ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಸಣ್ಣ ತಪ್ಪು

ಲಕ್ಷ್ಮೀದೇವಿ ಪತ್ತಾರ

grayscale photo of person's back

ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ ನನಗೆ ನೀರಾಳ ತುಂಬಾ ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವಳು. ಅವಳು ಬಂದಾಗಿನಿಂದ ನನ್ನ ಅಡುಗೆ ಕೆಲಸ ನಿಂತುಬಿಟ್ಟಿದೆ. 4-5 ವರ್ಷವಾಯಿತು, ಅವಳುಬಂದು, ಲಘುಬಗೆಯಿಂದಲೆ ಪಟ್‍ಪಟ್ ಅಡುಗೆ ಮಾಡಿ ಹೋಗುವಳು. ಮೊದಲಾದರೆ (ಅವಳು ಬರುವ ಮುಂಚೆ) ಆಗ ಅಡುಗೆಯವರನ್ನು ನೇಮಿಸಿದ್ದಿಲ್ಲ. ನಾನೇ ಮಾಡಿಕೊಂಡು ಹೋಗುತಿದ್ದೆ. ಮೇಲಿನ ಕೆಲಸಕ್ಕೆ ಹಚ್ಚಿದರೂ ಅಡುಗೆ ಮಾಡಿ ಮಗನಿಗೆ ಉಣ ಸಿ ಬಾಕ್ಸ್ ಕಟ್ಟುವಷ್ಟರಲ್ಲೇ ಅವರು ಹೋಗುವುದಕ್ಕೆ ರೆಡಿ ಆಗಿರುತ್ತಿದ್ದರು. ಅವರಿಗೂ ಊಟಕ್ಕೆ ಕೊಟ್ಟು ಮುಂದೆ ನಾನು ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳಬೇಕಿತ್ತು. ನಾನು ತಾಲೂಕು ಪ್ಲೇಸಿನಿಂದ 10 ಕಿ.ಮೀ ದೂರದಲ್ಲಿರುವ ಮಲ್ಲಾಪುರ ಮುಟ್ಟಲು ಮನೆಯನ್ನು 8.30 ರಿಂದ 9.00ಗಂಟೆ ಒಳಗೆ ಬಿಡಬೇಕಿತ್ತು. ಹೈಸ್ಕೂಲ್ ಶಿಕ್ಷಕಿಯಾಗಿ ಕೈ ತುಂಬ ಸಂಬಳ ಬರುತ್ತಾದರೂ ಚೆನ್ನಾಗಿ ಕುಳಿತು ಉಣ್ಣದಿದ್ದರೆ ಎಷ್ಟು ದುಡಿದರೂ ಏನು ಪ್ರಯೋಜನ ಎನ್ನಿಸಿಬಿಟ್ಟಿತು.
ನಾವು ದುಡಿಯುವುದೇ ಉಂಡು, ತಿಂದು ಚೆನ್ನಾಗಿರಲು ಅದೇ ಇಲ್ಲದಿದ್ದರೆ ಹೇಗೆ ಎನಿಸಿಬಿಟ್ಟಿತು. ಯಾಕೆಂದರೆ ಬೆಳಿಗ್ಗೆ ಎಂದಾಕ್ಷಣದಿಂದಲೇ ಅಡುಗೆ ಮನೆ ಸೇರುವುದು ಲಘುಬಗೆಯಿಂದ ಅಡುಗೆ ಮಾಡಿ ಎಲ್ಲರಿಗೂ ಉಣ್ಣಲು ಕೊಟ್ಟು, ಬಾಕ್ಸ್ ಕಟ್ಟುವುದರಲ್ಲೆ ನನಗೆ ಉಣ್ಣಲು ಪುರುಸೊತ್ತಿರಲಿಲ್ಲ. ಗಂಟಿಲಕ್ಕತ್ತುವಂತೆ 4-5 ತುತ್ತು ಉಂಡು, ನೀರು ಕುಡಿದು ಮುಗಿಸುತ್ತಿದ್ದೆ. ಒಮ್ಮೊಮ್ಮೆ ಮಾಡಿದ ಅಡುಗೆ ಕಡಿಮೆ ಬಿದ್ದು ಮತ್ತೆ ಪೇಚಾಟ. ಅವಗೇನು ಹುರುಪು, ವಯಸ್ಸು ಹುಮ್ಮಸು ಸೇರಿ ಬೇಗ ಎದ್ದು ಮಾಡುತ್ತಿದ್ದೆ. ಈಗೀನ 40 ವರ್ಷ ದಾಟಿದ ಮೇಲೆ ದೇಹದಲ್ಲೆ ನೂರೆಂಟು ಬದಲಾವಣೆ ತಲೆ ಸುತ್ತುವುದು, ಅಲ್ಲಿ ನೋವು, ಇಲ್ಲಿ ನೋವು, ಮುಟ್ಟಿನ ಸಮಸ್ಯೆ ಒಂದೊಂದೆ ಕಾಣ ಸಿಕೊಳ್ಳಲಾರಂಭಿಸಿದವು.
ಸಾಕಪ್ಪ ಈ ಒದ್ದಾಟ. ಇಷ್ಟು ದಿನ ಕಷ್ಟಪಟ್ಟದ್ದು ಸಾಕು ನಾವು ದುಡಿಯುವುದಾದರೂ ಏತಕ್ಕೆ ಸುಖಕ್ಕೆ (ಬಯಸಿ) ಹಂಬಲಿಸಿ ದುಡಿಯುತ್ತೇವೆ. ಮತ್ತೆ ಕಷ್ಟ ಪಡುತ್ತೇವೆ. ಬರೀ ಗಳಿಕೆ ಯೋಚನೆ ಗಳಿಸಿಯಾದರೂ ಏನು ಮಾಡಬೇಕು ಮಕ್ಕಳಿಗೆ ಏನು ಬೇಕೂ, ಎಷ್ಟೂ ಬೇಕೂ ಅಷ್ಟು ಮಾಡಿದ್ದಾಗಿದೆ. ಅವರು ಸ್ವಾವಲಂಬಿಗಳಾಗಲಿ. ಎಲ್ಲಾ ನಾವೇ ಮಾಡಬೇಕೆಂದರೆ ಹೇಗೆ? ಈಗಿನ ಮಕ್ಕಳಿಗೂ ನಮ್ಮ ಕಾಲದ ಕಕ್ಕುಲಾತಿ ಕಾಳಜಿ ಕಡಿಮೆ. ನಾವು ಇಷ್ಟು ಮಾಡಿದ್ದರು ಅವರು ನಮ್ಮನ್ನು ನಾವು ಸಾಯುವರೆಗೂ ಚೆನ್ನಾಗಿ ನೋಡಿಕೊಳ್ತಾರೆಂಬ ನಂಬಿಕೆ ಇಲ್ಲ. ಸುಮ್ಮನೆ ನಮ್ಮ ಕರ್ತವ್ಯ ನಾವು ಮಾಡಿದ್ದೇವೆಂದು ಸ್ಥೀತಪ್ರಜ್ಞರಾಗಿರಬೇಕೆನಿಸಿತು. ಅದಕ್ಕಾಗಿ ಅಡುಗೆಯಾಕೆಯನ್ನು ನೇಮಿಸಿದೆ.
ನಮ್ಮ ಮನೆಯವರೂ ತಾವಾಯಿತು. ತಮ್ಮ ಡ್ಯುಟಿಯಾಯಿತು. ತಮಗೆ ಹೊತ್ತಿಹೊತ್ತಿಗೆ ಸರಿಯಾಗಿ ಊಟೋಪಚಾರವಾದರೆ ಸಾಕು. ಹಾಗಂತ ನಾನು ಕಷ್ಟ ಪಡಲು ಅವರೇನು ಹೇಳಿರಲಿಲ್ಲ. “ನಿನಗೆ ಹೇಗೆ ಬೇಕೂ ಹಾಗೆ ಮಾಡು” ಎಂದು ಸ್ಥಿತಪ್ರಜ್ಞರಂತೆ ಇದ್ದುಬಿಡುವರು ಅದರಂತೆ ನನಗಿರಲು ಬರುವುದಿಲ್ಲ ನನ್ನ ಗುಣ ಸ್ವಭಾವ ನನಗೆ.
ಹಾಗೇ ಬಂದವಳೆ ಅಕ್ಕಮ್ಮ. ಅಕ್ಕಮ್ಮನೇನು ಸೀದಾ ಅಡುಗೆ ಮನೆಗೆ ಹೋಗಿ ನಾನು ಹೇಳಿದ ತಿಂಡಿ, ಅಡುಗೆ ಮಾಡಿದ್ದು, ನಾನು ಕೊಟ್ಟ ಉಳಿದ ಅಡುಗೆ ತೆಗೆದುಕೊಂಡು ಹೋಗಿ ಬೀಡುತ್ತಿದ್ದಳು. ಚುರುಕು ಸ್ವಭಾವದ ಮಾತಿನ ಮಲ್ಲೆ ಅಕ್ಕಮ್ಮ ನಾನು ಅಡುಗೆ ಮನೆಗೆ ಹೋಗಿ ಹಾಗೇ ನೋಡುತ್ತಿದ್ದರೆ ಏನಾದರೂ ಒಟ ಒಟ ಮಾತನಾಡುವಳು ನನಗೂ ಶಾಲೆಗೆ ಹೋಗುವ ಅವಸರ ಸುಮ್ಮನೆ ಮಾತಿಗೆ ನಿಂತರೆ ಕೆಲಸ ಕೆಟ್ಟಿತೆಂದು ಅವಳಷ್ಟಕ್ಕೆ ಅವಳನ್ನು ಅಡುಗೆ ಮನೆಗೆ ಬಿಟ್ಟು ಬಿಡುತ್ತಿದ್ದೆ. ಬರೆ ಮಗನಿಗೆ, ನಮ್ಮವರಿಗೆ ಊಟಕ್ಕೆ ಬಡಿಸಿ, ಬಾಕ್ಸ್ ಕಟ್ಟಿ ನಾನು ರೆಡಿಯಾಗುತ್ತಾ ಇರುತ್ತಿದ್ದೆ. ನಂತರ ಸ್ವಲ್ಪ ನೆಮ್ಮದಿಯಿಂದ ಉಣ್ಣಲು ಸಾಧ್ಯವಾಗಿತ್ತು.

ಆದರೆ ಇತ್ತಿಚ್ಚಿಗೆ ರೆಡಿಯಾಗುವಾಗ, ದೇವರ ಪೂಜೆ ಮಾಡುವಾಗ ಬರೇ ಅಡುಗೆ ಮನೆಕಡೆಗೆ ಲಕ್ಷ್ಯ. ಅವಳೇನಾದರೂ ತೆಗೆದುಕೊಂಡು ಹೋಗುತ್ತಿರುವಳೇ ಎಂದು. ಅದಕ್ಕೆ ಕಾರಣ ಬರುವಾಗ ನೀಟಾಗಿ ಬರುವ ಅವಳು ಹೋಗುವಾಗ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡೇ ಹೋಗುತ್ತಿದ್ದಿದ್ದು. ಇದು ಇತ್ತೀಚಿಗೆ ನನ್ನ ಗಮನಕ್ಕೆ ಬಂತು. ಅವಾಗಿನಿಂದ ಹೊರಗೆ ನಾನು ರೆಡಿಯಾಗುತ್ತಿದ್ದರೂ ಅವಳ ಕಡೆಗೆ ಗಮನ ಸಂಶಯದ ಹುಳುಗೆ ಆಸ್ಪದ ಕೊಟ್ಟರೆ ಅದು ಕೊರೆದು ತಲೆ ಹಾಳು ಮಾಡಿ ಬಿಡುವುದೆಂದು ನಿಶ್ಚಯಿಸಿ ಇವತ್ತೇನಾದÀರೂ ಆಗಲಿ ಅವಳು ಹೋಗುವಾಗ ಮೇಲೆ ಸಿಕ್ಕಿಸಿದ ಸೀರೆ ನೀರಿಗೆ ಬಿಚ್ಚಿ ಸರಿಯಾಗಿ ಹೋಗಲು ಹೇಳುವುದು. ಅವಳೇನಾದರೂ ಅಂದುಕೊಳ್ಳಲಿ ನನ್ನ ಮೇಲೆ ಸಂಶಯವೇ ನಿಮಗೆ ಎಂದು ನೋಂದುಕೊಂಡರು ಚಿಂತೆಯಿಲ್ಲ. ನನ್ನ ಅನುಮಾನ ಹಾಗೇ ಕಂಡಿಲ್ಲ ಮಾತಿನ ಮಲ್ಲಿ ಅವಸರದಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿರುತ್ತಾಳೆ. ಅವೇರಡನ್ನು ಬಿಟ್ಟರೆ ಕೈ ಶುದ್ಧ ಇಲ್ಲಿವರೆಗೂ ಅಂತು ಏನೂ ಬದಲಾವಣೆ ಕಂಡಿಲ್ಲ. ಒಮ್ಮೊಮ್ಮೆ ಮಸಾಲ ಡಬ್ಬಿದಲ್ಲಿನ ಸಾಮಾನು ಬೇಗ ಆದಂಗೆ ಅನಿಸಿದರೂ ಮಾಡಿದ ಅಡುಗೆ ಲೆಕ್ಕ ಹಾಕಿದರೆ ಖರ್ಚು ಆಗಿರಬಹುದು ಎನಿಸುತ್ತೆ. ಹೆಚ್ಚೆಚ್ಚು ಅಡುಗೆ ಮಾಡ್ತಾಳಾದರೂ ಅದು ನಾನು ಕೊಟ್ಟದಲ್ಲವೆ. ಕಡಿಮೆ ಕೊಟ್ಟರೆ ನನಗೇ ಉಳಿಯುವುದಿಲ್ಲ. ಇಲ್ಲವೆ ಮಾಡಿದ ಅವಳಿಗೊಂದಿಷ್ಟೂ ಕೊಡದಿದ್ದರೆ ನಮಗೂ ಸಮಾಧಾನ ಇರುವುದಿಲ್ಲ. ಹೆಚ್ಚಿಗೆ ಕೊಟ್ಟರೆ ಮಾಡಿದ್ದು ಹೆಚ್ಚಾಗಿ ಅವಳು ಬಂದಷ್ಟು ಹೆಚ್ಚಿಗೆ ಓಯ್ಯಬಹುದು. ಅದು ಬಿಟ್ಟರೆ ಅದು ನಾನೇ ಕೊಟ್ಟರೆ ಓಯ್ಯುವುದನ್ನು ಬಿಟ್ಟರೆ ಅವಳು ಕದ್ದದ್ದು ಕಂಡಿಲ್ಲ. ಸುಮ್ಮನೆ ಅನುಮಾನಿಸುತ್ತಿರುವೆ ಎಂದು ಮತ್ತೊಮ್ಮೆ ಅನಿಸುತ್ತೆ.

ಏನಾದರೂ ಆಗಲಿ ಇವತ್ತು ಒಂದು ನಿರ್ಧಾರ ಆಗಬೇಕು. ಅವಳನ್ನು ಪರೀಕ್ಷಿಸಿಬೇಕು. ಸಿಕ್ಕರೆ ನಾಳೆಯಿಂದ ನೀನು ಬರಬೇಡ ಎಂದು ಬಿಡಬೇಕು. ಮತ್ತೊಬ್ಬರನ್ನು ನೋಡಿಕೊಂಡಿರಾಯಿತು. ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದವರನ್ನು ಎಂದೂ ಸಹಿಸಿಕೊಳ್ಳುವುದು ಬೇಡ, ಎಂದು ನಿರ್ಧರಿಸಿ ಇನ್ನೇನು ಅವಳು ಅಡುಗೆ ಮುಗಿಸುವಷ್ಟರಲ್ಲೇ ನನ್ನ ಎದೆ ಬಡಿತ ನನಗೆ ಕೇಳಿಸುತ್ತೀದೆ. ದೇವರೇ ಕೆಲಸದವರು ಸಿಗುವುದೇನು ಸುಲಭದ ಮಾತಲ್ಲ. ಅವಳು ಪ್ರಾಮಾಣ ಕಳಾಗಿರಲಿ ಸರಿ ಇದ್ದರೆ ನಾನೇ ಕ್ಷಮೆ ಕೇಳಿ ಮುಂದುವರಿಯಲು ಹೇಳಿದರಾಯಿತೆಂದು ಕೊಂಡೆ. ಸರಿ “ಅಮ್ಮಾರೆ ಕೆಲಸ ಆಯಿತು ನಾ ಹೋರಡಲೇ” ಎಂದಳು ಅಕ್ಕಮ್ಮ. ತಡೆ ಅಕ್ಕಮ್ಮ ಸ್ವಲ್ಪ ನಾಷ್ಟ ಬಡಿಸಿಕೋಡ್ತಿನಿ” ಎಂದು ಒಳಗೆ ಬಂದು ಇಡ್ಲಿ ಚಟ್ನಿ ಹಾಕಿಕೊಂಡು ಹೊರಗೆ ಬರುವಷ್ಟರಲ್ಲೆ ನನಗೆ ಒಳಗೊಳಗೆ ಡವಡವ. ಧೈರ್ಯ ಮಾಡಿ “ಏ ಅಕ್ಕಮ್ಮ ಸೀರೆ ಸರಿ ಮಾಡಿಕೊ, ಎಷ್ಟೂ ಮೇಲೆ ಸಿಕ್ಕಿಸಿಕೊಂಡಿಯಲ್ಲಾ” ಎಂದೆ. “ಇಲ್ಲ ಬಿಡ್ರಿ ಅಮ್ಮಾರೆ ಮನೆಗೆ ಹೋಗೆ ಉಣ ್ತನಿ. ನನ್ನ ಮಗನು ಉಣ್ತಾನ” ಎಂದಳು. ನಾನು ಹಠಕ್ಕೆ ಬಿದ್ದವಳಂತೆ “ನಾನು ನೋಡಬೇಕು, ನೀನು ಸಿಕ್ಕಿಸಿಕೊಂಡ ಸೀರೆ ಬಿಚ್ಚಲೇ ಬೇಕು” ಎಂದೇ ಅಷ್ಟರಲ್ಲಾಗಲೇ ಅವಳ ಮುಖ ಕಪ್ಪಿಟ್ಟಿತ್ತು. ಮೊದಲಿದ್ದ ಧೈರ್ಯ ನಾನು ಜೋರು ಮಾಡುವಷ್ಟಾರಲ್ಲಾಗಲೇ ಉಳಿಯಲಿಲ್ಲ. ಅಂಜುತಾ ಬಿಚ್ಚಿದವಳ ಸೀರೆಯಲ್ಲೇ, ಚಕ್ಕಿ, ಲವಂಗ, ಯಾಲಕ್ಕಿ, ಮೊಗ್ಗುಗಳು ಸರ ಸರ ಬಿದ್ದವು. ನನಗೂ ಶಾಕ್. ಅವಳೂ ಇದನ್ನು ನೀರಿಕ್ಷಿಸಿರಲಿಲ್ಲ ಅವಳಿಗೂ ಗಾಬರಿ. ಗರಬಡಿದವಳಂತೆ ಮಾತು ಮರೆತು ನಿಂತಿದ್ದಳು. ನಾನು ಒಂದೇ ಮಾತಿನಲ್ಲಿ “ನಾಳೆಯಿಂದ ನೀನು ಬರಬೇಡ” ಎಂದು ಬಿಟ್ಟೆ ಅವಳಿಗೆ ಈ ನಾಲ್ಕೈದು ವರ್ಷದಲ್ಲೆ ನನ್ನ ಗುಣ ಸ್ವಭಾವ ಗೊತ್ತಾಗಿತ್ತು ಎಷ್ಟೂ ಮೃದು, ಉದಾರಿಯೂ ಒಮ್ಮೆ ಅಷ್ಟೆ ಕಠಿಣ ಕಬ್ಬಿಣವೆಂದು ಅವಳು ಮುಂದೆ ಮಾತಾಡದೆ ಅಳುತ್ತಾ ಹೊರಟು ಹೋದಳು.

ಅವಳು ಹೋದ ಮೇಲೆ ಸ್ವಲ್ಪ ಹೊತ್ತು “ಹೊತ್ತಿ ಉರಿಯುವ ಒಲೆಯಂತೆ ಮನಸ್ಸು ದಗದಗಿಸುತ್ತಿತ್ತು”. ನಂತರ ತಿಳಿಗೊಂಡ ಕೊಳದಂತೆ ಆದಮೇಲೆ ವಿಚಾರ ಮಾಡಿ ನೋಡಿದೆ. ಇವತ್ತೇನು ಅವಳನ್ನು ಬೈಯ್ದು ಕಳಿಸಿದೆ. ನಾಳೆ ಹೇಗೆ ಇವತ್ತು ರವಿವಾರ ನಾಳೆ ಬೆಳಗೆದ್ದರೆ ಸೋಮವಾರ ಶಾಲೆಗೆ ಓಡಬೇಕು. ಅವಳು ಬಂದ ಮೇಲೆ ನಿಶ್ಚಿಂತೆಯಿಂದ ಉಂಡು ತಿಂದು ನೆಮ್ಮದಿಯಿಂದ ಇದ್ದೆ. ನಾನು ದುಡುಕಿದರೆ ಇಷ್ಟು ಚೆನ್ನಾಗಿ ಅಡುಗೆ ಮಾಡುವರು ಸಿಗುವರೇ ಕೆಲಸದವರು ಸಿಗುವುದೇ ಬಹಳ ಕಷ್ಟ. ಯಾರು ಏನು ಸಾಚಾ. ಅವಕಾಶ ಸಿಕ್ಕರೆ ಬಡತನದ ಕಾರಣಕ್ಕೆ ಅಲ್ಪಸ್ವಲ್ಪ ಕಳ್ಳತನ ಮಾಡುವರೇ. ಕದ್ದಿದ್ದಾದರೂ ಎಷ್ಟು?, ಹೆಚ್ಚೆಂದರೆ 50 ರೂ ಯಾ ಅಲ್ಲವೆಂದು ಒಮ್ಮೆ ಎನಿಸಿದರೆ. ದಿನದಿನಾ ಇಷ್ಟೇಷ್ಟೆ ಒಯ್ಯುತ್ತಿದ್ದರೆ ಹೇಗೆ, ನಂಬಿಕೆಗೆ ಅರ್ಹಳಲ್ಲದವಳನ್ನು ಹೊರಗೆ ಹಾಕಬೇಕು ಎಂದು ಮತ್ತೆ ಯೋಚಿಸಿತು. ತಲೆ ಕೆಟ್ಟು ಮೂರಾ ಬಟ್ಟೆಯಾಯಿತು. ಈ ಸಣ್ಣ ಘಟನೆಯಿಂದ.
ಆದರೆ ನಿಜಕ್ಕೂ ಅಕ್ಕಮ್ಮ ಪ್ರಾಮಾಣ ಕಳೇ ಆಗಿದ್ದಳು. ಅವಳು ಕಳ್ಳಿಯಲ್ಲ. ಅವತ್ತು ಮಗ. ಒಂದೇ ಸವನೆ “ಆ ಟೀಚರ ಮನೆಯಲ್ಲೆ ಮಾಡುವಂತೆ ನಮ್ಮ ಮನೆಯಲ್ಲಿ ಪಲಾವ ಮಾಡು” ಎಂದು ಗಂಟು ಬಿದ್ದಿದ್ದನಂತೆ. ಅವರ ಮನೆಯಲ್ಲಿ ಇದ್ದಂತೆ ನಮ್ಮ ಮನೆಯಲ್ಲಿ ಮಸಾಲೆ ಸಾಮಾನು ಇಲ್ಲಪ್ಪ” ಎಂದರೆ ಕೇಳಿ ತೆಗೆದುಕೊಂಡು ಬಾ ಎಂದಿನಂತೆ. “ನಿನ್ನೆಯಾದರೂ ಕೇಳಿ ಒಂದೇರೆಡು ಲಿಂಬೆ ಹಣ್ಣು ತಂದಿದ್ದೆ. ಮತ್ತೆ ಕೇಳಿದರೆ ಹೇಗೆ “ಎಂದು ಅವಳ ಚಿಂತೆಗೀಡಾಗಿ ಎಂದೂ ಮಾಡದ ತಪ್ಪನ್ನು ಮಗನ ಮಮಕಾರಕ್ಕೆ ಬಿದ್ದು ಆ ತಪ್ಪು ಮಾಡಿಸಿತಂತೆ. ಇದನೆಲ್ಲ ಹೇಳಿ ಹೇಳಿದ್ದು ಅವಳ ಮನೆ ಪಕ್ಕದ ಜೋತೆ ಗೂಡಿ ಕೆಲಸ ಮಾಡುವ ಮಲ್ಲಮ್ಮ ಮೊನ್ನೆ ಶಾಲೆ ಮೂಡಿಸಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಾಗ ಹೇಳಿದ್ದು.”ಪಾಪ ಅಕ್ಕಮ್ಮ . ತುಂಬಾ ಒಳ್ಳೆಯವಳು. ನಿಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಳು ಅವಳನ್ನು ಯಾಕೆ ಬಿಡಿಸಿದರಿ ಎಂದು ಹೇಳುತ್ತಾ ಅಕ್ಕಮ್ಮ ಆಕೆಯ ಮುಂದೆ ತನ್ನ ದುಃಖ ಹಂಚಿಕೊಂಡ ವಿಷಯ ಬಾಯ್ಬಿಟ್ಟಳು. ಈ ವಿಷಯ ತಿಳಿದ ಮೇಲೆ ನನಗೆ ನನ್ನ ದುಡುಕು ಬುದ್ಧಿ ಬಗ್ಗೆ ತುಂಬಾನೇ ಬೇಸರವಾಯಿತು. ಯಾಕೋ ಅವಳ ಮುಂದೆ ನಾನು ಸಣ್ಣವಳಾಗಿ ಬಿಟ್ಟೆನೆ ಅನಿಸಿತು.ಮತ್ತೆ ಕೆಲಸಕ್ಕೆ ಕರೆಯಲು ಹಿಂಜರಿಕೆ ಆಯಿತು

**********************************

About The Author

Leave a Reply

You cannot copy content of this page

Scroll to Top