ಯುವ ಗಜಲ್ ಕವಿ ಅಕ್ಷತಾ ಕೃಷ್ಣಮೂರ್ತಿ ಅಕ್ಷತಾ ಕೃಷ್ಣಮೂರ್ತಿವಯಸ್ಸು : ೩೯ವೃತ್ತಿ: ಶಿಕ್ಷಕಿಶಿಕ್ಷಣ: ಕನ್ನಡ ಸ್ನಾತಕೋತ್ತರ ಪದವಿ ಕೃತಿಗಳು: ಹನ್ನೆರಡು ದಡೆ ಬೆಲ್ಲಹಾಲಕ್ಕಿ ಒಕ್ಕಲಿಗರುಮಧುರಚನ್ನಕೋಳ್ಗಂಬಹಾಲಕ್ಕಿ ಕೋಗಿಲೆಕೇದಿಗೆಯ ಕಂಪುನಾನು ದೀಪ ಹಚ್ಚಬೇಕೆಂದಿದ್ದೆ ಅಕ್ಷತಾ ಕೃಷ್ಣಮೂರ್ತಿಯವರ ಒಂದು ಗಜಲ್ ತಮ್ಮ ಓದಿಗಾಗಿ ಒಂದೆಒಂದು ಸಾರಿ ಪ್ರೀತಿಸುವೆ ಎಂದ್ಹೇಳಿ ಬಿಡು ಮಳೆಯಾಗಿ ಸುರಿದುಬಿಡುವೆಒಲವ ಪರಿಮಳವಾಗಿ ಬೀರಿ ಬಿಡು ತಂಗಾಳಿಯಾಗಿ ನಿನ್ನ ಸುತ್ತುವರಿಯುವೆ ಒಂದೆರಡು ಪದಗಳಿಗೆ ನೀ ಪ್ರೀತಿತುಂಬಿದರೆ ನಾ ಮಾತಾಡಿಬಿಡುವೆಉಸಿರು ಬಿಗಿಹಿಡಿದು ನಿನಗಾಗಿ ಕಾಯುವುದೇ ಪುಣ್ಯವೆಂದುಜೀವಿಸುವೆ ಒಂದೆಒಂದು ನೋಟಕೊನೆಯ ಬಾರಿಎಂಬಂತಾದರೂ ನೋಡಿಬಿಡುವೆನೀನು ಬಂದು ಮಾತನಾಡುವಕ್ಷಣಕೆ ಹಾತೊರೆಯುವುದನು ಮುಂದೂಡುವೆ ಒಂದುಕ್ಷಣ ನಿನ್ನ ಮುಂಗುರುಳು ತೀಡಲು ಬಿಡು ಸಿಕ್ಕಿದ್ದೆ ಪುಣ್ಯಎನ್ನುವೆಆ ನಿನ್ನ ಮೆತ್ತನೆಕೆನ್ನೆ ನಿಧಾನಒತ್ತಿಒಂದೆಒಂದು ಮುತ್ತನಿಡುವೆ ಎಷ್ಟು ಕಾಡುವೆಯೆ ನಿನ್ನ ಪಡೆಯುವಆಸೆಯನ್ನೆ ನೀನೆ ಮೆಟ್ಟಿರುವೆಹೃದಯ ಬಲು ನಾಜೂಕು, ಚುಚ್ಚಿ ನೋವಾಗಿ ಪ್ರತಿ ದಿನ ಸಾಯುತಿರುವೆ ************************************
ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!
ಲೇಖನ ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! ಸೈಯದ್ ಹಜರತಶಾ ಕಾದರಿಯವರು ಸೂಫಿ ಸಂತರಲ್ಲೊಬ್ಬರು. ಇವರು ಆಗಿನ ಧಾರವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುಲಗೂರಲ್ಲಿ ನೆಲೆ ಕಂಡುಕೊಂಡವರು. ಇವರ ಜನನ, ಬಾಲ್ಯ, ಬದುಕು ಹಾಗೂ ಈ ಸಂತರ ಮರಣಗಳೆಲ್ಲವೂ ಪೂರ್ಣ ವಿಶಿಷ್ಠವಾದವುಗಳು ಆಗಿದ್ದವು… ಸೈಯದ್ ಹಜರತಶಾ ಕಾದರಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಬಂಕಾಪುರದಲ್ಲಿ ಜನಿಸಿದವರು. ಇವರ ತಂದೆಯ ಹೆಸರು ಸೈಯದ್ ಖಾದರಬಾಶಾ ಕಾದರಿ ಬಿಜಾಪೂರ. ತಾಯಿಯ ಹೆಸರು ಸೈಯದಾ ವಲಿಮಾಬೀಬಿ. ಸೈಯದ್ ವಲಿಮಾಬೀಬಿಯವರು ಅಲ್ಲಾವುದ್ದೀನಶಾ ಕಾದರಿಯವರ ಹಿರಿಮಗಳು. ಸೈಯದ್ ಹಜರತಶಾ ಕಾನರಿಯವರು ಇನ್ನೂ ತಾಯಿಯ ಹೊಟ್ಟೆಯಲ್ಲಿ ಇರುವಾಗ ತಂದೆ ಸೈಯದ್ ಖಾದರಬಾಶಾ ತೀರಿಕೊಂಡರು. ತಾಯಿ ಸೈಯದ್ ವಲಿಮಾಬೀಬಿಯವರು ಸೈಯದ್ ಹಜರತಶಾ ಕಾದರಿಯವರಿಗೆ ಜನ್ಮ ಕೊಟ್ಟು ಅವರೂ ತೀರಿದರು. ಹೀಗೆ ಸೈಯದ್ ಹಜರತಶಾ ಕಾದರಿಯವರು ಇನ್ನೂ ಕೂಸು ಇರುವಾಗಲೇ ತಂದೆ-ತಾಯಿ ತೀರಿದರು. ಇಂತಹ ಕಡು ದೃಶ್ಯಗಳನ್ನು ಕಂಡು ಕೂಸು ಸೈಯದ್ ಹಜರತಶಾ ಕಾದರಿಯವರ ತಾಯಿಯಾದ ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಣತಮ್ಮಿಂದಿರು ಬಹು ದುಃಖತರಾದರು. ಅವರ ಮನೆಯೆಲ್ಲ ಶೋಕಸಾಗರದಲ್ಲಿ ಮುಳುಗಿತು… ಆದರೆ ಕೂಸು ಅಂದರೆ ಸೈಯದ್ ಹಜರತಶಾ ಕಾದರಿಯವರು ಬಹು ಸುಂದರವಾಗಿದ್ದರೂ ಈ ಮಗುವಿನ ಕಡೆಗೆ ಈ ಲಕ್ಷ್ಹವಹಿಸದೇ ಹೋದರು ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಷತಮ್ಮಂದಿರು… ಮೇಲಿಂದ ಮೇಲೆ ಒದಗಿ ಬರುತ್ತಿದ್ದ ದುಃಖ-ದುಮ್ಮಾನ ಮತ್ತು ದುರ್ಘಟನೆಗಳಿಂದ ಬೇಸತ್ತು ಬೆಂಡಾಗಿ ಹೋಗಿದ್ದರು ಸೈಯದ್ ಹಜರತಶಾ ಕಾದರಿಯವರ ತಾಯಿಯ ತಂಗಿಯರು ಮತ್ತು ಅಣ್ಣತಂಮ್ಮಂದಿಯರು. ಹೀಗಿರುವಾಗ ಕೂಸಾದ ಸೈಯದ್ ಹಜರತಶಾ ಕಾದರಿಯವರನ್ನು ಸೈಯದ್ ವಲಿಮಾಬೀಬಿಯವರ (ಸೈಯದ್ ಹಜರತಶಾ ಕಾದರಿಯವರ ತಾಯಿ) ಅಣ್ಣನಾದ ಒಬ್ಬ ಸೈಯದ್ ಹಜರತಶಾ ಕಾದರಿಯವರವರನ್ನು ಇನ್ನೂ ಕೂಸು ಇರುವಾಗಲೇ ಹಿತ್ತಲದಲ್ಲಿದ್ದ ಒಂದು ಸೀತಾಫಲದ ಗಿಡದ ಬುಡದಲ್ಲಿ ಮಲಗಿಸಿ ಬಂದು ಬಿಟ್ಟ. ತದನಂತರ ಇವರ ಅಂದರೆ ಸೈಯದ್ ಹಜರತಶಾ ಕಾದರಿಯವರ ತಾಯಿ ದಿವಸಕಾರ್ಯ ಮುಗಿಸಿದರು. ಅಲ್ಲಿಯವರೆಗೂ ಈ ಸೈಯದ್ ಹಜರತಶಾ ಕಾದರಿ ಕೂಸು ಅಲ್ಲಿಯೇ ಸೀತಾಫಲದ ಗಿಡದ ಬುಡದಲ್ಲಿಯೇ ಮಲಗೇ ಇತ್ತು. ವಲಿಮಾಬೀಬಿಯವರ ದಿವಸ ಕಾರ್ಯವೆಲ್ಲ ಮುಗಿದು ಎರಡು-ಮೂರು ದಿನಗಳಾದರೂ ಆ ಕೂಸಿನತ್ತ ಇವರ ಗಮನವೇ ಇರಲೇ ಇಲ್ಲ. ನಾಲ್ಕನೇ ದಿನ ಫಾತೀಮಾಬೀಬಿ ಎಂಬವರು ಹಿತ್ತಲಿಗೆ ಹೋದರು. ಅಲ್ಲಿ ಹಸುಗೂಸು ಸೈಯದ್ ಹಜರತಶಾ ಕಾದರಿಯವರ ನೆಲವನ್ನೇ ಹಾಸಿಗೆ, ಆಕಾಶವೇ ಹೊದುಗೆ ಮಾಡಿಕೊಂಡು ಸೃಷ್ಟಿಕರ್ತನ ಆಶ್ರಯ ಪಡೆದು ನಸುನಗುತ್ತ ಮಲಗಿತ್ತು. ಆಗ ಆ ಸೈಯದ್ ಫಾತೀಮಾಬೀಬಿ ದೃಷ್ಟಿ ಆ ಮಗುವಿನತ್ತ ಹೊರಳಿತು. ಆಗ ಆ ಫಾತೀಮಾಬೀಬಿ ಲಗುಬಗೆಯಿಂದ ಆ ಮಗುವನ್ನು ಎತ್ತಿಕೊಂಡು ಎದೆಗೆ ಅವಚಿಕೊಂಡು ಮೇರೆ ಲಾಲ (ನನ್ನ ಕಂದ) ಎಂದು ಹೃದಯದಿಂದಲೇ ಉಕ್ಕೇರಿ ಬಂದ ಕಣ್ಣೀರನ್ನು ಸುರಿಸುತ್ತಾ ನಿನ್ನ ತಾಯಿ ಇದ್ದಿದ್ದರೆ ಇಂತಹ ಸ್ಥಿತಿಯಲ್ಲಿ ಬಿಡುತ್ತಿದ್ದಳೆ ಎಂದು ಗೋಳಾಡುತ್ತ ಒಳಗೊಯ್ದಳು ಮಗುವನ್ನು. ಮಗು ಅಂದರೆ ಸೈಯದ್ ಹಜರತಶಾ ಕಾದರಿಯು ಮೂರ್ನಾಲ್ಕು ದಿನಗಳಿಂದ ಹಾಲಿಲ್ಲದೇ ಹಾಗೇ ನಸುನಗುತ್ತ ಹಿತ್ತಲಲ್ಲೇ ಮಗಿತ್ತು. ಆದರಿಂದ ಹಾಲುಣಿಸಲು ಫಾತೀಮಾಬೀಬಿ ಪ್ರಯತ್ನ ಮಾಡಿದಳು. ಹುಹುಂ ಹಾಲನ್ನು ಮಗು ಸೈಯದ್ ಹಜರತಶಾ ಕಾದರಿಯು ಹಾಲುಣುಲೇ ಇಲ್ಲ. ಮತ್ತೆ ಒಂದಿಬ್ಬರು ಪ್ರಯತ್ನಿಸಿದರು. ಆದರೂ ಮಗುವಿಗೆ ಹಾಲು ದಕ್ಕಲೇ ಇಲ್ಲ. ಆಗ ಎಲ್ಲರೂ ಚಿಂತಾಕ್ರಾಂತರಾದರು ಮಗುವಿಗೆ ಹಾಲುಣಿಸಲು ಯಾರನ್ನು ತರಬೇಕೆಂದು. ಹೀಗೆಯೇ ಮಗುವಿನ ಮಾವ ಅಂದರೆ ಸೋದರಮಾವ ಮಗುವನ್ನು ಎತ್ತಿಕೊಂಡನು. ಮಗು ಮಾವನ ಮೊಲೆಗೆ ಬಾಯಿಹಚ್ಚಿತು. ಆಗ ಲೊಚಲೊಚನೆ ಹಾಲು ಮಾವನ ಮೂಲೆಗಳಿಂದ ಬರಲಾರಂಭಿಸಿತು. ಇಂತಹ ವಿಚಿತ್ರ ಘಟನೆ ನಡೆಯಿತು. ಹೀಗೆಯೇ ಮಗು ಮಾವನ ಮೊಲೆಹಾಲನ್ನು ಕುಡಿದೇ ಬೆಳೆಯತೊಡಗಿದ್ದು ವಿಚಿತ್ರವಾದ ಘಟನೆ ನಡೆಯಿತು… ಪ್ರಾರಂಭದಿಂದಲೂ ಹೀಗೆಯೇ ವಿಲಕ್ಷಣವಾಗಿ ಬೆಳೆದು, ದೊಡ್ಡವನಾದ ಸೈಯದ್ ಹಜರತಶಾ ಕಾದರಿಯು. ಸೋದರ ಮಾವಂದಿರಾದ ಸೈಯದ್ ಆಬ್ದುರ್ರಜಾಕ ಕಾದರಿಯವರ ಆಶ್ರಯದಲ್ಲೇ ಮಗುವಿನ ಬಾಲ್ಯದ ದಿನಗಳುರುಳಿದವು. ಸೋದರ ಮಾವಂದಿರಿಂದ ಮುಂದೆ ಪಾಠ ಕಲಿಯತೊಡಗಿದ ಸೈಯದ್ ಹಜರತಶಾ ಕಾದರಿಯವು. ಪ್ರಾಥಮಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಸೋದರ ಮಾವಂದಿರಿಂದ ಕಲಿತು ಪೂರ್ಣಗೊಂಡ. ಯಾವಾಗ ಹನ್ನೆರಡು ವರ್ಷದವನಾದನೋ ಆವಾಗ ಸೈಯದ್ ಹಜರತಶಾ ಕಾದರಿಯು ಆಟ-ಪಾಠ ನಿತ್ಯದ ಕೆಲಸವಾಯಿತು. ಒಂದು ದಿನ ಸೈಯದ್ ಹಜರತಶಾ ಕಾದರಿಯು ಬೀದಿಯಲ್ಲಿ ಸುತ್ತುತ್ತಿರುವಾಗ ಅಲ್ಲಿ ಹಾಯ್ದು ಹೋಗುವ ಸೀಪಾಯಿಗಳನ್ನು ನೋಡಿದ. ಅವರು ಖಾಕಿ ಉಡುಪು ಧರಿಸಿ ತಲೆಯ ಮೇಲೆ ಮುಂಡಾಸು ಧರಿಸಿ ಅವರು ಹೋಗುವುದು ಶೋಭಿಸುತ್ತಿತ್ತು. ಅವರ ಉಡುಪಿನ ಮೇಲೆ ಶತ್ತ್ರಸ್ತಗಳೊಂದಿಗೆ ಆಡಂಬರದಿಂದ ಹೆಜ್ಜೆ ಹಾಕುತ್ತಿರುವುದನ್ನು ಕಂಡ ಸೈಯದ್ ಹಜರತಶಾ ಕಾದರಿಗೆ ಆಡಂಬರದ ಕಡೆಗೆ ಮನಸ್ಸು ಹೊರಳಿತು. ಆ ಸಿಪಾಯಿಯವಂತಯೇ ಪೋಷಕು ಧರಸಿ ಊರನ್ನೆಲಾ ಸುತ್ತಿ ಬಂದ ಸೈಯದ್ ಹಜರತಶಾ ಕಾದರಿಯು. ಮನೆಗೆ ಬಂದೊಡನೆ ಸೋದರಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಆ ಪೋಷಾಕು ನೋಡಿ ಬೆರಗಾದರು. ಆಗ ಅವರ ಕಣ್ಣಿನಿಂದ ಕಂಬನಿ ಉದುರತೊಡಗಿತು. ಆಗ ಸೈಯದ್ ಹಜರತಶಾ ಕಾದರಿಯು ಕೇಳಿದ ಮಾವನವರೆ ಏಕೆ ಅಳತೊಡಗಿದಿರಿ ಎಂದು. ಆಗ ಮಾವ ಅಬ್ದುರ್ರಜಾಕ ಕಾದರಿಯವರು ಹೇಳುತೊಡಗಿದರು. ಮಗನೇ ನಮ್ಮಂತಹ ಫಕೀರ್ ರರಿಗೆ ಈ ತರದ ಉಡುಪು ಭೂಷಣವಲ್ಲ.ನಮಗೆ ಕಂಬಳಿಯೇ ಲೇಸು. ಲೆಪ್ ರೈಟ್ ನಮಗೆ ಬೇಡ. ಸರಳತೆಯ ಉಠ್ ಬೈಠ್ ನಮಗೆ ಬೇಕು. ಇದರಲ್ಲಿಯೇ ನಮಗೆ ತೃಪ್ತಿ ಇದೆ. ಆಡಂಬರದ ಉಪಕರಣ, ಸಾಮಗ್ರಿಗಳು ಬೇಡ. ಫಕೀರರಂತಹ ಸುಗಮ ವರ್ತನೆ ನಮಗೆ ಬೇಕಾಗಿದೆ. ನಮ್ಮ ಸಲುವಾಗಿ ನಾವೇ ಧಾನ್ಯ ಸಂಗ್ರಹಿಸಬೇಕು. ನಮಗೆ ಈ ಭೂಮಿಯೇ ಹಾಸಿಗೆ, ಗಿಡದೆಲೆಯೇ ಹೊದಿಗೆ. ಅಡವಿ ಗಿಡಮೂಲಿಕೆಯೇ ನಮ್ಮ ಆಹಾರ. ಇದರ ಹೊರತು ಅದ್ಯಾವುದೂ ನಮಗೆ ಬೇಡ. ಹೀಗೆಯೇ ಫಕೀರ್ ನ ಬದುಕಿನ ಲಕ್ಷಣಗಳನ್ನು ತಿಳಿಹೇಳಿದರು ಮಾವ ಅಬ್ದುರ್ರಜಾಕ ಕಾದರಿಯವರು. ನೀವು ಹಜರತ್ ಪೈಗಂಬರ್ ರ ಮಗಳ ಸಂತತಿ. ಆದರೆ ಹಜರತ್ ಮೌಲಾ ಅಲಿಯವರ ಮಕ್ಕಳ ಸಂತತಿಯಲ್ಲಿದ್ದೀರಿ. ಅವರ ಪಕ್ಷ ವಹಿಸಬೇಕಾಗಿತ್ತು. ಪರಂತು ನೀವು ನನ್ನ ಹತ್ತಿರ ನಿರಾತಂಕವಾಗಿ ಬಂದಿರುವಿರಲ್ಲ ಎಂದು ದುಃಖಿತ ಹೃದಯದಿಂದ ಅಂದರು. ಆ ಮರುಕ್ಷಣದಲ್ಲಿಯೇ ಸೈಯದ್ ಹಜರತಶಾ ಕಾದರಿಯವರು ತಮ್ಮ ಆಡಂಬರದ ದಿರಿಸು ತೆಗೆದೊಗೆದರು. ನಮ್ರತೆಯಿಂದ ಮಾವ ಅಬ್ದುರ್ರಜಾಕ ಕಾದರಿಯವರಿಗೆ ಹೇಳಿದರು. ಮಾವನವರೇ ನನಗೆ ಜ್ಞಾನನೋದಯ ಮಾಡಿಸಿದಿರಿ. ನಿಮ್ಮ ಉಪದೇಶದಂತೆಯೇ ನಡೆಯುವೆ. ಹಾಗೆ ಸೈಯದ್ ಹಜರತಶಾ ಕಾದರಿಯವರು ಜ್ಞಾನೋದಯಗೊಳ್ಳುತ್ತಿದಂತೆಯೇ ಅವರಿಗೆ ಆಗಲೇ ಸೈಯದ್ ಅಬ್ದುರ್ರಜಾಕ ಕಾದರಿಯವರು ಖಿಲಾಫತ್ ಅಂದರೆ ದೀಕ್ಷೆ ಕೊಟ್ಟರು. ಹಾಗೂ ಕಾದರಿಯವರನ್ನು ಆಶೀರ್ವದಿಸಿದರು ಅಬ್ದುರ್ರಜಾಕ ಕಾದರಿಯವರು… ಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಧರ್ಮ ಗುರು… ಹೀಗೆಯೇ ಸೈಯದ್ ಹಜರತಶಾ ಕಾದರಿಯರಿಗೆ ತಮ್ಮ ಆತ್ಮ ಮತ್ತು ಪರಮಾತ್ಮನ ಅರಿವು ಆಯಿತು. ಯಾವನು ತನ್ನ ಆತ್ಮವನ್ನು ಗುರುತಿಸುವನೋ ಅವನೇ ದೇವರನ್ನೂ ಗುರುತಿಸುವನು. ಯಾವನು ಅರಿಷಡವರ್ಗಗಳನ್ನು ಅಂದರೆ ಕಾಮ, ಕ್ರೋಧ, ಮೋಹ, ಲೋಭ, ಮದ ಮತ್ತು ಮತ್ಸರಗಳನ್ನು ಮೆಟ್ಟಿ ನಿಲ್ಲುವುನೋ ಆವಾಗ ಮಲಿನ ಪದಾರ್ಥಗಳಿಂದ ದೂರವಾಗಿ ನಿರ್ಮಲವಾಗುವುನು. ಮಾನವ ಜನ್ಮದ ಮುಖ್ಯ ಉದ್ದೇಶಗಳಾದರೂ ಹೀಗಿರುವುವು– ೧) ತನ್ನನ್ನು ತಾನು ಅರಿಯುವುದು, ೨) ಜನರ ಹಕ್ಕುಬಾದ್ಯಗಳನ್ನು ಅರಿತುಕೊಂಡು ಜೀವನ ನಡೆಸುವುದು, ೩) ತನ್ನನ್ನು ನಿರ್ಮಾಣ ಮಾಡಿದ ಜಗದೀಶನನ್ನು ಅರಿಯುವುದು. ಇವುಗಳನ್ನು ಪಾಲಿಸಿದರೆ ಸತ್ಯಜ್ಞಾನದ ಅರಿವು ಸುಗಮವಾಗುವುದು. ಹೀಗೆಯೇ ಹೇಳುತ್ತಲೇ ಹೋಗಿದ್ದಾರೆ ಸೈಯದ್ ಹಜರತಶಾ ಕಾದರಿಯವರು… ಮುಂದೆ ಸೈಯದ್ ಹಜರತಶಾ ಕಾದರಿಯವರು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರ ಮಗಳು ಸೈಯದ್ ಮರಿಯಂ ಬೀಬಿಯವರನ್ನು ಮದುವೆ ಆಗುತ್ತಾರೆ. ಮಾವ ಸೈಯದ್ ಅಬ್ದುರ್ರಜಾಕ ಕಾದರಿಯವರು ಇವರಿಗೆ ಸೋದರಮಾವನೂ ಹೌದು. ಧರ್ಮ ಗುರುವೂ ಹೌದು. ಅಲ್ಲದೇ ಮಗಳು ಮರಿಯಂ ಬೀಬಿಯವರ ತಂದೆ ಅಂದರೆ ಸೈಯದ್ ಹಜರತಶಾ ಕಾದರಿಯವರಿಗೆ ಮಗಳು ಕೊಟ್ಟವರೂ ಹೌದು. ನಂತರ ಸೈಯದ್ ಹಜರತಶಾ ಕಾದರಿಯವರಿಗೆ ತಮ್ಮ ಕಕ್ಕಂದಿರ ಸಂದರ್ಸಿಸಿ ಬರುವ ಅಪೇಕ್ಷೆಯಂತೆ ಮಾವನವರ ಅಪ್ಪಣೆಯಂತೆ ಬಿಜಾಪುರಕ್ಕೆ ಹೋಗಿ ಬರುವ ಅನುವಾಗಿ ತಮ್ಮ ಕಕ್ಕಂದಿರ ಕಂಡು ಬರುತ್ತಾರೆ. ಹಾಗೆಯೇ ಮತ್ತೊಬ್ಬ ಕಕ್ಕನಾದ ಸೈಯದ್ ದಸಾವಲಿ ಕಾದರಿಯವರನ್ನು ಭೇಟಿ ಮಾಡಲು ಅದೇ ಬಿಜಾಪೂರ ಜಿಲ್ಲೆಯ ಉಕ್ಕಲಿ ಎಂಬ ಗ್ರಾಮಕ್ಕೆ ಹೋಗಿ ಬರುವರು… ಅಲ್ಲಿಂದ ಮುಂದೆ ತಿರುಗಿ ಶಿಗ್ಗಾವಿ-ಸವಣೂರ ತಾಲೂಕು ಬಂಕಾಪುರಕ್ಕೆ ಬರುವರು. ಬಂಕಾಪುರಕ್ಕೆ ಬಂದು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರಿಗೆ ಭೇಟಿಯಾಗುವರು… ಅಲ್ಲಿಂದ ಮುಂದೆ ಸೈಯದ್ ಹಜರತಶಾ ಕಾದರಿಯವರು ಹೇಳದೇಕೇಳದೇ ಕಾಣೆಯಾಗುತ್ತಾರೆ. ಯಾವಾಗಲೂ ದೇವರ ಧ್ಯಾನದಲ್ಲಿ ಇರುತ್ತಿದ್ದ ಸೈಯದ್ ಹಜರತಶಾ ಕಾದರಿಯವರು ತಮ್ಮ ವಾಸಸ್ಥಳವನ್ನು ಬಿಟ್ಟು ಬಂಕಾಪುರ ಮತ್ತು ಸವಣೂರ ನಡುವೆ ಬರುವ ಹುರುಳಿಕೊಪ್ಪಿ ಬೆಟ್ಟಕ್ಕೆ ತೆರಳುವರು. ಬೆಟ್ಟದ ಗುಹೆಯೇ ತಮ್ಮ ಏಕಾಂತಕ್ಕೆ ಯೋಗ್ಯವಾದ ಸ್ಥಳವೆಂದು ಅಲ್ಲಿಯೇ ತಮ್ಮ ಬಿಡಾರವನ್ನು ಹೂಡುವರು. ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗುಹೆಯಲ್ಲಿ ಕೂತುಕೊಂಡಿದ್ದ ಸಂಗತಿ ಯಾರಿಗೂ ತಿಳಿಯಲಿಲ್ಲ. ಅವರ ಶಿಷ್ಯರು ಸೈಯದ್ ಹಜರತಶಾ ಕಾದರಿಯವರನ್ನು ಗುಡ್ಡ, ಬೆಟ್ಟ, ಕಾಡು-ಮೇಡನ್ನೆಲ್ಲ ಹುಡುಕಿ ಸುಸ್ತಾದರು. ಕಡೆಗೆ ಶಿಷ್ಯರೆಲ್ಲ ತಮ್ಮ ಮನೆಗೆ ಮರಳಿದರು. ಹೀಗೆಯೇ ಈ ಆಂದೋಲನದಲ್ಲಿ ಪೂರ್ಣ ಏಳು ವರ್ಷಗಳು ಗತಿಸಿದವು. ತದನಂತರ ಹುರುಳಿಕುಪ್ಪಿಯ ಗುಹೆಯಿಂದ ಸೈಯದ್ ಹಜರತಶಾ ಕಾದರಿಯವರು ಹೊರಬಂದರು. ಕೈಕಾಲಿನ ಉಗುರುಗಳು ಬೆಳೆದಿದ್ದವು. ತಲೆ ಮೇಲಿನ ಕೂದಲು ಚದುರಿದ್ದವು.ಇವರು ಗುಹೆಯಿಂದ ಹೊರಗೆ ಬಂದಾಗ ಸಮೀಪದಲ್ಲಿಯೇ ಒಬ್ಬ ಹಿಂದೂವೊಬ್ಬಳು ದನ ಕಾಯುತ್ತಿದ್ದಳು. ಸೈಯದ್ ಹಜರತಶಾ ಕಾದರಿಯವರನ್ನು ಕಂಡು ವಿಧೇಯತೆಯಿಂದ ಅವಳು ನಮಸ್ಕರಿಸಿದಳು. ಸೈಯದ್ ಹಜರತಶಾ ಕಾದರಿಯವರು ಆಕೆಯ ಮೇಲೆ ಕೃಪೆ ತೋರಿದರು. ತಾಯಿ ನನಗೆ ಬಹಳ ಹಸಿವೆಯಾಗಿದೆ ಮಜ್ಜಿಗೆ-ಅಂಬಲಿ ತಂದು ಕೊಡುವೆಯಾ ಎಂದು ಕೇಳಿದರು. ಆಗ ಆ ಹೆಣ್ಣು ಮಗಳು ಊರಿಗೆ ಹೋಗಿ ಎರಡು ಬಟ್ಟಲು ತುಂಬಾ ಮಜ್ಜಿಗೆ-ಅಂಬಲಿಯನ್ನು ತಂದುಕೊಟ್ಟಳು. ಸೈಯದ್ ಹಜರತಶಾ ಕಾದರಿಯವರು ಅದನ್ನು ಸೇವಿಸದರು. ಆಗ ಸೈಯದ್ ಹಜರತಶಾ ಕಾದರಿಯವರು ಆಕೆಗೆ ಮತ್ತು ಆಕೆಯ ವಂಶದವರಿಗೆ ಆಶೀರ್ವಾದ ಮಾಡಿದರು. ಅಂದಿನಿಂದ ಅವರು ಸುಖಶಾಂತಿಯಿಂದ ಇರತೊಡಗಿದರು… ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗವಿಯ ಮುಂಭಾಗದಲ್ಲಿ ಇರತೊಡಗಿದರು. ಅನೇಕ ಜನ ಭಕ್ತರು ಬಂದು ದರ್ಶನ ಪಡೆಯುತ್ತಿದ್ದರು. ಆ ಭಕ್ತರ ಪೈಕಿ ಸವಣೂರ ನವಾಬ್ ನೂ ಸೇರಿಕೊಂಡ. ಪರಸ್ಪರ ಮಾತುಕತೆಯಾದ ತರುವಾಯ ಆ ನವಾಬ್ ಹಕೀಮ್ ಖಾನಸಾಹೇಬನು ಸೈಯದ್ ಹಜರತಶಾ ಕಾದರಿಯವರನ್ನು ಬೇಡಿಕೊಂಡ ತಾವು ಸವಣೂರಿಗೆ ಬರಬೇಕೆಂದು ಹಲಬತೊಡಗಿದ. ಮೊದಲು ಕಾದರಿಯವರು ಒಪ್ಪಲಿಲ್ಲ. ಕಡೆಗೆ ಆ ನವಾಬ್ ಬಹಳ ಬೇಡಿಕೊಂಡಿದ್ದರಿಂದ ನವಾಬ್ ನ ಸಂಗಡ ಸವಣೂರಿಗೆ ಹೋದರು. ಅಲ್ಲಿಯ ಜನರು ಕಾದರಿಯವರನ್ನು ಕಂಡು ಬಹು ಸಂತೋಷಗೊಂಡರು. ಭಕ್ತಿಯಿಂದ ಬೇಡಿಕೊಂಡರು. ಇಂತಹ ಸನ್ನಿವೇಶದಲ್ಲಿ ಅನುಚಿತ ಘಟನೆಯೊಂದು ನಡೆಯಿತು. ಅದು ಹೀಗಿದೆ– ಒಂದು ದಿನ ನವಾಬ್ ಹಕೀಮ್ ಖಾನಸಾಹೇಬನಿಂದ ಒಂದು ದುರ್ಘಟನೆ ನಡೆಯಿತು. ಅದೇನೆಂದರೆ ನವಾಬ್ ಹಕೀಮ್ ಖಾನ್ ಸಾಹೇಬ ತಮ್ಮ ಸೇವಕರಿಗೆ ಹೀಗೆ ಅಪ್ಪಣೆ ಮಾಡಿದನು. ರೂಪವತಿ ತರುಣಿಯರನ್ನು ಹಿಡಿದು ತರಲು ಆಜ್ಞೆ ಮಾಡಿದನು. ಆ ಪ್ರಕಾರ ಅನುವಾರ್ಯವಿಲ್ಲದೇ ಸೇವಕರು ಹುಡುಕುತ್ತ, ಹುಡುಕುತ್ತಾ ಕಾದರಿಯವರ ಶಿಷ್ಯಳಾದ ಸೈಯದ್ ವಂಶದ ಒಬ್ಬ ಅಬಲೆಯ ಮನೆಗೆ ಬಂದರು. ಅವಳ ಮಗಳನ್ನು ಒತ್ತಾಯದಿಂದ ಸ್ವಾಧೀನ ಪಡಿಸಿಕೊಂಡರು. ಆಕೆ ಅಳುತ್ತ ಹೀಗೆ ಮಾಡಬೇಡರೆಂದು ಎಷ್ಟು ಕೇಳಿದರೂ ಆ
ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! Read Post »
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ ಕಡೆ ಸೆಳೆಯದಿರು ಇನಿಯ ಬರುವ “ಪ್ರಭೆ” ಎದೆಯಲಿ ಅನುರಾಗದ ಕಡಲನು ಉಕ್ಕಿಸುವ ಚಂದಿರ ಅವನುಚಕೋರ ಬೆಳದಿಂಗಳ ನುಂಗಿ ಕತ್ತಲು ಮಾಡದಿರು ಇನಿಯ ಬರುವ. *******
ಗಜಲ್
ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ ಘಳಿಗೆಯಲಿ ಕೆಲವರು ಬದುಕ ಪಾಠ ಕಲಿಸುವವರು ಮರೆಯಲಾಗುವುದಿಲ್ಲ ಏಕೆ? *******************************
ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ
ಪುಸ್ತಕ ಸಂಗಾತಿ ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ ಶಿವಪುತ್ರ ಅಜಮನಿಯವರು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಲೇ ಸಮಾಜ ಚಿಂತಕರಾಗಿ ಹೊರಹೊಮ್ಮಿದವರು. ಕ್ರಿಯಾಶೀಲ ಬರಹಗಾರರು. ಸಿಂಗಾಪುರ,ಅಬುದಾಬಿಗಳಂತಹ ವಿಶ್ವಕನ್ನಡ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಯಾವುದೇ ಕೀರ್ತಿ. ಸನ್ಮಾನಕ್ಕೆ ಎಂದು ಆಸೆ ಪಟ್ಟವರಲ್ಲ ತುಂಬ ಸರಳ ಜೀವಿ. ಬಡತನದಲ್ಲೆ ಬೆಳೆದರೂ ಅವರ ಸಾಧನೆಗೆ ಅವರ ವಿದ್ವತ್ತಿಗೆ ಬಡತನ ಎಂದು ಅಡ್ಡಿಯಾಗಿಲ್ಲದಂತೆ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದವರು ಶಿವಪುತ್ರ ಅಜಮನಿ. ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ಕಾವ್ಯ, ಕತೆ, ನಾಟಕಗಳನ್ನು ಬರೆದಿದ್ದಾರೆ. ಕೆಲವು ತಮ್ಮ ಬರಹಗಳನ್ನೇ ಕಿರುಚಿತ್ರವನ್ನಾಗಿಸಿ ಸ್ವತಃ ತಾವೇ ಅಭಿನಯಿಸಿದ್ದಾರೆ. ಇಂತಹ ಚಿತ್ರಗಳು ಯಶಸ್ಸನ್ನು ಕೂಡಾ ಪಡೆದುಕೊಂಡಿವೆ. ಅಪರೂಪದಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಬರಹ ಅವರ ಆತ್ಮಕಥೆ “ ಹೊಲಗೇರಿಯಿಂದ ಹೊರದೇಶಕ್ಕೆ” ಕಥನದ ಶಿರ್ಷಿಕೆಯೇ ಹೇಳುವ ಹಾಗೆ ಇಲ್ಲಿ ದಲಿತ ಸಂವೇದನೆಯನ್ನು ಅನಾವರಣಗೊಳಿಸಿದ್ದಾರೆ. ಕಾವ್ಯ ಬರಹದಿಂದ ಗದ್ಯದ ಕಡೆ ತಮ್ಮ ಒಲವನ್ನು ತೋರಿಸಿ ಆತ್ಮ ಕಥನ ಲೋಕಕ್ಕೆ ಪ್ರವೇಶ ಪಡೆದುಕೊಂಡ ಲೇಖಕ ಶಿವಪುತ್ರ ಅಜಮನಿ. ಹೊಲಗೇರಿಯಿಂದ ಹೊರದೇಶಕ್ಕೆ ಕೃತಿಯು ತುಂಬ ವಿಶಿಷ್ಟ ಮತ್ತು ಮಹತ್ವದ ಕೃತಿಯಾಗಿದೆ. ಶಿವಪುತ್ರ ಅಜಮನಿಯವರ ಇಡೀ ಜೀವನ ವೃತ್ತಾಂತವನ್ನೇ ತೆರೆದಿಟ್ಟಿದ್ದಾರೆ. ಇಂತಹ ಕೃತಿ ಒಬ್ಬ ಲೇಖಕನದ್ದು ಮಾತ್ರವಾಗದೇ ಎಲ್ಲ ದಲಿತರ ಜೀವನವೇ ಆಗಿದೆ. ಮರಾಠಿ ಮೂಲದಿಂದ ಬಂದ ದಲಿತ ಆತ್ಮಕಥನ ಪರಂಪರೆಯನ್ನು ಕನ್ನಡ ಸಾಹಿತ್ಯದ ಪರಪಂಪರೆಯಲ್ಲಿ ಕಂಡಾಗ, ಮರಾಠಿ ಮೂಲವೇ ಇಲ್ಲಿ ಪ್ರಭಾವನ್ನು ಬೀರಿದ್ದು ಎಂದರೆ ಸುಳ್ಳಲ್ಲ. ಅಲ್ಲಿನ ದಲಿತ ಸಂವೇದನೆ, ನೋವು, ನಲಿವು, ಹತಾಶೆ, ಅವಮಾನ, ಕಿತ್ತು ತಿನ್ನುವ ಬಡತನ, ತುತ್ತು ಕೂಳಿಗಾಗಿ ಸಹಿಸಿದ ಅವಮಾನಗಳೆಲ್ಲವೂ ಕೂಡಾ ಇಂದು ನಿನ್ನೆಯದಲ್ಲಾ. ಅರವತ್ತು ಎಪ್ಪತ್ತರ ದಶಕದಿಂದ ಇಲ್ಲಿಯ ವರೆಗೆ ಅದೇ ಹತಾಶೆ ಬದುಕು ಕಣ್ಣೆದುರಿಗೆ ಹಾಗೇ ಇದೆ. ಅದನ್ನು ಶಿವಪುತ್ರ ಅಜಮನಿಯವರ ಆತ್ಮಕತೆ ಮತ್ತೆ ಅನಾವರಣಗೊಳಿಸುತ್ತದೆ. ತನ್ನೊಳಗೆ ತಾನು ಇಣುಕಿನೊಡಿಕೊಳ್ಳುವ ತನ್ನ ಆತ್ಮಸಾಕ್ಷಿ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸಿಕೊಳ್ಳುತ್ತಲೇ, ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ನಾಯಕನನ್ನು ಈ ಆತ್ಮಕಥನದಲ್ಲಿ ಕಾಣುತ್ತೇವೆ. ಶಿವಪುತ್ರ ಅಜಮನಿಯವರು ಹೇಳುವ ಹಾಗೇ ತಮ್ಮ ಜೀವನದಲ್ಲಿ ನಡೆದ ಸತ್ಯಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಯಾವುದೇ ಒಂದು ಕೃತಿ ಹೊರಬರಬೇಕಾದರೆ ಆ ಲೇಖಕನಿಗೆ ಸತ್ಯ ಹೇಳುವ ದೈರ್ಯ ಮುಖ್ಯವಾಗುತ್ತದೆ. ಯಾರ ಮುಲಾಜಿಗೂ ಒಳಗಾಗದೇ, ತಮ್ಮ ಮೇಲೆ ಹಾಗೂ ಇಡೀ ಸಮುದಾಯದ ಮೇಲೆ ಆದಂತಹ ಅಸ್ಪ್ರಷ್ಯತೆ, ನಿಂದನೆ, ಅವಮಾನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಿವಪುತ್ರ ಅಜಮನಿ ಅವರಿಗೆ ತುಡಿತವಿದೆ. ಅವಮಾನದ ವಿರುದ್ಧ ಸಿಟ್ಟು ಸೆಡವು ಇದೆ.ಅಂತೆಲೇ ಅವರು ಬಂಡಾಯ ಏಳುತ್ತಾರೆ. ದಲಿತ ಕೇರಿಯ ಚಿತ್ರಣವು ಇಲ್ಲಿ ಹಾಸುಹೊಕ್ಕಾಗಿದೆ. ಒಂದು ಕಡೆ ಸೂರು ಇಲ್ಲದ ದಲಿತ ಜನಾಂಗಕ್ಕೆ ಶಾಲೆ, ಬೀದಿ ಪಕ್ಕದ ರಸ್ತೆ ,ಗುಡಿ ಗೋಪುರಗಳೇ ಗತಿ. ಇಂತಹ ಸೂರಿಲ್ಲದ ಅವರ ಬದುಕಿನ ಚಿತ್ರಣವನ್ನು ಹೇಳುತ್ತಾರೆ. ಮಳೆಗಾಲದ ಸಂಧರ್ಭದಲ್ಲಿ ಪಟ್ಟ ಪಾಡನ್ನು ಅನಾವರಣಗೋಳಿಸುತ್ತಲೆ ಆತ್ಮ ಕಥೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಶಾಲೆಯಲ್ಲಿಯೇ ಅವರ ತಾಯಿ ಮತ್ತು ಇನ್ನಿತರೆ ಮಕ್ಕಳೊಂದಿಗೆ ಬದುಕು ಸಾಗಿಸುವದು ಎಂತವರನ್ನಾದರು ಘಾಸಿಗೊಳಿಸುತ್ತದೆ. ಹಸಿದ ಹೊಟ್ಟೆಗೆ ಹಿಡಿ ಹಿಟ್ಟು ಹುಡುಕುವದು ಕೂಡಾ ಕಡು ಕಷ್ಟವೇ ಆದಂತಹ ಸಂದರ್ಭವನ್ನು “ಸತ್ತ ದನದ ಮಾಂಸಕ್ಕಾಗಿ ಹಗಲಿರುಳು ಕಾಯುವದು, ಸಿಕ್ಕ ಸತ್ತ ದನದ ಮಾಂಸವನ್ನು ಮೃಷ್ಟಾನ್ನವನ್ನಾಗಿ ಹೊಟ್ಟೆ ತುಂಬಿಸಿಕೊಳ್ಳುವ ದಾರುಣ ಚಿತ್ರಣವನ್ನು ಎಂತಹ ಗಟ್ಟಿಗರನ್ನಾದರೂ ಘಾಸಿಗೊಳಿಸದೆ ಇರಲಾರದು. ಒಂದು ಹೊಸ ಬಟ್ಟೆ ಗೊಸ್ಕರ ಸತ್ತ ದನದ ಎಲುಬು(ಮೂಳೆ)ಯನ್ನು ಆಯ್ದು, ಮಾರಾಟ ಮಾಡಿ ಹೊಸ ಬಟ್ಟೆ ಹಾಕಿಕೊಂಡು ತನ್ನ ಆಶೆಯನ್ನು ತೀರಿಸಿಕೊಳ್ಳುವ ಬಗೆ ಮನಸ್ಸನ್ನು ಕಲಕಿ ಬಿಡುತ್ತದೆ. ರಮಜಾನ ಹಬ್ಬದ ಸಂಧರ್ಭದಲ್ಲಿ ಬಿರಿಯಾನಿ ತಿನ್ನಲೇಬೇಕು ಎಂದು ಮಸೀದಿ ಮುಂದೆ ಚಪ್ಪಲಿಗಳನ್ನು ಕಾಯ್ದು ಬಿರಿಯಾನಿ ತಿಂದದ್ದು, ಊರಲ್ಲಿ ಯಾರಾದರೂ ಸತ್ತರೇ ಖುಷಿ ಇಮ್ಮಡಿಯಾಗುವ ಪ್ರಸಂಗ, ಗೋರಿ ಮೇಲಿನ ಗೋಧಿ ಮತ್ತು ಉಪ್ಪು ಸ್ವಲ್ಪ ದಿನಗಳಾದರೂ ಹಸಿವನ್ನು ಹೋಗಲಾಡಿಸಬಲ್ಲದು ಎಂಬ ಇರಾದೆಯಲ್ಲಿಯೇ ಸತ್ತ ಸುದ್ದಿಗಾಗಿ ಕಾಯುವದು, ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಹೇಳಲೇಬೇಕಾದ ಮಹತ್ವದ ವಿಷಯವೆಂದರೆ, ಲೇಖಕನ ತಾಯಿ ನಿಂಬೆವ್ವನ ಪಾತ್ರ ತುಂಬಾ ಗಮನ ಸೆಳೆಯುತ್ತದೆ. ಎಂತಹ ಕಷ್ಟ ಬಂದರು ಮಕ್ಕಳಿಗೆ ಅದರ ಗಾಢ ಅರಿವು ಆಗದಂತೆ, ತನ್ನ ಕುಟುಂಬದ ಜವಾಬ್ದಾರಿ ಹೊತ್ತ ನಿಂಬೆವ್ವಾ ಇಲ್ಲಿ ಮುಖ್ಯವಾಗುತ್ತಾಳೆ. ತಪ್ಪಾದಾಗ ತಿದ್ದುವ ಕಷ್ಟಕ್ಕೆ ಎದೆಗುಂದದ ದಿಟ್ಟ ಮಹಿಳೆಯಾಗಿದ್ದಾಳೆ. ಕೇರಿಯಲ್ಲಿ ಬದುಕನ್ನು ಸಾಗಿಸುವ, ದೇವದಾಸಿಯರೆಂದು ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾದ ದೇವದಾಸಿಯರ ಮನಸ್ಸನ್ನು ಪರಿವರ್ತಿಸಿ ಅವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಒಂದಾಗಿ ಬದುಕುವಂತೆ ಮಾಡಿದ್ದು ಹೀಗೆ ಅನೇಕ ಘಟನೆಗಳನ್ನು ಒಡಮೂಡಿಸಿದ್ದಾರೆ. ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಇಪ್ಪತ್ತಮೂರು ಅಧ್ಯಾಯಗಳನ್ನು ಒಳಗೊಂಡ ಆತ್ಮಚರಿತ್ರೆಯಾಗಿದೆ. ಶಿವಪುತ್ರ ಅಜಮನಿ ಅವರು ಸಮಾಜದಲ್ಲಿ ನಡೆಯುವ ಜಾತಿ ಪಿಡುಗಿನ ಬಗ್ಗೆ ದ್ವನಿ ಎತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಚಾತುರ್ಯ, ಅವಮಾನಗಳ ವಿರುದ್ಧ ಧ್ವನಿಯಾಗಿ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಹೇಳುವ ಉದ್ದೇಶ ಇಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಶಿವಪುತ್ರ ಅಜಮನಿಯವರು ದಲಿತ ಸಂವೇದನೆಯನ್ನು ಬಿಡಿ ಬಿಡಿಯಾಗಿ ಅಕ್ಷರಗಳ ಮೂಲಕ ಉಣಬಡಿಸುತ್ತಾರೆ. ಇಡೀ ಆತ್ಮಕಥನದ ಉದ್ದಕ್ಕೂ, ಶಿವಪುತ್ರ ಅಜಮನಿಯವರು ನಿರೂಪಕರಾಗಿ ತಮ್ಮದೇ ಶೈಲಿಯ ಉತ್ತರ ಕರ್ನಾಟಕದ ದೇಶಿಯ ಭಾಷೆಯ ಸೊಗಡನ್ನು ಕಟ್ಟಿಕೊಡುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ನೇರಾ ನೇರವಾಗಿ ಬಳಸಿಕೊಂಡು ಓದುಗರಿಗೆ ಹತ್ತಿರವಾಗುತ್ತಾರೆ. ಇಲ್ಲಿನ ಬರಹ ಲೋಹದ ಹಕ್ಕಿಯೊಳಗೆ ತಣ್ಣಗೆ ಪ್ರವೇಶ ಬಯಸಿ ಅಂತರ್ಯದ ಒಳಬೇಗುದಿಗೆ ತಂಪೆರೆಯುವ ಕೆಲಸ ಮಾಡುತ್ತದೆ. ********************************************** ಡಾ.ಸುಜಾತಾ ಸಿ.
ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ Read Post »
ಗಜಲ್
ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ ಕಣ್ಣ ಹನಿ ಜಾರುವ ಮುನ್ನ ಬೊಗಸೆಯೊಡ್ಡುವ ಭರವಸೆಯನ್ನು ಇತ್ತವನುನೀನಲ್ಲವೇ ಮುಚ್ಚಿಟ್ಟ ನೂರಾರು ಕನಸುಗಳಿಗೆಚಂದದ ಮರು ಜೀವವನ್ನುಇತ್ತವನುನೀನಲ್ಲವೇ – ಸಾಮಾನ್ಯಳಾದ ನನ್ನಲ್ಲಿ ಅಸಾಮಾನ್ಯಳೆಂಬ ಆತ್ಮ ವಿಶ್ವಾಸವನ್ನುತುಂಬಿದವನೇ ನೀನು ನಿನಗಾಗಿ ಏನಾದರೂ ಮಾಡಬಲ್ಲೆ ಎಂಬ ಭರವಸೆಯನ್ನು ಇತ್ತವನುನೀನಲ್ಲವೇ – ಸಾವಿರ ಹಸಿದ ಕಣ್ಣುಗಳ ನಡುವೆಯೂ ಪ್ರೇಮದ ಬೆಳಕು ಹೊತ್ತ ಕಣ್ಣಿನವನು ನೀನು ಎದೆಯ ಕತ್ತಲ ನೋವುಗಳನೆಲ್ಲಮರೆಸಿ ನಗುವಿನ ಮಿಂಚನ್ನುಇತ್ತವನುನೀನಲ್ಲವೇ – ಬರಿದೆಬಯಲಮರೀಚಿಕೆಯಂತಿದ್ದಭವಿತವ್ಯದಬದುಕಿನಲಿಹೊಂಗನಸತುಂಬಿದೆ ನೀನು ಸುಡುವ ಬೆಂಗಾಡಾಗಿದ್ದಮರುಭೂಮಿಯಲಿತಣ್ಣನೆಯನೆಳಲನ್ನುಇತ್ತವನುನೀನಲ್ಲವೇ – ನನ್ನೆದೆಯಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಕಾಮನಬಿಲ್ಲನುಮೂಡಿಸಿದವನು ನೀನು ಶ್ರೀಯನೋವಿನ ಭಾವಗಳ ಮರೆಸಿಸಂತಸದಿಂದಿರುವಮುತ್ತುಗಳನ್ನುಇತ್ತವನುನೀನಲ್ಲವೇ ************************************************************** –
ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ ನ ಕುದುರೆಯ ಹಾಗೆ ನಾಗಾಲೋಟ ಓಡಲು ಕಾರಣ, ಚಕ್ರವೂ ಅಲ್ಲ, ನನ್ನ ತುಳಿಸಾಮರ್ಥ್ಯವೂ ಅಲ್ಲ!. ಅದು ಭೂಮಿತಾಯಿಯ ಗುರುತ್ವಾಕರ್ಷಣ ಶಕ್ತಿ. ರಸ್ತೆಯಲ್ಲಿ ಇರುವ ತಿರುವುಗಳು ಹೆಂಗಳೆಯರು ಮುಂಗುರುಳಿಗೆ ಹಾಕುವ ಪಿನ್ ನಂತಹ (ಹೆಯರ್ ಪಿನ್ ) ತಿರುವುಗಳು. ಹೋಗುವ ದಿಶೆಯನ್ನು ರಸ್ತೆ, ಒಮ್ಮಿಂದೊಮ್ಮೆಯೇ ವಿರುದ್ಧ ದಿಕ್ಕಿಗೆ ತಿರುಗಿಸುತ್ತೆ. ‘ನನ್ನ ದಿಕ್ಕನ್ನು ನಾನೇ ನಿರ್ಧರಿಸುವೆ ‘ ಎಂಬ ಜಂಭವಿದ್ದರೆ, ಇಳಿಜಾರಿನ ಯಮಪ್ರಪಾತ ಬಾಯ್ತೆರೆದು ಕಾಯುತ್ತೆ. ಸಾಯಂಕಾಲದ ಬಣ್ಣ ಬಣ್ಣದ ಮದಿರೆ ಹೀರಿದ ಗಗನದಲ್ಲಿ ಗಾಳಿ ತೂರಾಡುತ್ತೆ. ವಾತಾವರಣದ ನೋಹಕ ನಶೆಯಲ್ಲಿ ರಸ್ತೆ, ಪಸ್ಚಿಮಘಟ್ಟಗಳ ದಟ್ಟ ಕಾಡುಗಳನ್ನು ಬಳಸಿ, ಕೆಳನೆಗೆಯುವ ತೊರೆಗಳಲ್ಲಿ ನೆನೆದು ಇಳಿದಂತೆ,ಅದಕ್ಕಂಟಿದ ಸೈಕಲ್ ಚಕ್ರಗಳು ತಿರು ತಿರುಗಿ ಓಡುತ್ತವೆ. ಆಗಸದಲ್ಲಿ ಹಕ್ಕಿಗಳು ತಮಗೆ ಬೇಕಾದಂತೆ ರೆಕ್ಕೆ ತೇಲಿಸಿ ಇಳಿಯುತ್ತವೆ,ಅದು ಚಂದ. ಅವುಗಳಿಗೆ ರಸ್ತೆಯ ಅಗತ್ಯವೂ ಇಲ್ಲ, ಬಂಧನವೂ ಇಲ್ಲ. ಹಾಗಂತ ಅವು ದಿಶಾಹೀನ ಅಲ್ಲ. ರಾತ್ರೆಯಾದಂತೆ, ರೊಮ್ಯಾಂಟಿಕ್ ಆಗಿದ್ದ ಬಣ್ಣಗಳೂ, ಕತ್ತಲೆಯ ಕಪ್ಪಿಗೆ ಸಮರ್ಪಣೆ ಮಾಡಿಕೊಂಡು, ನಮ್ಮ ಪರ್ಸೆಪ್ಷನ್ ನಲ್ಲಿ ಪರಿಸರದ ಗಾಢಕತ್ತಲೆಯಲ್ಲಿ ಕಳೆದುಹೋಗುತ್ತವೆ. ಘಟ್ಟಗಳ ಬುಡಕ್ಕಿಳಿದಾಗ ದಟ್ಟ ಕತ್ತಲು. ತಲೆಯೆತ್ತಿ ನೋಡಿದರೆ ಬೆಟ್ಟಗಳ ಸಾಲುಗಳ ಚಿತ್ರ ಅಕ್ಷಿಪಟಲದಲ್ಲಿ ಮೂಡವು. ಅನುಭವಕ್ಕೂ ಬಾರವು. ಸೈಕಲ್ ಒಂದು ಮ್ಯಾಜಿಕ್!. ಇದರಲ್ಲಿ ಕುಳಿತು ಎಡಕ್ಕೆ ವಾಲಿದರೂ,ಬಲಕ್ಕೆ ವಾಲಿದರೂ ಬೀಳುತ್ತೀರಿ!. ಸೈಕಲ್ ಎಡಕ್ಕೋ ಬಲಕ್ಕೋ ವಾಲಿದರೆ,ಕೂಡಲೇ ದೇಹಭಾರವನ್ನು ವಿರುದ್ಧ ದಿಕ್ಕಿಗೆ ವಾಲಿಸಿ ಸಮತೋಲಿಸಬೇಕು. ದೇಹ, ಸೈಕಲ್ ನ ಜತೆಗೂಡಿ, ಗುರುತ್ವ ಕೇಂದ್ರವನ್ನು, ಸೈಕಲ್ ನ ಒಟ್ಟೂ ಘನತ್ವದ ಮಧ್ಯಬಿಂದುವಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಸಂಪಾದಿಸಿದ ಸಮದೃಷ್ಟಿಯೇ ಸೈಕಲ್ ಗೂ, ಚಲನೆಗೂ ಸಮತೋಲನ ತಂದುಕೊಟ್ಟು ಗುರಿಯತ್ತ ಮುಖಮಾಡುತ್ತೆ. ಮನಸ್ಸು ಕೂಡಾ ಅಷ್ಟೇ, ಎಡಕ್ಕೋ,ಬಲಕ್ಕೋ, ಯಾವುದೇ ಸಿದ್ಧಾಂತದತ್ತ ವಾಲಿದರೆ, ಚಲನಶೀಲತೆಗೆ ಅಗತ್ಯವಾದ ಬ್ಯಾಲೆನ್ಸ್ ಅನ್ನು ಕಳೆದುಕೊಳ್ಳುತ್ತದೆ, ಅಯಸ್ಕಾಂತಕ್ಕೆ ಅಂಟಿ ನಿಂತ ಕಬ್ಬಿಣದ ತುಂಡಿನ ಹಾಗೆ. ಸೈಕಲ್ ನನ್ನು ನಿಂತಲ್ಲೇ ಬ್ಯಾಲೆನ್ಸ್ ಮಾಡಲು ಅತ್ಯಂತ ಕಷ್ಟ. ಸೈಕಲ್ ನಲ್ಲಿ ಕುಳಿತು ಅದು ಚಲನಶೀಲವಾದಾಗ ಬ್ಯಾಲನ್ಸ್ ಸುಲಭ. ಪ್ರಕೃತಿಯ ಸಹಜತತ್ವ ಚಲನಶೀಲತೆಯಲ್ಲಿಯೇ ಸಮತೋಲನ ಕಾಣುವಂತೆಯೇ ಸೈಕಲ್ ಸವಾರಿಯೂ ಕಾಣುತ್ತೆ. ಯಾವುದೇ ಸವಾರಿಯಲ್ಲಿ, ಅದು, ಸೈಕಲ್, ಬಸ್ಸು,ರೈಲು, ವಿಮಾನ ಎಲ್ಲದರಲ್ಲೂ, ಪ್ರಯಾಣಿಕನ ಪ್ರಜ್ಞೆ ಮತ್ತು ಪರಿಸರದ ಅವಸ್ಥೆಗಳಲ್ಲಿ ಸಾಪೇಕ್ಷತೆ ಕೆಲಸ ಮಾಡುತ್ತೆ. ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತಾಗ, ಹೊರಗೆ ಕಾಣುವ ಮರಗಳು, ಕಟ್ಟಡಗಳು ಎಲ್ಲವೂ ವೇಗವಾಗಿ ಹಿಮ್ಮುಖವಾಗಿ ಚಲಿಸುವ ಅನುಭವ ಆಗುತ್ತಲ್ಲ. ಅದೇ ಸಾಪೇಕ್ಷ ಅನುಭವ. ಅಂದರೆ, ಡೈನಮಿಕ್ ವ್ಯವಸ್ಥೆಯಲ್ಲಿ ಅನುಭವ, ಚಲಿಸುವ ದೇಹ ಮತ್ತು ಮನಸ್ಸಿನ ಮೇಲೆ ( ಫ್ರೇಮ್ ಆಫ್ ರೆಫರೆನ್ಸ್), ಚಲಿಸುವ ದಿಕ್ಕಿನ ಮೇಲೆ ಮತ್ತು ಪರಿಸರದ ಅವಸ್ಥೆಯ ಮೇಲೆ ಅವಲಂಬಿತವಾಗಿರುವಾಗ, ಕಾವ್ಯಪ್ರಜ್ಞೆಯೂ, ಸಿದ್ಧಾಂತಗಳನ್ನು ರೂಪಿಸುವ ತಾರ್ಕಿಕ ಮನಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಯಾತ್ರೆಯುದ್ದಕ್ಕೂ, ನಮ್ಮ ಅಬ್ಸರ್ವೇಷನ್ ನ ಮೇಲೆ ಇತ್ಯಾತ್ಮಕ ಅಭಿಪ್ರಾಯಗಳನ್ನು ಸ್ಥಿರೀಕರಿಸುವುದು ಮತ್ತು ಪ್ರತಿಪಾದಿಸುವುದು, ನಿತ್ಯಚಲನಶೀಲವಾದ ಪ್ರಕೃತಿ ತತ್ವಕ್ಕೆ ಪೂರಕವಾಗದು. ಸೈಕಲ್ ಸವಾರ ಚಲಿಸುತ್ತಾ ಹೋಗುತ್ತಿದ್ದಂತೆ, ಕಾಲ ಹಿಂದಕ್ಕೆ ಓಡುತ್ತೆ. ವಿಪರ್ಯಾಸವೆಂದರೆ ಸೈಕಲ್ ಸವಾರ ಯಾತ್ರೆ ಮುಗಿಸಿ ಹಿಂತಿರುಗಬಲ್ಲ. ಆದರೆ, ಕಾಲ ಹಿಂತಿರುಗಲ್ಲ. ಅದು ಏಕಮುಖೀ. ಒಮ್ಮೆ ಭೂತಕಾಲವಾದ ವರ್ತಮಾನ, ಪುನಃ ವರ್ತಮಾನಕ್ಕೆ ಹಿಂತಿರುಗಲ್ಲ!. ಇವಿಷ್ಟು ತಯಾರಿಯೊಂದಿಗೆ ವಿಜಯ್ ದಾರಿಹೋಕ ಅವರ ಕವಿತೆ ” ಸೈಕಲ್,ರಸ್ತೆ, ತುಡಿತ ಇತ್ಯಾದಿ” ಎಂಬ ಕವಿತೆಯನ್ನು ನೋಡೋಣ. ** ** ** *** ಸೈಕಲ್,ರಸ್ತೆ, ತುಡಿತ ಇತ್ಯಾದಿ ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ ಸತತ …ಸೈಕಲ್ ತುಳಿವ ತುಡಿತ….! ಇನ್ನೇನು …ದಿನ ಕಳೆದು, ಹುಟ್ಟಿಗೆ ಸಿದ್ದವಾದ ರಾತ್ರಿಗೆ, ಸಂಜೆಯ ಹುಂಜದ ಹಂಗಿಲ್ಲ..! ಅಪರಿಚಿತ ಊರಕೇರಿಯ ದಿಕ್ಕು.. ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು…! ತುಸುವೇ ಹೊತ್ತಿನ ಬಳಿಕ.. ನಾನು ತಲುಪುವ ಕೇರಿಯಾದರೂ ಎಂಥದು..?? ಮುದಿ ಲಾಟೀನಿನ ಮಂದ ಬೆಳಕಲ್ಲಿ ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ ಆ ಊರಿನಲ್ಲಿ.. ? ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ ಆ ಊರಿನಲ್ಲಿ..!? ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ ಆ ಊರಿನಲ್ಲಿ..? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆ..! ಒಂದೋ, ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …? ಹಳತು ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..? ಎದುರು ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳೂ, ಮೂಟೆಗಳು, ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆ ಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು..! ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..! ……. ಹಳತು, ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..! ** ** ** ** ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ, ಸತತ …ಸೈಕಲ್ ತುಳಿವ ತುಡಿತ….! ಹಳೆಯ ಊರಕೇರಿ, ಮರೆತು ಹೋಗಿದ್ದರೂ, ಎಲ್ಲೋ ಮನಸ್ಸಿನ ಮೂಲೆ ಕೋಣೆಯಲ್ಲಿ ಅಚ್ಚಾಗಿದೆ!. ಬಾಲ್ಯದ್ದು ಇರಬಹುದು, ಊರಕೇರಿ ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆ,ತಾನೇ. ಆ ವ್ಯವಸ್ಥೆ, ಊರಿಗೇ ಸೀಮಿತವೂ ಹೌದು, ಕೇರಿಯ ಕಟ್ಟು ಕಟ್ಟಳೆಯಿಂದ ಬಂಧಿತವೂ ಹೌದು. ಕವಿತೆಯುದ್ದಕ್ಕೂ ಕವಿಗೆ ಆ ಕೇರಿಯ ಬಗ್ಗೆ ಬಣ್ಣ ಬಣ್ಣದ ಕನಸಿಲ್ಲ. ಆದರೆ ಅದರ ಸುತ್ತ ಸೈಕಲ್ ತುಳಿಯುವ ತುಡಿತ. ಅಂದರೆ ಆತ ಬರೇ ವೀಕ್ಷಕ ( ಅಬ್ಸರ್ವರ್) ಆಗುತ್ತಾನೆ. ಸೈಕಲ್ ತುಳಿಯುತ್ತಾ, ನೋಡುವಾಗ, ಊರಕೇರಿಯ ಸ್ಥಾವರ ಚಿತ್ರ, ಜಂಗಮ ಫ್ರೇಮ್ ನ ಮೂಲಕ ಕಾಣುವ ತುಡಿತವೇ?. ‘ದಿನ ಕಳೆದು ಹುಟ್ಟಿಗೆ ಸಿದ್ಧವಾದ ರಾತ್ರಿ’ ಅನ್ನುವ ಕವಿ ಕಲ್ಪನೆಗೆ ಅನನ್ಯತೆಯಿದೆ. ನಮ್ಮ ಮನಸ್ಸು ಹಗಲಿನ, ಬೆಳಕಿನ ಪಕ್ಷಪಾತಿ. ಆದರೆ ಹಗಲಿನದ್ದು ಮತ್ತು ರಾತ್ರಿಯದ್ದು ಪರಸ್ಪರ ಪೂರಕ ಮತ್ತು ಸಾಪೇಕ್ಷ( ರಿಲೇಟಿವ್) ಅಸ್ತಿತ್ವ. ಅದಕ್ಕೇ ರಾತ್ರೆಯ ಹುಟ್ಟು ತುಂಬಾ ತಾತ್ವಿಕ ಕಲ್ಪನೆ. ಹಾಗೆಯೇ ಇನ್ನೊಂದು ಅಪೂರ್ವ ಸಾಲು, ಹಣ್ಣು ಹಣ್ಣಾದ ರಸ್ತೆ!. ರಸ್ತೆ ಹಣ್ಣಾಗುವುದು ಎಂದರೆ, ದಿನವಿಡೀ ಚಲಿಸುವ ವಾಹನಗಳ ತುಳಿತದಿಂದ ಬಳಲಿ ಹಣ್ಣಾದದ್ದೇ?. ಅಥವಾ ಚಲಿಸುವ ವಾಹನಗಳಿಗೆ ದಾರಿತೋರಿ, ದಾರಿಯೇ ಆಗಿ, ಪಕ್ವವಾದ ಅನುಭವವೇ?. ದಾರಿ ಸಿಗದ ಯಾತ್ರಿಕರಿಗೆ ದಾರಿಯಾಗಿ ಅತೀವ ಹೆಮ್ಮೆಯ ಸೊಕ್ಕು, ರಸ್ತೆಗೆ!. ಆ ಕೇರಿಯ ಲಾಟೀನು ಮುದಿಯಾಗಿದೆ. ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳುಹಾಡುಗಳಂತಹಾ ಸದ್ದುಗಳು, ಒಣ ಗಂಡಸರು, ಹೀಗೆ ಕವಿ ಕೇರಿಯ ವಿವರಣೆ ಕೊಡುವಾಗ, ಒಂದು ರಸಹೀನ,ಜೀವಭಾವ ರಹಿತ ವ್ಯವಸ್ಥೆಯ ಚಿತ್ರ ಮೂಡುತ್ತೆ. ಬದಲಾವಣೆಗೆ ಒಗ್ಗದೆ ಕಾಲದಲ್ಲಿ ಕಾಲವಾದ ವ್ಯವಸ್ಥೆಯನ್ನು, ಚಲನಶೀಲ ಮನಸ್ಸು ಸೈಕಲ್ ತುಳಿಯುತ್ತಾ ಕಾಣುತ್ತೆ. ಗಮನಿಸಿ!, ನೋಟಕನ ಸೈಕಲ್ ನಿಲ್ಲಿಸಿ ನೋಡುವುದಿಲ್ಲ, ಚಲಿಸುತ್ತಲೇ ಇರುತ್ತೆ. ” ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …” ಈ ಸಾಲುಗಳನ್ನು ಓದುವಾಗ, ಕವಿ, ಈ ವ್ಯವಸ್ಥೆಯನ್ನು ದಿಕ್ಕರಿಸಿ ಬಂದಂತಿದೆ. ವ್ಯವಸ್ಥೆಯನ್ನು ನಿಂತ ನೀರಾಗಿಸಿದ, ರಸಹೀನವಾಗಿಸಿದ ಕೆಲವು ಮಂದಿಯ ಬಗ್ಗೆ ಆಕ್ರೋಶ ಇದೆ. ಅದನ್ನು ಪ್ರಶ್ನಿಸುವ ಆಸೆಯಿದೆ. ಆದರೆ ಆ ವ್ಯವಸ್ಥೆ, ತನ್ನ ಪ್ರಶ್ನೆಗಳಿಂದ ಬದಲಾಗಲ್ಲ ಎಂಬ ಆಸಮಧಾನವೂ ಇದೆ. ‘ಮಟ ಮಟ ರಾತ್ರಿಯು ನೆತ್ತಿಗೇರುವ ತನಕ’ ಎಂಬ ಈ ಸಾಲುಗಳು ಸೂರ್ಯ ನೆತ್ತಿಗೇರುವ ಹಾಗೆಯೇ ರಾತ್ರಿಯೂ, ಎಂಬ ಹೊಸ ಕಲ್ಪನೆಯನ್ನು ಬಿಂಬಿಸುವ ಜತೆಗೇ, ನಿರಾಶಾದಾಯಕ ಮನಸ್ಥಿತಿಯ ಕ್ಶಿತಿಜವನ್ನೂ ಪರಿಚಯಿಸುತ್ತೆ. ಹಳತನ್ನು ಮರೆತು ಹೊಸತಿಗೆ ತೆರೆಯುವ ಕೇರಿಯ ಗುಂಟ ಸೈಕಲ್ ತುಳಿಯಬೇಕೆಂಬ ಹಂಬಲ ಕವಿ ಮನಸ್ಸಲ್ಲಿ ಇದ್ದಂತಿದೆ. “ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳು, ಮೂಟೆಗಳು” ಕಾಲುಗಳು, ದೇಹಕ್ಕೂ, ದೇಹ ಹೊರುವ ಹೊರೆಗೂ ಆಧಾರ. ಆದರೆ ಆಧಾರ, ಅಡಿಪಾಯ, ಗಟ್ಟಿಯಾಗಿಲ್ಲ. ಪೋಷಕಾಂಶಗಳ ಕೊರತೆಯಿಂದ ಕಾಲುಗಳು ಸಪೂರವಾಗಿವೆ. ವ್ಯವಸ್ತೆಯ ಜೀವಪೋಶಕ ಅಂಶ ವಿರಳವಾದಾಗ, ಆಧಾರ ಸ್ಥಂಭಗಳು ದುರ್ಬಲವಾಗುತ್ತವೆ. ಆ ದುರ್ಬಲ ವ್ಯವಸ್ಥೆ ಹೊತ್ತಿರುವ ಮೂಟೆಗಳು ಮಣ ಭಾರ. ಗಂಟುಗಳು ಎಂದರೆ, ಕ್ಲಿಷ್ಟವಾದ, ಬಿಡಿಸಲಾಗದ ಅಥವಾ ಬಿಡಿಸಲು ಪ್ರಯತ್ನವೇ ಮಾಡದೆ ಕ್ಲಿಷ್ಟವಾದ ಸಮಸ್ಯೆಗಳನ್ನು, ಪ್ರತಿನಿಧಿಸುವಂತಿದೆ. ಸೈಕಲ್ ನಲ್ಲಿ ಸವಾರನಾದ ಕವಿಗಯನ್ನು ಈ ಪ್ರಶ್ನೆಗಳು ಅಧೀರನನ್ನಾಗಿಸುತ್ತವೆ. ” ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!” ಕೇರಿಯ ಸುತ್ತಲಿನ ರಸ್ತೆಯೇ ಈಗ ಮಾತಾಡುತ್ತೆ. ಸಮಸ್ಯೆಯ ಅಗಾಧತೆಯ ಪರಿಚಯ ಮಾಡಿಕೊಡುತ್ತೆ. ಈ ಕವಿತೆಯಲ್ಲಿ ಸೈಕಲ್ ಸವಾರ, ವ್ಯಕ್ತಿಯೇ ಆಗಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಸಾಕ್ಷೀ ಪ್ರಜ್ಞೆಯೂ ಆಗಬಹುದು. ನಾವು ಅನುಭವ ರೂಪದಲ್ಲಿ ಸಂಗ್ರಹಿಸಿದ ವಿಷಯಗಳ ಆಧಾರದಲ್ಲಿ ಮನಸ್ಸೊಳಗೇ ಕೇರಿ ನಿರ್ಮಾಣ ( ಪೂರ್ವಾಗ್ರಹ) ಮಾಡುತ್ತೇವೆ. ನಮ್ಮ ಸಾಕ್ಷಿ ಪ್ರಜ್ಞೆ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ, ಪ್ರಶ್ನಿಸುವ ಪ್ರಯತ್ನ ಮಾಡುತ್ತೆ. ಆದರೆ, ಮನಸ್ಸಿನಲ್ಲಿ ರೂಪುಗೊಂಡ, ಮೂರ್ತವಾದ ಅಭಿಪ್ರಾಯ, ಸಿದ್ಧಾಂತಗಳು, ಬದಲಾವಣೆಯನ್ನು, ಪ್ರತಿರೋಧಿಸುತ್ತವೆ. ಅದರೂ ಸಾಕ್ಷಿಪ್ರಜ್ಞೆ ಸೈಕಲ್ ತುಳಿಯುತ್ತಲೇ ಇರುತ್ತೆ. ಅದೊಂದು ನೆವರ್ ಎಂಡಿಂಗ್ ಸ್ಪಿರಿಟ್ . ಈ ಸೈಕಲ್ ಯಾತ್ರೆ ಒಂದು ಪೂರ್ತಿ ಬದುಕಿನ ಪಯಣವೂ ಆಗಬಹುದು. ಮನೋಲೋಕದೊಳಗೆ ದಿನ ನಿತ್ಯ ಹಳತು ಹೊಸತರ ನಡುವೆ, ಸಿದ್ಧಾಂತಗಳ ವೈರುಧ್ಯಗಳ ನಡುವೆ, ಭಾವ ಬುದ್ಧಿ ಗಳ ನಡುವೆ ನಡೆಯುವ ಸಂಘರ್ಷಗಳು, ಸೈಕಲ್ ಸವಾರನ ವೀಕ್ಷಕ ವಿವರಣೆಯಲ್ಲಿ ದಾಖಲಾದಂತೆಯೂ ಅನ್ವಯಿಸಬಹುದು. ವ್ಯಕ್ತಿ ಮತ್ತು ವ್ಯವಸ್ಥೆ ಗಳ ನಡುವಿನ ತಾಕಲಾಟವಾಗಿಯೂ ನೋಡಬಹುದು ಈ ಕವಿತೆಯಲ್ಲಿ ‘ಕೇರಿ’ಯ ಪ್ರತಿಮೆಯನ್ನು ಕವಿ ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇದೇ ರೀತಿ ದ.ರಾ. ಬೇಂದ್ರೆಯವರೂ ಕೇರಿಯ ರೂಪಕವನ್ನು ತಮ್ಮ ಕವನ ” ಬಾರೋ ಸಾಧನ ಕೇರಿಗೆ” ತುಂಬಾ ಧನಾತ್ಮಕವಾಗಿ ಬಳಸಿದ್ದಾರೆ. “ಬಾ ಬಾರೋ, ಬಾರೋ ಬಾರೋ ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ
ವಾರದ ಕವಿತೆ ನಿರಂತರ ನೋವು ರಾಜೇಶ್ವರಿ ಭೋಗಯ್ಯ ಎದೆಯ ಒಳಗೊಂದು ಚುಚ್ಚುವ ನೋವಿದ್ದರೆಮೈಮೇಲೊಂದು ಗಾಯ ಮಾಡಿಕೊ ನಂತರ ಒಳಗಿನ ನೋವು ಹೆಚ್ಚೋಹೊರಗಿನ ನೋವು ಹೆಚ್ಚೋ ಎಂದು ತಾಳೆ ಹಾಕಿಕೋ ಎದೆಯ ನೋವೇ ಹಿಂಡುವಂತಾದ್ದುಮೈಯ್ಯ ನೋವೇ ಚುಚ್ಚುವಂತಾದ್ದು ಮನವರಿಕೆ ಮಾಡಿಕೋ ಎರಡರ ಜೊತೆ ಸೆಣಸಿ ಸೆಣಸಿ ಮೈಯ ಗಾಯ ಮಾಯಿತುಎದೆಯ ನೋವು ಮತ್ತೆ ಇಣುಕಿತುಚರ್ಮದ ಮೇಲಿನದು ಒಣಗಿದರೂ ವಿಕಾರವಾಯಿತುಯಾರಿಗೂ ಕಾಣದ ನೋವು ಒಳಗಿದ್ದದ್ದೇ ಸಹ್ಯವಾಯಿತು ಗೆಳತಿ ಹೇಳಿದಳು..ಮೂಗು ಚುಚ್ಚಿಸು…ಕಷ್ಟಕ್ಕೂ ,ಸುಖಕ್ಕೂ ,ಎದೆಗೂ ಹತ್ತಿರಒಂದಕ್ಕೊಂದು ಅನುಬಂಧ ಅದೂ ಆಯಿತು…ಹಾಗೇ ಮಾಯಿತುಉಳಿಯುವುದಿಲ್ಲ ಕಲೆಉಪಯೋಗಿಸಿದ್ದಳು ತಲೆಎಷ್ಟು ಮೂಗಿದ್ದರೂ ಸಾಲುವುದೇ…ಹೆಣ್ಣಿನ ಬವಣೆಗೆ ಕೊನೆಯಿದೆಯೇ ಹಿಂಡುವ , ಚುಚ್ಚುವ ಜುಗಲ್ಬಂದಿಯಲ್ಲಿಗೆದ್ದದ್ದು ಮೈಮೇಲಿನ ನೋವೇಎಂದಿಗೂ ಗೆಲ್ಲದಂತೆ ಹಠ ಹಿಡಿಯುವುದುಎದೆಯೊಳಗಿನ ಕಾವೇ ಚುಚ್ಚುತ್ತಿರಲಿ ಒಂದು ನಿರಂತರ ನೋವುಅದಕಿಂತಾ ಚಂದವಾ ಮೈಮೇಲಿನ ಬಾವು. *******************************
ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು ಜನ್ಮ ತಾಳಿದ್ದು ನಮ್ಮ ಕುಟುಂಬದ ಮನೆಯ ಪಕ್ಕದಲ್ಲಿದ್ದ ಕೋಳಿಕೊಟ್ಟಿಗೆಯಲ್ಲಿ. ಅಂದಿನ ಕಾಲದಲ್ಲಿ ವಾಸದ ಮನೆಯಲ್ಲಿ ಹೆರಿಗೆಯಾಗುವುದು ನಿಷಿದ್ಧವಾಗಿತ್ತು. ಆ ಕಾರಣ ಹೆಂಗಸರಿಗೆ ಪ್ರಸವ ವೇದನೆ ಪ್ರಾರಂಭವಾದ ತಕ್ಷಣ ವಾಸದ ಮನೆಯಿಂದ ಹೊರಗಡೆ ಇಡುತ್ತಿದ್ದರು’’ ಎಂದು ಆರಂಭಿಸುತ್ತಾರೆ. ಅವರಿಗೆ ಆತ್ಮಕತೆಯ ಜತೆಗೆ ತಮ್ಮ ಕಾಲದ ಮಲೆನಾಡಿನ ಸಂಪ್ರದಾಯಗಳನ್ನೂ ಕಾಣಿಸುವ ಉದ್ದೇಶವಿದೆ. ಅವರು ಕಾಣಿಸುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳಂತೂ ಭೀಕರವಾಗಿವೆ. ಅವುಗಳಲ್ಲಿ ಮಹಿಳೆಯರ ಸಾವು ಮತ್ತು ಗಂಡಸರ ಮರುಮದುವೆಯೂ ಒಂದು: “ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ಹಾವಳಿಯಿಂದ ಗರ್ಭಿಣಿಯರೂ ಬಾಣಂತಿಯರೂ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದರು. ಇದರ ಪರಿಣಾಮವಾಗಿ ಹೆಂಗಸರ ಸಂಖ್ಯೆ ದಿನೇದಿನೇ ಕ್ಷೀಣವಾಗುತ್ತಿತ್ತು. ಆದ್ದರಿಂದ ಹೆಣ್ಣುಗಳಿಗಾಗಿ ಬಹಳ ಪೈಪೋಟಿ ಇತ್ತು. ಶ್ರೀಮಂತ ವಿಧುರರು ಎರಡು ನೂರು ರೂಪಾಯಿಗಳಿಂದ ಐದುನೂರರ ರೂಪಾಯಿಗಳವರೆಗೆ ಹೆಣ್ಣುಗಳಿಗೆ ತೆರಕೊಟ್ಟು ಮದುವೆಯಾಗುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಗೆ ತಮ್ಮ ಸಹೋದರಿಯರ ಮದುವೆ ಮಾಡಲು ಯಾವ ತೊಂದರೆಯೂ ಆಗಲಿಲ್ಲ.’’ ಒಂದು ಪ್ರದೇಶದ ಭೌಗೋಳಿಕ ಸನ್ನಿವೇಶಕ್ಕೂ ಪುರುಷರ ಬಹುಪತ್ನಿತ್ವಕ್ಕೂ, ಅವರ ಸಿರಿವಂತಿಕೆಗೂ, ಗರ್ಭಧಾರಣೆ ಹೆರಿಗೆ ಮುಂತಾದ ಮಹಿಳೆಯರ ಜೈವಿಕ ಆವರ್ತನಗಳಿಗೂ ಇಲ್ಲಿ ಏರ್ಪಟ್ಟಿರುವ ಸಂಬಂಧ ವಿಶಿಷ್ಟವಾಗಿದೆ. ಪುರುಷ ವ್ಯವಸ್ಥೆ ಮಲೇರಿಯಾದಂತಹ ಸನ್ನಿವೇಶವನ್ನೂ ತನಗೆ ಬೇಕಾದಂತೆ ಬಳಸಿಕೊಂಡಿರುವ ಪರಿ ದಿಗ್ಭ್ರಮೆ ತರುತ್ತದೆ. ಮಲೆನಾಡಲ್ಲಿ ಹೆರಿಗೆಯಿಂದ ಮಾತ್ರವಲ್ಲ, ಹಾವು ಕಚ್ಚಿ, ಸೇತುವೆಯಂತಿದ್ದ ಸಂಕಮುರಿದು, ನೆರೆಯಲ್ಲಿ ಕೊಚ್ಚಿಹೋಗಿ- ನಾನಾ ಕಾರಣಕ್ಕೆ ಜನ ಸಾಯುವುದನ್ನು ಮಂಜಪ್ಪ ದಾಖಲಿಸುತ್ತಾರೆ. ಈ ದುರಂತಗಳಿಗೆ ನಾಗರಿಕ ಸೌಲಭ್ಯಗಳಿಲ್ಲದೆ ಇರುವುದು ಅರ್ಧ ಕಾರಣವಾದರೆ, ದಲಿತರು ಬಡವರು ಸ್ತ್ರೀಯರನ್ನು ಕುರಿತ ಸಾಮಾಜಿಕ ಧೋರಣೆ ಇನ್ನರ್ಧ ಕಾರಣ. ಗರ್ಭಿಣಿಯರಾಗುತ್ತಿದ್ದ ವಿಧವೆಯರಿಗೆ ವಿಧಿಸುತ್ತಿದ್ದ ಶಿಕ್ಷೆ ಹಾಗೂ ಅಸ್ಪøಶ್ಯತೆಯ ಆಚರಣೆಗಳಂತೂ ಅಮಾನುಷ. ಗತಕಾಲದ ಕರ್ನಾಟಕವನ್ನು ಎಗ್ಗಿಲ್ಲದೆ ಕೀರ್ತಿಸುವ ಸಂಸ್ಕøತಿ ಚಿಂತಕರು, ಎಷ್ಟೊಂದು ಆತ್ಮವಂಚಕ ಬರೆಹಗಳನ್ನು ಮಾಡಿದರು ಎಂದು ಕಸಿವಿಸಿಯಾಗುತ್ತದೆ. ಬಹುಶಃ ಬ್ರಿಟಿಶರ ಜತೆ ಬಂದ ಪಾಶ್ಚಿಮಾತ್ಯ ಆಧುನಿಕತೆ, ದಲಿತರ ಮತ್ತು ಮಹಿಳೆಯರ ಪಾಲಿಗೆ ಬಿಡುಗಡೆಕೋರನಾಗಿ ಕಾಣಿಸಿದ್ದು ಸಹಜವಾಗಿದೆ. ಲೇಖಕರು ವಸ್ತುಸ್ಥಿತಿಯನ್ನು ಅಡಗಿಸದೆ ಎಲ್ಲವನ್ನೂ ದಾಖಲಿಸುತ್ತಾರೆ.ಲೇಖಕರು ವಕೀಲರಾಗಿದ್ದರಿಂದ ದಿನಾಂಕ, ಮೊಕದ್ದಮೆಯ ಸಂಖ್ಯೆ, ಸಮಯ, ವ್ಯಕ್ತಿಯ ಮತ್ತು ಊರಿನ ಹೆಸರು, ಹಣದ ಮೊಬಲಗು ಇತ್ಯಾದಿಯನ್ನು ಅಂಕಿಸಂಖ್ಯೆ ಸಮೇತ ಕೊಡುತ್ತಾರೆ. “ಉತ್ತರೋತ್ತರ ನಮ್ಮ ತಂದೆ ತಾರೀಖು 24.10.1887ರಂದು ರಿಜಿಸ್ಟರ್ ಆಗಿದ್ದ ಮೂಲಗೇಣಿ ಕರಾರಿನ ಪ್ರಕಾರ ಶ್ರೀರಾಮಚಂದ್ರಾಪುರದ ಮಠದಿಂದ 5 ಎಕರೆ 38ಗುಂಟೆ ತರಿ ಜಮೀನನ್ನೂ 38ಗುಂಟೆ ಅಡಿಕೆ ಬಾಗಾಯ್ತನ್ನು 3 ಗುಂಟೆ ಖುಷ್ಕಿ ಭೂಮಿಯನ್ನೂ ಮೂಲಗೇಣಿಗೆ ಪಡೆದರು’’-ತರಹದ ವಾಕ್ಯಗಳು ಇಲ್ಲಿ ಸಾಕಷ್ಟಿವೆ. ಇವುಗಳಿಂದ ಬರೆಹಕ್ಕೆ ಒಂದು ನಮೂನೆಯ ಖಚಿತತೆ ಬಂದಿದೆ. ಇದುವೇ ಬರೆಹವು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ತೊಡಕನ್ನೂ ಒಡ್ಡಿದೆ. ತಾವು ಓದುತ್ತಿದ್ದ ಶಾಲೆ ಮೂರು ತಿಂಗಳಿಗೊಮ್ಮೆ ಸುಟ್ಟುಹೋಗುತ್ತಿತ್ತು ಎಂದು ಲೇಖಕರು ನಿರ್ಲಿಪ್ತವಾಗಿ ದಾಖಲಿಸಿ ಮುಂದೆ ಹೋಗುತ್ತಾರೆ. ಅವರೇ ಪ್ರಸ್ತಾಪಿಸುವ ಕ್ರೂರ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಸೇಡು ತೀರಿಸಿಕೊಳ್ಳುತ್ತಿದ್ದ ಬಗೆ ಇದ್ದೀತು ಇದು ಎಂದು ಊಹಿಸಲು ಮರೆಯುತ್ತಾರೆ. ಆತ್ಮಕತೆಗಳಲ್ಲಿ ಮುಖ್ಯವಾದುದು ಗತಕಾಲದ ಖಚಿತ ವಿವರಗಳಷ್ಟೇ ಅಲ್ಲ; ಅವನ್ನು ಮಂಡಿಸುವ ದೃಷ್ಟಿಕೋನ, ಅವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿ ಸಮಕಾಲೀನ ಬದುಕನ್ನು ಜೀವಂತಗೊಳಿಸುವ ದಾರ್ಶನಿಕತೆ ಕೂಡ.ಮಲೆನಾಡನ್ನೂ ತಮ್ಮ ಬದುಕನ್ನೂ ಒಟ್ಟಿಗೇ ಮಂಡಿಸುತ್ತಿರುವ ಮಂಜಪ್ಪನವರದು ಉದಾರ ಮಾನವತಾವಾದಿ ದೃಷ್ಟಿಕೋನ. ಕುವೆಂಪು ಸಮಕಾಲೀನರಾಗಿದ್ದ ಅವರು ತಕ್ಕಮಟ್ಟಿಗೆ ವೈಚಾರಿಕ ಮನೋಭಾವ ರೂಢಿಸಿಕೊಂಡಿದ್ದರು. ಆದರೆ ಅವರ ವೈಚಾರಿಕತೆ ಕೆಳಜಾತಿಯ ಸಂಪ್ರದಾಯಗಳನ್ನು ಮೌಢ್ಯವೆಂದು ಹೀಗಳೆಯುವಂತಹದ್ದು; ಗಣ ಬರಿಸುವುದನ್ನು ಅವರು ಕ್ಷುದ್ರದೇವರು ಎಂದು ಕರೆಯುತ್ತಾರೆ. ಆದರೂ ಮಲೆನಾಡಿನ ಕೆಲವು ಆಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಜನಸಾಮಾನ್ಯರಲ್ಲಿ ಅಗಾಧ ಮೌಢ್ಯವಿದ್ದರು ಕೂಡ ಅವರಲ್ಲಿ ಸುಸಂಸ್ಕøತಿಯಿತ್ತು” ಎನ್ನುತ್ತಾರೆ. ಮಲೆನಾಡಿಗರು ಹೆಂಡ ಕುಡಿಯುವುದನ್ನು ವ್ಯಾಖ್ಯಾನಿಸುತ್ತ “ನಾಟಿಕಾಲದಲ್ಲಿ ವಿಪರೀತ ಮಳೆ ಬರುತ್ತಿದುದರಿಂದ ನಾಟಿ ಕೆಲಸಕ್ಕೆ ಹೋಗಿ ಮನೆಗೆ ಬಂದ ನಂತರ ಸಾಮಾನ್ಯವಾಗಿ ಎಲ್ಲರೂ ಅಕ್ಕಿಹೆಂಡವನ್ನು ಸೇವಿಸುತ್ತಿದ್ದರು. ಅಕ್ಕಿಯ ಹೆಂಡ ಕುಡಿದವರು ದೃಢಕಾಯರಾಗಿ ಆರೋಗ್ಯವಂತರಾಗಿದ್ದರು. ಅವರುಗಳ ಮುಖದಲ್ಲಿ ರಕ್ತ ಚಿಮ್ಮುವಂತಿತ್ತು’’ ಎಂದು ವ್ಯಾಖ್ಯಾನಿಸುತ್ತಾರೆ. ಮಿತಿಯೆಂದರೆ, ಅವರೊಳಗೆ ಹೊಕ್ಕಿರುವ ಕುವೆಂಪು ಚಿಂತನೆ ಪುರೋಹಿತಶಾಹಿ ವಿರೋಧದ ವೈಚಾರಿಕ ಪ್ರಜ್ಞೆಯಾಗಿ ಬದಲಾಗದೆ ಹೋಗುವುದು. ಲೇಖಕರು ಆರಂಭದಲ್ಲೇ “ನನ್ನ ಬರವಣಿಗೆಯಲ್ಲಿ ಅಸತ್ಯದ ಮಾತುಗಳು ಸೇರದಿರುವಂತೆ ಅನುಗ್ರಹಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುತ್ತಾರೆ. ತನ್ನನ್ನು ಸತ್ಯದ ಪ್ರತಿಪಾದಕನೆಂದು ಬಿಂಬಿಸಿಕೊಳ್ಳುವ ಈ ಧೋರಣೆ ಬಂದಿದ್ದು, ತನ್ನ ವೈಯಕ್ತಿಕ ಮಿತಿಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬಲ್ಲ ಗಾಂಧೀಜಿಯ ಪ್ರಾಮಾಣಿಕತೆಯಿಂದ; ಅವರ `ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯಿಂದ. “ನಾನೊಬ್ಬ ಯಃಕಶ್ಚಿತ್ ವ್ಯಕ್ತಿ. ಭೂಹೀನ ಗೇಣಿದಾರನೊಬ್ಬನ ಮಗನಾಗಿ ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನದಲ್ಲಿ ಹಲವು ವಿಧವಾದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವನು. ಅನೇಕ ಎಡರು ತೊಡರುಗಳನ್ನು ಎದುರಿಸಿದ್ದ ನಾನು ಅಂದು ಕಷ್ಟಪಟ್ಟಂತೆಯೇ ತಮ್ಮ ಜೀವನದಲ್ಲಿ ಇಂದು ಕಷ್ಟ ಪಡುತ್ತಿರುವ ಜನರಿಗೆ ನನ್ನ ಅನುಭವದಿಂದ ಅಲ್ಪಸ್ವಲ್ಪವಾದರೂ ಪ್ರಯೋಜನವಾಗಬಹುದು ಎಂಬ ಆಶೆ’’ಯಿಂದ ಆತ್ಮಕತೆ ಬರೆದಿರುವುದಾಗಿ ಲೇಖಕರು ಹೇಳಿಕೊಳ್ಳುತ್ತಾರೆ. ಈ ಉದ್ದೇಶವು ತನ್ನ ಆದರ್ಶ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ಮಂಡಿಸುವುದಕ್ಕೆ ಪೂರ್ವಪೀಠಿಕೆಯಂತಿದೆ. ತನ್ನನ್ನು ಚಾರಿತ್ರ್ಯವಂತನೆಂದು ಬಿಂಬಿಸಿಕೊಳ್ಳುವ ಇಲ್ಲಿನ ಗುಣವೇ ಬರೆಹದ ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ. ಆತ್ಮಕತೆ ಬರೆಯುವವರ ಬಾಳು ಪ್ರಾಮಾಣಿಕತೆಯಿಂದ ಕೂಡಿರಬಹುದು. ಅದನ್ನು ಕಟ್ಟಿಕೊಡುವಾಗ ನೈತಿಕ ಅಹಂಕಾರ ಕೂಡಿಕೊಂಡರೆ, ಅಲ್ಲಿನ ವಿನಯ ಕೃತಕವಾಗುತ್ತದೆ. ಸ್ವಂತ ಬದುಕನ್ನು ಶೋಧಿಸಿ ಮರುಮೌಲ್ಯಮಾಪನ ಮಾಡಿಕೊಳ್ಳುವ ಆತ್ಮಕತೆಗಳು ಆತ್ಮಸಂಭಾವಿತನವಿಲ್ಲದ ಕಾರಣದಿಂದಲೇ ಸಹಜವಾಗಿ ಕಾಣುತ್ತವೆ. ಇಂದಿರಾ ಲಂಕೇಶ್, ಇಳಾವಿಜಯಾ, ಸಿಎನ್ಆರ್, ನವರತ್ನ ರಾಮರಾವ್ ಮುಂತಾದವರ ಆತ್ಮಕತೆಗಳು ತಟ್ಟನೆ ನೆನಪಾಗುತ್ತಿವೆ. ಕುವೆಂಪು ಅವರಲ್ಲೂ ಆತ್ಮಸಂಭಾವಿತನವಿದೆ. ಆದರೆ ಅದನ್ನು ದಾಟಿ ಸ್ವಮಿತಿಯನ್ನು ಹೇಳಿಕೊಳ್ಳಬಲ್ಲ ದಿಟ್ಟತನವೂ ಅವರಲ್ಲಿದೆ. ಆತ್ಮಕತೆಗಳು ಬರೆದವರ ವ್ಯಕ್ತಿತ್ವದ ಕನ್ನಡಿಗಳೇನೂ ಹೌದು. ಆದರೆ ಕೆಲವು ಕನ್ನಡಿಗಳು ತೋರಿಸುವ ಬಿಂಬಗಳು ಪೂರ್ತಿ ಅವರವೇ ಆಗಿರುವುದಿಲ್ಲ. ಈ ಅರಕೆಯಿಂದ ಆತ್ಮಕತೆಗಳಿಗೆ ಬಿಡುಗಡೆಯೂ ಇಲ್ಲ. ಅವು ಓದುಗರ ಮೆಚ್ಚುಗೆ ಮತ್ತು ಸಣ್ಣಸಂಶಯದಲ್ಲೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿರುತ್ತವೆ. ******************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು. ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು. ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ…. ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು. ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ. ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು. ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು. ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ: ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು. ***************************************************** ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…









