ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್

ಅವನು ಮಲಗುವ ಹೊತ್ತು ಹೇ ತಂಗಾಳಿ ತುಸು ಮೆಲ್ಲಗೆ ಬೀಸು
ಹಸಿರ ಪತ್ತಲದ ಹೇ ಹೊಂಗೆ ಸೆರಗಗಾಳಿ ತುಸು ಮೆಲ್ಲಗೆ ಬೀಸು
ಕನಸ ಕುದುರೆಯನೇರಿ ತಾರೆಗಳ ಜೊತೆ ನಲಿಯುತ್ತಾನೆ
ಬರಬರನೇ ಬಡಿವ ಹೇ ಮಳೆಗಾಳಿ ತುಸು ಮೆಲ್ಲಗೆ ಬೀಸು
ಅವಳ ನಗೆಯ ಜಾಡು ಹಿಡಿದು ಹುಡುಕುತ್ತ ಹೋಗಿ ಬಳಲಿದ್ದಾನೆ
ಸುಯ್ಯಿಯೆಂದು ಸದ್ದು ಮಾಡುವ ಹೇ ಬಿರುಗಾಳಿ ತುಸು ಮೆಲ್ಲಗೆ ಬೀಸು
ಅವಳ ನೆನಪಿನ ನೂರು ಚಿತ್ರಕ್ಕೆ ಬಣ್ಣ ಬರೆದು ದಣಿದಿದ್ದಾನೆ
ವೇಗದಿ ಬೀಸಿ ಬರುವ ಹೇ ಕುಳಿರ್ಗಾಳಿ ತುಸು ಮೆಲ್ಲಗೆ ಬೀಸು
ಅರುಣಾಳ ಅಂತರಂಗದಿ ಹಗಲಿರುಳು ನಡೆದಿದೆ ಧ್ಯಾನ ಆರಾಧನಾ
ಹಾರುತ್ತಾರುತ್ತ ಬರುವ ಹೇ ಆಷಾಢಗಾಳಿ ತುಸು ಮೆಲ್ಲಗೆ ಬೀಸು

ಅರುಣಾ ನರೇಂದ್ರ



