ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಯಾವಿ 2020

ಕವಿತೆ ಮಾಯಾವಿ 2020 ರಜಿಯಾ ಕೆ ಭಾವಿಕಟ್ಟಿ ಅಳಿದು ಉಳಿದದ್ದು ಎಲ್ಲವೂನಿಗೂಢತೆಯ ಸಾರವನ್ನು ಹೊತ್ತು ತಂದು ತೇಲುವ ದೋಣಿಯಲ್ಲಿ ಜಲದ ಸುಳಿಯೇ ಇಲ್ಲದೆ ಮುಳುಗಿ ಸತ್ತಂತೆ ಭಾಸವಾಗಿತ್ತು ಅಂಧನಿಗೂ ಕುರಡನೆಂಬ ಹಣೆಪಟ್ಟಿ ಮೊದಲೇ ಇದ್ದರು ಹೊಸತರಹದ ಮುಖವಾಡದನೇತ್ರಗಳಿಗೆ ಬಣ್ಣಗಳ ಲೇಪಿಸಲಾಗಿತ್ತು ಕಾಣದಾ ಜೀವಯು ಎಂಬ ಸುಳ್ಳುಗಳ ಸೋಗಿಗೆ ಕಾಲವೇನಿಂತು ಮುನ್ನುಡಿ ಬರೆದಿತ್ತುಅದಕೆ ಸತ್ಯವೆಂಬಂತೆ ಸಮಯಸಾತು ನೀಡಿ ಗರ್ವಪಟ್ಟಿತ್ತು. ಬಿತ್ತಿದವನು ಬರೀಗೈಲಿ ಬೆತ್ತಲಾಗಿ ನಿಂತು ಪರರ ಪಾಲಿಗೆಹುಚ್ಚನಂತೆ ಕಂಡು ಬದುಕುವ ಪಾಡು ಬಂದು ನಿಂತಿತ್ತು. ಗುಡಿ ಗುಂಡಾರ ಮಸೀದಿಗಳನದೇವರಿಗೂ ಗರ ಬಡಿದು ದೈವತ್ವದ ಬೆಳಕಿಗೂ ಅಂಧಕಾರದ ಕಿಡಿ ಸೊಕಿ ಬೆಂಕಿ ಅಲ್ಲೆ ನಂದಿ ತಣ್ಣಗಾಗಿತ್ತು. ಊರುರು ಅಲೆದು ದುಡಿದು ದಣಿದವನ ಹೊಟ್ಟೆಯ ಹಸಿವುಇಮ್ಮಡಿಗೊಂಡು ಮರಳಿ ಮಣ್ಣಿಗೆ ತಲುಪದೇ ಮಧ್ಯದಲ್ಲೆ ಮಸಣಕೂ ಆಗದೇ ಬೀದಿಯ ನಾಯಿಗಳಿಗೂ ಆಹಾರವಾಗದೆ ಆತ್ಮ ನಗ್ನವಾಗಿಯೇ ಉಳಿದಿತ್ತು ಸಂಬಂಧಗಳು ಮೊದಲಿಗಿಂತಲೂ ಬಹು ದೂರವೇ ಉಳಿದು ಮೋಸದ ಚಹರೆಗಳ ಒಟ್ಟಿಗೆ ಚಾಪುಗಳು ಹೊಂದಿ ಕುಹುಕ ತಾಂಡವದ ನಾಟಕಕೆ ನಡು ಸಂಚು ನಡೆಸಿದ್ದವು . ಶಿವಶರಣರ ನುಡಿಗಳು ನಿಜವಾದವು ಎಂಬಂತೆ ವರುಷದುದ್ದಕೂ ನಿಜ ಘಟನೆಗಳೇ ಕಣ್ಣಿಗೆ ದೊರಕುವಂತಿದ್ದವು ಹಣ ಹೆಣಗಳ ಲೆಕ್ಕವು ಸಿಗದೇಒಂದರ ಮೆಲೋಂದು ಘೋರಿಗಳು ಕಟ್ಟಲುರುದ್ರ ಭೂಮಿಯು ನಾಚಿ ತಲೆತಗ್ಗಿಸುವಂತಾಗಿತ್ತು ಸತ್ಯ ನ್ಯಾಯ ನೀತಿ ಧರ್ಮಗಳುಸತ್ತು ಅಗೋಚರಗಾಗಿ ದೂರ ನಿಂತದ್ದು ಮತ್ತೊಮ್ಮೆ ಭಾಸವಾಗಿತ್ತು . ಅಳಿದು ಉಳಿದದ್ದು ಏನಿದೆ ಎಲ್ಲವೂ ಬರೀ ನೋವಿನ ಸರಮಾಲೆಗಳೇ ಹೊರತು ಸಂತಸ ಕಂಡ ದಿನಗಳೇ ಕಡಿಮೆ ಮೊದಲು ಕಳೆದು ಬಿಡಲಿ ಈ ಕರಾಳ ಸಮಯ ಎಂದು ಎಲ್ಲರ ಮನಸಿನಲೂ ನಿಟ್ಟುಸಿರು ಒಂದೇ ಆಗಿತ್ತು. ********************************

ಮಾಯಾವಿ 2020 Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಶಾಲಾರಂಗದೊಳಗೊಂದು ಕೋಲಾಟ ಠಣ್…ಠಣ್… ಠಣ್.. ಗಂಟೆಯ ಸದ್ದು ಒಂಭತ್ತು ಸಾರಿ  ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ.   ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಅದು ನಮ್ಮ ಶಾಲೆ.  ನಮ್ಮ ಹಳ್ಳಿಯ ಶಾಲೆ.  ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, ತೆರೆದ ಎದೆ ಮತ್ತು ಅಕ್ಕ ಪಕ್ಕದ ಭುಜಗಳಂತೆ,  ಮುರ ಕಲ್ಲಿನ ಗೋಡೆಯ, ಹೆಂಚಿನ ಮಾಡಿನ ಶಾಲೆಯ ಕಟ್ಟಡ ನೆಲೆ ಕಂಡಿದೆ  ಈ ಧ್ವಜಸ್ವಂಭದ ಎದುರು ವಾರಕ್ಕೆ ಎರಡು ಸಲ ಡ್ರಿಲ್ ಮಾಡುವುದು, ಸೋಮವಾರ ಹಾಗೂ ಶುಕ್ರವಾರ. ಆಗ ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯ. ಒಂದು ಗಂಟೆ ಬಾರಿಸಿದ ಕೂಡಲೇ ಶಾಲೆಯ ಮಡಿಲಿಂದ ಹೊರಕ್ಕೆ ಜಂಪ್ ಮಾಡಿ ಮಕ್ಕಳು  ಓಡುವುದು. ಸಾಲಾಗಿ ತರಗತಿ, ವಿಭಾಗದ ಪ್ರಕಾರ ಸಾಲು ಜೋಡಿಸಲ್ಪಡುತ್ತದೆ.   ಹುಡುಗಿಯರಿಗೆ ನೀಲಿ ಸ್ಕರ್ಟ್ ಬಿಳಿ ಅಂಗಿ. ಹುಡುಗರಿಗೆ ನೀಲಿ ಚಡ್ಡಿ ಬಿಳಿ ಅಂಗಿ. ತಪ್ಪಿದರೆ  ಬಿಸಿಲಲ್ಲಿ ನಿಲ್ಲುವ ಶಿಕ್ಷೆ ಮಾತ್ರವಲ್ಲ ಜೊತೆಗೆ  ಕೈಗೆ ಬಿಸಿ ಬಿಸಿ ಪೆಟ್ಟು ಹಾಗೂ ಬಸ್ಕಿ ಇಪ್ಪತ್ತೈದು. ಅದೆಷ್ಟೋ ಸಲ ಯುನಿಫಾರ್ಮ್ ಮರೆತು ಬಣ್ಣದ ಫ್ರಾಕ್,ಉದ್ದಲಂಗ ಹಾಕಿ ಬಂದು ಶಂಕಿಬಾಯಿ ಟೀಚರ್ ಹತ್ತಿರ ಪೆಟ್ಟು ತಿಂದದ್ದು, ಚುರ್ ಚುರ್ ಎನ್ನುವ ಚೂಪು ನೆನಪು. ಆ ಧ್ವಜಸ್ತಂಭ ನೋಡಿದಾಗೆಲ್ಲ ಚಿತ್ತದಲ್ಲಿ ಅದರ ಎದುರು ಸಾಲಾಗಿ ಒಂದೇ ಬಗೆಯ ದಿರಿಸು ತೊಟ್ಟ ವಿಧ್ಯಾರ್ಥಿಗಳ ಚಿತ್ರವೇ ತುಂಬಿಕೊಳ್ಳುವುದು. ಅದೆಷ್ಟು ಅಂದ- ಚೆಂದ. ಒಬ್ಬರು ಬಟ್ಟೆಯ ಬಣ್ಣ ಬೇರೆಯಾದರೂ ಬಿಳಿ ಅಂಗಿಗೆ ಶಾಹಿ ಕಲೆಯಾದಂತೆ, ನೂರು ಸರಿಗಳ ನಡುವೆ ತಪ್ಪೊಂದು ಎದ್ದು ನಿಂತಂತೆ  ಕಾಣಿತ್ತಿತ್ತು. ನಮ್ಮ ಶಂಕಿ ಟೀಚರ್, ಶೇಖರ ಮಾಸ್ಟ್ರು ಧ್ವಜಸ್ತಂಭದ ಬಳಿಯಿಂದಲೇ ಅಂತಹ ಅಂಗಿಗಳ ಲೆಕ್ಕ ಹಾಕಿ ಬಿಡುತ್ತಿದ್ದರು‌.  ನಮ್ಮ ಅ ಡ್ರಿಲ್ ಗೆ ಅನುಪಮ ಸೌಂದರ್ಯವಿತ್ತು. ಬೆಳಗ್ಗಿನ ಬಿಸಿಲೂ ಹೆಗಲು,ಕೆನ್ನೆ,ತಲೆ ಸವರಿ ಸಣ್ಣಗೆ ಬೆವರುತ್ತಿದ್ದೆವು. ಜೊತೆಜೊತೆಗೆ ನಡೆಸುತ್ತಿದ್ದ ಕವಾಯತ್. ಇರಲಿ. ಇಲ್ಲಿಂದ ಮುಂದೆ ಬಂದರೆ ನಮಗೆ ಕಾಣಿಸುವುದು ಬೆಳಗ್ಗೆ ಯಾವಾಗಲೂ ನಮಗಿಂತಲೂ ಬೇಗ ಬರುತ್ತಿದ್ದ ಗೌರಿ ಟೀಚರ್ . ಇವರು ಬೆಳ್ಳನೆ ಉದ್ದಕ್ಕಿದ್ದು  ಸೀರೆ  ಸ್ವಲ್ಪ ಮೇಲೆ ಉಡುತ್ತಿದ್ದರು. ಉರೂಟು ಕಣ್ಣು, ಬೈತಲೆ ತೆಗೆದು ಎಣ್ಣೆ ಹಾಕಿ ಬಾಚಿದ  ದಪ್ಪ ಮೋಟು ಜಡೆ,.ಕೈಯಲ್ಲಿ ಎರಡು ಪುಸ್ತಕದ ಜೊತೆ ಒಂದು ಸಪೂರ ಕೋಲು. ಆದರೆ ಅವರ ಕೋಲಿಂದ  ಪೆಟ್ಟು ತಿಂದವರು ಬಹಳ ಕಡಿಮೆ. ಇವರು ನಮ್ಮ ಇಷ್ಟದ ಟೀಚರ್. ಅವರದ್ದು ಮೂಲೆಯ ಕ್ಲಾಸ್. ಅಲ್ಲಿ ಕೊಂಚ ಸಪೂರ ಜಗಲಿ. ಶಾಲೆಯ ವರಾಂಡಾದ ಎದುರು ಹೂವಿನ ಹಾಗೂ ಬಣ್ಣದೆಲೆಗಳ ಕ್ರೋಟಾನ್ ಗಿಡಗಳು.  ವಾರಕ್ಕೆ ಒಂದು  ದಿನ  ಗಿಡಗಳ ಬಳಿ  ಬೆಳೆದ ಕಳೆ ಕೀಳುವ, ಕಸ ಹೆಕ್ಕುವ ಕೆಲಸ ಮಕ್ಕಳಿಗೆ ಅಂದರೆ ನಮಗೆ. ನಾವು ಕುಕ್ಕರುಗಾಲಲ್ಲಿ,ಮೊಣಕಾಲೂರಿ, ಬಗ್ಗಿ  ಬೇಡದ ಹುಲ್ಲು ಕೀಳುತ್ತಿದ್ದೆವು. ಕೆಲಸಕ್ಕಿಂತ ಮಾತೇ ಹೆಚ್ಚು.  ಟೀಚರ್ ಬಂದು ” ಎಂತ ಪಂಚಾತಿಗೆ ಕೂತು ಕೊಂಡದ್ದಾ. ಬೇಗಬೇಗ” ಎಂದು ಗದರಿಸಿದಾಗ    ಕಪ್ಪೆ ಹಾರಿದಂತೆ ಹಾರಿ ಹಾರಿ ದೂರವಾಗುತ್ತಿದ್ದೆವು. ಟೀಚರ್ ಬೆನ್ನು ಹಾಕಿದೊಡನೆ ಮತ್ತೆ ನಮ್ಮ ಮಾತು. ಗಂಡು ಹೆಣ್ಣು ಭೇದವಿಲ್ಲ. ಅದೂ ನಮ್ಮಲ್ಲಿ ಕ್ಲಾಸ್ ಲೀಡರ್ ಹುಡುಗಿಯರಾದರೆ ನಮಗೆ ಹುಡುಗರತ್ರ  ಕೆಲಸ ಮಾಡಿಸುವುದೇ ಬಹಳ ಖುಷಿ!. ಜಗಳವಾದರೆ ಮರು ಕ್ಷಣದಲ್ಲಿ ಕೈ ಕೈ ಹಿಡಿದು ಜಿಗಿದೋಡುವ ಕಲೆ ಕಲಿತದ್ದೇ ಹೀಗೆ. ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುವ, ಟೀಂವರ್ಕ್ ನಲ್ಲಿ ಹೊಂದಿ ನಡೆಯುವ, ಎಲ್ಲಾ ಕೆಲಸಗಳನ್ನು ಗೌರವಿಸುವ,  ರೀತಿ ಕಲಿಸಿತು. ನಾಟಕದಲ್ಲೂ ಅಷ್ಟೇ, ಪಾತ್ರಗಳು ಹೊಂದಿ ನಡೆದರೇ ಛಂದವೂ ಚಂದವೂ. ರಂಗಸ್ಥಳದಲ್ಲಿ ಪಾತ್ರಪೋಷಣೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ಚೌಕಿಯಲ್ಲಿ ಬೆರೆಸುವ ಬಣ್ಣಗಳು, ನಟ ನಟಿಯರ ನಡುವಿನ ಕೆಮಿಸ್ಟ್ರಿ. ಆಗೆಲ್ಲ ಇಡೀ ಊರಿನ ಮಕ್ಕಳೆಲ್ಲ ಈ ಶಾಲೆಯಲ್ಲೇ ಓದುವುದು. ಒಂದು ಮನೆಯ ಹುಡುಗಿ ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಊರಿನಿಂದ ಹೊರ ಹೋಗುತ್ತಿದ್ದ ನೆನಪು. ನಮಗೆ ಅವಳು ಅಸ್ಪೃಶ್ಯ ಳು. ಆದರೆ ನಮ್ಮ ಮಾತುಕತೆಯ ಕೇಂದ್ರ ಆಕೆಯಾಗಿರುತ್ತಿದ್ದಳು. ಇಂಗ್ಲೀಷಿನಲ್ಲೇ ಎಲ್ಲ ಪಾಠವಂತೆ!. ಅದು ನಮಗೆ ವಿಸ್ಮಯ, ಅದ್ಭುತ. “ಒಂದನೇ ಕ್ಲಾಸಿನಲ್ಲಿ ABC’D ಕಲಿಸ್ತಾರಂತೆ, ಇಂಗ್ಲೀಷ್ ಮಾತನಾಡುದಂತೆ, ವಿಜ್ಞಾನ, ಗಣಿತ,ಸಮಾಜ ಎಲ್ಲವೂ ಇಂಗ್ಲೀಷ್.  ಅಲ್ಲಿ ಹೋದವರು ಮಾತನಾಡುವುದು ಹೇಗೆ ಗೊತ್ತುಂಟಾ..ಟುಸ್ ಟುಸ್ ವಾಸ್ ಶ್ ಸು !!” ಎಂದು ಚಿತ್ರ ವಿಚಿತ್ರವಾಗಿ ಬಾಯಿಯ ಚಲನೆ ಹೊಂದಿಸಿ ಮಾತಾಡಿ ಅಣಕಿಸಿ ಹೊಟ್ಟೆ ಬಿರಿಯೆ ನಗುತ್ತಿದ್ದೆವು. ನಮ್ಮ‌ಸಂಜೆಯ ಮನೆಯಾಟದಲ್ಲಿ ಒಂದು ಪಾತ್ರ ಅದೇ ಆಗಿರುತ್ತಿತ್ತು.  ಆಗಿನ ಊರ ಶ್ರೀಮಂತರ ಮನೆಯ ಮಕ್ಕಳೂ  ಸರಕಾರಿ ಶಾಲೆಯಲ್ಲೇ ಓದುವುದು. ಈ ಕಳೆ ಕೀಳುವ ಕೆಲಸಕ್ಕೆ ಒಂದಷ್ಟು ಬಡ್ತಿ ದೊರಕಿದ ನಂತರ ನಾವು ಆ ಮಕ್ಕಳ ಬಳಿ ಹೋಗಿ ” ಹೇ ಸಂದೀಪ ಸರಿ ಕಿತ್ತು ತೆಗೆ ಹುಲ್ಲು. ರಾಜೇಶ ಕಡ್ಡಿ, ಪೇಪರ್ ಹೆಕ್ಕು” ಎಂದು ಅವರಿಂದ ಚೂರು ಹೆಚ್ಚು ಕೆಲಸ ಮಾಡಿಸುವ ಖುಷಿ ಹೆಕ್ಕಿದ್ದೂ ಇದೆ. ಮುಗ್ದ ಮನಸ್ಸಿನ ದ್ವೇಷರಹಿತ ಕಾರ್ಯವದು. ಇಲ್ಲಿ ನೋಡಿ!  ಓಡಿಕೊಂಡು ಬಂದಂತೆ ಬರುತ್ತಿದ್ದಾರಲ್ವಾ!, ಅವರೇ ಸುಮನ ಟೀಚರ್. ತುಸು ಸಿಟ್ಟಿನ ಮುಖ.  ಇವರು ಐದನೆಯ ಕ್ಲಾಸಿಗೆ ಇಂಗ್ಲೀಷ್ ಪಾಠ ಮಾಡುವುದು. ನಮಗೆ ಇವರೆಂದರೆ ಬಹಳ ಭಯ. ಅವರ ಬಳಿ ಒಂದು ಹಳದಿ ಬಣ್ಣದ ಸೀರೆಯಿದೆ. ಅದನ್ನು ಉಟ್ಟು ಬಂದ ದಿನ ಅವರಿಗೆ ಹೆಚ್ಚು ಕೋಪ ಬರುತ್ತದೆ ಎಂಬುದು ನಮ್ಮಗಟ್ಟಿ ನಂಬಿಕೆ. ನಾವು ಬೆಳಗ್ಗೆ ಅವರು ಬರುವುದನ್ನೇ ಒಂದಷ್ಟು ಭಯದಿಂದ ಕಾಯುತ್ತಿದ್ದೆವು. ಒಬ್ಬರಿಗೆ ಅದೇ ಕೆಲಸ ವಹಿಸಿಕೊಟ್ಟಿದ್ದೆವು. ದೂರದಿಂದ ಅವರು ಓಡಿ ಬರುವಾಗ ಹಳದಿ ಬಣ್ಣ ಕಂಡರೆ ನಮ್ಮ ಭಯ ವಿಪರೀತ ಹೆಚ್ಚಿ ಕೂಡಲೇ ಗುಪ್ತ ಸಮಾಲೋಚನೆ ಆರಂಭಿಸುತ್ತಿದ್ದೆವು. ಯಾವ ಪಾಠದ ಪ್ರಶ್ನೆ ಕೇಳಬಹುದು. ಎಣ್ಣೆ ತಾಕಿದರೆ ಪೆಟ್ಟು ಹೆಚ್ಚು ನೋವಾಗುವುದಿಲ್ಲವಂತೆ.  ಅಂಗೈಗಳನ್ನು ಎಣ್ಣೆ ಹಾಕಿದ ತಲೆಗೆ ತಿಕ್ಕಿ ತಿಕ್ಕಿ ಪರೀಕ್ಷಿಸುವುದು.  ಕೆಲವು ಹುಡುಗಿಯರ ತಲೆತುಂಬ ಎಣ್ಣೆ. ನಮ್ಮ ಕ್ಲಾಸಿನಲ್ಲಿ ಮಮತಾ ಎಂಬ ಹುಡುಗಿಯ ತಲೆ ಕೂದಲಲ್ಲಿ ಬಹಳ ಎಣ್ಣೆ. ನಾವೆಲ್ಲ ಅವಳ ತಲೆಗೆ ನಮ್ಮ ಅಂಗೈ ತಿಕ್ಕಿ ಪೆಟ್ಟು ತಿನ್ನಲು ಮಾನಸಿಕವಾಗಿ ಸಿದ್ದಗೊಳ್ಳುತ್ತಿದ್ದೆವು. ಜೊತೆಗೆ ಪುಸ್ತಕ ತೆಗೆದು ವೇಗವಾಗಿ ಓದುವ ತಾಲೀಮು.  ಹೀಗೆ ಬನ್ನಿ! ಇಲ್ಲಿದ್ದಾರೆ ನಮ್ಮ ಶಂಕಿ ಟೀಚರ್. ಅವರಲ್ಲಿ ಪೆಟ್ಟಿನ ಖಾರವೂ ಇದೆ, ಜೊತೆಗೆ ಪ್ರೀತಿಯ ಸಿಹಿಯೂ ಉಂಟು. ಅಗಲಹಣೆಯ ಮುಖ, ವಾತ್ಸಲ್ಯ ಅವರ ಕಣ್ಣಿನಲ್ಲಿ ಒಸರುತ್ತದೆ. ಸ್ವಲ್ಪ ವಯಸ್ಸಾಗಿದೆ. ದೊಡ್ಡ ಸೂಡಿ ಕಟ್ಟಿ ಹೂ ಮುಡಿದು ಬರುತ್ತಿದ್ದರು. ನಾವು ಅವರಿಗಾಗಿ ಹೂವಿನ ಮಾಲೆ ತರುವಲ್ಲಿ ಪೈಪೋಟಿ ನಡೆಸುತ್ತಿದ್ದೆವು. ನನ್ನ ಪಕ್ಕ ಕೂತುಕೊಳ್ಳುವ ಶಾಲಿನಿ ಮನೆಯಲ್ಲಿ ರಾಶಿ ಅಬ್ಬಲಿಗೆ. ಹಾಗೆ ಅವಳಿಗೆ ನಾನೆಂದರೆ ಮೆಚ್ಚು. ಆಗಾಗ ಮನೆಯಿಂದ ಚಿಕ್ಕ ಮಾಲೆ ಪಾಟೀ ಚೀಲದೊಳಗೆ ಹಾಕಿ ನನಗೆ ತಂದು ಕೊಡುತ್ತಿದ್ದಳು. ಕೆಲವಷ್ಟು ಸಲ ನನ್ನಜ್ಜಿ ಜಾಜಿ ಮಲ್ಲಿಗೆ ದಂಡೆಯನ್ನು ಕೊಡುತ್ತಿದ್ದಳು.  ಶಾಲಿನಿ “ನೀನು ಮುಡಿ” ಎನ್ನುತ್ತಿದ್ದಳು. ಅವಳಿಗೆ ನನ್ನ ಉದ್ದದ ಎರಡು ಜಡೆ ಕಂಡರೆ ಇಷ್ಟ. ಆದರೆ ನಾನು ಕ್ಲಾಸಿನ ಹೊರಗೆ ಬಾಗಿಲ ಬಳಿ ಕೈಯಲ್ಲಿ ಹೂವನ್ನು ಹಿಡಿದು ಬಲು ಆಸೆಯಿಂದ ಶಂಕಿ ಟೀಚರ್ ಗೆ ಕೊಡಲು ಕಾಯುತ್ತಿದ್ದೆ. ನಮ್ಮ ಶಾಲೆಗೆ ಒಂದು ದಿನಪತ್ರಿಕೆಯೂ ಬರುತ್ತಿತ್ತು. ಅದನ್ನು ದಿನಕೊಬ್ಬರಂತೆ ಓದಿ ಮುಖ್ಯ ವಿಷಯಗಳನ್ನು ಬೋರ್ಡಿನಲ್ಲಿ ಕ್ರಮಪ್ರಕಾರ ಬರೆಯಬೇಕಿತ್ತು. ನಾವೆಲ್ಲ ಆಕಾಶವಾಣಿಯ ವಾರ್ತಾವಾಚಕರಿಗಿಂತಲೂ ಹೆಚ್ಚಿನ ಚೆಂದದಲ್ಲಿ ನಮ್ಮದೇ  ಶೈಲಿಯಲ್ಲಿ ಓದುವುದು, ಕೆಲವೊಮ್ಮೆ ಹಿಂದಿನಿಂದ ಬಂದ ಟೀಚರ್ ಕೈಯಲ್ಲಿ ಪೆಟ್ಟು ತಿಂದು ನಮ್ಮ ಬೆಂಚ್ ಗೆ ಓಡುವುದೂ ಆಗಾಗ ಚಾಲ್ತಿಯಲ್ಲಿದ್ದ  ವಿಷಯ. ಆಗ ನಾಲ್ಕನೆಯ ಎ ತರಗತಿಗೆ ರಾಘವ ಮೇಷ್ಟ್ರು , ಅವರು ಆಗಾಗ ಮಧ್ಯಾಹ್ನ ಎರಡೂ ತರಗತಿ ಸೇರಿಸಿ ಪಾಠ ಮಾಡುತ್ತಿದ್ದರು. ಜೊತೆಗೆ ಹಾಡು ಹಾಡುವಂತೆ ಪ್ರತಿಯೊಬ್ಬರಿಗೂ ತಾಕೀತು. ನನಗೆ ಅಂಜಿಕೆ,ನಾಚಿಕೆ. ಆದರೆ ಅಜ್ಜಿ ಹೇಳಿದ್ದಾಳೆ ದಂಡನಾಯಕಿಯಾಗಬೇಕು. ಆಗ ಒಂದು ಹಾಡು ಕಂಠಪಾಠ. ನನ್ನ ಕೆಲವು ಗೆಳತಿಯರೂ ಒಂದೊಂದು ಹಾಡು ಹಾಡುತ್ತಿದ್ದರು. ಈ ಒಂದೊಂದು ಹಾಡು ಎಂದರೆ ನಮಗೆ ಆ ವರ್ಷ ಪೂರ್ತಿಯಾಗಿ ಅದನ್ನು ಉಪಯೋಗಿಸಿ ಮುಂದಿನ ತರಗತಿಯಲ್ಲೂ ಹಾಡಲು ಹೇಳಿದರೆ ಅದೇ ಪದ್ಯ ಅಷ್ಟೇ  ಚೆಂದದಲ್ಲಿ  ಹಾಡುತ್ತಿದ್ದೆವು. ನನ್ನದು ಧರ್ಮಸೆರೆ ಚಿತ್ರದ ” ಕಂದಾ ಓ ನನ್ನ ಕಂದ..” ಎಂಬ ಹಾಡು. ನನಗೆ ಆ ಹಾಡಿನ ಮೇಲೆ ಎಂತಹ ಅಭಿಮಾನವೆಂದರೆ ಅಷ್ಟು ಉತ್ತಮವಾದ ಹಾಡು ಬೇರೊಂದಿಲ್ಲ. ನಾನು ಎದ್ದ ತಕ್ಷಣ ಎಲ್ಲ ಗಂಡು,ಹೆಣ್ಣೂ ಮಕ್ಕಳೂ “ಕಂದಾ..” ಎಂಬ ಆಲಾಪ ಶುರು ಮಾಡುತ್ತಿದ್ದರು. ಆದರೆ ಇದು ನನ್ನ ಒಬ್ಬಳದೇ ಸಮಸ್ಯೆಯಲ್ಲ. ಎಲ್ಲರ ಒಳಗೂ ಒಂದೊಂದು ಹಾಡಿನ ಮುದ್ರಿಕೆ ಅಚ್ಚಾಗಿ ಬಿಟ್ಟಿತ್ತು.  ನನಗೆ ನನ್ನ ಈ  ಹಾಡಿನ ವೃತ್ತದಿಂದ ಮೇಲೆದ್ದು ಹೊಸತೊಂದು ಹಾಡು ಹಾಡಬೇಕು  ಎಂಬ ಯೋಚನೆ, ಹಠದಿಂದ  ಬೇರೆ ಹಾಡನ್ನೂ ಕಲಿತಿದ್ದೆ. ಅದನ್ನು ಹಾಡಿ ಭೇಷ್ ಎನಿಸಿಕೊಳ್ಳಬೇಕು. ಈ ಹುಡುಗರ ” ಕಂದಾಆಆಅ” ಎಂಬ ಲೇವಡಿಯಿಂದ ಬಚಾವಾಗಬೇಕು. ನನಗೆ ಸಿಕ‌್ಕಿತು ಹೊಸ ಹಾಡು. ಹಾಡಲೂ ತಯಾರಾದೆ. ಹೊಸ ಹಾಡು. ಹಾಡಿನ ಸರದಿ ಆರಂಭ ಆಗುತ್ತಿದ್ದಂತೆ ಮನಸ್ಸಿನೊಳಗೆ ವೇಗವಾಗಿ,ನಿಧಾನವಾಗಿ ಶ್ರುತಿಬದ್ದವಾಗಿ ಹಾಡಿ ಅನುವಾದೆ. ಹೊಸದರ  ಪುಳಕ. ನನ್ನ ಹೆಸರು ಬಂದಾಗ‌ ಎದ್ದು ಮನದೊಳಗೆ ಮತ್ತೆ ಹೊಸ ಹಾಡು ಉರು ಹೊಡೆಯುತ್ತ ಎದುರು ಹೋದೆ. ಏಕ ಚಿತ್ತದಲ್ಲಿ ನಿಂತು  ಶುರು ಮಾಡಿದರೆ  ಕಂಠದಿಂದ ಮೈಕೊಡವಿ ಎದ್ದು  ಹೊರಬಂದದ್ದು “ಕಂದಾ..ಓ ನನ್ನ..”  ಇಂತಹ ಒಂದೆರಡು ಪ್ರಯತ್ಮ ಮತ್ತೆ ಮಾಡಿ ಕೊನೆಗೆ ನನ್ನ  ಈ ಹಾಡಿನೊಂದಿಗೆ ಜೊತೆಯಾಗಿ ಇರುವ ಸಂಕಲ್ಪವನ್ನೇ ಗಟ್ಟಿ ಮಾಡಿದ್ದೆ. ಈಗಲೂ ನಮ್ಮ ಕ್ಲಾಸಿನ ಸಹಪಾಠಿ ಗಳು ಸಿಕ್ಕರೆ ಅವರು ಹಾಡುತ್ತಿದ್ದ ಹಾಡು ನೆನಪಾಗುತ್ತದೆ. ಅದು ಉಳಿದವರಿಗೂ ಕಂಠಪಾಠ. ಬೆಲ್ಲದ ಸವಿ. ನಮ್ಮ ಶಾಲೆಯಲ್ಲಿ ಆಗ ಫ್ಯಾನ್ ಗಳು ಇರಲಿಲ್ಲ. ಹಾಗಾಗಿ  ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ತರಗತಿ ಸೆಖೆ. ಅದು ನಮಗೇನೂ ಆಗ ಭಾದೆ ಎಣಿಸುತ್ತಿರಲಿಲ್ಲ.  ಮಾಸ್ಟರ್ರು ಮಾತ್ರ ಕೆಲವು ಸಲ ಶಾಲೆಯ ಹೊರಗೆ ಹಿಂಬದಿಯ  ದೇಗುಲದ ತೋಪಿನಲ್ಲಿ ಪಾಠ ಮಾಡುತ್ತಿದ್ದರು.ಅಲ್ಲಿ ಹಳೆಯ ಹುಣಿಸೆ, ಮಾವು, ದೇವದಾರು ಮರಗಳಿದ್ದವು. ನಮಗದು ಬಹಳ ಮೋಜಿನ ತರಗತಿ. “ಸರ್, ಸಾರ್..ಇವತ್ತು ಕ್ಲಾಸ್ ಹೊರಗೆ ಮಾಡುವ. ಸಾರ್..ಅಲ್ಲಿ ಪಾಠ ಮಾಡಿ”  ನಮ್ಮದು ಗೋಗರೆತ. ಅವರು ” ಆಯಿತು” ಎಂದದ್ದೇ ತಡ ಹುಡುಗರು ಅವರು ಕುಳಿತುಕೊಳ್ಳುವ ಕುರ್ಚಿ ಎತ್ತಿ ಹಿಡಿದು ಓಡುತ್ತಿದ್ದರು. ನಾವು ಬೇಗ ಓಡಿ ಮೊದಲು ಹುಣಿಸೆ ಹಣ್ಣು ಬಿದ್ದಿದೆಯಾ ಎಂದು ಹುಡುಕಾಡಿ ಹೆಕ್ಕುತ್ತಿದ್ದೆವು. ಸಿಕ್ಕಿದರೆ ಸ್ವಲ್ಪ ಪಾಟಿ ಚೀಲದಲ್ಲಿ ಅಡಗಿಸಿ, ನಂತರ ಸಿಗದವರಿಗೆ ತೋರಿಸಿ  ಹಂಚಿ ತಿನ್ನುವ ಗಮ್ಮತ್ತು. ನಮ್ಮ‌ ಮೇಸ್ಟರಿಗೆ ಮಾತ್ರ ಕುರ್ಚಿ. ನಾವು ಅಲ್ಲಿ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅರಿವಿನ ನಾವೆಯ ಮೇಲೆ ಸುಖ ಪಯಣ… “Every human being lives in a perpetual state of insuffiency. No matter who you are or what you have achieved, you still want a little more than what you have right now…“ -Sadhguru (Inner Engineering) ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ ಮೂಲೆಹಿಡಿದುಬಿಡುತ್ತಿದ್ದೆವು ಅನಿಸುತ್ತದೆ. ನನಗಂತೂ ಬಲೇ ಸೋಜಿಗವೆನಿಸಿಬಿಡುತ್ತದೆ ಒಮ್ಮೊಮ್ಮೆ. ಅರೆ ನನಗ್ಯಾಕೆ ಸುಮ್ಮನಿರಲಾಗುವುದಿಲ್ಲ ನನ್ನ ಪಾಡಿಗೆ. ಎಲ್ಲರೂ ಮನೆ, ಗಂಡ , ಮಕ್ಕಳು, ನೌಕರಿ, ಸಂಬಳ, ಚಂದದ ಬಟ್ಟೆ, ಮದುವೆ ದಿಬ್ಬಣ…. ಅಂತೆಲ್ಲ ಖುಷಿ ಎನ್ನುವುದು ಕಾಲು ಮುರಿದುಕೊಂಡು ಅವರ ಕಾಲ ಬುಡದಲ್ಲೇ ಬಿದ್ದಿದೆ ಎನ್ನುವಷ್ಟು ನೆಮ್ಮದಿಯಾಗಿರುವಾಗ ನಾವಾದರೂ ಹೀಗೆಲ್ಲ ಮನಸಿನ ಹುಚ್ಚಿಗೆ ಬಲಿಯಾಗಿ ಕಣ್ತುಂಬ ನಿದ್ದೆ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುತ್ತೇವಲ್ಲ ಏಕೆ… ಒಂದು ಕವಿತೆಯೋ, ಒಂದು ಕತೆಯೋ ಅಥವಾ ಒಂದು ಸಣ್ಣ ಬರಹದ ತುಣುಕೋ ಈ ಬೆರಳುಗಳ ಕುಟ್ಟುವಿಕೆಯಿಂದ ಹುಟ್ಟಿಬಿಟ್ಟರೆ ಸಿಗುವ ಸಂತೋಷ ಇದೆಯಲ್ಲ ಇನ್ಯಾವುದರಲ್ಲೂ ಅದು ಸಿಗಲಾರದು ಎನಿಸಿಬಿಡುತ್ತದೆ. “ಈ ಓದು ಬರಹ ಅಂತೆಲ್ಲ ಏನೇನೋ ಮಾಡೋದು ಬಿಟ್ಟು ಮನೆ, ಮಕ್ಕಳು, ಸಂಸಾರ ಅಂತ ಜವಾಬ್ದಾರಿಯಿಂದ ಬದುಕೋದನ್ನ ಕಲಿ…” ಎನ್ನುವ ಈ ಮಾತನ್ನ ನನ್ನಮ್ಮ ಅದೆಷ್ಟು ಬಾರಿ ಹೇಳಿದ್ದಾರೋ… “ಅಲ್ಲ ನಿಮ್ಗೆ ಟೈಮ್ ಎಲ್ಲಿಂದ ಸಿಗುತ್ತೆ ಇದನ್ನೆಲ್ಲ ಮಾಡೋಕೆ… ಮೋಸ್ಟ್ಲಿ ನೀವು ಮನೇಲಿ ಬರಿ ಬರೆಯೋದೆ ಕೆಲ್ಸ ಮಾಡ್ತೀರೇನೋ ಅಲ್ವ… ನಮ್ಗಂತು ಹಾಗಲ್ಲಪ್ಪಾ… ಮನೆಗ್ಹೋದ್ರೆ ಎಪ್ಪತ್ತಾರು ಕೆಲ್ಸ… ಇಂಥವೆಲ್ಲ ಮಾಡೋಕೆ ಟೈಮೇ ಸಿಗಲ್ಲ ಗೊತ್ತಾ…” ಅಂತೆಲ್ಲ ಮಾತಾಡುವ ಗೆಳೆಯರು, ಸಹೋದ್ಯೋಗಿಗಳು… ಇವೆಲ್ಲ ಸುಳ್ಳೂ ಅಲ್ಲ. ಹಾಗಂತ ಪೂರ್ಣ ಸತ್ಯವೂ ಅಲ್ಲ. ಎಲ್ಲರ ತೃಪ್ತಿಗೂ ಕಾರಣ ಒಂದೇ ಆಗಿರಲು ಸಾಧ್ಯವಿಲ್ಲ. ಹಕ್ಕಿಗೆ ಹಾರಾಟದಲ್ಲಿ ಖುಷಿ, ಮೀನಿಗೆ ಈಜಾಟದಲ್ಲಿ ಖುಷಿ. ಹಾರುವುದು ಹಕ್ಕಿಗೆ ಸಹಜ ಕ್ರಿಯೆ, ಈಜುವುದು ಮೀನಿಗೆ ಸಹಜ ಕ್ರಿಯೆ. ಹಾಗಯೇ ತನ್ನ ಮೆದುಳು ಮತ್ತು ಬುದ್ಧಿಶಕ್ತಿಯಿಂದ ಭಿನ್ನವಾಗಿ ನಿಲ್ಲುವ ಮನುಷ್ಯನಿಗೆ ಹಲವಾರು ಆಸಕ್ತಿ ಮತ್ತು ಅಭಿರುಚಿಗಳು. ಅಂತೆಯೇ ಅವನ ತೃಪ್ತಿಯ ಕಾರಣಗಳೂ ಸಹ. ನನಗೂ ಒಂದು ಬರೆಹ ಹುಟ್ಟಿದ ಕ್ಷಣ ಸಿಗುವ ಆನಂದ ಮತ್ಯಾವುದರಲ್ಲೂ ಸಿಗುವುದಿಲ್ಲ. ಇನ್ನು ಸಮಯದ ವಿಚಾರಕ್ಕೆ ಬಂದರೆ ಒಂದು ದಿನದಲ್ಲಿ ನಿರಂತರ ಕೆಲವು ಘಂಟೆಗಳು ಒಟ್ಟಾಗಿ ಸಿಗುವುದಿಲ್ಲ. ಆದರೆ ಸಿಗುವ ಸಣ್ಣ ಸಣ್ಣ ಸಮಯವನ್ನು ಪೋಣಿಸಿಟ್ಟುಕೊಂಡು ಪ್ರೀತಿಯಿಂದ ಬರಹ ಕಟ್ಟುವುದೂ ಒಂದು ಸವಾಲು. ಆದರೆ ಅದೊಂದು ಸುಖವಾದ ಸವಾಲು. ಪ್ರತಿ ಬಾರಿಯೂ ಆ ಸವಾಲನ್ನು ಗೆದ್ದು ಬರೆಯುವಾಗ ಸಿಗುವ ಖುಷಿ ಅನನ್ಯ. ಹಾಗಾಗಿ ಸಮಯ ಸಿಗುವುದಿಲ್ಲ, ಸಮಯವಿಲ್ಲ ನನಗೆ ಎನ್ನುವುದು ಸಮಸ್ಯೆಯಾಗಿ ಇದುವರೆಗೂ ಕಾಡಿಯೇ ಇಲ್ಲ. ಹಾಡು ಹಸೆ ಸಂಗೀತ ನೃತ್ಯದಂತೆ ಬರೆಹವೂ ಒಂದು ಆಸಕ್ತಿಕರ ಕ್ಷೇತ್ರ. ಮತ್ತದು ಬಹಳವೇ ಪರಿಣಾಮಕಾರಿ ಕ್ಷೇತ್ರವೂ ಹೌದು. ಬರೆಹ ಎನ್ನುವುದು ನಮ್ಮೊಳಗಿನ ಗ್ರಹಿಕೆಯನ್ನು ಹೊರ ಬರುವಂತೆ ಮಾಡುತ್ತದೆ. ಅದು ಮತ್ತೊಬ್ಬರ ಮನದ ಭಾವಕ್ಕೆ ಸಂತೈಕೆಯಾಗಿಯೂ, ಅವರ ಮನದ ಮಾತಿಗೆ ದನಿಯಾಗಿಯೂ ಸಮಾಧಾನ ಕೊಡುತ್ತದೆ. ಓದು ನಮ್ಮನ್ನು ಪ್ರಬುದ್ಧ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ, ನಮ್ಮ ಅಹಂಕಾರವನ್ನು ಕಳೆಯುತ್ತದೆ. ಭಾವಗಳ ಹೊರಹೊಮ್ಮುವಿಕೆಗೆ ಮಾಧ್ಯಮವಾಗುವ ಬರೆಹ ನಮ್ಮ ದುಗುಡದ ಮೋಡಗಳನ್ನು ಕರಗಿಸಿ ತಿಳಿ ನೀಲ ಆಗಸವನ್ನಾಗಿ ಮಾರ್ಪಾಟು ಮಾಡುತ್ತದೆ. ಬರಹ ನನ್ನ ಜೀವನದ ಭಾಗವಾದ ಮೇಲೆ, ನನ್ನ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆಯನ್ನು ಗಮನಿಸುವಾಗ, ಹಾದು ಬರಹ ನಮ್ಮನ್ನು ಗಟ್ಟಿಯಾಗಿಸುತ್ತದೆ. ಎಂತಹ ಸಮಸ್ಯೆ ಬಂದರೂ ಧೈರ್ಯ ಮತ್ತು ತಿಳುವಳಿಕೆಯಿಂದ ಎದುರಿಸುವ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ.   ಬರೀ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಂಡ ಅದೆಷ್ಟೋ ಜನ ಇದ್ದಾರೆ. ಆದರೆ ಬರೆಹಗಾರನಿಗೆ ಮಾತ್ರ ಎರಡೆರಡು ಉಪಯೋಗ. ಒಂದು ಓದಿದ್ದು, ಮತ್ತೊಂದು ಬರೆದದ್ದು. ಯಾವ ಕಲೆಯೇ ಆಗಿರಲಿ ತನಗೆ ಬೇಕಾದವರಿಂದ ತನ್ನ ಕ್ಷೇತ್ರಕ್ಕೆ ಬೇಕಾದ ಸೇವೆಯನ್ನು ಪಡೆಯುತ್ತದೆ. ಬರೆಹ ಕಲಿತವರೆಲ್ಲ, ಬರೆಯುವ ಶಕ್ತಿ, ಸಾಮರ್ಥ್ಯವಿದ್ದವರೆಲ್ಲ ಬರೆಯುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಸಾರಿ ಬರೆಹವೇ ಬರೆಹಗಾರನ ಕೈಲಿರುವುದಿಲ್ಲ. ಆದರೆ ಅದರ ಮೇಲೆ ತನ್ನ ಹಕ್ಕು ಚಲಾಯಿಸಲು ಹೊರಡುವುದು ಯಾರಿಗೇ ಇರಲಿ ಹರಿವಿಗೆ ವಿರುದ್ಧವಾಗಿ ಈಜುವ ಹಾಗೆ ದುಸ್ಸಾಹಸವೇ ಸರಿ. ಶಿಕ್ಷಕನನ್ನು ಚಿರಂತನ ವಿದ್ಯಾರ್ಥಿ ಎನ್ನುವ ಹಾಗೆ ಬರೆಹಗಾರ ಚಿರಂತನ ಓದುಗನಾಗಿರಬೇಕಾಗಿರುತ್ತದೆ. ಬರೆಹಗಾರ ಇತಿಹಾಸಕಾರನೂ ಆಗುತ್ತಾನೆ, ಕಾಲಜ್ಞಾನಿಯೂ ಆಗುತ್ತಾನೆ. ಅದಕ್ಕೇ ಅವನಿಗೆ ಎಷ್ಟೊಂದು ಮಾನ್ಯತೆ! ಮಾನ್ಯತೆಗಾಗಿ ಬರೆಯ ಹೊರಟರೆ ಬಹಳ ಬೇಗ ಎದುಸಿರು ಹೆಚ್ಚಿ, ಸುಸ್ತಾಗಿಬಿಡುತ್ತದೇನೋ. ಆದರೆ ಎಷ್ಟೇ ಅದು ಬೇಡ ಎನ್ನುವ ಪ್ರಜ್ಞಾವಂತಿಕೆ ಇದ್ದರೂ ಅದನ್ನು ಮೀರಿ ನಿರ್ಲಿಪ್ತತೆಯನ್ನು ಸಾಧಿಸಿಕೊಳ್ಳುವುದು ಬಹಳ ಕಷ್ಟ. ಅದು ನಮ್ಮನ್ನು ನಾವು ಮೀರುವುದು. ಆದರೆ ಅದು ಯಾರೇ ಆಗಿರಲಿ, ನಮ್ಮಲ್ಲಿ ಎಷ್ಟೇ ಇರಲಿ, ಏನೇ ಇರಲಿ, ಇದ್ದುದರಲ್ಲಿ ತೃಪ್ತಿ ಪಡದಿರುವ ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮಲ್ಲಿ ತಲ್ಲಣದ ಸುಳಿ ಸೃಷ್ಟಿಸಿ ತೃಪ್ತಿಯನ್ನು ಕಿತ್ತುಕೊಳ್ಳುತ್ತದೆ. ಸಾಧನೆಗಳು, ಪ್ರಶಸ್ತಿಗಳು, ಕೀರೀಟ ಏರಿ ನಿಂತ ತುರಾಯಿಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅತೃಪ್ತಿಯೂ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಅದರೊಂದಿಗೆ ಸಹಜವಾಗಿ ಬರುವ ಒತ್ತಡಕ್ಕೂ ಈಡಾಗಲೇ ಬೇಕು ಸಹ. ಇನ್ನಿದು ಸಾಕು ಎಂದು ಬುದ್ದಿ ಹೇಳಿದರೂ ನಮ್ಮ ಅತೃಪ್ತಿ ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ಆದರೆ ಹಕ್ಕಿಗೆ ಹಾರುವಿಕೆ, ಮೀನಿಗೆ ಈಜುವಿಕೆ ಸಹಜವಾದಷ್ಟೇ ಬರಹಗಾರನಿಗೂ ಬರಹ ಸಹಜವಾಗಬೇಕು. ಹಾರುತ್ತದೆ ಎಂದು ಹಕ್ಕಿಗಾಗಲಿ, ಈಜುತ್ತದೆ ಎಂದು ಮೀನಿಗಾಗಲೀ ಯಾರಾದರೂ ಪ್ರಶಸ್ತಿ ಕೊಡುತ್ತಾರಾ?! ಹಾಗೇ ಬರೆಹಗಾರನಿಗೆ ಬರೆಹ ಸಹಜವಾಗಬೇಕು. ಮನುಷ್ಯ ತನ್ನ ಬುದ್ಧಿ ಮತ್ತು ದೇಹವನ್ನು ಅದರ ಸಹಜ ಶಕ್ತಿಯನ್ನು ಮೀರಿ ಪಳಗಿಸಿ ಬಳಸಬಲ್ಲ. ಅದಕ್ಕೆ ಒಂದು ಅಭಿನಂದನೆ ಸಲ್ಲಲೇ ಬೇಕು ಅವನಿಗೆ. ಆದರೆ ಅದು ಅವನ ಬಲಹೀನತೆಯಾಗಬಾರದು. ಅತೃಪ್ತಿಯನ್ನು ಒಂದು ಹಂತದಲ್ಲಿಟ್ಟು ನಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವುದರಲ್ಲಿ ನಿಜವಾದ ಬುದ್ಧಿವಂತಿಕೆ ಇದೆ. ಅದಕ್ಕೆ ದಾಸರಾಗುವುದರಲ್ಲಿ ಅಲ್ಲ. ಅದೂ ಒಂದರ್ಥದಲ್ಲಿ ಸಾಧನೆಯೇ. “ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?” -ಜಿ.ಎಸ್.ಶಿವರುದ್ರಪ್ಪ ಎನ್ನುವ ಜಿಎಸ್ಸೆಸ್ ರ “ಎದೆ ತುಂಬಿ ಹಾಡಿದೆನು” ಕವಿತೆಯ ಈ ಸಾಲುಗಳು ಯಾವಾಗಲೂ ನೆನೆದಾಗಲೊಮ್ಮೆ ಕಣ್ಮುಂದೆ ತೇಲಿ ಬರುತ್ತವೆ. ಅರಿವಿನ ನಾವೆಗೆ ಹತ್ತಿಸಿ ಸುಖವಾದ ಪ್ರಯಾಣಕ್ಕೆ ಹೊರಡಿಸುತ್ತವೆ. ********************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

ಗಜಲ್ Read Post »

ಕಾವ್ಯಯಾನ

ನನ್ನವನು

ಕವಿತೆ ನನ್ನವನು ಅನಿಲ ಕಾಮತ ಮದಿರೆಯ ಅಮಲಿನಲ್ಲಿದ್ದಾಗಕೈಹಿಡಿದು ಕುಳುಣಿಸಿದ್ದೇನೆಹಸಿವಿನಿಂದ ಒಡಲುಉರಿ ಎದ್ದರುಒಡಲು ತುಂಬಿದವರಂತೆನಟಿಸಿರುವೆ ಮಾನನಿಯರ ಸಂಘದಲ್ಲಿಮುಳುಗಿದರುಮೌನ ಮುರಿಯದಿರುವೆಮೈಯ ಮೇಲಿನಬರೆ ಸರಿಕರಿಗೆಸಣ್ಣ ಗುಮಾನಿಯೂಬರೆದ ಹಾಗೆಸೀರೆಯಿಂದಸುತ್ತಿಕೊಂಡಿರುವೆರಂಡೆ ಮುಂಡೆಯಬೈಗಳಿಗೆ ದಿನಂಪ್ರತಿಆಹಾರವಾಗಿರುವೆನಿನ್ನ ಸಿಟ್ಟಿಗೆ ಅದೆಷ್ಟು ಸಲನಾನು ಆಹುತಿಯಾಗಿರುವೆಏಕೆಂದರೆ ನೀನುನನ್ನವನು…………. ******************************************************

ನನ್ನವನು Read Post »

ಪುಸ್ತಕ ಸಂಗಾತಿ

ನಿರುತ್ತರ

ಪುಸ್ತಕ ಸಂಗಾತಿ ನಿರುತ್ತರ ನಿರುತ್ತರ-ಕವನ ಸಂಕಲನಪ್ರಕಾಶಕರು-ದೀಪ್ತಿ ಬುಕ್ ಹೌಸ್ ಮೈಸೂರುಪುಟಗಳು-೧೧೨ಬೆಲೆ-೧೦೦ರೂ ಅದೇ ಹಳೆಯ ಒಲೆಗೆ ಹೊಸ ಉರಿಯ ಹಾಕಿ ಪ್ರತಿದಿನ ನಾವೀನ್ಯದ ಬೆಳಕು ತೆರೆದಿದೆ ಬೆಳಕಿನ ಬದುಕು. … ಕವಿತೆ ಹುಟ್ಟುವುದೇ ಒತ್ತಡದಿಂದ ಎನ್ನುವುದು ನನ್ನ ನಂಬಿಕೆ. ಎಲ್ಲಾ ಸಾಂಗವಾಗಿ ಸಾಗುತ್ತಿದ್ದಾಗ ಸಾಲೊಂದೂ ಹೊಳೆಯದೆ ಕವಿತೆಯೆಂಬ ಈ ಚಂಚಲೆಯನ್ಮು ಹುಡುಕಿ ಗಾಬರಿಯಾಗುವುದು ನನಗೆ ಆಗಾಗ ಘಟಿಸುವ ಸಂಗತಿ. ಈ ಒತ್ತಡದಿಂದ ಹುಟ್ಟಿದ್ದನ್ನು ಪ್ರಮಾಣಬದ್ದವಾಗಿ ಬೆಳೆಸಿ ಅಕ್ಷರಗಳಲ್ಲಿ ಬೆಳೆಯಗೊಟ್ಟರೆ ಕವಿಯಾಗಿ ಗೆದ್ದಂತೆ. ಒಲಿದಂತೆ ಹಾಡುವೆ ಎನ್ನುವ ನನ್ನ ಮೊಂಡುವಾದಕ್ಕೆ ಹಿರಿಯರೊಬ್ಬರು ಏನನ್ನೇ ಮಾಡಿದರೂ ವೃತ್ತಿಪರಳಂತೆ ಮಾಡು.ಪ್ರೋಫೆಶನಲಿಸಮ್ ರೂಢಿಸಿಕೊ ಎನ್ನುವಾಗೆಲ್ಲ ಕವಿತೆಯಂತಹ ಮೆದು ಮೃದುಭಾವಕ್ಕೆ ವೃತ್ತಿಯೆಂಬ ಒರಟುತನವನ್ನು ಎಂದಾದರೂ ಹೊಂದಿಸಬಹುದೇ ಎನಿಸಿ ಅವರೆದುರುಗೆ ಹುಹು ಅಂತಂದು ಮತ್ತದೆ ಒಲಿಯುವ ಹಾಡುವ ಅಕ್ಷರ ಗಳಿಗಾಗಿ ಕಾಯುತ್ತಿದ್ದೆ. … ಈಗ ಐದು ವರ್ಷಗಳ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಪರಿಚಿತರಾದ ಪುಟ್ಟ ಸುಂದರಿ ಸಂಗೀತಾ ರವಿರಾಜ್ ತನ್ನ  ಕವನ ಸಂಕಲನ ನಿರುತ್ತರವನ್ನು ನನಗೆ ಕಳಿಸಿದ್ದಾರೆ. ಇಲ್ಲಿನ ಕವಿತೆಗಳ ಕುರಿತು ಬರೆಯಬೇಕೆಂದರೆ ನನಗೆ ಆ ವೃತ್ತಿಪರತೆಯ ನೆನಪಾಯಿತು. ಇಲ್ಲಿನ ಎಲ್ಲ ಕವಿತೆಗಳೂ ಸಾಧು,ಮೃದು. ಎಲ್ಲೂ ಘೋಷವಿಲ್ಲ.ರೋಷವಿಲ್ಲ ಕ್ರಾಂತಿಯಿಲ್ಲ,ಭೀತಿಯೂ ಈ ಕವಿತೆಗಳಿಗಿಲ್ಲ. ಇದೇನಿದ್ದರೂ ಪ್ರಳಯ ಸ್ವರೂಪಿ‌ಮಳೆ ಬಂದ ಮೇಲೆ  ಮೆಟ್ಟಿಲೇರುವ ಪುಟ್ಟ ಗುಬ್ಬಿಯಂತವು. ಇಲ್ಲಿನ ಮೊದಲ ಪದ್ಯ ನೇಪಥ್ಯ ಬಹುಶಃ ತರಂಗದಲ್ಲಿ ಓದಿದ್ದೆ ಅನಿಸಿತು. ಕತ್ತರಿಸಿ ಉತ್ತರಿಸಿ ಅರೆದು ತುರಿದು ಬಾಡಿಸಿ ಬೇಯಿಸಿ ಕುದಿಸಿ ಉಣ್ಣುವ ಅಡುಗೆ ಬರೀ ಅಷ್ಟರಿಂದಲೇ ರುಚಿಯಾಗ್ತದೆಯಾ. ಇಲ್ಲ. ಅದಕ್ಕೆ ಚಿಟಿಕೆ ಇಂಗು ಸಾಸಿವೆ ಕರಿಬೇವಿನ‌ ಒಗ್ಗರಣೆ ಬೇಕು.ಹೀಗೆ ಥರೆವಾರಿ ವಿಧಾನಗಳಲ್ಲಿ ತಯಾರಾದ ಅಡುಗೆ ಮುಗಿಯುವುದು ಕೊನೆಯ ಒಗ್ಗರಣೆಯಿಂದ. ಆದರೆ  ಒಗ್ಗರಣೆಯ ಆ ಕರಿಬೇವು ಮೆಣಸು ಸಾಸಿವೆ ಗಳು ಊಟದಲ್ಲಿ ಮೈಲಿಗೆ. ಅವನ್ನು ಎತ್ತಿಟ್ಟೇ ಉಣ್ಣುವುದು. ‘ತುರ್ತಿನ ದಾರಿಯಲ್ಲಿ ಹೊರಟವರಿಗೆ ಗಮ್ಯ ತಿಳಿಯಲೇ ಇಲ್ಲ. ‘ ಈ ಸಾಲುಗಳು ಅದನ್ನು ಧ್ವನಿಸುತ್ತವೆ. ಆದರೆ ಅದಕ್ಕೆ ಒಗ್ಗರಣೆ ಬೇಸರಿಸಿಕೊಂಡಿದೆಯೇ. ಇಲ್ಲ. ‘ತನ್ನ ಬೆಲೆ ನೆಲೆಯ ತಾನೇ ಭದ್ರಪಡಿಸಿಕೊಂಡಿದೆ ನಮ್ಮ ಕುಬ್ಜರಾಗಿಸಿದೆ.’ ನನ್ನ ದೇವರ ಮನೆಯಲ್ಲೊಂದು ಡುಮ್ಮಣ್ಣ ಜೇಡ ಪ್ರತಿ ದಿನವೂ ಫೋಟೋ ಹಿಂದೆ ಅವುಚಿರುತ್ತದೆ. ಅದೆಷ್ಟೋ ದೊಡ್ಡದಾದ ಬಾಗಿಲು ಹಿಡಿಕೆ ಫೋಟೋ ಎಲ್ಲವನ್ನೂ ತನ್ನ ಎಳೆಯಿಂದ ಬಂಧಿಸಿ ಎಲ್ಲವನ್ನೂ ಒಂದಾಗಿಸಿ ತನ್ನ ಹಸಿವಿಗೆ ಸಿಗಬಹುದಾದನ್ನು ಕಾಯುತ್ತದೆ.ಆದರೆ ನಾನು ಪ್ರತಿದಿನವೂ ಮೆಲ್ಲಗೆ ಅದನ್ನು ಪೊರಕೆಯೊಳಗೆ ಸೇರಿಸಿ ಆಚೆಕಡೆ ಬಿಟ್ಟು ಬರ್ತಿನಿ.ಮಾರನೆ ಬೆಳಗು ಅದಲ್ಲೇ ಪ್ರತ್ಯಕ್ಷ. ಸಂಗೀತ ಜೇಡನ ಸ್ವಗತ ಆಲಿಸಿದ್ದಾರೆ. ‘ನಿಮ್ಮ ಗೋಡೆಯ ತುಂಬಾ ನನ್ನ ಬಲೆಯ ಹಾಕಿ ಗಲೀಜು‌ಮಾಡುವ  ಉಮೇದಿಲ್ಲ ನನಗೆ’ ಅನ್ನುತ್ತಿದೆ ಅವರ ಜೇಡ. ‘ಮೂಲೆಮೂಲೆಯಲ್ಲೂ ನನ್ನ ಕರಾಮತ್ತು ಬೇಕಿದೆ ನನಗೆ ಈ ದಿನದ ತುತ್ತು’ ಆದರೆ ನಾವು ಹಾಗೇ ಬಿಡ್ತೀವಾ.ಗುಡಿಸಿ ಸೆಲಿಬೆ ತೆಗೆದು ಅದರ ಅರಮನೆಯನ್ನು  ನಿಮಿಷ ಮಾತ್ರದಲ್ಲಿ ಇಲ್ಲವಾಗಿಸುತ್ತೇವೆ.ಅದು ನಮ್ಮ ಅರ್ಜು. ಅವರ ಜೇಡ ಕೊನೆಯಲ್ಲಿ ಹೇಳುತ್ತಿದೆ. “ಬದುಕು ಸುಮ್ಮನೆ ಅಲ್ಲ ನೇಯಬೇಕು ತದನಂತರ ನೋಯಬೇಕು” ಇದು ಬಹುಶಃ ಆ ಜೇಡದ ಮನೆಯನ್ನು ಗುಡಿಸಿ ತೆಗೆದ ಹೆಣ್ಣಿನ ಮಾತೂ ಅಲ್ಲವೇ.? ಇದು ಬೆಸ್ಟು ಪದ್ಯ ಈ ಸಂಕಲನದಲ್ಲಿ. ನಾನು ಬದುಕಿಸುತ್ತೇನೆ  ಎನ್ನುತ್ತಾ ದಿನವೂ ಆಚೆ ಬಿಡುವ ಆ ಜೇಡಕ್ಕೆ ನಾನು ಉಪಕರಿಸುತ್ತಿದ್ದೇನೆಯೇ.? ಯಾಕೋ ನನ್ನ ಬಗ್ಗೆ ನನಗೇ ಅಸಮಧಾನ ಎನಿಸುತ್ತಿದೆ. ‘ಬಡವಿಯ ಸ್ವಗತ’ದ ಆರಂಭ ಬಹಳ ಸಾಧಾರಣ ಅನಿಸಿ ಇದು ಕವಿತೆಯಾಗಬಾರದಿತ್ತು ಎಂದುಕೊಳ್ಳುವಾಗಲೇ ಕೊನೆಯಲ್ಲಿ ಛಕ್ಕನೆ ಕಣ್ಣು ತುಂಬುವಂತಹ ಸಾಲುಗಳನ್ನಿಟ್ಟು ಗೆಲ್ಲುತ್ತಾರೆ ಕವಯಿತ್ರಿ. ಮಗು ಬಹಳ ಹೊತ್ತಿಂದ ಮಲಗಿದೆ.ಕೂಲಿಯಿಂದ ಓಡೋಡಿ ಬಂದ ಅಮ್ಮ ಅಯ್ಯೋ ಹಸಿವಾಯ್ತೇನೋ ಅಂತ ಎಬ್ಬಿಸ ಹೊರಟವಳು ಕ್ಷಣ ಕಾಲ ತಡೆಯುತ್ತಾಳೆ. “ಹಾಲಿಲ್ಲದ ಮನೆಯಲ್ಲಿ ನಿನ್ನನೇಳಿಸಿ ಏನು ಮಾಡಲಿ ಕಂದಾ ಮತ್ತೆ ಮಲಗು ಮಗುವೇ ಜೋ ಜೋಜೋ ಜೋ’ ಸಂಗೀತ ನಿತ್ಯವನ್ನೂ, ದಿನಚರಿಯನ್ನು ಕವಿತೆಯಾಗಿಸಿದ್ದಾರೆ.ಇಲ್ಲಿನ ಹೆಚ್ಚು ಕವಿತೆಗಳು ಮಳೆಯನ್ನೇ ಹಾಡಿವೆ.ಮಗುವನ್ನು ತೂಗಿವೆ. ಮನೆ ಮಲಗಿದ್ದಾಗ ತಾನೆದ್ದು ಒಲೆಗೆ ಬೆಂಕಿ ಮಾಡುತ್ತಾ ಮೆಲ್ಲಗೆ ಹೊಗೆಯಾಡಿ ಉರಿದಿವೆ. ಮುಟ್ಟಿದರೆ ಮುನಿ ಯನ್ನು ಮುಟ್ಟಿ ತಾನೂ ಹೀಗೇ ಅಲ್ಲವೇ ಅಂದುಕೊಂಡು ಸುಮ್ಮನೆ ಒಂದು ಘಳಿಗೆ ಮೌನವಾಗಿವೆ. ಯಾರ ಉಸಾಬರಿ ಇಲ್ಲದೆ ನೆಲದಲ್ಲಿ ಮಲಗಿರುವ ಈ ಮುದ್ದು ಮುಳ್ಳುಗಿಡ ಇವರಕ್ಕರೆಗೆ ಬಿದ್ದು ‘ಒಂದು ಕ್ಷಣ ಹಿಂತಿರುಗಿ ನೋಡುವ ಚಿತ್ತ ಮುಟ್ಟದೆ ಮುಂದೆ ಹೋಗಲು ಬಿಡದ ಸಂತ’ ಆಗಿದೆ. ಪತ್ತೆ ಇಲ್ಲದೇ ಇವರೊಟ್ಟಿಗೆ ಠು ಬಿಟ್ಟ ಕವಿತೆ ಮತ್ತೆ ವೈಯಾರವಾಡಿಕೊಂಡು ಇವರ ಬಳಿ ಬಂದಿದೆಯಂತೆ. ‘ಅಗಣಿತ ಪ್ರೀತಿ ತಾರೆ ಈ ಕವಿತೆ’ ಎನ್ನುವ ಸಂಗೀತ ಕೊರೊನಾ ಕಾಲದ ದುರ್ಭರ ಗಳನ್ನು ಕವಿತೆಯಾಗಿಸಿ ನೊಂದಿದ್ದಾರೆ. ಸಮಕಾಲೀನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರ ಮುನ್ನುಡಿಯಿರುವ ಈ ಸಂಕಲವನ್ನು ದೀಪ್ತಿ ಬುಕ್ ಹೌಸ್ ಮೈಸೂರು ಹೊರತಂದಿದೆ. ಒಟ್ಟು ಐವತ್ತು ಕವಿತೆಗಳು, ನೂರಹನ್ನೆರಡು ಪುಟಗಳಿರುವ ಈ ಸಂಕಲನದ ಮುಖಬೆಲೆ ನೂರು ರೂಪಾಯಿ. ತನ್ನ ವ್ಯಾಪ್ತಿಯಲ್ಲಿ ದಕ್ಕಿದ್ದನ್ನೂ ಸಿಕ್ಕಿದಷ್ಟನ್ನು ಅಕ್ಷರವಾಗಿಸಿ ಅಭಿವ್ಯಕ್ತಿಸಿ ನಿರಾಳವಾಗಿದ್ದಾರೆ ಸಂಗೀತ. ಮುಗ್ಧ ಭಾವದ ಈ ಪದ್ಯಗಳು ಓದುಗರ ಮನಸ್ಸನ್ನೂ ಮೃದುವಾಗಿಸುವುದರಲ್ಲಿ ಸಂದೇಹವಿಲ್ಲ. ***************************************** ನಂದಿನಿ ಹೆದ್ದುರ್ಗ

ನಿರುತ್ತರ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ ಸಂವೇದನೆಯ ಸ್ಪರ್ಶವಿರದೇಅಪ್ಪುಗೆಯ ಬಿಸುಪು ನೆನಪಾಗಿ ಕಾಡುತಿದೆ ತೊರೆದು ಹೋಗದಿರು ನನ್ನ ನನ್ನ ಮರೆತು ಬದುಕುವುದು ಬದುಕೇ ಅಲ್ಲವೆಂದು ಹಳಹಳಿಸಿದ್ದೆಜೀವ ಸಹಿಸಲಾಗದ ನೋವ ಸಹಿಸುತಿದೆ ತೊರೆದು ಹೋಗದಿರು ನನ್ನ ಬುವಿಯೊಂದು ಗೋಲ ಮರಳಲೇಬೇಕು ‘ಹೇಮ’ ಳೆಡೆಗೆ ಕೊನೆಗೊಮ್ಮೆಹೊಸಬದುಕು ನಮಗಾಗಿ ಕಾಯುತಿದೆ ತೊರೆದು ಹೋಗದಿರು ನನ್ನ ******************************

ಗಜಲ್ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ನಿರ್ಮಲಾ‌ ಶೆಟ್ಟರ್ ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ ಪರಿಚಯ: ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕಾವ್ಯಸಂಕಲನ ಬಿಡುಗಡೆಗೊಳ್ಳಲಿದೆ. ೨೦೧೭ರಲ್ಲಿ ಅನುಪಮಾ ನಿರಂಜನ ಕಥಾಬಹುಮಾನ, ೨೦೧೯ರ ಪ್ರಜಾವಾಣಿ ಸಂಕ್ರಾಂತಿ ಲಲಿತಪ್ರಬಂಧ ಬಹುಮಾನ ಪಡೆದಿರುತ್ತಾರೆ. ಕಥೆ ಮತ್ತು ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಉತ್ತರ ತುಸು ಕಷ್ಟ ಆದರೂ ಹೇಳಬೇಕೆಂದರೆ, ಹೇಳಲಾಗದ ನೋವುಗಳನ್ನು, ಬಿಚ್ಚಿಡಲಾಗದ ಗುಟ್ಟುಗಳನ್ನು ಹೇಳಲು ಕವಿತೆ ಮತ್ತು ಕಥೆ ಒಳ್ಳೆಯ ಮಾಧ್ಯಮ. ಎಲ್ಲ ನೋವುಗಳಿಗೆ ಧ್ವನಿಯಾಗಿ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತೇನೆ. ಕಥೆ,ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥದೇ ಘಳಿಗೆ ಅಥವಾ ಸಮಯ ಅದಕ್ಕಾಗಿ ನಿಗದಿಯಾಗಿರುವುದಿಲ್ಲ. ಒಮ್ಮೊಮ್ಮೆ ಕಾಡಿದ ಮತ್ತು ಕಾಡಿಸಿಕೊಂಡ ವಿಷಯ, ಘಟನೆಗಳು, ಚಿತ್ರಗಳು ಸರೋರಾತ್ರಿಯಲ್ಲಿ ಬರೆಯಲು ಹಚ್ಚುತ್ತವೆ. ನಿಮ್ಮ ಕಥೆ/ಕವಿತೆಯ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೆ-ಪದೆ ಕಾಡುವ ವಿಷಯ ಯಾವುದು? ಕವಿತೆ, ಕಥೆಗೆ ಇಂಥವೇ ವಸ್ತುವಾಗಬೇಕೆಂದು ನನಗನಿಸುವುದಿಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಮುಖ್ಯ ಆದರೆ, ಎದುರಿರುವ ವಸ್ತು,ವ್ಯಕ್ತಿ ನನ್ನೊಳಗೆ ಇಳಿದು ಬರೆಯಲು ಪ್ರೇರೇಪಿಸಿ ವಿಸ್ತಾರಗೊಳ್ಳುತ್ತಾ ಹೋದಂತೆ ಕಥೆ/ಕವಿತೆಯಾಗುತ್ತದೆ. ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ. ಪದೇ ಪದೇ ಕಾಡುವ ವಿಷಯ ಯಾವುದೇ ಆಗಿರಲಿ, ಅದು ಕೊನೆಗೆ ಕನೆಕ್ಟ್ ಆಗುವುದು ಮಾತ್ರ ಸಾಮಾಜಿಕ ಆಗುಹೋಗುಗಳೊಂದಿಗೆ ಎನ್ನುವುದಂತೂ ಸತ್ಯ.ಕಥೆ/ಕವಿತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯೆ?ಅರೆ, ಅವುಗಳಿಲ್ಲದ ಕಥೆ/ಕವಿತೆ ಬಾಲಂಗೋಚಿ ಇಲ್ಲದ ಪಟಗಳಂತೆ. ಆ ದಟ್ಟ ಅನುಭವ ಬೇರೆ-ಬೇರೆ ರೂಪಗಳಲ್ಲಿ ಬರವಣಿಗೆಯನ್ನು ಸಮೃದ್ಧಗೊಳಿಸುತ್ತವೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ರಾಜಕೀಯ ತನ್ನ ಮೂಲ ಆಶೋತ್ತರಗಳನ್ನು ಗಾಳಿಗೆ ತೂರಿದೆ. ಹಾಗಾಗಿ ನಮ್ಮಂಥವರು ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ಲೇಸು ಎಂಬಲ್ಲಿಗೆ ಬಂದು ತಲುಪಿದ್ದೇವೆ. ಇತ್ತೀಚೆಗಂತೂ ರಾಜಕೀಯ ಸನ್ನಿವೇಶ ಅಸಹ್ಯಕರ ಎನ್ನಿಸುವಷ್ಟು ಬೇಸರ ಹುಟ್ಟಿಸಿದೆ. ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಮಾನವತೆಯೆ ಧರ್ಮ. ಅದನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ ಸಾಮಾಜಿಕ ಸ್ವಾಸ್ಥö್ಯವನ್ನು ಮತ್ತು ಸಾಮರಸ್ಯವನ್ನು ಉಂಟುಮಾಡುವ ಅರಿವೆ ದೇವರು.ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?ಮನುಷ್ಯನಲ್ಲಿರುವ ಸೃಜನಶೀಲತೆಯ ಸಂಕೇತವೆ ಆತನೊಳಗಿನ ಸಾಂಸ್ಕೃತಿಕ ಪ್ರಜ್ಞೆ. ಅದು ಅವನನ್ನು ಹೊಸ-ಹೊಸ ಅನ್ವೇಷಣೆಯತ್ತ ಚಲಿಸುವಂತೆ ಮಾಡುತ್ತದೆ. ಆ ಮುಖಾಂತರ ಸಾಮಾಜಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ. ಆದರೆ, ಅಲ್ಲಿ ಜಾತಿ ಮತಗಳು ರಾಜ್ಯಬಾರ ನಡೆಸಿ ಎಲ್ಲವನ್ನು ಕುಂಠಿತಗೊಳಿಸುತ್ತಿದೆ. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವುರು? ಸಾಹಿತ್ಯ ಮತ್ತು ರಾಜಕಾರಣ ವಿಭಿನ್ನ ವಿಚಾರಗಳಿಂದ ಕೂಡಿವೆ. ಅಲ್ಲದೆ ಎರಡೂ ಬೇರೆ ಬೇರೆ ಕ್ಷೇತ್ರಗಳು. ಅವೆರಡು ಪೂರಕವಾಗಿರಬೇಕು. ಹಾಗಾದಾಗ ಮಾತ್ರ ಸಮಾಜದ ಬೇಡಿಕೆ ಹಾಗೂ ಸ್ವಸ್ಥತೆಯನ್ನು ಪೂರ್ಣಗೊಳಿಸಲು ಸಾಧ್ಯ. ಆದರೆ, ಇಂದಿನ ರಾಜಕಾರಣ ತನ್ನ ಹಸ್ತಕ್ಷೇಪವನ್ನು ಸಾಹಿತ್ಯವಲಯದಲ್ಲಿ ಯಾವ ಮಟ್ಟದಲ್ಲಿ ಮಾಡುತ್ತಿದೆ ಎಂದರೆ, ಸರಿಯಾದ ನ್ಯಾಯವನ್ನು ಸಾಹಿತ್ಯಕ್ಷೇತ್ರದಿಂದ ಸಮಾಜಕ್ಕೆ ಒದಗಿಸಲಾಗುತ್ತಿಲ್ಲ. ಇದರಿಂದ ಓದುಗರ ವಲಯವು ದಾರಿ ತಪ್ಪುತ್ತಿದೆ ಎಂದೆನಿಸುತ್ತಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ದೇಶದ ಚಲನೆ ಎನ್ನುವುದು, ವಿಸ್ತಾರವಾದ ವಿಷಯ. ಕೇವಲ ಯಾವುದೋ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿರ್ಧರಿಸಲಾಗದು. ಆದಾಗ್ಯೂ ನಾವು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ನಮ್ಮ ನಾಡು-ನುಡಿಯ ಹರವು ದೊಡ್ಡದು. ಅದು ದೇಶದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದೆ. ಅಲ್ಲದೇ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಹೀಗೆ ಇನ್ನೂ ಅನೇಕ ವಿಚಾರಗಳಲ್ಲಿ ನೀಡಿದ ಕೊಡುಗೆ ಅಪಾರ. ಅದರಿಂದ ದೇಶವು ತನ್ನನ್ನು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ದೇಶವನ್ನು ಸಮೃದ್ಧವಾಗಿ ಮುನ್ನೆಡೆಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯದ ಯಾವುದೇ ಪ್ರಕಾರದ ರಚನೆಗೆ ಸಂಬಂಧಿಸಿದ ವಿಷಯ ಬಂದಿತೆಂದರೆ, ಅಲ್ಲಿ ಪ್ರಥಮ ಆದ್ಯತೆ ರಚನಾಕಾರನ ಓದಾಗಿರಬೇಕು.ಇದರಿಂದ ಸತ್ವಯುತ ಬರವಣಿಗೆ ಸಾಧ್ಯ. ಮತ್ತೆ ಅಂತಹ ಬರವಣಿಗೆ ಬರಹಗಾರ ಹಾಗೂ ಓದುಗನ ನಡುವೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಒಂದು ಓದುಗವಲಯವೇ ನಿರ್ಮಾಣ ಆಗುತ್ತದೆ. ಅಂತಹ ವಾತಾವರಣವು ರಾಜಕೀಯ, ದಾರ್ಮಿಕ, ಸಂಕುಚಿತತೆಯನ್ನು ದೂರಮಾಡಿ ಸಾಹಿತ್ಯವನ್ನು ವಿಶ್ವವ್ಯಾಪಿಯನ್ನಾಗಿಸುತ್ತದೆ. ಕನ್ನಡ ಹಾಗೂ ಆಂಗ್ಲಭಾಷಾಸಾಹಿತ್ಯದಲ್ಲಿ ನಿಮ್ಮ ಇಷ್ಟದ ಮತ್ತು ನಿಮ್ಮನ್ನು ಕಾಡಿದ ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಕವಿಗಳೆಂದರೆ, ಪ್ರತಿಭಾ ನಂದಕುಮಾರ ಹಾಗೂ ವಾಸುದೇವ ನಾಡಿಗ. ನನ್ನದು ಹಿಂದಿ ಸಾಹಿತ್ಯದ ಓದಾಗಿರುವುದರಿಂದ, ನಿರಾಲಾ ಮತ್ತು ಮಹಾದೇವಿ ವರ್ಮಾ ನನ್ನ ನೆಚ್ಚಿನ ಕವಿಗಳು. ಕತೆಯ ವಿಚಾರಕ್ಕೆ ಬಂದರೆ, ಲಂಕೇಶ, ಕೇಶವರೆಡ್ಡಿ ಹಂದ್ರಾಳ, ಸುನಂದಾ ಕಡಮೆ ಅನೇಕ ಹಿರಿಯರ ಕತೆಗಳು ನನಗಿಷ್ಟ. ಇತ್ತೀಚೆಗೆ ಓದಿದ ಕೃತಿಗಳಾವುವು? ಶಶಿಕಲಾ ವಸ್ತ್ರದ ರವರ ಆತ್ಮಕತೆಯಾದ, ‘ಇದ್ದೆನಯ್ಯಾ ಇಲ್ಲದಂತೆ’ ಮತ್ತುಲಕ್ಷ್ಮಣ ಕೊಡಸೆ ಅವರು ಬರೆದ ‘ನಾರಾಯಣ ಗುರುಗಳ ಆಪ್ತ ಪದ್ಮನಾಭನ್ ಪಲ್ಪು’ ಇತ್ತೀಚೆಗೆ ಓದಿದ ಪುಸ್ತಕಗಳು. ನಿಮಗೆ ಇಷ್ಟವಾದ ಕೆಲಸಗಳಾವುವು? ಓದುವುದು, ಬರೆಯುವುದು. ನಿಮಗೆ ಇಷ್ಟವಾದ ಸ್ಥಳ ಯಾವುದು? ಪ್ರಕ್ರತಿಯ ಯಾವುದಾದರೂ ಸ್ಥಳವಿರಲಿ, ಇಷ್ಟವಾಗುತ್ತದೆ. ವಿಶೇಷವಾಗಿ ಲಕ್ಷ್ಮೀಶ್ವರದ ಸೋಮನಾಥ ದೇವಸ್ಥಾನದ ಪ್ರಾಂಗಣ. ನಿಮ್ಮ ಪ್ರೀತಿಯ, ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಗುರು-ಶಿಷ್ಯರು ನೀವು ಮರೆಯಲಾರದ ಘಟನೆ ಯಾವುದು? ಸಹೋದರನ ಅಕಾಲಿಕ ಸಾವು ಮರೆಯಲಾರದ ಘಟನೆ. ಬಹುಷಃ ಬದುಕಿನ ಕೊನೆಯವರೆಗೂ ಅವನನ್ನು ಯಾರಾರಲ್ಲೋ ಹುಡುಕುತ್ತಿರುತ್ತೇನೆ.ಇನ್ನು ಕೆಲ ಹೇಳಲೇಬೇಕಾದ ಸಂಗತಿಗಳಿದ್ದರೆ, ಹೇಳಿ…ಯಾರೋ ಗೊತ್ತಿರದ, ಪರಿಚಯವಿರದ ವ್ಯಕ್ತಿಗೆ ನೋವಾಗುವುದನ್ನು ಕಂಡರೆ, ಸಹಿಸಲಾಗುವುದಿಲ್ಲ. ಬಹುಷಃ ಅದೇ ನನ್ನೊಳಗಿನ ಮಾನವತೆ ಅನಿಸುತ್ತದೆ. ಹಾಗಾಗಿ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಸುಂದರವಾಗಿಸಬಹುದು ಎಂದು ನಂಬಿರುವವಳು ನಾನು. ಆದರೆ, ಮಾನವನಿಂದ ಮಾನವಪ್ರೀತಿ ಸಾಧ್ಯವಾಗದಷ್ಟು ನಾಗರೀಕತೆಯ ಹಮ್ಮಿನಲ್ಲಿರುವ ನಾವು ತುಸುವಾದರೂ ಮಾನವರಾಗಬೇಕಾದ ತುರ್ತಿನಲ್ಲಿದ್ದೇವೆ. ನಡೆಯಂತೆ ನುಡಿಯಿರದ, ನುಡಿದಂತೆ ನಡೆಯದ ವಾತಾವರಣವು ಕೊನೆಯಾಗುವುದನ್ನು ಯಾವಾಗಲೂ ಹಂಬಲಿಸುತ್ತೇನೆ. ******************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಇತರೆ

ಹಿಮಾಲಯ ಪರ್ವತ ಶ್ರೇಣಿಗಳು”

ಲೇಖನ ಹಿಮಾಲಯ ಪರ್ವತ ಶ್ರೇಣಿಗಳು” ಆಶಾ ಸಿದ್ದಲಿಂಗಯ್ಯ ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ ಭಾಗವಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಗೊಂಡರು ಸಿಂಧೂ ನದಿ ಬಯಲಿನ ನಾಗರಿಕತೆಯ ಜನರಿಗಿಂತ ಹಿಂದಿನವರು. ಅವರು ಆಡುತ್ತಿದ್ದ ಭಾಷೆ ದ್ರಾವಿಡ ವರ್ಗಕ್ಕೆ ಸೇರಿತ್ತು. ಅದು ಈಗಲೂ ಬಳಕೆಯಲ್ಲಿದೆ ಎಂಬುದು ಕುತೂಹಲದ ವಿಚಾರ. ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತ ಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ “ಪ್ಯಾಂಜಿಯ” ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು . ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ “ನಂಗಾ ಪರ್ಬತ್” ಇಂದ ಪೂರ್ವದಲ್ಲಿ “ನಾಮ್ಚೆ ಬರ್ವಾ” ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯ ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು: “ಉಪ-ಹಿಮಾಲಯ”: ಇದನ್ನು ಭಾರತದಲ್ಲಿ “ಶಿವಾಲಿಕ್ ಹಿಲ್ಸ್ “ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ. “ಕೆಳಗಿನ ಹಿಮಾಲಯ”: ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು. “ಮೇಲಿನ ಹಿಮಾಲಯ”: ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ – ಎವರೆಸ್ಟ್, ಕೆ-೨, ಮತ್ತು ಕಾಂಚನಗಂಗಾ. ಹವಾಮಾನದ ಮೇಲಿನ ಪ್ರಭಾವ ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ – ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ. ***********************************

ಹಿಮಾಲಯ ಪರ್ವತ ಶ್ರೇಣಿಗಳು” Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ಗಜಲ್ Read Post »

You cannot copy content of this page

Scroll to Top