ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಹೆಣ್ಣು

ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ ನಾನಿರುತ್ತೇನೆ” ಎ0ದು ಮಗಳ ರೂಮಿಗೆ ಶಿಫ್ಟ್ ಆಗಿದ್ದಳು. ಮದುವೆಯಾಗಿ ಗ0ಡನ ಮನೆಗೆ ಹೋದ ಮಗಳು ಬರುವುದು ವಾರಕೊಮ್ಮೆ. ಬ0ದರೂ ಜಾಸ್ತಿ ಹೊತ್ತು ಇರುತ್ತಿರಲಿಲ್ಲ. ಇಡೀ ಕೋಣೆ ತನ್ನದಾದರೂ ನಿದ್ರೆ ದೂರವಾಗಿದೆ. “ ಪರವಾಗಿಲ್ಲ ರೀ, ಇದ್ದೊಬ್ಬ ಮಗಳ ಮದುವೆ ಮಾಡಿ ನಿಷ್ಚಿ0ತೆಯಾದಿರಿ. ಇನ್ನು ನೀವು, ನಿಮ್ಮ ಪತ್ನಿ, ನಿಮ್ಮ ಕೆಲಸ, ಹಾಯಾಗಿರಬಹುದು” ಮಗಳ ಮದುವೆಯಲ್ಲಿ ಬಹಳ ಜನ ಹೇಳಿದ ಮಾತಿದು. ಅದು ನಿಜ ಕೂಡ. ತಡವಾಗಿ ಮದುವೆಯಾದರೂ, ತನ್ನದು, ಸ0ಧ್ಯಳದು ಅನ್ಯೋನ್ಯ ದಾ0ಪತ್ಯ.ತನಗಿ0ತಾ ಹೆಚ್ಚು ಸಿರಿವ0ತಿಕೆ ಅವಳ ತವರು ಮನೆಯದು. ನೋಡಲು ಸು0ದರ, ಅಷ್ಟೇ ಒಳ್ಳೆಯ ಮನಸ್ಸು. ತನ್ನ0ತಹ ಸುಮಾರಾದ  ಗ0ಡನ್ನು ಮದುವೆಯಾದುದ್ದು ಅಚ್ಚರಿಯೆ. ಇಲ್ಲ, ಅದು ಅನಸೂಯ ಅತ್ತೆಯ ದಯೆ. ಥೂ, ಯಾಕೊ ಅತ್ತೆಯನ್ನು ಮನಸ್ಸಿನಿ0ದ ತೆಗೆದು ಹಾಕಲೇ ಆಗುತ್ತಿಲ್ಲ. ತನ್ನ ಬದುಕಲ್ಲಿ ಅವಳು ಒ0ದಾಗಿಬಿಟ್ಟಿದ್ದಾಳೆ. ಮಗ್ಗಲು ಬದಲಾಯಿಸಿದ. ಸ0ಧ್ಯಳಿಗೆ ಚೊಚ್ಚಲು ಬಸಿರು, ರಮ್ಯಳದ್ದು. ಮೊದಲೇ ಇಬ್ಬರಿಗೂ  ಲೇಟ್ ಮದುವೆ, ಬಸಿರಾದಾಗ ಮದುವೆಯಾಗಿ ಎರಡು ವರುಷಗಳ ಮೇಲಾಗಿ ಪರಿಸ್ಥಿತಿ ನಾಜೂಕಾಗಿತ್ತು. ಮಗಳ0ತೆ ಜೋಪಾನ ಮಾಡಿದವಳು ಅತ್ತೆಯೆ. ಅವಳು ಇಲ್ಲದಿದ್ದರೆ ದೂರದ ತವರಿಗೆ ಕಳುಹಿಸಿ, ಅಲ್ಲಿ ಅವಳ ವಯಸಾದ ತಾಯಿಯ ಮಡಿಲಲ್ಲಿ ಬಿಡಬೇಕಿತ್ತು. ಓಡಾಟ ಬೇಡವೇ ಬೇಡ, ಸ0ಪೂರ್ಣ ವಿಶ್ರಾ0ತಿ  ಎ0ದು ಬೇರೆ ಹೇಳಿಬಿಟ್ಟಿದ್ದರಲ್ಲ. ಆ ಸಮಯಕ್ಕೆ ಅನಸೂಯ ಅತ್ತೆಯ ನೆರವಿಲ್ಲದಿದ್ದರೆ ಇ0ದು ರಮ್ಯಾ ಇರುತ್ತಲೇ ಇರಲ್ಲಿಲ್ಲ…. ಇನ್ನು ಮಲಗಲು ಸಾದ್ಯವೇ ಇಲ್ಲ ಎ0ದು ಎದ್ದು ಕುಳಿತ. ಸ0ಧ್ಯಳನ್ನು ಎಬ್ಬಿಸಿ ಎಲ್ಲವನ್ನು ಹೇಳಿಬಿಡಲೇ, ಅವಳ ಮಡಿಲಲ್ಲಿ ಮುಖವಿಟ್ಟು ಅತ್ತು ಹಗುರವಾಗಲೇ, ದಯವಿಟ್ಟು ಅತ್ತೆಗೆ ಎಲ್ಲಾ ವಿವರಿಸಿ ನನ್ನನ್ನು ಕ್ಷಮಿಸಲು ಹೇಳು ಎ0ದು ಕಾಲಿಗೆ ಬೀಳಲೇ, ಉದ್ವಿಗ್ನನಾಗಿ ಎದ್ದು ನಿ0ತ.  ಕಾಲುಗಳು ಆಗುವುದೇ ಇಲ್ಲವೆ0ದು ಮುಷ್ಕರ ಹೂಡಿದವು. ಹೇಳಲು ಉಳಿದಿರುವುದಾದರೂ ಏನು? ಎಲ್ಲ ಕಾಗದ ಪತ್ರಗಳು, ಡಾಕ್ಯುಮೆ0ಟುಗಳು ತಯ್ಯಾರಾಗಿವೆ. ವಕೀಲರು, ಲೀಗಲ್ ಅಡ್ವೈಸರ್ಗಳು ಎಲ್ಲಕ್ಕು ಸಹಿ ಹಾಕಿ ರೆಡಿ ಮಾಡಿದ್ದಾರೆ. ಇದೇನು ನೆನ್ನೆ ಮೊನ್ನೆಯ ಮಾತಲ್ಲ. ಸುಮಾರು ಮೂರು ತಿ0ಗಳು ಹಗಲು ರಾತ್ರಿ ಯೋಚಿಸಿ ಮಾಡಿದ ಯೋಜನೆ. ನಾಳೆ ಇದಕ್ಕೆಲ್ಲ ತೆರೆ ಬಿದ್ದು, ಇನ್ನು ತನ್ನ ಮಾತು, ಬೇರೆ ಡೈರೆಕ್ಟರ್ಗಳ ಇಷ್ಟದ0ತೆ ಕ0ಪನಿ ನಡೆಯುವುದು. ಅನಸೂಯ ಅತ್ತೆಗೆ ನಾಳೆ ವಿದಾಯ. ತನ್ನ ಮಗುವಿಗಿ0ತ ಪ್ರೀತಿಸಿ, ತನ್ನೆಲ್ಲ್ಲಾ ಸಾರವನ್ನುಣಿಸಿ ಈ ಕ0ಪನಿಯ ಏಳಿಗೆಗೆ ಕಾರಣಳಾದ ಅವಳನ್ನು ತಾವು ಹೊರಕಳಿಸುತ್ತಿರುವುದು. “ ಅವರದು ಹಳೇ ಕಾಲದ ತರ್ಕಗಳು, ಯೋಚನೆಗಳು. ಆ ಥರಹದ ಮೋರಾಲಿಟಿ ಈಗಿನ ಕಾಲಕ್ಕೆ ಸರಿಹೋಗಲ್ಲ. ನಮ್ಮ ಕ0ಪನಿಗೆ ಬ್ಯುಸಿನೆಸ್ಸ್ ಮುಖ್ಯ, ಧರ್ಮ, ಅಧರ್ಮ, ಈ ತರಹದ ಗೊಡ್ಡು ಯೋಚನೆಗಳಲ್ಲ. ನ್ಯಾಯ,ಅನ್ಯಾಯ ಅ0ತ ತೆಲೆಕೆಡಿಸಿಕೊಳ್ಳುವುದು, ಲ0ಚ ತಿಳಿದು ಕೊಡುವುದಿಲ್ಲ,ಯಾರನ್ನೂ ಒಲಿಸಿಕೊಳ್ಳುವುದಿಲ್ಲ ಎ0ದೆಲ್ಲಾ ಹೇಳುತ್ತಾ ಕುಳಿತರೆ ಲಾಸ್ ಆಗದೆ ಮತ್ತಿನ್ನೇನು? ಅವತ್ತು ಆ ಮನುಷ್ಯನನ್ನು  ಸರಿಯಾಗಿ ನೋಡಿಕೊ0ಡಿದ್ದರೆ , ಆ ಕಾ0ಟ್ರಾಕ್ಕ್ಟ್  ನಮ್ಮದಾಗುತ್ತಿತ್ತು., ಧರ್ಮಭೀರುಗಳಾಗಿ ವ್ಯಾಪಾರ, ವ್ಯವಹಾರ ಸಾಧ್ಯವಿಲ್ಲ. ಅನಸೂಯ ಮೇಡಮ್ ರಿಟೈರಾಗಲಿ, ಕ0ಪನಿಯ ಏಳ್ಗೆಗೆ   ಅವರಿರುವವರೆಗೆ ಸಾಧ್ಯವೆ ಇಲ್ಲ” ಬಹಳ ದಿನಗಲಿ0ದ ಅತ್ತೆಯ ಬಗ್ಗೆ ಉಚ್ಚ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕ0ಪನಿಯ ಪ್ರಗತಿಗೆ ಅವಳ ಕೊಡುಗೆ ಅಪಾರ ಎನ್ನುವುದೇನೋ ಸರಿ, ಆದ್ರೆ ಈಗಿನ ಕುಸಿತಕ್ಕೆ ಅವಳ ನೀತಿಯುತವಾದ ಯೋಚನೆಗಳು, ಅನಿಸಿಕೆಗಳು ಸುಮಾರು ಮಟ್ಟಿಗೆ  ಕಾರಣ ಎನ್ನುವುದೂ ಸುಳ್ಳಲ್ಲ. ನಾಳೆ ಅತ್ತೆಗೆ ಫೇರ್ ವೆಲ್ ಪಾರ್ಟಿ. ಅವಳಿಗೆ ದೊಡ್ಡ ಬೊಕೆಯಿತ್ತು, ಬೆಳ್ಳಿ ಗಣಪನ ವಿಗ್ರಹ ಕೊಟ್ಟು “ ಆಯಿತು, ನೀನಿನ್ನು ಹೊರಡಮ್ಮ” ಎನ್ನುವ ಕಾರ್ಯಕ್ರಮ. ಅವಳನ್ನು ಈ ರೀತಿ ವೀ ಅರ್ ಎಸ್ ತೆಗೆದುಕೊಳ್ಳುವುದಕ್ಕೆ ಕಮಿಟಿಗೆ ಸಪೋರ್ಟ್ ನೀಡಿದವನಲ್ಲಿ ತಾನೂ ಒಬ್ಬ. ಅತ್ತೆಗೂ ಇದು ಗೊತ್ತು. ಇದುವರೆಗೂ ಅವಳು ತನಗೇನೂ ಹೇಳಿಲ್ಲ. ಸ0ಧ್ಯಳಿಗೂ ಗೊತ್ತಿಲ್ಲ. ಮೊದಲೇ ಅವಳ ದೃಷ್ಟಿಯಲ್ಲಿ ತಾನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ0ತಹವನು. ಈಗ ಅತ್ತೆಯನ್ನು ಕ0ಪನಿಯಿ0ದ ಹೊರ ಕಳಿಸುವುದರಲ್ಲಿ ತನ್ನ ಪಾತ್ರವಿದೆ ಎ0ದರೆ ಭೂಮ್ಯಾಕಾಶವನ್ನು ಒ0ದು ಮಾಡಿಬಿಡುವಳು. ಬೆಳಗು ಹರಿದೇ ಬಿಟ್ಟಿತು. ತಿ0ಡಿಯನ್ನೂ ತಿನ್ನದೆ ಮನೆಯಿ0ದ ಹೊರಬಿದ್ದ. ಆಫೀಸು ತಲುಪಿ ಬೋರ್ಡ್ ರೂಮಿನಲ್ಲಿ ಸೇರಿ ಮೂಲೆ ಹಿಡಿದು ಕುಳಿತಾಗಲೂ, ಅಲ್ಲಿ ಕೊಟ್ಟ ತ0ಪು ಪಾನೀಯ ಕುಡಿದಾಗಲೂ, ಅತ್ತೆ, ಸು0ದರ ರೇಷ್ಮೆ ಸೀರೆ ಉಟ್ಟು ನಸುನಗುತ್ತಾ ಒಳ ಬ0ದದ್ದು, ಅವಳ ಬಗ್ಗೆ ಹೊಗಳಿಕೆಯ ಮಾತು ಬೇರೆಯವರು ಹೇಳಿದ್ದು ಕೇಳಿದಾಗಲೂ ಮನಸ್ಸಿನ ಚಡಪಡಿಕೆ, ಎದೆಯ ಡವಡವ ನಿಲ್ಲಲಿಲ್ಲ. ಸಭೆಯನ್ನು ಉದ್ದೇಶಿಸಿ ಎರಡು ಮಾತುಗಳನ್ನಾಡಲು ಕೇಳಿಕೊಳ್ಳಲು, ಅವಳು ಎದ್ದು ನಿ0ತಳು. ತನ್ನ ಬಗ್ಗೆ ಈಗ ಹೇಳುವಳು, ತಾನೆ0ತಹ ದ್ರೋಹಿ ಎನ್ನುವಳು, ತನ್ನ ಯೌವನ, ಜೀವನವೆಲ್ಲಾ ಧಾರೆ ಎರೆದ ಈ ಕ0ಪನಿ ತನ್ನನ್ನೆಷ್ಟು ಕ್ರೂರವಾಗಿ ಹೊರಕಳುಹಿಸುತ್ತಾ ಇದೆ ಎನ್ನುವಳು, ಬೇರೆಯವರಿರಲಿ, ಸ್ವ0ತ ಅಣ್ಣನ ಮಗನಾದ ತಾನು ಹೀಗೆ ಮಾಡಬಾರದಾಗಿತ್ತು ಎನ್ನುವಳು…. ಕಾಯುತ್ತಾ ಕುಳಿತವನಿಗೆ, ಕೈಯಲ್ಲಿದ್ದ ಗ್ಲಾಸು ಬಿದ್ದು ಒಡೆದಿದ್ದು, ಎಲ್ಲಾ ತನ್ನತ್ತ ನೋಡಿದ್ದು, ಅತ್ತೆ ಮುಗುಳ್ನಗುತ್ತ ಎಲ್ಲರಿಗೂ ವಿದಾಯ ಹೇಳಿದ್ದು, ಕ0ಪನಿಗೆ ಒಳ್ಳೆಯದಾಗಲಿ ಎ0ದು ಹರಸಿದ್ದು, ಇನ್ನು ಮು0ದೆ ಅವಳ ಜಾಗವನ್ನಾಕ್ರಮಿಸುವ ತನಗೆ ಶುಭ ಕೋರಿದ್ದು, ಯಾವುದೇ ದ್ವೇಷ, ರೋಷದ ಮಾತಾಡದಿದ್ದು, ಅತ್ತೆಯ ಎದುರು ತಾನು ತೀರ ಸಣ್ಣವನಾಗಿಬಿಟ್ಟೆ ಎ0ಬ ನೋವಿನ ವಿನಹ ಏನೂ ಅರಿವಾಗಲಿಲ್ಲ. *************************************************

ಹೆಣ್ಣು Read Post »

ಕಾವ್ಯಯಾನ

ಹೂ ಬೆಳಗು

ಕವಿತೆ ಹೂ ಬೆಳಗು ಫಾಲ್ಗುಣ ಗೌಡ ಅಚವೆ ಸರಿಯುವ ಕತ್ತಲನ್ನು ಮರದಎಲೆಗಳ ನಡುವೆ ಕುಳಿತ ಹಕ್ಕಿಗಳುತದೇಕ ಚಿತ್ತದಿಂದ ನೋಡುತ್ತಿವೆ ಆಗಷ್ಟೇ ಕಣ್ಣು ಬಿಟ್ಟ ನಸುಕುದೊಸೆ ಹೊಯ್ಯಲುಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದುಒಂದೇ ಸವನೆ ಮುಸುಕುವ ಮಂಜುಮರದ ಎಲೆಗಳ ತೋಯಿಸಿಕಚಗುಳಿಯಿಡುತ್ತಿದೆ ಆಗತಾನೇ ಹೊಳೆ ಸಾಲಿನಲ್ಲಿಮುಖ ತೊಳೆದುಕೊಂಡ ಮೋಡಗಳ ಕೆನ್ನೆಅರಳುವ ಎಳೆಬಿಸಿಲಿಗೆಕೆಂಪಾಗುಗುತ್ತಿದೆ ದಾಸಾಳದ ಹೂಗಳುಹೂ ಕೊಯ್ಯುವ ಪುಟ್ಟಿಯಪುಟಾಣಿ ಕೈಯ ಮುದ್ದು ಮಾಡುತ್ತಿವೆ ತಡವಾಗಿ ಎದ್ದ ಮುತ್ತುಮಲ್ಲಿಗೆಹೂಗಳು ಮುಖಕ್ಕೆ ಇಬ್ಬನಿಯೆರಚಿನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದಅಬ್ಬಲಿ ಹೂಗಳನ್ನುಬೀಸಿ ಬಂದ ತಂಗಾಳಿ ಮುದ್ದಿಸಿಎಬ್ಬಿಸುತ್ತಿದೆ ಹೊದ್ದ ಚಾದರ ಸರಿಸಿಮಗುವಿನ ಕನಸಿನ ಕದ ತೆರೆದುಕಣ್ಣೆವೆ ಉಜ್ಜಿಕೊಳ್ಳುತ್ತಲೇ ತೆರೆವಕೂಸಿಗೆ ಕರವೀರದ ಹೂಗಳು ಮಂದಹಾಸ ಬೀರಿವೆ ನೈದಿಲೆಯ ಮೊಗ್ಗುಗಳಿಗೆಹೂ ಮುತ್ತನಿತ್ತ ಕ್ರೌಂಚ ಪಕ್ಷಿಗಳುಹಿಮದಂತಹ ನೀರಲ್ಲಿ ತೇಲುತ್ತಿವೆಆವರಿಸಿದ ಚಳಿ ಲೆಕ್ಕಿಸದೆ ಮೊಗ್ಗುಗಳು ನಾಳೆ ಅರಳುವಖುಷಿ ಹಂಚಿಕೊಂಡರೆಪಾತರಗಿತ್ತಿಗಳು ದಿನಪತ್ರಿಕೆ ಓದುತ್ತಿವೆ ಹೂವಿನ ಪರಿಮಳವ ಹೊತ್ತೊಯ್ಯುವ ತಂಗಾಳಿಯ ರೀತಿಅಲೌಕಿಕ ಬೆಳಗಲ್ಲಿ ಅಕಾರಣ ಪ್ರೀತಿ ಎಲೆ ಎಲೆಗಳ ಮೇಲೆಕುಳಿತಿಹ ಚಿಟ್ಟೆಯ ಕಂಡುಪ್ರತಿ ಗಿಡ ತೊಟ್ಟಿವೆ ಹೂವಿನ ಬಟ್ಟೆ!! *********************************************************

ಹೂ ಬೆಳಗು Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ  ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ ಯಾವತ್ತಿಗೂ ಅವು ನಮಗೆ ಆತ್ಮೀಯವಾಗಿ ಕಾಣಿಸುತ್ತಿರಲಿಲ್ಲ. ಅವನ್ನು ಎಷ್ಟು ಬೇಗ ಹೊರತೆಗೆಯುತ್ತಿದ್ದೆವೋ ಅಷ್ಟೇ ಬೇಗ ಒಳ ಹಾಕಿ ಮುಚ್ಚಿಟ್ಟು ಎದ್ದರೇ ಸಮಾಧಾನ. ಆದರೆ ಕತೆಗಳ ಲೋಕ ಪರಿಚಯವಾಯ್ತು ನೋಡಿ ಪುಸ್ತಕಗಳ ರುಚಿಯೂ ಸಿಕ್ಕಿಬಿಟ್ಟಿತು. ಕತೆಗಳು ಹತ್ತಿರವಾದ ನಂತರ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಪಾಠಗಳು ಪಾಠವಾಗಲ್ಲದೇ ಕಥೆಗಳಾಗಿಯೂ ಇಷ್ಟವಾಗತೊಡಗಿದವು. ಕವಿತೆಗಳು ಆಪ್ತ ಹಾಡಾದವು. ಇದು ಓದಿನ ರುಚಿ ಹತ್ತಿಸಿದ ಕತೆಗಳಿಂದ ಆದ ಬಹುದೊಡ್ಡ ಲಾಭ.  ಆದರೆ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಾಮಾಮ, ಚಂಪಕದಂತಹ ಪುಸ್ತಕಗಳ ಬಗ್ಗೆ ಇರುತ್ತಿದ್ದ ಆಕರ್ಷಣೆಯ ಮಟ್ಟ ಎಷ್ಟಿರುತ್ತಿತ್ತೆಂದರೆ ಎಲ್ಲಿಯಾದರೂ ಸಿಕ್ಕರೆ ಸಾಕು ಲಪಟಾಯಿಸಿಬಿಡಬೇಕು ಎನ್ನುವಷ್ಟು. ಆದರೆ ಲಪಟಾಯಿಸುವ ಅವಕಾಶ  ಸಿಗಲಿಲ್ಲ ಅದು ಬೇರೆ ಮಾತು. ಮನೆಯಲ್ಲಿ ಕೊಡಿಸಿ ಎಂದು ದುಂಬಾಲುಬಿದ್ದರೆ ದಿಕ್ಸೂಚಿ ಓದು ಎನ್ನುವ ಉತ್ತರ ಬರುತ್ತಿತ್ತು. ದಿಕ್ಸೂಚಿಯ ಪುಟ ತಿರುವುವಾಗ ಎಂಥದೋ ನಿರಾಸೆ… ಅಲ್ಲಿ ಎಲ್ಲಿಯಾದರೂ ಇತಿಹಾಸದ ರಾಜರ ಕತೆಗಳಿದ್ದರೆ ಕಣ್ಣುಗಳು ಕೊಂಚ ಮಿಂಚುತ್ತಿದ್ದವು. ಒಂದಷ್ಟು ವರ್ಷ ದಿಕ್ಸೂಚಿಯಲ್ಲಿ ನಾಗರೀಕತೆಗಳ ಬಗ್ಗೆ ಸಚಿತ್ರ ವಿವರಣೆ ಬರುತ್ತಿತ್ತು. ಅದು ಸ್ವಲ್ಪ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಬಾಲಮಂಗಳದ ಕತೆಗಳ ಮುಂದೆ ಮೃಷ್ಟಾನ್ನದ ಮುಂದೆ ಇಟ್ಟ ಮುದ್ದೆಯ ಹಾಗೆ ಸಪ್ಪೆ ಸಪ್ಪೆ… ನನ್ನ ಗೆಳತಿಯೊಬ್ಬಳು ತನ್ನಲ್ಲಿರುತ್ತಿದ್ದ ಬಾಲಮಂಗಳ ಪುಸ್ತಕವನ್ನು ಆಗಾಗ ಶಾಲೆಗೆ ತರುತ್ತಿದ್ದಳು. ಅದನ್ನು ನೋಡುವಾಗೆಲ್ಲಾ ಇವಳೆಷ್ಟು ಅದೃಷ್ಟವಂತಳು, ಇವಳ ಅಮ್ಮ  ಇವಳಿಗೆ ಓದಲು ಕತೆ ಪುಸ್ತಕ ಕೊಡಿಸುತ್ತಾರಲ್ಲಾ ಎಂದು ಕರುಬುತ್ತಿದ್ದೆ. ರಜೆ ಸಿಕ್ಕಾಗ ಅವಳ ಮನೆಗೆ ಬಾಲ ಮಂಗಳವನ್ನು ನೋಡಲಿಕ್ಕೆಂದೇ ಹೋದದ್ದಿದೆ. ಆದರೆ ಅವನ್ನು ದೂರದಿಂದ ನೋಡಬಹುದಿತ್ತಷ್ಟೇ, ಮುಟ್ಟುವಂತಿರಲಿಲ್ಲ. ಇರಲಿ ಆ ಗೆಳತಿ ಕನಿಷ್ಟ ನೋಡಲು ಬಿಟ್ಟಿದ್ದಳಲ್ಲಾ… ಅದೇ ಸಮಾಧಾನ. ಈ ಪರಿಸ್ಥಿತಿಯನ್ನು ದಾಟುತ್ತಿರುವಾಗ ಅಚಾನಕ್ ನನಗೆ ಸಿಕ್ಕ ದೊಡ್ಡ ನಿಧಿ ಎಂದರೆ ಲೈಬ್ರರಿ ಕಾರ್ಡ್.  ನಾನು ಐದನೇ ತರಗತಿಯಲ್ಲಿದ್ದಾಗ ಬಹುಶಃ ನನ್ನಪ್ಪ ನನಗದನ್ನು ಮಾಡಿಸಿಕೊಟ್ಟದ್ದು. ನಂತರ ಅಲ್ಲಿದ್ದ ಪಂಚತಂತ್ರದ ಕತೆಗಳಿಂದ ಹಿಡಿದು ಎಲ್ಲಾ ರೀತಿಯ ಕತೆಗಳನ್ನೂ ಒಂದು ಕಡೇಯಿಂದ ಓದಿ ಮುಗಿಸಿದ್ದೆ. ಪರೀಕ್ಷೆಗಳಿದ್ದಾಗಲೂ ಕತೆ ಪುಸ್ತಕಗಳನ್ನು, ಪಠ್ಯಪುಸ್ತಕದ ನಡುವೆ ಬಚ್ಚಿಟ್ಟುಕೊಂಡು ಓದಲು ಹೋಗಿ ಅಪ್ಪನ ಕೈಗೆ ಸಿಕ್ಕುಬಿದ್ದು ಬೈಸಿಕೊಂಡದ್ದೂ ಇದೆ. ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲು ಹತ್ತಿದಾಗ ನಾನು ನನ್ನ ಜೀವನದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಓದಿದ್ದು. ನಾನು ಓದಿದ ಮೊದಲ ಕಾದಂಬರಿ ಉಷಾನವರತ್ನರಾಮರ ಬಿರುಕು. ಆ ಕತೆಯ ಧರಣಿ, ಚಾರುದಾಸ್, ಅವರ ಮುದ್ದಾದ ಮಗಳು ಈಶಾನ್ಯ… ಪ್ರತಿ ಪಾತ್ರವೂ ಇಂದಿಗೂ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದೆಷ್ಟೋ ಬಾರಿ ಆ ಪಾತ್ರಗಳು ನನ್ನನ್ನು ವಿಪರೀತ ಕಾಡಿವೆ. ಆ ವಯಸ್ಸೇ ಅಂಥದ್ದು. ಕಾದಂಬರಿಯ ಪಾತ್ರವನ್ನೇ ಆವಾಹಿಸಿಕೊಂಡು ಅನುಭವಿಸುವಂತಹ ವಯಸ್ಸು.  ನಂತರ ಓದಿನ ಸಲುವಾಗಿ ನಗರದ ಹಾಸ್ಟೆಲ್ಲಿಗೆ ಬಂದೆ. ಅಲ್ಲಿ ನಮ್ಮ ಹಾಸ್ಟೆಲ್ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಮುಂಭಾಗದ ಶೋಕೇಸಿನಲ್ಲಿ ಕುವೆಂಪುರವರು ಬರೆದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆಗಳನ್ನು ಇಟ್ಟಿರುತ್ತಿದ್ದರು. ದಿನಾ ಅವನ್ನು  ಗಮನಿಸುತ್ತಿದ್ದ ನಾನು ಒಮ್ಮೆ ತಡೆಯಲಾಗದೆ ಆ ಪುಸ್ತಕವನ್ನು ಕೊಡುತ್ತೀರಾ ಓದಿ ತಂದುಕೊಡುವೆ ಎಂದು ಕೇಳಿಯೇಬಿಟ್ಟಿದ್ದೆ. ಒಂದೆರೆಡು ದಿನ ಇಲ್ಲ ಎನ್ನುತ್ತಾ ಸತಾಯಿಸಿದ  ಹೋಟೇಲಿನ ಮಾಲೀಕರು, ಕೊನೆಗೆ ನಾ ಯಕೋ ಬಿಡೋ ಗಿರಾಕಿ ಅಲ್ಲ ಅನಿಸಿ ಒಂದಿನ ವಿವೇಕಾನಂದರ ಜೀವನ ಚರಿತ್ರೆಯನ್ನು ಮಾತ್ರ ಕೊಟ್ಟರು. ಅವತ್ತು ಆ ಪುಸ್ತಕವನ್ನು ಕೈಯಲ್ಲಿ ಹಿಡಿದದ್ದೇ ಒಂದು ರೋಮಾಂಚನ. ಅದರ ಓದು ನನ್ನಲ್ಲಿ ತಂದ ಬದಲಾವಣೆಯೂ ಒಂದು ಅದ್ಭುತವೇ ಸರಿ. ಆ ಅದ್ಭುತವೇ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದಾಗ ನನ್ನನ್ನು ತಿದ್ದಿದೆ, ಬುದ್ಧಿ ಹೇಳಿದೆ, ಸಮಾಧಾನಿಸಿದೆ, ಸರಿ ದಾರಿಯಲ್ಲಿ ನಡೆಸಿದೆ. ಆ ಪುಸ್ತಕವನ್ನು ವಾರಕ್ಕೆ ಮುಂಚೆಯೇ ಒಂದು ಮುಕ್ಕು ಬಾರದಂತೆ ಜೋಪಾನವಾಗಿಟ್ಟುಕೊಂಡು, ಓದಿ ಮುಗಿಸಿ ಹೋಟೇಲಿನ ಅಂಕಲ್ (ಇಷ್ಟು ದಿನಗಳಲ್ಲಿ ಅವರೀಗ ಅಂಕಲ್ ಆಗಿ ಬದಲಾಗಿದ್ದದ್ದೂ ಸೋಜಿಗ…) ಗೆ ಮರಳಿ ತಂದು ಕೊಟ್ಟಾಗ ಅವರ ಮುಖದಲ್ಲಿ ಒಂದು ಸಣ್ಣ ಸಂತೋಷ ಮತ್ತು ಮೆಚ್ಚುಗೆ ಇತ್ತು. ಮರಳಿ ಪಡೆದ ಪುಸ್ತಕವನ್ನು ಅದಿದ್ದ ಜಾಗದಲ್ಲೇ ಇಟ್ಟು, ಸದ್ದಿಲ್ಲದೇ ನಾ ಕೇಳದೆಯೇ ರಾಮಕೃಷ್ಣರ ಪುಸ್ತಕವನ್ನು ತಂದು ನನ್ನ ಕೈಗೆ ಇತ್ತಿದ್ದರು. ನನ್ನ ಕಣ್ಣಲ್ಲಿ ಕೃತಜ್ಞತೆಯ ಮಹಾಪೂರ… ಖುಷಿಯ ಉತ್ತುಂಗದಲಿ ನಾನಿದ್ದೆ. ಮತ್ತೊಂದು ವಾರದ ನನ್ನ ಓದು ಸಂಪನ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ಪುಸ್ತಕಗಳನ್ನು ನಾನು ಹುಡುಕಿ ಹೊರಡಲು ಶುರುಮಾಡಿದೆ. ಎಲ್ಲೇ ಪುಸ್ತಕ ಕಾಣಲಿ ಅದು ನನಗೆ ಬೇಕು ಅನಿಸುತ್ತಿತ್ತು. ನನ್ನ ಪಾಕೆಟ್ ಮನಿಯ ಬಹುಭಾಗ ಪುಸ್ತಕಗಳಿಗೇ ಖರ್ಚಾಗುತ್ತಿತ್ತು. ಇನ್ನು ನಾನು ಯಾವ ಯಾವ ಊರಿನಲ್ಲಿರುತ್ತಿದ್ದೆನೋ ಅಲ್ಲೆಲ್ಲಾ ಒಂದೊಂದು ಲೈಬ್ರರಿ ಕಾರ್ಡ್ ಇರುತ್ತಿತ್ತು ನನ್ನ ಬಳಿ. ಇನ್ನು ನೌಕರಿ ಸಿಕ್ಕಾಗ ಆದ ಮೊದಲ ಆನಂದವೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಪುಸ್ತಕ ಕೊಳ್ಳಬಹುದು ಎಂಬುದು. ಅದು ಮತ್ತೊಂದೇ ಮಟ್ಟಿಗಿನ ಖುಷಿ. ನನ್ನ ಆಸಕ್ತಿ ಎಷ್ಟು ವೈವೀಧ್ಯವಿರುತ್ತಿತ್ತೋ ಅಷ್ಟೇ ರೀತಿಯ ಪುಸ್ತಕಗಳನ್ನು ನಾನು ಓದುತ್ತಿದ್ದದ್ದು. ಸಾಹಿತ್ಯ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಸಂಗೀತ, ಜ್ಯೋಯಿಷ್ಯ, ಸಂಖ್ಯಾಶಾಸ್ತ್ರ… ಹೀಗೆ ನಾನಾ ಬಗೆಯ ಪುಸ್ತಕಗಳಿರುತ್ತಿದ್ದವು ನನ್ನ ಬಳಿ. ನನ್ನ ಗೆಳತಿಯರು ಕೆಲವೊಮ್ಮೆ ಶಾಸ್ತ್ರ ಕೇಳಲು ಬರುತ್ತಿದ್ದರು ನನ್ನ ರೂಮಿಗೆ. ಈಗ ನೆನೆದರೆ ನಗು ಬರುತ್ತದೆ. ಈಗಲೂ ಆ ಎಲ್ಲ ಪುಸ್ತಕಗಳೂ ಇವೆ… ಎಲ್ಲೋ ಮೂಲೆಯಲ್ಲಿ. ಅಪ್ಪ ಒಮ್ಮೆ ತಮಾಷೆಗೆ, “ಸುಮ್ನೆ ಒಂದು ಬೋರ್ಡ್ ಹಾಕ್ಕೊಂಡು, ಪಂಚಾಂಗ ಇಟ್ಕೊಂಡು ಕೂತುಬಿಡು ಹೋಗ್ಲಿ, ಒಂಚೂರು ಸಂಪಾದನೆಯಾದ್ರೂ ಆಗುತ್ತೆ…” ಅಂತ ಹೇಳಿ ಹೇಳಿ ನಗಾಡಿದ್ರು. ಆದ್ರೆ ಯಾರೇನೇ ಹೇಳಲಿ, ನನಗೆ ಆಸಕ್ತಿ ಹುಟ್ಟಿದ್ದನ್ನೆಲ್ಲಾ ನಾ ಓದಿದ್ದೇ ಸೈ ಎನ್ನುವಂತೆ ಓದುತ್ತಿದ್ದೆ ಆಗ. ತುಷಾರ, ಮಯೂರ, ಓ ಮನಸೇ, ಸುಧಾ, ತರಂಗ… ತಪ್ಪದೇ ನನ್ನ ಕೋಣೆ ಸೇರುತ್ತಿದ್ದವು. ನಾನಾಲ್ಕು ನ್ಯೂಸ್ ಪೇಪರ್ ಹಾಕಿಸಿಕೊಳ್ತಿದ್ದೆ ಮನೆಗೆ. ಅಕ್ಕಪಕ್ಕದವರು ಒಂದು ರೀತಿ ಹುಚ್ಚರನ್ನು ನೋಡುವ ಹಾಗೆ ನೋಡುತ್ತಿದ್ದರು. ಒಂದೆರೆಡು ಮಂದಿ ತಮ್ಮ ಮನೆಗೆ ನ್ಯೂಸ್ ಪೇಪರ್ ಹಾಕಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು. ಇಲ್ಲಿಯೇ ಬಂದು ಓದಿ ಹೋದರಾಯಿತು ಎಂದುಕೊಂಡು. ಅವರು ಬಂದು ಕೇಳಿದಾಗ ನನಗೂ ಇಲ್ಲ ಎನ್ನಲು ಸಾಧ್ಯವಿರುತ್ತಿರಲಿಲ್ಲ.  ವಾರವಿಡೀ ಕೆಲಸಕ್ಕೆ ಹೋಗುವ ತರಾತುರಿ. ಸಿಗುತ್ತಿದ್ದ ಒಂದೇ ಒಂದು ದಿನದ ಬಿಡುವು ಭಾನುವಾರ. ಭಾನುವಾರದಂದು ನಾ ಮಾಡುತ್ತಿದ್ದ ಮೊಟ್ಟ ಮೊದಲ ಕೆಲಸವೇ ಲೈಬ್ರರಿಗೆ ಹೋಗಿ ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳನ್ನು, ನೋಡಿ, ಮುಟ್ಟಿ, ತಡವಿ ಕೊನೇಗೆ  ಯಾವುದೋ ತುಂಬಾ ಬಿಡಲಾಗದ ಮೂರು ಪುಸ್ತಕಗಳಿಗೆ ಡೇಟ್ ಹಾಕಿಸಿಕೊಂಡು ತರುತ್ತಿದ್ದದ್ದು. ಅಷ್ಟಕ್ಕೂ ಡೇಟ್ ಹಾಕಿಸಿಕೊಂಡು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಾರಣ ನಾಲ್ಕೈದು ದಿನಗಳೊಳಗಾಗಿಯೇ ಅವು ಲೈಬ್ರರಿಗೆ ಮರಳಿಬಿಡುತ್ತಿದ್ದವು. ಮತ್ತೆ ಹೊಸಪುಸ್ತಕಗಳು ಮನೆ ಸೇರುತ್ತಿದ್ದವು. ಇದೊಂದು ಮಾತ್ರ ಯಾವಾಗಲೂ ಹೀಗೆ ನಡೆಯುತ್ತಿತ್ತು. ಹಾಗಾಗಿ ಲೈಬ್ರೇರಿಯನ್ನೂ ಮೂರು ಕೊಡೋ ಜಾಗದಲ್ಲಿ ನಾಲ್ಕು, ಐದು ಪುಸ್ತಕಗಳನ್ನೂ ಕೊಟ್ಟು ಕಳಿಸಿಬಿಡುತ್ತಿದ್ದ. ಭಾನುವಾರ ಬಂತೆಂದರೆ ಪೂರ್ತಿ ಎಲ್ಲ ಪೇಪರ್ರುಗಳ ಅಡಿಶನಲ್ಸ್ ಗಳನ್ನು ಓದುವುದರಲ್ಲೇ ಮುಗಿಯುತ್ತಿತ್ತು. ಯಾವುದನ್ನು ಬೇಕಾದರೂ ತಪ್ಪಿಸಿ ಬಿಡುತ್ತಿದ್ದೆನೇನೋ ಆದರೆ ಇದನ್ನು ಬಿಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ಲೋಕದ ಅರಿವಿಲ್ಲದೆ ಓದುತ್ತಾ ಕಾಲ ಕಳೆದುಬಿಡುವುದೂ ಒಂಥರಾ  ಸುಖ.  ಈಗ ಇವೆಲ್ಲಾ ನೆನಪುಗಳೂ ನನಗೇ ಒಂದು ನಮೂನಿ ದಂತಕಥೆಗಳಂತೆ ಕಾಣಿಸುತ್ತವೆ. ಕಾರಣ ಮದುವೆ, ಸಂಸಾರ, ಮಕ್ಕಳು, ಕೆಲಸ…  ಒಟ್ಟಾರೆ ಧಾವಂತದ ಈ ಬದುಕಿನ ನಡುವೆ ಓದುವ ಸುಖ ಕಳೆದುಹೋಗಿದೆ. ಸಿಗುವ ಸಣ್ಣ ಸಣ್ಣ ಸಮಯದ ತುಣುಕುಗಳನ್ನು ಜೋಡಿಸಿಕೊಂಡು ಒಂದೊಂದೇ ಪುಸ್ತಕವನ್ನು ಪ್ರೀತಿಯಿಂದ ಮುಗಿಸಬೇಕಾಗಿ ಬರುತ್ತದೆ. ಆದರೆ ಓದುವ ಪ್ರೀತಿ ಇನ್ನೂ ಬತ್ತಿಲ್ಲ, ಸ್ವಲ್ಪವೂ ಸೊರಗಿಲ್ಲ, ಬದಲಿಗೆ ದುಪ್ಪಟ್ಟಾಗಿದೆ ಎನ್ನುವುದೇ ಖುಷಿಯ ವಿಚಾರ.  ನಾವೆಲ್ಲಾ ಓದಿನ ಬಗ್ಗೆ ಚರ್ಚಿಸುತ್ತಾ, ಓದಿನ ಸುಖಕ್ಕಾಗಿ ಪುಸ್ತಕಗಳ ಕನಸುತ್ತಾ ಕೂತಿರುವಾಗ ನಮ್ಮ ಮಕ್ಕಳು ಅದಕ್ಕಿಂತ ಭಿನ್ನವಾಗಿ ಬೆಳೆಯುತ್ತಿದ್ದಾರೆ. ಆದರೆ ಆ ಭಿನ್ನತೆ  ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಮಕ್ಕಳಿಗೀಗ ಪುಸ್ತಕಗಳು ಬೇಕಿಲ್ಲ. ದೃಷ್ಯ ಮಾಧ್ಯಮದ ಎದುರು ಸಪ್ಪಗೆ ಕಾಣುವ ಪುಸ್ತಕಗಳನ್ನು ಅವರು ಮೂಸುವುದೇ ಇಲ್ಲ. ಡಿಜಿಟಲ್ ಲೈಬ್ರರಿ, ಇ ಬುಕ್ಸ್… ಹೀಗೆ ಎಲ್ಲವೂ ಮೊಬೈಲು, ಕಂಪ್ಯೂಟರಿನ ಮುಂದೆಯೇ ನಡೆಯಬೇಕು. ಅವರಿಗಾಗಿ ಕೂಡಿಟ್ಟ ಪುಸ್ತಕಗಳು, ಇಟ್ಟಲ್ಲೇ ಮುಲುಗುತ್ತವೆ. ಆದರೆ ಬುದ್ಧಿ ಮತ್ತು ಮೆದುಳಿಗೆ ಪುಸ್ತಕಕ್ಕಿಂತ ದೊಡ್ಡ ಆಹಾರವಿಲ್ಲ ಮತ್ತು ಕಣ್ಣಿಗೂ ಒಳ್ಳೆಯದು. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎನ್ನುವುದೇ ಚಿಂತೆ. ಆದರೆ ನನ್ನ ತರಗತಿಯಲ್ಲಿ ಒಬ್ಬ ಹುಡುಗನಿದ್ದಾನೆ. ಬಹಳಾ ಚೂಟಿ, ತರಲೆ, ಕಿತಾಪತಿ, ತುಂಬಾ ಬುದ್ಧಿವಂತ ಮೇಲಾಗಿ ಕವಿ ಕತೆಗಾರ. ತುಂಬಾ ಬಡತನವಿರುವ ಮನೆಯಿಂದ ಅವ ಶಾಲೆಗೆ ಬರುತ್ತಾನೆ. ಆದರೆ ಪುಸ್ತಗಳ ಬಗ್ಗೆ ಅವನಿಗೆ ಅಪಾರ ಪ್ರೀತಿ.  ಎಲ್ಲೇ ಪುಸ್ತಕ ಸಿಕ್ಕರೂ ಅವನಿಗದು ಬೇಕು. ತನ್ನ ಓರಗೆಯವರಿಗಿಂತಲೂ ಹೆಚ್ಚಿನ ಜ್ಞಾನ ಅವನದು. ಅವನಿಗೆ ಆಗಾಗ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿರುತ್ತೇನೆ. ಕಳೆದ ಬಾರಿ The magic of the lost temple ಎನ್ನುವ ಸುಧಾಮೂರ್ತಿಯವರ ಒಂದು ಪುಸ್ತಕ ಕೊಟ್ಟಿದ್ದೆ. ಅವನಿನ್ನೂ ನನಗೆ ಮರಳಿಸಿಲ್ಲ. ಒಂದುವೇಳೆ ಕೊಡದಿದ್ದರೂ ತೊಂದರೆ ಏನಿಲ್ಲ. ನನಗೆ ಗೊತ್ತು ಅದನ್ನವನು ಜೀವನಪರ್ಯಂತ ನನಗಿಂತಲೂ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ ಎಂದು. ************************************************************* –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ.  ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ ಕಷ್ಟ ಕಾರ್ಪಣ್ಯಗಳ ಕುರಿತು ಮಾತೆತ್ತಿದೆ. “ಅಯ್ಯೋ ಅದು ನಂದು ಒಬ್ಬನ್ನದೇ ಅಲ್ರೀ ಎಲ್ಲ ರೈತ ಮಕ್ಳ ಕತೇರೀ” “ಅಲ್ರೀ ನನ್ ಸಂಕಲ್ನದ ಬಗ್ಗೆ ಬರೆದವ್ರೂ ನೀವೊಬ್ರೇ, ಈಗ ಬಹುಮಾನ ಬಂತಂತ ಫೋನ್ ಮಾಡಿದವ್ರೂ ನೀವೇರೀ” ” ಶಿಶುನಾಳದಾಗ ಭೆಟ್ಟಿಯಾಗಿ ಇಪ್ಪತ್ತೊರ್ಸ ಆದ್ರೂ ನೆಪ್ಪಿಟ್ಟೀರಿ” ಎಂದು ಮಾತಾಡಿದ ಚಂಸು ದನಿಯಲ್ಲಿ ಈವರೆಗಿನ ಅವರ ಮೂರೂ ಕವನ ಸಂಕಲನಗಳಲ್ಲಿ ಕಂಡರಿಸಿದ್ದ ಬಂಡಾಯದ ಮೊಳಗು ಮತ್ತು ಮೊಹರು ಅವರ ಮಾತಲ್ಲಿ ಬತ್ತಿ ಹೋಗಿತ್ತು. ಹ್ಯಾಗಾದರೂ ಬದುಕು ಸಾಗಿಸಿದರೆ ಸಾಕು ಅನ್ನುವ ವ್ಯಥೆಯೂ ತುಂಬಿ ಕೊಂಡಂತಿತ್ತು. ಚಂಸು “ಬೇಸಾಯದ ಕತಿ” ಅನ್ನುವ ಶೀರ್ಷಿಕೆಯಲ್ಲಿ ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದರು. ರಾಸಾಯನಿಕಗಳನ್ನು ಬಳಸದೇ ಸಹಜ ಕೃಷಿಯಲ್ಲೇ ಇಳುವರಿ ಕಡಿಮೆಯಾದರೂ ಲುಕ್ಸಾನು ಇಲ್ಲವೆಂಬ ಅವರ ಅನುಭವ ಇತ್ತೀಚೆಗೆ ಎಲ್ಲ ರೈತರಿಗೂ ಮಾದರಿಯಾಗಿದೆ. ೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿರುವ ಚಂಸು ಪಾಟೀಲ್ ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಕೆಲಸ ನಿರ್ವಹಿಸಿದ್ದಾರೆ. ೨೦೦೭ ರಿಂದ ರಾಣೇಬೆನ್ನೂರಿಗೆ ಅಂಟಿದಂತಿರುವ ಕೂನಬೇವು ಗ್ರಾಮದಲ್ಲಿ ನೆಲೆಸಿದ್ದು ಸಹಜ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೂರು ಸಂಕಲನದ ಎಷ್ಟು ಕವಿತೆಗಳನ್ನು ಜನ ಓದಿದ್ದರೋ ಇಲ್ಲವೋ ಆದರೆ ಮೂರು ಸಾವಿರಕ್ಕೂ ಮೀರಿದ ಅವರ ಫೇಸ್ಬುಕ್ ಗೆಳೆಯರ ಬಳಗದಲ್ಲಿ ಅವರು ಹೊಸದೊಂದು ಕವಿತೆ ಪ್ರಕಟಿಸಿದ ಕೂಡಲೇ ಹಲವರು ಲೈಕುಗಳನ್ನು ಕೊಡುತ್ತಾರೆ. ಮತ್ತು ಮೇಲ್ನೋಟಕ್ಕೆ ಸಾಧಾರಣ ಶೈಲಿಯ ಹಾಸ್ಯದಂತೆ ಕಂಡರೂ ಆಂತರ್ಯದಲ್ಲಿ ವಿಷಾದವೇ ಅವರ ಎಲ್ಲ ಕವಿತೆಗಳಲ್ಲೂ ಸ್ಥಾಯಿಯಾಗಿ ಇರುತ್ತದೆ. ಬಂಡಾಯದ ದನಿ ಇಂಗಿ ಹೋಗಿದ್ದರೂ ಒಟ್ಟೂ ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಅವರು ಶಕ್ತವಾಗಿ ದಟ್ಟವಾಗಿ ಹೇಳುತ್ತಾರೆ. ರೈತ ವಿರೋಧೀ ನಿಲುವನ್ನು ಪ್ರಶ್ನಿಸುವ ಅವರ ಕವಿತೆಗಳ ಮುಖ್ಯ ಸ್ಥಾಯಿಯೇ ರೈತನ ನಿತ್ಯ ಬದುಕಿನ ಸಮಸ್ಯೆಗಳು ಆಗಿರುವುದನ್ನು ಗಮನಿಸಲೇ ಬೇಕು. ಇವನಿಗೇಕೆ ಕವಿತೆಯ ಉಸಾಬರಿ? ತತ್ವಮೀಮಾಂಸಕರು ಕಾವ್ಯವಿಮರ್ಶಕರು ತಗಾದೆ ತೆಗೆದರು…. ಈ ಇಳೆಗೆ ಬೆಳೆಗೆ ತಗುಲಿದ ಕಳೆ ತೆಗೆಯುವುದು ಹೇಗೆಂದು ನಾ ಚಿಂತೆಗೆ ಬಿದ್ದಿರುವೆ! ಕವಿತೆ ಬರೆಯುವಾಗಲೂ ರೈತನ ಸಮಸ್ಯೆಯೇ ಇವರ ಕಾವ್ಯದ ಪ್ರತಿಮೆಗಳಾಗುವುದು ವಿಶೇಷ. ಹಸಿರು ಟವೆಲ್ ಕಟ್ಟಿಕೊಂಡು ಉದ್ದುದ್ದದ ಭಾಷಣ ಹೊಡೆಯುವವರು ಈ ಕವಿಯಿಂದ ಕಲಿಯಬೇಕಾದ್ದು ಬಹಳ ಇದೆ. ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಎಂದು ಪ್ರತಿ ಅನುಪಲ್ಲವಿಯಲ್ಲಿ ಕೊನೆಯಾಗುವ ಕವಿತೆಯ ಆಂತರ್ಯ ಇಡೀ ಜಗತ್ತೇ ಬದಲಾದರೂ ಬದಲಾಗದ ಮನುಷ್ಯನ ಮಿತಿಯ ಬಗ್ಗೆ ಹೇಳುತ್ತದೆ. ಇಡೀ ಪದ್ಯ ಧೇನಿಸಿದ ಸಂಗತಿ ಕಡೆಯಲ್ಲಿ ಹೀಗೆ ವರ್ಣಿತವಾಗುತ್ತದೆ; ಮೋಡದಂತೆ ಕರಗುತ್ತೇವೆ; ನಿಜ, ಯಾರ ದಾಹವನ್ನೂ ಇಂಗಿಸುವುದಿಲ್ಲ! ಹೆಮ್ಮರವಾಗಿ ಬೆಳೆಯುತ್ತೇವೆ; ನಿಜ, ಯಾರ ಹಸಿವೆಯನ್ನೂ ಪೊರೆಯುವುದಿಲ್ಲ! ಮಳೆಬಿಲ್ಲಿನಂತೆ  ಬಣ್ಣಗಟ್ಟುತ್ತೇವೆ; ನಿಜ, ಎಲ್ಲರ ಸಂಭ್ರಮವಾಗಿ ಮೂಡುವುದಿಲ್ಲ! ನಕ್ಷತ್ರ‌ದಂತೆ ಮಿನುಗುತ್ತೇವೆ; ನಿಜ, ಯಾರ ಬದುಕನ್ನೂ ಬೆಳಗುವುದಿಲ್ಲ! ಬದಲಾಗುತ್ತಲೆ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಪ್ರಾಯಶಃ ಪದ್ಯ ಇಲ್ಲಿಗೇ ಆಗಿದ್ದಿದ್ದರೆ ಕವಿತೆ ಗೆಲ್ಲುತ್ತಿತ್ತು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಲು ಕವಿ ಮತ್ತೆ ಮುಂದುವರೆಸಿದ ಸಾಲುಗಳು ಪದ್ಯವನ್ನು ನಾಟಕೀಯ ಅಂತ್ಯಕ್ಕೆ ಎಡೆಮಾಡುತ್ತದೆ. “ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಈ ಸಾಲು ಪದ್ಯದ ಆಂತರಿಕ ಸತ್ವವನ್ನು ಘೋಷವಾಕ್ಯ ಮಾಡಿದ ಕಾರಣ ಮುಟ್ಟಬೇಕಾದ ಎತ್ತರ ಮುಟ್ಟದ ದೀಪಾವಳಿಯ ರಾಕೆಟ್ಟಿನಂತಾಗಿದೆ. ಬೆಳಕು ಬೆಳಕೆ ಆಗಿರುವುದಿಲ್ಲ; ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,; ಬೆಳಕಿನಲ್ಲಿ ಎಷ್ಟೊಂದು ಕತ್ತಲೆ…‌ ನಾವದನ್ನು ಗಮನಿಸುವುದೇ ಇಲ್ಲ! ಈ ಸಾಲುಗಳನ್ನು ಓದಿದ ಕೂಡಲೇ ಯಾರೋ ದಾರ್ಶನಿಕರ ನೆನಪಾದರೆ ತಪ್ಪೇನಿಲ್ಲ. ಈ ಕವಿತೆಯಲ್ಲಿ ಚಂಸು ದಾರ್ಶನಿಕ ಸಂಗತಿಗಳನ್ನೇ ಹೇಳಹೊರಟಿದ್ದಾರೆ. ಆದರೆ ಪದ್ಯದ ಕೊನೆ ಕತ್ತಲಿನಂಥ ದ್ವೇಷದಲ್ಲೂ ಪ್ರೀತಿಯ ಬೆಳಕು ಮಿಂಚುವುದಿಲ್ಲವೇ? ಅನ್ನುವಾಗ ಈ ಕವಿ ಹೇಳ ಹೊರಟ ದಾರ್ಶನಿಕ ಸತ್ಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ. ವರ್ತಮಾನದ ಸಂಗತಿಗಳಿಗೂ ಕವಿಯನ್ನು ಬಾಧಿಸುತ್ತವೆ. ಆ ಅಂಥ ಸಂಗತಿಗಳು ಕವಿತೆಗಳಾದಾಗ ಅಂದರೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಕೇಳುತ್ತಲೇ ಇರುವ ಬ್ರಷ್ಟಾಚಾರ, ಅತ್ಯಾಚಾರ, ಮಧ್ಯವರ್ತಿಗಳ ಕಾಟವನ್ನು ಈ ಕವಿ ಪ್ರಶ್ನಿಸಿ ಉತ್ತರಕ್ಕಾಗಿ ತಡುಕುತ್ತಾರೆ. ಸೀತೆಗೆ ಪರೀಕ್ಷೆಯ ಮೇಲೆ ಪರೀಕ್ಷೆ! ಕೊನೆಗೊಂದು ಶವಪರೀಕ್ಷೆ… ವರದಿಗಳೆಷ್ಟೋ ಅಷ್ಟೂ ರಾಮಾಯಣ! ಮನಿಷಾಳ ಹತ್ಯೆ ಕುರಿತಂತೆ ಏನೆಲ್ಲವನ್ನೂ ಓದಿದ ನಮಗೆ ಚಂಸು ಅವರ ಈ ಕವಿತೆ ರಾಮಾಯಣದ ಸೀತೆಯನ್ನು ಈ ಕಾಲದ ಮನಿಷಾಳಿಗೆ ಲಿಂಕ್ ಮಾಡುತ್ತಲೇ ನಿಲ್ಲದ ಈ ಅತ್ಯಾಚಾರಗಳ ಬಗ್ಗೆ ವ್ಯಥೆ ಪಡುತ್ತಾರೆ. ಬರ್ತೇನಂತ ಬಂದೇ ಬಿಟ್ಟಳು ಎಂಥ ಬಜಾರಿ ಹೆಣ್ಣಪ್ಪ! ಮಾಯಗಾತಿ ಮುತ್ತೇಬಿಟ್ಟಳು ಹೋರಿ ಮ್ಯಾಲೆ ಮಾರಿ ಕಣ್ಣಪ್ಪ! ರೈತ ಮತ್ತು ಭೂಮಿಯ ಮೇಲೆ ವ್ಯವಸ್ಥೆ ಮಾಡುತ್ತಲೇ ಇರುವ ಕಂಟಕಗಳನ್ನು ಮಾರಿಯಂತೆ ಚಿತ್ರಿಸುವ ಈ ಕವಿ ರಾಣೇಬೆನ್ನೂರು ಭಾಗದಲ್ಲಿ ಬಿಟಿ ಹತ್ತಿ ಬೀಜದಿಂದ ಆಗಿದ್ದ ಘಟನೆಯನ್ನು ಸ್ವಾರಸ್ಯವಾಗಿ ವಿಸ್ತರಿಸುತ್ತಲೇ ಒಟ್ಟೂ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತಾರೆ ಅಜ ಒಯ್ದು ಗಜ ಮಾಡುವಳು ರೂಪಾಂತರವೊ ಎಲ್ಲ ಅಜಗಜಾಂತರ! ಜೀವ ಸಂಕುಲದ ಸ್ವಭಾವಾ ತಿದ್ದುವಳು ಕುಲಾಂತರವೊ ಎಲ್ಲ ಕಲಸುಮೇಲೋಗರ! ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು! ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು ಚುಂಬಿಸಿ ರಂಬಿಸಿ ಎಗರಿಸಿ ಗಂಟು…. ಸದ್ಯ ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕುರಿತು ಚರ್ಚೆಗಳು ನಡೆದಿರುವ ಹೊತ್ತಲ್ಲಿ ಚಂಸು ಹೇಗೆ ಅಧಿಕಾರ ಪಿಪಾಸು ವ್ಯವಸ್ಥೆ ಬೇಸಾಯಗಾರನ ಬೆನ್ನು ಸುಲಿಯುತ್ತಿದೆ ಎನ್ನುವುದನ್ನು ಸರಳವಾಗಿ ಹೇಳುತ್ತಲೇ ರೈತನ ಮುಂದಿರುವ ಭವಿಷ್ಯದ ಸವಾಲುಗಳನ್ನು ಪಟ್ಟಿ ಮಾಡುತ್ತಾರೆ. ಇದರ ಮುಂದುವರೆದ ಸಾಲುಗಳನ್ನು ಅವರ ಇನ್ನೊಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ; ಬದಲಾಗುವ ಕಾಯ್ದೆಗಳ ಮಧ್ಯೆ ನಿನಗೂ ಇದೆಯೆ? ಕೃತಜ್ಞತೆಗೊಂದಿಷ್ಟು ಸ್ಥಳ? ಚಂಸು ಅವರನ್ನು ಯಾಕೋ ಬೇಸಾಯದಷ್ಟೇ ಕಾಡುವ ಸಂಗತಿಗಳು ಎಂದರೆ ಕತ್ತಲು ಮತ್ತು ಬೆಳಕು. ಅವರ ಇನ್ನೊಂದು ಪದ್ಯ ಹೀಗೆ ಕೊನೆಯಾಗುತ್ತದೆ; ಒಳಗಿನ ಕತ್ತಲೆಯ ಕಳೆಯಲು ಬೆಳೆಸಲೇಬೇಕು ಆತ್ಮಸಾಕ್ಷಿಯೊಂದಿಗೆ ನಂಟು! ಇದನ್ನು ಕವಿಯಾಗಿ ಹೇಳುವುದು ಸುಲಭ. ಆದರೆ ಬದುಕು ಅಷ್ಟು ಸರಳ ಅಲ್ಲವಲ್ಲ. ನಮ್ಮನ್ನು ಮುತ್ತಿರುವ ಕತ್ತಲನ್ನು ತೊಡೆಯುವ ಅಧಿಕಾರಕ್ಕೆ ಆತ್ಮ ಸಾಕ್ಷಿಯೇ ಸತ್ತಿದೆಯಲ್ಲ, ಅದಕ್ಕೇನು ಮಾಡಬೇಕು? ಇದು ಎಡವೂ ಅಲ್ಲ! ಬಲವೂ ಅಲ್ಲ! ಎಡಬಲವೊಂದಾದ ಏಕತೆಯ ಹಾದಿ! ಭಾವೈಕ್ಯತೆಯ ಹಾದಿ! ಉಳಿದೆಲ್ಲವೂ ಆಗಲಿ ಬೂದಿ! ಇದು ಈ ಕವಿ ನೆಚ್ಚಿಕೊಂಡ ಮೆಚ್ಚಿಕೊಂಡ ಬದುಕಿನ ಹಾದಿ. ಹಾಗಾಗಿಯೇ ಗಾಂಧಿ, ಬಸವ, ಅಂಬೇಡ್ಕರರ ಮುಂದಿಟ್ಟು ಕೊಂಡ ಸ್ಪಷ್ಟ ಹಾದಿ. ಆದರೆ ಬದುಕು ಕವಿತೆಯಷ್ಟು ಸರಳ ಅಲ್ಲವಲ್ಲ! ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ! ಅಡಿಗರ “ಶ್ರೀ ರಾಮ ನವಮಿಯ ದಿನ” ಕವಿತೆಯ ಅಣುಕು ಈ ಸಾಲುಗಳು. ಅಡಿಗರ ಈ ಕವಿತೆಯನ್ನು ನೆನೆಯದೇ ನಮ್ಮ ಯಾವುದೇ ಕಾವ್ಯ ಕುರಿತ ಸಂಕಿರಣಗಳು ನಡೆಯಲಾರವು. ಅದನ್ನು ಅರಿತ ಈ ಕವಿ ಅಣಕವಾಡಿನ ಮೂಲಕ ಮತ್ತೊಂದು ಮಜಲಿಗೆ ಒಯ್ಯುವುದು ಹೀಗೆ; ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ? ಎದೆಬಗೆದುಕೊಳ್ಳದೆ ಕಾಣಬಹುದೇ ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ? ಗಾಂಧಿಯನ್ನು ಕಾಣಬೇಕಿರುವ ರೀತಿಯನ್ನು ಈ ಕವಿತೆ ಬಗೆಯುವ ಬಗೆಯೇ ಸಶಕ್ತವಾಗಿದೆ ಮತ್ತು ವಿಶಿಷ್ಠವೂ ಆಗಿದೆ. “ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ” ಎಂದು ಒಂದು ಕವಿತೆಯಲ್ಲಿ ತಮ್ಮ ಕನಸನ್ನು ತಾವೇ ವರ್ಣಿಸುವ ಈ ಕವಿಯ ಕನಸು ಖಬರಿಲ್ಲದವೇನೂ ಅಲ್ಲ. ಸಾಮಾಜಿಕ ಮೌಲ್ಯಗಳೇ ದಿವಾಳಿಯಾಗುತ್ತಿರುವ ಹೊತ್ತಲ್ಲಿ ತೀರ ಬೇಕೇ ಬೇಕಾದ ಆದರೆ ಮರೆತೇ ಹೋದ ಖಬರನ್ನು ಚಂಸು ಎತ್ತಿ ಹಿಡಿಯುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಇಷ್ಟವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ ಮತ್ತೆ ಅಲ್ಲಿಗೆ ಧಾವಿಸಿದೆ…. ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ! ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ; ಎದೆಗೊತ್ತಿಕೊಂಡೆ! ಇಂಥ ಬರವಣಿಗೆಯ ನಡುವೆಯೇ ಬೇಂದ್ರೆಯವರ           “ಕುಣಿಯೋಣು ಬಾರಾ” ಪದ್ಯಕ್ಕೂ ಚಂಸು ಅಣಕು ಮಾಡಬಲ್ಲರು; ಅವ್ನೌನು ಲಾಕ್ಡೌನು ಮುಗೀತು ಕೊರೊನಾ ಹೈರಾಣಾ ಸಾಕಾತು ಜುಮ್ಮಂತ ನುಗ್ಗಿ ಬಿಮ್ಮಂತ ಹಿಗ್ಗಿ ಕುಣಿಯೋಣಾ ಬಾರಾ ಕುಣಿಯೋಣಾ ಬಾರಾ! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಲಾಕ್ಡೌನ್ ಕಾಲದ ಕವಿ ಈ ಚಂಸು. ಅದನ್ನು ಅತ್ಯಂತ ಸ್ವಾರಸ್ಯವಾಗಿ ಹಾಸ್ಯದಲ್ಲಿ ಹೇಳುತ್ತಲೇ ಆಳದಾಳದ ವಿಷಾದವನ್ನೂ ಗುರ್ತಿಸುವುದು ಇವರ ವಿಶೇಷ ಚಿತ್ರಕ ಶಕ್ತಿ. ಭಲ ಭಲಾ ಚಂಸು, ನಿಮ್ಮ ಪದ್ಯಗಳು ಓದುಗರದೇ ಆಗುವುದು ಈ ಸರಳ ರೀತಿಯಲ್ಲಿ ಹೇಳುತ್ತಲೇ ಸಂಕೀರ್ಣವೂ ಆಗುವ ತಿರುವುಗಳಿಂದಾಗಿ. ಮತ್ತು ಆ ತಿರುವುಗಳೇ ತಿವಿಯುವ ಆಯುಧಗಳಾಗಿ ಬದಲಾಗುವ ಕಾರಣಕ್ಕಾಗಿ. ಆದರೂ ಏನೆಲ್ಲ ಬಂಡಾಯದ ಮಾತುಗಳನ್ನು ಬರೆಯುತ್ತಿದ್ದ ನಿಮ್ಮ ಕವಿತೆಗಳು ಈಗ ಹತಾಶೆಯ ಮೂಸೆ ಸೇರಿ ನಿಜ ಬದುಕಿನ ಆವರ್ತನಗಳನ್ನು ಸರಳ ಸಾಲುಗಳಲ್ಲಿ ಕಂಡಿರಿಸುತ್ತಿರುವ ಪರಿಗೆ ದಿಗ್ಮೂಡಗೊಂಡಿದ್ದೇನೆ ಮತ್ತು ನಿಮ್ಮೊಳಗಿನ ಆ ಬಂಡಾಯ ಮತ್ತೆ ಪುಟಿದೆದ್ದು ಸದ್ಯದ ಕಾಯಿದೆ ಕಾನೂನುಗಳನ್ನು ಪ್ರಶ್ನಿಸುತ್ತಲೇ ಈ ನೆಲದ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯಲಿ ಎನ್ನುವ ಆಶದೊಂದಿಗೆ ನಿಮ್ಮ ಕವಿತೆಗಳ ಟಿಪ್ಪಣಿಯನ್ನು ಕೊನೆಗೊಳಿಸುತ್ತಿದ್ದೇನೆ. ————————————————————————————————— ಚಂಸು ಪಾಟೀಲರ ಆಯ್ದ ಕವಿತೆಗಳು ೧. ಬದಲಾಗುತ್ತಲೆ ಇದೆ ಜಗತ್ತು ಅನುಕ್ಷಣ, ಅನುದಿನ, ವರ್ಷ ಯುಗಗಳಾಚೆಗೂ ಪುನರಾವರ್ತನೆಯ ಮಧ್ಯೆಯೂ ಪರಿವರ್ತನೆಯೆ ಜಗದ ನಿಯಮವೆಂಬಂತೆ ಬದಲಾಗುತ್ತಲೇ ಇದೆ ಜಗತ್ತು! ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಮುಂಜಾನೆಯ ಇಬ್ಬನಿ ಕರಗಿತಲ್ಲ! ಮೊಗ್ಗು ಅರಳಿದೆಯಲ್ಲ; ಕೆಂಪನೆ ನೇಸರ ಬೆಳ್ಳಿತಟ್ಟೆಯಾಗಿ ಫಳಫಳಿಸುತಿಹನಲ್ಲ! ಚಿಲಿಪಿಲಿಗುಟ್ಟುತಿದ್ದ ಹಕ್ಕಿಗಳೆಲ್ಲೋ ದೂರಕೆ ಹಾರಿ ಹೋಗಿವೆಯಲ್ಲ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಭಾಷೆ, ಅದೇ ದೇಶ ಈ ಗಡಿಗಳಾಚೆ ನಾವು ಇಣುಕಿಯೂ ನೋಡುವುದಿಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ವೈಶಾಖದಿ ಬಿತ್ತಿದ ಬಿತ್ತವಿದೋ ತೆನೆದೂಗಿ ನಿಂತಿದೆ! ಆಷಾಡದ ಸಮೀರನ ಶೀತಗಾಳಿ ಬಯಲಾಗಿ ಈಗೀಗ ಮತ್ತೆ ಮೂಡಲಸೋನೆ ಕೀಳುತಿದೆ! ಮಹಾನವಮಿಗೊಂದಿಷ್ಟು ಪಡುಗಾಳಿ ಬೀಸಿದರೆ ಹಾಯೆನಿಸುತ್ತದೆ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಧರ್ಮ, ಅದೇ ಜಾತಿ ಈ ಲಕ್ಷ್ಮಣರೇಖೆಯಾಚೆ ನಾವು ಖಂಡಿತ ಕಾಲಿಡುವುದಿಲ್ಲ! ಇಲ್ಲ,.ಇಲ್ಲ

Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” ಹರಡಲಿಮೋಹದ ಕವಚ ಸರಿದಿಲ್ಲ ಸಾವೇ ದೂರವಿರು. ****************************************

ಗಝಲ್ Read Post »

ಇತರೆ, ಜೀವನ

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ: ” ನಾನ್ಯಾವ ಕರ್ಮವ ಮಾಡಿದರೆಯೂನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನುನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆಕೂಡಲ ಸಂಗಮದೇವಾ” ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ. ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ. ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.   ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ. ******************************

ಕಾಯಕದ ಮಹತ್ವ. Read Post »

ಕಾವ್ಯಯಾನ

ಅನ್ನದಗಳುಗಳ ಲೆಕ್ಕ..

ಕವಿತೆ ಅನ್ನದಗಳುಗಳ ಲೆಕ್ಕ.. ವಸುಂದರಾ ಕದಲೂರು ಕೈ ಚಾಚಿತು ಒಡಲ ಹಸಿವು, ಅನ್ನದತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪುಅಚ್ಚಿನ ನಾಣ್ಯಗಳನು. ಹಸಿದ ಉದರಕೆ ಓದಲು ಬಾರದು.ತಟ್ಟೆಗೆ ಬಿದ್ದ ಕಹಳೆ ಮೊರೆತದನಾಣ್ಯಗಳು ಕ್ರಾಂತಿಯ ಶ್ವೇತಪತ್ರಓದಿಸಲು ಪೈಪೋಟಿಗೆ ಬಿದ್ದವು.. ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆಬೀಳುವ ಅಗುಳಿನ ಸದ್ದಿಗೆ ಕಾದವರು;ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂಹೊಟ್ಟೆ ತುಂಬುವ ಅನ್ನದಗುಳುಗಳ ಕನಸುಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು. ಕಿವುಡು ಕಿವಿಗಳಿಗೆ ಸಾಮಾಧಾನದದನಿಯೊಂದು, ‘ಇಲ್ಲೀಗ ಮುಳುಗಿದ ಸೂರ್ಯ ಉದಯಿಸುತ್ತಾನೆ ಅಖಂಡ ಭೂಮಂಡಲದ ಇನ್ನೊಂದು ಭಾಗದಲ್ಲಿ’ ಸ್ವಪ್ನವೋ ಬದುಕೋ! ಪಿಸುಗುಡುತ್ತಿತ್ತು.. ಹಸಿದ ಹೊಟ್ಟೆಯನು ಅಂಗೈಲಿ ಹಿಡಿದು ಚಾಚಿದ ಕೈಗೆ ಸೂರ್ಯನನು ಕೊಟ್ಟುವರು, ಕಸಿದು ಮರೆಮಾಡುವ ದಟ್ಟ ಸಾಲುಮೋಡಗಳನು ಕಳಿಸಿ, ಅಕಾಲ ಅತಿವೃಷ್ಟಿ.. ಭೀಕರ ಅನಾವೃಷ್ಟಿ.. ತರುತ್ತಾರೆ. ಕೈಗೂ ಬಾರದ, ಬಾಯಿಗೂ ಸೇರದ,ವಿಕೋಪಗಳ ಸರಣಿಯಲಿ ಮಣ್ಣುಪಾಲಾದ ಅನ್ನದಗಳುಗಳು ಮರುಗುವ ಕಣ್ಣುಗಳಿಂದ ಉದುರುವ ನಷ್ಟದ ಕಣ್ಣೀರ ಹನಿಗಳಾಗಿ ಬೆಳ್ಳಗೆ ಹೊಳೆಯುತ್ತವೆ…. ***********************************

ಅನ್ನದಗಳುಗಳ ಲೆಕ್ಕ.. Read Post »

ಇತರೆ, ವಾರ್ಷಿಕ ವಿಶೇಷ

ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ   ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ.           ಮೊದಲೆಲ್ಲಾ ಇಂಥ ಸೌಲಭ್ಯಗಳು ಅಂದರೆ ಮೊಬೈಲ್, ಇಂಟರ್ನೆಟ್ ಹಾಗೂ ಆ್ಯಪ್ಗಳನ್ನು ಜಾಸ್ತಿಯಾಗಿ ಪುರುಷರೇ ಬಳಸುತ್ತಿದ್ದರು.ದಿನಗಳು ಸರಿದಂತೆ ಮಹಿಳೆಯರೂ ಬಳಸಲು ಪ್ರಾರಂಭಿಸಿದರು. ಒಬ್ಬ ಹೆಣ್ಣು ಮಗಳು ಕಲಿತು ನೌಕರಿ ಹಿಡಿದರೆ ಅದೊಂದು ಸಾಧನೆ ಎಂಬಂತೆ ಪರಿಗಣಿಸಿ, ಮನೆಯಲ್ಲಿರುವವರಿಗೆ ಅಂಥ ಗೌರವ ಸಿಕ್ಕಿರಲಿಲ್ಲ. ಆದರೆ ಈ ಜಾಲತಾಣಗಳ ಸಹಾಯದಿಂದ ಹೊಸ ಉಪಾಯಗಳು ಹೊಳೆದು ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಷ್ಟೋ ಮಹಿಳೆಯರು ಮನೆಯಿಂದಲೇ ಉದ್ಯೋಗ ಅಥವಾ ಹಣವನ್ನು ಸಂಪಾದಿಸುತ್ತಿದ್ದಾರೆ.            ಅಡುಗೆ ಮಾಡುವುದೆಂದರೆ ಬರೀ ಹೆಣ್ಣಿನ ಆಸ್ತಿಯಂತೆ ಬಿಂಬಿಸಿದ್ದು ಈ ಸಮಾಜ. ರುಚಿಕಟ್ಟಾದ ಆಹಾರದ ತಯಾರಿಕೆಗೆ ಒಂದು ವೇದಿಕೆಯ ಅವಶ್ಯಕತೆಯಿತ್ತು.ಅಂತಹ ವೇದಿಕೆಯನ್ನು ಮಹಿಳೆಯರು ಯೂಟ್ಯೂಬ್ ಮುಖಾಂತರ ಸಾಧಿಸಿದ್ದಾರೆ. ಒಮ್ಮೆ ಯೂಟ್ಯೂಬ್ ಅನ್ನು ಜಾಲಾಡಿಸಿದರೆ, ಹೆಚ್ಚಿನ ಅಡಿಗೆ ಸಂಬಂಧಿಸಿದ ವಿಡಿಯೊಗಳು ಹೆಣ್ಮಕ್ಕಳಿಗೆ ಸಂಬಂಧಿಸಿವೆ.ಬರೀ ಅಡಿಗೆ ಮಾಡಿ ಸಂಸಾರ ನೋಡಿಕೊಂಡು ಹೋಗುವ ಏಕತಾನತೆಯಿಂದ ಬೇಸತ್ತ ಮಹಿಳೆಯರಿಗೆ ಇದು ವರವಾಗಿದೆ. ತಮಗೆ ಗೊತ್ತಿರುವ ವಿವಿಧ ಆಹಾರದ ರೆಸಿಪಿಗಳನ್ನು ಅಪ್ಲೋಡ್ ಮಾಡಿ, ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಾನೊಬ್ಬ ಹಳ್ಳಿ ಮಹಿಳೆಯ ವಿಡಿಯೋ ನೋಡುತ್ತಿದ್ದೆ. ಹಳ್ಳಿ ಜೀವನ ಹೇಗೆ ಎಂಬುದನ್ನು ದಿನಾಲು ವಿಡಿಯೋ ಮಾಡಿ ಹಾಕುತ್ತಾಳೆ. ವಿಚಿತ್ರ ಎಂದರೆ ಆಕೆ ಕಲಿತದ್ದು ಕೇವಲ ಎಸ್ಸೆಸ್ಸೆಲ್ಸಿ. ಹೇಗೋ ಮೊಬೈಲ್ನ ಫೀಚರ್ಸ್, ಇಂಟರ್ನೆಟ್ ಬಳಕೆ ಜೊತೆಗೆ ಈ ವಿಡಿಯೋ ಹೇಗೆ ಮಾಡುವುದನ್ನು ಕಲಿತು ಅಪ್ಲೋಡ್ ಮಾಡುತ್ತಿದ್ದಾಳೆ. ಆಕೆಯೇ ಹೇಳುವಂತೆ ಗಂಡನ ಸಹಾಯ ಸಹಕಾರ ಇದೆ. ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ತಿಂಡಿ, ಮಧ್ಯಾಹ್ನದ ಊಟದ ವಿಶೇಷ, ಸಂಜೆ ತಿಂಡಿಗಳು, ದನ ಮೇಯಿಸುವುದು, ಹಾಲು ಹಿಂಡುವುದು, ಬೆಣ್ಣೆ ತೆಗೆಯುವುದು, ಹಳ್ಳಿ ಶೈಲಿಯಲ್ಲಿ ಕಾಯಿ ಪಲ್ಯಗಳನ್ನು ಮಾಡುವುದು ಹೀಗೆ ಹಳ್ಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆಕೆ ವಿಡಿಯೋದಲ್ಲಿ ಸಂಗ್ರಹಿಸುತ್ತಾಳೆ. ನಿಜವಾಗಲೂ ಆಕೆಯನ್ನು ನೋಡಿದರೆ ಸಂತೋಷ. ಒಬ್ಬ ಹಳ್ಳಿಯ ಹೆಣ್ಣುಮಗಳು ಅಷ್ಟಷ್ಟೇ ಕಲಿತು ವಿಡಿಯೋ ಮಾಡಿ ಜನರಿಂದ ಸಾಕಾಗುವಷ್ಟು ಲೈಕ್ಸ್, ಕಾಮೆಂಟ್ಸ್ ಪಡೆಯುತ್ತಾಳೆ. ಜನರು ತಮಗೆ ಯಾವ ವಿಷಯ ಬೇಕು ಅನ್ನೋದನ್ನು ಅವಳಿಗೆ ಹೇಳುತ್ತಾರೆ. ಇದು ಹೆಣ್ಮಕ್ಕಳು ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೀದ್ದಾರೆ ಅನ್ನುವುದಕ್ಕೆ ಉದಾಹರಣೆ.     ಫೇಸ್ ಬುಕ್ ನಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದವರ ಫ್ರೆಂಡ್ಶಿಪ್ ಮಾಡಿಕೊಂಡು, ಜೊತೆಗೆ ತಮಗನಿಸಿದ್ದನ್ನು ಚುಟುಕಾಗಿ ತಮ್ಮ ವಾಲ್ ಮೇಲೆ ಬರೆಯುತ್ತಾ ಜನರಿಂದ ಪ್ರೇರಣೆ ಸಿಕ್ಕಾಗ ಲೇಖನ, ಕವಿತೆ, ಕತೆಗಳನ್ನು ಬರೆದವರು ಹಲವರು. ಎಷ್ಟೋ ಹೆಣ್ಮಕ್ಕಳು ಸಂಗೀತದ ಆಸಕ್ತಿಯಿಂದ ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಹಾಕಿ, ಜನರಿಂದ ಮನ್ನಣೆಯನ್ನು ಪಡೆದು, ಸಂಗೀತ ಲೋಕದ ಗಣ್ಯರಿಗೆ ಅದು ತಲುಪಿದಾಗ ಅವಕಾಶಗಳನ್ನು ಪಡೆದು ಉತ್ತಮ ಹಾಡುಗಾರರಿದ್ದಾರೆ. ರಾಣು ಮಂಡಲ್ ಎಂಬ ನಿರ್ಗತಿಕ ಮಹಿಳೆ ರೈಲ್ವೆ ಸ್ಟೇಷನ್ನಲ್ಲಿ ಹಾಡುವುದನ್ನು ವಿಡಿಯೊ ಮಾಡಿಕೊಂಡವ ಫೇಸ್ಬುಕ್ನಲ್ಲಿ ಹಾಕಿದಾಗ ಕ್ರಾಂತಿಯೇ ಆಗಿ ಹೋಗಿತ್ತು. ರಾತೋರಾತ್ರಿ ರಾಣು ಮಂಡಾಲ್ ಪ್ರಸಿದ್ಧರಾದಳು. ಹಿಮೇಶ್ ರೆಷಮಿಯಾ ಆಕೆಯನ್ನು ಕರೆಯಿಸಿಕೊಂಡು ತನ್ನ ಜೊತೆ ಹಾಡಲು ಅವಕಾಶ ಕೊಟ್ಟ. ಎಲ್ಲೋ ಇದ್ದವಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದು ಈ ಫೇಸ್ಬುಕ್. ಇತ್ತೀಚೆಗಷ್ಟೇ ಮಾನಸಿ ಸುಧೀರ್ ಹಾಡಿದ ಹಾಡುಗಳು ವೈರಲ್ ಆದವು. ಕೊರೊನಾದಿಂದ ಲಾಕ್ ಡೌನ್ ದೇಶಾದ್ಯಂತ ಘೋಷಣೆಯಾದಾಗ, ದಿನದ ಬೇಸರದ ಜೊತೆಗೆ ತನ್ನ ಕಲೆಯ ಪ್ರದರ್ಶನದ ಕಂಟಿನ್ಯೂಟಿಯನ್ನು ಫೇಸ್ ಬುಕ್ ಮುಖಾಂತರ ಮಾಡಿ, ಜನರ ಪ್ರಶಂಸೆಗೆ ಪಾತ್ರರಾದರು.ಅದೊಂದು ಪ್ರೇರಣೆಯಾಗಿ ಹಲವು ಹಾಡುಗಳನ್ನು ಹಾಡಿ, ಇತರರಿಗೂ ಪ್ರೇರಣೆಯಾದರು. ಇನ್ಸ್ಟಾಗ್ರಾಮ್ನಲ್ಲಿ ವಿವಿಧ ಬಗೆಯ ಫೋಟೊಗಳನ್ನು ಹಾಕಿಯೇ ಮನಸ್ಸಿನ ಖುಷಿಯನ್ನು ಪಡೆದವರು ಕೆಲವರು. ಮಹಿಳೆಯರು ಅದೇ ಬೇಸರದಿಂದ ಹೊರಬರಲು ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬ ಸಮೇತ ಎಲ್ಲೋ ಸುತ್ತಾಡಿದ ಸ್ಥಳಗಳನ್ನು, ಭೇಟಿಕೊಟ್ಟ ಕಟ್ಟಡಗಳನ್ನು ಫೋಟೋಗಳ ಮುಖಾಂತರ ಹಂಚಿಕೊಂಡು, ಖುಷಿ ಪಡೆದವರಿದ್ದಾರೆ. ಏನೂ ಲಾಭವಿರದಿದ್ದರೂ ಮನಸ್ಸಿನ ಖುಷಿಯ ಮುಂದೆ ಯಾವುದೂ ಇಲ್ಲ ಎನ್ನುವುದಂತೂ ಅಷ್ಟೇ ನಿಜ.  ಇನ್ನು ವಾಟ್ಸಪ್ಪಿಗೆ ಬಂದರಂತೂ ಮಹಿಳೆಯರು ತಮಗೆ ಬೇಕಾದ ಗ್ರೂಪ್ಗಳನ್ನು ಮಾಡಿಕೊಂಡು ಮನದಾಳದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರಿಂದ ಹಿಡಿದು ಪಿಜಿ ಸಹಪಾಠಿಗಳ ವರೆಗೆ ಗ್ರೂಪ್ ಹೊಂದಿದ್ದಾರೆ. ಕುಟುಂಬದವರ, ನೆರೆಹೊರೆಯವರ ಗ್ರೂಪುಗಳು ಬೇರೆ.ಇಲ್ಲೂ ಕೂಡ ತಮ್ಮಿಚ್ಛೆಯಂತೆ ಗ್ರೂಪ್ಗಳಿಗೆ ಆಹಾರ, ವಿಹಾರ, ಫೋಟೋ, ಸಾಹಿತ್ಯಿಕ ಚಟುವಟಿಕೆ, ನಾಟಕ, ನೃತ್ಯ, ಸಂಗೀತ ಹೀಗೆ ಹಲವು ವಿಷಯಗಳ ಗ್ರೂಪ್ಗಳಲ್ಲಿ ಭಾಗಿಯಾಗಿ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಬಿತ್ತರಿಸಿದ್ದಾರೆ.ಮಹಿಳೆ ಉದ್ಯೋಗಿಯಾಗಿದ್ದರೆ ಉದ್ಯೋಗಕ್ಕೆ ಸಂಬಂಧಿಸಿದ ಗ್ರೂಪ್ ಗಳಿವೆ. ತನಗನಿಸಿದ್ದನ್ನು ತನ್ನ ಆತ್ಮೀಯರಿಗೆ ಹಂಚುವ ಮತ್ತು ಚಾಟಿಂಗ್ ಮಾಡುವ ಮೂಲಕ ಆನಂದಿಸುತ್ತಿದ್ದಾಳೆ. ಎಷ್ಟೋ ಮಾನಸಿಕ ನೋವುಗಳು ಸಮಾನ ಮನಸ್ಕರಿಗೆ ಹೇಳಿದಾಗ ಸಾಂತ್ವನವನ್ನು ಪಡೆದಿದ್ದಾಳೆ. ಆಸಕ್ತಿದಾಯಕ ವಿಷಯಗಳಿಗೆ ಸ್ಫೂರ್ತಿ ಸಿಕ್ಕಾಗ ಜಗತ್ತನ್ನೇ ಗೆದ್ದಷ್ಟು ಖುಷಿ. ಮನೆಯಲ್ಲೇ ಕುಳಿತು ಇಷ್ಟವಾದ ಕೋರ್ಸುಗಳಿಗೆ ಉದ್ಯೋಗದ ಸಂದರ್ಶನಗಳಿಗೆ ಹಾಜರಾಗಿದ್ದಾಳೆ. ಆನ್ ಲೈನ್ ಶಾಪಿಂಗ್ ಎನ್ನುವುದು ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಸಿಕ್ಕಾಪಟ್ಟೆ ಅವಕಾಶ ನೀಡಿದೆ. ಮನೆಯಿಂದ ಹೊರಬರಲಾರದ ಅನಿವಾರ್ಯತೆಯಲ್ಲಿರುವ ಮಹಿಳೆಯರು ಆನ್ ಲೈನ್ ಕ್ಲಾಸಸ್ ಗಳನ್ನು ತೆಗೆದುಕೊಂಡು ಇದ್ದಲ್ಲಿಂದಲೇ ಹಣವನ್ನು ಗಳಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಜನರನ್ನು ಸಮಾಜದ ಏಳ್ಗೆಗಾಗಿ ಸಂಘಟಿಸುವಲ್ಲಿ ಸಾಮಾಜಿಕ ಆಪ್ ಗಳ ಬಳಕೆ ಉಪಯೋಗಿಯಾಗಿದೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ನಿರತರಾದ ಮಹಿಳೆಯರೆಷ್ಟೋ ಜನರಿದ್ದಾರೆ. ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರ ಕೊರತೆಯಿದ್ದಾಗ ತಮ್ಮದೇ ಬ್ಲಾಗ್ಗಳನ್ನು ತೆರೆದು ಜನಪ್ರಿಯರಾದವರೂ ಇದ್ದಾರೆ.ಮುದ್ರಣ ಕ್ಷೇತ್ರ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ಮ್ಯಾಗಜೀನ್ ಗಳು ಹುಟ್ಟಿಕೊಂಡಿವೆ.ಒಟ್ಟಿನಲ್ಲಿ ಮಹಿಳೆಯರು ಆಧುನಿಕತೆಗೆ ಒಗ್ಗಿಕೊಂಡು, ಜಾಲತಾಣಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಷಯದ ಮಂಡನೆ, ವಿಚಾರಗಳ ಹಂಚಿಕೆ, ಉದ್ಯೋಗ ಕೊಡುವ-ಪಡೆಯುವ, ಹಣ ಗಳಿಸುವ ಸಮಾಜಮುಖಿ ಕಾರ್ಯಗಳಿಗೆ ಜಾಲತಾಣಗಳು ಮಹಿಳೆಯರಿಗೆ ಸಹಾಯಕಾರಿಯಾಗಿವೆ. ಜೊತೆಗೆ ಅವುಗಳಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಜಾಕಚಕ್ಯತೆಯೂ ಮಹಿಳೆಯರಿಗೆ ಇರಬೇಕು. ಇದನ್ನೊಂದು ಹೊರತುಪಡಿಸಿದರೆ ಜಾಲತಾಣಗಳು ತುಂಬಾನೇ ಸಹಕಾರಿ. ************************************************************

Read Post »

ಇತರೆ, ವಾರ್ಷಿಕ ವಿಶೇಷ

ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ ಮತ್ತು ತಾಯಿ ಶ್ರೀಮತಿ.ಮೀನಾಕ್ಷಿ ಪಳಂಗಾಯ. ಓರ್ವ ಸಹೋದರಿ ಹಾಗೂ ಓರ್ವ ಸಹೋದರ ರಿದ್ದಾರೆ. ಶಿಕ್ಷಣ: ಅಜ್ಜಿ ಮನೆಯಾದ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಇದ್ದು ಪ್ರಾಥಮಿಕ ಶಿಕ್ಷಣವನ್ನ  ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ  ಜೂನಿಯರ್ ಕಾಲೇಜು,ಮಡಿಕೇರಿ ಯಲ್ಲಿ ಪಡೆದು,ಬಳಿಕ ಪಿ.ಯು.ಸಿ.ಸಂತ ಫಿಲೋಮಿನ ಕಾಲೇಜು,ಪುತ್ತೂರು, ಪದವಿ – ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ – ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ ದಿಂದ ಪಡೆದಿದ್ದಾರೆ.             1998 ರಲ್ಲಿ ಅಮೃತ ರಾಜ್ ಅವರೊಂದಿಗೆ ವಿವಾಹದ ಬಳಿಕ, ಕೊಡಗಿನ ಮಡಿಕೇರಿ ತಾಲೂಕಿನ ಚಂಬು ಗ್ರಾಮದಲ್ಲಿ ವಾಸ.ಮಗಳು  ಮನಾಲಿ,ಮಗ ಆಷಯ್,ಅತ್ತೆ ಮತ್ತು ಮಾವಂದಿರೊಂದಿಗೆ ತುಂಬು ಕುಟುಂಬದಲ್ಲಿ ಜೀವನ. ತನ್ನನ್ನು ಕವಿ,ಲೇಖಕಿ ಎಂದು ಪರಿಚಯಿಸಿ ಕೊಳ್ಳುವುದಕ್ಕಿಂತ ಹೆಚ್ಚಾಗಿ “ಕೃಷಿಕ ಮಹಿಳೆ”ಎಂದು ಹೆಮ್ಮೆಯಿಂದ  ಹೇಳಿಕೊಳ್ಳುವುದು  ಅವರಿಗೆ ಹೆಚ್ಚು  ಖುಷಿ ಕೊಡುತ್ತದೆ. ಸ್ಮಿತಾರ ಮೊದಲ ಕವನ ಸಂಕಲನ “ಕಾಲ ಕಾಯುವುದಿಲ್ಲ”,(2008)  ಬಳಿಕ ಬಂದ ಕವನ ಸಂಕಲನ “ತುಟಿಯಂಚಲಿ ಉಲಿದ ಕವಿತೆಗಳು”(2014),ನಂತರ ಬಂದದ್ದು ಪ್ರಬಂಧ ಸಂಕಲನ “ಆಂಗಳದಂಚಿನ ಕನವರಿಕೆಗಳು”(2015). ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ  “ಲೇಡಿಸ್  ಡೈರಿ” ಶೀರ್ಷಿಕೆಯ ಅಂಕಣದಲ್ಲಿ ಹಲವಾರು ಲೇಖನಗಳನ್ನೂ ಬರೆದಿರುವ ಅನುಭವವಿದೆ.ಒಂದು ಕವನ ಸಂಕಲನ  ಒಂದು ಪ್ರಬಂಧ ಸಂಕಲನ  , ಅಚ್ಚಿನಲ್ಲಿವೆ. ಹಲವಾರು ಪತ್ರಿಕೆಗಳ,ಸಂಘ ಸಂಸ್ಥೆಗಳ ಕವನ ಸ್ಪರ್ಧೆ,ಪ್ರಬಂಧ ಸ್ಪರ್ಧೆ ಗಳಲ್ಲಿ ಬಹುಮಾನಗಳು ದೊರೆತಿವೆ.ಆಕಾಶವಾಣಿ ಮಡಿಕೇರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಸ್ಮಿತಾರಿಗೆ ದೊರಕಿರುವ ಪ್ರಶಸ್ತಿ ,ಪುರಸ್ಕಾರಗಳಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ,ಎಂ,ಶ್ರೀ ಪ್ರಶಸ್ತಿ, ಶ್ರೀಮತಿ,ಸುಶೀಲ ಶೆಟ್ಟಿ ಸ್ಮಾರಕ  ಪ್ರಶಸ್ತಿ,ಸುಳ್ಯ ತಾಲೂಕಿನ ಸಾಹಿತ್ಯರತ್ನ,ದಾರಿ ದೀಪ ಪತ್ರಿಕೆಯ ಕಾಯಕರತ್ನ ,ಪ್ರಮುಖವಾದವುಗಳು. ‌ಅಪಾರ ಪ್ರತಿಭೆಯುಳ್ಳ ಸ್ಮಿತಾ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಂದರ್ಶನ ನೀವು ಕವಿತೆ ಬರೆಯಲು ಪ್ರಾರಂಭಿಸಿದ್ದು ಯಾವಾಗ? ನಾನು ಕವಿತೆ ಬರೆಯಲು ತೊಡಗಿದ್ದು ತೀರಾ ತಡವಾಗಿ, ಎರಡನೇ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ .ನನಗಾಗ ಹತ್ತೊಂಬತ್ತು ವಯಸ್ಸಿರಬಹುದು. ಆಗ ಯಾವುದೋ ಹುಕಿಯಲ್ಲಿ ಒಂದಷ್ಟು ಆರಂಭಿಕ ಕವಿತೆಗಳನ್ನು ಬರೆದದ್ದು ಬಿಟ್ಟರೆ, ನಂತರ ಮದುವೆಯಾಗಿ ಎಷ್ಟೋ ವರ್ಷಗಳ ಬಳಿಕ ಕವಿತೆಯತ್ತ ವಾಲಿಕೊಂಡೆ. ಕವಿತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ? ಮೊದಲನೆಯದಾಗಿ,  ಕವಿತೆ ಬಗ್ಗೆ ಏನೊಂದೂ ತಿಳುವಳಿಕೆ ಇಲ್ಲದಿದ್ದರೂ ಕಾಲೇಜಿನಲ್ಲಿರುವಾಗ ಉಪನ್ಯಾಕರ ಪ್ರೇರಣೆಯಿಂದ, ಅವರ ಬಳಿ ಒಳ್ಳೆ ವಿದ್ಯಾರ್ಥಿ ಅನ್ನಿಸಿಕೊಳ್ಳ ಬೇಕು ಅನ್ನುವ ನಿಟ್ಟಿನಲ್ಲಿ ಒಂದಷ್ಟು ಕವಿತೆ ಗೀಚಿದ್ದು ಬಿಟ್ಟರೆ, ನಂತರ ನನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ, ಹಳ್ಳಿ ಮೂಲೆಯೊಂದರಲ್ಲಿ ವಾಸ ಮಾಡುವ ನಾನು ಲೋಕಕ್ಕೆ ತೆರೆದುಕೊಳ್ಳುವುದ್ದಕ್ಕಾಗಿ ಕವಿತೆ ಬರೆಯಲು ತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅನಿಸಿಕೆಯನ್ನು ಅಭಿವ್ಯಕ್ತಿ ಪಡಿಸಲು ಕವಿತೆ ಒಂದು ನಿರಾಪಯಕಾರಿ ಮಾಧ್ಯಮ ಅಂತ  ಅನ್ನಿಸಿ ಕವಿತೆಯ ತೆಕ್ಕೆಗೆ ಬಿದ್ದೆ. ನಿಮ್ಮ ಕವಿತೆಗಳ ಬಗ್ಗೆ ನಿಮಗೆ ಏನನಿಸುತ್ತದೆ ನನ್ನ ಬರಹಗಳ ಮೌಲ್ಯ ಮಾಪನ ಮಾಡಿಕೊಳ್ಳುವುದಕ್ಕಾಗಿ ನಾನು ಪತ್ರಿಕೆಗಳಿಗೆ ಬರೆಯುವೆ. ಪ್ರಕಟಗೊಂಡಾಗ ಸಹಜವಾಗಿ ಖುಷಿಯಾಗುತ್ತದೆ. ಅದು ಮತ್ತಷ್ಟು ಬರೆಯಲು ಪ್ರೇರೇಪಿಸುವಂತೆ ಮಾಡುತ್ತದೆ.ಆದರೆ  ಉತ್ತಮ ಕವಿತೆ ಬರೆಯಲು ಸಾಧ್ಯವಾಗಲಿಲ್ಲ ಅನ್ನುವ ಅತೃಪ್ತಿ ಮತ್ತು ಹೇಗೆ ಕವಿತೆಯನ್ನು ಒಲಿಸಿಕೊಳ್ಳುವುದು ಎನ್ನುವ ಕೊರಗು ಸದಾ ಇದೆ. ನಿಮ್ಮ ಸಾಹಿತ್ಯ ಕೃಷಿಯಬಗ್ಗೆ ನಿಮ್ಮ ಕುಟುಂಬದವರ ಅನಿಸಿಕೆಯೇನು? ನಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಾಹಿತ್ಯಿಕ ವಾತಾವರಣ ಇದೆ. ಹಾಗಾಗಿ  ನನ್ನ ಬರವಣಿಗೆಯ ಕುರಿತು ಯಾರಿಗೂ ವಿಶೇಷತೆ ಅನ್ನಿಸದಿದ್ದರೂ, ನನ್ನ ಪಾಡಿಗೆ ನಾನು ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾರ ಅಡ್ಡಿ ಇಲ್ಲ.  ಯಾರಾದರೂ ನನ್ನನ್ನು ಗುರುತಿಸಿದರೆ, ಪ್ರಶಂಸಿದರೆ ಸಹಜವಾಗಿ  ಮನೆಯಲ್ಲಿ ಖುಷಿ ಪಡುತ್ತಾರೆ ನಿಮ್ಮ ಓದಿನ ಬಗ್ಗೆ ಹೇಳಿ? ಸಾಧ್ಯವಾದಷ್ಟು ಮಟ್ಟಿಗೆ ನಾನು ಹಿರಿಯ ಕವಿಗಳ ಕವಿತೆಯನ್ನು ಓದಲು,ಅವುಗಳನ್ನು ಗ್ರಹಿಸಲು ಪ್ರಯತ್ನ ಪಡುವೆ . ಎಮ್. ಆರ್. ಕಮಲ ಮೇಡಂ, ಚೊಕ್ಕಾಡಿ ಸರ್, ಎಚ್.ಎಸ್.ವೆಂಕಟೇಶ್ ಮೂರ್ತಿ ಸರ್  ಮತ್ತು ಬಿ.ಆರ್.ಲಕ್ಷ್ಮಣ್ ರಾವ್ ಸರ್ ನನ್ನ ಇಷ್ಟದ ಕವಿಗಳು. ಕವಿತೆಯ ಹೊರತಾಗಿ ಬೇರೇನು ಬರೆದಿದ್ದೀರಿ ಕವಿತೆಯ ಜೊತೆಗೆ ನಾನು ಲಲಿತ ಪ್ರಬಂಧಗಳನ್ನ ಬರೆಯುತ್ತೇನೆ. ಆದರೆ ಕತೆ ಬರೆಯಬೇಕೆಂಬ ತುಡಿತ ಬಹಳ ಇದೆ. ಪ್ರಯತ್ನ ಜಾರಿಗೊಳಿಸಬೇಕಿದೆ ಅಷ್ಟೇ. ನಿಮ್ಮ ಇತರೇ ಹವ್ಯಾಸಗಳೇನು ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ, ಹಟ್ಟಿ, ತೋಟ, ಮನೆಕೆಲಸದಲ್ಲೇ ಸಮಯ ವ್ಯಯವಾಗುತ್ತದೆ. ಹಾಗಾಗಿ ಆಸಕ್ತಿ ಇದ್ದರೂ ಇತರ ಹವ್ಯಾಸಗಳತ್ತ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ಬಿಡುವಿನ ವೇಳೆಯಲ್ಲಿ ಓದು ಮತ್ತು ಬರಹವಷ್ಟೇ ಸುಲಭಕ್ಕೆ ತೊಡಗಿಸಿಕೊಳ್ಳಬಹುದಾದ ಹವ್ಯಾಸ ನನಗೆ. ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆಯಲ್ಲ-ಏನು ಹೇಳುತ್ತೀರಿ ಈ ಬಗ್ಗೆ ನಿಜ, ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಯುವ ತಲೆಮಾರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಬರವಣಿಗೆಯ ಮೂಲಕ ಸ್ಪಂದಿಸುತ್ತಿರುವುದು ಖುಷಿಯೆನ್ನಿಸುತ್ತದೆ. ಬರೆಹ ಹೇಗೇ ಇರಲಿ, ಬರವಣಿಗೆಯ ತುಡಿತ ಮತ್ತು ಪ್ರಯತ್ನ ಮುಖ್ಯ ಅನ್ನಿಸುತ್ತದೆ.  ಇತರರನ್ನು ಓದುತ್ತಾ ಓದುತ್ತಾ ತಮ್ಮ ಬರವಣಿಯ ದಿಕ್ಕನ್ನು ರೂಪಿಸಿಕೊಳ್ಳಬಲ್ಲರು. ಸ್ಮಾರ್ಟಪೋನ್ ಮತ್ತು ಇಂಟರ್ ನೆಟ್ ಗಳು ಮಹಿಳೆಯರು ಹೆಚ್ಚೀನ ಸಂಖ್ಯೆ ಯಲ್ಲಿ ಸಾಹಿತ್ಯ ಕೃಷಿಯಲ್ಲಿ ಕಾರಣವಾಗಿವೆ ಎಂಬ ಮಾತನ್ನುನೀವು ಒಪ್ಪುವಿರಾ?ಇದರ ಬಗ್ಗೆ ಏನು ಹೇಳುವಿರಿ ಇದು ನಿಜ. ಸ್ಮಾರ್ಟ್ ಫೋನ್,ಇಂಟರ್ನೆಟ್ ಬಂದ ಕಾರಣವೇ ನಾ ಇಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ ಅಂತ ಗೆಳತಿಯೊಬ್ಬಳು ಹೇಳುತ್ತಾಳೆ. ಅಂಗೈಯೊಳಗೆ ಫೋನ್ ಇರುವ ಕಾರಣ ಸಿಕ್ಕ ಸಮಯದಲ್ಲಿ ತತ್ಕ್ಷಣಕ್ಕೆ ಓದು , ಬರವಣಿಗೆಯತ್ತ ವಾಲಿಕೊಳ್ಳಲು ಸಹಕಾರಿ. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಇಂಟರ್ನೆಟ್ ಸೌಲಭ್ಯ ದಕ್ಕಿದ ಮೇಲೆಯೇ ಬರವಣಿಗೆ ಸಲೀಸು ಅನ್ನಿಸ ತೊಡಗಿದ್ದು ಸ್ಮಿತಾರವರ ಎರಡು ಕವಿತೆಗಳು – ಶಹರು ನಿದ್ರಿಸುವ ಚಿತ್ರ ಅನವರತ ಕರುಬಿದ್ದಕ್ಕೋಹಲುಬಿದ್ದಕ್ಕೋಅಚಾನಕ್ ಮಹಾನಗರದ ನಡುವಿಗೆಪಾದವಿಡುವಾಗ ಮೈಯೆಲ್ಲ ಪುಳಕ. ದುಡು ದುಡು ರೈಲು ಹತ್ತಿದಡ ದಡನೆ ಇಳಿಯುವಾಗಕಣ್ಣು ಬಾಡುವ ಹೊತ್ತಲ್ಲಿನಗರ ಪಿಳಿ ಪಿಳಿ ನೋಡುತ್ತಿದೆ. ಬಹುಷ; ನನ್ನನ್ನೇ ಕಾಯುತ್ತಿದ್ದಿರಬೇಕುಅಂದುಕೊಂಡೆ.ಇನ್ನು ಅದೆಷ್ಟು ನನ್ನಂತವರೋ..?!. ನೋಟವನ್ನು ಶೂನ್ಯಕ್ಕೆ ನೆಟ್ಟುದೌಡಾಯಿಸುತ್ತಲೇ ಇದ್ದಾರೆಚೋದ್ಯವಲ್ಲ ತಾನೇ? ಮತ್ತೊಮ್ಮೆಚಿವುಟಿಕೊಂಡೆ. ನನಗೋ ಗಂಟು ನೋವು ಪಾದಕ್ಕಿಳಿದುಕುಳಿತುಕೊಳ್ಳುವ ಕಾತರಅವರಿಗೋ ಅದೆಂಥಾ ಆತುರ? ತಳ್ಳಿಸಿಕೊಂಡ ರಭಸಕ್ಕೆ ಜೋಲುಹೊಡೆದಿದ್ದೆ ಅಷ್ಟೆ.ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆಬೀಳಿಸುವುದಿಲ್ಲವಂತೆಹೌದೆಂಬುದ ಖಾತ್ರಿ ಪಡಿಸಿಕೊಂಡೆ. ಬಿಡುವಿಲ್ಲದ ಯಂತ್ರದ ರೆಕ್ಕೆನೆತ್ತಿ ಸವರುವಾಗದಡಲ್ ದಡಲ್ ಸದ್ದು ಎದೆಯನಡುವಿನಿಂದ ಹಾಯುವಾಗನಿದ್ರೆ ಮರೆತ ಶಹರು ಝಗಮಗಿಸುವಾಗನಾನೋ ಜಾತ್ರೆಯಿರಬೇಕೆಂದುಕೊಂಡೆ. ಅಬ್ಭಾ! ಓಡಿ ಓಡಿ ಸುಸ್ತಾಗಿನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿದಣಿವು ನೀಗಿಸಿಕೊಳ್ಳುತ್ತಿದ್ದೇನೆ.ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ. ಪ್ರಭುವೇ..ಇನ್ನೇನು ಬೇಡಲಾರೆ ಹೆಚ್ಚಿಗೆ. ಸಾಕ್ಷಾತ್ಕಾರವೆನ್ನಲೇ?, ಸತ್ಯದರ್ಶನವೆನ್ನಲೇ?ಊಹೆ ಕೆಲವೊಮ್ಮೆ ಮಾಯೆಯೇ ದಿಟದೂರದಿಂದ ನುಣ್ಣಗೆಯೇ ಬೆಟ್ಟ ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗಶಹರು ನಿದ್ರಿಸುವ ಚಿತ್ರ. ########################### ಕಾಡು ಹೂವುಗಳು ಅವೇನು ಕೇಳಲಿಲ್ಲ ತಾವುಅರಳಿಕೊಳ್ಳಲು ಇಂತದೇತಾವು ಬೇಕೆಂದುಆದರೂ ಅವರವರ ಇಷ್ಟಕ್ಕೆ ತಕ್ಕಸಾಮರ್ಥ್ಯಕ್ಕೆ ತಕ್ಕಂತೆ.. ಕೆಲವು ಕುಂಡದಲ್ಲಿ ಅರಳಿಕೊಂಡವುಇನ್ನು ಕೆಲವು ಪಾತಿಯಲ್ಲಿಹಸಿವೆಯೆಂಬುದು ಗೊತ್ತೇ ಆಗದಂತೆನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು. ತುಟಿ ತುಂಬ ನಗು ತುಳುಕಿಸಿಕೊಂಡುಒಡಲ ತುಂಬ ಕಂಪು ತುಂಬಿಕೊಂಡುಬಣ್ಣ ಬಣ್ಣದ ಪಕಳೆಗಳುಬಿರಿದದ್ದೊಂದೇ ತಡ.. ದೂರದ ಮಾರುಕಟ್ಟೆಯಲ್ಲಿಬೆಲೆ ನಿಗದಿಯಾಯಿತುಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು. ಸAಭ್ರಮದ ಸಡಗರದ ನಗುತುರುಬಿನಲ್ಲಿ,ಉದ್ದಜಡೆಯಲ್ಲಿಮಂಟಪದಲ್ಲಿ,ವೇದಿಕೆಯಲ್ಲಿಹಾರ ತುರಾಯಿಗಳಲ್ಲಿ ಅಕಾಲಿಕ ಅವಸಾನಪೈಪೋಟಿಯ ಜಿದ್ದಿನಲ್ಲಿ. ಅಲ್ಲಿ ಬೆಟ್ಟದಿರುಕಲಿನಲ್ಲಿಯಾರ ದೇಖರೇಖಿಯೂ ಇಲ್ಲದೆಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿಬಣ್ಣನೆಗೂ ಸಿಗದ ಬಣ್ಣಗಳು ಊರಿನೊಳಗೆ ಬೇರನ್ನೂರಲುಸುತರಾಂ ಒಪ್ಪುತ್ತಲೇ ಇಲ್ಲಬಣ್ಣದೊಳಗಿನ ಸಹಜ ನಗುಮಾಸಬಹುದೆಂಬ ದಿಗಿಲಿವೆಯೆಂಬಂತೆ. **************************************** ಕವಿ ಪರಿಚಯ ಸಮತಾ ಆರ್.

Read Post »

ಇತರೆ, ವಾರ್ಷಿಕ ವಿಶೇಷ

ಒಂದು ಲೋಟ ಗಂಜಿ

ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ ಹೋಗಿ ಸ್ನಾನ ಮಾಡಿ, ಹೊಟ್ಟೆಗಿಷ್ಟು ಹಾಕಿಕೊಂಡು ಜಯಲಕ್ಷ್ಮಿಗಿಷ್ಟು ಬಿಸಿನೀರು, ಜೀರಿಗೆ ಕಷಾಯವನ್ನು, ಉಳಿದಿದ್ದ ರಾತ್ರಿಯ ಹಾಲನ್ನೇ ಹಾಕಿ ಒಂದು ಲೋಟ ಗಂಜಿಯನ್ನು ಕಾಸಿಕೊಂಡಿದ್ದಳು. ಮಧ್ಯಾಹ್ನಕ್ಕೂ ಹುರಿಟ್ಟನ್ನೇ ತಿನ್ನುವಂತೆ ಮಕ್ಕಳಿಗೆ ಹೇಳಿ ಬಂದಿದ್ದಳು. ನೋವಿನಿಂದ ನರಳುತ್ತಿದ್ದ ಜಯಲಕ್ಷ್ಮಿಗೂ, ಆತಂಕದಿಂದ ಕಾಯುತ್ತಲೇ ಕುಳಿತಿದ್ದ ಸಾವಿತ್ರಿಗೂ ಹೆರಿಗೆಯಾಗಿ ಮಗು ಹೊರಬಂದರೆ ಸಾಕೆನ್ನಿಸಿತ್ತು. ಇವತ್ತಂತೂ ಜಯಲಕ್ಷ್ಮಿಗೆ ಹೊಟ್ಟೆಗೇನೂ ಸೇರದೆ ಅವಳು ಗಂಜಿಯನ್ನೂ ಕುಡಿಯಲಿಲ್ಲ. ಕಷ್ಟಪಟ್ಟು ಒಂದಿಷ್ಟು ಜೀರಿಗೆ ಕಷಾಯವನ್ನು ಕುಡಿಸಿದ್ದಾಯಿತು. ಮನೆಯಲ್ಲೇ ಐದು ಹೆರಿಗೆ, ಅದರಲ್ಲೆರಡು ಸಾವು ಕಂಡಿದ್ದ ಸಾವಿತ್ರಿಗೆ ಈಗ ಮಗಳನ್ನು ಮನೆಯಲ್ಲಿಟ್ಟುಕೊಂಡು ಹೆರಿಗೆ ಮಾಡಿಸುವಷ್ಟು ಧೈರ್ಯವಿಲ್ಲ. ಆಗ ಸಿಗುತ್ತಿದ್ದ ಮಿಡ್‌ವೈಫ್‌ ಗಂಗಮ್ಮನಿಗೂ ಈಗ ವಿಪರೀತ ವಯಸ್ಸಾಗಿ ಅವಳು ಹೆರಿಗೆ ಮಾಡಿಸುವುದನ್ನು ಬಿಟ್ಟು ಏಳೆಂಟು ವರ್ಷಗಳೇ ಆಗಿವೆ. ಇನ್ಯಾರ ಮೇಲೂ ಸಾವಿತ್ರಿಗೆ ನಂಬಿಕೆಯಿಲ್ಲ. ವಿಧಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾಗಿದೆ. ದೇವರಾದರೂ ಪ್ರತ್ಯಕ್ಷವಾಗಬಹುದೇನೋ, ಡಾಕ್ಟರ ಮುಖವಂತೂ ಎರಡು ದಿನದಿಂದಲೂ ಕಂಡಿರಲಿಲ್ಲ. ರಜೆಯ ಮೇಲಿದ್ದಾರಂತೆ. ಇರುವ ಇನ್ನೊಬ್ಬ ಡಾಕ್ಟರಿಗೆ ಪುರಸೊತ್ತೇ ಇಲ್ಲ. ಲೇಬರ್‌ ವಾರ್ಡಿಗಷ್ಟೇ ಹೋಗುತ್ತಿದ್ದಾರೆ. ಮಿಕ್ಕ ಕಾರುಬಾರೆಲ್ಲಾ ದಾದಿಯರದೇ. ಯಾವಾಗಲೋ ಇಣುಕಿ ಹೋಗುವ ಈ ದಾದಿಯರು ಬಂದು ನೋಡಿದಂತೆ ಮಾಡಿ ಹೋಗುತ್ತಿದ್ದಾರೆಯೇ ವಿನಃ ಯಾವ ವಿವರವನ್ನೂ ಹೇಳುತ್ತಿಲ್ಲ. ಮಗುವಿಗೆ ಹೊಟ್ಟೆಯಲ್ಲೇ ಏನಾದರೂ ಆಗಿಬಿಟ್ಟರೆ ಎನ್ನುವ ಆತಂಕ ಸಾವಿತ್ರಿಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಬೀಗಿತ್ತಿ ತನ್ನನ್ನು ಸಂತೆಯಲ್ಲಿಟ್ಟು ಹರಾಜು ಹಾಕಿಬಿಡುತ್ತಾಳೆ ಎನ್ನುವ ಭಯದಲ್ಲಿ ವಾರ್ಡಿನಲ್ಲಿ ಓಡಾಡುತ್ತಿದ್ದ ದಾದಿಯರನ್ನೆಲ್ಲಾ ವಿಚಾರಿಸುತ್ತಿದ್ದರೂ ಇವಳಿಗಿರುವ ಆತಂಕ ಅವರಿಗೇಕೆ?! ʻಇನ್ನೂ ತಡ ಆಗ್ಬಹುದು, ಡಾಕ್ಟರು ಬಂದು ನೋಡಿ ಹೇಳ್ತಾರೆʼ ಎನ್ನುತ್ತಾ ಇವಳ ಮುಖವನ್ನೂ ನೇರವಾಗಿ ನೋಡದೆ ಮರದ ಬೊಂಬೆಗಳಂತೆ ಓಡಾಡುತ್ತಿದ್ದಾರೆ. ಇವಳ ನಂತರ ಬಂದು ಅಕ್ಕ ಪಕ್ಕದ ಹಾಸಿಗೆಯಲ್ಲಿ ಮಲಗಿದವರಿಗೂ ಹೆರಿಗೆಗಳಾಗಿ ಒಂದಿಬ್ಬರು ಮನೆಗೂ ಹೋಗಿಯಾಗಿದೆ. ಇಂದು ಬೆಳಗ್ಗೆ ಪಕ್ಕದ ಬೆಡ್ಡಿಗೆ ಆಯನೂರಿನ ಕಡೆಯ ರೈತ ದಂಪತಿಗಳು ತಮ್ಮ ಮಗಳು ಮಾದೇವಿಯನ್ನು ಸೇರಿಸಿದ್ದಾರೆ. ಅವಳದ್ದೂ ಚೊಚ್ಚಲ ಹೆರಿಗೆಯೇ. ದಿನವಾಗಿದೆ, ನೋವು ಶುರುವಾಗಿಲ್ಲ; ಇಬ್ಬರೂ ಕೂತು ಒಂದಷ್ಟು ಕಷ್ಟ ಸುಖ ಹಂಚಿಕೊಂಡಿದ್ದಾಯಿತು. ಅಂತೂ ಇಂತೂ ರಜೆಯಿಂದ ವಾಪಸ್ಸು ಬಂದ ಡಾಕ್ಟರು ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿ ಆರಾಮದಲ್ಲಿ ಬಂದು ಕೇಸ್‌ ಶೀಟನ್ನು ನೋಡಿ ಮೊನ್ನೆ ಬೆಳಗ್ಗೆಯಿಂದ ನೋವು ಬರುತ್ತಿದ್ದರೂ ಯಾಕೆ ಹೆರಿಗೆಯಾಗಿಲ್ಲ ಎನ್ನುವ ಸಂಶಯದಲ್ಲಿ ಕೇಸ್‌ ಶೀಟನ್ನು ಬರೆದ ದಾದಿಯನ್ನು ಕೇಳೋಣವೆಂದರೆ ಅವಳು ನಾಪತ್ತೆ. ಪರೀಕ್ಷಿಸಿದವರೇ ಸ್ವಲ್ಪ ಆತಂಕದಿಂದಲೇ ಪಕ್ಕದಲ್ಲಿದ್ದ ದಾದಿಗೆ ಕೂಡಲೇ ಲೇಬರ್‌ ವಾರ್ಡಿಗೆ ಶಿಫ್ಟ್‌ ಮಾಡಲು ಹೇಳಿ ಸಾವಿತ್ರಿಯ ಕಡೆ ತಿರುಗಿ ಕೂಡಾ ನೋಡದೆ ಹೊರಟುಹೋದರು. ಅವರು ಹೋದ ರೀತಿಯಿಂದಲೇ ಅವಳಿಗೆ ಆತಂಕ ಶುರುವಾಯಿತು. ಹಿಡಿದು ನಿಲ್ಲಿಸಿ ಕೇಳಲು ಅವಳಿಂದ ಸಾಧ್ಯವೇ! ಮಗಳ ಹಿಂದೆಯೇ ಲೇಬರ್‌ ವಾರ್ಡಿನ ತನಕ ಹಿಂಬಾಲಿಸಿ, ಅವಳ ಮುಖಕ್ಕೇ ಬಾಗಿಲು ಹಾಕಿ ಒಳಸೇರಿದ ಮೇಲೆ ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲದೆ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕಾರಿಡಾರಿನಲ್ಲೇ ನಿಂತಳು. ಕಾಯುತ್ತಾ ನಿಂತವಳಿಗೆ ನಿಮಿಷಗಳು ಗಂಟೆಗಳಾಗುತ್ತಿವೆ. ಎಷ್ಟೋ ಹೊತ್ತಿನ ಮೇಲೆ ಹೊರಬಂದ ದಾದಿ ಒಂದು ಹಾಳೆಯನ್ನು ತಂದು ಅದರ ಮೇಲೆ ಸಹಿಹಾಕುವಂತೆ ಸಾವಿತ್ರಿಯ ಮುಖಕ್ಕೆ ಹಿಡಿದಳು. ಭಯದಿಂದಲೇ “ಏನಾಗಿದ್ಯಮ್ಮಾ? ಹೇಗಿದಾಳೆ ಮಗಳು” ಎಂದರೆ ಆ ದಾದಿಗೆ ಇಂತವರೆಷ್ಟೋ… “ಸರೀಗೆ ಗೊತ್ತಿಲ್ಲ, ಆಪರೇಶನ್‌ ಮಾಡ್ಬೇಕಾಗ್ಬೋದು ಅಂತಿದ್ರು ಡಾಕ್ಟ್ರು. ನೀನಿಲ್ಲಿ ರುಜು ಹಾಕಮ್ಮ” ಎನ್ನುತ್ತಾ ಪೆನ್ನನ್ನು ಕೊಟ್ಟಳು. “ಯಾಕಿದು? ನಂಗೆ ರುಜು ಹಾಕಕ್ಕೆ ಬರಲ್ಲ, ಬರೀ ಹೆಸರು ಬರೆಯಕ್ಕೆ ಬರತ್ತೆ” ಅಂದಳು ಸಾವಿತ್ರಿ. “ಅದನ್ನೇ ಬರಿ. ಆಪರೇಶನ್‌ ಮಾಡಕ್ಕೆ ಒಪ್ಗೆ ಇದೆ ಅಂತ ಬರ‍್ದಿದೆ ಇದ್ರಲ್ಲಿ” ಎನ್ನುತ್ತಾ ನಿರ್ಲಿಪ್ತಳಾಗಿ ಆ ಹಾಳೆಯನ್ನು ತೆಗೆದುಕೊಂಡು ಒಳಹೋದಳು. ಇತ್ತ ಸಾವಿತ್ರಿಗೆ ಇನ್ನಷ್ಟು ಹೆದರಿಕೆ, ಚಿಂತೆ ಶುರುವಾಗಿ ಕೈಕಾಲು ನಡುಗತೊಡಗಿತು. ಎಷ್ಟೋ ಹೊತ್ತಾಯಿತು… ಕಾದು ಕಾದು ಕಣ್ಣು ಸೋಲುವಾಗ ಮಗುವನ್ನೆತ್ತಿಕೊಂಡು ಹೊರಬಂದ ದಾದಿ “ಗಂಡು ಮಗು. ಐವತ್ರೂಪಾಯ್ ತತ್ತಾ, ತೋರಿಸ್ತೀನಿ” ಕೈಚಾಚಿದಳು. ಅರ್ಥವಾಗದೆ ಕಣ್ಕಣ್ಣು ಬಿಟ್ಟ ಸಾವಿತ್ರಿಯ ಸೀರೆಯ ಗಂಟಿನಲ್ಲಿಟ್ಟುಕೊಂಡಿದ್ದ ಐದು, ಹತ್ತು ರೂಪಾಯಿಗಳನ್ನು ಸೇರಿಸಿದರೆ ಬರೀ ನಲವತ್ತು ರೂಪಾಯಿ ಆಯಿತು. “ಏನು ದರ್ವೇಸಿಗಳೋ. ಹೆರಿಗೆಗೆ ಅಂತ ಬಂದವ್ರಿಗೆ ಒಂದಿಷ್ಟು ದುಡ್ಡಿಟ್ಕಂಡು ಬರಕ್ಕೆ ಗೊತ್ತಾಗಲ್ವಾ. ಏನು ಅಪ್ಪನ ಮನೆ, ಈಗ ಡಾಕ್ಟ್ರಿಗೆ ಐನೂರು ರೂಪಾಯಾದ್ರೂ ಕೊಡ್ಬೇಕು, ಆಪ್ರೇಶನ್‌ ಕೇಸ್‌ ಬೇರೆ. ಅಲ್ಲಿ ಓಟಿನಲ್ಲಿ ಇದ್ದವ್ರಿಗೆಲ್ಲಾ ಇಪ್ಪತ್ತು, ಮೂವತ್ತು ಕೊಡ್ಬೇಕು. ಅದ್ಹೆಂಗೆ ಮಾಡ್ತೀಯೋ ನೋಡು. ಸರಿ, ಈಗ ನಂಗೆ ನಲ್ವತ್ತನ್ನೇ ಕೊಡು ಹೋಗ್ಲಿ. ಮಿಕ್ಕವ್ರಿಗೆ ಕೊಡಕ್ಕೆ ಎಲ್ಲಾದ್ರೂ ಹೋಗಿ ದುಡ್ಡು ತಗೊಂಡು ಬಂದ್ಬಿಡು. ಆಯಾನೂ ಸೇರಿ ಇನ್ನೂ ಮೂರು ಜನ ಇದಾರೆ” ಎನ್ನುತ್ತಾ ದುಡ್ಡು ತೆಗೆದುಕೊಂಡು ಮಗುವಿನ ಮುಖವನ್ನು ತೋರಿಸಿದಳು. ಮೊಮ್ಮಗುವಿನ ಮುಖ ನೋಡಿದ ತಕ್ಷಣ ಎಲ್ಲಾ ಮರೆತ ಸಾವಿತ್ರಿಯ ಮುಖವರಳಿತು. ಎತ್ತಿಕೊಳ್ಳಲು ಕೈಚಾಚಿದರೆ ಮುಟ್ಟಕ್ಕೂ ಬಿಡದೆ “ದುಡ್ಡು ತೊಗೊಂಡು ಬಾ ಅಂದ್ನಲ್ಲಾ” ಎನ್ನುತ್ತಾ ಒಳಹೊರಟಳು. “ಅಮ್ಮಾ… ಮಗಳು ಹೇಗಿದಾಳಮ್ಮಾ?” ಕರೆದು ಕೇಳಿದಳು. “ಹುಷಾರಾಗಿದಾಳೆ. ಅವ್ಳಿಗೆ ಕೊಡಕ್ಕೆ ಗಂಜೀನೋ, ಕಾಫೀನೋ ತೊಗೊಂಡ್ಬಾ. ಇನ್ನೊಂದು ಗಂಟೇಲಿ ಬೆಡ್ಡಿಗೆ ಹಾಕ್ತಾರೆ” ಎಂದವಳು ಮುಂದಿನ ಮಾತಿಗೆ ಅವಕಾಶವಿಲ್ಲದ ಹಾಗೆ ಒಳಹೋಗಿ ಬಾಗಿಲೆಳೆದುಕೊಂಡಳು. ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಐದು ನಿಮಿಷ ಸುಮ್ಮನೆ ಅಲ್ಲಿದ್ದ ಬೆಂಚಿನ ಮೇಲೆ ಕುಳಿತಳು. ʻಬೆಳಗ್ಗೆ ತಂದಿದ್ದ ಗಂಜಿ ಹಳಸಿ ವಾಸನೆ ಬಂದಿದೆ, ಬಾಣಂತಿಗೆ ಅದನ್ನು ಕೊಡಲು ಸಾಧ್ಯವೇ ಇಲ್ಲ. ನಡೆದುಕೊಂಡು, ಮನೆಗೆ ಹೋಗಿ, ಗಂಜಿ ಮಾಡಿಕೊಂಡು ತರಲು ಕಡೇ ಪಕ್ಷ ಎರಡು ಗಂಟೆಯಾದರೂ ಬೇಕು. ಅಷ್ಟರೊಳಗೆ ಬೆಡ್‌ಗೆ ಹಾಕಿಬಿಟ್ಟರೆ! ಅವ್ಳು ಬರೋ ಹೊತ್ತಿಗೆ ನಾನಿಲ್ದೇ ಹೋದ್ರೆ! ಪಾಪ, ಜಯ ಹೊಟ್ಟೆಗೇನಾದರೂ ಹಾಕಿಕೊಂಡು ಎರಡು ದಿನವೇ ಆಗಿದೆ. ʻಹಡ್ದ ಹೊಟ್ಟೆಗೆ ಹೇಲು ತಿನ್ನೋಷ್ಟು ಹಸ್ವುʼ ಅಂತಾರೆ. ಮೊದ್ಲು ಅವ್ಳಿಗೆ ಗಂಜಿ ತಂದುಕೊಡ್ಬೇಕಲ್ಲʼ ಎಂದುಕೊಳ್ಳುತ್ತಿರುವಾಗ, ದಿನವೂ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಪದ್ದಮ್ಮನ ಮನೆ ಇಲ್ಲಿಗೆ ಹತ್ತು ನಿಮಿಷದ ದಾರಿ. ಹೋಗಿ ವಿಷಯ ಹೇಳಿ ಅಲ್ಲೇ ಒಂದು ಲೋಟ ಗಂಜಿ ಮಾಡಿಕೊಂಡು, ಸ್ವಲ್ಪ ದುಡ್ಡನ್ನೂ ಕೇಳಿ ತೆಗೆದುಕೊಂಡು ಬರಬಹುದೇನೋ ಅನ್ನಿಸಿತು. ʻಅದೇ ಸರಿʼ ಅನ್ನಿಸಿ ಇನ್ನು ತಡಮಾಡದೆ ಸರಸರನೆ ಪದ್ದಮ್ಮನ ಮನೆಕಡೆ ಹೆಜ್ಜೆ ಹಾಕಿದಳು. ಇವಳದೃಷ್ಟಕ್ಕೆ ಪದ್ದಮ್ಮ, ಡೆಲ್ಲಿಯಿಂದ ಬಂದಿದ್ದ ಅವರ ನಾದಿನಿ ಸೀತಮ್ಮನೊಂದಿಗೆ ಬೆಳಗ್ಗೆಯೇ ಯಾರದೋ ಮನೆಗೆ ಊಟಕ್ಕೆ ಹೋಗಿದ್ದರಂತೆ, ಇನ್ನೂ ಬಂದಿರಲಿಲ್ಲ. ಅಲ್ಲಿ ಸುತ್ತುಕೆಲಸಕ್ಕಿದ್ದ ನಟರಾಜ ಹಾಗಂದ. ನಟರಾಜನ ಹತ್ತಿರ ಎಲ್ಲವನ್ನೂ ಹೇಳಿ, “ಒಂದು ಲೋಟ ಗಂಜಿ ಮಾಡ್ಕಂಡು ಹೋಗ್ತಿನಿ. ಪದ್ದಮ್ಮ ಬಂದ್ಮೇಲೆ ಹಿಂಗಾಯ್ತು ಅಂತ್ಹೇಳ್ಬಿಡೋ. ದುಡ್ಡಿಗೇನ್ಮಾಡೋದೋ” ಎಂದು ಹೇಳುತ್ತಲೇ ಒಲೆಹೊತ್ತಿಸಿ ಗಂಜಿಯನ್ನು ಕಾಸಿಕೊಂಡು ತನ್ನೊಂದಿಗೆ ತಂದಿದ್ದ ಟಿಫಿನ್‌ ಕ್ಯಾರಿಯರನ್ನು ತೊಳೆದು ಅದರಲ್ಲಿ ಗಂಜಿಯನ್ನು, ಕಾಸಿದ ನೀರನ್ನು ತಿರುಪಿನ ಚಂಬಿನಲ್ಲೂ ತುಂಬಿಕೊಂಡಳು. ಹೊರಗೆ ಪದ್ದಮ್ಮನ ಮಾತು ಕೇಳಿಸಿತು. ʻಸಧ್ಯ! ಬಂದ್ರಲ್ಲ, ದುಡ್ನೂ ಕೇಳಬಹುದುʼ ಅನ್ನಿಸಿ ಸ್ವಲ್ಪ ನಿರಾಳವಾಯಿತು. ನಟರಾಜ ಹೊರಗೆ ಹೇಳಿದನೇನೋ, “ಹೌದಾ, ಎಂಥಾ ಮಗ್ವಾಯ್ತೇ, ಮಗೂ, ಬಾಣಂತಿ ಚೆನ್ನಾಗಿದಾರೇನೇ” ಎಂದು ಕೇಳುತ್ತಾ ಪದ್ದಮ್ಮ ಅಡುಗೆಮನೆಗೇ ಬಂದಳು. ಹಿಂದೆಯೇ ಕಾಳಿಯಂತೆ ಬಂದ ಸೀತಮ್ಮ “ನಿಂಗ್ಯಾರೆ ಇಷ್ಟು ಪಾರುಪತ್ಯ ಕೊಟ್ಟೋರು? ಏನು, ನಿನ್ನ ಮನಿ ಅನ್ನೋಂಗೆ ಬಂದು ಇಲ್ಲಿ ಗಂಜಿ ಕಾಯಿಸ್ಕತಿದೀಯಲ್ಲ. ಅದೆಷ್ಟು ಸ್ವತಂತ್ರ ನಿಂಗೆ” ಎನ್ನುತ್ತಾ ಸಾವಿತ್ರಿಯ ಮೇಲೆ ವಡವಡ ಬೈಗಳ ಪ್ರಹಾರವನ್ನೇ ಶುರುಮಾಡಿದಳು. ಜೊತೆಗೆ ವಯಸ್ಸಿನಲ್ಲಿ ತನಗಿಂತ ಚಿಕ್ಕವಳಾಗಿದ್ದ ಅತ್ತಿಗೆಯನ್ನೂ ಅಟಕಾಯಿಸಿಕೊಂಡು “ಏನ್ ಪದ್ದಾ, ಕೆಲಸದವ್ರಿಗೆ ಇಷ್ಟು ಸದ್ರ ಕೊಟ್ಟಿದೀಯಾ. ನೀನ್ ಮನೇಲಿ ಇಲ್ದಿರೋವಾಗ ಹಾಯಾಗ್ಬಂದು ಯಾರೇನು ಬೇಕಾರೂ ಮಾಡ್ಕಂಡು ಹೋಗ್ಬೋದಾ? ನಿಂಗೂ ಬುದ್ಧಿ ಇಲ್ಲ, ನಿನ್ಗಂಡಂಗೂ ಇಲ್ಲ. ಮನೇವ್ರಿಲ್ದಿದ್ದಾಗ ಹೇಳ್ದೆ, ಕೇಳ್ದೆ ಮನೇ ಸಾಮಾನು, ಸರಂಜಾಮು ಮುಟ್ಟೂದೂಂದ್ರೇನು? ಇಬ್ರೂ ಕೂಲಿಯವ್ರನ್ನ ತಲೆ ಮೇಲೆ ಕೂರಿಸ್ಕಂತೀರಿ. ಯಾರ‍್ಯಾರನ್ನ ಎಲ್ಲಿಟ್ಟಿರ‍್ಬೇಕೋ ಅಲ್ಲೇ ಇಟ್ಟಿರ‍್ಬೆಕು. ಇದು ತೀರಾ ಅತ್ಯಾಯ್ತು” ಇಬ್ಬರನ್ನೂ ವಾಚಾಮಗೋಚರ ಬೈಯುತ್ತಾ ನಿಂತಳು. ಪದ್ದಮ್ಮ ಸ್ವಭಾವತಃ ಸರಳ ಮನಸ್ಸಿನವಳು. ಅಪರೂಪಕ್ಕೆ ಡೆಲ್ಲಿಯಿಂದ ಬಂದಿರುವ ನಾದಿನಿಯನ್ನು ಬಿಟ್ಟುಕೊಡಲಾರಳು, ಇತ್ತ ದಿನವೂ ಅಡುಗೆಗೆ ಬರುವ ಸಾವಿತ್ರಿಯನ್ನೂ ಏನೂ ಅನ್ನಲಾರಳು. ಅವಳೂ ಪೆಚ್ಚಾಗಿ ನಿಂತಳು. ಸಾವಿತ್ರಿಗಂತೂ ಎರಡು ದಿನದಿಂದ ಕಟ್ಟಿಕೊಂಡಿದ್ದ ಭಯ, ಆತಂಕ, ದುಃಖ ಎಲ್ಲವೂ ಒಟ್ಟಿಗೆ ನುಗ್ಗಿ ಕಣ್ಣಲ್ಲಿ ನೀರಾಡತೊಡಗಿತು. ಇದು ಇಷ್ಟೊಂದು ದೊಡ್ಡ ಪ್ರಮಾದವಾಗಬಹುದೆಂಬ ಅರಿವಿದ್ದರೆ ಅವಳು ತಡವಾದರೂ ಮನೆಗೇ ಹೋಗಿ ಬಂದುಬಿಡುತ್ತಿದ್ದಳೇನೋ… ಈಗೇನು ಮಾಡಲೂ ತೋಚದೆ ಎರಡು ನಿಮಿಷ ತಲೆಕೆಳಗೆ ಹಾಕಿ ಮೌನವಾಗಿ ನಿಂತಳು. ಸೀತಮ್ಮನ ಕೋಪ ಇನ್ನೂ ಇಳಿದಿರಲಿಲ್ಲ, “ಮಾಡೋದ್ ಮಾಡಿ ಹೇಗ್ ನಿಂತಿದೀಯ ನೋಡು, ಏನೂ ಗೊತ್ತಿಲ್ದೇ ಇರೋವ್ರ ಥರ, ಎಲ್ಲಿ ಹೇಗಿರ‍್ಬೇಕೋ ಅದ್ನ ಮದ್ಲು ಕಲ್ತ್ಕಾ. ನೀನಾದ್ರೂ ಪದ್ದಾ, ಈ ಥರ ಸದರ ಕೊಟ್ಯೋ ಒಳ್ಳೇದಲ್ಲ ತಿಳ್ಕಾ. ಅಮ್ಮಾ ಇರ‍್ಬೇಕಿತ್ತು, ಗೊತ್ತಾಗ್ತಿತ್ತು. ಅವ್ಳು ಅಷ್ಟು ಜತನ್ವಾಗಿ ನೋಡ್ಕಂಡಿದ್‌ ಮನೇನ ನೀನು ಗುಡಿಸಿಬಿಡ್ತಿದೀಯ…. ಈ ಮನೇಲಿ ಹೆಣ್ಮಕ್ಳಿಗೂ ಇಲ್ದಿರೋ ಗೌರವ ಕೂಲಿಯಾಳುಗಳ್ಗಿದೆ” ನಿಲ್ಲುತ್ತಲೇ ಇಲ್ಲ ಬೈಗಳ ಮಳೆ. ಇನ್ನೂ ಏನೇನು ಅನ್ನುತ್ತಿದ್ದಳೋ, ಅಷ್ಟರಲ್ಲಿ ಬಚ್ಚಲಿಗೆ ಹೋಗಬೇಕೆನ್ನಿಸಿತೇನೋ ಬೈದುಕೊಂಡೇ ಹಿತ್ತಲಿಗೆ ಹೋದಳು. ತಕ್ಷಣವೇ ಪದ್ದಮ್ಮ “ಅವ್ಳು ಬರೋದ್ರೊಳ್ಗೆ ಇದ್ನ ತಗಂಡು ಈಗ್ಲೇ ಜಾಗ ಖಾಲಿ ಮಾಡೆ” ಎಂದು ಸಾವಿತ್ರಿಯನ್ನು ಹೆಚ್ಚುಕಡಿಮೆ ಓಡಿಸಿದಳು. ಸಾವಿತ್ರಿಗೆ ದುಡ್ಡು ಕೇಳಲು ಅವಕಾಶವಾಗಲೇ ಇಲ್ಲ. ದಾರಿಯುದ್ದಕ್ಕೂ ಕಣ್ಣೀರಿಡುತ್ತಲೇ ʻಇಷ್ಟೊತ್ತಿಗೆ ವಾರ್ಡಿಗೆ ಹಾಕೇಬಿಟ್ಟಿರ‍್ತಾರೇನೋʼ ಎನ್ನುವ ಅತಂಕದಲ್ಲೇ ಆಸ್ಪತ್ರೆಯನ್ನು ಸೇರಿದಳು. ಅವಳಂದುಕೊಂಡ ಹಾಗೇ ಜಯಲಕ್ಷ್ಮಿಯನ್ನು ವಾರ್ಡಿಗೆ ಹಾಕಿದ್ದರು. ಮಗುವನ್ನಿನ್ನೂ ಕರೆತಂದಿರಲಿಲ್ಲ. ತುಂಬಾ ಸುಸ್ತಾಗಿದ್ದವಳನ್ನು ನೋಡಿದ ಸಾವಿತ್ರಿಗೆ ದುಃಖ ಇಮ್ಮಡಿಸಿತು. ಗಂಜಿಯನ್ನು ಟೇಬಲ್ಲಿನ ಮೇಲಿಟ್ಟು, ಜಯಳ ತಲೆಯನ್ನು ಸವರಿ “ಹೇಗಿದೀಯೆ” ಅನ್ನುವಷ್ಟರಲ್ಲಿ ಬಂದ ನರ್ಸನ್ನು “ಮಗುವೆಲ್ಲಿ?” ಎಂದು ಕೇಳಿದಳು. “ಮಿಕ್ಕವ್ರಿಗೆ ದುಡ್ಕೊಟ್ಮೇಲೆ ಸ್ನಾನ ಮಾಡ್ಸಿ ತಂಕೊಡ್ತಾರೆ, ಅಲ್ಲೇ ಲೇಬರ್‌ ವಾರ್ಡಲ್ಲೇ ಅಳ್ತಾ ಇದೆ” ಎಂದು ಗಂಜಿಯನ್ನು ಕೊಡಲೂ ಬಿಡದೆ “ಡಾಕ್ಟ್ರು ಕರೀತಿದಾರೆ, ಬಾಯಿಲ್ಲಿ” ಎಂದು ಹೆಚ್ಚುಕಡಿಮೆ ಎಳೆದುಕೊಂಡಂತೇ ಹೋದಳು. ರಿಜಿಸ್ಟರಿನಲ್ಲಿ ಏನೋ ಬರೆಯುತ್ತಿದ್ದ ಡಾಕ್ಟ್ರಮ್ಮ ತಲೆಯೆತ್ತಿ “ನೀವೇ ಏನ್ರಿ ಜಯಲಕ್ಷ್ಮಿ ಕಡೇವ್ರು” ಎಂದರು ಉರಿಯುವ ಮುಖದಲ್ಲಿ “ಹೌದು ಡಾಕ್ಟ್ರೇ, ನಾನವಳ ತಾಯಿ” ಅಂದಳು ಸಾವಿತ್ರಿ. “ಅಲ್ರೀ, ಡೆಲಿವರಿ ಆಗ್ತಿದ್ದಂಗೆ ಕಣ್ತಪ್ಸಿ ಓಡೇಬಿಡೋದಾ. ಮಗು ಮಾಲೆ ಹಾಕ್ಕೊಂಡ್ಬಿಟ್ಟಿತ್ತು. ಇನ್ನು ಹತ್ನಿಮಿಷ ತಡ್ವಾಗಿದ್ರೆ ಉಸಿರುಕಟ್ಟಿ ಸತ್ತೋಗಿರೋದು. ಆಪರೇಶನ್‌ ಮಾಡಿ ಇಬ್ರ ಜೀವಾನೂ ಉಳ್ಸಿದೀವಿ. ಅಂತಾದ್ರಲ್ಲಿ ನಿಮ್ಗೆ ಸ್ವಲ್ಪಾನೂ ಕೃತಜ್ಞತೆ ಅನ್ನೋದಿಲ್ವಾ. ಪ್ರೈವೇಟ್‌ ಆಸ್ಪತ್ರೆಗೋಗಿದ್ರೆ ಐವತ್ತು-ಅರವತ್ತು ಸಾವಿರ ಆಗಿರೋದು, ಹೋಗ್ಲಿ, ನನ್ನ ಫೀಸು ಸಾವಿರ ರೂಪಾಯಿ ಕೊಡಿ” ಎಂದರು ವ್ಯಾಪಾರಸ್ತರ ಧೋರಣೆಯಲ್ಲಿ. ಕೈಮುಗಿದು ಬಿಟ್ಟಳು ಸಾವಿತ್ರಿ. “ಇದು ಗೌರ್ಮೆಂಟ್‌ ಆಸ್ಪತ್ರೆ,

ಒಂದು ಲೋಟ ಗಂಜಿ Read Post »

You cannot copy content of this page

Scroll to Top