ಕವಿತೆ
ಅವ್ಯಕ್ತ

ಡಾ.ಪ್ರೀತಿ. ಕೆ. ಎ

ಹೇಳಿಬಿಡಬಹುದಿತ್ತು ನಾನು
ನಿನ್ನ ಪ್ರತಿಯೊಂದು ಮಾತು
ನನ್ನಲ್ಲಿ ಅನುರಾಗದ ಅಲೆಗಳನ್ನು
ಎಬ್ಬಿಸುವುದೆಂದು
ನಿನ್ನ ಸಾಮೀಪ್ಯವು ನನಗೆ
ಎಷ್ಟೊಂದು ಮುದ
ನೀಡುವುದೆಂದು
ಹೇಳಿಬಿಡಬಹುದಿತ್ತು ನಾನು
ನಿನ್ನ ಹೊಗಳಿಕೆಯೊಂದು
ಇಂದಿಗೂ ಕೂಡ
ನನ್ನ ಕೆನ್ನೆಯ ರಂಗೇರಿಸುವುದೆಂದು
ನನ್ನ ನಗೆಯ ಹಿಂದಿನ
ಕಾರಣವು ನೀನಷ್ಟೇ
ಆಗಿರುವೆಯೆಂದು
ಹೇಳಿಬಿಡಬಹುದಿತ್ತು ನಾನು
ನಿನ್ನ ಒಂದೇ ಒಂದು ಸ್ಪರ್ಶ
ನನ್ನೊಳಗಿನ ಭಾವ ತಂತಿಯನ್ನು
ಮೀಟುವುದೆಂದು
ನಿನ್ನ ಬಾಹುಗಳಲ್ಲಿ
ನನ್ನನ್ನೇ ನಾನು
ಕಳೆದುಕೊಳ್ಳುತ್ತೇನೆಂದು
ಹೇಳಿಬಿಡಬಹುದಿತ್ತು ನಾನು
ನೀನು ನನ್ನೊಡನಿದ್ದ ಕ್ಷಣ
ನನಗೆ ಮತ್ತೇನೂ
ನೆನಪಾಗುವುದಿಲ್ಲವೆಂದು
ಎದೆ ಬಡಿತ ನಿಲ್ಲುವ ತನಕ
ನನ್ನ ಹೃದಯ ನಿನ್ನ ಹೆಸರನ್ನಷ್ಟೇ
ಕೂಗುವುದೆಂದು
ಆದರೂ ಹೇಳಲಿಲ್ಲ
ಏಕೆಂದರೆ ನನಗೆ ಗೊತ್ತು
ನಿನ್ನೆಡೆಗಿನ ನನ್ನ ಪ್ರೀತಿ
ಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟು
ಬಲಹೀನವಲ್ಲವೆಂದು !
**********************************


Leave a Reply