ಅವ್ವ
ದೇವನಿಂದಲೂ
ಹೊರಲಾಗದ ಬದುಕಿನ
ಭಾರವ ಹೊತ್ತು ಪೊರೆದ
ಸಗ್ಗಕಿಂತ ಮಿಗಿಲಾದ
ನೆಲವು ನನ್ನ ಅವ್ವ
ಹಾಗಾಗಿ ಮನಸ್ಸನ್ನು ಹಗುರವಾಗಿ ಪರಿಗಣಿಸದೇ, ಕಣ್ಣಿದುರಿಗೆ ಬಾರದ ಈ ಅನಿವಾರ್ಯದ ಅನಂಗವನ್ನು ಬಹಳ ಗೌರವದಿಂದ ಕಾಣುತ್ತಾ, ನಂನಮ್ಮ ಮನಸ್ಸು ಎಲ್ಲೋ ಮಾಯವಾಗಲು ಬಿಡದೆ ಅದರ ಸ್ವಾಸ್ಥ್ಯ ಕಾಯ್ದುಕೊಳ್ಳೋಣ. ಕೀಟಲೆಯ ಮನಸ್ಸು ನಮಗಿದ್ದರೂ ಸರಿಯೇ ಆದರೆ, ಇತರರನ್ನು ಕಾಡುವ ಕೋಟಲೆಯ ರಾಕ್ಷಸ ಮನಸ್ಸು ನಮ್ಮದಾಗದಿರಲಿ
ಕಾವ್ಯ ಜುಗಲ್ ಬಂದಿ ಖಾಲಿತನದ ಗಳಿಗೆಯ ಕವಿತೆಗಳು ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ… ಖಾಲಿತನದ ಗಳಿಗೆಯ ಕವಿತೆಗಳು ಗಳಿಗೆ-೧ ಖಾಲಿತನ ಹ್ಞೂಂ……..!! ಖಾಲಿತನವೆಂಬುದು ಬರೀ ಭ್ರಮೆಯಷ್ಟೇ..ಒಲವು- ಚೆಲುವು-ಬೆರಗು ಭಾವಗಳ ತೇವ ಇಂಗಿದ ಮೇಲೂಹಾಯ್ವ ನೆನಪ ಮಂದಾನಿಲ ಒತ್ತುತ್ತಲಿರುವುದುಕಾಣದಂತೆಮನದ ಗಡಿಗೆಯಲ್ಲಿ.. ಖಾಲಿತನವೆಂದೆಯಲ್ಲವೇ ತೋರು ಅದೆಲ್ಲಿ…?? ವೀಣಾ ಪಿ. ಭ್ರಮೆಯ ಭಾವವೇನಲ್ಲ ನನ್ನೊಳಗಿನ ಖಾಲಿತನ ಬಿಸಿಲ ಧಗೆಗೆ ಮುದುಡಿಹೋದ ಹೂವಿನ ಒಂಟಿತನ ತೆರೆದು ತೋರಲಿದೇನು ತನುವಿನ ಮೇಲಣ ಗಾಯವೇ ಕೆದಕಿ ಕೇಳಿ ಹಸಿಗಾಯವ ಮತ್ತೆ ಬಗೆಯುವುದು ತರವೇ?? ಮಾಧವ *****(ಮುಂದುವರೆಯಲಿದೆ)*****…. ಪರಿಚಯ: ಶ್ರೀಮತಿ ವೀಣಾ ಪಿ., ಹರಿಹರ …ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.
ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ ಈ ಲೋಕದೆದುರು ‘ರೇಣು’ ಕೇಳೆ ಮುಡಿಗಳೆಲ್ಲ ಒಂದಾಗಬೇಕು ನಡೆ ನುಡಿಯೊಳಗೆ ಇಂದೇಕತ್ತಲಾದ ಬೊಗಸೆಯೊಳಗೆ ಮೈಲಿಗೆ ತೊಳೆದು ಬೆಳಕ ಬುಗ್ಗೆ ಚಿಮ್ಮಿಸಬೇಕು ಈ ಲೋಕದೆದುರು. ************************************************************
ಕವಿತೆ ಅಮ್ಮಾ-ನೆನಪು! ಹೇಮಚಂದ್ರದಾಳಗೌಡನಹಳ್ಳಿ ಸದಾ ಕಾಡುವನನ್ನೊಳಗಲಿ ಇಣುಕುವ ಕೆಡುಕನು ಸುಡುವ,,ಹೊಸ ಆಲೋಚನೆ ಯೋಜನೆಗೆ ಪ್ರೇರಿಸುವ,,ನನ್ನುಸಿರೊಳಗೆ ಬೆರೆತೇನೋ ಉಸುರುತಿರುವಂತೆ,ನಿನ್ನ ನೆನಪು…. ಸದಾ ಕಾಡುವನನ್ನನಾಗ ತಿದ್ದಿ ತೀಡಿ ನಿನ್ನ ಮೆಚ್ಚು ರೂಪ ನೀಡಿಇಂದಿಗೂ ಕನಸಾಗಿ ಬಂದು ಕೂಗಿ ಎಬ್ಬಿಸುವ..ಸರಿ ದಾರಿದೋರಿ ಮುನ್ನಡೆಸುವ ಹಂಬಲಿ..ಹಸಗಟ್ಟಿದ ಹೊಟ್ಟೆಯ ಮಾಸಲು ಬಟ್ಟೆಯಮುಗುಳುನಗುಮೊಗದ ನಿನ್ನಾ ನೆನಪು ಸದಾ ಕಾಡುವದುಡಿದು ನೀನು ದಣಿದು ನಮಗೆ ತಣಿಸಿಹಸಿವನೇ ಹೊತ್ತು ಹುಸಿನಗುವಲದನು ಮುಚ್ಚಿಖಾಲಿಮಡಕೆ ನಮಗೆ ಹಣ್ಣುಗಳನೇ ತುಂಬಿಹಣ್ಣಿನಮಡಕೆ ಸ್ಥಾನ ನೀಡಿ..ತಿನ್ನದೊಂದನೂಜೋಪಾನಿಸಿ ನಡೆದಾ..ನಿನ್ನ ನೆನಪು.. ಸದಾ ಕಾಡುವಬೇಕು ನೀನೆಂಬ ಭಾವದ ನೋವತಾಳಿಕೊಂಡಿದೆ ಜೀವ; ಮಗಳಾಗಿ ಬಂದೆಂಬ ನಚ್ಚುಅವಳಿಗೆ ನೀನಿಲ್ಲದ ನೋವು ಒತ್ತರಿಸಿ ಒಮ್ಮೊಮ್ಮೆತಾಳಿಕೆಯ ಕಟ್ಟೆಯೊಡೆದ ಹನಿಯ ಕಣ್ಣುಣ್ಣುತದೆ..ನೀ ಕಲಿಸಿದ ಪಾಟ ಮರೆತಿಲ್ಲ ‘ನುಂಗಬೇಕುನಮ್ಮೊಳಗ ನೋವ ನಾವು..ಶಾಖವದು ಕಾಯಿ ಹಣ್ಣಾಗಲು ನಮಗೆ ನೋವು..ನುಂಗತೇನೆ..ಕಾಯತದೆ ನನ್ನ ಅಮ್ಮಾನಿನ್ನ ನೆನಪು…. ***************
ಕವಿತೆ ನನ್ನಪ್ಪನ ಕನ್ನಡಕ ವಿಶ್ವನಾಥ ಎನ್. ನೇರಳಕಟ್ಟೆ ನನ್ನಪ್ಪ ತೊಟ್ಟ ಕನ್ನಡಕ ಕಂಡಿದೆ ಎಲ್ಲವನ್ನೂ- ಏಳ್ನೂರರ ಪಗಾರದಲ್ಲಿ ಪ್ರತಿ ತಿಂಗಳ ಕ್ಯಾಲೆಂಡರ್ ತಿರುವಿಹಾಕಿದ್ದನ್ನುತಣ್ಣೀರು ಕುಡಿದು ಹೊಟ್ಟೆ ತಂಪಾಗಿಸಿಕೊಂಡದ್ದನ್ನುಕಣ್ಣೀರು ಕಾಣದಂತೆ ನಗೆಯಾಡಿದ್ದನ್ನು ಬಾಡಿಗೆ ಮನೆಯ ಮುರುಕುಬಾಗಿಲನ್ನು ರಾತ್ರಿ ಕಾದದ್ದನ್ನುವಾರಾನ್ನದ ಬೆಳಕಲ್ಲಿ ಬಾಳುಬೆಳಗಿಸಿಕೊಂಡದ್ದನ್ನುಬಿಟ್ಟಿ ಚಾಕರಿಗೆಜೊತೆಗಾರನಾದುದನ್ನು ಮನೆಯ ಫೌಂಡೇಶನ್ನಿಗೆಬೆವರಹನಿ ಬಿದ್ದುದನ್ನುಮಕ್ಕಳನ್ನು ನೆರಳಲ್ಲಿಟ್ಟುಬಿಸಿಲಲ್ಲಿ ಶತಪಥ ಓಡಾಡಿದ್ದನ್ನು ಮಕ್ಕಳಿಗೆ ಹೊಡೆದುದನ್ನುಹೆಂಡತಿಗೆ ಬೈದುದನ್ನುಹೊದಿಕೆಯೊಳಗಿನ ಕತ್ತಲಲ್ಲಿಸದ್ದೇಳದಂತೆ ಅತ್ತುದನ್ನು ಮಾಡದ ತಪ್ಪಿಗೆಬೈಸಿಕೊಂಡದ್ದನ್ನುಮರ್ಯಾದೆಗೆ ಅಳುಕಿತೆಪ್ಪಗಿದ್ದುದನ್ನುಬಿಗಿಗೊಂಡ ಮುಷ್ಟಿಸಡಿಲವಾದದ್ದನ್ನು *********************************
ಮಕ್ಕಳ ಕಥೆ ಸಾಕು ಪ್ರಾಣಿಗಳು ಡಾ. ಗುರುಸಿದ್ಧಯ್ಯಾ ಸ್ವಾಮಿ “ಅಪ್ಪ, ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ….” ಎಂದು ಅನಿಕೇತ ಒಂದು ಮೂಲೆಯಲ್ಲಿ ಹೋಗಿ ಕುಳಿತು ಬಿಟ್ಟ.“ಯಾಕೆ ಮರಿ, ಏನಾಯಿತು?” ಎಂದು ಪ್ರಕಾಶ ಅವರು ಅನಿಕೇತನನ್ನು ತಮ್ಮ ಬಳಿ ಕರೆದುಕೊಂಡು ಒಂದು ಮುತ್ತು ಕೊಟ್ಟು ತಲೆ ನೇವರಿಸುತ್ತ ಕೇಳಿದರು.“ಅಪ್ಪ, ಇಂದು ನಮ್ಮ ಶಿಕ್ಷಕರು ನಾನು ಸರಿಯಾಗಿ ಬರೆದ ಉತ್ತರಕ್ಕೆ ಸೊನ್ನೆ ಗುಣ ಕೊಟ್ಟಿದ್ದಾರೆ.”“ಹೌದಾ…? ಯಾವ ಪ್ರಶ್ನೆ ಅದು?”“ಸಾಕು ಪ್ರಾಣಿಗಳ ಹೆಸರು ಬರೆಯಿರಿ ಎಂಬ ಪ್ರಶ್ನೆ ಇತ್ತು.”“ಸರಿ, ಅದಕ್ಕೆ ನೀ ಬರೆದ ಹೆಸರುಗಳು ಯಾವುವು?”“ಅದಕ್ಕೆ ನಾನು, ಆಕಳು, ಎಮ್ಮೆ, ಬೆಕ್ಕು, ನಾಯಿ, ಹುಲಿ, ಹಾವು ಇತ್ಯಾದಿ ಹೆಸರುಗಳನ್ನು ಬರೆದಿದ್ದೆ.”“ಓ ಹೌದಾ, ಸರಿ ನಾನು ನಾಳೆ ಶಾಲೆಗೆ ಬಂದು ನಿಮ್ಮ ಶಿಕ್ಷಕರ ಜೊತೆ ಮಾತನಾಡುವೆ.”ಅಪ್ಪ ತನ್ನ ಪರವಾಗಿ ಮಾತನಾಡಿದ್ದಕ್ಕೆ ಅನಿಕೇತನಿಗೆ ಎಲ್ಲಿಲ್ಲದ ಖುಷಿ. ಸ್ವರ್ಗ ಮೂರೇ ಗೇಣು. ಮರುದಿನ ಅನಿಕೇತನ ಜೊತೆ ಪ್ರಕಾಶ ಅವರೂ ಕೂಡ ಶಾಲೆಗೆ ಹೋದರು. ಪ್ರಕಾಶ ಆಮಟೆಯವರು ವರ್ಗಕೋಣೆಯಲ್ಲಿ ಬರುತ್ತಿರುವುದನ್ನು ನೋಡಿ ಶಿಕ್ಷಕರು ಎದ್ದು ನಿಂತು “ಬನ್ನಿ ಸರ್, ಬನ್ನಿ ಬನ್ನಿ” ಎಂದು ಸ್ವಾಗತಿಸಿದರು.“ನಮಸ್ಕಾರ ಸರ್, ಹೇಗಿದಿರಿ?” ಎಂದು ಮುಗುಳ್ನಗೆ ಬೀರುತ್ತ ಪ್ರಕಾಶ ಅವರು ಶಿಕ್ಷಕರಿಗೆ ಕುಳಿತುಕೊಳ್ಳಲು ಹೇಳಿ ತಾವೂ ಅವರ ಪಕ್ಕದ ಚೇಅರನಲ್ಲಿ ಕುಳಿತರು.“ಸರ್, ನಿಮ್ಮ ಒಪ್ಪಿಗೆ ಇದ್ದರೆ ನಿನ್ನೆ ನಡೆದ ಪರೀಕ್ಷೆಯ ಬಗ್ಗೆ ಸ್ವಲ್ಪ ಚರ್ಚೆ ಮಾಡಬಯಸುತ್ತೇನೆ.” ಎಂದರು ಪ್ರಕಾಶ.“ಅಯ್ಯೋ, ದೊಡ್ಡ ಮಾತು. ನೀವು ತುಂಬ ದೊಡ್ಡವರು. ನಿಮ್ಮ ಅಭಿಪ್ರಾಯ ನೇರವಾಗಿ ಹೇಳಿ.” ಶಿಕ್ಷಕರು ಅಂದರು.“ನಿನ್ನೆ ನಡೆದ ಪರೀಕ್ಷೆಯಲ್ಲಿ ಸಾಕು ಪ್ರಾಣಿಗಳ ಹೆಸರುಗಳನ್ನು ಬರೆಯುವ ಪ್ರಶ್ನೆಯ ಬಗ್ಗೆ ಸ್ವಲ್ಪ ಮಾತನಾಡುವೆ ಸರ್. ನಮ್ಮ ಆಶ್ರಮದಲ್ಲಿ ಹುಲಿ, ಹಾವು ಮುಂತಾದ ಅನೇಕ ಕಾಡು ಪ್ರಾಣಿಗಳನ್ನು ಸಾಕಿರುವ ವಿಷಯ ನಿಮಗೂ ಗೊತ್ತಿದೆ. ಅವು ಕಾಡುಪ್ರಾಣಿಗಳು ಎಂಬುದು ನಮಗೆ ಮತ್ತು ನಿಮಗೆ ಗೊತ್ತಿದೆ. ಆದರೆ ನಮ್ಮ ಆಶ್ರಮದಲ್ಲಿ ಸಾಕು ಪ್ರಾಣಿಗಳ ಜೊತೆ ಕೆಲವು ಕಾಡು ಪ್ರಾಣಿಗಳನ್ನೂ ಸಾಕಿದ್ದೇವೆ. ಹೀಗಾಗಿ ಅನಿಕೇತ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಅವುಗಳ ಹೆಸರುಗಳನ್ನು ಬರೆದಿದ್ದಾನೆ. ಇದರಲ್ಲಿ ಅವನ ತಪ್ಪು ಏನೂ ಇಲ್ಲ. ಅವನ ಉತ್ತರಕ್ಕೆ ನೀವು ಗುಣ ಕೊಟ್ಟಿಲ್ಲ. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿಯೇ ಮಾಡಿರುವಿರಿ. ಆದರೆ ಇದೊಂದು ಸಲ ಅವನ ಅನುಭವ ವಿಶ್ವಕ್ಕೂ ಸ್ವಲ್ಪ ಗೌರವ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಮುಂದೆ ದೊಡ್ಡವನಾದ ಮೇಲೆ ಅವನು ಇವೆಲ್ಲವುಗಳ ಬಗ್ಗೆ ವಿವರವಾಗಿ ತಾನಾಗಿಯೇ ತಿಳಿದುಕೊಳ್ಳುತ್ತಾನೆ.ನಿಮ್ಮ ಹೆಚ್ಚು ಸಮಯ ನಾನು ತೆಗೆದುಕೊಳ್ಳುವುದಿಲ್ಲ. ಬರುತ್ತೇನೆ, ನಮಸ್ಕಾರ” ಎಂದು ಪ್ರಕಾಶ ಹೊರಟೇ ಬಿಟ್ಟರು. ಕೈ ಮುಗಿದು ಎದ್ದು ನಿಂತ ಶಿಕ್ಷಕರು ಪ್ರಕಾಶ ಅವರು ನಡೆದು ಹೋದ ಮಾರ್ಗವನ್ನೇ ರೆಪ್ಪೆ ಬಡಿಯದೆ ನೋಡುತ್ತಿದ್ದರು. ****************
ಪುಸ್ತಕ ಸಂಗಾತಿ ಯಮನ ಸೋಲು ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ ಪತಿವ್ರತೆಯ ಕಥೆಯಿದು. ಮಾನವ ಧರ್ಮದ ಎದುರು ದೈವ ಧರ್ಮ ಸೋಲುತ್ತದೆ.ಮನುಷ್ಯ ಪ್ರೀತಿಗೆಲ್ಲುತ್ತದೆ.ಪ್ರೇಮ ಎಲ್ಲ ಧರ್ಮವನ್ನುಮೀರಿದ್ದು ಎಂದು ಸಾರುವದೇ ಈ ಕಥೆಯ ಉದ್ದೇಶ ” ಪ್ರೇಮಾನುರಾಗವು ಧರ್ಮವ ಮೀರಿದುದೆಂಬುದನು ಸಾಧಿಸುವದೆ ಇಲ್ಲಿ ಮುಖ್ಯ. ಇದು ಎದೆಯೊಲ್ಮೆ ಗೆದ್ದ ಕಥೆ.ಅನುರಾಗವಿದ್ದಲ್ಲಿ ವೈಕುಂಠ ಪ್ರೇಮವಿದ್ದಲ್ಲಿ ಕೈಲಾಸ ಎದೆಯೊಲ್ಮೆಯಿದ್ದಲ್ಕಿ ಮುಕ್ತಿ ಎಂದು ಸಾರುವ ಕಥೆ. ತು಼ಂಬ ಚಿಕ್ಕದಾಗಿರುವ ಈ ನಾಟಕ ೧೯೨೮ ರಲ್ಲಿ ಮೊದಲ ಮುದ್ರಣ ಕಂಡಿದ್ದು ೨೦೦೪ ರ ಅವಧಿಯೊಳಗೆ ೮ ಮರು ಮುದ್ರಣಗಳನ್ನು ಪಡೆದಿದೆ. ನಾಟಕದಲ್ಲಿ ೧೦ ಚಿಕ್ಕ ಚಿಕ್ಕ ದೃಶ್ಯಗಳಿವೆ.ಮೊದಲನೆಯದು ಪೀಠಿಕಾ ದೃಶ್ಯ ಮತ್ತು ಕಡೆಯದು ಉಪಸಂಹಾರ ದೃಶ್ಯ ಎಂದು ಹೆಸರಿಸಿದ್ದು ಮದ್ಯದಲ್ಲಿ ಇಡೀ ಕಥೆ ೮ ದ್ರಶ್ಯದಲ್ಲಿ ಮೂಡಿದೆ.ನಾಟಕದ ಆರಂಭದ ಪೀಠಿಕಾ ದೃಶ್ಯದಲ್ಲಿ ಯಕ್ಷ ಮತ್ತು ಯಮದೂತರ ಭೇಟಿಯಾಗುತ್ತದೆ.ಅವಸರದಿಂದ ಹೊರಟ ಯಮದೂತನನ್ನು ಯಕ್ಷ ತಡೆದಾಗ “ತಾನು ತುಂಬ ಅವಸರದಲ್ಲಿದ್ದೇನೆ.ಇಂದು ಸತ್ಯವಾನನನ್ನು ಎಳೆದು ಯಮನಲ್ಲಿಗೆ ಒಯ್ಯಬೇಕಾಗಿದೆ.ಇಂದವನ ಸಾವು ನಿಗದಿಯಾಗಿದೆ “ಎನ್ನುತ್ತಾನೆ.ಅದಕ್ಕೆ ಯಕ್ಷ “ಏಕೆ ಅವನೇನು ಮುದುಕನೇ? “ಎಂದು ಕೇಳಿದರೆ ಅದಕ್ಕೆ ದೂತ ಇಲ್ಲ ಅವನ ಮದುವೆಯಾಗಿ ಹನ್ನೆರಡು ತಿಂಗಳೂ ತುಂಬಿಲ್ಲ ಎನ್ನುತ್ತಾನೆ. ಹಾಗಾದರೆ ಅಂಥವನನ್ನು ಏಕೆ ಸಾವಿತ್ರಿ ಆರಿಸಿದಳು ಎಂಬ ಪ್ರಶ್ನೆಗೆ “ಬೇಕೆಂದೇ ಅಂಥ ಅಲ್ಪಾಯುವನ್ನು ಆರಿಸಿದ್ದಾಳೆ ಯಾರೇನು ಮಾಡುವದು” ಎಂದುತ್ತರಿಸಿ ಆಕೆಯ ಸಾವಿತ್ರಿಯ ಕಥೆಯನ್ನು ಹೇ಼ಳುತ್ತಾನೆ. ಸಾವಿತ್ರಿ ಅಶ್ವಪತಿ ಯೆಂಬ ರಾಜನ ಕುವರಿ.ಆಕೆ ಜನಿಸಿದ್ದೇ ಶಿವನ ಆರಾಧನೆಯ ಫಲದಿಂದ.ಅತ್ಯಂತ ಸುಂದರಿ ಅವಳನ್ನು ಪಾತಿವ್ರ್ಯತ್ಯದೊಳಗೂ ಮೀರಿಸುವರಾರಿಲ್ಲ. ಅವಳಿಗೆ ಅನುರೂಪನಾದ ವರ ಎಲ್ಲಿಯೂ ಸಿಗಲಾರದ್ದರಿಂದ ಅವಳ ತಂದೆ ತನಗೆ ಬೇಕಾದ ಗಂಡನನ್ನು ಹುಡುಕಿಕೊಂಡು ಬರುವಂತೆ ಅವಳಿಗೆ ಅನುಮತಿಸಿದ.ದೇಶಗಳನ್ನು ಸುತ್ತಿದ ಸಾವಿತ್ರಿ ಅನುರೂಪ ನಾದ ವರ ಎಲ್ಲೂ ಸಿಕ್ಕದೆ ಒಂದು ಋಷ್ಯಾಶ್ರಮದಲ್ಲಿ ಶತ್ರುಗಳು ರಾಜ್ಯವನ್ನಪಹರಿಸೆ ,ಕುರುಡಾಗಿ ಕಾನನಕೆ ಬಂದು ಋಷಿಚರ್ಯೆಯಲ್ಲಿರುವ ಧ್ಯುಮತ್ಶೇನ ಅರಸನ ಸುತನೂ ಶುದ್ಧಾತ್ಮನೂ ಆದ ಸತ್ಯವಾನನನ್ನು ವರಿಸುತ್ತಾಳೆ.ಆಕೆ ಒಲಿಯಲು ಆತ ಸುಂದರನೆಂಬುದಷ್ಟೇ ಕಾರಣವಿರಲಿಲ್ಲ. “ಆದರಾ ಸಾವಿತ್ರಿ ಸೌಂದರ್ಯಕೆ ಮರುಳಾಗಲಿಲ್ಲ ಸೌಂದರ್ಯವನು ಮೀರಿ ಆತನೊಳು ಶುಚಿಶೀಲವಿತ್ತು” ಹೀಗೆ ಆಕೆಯ ಆಯ್ಕೆಯಲ್ಲಿ ಒಂದು ಘನತೆ ಇದ್ದಿತು.ಆಗ ಬಂದ ನಾರದರು ಆತ ಅಲ್ಪಾಯು ಎಂಬುದನ್ನು ಹೇಳಿದರೂ ಕೂಡ ಆಕೆಯ ಪ್ರೇಮ ಹಿಂಜರಿಯಲಿಲ್ಲ. ಪ್ರೇಮ ಮೃತ್ಯುವಿಗೆ ಬೆದರಿ ಓಡುವದೇ? ಪತಿಯ ಗತಿಯನು ಕೇಳಿ ಆಕೆಯೊಲುಮೆಯು ಚೈತ್ರಮಾಸದೊಳು ತಳತೆಸೆವ ವನದಂತೆ ಹಿಗ್ಗಿದುದು ಒಮ್ಮೆ ಒಬ್ಬರೊಲಿದ ಶುಚಿಯೊಲವು ನೋಡುವುದೇ ಕಣ್ಣೆತ್ತಿ ಎಂತಿರುವನೆಂದು ಕಡೆಗೆ? ಹೀಗೆ ಆರಂಭದಲ್ಲಿಯೇ ಆಕೆಯ ಪವಿತ್ರ ಪ್ರೇಮವನ್ನು ನಾಟಕ ಘೋಷಿಸಿಯೇ ಮುಂದೆ ಹೋಗುತ್ತದೆ.ಪತಿಗೆ ಉತ್ತಮ ಸತಿಯಾಗಿ ಮಾತ್ರವಲ್ಲ ,ಸಾವಿತ್ರಿ ಅತ್ತೆ ಮಾವರಿಗೆ ಉತ್ತಮ ಸೊಸೆಯಾಗಿ ಪತಿಯನ್ನು ಅನುಸರಿಸುತ್ತ ಕಾಡಿನೊಳಗೆ ಉಳಿಯುತ್ತಾಳೆ. ಆಕೆಗೆ ತನ್ನ ಪತಿಯ ಆಯುಷ್ಯದಲ್ಲಿ ಕಡೆಯ ಮೂರು ದಿನಗಳು ಮಾತ್ರ ಉಳಿದಿವೆ ಯಂದು ಗೊತ್ತಾಗಿದೆ ಕೂಡ.ಅದಕ್ಕೆ ಆಕೆ ಪೂಜೆಯಲ್ಲಿ ತೊಡಗಿ ದ್ದಾಳೆ. ಸತ್ಯವಾನನನ್ನು ಯಮನಲ್ಲಿಗೆ ಒಯ್ಯಲು ಬಂದ ದೂತನಿಗೂ ಕರುಣೆಯಿದೆ.ಇಂತಹ ನವ ಯೌವನದ ಜೋಡಿಯನ್ನು ಅಗಲಿಸುವದೆಂತು ಎಂಬ ನೋವಿದೆ.ಆದರೆ ಕರ್ತವ್ಯದ ಕರೆ ಯಾರು ಮೀರಬಲ್ಲರು,? ಆತ ಕರ್ತವ್ಯ ಬದ್ಧ.ಅದಕ್ಕಾಗಿ ಆತ ಯಕ್ಷನೊಂದಿಗೆ ಭೂಲೋಕಕ್ಕೆ ತೆರಳುತ್ತಾರೆ. ದೃಶ್ಯ ಒಂದರಲ್ಲಿ ಸಾವಿತ್ರಿ ಋಷ್ಯಾಶ್ರಮದ ಎಲೆಮನೆಯ ಹತ್ತಿರದ ಶಿವನ ಗುಡಿಯಲ್ಲಿ ಪೂಜೆಗೆ ತೊಡಗಿದ್ದಾಳೆ .ಆ ಪತಿವ್ರತೆ,ಕಾಲಚಕ್ರಕ್ಕೆ ಅಂದು ಮುಂದುವರಿಯದಂತೆ , ಸೂರ್ಯನಿಗೆ ಉದಯವಾಗದಂತೆ ಪ್ರಾರ್ಥಿಸುತ್ತಿದ್ದಾ಼ಳೆ.ಒಂದು ವೇಳೆ ಸೂರ್ಯೊದಯವಾದರೆ ತಾನೆ? ಆಕೆಯ ಗಂಡನಿಗೆ ಸಾವು ಬರುವದು? ಸಾವಿನ ನೋವು ಅವಳ ಮಾತಲ್ಲಿ ಮಡುಗಟ್ಟಿದೆ.ಗಾಳಿ ಬೀಸಿದರೆ,ಎಲ್ಲಿ ಸಪ್ಪಳವಾಗಿ ಅಂದೆ ಕಡೆಯ ದಿನವೆಂಬುದನು ಯಮನಿಗೆ ನೆನಪಿಸಿತೋ ? ಎಂದು ದಿಗ್ಭ್ರಮೆ ತಾಳುತ್ತಾಳೆ. ಆಕೆ ಆ ದುಃಖದಲ್ಲಿರುವಾಗಲೇ ಸತ್ಯವಾನನ ಪ್ರವೇಶವಾಗುತ್ತದೆ.ಆತ ಫಲ ಪುಷ್ಪಗಳಿಗಾಗಿ ವನಕೆ ಹೊರಟು ನಿಂತಿದ್ದಾನೆ. ಹೆಂಡತಿ ಮೂರು ದಿನದಿಂದ ಏನುಪೂಜೆ ನಡೆಸಿದ್ದಾಳೆ ಎಂಬ ಅಚ್ಚರಿ ಅವನಿಗೆ. ಆತನನ್ನು ಕಾಡಿಗೆ ಹೋಗದಂತೆ ತಡೆದ ಸಾವಿತ್ರಿ ಇಬ್ಬರೂ ಕೂಡಿಯೇ ಪೂಜಿಸಬೇಕೆಂದು ಕೋರುತ್ತಾಳೆ. ಅವಳ ಒಲುಮೆಗೆ ಮಣಿದ ಸತ್ಯವಾನ ಕಾಡಿಗೆ ಹೋಗದೆ ಅಲ್ಲಿಯೇ ಉಳಿಯುತ್ತಾನೆ.ಗಂಡನಿಗೆ ಇಂದು ಅವನ ಕಡೆಯ ದಿನವೆಂಬುದು ತಿಳಿದಿಲ್ಲವೆಂದು ಆಕೆಗೆ ನೋವು ತುಂಬಿದೆ.ಕಡೆಗೂ ಕಾಡಿಗೆ ಹೊರಟ ಅವನೊಡನೆ ಹೊರಟು ನಿಂತ ಅವಳು ಇಂದೇಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅಚ್ಚರಿಯವನಿಗೆ.ಏಕೆ? ಎಂದು ಕೇಳಿದರೆ ಕನಸಿನ ನೆವದಿಂದ ಮರೆಸಿ ತಾನೂ ಹೂವನಾರಿಸಲು ಬರುವೆನೆಂದು ಗಂಡನೊಡನೆ ಹೊರಡುತ್ತಾಳೆ.ಇಡೀ ದೃಶ್ಯದಲ್ಲಿ ಮುಂದಾಗುವ ನೋವು ಅರಿತ ಸಾವಿತ್ರಿಯಲ್ಲಿ ತಳಮಳ ಮಡುಗಟ್ಟಿದೆ.ಆಕೆ ಕಾಡಿಗೆ ಎನ್ನಿನಿಯನೊಡನಿಂದು ನರಕವಾದರೆ ನರಕ ! ಸಗ್ಗವಾದರೆ ಸಗ್ಗ! ನಾಶವಾದರೆ ನಾಶ! ಯಮರಾಯನೊಡ್ಡುತಿಹ ಪಾಶವಾದರೆ ಪಾಶ! ಎಂದು ತೀರ್ಮಾನಿಸಿಯೇ ಹೊರಟಿದ್ದಾಳೆ.ಇಲ್ಲಿಮತ್ತೆ ಆಕೆಯಪಾತಿವೃತ್ಯದ ಪರಿಚಯ ನಮಗಾಗುತ್ತದೆ.ಗಂಡನಿಗೆ ಸಾವು ಬಂದರೆ ತನಗೂ ಬರಲಿ ಎಂಬ ಗಟ್ಟಿ ನಿರ್ಧಾರ ಅವಳದು. ಮುಂದಿನ ದೃಶ್ಯ ಫಲ ಪುಷ್ಪಗಳನರಸುತ್ತ ಸತ್ಯವಾನ ಸಾವಿತ್ರಿ ಕಾಡಲ್ಲಿ ಅಲೆಯುತ್ತಿದ್ದಾರೆ.ಬಹಳ ಸಾಂಕೇತಿಕವಾದ ಮಾತಿನಿಂದಲೇ ಈ ದೃಶ್ಯ ಆರಂಭವಾಗುತ್ತದೆ ಸತ್ಯವಾನ ” ಬಾ,ನೋಡಿಲ್ಲಿ ಹರಿಣಿಯನ್ನು ಹುಲಿಯ ಬಾಯಿಂದ ನಾನು ರಕ್ಷಿಸಿದ್ದು ಇಲ್ಕಿಯೇ ” ಎಂದರೆ , ಸಾವಿತ್ರಿ ” ಆ ಪುಣ್ಯ ನಿನ್ನನೀ ದಿನ ಬಂದು ರಕ್ಷಿಸಲಿ” ಎನ್ನುತ್ತಾಳೆ..ಆತ ಸರಸಕ್ಕೆಳಸಿದರೆ ಆಕೆಗೆ ಸಾವಿನ ಬಾಯಲ್ಲೂ ಸರಸವೇ ಎಂಬ ಹೆದರಿಕೆ ಕಾಡುತ್ತದೆ. ಆಕೆಯ ಮನದಲ್ಲಿ ಸಾವೇ ಪ್ರತಿದ್ವನಿಸುತ್ತಿದೆ ಪ್ರತಿ ಮಾತಲ್ಲೂ ಅದು ಸೂಸುತ್ತಿದೆ ಸತ್ಯವಾನ ನೋಡಲ್ಲಿ ಮುತ್ತುಗದ ಹೂವು ಪೃಕೃತಿದೇವಿಯ ಬರವಿಗಾಗಿ ವನದೇವಿ ಹಿಡಿಯಿಸಿದ ಪಂಜುಗಳೋ ಎಂಬಂತೆ ರಂಜಿಸಿವೆ ಎಂದರೆ,ಅದಕ್ಕೆ ಸಾವಿತ್ರಿ ” ಬಹುದೂರ ಮಸಣದೊಳು ಉರಿವ ಸೂಡುಗಳೊ ಎಂಬಂತೆ ತೋರುತಿವೆ” ಎನ್ನುತ್ತಾಳೆ . ಸತ್ಯವಾನನಿಗೆ ಅಚ್ಚರಿ ! ಅಮಂಗಳದ ನುಡಿಯೇಕೆ,? ಎನ್ನುತ್ತಾನೆ.ಆಕೆ ಹೆಜ್ಜೆ ಹೆಜ್ಜೆಗೆ ಭಯ ಎದುರಿಸುತ್ತ ಹೋಗುವ ಕಾಲ ಚಕ್ರಕ್ಕೆ “ಕರುಣೆಯಿಲ್ಲವೇ ನಿನಗೆ” ಎನ್ನುತ್ತ ಪರಮೇಶ್ವರನಲ್ಲಿ ಪತಿಭಿಕ್ಷೆ ಬೇಡುತ್ತ ಗಂಡನೊಂದಿಗೆ ತಿಳಿನೀರ ವಾಹಿನಿಯೆಡೆ ತೆರಳುತ್ತಾಳೆ. ಮೂರನೆಯ ದೃಶ್ಯವೂ ಅದೇ ಕಾಡಲ್ಲಿ ನಡೆಯುತ್ತದೆ. ಅಷ್ಟೊತ್ತಿಗೆ ಸಂಜೆಯಾಗಿದೆ ಯಕ್ಷ ,ಯಮದೂತ ಅಲ್ಲಿಗೆ ಬರುತ್ತಾರೆ.ಯಮದೂತನಿಗೆ ಸಂಜೆಯಾಗುತ್ತಿದ್ದಂತೆ ತನ್ನ ಕಾರ್ಯದ ನೆನಪಾಗುತ್ತದೆ. ಸತ್ಯವಾನ. ಸಾವಿತ್ರಿಯರನ್ನು ನೋಡಿದ ಯಕ್ಷನಿಗೆ ಮುದ್ದಾದ ಪ್ರೇಮಿಗಳು ಎಂದು ಬೇಸರವಾಗುತ್ತದೆ.ಯಮದೂತನಿಗೂ ಬೇಸರವಿದೆ. ಆದರೇನು? “ಯಮನೂರು ದಯೆಯ ಬೀಡಲ್ಲ,ನಿಷ್ಪಕ್ಷ ಪಾತವಾಗಿಹ ಧರ್ಮದೂರು , ಯಮಪಾಶ ಕಂಬನಿಗೆ ಕರಗುವಂತಹುದಲ್ಲ ರೋದನಕೆ ಮರುಳಾಗದೆಂದಿಗೂ” ಅದು ಅಸಂಖ್ಯ ಹೆಂಗಳೆಯರನ್ನು ವಿಧವೆಯರನ್ನಾಗಿಸಿದ ಧೂರ್ತ,ಗಣನೆಯಿಲ್ಲದ ಮಾತೆಯರ ಕಲ್ಲಾಗಿಸಿದ ನಿಷ್ಕರುಣಿ.,ಕೋಟಿ ವೀರರ ರಕ್ತವ ಕುಡಿದು ಕೊಬ್ಬಿರುವ ಪಾಶ, ಯೋಗಿಗಳ,ಅವತಾರಪುರುಷರು,ಋಷಿವರರು ಯಾರನ್ನು ಬಿಟ್ಟಿಲ್ಲ.ಇಂತಿರುವ ಅದು ಈ ನೀರ ನೀರೆಯರ ಗೋಳಿಗಂಜುವದೇ ? ಎನ್ನುತ್ತಾನೆ .ಅಷ್ಟೊತ್ತಿಗೆ ಸತ್ಯವಾನ ಸಾವಿತ್ರಿಯರೆ ಅತ್ತ ಬರುತ್ತಾರೆ.ಈ ಯಕ್ಷ ಮತ್ತು ಯಮದೂತ ಇಬ್ಬರೂ ಅದೃಶ್ಯ ಜೀವಿಗಳಾಗಿ. ಅವರ ನಡೆ ನೋಡುತ್ತ ನಿಲ್ಲುತ್ತಾರೆ. ಸತ್ಯವಾನನಿಗೆ ಸಾಕಾಗಿದೆ. ಮಡದಿಯ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಾನೆ.ಸಾವು ಸಮೀಪಿಸಿದ ಸಂಕೆತ ವದು. ಸತ್ಯ ತಿಳಿದ ಸಾವಿತ್ರಿ ತನ್ನ ಪತಿವೃತಾ ಧರ್ಮಕ್ಕೆ ” ಬಂದೆನ್ನ ಕಾಪಾಡು’ ಎಂದು ಬೇಡಿಕೊಳ್ಞುತ್ತಾಳೆ.ಇಲ್ಲಿಗೆ ತುಸು ದೀರ್ಘವಾದ ಮೂರನೆಯ ದೃಶ್ಯ ಮುಗಿಯುತ್ತದೆ. ನಾಲ್ಕನೆಯ ದೃಶ್ಯದ ಆರಂಭದಲ್ಲಿಯೇ ಯಮದೂತ ತಲ್ಲಣಗೊಂಡಿದ್ದಾನೆ.ಆತನ ಮನದಲ್ಲಿ ತಳಮಳ ಆರಂಭವಾಗಿದೆ.ಏನೂ ತಪ್ಪುಮಾಡದ ಸಾವಿತ್ರಿಯ ಗಂಡನ ಜೀವ ಅಪಹರಿಸುವದು ಅವನಿಂದ ಸಾದ್ಯವಾಗದಾಗಿದೆ. ಪತಿವ್ರತೆಯ ಜ್ವಾಲೆಯೊಳು ಸಿಕ್ಕಿದ್ದಾನೆ. ಮೂರು ಸಲ ಸತ್ಯವಾನನ ಪ್ರಾಣ ಎಳೆಯಲು ಯತ್ನಿಸಿದರೂ ಅವನಿಂದ ಸಾದ್ಯವಾಗಿಲ್ಕ.ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ಅದರಿಂದ ಪಾರಾಗುವ ದಾರಿ ಸಿಗದೆ ಯಮಧರ್ಮನಲ್ಲಿಗೇ ಓಡುತ್ತಾನೆ.ದೃಶ್ಯ ೫ ರಲ್ಲಿ ಸಾಕ್ಷಾತ್ ಯಮನೇ ಬ಼ಂದಿದ್ದಾನೆ.ತಾನು ಜಗದ ಧರ್ಮಾಧಿಕಾರಿ ತನ್ನ ಧರ್ಮದ ಮೇಲೆ ಒಪ್ಪಿಗೆಯಿಟ್ಟು ನಿನ್ನಗಂಡನನ್ನೊಪ್ಪಿಸು ಎನ್ನುತ್ರಾನ .ತನ್ನ ಮೇಲಿನ ಕರುಣೆಯಿಂದಲಾದರೂ ತನ್ನ ಇನಿಯನನ್ನು ಉ಼ಳುಹಲಾರೆಯಾ ಎಂದ ಅವಳ ಮಾತಿಗೆ ” ಜಗದ ಧರ್ಮದ ನೀತಿಯನರಿತವ಼ಳು ನೀನು ,ಬಿಡು ” ಋತದ ನಿಯಮ ಒಪ್ಪು ಎನ್ನುತ್ತಾನೆ ಆದರೆ ಆಕೆ ಹದಿಬದೆಯ ಧರ್ಮ,ತನ್ನತನ,ನನ್ನಿ,ನಿಷ್ಕಾಮ ಪ್ರೇಮ , ಪರಮೇಶ ಭಕ್ತಿ ಇವುಗಳಿಗಾಗಿ ಋತವು ಒಪ್ಪದೇ? ಎನ್ನುತ್ತಾಳೆ.ಆದರೆ ಯಮ ಧರ್ಮನದು ಒಂದೇ ಮಾತು.ರಾಮ, ಕೃಷ್ಣರಂಥವರೆ ಋತ ಧರ್ಮಕ್ಕೆ ಸಾವು ಅನುಭವಿಸಿದ್ದಾರೆ.” ಹುಟ್ಟಿದವರಿಗೆಲ್ಲರಿಗೂ ಸಾವು ಉಂಟೇ ಉಂಟು” ಎನ್ನುತ್ತಾನೆ. ಸರಿ ಹಾಗಾದರೆ,ಪತಿಯಕೂಡ ಎನ್ನನೂ ಒಯ್ಯು,ಪತಿಯಳಿದ ಮೇಲೆ ಸತಿಗೆ ಜೀವವೇ ಸಾವು! ಹರ್ಷದಿಂದೈತರುವೆ ಪತಿಯೊಡನೆ! ಇದು ಸಾವಿತ್ರಿಯ ಹಟ. ಆದರೆ ಯಮ “ಯಾರ ಜೀವಿತ ಮುಗಿದಿಲ್ಲವೋ ಅವರ ಬಳಿ ಸುಳಿಯಲೆನಗೆ ಅಧಿಕಾರವಿಲ್ಲ” ಎನ್ನುತ್ತಾನೆ.ಆದರೆ ಯಮನಿಗೆ “ಧರ್ಮವೊಲವಿಗೆ ಶರಣು ಎಂದು ನೀನರಿತಾಗ ನನ್ನಿನಿಯನನ್ನೆನಗೆ ಹಿಂದಕೊಪ್ಪಿಸಬೇಕು “ ಎಂಬ ಮಾತನ್ನಿತ್ತು ದೂರ ನಿಲ್ಲುತ್ತಾಳೆ. ಯಮನೇನೋ ಸತ್ಯವಾನನ ಜೀವವನ್ನು ಸೆಳೆದೊಯ್ದ. ಸಾವಿತ್ರಿ ಬಿಟ್ಟಳೇ! ಸತ್ಯವಾನನ ಜೀವವನ್ನು ತಗೆದುಕೊಂಡು ಹೊರಟ ಯಮನನ್ನು ಬೆನ್ನು ಹತ್ತುತ್ತಾಳೆ.ಪ್ರೇಮಾನುರಾಗ ವು ಧರ್ಮವನು ಮೀರಿರುವದೆಂಬುದನು ಸಾಧಿಸುವೆನೆಂದು ಹೊರಡುತ್ತಾಳೆ. ದೃಶ್ಯ ೬ ರಲ್ಲಿ ಮುಂದೆ ಯಮ ಹಿಂದೆ ಸಾವಿತ್ರಿ ದೇವಲೋಕ ದತ್ತ ಹೊರಟಿದ್ದಾರೆ.ದಿಗಿಲಾದ ಯಮ ” ಏಕೆನಗನಳನ್ನುಸರಿಸಿ ಬರುತಿಹೆ ತಾಯೆ? ಎಂದು ಪ್ರಶ್ನಿಸಿದರೆ- ನಿನ್ನ ನಾನನುಸರಿಸಿ ಬರುತಿಲ್ಲ ಯಮದೇವ ಪತಿಯನನುನಸಿರಿಸಿ ಬರುತಿಹೆನು,ಹುಟ್ಟಿದವರೆಲ್ಲ ರೂ ಸಾಯುವದು ಧರ್ಮವೆಂದೊರೆದೆ, ಅಂತೆಯೆ ಸತ್ತ ಪತಿಯರ ಹಿಂದೆ ಹೋಗುವದು ಪತಿವ್ರತಾ ರಮಣಿಯರ ಧರ್ಮ ! ಒಲಿದೆದೆಗ ಳೆಂದಿಗೂ ಅಗಲಲಾರವು ಎಂಬುದಿದು ವಿಶ್ವ ನಿಯಮ ಎನ್ನುವ ಸಾವಿತ್ರಿ ಯಮನಿಗೆ “ನಿನ್ನ ಧರ್ಮ ನೀನು ಮಾಡು ,ನನ್ನ ಧರ್ಮ ನಾನು ಮಾಡುತ್ತೇನೆ” ಎನ್ನುತ್ತಾಳೆ. ಆಕೆಯ ಧರ್ಮಕೆ ಮೆಚ್ಚಿದ ಯಮ ವರವನೀಯುತ್ತೇನೆ ಬೇಡು ಎಂದಾಗ ಬಹಳ ಚಾಣಾಕ್ಷತನದಿಂದ ತನ್ನ ಮಾವನಿಗೆ ಕಣ್ಣು ಬರುವಂತೆ ವರ ಬೇಡುತ್ತಾಳೆ.ಇಲ್ಲಿ ಆಕೆಯ ನಿಸ್ವಾರ್ಥತೆ ಎದ್ದು ಕಾಣುತ್ತದೆ.೭ ನೆಯ ದೃಶ್ಯದಲ್ಲಿ ಯಮ ಮಾನವ ಲೋಕ ದ ಎಲ್ಲೆ ದಾಟಿ ತನ್ನ ಲೋಕದತ್ತ ಹೋಗುತ್ತಾನೆ.ಮರಳಿ ನೋಡಿದರೆ ಸಾವಿತ್ರಿ ಬೆನ್ನಹಿ಼ಂದೆಯೆ ಇದ್ದಾಳೆ. ಏಕೆ ಎಂಬ ಅವನ ಪ್ರಶ್ನೆ ” ದೇಹ ಮನವನರಸುವದು .ಮನದ ಧರ್ಮವ ಮನವು ಮಾಡುತಲಿಹುದು …ಪತಿಯಾತ್ಮದರ್ಧ ಸತಿ ಎಂಬುದದು ಋತಸಿದ್ಧ ಆತ್ಮವಿಹ ಕಡೆ ದೇಹ ಮನಸುಗಳು ಹೋಗುವದು ಧರ್ಮ ! ಎಂದು ಮತ್ತೆ ತನ್ನ ಧರ್ಮವನ್ನೇ ಸಾರುತ್ತಾಳೆ .ಆಕೆಯ ನಿರ್ಧಾರಕ್ಕೆ ಮೆಚ್ಚಿದ ಯಮ ಈಗಲಾದರೂ ಇನ್ನೊಂದು ವರ ಕೊಟ್ಟು ಅವಳನ್ನು ಸಾಗ ಹಾಕಬೇಕೆಂದುಕೊಂಡು ಇನ್ನೊಂದು ವರ ಕೊಡುತ್ತಾನೆ .ಆಗಲೂ ತನ್ನಗಂಡನ ಜೀವ ಕೇಳದ ಸಾವಿತ್ರಿ ” ಮಾವನಿಗೆ ಕಳೆದ ಧರೆ ಆಳಿದ ಸಿರಿಗಳು ಬರಲಿ” ಎಂದು ಬೇಡಿಕೊಳ್ಳುತ್ತಾಳೆ. ಆಗಲೂ ಬೆನ್ನು ಹತ್ತಿದ ಅವಳಿಗೆ ಯಮ ಇನ್ನು ಜೀವವುಳ್ಳ ಮಾನವರು ಬರಬಾರದು ಎಂದರೆ ಧರ್ಮದಿಂದ ಧರ್ಮವನ್ನು ಗೆಲ್ವೆನೆಂಬ ನಿರ್ಧಾರವನ್ನೇ ತೋರುತ್ತಾಳೆ. ೮ ನೆಯ ದೃಶ್ಯದ ಆರಂಭದಲ್ಲಿ ಮತ್ತೆ ತನ್ನ ಹಿಂದೆ ಏನೋ ಸದ್ದು ಬರುವದ ಕೇಳಿದ ಯಮನಿಗೆ ದಿಗಿಲು .ಮತ್ತೆ ಸಾವಿತ್ರಿಯನ್ನು ನೋಡಿದ ಯಮ ಎರಡು ವರಗಳ ಪಡೆದು ಬೆನ್ನು ಹತ್ತುವದು ಧರ್ಮವೇ ?
ಅಂಕಣ ಬರಹ ಮೂರು ಗಳಿಗೆಯ ಬಾಳಿನಲ್ಲಿ… ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ.. ನಿಜವೆ ? ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು ಸಾಮಾನ್ಯರಿಗೆ ಸಾಧ್ಯವಾಗುತ್ತದಾ? ಈ ಮಾತುಗಳು ,ದಾಸವಾಣಿ ಇವೆಲ್ಲ ಇಂದಿನ ತಂತ್ರಜ್ಞಾನದ ಯುಗದ ಜನತೆಗೆ ಬೇಕೆ? ನಾವು ಬದುಕುವುದು ಕೇವಲ ನಮಗಾಗಿ ಎಂದರೆ ತಮ್ಮ ಮಕ್ಕಳಿಗಾಗಿ ..ಮುಂದಿನ ಮೂರು ತಲೆಮಾರುಗಳಿಗಾಗಿ ಆಸ್ತಿ ಸಂಪಾದಿಸುವ ಜನರೆಲ್ಲ ಕೇವಲ ತಮಗಾಗಿಯೇ ಬದುಕಿದ್ದಾರೆಯೆ? ನಾನು ಹೋದರೂ ನನ್ನ ಮಕ್ಕಳು ಸುಖದಿಂದ ಇರಲಿ ಎನ್ನುವ ನಿಜ ಕಾಳಜಿ, ಅಥವಾ ನನ್ನ ಮುಂದಿನ ಹತ್ತು ತಲೆಮಾರಿನವರಿಗೆ ಕಷ್ಟ ಬರಬಾರದು ಎಂಬ ದುರಾಸೆ ಮಿಶ್ರಿತ ಕಾಳಜಿಯಿರುವುದರಿಂದಲೇ ಅಲ್ಲವೆ ಬ್ಯಾಂಕ್ ಡಿಪಾಸಿಟ್ , ಒಡವೆ, ಮನೆ , ಫ್ಲಾಟ್, ಜಮೀನು ಎಂದೆಲ್ಲ ಗಳಿಸುತ್ತಿರುವುದು. ಇರುವುದೊಂದೇ ಬದುಕು , ಈ ಬದುಕು ನನ್ನದು ಮಾತ್ರಾ ಇತರರ ಬಗ್ಗೆ ನಾನು ಯೋಚಿಸುವುದಿಲ್ಲ ಎನ್ನುವುದು , ನನ್ನ ಕುಟುಂಬಕ್ಕಾಗಿ ನಾನು ನನ್ನ ಆಸೆಗಳನ್ನು ತ್ಯಾಗ ಮಾಡುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಸ್ವಾರ್ಥಪರತೆಯಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿರುವ ಗಂಡು ಹೆಣ್ಣು ಇಬ್ಬರಿಗೂ ಸಮಾನ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಗಂಡು ತನ್ನ ಜವಾಬ್ದಾರಿ ಮರೆತರೂ ಹೆಣ್ಣು ಆ ಕುಟುಂಬಕ್ಕಾಗಿ ತನ್ನೆಲ್ಲ ಶಕ್ತಿ ಧಾರೆಯೆರೆಯುತ್ತಾಳೆ. ನಾನಿಲ್ಲದಿದ್ದರೂ ಜಗತ್ತು ಹಾಗೇ ನಡೆಯುತ್ತದೆ.ನಾನಿಲ್ಲವಾದರೂ ನನ್ನ ಪ್ರೀತಿ ಪಾತ್ರರು ಹಾಗೇ ಬದುಕುತ್ತಾರೆ ..ಹಾಗಿದ್ದಾಗ ನಾನೇಕೆ ನನ್ನ ಆಸೆ , ಗುರಿ ಏನೆಲ್ಲ ತ್ಯಾಗ ಮಾಡಬೇಕು ಎಂಬ ಯೋಚನೆಗಳಿರುವವರೂ ನಮ್ಮ ಮಧ್ಯೆ ಇಲ್ಲದಿಲ್ಲ. ಈ ಭೂಮಿ ನಮಗಾಗಿ ಅದೆಷ್ಟಲ್ಲಾ ಹೂ ,ಹಣ್ಣು ಹಸಿರು ಕೊಟ್ಟು ಆಧಾರವಾಗಿದೆಯಲ್ಲ.ಅದೂ ನನಗೇಕೆ ಬೇಕು ಇವೆಲ್ಲ ..ನನಗಿಷ್ಟ ಬಂದಂತೆ ನಾನಿರುವೆ ಎಂದು ಸುಮ್ಮನಿದ್ದರೆ ನಮ್ಮ ಗತಿ ದೇವರೇ ಗತಿ! ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ಎನ್ನುವ ಮೂಕ ಗೋವು ಸಹಾ ತನ್ನ ಹಾಲೆಲ್ಲಾ ಕೇವಲ ತನ್ನ ಕಂದನಿಗಿರಲಿ ಎಂದೂ ಆಶಿಸಿಲ್ಲ.ಅದಕ್ಕೆ ಇಷ್ಟ ಇರುತ್ತದೋ ಇಲ್ಲವೋ ಆದರೂ ಕರುವಿನ ಪಾಲುಗಿಂತ ಹೆಚ್ಚು ಹಾಲನ್ನು ನಮಗೆ ನೀಡುತ್ತಿದೆ. ಒಂದು ಮನೆ , ಗಂಡ – ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡ ಅಸಾಧ್ಯ ಬುದ್ಧಿವಂತ. ಆಗಾಗ ಜಗಳವಾದಾಗಲೆಲ್ಲ ಹೆಂಡತಿಗೆ ಹೇಳುತ್ತಿದ್ದ “. ಏನು ಮಾಡ್ಲಿ ಹೇಳು…ಒಂದು ವೇಳೆ ನಾನೇನಾದರೂ ನಿನ್ನ ಮದುವೆಯಾಗಿಲ್ಲದಿದ್ದರೆ ..ಎಲ್ಲೋ ಹೋಗಿ ಏನೋ ಮಾಡಿ…ಏನೋ ಆಗಿರುತ್ತಿದ್ದೆ…ಆದ್ರೆ .ನಿನ್ನ ಮದುವೆಯಾಗಿಬಿಟ್ನೆ??” ಹೆಂಡತಿಯೂ ಸೋಲುತ್ತಿರಲಿಲ್ಲ..” ನೀನು ಬರೀ ನಿನ್ನ ಬಗ್ಗೆ ಹೇಳ್ತೀಯಲ್ಲ..ನನಗೂ ಒಂದಷ್ಟು ಆಸೆಗಳಿದ್ದವು..ನಿನ್ನ ಮದುವೆಯಾಗಿ ನಾನೂ ಅವಕ್ಕೆಲ್ಲ ಎಳ್ಳು ನೀರು ಬಿಡಲಿಲ್ಲವ …” ಎಂದು ವಾದ ಮಾಡುತ್ತಿದ್ದಳು. ಗಂಡ – ಹೆಂಡತಿಯರ ಈ ವಾದಗಳನ್ನು ಕೇಳುತ್ತಾ ಮಕ್ಕಳು ಒಳಗೊಳಗೇ ಆತಂಕ ಪಡುತ್ತಿದ್ದವು.ಇವರಿಬ್ಬರೂ ಹೀಗೇ ಜಗಳವಾಡಿಕೊಂಡು ಮನೆ ಬಿಟ್ಟು ಹೋದರೆ ನಮ್ಮ ಗತಿಯೇನು ಎಂದು. ಗಂಡನಿಗೆ ಅರ್ಥವಾಗದಿದ್ದರೂ ಮಕ್ಕಳ ಈ ಆತಂಕ ಹೆಂಡತಿಗರ್ಥವಾಯಿತು. ನಮ್ಮನ್ನೇ ನಂಬಿರುವ ಈ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಗಂಡನಿಗೆ ಅರ್ಥ ಮಾಡಿಸಿದಳು. ಒಂದು ಸಂಸಾರ ಎಂದು ಕಟ್ಟಿಕೊಂಡ ಕ್ಷಣದಿಂದಲೇ ನಮ್ಮ ಕೆಲವೊಂದು ಆದ್ಯತೆಗಳು ನಮಗೇ ಅರಿವಿಲ್ಲದಂತೆ ಬದಲಾಗಿ ಬಿಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ನಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತೇ ಬಿಡಬೇಕಾಗುತ್ತದೆ. ದುರದೃಷ್ಟವಶಾತ್ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ. ಗಂಡು ತನಗನಿಸಿದ್ದನ್ನ ಯಾವಾಗ ಬೇಕಾದರೂ ಸಾಧಿಸುವಷ್ಟು ಸ್ವತಂತ್ರವನ್ನು ಸ್ವಯಂ ತೆಗೆದುಕೊಂಡು ಬಿಟ್ಟಿದ್ದರೆ ಹೆಣ್ಣು ಮನೆ , ಮಕ್ಕಳು ಅವರ ಓದುಬರಹ ,ಆರೋಗ್ಯ ಮನೆಯಲ್ಲಿನ ಹಿರಿಯರ ಆರೈಕೆ ಎಂದು ನೂರಾರು ಜವಾಬ್ದಾರಿಗಳನ್ನ ತನ್ನ ಕೋಮಲಭುಜಗಳ ಮೇಲೆ ಹೊತ್ತು ಇದೇ ನನ್ನ ಬದುಕು ಎಂದುಕೊಂಡು ಹಾದಿ ಸವೆಸುತ್ತಾಳೆ. ಗಂಡು ಮನೆಯ ಜವಾಬ್ದಾರಿಯನ್ನ ಸಮವಾಗಿ ನಿಭಾಯಿಸಿದ್ದರೆ ಹೆಣ್ಣಿಗೆ ಅದೂ ಏನಾದರೊಂದು ಸಾಧಿಸಬೇಕೆಂಬ ಆಕಾಂಕ್ಷೆಯಿರುವ ಹೆಣ್ಣಿಗೆ ಸಂಸಾರ ಹೊರೆಯೆನಿಸುವುದಿಲ್ಲ. ಮನೆ ಹೊರಗು ಒಳಗುಗಳೆರಡನ್ನೂ ನಿಭಾಯಿಸುವ ಕುಶಲತೆ ಆಕೆಗಿದೆ. ಆದರೆ ಯಾವುದೋ ಒಂದು ಘಳಿಗೆಯಲ್ಲಿ…ಛೇ ..ಇದೆಂತಹ ಬದುಕು ನನ್ನದು ..ನನಗಾಗಿ ನಾನು ಬದುಕದೆ ಈ ಮನೆ ,ಗಂಡ ಮಕ್ಕಳಿಗಾಗಿ ಬದುಕುತ್ತಿದ್ದೇನಲ್ಲ..ಹಾಗಾದರೆ ನನಗಾಗಿ ಬದುಕುವುದಾದರೂ ಯಾವಾಗ ಎನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು ಆ ಕುಟುಂಬದ ಸರ್ವನಾಶ !! ಹೆಣ್ಣಿಗೆ ಹೀಗೆಂದೂ ಅನಿಸದಂತೆ ನೋಡಿಕೊಳ್ಳುವ ಗುರುತರ ಹೊಣೆ ಗಂಡುಗಳಿಗಿದೆ. ಕುಟುಂಬ ಒಂದು ಮಧುರ ಬಂಧ! ಏನೂ ಸರಯಿಲ್ಲದಿದ್ದಾಗ, ತೀರಾ ಹಿಂಸೆಯಾಗುತ್ತಿದ್ದಾಗ ಪರಸ್ಪರರ ಒಪ್ಪಿಗೆ ಮೇರೆಗೆ ಬೇರಾದರೂ ಮಕ್ಕಳ ಜವಾಬ್ದಾರಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ನಮ್ಮ ತಾಯ್ತಂದೆಯರನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ನನ್ನ ದಾರಿ ನನಗೆ ನಾನಿಲ್ಲದೆಯೂ ಇವರೆಲ್ಲ ಇದ್ದೇ ಇರುತ್ತಾರೆ ..ನನ್ನ ಆಕಾಂಕ್ಷೆಯೇ ಮುಖ್ಯ ಎಂದು ಹೊರಟು ಬಿಟ್ಟಿದ್ದರೆ ನಾವುಗಳು ಈಗ ಇರುವಂತೆ ಇರಲು ಸಾಧ್ಯವಾಗುತ್ತಿತ್ತೆ? ( ವ್ಯತಿರಿಕ್ತ ಉದಾಹರಣೆಗಳಿವೆ ..ಇಲ್ಲಿ ಮಾತು ಸಾಮಾನ್ಯವಾಗಿ ಕುಟುಂಬದ ಕುರಿತು ಬಂದಿದೆ). ನಿಜ , ನಾನಿಲ್ಲದೆಯೂ ಲೋಕ ಇದ್ದೇ ಇರುತ್ತದೆ..ನನ್ನವರೂ ಬದುಕಿ ಬಾಳಿಯೇ ಬಾಳುತ್ತಾರೆ. ಆದರೆ ನಾನಿಲ್ಲದಾಗ ನನ್ನವರನ್ನು ಬದುಕಲು ಸಿದ್ಧ ಮಾಡುವುದಿದೆಯಲ್ಲ..ಅದೇ ನಮ್ಮೆಲ್ಲರ ಹೊಣೆಗಾರಿಕೆ.ನಾನಿಲ್ಲದ ಮೇಲೆ ಮನೆ ಮಾಡುವುದೇಕೆ ಎಂದು ಯಾರಾದರೂ ಯೋಚಿಸಿದ್ದರೆ ಜನಸಾಲದ ಹೊರೆಯಲ್ಲಿ ನಲುಗಿ ಮನೆ ಕಟ್ಟುತ್ತಲೇ ಇರಲಿಲ್ಲ.ಒಂದು ವೇಳೆ ಸಾಲ ತೀರಿಸಿದ ಮರು ದಿನವೇ ಆತ ಸತ್ತರೂ ಅಯ್ಯೋ ನಾನು ಕಟ್ಟಿಸಿದ ಮನೆಯಲ್ಲಿ ಬಹಳ ದಿನ ಬದುಕಲಿಲ್ಲ ಎಂದು ಕೊರಗುತ್ತ ಸಾಯಲಾರ.ಬದಲಾಗಿ ನಾನು ಹೋದರೂ ನನ್ನವರಿಗೊಂದು ನೆಲೆ ಇದೆ ಎಂದು ನೆಮ್ಮದಿಯಿಂದ ಸಾಯುತ್ತಾನೆ.ಆಸ್ತ ಮಾಡದವನು ಮಕ್ಕಳನ್ನು ಚೆನ್ನಾಗಿ ಓದಿಸಿದವನು ನಾನಿಲ್ಲದೆಯೂ ನನ್ನವರು ಬದುಕಲು ಗಟ್ಡಿಗರಾಗಿದ್ದಾರೆ ಎಂದು ನಿರಾಳವಾಗಿ ಸಾಯುತ್ತಾನೆ. ಇದೆಲ್ಲ ಇಲ್ಲದವನೂ ಸಹಾ ನಾನು ಹೋದರೇನು ನನ್ನ ಹೆಂಡತಿ ಮಕ್ಕಳು ನನ್ನಂತೆಯೇ ದಿನಾ ದುಡಿದು ತಿನ್ನುತ್ತಾರೆ ಎಂಬ ಭಾವದಲ್ಲಿ ಸಾಯುತ್ತಾನೆ. ಇಲ್ಲಿ ನಾವು ಯಾರೂ ನಮಗಾಗಿ ಬದುಕುವುದಿಲ್ಲ..ಆದರೆ ನಾವೇ ಅಂಟಿಸಿಕೊಂಡ ಬಂಧಗಳಿಗಾಗಿ ಬದುಕುತ್ತೇವೆ.ಹಣ ,ಕೀರ್ತಿ..ಹೀಗೇ ಹತ್ತಾರು ಕಾರಣಗಳಿಂದ ಕುಟುಂಬದ ಜವಾಬ್ದಾರಿ ತೊರೆದ ಬಹಳಷ್ಟು ಬದುಕು ಒಂದು ಹಂತದಲ್ಲಿ ಪ್ರಸಿದ್ಧಿಗೆ ಬಂದರೂ ನಂತರ ಮೂರಾಬಟ್ಟೆಯಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಗಂಡಿರಲಿ ಹೆಣ್ಣಿರಲಿ..ಕುಟುಂಬ ವ್ಯವಸ್ಥೆ ಗೆ ಒಳಪಟ್ಟ ಮೇಲೆ ಪರಸ್ಪರರ ಗೌರವಿಸುತ್ತಾ ಮನೆ ಕುಟುಂಬ ಎನ್ನುವುದು ಇಬ್ಬರ ಪಾಲಿಗೂ ಹೊರೆಯಾಗದಂತೆ ನಡೆದುಕೊಳ್ಳುವುದು ತೀರಾ ಅನಿವಾರ್ಯ. ಹೀಗೆ ರಾಜಿಯಾಗಲು ಸಾಧ್ಯವಿಲ್ಲದವರು ಸಂಸಾರ ಕಟ್ಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.ನಮ್ಮ ಬದುಕನ್ನು ನಾವು ಹಾಳುಗೆಡವಬಹುದು ಆದರೆ ನಮ್ಮನ್ನು ನಂಬಿದವರ ಬದುಕನ್ನು ಹಾಳುಗೆಡವಲು ನಮಗಾವ ಅಧಿಕಾರವೂ ಇರುವುದಿಲ್ಲ.. ನಾವು ಬದುಕುವುದು ಕೇವಲ ನಮಗಾಗಿ ಅಲ್ಲ..ನಮ್ಮವರಿಗಾಗಿಯೂ ಹೌದು..ಅದಕ್ಕಾಗಿ ಒಂದಷ್ಟು ನಮ್ಮ ಆಸೆಗಳನ್ನ ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಒಂದು ಹಕ್ಕಿಯೂ ಸಹಾ ತನ್ನ ಮರಿಗಳಿಗೆ ರೆಕ್ಜೆ ಮೂಡಿ ಅವು ಪುರ್ರನೆ ಬಾನಿನಲ್ಲಿ ಹಾರುವ ಸಾಮರ್ಥ್ಯ ಪಡೆವವರೆಗೂ ಕಾಳಜಿಯಿಂದ ಅವುಗಳನ್ನ ಪಾಲಿಸುತ್ತದೆ. ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳೂ ತಮ್ಮ ಹಿಂಡಿನಲ್ಲಿ ಯಾವುದಾದರೊಂದು ಪ್ರಾಣಿಸಂಕಷ್ಟಕ್ಕೆ ಸಿಲುಕಿದಾಗ ಜೀವದ ಹಂಗು ತೊರೆದು ಅದನ್ನು ಕಾಪಾಡಿದ ಉದಾಹರಣೆಗಳೂ ಇವೆ. ಹೀಗಿರುವಾಗ ನಾವು ಮನುಷ್ಯರು! ಹೇಳಿ ಕೇಳಿ ಸಮಾಜ ಜೀವಿಗಳು..ಕುಟುಂಬ ವ್ಯವಸ್ಥೆಯನ್ನ ಒಪ್ಪಿಕೊಂಡವರು ನನಗಾಗಿ ನಾನು ಬದುಕುತ್ತೇನೆಂದು ಎಲ್ಲ ತೊರೆದು ಅಷ್ಟು ಸುಲಭವಾಗಿ ನಮ್ಮಿಷ್ಟದ ಹಾದಿಯಲ್ಲಿ ಹೋಗಿಬಿಡಲಾಗುತ್ತದೆಯೆ? ಮಕ್ಕಳು ತಮ್ಮ ಅಪ್ಪ- ಅಮ್ಮದಿರು ಇಲ್ಲವಾದಾಗಲೂ ಅವರ ಬಗ್ಗೆ ಕೃತಜ್ಞತೆಯಿಂದ ಪ್ರೀತಿಯಿಂದ ನೆನೆವಂತೆ ನಮ್ಮ ಬಾಳಿರಬೇಕು.ಇಂದಿನ ಫಾಸ್ಟ್ ಜನರೇಷನ್ ರವರು ಇದನ್ನ ಒಪ್ಪುವರೋ ಇಲ್ಲವೊ ತಿಳಿಯದು. ಎಷ್ಟೆಲ್ಲ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಿದರೂ ಮುಂದೆ ಆ ಮಕ್ಕಳು ತಮ್ಮ ತಂದೆ ತಾಯಿಯರನ್ಮು ಹೀನಾಯವಾಗಿ ಕಾಣುವ ,ಅನಾಥಾಶ್ರಮಕ್ಕೆ ತಳ್ಳುವುದೂ ನಡೆಯುತ್ತಲೇ ಇದೆ. ಹಾಗೆಂದು ಎಲ್ಲೋ ಕೆಲವರು ಹೀಗೆ ಮಾಡುತ್ತಾರೆಂದು ಎಲ್ಲಾ ಅಪ್ಪ – ಅಮ್ಮದಿರು ತಮ್ಮ ಮಕ್ಕಳನ್ನ ಓದಿಸದೆ ಒಳ್ಳೆಯ ಸಂಸ್ಕಾರ ಕೊಡದೆ ಬೆಳೆಸಲು ಇಚ್ಛಿಸುವುದೆಲ್ಲಿಯಾದರೂ ಇದೆಯೆ? ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಶುದ್ಧ ನೀರು ,ಶುದ್ಧ ಭೂಮಿಯನ್ನು ಉಳಿಸೋಣವೆಂದು ಆಶಿಸುವ ನಾವುಗಳು ಅಂತೆಯೇ ಈ ಶುದ್ಧ ಜಗತ್ತಿನಲ್ಲಿ ಎಲ್ಲಾ ರೀತಿಯಿಂದಲೂ ಬದುಕಲು ಅರ್ಹರಾದ ಪೀಳಿಗೆಯನ್ನು ಬೆಳೆಸುವುದೂ ಅಷ್ಟೇ ಮುಖ್ಯ. ತಾನು ಬಾಡಿ ಮಣ್ಣ ಸೇರಿ ಹೋಗುತ್ತೇನೆಂದು ಮಲ್ಲಿಗೆ ಪರಿಮಳ ಸೂಸುವುದ ನಿಲ್ಲಿಸುವುದಿಲ್ಲ. ತಾನು ಹೇಗಿದಗದರೂ ಆರಿ ಕತ್ತಲಾವರಿಸಿಬಿಡುತ್ತದೆಂದು ಒಂದು ಹಣತೆ ಎಣ್ಣೆ ಬತ್ತಿ ಎಲ್ಲಾ ಇದ್ದರೂ ಬೆಳಕು ಕೊಡದೆ ಸುಮ್ಮನಿರುವುದಿಲ್ಲ. ಬದುಕೂ ಅಷ್ಟೇ ..ಮಲ್ಲಿಗೆಯಂತಾಗಲಿ, ಉರಿವ ಹಣತೆಯಂತಾಗಲಿ.ಇರುವಷ್ಟು ದಿನ ಸುತ್ತಮುತ್ತ ಪರಿಮಳವನ್ನೂ ,ಬೆಳಕನ್ನೂ ಚೆಲ್ಲುವಂತಾಗಲಿ. ********* ದೇವಯಾನಿ ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ
You cannot copy content of this page