ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು ಏನನ್ನೂಗುರುತಿಸಲಾಗದು ಯಾರೂ ಗುರುತಿಸದೆ ಬಾಡುವ ಹೂಗಳ ಅರಳುವಿಕೆಗಳನ್ನು ಮತ್ತೆ ಪಡೆಯಲಾಗುವುದಿಲ್ಲ ನೇರ ದಾರಿ ಎಂದೇ ತಿಳಿದ ಬದುಕಿನ ಪಯಣದಲಿ ಎಷ್ಟೋ ತಿರುವುಗಳನ್ನು ಕಂಡಿಹನು ಸಿದ್ಧ ನಡೆದ ದಾರಿಯಲ್ಲಿ ಅಳಿಸಿಹೋದ ಹೆಜ್ಜೆ ಗುರುತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ********************************************************

ಗಜಲ್ Read Post »

ಕಾವ್ಯಯಾನ

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಹಾಯ್ಕುಗಳು Read Post »

ಕಾವ್ಯಯಾನ

ಯಾರು ಬಂದರು

ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ‌ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************

ಯಾರು ಬಂದರು Read Post »

ಕಾವ್ಯಯಾನ

ಅಭಿವ್ಯಕ್ತ

ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************

ಅಭಿವ್ಯಕ್ತ Read Post »

ಇತರೆ, ಲಂಕೇಶ್ ವಿಶೇಷ

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

ಲಂಕೇಶ್ ವಿಶೇಷ ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..! ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿದೆ. ಕವಿಯಾಗಿ, ಕಥೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ನಾಟಕಕಾರನಾಗಿ, ನಟನಾಗಿ, ಚಲನಚಿತ್ರ ನಿರ್ದೇಶಕನಾಗಿ, ವಾರಪತ್ರಿಕೆ ಲಂಕೇಶ್ ಸಂಪಾದಕನಾಗಿ, ಕೃಷಿಕನಾಗಿಯೂ ಪ್ರಸಿದ್ಧನಾಗಿ ಹೆಸರು ಮಾಡಿದವರು ಪಿ.ಲಂಕೇಶ್ ಅವರು. ಹೀಗೆಯೇ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು   ಪಿ.ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8 ರಂದು ಜನಿಸಿದವರು. ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ಮೀಡಿಯಟ್‌ಗಳನ್ನು ಶಿವಮೊಗ್ಗದಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜ್‌ನಲ್ಲಿ ಬಿ. ಎ. (ಆನರ್ಸ್), ಮೈಸೂರಿನಲ್ಲಿ ಎಂ.ಎ. (ಇಂಗ್ಲಿಷ್) ಅಧ್ಯಯನ ನಡೆಸಿ ಅವರು ಶಿವಮೊಗ್ಗದಲ್ಲಿ ಅಧ್ಯಾಪಕ ವೃತ್ತಿ ಆರಂಭ (1959) ಮಾಡಿದವರು. ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಎರಡು ದಶಕಗಳ ಕಾಲ ಅಧ್ಯಾಪಕರಾಗಿದ್ದ ಪಿ.ಲಂಕೇಶ್ ರು ಸ್ವಯಂ ನಿವೃತ್ತಿ ಪಡೆದು ನಂತರ ಪತ್ರಿಕೋದ್ಯಮ ಪ್ರವೇಶಿಸಿದವರು. ‘ಲಂಕೇಶ್ ಪತ್ರಿಕೆ’ಯು ಪಿ.ಲಂಕೇಶ್ ಅವರ ಹರಿತ ಬರಹಗಳ ಮೂಲಕ ಕನ್ನಡ ಜಾಣ-ಜಾಣೆಯರಿಗೆಲ್ಲ ಪರಿಚಿತರಾದವರು. ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದ ಲಂಕೇಶ್ ಅವರಿಗೆ ಸಮಾಜವಾದದತ್ತ ವಿಶೇಷ ಆಸಕ್ತಿ ಇತ್ತು. ಲೋಹಿಯಾರ ಸಮಾಜವಾದ ಪ್ರಭಾವಿತರಾಗಿದ್ದ ಪಿ.ಲಂಕೇಶ್ ರು ರಾಜಕೀಯ ಪ್ರವೇಶಿಸುವ ಬಯಕೆಯಿಂದ ‘ಪ್ರಗತಿ ರಂಗ’ ಆರಂಭಿಸಿದ್ದವರು. ’ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’, ‘ಕಲ್ಲು ಕರಗುವ ಸಮಯ’, ’ಉಲ್ಲಂಘನೆ’, ’ಮಂಜು ಕವಿದ ಸಂಜೆ’ ಪಿ.ಲಂಕೇಶರ ಪ್ರಕಟಿತ ಕಥಾ ಸಂಕಲನಗಳು. ‘ವಾಮನ’ ಪಿ.ಲಂಕೇಶ್ ರ ಮೊದಲ ಕಥೆ. ವಾಮನದಿಂದಲೇ ವಿಮರ್ಶಕರ ಗಮನ ಸೆಳೆದರು ಪಿ.ಲಂಕೇಶ್. ಅವರ ಮತ್ತೊಂದು ಮಹತ್ವದ ಕಥೆ ‘ರೊಟ್ಟಿ’. ಇದೂ ಕೂಡ ಎಲ್ಲ ಸಾಹಿತ್ಯಾಭಿಸಿಗಳ ಆಕರ್ಷಕವಾಗಿತು. ‘ಬಿಚ್ಚು’, ‘ತಲೆಮಾರು’, ಪಿ.ಲಂಕೇಶ್ ರ ಕವನ ಸಂಕಲನಗಳು, ಗದ್ಯದ ವಿಚಿತ್ರ ಸೊಗಸನ್ನು ಪದ್ಯಗಳಿಗೆ ತೊಡಿಸಿ ಕಾವ್ಯ ಬರೆದ ಪಿ.ಲಂಕೇಶ್‌ ರ ‘ಅವ್ವ-1’, ‘ಅವ್ವ-2’, ‘ದೇಶಭಕ್ತ ಸೂಳೆಮಗನ ಗದ್ಯಗೀತೆ’ ಅತ್ಯುತ್ತಮ ಕವನಗಳು. ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನ ‘ಅಕ್ಷರ ಹೊಸಕಾವ್ಯ’ವನ್ನು ಸಂಪಾದಿಸಿ ಪ್ರಕಟಿಸಿದ್ದವರು. ಫ್ರೆಂಚ್ ಕವಿ ಬೋದಿಲೇರನ್ ಕವಿತೆ ‘ಪಾಪದ ಹೂಗಳು’ ಲಂಕೇಶ್ ಅನುವಾದಿಸಿರುವ ಮಹತ್ವದ ಸಂಕಲನವಾಗಿದೆ ನಮಗೆಲ್ಲಾ. ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ ಲಂಕೇಶರ ಪ್ರಥಮ ನಾಟಕವಾಗಿದೆ. ‘ಏಳು ನಾಟಕ’, ‘ಸಂಕ್ರಾಂತಿ’, ‘ಗುಣಮುಖ’ ಪಿ.ಲಂಕೇಶ್ ರ ನಾಟಕ ಕೃತಿಗಳು. ‘ಈಡಿಪಸ್ ಮತ್ತು ಅಂತಿಗೊನೆ’ ಸಫೋಕ್ಷಿಸ್ ಮಹಾಕವಿಯ ಗ್ರೀಕ್ ನಾಟಕದ ಕನ್ನಡ ಅನುವಾದ ಪಿ.ಲಂಕೇಶ್ ರ ಬಹು ಪ್ರಸಿದ್ಧಿ ಪಡೆದಿವು. ಪಿ.ಲಂಕೇಶ್ ರು ರಂಗ ಪ್ರದರ್ಶನಕ್ಕಾಗಿ ‘ಪ್ರತಿಮಾ ನಾಟಕ ರಂಗ’ ಎಂಬ ನಾಟಕ ತಂಡ ಕಟ್ಟಿದ್ದವರು. ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ’ಅಕ್ಕ’ ಪಿ.ಲಂಕೇಶ್ ರ ಕಾದಂಬರಿಗಳು. ‘ಪ್ರಸ್ತುತ (ವಿಮರ್ಶೆ) ಹಾಗೂ ‘ಕಂಡದ್ದು ಕಂಡಹಾಗೆ’ ಲೇಖನಗಳ ಸಂಗ್ರಹ ಓದುಗರಿಗೆ ಬಹು ಆಕರ್ಷಕವಾದ ಬರಹಗಳು. ‘ಲಂಕೇಶ್ ಪತ್ರಿಕೆಯ ಸಂಪಾದಕೀಯ ‘ಟೀಕೆ-ಟಿಪ್ಪಣಿ’ಯಂತೂ ಬಹು ನಮಗಂತೂ ಬಹು ಉತ್ತೇಜನಕಾರಿಯಾದ ಬರಹಗಳು. ಹೀಗೆಯೇ ಇಂತಹ ಮೂರು ಸಂಪುಟಗಳು ಪ್ರಕಟ ಮಾಡಿದರು ಪಿ.ಲಂಕೇಶ್. ‘ಮರೆಯುವ ಮುನ್ನ’ದ ಐದು ಸಂಪುಟ, ’ಬಿಟ್ಟು ಹೋದ ಪುಟಗಳು’ ಮೂರು ಸಂಪುಟ ಪ್ರಕಟವಾಗಿವೆ. ‘ಪತ್ರಿಕೆ ಪ್ರಕಾಶನದ ಮೂಲಕ ಕನ್ನಡದ ಮಹತ್ವದ ಕೃತಿಗಳನ್ನೂ ಪಿ.ಲಂಕೇಶ್ ಪ್ರಕಟಿಸಿದ್ದಾರೆ. ಅದಕ್ಕೂ ಮುನ್ನ ‘ತರುಣ ಲೇಖಕರ ಪ್ರಕಾಶನ’ದಲ್ಲಿ ಮಿತ್ರರ ಅನೇಕ ಕೃತಿಗಳನ್ನೂ ಪ್ರಕಟಿಸಿದ್ದವರು ಪಿ.ಲಂಕೇಶ್ ಅವರು. ಇದಲ್ಲದೇ ಪಿ.ಲಂಕೇಶ್ ಅವರು ಚಲನಚಿತ್ರ ರಂಗದಲ್ಲೂ ಗಮನೀಯ ಸಾಧನೆ ಮಾಡಿದವರು. ‘ಸಂಸ್ಕಾರ’ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರ ವಹಿಸಿದ್ದ ಅವರು ‘ಪಲ್ಲವಿ’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ(1977) ಪಡೆದಿದ್ದವರು. ‘ಅನುರೂಪ’, ‘ಎಲ್ಲಿಂದಲೋ ಬಂದವರು’, ’ಖಂಡವಿದೆಕೊ ಮಾಂಸವಿದೆಕೊ’ ಅವರು ನಿರ್ದೇಶಿಸಿದ ಚಲನಚಿತ್ರಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿಯ ಪ್ರಶಸ್ತಿ ಗೌರವಗಳ ಜೊತೆಗೆ ‘ಕಲ್ಲು ಕರಗುವ ಸಮಯ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂದಿವೆಯಾದರೂ ಪಿ.ಲಂಕೇಶ್ ರ ಬರಹಕ್ಕೆ ಸಲ್ಲಬೇಕಾದ ಗೌರವ ಸಂದಿಲ್ಲ ಎಂಬುದೇ ಅವರ ಬರಹ ಅಭಿಮಾನಿಗಳ ಸೋಜಿಗದ ವಿಷಯ. ಇಂತಹ ಪಿ.ಲಂಕೇಶ್ ಅವರು 2000ರ ಜನವರಿ 25 ರಂದು ಅಸುನೀಗಿದರು. ಈ ಪ್ರಸಂಗವೊಂದು ಬರಹಗಾರಿಕೆಯ ಓದುಗರಿಗೆ ತುಂಬಲಾರದ ನಷ್ಟವಾಯಿತು. ಇಂತಿಷ್ಟು ಪಿ.ಲಂಕೇಶ್ ಕುರಿತ ಬರಹ ಮತ್ತು ಬದುಕು… ********************************************** ಕೆ.ಶಿವು.ಲಕ್ಕಣ್ಣವರ

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..! Read Post »

ಕಾವ್ಯಯಾನ

ಗಂಗಾವತಿ

ಕವಿತೆ ಗಂಗಾವತಿ ಜ್ಯೋತಿ ಬಳ್ಳಾರಿ ಗಂಗಾವತಿ ಎಂದರೆ,ಬರೀ ಊರಲ್ಲ,ದೇಶಕ್ಕೆ ಅನ್ನ ನೀಡುವ ನಾಡು,ನಮ್ಮ ಭತ್ತದ ನಾಡು. ಗಂಗಾವತಿ ಎಂದರೆ,ಬರೀ ಇತಿಹಾಸವಲ್ಲ,ರಾಮಾಯಣಕ್ಕೆ ಸಾಕ್ಷಿಯಾದ,ಆಂಜಿನೇಯ ಜನಿಸಿದ ನಾಡು.ಗತ ಇತಿಹಾಸ ಸಾರುವಮೊರೆರ ತಟ್ಟೆಗಳ ಬೀಡು. ಗಂಗಾವತಿ ಬರಿ ಊರಲ್ಲಪರನಾರಿ ಸಹೋದರ,ಗಂಡುಗಲಿ ಕುಮಾರರಾಮ,ಗಂಡು ಮೆಟ್ಟಿದ ನಾಡು,ಆಧ್ಯಾತ್ಮದ ಗುರು ಹೆರೂರುವಿರುಪನಗೌಡರ ಹುಟ್ಟಿದ ಬೀಡು. ಗಂಗಾವತಿ ಎಂದರೆ,ಬರೀ ಹೆಸರಲ್ಲ,ಜನರ ಉಸಿರಲ್ಲೂ,ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.ತಾಯಿ ಗ್ರಾಮದೇವತೆ ದುರ್ಗಾದೇವಿ ಆಶೀರ್ವದಿಸಿದ ಊರು. ಗಂಗಾವತಿ ಎಂದರೆ,ಬರೀ ಪ್ರಾಂತ್ಯವಲ್ಲ,ಕವಿ, ಇತಿಹಾಸಕಾರರ ನೆಲೆಬೀಡು,ಹಾಸ್ಯ ಚಕ್ರವರ್ತಿ ಪ್ರಾಣೇಶ್,ಇತಿಹಾಸ ತಜ್ಞ ಕೋಲ್ಕಾರರ ತವರೂರು. ಗಂಗಾವತಿ ಬರಿ ಊರಲ್ಲ,ವಾನಭಧ್ರೇಶ್ವರ,ಪಂಪಾಸರೋವರ, ವಿಜಯನಗರ ಅರಸರ ಮೂಲ ತಾಣ ಆನೆಗೊಂದಿಯ ಕೋಟೆಯ ನಾಡು. ಗಂಗಾವತಿ ಎಂದರೆ,ಬರೀ ಸಾಧನೆಯಬೀಡಲ್ಲ,ಕಣಕಣದಲ್ಲೂ ಸಂಸ್ಕಾರವನ್ನು,ತೋರುವ ನೆಲವಿದು. ಗಂಗಾವತಿಯ ಒಮ್ಮೆ ನೋಡುಹಚ್ಚ ಹಸುರಿನ ಬಯಲು ಸೀಮೆಯ ಮಲೆನಾಡು,ನದಿ ಗುಡ್ಡ ಬೆಟ್ಟಗಳ ಸೌಂದರ್ಯದ ಸ್ವರ್ಗದ ಬೀಡು. ಗಂಗಾವತಿ ಎಂದರೆ,ಬರೀ ಸೌಹಾರ್ದವಲ್ಲ,ಹಿಂದೂ ಮುಸ್ಲಿಂ ಕ್ರೈಸ್ತರ,ಸರ್ವಜನಾಂಗದ ಶಾಂತಿಯ ತೋಟವಿದು. ***************************************

ಗಂಗಾವತಿ Read Post »

ಇತರೆ, ಜೀವನ

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

ಬುಡಕಟ್ಟು ಜನಾಂಗದ ಬಗ್ಗೆ ಬೆಳಕು ಚೆಲ್ಲುವ ಲೇಖನ ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ ಆಶಾ ಸಿದ್ದಲಿಂಗಯ್ಯ ಕಾಡುಗೊಲ್ಲ ಬುಡಕಟ್ಟು ಜನಾಂಗವು ತುಮಕೂರು, ಮತ್ತು ಚಿತ್ರದುರ್ಗ,ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ ಉಳಿದಂತೆ   ದಾವಣಗೆರೆ, ಬಳ್ಳಾರಿ ಗಡಿಭಾಗ  ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ರಾಮನಗರ  , ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ವಿರಳವಾಗಿ ಕಾಣಸಿಗುತ್ತಾರೆ. ಒಟ್ಟಾರೆ ಕರ್ನಾಟಕದಲ್ಲಿ ಇವರ ಜನಸಂಖ್ಯೆ ಹತ್ತು ಲಕ್ಷ ಇದೆ. ಕಾಡುಗೊಲ್ಲರನ್ನು ಮುನ್ನೆಲೆಗೆ ತರಲು  ಮತ್ತು ಸರ್ಕಾರ ಅವರನ್ನು ಗುರುತಿಸಲು ಹಿಂದುಳಿದ  ವರ್ಗಗಳ ಶಾಶ್ವತ  ಆಯೋಗದ ಮಾಜಿ ಅಧ್ಯಕ್ಷರಾದ ಸಿ. ಎಸ್ ದ್ವಾರಕನಾಥ ರವರು, ಚಲನಚಿತ್ರ ನಟರಾದ ಚೇತನ್ ಅಹಿಂಸಾರವರು, ಮತ್ತು ಕಾಡುಗೊಲ್ಲ ಆಸ್ಮಿತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಕೆ. ನಾಗಣ್ಣರವರು ಇನ್ನು ಅನೇಕರು ಹೋರಾಟ ಮಾಡಿದ್ದಾರೆ. ಅವರ ಹೋರಾಟದಿಂದಾಗಿ  ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. .  ಸಂಧರ್ಭದಲ್ಲಿ ಕಾಡುಗೊಲ್ಲ ಹೋರಟಗಾರರಲ್ಲಿ ಹಿರಿಯರಾದಂತಹ ದಿವಗಂತ ನಾಗಪ್ಪರವರನ್ನು ಸ್ಮರಿಸಬೇಕು. ಈಗಲೂ ಕೂಡ ಕಾಡುಗೊಲ್ಲರ ಹಟ್ಟಿಗೆ ಹೋದರೆ ಈ ರೀತಿಯ ಗುಡಿಸಲುಗಳನ್ನು ಕಣ್ಣಾರೆ ನೋಡಬಹುದು. ಒಂದು ಕಡೆ ಮೂಢನಂಬಿಕೆಯಾದರೂ ಬುಡಕಟ್ಟು ಜೀವನವನ್ನು ಉಳಿಸಿಕೊಂಡಿರುವ ಜನಾಂಗ. ಇವತ್ತಿಗೂ ಕಾಡುಗೊಲ್ಲ ಜನಾಂಗದವರು ಬಾಣಂತಿಯರನ್ನು ಈ ಗುಡಿಸಲಿನಲ್ಲಿ 2 ವರೆ ತಿಂಗಳು ಬಿಡುತ್ತಾರೆ  ಇದು ಆಧುನಿಕ ನಾಗರೀಕ ಸಮಾಜಕ್ಕೆ ಮೂಡನಂಬಿಕೆಯಾಗಿ ಕಂಡರೂ  ಬುಡಕಟ್ಟು ಸಮುದಾಯವೋಂದು  ಆದಿಮಾನವನ ಅವಾಸಸ್ಥಾನವನ್ನು ನೆನಪಿಸಿಕೊಳ್ಳುವ ಸಾಂಕೇತಿಕವಾದ ಆಚರಣೆಯ ರೀತಿ ಕಾಣುತ್ತದೆ  ಇಂತಹ  ಅನಾದಿಕಾಲದ ಬುಡಕಟ್ಟು ಜೀವನವಿಧಾನವನ್ನು ಉಳಿಸಿಕೊಂಡು ಬರುತ್ತಿರುವ ಕರ್ನಾಟಕದ ಏಕೈಕ ಬುಡಕಟ್ಟು ಎಂದರೆ ಅದು ಕಾಡುಗೊಲ್ಲರು ಮಾತ್ರ  ಇದು ಕೆಲವೊಮ್ಮೆ ತನ್ನನ್ನೇ ತಾನು ಶೋಷಣೆ ಮಾಡಿಕೊಳ್ಳುವ ಕ್ರಮವಾಗಿಯೂ ಕಾಣುತ್ತೆ.  ಕಾಡುಗೊಲ್ಲರು ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಂತಹ ಧಾರ್ಮಿಕ ನಂಬಿಕೆಯನ್ನು ಗೌರವಿಸೋಣ. ಕಾಡುಗೊಲ್ಲರ ಆರಾಧ್ಯದೈವ ಜುಂಜಪ್ಪ, ಕಾಡುಗೊಲ್ಲರ ದೇವರ ಇಷ್ಟದ ಹೂವು ಸಾದ ಪುಷ್ಪ, ನಮ್ಮ ಬುಡಕಟ್ಟು ದೇವರುಗಳನ್ನು ಮುನ್ನೆಲೆಗೆ ತರೋಣ. ಗುಡಸಲಿನಲ್ಲಿ ಕಾಡಿನಲ್ಲಿ ಜನ್ಮ ತಳೆಯುವ ಕಾಡುಗೊಲ್ಲರ ಮಕ್ಕಳು ಕಷ್ಟ ಸಹಿಷ್ಣುತೆ ಹೊಂದಿರುತ್ತಾರೆ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ.ಕಷ್ಟವನ್ನು ಎದುರಿಸುವ ಅವರ ಗುಣ ಅವರ ಪ್ರಬುದ್ಧತೆಯನ್ನು ತೋರುತ್ತದೆ. ಬ್ರಾಹ್ಮಣ್ಯವನ್ನು ಮರುಪ್ರಶ್ನೆ ಮಾಡದೇ ಪಾಲಿಸುವ ಜನರು ಬುಡಕಟ್ಟು ಜನಾಂಗದ ಧಾರ್ಮಿಕ ಭಾವನೆಗಳ ನಂಬಿಕೆಯನ್ನು ಪ್ರಶ್ನಿಸುತ್ತಾರೆ. ಬುಡಕಟ್ಟು ಜನಾಂಗದ ಬಗ್ಗೆ ಅನ್ವೇಷಣೆ ಮಾಡುತ್ತ ಹೊದಂತೆ ಕಾಡಿನೊಂದಿಗೆ ಅವರ ಒಡನಾಟ ಪ್ರಕೃತಿಯೊಂದಗಿನ ಅವಿನಾಭಾವ ಸಂಬಂಧವನ್ನು ಪರಿಚಯಿಸುತ್ತದೆ. ಆಧುನಿಕ ಸಮಾಜದ ಜೀವನದ ಜಂಜಾಟದಲ್ಲಿ ನಾಲ್ಕು ಜನ ಏನಾನ್ನುತ್ತಾರೊ ಎಂಬ ಭಯದಲ್ಲಿ ಜನರನ್ನ ಮೆಚ್ಚಿಸುವ ಬಗ್ಗೆಯೇ ಯೋಚಿಸುತ್ತಾ ಜೀವನ ಸವೆಸುವ ಅದೆಷ್ಟೋ ಮಧ್ಯಮ ವರ್ಗದ ಜನ ನಮ್ಮ ನಡುವೆ ಇದ್ದಾರೆ. ಇದನ್ನೆಲ್ಲಾ ನೋಡಿದಾಗ ಬುಡಕಟ್ಟು ಜೀವನ ಶೈಲಿ, ಒತ್ತಡವಿಲ್ಲದ, ಪ್ರಕೃತಿ ಪರವಾದ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯ. ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ. ನೀಲಗಿರಿ ಬೆಟ್ಟಗಳಲ್ಲಿನ ತೋಡ ಜನಾಂಗದವರ ಗುಡಿಸಲಿನಂತೆಯೇ ಕಾಡುಗೊಲ್ಲರ ಗುಡಿಸಲು ಇದೆ. ಈಗಲೂ ಇದೇ ರೀತಿಯ ಗುಡಿಸಲುಗಳನ್ನು ನಾವು ನಮ್ಮ ಕಾಡುಗೊಲ್ಲ ಜನಾಂಗದ ಗುಡಿಸಲಿನಲ್ಲಿಯೂ ಕಾಣಬಹುದು. ಆದಿವಾಸಿತಾಣಗಳು ಪ್ರವಾಸತಾಣಗಳಾಗಲಿ. ಆ ಮೂಲಕ ಬುಡಕಟ್ಟು ಜನಾಂಗ ಮುನ್ನೆಲೆಗೆ ಬರಲಿ,ಅವರ ಅಭಿವೃದ್ಧಿ ಬಗ್ಗೆ ಸರಕಾರ ಗಮನ ಹರಿಸಲಿ. ************************************************

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ Read Post »

ಕಥಾಗುಚ್ಛ

ಒಂದು ತಪ್ಪು ಗಂಟು

ಒಂದು ತಪ್ಪು ಗಂಟು ಎಸ್.ನಾಗಶ್ರೀ ಅದು ಕಾರ್ತೀಕ ಮಾಸದ ಪ್ರಾರಂಭದ ದಿನಗಳು. ಸಂಜೆ ಬೇಗ ಕಳೆದು ರಾತ್ರಿಯ ಚಾದರ ಹೊದ್ದು ಸುತ್ತಲೂ ಕತ್ತಲು. ಪ್ರತಿಮನೆಯ ಮುಂದೂ ಬೆಳಗುವ ಹಣತೆಗಳು. ಪ್ರಕಾಶ್ ರೆಡ್ಡಿ ಅಂದೂ ಸಂಜೆ ಏಳರ ಸಿಗರೇಟ್ ಹಚ್ಚಿ ಮನೆಯ ಮುಂದೆ ಕುರ್ಚಿ ಹಾಕಿ ಕುಳಿತಿದ್ದ. ಚಳಿ ಏಕೋ ಮೂಳೆಗಿಳಿಯುವಷ್ಟು ಏರಿದೆ ಎನಿಸಿ ಬಿಸಿ ಕಾಫಿಗೆ ಸೈಲೂ ಎಂದು ಕೂಗಿ, ಅರೆಘಳಿಗೆ ಹಿಂದಕ್ಕೆ ಒರಗಿದ. ಬೇಡಬೇಡವೆಂದರೂ ಪ್ರತಿ ಕಾರ್ತೀಕದಲ್ಲಿ ನೆನಪಾಗಿ ಹೃದಯ ಭಾರವಾಗುವ ಆ ಘಟನೆಯ ಕಿಡಿ ಇವತ್ತೂ ಫಳಾರನೆ ಸೋಕಿತ್ತು. ವಾವೆಯಲ್ಲಿ ಚಿಕ್ಕಮ್ಮನ ಮಗಳು ಪಾರ್ವತಿ ತಂಗಿಯಾಗಬೇಕು. ಇಡೀ ನಮ್ಮ ಮನೆತನಕ್ಕೆ ತಿಳಿಗೋಧಿ ಬಣ್ಣಕ್ಕಿದ್ದದ್ದು ಅವಳೊಬ್ಬಳೇ. ಬಟ್ಟಲುಗಣ್ಣು, ಅರ್ಧಚಂದ್ರಾಕಾರದ ಹಣೆ, ಕಡುಗಪ್ಪು ಅಲೆಅಲೆ ಕೂದಲು. ಅವಳು ಸೀರೆಯುಟ್ಟು ನಿಂತರೆ ದೇವಿ ಕಳೆ. ಗಂಡಿನ ಕಡೆಯವರೇ ಮನೆಗೆ ಬಂದು ಕೇಳಿ, ಮದುವೆ ಮಾಡಿಕೊಂಡು ಹೋಗ್ತಾರೆ ನೋಡಿ ಅಂತ ಆಡಿಕೊಳ್ಳೋರು ಸುತ್ತಮುತ್ತಲ ಜನ. ಚಿಕ್ಕಪ್ಪ ಚಿಕ್ಕಮ್ಮನೂ ಇದ್ದೊಬ್ಬ ಮಗಳಿಗೆ ಸಾಕಷ್ಟು ನಗ ಕೂಡಿಸಿಯೇ ಇದ್ದರು. ಎಲ್ಲರಿಗೂ ಬೇಕಾದವರಾಗಿ ಎಲ್ಲರ ಕಷ್ಟಕ್ಕೂ ಆಗುತ್ತಿದ್ದ ಅವರ ಒಳ್ಳೆಯತನಕ್ಕೆ ಮೆಚ್ಚಿಯೇ ಸಾಕ್ಷಾತ್ ಪಾರ್ವತಿ ಹುಟ್ಟಿಬಂದಿರಬಹುದು ಎಂದಿದ್ದರು ಊರ ಅರ್ಚಕರು. ಅವಳಿಗಿಂತ ಮೂರು ವರ್ಷ ದೊಡ್ಡವನಾದ ನನಗೂ ಹೆಚ್ಚು ತರ್ಕಕ್ಕೆ ಸಿಲುಕದೆ ಅದನ್ನು ನಂಬುವುದೇ ಹಿತವಾಗಿತ್ತು. ಬಾಲ್ಯದ ಪ್ರತಿ ಬೇಸಿಗೆರಜೆಯಲ್ಲೂ ತಮ್ಮ ಸುಧೀರನನ್ನು ಕರೆದುಕೊಂಡು ಅವರ ಊರಿಗೆ ಹೋಗುವುದು ಪ್ರಿಯವಾದ ಸಂಗತಿಯಾಗಿತ್ತು. ಮೊದಮೊದಲು ಅಪ್ಪನೇ ಕರೆದುಕೊಂಡು ಹೋಗಿ ಬಿಡುತ್ತಿದ್ದುದು ಆಮೇಲೆ ಬಸ್ಸು ಹತ್ತಿಸಿ ಕಳಿಸುವ ಸಲೀಸಿಗೆ ಸಿಕ್ಕಿತ್ತು. ದಾರಿಯುದ್ದಕ್ಕೂ ಸಿನಿಮಾಗೀತೆಗಳ ಗುನುಗುತ್ತಾ ಅಮ್ಮ ಕಟ್ಟಿಕೊಟ್ಟ ಚಕ್ಕುಲಿ, ಬಿಸ್ಕತ್ ಬಾಯಾಡಿಸುತ್ತಾ ಊರು ತಲುಪುವ ಮಜಾ. ಅಲ್ಲಿಂದಾಚೆಗೆ ಚಿಕ್ಕಮ್ಮನ ಮುದ್ದು. ಚಿಕ್ಕಪ್ಪನೊಂದಿಗೆ ಕೆರೆಯಲ್ಲಿ ಈಜು ಹೊಡೆಯುವ ಆಟ. ಪಾರ್ವತಿಯನ್ನೂ ಜೊತೆ ಮಾಡಿಕೊಂಡು ಊರಹಬ್ಬ, ಸಂತೆಗೆ ಸುತ್ತುವುದು… ಸಂತೋಷದಲ್ಲಿ ದಿನಗಳೆಯುವುದು ಕಷ್ಟವಲ್ಲ. ದುಃಖದಲ್ಲಿ ನಿಮಿಷ ನಿಮಿಷವೂ ದೂರ..ಭಾರ. ಸೈಲೂ ಕೈಯಲ್ಲಿ ಕಾಫಿ ಹಿಡಿದೇ ಬಂದಿದ್ದಳು. ಇವಳಾದರೂ  ಕಷ್ಟಕಾಲದಲ್ಲಿ ಇರದಿದ್ದರೆ ಎಂದೋ ಕುಡಿತಕ್ಕೆ ಬಲಿಯಾಗಿ ಸಾಯುತ್ತಿದ್ದೆ. ಮಕ್ಕಳು ಮರಿ ಸಂಸಾರ ಅನ್ನೋದು ಹೆಣ್ಣೊಬ್ಬಳಿಂದಲೇ ಗಟ್ಟಿಯಾಗುವುದು ಎಂಥಾ ಸೋಜಿಗ. ” ಇವತ್ತು ರಾತ್ರಿಗೆ ಏನು ಮಾಡಲಿ? ಸೋಮವಾರ ಬೇರೆ… ಏನು “ ” ಎಂತಾದ್ರೂ ಮಾಡು.. ಅವರೆಕಾಯಿ ಬಿಟ್ಟು”  ” ಬೇಕಂದ್ರೂ ಆಗಲ್ಲ. ನಿನ್ನೆಗೇ ಅವರೆ ಮುಗಿದಾಯ್ತು. ಟೊಮೇಟೋ ಬಾತ್ ಮಾಡ್ತೀನಿ . ಅನಿಗೂ ಇಷ್ಟ” ಆಯ್ತು ಎನ್ನಲೂ ಬಾಯಿ ಬರದೆ ಮತ್ತೊಂದು ಸಿಗರೇಟು ಹಚ್ಚಿ ಆಕಾಶಕ್ಕೆ ಮುಖಮಾಡಿ ಕೂತ. ಅವರೆಕಾಯಿ ಅಂದ್ರೆ ಪಾರ್ವತಿಗೆ ಎಷ್ಟು ಆಸೆ. ಅವಳು ಮದುವೆಯಾಗಿ ಹೋದಕಡೆ ಅವರೆ ಸಿಗುವುದೇ ಕಷ್ಟ ಅಂತ ಅಮ್ಮನೇ ಕೆಜಿಗಟ್ಟಲೆ ತಂದು ಬಿಡಿಸಿ ಗಂಟುಕಟ್ಟಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು.ಅಮ್ಮನ ಕೈ ಧಾರಾಳ. ಚಿಕ್ಕಮ್ಮನದು ಕಮ್ಮಿಯಲ್ಲ. ಪಾರ್ವತಿಯ ಕೈ ಎಂತದ್ದು ತಿಳಿಯಲು ಒಮ್ಮೆಯೂ ಅವರ ಮನೆಗೆ ಹೋಗುವ ಭಾಗ್ಯವೇ ಬರೆಯಲಿಲ್ಲ ದೇವರು. ಅಷ್ಟಕ್ಕೂ ಪ್ರಕಾಶ್ ರೆಡ್ಡಿಗೆ ಆ ಘಟನೆ ವಿವರವಾಗಿ ಕಾಡಲು ಕಾರಣ ಇಂದು ಮಧ್ಯಾಹ್ನ ಅವನ ಮೊಬೈಲ್ಗೆ ಬಂದ ಮೆಸೇಜ್. ” ನಮಸ್ತೇ ಮಾವ. ನಾನು ವೈಶಾಲಿ. ಇಲ್ಲಿ ಎಲ್ಲರೂ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುವೆ. ನನ್ನ ತಂಗಿ ಸುರಭಿಗೆ ಮದುವೆ ಗೊತ್ತಾಗಿದೆ. ಅಂಗೀರಸ ಗೋತ್ರದವರು.ಹುಡುಗ ಇಂಜಿನಿಯರ್.ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ತುಂಬಾ ಒಳ್ಳೆಯ ಜನ. ಬಹುಶಃ ಮುಂದಿನ ಏಪ್ರಿಲ್ ನಲ್ಲಿ ಮದುವೆ. ಹುಡುಗನ ಫೋಟೋ ಕಳಿಸಿರುವೆ ನೋಡಿ. ಹೆಚ್ಚಿನ ವಿವರಗಳನ್ನು ನಂತರ ಮೆಸೇಜ್ ಮಾಡುವೆ. ನಿಮ್ಮ ಸಪ್ರೇಮ ಆಶೀರ್ವಾದವನ್ನು ಕೋರುವ, ವೈಶಾಲಿ. ಮನೆಗೆ ಹೋಗುವ ಮುನ್ನ ಮೆಸೇಜ್ ಡಿಲಿಟ್ ಮಾಡಿ. ಅತ್ತೆಗೆ ತಿಳಿದು ನಿಮಗೆ ಕಷ್ಟವಾಗುವುದು ಬೇಡ.” ಆ ಮೆಸೇಜ್ ಅನ್ನು ಓದಿದಾಗಿಲಿಂದಲೂ ಪ್ರಕಾಶ್ ರೆಡ್ಡಿಗೆ ತಾನು ಹೋಗಲಾಗದ ತಂಗಿಯ ಮನೆ, ಅವಳ ಮಕ್ಕಳ ನೆನಪಾಗಿ ಕಡೇಪಕ್ಷ ಈ ಮದುವೆಗಾದರೂ ಹೋಗಿಬಿಡಲೇ ಎನ್ನಿಸಿತ್ತು. ಪಾರ್ವತಿಯ ಗಂಡ ನರಸಾರೆಡ್ಡಿ ಅಣ್ಣ-ತಂಗಿಯ ಸಂಬಂಧಕ್ಕೇ ಅಪಾರ್ಥ ಹಚ್ಚಿ ಹಂಗಿಸುವುದು, ತವರಿಗೂ ಕಳುಹಿಸದೆ ಹಿಂಸಿಸುವುದು, ತನಗಿಂತ ಸಾವಿರಪಟ್ಟು ಅಂದವಾಗಿರುವುದು ಹೆಂಡತಿಯ ತಪ್ಪು ಎಂದೇ ಭಾವಿಸಿ ವಿಕೃತಿ ಮೆರೆಯುವುದನ್ನು ಚಿಕ್ಕಮ್ಮನೇ ಕಣ್ಣೀರು ಸುರಿಸುತ್ತಾ ಗೊಗ್ಗರು ಗಂಟಲಿನಲ್ಲಿ ಹೇಳಿ ರೋದಿಸಿದ್ದಳು. ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಅಳಿಯನ ಪರವಾನಗಿ ತೆಗೆದುಕೊಂಡು ಒಂದೆರಡು ದಿನದ ಮಟ್ಟಿಗೆ ಹೋಗಿ ನೋಡಿ ಬರುತ್ತಿದ್ದ ಚಿಕ್ಕಮ್ಮ ಚಿಕ್ಕಪ್ಪ ನಮ್ಮ ಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಆದರೂ ಮಾತಿಗೆ ಕೂತರೆ ಪಾರ್ವತಿಯ ವಿಷಯವೇ ಮುಂದಾಗಿ ಎಲ್ಲರೂ ನೋವಿನಲ್ಲಿ ವಿಲಗುಟ್ಟುವುದು ಏಕೆಂದು ಮಾತು ಕಡಿಮೆಯಾಯ್ತು. ಉಣ್ಣಲು ಉಡಲು ಯಾವ ತಾಪತ್ರಯವೂ ಇರದ ಅವರು ಮೌನವಾಗಿ ಕೂತು ಉಂಡೆದ್ದು ಬರಲು ಯಾಕಷ್ಟು ದೂರ ಹೋಗಬೇಕೆನ್ನುವ ಉತ್ತರ ಹೊಳೆಸಿಕೊಂಡು ನೆಪಮಾತ್ರದ ನೆಂಟರಾಗಿಬಿಟ್ಟರು. ಅಮ್ಮ ಮಾತ್ರ ತಾನು ಬದುಕಿರುವಷ್ಟು ದಿನ ಯಾರಿಗೂ ಹೆದರಿ ಮಗಳ ಸಂಬಂಧ ಕಡಿದುಕೊಳ್ಳಲಾರೆನೆಂದು ಅವರೆಕಾಯಿ ಕಾಲದಲ್ಲಿ ಕೆಜಿಗಟ್ಟಲೆ ಅವರೆ ಬಿಡಿಸಿ ಗಂಟುಕಟ್ಟಿಕೊಂಡು ಪಾರ್ವತಿಯ ಮನೆಗೆ ಹೋಗಿ ಕೊಟ್ಟು ಒಪ್ಪೊತ್ತು ಊಟ ಮುಗಿಸಿಯೇ ಬರುತ್ತಿದ್ದಳು. ಆ ದಾಷ್ಟಿಕ, ಮಗಳ ಮನೆ ನನಗೂ ಹಕ್ಕಿದೆ ಎನ್ನುವ ಧೈರ್ಯ ಚಿಕ್ಕಮ್ಮನಿಗೆ ಒಲಿಯಲೇ ಇಲ್ಲ. ಸೈಲೂ ಊಟಕ್ಕೆ ತಟ್ಟೆಯಿಟ್ಟು ರೆಡ್ಡಿಯನ್ನು ಕರೆಯಲು ಬಂದವಳೇ ಬೀದಿಕಂಬದ ಬೆಳಕಿನಲ್ಲೂ ಗುರುತಿಸಬಹುದಾಗಿದ್ದ ಅವನ ಒದ್ದೆ ಕೆನ್ನೆಯನ್ನು ಕಂಡು ಅಚ್ಚರಿಪಟ್ಟಳು. ” ಇದೇನಿದು…ಮುಖವೆಲ್ಲಾ ಒದ್ದೆ. ಕಣ್ಣು ಕೆಂಪುಗಟ್ಟಿದೆ.ಆರಾಮಿಲ್ವಾ?” ಎನ್ನುತ್ತಾ ಸೆರಗಿನ ಅಂಚು ತೆಗೆದು ಮುಖವೊರೆಸಿ ಅವನ ಜೊಂಪೆಕೂದಲ ಮೇಲೆ ಕೈಯಾಡಿಸಿದಳು. ಅವನು ಅವಳನ್ನು ನೋಡಲು ಬಂದಾಗಲೇ ಒಂದು ಸಣ್ಣ ರಿಕ್ವೆಸ್ಟು ಎನ್ನುತ್ತಾ, ” ಮನೆಯಿಂದಾಚೆಗೆ ಚೂಡಿದಾರ್, ಇನ್ನೊಂದು ಮತ್ತೊಂದು ಹಾಕಿದ್ರೂ ಪರವಾಗಿಲ್ಲ.ಆದರೆ ಮನೆಯಲ್ಲಿ ಸೀರೆ ಉಟ್ಟರೆ ನನಗೆ ಬಹಳ ಖುಷಿ ” ಅಂದಿದ್ದ. ಸರ್ಕಾರಿ ಕೆಲಸ. ಆರಡಿ ಆಳು. ಒಳ್ಳೆ ಮನೆತನ.‌ಭೂಮಿಯೂ ಇದ್ದವರು. ಮನೇಲಿ ಸೀರೆ ಉಡಬೇಕು ಅಂದ ಮಾತ್ರಕ್ಕೆ ಬೇಡ ಅನ್ನಲಾದೀತೆ? ಹು ಅನ್ನು ಅಂತ ಸೈಲೂ ಅಮ್ಮನ ಒತ್ತಾಯ. ಸೈಲೂ ಹೂ ಅಂದ ತಿಂಗಳಿಗೇ ಮದುವೆ. ಮೂರು ವರ್ಷದೊಳಗೆ ಇಬ್ಬರು ಮಕ್ಕಳು. ಕಷ್ಟ ಅಂತನಿಸದ ಸಹಜ ಸಂಸಾರ. “ಸೈಲೂ ಒಂದು ಚೇರ್ ತಂದು ಇಲ್ಲೇ ಕೂರು. ಒಂದು ಚಿಕ್ಕ ತೊಂದರೆ…ನೀನಾದ್ರೆ ಏನಾದ್ರು ಪರಿಹಾರ ಹೇಳಬಹುದು” ಅಂದ. ಅವಳು ಮಕ್ಕಳಿಗೆ ಬಡಿಸಿಕೊಟ್ಟು, ತಿನ್ತಾ ಇರಿ. ಹತ್ತು ನಿಮಿಷ ಬಂದೆ ಅಂತ ಬಾಗಿಲು ಮುಂದೆ ಸರಿಸಿ ಬಂದಳು. ರಾತ್ರಿ ಹೊತ್ತು ಎಲ್ಲರೂ ಬಾಗಿಲು ಜಡಿದು, ಮನೆಯೊಳಗೆ ಟಿವಿ ನೋಡುತ್ತಾ ಊಟ ಮಾಡುವ ಸಮಯ. ನಾವಿಲ್ಲಿ ಮಾತಾಡಿಕೊಂಡರೂ ಕೇಳಿಸಿಕೊಂಡರೆ ಎನ್ನುವ ಅನುಮಾನಕ್ಕೆ ಆಸ್ಪದವೇ ಇಲ್ಲ. ಈಗೀಗ ಜನಕ್ಕೆ ಯಾರ ಮಾತಿನ ಮೇಲೂ ಅಂತಹ ಕುತೂಹಲ, ಆಸಕ್ತಿ ಉಳಿದಿಲ್ಲ. ಎಲ್ಲರೂ ಎಲ್ಲವನ್ನೂ ಟಾಂ ಟಾಂ ಮಾಡುವುದರಲ್ಲೇ ಇದ್ದಾರೆ ಹೊರತು, ಪಿಸುಮಾತಿಗೆ ಕಿವಿಗೊಡಲು ಯಾರಿಗೂ ಪುರುಸೊತ್ತಿಲ್ಲ ಎನಿಸಿತು ಅವಳಿಗೆ. ” ಈಗ… ನಮ್ಮ ಪಾರ್ವತಿ ತರಹಾನೇ ಒಬ್ಬಳು ಹೆಣ್ಣುಮಗಳನ್ಕೋ. ಅವಳ ಮಗಳಿಗೆ ಮದುವೆ ನಿಶ್ಚಯವಾಗಿದೆ. ಅಣ್ಣನಿಗೆ ವಿಷಯ ತಿಳಿಸಲು ಕೂಡ ಯಾವುದೋ ಸಮಸ್ಯೆ ಅಡ್ಡವಾಗಿ, ಮಗಳ ಕೈಲಿ ವಾಟ್ಸಪ್ ಮೆಸೇಜ್ ಮಾಡ್ಸಿದ್ದಾಳೆ. ಅತ್ತಿಗೆಗೆ ವಿಷಯ ತಿಳಿದ್ರೆ ಏನೋ ಎಡವಟ್ಟು ಕಾದಿದೆ ಬೇರೆ. ಈಗ ಅಣ್ಣನಾದೋನು ಏನು ಮಾಡ್ತಾನೆ? “ ” ನಿಮ್ಮಂತೋನಾದ್ರೆ ಕೈಲಾದ ಸಹಾಯ ಮಾಡ್ತಾನೆ. ಗುಟ್ಟಾಗಿ ಮದುವೆಗೆ ಹೋಗಿ ಬರ್ತಾನೆ. ಇಲ್ಲಾಂದ್ರೆ ತನ್ನ ಸ್ಥಿತಿ ಹೀಗ್ಹೀಗೆ ಅಂತ ತಂಗಿಗೆ ಫೋನ್ ಮಾಡಿಯಾದ್ರೂ ಸಮಾಧಾನ ಹೇಳ್ತಾನೆ” ” ಆ ಮೆಸೇಜ್ ಈಗ ನಂಗೇ ಬಂದಿದೆ. ಈಗ ನಾನು ಫೋನ್ ಮಾಡಿ ನನ್ನ ಕೈಲಾದ ಸಹಾಯ ಮಾಡ್ತೀನಿ ಅಂತೀನಿ. ಆಗ?” ” ಮಾಡಿ. ಆದರೆ ಈಗ ಮೆಸೇಜ್ ಕಳ್ಸಿರೋದು ಯಾರು?” ” ಯಾರೋ ಬ್ರಾಮಿನ್ಸ್… ಗೋತ್ರ ಅಂತೆಲ್ಲಾ ಇತ್ತು. ನಮ್ ಫ್ರೆಂಡ್ ವಿಶ್ವನಾಥನ್ನ ಕೇಳಿದ್ದಕ್ಕೆ ಬ್ರಾಮಿನ್ಸ್ ಗೋತ್ರ. ನಮ್ಕಡೆನೂ ಅದೇ ಗೋತ್ರದವರಿದ್ದಾರೆ ಅಂದ” ” ಮಿಸ್ಸಾಗಿ ಮೆಸೇಜು ನಿಮಗೆ ಬಂದಿರಬೋದು. ಅದಕ್ಯಾಕೆ ಇಷ್ಟು ಒದ್ದಾಟ?ಒಂದ್ಸಲ ಫೋನ್ ಮಾಡಿ. ಆಗಿದ್ದಾಗ್ಲಿ. ಈಗ ಊಟಕ್ಕೆ ಬನ್ನಿ” ಅಂದು ಹೊರಟಳು. ಊಟಕ್ಕೆ ಮೊದಲು ಇದನ್ನ ನೇರ ಮಾಡ್ತೀನಿ ಅಂದುಕೊಳ್ತಾ, ಪ್ರಕಾಶ್ ರೆಡ್ಡಿ ವೈಶಾಲಿ ನಂಬರ್ಗೆ ಕಾಲ್ ಮಾಡಿದ. ಅತ್ತಲಿಂದ ಗಂಡಸಿನ ದನಿ. ” ಇಲ್ಲ ಸರ್. ಅದು ರಾಂಗ್ ನಂಬರ್ ಇರಬೇಕು. ನಮಗೆ ಪ್ರಕಾಶ್ ರೆಡ್ಡಿ ಅಂತ ಯಾರೂ ಪರಿಚಯ ಇಲ್ಲ. ನಮಗೆ ಯಾವ ಸಹಾಯನೂ ಬೇಡ. ಪ್ಲೀಸ್… ಮೆಸೇಜ್ ಮತ್ತೆ ನಂಬರ್ ಡಿಲಿಟ್ ಮಾಡಿ. ಅವರು ಯಾರೋ ಅಂದ್ಕೊಂಡು ನಿಮಗೆ ಮೆಸೇಜ್ ಮಾಡಿದಾರೆ. ಸಾರಿ ಸರ್… ಮತ್ತೆ ಕಾಲ್ ಮಾಡೋಕೆ ಹೋಗ್ಬೇಡಿ. ಗುಡ್ ನೈಟ್ ಸರ್. ಥ್ಯಾಂಕ್ಯೂ” ಅನ್ನುತ್ತಾ ಕಾಲ್ ಕಟ್ ಮಾಡಿದ. *************************************************

ಒಂದು ತಪ್ಪು ಗಂಟು Read Post »

ಕಾವ್ಯಯಾನ

ತಮಟೆ ಬೇಕಾಗಿದೆ

ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು ಬೇಕಾಗಿದೆ// ಹೊಲಗದ್ದೆ ಸುಗ್ಗಿಕಣಊರ ಹುಣಸೆ ಮರವೂಗಂಟುಕಳ್ಳರ ಪಾಲುಅನ್ನದಾತನ ಕೈಗಳಿಗೆ ಭಿಕ್ಷೆ ಚರಿಗೆಕುಂಬಾರ, ಕಮ್ಮಾರ,ಚಮ್ಮಾರ,ಮಡಿವಾಳ,ಬಡಗಿ,ಕೂಲಿಯಾಳು, ಒಕ್ಕಲು ಕಾಡು ಪಾಲುದೇವ್ರು – ಧರ್ಮ ಕರ್ಮಗೆಡಿಸಿನೆರೆಹೊರೆ ನಂಟು ಊರಾಳುಎದೆ ಎದೆಗೂ ಇದ ಸಾರಲುತಮಟೆಯೊಂದು ಬೇಕಾಗಿದೆ. ಮುತ್ತಾತ ಮೆಚ್ಚಿ ಬಾರಿಸಿದ ತಮಟೆತಾತಾ ತಲೆ ಎತ್ತಿ ಬಡಿದ ತಮಟೆಅಪ್ಪ ಕುಣಿ ಕುಣಿದು ಅಬ್ಬರಿಸಿದ ತಮಟೆಸಾವಿನ ಸೂತಕಕ್ಕೂದೇವರ ಒಡ್ಡೋಲಗಕ್ಕೂಒಪ್ಪುಳ್ಳ ತಮಟೆ ಸತ್ತದನವೊಂದಿದ್ದರೆ ಕೊಡಿತಮಟೆ ಬಿಗಿಯಬೇಕಿದೆನಿಮ್ಮ ಮೆರವಣಿಗೆಗೆ!!! ವಲಸೆ ಹೋದ ದಾರಿಯಲ್ಲಿರಕ್ತ ಮಾಸಿಲ್ಲಬಿಮ್ಮನಿಸಿ ಬಾಣಂತಿ ಹಸುಗೂಸುಗಳನಿಟ್ಟುಸಿರು ನಿತ್ರಾಣವಿನ್ನೂ ತಣಿದಿಲ್ಲಹಸಿವು,ಕಣ್ಣೀರ ಅನಾಥ ಮೆರವಣಿಗೆಗೆನೀರಿಲ್ಲ , ನೆಳಲಿಲ್ಲ ದೇವರಿಗೊಂದುಮಹಲು‌ ಕಟ್ಟುವ ಮೋಜು ಮುಗಿದಿಲ್ಲದೊರೆಯನ್ನು ಧ್ಯಾನದಿಂದ ಎಬ್ಬಿಸಲುತಮಟೆಯೊಂದು ಬೇಕಾಗಿದೆ. ದೇವರುನಡುರಸ್ತೆಯಲ್ಲೆ ನಿಂತಿದ್ದಾನೆಹೆಣವೊಂದು ಚಟ್ಟ ಏರಲೊಲ್ಲುತ್ತಿಲ್ಲಸಂಪ್ರದಾಯ ಮುಕ್ಕಾದೀತುತಮಟೆಯೊಂದು ಬೇಕಾಗಿದೆಹೆಣದ ಮೋಕ್ಷಕ್ಕೆದೇವರ ಸುಖ ನಿದ್ರೆಗೆ ದೇಶದಲ್ಲೀಗ ಭಕ್ತರ ಕಾಲಪ್ರಶ್ನಿಸುವವರು ಜೈಲಿಗೆದುಡಿವವರು ಬೀದಿಗೆಉಳಿದವರು‌ ಜೀತಕ್ಕೆತುಂಡು ಬಾಡು ತಿಂದಿದ್ದಕ್ಕೆಕಾಡು ನ್ಯಾಯದ ಸಾವ ಶಿಕ್ಷೆಮತದ ಮತ್ತೇರಿದವರನ್ನೆಲ್ಲಮನುಜಮತದ ಮನುಷ್ಯರೂರಿಗೆಮೆರವಣಿಗೆ ಕರೆದೊಯ್ಯಬೇಕಿದೆ ಸತ್ತದನವೊಂದಿದ್ದರೆ ಕೊಡಿಎದೆಯಗಲ ಚರ್ಮ ಬೇಕಿದೆಎಂದೂ ಹರಿಯದಬುದ್ಧ ಭಾರತ,ಭೀಮ ಭಾರತಬಸವ ಪಥ ಕಟ್ಟಲುತಮಟೆಯೊಂದು ಬಿಗಿಯಬೇಕಿದೆ. *************************************

ತಮಟೆ ಬೇಕಾಗಿದೆ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಹೊಸ ಅಂಕಣ ಧಮ್ಮಲಾಲ್ ಛೋಪ್ರಾ ತೆಲುಗು ಮೂಲ : ಮಧುರಾಂತಕಂ ನರೇಂದ್ರಕನ್ನಡಕ್ಕೆ : ಕುಂ. ವೀರಭದ್ರಪ್ಪಪ್ರ : ಆಕೃತಿ ಪುಸ್ತಕ, ಬೆಂಗಳೂರುಪ್ರಕಟಣೆಯ ರ್ಷ : ೨೦೧೭ಬೆಲೆ : ರೂ.೧೦೦ಪುಟಗಳು : ೧೧೨ ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ  ಈ ಕಾದಂಬರಿಯಲ್ಲಿ  ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ.  ಆತ ಮೆಕ್ಸಿಕೋದಲ್ಲಿ ನಡೆಯುವ  ಒಂದು ವಿಚಾರಸಂಕಿರಣದಲ್ಲಿ  ಭಾಗವಹಿಸಲು ಹೊರಟಿದ್ದಾನೆ.  ಮೊದಲ ಬಾರಿ ವಿದೇಶ ಪ್ರಯಾಣ ಮಾಡುತ್ತಿರುವುದರಿಂದ  ತನಗೆ ಅಲ್ಲಿಗೆ ಹೋಗುವ  ಯಾರಾದರೂ ಇನ್ನೊಬ್ಬರು ಪ್ರಯಾಣಿಕರ  ಜತೆಗೆ ಟಿಕೆಟ್ ಮಾಡಿಸಬೇಕೆಂದು  ಏಜೆಂಟರಲ್ಲಿ ಕೇಳಿಕೊಂಡ ಪ್ರಕಾರ  ಆತನಿಗೆ ಸಿಗುವ ಜತೆಗಾರ  ಅತಿ ವಿಚಿತ್ರ ಸ್ವಭಾವದ ಧಮ್ಮಲಾಲ್ ಛೋಪ್ರಾ.  ಅವನು ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕನಲ್ಲ.  ಒಬ್ಬ ವ್ಯಾಪಾರಿ.  ಸ್ವಂತ ಆಸಕ್ತಿಯಿಂದ ಎಂ.ಬಿ.ಎ.ಕಲಿತು  ಸಂಶೋಧನೆ ಮಾಡಿ ಪಿ.ಹೆಚ್.ಡಿ.ಪಡೆದವನು. ಆದರೆ ಆತ ಆರಂಭದಿಂದಲೂ ಬಹಳ ವಿಚಿತ್ರವಾಗಿ ಮಾತನಾಡುವುದನ್ನು ನಿರೂಪಕ ಗಮನಿಸುತ್ತಾನೆ.  ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದ ಅವನು ಹಿಂದಿಯಲ್ಲೇ ಸಂಭಾಷಿಸುತ್ತಾನೆ.  ಹಿಂದಿ ಸರಿಯಾಗಿ ಮಾತನಾಡಲಾಗದ ತೆಲುಗಿನವನಾದ ನಿರೂಪಕ ಇಂಗ್ಲಿಷ್ ಮತ್ತು ಹಿಂದಿ ಬೆರೆಸಿ ಹೇಗೋ ನಿಭಾಯಿಸುತ್ತಾನೆ.  ಆಮ್‌ಸ್ಟರ್‌ಡಾಂನಲ್ಲಿ  ಅದ್ಭುತಗಳು  ಸಂಭವಿಸುತ್ತವೆ, ನೋಡುತ್ತಿರಿ’ ಎನ್ನುವ ಧಮ್ಮಲಾಲ್ ಛೋಪ್ರಾ  ತನಲ್ಲಿ ಇದೆಲ್ಲವನ್ನೂ ಮುಂದಾಗಿ ತಿಳಿಸುವ ಆರನೇ ಇಂದ್ರಿಯ ಸಕ್ರಿಯವಾಗಿದೆ ಎನ್ನುತ್ತಾನೆ. ಆಮ್‌ಸ್ಟರ್ ನದಿಗೆ ಕಟ್ಟಿದ ಅಣೆಕಟ್ಟಿನ ನಗರಿ ಆಮ್‌ಸ್ಟg ಡಾಂನಲ್ಲಿ   ಜಲದಿಗ್ಭಂಧನದಲ್ಲಿ ನಾವು ಸಿಲುಕಲಿದ್ದೇವೆ’ ಅನ್ನುತ್ತಾನೆ . ಹುಚ್ಚನಂತೆ ಏನೇನೋ ಬಡಬಡಿಸುವ ಆತನ ಮಾತುಗಳು ನಿರೂಪಕನನ್ನು ಗೊಂದಲಕ್ಕೀಡು ಮಾಡುತ್ತವೆ.        ಮೆಕ್ಸಿಕೋದಲ್ಲಿ  ಎಂಟು ದಿನಗಳ ಕಾಲ ಕಳೆದು ದೆಹಲಿಗೆ ಮರಳಿ ಬರುತ್ತಾ ಆಮ್‌ಸ್ಟರ್‌ಡಾಂನಲ್ಲಿ  ಅವರು ೨೪ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಗುತ್ತದೆ.  ಅಲ್ಲಿ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ.  ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕರು ಇಡುವ  ಬಾಂಬುಗಳುಂಟು ಮಾಡಿದ ಅನಾಹುತಗಳಿಂದ  ಆತಂಕಗೊಂಡ ಅಧಿಕಾರಿಗಳು  ಪ್ರತಿಯೊಬ್ಬ ಪ್ರಯಾಣಿಕರನ್ನೂ  ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ.  ಸೆಕ್ಯೂರಿಟಿಗಳು ಭದ್ರತೆಯ ಬಿಗಿಯನ್ನು ಹೆಚ್ಚಿಸಿ ಅನಗತ್ಯ ಪ್ರಶ್ನೆಗಳಿಂದ ಅವರನ್ನು ಮಾನಸಿಕ ಹಿಂಸೆಗೆ ಗುರಿ ಪಡಿಸುತ್ತಾರೆ. ತಿನ್ನಲು ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಅವರು ಬಳಲುತ್ತಾರೆ.  ಅವರನ್ನು ಸೇರಿಸಿಕೊಂಡ ಹೋಟೆಲಿನೊಳಗಿನ ವಾತಾವರಣ  ಭಯಜನಕವಾಗಿರುತ್ತದೆ.  ಅವರು ಹೊಕ್ಕು ಬರುವ ಕತ್ತಲ ಲೋಕ ಇಡಿಯ ಜಗತ್ತನ್ನು ತುಂಬಿರುವ  ಸಂರ‍್ಷದ ಯಾತನೆಯನ್ನು ಪ್ರತಿಬಿಂಬಿಸುತ್ತದೆ. ಕೊನೆಯ ತನಕವೂ ಛೋಪ್ರಾ ತಾನೊಬ್ಬ ಆಧ್ಯಾತ್ಮಿಕ ಗುರು ಎಂಬಂತೆ ರ‍್ತಿಸುತ್ತಾನೆ. ಆದರೆ ನಿರೂಪಕ ಅದನ್ನು ನಂಬುವುದಿಲ್ಲ.  ಈ ಕಾದಂಬರಿ ಆಧುನಿಕ ಜಗತ್ತಿನ ಸ್ಥಿತಿಗೆ ಹಿಡಿದ  ಕನ್ನಡಿಯಂತಿದೆ. ಅನುವಾದದ ಭಾಷೆ ಪ್ರಬುದ್ಧವಾಗಿದೆ ******************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top