತ್ತು ಮರಾಠಿ ಬಾರದ ಕನ್ನಡದ ಹುಡುಗಿಯನ್ನು ಆರಿಸಿಕೊಂಡಿದ್ದು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ , ಗಮನ ಬರುವಂತಾಯಿತು. ಶಾಂತಾರಾಂ ನೀಡಿದ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಶಾಂತಾ ಒಳ್ಳೆಯ ಅಭಿನಯ ಮತ್ತು ಹಾಡುಗಳನ್ನು ಹಾಡಿ ಶಾಂತಾರಾಂ ಅವರನ್ನೂ ಸೇರಿದಂತೆ ಎಲ್ಲಾ ಮರಾಠಿ ಮತ್ತು ಹಿಂದಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು. 1939 ರಲ್ಲಿ ಶಾಂತಾರಾಂ ನಿರ್ದೇಶಿಸಿದ ಮಹತ್ವಪೂರ್ಣ ಸಿನಿಮಾ ‘ಮನೂಸ್/ಆದ್ಮಿ’. ಇದು ವೇಶ್ಯೆಯೊಬ್ಬಳ ಜೀವನವನ್ನು ಕುರಿತಾದ ಸಿನಿಮಾವಾಗಿದ್ದು, ವಸ್ತು-ವಿಷಯ ಮತ್ತು ನಿರೂಪಣೆಗಳೆರಡೂ ಸವಾಲಿನಿಂದ ಕೂಡಿದ್ದಾಗಿತ್ತು. ಬಿಡುಗಡೆಗೊಂಡ ಆ ಚಿತ್ರ ಶಾಂತಾ ಹುಬ್ಳೀಕರರಿಗೆ  ಭಾರತದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಆ ಚಿತ್ರದಲ್ಲಿ ಶಾಂತಾ ಹಾಡಿದ ಕಶಾಲಾ ಉದ್ಯಾಚಿ ಬಾತ್/ಕಿಸಿಲಿಯೇ ಕಲ್ಕಿ ಬಾತ್ ಹಾಡು ಜನಜನಿತವಾಯಿತು.ಇದಾದ ಬಳಿಕ ಸಾಲು ಸಾಲಾಗಿ ಮರಾಠಿ ಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಶಾಂತಾ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ಭಾರತದಾದ್ಯಂತ ಶಾಂತಾ ಹುಬ್ಳೀಕರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕನ್ನಡದ ಹಲವರು ಶಾಂತಾ ಅವರನ್ನು ಕರೆತರುವ ಯತ್ನ ಮಾಡಿದರಾದರೂ ಬಿಡುವಿಲ್ಲದ ಶಾಂತಾ ಮರಾಠಿಯಲ್ಲೇ ಮಗ್ನರಾದರು. ಆದರೆ ಗುಬ್ಬಿ ವೀರಣ್ಣ ಅವರು ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿದ್ದ ಜೀವನ ನಾಟಕ (1942) ಚಿತ್ರಕ್ಕೆ ಶಾಂತಾ ಅವರನ್ನು ಕರೆತಂದು ಚಿತ್ರ ಮಾಡಿದರು. ಈ ಚಿತ್ರದಲ್ಲಿ ಕೆಂಪರಾಜ ಅರಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಇವರೊಂದಿಗೆ ಎಂ. ವಿ. ರಾಜಮ್ಮ, ಬಿ. ಜಯಮ್ಮ ಮತ್ತು ಶಾಂತಾ ಹುಬ್ಳೀಕರ್ ನಟಿಸಿದರು. ಇದು ಶಾಂತಾ ನಟಿಸಿದ ಏಕೈಕ ಕನ್ನಡ ಚಲನಚಿತ್ರ. ಮರಾಠಿ ಹಿಂದಿಯ ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಾಯಕಿ ನಟಿಯಾಗಿ ಹೆಸರು ದುಡ್ಡು ಪದವಿ ಆಸ್ತಿ ಎಲ್ಲವನ್ನೂ ಪಡೆಯುತ್ತಾ ದಾಪುಗಾಲು ಹಾಕುತ್ತಾ ನಡೆದ ಶಾಂತಾ ಹುಬ್ಳಿಕರ ಅವರಿಗೆ ಅವರೇ ಮಾದರಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಅವರು ತನ್ನ ಪತಿಯನ್ನಾಗಿ ಸಂಗಾತಿಯನ್ನಾಗಿ ಉದ್ಯಮಿಬಾಪುಸಾಹೇಬ್ ಗೀತೆ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಬಹುಶಃ ಶಾಂತಾ ಹುಬ್ಳಿಕರ ಅವರ ಜೀವನದಲ್ಲಿ ಇದು ಮಾಡಿದ ದೊಡ್ಡ ತಪ್ಪು ಎನಿಸಿತು. ಗಂಡ ಬಾಪುಸಾಹೇಬ ನಿರ್ಮಾಪಕರಲ್ಲಿ ಶಾಂತಾ ಹುಬ್ಳಿಕರ ಮಾಡಿದ ಚಲನ ಚಿತ್ರಗಳ ಸಂಭಾವನೆಯನ್ನು ಮುಂಚಿತವಾಗಿ ಪಡೆದು ಕೊಳ್ಳುತ್ತಾ ತನ್ನ ಐಷ್ಯಾರಾಮಿ ಜೀವನವನ್ನು ನಡೆಸ ಹತ್ತಿದನು . ಇದೆ ಹೊತ್ತಿನಲ್ಲಿ ಒಂದು ಗಂಡು ಮಗು ಹುಟ್ಟಿತು.ಅವನೂ  ಕೂಡ ಮುಂದೆ ತನ್ನ ತಾಯಿಯನ್ನು ಮನೆ ಬಿಟ್ಟು ಹೊರ ಹಾಕಿದನು .ಜೀವನದಲ್ಲಿ ರಾಣಿಯಾಗಿ ಮೆರೆಯಬೇಕಾದ ಶಾಂತಾ ಹುಬ್ಳಿಕರ ಎಂಬ ಮರಾಠಿ ಹಿಂದಿಯ ಸಿನಿಮಾಗಳಲ್ಲಿ ನಟಿಸಿದ್ದ ದಂತ ಕಥೆ ಮುಂದೆ ಅನಾಥೆಯಾಗಿ ಬಿಟ್ಟಳು .ಆದರೂ ಧೃತಿಗೆಡಲಿಲ್ಲ ಸಣ್ಣ ಪುಟ್ಟ ಪಾತ್ರ ಮಾಡುತ್ತ ತನ್ನ ಜೀವನ ನಿರ್ವಹಣೆಗೆ ಪುಣೆಯಲ್ಲಿ ಆರಂಭದಲ್ಲಿ ಒಂದು ಪುಟ್ಟ ಬಾಡಿಗೆಯ ಮನೆ ಮಾಡಿ ಕೊಂಡು ಜೀವನ ನಡೆಸಿದಳು .ಇವಳ ಗಂಡ ಮಗ ಇವಳ ಆಸ್ತಿ ಕಡೆದುಕೊಂಡು ಬೀದಿಗೆ ತಳ್ಳಿದರು. ಕೊನೆಗೆ ಪುಣೆಯ ಅನಾಥಾಶ್ರಮದಲ್ಲಿ ತನ್ನ ಜೀವಿತ ಕಾಲದ ಕೊನೆಯವರೆಗೂ ಕಾಲ ಕಲೆಗೂ 1992 ರಲ್ಲಿ ಬಯಲಾದಳು. ಇಡೀ ಮುಂಬೈ ನಗರಿಗೆ ಬೇಕಾದ ಈ ಚೆಲುವೆ ಹೀಗೆ ಮುಂದೆ ಅನಾಥ ಶವವಾಗುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ಅನಾಥಾಶ್ರಮದಲ್ಲಿ ಇರುವಾಗಲೇ ತನ್ನ ಆತ್ಮ ಕಥೆಯನ್ನು ಬರೆದಳು. ನಟನೆ ಗಾಯನ ಒಂದು ತಪಸ್ಸು ಅದು ತನಗೆ ಒಲಿದು ಬಂದಿತ್ತು ಜನರನ್ನು ಪ್ರೇಕ್ಷಕರನ್ನು ರಂಜಿಸಿ ಸಂತೋಷ ತಂದಿರುವೆನು. ನನ್ನ ಕೆಲಸ ಅಷ್ಟೆ. ಜೀವನದಲ್ಲಿ ಬಡತನ ಕಷ್ಟ ಅನುಭವಿಸಿದ ತಾನು ನಟನೆಯಲ್ಲಿ ಎಲ್ಲವನ್ನೂ ಮರೆತೇನು ಎಂದು ಹೇಳುತ್ತಾ ನಾಳೆಯ ಚಿಂತ್ಯಾಕೆ ಎಂಬ ಕನ್ನಡಕ್ಕೆ ಅನುವಾದಗೊಂಡ ಮೂಲ ಕೃತಿ ಕಶಾಲಾ ಉದ್ಯಾಚಿ ಬಾತ್’ ಎಂಬ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿ ಈ ಭೂಮಿಯ ಮೇಲೆ ತಾನು ಬದುಕಿ ಉಳಿದವರಿಗೆ ಸಂತೋಷವನ್ನು ಕೊಟ್ಟು ನಿರ್ಗಮಿಸ ಬೇಕು. ಅಂತಹ ಮಹಾರಾಣಿಯನ್ನು ಗೆಳತಿಯರು ಸಹ ಕಲಾವಿದರು ಮೇಲಿಂದ ಮೇಲೆ ನಿನ್ನ ಪರಿಸ್ಥಿತಿ ಮುಂದೆ ಹೇಗೆ ಏನು ಎಂಬ ಹಲವು ಪ್ರಶ್ನೆಗಳಿಗೆ ಯಾಕೆ ನಾಳೆಯ ಮಾತು ಚಿಂತೆ ಎಂದು ಮುಗುಳು ನಗುತ್ತಾ ಉತ್ತರ ನೀಡಿದ ನಟಿ ಎಲ್ಲಾ ಸಿಹಿ ಕಹಿ ಅನುಭವ ಘಟನೆಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿ ತೆರೆಯ ಮರೆಗೆ ಸರಿದಳು. *ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ* ಶಾಂತಾ ತಮ್ಮ ಆತ್ಮಕಥೆ ‛ *ಕಶಾಲಾ ಉದ್ಯಾಚಿ ಬಾತ್’* ಮರಾಠಿಯಲ್ಲಿ ಬರೆದಿದ್ದಾರೆ. ಇದರ ಕನ್ನಡಾನುವಾದ ‛ನಾಳೀನ ಚಿಂತ್ಯಾಕ ’ ಪುಸ್ತಕವನ್ನು ಅಕ್ಷತಾ ಹುಂಚದಕಟ್ಟೆ ಅವರು ತಮ್ಮ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. *ನಿಧನ*ತಮ್ಮ ಕೊನೆಯ ದಿನಗಳನ್ನು ಪುಣೆಯ ವೃದ್ಧಾಶ್ರಮದಲ್ಲಿ ಕಳೆದ ಶಾಂತಾ ಜುಲೈ 19, 1992ರಂದು ನಿಧನವಾದರು.  *ಶಾಂತಾ ಹುಬ್ಳಿಕರ ಅವರು ನಟಿಸಿದ ಆಯ್ದ ಚಲನ ಚಿತ್ರಗಳ ಪಟ್ಟಿ* ಶಾಂತಾ ನಟಿಸಿದ ಆಯ್ದ ಚಿತ್ರಗಳು: ಭೇಡ್ಕ ರಾಜಕುಮಾರ್ (1934)ಕನ್ಹೋಪಾತ್ರ (1937)ಮೇರಾ ಲಡ್ಕ (1938)ಮನೂಸ್/ಆದ್ಮಿ (1939)ಜೀವನ ನಾಟಕ ಕನ್ನಡ ಚಲನ ಚಿತ್ರ (1942) ಹೀಗೆ ಹಲವಾರು ನಾಟಕ ಚಲನ ಚಿತ್ರಗಳಲ್ಲಿ ನಟಿಸಿದ ಶಾಂತಾ ಹುಬ್ಳಿಕರ ಇವರು ಮಣ್ಣಲ್ಲಿ ಹುಟ್ಟಿ ಮಣ್ಣ ಮೇಲೆ ಬೆಳೆದು ಮಣ್ಣಲ್ಲಿ ಮಣ್ಣಾಗಿ ಹೋದರು. ಕನ್ನಡಿಗರು ಮರೆತ ದೈತ್ಯ ಪ್ರತಿಭೆ ಶಾಂತಾ ಹುಬ್ಳಿಕರ ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ?? ವೀಣಾ ಹೇಮಂತ್‌ ಗೌಡಪಾಟೀಲ್

ಕ್ರೀಡಾ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ್ ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??  ನವಂಬರ್ 25 ರಿಂದ ಡಿಸೆಂಬರ್ ನಾಲ್ಕರವರೆಗೆ ರಾಜಸ್ಥಾನದ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಕ್ರೀಡಾ ಕೂಟ ನಡೆಯಿತು. ಭವಿಷ್ಯದ ಕ್ರೀಡಾಪಟುಗಳನ್ನು ಗುರುತಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಈ ಕ್ರೀಡಾಕೂಟದಲ್ಲಿ ಬಹುತೇಕ ರಾಷ್ಟ್ರದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಬೇಕಿತ್ತು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಒಂದೊಂದು ಆಟಗಳಲ್ಲಿ ಭಾಗವಹಿಸಿದ್ದರು. ಮತ್ತೆ ಕೆಲವರು ಆಯ್ಕೆಯಾಗಿದ್ದರು ಕೂಡ ಕ್ರೀಡೆಯಲ್ಲಿ ಭಾಗವಹಿಸಲಿಲ್ಲ. ಈ ಕುರಿತ ವಿಡಿಯೋ ಒಂದನ್ನು ನೋಡಿದಾಗ ತುಸು ಆಶ್ಚರ್ಯದ ಜೊತೆಗೆ  ಜಾಗೃತಿಯನ್ನು ಉಂಟುಮಾಡುವ ಅವಶ್ಯಕತೆಯನ್ನು ಮನಗಂಡು ಮಾಹಿತಿಯನ್ನು ಪಡೆದ ನಂತರ ಮೂಡಿದ ಲೇಖನ ನಿಮ್ಮ ಓದಿಗೆ. ಖೇಲೊ ಇಂಡಿಯಾ ತರಬೇತಿ ಸಂಸ್ಥೆಗಳು ಹಾಗೂ ಕ್ರೀಡಾ ಅಕಾಡೆಮಿಗಳು ಖೇಲೋ ಇಂಡಿಯಾ ಯೋಜನೆಯಡಿ ಆಯ್ಕೆಯಾದ ನಂತರ ಅವರಿಗೆ ತರಬೇತಿಯ ಜೊತೆಗೆ ಆರ್ಥಿಕ ಧನ ಸಹಾಯ ಹಾಗೂ ಪ್ರತಿ ತಿಂಗಳು ನಿಗದಿತ ಮೊತ್ತದ ಪಾಕೆಟ್ ಅಲೋವೆನ್ಸ್ ದೊರೆಯುತ್ತದೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೊದಲ ಮೂರುಸ್ಥಾನ ಗಳಿಸುವವರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿಯ ಅನುಕೂಲತೆಯನ್ನು ಕೂಡ ಒದಗಿಸಲಾಗುತ್ತದೆ ಹಾಗೂ ಪದಕ ವಿಜೇತರಿಗೆ ನಿಗದಿತ ಮೊತ್ತವನ್ನು ಕೊಡ ಮಾಡಲಾಗುತ್ತದೆ. ಭಾರತ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿ ಗುರುತಿಸಲ್ಪಟ್ಟ ಖೇಲೋ ಇಂಡಿಯಾ ಕಾರ್ಯಕ್ರಮವು ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ವಿಶಾಲವಾದ ಖೇಲೊ ಇಂಡಿಯಾ ಎಂಬ  ಬೃಹತ್ ಪ್ರಮಾಣದ ಕ್ರೀಡಾ ಕೂಟಗಳನ್ನು ಭಾರತದ ಫನ ಸರ್ಕಾರವು ಆಯೋಜಿಸುತ್ತದೆ. ಪ್ರತಿ ಎರಡು ಜಿಲ್ಲೆಗಳಿಗೆ ಒಂದರಂತೆ ಒಟ್ಟು ಇಡೀ ದೇಶದಾದ್ಯಂತ 1041  ಖೇಲೋ ಇಂಡಿಯಾ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಹಂತದ ಕ್ರೀಡಾಪಟುಗಳು 2025ರ ಸಾಲಿನಲ್ಲಿ ನಡೆದಿದ್ದು ಮುಖ್ಯವಾಗಿ ಮೂರು ಪ್ರಮುಖ ರೀತಿಯಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿಖೇಲೊ ಇಂಡಿಯಾ ಯೂತ್ ಗೇಮ್ಸ್ ಎಂಬುದು ಯುವ ಕ್ರೀಡಾಪಟುಗಳಿಗಾಗಿ ನಡೆಸುವ ಪ್ರಮುಖ ಸ್ಪರ್ಧೆಯಾಗಿದ್ದು ಮೇ ತಿಂಗಳಲ್ಲಿ ಈ ಕ್ರೀಡಾಕೂಟವು ಬಿಹಾರ ರಾಜ್ಯದಲ್ಲಿ ನಡೆಯಿತು. 17 ವರ್ಷ ವಯಸ್ಸಿಗಿಂತ ಕಡಿಮೆ ಹಾಗೂ 21 ವರ್ಷ ವಯಸ್ಸಿಗಿಂತ ಕಡಿಮೆ ಇರುವ ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗುತ್ತದೆ. 28 ಬಗೆಯ ವಿವಿಧ ಕ್ರೀಡೆಗಳು ಇದರಲ್ಲಿ ಸೇರ್ಪಡೆಯಾಗಿದ್ದು ಯುವ ಜನತೆಯಲ್ಲಿ ಕ್ರೀಡೆಯ ಕುರಿತಾದ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಭವಿಷ್ಯದ ಕ್ರೀಡಾಪಟುಗಳನ್ನು ತಯಾರಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಪ್ರಯತ್ನವಾಗಿದೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಎಂಬುದು ಚಳಿಗಾಲದ ಕ್ರೀಡೆಯಾಗಿದ್ದು 2025 ಈ ಆವೃತ್ತಿಯು  ಹಾಗೂ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಕ್ ಗಳಲ್ಲಿ ಎರಡು ಹಂತಗಳಲ್ಲಿ ನಡೆಯಿತು. ಖೇಲೋ ಇಂಡಿಯಾ ಬೀಚ್ ಗೇಮ್ಸ್ ಎಂಬ ಮತ್ತೊಂದು ವಿಶೇಷವಾದ ಸ್ಪರ್ಧೆಯು ಕಡಲ ತೀರದ ಕ್ರೀಡೆಗಳಿಗಾಗಿ ಮೀಸಲಾಗಿದ್ದು ದಾದರ್ ಹಾಗೂ ನಗರ ಹವೇಲಿ ಮತ್ತು ದಮನ್ ಮತ್ತು ಡಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಿತು.ಕಡಲ ತೀರದಲ್ಲಿ ಆಡುವ ಆಟಗಳಾದ ವಾಲಿಬಾಲ್, ಬಾಸ್ಕೆಟ್ ಬಾಲ್, ಮಲ್ಲಕಂಬ, ಹಗ್ಗ ಜಗ್ಗಾಟ ಹಾಗೂ ಈಜುಗಳು ಇದರಲ್ಲಿ ಸೇರಿದ್ದವು.  ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ ಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಡೆಯುವ ಸ್ಪರ್ಧೆಯಾಗಿದ್ದು 2025ರ ಡಿಸೆಂಬರ್ ನಾಲ್ಕರವರೆಗೆ ಸುಮಾರು 11 ದಿನಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ಈ ಕ್ರೀಡಾಕೂಟವು ನಡೆಯಿತು. ಸುಮಾರು 23ಕ್ಕೂ ಹೆಚ್ಚು ವಿವಿಧ ಬಗೆಯ ಸ್ಪರ್ಧೆಗಳು ಈ ಕ್ರೀಡಾಕೂಟದಲ್ಲಿ ನಡೆದಿದ್ದು, ಭಾರತ ದೇಶದ ಇನ್ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ನಾಲ್ಕುವರೆ ಸಾವಿರದಿಂದ ಏಳು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳು ಆಟದಲ್ಲಿ ಪಾಲ್ಗೊಳ್ಳದೆ ಹೋಗಿದ್ದಾರೆ. 400 ಮೀಟರ್ ಓಟದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಬಂದ ಕೇವಲ ಓರ್ವ ವಿದ್ಯಾರ್ಥಿನಿ ಓಡಿದ್ದರೆ ಅದೇ 400 ಮೀಟರ್ ಹರ್ಡಲ್ಸ್ ನಲ್ಲಿ ಕೇವಲ ಓರ್ವ ವಿದ್ಯಾರ್ಥಿ ಓಡಿದ್ದು ತನ್ನ ಹಿಂದಿನದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ. ಆದರೆ ಈ ಇಬ್ಬರು ಓಟಗಾರರಿಗೂ ಮೆಡಲುಗಳು ದೊರೆತಿಲ್ಲ.  ನಿಯಮದ ಪ್ರಕಾರ ಎಲ್ಲಾ ಯುನಿವರ್ಸಿಟಿಗಳ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಂದೊಂದು ಅಥ್ಲೆಟಿಕ್ ಕ್ರೀಡೆಯಲ್ಲಿಯೂ ಅತಿ ಹೆಚ್ಚು ಪಾಯಿಂಟ್ಗಳನ್ನು ಗಳಿಸಿರುವ ಕ್ರೀಡಾಪಟುಗಳಿಗೆ ಆಯ್ಕೆಯಲ್ಲಿ ಅವಕಾಶವಿದ್ದು ಈ ಹಿಂದೆ ನಡೆದಿರುವ ಯೂನಿವರ್ಸಿಟಿ ಮಟ್ಟದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಂತಿಮ ಘಟ್ಟವನ್ನು ತಲುಪಿರುವ ಮೊದಲ ಎಂಟು ಜನ ವಿದ್ಯಾರ್ಥಿಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಹೀಗೆ ರಾಷ್ಟ್ರ ಮಟ್ಟದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆಟದ ಮೈದಾನಕ್ಕೆ ಬರದೆ ಹೋಗುವುದು ವಿಪರ್ಯಾಸದ ಸಂಗತಿ. ಇದಕ್ಕೆ ಕಾರಣಗಳು ಹಲವಾರು. * ಈಗಾಗಲೇ ಸರಕಾರಿ ನೌಕರಿ ದೊರೆತಿರುವ ಕಾರಣ ಅಂತಹವರಿಗೆ ಅವಕಾಶವನ್ನು ನಿರಾಕರಿಸಲಾಗುತ್ತದೆ. *ಮುಂದಿನ ದೊಡ್ಡ ಕ್ರೀಡಾ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದನ್ನು ನಿರಾಕರಿಸಬಹುದು. *ಮಾದಕ ವಸ್ತು ಸೇವನೆಯ ಪರೀಕ್ಷೆ. ರಾಷ್ಟ್ರೀಯಮಾದಕ ದ್ರವ್ಯ ಸೇವನೆ ವಿರೋಧಿ ಸಂಸ್ಥೆಯಾದ ‘ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ’ಯಿಂದ ನಡೆಸಲ್ಪಡುವ ಮಾದಕ ದ್ರವ್ಯ ಸೇವನೆಯ ಪರೀಕ್ಷೆಯ ಭಯದಿಂದ ಕ್ರೀಡಾಕೂಟದಿಂದಲೇ ಹೊರ ನಡೆಯುವುದು. ಇಲ್ಲಾಗಿದ್ದೂ ಅದೇ. ಎಷ್ಟೋ ಬಾರಿ ಆಹಾರ ಸೇವನೆಯ ವ್ಯತ್ಯಾಸದಿಂದಾಗಿ ಕೂಡ ಹಾರ್ಮೋನುಗಳಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು ಅಥವಾ ವೈದ್ಯರು ಹೇಳಿರುವ ಔಷಧಿಗಳಲ್ಲಿ, ಕೆಲ ನಿಷೇಧಿತ ವಸ್ತುಗಳಲ್ಲಿ ನಾಡಾ ಸಂಸ್ಥೆಯು ಅಂಗೀಕರಿಸದೆ ಇರುವಹಾರ್ಮೋನುಗಳನ್ನು ಹಾಗೂ ದೈಹಿಕ ಬಲವನ್ನು ಪ್ರಚೋದಿಸುವ ಔಷಧಿಗಳನ್ನು ಸೇವಿಸಿದ ಕುರಿತು ಕ್ರೀಡಾಪಟುವಿನ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂತರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲ್ಪಡುವ ರಕ್ತ ಹಾಗೂ ಮೂತ್ರದ ಮಾದರಿಗಳಲ್ಲಿ ಸಂಸ್ಥೆಯು ನಿಷೇಧಿಸಿರುವ ಯಾವುದಾದರೂ ಒಂದು ಮಾದಕ ದ್ರವ್ಯವನ್ನು ಹೊಂದಿದ್ದರೆ ಆಟಗಾರರನ್ನು ಕೆಲ ತಿಂಗಳು ಇಲ್ಲವೇ ಕೆಲ ವರ್ಷಗಳ ಕಾಲ ಆಟದಿಂದ ಹೊರಗಿಡಬಹುದು. ಕ್ರೀಡೆಯಿಂದಲೇ ನಿಷೇಧಿಸಬಹುದು. ನೋವು ಅಪಮಾನಗಳು ಅವರನ್ನು ಬೆನ್ನಟ್ಟಬಹುದಾದ ಸಾಧ್ಯತೆಗಳು ಬಹಳ. ಬಹುತೇಕ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೂಡ ಇಂತಹ ಮಾದಕ ದ್ರವ್ಯಗಳ ಸೇವನೆಯಲ್ಲಿ ತೊಡಗಿಕೊಂಡಿರುತ್ತಾರೆ, ಮತ್ತೆ ಕೆಲವೊಮ್ಮೆ ಬಹು ರಾಷ್ಟ್ರೀಯ ಕಂಪನಿಗಳ ತಯಾರಿಕೆಯ ಆಹಾರ ಪದಾರ್ಥ ಹಾಗೂ ಕೂಲ್ ಡ್ರಿಂಕ್ ಗಳಲ್ಲಿ ಹೆಚ್ಚಿನ ಮಟ್ಟದ ನಿಷೇಧ ಪದಾರ್ಥಗಳು ಇರುವುದು ಇವುಗಳ ಸೇವನೆಯಿಂದಲೂ ಕೂಡ ಕ್ರೀಡಾಪಟುಗಳು ತೊಂದರೆಯನ್ನು ಅನುಭವಿಸುತ್ತಾರೆ. ಎಷ್ಟೋ ಬಾರಿ ಯಾವ ಆಹಾರವನ್ನು ಸೇವಿಸಬೇಕು ಯಾವುದನ್ನು ಸೇವಿಸಬಾರದು ಎಂಬ ಅರಿವಿನ ಕೊರತೆಯಿಂದಲೂ ಇಂತಹ ತೊಂದರೆಗಳು ಉದ್ಧವಿಸುತ್ತವೆ…ಆದ್ದರಿಂದಲೇ ಬಹಳಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತಪ್ಪಿಸುವ ಸಲುವಾಗಿ ಕ್ರೀಡೆಯಿಂದಲೇ ಹೊರಗೆ ಉಳಿಯುತ್ತಾರೆ. ಇಲ್ಲಾದದ್ದು ಕೂಡ ಅದೇ. ಬಹುತೇಕ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಮೂರು ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ರೀಡಾಪಟುಗಳು ಇರಲೇಬೇಕು ಎಂಬುದು ನಿಯಮ…. ಹಾಗಿದ್ದರೆ ಮಾತ್ರ ಅವರಿಗೆ ಸ್ಥಾನಮಾನ ಹಾಗೂ ಪದಕ ಗೆಲ್ಲಲು ಅವಕಾಶ.ಆದರೆ ಖೇಲೋ ಇಂಡಿಯಾದಲ್ಲಿ ಕ್ರೀಡಾಕೂಟದ ಆರಂಭದ ದಿನ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸದೇ ಇರುವುದು ಇದೇ ಕಾರಣಕ್ಕೆ. ಇದೊಂದು ಅಪಾಯಕಾರಿ ಬೆಳವಣಿಗೆ ಅಲ್ಲವೇ?? ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತದೆ. ಮೌಲ್ಯಗಳೇ ಬದುಕು ಎಂದು ಉಸಿರಾಡುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಜ್ಞಾನ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿ ಬಹಳಷ್ಟು ಕ್ರೀಡಾಪಟುಗಳು ತಮ್ಮ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. ಮತ್ತೆ ಕೆಲವರು ಪುಟಿದೆದ್ದ ಚಂಡಿನಂತೆ, ಸುಟ್ಟ ಬೂದಿಯಲ್ಲಿ ಮರು ಹುಟ್ಟು ಪಡೆದುಕೊಳ್ಳುವ  ಫೀನಿಕ್ಸ್ ನಂತೆ ಮರಳಿ ಅಂಗಳಕ್ಕೆ ಇಳಿದು ಯಶಸ್ಸು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ  ಯೋಚಿಸಬೇಕಾಗಿದೆ. ಕ್ರೀಡಾಪಟುಗಳಲ್ಲಿ ಕ್ರೀಡೆಗೆ ಅತ್ಯವಶ್ಯಕವಾದ ಶಿಸ್ತು, ಪರಿಶ್ರಮ, ಶ್ರದ್ಧೆ, ಸ್ಥಿರತೆಯ ಜೊತೆ ಜೊತೆಗೆ ಮೌಲ್ಯಗಳನ್ನು ಕೂಡ ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯನ್ನು ಮನಗಂಡು ಅವರಿಗೆ ತರಬೇತಿ ಕೊಡಬೇಕು. ಜಾಗತಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದರೂ ಕೂಡ ಕ್ರೀಡೆಯ ವಿಷಯದಲ್ಲಿ ಪ್ರಪಂಚದ 190ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವನ್ನು ಗಳಿಸಿರುವ ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಶೋಚನೀಯ ಪರಿಸ್ಥಿತಿಗೆ ಇಳಿಯುವುದನ್ನು ತಪ್ಪಿಸಬೇಕು. ಇದು ನಮ್ಮ ಭಾರತ ಫನ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಇರಬೇಕಾದ ವಿಷಯವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಯೋಜನೆಗಳನ್ನು ರೂಪಿಸುವ, ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ನಾಂದಿ ಹಾಡಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ?? ವೀಣಾ ಹೇಮಂತ್‌ ಗೌಡಪಾಟೀಲ್ Read Post »

ಇತರೆ, ಸಿನೆಮಾ

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ

ಸಿನಿ ಸಂಗಾತಿ ವಿಜಯ್‌ ಅಮೃತರಾಜ್‌ “ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್, ದೃಶ್ಯ: 1. ರಂಗಸ್ಥಳ: ಕಾಫಿ ಕೆಫೆ. (ಕೆಫೆಯ ಟೇಬಲ್. ಸಿರಿ ತನ್ನ ಕಾಫಿಯನ್ನು ಹಿಡಿದಿದ್ದಾಳೆ. ವಿಜಯ ತುಂಟ ನಗುವಿನೊಂದಿಗೆ ಆಕೆಯ ಕಾಫಿಗೆ ಕೈ ಹಾಕುತ್ತಾ ಕೆಣಕುತ್ತಿದ್ದಾನೆ.) ಸಿರಿ: ಓಹ್! ವಿಜಯ! ನೀವು ನನ್ನ ಕಾಫಿಯನ್ನು ಮುಟ್ಟುವ ಸಾಹಸ ಮಾಡಿದರೆ, ಈ ಕಾಫಿ  ಕಹಿಯಂತೆ ,ನಿಮ್ಮ ಮುಂದಿನ ಪರಿಸ್ಥಿಯೂ ಕಹಿಯಾಗುತ್ತೆ ನೋಡು! ( ನಸು ನಕ್ಕಳು) ವಿಜಯ: (ಸಿರಿ ನಸು ನಕ್ಕಿದ್ದನ್ನು ಗಮನಿಸಿ) ಸಿರಿ, ಆ ಧಮ್ಕಿ ನಿಮ್ಮ ಕೋಪದ ಕಹಿಯೋ ಅಥವಾ ಹಾಸ್ಯದ ಖಾರವೋ? ಗೊತ್ತಿಲ್ಲ ಆದರೆ ಈಗ ನನಗೆ ಒಂದು ಗಾದೆ ನೆನಪಾಗುತ್ತಿದೆ, “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಎಂಬಂತೆ, ನನಗೆ ನಿಮ್ಮ ನಗುವಿನ ಮೇಲೂ ಆಸೆ, ಈ ಕಾಫಿಯ ಕಹಿಯ ಮೇಲೂ ಪ್ರೀತಿ! ಗೊತ್ತಾ ಏನಿವಾಗ? ಸಿರಿ: ಈಗ…ಏನಾ? ನಿಮ್ಮ ಕಪ್‌ನಲ್ಲಿ ಡೈನೋಸಾರ್ ಮೊಟ್ಟೆಯ ಸಿಪ್ಪೆ ಸಿಕ್ಕಿತೇ? ವಿಜಯ: ಇಲ್ಲ, ನನ್ನ ಕಹಿ ಕಾಫಿ ನನ್ನನ್ನು ನೋಡಿ ಗೊಣಗುತ್ತಿದೆ: “ನಾನು ಇಲ್ಲಿ ವಿಜಯನ ಅಪ್ರಬುದ್ಧ ಹಾಸ್ಯಕ್ಕೆ ಸಾಕ್ಷಿಯಾಗುವ ಶಿಕ್ಷೆ ಅನುಭವಿಸುತ್ತಿದ್ದೇನೆ! ಬೇಗ ನನ್ನ ಕುಡಿದು ನನ್ನ ಕಷ್ಟ ಮುಗಿಸಿ ಅಂತಾ!” ಸಿರಿ: (ಟಿಶ್ಯೂ ಪೇಪರ್ ತೆಗೆದುಕೊಂಡು) ವಿಜಯ, ಆ ಕಾಫಿಯ ಕಷ್ಟ ನೋಡಲು ನನಗೂ ಕಷ್ಟವಾಗುತ್ತಿದೆ. ಇಲ್ಲವಾದರೆ, “ಹತ್ತು ಸಲ ಹೇಳಿದ ಮಾತು ಕಲ್ಲಾಗಿ ಹೋದೀತು” ಎಂಬಂತೆ, ಆ ಕಹಿಯೆಲ್ಲ ನಿಮ್ಮ ಮಾತುಗಳಿಗೆ ಸೇರಿ ನಮ್ಮ ಸಂಭಾಷಣೆಯನ್ನೇ ಕಹಿ ಮಾಡಿಬಿಡುತ್ತೆ ಗೊತ್ತಾ?. ವಿಜಯ: (ತನ್ನ ಕಪ್ ಎತ್ತಿ ಸಿರಿ ಕಡೆಗೆ ಒಡ್ಡುತ್ತಾ) ಸರಿ! ಕವಿ ಡಿ.ವಿ.ಜಿ. ಅವರ ಕಗ್ಗ ಹೇಳುವಂತೆ: “ಬಾಳ ಪಥವಿದು, ನಗುತ ನಗುತ ನಡೆ”. ನಿಮ್ಮ ಕೈಯಿಂದ ಆ ಕಪ್ ಅನ್ನು ಒಂದುಸಲ ಮುಟ್ಟಿ ಜೊತೆಗೆ ಒಂದು ಸಿಹಿ ಮಾತು ಹೇಳಿದರೆ ಅದು ಆ ಕ್ಷಣವೇ ಸಿಹಿಯಾಗುತ್ತದೆ! ನಿಮ್ಮ ಕೈಯಿಂದ ಆ ಕಹಿ ಕಾಫಿಗೆ ಮುಕ್ತಿ ಸಿಗಲಿ, ಸಿರಿ!.. ಸರಿ ನಾ?. ಸಿರಿ: (ನಗುವನ್ನು ತಡೆಯಲಾಗದೆ, ಕಪ್ ಮುಟ್ಟಿ) ಸರಿ ಕಹಿ ಕಾಫಿ, ಈಗ ನೀನು “ಹೂವಿನಾಸರೆ ಗೂಡೆಗೆ ಸರಿ” ಎಂಬಂತೆ, ನನ್ನ ನಗುವಿನ ಆಸರೆಯಿಂದ ವಿಜಯನ ಮಾತಿನಷ್ಟೇ ಸಿಹಿಯಾಗು!. (ಸಿರಿ ದೂರ ಸರಿಯುತ್ತಾಳೆ. ವಿಜಯ ತನ್ನ ಕಾಫಿ ಮುಗಿಸುತ್ತಾನೆ.) ವಿಜಯ: (ಕುವೆಂಪು ಅವರ ಸಾಲುಗಳನ್ನು ನೆನಪಿಸಿಕೊಂಡು) ನೋಡಿದಿರಾ?‌ಸಿರಿ,  ನಿಮ್ಮ ನಗು, ಅದು “ಎಲ್ಲಿಯ ಆಸೆ, ಎಲ್ಲಿಯ ನಗುವು, ಬಾಳಿನ ಹೊಸ ಬೆಳಕು” ತಂದಿದೆ. ನನ್ನ ಕಪ್ ಖಾಲಿಯಾದರೂ ನಿಮ್ಮ ಕಿಲ ‌ಕಿಲ ನಗು ಈ ಕಪ್ ತುಂಬಿ ತುಳುಕುವಂತೆ ಮಾಡಿದೆ. ( ಬಿಲ್ ಬರುತ್ತದೆ – ₹ 340) ಸಿರಿ: ವಿಜಯ, ಕಾಫಿ ಕಹಿ ಇತ್ತು, ನಿಮ್ಮ ಮಾತು ಸಿಹಿ ಇತ್ತು. ಆದರೆ ಬಿಲ್ ಮಾತ್ರ “ಸತ್ತ ಮೇಲೆ ಸಂತೆ” ಎಂಬಂತೆ, ಊಹೆಗೂ ಮೀರಿದ ಕಹಿಯಾಗಿದೆ! ವಿಜಯ: ಮ್ಯಾನೇಜರ್‌, ಒಂದು ನಿಮಿಷ. ನಾವು ನಗುವಿನ ಮೂಲಕ ಕಾಫಿಯನ್ನು ಸಿಹಿಯಾಗಿ ಪರಿವರ್ತಿಸಿದ್ದೇವೆ. ಇನ್ನು ಕಾಫಿ ಕಹಿಯಲ್ಲ. ಹಾಗಾಗಿ, ನೀವು ನಮಗೆ ಕಹಿಯ ಕಾಫಿಗೆ ಹಾಕಿದ ದರವನ್ನು ಬದಲಾಯಿಸಿ, ಸಿಹಿಯಾದ ಕಾಫಿಯ ದರ ಮಾತ್ರ ಹಾಕಿ!. ಮ್ಯಾನೇಜರ್: (ನಗುತ್ತಾ) ಸಾರ್, ನಮ್ಮ ಕೆಫೆಯಲ್ಲಿ “ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯುವುದು” ಆದರೆ ತಮಾಷೆಗೆ ನಿಮ್ಮಿಬ್ಬರಿಗೆ ₹ 40 ರಿಯಾಯಿತಿ ಕೊಡುತ್ತೇನೆ. ವಿಜಯ: (ಸಿರಿ ಕಡೆ ತಿರುಗಿ) ನೋಡಿದಿರಾ? ನಿಮ್ಮ ನಗು ಬಿಲ್‌ನ ಕಹಿಯನ್ನು ಕೂಡ ಸೋಲಿಸಿತು!. (ಹಣ ಪಾವತಿಸಿ, ಕೆಫೆಯಿಂದ ಹೊರಡುತ್ತಾರೆ.) – ವಿಜಯ ಅಮೃತರಾಜ್.

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ Read Post »

ಕಾವ್ಯಯಾನ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ ಮನುಷ್ಯನೇಕೆ ಹೀಗೆ? ಯಾವುದೊಂದು ಬದಲಾಗಿಲ್ಲಮನುಷ್ಯನನ್ನು ಹೊರತು,ಎಷ್ಟು ಹೇಳಿದರೂ ಸಾಲದಲ್ಲಈ ಬಲುಬುದ್ಧಿಯ ಕುರಿತು ಹಕ್ಕಿಯಂತೆ ಹಾರಲು ಕಲಿತುಮೀನಿನಂತೆ ಈಜಲೂ ಬಲ್ಲ,ಮಂಗಳನ ಅಂಗಳದಿ ಇಳಿದುಎಲ್ಲವ ಕಂಡುಹಿಡಿದಿಹನಲ್ಲ ಮೋಡ ಬಿತ್ತನೆ ಮಾಡಿಹನಲ್ಲಮೌಢ್ಯತೆಯ ಬಿಡಲೇ ಇಲ್ಲ,ವಿಜ್ಞಾನ,ತಂತ್ರ ಬೆಳೆದಿವೆಯಲ್ಲಮಾಟ ಮಂತ್ರ ನಿಂತೇ ಇಲ್ಲ ಏನೆಲ್ಲ ಮನುಷ್ಯ ಮಾಡಿದನಲ್ಲಮನುಷ್ಯನಂತೆ ಬದುಕೇ ಇಲ್ಲ,ಹೊರಗಣ್ಣು ತೆರೆದು ನಿಂತಿಹನಲ್ಲಒಳಗಣ್ಣವು ಮುಚ್ಚಿವೆಯಲ್ಲ ಮನುಷ್ಯತ್ವವನೇ ಮರೆತಿಹೆವಲ್ಲಮಂಗನ ಜೊತೆ ಬೆರೆತಿಹೆವಲ್ಲ,ಈ ಜನ್ಮ‌ ದೊಡ್ಡದು ಅನತಾರಲ್ಲದಡ್ಡರಂತೆಯೇ ಬದುಕಿಹೆವಲ್ಲ ಎಮ್ಮಾರ್ಕೆ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ Read Post »

You cannot copy content of this page

Scroll to Top