ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಇಂದಿನ ಶಿಕ್ಷಕ

ಲೇಖನ ಇಂದಿನ ಶಿಕ್ಷಕ ಸುಮಾ ಕಿರಣ್ ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು ಶಾಲೆಗಳಲ್ಲಿ ಬೆಂಚು, ಕುರ್ಚಿಯ ವ್ಯವಸ್ಥೆ ಇರದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪದ್ಧತಿ ಇತ್ತು. ಬಹುಶಃ ಇದಕ್ಕೆ ಕಾರಣ ವಿದ್ಯಾರ್ಥಿಗಳಾದ ನಾವು ಅಧ್ಯಾಪಕರ ಸರಿ ಸಮಕ್ಕೆ ಕುಳಿತುಕೊಳ್ಳದೆ ವಿನಯ, ವಿಧೇಯತೆಯನ್ನು ರೂಡಿಸಿಕೊಳ್ಳಲಿ… ಎಂದಿರಬಹುದೇನೊ! ಹಾಗೆಯೇ ನಮ್ಮ ಅಧ್ಯಾಪಕರ ಬಗೆಗೆ ಅಪಾರ ಗೌರವ, ಪ್ರೀತಿ, ಭಯ-ಭಕ್ತಿ ಎಲ್ಲವೂ ತುಂಬಿರುತ್ತಿತ್ತು. ಅಧ್ಯಾಪಕರೊಂದಿಗೆ ವಾದ ಮಾಡುವುದಿರಲಿ; ಅಧ್ಯಾಪಕರು ಅಷ್ಟು ದೂರದಲ್ಲಿ ಕಂಡರೂ ಸಾಕು ನಮ್ಮ ತೊಡೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಅಧ್ಯಾಪಕರು ನೀಡುತ್ತಿದ್ದ ಶಿಕ್ಷೆಗಳು ಕೂಡ ಅಷ್ಟೇ ಕಠಿಣವಾಗಿ ಇರುತ್ತಿತ್ತು. ಇನ್ನೊಂದು ಬಾರಿ ಅಂತಹ ತಪ್ಪು  ಮಾಡದಂತೆ ಸದಾ ಎಚ್ಚರಿಸುವ ರೀತಿಯಲ್ಲಿ ಶಿಕ್ಷೆಗಳು ಇರುತ್ತಿದ್ದವು. ಅಧ್ಯಾಪಕರ ಬಗ್ಗೆ ಕೇವಲ ನಮಗೆ ಮಾತ್ರವಲ್ಲ ಮನೆ ಮಂದಿ, ಊರವರಿಗೆಲ್ಲ ಗೌರವ ಭಾವ. ಮನೆಯಲ್ಲಿ ನಾವೇನಾದರೂ ಅಧ್ಯಾಪಕರ ಬಗ್ಗೆ ದೂರು ಹೇಳಿದ್ದೆ ಆದರೆ, ಮನೆಯವರಿಂದ ನಮಗೇ ನಾಲ್ಕು ಗುದ್ದು ಬಿದ್ದು ನಮ್ಮ ಬಾಯಿ ಮುಚ್ಚುತ್ತಿತ್ತು. ಎಲ್ಲಿಯಾದರೂ ಅಧ್ಯಾಪಕರನ್ನು ನಮ್ಮ ಪಾಲಕರು ಕಂಡದ್ದೇ ಆದರೆ, ಅವರ ಬಾಯಿಯಿಂದ ಬರುತ್ತಿದ್ದ ಒಂದೇ ಪದ “ಗಂಡಿಗ್ ಸಮ ನಾಲ್ಕು ಹಾಕಿ ಮೇಷ್ಟ್ರೇ, ಹೇಳಿದ್ದ್ ಕೆಂತಿಲ್ಲ “. ಇನ್ನು ಅಧ್ಯಾಪಕ ವೃತ್ತಿ ಎನ್ನುವುದು ಗೌರವಕ್ಕೆ ಪಾತ್ರವಾದ ವೃತ್ತಿಯಾಗಿತ್ತು. ಶ್ರೇಷ್ಠ ವೃತ್ತಿ ಎಂಬ ಹೆಗ್ಗಳಿಕೆ ಕೂಡ ಇತ್ತು. “ಶಿಕ್ಷಕರು” ಎಂದರೆ ಊರಿನಲ್ಲೆಲ್ಲ ಒಂದು ಘನತೆ ಇತ್ತು. ಅವರ ಮಾತಿಗೆ ಊರವರು ಬೆಲೆ ಕೊಡುವ ಜೊತೆಗೆ ಶಿಕ್ಷಕರು ಊರಿನಲ್ಲಿರುವ ಎಲ್ಲರ ಮನೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿರುತ್ತಿದ್ದರು. ಶಿಕ್ಷಕರಿಗೆ ದೊರಕುತ್ತಿದ್ದ ಈ ಪರಿಯ ಪ್ರೀತಿ, ಗೌರವಗಳಿಂದಾಗಿ ಮುಂದಿನ ತಲೆಮಾರಿನವರೂ ಶಿಕ್ಷಕರಾಗುವ ಕನಸು ಕಾಣುತ್ತಿದ್ದರು ಎಂದರೆ ತಪ್ಪಾಗಲಾರದೆನೋ? ಮಿತ್ರರೇ, ಈಗ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅವಲೋಕಿಸೋಣವೇ? ಅಧ್ಯಾಪಕರೊಂದಿಗೆ ವಾದಿಸುವ,  ಅಧ್ಯಾಪಕರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವ ಇಂದಿನ ವಿದ್ಯಾರ್ಥಿಗಳಿಂದ ಅದ್ಯಾವ ಪರಿಯ ವಿನಯ ವಿಧೇಯತೆಗಳನ್ನು ನಿರೀಕ್ಷಿಸಲು ಸಾಧ್ಯ  ನೀವೇ ಹೇಳಿ! ಇನ್ನು ತಮ್ಮ ಮಕ್ಕಳ ಶಿಕ್ಷಕರ ಬಗ್ಗೆ ಪಾಲಕರಿಗೇ ಕಿಂಚಿತ್ತು ಗೌರವವಿಲ್ಲ. ಮಕ್ಕಳ ಎದುರಿನಲ್ಲಿ ಅವರ ಶಿಕ್ಷಕರನ್ನು ಏಕವಚನದಲ್ಲಿ ಹೀಯಾಳಿಸುವಾಗ ಮಕ್ಕಳಿಗಾದರೂ ಗೌರವ ಅದೆಲ್ಲಿಂದ ಮೂಡಬೇಕು? ಪಾಲಕರಾದ ನಾವು,  ನಮ್ಮ  ಹಿರಿಯರು ಅದ್ಯಾವ ಪರಿಯ ವಿನಯದಿಂದ ನಮ್ಮ ಶಿಕ್ಷಕರೊಂದಿಗೆ ವ್ಯವಹರಿಸುತ್ತಿದ್ದರು ಎಂಬುದನ್ನು ಈ ಕ್ಷಣಕ್ಕೆ ಮರತೇ ಬಿಟ್ಟಿರುತ್ತೇವೆ. ಇನ್ನು ತಮ್ಮ ಶಾಲಾ ಮಕ್ಕಳಿಗೆ ಹೊಡೆಯುವುದಂತಿರಲಿ; ಗಟ್ಟಿಯಾಗಿ ಗದರಿದರೂ ಅದೊಂದು ಅಪರಾಧದಂತೆ ಕಂಡು, ಅಧ್ಯಾಪಕರು ಮಹಾನ್ ಅಪರಾಧಿಗಳಂತೆ ಬಿಂಬಿತರಾಗುತ್ತಾರೆ. “ನನ್ನ ಮಗುವಿಗೆ ನಿಮ್ಮ ಶಿಕ್ಷಕರು ಗದರಿದರಂತೆ? ಅವನು ಶಾಲೆಗೆ ಬರಲು ಒಪ್ಪುತ್ತಿಲ್ಲ” ಎಂದು ಶಾಲಾ ಪ್ರಾಂಶುಪಾಲರೊಂದಿಗೆ ದೂರುವ ಪಾಲಕರು ಕ್ಷಣ ಕಾಲ ಹಿಂತಿರುಗಿ ನೋಡಿದ್ದರೆ… ಕೋಲಿನಲ್ಲಿ ಬಾಸುಂಡೆ ಬರುವಂತೆ ಬಡಿದಾಗಲೂ ಚಕಾರವೆತ್ತದ ನಮ್ಮ ಪಾಲಕರು ಕಣ್ಮುಂದೆ ತೇಲುತ್ತಾರೆ. ಇಂದಿನ ಮಕ್ಕಳಿಗೆ ಅವರು ತಪ್ಪು ಮಾಡಿದಾಗ ತಿದ್ದಲು ಅವಶ್ಯಕವಾದ ಸಣ್ಣ ಮಟ್ಟದ ದಂಡನೆ ಪಾಲಕರಿಂದ ಯಾ ಶಿಕ್ಷಕರಿಂದ ಆಯಾ ಕಾಲಕ್ಕೆ ವಿಧಿಸಲ್ಪಡದೆಯೇ ಇರುವುದರಿಂದಲೇ ನಾಗರಿಕ ಸಮಾಜದಲ್ಲಿ ತಪ್ಪಿನ ಮೇಲೆ ತಪ್ಪು ಎಸಗುತ್ತಾ ಕಾನೂನಿನ ಕುಣಿಕೆಗೆ ಸಿಲುಕಿ ಪೋಲೀಸರಿಂದ ಹೊಡೆತ ತಿನ್ನುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ! ಮಕ್ಕಳಿಗೆ ಹೊಡೆಯಬಾರದು, ಬೈಯಬಾರದು… ಇದನ್ನೆಲ್ಲ ಹೇಗೋ ಶಿಕ್ಷಕರು ಸಹಿಸಿಯಾರು. ಆದರೆ, ಬೋರ್ಡ್ ಮೇಲೆ ಬರೆದ ನೋಟ್ಸ್ ಅನ್ನು ಮಗು ಬರೆಯದಿದ್ದಾಗಲೂ ಅದು ಶಿಕ್ಷಕರದ್ದೆ ತಪ್ಪು! ಮಗುವಿನ ನೋಟ್ಸ್ ಪೂರ್ಣಗೊಳಿಸುವುದು, ಮಗು ಉತ್ತಮ ಅಂಕ ಗಳಿಸುವುದು…  ಎಲ್ಲದಕ್ಕೂ ಹೊಣೆಗಾರರು ಶಿಕ್ಷಕರೇ! ಗಮನಿಸಿ – ಮನೆಯಲ್ಲಿ ಇರುವ ನಮ್ಮ ಒಂದೇ ಮಗುವಿನ ನೋಟ್ಸ್ ಅನ್ನು ಪೂರ್ಣಗೊಳಿಸುವಲ್ಲಿ ಸಹಕರಿಸಲು ಆಗದ ಪಾಲಕರು ನಾವು. ಅದೇ ಒಬ್ಬ ಶಿಕ್ಷಕ ತರಗತಿಯಲ್ಲಿರುವ ನಲವತ್ತು ವಿದ್ಯಾರ್ಥಿಗಳನ್ನು ನೋಡಬೇಕು. ಅದೂ ಕೇವಲ ಒಂದೇ ತರಗತಿಯಲ್ಲ! ಅಂತಹ ಕನಿಷ್ಠ ಆರು ತರಗತಿಗಳನ್ನು ಪ್ರತಿನಿತ್ಯ ಗಮನಿಸಬೇಕು ಎಂದಾದರೆ ನಿಜಕ್ಕೂ ಶಿಕ್ಷಕರ ಬಗ್ಗೆ ಕರುಣೆ ಮೂಡುವುದಿಲ್ಲವೇ? ಮಿತ್ರರೇ, ಒಬ್ಬ ಶಿಕ್ಷಕ ಕೂಡ ಎಲ್ಲರಂತೆ  ಸಾಮಾನ್ಯ ಮನುಷ್ಯ! ತನ್ನ ವೃತ್ತಿಯ ಮೇಲಿನ ಗೌರವ, ಪ್ರೀತಿ, ಬದ್ಧತೆಯಿಂದ ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ನಗುನಗುತ್ತಾ ಎದುರಿಸುವ ಕಲೆಗಾರಿಕೆ ಶಿಕ್ಷಕನಿಗೆ ಕರಗತವಾಗಿರುತ್ತದೆ. ಹಾಗೆಂದು ಪಾಲಕರಾದ ನಾವು ಎಲ್ಲ ತಪ್ಪುಗಳನ್ನು ಶಿಕ್ಷಕರ ಕುತ್ತಿಗೆಗೆ ಕಟ್ಟಿ ನಿರಾಳವಾಗಿ ಇರಲು ಸಾಧ್ಯವೇ? ಖಂಡಿತ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಶಿಕ್ಷಣ ಸಂಸ್ಥೆಗಳ ಮೇಲೆ ಸುರಿದಿದ್ದೇವೆ. ಹಾಗೆಂದು ಶಿಕ್ಷಕರು ನಾವು ಬಯಸಿದಂತೆ ಇರಬೇಕು ಎಂಬುದು ಯಾವ ಪರಿಯ ನ್ಯಾಯ? ಕ್ಷಣ ಕಾಲ ಯೋಚಿಸಿ, ನೀವು ಮಹಾನಗರಗಳಲ್ಲಿ ಇದ್ದರೆ ಈ ಅನುಭವ ಖಂಡಿತ ನಿಮಗಾಗಿರುತ್ತದೆ. ನೀವು ವೃತ್ತಿ ನಿರತರಾಗಿದ್ದು ನಿಮ್ಮ ಒಂದು ಮಗುವನ್ನು ನೋಡಿಕೊಳ್ಳಲು ಆಯಾಗಳಿಗೆ ತಿಂಗಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಚೆಲ್ಲಿರುತ್ತೀರಿ. ಆದರೆ, ಒಬ್ಬ ಖಾಸಗಿ ಶಾಲಾ ಶಿಕ್ಷಕ/ಅಧ್ಯಾಪಕ ಇದಕ್ಕೂ ಕಡಿಮೆ ಸಂಬಳಕ್ಕೆ ಪ್ರತಿದಿನ ಪ್ರತಿ ತರಗತಿಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಧಾರಿಸಿ, ಅವರ ಎಲ್ಲ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿ, ಕ್ಷಣ ಕ್ಷಣಕ್ಕೂ ಅವರೆಡಗೆ ಕಾಳಜಿ ತೋರಿ, ಊಟದಿಂದ ಹಿಡಿದು ಪಾಠದವರೆಗೆ ಗಮನಿಸುತ್ತಾರೆ. ಅಂತಹ ಶಿಕ್ಷಕರ ಬಗ್ಗೆ ನಮಗದೆಷ್ಟು ಗೌರವ ಅಭಿಮಾನವಿರಬೇಕು. ಈಗಲಾದರೂ ಈ ಬಗ್ಗೆ ಯೋಚಿಸೋಣವೇ?? ಸುಮಾ ಕಿರಣ್

ಇಂದಿನ ಶಿಕ್ಷಕ Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಗಜಲುಗಳು

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲುಗಳು ಅವನಿರುವಲ್ಲಿ ಶಿಶಿರ ಕಾಲದಲ್ಲೂ ಕವಿತೆಯ ಸಾಲುಗಳು ಚಿಗುರೊಡೆಯುತ್ತವೆ..ಗೋರಿಯೊಳಗಣ ದೇಹದಲ್ಲೂ ಬತ್ತಿದ ಭಾವಗಳು ಪುಟಿದೇಳುತ್ತವೆ..!! ಮುಗಿದ ದಾರಿಯ ಕೊನೆಯ ಹೆಜ್ಜೆಗೆ ಜೊತೆಯಾದವನು..ಅವನೆದೆಗೆ ಒರಗಿದಾಗ ಹತಾಶೆಗೀತೆಗಳು ಪ್ರೇಮಸುನೀತಗಳಾಗುತ್ತವೆ..!! ಪ್ರೇಮ,ತಲ್ಲಣ, ವಿಷಾದ,ರೋಮಾಂಚನಗಳ ರೂಪಕದಂತೆ ನನಗವನು..ಆತ್ಮದೊಳಗೆ ಮೌನಿಯಾದ ನನ್ನಲ್ಲೀಗ ಮಾತುಗಳು ತುಟಿಬಿಚ್ಚುತ್ತವೆ..!! ನನ್ನೊಳಗಿನ ಅವನ ನಡಿಗೆ ನಿಂತರೆ ಸಾಕು ಕಾಲದ ಜೊತೆ ಕಾಲು ಮನ್ನಡೆಯದು..ಕಂಗಳು ದಣಿದರೆ ಗಡಿಯಾರದೊಳಗಣ ಮುಳ್ಳುಗಳು ಚುಚ್ಚುತ್ತವೆ..!! ಶೃತಿ ತಪ್ಪಿದ ಬದುಕಲಿ ಸೇರಿ ಏಳು ಜನ್ಮಕ್ಕಾಗುವಷ್ಟು ಫನಾಸುರಿಸಿಹನು..ಅವನು ನನ್ನೊಳಗೆ ಕಾಲಿಟ್ಟ ಮೇಲೆ ಹಾಡಾಗದ ಲಯಗಳು ತಾಳವಾಗುತ್ತವೆ..!! ಅವನೆಂದರೆ ಮೊದಲ ರಾತ್ರಿಯಲ್ಲಿ ತೊಯ್ದ ಮಣ್ಣಿನ ಘಮಲುಮಂಜು ಮುಸುಕಿದ ಮನಸ್ಸಿಗೆ ಆವನೊಲುಮೆಯ ಕಿರಣಗಳು ತಾಕುತ್ತವೆ..!! ಅವನಿದ್ದರೆ ದಾಟಲಾಗದ ನದಿಗಳು ದಾರಿಮಾಡಿಕೊಡುತ್ತವೆ..ಜಯದ ಮೆಟ್ಟಿಲೇರಲು ಒಡ್ಡುವ ಅಡ್ಡಿಗಳ ಹಾದಿಗಳು ಬಟಾಬಯಲಾಗುತ್ತವೆ..!! *** ಮತ್ತದೇ ಇಳಿಸಂಜೆಗಳಲಿ ಹಾಜರಿ ಹಾಕಬೇಡಿ ಕಹಿ ನೆನಪುಗಳೇ ಸುಮ್ಮನಿರಿ..ಚಲಿಸುತಿಹ ಬದುಕಿಗೆ ಬೇಸರದಿ ಬದಿಒಡ್ಡದಿರಿ ನೋವುಗಳೇ ಸುಮ್ಮನಿರಿ..!! ಜೀವನಸತ್ವದ ಶರಾಬನ್ನು ಹನಿಹನಿಯಾಗಿ ಹೀರುವ ಉಮೇದಿ ಮನಕೆ..ಹಸಿ ಮಡಿಕೆಯೊಳಹೊಕ್ಕ ನೀರಾಗಿ ಸೋರಿಹೋಗಬೇಡಿ ಅನುಭವಗಳೇ ಸುಮ್ಮನಿರಿ..!! ಅದೆಷ್ಟೋ ತಿರುವುಗಳು ಹಠಾತ್ ಪಲ್ಲಟದ ಕಾಲದಂತೆ ನಮ್ಮ ಪಾಲಿಗೆ..ಮೊಳಕೆಯೊಡೆವ ಮೊದಲೇ ಸೊರಗಬೇಡಿ ಬೀಜಗಳೇ ಸುಮ್ಮನಿರಿ..!! ಜೀವನ ಯಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿದ ಕಲ್ಲುಗಳೇ ಮುತ್ತುಗಳಾಗಬಹುದು…ಸಾಣೆ ಹಿಡಿಯುವ ಸಂಗತಿಗಳಿಗೆ ದೂರಾಗಬೇಡಿ ಗಾಯಗಳೇ ಸುಮ್ಮನಿರಿ..!! ನಮ್ಮದೇ ನೈಜ ಸಾಲುಗಳು ಮತ್ಯಾರದೋ ಓದಲಿ ಕಥೆಯಾಗಬಹುದು…ಜಯದ ಮದವನ್ನು ನೆತ್ತಿಗೇರಿಸಿಕೊಳ್ಳಲುಬೇಡಿ ಸಾಧನೆಗಳೇ ಸುಮ್ಮನಿರಿ..!! ಜಯಂತಿ ಸುನಿಲ್

ಜಯಂತಿ ಸುನಿಲ್ ಗಜಲುಗಳು Read Post »

ಕಾವ್ಯಯಾನ, ಗಝಲ್

ಗಝಲ್

ಕಾವ್ಯ ಸಂಗಾತಿ ಗಝಲ್ ಆಸೀಫಾ ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ ಪುಳಕಿತವು ಮನ ತನುವು ರೋಮಾಂಚನ ಸಿಂಚನಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮಇತಿಹಾಸ ಬರೆಯಬೇಕಿದೆ ಆಸೀ ಲೇಖನಿಯಾಗು ಎಂದ-

ಗಝಲ್ Read Post »

ಪುಸ್ತಕ ಸಂಗಾತಿ

ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು

ಪುಸ್ತಕ ಸಂಗಾತಿ ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು ಶಿಕ್ಷಕನ ಮನದಾಳದಿಂದ ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು ಕೃತಿ : ಶಿಕ್ಷಕನ ಮನದಾಳದಿಂದ ಲೇಖಕರು : ಡಿ. ಎನ್. ಅಕ್ಕಿ. ಫೋನ್ ಸಂಖ್ಯೆ :  94485 77898 ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಗ್ರಾಮ ಸೂಫಿ ಪರಂಪರೆಯ ನೆಲ. ಬಿಜಾಪುರದ ಆದಿಲ್ ಶಾಯಿ ಮನೆತನದ ಗುರುವಾಗಿದ್ದ ಹಜರತ್ ಚಂದಾ ಹುಸೇನಿ ಸೂಫಿ ಸಂತ  ಈ ನೆಲದಲ್ಲಿ ಸಂಚರಿಸಿ ಧರ್ಮ ಸಮನ್ವಯತೆ ಭಾವೈಕ್ಯತೆ ಮೂಡಿಸಿದರು. ಇಂತಹ ನೆಲದ ಸಾಮರಸ್ಯದ ಸುಮವಾಗಿ ಅರಳಿದ ಚಿತ್ರಕಲಾ ಶಿಕ್ಷಕ ದೇವಿಂದ್ರಪ್ಪ. ನಾಭಿರಾಜ ಅಕ್ಕಿ. 1948 ರಲ್ಲಿ ಹೈದರಾಬಾದ್ ನಿಜಾಮನ ಆಡಳಿತಕಾಲ ಮತ್ತು ರಜಾಕಾರರ ಕ್ರೂರ ದಬ್ಬಾಳಿಕೆಯ ಕಾಲದಲ್ಲಿ ಜನಿಸಿದರು. ಇವರ ಬಾಲ್ಯವನ್ನು ನೋಡುವುದಾದರೆ ಡಿ.ಎನ್.ಅಕ್ಕಿ ಅರ್ಧದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು ನಂತರ ಇವರ ಚಿತ್ರಕಲಾ ನೈಪುಣ್ಯತೆಯನ್ನು ಕಂಡ ಗ್ರಾಮದ ಶಾಲಾ ಶಿಕ್ಷಕರು ವಿಧ್ಯಾಭ್ಯಾಸ ಮುಂದುವರೆಸಲು ಸಲಹೆ ನೀಡುವರು ಮುಂದೆ ಹತ್ತನೆ ತರಗತಿಯ ವಿದ್ಯಾಭ್ಯಾಸದ ನಂತರ ಇವರು ಚಿತ್ರಕಲೆಯಲ್ಲಿ ಡಿಪ್ಲೋಮೋ ಮತ್ತು ಆರ್ಟಮಾಸ್ಟರ್ ಪದವಿ ಪಡೆದು ಸರ್ಕಾರದಿಂದ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡು ವೃತ್ತಿ ಜೀವನವನ್ನು ಆರಂಭಿಸಿದರು. ಚಿತ್ರಕಲಾ ಶಿಕ್ಷಕ ವೃತ್ತಿಯೊಂದಿಗೆ ಸ್ಥಳ ಮಾಹಿತಿ ಮತ್ತು ಪ್ರಾಕೃತ ಐತಿಹ್ಯಗಳ ಸಂಶೋದನೆಯ ಇತಿಹಾಸಕಾರರಾಗಿ, ಕವಿಗಳಾಗಿ,ಸ್ಮರಣ ಸಂಚಿಕೆಗಳಿಗೆ ಅಪರೂಪದ ಮಾಹಿತಿ ನೀಡುವ ಲೇಖನಗಳನ್ನು ನೀಡುವ ಅಂಕಣ ಬರಹಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ನಾಟಕ ರಚನಾಕಾರರಾಗಿ ಹೀಗೆ ಹಲವಾರು ದಾರಿಗಳಲ್ಲಿ ಇವರ ಹೆಜ್ಜೆ ಗುರುತುಗಳಿವೆ. ತಮ್ಮ ವೃತ್ತಿ ಮತ್ತು ಪ್ರವೃತ್ತಿಯೊಂದಿಗೆ ಕ್ರೀಯಾಶೀಲತೆಯಿಂದ ತೊಡಗಿಸಿಕೊಂಡು ಅನೇಕ ಮೌಲ್ಯಿಕ ಕೃತಿಗಳನ್ನು ಕನ್ನಡ ಭಾಷಾ ಲೋಕಕ್ಕೆ ತಮ್ಮ ಕಾಣಿಕೆ ಸಮರ್ಪಿಸಿರುವರು. ‘ಶಹಾಪುರ ತಾಲ್ಲೂಕು ದರ್ಶನ’  ಮುಂಬೆಳಗು, ಸಗರನಾಡು ಸಿರಿ , ಹಡದವ್ವ ಹಾಡ್ಯಾಳ , ವರ್ಧಮಾನ ಮಹಾವೀರ , ಜೈನ ವಿಗ್ರಹಗಳು, ಜೈನ ಜನಪದ ಹಾಡುಗಳು, ಬಾನರಂಗ(ರೇಡಿಯೋನಾಟಕಗಳು), ಎಮ್.ಟಿ. ಭೋಪಲೆ (ಜೀವನ ಚರಿತ್ರೆ), ಸನ್ನತಿ ಚಂದ್ರಲಾಂಬಾ, ಮಯಾಮದ್ದಲೆ , ಯಕ್ಷಪ್ರಶ್ನೆ , ಶಿಕ್ಷಕನ ಮನದಾಳದಿಂದ , ಜೀನದನಿ ,ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ , ಹಕ್ಕುಲತೆನಿ , ಗಂಧೋದಕಗಳಂತಹ ಮೌಲಿಕ ಕೃತಿಗಳನ್ನು ಕಾಣಬಹುದು. 1997 ರಲ್ಲಿ ಕೇಂದ್ರ ಸರ್ಕಾರ ಆದರ್ಶ ಶಿಕ್ಷಕ ಗೌರವ ಪುರಸ್ಕಾರ ನೀಡಿ ಗೌರವಿಸಿದೆ.ಜೈನ ಪ್ರಶಸ್ತಿ, ಸಗರನಾಡು ಸೇವಾರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರ ಸಾಧಕ ಜೀವನಕ್ಕೆ ಸಂದ ಗೌರವಗಳಾಗಿವೆ. ನಮ್ಮ ಸಾಂಸ್ಕೃತಿಕ ಹಿರಿಮೆಯ ಎತ್ತರವನ್ನು ನಾಡಿಗೆಲ್ಲ ತೋರುವ, ಜಾಹೀರಾತು ರಹಿತ  “ಮಾರ್ಗದರ್ಶಿ”  ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಮಾಸಿಕ ಪತ್ರಿಕೆಯಾಗಿದ್ದು ಈ ಪತ್ರಿಕೆಗೆ ಶ್ರೀಯುತ ಡಿ. ಎನ್. ಅಕ್ಕಿ. ಅವರು ಬರೆದ ಅಂಕಣ ಬರಹಗಳನ್ನ ಒಟ್ಟುಗೂಡಿಸಿ “ಶಿಕ್ಷಕನ ಮನದಾಳದಿಂದ” ಎನ್ನುವ ಪುಸ್ತಕವನ್ನು ಪ್ರಕಟಿಸಲಾಗಿದೆ.ಒಟ್ಟು ಹತ್ತೊಂಬತ್ತು ಲೇಖನಗಳನ್ನು ಒಳಗೊಂಡ ಈ ಕೃತಿಯನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೋಲ್ಕತ್ತಾದ ರಾಜಾರಾಮ್ ಮೋಹನ್ ರಾಯ್ ಸಂಸ್ಥೆ, ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಖರೀದಿಸಿ ಕೃತಿಯ ಮೌಲ್ಯವನ್ನು ಹೆಚ್ಚಿಸಿ, ಕೃತಿಕಾರನ ವಿಚಾರಗಳನ್ನು ಎಲ್ಲೆಡೆಗೂ ವಿಸ್ತರಿಸಲು ಕಾರಣವಾಗಿವೆ. ವೃತ್ತಿ ಜೀವನದ ಬದುಕಿನಲ್ಲಿ ಸುತ್ತಲಿನ ಆಗು ಹೋಗುಗಳಿಗೆ ಮನುಜ ಪ್ರೇಮ, ಆದರ್ಶ, ನಿಷ್ಟೆಗಳಿಂದ ವರ್ತಿಸಿದ, ಬೋಧಿಸಿದ ಅಂತೆಯೇ ಬದುಕಿದ ಸರಳ ಜೀವಿ ಶ್ರೀಯುತ ಅಕ್ಕಿಯವರು. ಡೆಕ್ಕನ್ ಹೆರಾಲ್ಡ್ ಕಲಬುರ್ಗಿಯ ಪ್ರಧಾನ ಸಂಪಾದಕರು ಈ ಕೃತಿಗೆ ಮುನ್ನುಡಿ ಬರೆದಿದ್ದು ಅವರ ಅಭಿಪ್ರಾಯದಂತೆ ಈ ಕೃತಿಯಲ್ಲಿನ ವಿಚಾರಗಳು ಆತ್ಮ ಚರಿತ್ರೆಯ ಭಾಗದಂತೆ ಕಂಡರೂ ಅದರ ವಿಸ್ತಾರತೆ, ಕಾಣಿಸುವ ದೂರ ನೋಟ ಓದುಗರ ಗ್ರಹಿಕೆಯನ್ನು, ವಿಚಾರ ಪರಿಧಿಯನ್ನು ಸ್ವಗತದ ನೆಲೆಯಿಂದ ಸಾರ್ವತ್ರಿಕವಾಗಿ ವಿಶ್ಲೇಷಿಸಿಕೊಳ್ಳುವಂತೆ ಮಾಡುವಲ್ಲಿ ಯಶ ಕಂಡಿವೆ. ನೆಲದ ಋಣ ತಲೆಬರಹದ ಲೇಖನದ ಭಾಗದಲ್ಲಿ ತಮ್ಮ ಬಾಲ್ಯದ ಜೀವನ ಮತ್ತು ಶಿಕ್ಷಕ ಜೀವನದ ಆರಂಭಿಕ ಕಾಲಘಟ್ಟದ ಪರಿಚಯ ಮಾಡಿಕೊಡುತ್ತಾರೆ. ಹೈದರಾಬಾದ್ ಕರ್ನಾಟಕ ಎಂದರೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಳಚಲು ಸಂಕಲ್ಪಿಸಿಯೇ ನಾನು ಈ ಭಾಗದ ಪೂರ್ವ ಚರಿತ್ರೆಯನ್ನು ಶೋಧಿಸುವಿಕೆಯಲ್ಲಿ ಕಾರ್ಯ ನಿರತನಾದೆ ಎನ್ನುತ್ತಾ ತಾವು ವಾಸಿಸುವ ಊರಿನ ಸುತ್ತ ಮುತ್ತಲಿನ ಎಲ್ಲ ಹಳ್ಳಿಗಳನ್ನು ಖುದ್ದಾಗಿ ಭೇಟಿ ಮಾಡಿ ಅಲ್ಲಿನ ಸಾಂಸ್ಕೃತಿಕ ಕುರುಹುಗಳಾದ, ಸ್ಮಾರಕಗಳನ್ನು, ತಮ್ಮ ಪತಿಯೊಂದಿಗೆ ಚಿತೆ ಏರಿದ ಮಾಹಾಸತಿಯರ ಕುರುಹುಗಳಾಗಿ ಇರುವ ಮಾಸ್ತಿಕಲ್ಲುಗಳ. ದೇವಸ್ಥಾನಗಳು, ಬೌದ್ಧ ಮಂದಿರಗಳು ಮಸೀದಿಗಳು ಇಗರ್ಜಿಗಳು, ಜೈನ ಬಸದಿಗಳನ್ನು ಪರಿಶೀಲಿಸಿ ಅವುಗಳ ಇಂದಿನ ಸ್ಥಿತಿಗತಿಗಳು ಅವುಗಳ ಮೂಲ ಸ್ಥಾನಗಳು, ಪಲ್ಲಟಗಳು ಎಲ್ಲವನ್ನೂ ದಾಖಲಿಸುವ ಕಾರ್ಯದಲ್ಲಿ ತೊಡಗಿದರು. ಇವುಗಳನ್ನು ಕಾಗದದಲ್ಲಿ ನಮುದಿಸಿದರೆ ಮುಗಿಯಿತೇ ? ಅಥವಾ ಅವುಗಳನ್ನು ಅಚ್ಚಾಕಿಸಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ, ಸೆಮಿನಾರ್ ಗಳು  ಭಾಷಣಗಳು ಪಠ್ಯ ಪುಸ್ತಕದ ಓದಿಗೆ ಈಡು ಮಾಡಿದರೆ ಸಾಲದು ಅವುಗಳ ಸುತ್ತ ಒಡನಾಡುವ ಅವುಗಳ ಕುರಿತು ಮಾಹಿತಿಜ್ಞಾನವಿರದ ಜನಸಾಮಾನ್ಯರಲ್ಲಿ ಅವುಗಳನ್ನು ಹಾಳುಗೆಡುವದಂತೆ ಮಾಸ್ತಿಕಲ್ಲುಗಳು ಮತ್ತು ದೇವರ ವಿಗ್ರಹಗಳ ಮೇಲೆ ಎಣ್ಣೆ ತುಪ್ಪ ಅಥವಾ ಇನ್ನಿತರ ಪೂಜಾ ದ್ರವ್ಯಗಳನ್ನು ಬೇರೆ ವಸ್ತುಗಳನ್ನು ಸುರಿದು ವಿರೂಪ ಗೊಳಿಸದಂತೆ , ಒಕ್ಕಲುತನದಲ್ಲಿ ಬಳಸುವ ಕೊಡಲಿ  ಕುಡುಗೋಲುಗಳನ್ನು ಹರಿತಗೊಳಿಸಲು ಅವುಗಳ ಮೇಲೆ ಮಸೆದು ಹಾಳು ಮಾಡದಂತೆ ಜಾಗೃತಿ ಮೂಡಿಸುವುದು, ಅಲ್ಲದೆ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ರಕ್ಷಿಸಬೇಕಾದದ್ದು ಅತಿ ಅವಶ್ಯ ಎನ್ನುವ ಅವರ ಅಭಿಪ್ರಾಯ ಒಪ್ಪಲೇಬೇಕು. ಪರಧರ್ಮ ಮತ್ತು ಪರಕೀಯರ ಆಕ್ರಮಣಕ್ಕಿಂತಲೂ ಯಂತ್ರ ಸಂಸ್ಕೃತಿ ಮತ್ತು ಯಾಂತ್ರಿಕ ಬದುಕು ನಮ್ಮ ಸಾಂಸ್ಕೃತಿಕ ಕಲಾ ಬದುಕಿಗೆ ದೊಡ್ಡ ಪೆಟ್ಟನ್ನು ಕೊಟ್ಟಿದೆ ಇದರ ಫಲವಾಗಿ ನಮ್ಮ ನೆಲದ ಜನಪದ ಹಾಡುಗಳು ಆಟಗಳು ಕುಣಿತಗಳು ಆಚರಣೆಗಳ ಕಣ್ಮರೆಯ ಬಗ್ಗೆ ನೀಡುವ ಎಚ್ಚರಿಕೆಯನ್ನು ಗಮನಿಸಲೇಬೇಕು. ಹೆಸರು ಮತ್ತು ಹುದ್ದೆಗಳಿಗೆ ಅಪಾರ ಸಮಯ ಮತ್ತು ಶಕ್ತಿ ವ್ಯಯಿಸದೆ ಸಾಮಾಜಿಕ ಜೀವನಕ್ಕೆ ಕೊಡುಗೆಯನ್ನು ಕೊಟ್ಟು ಹೋಗುವ ಉನ್ನತ ಆದರ್ಶವನ್ನು ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ತಿಳಿಸುವ ಪ್ರಯತ್ನವಿದೆಯಿಲ್ಲಿ. ‘ ಹದಭರಿತ ಹಳ್ಳೀ ಬದುಕು ‘  ಲೇಖನದಲ್ಲಿ ಈ ಮೊದಲು ಹಳ್ಳಿಯ ಪರಿಸರದಲ್ಲಿ ಕಂಡುಬರುತ್ತಿದ್ದ ಸಂಘಜೀವನ ಸಾಮರಸ್ಯದ ಒಡನಾಟ ಪರಸ್ಪರರಲ್ಲಿ ಇದ್ದ ಸಮಭಾವ ಸಹಕಾರದ ಸಹಜ ಜೀವನ ಪದ್ಧತಿಯನ್ನು ನೆನೆಯುತ್ತಾ ತಮ್ಮ ಬಾಲ್ಯದ ಗುರುಗಳನ್ನು ಅವರ ಸಹಜ ಶುದ್ಧ ಜೀವನ ಶೈಲಿ ಮತ್ತು ಉನ್ನತ ವಿಚಾರಗಳ ಭೋದನೆ ಹೇಗೆ ತನ್ನ ಮೇಲೆ ಪ್ರಭಾವ ಬೀರಿದವು ಎಂದು ನಿವೇದಿಸುತ್ತಲೆ. ನಿತ್ಯ ಅಧ್ಯಯನ ಪ್ರವೃತ್ತಿ ತೊರೆದ ಶಿಕ್ಷಕರ, ಸಂಬಳಕ್ಕಾಗಿ ನಾಮಕಾವಾಸ್ತೆ ಬೋಧಿಸುವ ಬಹುಸಂಖ್ಯೆಯ ಶಿಕ್ಷಕರ ಬೇಜವಾಬ್ದಾರಿ ನಡೆಯನ್ನು ಖಂಡಿಸಿ ಶಾಲಾ ಶಿಕ್ಷಕ ನಡೆದು ಬರುತ್ತಿದ್ದರೆ ಕೈಯೆತ್ತಿ ನಮಸ್ಕರಿಸುವ ಹಳ್ಳಿಗರಿಂದ ‘ ಏ… ಮಾಸ್ತರ ಇಲ್ಲಿ ಬಾ’ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ತಮ್ಮ ವರ್ತನೆಗಳಿಂದ ವೃತ್ತಿ ಘನತೆಗೆ ಚ್ಯುತಿತಂದುಕೊಂಡ ಇಂದಿನ ಬಹುತೇಕ ಬೇಜವಾಬ್ದಾರಿ ಶಿಕ್ಷಕರ ಮನಸ್ಥಿತಿಯನ್ನು ಅಲ್ಲಗಳೆದು, ನಾಡಿನ ನಾಳೆಯ ನಾಗರಿಕರ ನಿರ್ಮಾಣಕಾರ್ಯದಲ್ಲಿ ಅಸಡ್ಡೆ ಸಲ್ಲದು ಶಿಕ್ಷಕ ತನ್ನ ನಡತೆಯಿಂದ ಪರೋಪಕಾರ ದಿಂದ ಸದಾ ಅಧ್ಯಯನ ಪ್ರವೃತ್ತಿಯಿಂದ ಗುರು ಸ್ಥಾನಕ್ಕೆ ನಿಷ್ಟನಾಗಿ ಬದುಕಬೇಕು ಎನ್ನುವ ಕಿವಿಮಾತು ಎಲ್ಲರೂ ಗಮನಿಸಲೇ ಬೇಕು. ‘ ಕಾವ್ಯ ಸಿದ್ಧಿಗೆ ಭಾವ ಸಿದ್ಧಿಗೆ ಮುತ್ತು ಕೋದಿದೆ ಈ ನೆಲ ‘ ಸುರಪುರ ತಾಲೂಕಿನ ರಂಗಂಪೇಠನ ಹಿರಿಯ ಕವಿ ಶ್ರೀ ಬಸವೇಶ್ವರನಾಥ ಸುಗೂರುಮಠ ಇವರ ಕವನದ ಸಾಲುಗಳು ಶ್ರೀ.ಅಕ್ಕಿಯವರ ಮತ್ತೊಂದು ಲೇಖನದ ತಲೆ ಬರಹವಾಗಿದ್ದು ತನ್ನ ಸುತ್ತಲಿನ, ಪೂರ್ವದ, ಸಮಕಾಲೀನ ಲೇಖಕರ ಕವಿಗಳ ಬರೆಹಗಳನ್ನು ಬದುಕನ್ನು ಸೂಕ್ತ ಅಧ್ಯಯನ ಕೈಗೊಂಡ ಲೇಖಕರು ಲಕ್ಷ್ಮೀಶನ ” ಜೈಮಿನಿ ಭಾರತ ” ” ದಾಸಸಾಹಿತ್ಯ ” ” ವಚನ ಸಾಹಿತ್ಯಗಳಂತಹ ” ಸಾಹಿತ್ಯಿಕ ಕೊಡುಗೆಗಳನ್ನು  ಕ್ಷಾತ್ರ ತೇಜಸ್ಸಿನ ಅನೇಕ ಅರಸರು ಸಾಮಂತರು ಮಾಂಡಲಿಕರು ಈ ಭಾಗದಲ್ಲಿ ಆಳ್ವಿಕೆ ಮಾಡಿ ಕಲೆ ವಾಸ್ತುಶಿಲ್ಪ  ಸಂಗೀತ ಮುಂತಾದ ಕ್ಷೇತ್ರಗಳಿಗೆ ನೀಡಿದ ಪ್ರೋತ್ಸಾಹದಿಂದ ಇಲ್ಲಿ ಬೆಳೆದುಕೊಂಡು ಬಂದ ಸಾಂಸ್ಕೃತಿಕ ವೈವಿಧ್ಯಮಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಇಲ್ಲಿನ ಇತಿಹಾಸವನ್ನು ತೆರೆದಿಡುವಲ್ಲಿ ಯಶಸ್ಸು ಕಂಡಿರುವರು. ತಮ್ಮ ಬಾಲ್ಯದ ಸಮಯದಲ್ಲಿ ಹರೆಯದ ಕಾಲದಲ್ಲಿ ಇದ್ದ ಜನರ  ಜೀವನ ಕ್ರಮ ಅರಿತು ಜನರಲ್ಲಿ ಇದ್ದ ಪರಸ್ಪರ ಸಹಕಾರ ಮನೋಭಾವನೆ ನಿತ್ಯ ದುಡಿಮೆಯ ಪ್ರವೃತ್ತಿಯಿಂದ ಹೇಗೆ ಒಬ್ಬರು ಇನ್ನೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ವಿಚಾರಗಳು ಜನ ಮಾನಸದ ಮಿಡಿತಗಳು ಹೇಗೆ ಲೇಖಕರ ಬದುಕಿನೊಂದಿಗೆ ತಳುಕು ಹಾಕಿಕೊಂಡಿದ್ದವು ಎನ್ನುವುದನ್ನು ಇಲ್ಲಿ ಕಾಣಬಹುದು. ತಮ್ಮ ತಲೆಮಾರಿನ ಜನರಲ್ಲಿಯೆ ಬಹಳಷ್ಟು ಹೃದಯವಂತ ಜನರನ್ನು, ಸಾಹಿತಿಗಳನ್ನು ಲೇಖಕರನ್ನು ಹೊರತು ಪಡಿಸಿ ದುಡಿಯದೇ ಸಂಬಳಕ್ಕಾಗಿ, ಯೋಗ್ಯತೆಯಿಲ್ಲದೇ ಪ್ರಶಸ್ತಿಪುರಸ್ಕಾರಕ್ಕಾಗಿ, ಹಪಹಪಿಸುತ್ತಿರುವ ಅನೇಕರ ಲಾಲಸೆಗಳನ್ನ, ಮನೋ ದೌರ್ಬಲ್ಯಗಳನ್ನು ತೆರೆದಿಡುತ್ತಾ ಹಳಿಯುತ್ತಾರೆ ಒಂದು ಸಂದರ್ಭದಲ್ಲಿ ಇಂದಿನಂತೆ ಹೆಚ್ಚು ಡಿಗ್ರಿ ಗಳನ್ನ ಪಡೆಯದ ಹಿಂದಿನ ಕಾಲದ ಜನ ತಮಗೆ ಒಲಿದ ಗರಿಷ್ಟ ಸ್ಥಾನಮಾನಗಳನ್ನು, ಪ್ರಶಸ್ತಿ ಪುರಸ್ಕಾರಗಳನ್ನು, ಅಧ್ಯಕ್ಷ ಪದವಿಗಳನ್ನು ತಾವು ಇನ್ನೂ ಕಿರಿಯರು, ಅನನುಭವಿಗಳು ಎಂದು ನಯವಾಗಿ ತಿರಸ್ಕರಿಸಿ ತಮಗಿಂತಲೂ ಯೋಗ್ಯರನ್ನು ಸೂಚಿಸುವ ಹಿರಿತನ ಹೊಂದಿದ್ದ ವ್ಯೆಕ್ತಿಗಳನ್ನು ಕಂಡ ಲೇಖಕರು ಇಂದಿನ ಡಿಗ್ರಿ ವೀರರ ತದ್ವಿರುದ್ದ ನಡೆಗಳನ್ನ, ಸಣ್ಣತನದ ವರ್ತನೆಗಳನ್ನು ಮತ್ಸರದ ಗುಣ ಪ್ರದರ್ಶನವನ್ನು ಕಂಡು ಛೇಡಿಸಿದ್ದು, ಜಾಡಿಸಿದ್ದು ಇಲ್ಲಿದೆಅನ್ಯೋನ್ಯತೆ ಬದುಕಿಗೆ ತುಂಬಾ ಅಗತ್ಯವಾದದ್ದು ಇದು ನಮ್ಮೆಲ್ಲರ ಬದುಕಿಗೆ ಅಷ್ಟೇ ಅಲ್ಲದೆ ನಾಡಿನ, ದೇಶದ ಘನತೆಗು ಕೂಡ ಅವಶ್ಯ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂದ ಅಲ್ಲಮಪ್ರಭುವಿನ ವಚನ ಉದಾಹರಿಸುತ್ತಾ ಬೆಟ್ಟದಲ್ಲಿರುವ ನೆಲ್ಲಿಕಾಯಿಗೆ ಉಪ್ಪು ಬೆರೆತರೆ ಹೇಗೆ ಅದು ಬುಂಜಿಸಲು ತಕ್ಕುದಾಗಿ, ರುಚಿಯನ್ನು ಹೊಂದುವುದೋ ಹಾಗೆಯೇ ನಾವು ನಮ್ಮ ಸುತ್ತಲಿನ ಜನರೊಂದಿಗೆ ಜಾತಿ, ಮತ,ಕುಲ ಬೇಧಗಳನ್ನು ಮರೆತು ಮನುಷ್ಯ ಪ್ರೇಮವೇ ಬಹುಮುಖ್ಯ ಎನ್ನುವ ನಿಟ್ಟಿನಲ್ಲಿ ಬದುಕಬೇಕಾದ ಅಗತ್ಯತೆಯನ್ನು ಒತ್ತಿ ಹೇಳುತ್ತಾ ಪರಸ್ಪರ ಅವಲಂಬನವೇ ಮಧುರ ಬದುಕಿನ ಆಡುಂಬೊಲ ಎನ್ನುತ್ತಾರೆ. ನಮ್ಮ ಪೂರ್ವಿಕರಲ್ಲಿ ಇದ್ದ ಪ್ರೋತ್ಸಾಹಕ ಗುಣಗಳು, ಯೋಗ್ಯರ ಬೆನ್ತಟ್ಟುವಿಕೆ, ಏಳಿಗೆಯ ಸೈರೈಕೆ ಮಾಯವಾಗಿ ಪರಸ್ಪರ ಅನಾರೋಗ್ಯಕರ ಪೈಪೋಟಿ, ತೆಗಳಿಕೆ, ಪ್ರಶಸ್ತಿ ಬಡ್ತಿ ಮುಂತಾದವುಗಳಿಗಾಗಿ ಮೌಲ್ಯಗಳ ಅಪಮೌಲಿಕರಣ, ಜಾತಿ ತುಷ್ಟೀಕರಣ ಮುಂತಾದ ಅಪ್ರಸ್ತುತ  ವಿಚಾರಗಳೇ ಮುನ್ನೆಲೆಗೆ ಬಂದು ಸತ್ಯ,ಸಹಜ, ಸರಳತೆಯ ನಡುವಳಿಕೆಗಳು ಹಿಂದೆ ಸರಿಯುತ್ತಾ ಅನಾಗರಿಕ ಜೀವನಕ್ಕೆ ಈಡಾಗುತ್ತ ಅಧಃಪತನಕ್ಕೆ ಗುರಿಯಾಗುತ್ತಿರುವ ರೀತಿಯನ್ನು ವಿವರಿಸಿದ್ದಾರೆ. ” ಕನ್ನಡದ ಕಟ್ಟಾಳು ” ಲೇಖನದಲ್ಲಿ ಜಿ ಕೃಷ್ಣಪ್ಪ ನವರು ಶ್ರೀಯುತ ದ.ರಾ. ಬೇಂದ್ರೆ ಮತ್ತು ಕುವೆಂಪು ರವರ ಸಾಹಿತ್ಯವನ್ನು ಆಳವಾಗಿ ಅಭ್ಯಾಸಿಸಿ ಅವರ ವಿಚಾರಧಾರೆಗಳನ್ನು ವಿಮರ್ಶಿಸಿದವರಲ್ಲಿ ಪ್ರಮುಖರು, ಬೇಂದ್ರೆ ಕಾವ್ಯವನ್ನು ನಾಡಿನ ಮೂಲೆಮೂಲೆಗೂ ತಲುಪಿಸುವ ಇವರ ಅದಮ್ಯ ಬಯಕೆ ಮತ್ತು ಆ ನಿಟ್ಟಿನಲ್ಲಿನ ನಿರಂತರ ಪ್ರಯತ್ನ ಇವರನ್ನು ಕನ್ನಡ ಕಟ್ಟಾಳು ಎಂದು ಕರೆಯುವದರಲ್ಲಿ ಉತ್ಪ್ರೇಕ್ಷೆಯಲ್ಲ ಎಂದೆನಿಸುತ್ತದೆ. ಲೇಖಕರು ತಮ್ಮ ಮತ್ತು ಜಿ ಕೃಷ್ಣಪ್ಪ ನವರ ಪರಿಚಯ ಮತ್ತು ಒಡನಾಟ ಸಾಹಿತ್ಯದ ಅಭಿರುಚಿಯ ಕಾರಣವಾಗಿ ಅದರಲ್ಲಿ ಮಾನ್ಯ ಡಿ ವಿ ಗುಂಡಪ್ಪನವರ ” ಭಗವದ್ಗೀತಾ ತಾತ್ಪರ್ಯ ” ಕೃತಿ ಕೇಳಿಕೊಂಡು ಪುಸ್ತಕದಂಗಡಿಗೆ ಕೃಷ್ಣಪ್ಪ ನವರು ಬಂದಾಗ ಅವರ ನಡುವೆ ನಡೆದ ಸಂಭಾಷಣೆ ತಮ್ಮ ಆತ್ಮೀಯ ಒಡನಾಟಕ್ಕೆ ಮೊದಲಾಗಿ , ಕೃಷ್ಣಪ್ಪನವರ ಅಪೇಕ್ಷೆಯಂತೆ ಬೇಂದ್ರೆ ಗೀತ ಗಾಯನ ಸ್ಪರ್ಧೆಯನ್ನು ಮುಖ್ಯ ಉಪಾಧ್ಯಾಯರ ಒಪ್ಪಿಗೆಯ ಮೂಲಕ ಲೇಖಕರ ಶಾಲೆಯಲ್ಲಿ ಜರುಗಿಸಿ

ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು Read Post »

You cannot copy content of this page

Scroll to Top