ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಮ್ಮನದ ಶಕ್ತಿಯ ನೀಡು

ಹೆಚ್.ಮಂಜುಳಾ,ಹರಿಹರ.

ರಾಷ್ಟ್ರಕ್ಕೇ ಪಿತನಾದ ಮಹಾತ್ಮನೇ
ನೋಡುತ್ತಿರುವೆಯಾ ಇಲ್ಲಿನ ರಾಮರಾಜ್ಯವನ್ನು…?!

ನನಸಾಗಿಸಲು ಉಳಿಸಿ ಹೋದ ನಿನ್ನ ಕನಸಿನ ರಾಷ್ಟ್ರದ ಸ್ಥಿತಿಯನ್ನು…!!

ಇಲ್ಲಿಯ ಜಿನ್ನಾ ಗೋಡ್ಸೆಗಳು
ಸಮರಸದ ಹಾಲಿಗೆ ಹುಳಿ ಹಿಂಡುತ್ತಿದ್ದಾರೆ, ತಮ್ಮ ತೆವಲುಗಳಿಗೆ ಸಲ್ಲದ ಸುದ್ದಿಗಳನ್ನು ತಲೆಗೆ ತುಂಬುತ್ತಾ ತಮ್ಮ ಏಳ್ಗೆಗೆ ಮುಗ್ಧರನ್ನು ದಾರಿತಪ್ಪಿಸಿ ಏಣಿಯಾಗಿಸಿಕೊಳ್ಳುತ್ತಿದ್ದಾರೆ…

ಮಗನ ಖಾಯಿಲೆ ಗುಣವಾಯ್ತೆಂದು
ಮಸೀದಿಗೆ ಹೋಗಿ ಸಕ್ಕರೆ ಒಯ್ಯುವ ಸಾಕಮ್ಮ, ಅಮ್ಮನಿಗೆ ಹರಕೆ ಹೊತ್ತು ಬೇವಿನುಡುಗೆ ಉಡುವ ಖಾಜಾಬೀ-
ಬೆಂದು ಬೂದಿಯಾದ ತಮ್ಮ ಮನೆಗಳ ಹೆಂಚುಗಳಡಿ
ದ್ವೇಷದ ಕೆನ್ನಾಲಿಗೆಗೆ ಬಲಿಯಾದ
ತಮ್ಮ ಕರುಳಕುಡಿಗಳಿಗಾಗಿ ತಡಕಾಡುತ್ತಾ; ಒಬ್ಬರನ್ನೊಬ್ಬರು ಸಂತೈಸುತ್ತಿದ್ದಾರೆ…!

ಅತ್ತ ದೂರದ ಊರುಗಳಲ್ಲಿ ಆಗಬೇಕಾದಂತೆ ಆಗದ ಸುದ್ಧಿ
ಕಾಳ್ಗಿಚ್ಛಾಗಿ ಜನರನ್ನು ರೊಚ್ಚಿಗೆಬ್ಬಿಸಿ
ಮಚ್ಚು ಕುಡುಗೋಲನ್ನು ಹಿಡಿದು
ಬೇಟೆಗಾಗಿ ಹಸಿದ ಹುಲಿಯಂತಾದಾಗ….
ಕೋಮು ರೋಗವನ್ನು ಹರಡಿದವರು-ತುತ್ತಾದ ಅಮಾಯಕರ ಬಲಿಗಳನ್ನು ಎಣಿಸುತ್ತಾ, ಗುಣಿಸುತ್ತಾ ಉಪ್ಪು ಸುರಿದ ಗಾಯಗಳಿಗೆ ತಣ್ಣೀರು ಬಟ್ಟೆಯ ಲೇಪನದ ನಾಟಕವಾಡುತ್ತಿದ್ದಾರೆ…!!

ಓ ಗಾಂಧಿ ತಾತನೇ…
ಇವರ ಮುಸುಕನ್ನು ಕಿತ್ತೆಸೆದು, ಜನರ ಕಣ್ಣಿಗೆರಚಿದ ಮಣ್ಣನ್ನು ತೊಡೆದು; ಮಾನವ ಜನುಮದ ‘ಋಣ’ವನ್ನು ತೀರಿಸಲೋಸುಗ…
ಒಂದಾಗಿ ಬಾಳುವುದ ಕಲಿಸಲು
ನಿನ್ನ ಸತ್ಯ ಅಹಿಂಸೆಯ ಅಸ್ರ್ತವನ್ನು ಕೊಡು…ಒಮ್ಮನದ ಶಕ್ತಿಯನ್ನು ಕೊಡು…!!!

About The Author

Leave a Reply

You cannot copy content of this page

Scroll to Top