ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ, ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್ ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ