ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮುನಿಸು ಸೊಗಸು

ಕವಿತೆ ರೇಖಾ ಭಟ್ ಹೋದವಾರಮೂಲೆ ಮೂಲೆ ಹುಡುಕಿಹೊಸಕಿ ಹೊರಹಾಕಿದ ಮುನಿಸುಅದಾವ ಕಿಂಡಿಯಲ್ಲಿಒಳಸೇರಿತೋಕಾಣೆಈಗ ಮತ್ತೆ ಬಲೆ ಹಬ್ಬುತಿದೆಒಬ್ಬರಿಗೊಬ್ಬರು ಕಾಣದಷ್ಟುದಟ್ಟವಾಗಿ ಎಲ್ಲೆಲ್ಲೂಬೆಳಕಿನ ಹೂಗಳೇ ಅರಳಿದಕನಸು ಕಾಣುತ್ತಕತ್ತಲೆ ಬೇರಿಗೆನೀರೆರೆಯಲು ಮರೆತಾಗಲೇನಗು ಮಾಯಮನದ ಅರಸನಂತಿದ್ದಸರಸ ಸರಿದು ಹೋಗಿ: ಕಿರೀಟವ ಮುನಿಸು ಧರಿಸಿ ನಿಂತಿದ್ದುನಾವು ಅಡಿಯಾಳಾಗಿನಮ್ಮೊಳಗೆ ಅಡಗಿಕೊಂಡಿದ್ದು ಅವನೇ ಮಾತಾಡಲಿ ಎನ್ನುವ ನಾನುನಾನೇ ಏಕೆ ಮೊದಲು ಎಂಬುವ ಆತಇನ್ನೆಷ್ಟು ಹೊತ್ತುಅಹಮ್ಮುಗಳನ್ನೇ ಹೊದ್ದು ಮಲಗುವುದು!? ಆಗಲೇಒಳಸೆಲೆಯ ಒಲುಮೆಯಿಂದಹೊಸ ಸೂತ್ರವೊಂದು ಸಿದ್ಧವಾಗಿಪರದೆ ಸರಿಯುತ್ತದೆಓಡಿಹೋದ ಅರಸ ಮತ್ತೆಸಿಂಹಾಸನ ಏರುತ್ತಾನೆನಾವು ಕಣ್ಣಲ್ಲೇ ನಗುತ್ತೇವೆ *************

ಮುನಿಸು ಸೊಗಸು Read Post »

ಅಂಕಣ ಸಂಗಾತಿ, ದಿಕ್ಸೂಚಿ

ಭಯದ ಬಗ್ಗೆ ಭಯ ಬೇಡ

ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.         ಮಕ್ಕಳು ಯಾವ ಯಾವುದೋ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವುದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.  ಭಯ ಎಂದರೇನು?   ನಮ್ಮ ಶಕ್ತಿಗೆ ಮೀರಿದ ಅಸಂಭಾವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.          ಭಯ ಉಂಟಾಗೋದು ಯಾವಾಗ?     ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೋ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.    ಯಾವುದಕ್ಕೆ ಭಯಗೊಳ್ಳುತ್ತೇವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರವೆಂದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ಥರ ಭಯಗೊಳುತ್ತಾರೆ. ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.  ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯುವುದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೋದಿಲ್ಲ. ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ತವ್ಯಸ್ತವಾಗುವುವು. ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ ?       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು.ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವುದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ್ ಹಿಪ್ನಾಟಿಸಂ ಮಾಡಿಕೊಳ್ಳುವದು.  ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು . ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವುದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ***************

ಭಯದ ಬಗ್ಗೆ ಭಯ ಬೇಡ Read Post »

ಅಂಕಣ ಸಂಗಾತಿ, ಮುಖಾಮುಖಿ

ಶಾಂತಿ ಬೀಜಗಳ ಜತನ’

ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ  ಡಾ. ಪ್ರಕಾಶ ಗ. ಖಾಡೆ  ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ೧೦-೦೬-೧೯೬೫ ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ , ೨೦೦೫ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿದ್ದಾರೆ.‌ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರವಾಗಿವೆ.  ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ,  ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ ,ಮೌನ ಓದಿನ ಬೆಡಗು,ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ,ಶಾಂತಿ ಬೀಜಗಳ ಜತನ ಸೇರಿದಂತೆ ೨೭ ಕೃತಿಗಳನ್ನು  ಪ್ರಕಟಿಸಿದ್ದಾರೆ.‌ ಮುಧೋಳ,ಶಿವಮೊಗ್ಗ, ವಿಜಾಪುರ ಮತ್ತು ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹಂಪಿ ಉತ್ಸವ,ಮೈಸೂರು ದಸರಾ,ನವರಸಪುರ ಉತ್ಸವಗಳಲ್ಲಿ ಕವಿತೆ ವಾಚನ. ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ. ಪ್ರಕಾಶ ಖಾಡೆ  ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿದ್ದಾರೆ. ಶಾಂತಿ ಬೀಜ ಜತನದ ಕವಿ ………………………………….  ನಾಗರಾಜ ಹರಪನಹಳ್ಳಿ : ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಪ್ರಕಾಶ್ ಖಾಡೆ ;   ಮೊದಲೆಲ್ಲ ಹೆಸರಿಗಾಗಿ ಬರೆಯಬೇಕೆನಿಸುತ್ತಿತ್ತು, ಈಗ ಹಾಗಿಲ್ಲ. ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ, ನನಗೂ ಆಗಿದ್ದು ಅದೇ. ಒಂದು ಕತೆ, ಒಂದು ಕವಿತೆ ಉಂಟು ಮಾಡುವ ಪರಿಣಾಮವಿದೆಯಲ್ಲ ಅದು ಬೆರಗು ಹುಟ್ಟಿಸುವಂಥದು. ನನ್ನ ರಚನೆಯ ಇಂಥ ಸಾಲುಗಳನ್ನು ನಾನೇ ಅನೇಕ ಬಾರಿ ಓದಿ ಬೆರಗುಗೊಂಡಿದ್ದೇನೆ. ಸಾಹಿತ್ಯ ಸಾರ್ಥಕತೆ ಕಂಡಾಗ ಅದರ ಮೌಲ್ಯ ಹೆಚ್ಚುತ್ತದೆ, ರಚನೆ ಗಂಭೀರವಾಗಿ ಸಾಗುತ್ತದೆ, ಬರಹ ತನ್ನಿಂದ ತಾನೆ ಬರೆಸಿಕೊಳ್ಳುತ್ತದೆ, ಇಲ್ಲಿ ಕವಿ ಸಣ್ಣವನಾಗಬೇಕು, ಕವಿತೆ ದೊಡ್ಡದಾಗಬೇಕು, ಇಂಥ ಭಾವ ನನ್ನಲ್ಲಿ ಬಂದ ಘಳಿಗೆಯಿಂದ ನಾನೇ ಮತ್ತೆ ಮತ್ತೇ ಕೇಳಿಕೊಳ್ಳುತ್ತೇನೆ, ಹೌದು ನಾನೇಕೆ ಬರೆಯುತ್ತೇನೆ,ಕ್ಷಮಿಸಿ ಉತ್ತರಕ್ಕಾಗಿ ಇನ್ನೂ ಹುಡುಕುತ್ತಿದ್ದೇನೆ. ಪ್ರಶ್ನೆ ; ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು. ಉತ್ತರ : ಅದೊಂದು ಕ್ಷಣಿಕದ ಸಂದರ್ಭ,ಅದು ಹುಟ್ಟಿದ ಘಳಿಗೆಯೇ ಗೊತ್ತಾಗೊಲ್ಲ,ಒಂದು ಕತೆ ,ಒಂದು ಕವಿತೆ ಹುಟ್ಟುತ್ತಿದೆ ಎಂದರೆ ,ಅದರ ಹಿಂದೆ ನಮಗರಿವಿಲ್ಲದೇ ಅನೇಕ ಅನುಭವಗಳು ,ಸಂದರ್ಭಗಳು ರೂಪು ಪಡೆದುಕೊಳ್ಳತ್ತಿರುತ್ತವೆ,ಒಂದು ರಚನೆ ಪೂರ್ಣವಾದಾಗ ಅದರ ನಿಲುಗಡೆ,ಈ ನಿಲುಗಡೆಯ ಹಿಂದಿನ ಚಲನೆಗಳು ಇವತ್ತಿಗೂ ಲೆಕ್ಕಕ್ಕೆ ಸಿಗುತ್ತಿಲ್ಲ,ಹಾಗಾಗಿ ಆ ಕ್ಷಣ ಎಂಬುದು ಒಂದು ಬಯಲು,ಒಂದು ಬೆಳಕು. ಪ್ರಶ್ನೆ ; ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು.?  ಉತ್ತರ : ಮೂರು ದಶಕಗಳ ಕಾಲ ನನ್ನ ಕಾವ್ಯದ ಪಯಣ, ನಾನು ಬರೆವ ಹೊತ್ತಿಗೆ ನವ್ಯ ಮರೆಯಾಗಿ ,ಬಂಡಾಯ ಕಾವ್ಯದ ಬಿರುಸು ವಿಜೃಂಭಿಸುತ್ತಿತ್ತು. ಈಗ ಎಲ್ಲ ನಿರಾಳ ಹೊಸ ಕಾಲ, ಹೊಸ ಓದುಗ ಬಳಗ, ಅದರಲ್ಲೂ ವಿಶ್ವವ್ಯಾಪಿ. ಬಹುಬೇಗ ಕಾವ್ಯ ತಲುಪುವ ಕಾಲ.ಈಗಂತೂ ತುಂಬಾ ಅವಸರದ ಜಗತ್ತು, ಎಲ್ಲವನ್ನೂ ಅಂದರೆ ಮೇಘಸ್ಪೋಟ ಮಳೆ, ಪ್ರವಾಹ, ಪ್ರಳಯ ಇಂಥ ಪ್ರಾಕೃತಿಕ ಅವಘಡಗಳನ್ನೂ ಕಾಣಬೇಕಾದ ಕೆಟ್ಟ ಕಾಲ.ಜನತೆಯ ನೆಮ್ಮದಿ ಕೆಡಿಸುವ ಆಗುಂತಕ ವಿಷಯಗಳು,ಹಿಂಸೆ,ದುರಾಡಳಿತ,ಭ್ರಷ್ಟಾಚಾರ ಸಾರ್ವತ್ರಿಕ,ಇಂಥ ಹೊತ್ತಲ್ಲಿ ಶಾಂತಿ,ಪ್ರೀತಿ ಹುಡಕ ಹೊರಟಿರುವುದು ನನ್ನ ಕವಿತೆಗಳ ವಸ್ತು ಮತ್ತು ವ್ಯಾಪ್ತಿ.ನನ್ನ `ಶಾಂತಿ ಬೀಜಗಳ ಜತನ’ ಕಾವ್ಯ ಸಂಕಲನವು ಇಂಥ ಆಶಯಗಳನ್ನು ಹೊತ್ತ ಮೊತ್ತ.’ ಪ್ರಶ್ನೆ ; ಕತೆ,ಕವಿತೆಗಳಲ್ಲಿ ಬಾಲ್ಯ ,ಹರೆಯ ಇಣುಕಿದೆಯೇ ? ಉತ್ತರ : ಖಂಡಿತ ಸರ್,ಈಗಲೂ ಬಾಲ್ಯವನ್ನು ಕಳೆದ ನನ್ನ ತೊದಲಬಾಗಿಯ (ಜಮಖಂಡಿ ತಾಲೂಕು) ಹಳ್ಳಿಯ ನೆನಪುಗಳು ಕಾಡುತ್ತವೆ, ನನ್ನ ‘ಸೂರ್ಯ ಚಂದ್ರರು ಕಾವಲೋ’ ಕಥೆಯಂತೂ ನನ್ನೂರ ಪಾತ್ರಗಳನ್ನು,ಸಂದರ್ಭಗಳನ್ನು ಕಟ್ಟಿಕೊಡುತ್ತದೆ,  ನನ್ನ ‘ಮತ್ತೆ ಬಾಲ್ಯಕ್ಕೆ..’ ಕವಿತೆಯಂತೂ ಬಾಲ್ಯದ ದಿನಗಳ ಆಡೊಂಬಲ ಸಾರುತ್ತದೆ,ಸ್ವರ್ಗಕ್ಕಿಂತಲೂ ಮಿಗಿಲಾದ ಹುಟ್ಟಿಸಿದ ತಾಯಿ, ಹುಟ್ಟಿದ ಊರು ಮರೆಯಲಾದೀತೆ.? ಪ್ರಶ್ನೆ ; ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಇಂದು ರಾಜಕೀಯ ಪರಿಕಲ್ಪನೆಯೇ ಬೇರೆ ಯಾಗಿದೆ,ನಾವೆಲ್ಲ ಕನ್ನಡದೊಂದಿಗೆ ರಾಜಕೀಯ ಶಾಸ್ತ್ರವನ್ನು  ಒಂದು ವಿಷಯವಾಗಿ ಪದವಿ ತರಗತಿಯಲ್ಲಿ ಓದಿದವರು, ಅಲ್ಲಿ ಓದಿದ್ದು , ಈಗ ನಡೆಯುತ್ತಿರುವುದು ತುಂಬಾ ಆತಂಕಾರಿಯಾಗಿದೆ. ಈಗ ಬದ್ಧತೆ ಎಂಬುದು ಉಳಿದಿಲ್ಲ,ಅಧಿಕಾರ ಹಣವುಳ್ಳವರ ಸೊತ್ತಾಗಿದೆ . ಮಠಗಳು ಸ್ವಂತದ ಕುಲ ,ಕುಲದವರನ್ನು ಉದ್ಧರಿಸಲು ಲಕ್ಷ್ಮಣ ರೇಖೆ ಹಾಕಿಕೊಂಡಿವೆ, ಬಲಿಷ್ಠ ಜಾತಿ,ಪಂಗಡ ನಾಯಕರು ಮುಂಚೂಣಿಯಲ್ಲಿದ್ದಾರೆ,ಸಣ್ಣ ಪುಟ್ಟ ಜಾತಿ ಜನಾಂಗದವರನ್ನು ಕೇಳುವವರೇ ಇಲ್ಲ,ಅಧಿಕಾರಕ್ಕಾಗಿ ಹೂಡುವ ತಂತ್ರಗಳು,ಬೆಳವಣಿಗೆಗಳು ಮಾನವತ್ವವನ್ನೂ ಮೀರಿ ಬೆಳೆದಿವೆ. ಭವಿಷ್ಯವಂತೂ ಬಹಳ ಕರಾಳವಾಗಿದೆ. ಕವಿಗಳು ಎಚ್ಚರವಾಗಿರಬೇಕು. ಪ್ರಶ್ನೆ ; ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು.? ಉತ್ತರ : ಧರ್ಮ ಮತ್ತ ದೇವರು ವಿಷಯ ನಮ್ಮ ತಿಳುವಳಿಕೆ ಹೆಚ್ಚಿದಂತೆಲ್ಲಾ ಬದಲಾಗುತ್ತಾ ಹೋಗುತ್ತದೆ. ಕಂದಾಚಾರ, ಡಾಂಭಿಕತೆಗಳನ್ನು ನಮ್ಮ ತಂದೆ ವಿರೋಧಿಸುತ್ತಿದ್ದರು,ನಮ್ಮಲ್ಲೂ ಅಂಥ ಆಲೋಚನೆಗಳನ್ನು ಬಿತ್ತಿದರು,ಹೀಗಾಗಿ ದೇವರು ಧರ್ಮದ ಬಗೆಗೆ ನಮಗೊಂದು ಸ್ಪಷ್ಠ ಕಲ್ಪನೆ ಇತ್ತು.ಕಲ್ಲು ದೇವರುಗಳಿಗಿಂತ ಮನುಷ್ಯರೊಳಗಿನ ದೇವರನ್ನು ಇವತ್ತಿಗೂ ಹುಡುಕುತ್ತಿದ್ದೇನೆ,ಅನೇಕರು ಸಿಕ್ಕಿದ್ದಾರೆ,ಹೀಗಾಗಿ ಬದುಕು ಸುಂದರವಾಗಲು ನಮಗೆ ನಂಬುಗೆ ಇರಬೇಕು, ಅದು ವಾಸ್ತವದ ನೆಲೆಯಲ್ಲಿದಷ್ಟೂ ದೇವರು  ಎಂಬುದು ಆಪ್ತವಾಗುತ್ತದೆ. ಪ್ರಶ್ನೆ ; ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ.? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಗಬ್ಬೆದ್ದು ಹೋಗಿದೆ.ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ.  ಗೌರವ ಡಾಕ್ಟರೇಟುಗಳ ಹೆಸರಿನಲ್ಲಿ ಯಾರು ಯಾರೋ ಪದವಿ ಕೊಡುತ್ತಿದ್ದಾರೆ, ಅಪಾತ್ರರು ಪಡೆದುಕೊಳ್ಳುತ್ತಿದ್ದಾರೆ, ಯಾವುದೇ ಪ್ರಶಸ್ತಿ ಘೋಷಣೆಯಾದರೂ ‘ಅರ್ಹರಿಗೆ ಮುಂದಿನ ಬಾರಿ’ ಎನ್ನುವಂತಾಗಿದೆ. ಸಂಸ್ಕೃತಿ ಇಲಾಖೆಯ ಅನುದಾನ ನಿಜ ಕಲಾವಿದರಿಗೆ ಸಿಗುತ್ತಿಲ್ಲ, ಇಲ್ಲಿಯೂ  ಬ್ರೋಕರುಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಪ್ರಶ್ನೆ ; ಸಾಹಿತ್ಯ ವಲಯದ ರಾಜಕಾರಣದ ಬಗೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ.? ಉತ್ತರ : ಈಗಂತೂ ರಾಜಕಾರಣ ಎಲ್ಲ ಕ್ಷೇತ್ರವನ್ನೂ ವ್ಯಾಪಿಸಿದೆ, ಅದರ ರಾಕ್ಷಸ ಬಾಹುಗಳು ಎಲ್ಲವನ್ನೂ ಆಪೋಶನ ಮಾಡುತ್ತಾ ಸಾಗಿವೆ. ಕವಿ ಬರಹಗಾರರಿಗೆ ಯಾವ ಪಂಥವೂ ಇರಬಾರದು, ಆತ ಸಮಾಜವನ್ನು ಎಚ್ಚರಿಸುತ್ತ ಜನತೆಯನ್ನು ಸರಿಮಾರ್ಗಕ್ಕೆ ತರುವ ಕೆಲಸ ಮಾಡಬೇಕು. ಇಂಥ ಹೊತ್ತಲ್ಲಿ ಕವಿ ಸಮಾಜದೊಂದಿಗೆ ನಿಲ್ಲಬೇಕು, ಸಮಾಜದೊಂದಿಗೆ ಬೆರೆಯಬೇಕು, ಆದರೆ ಆಗುತ್ತಿರುವುದೇನು, ರಾಜಕಾರಣಿಗಳ ಸುತ್ತ ಗಿರಕಿ ಹೊಡೆಯತ್ತಾ, ಬೇಳೆ ಬೇಯಿಸಿಕೊಳ್ಳತ್ತಿರುವ ಇಂಥಹವರಿಂದ ನಿಜ ಸಾಹಿತಿಗಳು ಮರೆಯಲ್ಲಿಯೇ ಉಳಿಯುವ ಸಂದರ್ಭ ಬಂದಿದೆ, ಪ್ರಶಸ್ತಿಗಾಗಿ, ಪಠ್ಯ ಪುಸ್ತಕಗಳಲ್ಲಿ ಪದ್ಯ ಸೇರಿಸುವದಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ಸಾಹಿತಿಗಳು ಸಮಾಜಕ್ಕೆ ಏನೂ ಸಂದೇಶ ಕೊಡಬಲ್ಲರು, ಕಾಲವೇ ಎಲ್ಲವನ್ನೂ ಉತ್ತರಿಸುತ್ತದೆ. ಹೊಸ ಬರಹಗಾರರು ಎಚ್ಚರದಿಂದಿರಬೇಕು. ಪ್ರಶ್ನೆ ; ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳು ಏನು.? ಉತ್ತರ : ವಾಸ್ತವದ ನೆಲೆಯಲ್ಲಿ ಬದುಕುತ್ತಿರುವ ನಮಗೆ ಆಶಾದಾಯಕವಾಗಿ ಒಂದಿಷ್ಟು ಕನಸುಗಳಿರಬೇಕು. ‘ಕವಿತೆಯ ಜೀವಂತಿಕೆಯಲ್ಲಿ ಕವಿ ಬದುಕಿದ್ದಕೆ ಸಾಕ್ಷಿಯಿದೆ’ ಎಂದು ನಂಬಿದವ ನಾನು, ಹಾಗಾಗಿ ನನ್ನ ಬರವಣಿಗೆ ಓದುಗರಲ್ಲಿ ಒಂದಿಷ್ಟು ಪರಿವರ್ತನೆ ತಂದರೆ ಅದೇ ನನ್ನ ಸಾರ್ಥಕತೆ ಎಂದುಕೊಂಡಿದ್ದೇನೆ, ನನಗೆ ಕನಸುಗಳಿವೆ ಒಂದು ಕಾದಂಬರಿ ಬರೆಯಲು ಆರಂಭಿಸಿದ್ದೇನೆ, ಬರೆಸಿಕೊಳ್ಳುತ್ತಾ ಸಾಗಿದೆ ಮುಗಿಯಬೇಕಷ್ಟೇ.. ಪ್ರಶ್ನೆ ; ನಿಮ್ಮ ಇಷ್ಟದ ಕವಿ,ಸಾಹಿತಿ ಯಾರು ? ಉತ್ತರ : ನನಗೆ ಲಂಕೇಶ, ಕಂಬಾರ, ತೇಜಸ್ವಿ ಅವರ ಬರಹಗಳು, ಬರಗೂರು,ಚಂಪಾ,ದೇವನೂರು,ಕಾಟ್ಕರ್ ಅವರ ಚಿಂತನೆಗಳು ತುಂಬಾ ಪ್ರಭಾವಿಸಿವೆ. ಜನಪದ ಹಾಡು,ಕಥೆಗಳಂತೂ ನನಗೆ ಜೀವದ್ರವ್ಯ. ಪ್ರಶ್ನೆ ; ಈಚೆಗೆ ಓದಿದ ಕೃತಿಗಳಾವವು ? ಉತ್ತರ : ಡಾ,ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿಗಳನ್ನು ಓದುತ್ತಿದ್ದೇನೆ, ಅಲಕ್ಷಿತ ಸಾಹಿತ್ಯವನ್ನು ,ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವ ಅವರ ಕೆಲಸ ಮಾದರಿಯಾದುದು, ಹಾಗಾಗಿ ಅವರ ಬರಹಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.ಹೊಸಬರ ಕಾವ್ಯಗಳನ್ನು ತಪ್ಪದೇ ಓದುತ್ತೇನೆ. ಪ್ರಶ್ನೆ ; ನಿಮಗೆ ಇಷ್ಟವಾದ ಕೆಲಸ ಯಾವುದು.? ಉತ್ತರ : ನನ್ನ ಕೆಲಸದಿಂದ ಇನ್ನೊಬ್ಬರು ಖುಷಿಯಿಂದಿರುವುದು. ಪ್ರಶ್ನೆ ; ನಿಮಗೆ ಇಷ್ಟವಾದ ಸ್ಥಳ ಯಾವುದು.? ಉತ್ತರ : ಬಾದಾಮಿ ಪರಿಸರ, ಕೊಡಗಿನ ಪ್ರಕೃತಿ, ಸಮುದ್ರದ ದಂಡೆ. ಪ್ರಶ್ನೆ ; ನಿಮ್ಮ ಪ್ರೀತಿಯ ,ನೀವು ಇಷ್ಟ ಪಡುವ ಸಿನಿಮಾ ಯಾವುದು ? ಉತ್ತರ : ಡಾ.ರಾಜಕುಮಾರ,ಮಾಧವಿ ಅಭಿನಯದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’. ಪ್ರಶ್ನೆ ; ನೀವು ಮರೆಯಲಾಗದ ಘಟನೆ ಯಾವುದು ? ಉತ್ತರ : ನಮ್ಮ ತಂದೆ ಬದುಕಿನ ಅನೇಕ ಪಾಠಗಳನ್ನು ಹೇಳಿಕೊಟ್ಟರು,ಅವು ಯಾವ ಪಠ್ಯದಲ್ಲೂ ಇರಲಿಲ್ಲ,ಬದುಕು ಕಟ್ಟಿಕೊಳ್ಳಲು ಅಣ್ಣ ಮತ್ತು ಈಚೆಗೆ ಅಗಲಿದ ತಂದೆ ಅನೇಕ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ************ ******** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಶಾಂತಿ ಬೀಜಗಳ ಜತನ’ Read Post »

ಇತರೆ

ಕರೋನ ಮುಕ್ತ ಶಾಲೆ

ಸರಿತಾಮಧು ಎಂದಿಗೆ ಬರಲಿದೆಯೋ ಶಾಲೆಗೆ ಹೋಗಿ ನಲಿಯುವ ದಿನಗಳು ಎಂದು ಕಾತರಿಸುವ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ತಾವಷ್ಟೇ ಇರಬೇಕಾ ಎನ್ನುವ ಭಯ. ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರಿಗೂ ಇದೇ ಚಿಂತೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯುವ ಸೂಚನೆ ಸದ್ಯಕ್ಕೆ ಇಲ್ಲವೇನೋ? ಹೀಗಿರುವಾಗ ಮಕ್ಕಳ ಕಲಿಕೆ ಹೇಗೆ ಎಂದು ಚಿಂತಿಸಿ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಒಳಿತೋ ಕೆಡುಕೋ ಎಂಬ ಜಿಜ್ಞಾಸೆ ಎಲ್ಲರ ಮನದಲ್ಲೂ ಮೂಡಿದೆ.ಪ್ರಾಥಮಿಕ ಹಂತದಿಂದಲೇ ಈ ರೀತಿಯ ಪಾಠಬೋಧನೆ ಮಕ್ಕಳ ಮನಮುಟ್ಟುವುದೇ ಎನ್ನುವ ಗೊಂದಲವೂ , ಚರ್ಚೆಯೂನಡೆಯುತ್ತಲೇ ಸಾಗಿರುವ ಬೆನ್ನಲ್ಲೇ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ತರಗತಿ ಗೆ ನಾಂದಿ ಹಾಡಿವೆ.ಹೀಗಿರುವಾಗ ಮಕ್ಕಳ ಕೈಗೆ ಮೊಬೈಲ್ ನೀಡಿ ನೆಮ್ಮದಿಯಾಗಿ ಇರುವುದಾದರೂ ಹೇಗೆ ಎಂಬ ಗೊಂದಲ ಮನೆಯಲ್ಲಿ ಇರದ ,ದುಡಿಯಲು ಹೊರಗೆ ಹೋಗುವ ಪೋಷಕ ವರ್ಗದ್ದು. ಇನ್ನು ಕೃಷಿಯಾಧಾರಿತ ಕುಟುಂಬಗಳಲ್ಲಿನ ಮಕ್ಕಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ಪ್ರಸ್ತುತ ತಮ್ಮ ಹಿರಿಯರಿಗೆ ಹೊಲಗದ್ದೆಗಳಲ್ಲಿ ನೆರವಾಗುತ್ತಾ ಸಮಯ ಕಳೆಯುತ್ತಿದ್ದಾರೆ. ದನಕರುಗಳನ್ನು ಮೇಯಿಸುತ್ತಾ, ಇಲ್ಲವೇ ಬೀದಿಯಲ್ಲಿ ಅಡ್ಡಾಡುತ್ತಾ ಇರುವ ಮಕ್ಕಳನ್ನೂ ನೋಡುತ್ತಿದ್ದೇವೆ. ಇವರ ಮಟ್ಡಿಗೆ ಆನ್ಲೈನ್ ಶಿಕ್ಷಣ ಕೈಗೆಟುಕದ ತಾರೆಯಂತೆ.ಹಾಗಂತ ಗ್ರಾಮೀಣ ಪ್ರದೇಶದವರು ಮೊಬೈಲ್ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಆದರೂ ಹಲ್ಲು ಇದ್ದವರಿಗೆ ಕಡಲೆ ಇಲ್ಲವಂತೆ ಅನ್ನುವ ಹಾಗೆ ಮೊಬೈಲ್ ಇದ್ದರೂ ನೆಟ್ವರ್ಕ್ ಸಿಗದ ಅದೆಷ್ಟೋ ಹಳ್ಳಿಗಳಿವೆ.ನಗರವಾಸಿಗಳಿಗೆ ಈ ರೀತಿಯ ಶಿಕ್ಷಣ ಸ್ವಲ್ಪ ಮಟ್ಟಿಗೆ ಅನುಕೂಲವೇ ಹೊರತು ಗ್ರಾಮಾಂತರದ ಮಕ್ಕಳಿಗಲ್ಲ. ಹಣದ ಅನುಕೂಲತೆ ಇದ್ದು ಮನೆಯಲ್ಲೇ ಇರುವ ಪೋಷಕರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಗಳನ್ನು ಕೊಡಿಸಿ, ಜೊತೆಯಲ್ಲಿ ಕುಳಿತು ತಾವೂ ಮಕ್ಕಳಿಗೆ ನೆರವಾಗಬಹುದು.ಇಷ್ಟೆಲ್ಲಾ ಆಗು – ಹೋಗುಗಳ ನಡುವೆ ಆನ್ಲೈನ್ ಶಿಕ್ಷಣ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವ ಬಹು ದೊಡ್ಡ ಪ್ರಶ್ನೆ ನಮ್ಮ ಮುಂದೆ ಇದೆ. ಮುಖಾಮುಖಿ ಮಕ್ಕಳೊಂದಿಗೆ ನಡೆಯುವ ಚಟುವಟಿಕೆಯುಕ್ತ ತರಗತಿಗೂ ಮನೆಯೊಳಗೆ ಕಂಪ್ಯೂಟರ್ ಪರದೆಯನ್ನು ಪಿಳಿಪಿಳಿ ನೋಡುತ್ತಾ ಜಡವಾಗಿ ಕುಳಿತು ಕೊಳ್ಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಇದರಿಂದ ಚಿಕ್ಕ ವಯಸ್ಸಿಗೆ ಕಣ್ಣುಗಳ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಎಂದಿಗೆ ಮುಗಿಯುವುದೋ ಈ ಯಾತನೆ ಎಂದು ಒಳಗೊಳಗೇ ತಳಮಳಿಸಿ ನೊಂದಿರುವ ಜೀವಗಳೇ ಹೆಚ್ಚು ‌ . ಬಡವ – ಶ್ರೀಮಂತ , ನಗರ – ಹಳ್ಳಿಗಳೆಂಬ ಭೇದ ವಿಲ್ಲದೇ ಕರೋನ ತನ್ನ ಹಿಡಿತ ಸಾಧಿಸಿ ಜನರ ಕಂಗೆಡಿಸಿದೆ.ಹೀಗಿರುವಾಗ ಶಾಲೆ ತೆರೆಯುವುದೋ ಬಿಡುವಿದೋ ಆದರೆ ಒಂದಲ್ಲ ಒಂದು ರೀತಿಯ ಸಮಸ್ಯೆ ಇದೆ. ಕರೋನ ಮುಕ್ತ ಸಾಧ್ಯವಿಲ್ಲವೇನೋ ?ಬದಲಾಗಿ ಅದರೊಂದಿಗೆ ಹೊಂದಾಣಿಕೆ ಸೂತ್ರ ಮಾತ್ರ ಕಣ್ಮುಂದೆ ಇದೆ. *********************

ಕರೋನ ಮುಕ್ತ ಶಾಲೆ Read Post »

ಪುಸ್ತಕ ಸಂಗಾತಿ

ಅವ್ವ ಮತ್ತು ಅಬ್ಬಲಿಗೆ

ನನಗೆ  ಅವ್ವ ಮತ್ತು ಅಬ್ಬಲಿಗೆ  ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ ಆಧುನಿಕ, ನಗರವಾಸಿ ಅವ್ವನಾಗಿ  ಕಾಣುತ್ತಿದ್ದಾಳೆ.   ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ  ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ ,  ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ.  ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು  ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ ಮಹಿಳೆಯಲ್ಲಿ ಕಾಣುತ್ತಲೇ ಪ್ರಶ್ನೆ ಎಸೆಯುತ್ತಾಳೆ. ರಾಮಾಯಣದ ಶಬರಿಯನ್ನು ಎಳೆದು ತಂದು ಇವತ್ತಿನ ಸಮಾಜದೆದರು ನಿಲ್ಲಿಸಿ ತಕರಾರು ತೆಗೆಯುತ್ತಾಳೆ. ದನಗಳ ತಾಯ್ತನಕ್ಕೆ ಮತ್ತು ಅವಕ್ಕೆ  ವಯಸ್ಸಾದ ಮೇಲೆ ಮಾರುವವರ,ಕೊಳ್ಳುವವರ ಕಟುಕುತನವನ್ನು ಭಂಜಿಸುತ್ತಾಳೆ.ಹಾಗೂ ಬೀದಿ ನಾಯಿಯಲ್ಲಿನ ತಾಯ್ತನಕ್ಕೆ , ಅದು ತನ್ನ ಹೆತ್ತ ಮರಿಗಳನ್ನು ಅನಾಥವಾಗಿಸುವಲ್ಲಿ ತನ್ನ ಒಂಚೂರು ಪಾಲಿದೆ ಎಂದು ಕೊರಗುತ್ತಾಳೆ. ಹಾಗೂ ಬೀದಿ ನಾಯಿ ಪಾಡಿಗೆ ಕಾರಣವಾದ  ನಿರ್ಲಜ್ಜ ,ನಿರ್ಲಕ್ಷ ಗಂಡು ನಾಯಿಯ ಬಗ್ಗೆ ತಣ್ಣನೆಯ ಕೋಪವನ್ನು ದಾಖಲಿಸುತ್ತಾಳೆ ಕವಯಿತ್ರಿ ಶೋಭಾ. ಇನ್ನು ಅವ್ವ ಅಬ್ವಲಿಗೆಯಲ್ಲಿ ರಾಜಕೀಯ ಪ್ರಜ್ಞೆ ಪ್ರಖರವಾಗಿಯೇ ನಾಲ್ಕಾರು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಗುರ್ ಮೆಹರ್ ಅಂತರಂಗ, ಖುರ್ಚಿಗಾಗಿ ಯುದ್ಧ ಪ್ರಚೋದಕತೆಯ ಪ್ರಶ್ನಿಸಿದರೆ,  “ಸುಮ್ಮನಿರುವೆ  ಏಕೆ ಹೇಳು? ”  ಕವಿತೆ  ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ ನೀಡುತ್ತದೆ ಹಾಗೂ  ಶ್ರಮಿಕನೋರ್ವ , ಓಟು ಕೇಳಲುಬಂದವನಿಗೆ ಪ್ರಶ್ನಿಸುವುದು (ಓಟು ಬೇಡುವ ಸಮಯ) ಕವಿತೆ ಯಲ್ಲಿದೆ. ‘ಬಡವನಳಲು’  ಕವಿತೆ ಬೆವರಿಗಿಲ್ಲದ ಬೆಲೆಯು ನನ್ನ ಓಟಿಗೇತಕೆ ಒಡೆಯಾ ಎಂದು ಪ್ರಶ್ನಿಸಿದರೆ, ‘ದೇವನಳಲು’  ಕವಿತೆಯಲ್ಲಿ ದೇವರು ಭಕ್ತರಿಗೆ ಪ್ರಶ್ನಿಸುವ ಅಪರೂಪದ ನಡೆಯಿದೆ. ನಾನೇನು ಬಡವನೇ ನಿಮ್ಮಲ್ಲಿ ಬೇಡುವಷ್ಟು ಎನ್ನುವ ದೇವರು ; ನಾನು ತಿರುಕನಲ್ಲ, ಕಟುಕನಲ್ಲ, ದುರ್ಬಲನಲ್ಲ, ಹೆರುವಶಕ್ತಿಯಿಲ್ಲ,ಬಡವನಲ್ಲ ಎಂದು ದೇವರೇ ಭಕ್ತರಿಗೆ ಸ್ಪಷ್ಟೀಕರಣ ಕೊಡುವ ಬಗೆ ಕನ್ನಡಕ್ಕೆ ಹೊಸತು. ಇದು ಕವಯಿತ್ರಿ ಶೋಭಾ ನಾಯ್ಕರ ಕಾವ್ಯ ಕಟ್ಟುವ ವಿಶಿಷ್ಟ ನಡೆಯಾಗಿದೆ. ದೇವರು ಮತ್ತು ಧರ್ಮದ ಕುರಿತ ಕವಿತೆಗಳನ್ನು ಹೊಸೆದ ಕನ್ನಡ ಕೆಲವೇ ಕೆಲವು ಕವಯಿತ್ರಿಯರಲ್ಲಿ ಶೋಭಾ ಸಹ ಒಬ್ಬರು. ದೇವರು ಧರ್ಮದ ವಿಚಾರ ಬಂದಾಕ್ಷಣ ಮೌನತಾಳುವ ಮತ್ತು ಸಂಪ್ರದಾಯದ ಮುಸುಕು ಹಾಕಿ ಸೇಫರ್ ಝೋನ್ ನಲ್ಲಿ ನಿಲ್ಲುವ  ಸಾಹಿತಿಗಳಿಗಿಂತ ; ಭಿನ್ನವಾಗಿ ನಿಲ್ಲುವ ಶೋಭಾ ಹಿರೇಕೈ ; ಈ ಕಾರಣದಿಂದ ಅವರು ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿ ಎನಿಸುತ್ತಾರೆ. ಕುವೆಂಪು ಮತ್ತು ಲೋಹಿಯಾ ಪ್ರಭಾವ : ಮುಗ್ದತೆಯಿಂದ ಕವಿತೆಗಳನ್ನು ಶೋಭಾ ಕಟ್ಟಿದರೂ ಅವರ ವೈಚಾರಿಕ ಓದು ಸಹ ಅವರ ಕವಿತೆಗಳನ್ನು ಪ್ರಭಾವಿಸಿದೆ.  ವೈಚಾರಿಕ ಕ್ರಾಂತಿಗೆ ಯುವಕರಿಗೆ ಆಹ್ವಾನ ನೀಡಿದ ಕುವೆಂಪು ಅವರನ್ನು ಓದಿರುವ ಅವರು ದೇವರು ಮತ್ತು ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಇರುವವರು. ದೇವರು ಸದಾ ಹುಡುಕಾಡುವ, ಧರ್ಮ ಸದಾ ಕಾಡುವ ಸಂಗತಿ ಯೆಂದು ಕವಯಿತ್ರಿ ೨೦೨೦ ಮಾರ್ಚ ೨೬ ರಂದು ಕಡಲವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೋಧರ್ಮವನ್ನು ಗಮನಿಸಿ ಅವರ ಕವಿತೆಗಳನ್ನು ಓದಿದಾಗ ಹೊಸ ಆಯಾಮವೊಂದು ಸಹಜವಾಗಿ ಪ್ರಾಪ್ತವಾಗಿ ಬಿಡುತ್ತದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಮಹಿಳೆಯಾಗಿಯೂ, ಅವರನ್ನು ವೈಚಾರಿಕ ಓದು ಹೇಗೆ ರೂಪಿಸಿದೆ ಎಂಬುದು ಸಹ ಮುಖ್ಯ.  ಸಮುದಾಯ ಮತ್ತು ಕುಟುಂಬದ ನಿಯಂತ್ರಣಗಳ ನಡುವೆಯೂ ಮಾನವೀಯ ನಡೆಯೊಂದನ್ನು ಕಾಯ್ದುಕೊಳ್ಳುವ ಪರಿ ಅದ್ಭುತವಾದುದು. ಕವಿ ಹೆಚ್ಚು ಮಾತನಾಡದೆಯೂ , ತಣ್ಣಗೆ ಹೇಗೆ ಕ್ರಾಂತಿಕಾರಿಯಾಗಬಲ್ಲಳು  ಎಂಬುದನ್ನು ಗಮನಿಸಬೇಕು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟಳೆಗಳನ್ನು, ಬಂಧನಗಳನ್ನು ಸದ್ದಿಲ್ಲದೇ  ಮನೆಯ ಹಿತ್ತಲಿನಲ್ಲಿನ ಹಂಡೆಯ ಬಿಸಿನೀರು ಕಾಯಿಸುವ ಒಲೆಗೆ ಒಣಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿದಂತೆ, ಹಚ್ಚಿಬಿಡುತ್ತಾರೆ. ಬೆಂಕಿಯನ್ನು ಬೆಳಕಾಗಿಸಿ ಬಿಸಿನೀರು ಕಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದಂತೆ, ಕವಿತೆ ಕಟ್ಟುವ ಬಗೆ. ಇದನ್ನು ಶೋಭಾ ಅವರ ಕವಿತೆ ಗಳಲ್ಲಿ ಕಾಣಬಹುದು. ಅವ್ವ ಮತ್ತು ಅಬ್ಬಲಿಗೆ ಇಷ್ಟವಾಗಲು ನನಗೆ  ಹದಿನಾಲ್ಕು‌  ಕಾರಣಗಳಿವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಶೋಭಾ ಅವರ ಮೊದಲ ಸಂಕನಲದಲ್ಲಿ  ಕಾವ್ಯದ ತುಂಬಾ ತಾಯ್ತನ ತುಂಬಿರುವುದು. ದೇವರನ್ನು ಪ್ರಶ್ನಿಸಿರುವುದು. ಯುದ್ಧ ವಿರೋಧಿ ನಿಲುವುಗಳಿರುವುದು . ಗುರ್ ಮೆಹರ್ ಕವಿತೆಯಲ್ಲಿ ಸೈನಿಕನ ಮಗಳ ತಳಮಳ ಹಿಡಿದಿಟ್ಟು, ಆಕೆಯ ಪರಕಾಯ ಪ್ರವೇಶ ಮಾಡಿ ಕವಿತೆ ಕಟ್ಟಿರುವುದು. ಹೆಣ್ಣಿನ ತಳಮಳ ದಾಖಲಿಸಿರುವುದು. ಹಳ್ಳಿಯನ್ನು ಮರೆಯದಿರುವುದು. ಅಲ್ಲಿಯ ಮಣ್ಣು ತಂದು ನಗರದ  ಕುಂಡದಲ್ಲಿ ಹೂ ಬೆಳಸಿರುವುದು. ಹೆಣ್ಣಿನ ಮನದ ಸ್ವಾತಂತ್ರ‍್ಯದ ಬಯಕೆಯ ಮುಂದಿನ ತಲೆಮಾರಿಗೆ ದಾಟಿಸಿರುವುದು. ಪ್ರೇಮಧರ್ಮದ ಹುಟ್ಟಲಿ ಎಂಬ ಕನಸ ಕಟ್ಟಿಕೊಡುವುದು.ಜಾತಿ ಧರ್ಮ ಮೀರಿದ ಮನುಷ್ಯತ್ವ ಪ್ರತಿಪಾದಿಸುವುದು. ಪ್ರಕೃತಿಯೊಡನೆ ಮನದ ತಲ್ಲಣ ,ಬಯಕೆ ಹೇಳುತ್ತಾ ಕನಸು ಹೆಣೆಯುವುದು. ಪ್ರೇಮದ ನವಿರು ಭಾವಗಳನ್ನು ಕಟ್ಟಿಕೊಡುವುದು.ಬುದ್ಧನನ್ನು ನೆನೆಯುತ್ತಲೇ ಯಶೋಧರೆಯ ತಳಮಳವನ್ನು ಕಣ್ಣೆದುರಿನ ಮಗನಿಗೆ ನಿವೇದಿಸುವುದು. ತವರಿನ ತಾರಸಿಯಲ್ಲಿ ಅಟ್ಟ ಸೇರಿದ ಕನಸುಗಳ ಮೆಲುಕು ಹಾಕುವುದು. ಶ್ರಮಿಕರನ್ನು, ರೈತರನ್ನು ಕಾವ್ಯದಲ್ಲಿ ಶ್ರದ್ಧೆಯಿಂದ ಸ್ಮರಿಸುವುದು. ಅಸಮಾನತೆಯ ವಿರುದ್ಧ ಧ್ವನಿ: ಶೋಭಾ ಅವರ ಕವಿತೆಗಳಲ್ಲಿ ಜಾತಿ ವ್ಯವಸ್ಥೆ ಮತ್ತು ಸ್ಥಗಿತ ವ್ಯವಸ್ಥೆಯ ವಿರುದ್ಧ ತಣ್ಣನೆಯ ಬಂಡಾಯವಿದೆ. ಮಣ್ಣು ಮತ್ತು ಹೆಣ್ಣನ್ನು ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಬಳಸಿಕೊಂಡಿದೆ ಎಂಬುದನ್ನು ಅವರು ಮೆಲುದನಿಯಲ್ಲಿ ದಾಖಲಿಸುತ್ತಾರೆ. ದೇವರು ಮತ್ತು ದೇವಸ್ಥಾನ ವ್ಯವಸ್ಥೆ ವಿಡಂಬಿಸುವ ಕವಿತೆಗಳು, ರಾಜಕೀಯ ಪ್ರಜ್ಞೆಯ ಕವಿತೆಗಳು , ಶ್ರಮಿಕರು ಓಟಿನ ದಿನ ಮಹತ್ವ ಪಡೆಯುವ ವ್ಯಂಗ್ಯವೂ ಅವರ ಸಂಕಲನದ ಕೆಲ ಕವಿತೆಗಳಲ್ಲಿ ಇವೆ. “ಹೆಚ್ಚೆಂದರೇನು ಮಾಡಿಯೇನು”  ಎಂಬ ಕವಿತೆಯಲ್ಲಿ ದೇವರು ತಾಯಿಯ ಮಗ ಎಂದು ಹೇಳುತ್ತಾರೆ. ತಾಯಿಯೇ ಇಲ್ಲಿ ಪ್ರಧಾನ ಕೇಂದ್ರ. ಹೆಣ್ಣು ಮತ್ತು ಮಣ್ಣಿನ ಸುತ್ತ ಹೆಣೆದ ಕವಿತೆಗಳು ಕನ್ನಡದಲ್ಲಿ ಪ್ರಧಾನ ಧಾರೆಯೊಂದನ್ನು ನೆನಪಿಸುತ್ತವೆ. ಆಧುನಿಕ ಕನ್ನಡ ಮಹಿಳಾ ಕಾವ್ಯದ ವಸ್ತುಗಳನ್ನು ನೆನಪಿಸಿಕೊಂಡಾಗ ಶೋಭಾ ದಿಟ್ಟತನದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. `ಋಣಮುಕ್ತೆ’ಯಲ್ಲಿ ಮಳೆ ಮತ್ತು ಭೂಮಿಯ ಸಂಬಂಧವಿದೆ. `ಒಡಲ ಬಂಧ’ ಕವಿತೆಯಲ್ಲಿ ಮುಟ್ಟು ಮೂಢನಂಬಿಕೆ ಹಾಗೂ ಕನಸು ಕುಡಿಯೊಡೆವ, ಚಿಗುರೊಡೆವ ಹೊತ್ತಿನ , ಕಾಮನಬಿಲ್ಲು ಕಂಗಳಲ್ಲಿ ಅರಳುವ ಚಿತ್ರವಿದೆ. ಹೆಣ್ತನ ಹೂವಾಗಿ ಅರಳುವ ಸಮಯವನ್ನು ಬಣ್ಣಿಸುವ ಕವಯಿತ್ರಿ ಗರ್ಭಗುಡಿಯ ಪೂರ್ಣಕುಂಭದ ಕೆನ್ನೀರಿದು ಎನ್ನುತ್ತಾಳೆ. ಪೂರ್ಣಕುಂಭದ ಕೆನ್ನೀರು ಖಾಲಿಯಾಗಬಾರದು ಎನ್ನುವಾಗ ಭೂಮಿ ಬಂಜೆಯಾಗಬಾರದು ಎಂಬ ಧ್ವನಿಯೂ ಇದೆ. “ಉಯಿಲೊಂದ ಬರೆದಿಡುವೆ”  ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಕವಯಿತ್ರಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಗೆ ಈ ಕವಿತೆ ಸಾಕ್ಷಿ. “ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ” ಎಂಬ ಸಾಲುಗಳು ಕವಯಿತ್ರಿ ಯಾವತ್ತೂ ಸತ್ಯದ ಕಡೆಗೆ ಸಾಗುವವಳು ಮತ್ತು ಸಮಾಜದ ಒಳಿತಿಗೆ, ಮಾನವೀಯತೆಯ ಕಡೆಗೆ ನಿಲ್ಲುವವಳು ಎಂಬುದು ಸ್ಪಷ್ಟವಾಗಿದೆ. `ಕವನ ಹುಟ್ಟುವ ಹೊತ್ತು’ ಕವಿತೆಯಲ್ಲಿ ಅಸ್ತಿತ್ವದ ಹುಡುಕಾಟವೂ,ಸ್ವಾತಂತ್ರ್ಯದ ಹುಡುಕಾಟವೂ ಇದೆ. ಮಗ, ಅತ್ತೆ, ಅವ್ವ ಇವರ ನಡುವೆ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ !! ಎಂಬ ನೋವು ಇದೆ.  ಹಾಗೆ `ನನ್ನ ಕವಿತೆ’ಯಲ್ಲಿ ಕವಿತೆ ಅಪ್ಪ, ಅವ್ವ,ಅಣ್ಣ,ನನ್ನಕ್ಕ ತಂಗಿಯರಿಗಾಗಿ, ಮಣ್ಣಲ್ಲಿ ಹೊಸ ಟಿಸಿಲು ನನ್ನ ಕಾವ್ಯ, ಹುಡುಕಿ ಕೊಡುವ ಪತ್ರ ಫಲಕಗಳಿಗೂ ಅಲ್ಲ ಎನ್ನುತ್ತಾರೆ, ಸಾಹಿತ್ಯಲೋಕದ ರಾಜಕಾರಣದ ಬಗ್ಗೆ ಸಹ ಅವರ ನೈತಿಕ ಕೋಪ ಈ ಕವಿತೆಯಲ್ಲಿದೆ. `ನಲವತ್ತರಂಚಿವ ಸ್ವಗತ’ದಲ್ಲಿ ಸಹ ಅದೇ ಅಸ್ತಿತ್ವದ ಹುಡುಕಾಟ. ಕಾಲಕ್ಕೊಂದು ಕೀಲಿ ತೋಡಿಸಿ, ಕಾಲವನ್ನು ಕೂಡಿಹಾಕುವಂತಿದ್ದರೆ ಎಂಬ ಪ್ರಶ್ನೆಯನ್ನು ಮಹಿಳೆಯರ ಪ್ರತಿನಿಧಿಯಾಗಿ ತನಗೆ ತಾನೇ ಹಾಕಿಕೊಳ್ಳುತ್ತಾಳೆ. ಕಾಲದ ಹಕ್ಕಿ ಹಗಲು ಇರಳುಗಳ ರೆಕ್ಕೆಗಳನ್ನು ಹೊತ್ತು ಹಾರುವುದನ್ನು ಬೇಂದ್ರೆ ಹಿಡಿದಿಟ್ಟಂತೆ, ಚಲಿಸುವ ಕಾಲ ಕನ್ನಡ ಕವಿಗಳನ್ನು ಕಾಡಿರುವ ಬಗೆ ಅನನ್ಯವಾದುದು. “ನಲವತ್ತರಂಚಿನ ಸ್ವಗತ” ದ ಜೊತೆ “ಮುಸುಕಾಗುವ ಸಂಕಟ” ಕವಿತೆಯನ್ನು ಸಹ ಗಮನಿಸಿಬೇಕು. ಸೀರೆಯನ್ನು ಅವರ ಬಣ್ಣವನ್ನು ಅದ್ಭುತ ಪ್ರತಿಮೆಯಾಗಿಸಿದ್ದಾರೆ ಶೋಭಾ, ಒಂದೊಂದು ಬಣ್ಣ, ಒಂದೊಂದು ಸಮಯದ ಮಹತ್ವದ ಜೊತೆ ಕುಟುಂಬದಲ್ಲಿ ಒಬ್ಬಬ್ಬೊರಿಗೆ ಇಷ್ಟವಾಗುವ ಬಣ್ಣದ ಸೀರೆಯುಡುವುದು. “ಹಳದಿ ಮಕ್ಕಳಿಗೆ, ನೀಲಿ ನನಗೆ ದೊಡ್ಡ ಬಾರ್ಡರ್ ಸೀರೆ ಗಂಡನಿಗೆ ತಿಳಿ ಗುಲಾಬಿ ಅವ್ವನಿಗೆ ” ಹೀಗೆ ಬರೆಯುತ್ತಾ `ಎದೆಗಿಳಿದ ಸೀರೆಗಳು ಸುಕ್ಕಾಗಿರಬಹುದು, ಒಂದೊಂದು ಬಣ್ಣ, ಒಂದೊಂದು ಕನಸು, ಬಣ್ಣ ಮಾಸಿದ ಮೇಲೆ ?? ಹೆಣ್ಣಿನ ತಳಮಳವನ್ನು, ಭಿನ್ನ ಧ್ವನಿಯಲ್ಲಿ, ಸೀರೆ ಹೆಣ್ಣು ಮತ್ತು ಮುಪ್ಪನ್ನು ಧ್ವನಿಸುವ ಕ್ರಮ ಕಾವ್ಯದ ಶಕ್ತಿಯನ್ನು ಹೇಳುತ್ತದೆ. “ನಾವು ಮತ್ತು ಅವರು” ಎಂಬ ಕವಿತೆಯಲ್ಲಿ ಶ್ರಮಿಕರ ಬಗ್ಗೆ ಇರುವ ಕಾಳಜಿ ಹಾಗೂ ದುಡಿದುಣ್ಣುವ ವರ್ಗದ ಬಗ್ಗೆ ಕವಿಯ ಚಿತ್ತ ಹರಿದಿದೆ. ಈ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆ ವರ್ಗಗಳ ಆಲೋಚನ ಕ್ರಮವನ್ನು ಸಹ ವ್ಯಂಗ್ಯವಾಗಿ ಹೇಳಿದ್ದಾಳೆ ಕವಯಿತ್ರಿ. “ನಾವೋ ದಿಂಬಿನ ಜೊತೆಗೆ ನಿದ್ದೆಯನ್ನು ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಈ ಮಹಡಿಯ ಮನೆಯಲ್ಲಿ ” ಹೊಸ ಕಾರಿಗೆ ಗೀರು ಬಿದ್ದಾಗ ಆದ ಸಣ್ಣ ನೋವನ್ನೇ ಇಟ್ಟುಕೊಂಡು ಕವಿತೆಯಾಗಿಸುವ ಕವಯಿತ್ರಿ “ಎದೆಯ ಮೇಲೆ ನೀನೆಳೆದು ಬಿಟ್ಟ, ಆ ಬರೆಗೆಷ್ಟು ನೋವಾಗಿರಬೇಡ? ಹೀಗೆ ಪ್ರಶ್ನಿಸುವ ಎದೆಗಾರಿಕೆ ಸಹ ಇದೆ. ಸೂಕ್ಷ್ಮ ಮನಸ್ಸಿನವರಿಗೆ ಆದ ಅತೀ ಚಿಕ್ಕ, ಮರೆತುಹೋಗಬಹುದಾದ ಘಟನೆಯೂ ಕವಿತೆಯ ವಸ್ತುವಾಗುತ್ತದೆ ಎಂಬುದಕ್ಕೆ ಕಾರು-ಗೀರು ಕವಿತೆ ಸಾಕ್ಷಿ. ಹಳ್ಳಿ, ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ನಂತರ ಹಳ್ಳಿಯ ಮುಗ್ಧತೆ ಮತ್ತು ನಗು ಮಾಸಿರುವುದು “ನನ್ನೂರು” ಕವಿತೆಯಲ್ಲಿ ದಾಖಲಾಗಿದೆ. ಹೊಸ ಬದುಕಿನತ್ತ ಕವಿತೆಯಲ್ಲಿ ಬಹುದೊಡ್ಡ ಆಶಯಗಳನ್ನು ಮಹಿಳಾ ಸಮುದಾಯಕ್ಕೆ  ಕವಯಿತ್ರಿ ಬಿತ್ತಿದ್ದಾರೆ. ಕಿಡಿಕಿ, ಜೀತಗಳನ್ನು ಸಂಕೇತವಾಗಿ ಹೇಳುತ್ತಾ ಮಾನಾಪಮಾನ, ಅಡೆತಡೆ,ಎಳೆದ ಬರೆ, ಸ್ವರಸತ್ತ ಕೊರಳು, ನಂಜನಿತ್ತವರ ಮೀರೋಣ ಎನ್ನುತ್ತಾ….ಹೊಸ ಬೆಳಕಿನ ಹುಡುಕಾಟ ಮಾಡೋಣ. ಹೊಸಗೀತೆ, ಹೊಸಬಟ್ಟೆ, ಹೊಸ ಭಾಷ್ಯ ಬರೆಯೋಣ. ಹಸಿರಾಗಿ ಹುಟ್ಟೊಣ,ದನಿಯಾಗಿ ನಿಲ್ಲೋಣ ಎನ್ನುತ್ತಾಳೆ. “ಋಣದ ಪತ್ರ” ದಲ್ಲಿ ಹರಿದ ಚಂದ ಕೌದಿಯ ಹೊಲಿಯ ಬೇಕಿದೆ ಎಂದು ಸಮಾಜದ ಬಿರುಕುಗಳಿಗೆ, ಸಂಬಂಧಗಳಿಗೆ ಬೆಸುಗೆ ಹಾಕುವ ಕೆಲಸವನ್ನು ಕವಯಿತ್ರಿ ಮಾಡುತ್ತಾರೆ.  ‘ ‘ ‘ನಾನು’ ಎಂಬ ಕವಿತೆಯಲ್ಲಿ ನೋವಲ್ಲೂ ನಗುವ ಆಶಯಕ್ಕೆ, ಎದೆ ಬಾರವ ಹಗುರಾಗಿಸಿ ಉಸಿರಾಗುವ ಹಂಬಲಕ್ಕೆ ಕಸನು ಬಿತ್ತುವುದು ಎನ್ನುತ್ತಾ…ಪ್ರೀತಿಸಿಯೇ ತೀರುತ್ತೆನೆಂದಲ್ಲ, ಜನ್ಮಜನ್ಮಗಳ ಋಣಭಾರವೊಂದರ ಸಂದಾಯಕ್ಕೆ ನಾನು ಇದ್ದೇನೆ ಎಂಬ ಹಂಬಲವ ತೋಡಿಕೊಳ್ಳುತ್ತಾಳೆ ಕವಯಿತ್ರಿ. ” ನೀ ಬರುವುದು ಖಾತ್ರಿಯಾದಾಗಿನಿಂದ ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ” ಎಂಬುದು ಬದುಕಿನ ದೊಡ್ಡ ಆಶಾವಾದವಾಗಿದೆ. *********** ನಾಗರಾಜ ಹರಪನಹಳ್ಳಿ

ಅವ್ವ ಮತ್ತು ಅಬ್ಬಲಿಗೆ Read Post »

ಕಾವ್ಯಯಾನ, ಗಝಲ್

ಹೇಳದೇ ಹೋಗದಿರು

ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನ‌ದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು ************

ಹೇಳದೇ ಹೋಗದಿರು Read Post »

ಇತರೆ

ವಚನ ಚಿಂತನೆ

ಚಿಂತನೆ ಡಾ.ವೈ.ಎಂ.ಯಾಕೊಳ್ಳಿ ಕಾಮ ಕಾಲದ ಕಾಡುವ ಮಾಯೆ ನಳಲುಗತ್ತಲೆ ನೀನು ಮಾಯೆ ಸಂಗ ಸುಖದಿಂದ ಹಿಂಗುವರಾರು ಇಲ್ಲ ಬಿಗಿದ ಕುಚ,ಉರ ಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ‌ ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ ಕರಸ್ಥಳದ ಇಷ್ಟಲಿಂಗೇಶ್ವರಾ ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಒಂದು ವಿಶೇಷ ನೆಲೆಯಲ್ಲಿ‌ ನಿಲ್ಲುವ ವಚನ‌ ಇದು . ಇದನ್ನು ರಚಿಸಿದವನು ಮೆಡ್ಲೇರಿ ಶಿವಲಿಂಗನೆಂಬ ಹದಿನಾರನೆಯ ಶತಮಾನದ ವಚನಕಾರ.ಡಾ ವೀರಣ್ಣ ರಾಜೂರ ಅವರು ಸಂಪಾದಿಸಿದ ಸಂಕೀರ್ಣ ವಚನ ಸಂಪುಟ ೯ ರಲ್ಲಿ ಈತನ ೨೩ ವಚನಗಳು ದೊರಕಿವೆ.ಬಹಳ ವಿಶಿಷ್ಟವಾದ ಅಂಕಿತವನ್ನು ಈತ ಇರಿಸಿಕೊಂಡಿದ್ದಾನೆ.ಅವನ  ‘ಕರಸ್ಥಲದ ಇಷ್ಟ  ಲಿಂಗೇಶ್ವರ’ ಎಂಬ ಅಂಕಿತವೂ ಒಂದು ವಿಶೇಷವೇ. ಇವನ ವಚನಗಳನ್ನು‌ ಪರಿಭಾವಿಸಿದರೆ ದೊರಕಿದ ೨೩ ವಚನಗಳಲ್ಲಿ‌ ಮೂರ್ನಾಲ್ಕು ವಚನಗಳಲ್ಲಿ‌ ಮಾಯೆಯ‌‌ ಮಹಿಮೆಯನ್ನು ಬಣ್ಣಿಸುತ್ತಾನೆ. ಮಾಯೆಯ ನಿರಾಕರಣೆಗಿಂತ ಅದರ ಮಹಿಮೆಯನ್ನು‌ ಹೊಗಳುವ , ಅದನ್ನು‌ ಮೀರುವದು ಅಷ್ಟು ಸರಳವಲ್ಲ ಎಂಬ ಸರಳ ಸತ್ಯದ ನಿರ್ಧಾರ ಅವನ ವಚನಗಳಲ್ಲಿರುವದು ವಿಶೇಷವಾಗಿದೆ.‌ ಶರಣರ ಮಹತ್ವ ಇರುವದೇ ಇಲ್ಲಿ. ಸುಮ್ಮ ಸುಮ್ಮನೇ ಅವರು‌ ಮಾಯೆಯನ್ನು ಮೀರುವ  ಮಾತನಾಡುವದಿಲ್ಲ. ಅದು ಅಷ್ಟು ಸರಳವೂ ಅಲ್ಲ. ಅಂತೆಯೇ ಮೆಡ್ಲೇರಿ ಶಿವಲಿಂಗನೆಂಬ ಈ ವಚನಕಾರ  ಇಲ್ಲಿ ಮೋಹದ‌ ಮಾಯೆಯ ಸ್ವರೂಪವನ್ನು ವಿವರಿಸುತ್ತಾನೆ. ಕಾಮ ಕಾಡುವ ಮಾಯೆಯಾದರೂ ಗಂಡು ಹೆಣ್ಣುಗಳ ಸಂಗ ಸುಖದಿಂದ ಪಾರಾದವರು ಯಾರು? ಪಾರಾಗಬೇಕೆಂದು ಬಯಸಿದವರಾದರೂ ಪಾರಾಗಿದ್ದಾರೆಯೆ? ಶಿವನಾದರೂ‌ ಪಾರಾದನೇ,?ಎಂಬ ಅವನ‌ ಪ್ರಶ್ನೆ ನಿಜವಾದದ್ದಿದೆ.ಎಲ್ಲರೂ ಮಾತನಾಡುವ ವರೇ ಮೀರಿದವರು ಯಾರು? ಸರ್ವಜ್ಞ ಕವಿ ಮಾತಿನೊಳಗೆಲ್ಲರೂ ಶುಚಿ ವೀರ ಸಾಧುಗಳು ಎಂದು ಸುಮ್ಮನೇ ಎಚ್ಚರಿಸಿಲ್ಲ. ಆದ್ದರಿಂದಲೇ ವಚನಕಾರ  “ಬಿಗಿದ ಕುಚವು ಉರದ ಮಧ್ಯವು ಲಿಂಗಾಕಾರವು ಮಹೇಶ್ವರಗೂ ಪ್ರಿಯವು” ಎಂದು ಸಾಂಕೇತಿಕವಾಗಿ ಬಣ್ಣಿಸುತ್ತಾನೆ.ಇಡೀ ವಚನ ಒಂದು ಸಾಂಕೇತಿಕ ಭಾಷೆಯಲ್ಕಿಯೇ ಹೆಣೆಯಲ್ಪಟ್ಟಿರುವದು ವಿಶೇಷ. ಅದು ಕೇವಲ ಮೋಹವನ್ನು ಉಂಟು ಮಾಡುವ ದೇಹದ  ಅಂಗ ಭಾಗ ಮಾತ್ರವಾಗಿರದೆ ‘ಸನ್ಮೋಹ ಅಮೃತಸಾರವೂ ‘ಆಗಿರುವಂತೆ ಇಳೆ ಉತ್ಪತ್ಯಕ್ಕೆ ಆಧಾರವೂಆಗಿದೆ.ಹಾಗಾಗಿ ಲೋಕದಲ್ಲಿ ಜನಿಸಿದ ಮೇಲೆ ಗಂಡು ಹೆಣ್ಣೆಂಬ ಭಾವಕ್ಕೆ ಬಂಧಿಯಾದ ಮೇಲೆ, ಇಂಥ‌ “ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ‌ ಕರಸ್ಥಲದ ಇಷ್ಟಲಿಂಗೇಶ್ವರಾ! ” ಎಂದು ವಚನಕಾರ ಉದ್ಘಾರವೆತ್ತುತ್ತಾನೆ. ಇಡೀ ವಚನ ಮಾಯೆಯ ನ್ನು ಸಂಸಾರವನ್ನು ಗಂಡು ಹೆಣ್ಣಿನ ಒಲವನ್ನು ದೂಷಿಸದೆ ಅದು ಜಗತ್ತಿಗೆ ಅಗತ್ಯ.ಅದನ್ನು ಹೊಂದುವದರಲ್ಲಿ ಯಾವ ತಪ್ಪೂ ಇಲ್ಲ.ಆದರೆ ಅಲ್ಲೊಂದು ಸಾಮಾಜಿಕ ಒಪ್ಪಿತ ದಾರ್ಮಿಕ‌ ನೀತಿ ಇರಬೇಕಾದದ್ದು ಅವಶ್ಯ ಎನ್ನುವದನ್ನು ಸೂಚ್ಯವಾಗಿ ಚಿತ್ರಿಸಿದೆ. ಅಕ್ಕ ‘ಹಾವಿನ ಬಾಯ ಹಲ್ಲ ಕಳೆದು ಹಾವ ನಾಡಿಸ ಬಲ್ಲಡೆ ಹಾವಿನ ಸಂಗವೇ ಲೇಸ ಕಂಡಯ್ಯ’ ಎಂ ದಿರುವದಾಗಲಿ ಬಸವಣ್ಣನವರು ‘ಹೆಣ್ಣಿನಲಿ‌ ಮನವಾದಡೆ  ಮದುವೆಯಾಗುವದು’ ಎಂದಿರುವದಾಗಲಿ ಮಾಯೆಯನ್ನು ಹೊಂದಿಸಿಕೊಂಡು‌ಹೋಗುವದರಲ್ಲಿಯೇ ಮಾಯೆಯ ಗೆಲ್ಲುವ ವಿಧಾನವಿದೆ ಎಂದು ಸೂಚಿಸಿದ್ದರು ದಾಸಿಮಯ್ಯನವರು ಬಂದುದ ಬಳಸುವಳು ತಂದುದ ಪರಿಣಾಮಿಸುವಳು ಬಂಧುಗಳ‌ಮರೆಸುವಳು ಇದು‌ಕಾರಣ ದುಗ್ಳೆಯ ತಂದು ಬದುಕಿದೆನು ಕಾಣಾ ರಾಮನಾಥಾ ಎಂದು ತಮ್ಮ ಸ್ತ್ರೀಯನ್ನು ಸ್ತುತಿಸಿದ್ದರು. ಹೀಗೆ ವಚನಕಾರರ ನಂತರ ವಚನಕಾರರ ಸಾಲಿನಲ್ಲಿಯೆ ಬಂದ ಶರಣರೂ ಬಸವಾದಿ ಶಿವಶರಣರು ಸಾರಿದ ಧನಾತ್ಮಕ ಚಿಂತನೆಯನ್ನು ಮುಂದುವರೆಸಿದ್ದರು ಎನ್ನುವದಕ್ಕೆ ಇಂಥ ವಚನಗಳು ಸಾಕ್ಷಿಯಾಗುತ್ತವೆ.

ವಚನ ಚಿಂತನೆ Read Post »

ಕಥಾಗುಚ್ಛ

ಬಣ್ಣದ ವೇಷ

ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು.        ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ  ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ.           ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು.             ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್  ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್.             ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು.           ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ

ಬಣ್ಣದ ವೇಷ Read Post »

ಇತರೆ, ಜೀವನ

ಕಾಲ ಎಂದಿಗೂ ನಿಲ್ಲುವದಿಲ್ಲ

ಸ್ಮಿತಾ ಭಟ್ ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು,ಹಾಗಿತ್ತು,ಏನೋ ನಡೆದಿತ್ತು, ಎಂದು ಇತಿಹಾಸ ಪುಟಗಳಿಂದ ಅಷ್ಟೊ ಇಷ್ಟೊ ತಿಳಿಯುತ್ತೇವೆ,ಮತ್ತೊಂದಿಷ್ಟು ನಮ್ಮ ಊಹೆ. ಕಾಲದ ಜೊತೆಗೆ ಎಲ್ಲವೂ ಉರುಳುತ್ತವೆ ಎನ್ನುವದು ನಿತ್ಯ ಸತ್ಯ. ಸವೆದ ಹೆಜ್ಜೆಗಳ ಜಾಡು ಎಷ್ಟರ ಮಟ್ಟಿಗೆ ಇಂದು ಉಳಿದುಕೊಂಡಿದೆ.ಎಲ್ಲವೂ ಮಸುಕಾಗುತ್ತಲೇ ಹೋಗುತ್ತದೆ. ಹೊಸ ನೀರಿಗೆ ಹಳೆಯ ನೀರು ಕೊಚ್ಚಿಹೋಗಿ ಸಮುದ್ರಸೇರಿ ಅಸ್ತಿತ್ವವನ್ನೇ ಕಳೆದುಕೊಂಡಂತೆ. ಆಳಿದ ರಾಜ, ಕಟ್ಟಿದ ಕೋಟೆ,ಜಾರಿಯಾದ ನಿಯಮ,ತ್ಯಾಗದ ಬದುಕು,ಮಾಡಿದ ಯುದ್ಧ ಮಹಾ ಮಹಾ ರೋಗ, ಪ್ರತಿಯೊಂದು ಅಂದರೆ ಪ್ರತೀಯೊಂದೂ ಕಾಲ ತನ್ನ ಗರ್ಭದೊಳಗೆ ಎಲ್ಲವನ್ನೂ ಕರಗಿಸಿ ಬಿಡುತ್ತದೆ.ಮರೆಸಿ ಬಿಡುತ್ತದೆ. ಕಾಲಕ್ಕೆ ಮಾತ್ರ ಆ ಶಕ್ತಿ ಇರುವದು. ಇಷ್ಟೆಲ್ಲ ಗೊತ್ತಿದ್ದೂ ನಾವೇಕೆ ಪ್ರತೀ ಸಂದರ್ಭದಲ್ಲೂ ಭಯ ಬೀಳುತ್ತೇವೆಯೋ ಗೊತ್ತಿಲ್ಲ. ಇಂದು ಇದ್ದಂತೆ ನಾಳೆ ಇರಲಾರದು ನಿತ್ಯವೂ ಬೆಳಗುವ ಸೂರ್ಯ ಹೊಸಭರವಸೆಯನ್ನಂತೂ ತರುತ್ತಾನೆ. ಆದರೆ ಅದಕ್ಕೆ ತರೆದುಕೊಳ್ಳುವ ಮನಸ್ಥಿತಿಯಾಗಲಿ, ದಾರಿಯಾಗಲಿ ನಮಗೆ ಗೋಚರಿಸುವದೇ ಇಲ್ಲ. ನಾಳೆ ನಮಗೇನಾಗುತ್ತದೋ,ನೌಕರಿ ಉಳಿಯುತ್ತದಾ? ಮನೆ ಖರೀದಿಸಲು ಆಗುತ್ತದಾ? ಏನೇನೋ ಕೆಲಸಗಳನ್ನು ಎತ್ತಿಟ್ಟುಕೊಂಡಿದ್ದೆ ಅದನ್ನೆಲ್ಲ ಮುಗಿಸುತ್ತೇನಾ? ಅಕಸ್ಮಾತ್ ಸತ್ತೇ ಹೋದರೆ!? ನಮ್ಮ ಆಲೋಚನೆಗಳು ಹೀಗೆ ಒಂದರ ಹಿಂದೊಂದು ಗಿರಕಿ ಹೊಡೆಯುತ್ತಲೇ ಹೋಗುತ್ತದೆ. ಬೇಕು ಎಲ್ಲವೂ ಬದುಕಿರುವವರೆಗೆ ನಿಜ ಆದರೆ ಬದುಕುವದೇ ಆಸೆಗಳಿಗೆ ಅಂತಾಗಬಾರದು ನಮ್ಮ ಸಮಯ ಯಾವ ಕ್ಷಣ ಬೇಕಾದರೂ ಮುಗಿಯಬಹುದು ಅದಕ್ಕೊಂದು ಸಿದ್ದತೆ ಸದಾ ಬೇಕು. ಬದುಕು ನಶ್ವರ ಎಂದು ಎದ್ದು ಹೊರಟ ಬುದ್ದನನ್ನು ನಾವು ಪ್ರೀತಿಸುತ್ತೇವೆ, ಆದರೆ ಅವನ ತತ್ವಗಳನ್ನು ಮರೆಯುತ್ತೇವೆ. ಜಗತ್ತಿಗೆ ಬರುವ ಅಪಾಯಗಳು ಇಂದು ನಿನ್ನೆಯದಲ್ಲ ಅಯಾಯಾ ಕಾಲಕ್ಕೆ ತಕ್ಕಂತೆ ಗಂಡಾಂತರಗಳು,ಅವಘಡಗಳು, ಪ್ರಕೃತಿ ವಿಕೋಪಗಳು,ಸಾವು ನೋವುಗಳು ಸಂಭವಿಸುತ್ತಲೇ ಬಂದಿದೆ. ಮತ್ತೆ ಹೊಸದಾಗಿ ರೂಪಗೊಂಡಿದೆ ಕೂಡಾ ಒಮ್ಮೆ ಪ್ರಳಯ ಕಾಲ ಸನ್ನಿಹಿತ ವಾದಾಗ  ವೈವಸ್ವತ ಮನುವನ್ನು ಕುರಿತು ವಿಷ್ಣು ಹೇಳುತ್ತಾನೆ. ಸದ್ಯದಲ್ಲೇ ಮಹಾ ಪ್ರಳಯ ವೊಂದು ಸಂಭವಿಸಲಿದೆ ಒಂದು ದೊಡ್ಡ ಹಡಗನ್ನು ತೆಗೆದುಕೊಂಡು ಅದರಲ್ಲಿ ವೇದಗಳನ್ನೂ, ಕೆಲವು ಪ್ರಾಣಿಗಳನ್ನೂ,ಸಸ್ಯಗಳ ಬೀಜಗಳನ್ನೂ, ಶೇಖರಿಸಿಡು. ನೀನು ಮತ್ತು ನಿನ್ನ ಪತ್ನಿ ಅದರೊಳಗೆ ಜೀವಿಸಿ.  ಆ ಹಡಗಿನ ರಕ್ಷಣೆ ನನ್ನದು ಎನ್ನುತ್ತಾನೆ. ಒಂದು ದಿನ ಇಡೀ ಭೂಮಿಯೇ ನೀರಿನಿಂದ ತುಂಬಿ ಮಹಾಪ್ರಳಯವೊಂದು ಸಂಭವಿಸಿಯೇ ಬಿಡುತ್ತದೆ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಿ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಕೊಡುತ್ತಾನೆ.  ವರ್ಷಗಳ ನಂತರ ಪ್ರವಾಹ ತಗ್ಗಿದ ಮೇಲೆ ಮತ್ತೆ ಸೃಷ್ಟಿಯ ಕಾರ್ಯ ನಿಧಾನವಾಗಿ ಆರಂಭವಾಗುತ್ತದೆ. ಅದೇ ಕೂಡಿಟ್ಟ ಬೀಜಗಳು ಮನುವಿನ ಸಂಸಾರ. ಅಲ್ಲಿಂದ ದ್ವಿಗುಣವಾಗುತ್ತ ದ್ವಿಗುಣವಾಗುತ್ತ  ಬಂದ ಪ್ರತೀ ಸೃಷ್ಟಿ ಬ್ರಹತ್ ಬ್ರಹ್ಮಾಂಡವೇ ಆಗಿ ನಿಲ್ಲುತ್ತದೆ. ಸಂಪೂರ್ಣ ನಾಶ ಎನ್ನುವದು ಎಂದಿಗೂ ಅಗಿಲ್ಲ. ಅತಿ ಆಯಿತು ಎಂದು ಅನ್ನಿಸಿದಾಗೆಲ್ಲ  ಕಾಲಚಕ್ರದ ಸುಳಿಗೆ ಸಿಲುಕಿಸಿ ಮತ್ತೆ  ಗರ್ಭದೊಳಗೆ ಎಳೆದುಕೊಂಡೇ ಬಿಡುತ್ತದೆ ಭೂಮಿ. ಇಂತಹದ್ದೊಂದು ಸಮತೋಲನದಿಂದಲೇ ಮಿಲಿಯನ್ ಗಟ್ಟಲೆ ವರ್ಷಗಳಿಂದಲೂ ಭೂಮಿ  ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ. ಸೃಷ್ಟಿ, ಸ್ಥಿತಿ, ಲಯ,ಗಳ ಜವಾಬ್ಧಾರಿ ಹೊತ್ತ ತ್ರಿಮೂರ್ತಿಗಳು ಒಬ್ಬರಿಗೊಬ್ಬರು ಪೂರಕವಾಗಿಯೇ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಮೇಲೆ ನಮ್ಮ ಧರ್ಮ ನಿಂತಿದೆ. ಅದು ಸತ್ಯ ಕೂಡಾ ಆಗಿದೆ. ಈಗ ಬಂದಿರುವ ಕರೋನಾ ಎಂಬ ಮಹಾಮಾರಿಯಂತ ರೋಗದಿಂದ ಜಗತ್ತೇ ನಾಶವಾಯಿತು,ಇನ್ನು ಮನುಷ್ಯ ಭೂಮಿಯ ಮೇಲ ಬದುಕುವದೇ ಅಸಾಧ್ಯ,ಹಾಗಾಯಿತು ಹೀಗಾಯಿತು ಜನರು ಖಾಲಿಯೇ ಆದರು ಎನ್ನುವಂತೆ ಭಯಬೀಳಿಸುವ ಟಿ,ವಿ ಚಾನಲ್ಗಳನ್ನು ಮೈಮೇಲೆ ಎಳೆದುಕೊಂಡು ನಾವೂ ದೆವ್ವ ಬಂದವರಂತೆ ಆಡುತ್ತಿದ್ದೇವೆ. ಚಿಂತಾಜನಕರಾಗಿದ್ದೇವೆ.ಮಾನಸಿಕ ಅಸ್ವಸ್ಥರಾಗಿದ್ದೇವೆ.  ಹಿಂದೊಮ್ಮೆ ನಾವೆಲ್ಲ ಪ್ರಳಯವೇ ಸಂಭವಿಸುತ್ತದೆ ಸಂಪೂರ್ಣ ಭೂಮಿಯೇ ನಾಶವಾಗುತ್ತದೆ ಎಂದು ಅದೆಷ್ಟು ಬೊಬ್ಬೆ ಹೊಡೆದು ಕೊಂಡಿಲ್ಲ ಹೇಳಿ. ಅಯ್ಯೋ ಅಜ್ಜೀ ಇದೆಲ್ಲ ಯಾವಾಗ ಮುಗಿತದ್ಯೋ ಏನ್ ಕಥೆನೋ ಎಷ್ಟೊಂದು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಾ ವಿಚಿತ್ರ ಆಗೋಯ್ತು ಜಗತ್ತೇ .ಅಂತ ಗೊಣಗುತ್ತಿದ್ದೆ.  ಸುಮಾರು 85 ವರ್ಷದ ಅಜ್ಜಿ ಹೇಳುತ್ತಿದ್ದರು. ಅಯ್ಯೊ ಕೂಸೇ ನನ್ನ ಅಜ್ಜಿಯ ಕಾಲದಲ್ಲಿ ಇಂತಹದ್ದೇ ಒಂದು ಮಹಾ ಮಾರಿ ರೋಗ ಬಂದಿತ್ತಂತೆ. “ಗಾಂಡ್ ಗುಂದಿಗೆ” ರೋಗ ಅಂತಿದ್ರು ಅದಕ್ಕೆ. ಊರಿಗೆ ಊರೇ ಖಾಲಿ ಅಗ್ತಿತ್ತು. ಸುಡೋಕು ಯಾರೂ ಇರ್ತಿರಲಿಲ್ಲ ಗೊತ್ತಾ!? ಏನೂ ಔಷಧ ಇಲ್ಲದೇ ಇರೋ ಕಾಲ್ದಲ್ಲೇ ಅದನ್ನೇ ಗೆದ್ದು ಬಂದಿಲ್ವ ನಾವೆಲ್ಲ. ಮತ್ತೆ ಎಷ್ಟು ಬೆಳೆದಿದೆ ನೋಡು ಜನಸಾಗರ.ಸುಮ್ನೇ ಚಿಂತೆ ಮಾಡ್ತಾರೆ ಜನ.ಏನೂ ಆಗಲ್ಲ ಭಗವಂತಂಗೆ ಎಲ್ಲ ಗೊತ್ತಿರ್ತದೆ ಸುಮ್ಕಿರು ಅಂದ್ಬಿಟ್ಲು. ಯಾವ ರೋಗದ ಕುರಿತು ಅಜ್ಜಿ ಮಾತಾಡಿದ್ಲು ಗೊತ್ತಿಲ್ಲ. ಅದ್ರೆ ಬಂದಿದ್ದು ಸತ್ಯ ಅದಕ್ಕೆ ಪುರಾವೆಗಳನ್ನೂ ಕೊಡುತ್ತಿದ್ರೆ ಮೈ ಜುಂ ಎಂದಿತು ಆಗಲೇ ಅನ್ನಿಸಿದ್ದು ಆಗಬಾರದ್ದು ಏನು ಆಗಿದೆ ಈಗ. ನಿಜ ಜನರ ಸಾವು, ನೋವು, ಆಕ್ರಂದನ, ಮನಸನ್ನು ಘಾಸಿಗೊಳಿಸುತ್ತವೆ. ಆದರೆ ಬದುಕಿರುವವರು ನಮ್ಮಿಂದ ಸಾದ್ಯವಾದಷ್ಟು ಮಾನವೀತೆಯಿಂದ, ವಿಧೇಯರಾಗಿ ಯೋಚಿಸಿದರೆ, ನಡೆದುಕೊಂಡರೆ ಸಾಕಲ್ಲವೇ ಇನ್ನೊಂದು ಜೀವ ತನ್ನಿಂದ ತಾನೇ ಉಸಿರಾಡುತ್ತದೆ. ಸಾಯುವ ಪ್ರತೀ ಜೀವವನ್ನು ರಕ್ಷಿಸಲು ಯಾರಿಂದಲೂ ಸಾದ್ಯವಿಲ್ಲ ಸಾದ್ಯವಿದ್ದಷ್ಟು ಮಾಡ ಬಹುದಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಜನ ಡಾಕ್ಟರ್ ಗಳು ಪೋಲೀಸರು ದಾದಿಯರು ಕಾರ್ಮಿಕರು ದಿನ,ರಾತ್ರಿ ಇಲ್ಲದೇ ದುಡಿಯುತ್ತಲೇ ಇದ್ದಾರೆ. ಕೇವಲ ಅವರಷ್ಟೇ ದುಡಿದರೆ ತ್ಯಾಗ ಮಾಡಿದರೆ ಸಾಕೇ? ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿದೆ ಅದನ್ನು ನಿಸ್ವಾರ್ಥತೆಯಿಂದ ಮಾಡಬೇಕಿದೆ. “ಕರ್ಮಣ್ಯೇವಾ ದಿಕಾರಸ್ತೇ ಮಾ ಫಲೇಷು ಕದಾಚನ” ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ ಫಲಾ ಫಲಗಳ ಅಪೇಕ್ಷೆ ಬೇಡಾ ಕೇವಲ ಕರ್ಮಗಳನ್ನು ಮಾಡು ಎಂದು ಅವರವರ ಕರ್ಮಳಿಗನುಸಾರ ಬದುಕನ್ನು ಭಗವಂತ ಕರುಣಿಸಿಯೇ ಕರುಣಿಸುತ್ತಾನೆ ಮತ್ತೇಕೆ ಭಯ. ಆಡಂಬರವಿಲ್ಲದೇ ಜೀವಿಸುವುದ ಕಲಿಯಬೇಕಿದೆ. ಮನುಕುಲಕ್ಕೊಂದು ಪಾಠ ಕಲಿಸಲೆಂದೇ ಈ ಕರೋನಾ ಬಂದಿದೆಯೇನೋ ಅನ್ನಿಸುತ್ತದೆ ಬಹಳ ಸಲ. ಸುಮ್ಮನೇ ಭಯಬೀಳುವದರಲ್ಲಿ ಅರ್ಥವಿಲ್ಲ ಒಂದಿಷ್ಟು ಜಾಗೃತೆಯಲ್ಲಿ ಜೀವಿಸಿದರೆ ಆಯಿತು. ಮುಂದಿನದು ದೈವ ಚಿತ್ತ ಎನ್ನುವ ಮನೋ ಬಲ ತಂದುಕೊಳ್ಳಬೇಕು. ಮನುಷ್ಯರಿಗಿಂತಲೂ ಅಬಲರಾದ, ಯಾವ ಪ್ರಾಣಿ, ಪಕ್ಷಿ ,ಮರಗಳು, ಯಾರಿಂದಲೂ ಏನನ್ನೂ ಬೇಡುವದಿಲ್ಲ, ತಮ್ಮ ತಮ್ಮ ಸ್ವಪ್ರಯತ್ನದಿಂಲೇ ಬದುಕುತ್ತವೆ. “ಸರ್ವೆವೈಲ್ ಆಪ್ ದಿ ಫಿಟ್ಟೆಸ್ಟ್”ಎನ್ನುವ ಡಾರ್ವಿನ್  ಸಿದ್ದಾಂತ ಎಂದಿಗೂ ಸತ್ಯವೇ ಆಗಿದೆ. ಹುಟ್ಟು ಸಾವುಗಳಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬಂದೊದಗಿದ ಭಯದಿಂದ ಹೊರಗೆ ಬನ್ನಿ ವಿಷಾಲವಾಗಿ ಯೋಚಿಸಿ ಹೊಸಬೆಳಕಿನ ಕಿರಣವೊಂದು ನಮಗಾಗಿ ಸ್ವಾಗತಿಸುತ್ತದೆ. *************

ಕಾಲ ಎಂದಿಗೂ ನಿಲ್ಲುವದಿಲ್ಲ Read Post »

ಇತರೆ

ಶಿಶುಗೀತೆ

ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ ಅರಚಿತು|| ಶಬ್ಧ ಕೇಳಿಗೊಲ್ಲ ತನ್ನಡೇರೆಯಿಂದ ಬಂದನು|ಸುತ್ತಮುತ್ತಹುಡುಕಿ ಒಂದುಭಾರೀ ಕೋಲು ತಂದನು|| ಬೀಸಿ ಒಮ್ಮೆಕಾಲು ತಲೆಗೆಸಿಟ್ಟಿನಿಂದ ಹೊಡೆಯಲು|ಕೋಲು ತಗುಲಿಮುರಿದು ಕಾಲುಕುಂಟು ತೋಳವಾಯಿತು|| ಬಂದ ದಾರಿಸುಂಕವಿಲ್ಲಎಂದು ಹೆದರಿ ತೋಳವು|ಬೆಪ್ಪು ಮೋರೆಹಾಕಿಕೊಂಡುತನ್ನ ದಾರಿ ಹಿಡಿಯಿತು || ಗಾಯಗೊಂಡಕುರಿಯ ಮರಿಯುಮರಳಿ ಮಡಿಲ ಸೇರಿತು |ಅಂದಿನಿಂದಗೊಲ್ಲ ಮುಂದೆಜಾಗರೂಕನಾದನು || *************

ಶಿಶುಗೀತೆ Read Post »

You cannot copy content of this page

Scroll to Top