ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್

ಲೇಖನ ಸಂಗಾತಿ ಶಿವಲೀಲಾ ಶಂಕರ್ “ವಿದಾಯ ಹೇಳಬೇಕಿದೆ ಅಂತರಾಳದಿಂದ….” ಇದು ಹೀಗೆ ಆಗುತ್ತದೆಂಬ ಭ್ರಮೆ ಒಮ್ಮೆ ಹಾದು ಹೋದರು, ನಾವುಗಳು ಮತ್ತೊಂದು ವಿಚಾರದತ್ತ ನಮ್ಮನ್ನು  ಸಕ್ರಿಯವಾಗಿಸಿಕೊಂಡಿರುತ್ತೆವೆ.ಮನುಷ್ಯನ ಜನ್ಮ ಬರಿ ನಿರೀಕ್ಷೆಯಲ್ಲೇ ಕಳೆದು ಹೋಗಿದ್ದು ಗೊತ್ತೆಯಾಗಲ್ಲ.ನೂರೆಂಟು ಕನಸುಗಳು ನನಸಾಗುವ ಹೊಸ್ತಿಲಿನಲ್ಲಿ ಮುಗ್ಗರಿಸಿ ಬಿಕರಿಯಾದ ಕನಸುಗಳು ಒಡೆದ ಗಾಜಿನ ಚೂರಿನಂತೆ.ಹೌದುಈ ವರುಷ ಇದನ್ನು ಸಾಧಿಸಬೇಕೆಂಬ ಆಸೆ ಹೊತ್ತರು,ಆಸೆಗೆ ಮಿತಿಬೇಕಲ್ಲ.ಹೊಂಟದಾರಿ ಒಂದಾದರೆ,ಎದುರಾಗುವ ಸಂಕಷ್ಟಗಳು ನೂರಾರು!ಯಾವುದನ್ನು ಮೊದಲು ಪರಿಹರಿಸಬೇಕು? ಎಂಬ ನಿಖರತೆ ಮನಸ್ಸು ನೀಡದಿರುವುದು ಮತ್ತು ಹೃದಯ ಮೌನವಾಗಿರುವುದು ಒಂದು ನಿದರ್ಶನ. ಕಳೆದು ಹೋದ ಘಟನೆಗಳು ಮತ್ತೆ ಮರುಳಿಸುವ ಸಂಭವ ಸಾಧ್ಯತೆ ಕಡಿಮೆ.ಆದರೆ ಅವು ನೀಡಿದ ನೋವುಗಳು  ಶಾಶ್ವತ. ಪ್ರತಿಯೊಬ್ಬರ ಬದುಕಲ್ಲಿ ಕಹಿ-ಸಿಹಿ ಅಂಶಗಳು ತಮ್ಮದೇ ಆದ ಛಾಪನ್ನು ಮೂಡಿಸಿರುತ್ತವೆ.”ವಿದಾಯ” ಯಾವುದಕ್ಕೆ ಹೇಳಬೇಕು? ವರುಷಕ್ಕಾ? ಅಥವಾ ನಾವು ಬಳಸುವ ಕ್ಯಾಲೆಂಡರ್ ಗಾ? ಮನಸ್ಸನ್ನು ನುಚ್ಚು ನೂರು ಮಾಡಿದ ಕನಸುಗಳಿಗಾ? ನಂಬಿಕೆಯ ಅಡಿಪಾಯ ಕಳಚಿದ್ದಕ್ಕಾ? ಯಾವುದಕ್ಕೆ ಎಂಬ ಪ್ರಶ್ನೆ? ಸತ್ಯ ಅಲ್ಲವಾ? “ವಿದಾಯ”ಎಂಬ ಸರಳ ಪದ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಯಾರು ಉಹಿಸಲು ಸಾಧ್ಯವಿಲ್ಲ!. ಕಳೆದುಕೊಳ್ಳುವುದು ಅತ್ಯಂತ ಸುಲಭದ ಸರಕಾಗಿ ನಿಂತಿದೆ.ವಸ್ತುವಾದರೂ ಸರಿ,ವ್ಯಕ್ತಿಯಾದರು ಸರಿ..ಅವಕಾಶ ಕೊನೆಯಾದಾಗ ಇಲ್ಲವೇ ವಾಸ್ತವ ನಿಲುಗಡೆಯ ಹಾದಿ ಹಿಡಿದಾಗ…ಎಲ್ಲೊ ಒಂದುಕಡೆ ಬಿರುಕಾದ ಸಂಬಂಧ ಬಿರುಸಾಗಿ ಗಾಳಿಗುಂಟ ಹಾರಿ ಹೋದಾಗ ‘ವಿದಾಯ’ ಅನಿವಾರ್ಯ. 2025 ಅಂತಹ ಸುಂದರ ಕನಸುಗಳನ್ನು ಹೆಣೆದಂತೆ ಭಾಸವಾದರೂ,ನೋವನ್ನು ಇಂಚಿಂಚಾಗಿ ಅನುಭವಿಸುವ ಭಾಗ್ಯ ನೀಡಿದ್ದು ವಿಶೇಷ. ನೋವು ತಡೆದುಕೊಳ್ಳಬಹುದು…ಆದರೆ ಬದುಕನ್ನೇ ನುಂಗಿ ಬಿಟ್ಟರೆ ಸಂಭ್ರಮಿಸುವ ಹೊಣೆ ಹೊರಲಾದಿತೆ? ಆದರೂ ಜೀವನ ನಿಂತ ನೀರಲ್ಲ!. ಉಸಿರಿರುವ ತನಕವೂ ಹೋರಾಡಲೇ ಬೇಕು ನಮ್ಮೊಳಗಿನ ಚೈತನ್ಯ ಕೈಚೆಲ್ಲುವ ತನಕ!. ಪ್ರತಿವರ್ಷವೂ ಹೊಸ ಚಿಂತನೆಗಳನ್ನು ಹಮ್ಮಿಕೊಳ್ಳುವ ನಾವು,ಯಾವ ಯೋಚನೆಗೆ ಚಾಲನೆ ನೀಡಿದ್ದಿವಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದನ್ನೇ ಮರೆತು ಬಿಡುತ್ತವೆ. ಮರೆವು ಮನುಷ್ಯನ ಸಹಜ ಗುಣ.ಅದಿಲ್ಲದಿದ್ದರೆ, ಮೆದುಳೆಂಬ ಮೆಮರಿಕಾರ್ಡ ಬ್ಲಾಸ್ಟ್ ಆಗುವುದರಲ್ಲಿ ಸಂಶಯವಿಲ್ಲ. ಪುಟ್ಟ ಮೆದುಳು ಏನೆಲ್ಲಾ ಅಂಶಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳಬೇಕು? ಯಾವ ನರಕ್ಕೆ ಯಾವ ಸಂದೇಶ ರವಾನಿಸಬೇಕು ಎಂಬ ಚಿಂತೆ ಕಾಡದಿರದು!. ಅದಕ್ಕೆ ಒಮ್ಮೊಮ್ಮೆ ಕಣ್ಣಿಗೆ ಕತ್ತಲು ಆವರಿಸಿ ಎಚ್ಚರ ತಪ್ಪುವುದು ಇದೆ. ಇದೊಂದು ನೋವಿನ ಸಂಗತಿಯಾದರೂ,ಜೀವನ್ಮರಣದ ನಡುವೆ ಒದ್ದಾಡುವ ಜೀವಗಳು ಬಯಸುವುದು ಶೂನ್ಯವೆಂಬುದನ್ನು ಮರೆಯುವಂತಿಲ್ಲ. ವರ್ಷದ ಅಂತ್ಯಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಸಹಜವೆನ್ನಿಸಿದರು,ಮಾಡಿಕೊಳ್ಳುವವರು ಯಾರು ಅನ್ನುವ ಪ್ರಶ್ನೆ?.ಪ್ರೀತಿ ಪ್ರೇಮ,ಮೋಸ,ವಂಚನೆ,ಅಕ್ರಮ,ಆತ್ಮಹತ್ಯೆ, ಅತ್ಯಾಚಾರ, ಅಪಘಾತ,ಕೊಲೆಗಳಿಗೆ ಬಲಿಯಾದ ಅದೆಷ್ಟೋ ಮುಗ್ದರ ವೃತ್ತಾಂತವು ಹೃದಯ ಕಲುಕದೆ ಇರದು.ಕಣ್ಣಂಚಲಿ ನೋವಿನ ಕಣ್ಣೀರು ಜಿನುಗದೆ ಇರದು…ಇಂತಹ ಘಟನೆಗಳು  ನಮಗೆ ಹತ್ತಿರವಾದವರಾಗಿದ್ದರಂತೂ ಕರುಳು ಮಿಡಿಯದೆ ಇರದು….ಮೊನ್ನೆ ಮೊನ್ನೆಯಷ್ಟೇ…ಗೆಳತಿಯ ಸಾವು ಇಡೀ ಕುಟುಂಬಕ್ಕೆ ಆಘಾತ ನೀಡಿದ್ದು…ನಂಬಲು ಅಸಾಧ್ಯ!. ಮೆದುಳು ಕೇಳುವಷ್ಟು,ಹೇಳುವಷ್ಟು, ಕೇಳಿದ್ದಕ್ಕೆ ಉತ್ತರಿಸುವಷ್ಡು ಇದ್ದರೆ ಮಾತ್ರ ಸುರಕ್ಷಿತ!. ಆದರೆ ಮಿತಿಮೀರಿ ಚಿಂತಿಸುವ ಕೆಲಸಕ್ಕೆ ಸೇರಿದ ಮೇಲಂತೂ, ನಿದ್ರೆಯೆಂಬ ಅಸ್ತಿತ್ವ ಮರಿಚೀಕೆ!. ನಾವೆಲ್ಲ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿದ್ದೆವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಕೂಲ್ ಆಗಿರಬೇಕು, ಅನ್ನೊರಿಗೆ cool ನ ಅರ್ಥ ಕೇಳಬೇಕು.ವಿದಾಯ ಹೇಳಿ ಹೋದವರಿಗೆಪುನಃ ಬರಲಾಗದೆ ತಮ್ಮೊಳಗೆ ಒದ್ದಾಟ ನಡೆಸಿರುವರು… ನಿಜ ಕಣ್ರಿ,ಮರಳಿ ಬಾರದ ಊರಿಗೆ ಪಯಣ ಬೆಳೆಸಿದ ಅದೆಷ್ಟೋ ಜೀವಗಳು ಎಷ್ಟು ನಲುಗಿರಬಹುದು? ಅವರು ಕಂಡ ಕನಸುಗಳು ಅರೆಬೆಂದಾವಸ್ಥೆಯಲ್ಲಿ ಇನ್ನೂ ಇಲ್ಲೆ ಇರುವುದನ್ನು ಅಲ್ಲಗಳೆಯುವಂತಿಲ್ಲನಾವೆಲ್ಲ ಒಂದಲ್ಲ ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೆವೆ. ಸಂಬಂಧಗಳ ಸಂಕೋಲೆಯಲ್ಲಿ ಬಿಕ್ಕುವ ಗಳಿಗೆ ಹೆಜ್ಜೆ ಹೆಜ್ಜೆಗೂಬಂಧಿಸಿದೆ.ಯಾರೆಲ್ಲ ಈ ಪ್ರಪಂಚದಲ್ಲಿ ಉಸಿರಾಡುತ್ತಿದ್ದಾರೋ ಎಲ್ಲರಿಗೂ ವಿದಾಯದ ಕಿರುಕಾಣಿಕೆ.ಕೇವಲ ಸಾಂಕೇತಿಕವಾಗಿ ಕ್ಯಾಲೆಂಡರ್ ಬದಲಾಗಿದೆ…ಅದು ಕ್ಯಾಲೆಂಡರ್ ಅಷ್ಟೇ ಅಲ್ಲ ಜೀವನದ ಮಹತ್ವದ ದಿನಗಳು.ವಿದಾಯ ಸಾರಿದ್ದು ನಮಗೆ ಗೊತ್ತೆಯಾಗಿಲ್ಲ. ಒಟ್ಟಾರೆ ಹೇಳುವುದಾದರೆ ವಿದಾಯದ ಕಹಿ ಸಿಹಿ ನೆನಪು ತುಂಬಾನೆ ದುಃಖ ಮತ್ತು ಖಿನ್ನತೆ ನೀಡುವ ಮೂಲ ಸಾಧನಗಳು.ಹೀಗಿರುವಾಗ ನಾವುಗಳು ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಸುಲಭವಾದರೂ,ಆಚರಣೆಗೆ ತರುವುದು ಕಷ್ಟವೆಂಬುವುದು ನಮಗೆಲ್ಲ ತಿಳಿದಿದೆ.ಕಳೆದುಕೊಂಡ ವಸ್ತು ಪುನಃ ಸಿಗಬಹುದೇನೋ,ಆದರೆ ನಂಬಿಕೆ,ವಿಶ್ವಾಸ, ಪ್ರೀತಿ ಹಾಗೂ ಪ್ರೀತಿಪಾತ್ರರಾದವರು…ಪುನಃ ಸಿಗಲಾರದು…!ಜೀವನದ ಮಜಲುಗಳನ್ನು ಮೆಲುಕು ಹಾಕುವುದು,ಹೊಸ ಕ್ಯಾಲೆಂಡರ್ ತಂದು ಹಾಕುವುದು ಒಂದೇ ಆದಿತೆ?… ನೆನಪು ಜೀವನ್ಮರಣದ ಬೆಸುಗೆ…ವಿದಾಯ ಕಣ್ಣೀರಿಗೆ ಮಾತ್ರ ಅಲ್ಲ ಹೃದಯಕ್ಕೂ ಸಂಬಂಧಿಸಿದ್ದು…..ಅರ್ಥೈಸಿಕೊಳ್ಳಲು ಸಮಯ ಬೇಕು ಅಷ್ಟೇ!… ಶಿವಲೀಲಾ ಶಂಕರ್

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್ Read Post »

ಇತರೆ

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು

ಸಿನಿ ಸಂಗಾತಿ ಪ್ರಶಾಂತ್‌ ಬೆಳತೂರು ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ. ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ.ಎನ್.ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ ಚಿತ್ರದ ಕಡೆ ಒಂದು ದಿವ್ಯ ನಿರ್ಲಕ್ಷ್ಯ ವಹಿಸಿಬಿಟ್ಟಿದೆ. ಆದರೆ ಸ್ವತಃ ಇದರ ನಿರ್ದೇಶಕರಾದ ಪ್ರಕಾಶ್ ರಾಜ್ ಮೇಹು ಅವರು ನಿನ್ನೆ ತಮ್ಮ ಡಿಎನ್ಎ ಚಿತ್ರದಯೂಟ್ಯೂಬ್ ಲಿಂಕ್ ಅನ್ನು ಕಳುಹಿಸಿದ್ದರಿಂದ ಕುತೂಹಲಗೊಂಡು ಅದನ್ನು ತೆರೆದು ಚಿತ್ರವನ್ನು ನೋಡಲು ಶುರು ಮಾಡಿದೆ.ನೀನಾಸಂ ಸತೀಶ್ ಮತ್ತು ಯೋಗರಾಜ್ ಭಟ್ ಅವರ ಹಾಡಿನ ಧ್ವನಿಯ ಹಿನ್ನೆಲೆಯಲ್ಲಿನ ಸಾಹಿತ್ಯವನ್ನು ಅರ್ಥೈಸುತ್ತಾ ಇದರ ಕಥಾ ತಿರುಳನ್ನು ಕ್ರಿಯಾಶೀಲ ನಿರ್ದೇಶಕನೊಬ್ಬ ಹೇಗೆ ಆರಂಭದಲ್ಲಿ ನೋಡುಗನಿಗೆ ತನ್ನ ಕತೆಯ ಅಂತ್ಯವನ್ನು ಸುಲಭವಾಗಿ ಬಿಟ್ಟು ಕೊಡದೆ ಸೂಕ್ಷ್ಮವಾಗಿ ಹೇಳುವ ರೀತಿ ನನ್ನೊಳಗೆ ಆಸಕ್ತಿ ಹುಟ್ಟಿಸಿತು.! ಡಿಎನ್ಎ ಎಂದರೆ ಇಲ್ಲಿ  ಡಿಯೋಕ್ಸಿರೈಬೋ ನ್ಯೂಕ್ಲಿಕ್ ಆಮ್ಲವೆಂಬ ನಮ್ಮ ಸಾಮಾನ್ಯ ವಿಜ್ಞಾನದ ತಿಳವಳಿಕೆಗಳನ್ನು ಬದಿಗೊತ್ತಿ  ಒಡೆದು ಹಾಕುವ ಕತೆಗಾರ ಧ್ರುವ, ನಕ್ಷತ್ರ, ಆಕಾಶಗಳೆಂಬ ತನ್ನ ಕತೆಯ ಪಾತ್ರಗಳನ್ನು ಹಾರಲು ಬಿಡುವ ಮೂಲಕ ಪ್ರೇಕ್ಷಕನನ್ನು ಭದ್ರವಾಗಿ ಹಿಡಿದಿಕೊಳ್ಳುತ್ತಾನೆ ಎಂದು ಅನಿಸದೆ ಇರದು. ಕತೆಯ ಎಳೆ ಮೇಲ್ನೋಟಕ್ಕೆ ತೀರಾ ಸಾಧಾರಣವೆನ್ನುವಂತೆ ಕಂಡರೂ ಭಾವಂತಃಕರಣದ ತೊಳಲಾಟದ ಗಾಳಗಳಲ್ಲಿ ಸಿಲುಕಿಕೊಳ್ಳುವ ಎರಡು ಅಪರಿಚಿತ ವಿಭಿನ್ನ ಕುಟುಂಬಗಳ ಪರಿಚಯವನ್ನು ತೋರಿಸಲು ಒಂದು ಸಿದ್ದ ಮಾದರಿಯನ್ನು ಎಲ್ಲೂ ಬೇಸರವಾಗದಂತೆ ತೋರಿಸಿರುವ ನಿರ್ದೇಶಕರ ಕಲಾತ್ಮಕತೆ ವಿಶಿಷ್ಟವೆನಿಸುತ್ತದೆ.ಎಲ್ಲೂ ಜಾತಿಯ ಹೆಸರನ್ನು ಬಳಸದೆ ಹೆಸರುಗಳ ಸೂಚಕಗಳಿಂದಲೇ ಒಂದು ಶುದ್ಧ ಬ್ರಾಹ್ಮಣ ಕುಟುಂಬ ಮತ್ತೊಂದು ಶೂದ್ರ ಗೌಡರ ಕುಟುಂಬ ಎಂಬ ಅರಿವನ್ನು ಪ್ರೇಕ್ಷಕನಿಗೆ ಸುಲಭದಲ್ಲಿ ದಾಟಿಸಿಬಿಡುವ ಪ್ರಯತ್ನದಲ್ಲಿ ನಿರ್ದೇಶಕನ ಹೆಚ್ಚುಗಾರಿಕೆ ಕಾಣುತ್ತದೆ. ಆರು ವರ್ಷಗಳ ನಂತರ ಮಗು ಅದಲು ಬದಲಾದ ವಿಷಯವನ್ನು ಪ್ರಸ್ತಾಪಿಸುತ್ತಾ ಬೆಂಗಳೂರಿನ ಸಿಟಿ ಆಸ್ಪತ್ರೆಯೊಂದಕ್ಕೆ ಹೆಂಡತಿಯೊಡನೆ ಭಾವಾವೇಶದಿಂದ ಕಾಲಿರಿಸುವ ಪ್ರಶಾಂತ್ ಗೌಡನ ಪಾತ್ರದ ಮೂಲಕ ಕಾಣಿಸಿಕೊಳ್ಳುವ ಅಚ್ಯುತ್ ಕುಮಾರ್ ಅವರ ನಟನೆ ಮನೋಜ್ಞವಾಗಿದೆ. ಪ್ರಾಯಶಃ ಈ ಸಿನಿಮಾ ಒಬ್ಬ ವೀಕ್ಷಕನಿಗೆ ತೀರಾ ಗಂಭೀರವಾಗಿ ಅವನೆದುರು ತೆರೆದುಕೊಳ್ಳುವುದು ಇಲ್ಲಿಯೇ.! ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳು ಗಟ್ಟಿ ಸಂಭಾಷಣೆಯ ಮೂಲಕ ಭಾವಗಳ ಲೋಕದಲ್ಲಿ ವಿಹರಿಸುತ್ತಾ ಹೋಗುತ್ತದೆ. ದೇವನೂರು ಮಹಾದೇವ ಅವರ ಕುಸುಮಬಾಲೆಯ ಸಂಬಂಜ ಅನ್ನದು ದೊಡ್ಡದು ಕನಾ ಎಂಬ ಮಾತುಗಳ ತತ್ವದಲ್ಲಿಯೇ ಕತೆಗಾರ ಈ ಕತೆಯನ್ನು ವಿಶಿಷ್ಟ ರೂಪದಲ್ಲಿ ಹೆಣೆಯಲು ಪ್ರಯತ್ನಿಸಿದ್ದಾನೆ ಎಂದು ಎನಿಸಿತು.ಕರುಳಿನ ರಕ್ತ ಸಂಬಂಧ ಮತ್ತು ಒಂದು ಪರಿಸರದಲ್ಲಿ ಹುಟ್ಟಿ ಬೆಳೆವಾಗ ಅದು ಬೆಳೆಸಿಕೊಳ್ಳುವ ಭಾವ ಸಂಬಂಧಗಳನ್ನು ಮುಖಾಮುಖಿಯಾಗಿಸುವ ಕತೆಗಾರ ಮನುಷ್ಯನ ಬದುಕಿನ ತತ್ವಗಳ ಮೂಲವನ್ನು ಓರೆಗೆ ಹಚ್ಚುತ್ತಾನೆ. ನದಿಯ ಹುಟ್ಟು ಮುಖ್ಯವೋ? ಅಥವಾ ಅದು ಎಲ್ಲಿಗೆ ಸೇರುತ್ತದೆ ಎನ್ನುವುದು ಮುಖ್ಯವೋ? ಎಂಬ ಸಹಜ ಪ್ರಶ್ನೆಗಳು ಎದುರಾದಾಗ ದ್ವಂದ್ವಗಳು ಸಹಜವಾಗಿ ಮನುಷ್ಯನೊಳಗೆ ಬೆಳೆಯುತ್ತಾ ಹೋಗುತ್ತದೆ. ಹರಿಯುವ ನದಿಗೆ ಅಡ್ಡಲಾಗಿ ಅಣೆಕಟ್ಟೆಯನ್ನು ಕಟ್ಟಬಹುದು, ಅದರ ದಿಕ್ಕನ್ನು ಬದಲಿಸಬಹುದು ಆದರೆ ಆ ನೀರಿನ ಗುಣವನ್ನು ಬದಲಿಸಿಲಾದಿತೇ? ಎಂಬ  ತರ್ಕಬದ್ಧವಾದ ಪ್ರಶ್ನೆಯನ್ನು ಕರುಳಿನೊಂದಿಗಿನ ಭಾವಸಂಬಂಧಗಳನ್ನು ಎದುರುಬದುರಾಗಿಸಿ ತಾಕಲಾಟಕ್ಕೆ ದೂಡಿಕೊಳ್ಳುವ ತಂದೆ- ತಾಯಿ ಹಾಗೂ ಮಕ್ಕಳ ಭಾವಗಳನ್ನು ಬದುಕಿನ ದ್ವಂದ್ವಗಳ ತೊಯ್ದಾಟದಲ್ಲಿ ಅಷ್ಟು ಪಾತ್ರಗಳನ್ನು ಅಚ್ಚುಕಟ್ಟಾಗಿ ಅದರಲ್ಲಿ ಮಿಂದೇಳಿಸಿದ್ದಾರೆ.ಹಾಗೆಯೇ  ಅಲ್ಲಲ್ಲಿ ನಿರ್ದೇಶಕ ತಮ್ಮ ನೆಚ್ಚಿನ ನಟರಾದ ರಾಜಕುಮಾರರ ಪ್ರಸಿದ್ಧ ಸಿನಿಮಾ ಸಂಭಾಷಣೆಗಳನ್ನು ಭಾವಾಭಿನಯಗಳನ್ನು ಮೂಲ ಕತೆಗೆ ಚ್ಯುತಿಯಾಗದಂತೆ ಹಾಸ್ಯ ರೂಪದಲ್ಲಿ ನವಿರಾಗಿ ಬೆರೆಸಿರುವುದು ಕೂಡ ನೋಡುಗನಿಗೆ ಇಷ್ಟವಾಗುತ್ತದೆ.ಚಿತ್ರದ ಕೊನೆಯ ಹಂತಕ್ಕೆ ಕುಸುಮಬಾಲೆಯ ಆರಂಭದಲ್ಲಿ ಬರುವ  ಅಲ್ಲಮ ಪ್ರಭುವಿನ  ವಚನದ  ಸಮುದ್ರದೊಳಗಣ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ , ಗುಹೇಶ್ವರ ಲಿಂಗಕ್ಕೂ ಮತ್ತು ತನಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಭಾವ ತಂತುಗಳನ್ನು ಮೀಟುತ್ತಲೇ ಕರುಳ ಸಂಬಂಧವನ್ನು ಮೀರಿ ಬೆಳೆಯುವ ಮಗುವೊಂದು ಕುವೆಂಪು ಅವರ ವಿಶ್ವಮಾನವ ರೂಪ ತಾಳುವಲ್ಲಿಗೆ ಬಂದು ನಿಲ್ಲುತ್ತದೆ..! ಇದು ನಿಜವಾದ ಸೃಜನಶೀಲ ನಿರ್ದೇಶಕನೊಬ್ಬನ ಕಲಾತ್ಮಕತೆಯ ಜೊತೆಗೆ ಆತನ ಸೈದ್ಧಾಂತಿಕ ಬದ್ಧತೆಯ ಮಾನವೀಯ ನಿಲುವುಗಳನ್ನು ಚಿತ್ರವೊಂದರಲ್ಲಿ ಹೇಗೆ ಸಾಮಾನ್ಯರಿಗೆ ಮನಮುಟ್ಟುವಂತೆ ಕಟ್ಟಬಹುದು ಎಂಬುದಕ್ಕೆ ಈ ಚಿತ್ರ ಖಂಡಿತ ಸಾಕ್ಷಿಯಾಗಿದೆ.! ಒಟ್ಟಿನಲ್ಲಿ ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ನಾನು ಹೀಗೊಂದು ಅರ್ಥಪೂರ್ಣ ಕಲಾತ್ಮಕ ಚಿತ್ರವನ್ನು ನೋಡಿದ ಖುಷಿಯಂತೂ ನನ್ನ ಪಾಲಾಯಿತು..! ಮೂರು ವರ್ಷಗಳ ಹಿಂದೆಯೇ ಇಂತಹ ಚಿತ್ರವೊಂದು ಬಿಡುಗಡೆಗೊಂಡರು ನಾನು ನೋಡದೆ ಹೋದೆನಲ್ಲ ಎಂಬ ಕಸಿವಿಸಿಯು ಕೂಡ ಮನಸಿನೊಳಗೆ ಮೂಡಿತು..! ಕನ್ನಡದಲ್ಲಿ ದುನಿಯಾ ಸೂರಿಯ ನಿರ್ದೇಶನವೆಂದರೆ ಒಂದಷ್ಟು ಥಿಯೇಟರಿನತ್ತ ಹೆಜ್ಜೆ ಹಾಕುವ ಮನಸು ಮಾಡುತ್ತಿದ್ದ ನಾನು ಇನ್ಮುಂದೆಪ್ರಕಾಶ್ ರಾಜ್ ಮೇಹು  ಅವರ ಮುಂದಿನ ನಿರ್ದೇಶನಗಳ ಸಿನಿಮಾಗಳಿಗಾಗಿಯೂ ಕುತೂಹಲದಿಂದ ಕಾದು ನೋಡಬಹುದು ಎಂದೆನಿಸಿದ್ದು ಮಾತ್ರ ಸುಳ್ಳಲ್ಲ..! ಒಂದೊಳ್ಳೆಯ ಸದಭಿರುಚಿಯನ್ನು ನೋಡಲು ಕಾರಣವಾದ ಪ್ರಕಾಶ್ ರಾಜ್ ಮೇಹು ಅವರಿಗೆ ಈ ಮೂಲಕ ನನ್ನ ಪ್ರೀತಿಪೂರ್ವಕ ಧನ್ಯವಾದಗಳು..! ಅವರಿಂದ ಮತ್ತಷ್ಟು ಒಳ್ಳೆಯ ಕಲಾತ್ಮಕತೆಯ ಚಿತ್ರದ ಜೊತೆ‌ ಜೊತೆಗೆ ಕನ್ನಡದ ನೆಲಕ್ಕೆ ಒಗ್ಗುವಂತೆ ಹದವಾಗಿ ಬೆರೆತ ಕಮರ್ಷಿಯಲ್ ಹಿಟ್ ಸಿನಿಮಾಗಳ ಕತಾ ಪ್ರಯೋಗಗಳನ್ನು ಕೂಡ ಅವರು ಯಶಸ್ವಿಯಾಗಿ ಮಾಡುವಂತಾಗಲೆಂದು ಪ್ರೀತಿಯಿಂದ ಹಾರೈಸುವೆ ಪ್ರಶಾಂತ್‌ ಬೆಳತೂರು

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು Read Post »

ಇತರೆ, ಲಹರಿ

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ.

ಲಹರಿ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ. “ಮರಗಳ ಜೀವಕೆ ಮರುಗುತಿದೆ ಜೀವ”       ಹಸಿರು ಸೀರೆ ಹೊದ್ದು ನಿಂತ ದಟ್ಟಡವಿಯನ್ನು ಕಂಡಾಗ ಪಿಳಿಪಿಳಿ ಕಣ್ನು ಬಿಡುತ್ತ ವಿಸ್ಮಯ ಕಂಡಂತೆ ನೋಡುತ್ತ ನಿಂತು ಬಿಡುತ್ತೇನೆ ಹಾಗಂತ ಮಲೆನಾಡಿನಲ್ಲಿ ಹುಟ್ಟಿ ಬೆಳೆದವಳಲ್ಲ ನಾನು. ಪಕ್ಕಾ ಬಯಲು ಸೀಮೆ ನನ್ನದು. ಕಣ್ಣು ಹಾಯಿಸಿದುದ್ದಕ್ಕೂ ಬಯಲೇ ಬಯಲು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗಿಡ ಗಂಟೆ ಪೊದೆಗಳ ಸಮೂಹ ಕ್ವಚ್ಛಿತ್ತಾಗಿ ಕಾಣಸಿಗುತ್ತದೆ. ನನ್ನಪ್ಪನ ಮನೆಯ ಹಿತ್ತಲಲ್ಲಿ ಆಳವಾಗಿ ಬೇರು ಚಾಚಿ ಆಕಾಶದೆತ್ತರಕ್ಕೆ ಬೆಳೆದ ತೆಂಗಿನ ಮರವೊಂದಿತ್ತು. ಅದನ್ನು ಬಾಚಿ ತಬ್ಬಿಕೊಳ್ಳಲು ಹವಣಿಸುತ್ತಿದ್ದ ಅಚ್ಚ ಮಲ್ಲಿಗೆ ಹೂವಿನ ಕಂಟಿ, ಅವ್ವ ಪೂಜೆಗೆಂದೇ ಬೆಳೆಸಿದ ಬಟ್ಟಲು ಹೂಗಳು ಕೆಂಪು ದಾಸವಾಳ ಹೂಗಳಿಗೆ ಮನಸೋತು ಮೊಗ್ಗು ಹೇಗೆ ಹಿಗ್ಗಿ ಹಿಗ್ಗಿ ಹೂವಾಗುತ್ತೆ ಎಂಬುದನ್ನು ಕಾಣಲು ಕಾತರಿಸಿ ಗಿಡ ಏಳುವ ಮೊದಲೇ ಎದ್ದು ನಿದ್ದೆಗಣ್ಣಿನಲ್ಲಿ ಕಣ್ಣು ತಿಕ್ಕುತ್ತ ಅದೆಷ್ಟೋ ದಿನಗಳು ನಿಂತರೂ ತುಟಿ ಬಿರಿದ ಮೊಗ್ಗು ತನ್ನ ಗುಟ್ಟು ಬಿಟ್ಟು ಕೊಡಲೇ ಇಲ್ಲ. ನಮ್ಮ ವಂಶದ ಬಹಳಷ್ಟು ಕುಡಿಗಳು ಈ ತೆಂಗಿನ ಮರದ ಕೆಳಗೆ ಆಡಿ ಬೆಳೆದವರು ಹೀಗಾಗಿ ನಮಗೆಲ್ಲ ಇದು ಅಚ್ಚು ಮೆಚ್ಚು. ನಮ್ಮ ಸೋದರತ್ತೆ ಇದನ್ನು ಬಹು ವರ್ಷಗಳ ಹಿಂದೆ ನೆಟ್ಟಿದ್ದರಂತೆ ಎಂದು ನಮ್ಮ ಅಪ್ಪ ಮೇಲಿಂದ ಮೇಲೆ ಬಲು ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ತೀರಾ ಇತ್ತೀಚಿನವರೆಗೂ ನಮಗೆಲ್ಲ ಕಾಯಿ ಎಳೆನೀರು ಕೊಟ್ಟು ಪ್ರೀತಿಸುತ್ತಿತ್ತು. ಮೊನ್ನೆ ಮಳೆಗಾಲದಲ್ಲಿ ನಮ್ಮ ತೆಂಗಿನ ಮರವನ್ನೇ ಗುರಿಯಾಗಿಸಿಕೊಂಡು ಸಿಡಿಲೊಂದು ಹೊಡೆದು ಅದರ ಕತ್ತು ಹಿಸುಕಿದಾಗ ಮನೆಯ ಮಂದಿಯ ಕಣ್ಣುಗಳೆಲ್ಲ ತೇವವಾದವು. ಮನೆಯ ಅತ್ಯಂತ ಪ್ರೀತಿಯ ಸದಸ್ಯನನ್ನು ಕಳೆದುಕೊಂಡವರಂತೆದುಃಖಿಸಿದೆವು.  ಆಗಷ್ಟೇ ಅಭಿವೃದ್ಧಿಯಾಗುತ್ತಿರುವ ಊರಿಗೆ ದೂರವಾಗಿರುವ ಏರಿಯಾದಲ್ಲೊಂದು ನಿವೇಶನವನ್ನು ಕೊಂಡು ಮನೆ ಕಟ್ಟಿಸಿ ಗೃಹ ಶಾಂತಿಗೆ ಸ್ನೇಹಿತ ಬಂಧು ಬಳಗದವರನ್ನು ಕರೆದಾಗ ಮನಿ ಬಾಳ ಚಂದ ಕಟ್ಟಿಸಿರಿ ಆದರ ಇದು ಊರಿಗೆ ಬಾಳ ದೂರಾಗೈತಿ ಇದ ಊರಾಗ ಆಗಿದ್ರ ಇನ್ನು ಚುಲೋ ಆಗತ್ತಿತ್ತು. ಅನ್ನೋದು ಎಲ್ಲರ ಸಾಮಾನ್ಯ ದೂರಾಗಿತ್ತು. ಮಾಲಿನ್ಯ, ಟ್ರಾಫಿಕ್‌ನಿಂದ ದೂರವಾಗಿ ಪ್ರಶಾಂತವಾಗಿರುವ ಸ್ಥಳವನ್ನು ಆರಿಸಿಕೊಂಡು ಸ್ವಂತ ಮನೆಯ ಭಾಗ್ಯ ಪಡೆದಿದ್ದೆ. ಸುತ್ತ ಇರುವ ಹಸಿರು ಗಿಡಗಳಿಂದ ಆಹ್ಲಾದಕರ ಪರಿಸರ ಪ್ರತಿ ದಿನ ಪ್ರತಿಕ್ಷಣ ನನ್ನ ಮನಸ್ಸನ್ನು ಉಲ್ಲಸಿತವಾಗಿರುವಂತೆ ಮಾಡಿತ್ತು. ಎದುರಿಗಿರುವ ಪರಿಚಯದ ಶಾಂತಕ್ಕನ ಮನೆಯ ಕಾಂಪೌoಡ್ ಗೋಡೆಗೆ ತಗುಲಿದಂತಿರುವ ಗುಲಾಬಿ ಬಣ್ಣದ ಕಾಗದ ಹೂಗಳು ಕಣ್ಮನ ತಣಿಸುತ್ತಿದ್ದವು. ಚಳಿಗಾಲದ ಮುಂಜಾವುಗಳಲ್ಲಿ ಬೀದಿಯೆಲ್ಲ ಮಂಜಿನ ತೆರೆ ಹೊದ್ದುಕೊಂಡಾಗ ಶಾಂತಕ್ಕನ ಮನೆಯ ಕಾಗದ ಹೂಗಳು ಅಸ್ಪಷ್ಟವಾಗಿ ಕಣ್ಣಿಗೆ ಬಿದ್ದು ಹೊಸ ಆನಂದವನ್ನು ತರುತ್ತಿದ್ದವು. ಬಲಗಡೆ ನನ್ನ ಪತಿದೇವರ ಸಹೋದ್ಯೋಗಿಯ ನಿವಾಸದ ಮುಂದೆ ವಿಧ ವಿಧ ಹೂಗಳು ತರಾವರಿ ಗುಲಾಬಿ ಹೂಗಳು ಸದಾ ನಗುತ್ತ ನಿಂತಿರುವ ರೀತಿಗೆ ಎಂಥವರು ಮನಸೋತು ತಮಗೂ ಬೇಕೆಂದು ಹೂವಿನ ಕಂಟಿಗಳನ್ನು ಬಲು ಆಸೆಯಿಂದ ಕೇಳಿ ಪಡೆಯುತ್ತಿದ್ದರು. ಮಲ್ಲಿಗೆ ಮಲ್ಲಮ್ಮನೆಂದೇ ಹೆಸರಾಗಿದ್ದ ಮಲ್ಲಮ್ಮನ ಮನೆ ಎಡಕ್ಕಿದೆ. ಗಗನದೆತ್ತರಕ್ಕೆ ಬೆಳೆದು ನಿಂತ ಬೇವಿನ ಮರದ ಪಕ್ಕಕ್ಕಿರುವ ಮಲ್ಲಿಗೆ ಗಿಡ.ಇಡೀ ಏರಿಯಾದಲ್ಲೆಲ್ಲ ತನ್ನ ಪರಿಮಳದ  ಘಮ ಹಿಡಿಸಿರುತ್ತೆ.  ರಜೆಯ ದಿನಗಳಲ್ಲಂತೂ ಹಬೆಯಾಡುವ ಕಾಫಿಯನ್ನು ಆಸ್ವಾದಿಸುತ್ತ ಮಲ್ಲಿಗೆ ಸುವಸನೆಯನ್ನು ಆಘ್ರಾಣಿಸುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುವದು ನನಗೆ ತುಂಬಾ ಇಷ್ಟ. ರಾತ್ರಿ ಮಗಳನ್ನು ಕಾಂಪೌoಡ್ ಕಟ್ಟೆಯ ಮೇಲೆ ಕೂರಿಸಿ ಬೆಳದಿಂಗಳ ಬೆಳಕಲ್ಲಿ ತುತ್ತು ತಿನ್ನಿಸಿ ಲಾಲಿ ಹಾಡಿದ್ದೂ ಈ ಪರಿಮಳಕ್ಕೋಸ್ಕರವೆ! ಮನೆ ಕಟ್ಟುವ ಮೊದಲೇ ಸೋದರತ್ತೆಯಂತೆ ತೆಂಗಿನ ಮರದ ಸಸಿ ನೆಟ್ಟು ಫಲಕ್ಕಾಗಿ ಕಾಯುತ್ತಿದ್ದೆ. ವಸಂತ ಕಾಲದಲ್ಲಿ ಮಲ್ಲಕ್ಕನ ಬೇವಿನ ಗಿಡದಲ್ಲಿ ಶುಭೋದಯಕ್ಕೂ ಮುನ್ನವೇ ಕೋಗಿಲೆಯ ಇಂಚರ ಕೇಳಿ ಮಗಳು ಕಣ್ಣುಜ್ಜುತ್ತ ಕೋಗಿಲೆಯ ಕಾಣಲು ಅವರ ಮನೆಯ ಕಾಂಪೌoಡಿಗೆ ಜಿಗಿಯುತ್ತಿದ್ದಳು.  ಹಲವು ಬಾರಿ ಗಿಳಿಗಳ ಹಿಂಡು ಬೇವಿನ ಮರದ ಮೇಲೆ ತಮ್ಮ ಬಿಡಾರ ಹೂಡಿದಾಗ ಓಣಿಯ ಮಕ್ಕಳ ಹಿಂಡು ಅಲ್ಲಿಂದ ಕಾಲು ಕೀಳುತ್ತಿರಲಿಲ್ಲ. ಗೀಜಗ ತನ್ನ ಗೂಡನ್ನು ಬೇವಿನ ಮರದಲ್ಲಿ ಕಟ್ಟಿ ನಮ್ಮಂಥ ದೊಡ್ಡವರ ಕಣ್ಣುಗಳನ್ನು ದೊಡ್ಡದಾಗಿ ತೆರೆಯುವಂತೆ ಮಾಡಿತ್ತು. ಎಷ್ಟೋ ತರಹದ ಹಕ್ಕಿಗಳಿಗೆ ಆಶ್ರಯ ನೀಡಿ ನಮ್ಮ ಕಿವಿಗಳನ್ನು ಪಕ್ಷಿಗಳ ಕಲರವದಿಂದ ತುಂಬಿಸಿತ್ತು. ಗಾಳಿ ಕಾಲದಲ್ಲಿ ಎಲೆಗಳೆಲ್ಲ ಉದುರಿ ಕಸ ಬುಟ್ಟಿ ಬುಟ್ಟಿಯಗಿ ಬರುತ್ತೆ ಕಸ ಉಡುಗಿ ಉಡುಗಿ ನನ್ನ ರಟ್ಟಿ ಸೋತಾವೆನ್ನುವದು ಮಲ್ಲಕ್ಕನ ಮೇಲ್ಮಾತಿನ ಬೇಜಾರು. ಹೊಸ ಚಿಗುರು ಬಂದು ಶೋಭಾಯಮಾನವಾಗಿ ಕಂಡಾಗ ಮುಗುಳ್ನಗುತ್ತ ಉಗಾದಿ ಹಬ್ಬಕ್ಕ ನಮ್ಮ ಬೇವಿನ ಮರದ ಎಲಿ ಹಾಕ್ಕೊಂಡು ಜಳಕ ಮಾಡ್ರಿ. ಬೇವು ಬೆಲ್ಲಕ್ಕ ಇದ  ಹೂವು ಬಳಸ್ರಿ ಅಂತ ಸುತ್ತ ಮುತ್ತಲಿನ ಮನೆಯವರಿಗೆಲ್ಲ ತಾನೇ ಖುಷಿಯಿಂದ ಹಂಚಿ ಬರುತ್ತಿದ್ದಳು.  ಮೊನ್ನೆ ನನ್ನ ಮಗಳು ಅವ್ವಾ ಅವ್ವಾ ಎಂದು ಅರಚುತ್ತಾ ನೋಡ ಬಾ ಇಲ್ಲೆ ಬೇವಿನ ಮರ ಕಡದು ಹಾಕಾಕತ್ತರ. ಹೇಳ ಬಾ ಅವರಿಗೆ ಕಡಿಬ್ಯಾಡ ಅಂತ ಅಡುಗೆ ಮನೆಯಲ್ಲಿದ್ದ ನನ್ನ ಕೈ ಹಿಡಿದು ದರ ದರ ಎಳೆಯುತ್ತ ಮಲ್ಲಕ್ಕನ ಕಾಂಪೌಡಿಗೆ ತಂದು ನಿಲ್ಲಿಸಿದ್ದಳು. ವಿಚಾರಿಸಿದಾಗ, ಬೇವಿನಗಿಡ ಈ ದಿಕ್ಕಿನ್ಯಾಗ ಇರಬಾರದಂತ. ಇದು ಇಲ್ಲಿದ್ದದ್ದಕ್ಕ ನಮಗ ಸಮಸ್ಯೆ ಹೆಚ್ಚಾಗತಾವು ಅಂತ ವಾಸ್ತು ತಜ್ಞರು ಹೇಳಿದ್ರು ಅದಕ್ಕ ನಿರ್ವಾ ಇಲ್ಲದ ಕಡಸಾಕ ಹತ್ತೆವ್ರಿ ಅಂದಳು.  ಮರಕ್ಕೆ ಕೊಡಲಿ ಪೆಟ್ಟು ಹಾಕಿದಾಗಲೊಮ್ಮೆ ನನಗೇ ಹಾಕಿದಷ್ಟು ನೋವಾಗುತಿತ್ತು. ನಮಗೆಲ್ಲ ಶುದ್ಧ ಉಸಿರು ನೀಡಿದ ಮರ ವಾಸ್ತು ಹೆಸರಿನಲ್ಲಿ ನಿಸ್ಸಹಾಯಕವಾಗಿ ತನ್ನ ಉಸಿರು ಕಳೆದುಕೊಳ್ಳುತ್ತಿರುವದನ್ನು ಕಂಡು ಓಣಿಯ ಮಕ್ಕಳು ದೊಡ್ಡವರೆಲ್ಲ ಮನದಲ್ಲೇ ವಾಸ್ತು ತಜ್ಞರನ್ನು ಶಪಿಸುತ್ತಿದ್ದರು. ಮನೆಗೆ ತೆರಳುವಾಗ ಮಗಳು, ಅವ್ವಾ ಇನ್ನ ಮ್ಯಾಲೆ ಕೋಗಿಲೆ ಗಿಳಿ ಬರೂದಿಲ್ಲ ಅಲ್ಲ ಎಂದು ಬೇಜಾರಿನಿಂದ ಕೇಳಿದಳು. ನಮ್ಮ ತೆಂಗಿನ ಮರ ದೊಡ್ಡದಾಗತ್ತಲ್ಲಾ ಈ ಸಲ ಅಲ್ಲೆ ಕೋಗಿಲೆ ಗಿಳಿಗಳು  ಇರ‍್ತಾವು ನೋಡ್ತಾ ಇರು ಎಂದೆ. ನಿಜಾನಾ ಅವ್ವಾ ಎಂದು  ಕೊಂಚ ಸಾವರಿಸಿಕೊಂಡು ಮುಖ ಅರಳಿಸಿದಳು. ಬರೋ ಯುಗಾದಿಗೋಸ್ಕರ ಮಗಳು ಸಾವಿರ ಕಣ್ಣುಗಳಲ್ಲಿ ಎದುರು ನೋಡುತ್ತಿದ್ದಾಳೆ. ಅವಳೊಂದಿಗೆ ನಾನೂ ಕೂಡ. ಸಸಿಗಳನ್ನು ನೆಡಿ ಮರಗಳನ್ನು ಕಾಪಾಡಿ ಅರಣ್ಯಗಳನ್ನು ರಕ್ಷಿಸಿ ಕಾಡಿದ್ದರೆ ನಾಡು ಅಂತೆಲ್ಲ ಘೋಷಣೆಗಳ ಅಬ್ಬರ ಎಲ್ಲೆಲ್ಲೂ ಕೇಳುತ್ತಲೇ ಇರುತ್ತೆ. ಸಬೆ ಸಮಾರಂಭಗಳಲ್ಲಿ ಉಪನ್ಯಾಸ ಮಾಲಿಕೆಗಳು ಕೇಳುಗರ ಕಿವಿಯ ಬಾಗಿಲಲ್ಲಿ  ನಿಂತು ಸರದಿಯ ಪ್ರಕಾರ ಒಂದಾದ ಮೇಲೊಂದು ಬರುತ್ತಿರುತ್ತವೆ. ಹೀಗಿದ್ದಾಗಲೂ ರಸ್ತೆಯಂಚಿನಲ್ಲಿರುವ ಮರಗಳು ಕರೆಂಟ್ ವಾಯರಿಗೆ ಅಡ್ಡಿ ಪಡಿಸುತ್ತವೆಂದು ತಮ್ಮ ಕೊಂಬೆಗಳನ್ನು ಕಳೆದುಕೊಂಡರೆ ಇನ್ನೂ ಕೆಲವು ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಟ್ಟಡ ಅಡುಗೆ ಸೌದೆ ಫ್ಯಾಕ್ಟರಿಗೊಸ್ಕರ  ಮನುಷ್ಯನ ದುರಾಸೆಗೋಸ್ಕರ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವ ಮರಗಳನ್ನು ಕಂಡು ಮರ ಮರ ಮರಗುತ್ತದೆ ಜೀವ. ಹಂಚಿಕೊಳ್ಳದಿರೋಕೆ ನನ್ನ ಕೈಲಿ ಆಗಲಿಲ್ಲ. ಮರಗುವ ಜೀವಕೆ ಸಂತೈಸಲು ಸಸಿಗಳನು ಸಾಲು ಸಾಲಾಗಿ ನೆಟ್ಟು ನೀರೆರೆಯುತ್ತಿದ್ದೇನೆ. ಮತ್ತೆ ನೀವು—-? ಜಯಶ್ರೀ. ಜೆ. ಅಬ್ಬಿಗೇರಿ.

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ. Read Post »

ಇತರೆ

“ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” ವಿಶ್ವಾಸ್ ಡಿ.ಗೌಡ

ಹೊಸವರ್ಷದ ವಿಶೇಷ ವಿಶ್ವಾಸ್ ಡಿ.ಗೌಡ “ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” *ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ*ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ನ ಒಂದು ಪುಟ ತಿರುಗಿಸುವ ಕ್ರಿಯೆಯಷ್ಟೇ ಅಲ್ಲ; ಅದು ನಮ್ಮ ಜೀವನದ ಹೊಸ ಅಧ್ಯಾಯಕ್ಕೆ ತೆರೆ ಎಳೆಯುವ ಮಹತ್ವದ ಕ್ಷಣ. ಹಳೆಯ ವರ್ಷದ ಅನುಭವಗಳು—ಸಂತೋಷವಾಗಲಿ, ನೋವಾಗಲಿ—ಎಲ್ಲವೂ ನಮ್ಮನ್ನು ಪಾಠ ಕಲಿಸುವ ಗುರುಗಳಂತೆ ಕೆಲಸ ಮಾಡುತ್ತವೆ. ಇಂತಹ ಸಂದರ್ಭದಲ್ಲೇ ಹೊಸ ವರ್ಷ 2026 ನಮ್ಮ ಮುಂದೆ ಹೊಸ ಆಶಾವಾದ, ಹೊಸ ಉತ್ಸಾಹ ಮತ್ತು ಹೊಸ ಜವಾಬ್ದಾರಿಗಳೊಂದಿಗೆ ನಿಂತಿದೆ. ಈ ಹೊಸ ವರ್ಷವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೇ, ಆತ್ಮಪರಿಶೀಲನೆ, ಉತ್ತಮ ಸಂಕಲ್ಪಗಳು ಮತ್ತು ಸಮಾಜಪರ ಜಾಗೃತಿಯೊಂದಿಗೆ ಸ್ವಾಗತಿಸುವುದು ಅತ್ಯಂತ ಅಗತ್ಯ.ಹೊಸ ವರ್ಷಕ್ಕೆ ಶುಭಾಶಯಗಳನ್ನು ಹೇಳುವುದು ನಮ್ಮ ಸಂಸ್ಕೃತಿಯ ಒಂದು ಸುಂದರ ಭಾಗ. “ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ, ಶಾಂತಿ ಮತ್ತು ಯಶಸ್ಸು ತುಂಬಿರಲಿ” ಎಂಬ ಹಾರೈಕೆಗಳು ಕೇವಲ ಪದಗಳಲ್ಲ; ಅವು ನಮ್ಮ ಮನದೊಳಗಿನ ಸದ್ಭಾವನೆಗಳ ಪ್ರತಿಬಿಂಬ. ಆದರೆ ಈ ಶುಭಾಶಯಗಳು ಅರ್ಥಪೂರ್ಣವಾಗಬೇಕಾದರೆ, ಅವುಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗಿದೆ. ಹೊಸ ವರ್ಷವು ನಮ್ಮನ್ನು ಉತ್ತಮ ವ್ಯಕ್ತಿಗಳಾಗುವತ್ತ ಕರೆದೊಯ್ಯಬೇಕು.ಇದೇ ಸಂದರ್ಭದಲ್ಲಿ “ರೆಸಲ್ಯೂಷನ್” ಅಂದರೆ ಸಂಕಲ್ಪಗಳ ಮಹತ್ವ ನೆನಪಾಗುತ್ತದೆ. ಹೊಸ ವರ್ಷದ ಸಂಕಲ್ಪಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಆದರೆ ಹೆಚ್ಚಿನವರು ಹೊಸ ವರ್ಷ ಆರಂಭದಲ್ಲಿ ಉತ್ಸಾಹದಿಂದ ಸಂಕಲ್ಪಗಳನ್ನು ತೆಗೆದುಕೊಂಡು, ಕೆಲವೇ ದಿನಗಳಲ್ಲಿ ಮರೆತುಬಿಡುತ್ತಾರೆ. ಇದಕ್ಕೆ ಕಾರಣ ಸಂಕಲ್ಪಗಳ ಅಸಾಧ್ಯತೆ ಅಥವಾ ನಿರಂತರ ಪ್ರಯತ್ನದ ಕೊರತೆ. ಆದ್ದರಿಂದ 2026ಕ್ಕೆ ನಾವು ತೆಗೆದುಕೊಳ್ಳುವ ಸಂಕಲ್ಪಗಳು ಸರಳವಾಗಿರಲಿ, ಸಾಧ್ಯವಾಗಿರಲಿ ಮತ್ತು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿರಲಿ.ಆರೋಗ್ಯಕ್ಕೆ ಸಂಬಂಧಿಸಿದ ಸಂಕಲ್ಪಗಳು ಮೊದಲ ಆದ್ಯತೆಯಾಗಬೇಕು. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಧೂಮಪಾನ ಮತ್ತು ಮದ್ಯಪಾನದ ನಿಯಂತ್ರಣ—ಇವೆಲ್ಲವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ. ಆರೋಗ್ಯವಂತ ವ್ಯಕ್ತಿಯೇ ಕುಟುಂಬಕ್ಕೂ, ಸಮಾಜಕ್ಕೂ ಉಪಯುಕ್ತನಾಗಬಲ್ಲ. ಜೊತೆಗೆ ಮಾನಸಿಕ ಶಾಂತಿಯೂ ಅಷ್ಟೇ ಮುಖ್ಯ. ಧ್ಯಾನ, ಪ್ರಾರ್ಥನೆ, ಓದು ಅಥವಾ ಪ್ರಕೃತಿಯೊಂದಿಗೆ ಸಮಯ ಕಳೆಯುವಂತಹ ಚಟುವಟಿಕೆಗಳು ನಮ್ಮ ಮನಸ್ಸನ್ನು ಸಮತೋಲನದಲ್ಲಿರಿಸುತ್ತವೆ.ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಸಂಕಲ್ಪಗಳೂ ಅಗತ್ಯ. ಸಮಯಕ್ಕೆ ಕೆಲಸ ಮಾಡುವ ಶಿಸ್ತು, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮನೋಭಾವ—ಇವು ನಮ್ಮನ್ನು ಉತ್ತಮ ನಾಗರಿಕರನ್ನಾಗಿಸುತ್ತವೆ. 2026ರಲ್ಲಿ “ನಾನು ಏನು ಪಡೆಯುತ್ತೇನೆ?” ಎಂಬ ಪ್ರಶ್ನೆಗೆ ಜೊತೆಗೆ “ನಾನು ಸಮಾಜಕ್ಕೆ ಏನು ಕೊಡಬಲ್ಲೆ?” ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು.ಹೊಸ ವರ್ಷ ಆಚರಣೆ ಎಂಬುದು ಮತ್ತೊಂದು ಮಹತ್ವದ ವಿಷಯ. ಇತ್ತೀಚಿನ ವರ್ಷಗಳಲ್ಲಿ ಹೊಸ ವರ್ಷದ ಸಂಭ್ರಮವು ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತಿರುವುದು ವಿಷಾದಕರ. ಪಟಾಕಿಗಳ ಶಬ್ದ, ಅತಿಯಾದ ಮದ್ಯಪಾನ, ಅಸಭ್ಯ ವರ್ತನೆ, ರಸ್ತೆ ಅಪಘಾತಗಳು—ಇವೆಲ್ಲವೂ ಸಂಭ್ರಮದ ಹೆಸರಿನಲ್ಲಿ ನಡೆಯುವ ದುಃಖದ ಘಟನೆಗಳು. ಸಂಭ್ರಮ ಎಂದರೆ ಅತಿರೇಕವಲ್ಲ; ಸಂಭ್ರಮ ಎಂದರೆ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದು. ನಮ್ಮ ಆಚರಣೆಯಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಎಚ್ಚರಿಕೆ ಅತ್ಯಂತ ಮುಖ್ಯ.ಪಟಾಕಿಗಳ ಬಳಕೆಯಿಂದ ವಯೋವೃದ್ಧರು, ರೋಗಿಗಳು, ಮಕ್ಕಳಷ್ಟೇ ಅಲ್ಲದೆ ಪ್ರಾಣಿಗಳಿಗೂ ತೀವ್ರ ತೊಂದರೆ ಆಗುತ್ತದೆ. ಪರಿಸರ ಮಾಲಿನ್ಯವೂ ಹೆಚ್ಚಾಗುತ್ತದೆ. ಆದ್ದರಿಂದ 2026ನ್ನು “ಪರಿಸರ ಸ್ನೇಹಿ ಹೊಸ ವರ್ಷ”ವಾಗಿಸಲು ನಾವು ಸಂಕಲ್ಪ ಮಾಡಬೇಕು. ಶಬ್ದರಹಿತ, ಮಾಲಿನ್ಯರಹಿತ ಆಚರಣೆಗಳು ನಮ್ಮ ಸಂಸ್ಕೃತಿಯ ಗೌರವವನ್ನು ಹೆಚ್ಚಿಸುತ್ತವೆ.ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಸಂಯಮ ಅತ್ಯಂತ ಅಗತ್ಯ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅನೇಕ ಅಮೂಲ್ಯ ಜೀವಗಳು ಕಳೆದುಕೊಳ್ಳುತ್ತಿವೆ. ಒಂದು ಕ್ಷಣದ ನಿರ್ಲಕ್ಷ್ಯವು ಜೀವಪೂರ್ತಿ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಆದ್ದರಿಂದ “ನನ್ನ ಸಂಭ್ರಮದಿಂದ ಯಾರ ಜೀವಕ್ಕೂ ಅಪಾಯವಾಗಬಾರದು” ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು.ಹೊಸ ವರ್ಷವು ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶವೂ ಹೌದು. ಮೊಬೈಲ್, ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯಿಂದ ದೂರವಿದ್ದು, ನಿಜವಾದ ಸಂಬಂಧಗಳಿಗೆ ಸಮಯ ಕೊಡುವುದು 2026ರ ಒಂದು ಉತ್ತಮ ಸಂಕಲ್ಪವಾಗಬಹುದು. ಹಿರಿಯರನ್ನು ಗೌರವಿಸುವುದು, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದು, ನೆರೆಹೊರೆಯವರೊಂದಿಗೆ ಸೌಹಾರ್ದ ಬೆಳೆಸುವುದು—ಇವೆಲ್ಲವೂ ಹೊಸ ವರ್ಷದ ಸಾರ್ಥಕತೆಯನ್ನು ಹೆಚ್ಚಿಸುತ್ತವೆ.ಕೊನೆಗೆ, ಹೊಸ ವರ್ಷ 2026 ನಮ್ಮೆಲ್ಲರಿಗೂ ಹೊಸ ಆಶಾಕಿರಣವಾಗಲಿ. ನಾವು ತೆಗೆದುಕೊಳ್ಳುವ ಸಂಕಲ್ಪಗಳು ಕಾಗದದಲ್ಲೇ ಉಳಿಯದೆ, ನಮ್ಮ ದೈನಂದಿನ ಜೀವನದಲ್ಲಿ ಪ್ರತಿಬಿಂಬಿಸಲಿ. ಸಂಭ್ರಮವು ಸಂಯಮದೊಂದಿಗೆ, ಸಂತೋಷವು ಸಂವೇದನೆಯೊಂದಿಗೆ ಬೆರೆಯಲಿ. ಯಾರಿಗೂ ತೊಂದರೆ ಆಗದಂತೆ, ಎಲ್ಲರಿಗೂ ಒಳಿತಾಗುವಂತೆ ನಾವು ಹೊಸ ವರ್ಷವನ್ನು ಆಚರಿಸೋಣ.ಹೊಸ ವರ್ಷ 2026ಕ್ಕೆ ಹಾರ್ದಿಕ ಶುಭಾಶಯಗಳು!ಈ ವರ್ಷ ನಿಮ್ಮ ಜೀವನದಲ್ಲಿ ಹೊಸ ಬೆಳಕು, ಉತ್ತಮ ಬದಲಾವಣೆಗಳು ಮತ್ತು ಶಾಶ್ವತ ಸಂತೋಷವನ್ನು ತರಲಿ. ಸಂಕಲ್ಪ, ಸಂಯಮ ಮತ್ತು ಮಾನವೀಯತೆಯೊಂದಿಗೆ ನಾವು ಎಲ್ಲರೂ ಒಟ್ಟಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸೋಣ. ವಿಶ್ವಾಸ್‌ ಡಿ ಗೌಡ

“ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” ವಿಶ್ವಾಸ್ ಡಿ.ಗೌಡ Read Post »

ಇತರೆ

“ಮೌನ ನಮನ”ಸರಸ್ವತಿ ಕೆ ನಾಗರಾಜ್

ಹೊಸವರ್ಷ ವಿಶೇಷ ಸರಸ್ವತಿ ಕೆ ನಾಗರಾಜ್ “ಮೌನ ನಮನ” ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು. ಹುಟ್ಟಿನಿಂದ ಸಾಯುವವರೆಗೂ ಅನುಭವಿಸುವ ಒಂದೊಂದು ಕ್ಷಣಗಳು ಆಗಾಗ ನೆನಪಿಗೆ ಬರುವಂಥವುಗಳು.ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಎಷ್ಟೋ ನೆನಪುಗಳು ಸುಃಖ ತರಬಹುದು;ಇನ್ನು ಕೆಲವು ದುಃಖತರಬಲ್ಲವುಗಳು.ಆದರೆ ಎಲ್ಲವೂ ನೆನಪುಗಳೇ ತಾನೆ! ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ,ಆದರೆ ಕೆಲವು ನೆನಪುಗಳು ಕಾಲವನ್ನೇ ದಾಟಿ ಬರುತ್ತವೆ. ನಾನು ಹಿಂತಿರುಗಿ ನೋಡಿದಾಗಲೆಲ್ಲ,ಮನಸು ನಗುವಂತೆ ಮಾಡಲಿ,“ಹೌದು, ಅದು ಸವಿ ವರ್ಷ” ಎಂದು.ಬದುಕಿನ ಜಂಜಾಟಗಳ ನಡುವೆ ಕೆಲವೊಂದಿಷ್ಟು ಮೌಲ್ಯವಾದ ನೆನಪನ್ನು ನಾವು ಮರೆಯದೆ ನೆನಪಿಸಿಕೊಳ್ಳೋಣ ಈ ವರುಷದ ಕೊನೆಯ ದಿನದಂದು. 31/12/2025, ಜೀವನದ ಓಟದಲ್ಲಿ ದಿನಗಳು ಎಣಿಕೆಯಾಗಿ ಹಾರಿದರೂ,ನೆನಪುಗಳು ಮಾತ್ರ ಮನದೊಳಗೆ ನೆಲೆಸುತ್ತವೆ.ಕೆಲವು ಕಣ್ಣಲ್ಲಿ ನೀರು ತರಿಸಿದರೆ,ಕೆಲವು ತುಟಿಗಳಲ್ಲಿ ನಗು ಮೂಡಿಸುತ್ತವೆ.ಕಾಲದ ಹೊಡೆತಕ್ಕೆ ಮಸುಕಾದರೂ,ಹೃದಯದ ಮೂಲೆಯಲ್ಲಿ ಉಳಿಯುವವುಅವುಗಳೇ ನಿಜವಾದ ಸಂಪತ್ತು.ಪಡೆದದ್ದಕ್ಕಿಂತ ಕಳೆದುಕೊಂಡ ಪಾಠಗಳುನಮ್ಮನ್ನು ಇನ್ನಷ್ಟು ಮಾನವನನ್ನಾಗಿಸುತ್ತವೆ.ಈ ವರುಷದ ಕೊನೆಯ ದಿನದಂದು,ಅಪೇಕ್ಷೆ,ನಿರೀಕ್ಷೆಗಳ ಗದ್ದಲ ಬಿಟ್ಟು,ನಮ್ಮನ್ನೇ ನಾವು ಕ್ಷಣಕಾಲ ಆಲಿಸೋಣ.ಕ್ಷಮೆ ಕೇಳಬೇಕಾದವರಿಗೆ ಮನಸಲ್ಲಿ ಕ್ಷಮೆ ಬೇಡೋಣ,ಕ್ಷಮಿಸಬೇಕಾದವರನ್ನು ಹೃದಯದಿಂದ ಕ್ಷಮಿಸೋಣ.ನಾಳೆ ಹೊಸ ವರ್ಷ ಎನ್ನುವ ನಿರೀಕ್ಷೆಯೊಂದಿಗೆ,ಇಂದಿನ ದಿನವನ್ನು ಕೃತಜ್ಞತೆಯಿಂದ ಮುಗಿಸೋಣ.ಎಲ್ಲಾ ನೋವುಗಳ ನಡುವೆಯೂನಮ್ಮನ್ನು ಬದುಕಲು ಕಲಿಸಿದ ಈ ವರ್ಷಕ್ಕೆಒಂದು ಮೌನ ನಮನ. ಸರಸ್ವತಿ ಕೆ ನಾಗರಾಜ್

“ಮೌನ ನಮನ”ಸರಸ್ವತಿ ಕೆ ನಾಗರಾಜ್ Read Post »

ಇತರೆ

“ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ”ಡಾ.ಸುಮತಿ ಪಿ

ಹೊಸ ವರ್ಷ ವಿಶೇಷ ಡಾ.ಸುಮತಿ ಪಿ “ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ” ನವ ವರ್ಷ ಅಥವಾ ಹೊಸ ವರ್ಷ ಎಂದಾಗ ಅದೇನೊ ಪುಳಕ, ಹೊಸದನ್ನು ಸ್ವೀಕರಿಸಬೇಕೆನ್ನುವ ಮನೋಲ್ಲಾಸ. ಹಳೆಯದನ್ನು ಮರೆತು, ಹೊಸತನವನ್ನು ಮೈಗೂಡಿಸಿಕೊಂಡು,ತಮ್ಮ ಜೀವನದ ಕನಸನ್ನು ಕಾಣುವ ಯುವಕರು ಹೊಸ ವರ್ಷಾಚರಣೆಯ ಗುಂಗಿನಲ್ಲಿ ಕಳೆದು ಹೋಗಿ, ಅನೇಕ ಅಪಾಯಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಹೊಸ ವರ್ಷದ  ಆಚರಣೆ ನಡೆದುಕೊಂಡು ಬಂದಿರುವುದು ಇಂದು ನಿನ್ನೆಯಿಂದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ಸಾಕಷ್ಟು ಸುಳುಹುಗಳನ್ನು ನಾವು  ಇತಿಹಾಸದಲ್ಲಿ ಕಾಣುತ್ತೇವೆ. ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಕಾಣಸಿಗುತ್ತದೆ.  ಪ್ರಾಚೀನ ಕಾಲದಲ್ಲೂ ಜನರು ಹೊಸ ವರ್ಷ ವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು ಎಂಬುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಹಿಂದಿನ ಕಾಲದಲ್ಲಿ ಧಾರ್ಮಿಕ ಹಾಗೂ ಸಂಪ್ರದಾಯಿಕ ಹಿನ್ನೆಲೆಯಿಂದ ಆಚರಿಸಿಕೊಂಡು ಬರುತ್ತಿದ್ದಂತಹ ಹೊಸ ವರ್ಷದ ಆಚರಣೆ ಇಂದು ಬದಲಾವಣೆಗೊಳ್ಳುತ್ತಾ, ಹೊಸ ರೂಪವನ್ನು ಪಡೆದಿದೆ. ಇಂದು ಮೋಜು, ಮಸ್ತಿ, ಕುಡಿತ ,ಕುಣಿತ ಇವೇ ಹೊಸ ವರ್ಷಾಚರಣೆಯ ಸಂಭ್ರಮವನ್ನು ಆಕ್ರಮಿಸಿ ಕೊಂಡಿವೆ.ಈಗಿನ  ಯುವ ಜನತೆಗೆ ಹೊಸ ವರ್ಷದ ಆಚರಣೆ ಎಂದರೆ ಅದೊಂದು ಮೋಜಿನಾಟವಲ್ಲದೇ ಬೇರೇನೂ ಅಲ್ಲ. ಮನೆಯಲ್ಲಿನ ಹಿರಿಯರು ಮೂಲೆಗುಂಪಾಗು ತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತಿ,ಸಂಸ್ಕಾರ, ಸಂಪ್ರದಾಯ, ನಂಬಿಕೆ, ವಿಶ್ವಾಸಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಸ್ಮಾರ್ಟ್ ಫೋನ್, ವಾಟ್ಸ್ ಆ್ಯಪ್‌ಗಳ ಹಾವಳಿಯಿಂದಾಗಿ ಇಂದಿನ ಯುವಕರು ಬೀಚ್‌ನಲ್ಲೋ, ಪಬ್‌ನಲ್ಲೋ ಕುಳಿತುಕೊಂಡು ಊರಿನಲ್ಲಿರುವ,ಮನೆಯಲ್ಲಿರುವ ಹೆತ್ತವರಿಗೆ ಹೊಸ ವರ್ಷದ ಸಂದೇಶ ಕಳಿಸುವ ಪರಿಪಾಠ ಬೆಳೆಯುತ್ತಿದೆ. ಹೊಸ ವರ್ಷಾಚರಣೆಗಾಗಿಯೇ ನಗರದ ಪ್ರತಿಷ್ಠಿತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಡಾಬಾಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಡಿ ಜೆ ಗೆ ಹೆಜ್ಜೆ ಹಾಕುವ ಪ್ರೇಮಿಗಳ ಕಲರವ ಯುವಕರ ಮನಸ್ಸನ್ನು ಹುಚ್ಚುಗಟ್ಟಿಸುವಂತಿರುತ್ತದೆ. ಇಂತಹ ಹೊಸ ವರ್ಷ ಆಚರಣೆಯಲ್ಲಿ ಮುಳುಗಿದ ಯುವಕರು ಅನೇಕ ದುರಭ್ಯಾಸಗಳಿಗೆ ಅಂಟಿಕೊಳ್ಳುತ್ತಾರೆ. ಅಲ್ಲದೆ ಪಬ್ಬು, ಪಾರ್ಟಿ ಎಂದು ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ, ವೃತ್ತಿಯಲ್ಲಿ ಬದ್ಧತೆಯನ್ನೂ ಕಳೆದುಕೊಳ್ಳುವವರು ಇದ್ದಾರೆ. ಕುಟುಂಬದವರನ್ನು ನಿರ್ಲಕ್ಷಿಸಿ,ತಮ್ಮದೇ ಆದ ದಾರಿಯನ್ನು ಹಿಡಿದು ಜೀವನವನ್ನು ಹಾಳು ಮಾಡಿಕೊಳ್ಳುವವರೂ ಇದ್ದಾರೆ. ಇದನ್ನೆಲ್ಲ ನೋಡುವಾಗ ಇಂದಿನ ಹೊಸ ವರ್ಷಾಚರಣೆ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದರೆ ಸುಳ್ಳಾಗಲಾರದು.ಹೊಸ ವರ್ಷದಲ್ಲಿ ಸಂಭ್ರಮ ಪಡುವುದಕ್ಕೆ ಹೋಗಿ,ಏನೇನೋ ಅನಾಹುತಗಳನ್ನು ಮಾಡಿಕೊಂಡು, ಸಂಕಷ್ಟಕ್ಕೆ ಈಡಾಗುತ್ತಾ, ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ಜೀವನವನ್ನು ಅಂತ್ಯಗಾಣಿಸುವವರೂ ಇದ್ದಾರೆ . ಮೊದಲೆಲ್ಲ ಹೊಸ ವರ್ಷಾಚರಣೆ ಎಂದರೆ ಬದುಕಿನಲ್ಲಿ ನಡೆದ ಕಷ್ಟಗಳನ್ನು ಮರೆತು, ಕಳೆದುಹೋದ ಬದುಕಿನ ದಿನಗಳ ಚಿಂತನ ಮಂಥನ ಮಾಡಿಕೊಂಡು ಮುಂದಿನ ಬದುಕಿನಲ್ಲಿ ನಡೆಯಬೇಕಾದ ಜೀವನದ ರೂಪುರೇಷೆಯನ್ನು ಹಾಕಿಕೊಳ್ಳುತ್ತಾ, ಒಮ್ಮೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯನ್ನು ವಹಿಸಲು ಮುಂಜಾಗ್ರತ ಕ್ರಮವಾಗಿ ಮುಂದಿನ ವರುಷದ ಜೀವನ ನಡೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಂತಹ ಸುಸಂದರ್ಭವು ಹೊಸ ವರ್ಷವಾಗಿರುತ್ತಿತ್ತು ಇದೀಗ ಹೊಸ ವರ್ಷಾಚರಣೆ ಹೊಸ ಹೊಸ ರೂಪಗಳನ್ನು ಪಡೆಯುತ್ತಿದ್ದು, ಯುವಕರನ್ನು ಮೋಡಿ ಮಾಡುತ್ತಿದೆ. ಹೊಸ ವರ್ಷಾಚರಣೆ ಎಂದರೆ ಯುವಕರು ಕುಡಿಯುವುದು, ಮೋಜು, ಮಸ್ತಿ ಎಂದೇ ಭಾವಿಸಿರುವಂತೆ  ಕಾಣಿಸುತ್ತದೆ. ದೇವಸ್ಥಾನಕ್ಕೆ ಹೋಗಿಯೋ ಅಥವಾ ಮನೆ ದೇವರನ್ನು ವಿಶೇಷ ಭಕ್ತಿಯಿಂದ ಭಜಿಸಿಯೋ,ಮಾಡಿದ ತಪ್ಪುಗಳನ್ನು ಮನ್ನಿಸುವಂತೆ ಕೇಳಿಕೊಂಡು, ಹೊಸ ವರ್ಷದಲ್ಲಿ ಹೊಸ ರೀತಿಯ ಸುಂದರ ಜೀವನವನ್ನು ಕರುಣಿಸಬೇಕೆಂದು ಬೇಡುವಂತಹ ಸಂಸ್ಕಾರ ನಮ್ಮ ಹಿಂದಿನ ಅವಿಭಕ್ತ ಕುಟುಂಬದಲ್ಲಿತ್ತು. ಆದರೆ ಈಗ ಅಂತಹ ಯಾವುದೇ ಸಂಸ್ಕಾರ ನಮಗೆ ಕಾಣಿಸಿಗದು. ಹೊಸ ವರ್ಷವೆಂದರೆ ಅದೇನೋ ಸಂಭ್ರಮ!.ಹುಚ್ಚು ಆಚರಣೆ! ಮನೆಯಿಂದ ಹೊರಗಡೆ ಹೋಗಿ ಪಾರ್ಟಿಗಳಲ್ಲೋ ಅಥವಾ ಪಬ್ಬುಗಳಲ್ಲೋ ಚೆನ್ನಾಗಿ ತಿಂದುಂಡು ಕುಡಿದು ಕುಣಿಯುವುದೇ ಸಂಭ್ರಮ ಎಂದುಕೊಂಡಂತಿದೆ ನಮ್ಮ ಮಕ್ಕಳು. ಇಂತಹ ಹೊಸ ವರ್ಷದ ಆಚರಣೆಯಲ್ಲಿ ಮುಳುಗಿ ಹೋಗುವ ಎಷ್ಟೋ ಮಕ್ಕಳು ತಮಗರಿವಿಲ್ಲದಂತೆಯೇ ತಮ್ಮ ಜೀವನದಲ್ಲಿ ಅನೇಕ ಅಪಾಯಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಕುಡಿದು ಮೋಜು ಮಸ್ತಿ ಮಾಡುವಾಗ ಸಂಘರ್ಷಗಳು ಉಂಟಾಗಿ ಜಗಳಗಳು ಕೊಲೆಯಲ್ಲಿ ಕೊನೆಗೊಳ್ಳುವುದೂ ಇದೆ.ಪಾರ್ಟಿಗಳಲ್ಲಿ ಕುಡಿದು, ಕುಣಿದು ಕುಪ್ಪಳಿಸುವ ಯುವಕರು ಹೊಸ ವರ್ಷದ ದಿನ ತಾವು ” ಸರ್ವ ಸ್ವತಂತ್ರರು” ಎಂಬಭ್ರಮೆಯಲ್ಲಿರುತ್ತಾರೆ. ಇದರಿಂದಾಗಿ ಮಹಿಳೆಯರನ್ನು ಚುಡಾಯಿಸುವುದು ಮುಂತಾದ ಅಹಿತಕರ ಘಟನೆಗಳು ನಡೆಯುತ್ತವೆ. ಅಲ್ಲದೇ ಸಮಾಜದ ಶಾಂತಿ ಕದಡುತ್ತದೆ. ಹೊಸ ವರ್ಷದ ದಿನ ಅಂದರೆ ಡಿಸೆಂಬರ್ 31ರ ರಾತ್ರಿ ಸಮಾಜದಲ್ಲಿ ಶಿಸ್ತು ಸಂಯಮವನ್ನು ಕಾಪಾಡುವಂತೆ ನೋಡಿಕೊಳ್ಳುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿರುತ್ತದೆ.ಹೊಸ ವರ್ಷ ಆಚರಣೆಯಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ ಸರಕಾರ ಎಷ್ಟೇ ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಂಡರೂ, ಯುವಕರ ಹುಚ್ಚುತನದಿಂದಾಗಿ ಅನಾಹುತಗಳು ನಡೆಯುತ್ತಲೇ ಇರುತ್ತವೆ.ಇತ್ತೀಚಿನ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಯುವಕರು ನಡೆಸುತ್ತಿರುವ ದುಂದುವೆಚ್ಚವನ್ನು ಗಮನಿಸಿದರೆ, ನಮ್ಮ ಯುವಕರು ಎತ್ತ ಸಾಗುತ್ತಿದ್ದಾರೆ ಎಂಬ ಭಯ ಮೂಡುತ್ತದೆ. ಕಂಠಪೂರ್ತಿ ಮದ್ಯ ಕುಡಿದು, ಕುಣಿದು, ಕುಪ್ಪಳಿಸುವ ವಿದೇಶಿ ಸಂಸ್ಕೃತಿ ನಮ್ಮ ಯುವಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತ ಇರುವುದು ಕಳವಳಕಾರಿ ಸಂಗತಿಯಾಗಿದೆ. ರಾತ್ರಿಯ ವೇಳೆ ಹೊಸ ವರ್ಷಾಚರಣೆ ಸಂಭ್ರಮದ ನೆಪದಲ್ಲಿ ನಡೆಯುವ ಪಾರ್ಟಿಗಳ ಜೊತೆ ಜೊತೆಗೆ, ಸಮಾಜದಲ್ಲಿ ಶಾಂತಿ ಕದಡುವ, ಅಸಭ್ಯವಾಗಿ ವರ್ತಿಸುವವರ ಪ್ರಮಾಣವು ಹೆಚ್ಚುತ್ತಿದೆ. ಯುವತಿಯರು ಕೂಡಾ ಮದ್ಯದ ನಶೆಯಲ್ಲಿ ತೇಲುವ, ಆಶ್ಲೀಲವಾಗಿ ವರ್ತಿಸುವ ದೃಶ್ಯಗಳು ಪ್ರತಿವರ್ಷ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುತ್ತವೆ.ಕೊಲೆ, ಅಪರಾಧ ಕೃತ್ಯಗಳು ನಡೆಯುತ್ತಿರುತ್ತವೆ.ಇದೆಲ್ಲ ನಿಲ್ಲಬೇಕು. ನಮ್ಮ ಯುವ ಜನತೆಗೆ ಜೀವನ ಸಂಸ್ಕಾರವನ್ನು ನೀಡಬೇಕು ಹೊಸ ವರ್ಷಾಚರಣೆಯಂದು ವರ್ಷದುದ್ದಕ್ಕೂ ತಮ್ಮ ಜೀವನ ಸಾಗಿ ಬಂದ ಬಗ್ಗೆ  ಅವಲೋಕನ ಮಾಡುತ್ತಾ,. ತಿಳಿದೋ, ತಿಳಿಯದೆಯೋ ಮಾಡಿರುವ ತಪ್ಪುಗಳಿದ್ದರೆ ಅವುಗಳನ್ನು ತಿದ್ದಿಕೊಂಡು,ಸನ್ನಡತೆಯಿಂದ ಬದುಕುವ ಸಂಕಲ್ಪ ಕೈಗೊಳ್ಳಬೇಕು.ತಮ್ಮ ಕುಟುಂಬದ ಸದಸ್ಯರೊಂದಿಗೆ ಸೇರಿ ಹೊಸ ವರ್ಷಾಚರಣೆ ಮಾಡುವುದು ಒಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ವರ್ಷದ ದಿನ ಅನಾಥಾಶ್ರಮ, ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ  ಒಂದಷ್ಟು ಅಶಕ್ತರ ಸೇವೆ ಮಾಡುವುದು, ಅವರಿಗೆ  ಆಹಾರ ಹಂಚುವುದು. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ರಕ್ತದಾನ ಮಾಡುವುದು,ಪರಿಸರ ಸಂರಕ್ಷಣೆಯ ಕೆಲಸದಲ್ಲಿ ನಿರತರಾಗುವುದು ಮುಂತಾದ ಸಾಮಾಜಿಕ ಒಳಿತನ್ನುಂಟುಮಾಡುವ ಕಾರ್ಯಗಳನ್ನು ಕೈಗೊಂಡು ಹೊಸ ವರ್ಷಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಹೊಸ ವರ್ಷವೆಂದರೆ ಕೇವಲ ದಿನಾಂಕದ ಬದಲಾವಣೆ ಅಲ್ಲ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿರ್ಧಾರ ಕೈಗೊಳ್ಳುವ ಅಪೂರ್ವ ಅವಕಾಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿತು, ಮುಂದಿನ ವರ್ಷವನ್ನು ಉತ್ತಮವಾಗಿ ಕಳೆಯಲು ಪ್ರೇರಣೆ ನೀಡುವ ಸಮಯ. ಹೊಸ ವರ್ಷಾಚರಣೆ ಎಂಬುದು ಆನಂದ, ನಂಬಿಕೆ ಮತ್ತು ಆಶಯಗಳ ಸಂಗಮವಾಗಲಿ. ಹೊಸ ವರ್ಷಾಚರಣೆ ಜನರನ್ನು ಒಂದುಗೂಡಿಸಿ, ಹೊಸ ಜೀವನದ ಆರಂಭಕ್ಕೆ ನಾಂದಿಯಾಗಲಿ.ಈ ದಿನದಂದು ಯುವ ಜನಾಂಗ ತಮ್ಮ ಜೀವನದ ಗುರಿಗಳನ್ನು ಮರುಪರಿಶೀಲಿಸಿ, ಸಕಾರಾತ್ಮಕ ಚಿಂತನೆಗಳಿಂದ ಮುನ್ನಡೆಯಲು ಸಂಕಲ್ಪ ಮಾಡಲಿ. ಈ ನಿಟ್ಟಿನಲ್ಲಿ ಮನೆಯ ಸಮಾಜದ ಹಾಗೂ ಪರಿಸರದ ಹಿರಿಯರು ಮಾರ್ಗದರ್ಶನ ನೀಡುವಂತವರಾಗಲಿ. ಹೊಸ ವರ್ಷ ಎಲ್ಲರ ಜೀವನದಲ್ಲೂ ಹೊಸ ಜೀವನವನ್ನು ಕರುಣಿಸಿ, ಸಂತೃಪ್ತಿಯನ್ನು ತರಲೆಂಬ ಆಶಯ ಪ್ರತಿಯೊಬ್ಬರ ಮನಸ್ಸಿನಲ್ಲಿರಲಿ. ಡಾ.ಸುಮತಿ ಪಿ

“ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ”ಡಾ.ಸುಮತಿ ಪಿ Read Post »

ಇತರೆ

ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ) ವೀಣಾ ಹೇಮಂತ್‌ ಗೌಡ ಪಾಟೀಲ್

ಮಾನವತಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ ಯುಗದ ಕವಿ ಜಗದ ಕವಿ … ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ)  ವರ್ಷಗಳ ಹಿಂದೆ ಎಲ್ಲೋ ಓದಿದ ನೆನಪು. ಒಂದೇ ಮನೆಯ ಇಬ್ಬರು ಸಾಹಿತಿ ಸಹೋದರರ ನಡುವೆ ನಡೆದ ಮಾತುಕತೆ. ಅದು ಮಧ್ಯಾಹ್ನದ ಊಟದ ಸಮಯ. ಆ ಮನೆಯ ಯಜಮಾನರು ಅತ್ಯಂತ ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿದ್ದು ತನ್ನ ಇನ್ನೋರ್ವ ಬರಹಗಾರ ಸಹೋದರನನ್ನು ಕುರಿತು ಶ್ರೀ ರಾಮಾಯಣ ದರ್ಶನಂ ಬರೆದ ಕುವೆಂಪು ಅವರು ಬ್ರಾಹ್ಮಣರು ಇರಬೇಕಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಆ ಕಿರಿಯ ಸಹೋದರ ಇದ್ದರೂ ಇರಬಹುದು ಅಣ್ಣ ಎಂದು ಹೇಳಿದರು. ಆಗ ಅವರೊಂದಿಗೆ ಊಟಕ್ಕೆ ಕುಳಿತಿದ್ದ ಇನ್ನೋರ್ವರು ದಿಗ್ಭ್ರಮೆಯಿಂದ ತಲೆಯೆತ್ತಿ ನೋಡಿದರು. ಅವರನ್ನು ಕಣ್ಣಲ್ಲಿಯೇ ಸಮಾಧಾನಿಸಿದ ಕಿರಿಯ ಸಹೋದರ ಊಟವಾದ ನಂತರ ಹೊರಗೆ ಕರೆದೊಯ್ದರು. ನಿಮ್ಮ ಅನುಮಾನ ನಿಜ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಚಿಸಿದ ಕುವೆಂಪು ಅವರು ಬ್ರಾಹ್ಮಣರು ಎಂದು ಅಣ್ಣನವರೊಂದಿಗೆ ನಾನು ಹೇಳಿದ್ದು ತಪ್ಪು… ಆದರೆ ಈ ವಯಸ್ಸಿನಲ್ಲಿ ಅಣ್ಣನವರು ಅಂತಹ ಮಹಾಕಾವ್ಯವನ್ನು ಬ್ರಾಹ್ಮಣರು ಮಾತ್ರ ಬರೆಯಲು ಸಾಧ್ಯ ಎಂಬ ತಿಳುವಳಿಕೆಯನ್ನು ಅಲ್ಲಗಾಣಿಸುವ ಅವಶ್ಯಕತೆ ನನಗೆ ತೋರಲಿಲ್ಲ. *ನೀವೇ ಹೇಳಿ ಕುವೆಂಪು ಅವರು ಯಾವ ಬ್ರಾಹ್ಮಣರಿಗಿಂತ, ಯಾವ ಮಹಾಜ್ಞಾನಿಗಿಂತ ಕಡಿಮೆ* ಎಂದು ಉತ್ತರಿಸಿದರು. ಅವರ ಮಾತು ಹದಿನಾರಾಣೆ ಸತ್ಯವಾಗಿತ್ತು ಆದ್ದರಿಂದಲೇ ಅವರ ಸಹೋದ್ಯೋಗಿ ಸುಮ್ಮನೆ ತಲೆ ಆಡಿಸಿದರು. ಇಷ್ಟು ಸಾಕಲ್ಲವೇ ವಿಶ್ವಮಾನವ ಖ್ಯಾತಿಯ ಯುಗದ ಕವಿ ಜಗದ ಕವಿ ಎಂದು ಕರೆಯಲ್ಪಟ್ಟ, ರಾಷ್ಟ್ರಕವಿ, ರಸ ಋಷಿ, ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ಕುರಿತು ಹೇಳಲು.  ಕುಪ್ಪಳ್ಳಿಯ ವೆಂಕಟಪ್ಪನವರ ಮಗ ಪುಟ್ಟಪ್ಪ ಕುವೆಂಪು ಎಂಬ ಕಾವ್ಯನಾಮದಿಂದ ಜಗದ್ವಿಖ್ಯಾತಿ ಹೊಂದಿದರು.ಕುವೆಂಪು ಅವರ ಮೂಲ ಹೆಸರು ಪುಟ್ಟಪ್ಪ. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಹುಟ್ಟಿದ್ದು ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ. 1904 ಡಿಸೆಂಬರ್ 29ರಂದು. ಕುವೆಂಪು ಅವರ ಬಾಲ್ಯದ ದಿನಗಳನ್ನು ಅವರ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಕಳೆದರು . ಮಲೆನಾಡಿನ ಸಿರಿ ಸೊಬಗನ್ನು ಹೊಂದಿದ್ದ ಕಾಡು ಬೆಟ್ಟ ಗುಡ್ಡಗಳು ಹಸಿರ ಸಿರಿ ಕುವೆಂಪು ಅವರ ಬಾಲ್ಯವನ್ನು ಸಮೃದ್ಧವಾಗಿಸಿದ್ದವು. ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು.ಮಹಾರಾಜ ಕಾಲೇಜಿನಲ್ಲಿ ಎಂ ಎ ಮಾಡಿದರು. ತಳುಕಿನ ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ, ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯವನ್ನು ಅಧ್ಯಯನಾಂಗ, ಸಂಶೋಧನಾ0ಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಪ್ರಾರಂಭಿಸಿದರು. ಕನ್ನಡದ ಎರಡನೆಯ ರಾಷ್ಟ್ರಕವಿ , ಜ್ಞಾನಪೀಠ ಪ್ರಶಸ್ತಿಯನ್ನು, ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾವರು. 1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು..ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತಾರಿಣಿ ಎಂಬ ಇಬ್ಬರು ಪುತ್ರಿಯರನ್ನೂ ಪಡೆದಿದ್ದರು.ಮೈಸೂರಿನಲ್ಲಿರುವ ಅವರ ಮನೆಯನ್ನು ಉದಯರವಿ ಎಂದು ಕರೆದರು. ಅವರ ಮಗ ಪೂರ್ಣಚಂದ್ರ ತೇಜಸ್ವಿಯವರೂ ಕೂಡ ಬಹುಮುಖಿಯಾಗಿದ್ದು, ಕನ್ನಡ ಸಾಹಿತ್ಯ, ಅರಣ್ಯ ಮತ್ತು ಪ್ರಾಣಿಗಳ ಸಂರಕ್ಷಣೆ, ಛಾಯಾಗ್ರಹಣ, ಕ್ಯಾಲಿಗ್ರಫಿ, ಡಿಜಿಟಲ್ ಇಮೇಜಿಂಗ್, ಸಾಮಾಜಿಕ ಚಳುವಳಿಗಳು ಮತ್ತು ಕೃಷಿಗೆ ಗಣನೀಯ ಕೊಡುಗೆ ನೀಡಿದರು.ಅವರ ವಿವಾಹವನ್ನು ಕೂಡ ಕುವೆಂಪು ತಮ್ಮದೇ ಕೊಡುಗೆಯಾದ ಸರಳ ವಿವಾಹ ಪದ್ಧತಿಯಾದ *ಮಂತ್ರ ಮಾಂಗಲ್ಯ*ದ ಮೂಲಕ ನೆರವೇರಿಸಿದರು. ಮಹಾರಾಜ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಕುವೆಂಪು ಅವರು ತಮ್ಮ ಮೊಟ್ಟಮೊದಲ ಕವನವನ್ನು ಇಂಗ್ಲೀಷಿನಲ್ಲಿ ರಚಿಸಿದರು. ಆ ರಚನೆಯನ್ನು ತಮ್ಮ ಆಂಗ್ಲ ಪ್ರಾಧ್ಯಾಪಕರಿಗೆ ತೋರಿಸಿದಾಗ ಆ ಪ್ರಾಧ್ಯಾಪಕರು ಮಿಸ್ಟರ್ ಪುಟ್ಟಪ್ಪ ನೀವು ನಿಮ್ಮ ಮಾತೃಭಾಷೆಯಲ್ಲಿಯೇ ಕವನ ರಚಿಸಿ ಎಂದು ತಿಳಿ ಹೇಳಿದರು. ಮುಂದೆ ಕುವೆಂಪು ಅವರು ಸಂಪೂರ್ಣವಾಗಿ ಮಾತೃಭಾಷೆಯಲ್ಲಿಯೇ ಕವನ, ಕಾವ್ಯ, ಗದ್ಯ, ಕಥೆ-ಕಾದಂಬರಿಗಳ ರಚನೆಯನ್ನು ಆರಂಭಿಸಿದರು. ಆ ಆಂಗ್ಲ ಪ್ರಾಧ್ಯಾಪಕರಿಗೆ ಕನ್ನಡ ಸಾಹಿತ್ಯ ಲೋಕ ಯಾವತ್ತೂ ಚಿರಋಣಿ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ರಾಮಾಯಣದ ಮೇರು ಕೃತಿಯಾಗಿ ಜಗತ್ತಿಗೆ ಪರಿಚಿತವಾಗಿದೆ ಅಂತೆಯೇ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕೃತಿಗಳು ಅವರನ್ನು ವಿಶ್ವ ಲೇಖಕರ ಪಟ್ಟಿಗೆ ಸೇರಿಸುತ್ತವೆ.‘ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಮತ್ತು ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಎಂಬ ಗೀತೆಗಳು ಭಾರತಮಾತೆಯ ಮತ್ತು ಕನ್ನಡ ತಾಯಿಯ ಹಿರಿಮೆ ಗರಿಮೆಗಳನ್ನು ಸಾರುತ್ತ ನಮ್ಮಲ್ಲಿ ದೇಶ ಪ್ರೇಮವನ್ನು ಉಕ್ಕಿಸುತ್ತವೆ. ‘ಓ ನನ್ನ ಚೇತನ ಆಗು ನೀ ಅನಿಕೇತನ’ ಎಂಬ ಕವನವಂತು ಮನುಷ್ಯನ ಜೀವನದ ನಿಲುವನ್ನು ಮಾರ್ಮಿಕವಾಗಿ ಸೂಚಿಸುತ್ತದೆ ಬೆರಳ್ಗೆ ಕೊರಳ್, ಪಕ್ಷಿಕಾಶಿ, ಕೊಳಲು, ಬೊಮ್ಮನಹಳ್ಳಿಯ ಕಿಂದರಿ ಜೋಗಿ,ರಕ್ತಾಕ್ಷೀ, ಶೂದ್ರ ತಪಸ್ವಿ, ಮಲೆನಾಡಿನ ಕಥೆಗಳು, ಶಿಲಾ ತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದ, ಪಾಂಚಜನ್ಯ, ವಿಚಾರ ಕ್ರಾಂತಿಗೆ ಆಹ್ವಾನ, ಕಬ್ಬಿಗನ ಕೈ ಬುಟ್ಟಿ, ಆಯ್ದ ಕವಿತೆಗಳುಮುಂತಾದ ಕೃತಿಗಳು ಯಮನ ಸೋಲು, ಸ್ಮಶಾನ ಕುರುಕ್ಷೇತ್ರ, ಜಲಗಾರ, ಮಹಾಭಾಗ್ಯ ವಾಲ್ಮೀಕಿಯ ಸೋಲು, ಮೋಡಣ್ಣನ ತಮ್ಮ ಗೋಪಾಲ ಎಂಬ ನಾಟಕಗಳು ಅವರ ಸಾಹಿತ್ಯದ ಉನ್ನತ ಕೃತಿಗಳು. ಆಡು ಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬಂತೆ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆದಿದ್ದಾರೆ. ಓರ್ವ ಬರಹಗಾರ ತನ್ನ ಕೃತಿಗಳನ್ನು ಬರೆಯುತ್ತಾ, ಅಂತಪ್ರಜ್ಞೆಯಲ್ಲಿ ತಂತಾನೆ ಬೆಳೆಯುತ್ತಾ ಹೋದರೆ ಆತನಲ್ಲಿ ಉಂಟಾಗುವ ವಿಶ್ವಮಾನವ ಪ್ರಜ್ಞೆ ಕುವೆಂಪು ಅವರಲ್ಲಿಯೂ ಬೆಳೆಯಿತು. ಸಾಂಸಾರಿಕವಾಗಿ ಲೌಕಿಕವಾಗಿ ಓರ್ವ ಸಾಮಾನ್ಯ ವ್ಯಕ್ತಿ ಎಂಬಂತೆ ತೋರುತ್ತಿದ್ದ ಕುವೆಂಪು ಅವರು ಅಲೌಕಿಕವಾಗಿ ವಿಶ್ವಮಾನವರಾದರು. ಕುವೆಂಪು ಅವರು ಸ್ವಾಮಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಶ್ರದ್ದಾನಂದರ ಪರಮ ಅನುಯಾಯಿಯಾಗಿದ್ದರು. ತಮ್ಮ ಅತ್ಯುನ್ನತ ಗೌರವದ ಹುದ್ದೆಯ ಹೊರತಾಗಿಯೂ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅವರ ಸಂಬಂಧ ಸಮಾಜದ ಇನ್ನಿತರ ಸಂಸಾರಿಕ ಜನಗಳಂತೆ ಸಾಮಾನ್ಯವಾಗಿಯೇ ಇತ್ತು. ಅವರೆಂದು ಮಕ್ಕಳನ್ನು ತಮ್ಮ ಅಧಿಕಾರದ ಕಬಂಧ ಬಾಹುಗಳಲ್ಲಿ ಬೆಳೆಸಲಿಲ್ಲ. ಮೈಸೂರಿನ ಮಾನಸ ಗಂಗೋತ್ರಿಯ ಉಪಕುಲಪತಿಯಾಗಿಯೂ ಕೂಡ ಅವರು ಇಡೀ ವಿಶ್ವವಿದ್ಯಾಲಯವನ್ನು 20ನೇ ಶತಮಾನದ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಎಲ್ಲಾ ವಿಧದಲ್ಲಿಯೂ ಬೆಳೆಯುವಂತೆ ಅಭಿವೃದ್ಧಿಪಡಿಸಿದರು. ಅದೇ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಯಾವುದೇ ರೀತಿಯ ಕಟ್ಟುಪಾಡುಗಳನ್ನು ಹಾಕದೆ ಸ್ವತಂತ್ರವಾಗಿ ಬೆಳೆಯಲು ಬಿಟ್ಟರು. ಮೈಸೂರಿನಒಂಟಿಕೊಪ್ಪಲಿನಲ್ಲಿರುವ ತಮ್ಮ ನಿವಾಸ ‘ಉದಯರವಿ’ಯಲ್ಲಿ ನಿರಾತಂಕವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದರು. ಇದನ್ನೇ ಪೂರ್ಣಚಂದ್ರ ತೇಜಸ್ವಿ ಅವರು ಮತ್ತು ಅವರ ಸಹೋದರಿ ತಾರಿಣಿ ಅವರು ‘ ಅಣ್ಣನ ನೆನಪುಗಳು’ ಎಂಬ ತಂದೆಯವರ ಕುರಿತಾದ ಪುಸ್ತಕದಲ್ಲಿ ತಂದೆಯ ಕುರಿತು ಬರೆದಿದ್ದಾರೆ.1929 ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯವನ್ನು ಸೇರಿದ ಕುವೆಂಪು ಅವರು 1960ರಿಂದ 1965 ರವರೆಗೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದರು.1938 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಅಧ್ಯಕ್ಷರಾಗಿ ಕುವೆಂಪು ಅವರು ಕಾರ್ಯನಿರ್ವಹಿಸಿದರು. 1957 ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಭಾರತ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (1968) ಪ್ರಶಸ್ತಿಯನ್ನು ಮಹಾಕಾವ್ಯ ಶ್ರೀ ರಾಮಾಯಣ ದರ್ಶನಕ್ಕೆ ಕೊಡ ಮಾಡಲಾಯಿತು. ಇದು ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್, ರಾಜ್ಯ ಸರಕಾರದ ರಾಷ್ಟ್ರಕವಿ ಪ್ರಶಸ್ತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗಳು ಕುವೆಂಪು ಅವರ ಮುಡಿಗೇರಿದ್ದವು. 1988 ರಲ್ಲಿ ನಡೆದ ಪ್ರಪ್ರಥಮ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡ ಅವರು ಉದ್ಘಾಟಿಸಿದ್ದರು.1988 ರಲ್ಲಿ ಪಂಪ ಪ್ರಶಸ್ತಿ 1994 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಗಳು ಕೂಡ ಕುವೆಂಪು ಅವರಿಗೆ ಸಂದವು. 1994ರ ನವೆಂಬರ್ 11ರಂದು ಕುವೆಂಪು ಅವರು ಮರಣ ಹೊಂದಿದರು. ಕನ್ನಡ ಸಾಹಿತ್ಯ ಲೋಕದ ಮೇರು ಶಿಖರದ ಅಧ್ಯಾಯ ತನ್ನ ಅಂತ್ಯವನ್ನು ಕಂಡಿತು. ಕುಪ್ಪಳ್ಳಿಯ ಅವರ ಅತ್ಯಂತ ಪ್ರೀತಿ ಪಾತ್ರವಾದ ಕವಿಶೈಲದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.ಕುವೆಂಪು ಅವರ ಹುಟ್ಟೂರಿನ ಮನೆಯನ್ನು ಕವಿಮನೆ ಸ್ಮಾರಕ ಭವನವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿ ಅಲ್ಲಿ ಕುವೆಂಪು ಅವರಿಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಗಿದೆ.1995 ರಲ್ಲಿ ನಾಡೋಜ ಪ್ರಶಸ್ತಿಯನ್ನು ಕೂಡ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಅಂತೆಯೇ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು ಇಡಲಾಗಿದೆ. ಯಾವುದೇ ವಸ್ತು ವಿಷಯಗಳು ಆಯಾ ಕಾಲಕ್ಕೆ ಮಾತ್ರ ಸೀಮಿತವಾಗಿದ್ದು ಕಾಲಾಂತರದಲ್ಲಿ ಅವುಗಳ ಆಶಯಗಳು ಬದಲಾಗಬಹುದು… ಇಂತಹ ಆಶ್ರಯ ಅನಿಸಿಕೆಗಳನ್ನು ಕುವೆಂಪು ಅವರು ತಮ್ಮ ಶೂದ್ರ ತಪಸ್ವಿ ಮತ್ತು ಜಲಗಾರ ನಾಟಕಗಳಲ್ಲಿ ತೋರ್ಪಡಿಸಿದರು.ಅಂತೆಯೇ ಕುವೆಂಪು ಅವರನ್ನು ಕುರಿತು ಇನ್ನೋರ್ವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಅಂಬಿಕಾತನಯದತ್ತ ಕಾವ್ಯನಾಮದಿಂದ ಜಗದ್ವಿಖ್ಯಾತಿ ಹೊಂದಿದ ದ.ರಾ.ಬೇಂದ್ರೆ ಅವರು ‘ಯುಗದ ಕವಿ ಜಗದ ಕವಿ’ ಎಂದು ಬಣ್ಣಿಸಿದರು. ದಲಿತ ಮತ್ತು ಹಿಂದುಳಿದವರ ಬಂಡಾಯಕ್ಕೆ ಕುವೆಂಪು ಸ್ಪೂರ್ತಿದಾಯಕ ರಾಗಿದ್ದರು. ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ಅವರು ಜನರಿಗೆ ಪರಿಚಯಿಸಿದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಮಹಾಕಾವ್ಯವನ್ನು ಮತ್ತೆ ಮರಳಿ ಕನ್ನಡ ಸಾಹಿತ್ಯ ಲೋಕಕ್ಕೆ ದೊರಕಿಸಿಕೊಟ್ಟ ಯುಗ ಪ್ರವರ್ತಕರಾಗಿ ಕುವೆಂಪು ಹೊರಹೊಮ್ಮಿದರು.ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ‘ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು ಕುವೆಂಪು ಎಂಬುದು ಅವರ ಸಮಕಾಲೀನ ಕವಿಗಳ ಅಭಿಪ್ರಾಯ. ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ

ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ) ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು

ಜೀವನ ಸಂಗಾತಿ ಜಿ. ಎಸ್. ಶರಣು “ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ” ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ಈ ಜಗತ್ತಿನಲ್ಲಿ ಪ್ರಕೃತಿ ಸೃಷ್ಟಿಸಿರುವ ಕೋಟಿ ಕೋಟಿ ಜೀವಿಗಳಲ್ಲಿ, ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ. ಪ್ರಕೃತಿಯ ಈ ನಿಯಮವೇ ಸಾರಿ ಹೇಳುತ್ತದೆ, ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಮತ್ತು ಅದ್ಭುತ ಎಂದು. ಆದರೂ ವಿಪರ್ಯಾಸವೆಂದರೆ, ನಾವು ಈ ಸತ್ಯವನ್ನು ಮರೆತು, ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾ, ನಮ್ಮ ಬಗ್ಗೆ ನಾವೇ ಕೀಳಾಗಿ ಕಾಣಲು ಆರಂಭಿಸುತ್ತೇವೆ. “ನಾನು ಅವನಿಗಿಂತ ದಡ್ಡ, ನಾನು ಅವಳಷ್ಟು ಸುಂದರವಾಗಿಲ್ಲ, ನನ್ನ ಬಳಿ ಏನೂ ಇಲ್ಲ” ಎಂಬ ಕೀಳರಿಮೆ ಎಂಬುದು ನಮ್ಮ ಮನಸ್ಸನ್ನು ಕೊರೆಯುವ ಗೆದ್ದಲು ಹುಳುವಿನಂತೆ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ. ಕೀಳರಿಮೆ ಬೆಳೆಯಲು ಮುಖ್ಯ ಕಾರಣವೇ ಹೋಲಿಕೆ. ನಾವು ಯಾವಾಗಲೂ ನಮ್ಮ ಜೀವನದ ಕಷ್ಟದ ಪುಟಗಳನ್ನು, ಬೇರೆಯವರ ಜೀವನದ ಹೈಲೈಟ್ಸ್ ಜೊತೆ ಹೋಲಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಗುತ್ತಿರುವ ಫೋಟೋ ಹಾಕಿದ ತಕ್ಷಣ, ಅವರ ಬದುಕು ಪರಿಪೂರ್ಣವಾಗಿದೆ ಮತ್ತು ನಮ್ಮ ಬದುಕು ಹಾಳಾಗಿದೆ ಎಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ನೆನಪಿಡಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಆಕಾಶದಲ್ಲೇ ಇದ್ದಾರೆ ಮತ್ತು ಇಬ್ಬರೂ ಹೊಳೆಯುತ್ತಾರೆ. ಆದರೆ ಅವರಿಬ್ಬರ ಸಮಯ ಬೇರೆ ಬೇರೆ. ಸೂರ್ಯನ ಜೊತೆ ಚಂದ್ರನನ್ನು ಹೋಲಿಸಿ, “ಚಂದ್ರ ಸೂರ್ಯನಷ್ಟು ಹೊಳೆಯುವುದಿಲ್ಲ” ಎಂದು ಹೀಯಾಳಿಸುವುದು ಎಷ್ಟು ತಪ್ಪೋ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು ಕೊರಗುವುದು ಅಷ್ಟೇ ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ, ಅವರದ್ದೇ ಆದ ದಾರಿ ಮತ್ತು ಅವರದ್ದೇ ಆದ ಯುದ್ಧವಿರುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದರೆ, ನೀವು ಜಗತ್ತನ್ನೇ ಗೆದ್ದು ಬರಬೇಕಿಲ್ಲ. ನೀವು ಬೆಳಿಗ್ಗೆ ಎದ್ದು, ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ, ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ ಎಂದರೆ, ಅದುವೇ ಹೆಮ್ಮೆ ಪಡುವ ವಿಷಯ. ನೀವು ಎಷ್ಟೋ ಸೋಲುಗಳನ್ನು ಕಂಡಿದ್ದರೂ, ಇಂದಿಗೂ ಛಲ ಬಿಡದೆ ಬದುಕುತ್ತಿದ್ದೀರಿ ಎಂದರೆ, ಅದು ನಿಮ್ಮ ಶಕ್ತಿ. ನಿಮ್ಮ ನಡಿಗೆ ನಿಧಾನವಾಗಿರಬಹುದು, ಆದರೆ ನೀವು ನಿಂತಿಲ್ಲವಲ್ಲ, ಅದು ಮುಖ್ಯ. ಕೀಳರಿಮೆ ಬರುವುದು ನಾವು ಏನನ್ನು ಹೊಂದಿಲ್ಲ ಎಂಬುದರ ಕಡೆಗೆ ಗಮನ ಕೊಟ್ಟಾಗ, ಆದರೆ ಹೆಮ್ಮೆ ಬರುವುದು ನಾವು ಏನನ್ನು ಹೊಂದಿದ್ದೇವೆ ಮತ್ತು ನಾವು ಎಂತಹ ವ್ಯಕ್ತಿಯಾಗಿದ್ದೇವೆ ಎಂಬುದನ್ನು ಗಮನಿಸಿದಾಗ. ಇಲ್ಲಿ ಒಂದು ಸೂಕ್ಷ್ಮವಾದ ಗೆರೆ ಇದೆ. ಹೆಮ್ಮೆ ಪಡುವುದು ಎಂದರೆ ಅಹಂಕಾರ ಪಡುವುದಲ್ಲ. “ನಾನೇ ಶ್ರೇಷ್ಠ” ಎನ್ನುವುದು ಅಹಂಕಾರ, ಇದು ಪತನಕ್ಕೆ ದಾರಿ. ಆದರೆ “ನಾನು ಅನನ್ಯ, ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ” ಎನ್ನುವುದು ಸ್ವಾಭಿಮಾನ. ಕೀಳರಿಮೆ ನಿಮ್ಮನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರೆ, ಸ್ವಾಭಿಮಾನ ನಿಮಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀವು ಕುಳ್ಳಗಿರಲಿ, ಬಡವರಾಗಿರಲಿ ಅಥವಾ ಹೆಚ್ಚು ಓದಿಲ್ಲದಿರಲಿ, ಇವು ಯಾವುವೂ ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಮೌಲ್ಯವನ್ನು ನಿರ್ಧರಿಸುವುದು ನಿಮ್ಮ ಪ್ರಾಮಾಣಿಕತೆ, ನಿಮ್ಮ ಶ್ರಮ ಮತ್ತು ನಿಮ್ಮ ಒಳ್ಳೆಯತನ ಮಾತ್ರ. ಒಂದು ಮೀನು ಮರದ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಕೊರಗುತ್ತಾ ಕುಳಿತರೆ, ಅದು ತನ್ನ ಜೀವನವಿಡೀ ತಾನು ಮೂರ್ಖ ಎಂದು ಭಾವಿಸಿ ಸಾಯುತ್ತದೆ. ಮೀನಿನ ಹೆಮ್ಮೆ ಇರುವುದು ಈಜುವುದರಲ್ಲಿ, ಮರದ ಮೇಲೆ ಹತ್ತುವುದರಲ್ಲಲ್ಲ. ನೀವೂ ಅಷ್ಟೇ, ನಿಮ್ಮ ಕ್ಷೇತ್ರ ಬೇರೆ, ನಿಮ್ಮ ಪ್ರತಿಭೆ ಬೇರೆ. ಬೇರೆಯವರು ಮಾಡಿದ್ದನ್ನು ನೀವು ಮಾಡಲು ಆಗುತ್ತಿಲ್ಲ ಎಂದು ಕೀಳರಿಮೆ ಪಟ್ಟುಕೊಳ್ಳಬೇಡಿ. ನಿಮಗಿರುವ ಶಕ್ತಿಯನ್ನು ಗುರುತಿಸಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಿ, ಏಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಮನುಷ್ಯ ಸಹಜ ಗುಣ, ಅದನ್ನು ತಿದ್ದಿಕೊಂಡು ಮುನ್ನಡೆಯುವವನೇ ಸಾಧಕ. ನಿಮ್ಮ ಬೆನ್ನು ತಟ್ಟಲು ಬೇರೆ ಯಾರೋ ಬರಬೇಕಿಲ್ಲ. ಕನ್ನಡಿ ಮುಂದೆ ನಿಂತು, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, “ನಾನು ಎಷ್ಟೇ ಕಷ್ಟ ಬಂದರೂ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿಕೊಳ್ಳಿ. ನೀವು ನಿಮ್ಮನ್ನು ಗೌರವಿಸಲು ಕಲಿತಾಗ ಮಾತ್ರ, ಜಗತ್ತು ನಿಮ್ಮನ್ನು ಗೌರವಿಸಲು ಆರಂಭಿಸುತ್ತದೆ. ತಲೆ ತಗ್ಗಿಸಿ ನಡೆಯಬೇಡಿ, ಏಕೆಂದರೆ ನೀವು ಈ ಭೂಮಿಯ ಮೇಲೆ ಇರಲು ಅರ್ಹರು. ಕೀಳರಿಮೆ ಎಂಬ ಭಾರವನ್ನು ಇಳಿಸಿ, ಆತ್ಮವಿಶ್ವಾಸದ ಕಿರೀಟವನ್ನು ಧರಿಸಿ. ನೀವು ನಿಮ್ಮ ಕಥೆಯ ಹೀರೊ ನೀವೇ ಆಗಿದ್ದೀರಿ. ಏಕೆಂದರೆ, ನೀವು ಯಾವುದೋ ಪರೀಕ್ಷೆಯಲ್ಲಿ ಪಾಸಾಗಿದ್ದಿರಿ, ನೀವು ದುಡಿದು ತಿನ್ನುತ್ತಿದ್ದಿರಿ, ನಿಮಗೆ ಸ್ವಾಭಿಮಾನ ಇದೆ, ನಿಮಗೆ ವಾಸವಿರಲು ಸ್ಥಳ ಇದೆ. ಆದರೆ ನೀವು ಮುಟ್ಟಬೇಕಾದ ನಿಮ್ಮ ಗುರಿಯನ್ನು, ಬೇರೆಯವರ ಗುರಿಯನ್ನಲ್ಲ, ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕೀಳರಿಮೆ ಅಲ್ಲ. ಜಿ. ಎಸ್. ಶರಣು

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು Read Post »

ಇತರೆ

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇರುವ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಅಲ್ಲಲ್ಲಿ ಪುಟ್ಟ ಬಾಲಕಿಯರು ಗರ್ಭಿಣಿಯರಾಗಿರುವ ಮಕ್ಕಳನ್ನು ಹೆತ್ತಿರುವ ವಿಷಯಗಳನ್ನು ಮಾಧ್ಯಮಗಳಲ್ಲಿ ಓದುತ್ತಲೇ ಇದ್ದೇವೆ. ಆತಂಕಕ್ಕೆ ಈಡು ಮಾಡುವ ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರಲು ಕಾರಣ ಮಕ್ಕಳಲ್ಲಿ ಇರುವ ಅಜ್ಞಾನವೇ ಕಾರಣ. ಬಾಲ್ಯ ವಿವಾಹದಿಂದ ಆಗುವ ಅನಾಹುತಗಳ ಕುರಿತು ಕೂಡ ಅಲ್ಲಲ್ಲಿ ನೋಡುವ, ಕೇಳುವ, ಎಷ್ಟೋ ಬಾರಿ ಕೆಲ ಜನರು ಮೂಕ ಸಾಕ್ಷಿಗಳಾಗುವ ಪರಿಸ್ಥಿತಿ  ಇರುತ್ತದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಈ ರೀತಿಯ ಘಟನೆಗಳು ಆಗಲು ಕಾರಣ ಏನು?? .ಇದೇನಿದು ಎತ್ತಣ ಮಾಮರ ಎತ್ತಣ ಕೋಗಿಲೆ ಎಲ್ಲಿಂದೆಲ್ಲಿಯ ಸಂಬಂಧ? ಎಂದು ನೀವು ಕೇಳಬಹುದು! ಖಂಡಿತವಾಗಿಯೂ ಇವೆರಡಕ್ಕೂ ಮತ್ತಷ್ಟು ವಿಷಯಗಳು  ಸಂಬಂಧಿಸಿವೆ. ಒಂದೆಡೆ ಆಸ್ಪತ್ರೆಗಳಲ್ಲಿ ಚಿಕ್ಕ ವಯಸ್ಸಿನ ಬಾಲಕಿಯರು ಮಕ್ಕಳನ್ನು ಹೆತ್ತು ಮಗು ಇಲ್ಲವೇ ತಾಯಿಯ ಮರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದರೆ ಮತ್ತೊಂದೆಡೆ ಹೆಣ್ಣು ಮಕ್ಕಳು ಅರಿಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಅದನ್ನೇ ಪ್ರೀತಿ ಎಂದು ಭಾವಿಸಿ ತಮ್ಮ ಮನದೊಂದಿಗೆ ತನುವನ್ನು ಕೂಡ ಅರ್ಪಿಸಿ ಅದರ ಪರಿಣಾಮವಾಗಿ ಗರ್ಭಿಣಿಯರಾಗುತ್ತಿದ್ದಾರೆ. ಸಮಾಜ ಬಾಹಿರ ವಿವಾಹ ಬಾಹಿರ ಕೃತ್ಯ ಎಂಬ ಅರಿವಾಗುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮಡಿಲ ಕೆಂಡ ಎಂದು ಭಾವಿಸಿ, ಮತ್ತೆ ಕೆಲವೊಮ್ಮೆ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಆಶಯದಿಂದ ಕಾನೂನಿಗೆ ವಿರುದ್ಧವಾದುದು ಎಂದು ಗೊತ್ತಿದ್ದರೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವ ಸಾಹಸಕ್ಕೆ ಪಾಲಕರು ಇಳಿಯುತ್ತಾರೆ. ಹೆಣ್ಣಿರಲಿ ಗಂಡಿರಲಿ ತಪ್ಪು ಯಾರಿಂದಲೇ ನಡೆದರೂ, ಪ್ರಕೃತಿ ಸಹಜವಾದ ಈ ಕ್ರಿಯೆಯ ಹೊಣೆಗಾರಿಕೆಯನ್ನು   ಅನುಭವಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಎಲ್ಲದಕ್ಕೂ ಅಂತಿಮವಾಗಿ ಹೆಣ್ಣನ್ನೇ ಹೊಣೆಯಾಗಿಸುವ, ಜವಾಬ್ದಾರಿಯಾಗಿಸುವ, ಅಂತಿಮವಾಗಿ ಗುರಿಯಾಗಿಸುವ ಈ ಸಮಾಜದಲ್ಲಿ ಕೇವಲ ಬಾಲ್ಯ ವಿವಾಹ ನಿಷೇಧ ಮಾಡಿದರೆ ಸಾಲದು, ಸುರಕ್ಷಿತ ವಸತಿ ಸಹಿತ ಶಿಕ್ಷಣ ನೀಡಿದರೂ ಸಾಲದು ಬದಲಾಗಿ ಎಲ್ಲ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ಹಾಗೂ ಲೈಂಗಿಕತೆಯ ಕುರಿತ ಅರಿವು ಮೂಡಿಸಬೇಕು. ಜೀವನ ಮೌಲ್ಯಗಳು ನಾವು ನಮ್ಮ ಬದುಕಿನಲ್ಲಿ  ಪರಿಪಾಲಿಸಲೇಬೇಕಾದ ಅಲಿಖಿತ ಸಂವಿಧಾನವಿದ್ದಂತೆ.ಪಾಲಕರಿಂದ, ಕುಟುಂಬದಿಂದ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲ ಬಲ್ಲ ಮೂಲಗಳಿಂದ ದೊರೆಯುವ ಮೌಲ್ಯಗಳ ಪಾಠ ನಮ್ಮ ಬದುಕಿಗೆ ದಾರಿದೀಪವಾಗಲೇಬೇಕು. ಯಾವ ರೀತಿ ದೇವರ ಗರ್ಭಗುಡಿಯಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲವೋ ಹಾಗೆಯೇ ನಮ್ಮ ಮೈಮನಗಳ ಗರ್ಭಗುಡಿಯಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು…. ವಿಶೇಷವಾಗಿ ಈ ವಯಸ್ಸಿನಲ್ಲಿ ಉಂಟಾಗುವ ದೈಹಿಕ ಆಕರ್ಷಣೆಗಳ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಈ ಹಿಂದಿನಂತೆ ಕೂಡು ಕುಟುಂಬಗಳು ನಮ್ಮಲ್ಲಿ ಇಲ್ಲವಾದರೂ ಆ ಕೌಟುಂಬಿಕ ಮೌಲ್ಯಗಳು ಉಳಿದುಕೊಂಡಿವೆ. ಉದ್ಯೋಗ, ವ್ಯವಹಾರ ನಿಮಿತ್ತ ತಮ್ಮ ಕುಟುಂಬದಿಂದ ದೂರವಾಗಿ ಬೇರೆಯ ಊರುಗಳಲ್ಲಿ ನೆಲೆಸಿರುವ ದಂಪತಿಗಳು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವಿನ ಜೊತೆಗೆ ಸಂಬಂಧಗಳಲ್ಲಿ ಇರುವ ಸೌಹಾರ್ದ ಭಾವದ ಮಾರ್ದವತೆಯ ಅರಿವನ್ನು, ಜವಾಬ್ದಾರಿಯನ್ನು ಮೂಡಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಮಾಜಿಕ ನೀತಿ, ನಿಯಮಾವಳಿಗಳ ಕುರಿತು ಭಯವನ್ನಲ್ಲ!! ಎಚ್ಚರಿಕೆಯನ್ನು ಮೂಡಿಸಬೇಕು.ಮಕ್ಕಳನ್ನು ತೀರಾ ಮುಚ್ಚಟೆಯಾಗಿ ಬೆಳೆಸದೆ ಸಮಾಜದ ಆಗುಹೋಗುಗಳ ಪರಿಣಾಮಗಳ ಅರಿವನ್ನು ಹೊಂದಿರುವ ರೀತಿಯಲ್ಲಿ ಬೆಳೆಸಬೇಕು. ತಪ್ಪು ಸರಿಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡಲೇಬೇಕು. ಯಾವುದೇ ವಿಷಯದ ಕುರಿತು ಮಕ್ಕಳು ಪಾಲಕರ ನಾಳ ಕೇಳುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಮಾತನಾಡುವಷ್ಟು ತಾಳ್ಮೆ, ಸಮಯ ಮತ್ತು ವ್ಯವಧಾನವನ್ನು ಹೊಂದಿರಬೇಕು. ಮಕ್ಕಳು ಪಾಲಕರನ್ನು ಪ್ರಶ್ನಿಸುವ ಬದಲು ಗೂಗಲ್ ನ ಮೊರೆ ಹೋದರೆ ಅದು ಒಂದು ರೀತಿಯಲ್ಲಿ ‘ಗಣಪನನ್ನು ಮಾಡು ಎಂದರೆ ಅವರಪ್ಪನನ್ನು ಮಾಡಿದಂತೆ ‘ ಆಗುತ್ತದೆ. ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯಕ್ಕಿಂತ ನೂರು ಪಟ್ಟು ಹೆಚ್ಚು ವಿಷಯಗಳ ಕುರಿತು ಅನವಶ್ಯಕ ಕುತೂಹಲ, ಆಸಕ್ತಿ ಹುಟ್ಟಿಸುವಂತಹ ವಿಷಯ ನಿರೂಪಣೆಯನ್ನು ಶ್ರವಣ, ದೃಶ್ಯ ಮಾಧ್ಯಮಗಳಲ್ಲಿ ಪಡೆಯಬಹುದು. ಇಲ್ಲಿ ಎಷ್ಟೋ ಬಾರಿ ಮನವನ್ನು ಅರಳಿಸುವ ಬದಲಾಗಿ ಕೆರಳಿಸುವ ರೀತಿಯಲ್ಲಿ ವಿಷಯಗಳು ಮಕ್ಕಳಿಗೆ ತಲುಪಬಹುದು…. ಇದಕ್ಕೆ ಬದಲಾಗಿ ಪಾಲಕರು ತಮ್ಮ ಇತಿ ಮಿತಿಯಲ್ಲಿ ವಿಷಯಗಳನ್ನು ವೈಜ್ಞಾನಿಕವಾಗಿ ವಿವರಿಸಬಹುದು. ಶಾಲೆಗಳಲ್ಲಾದರೂ ಅಷ್ಟೇ… ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಹೈಸ್ಕೂಲು ಹಾಗೂ ಕಾಲೇಜು ಹಂತದಲ್ಲಿ ಕೂಡ ಯಾವುದೇ ರೀತಿಯ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸುವ ತರಬೇತಿಗಳು ಇಲ್ಲ. ಅವರು ಕೇಳುವ, ಅರಿಯುವ ವಿಷಯಗಳು ಅವರಂತೆಯೇ ಇರುವ ಅಬೋಧ ಸ್ನೇಹಿತರ ಕಪೋಲ ಕಲ್ಪಿತ ವಿಷಯಗಳಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ… ನಮಗೆ ದೊರೆಯದ್ದು ನಮ್ಮ ಮಕ್ಕಳಿಗಾದರೂ ದೊರೆಯಲಿ ಎಂಬ ಭಾವದಲ್ಲಿ ಮಕ್ಕಳು ಕೇಳುವ ಮುನ್ನವೇ ಅವರಿಗೆ ಎಲ್ಲವನ್ನು ಕೊಡ ಮಾಡುವ ಪಾಲಕರು, ಅವಶ್ಯಕತೆಗಿಂತ ಅನವಶ್ಯಕವಾದ ಆಹಾರ ಪದಾರ್ಥಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾಧ್ಯಮಗಳು ಹಾಗೂ ಅಂತಹ ಪದಾರ್ಥಗಳ ಸೇವನೆಯಿಂದ ಹೆಚ್ಚುವರಿ ಹಾರ್ಮೋನುಗಳ ಬಿಡುಗಡೆಯಾಗಿ ಪ್ರಾಪ್ತ ವಯಸ್ಸಿಗೆ ಮುನ್ನವೇ ಹದಿವಯಸ್ಸಿನ ಹಸಿ-ಬಿಸಿ ಕಲ್ಪನೆಗಳನ್ನು ಮೂಡಿಸಿಕೊಳ್ಳುವ ಮಕ್ಕಳು ಪಾಲಕರಿಗೆ ಸಮಸ್ಯೆಯಾಗಿದ್ದಾರೆ. ಇನ್ನು ಶಾಲೆಯ ಕೆಲಸಗಳಿಗೆ ಬೇಕೇ ಬೇಕು ಎಂದು ಹಠ ಮಾಡಿ ಕೊಂಡುಕೊಳ್ಳುವ ಮೊಬೈಲ್, ಟ್ಯಾಬ್ ನಂತಹ ಗ್ಯಾಜೆಟ್ ಗಳು ಕೂಡ ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ಪ್ರೈವೆಸಿ ಎಂಬ ಹೆಸರಿನಲ್ಲಿ ಎಲ್ಲದಕ್ಕೂ ಪಾಸ್ವರ್ಡ್ ಇಟ್ಟು ಅದು ಯಾರ ಕೈಗೂ ಸಿಗದಂತೆ ಎಚ್ಚರ ವಹಿಸುವ ಮಕ್ಕಳು ಹಾದಿ ತಪ್ಪಲು ಮತ್ತಿನ್ನೇನು ಬೇಕು? ಸಾಮಾಜಿಕವಾಗಿ ಎಲ್ಲ ವಿಷಯಗಳಿಂದ ದೂರವಾಗಿರುವ ಕುಟುಂಬಗಳ ಮಕ್ಕಳು, ಕೌಟುಂಬಿಕ ಕಲಹ, ಪಾಲಕರ  ವಿಚ್ಛೇದನದ ಭೀತಿ, ಬಡತನ ಬೇರೊಬ್ಬರ ಐಷಾರಾಮಿ ಬದುಕನ್ನು ಕಂಡು ಹಾಗೆಯೇ ಇರಬೇಕೆಂದು ಆಶಿಸುವ ಮಕ್ಕಳು, ಪ್ರಸ್ತುತ ಸಮಾಜ ಇರುವುದೇ ಹೀಗೆ ಎಂಬ ಭ್ರಾಂತಿಯನ್ನು ಹುಟ್ಟು ಹಾಕುವ ಸಾಮಾಜಿಕ ಜಾಲತಾಣಗಳು, ಬೇರೊಬ್ಬರ ತಲೆ ಹೊಡೆದು ಆಸ್ತಿ ಮಾಡಿ ಅದನ್ನು ಅನುಭವಿಸುವುದೇ ಬದುಕಿನ ಮಹತ್ವದ ಸಾಧನೆ, ಮಚ್ಚು ಲಾಂಗುಗಳನ್ನು ಕೈಯಲ್ಲಿ ಹಿಡಿದು ತಿರುಗುವವನೇ ನಿಜವಾದ ಹೀರೋ, ಮನದ ಕಾಮನೆಗಳನ್ನು ಬಡಿದೆಬ್ಬಿಸುವ ಹಸಿ ಬಿಸಿ ಪ್ರಣಯದ ದೃಶ್ಯಗಳನ್ನು ಬಿಂಬಿಸುವ ಚಲನಚಿತ್ರಗಳು…. ಇವುಗಳ ಪರಿಣಾಮವಾಗಿ ಮಕ್ಕಳು ನೈತಿಕತೆಯ ಪರಿಧಿಯನ್ನು ದಾಟಿ ಹಾಳಾಗಿ ಹೋಗುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಕ್ಕಳಿಗಾಗಿ ಉತ್ತಮ ಮೌಲ್ಯಯುತ ಬದುಕನ್ನು ಕಟ್ಟಿ ಕೊಡುವುದು ಆಗಿದೆ. ಪರಿಹಾರ ನಮ್ಮ ಕೈಯಲ್ಲಿಯೇ ಇದ್ದರೂ ಅದಷ್ಟು ಸುಲಭ ಸಾಧ್ಯವಿಲ್ಲ ಎಂಬ ಮಾತುಗಳು ಪಾಲಕರದ್ದಾಗಿವೆ…ನಿಜ! ಆದರೆ ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ ? *ಪಾಲಕರ ( ತಂದೆ ಮತ್ತು ತಾಯಿ ) ನಡುವಿನ ಸೌಹಾರ್ದ ಸಂಬಂಧ ಮಕ್ಕಳಲ್ಲಿ ಧೈರ್ಯವನ್ನು, ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಅಭದ್ರತೆಯ ನೆಲೆಯಲ್ಲಿ ಮಕ್ಕಳು ತಪ್ಪು ಹಾದಿಗೆ ಎಳಸುವುದು ಹೆಚ್ಚು. * ಮಾಧ್ಯಮಿಕ ಶಾಲೆಯಿಂದಲೇ ಮಕ್ಕಳಿಗೆ ನಮ್ಮ ದೇಹದ ಕುರಿತು ವೈಜ್ಞಾನಿಕ ವಿವರಣೆಯ ಜೊತೆಗೆ ಅವುಗಳ ಕಾರ್ಯ ವ್ಯಾಪ್ತಿಯ ಕುರಿತು ಅರಿವು ಮೂಡಿಸಬೇಕು. ಹದಿಹರೆಯದ ಅಲ್ಲಲ್ಲ…. ಹತ್ತರಿಂದ ಇಪ್ಪತ್ತರ ವಯಸ್ಸಿನವರೆಗಿನ ದೈಹಿಕ, ಮಾನಸಿಕ, ಪ್ರಚೋದನೆಗಳ ನಿರ್ವಹಣೆಯ ನಿಟ್ಟಿನಲ್ಲಿ ಮಕ್ಕಳನ್ನು ಹಾಡು, ನೃತ್ಯ, ನಾಟಕ, ಸಂಗೀತ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳ ಮನಸ್ಸಿನಲ್ಲಿ ಹರೆಯದ ಹುಚ್ಚು ಕೋಡಿಯಂತಹ ಭಾವನಾತ್ಮಕ ಒತ್ತಡಗಳು ಹರಿದುಹೋಗುತ್ತವೆ. *ಸುಳ್ಳೇ ಆದರೂ ಸರಿ ನಾಟಕ, ನೃತ್ಯ, ಹಾಡುಗಳಲ್ಲಿ ನವರಸಗಳನ್ನು ಅಭಿನಯಿಸುವ, ಪ್ರದರ್ಶಿಸುವ ಮೂಲಕ ಮಕ್ಕಳ ಭಾವನೆಗಳ ಕಟ್ಟು ಸಹಜವಾಗಿ ಮತ್ತು ಸರಿಯಾದ ರೀತಿಯಲ್ಲಿ ಒಡೆದು ಹೋಗುವ ಕಾರಣ ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಅತ್ಯವಶ್ಯಕ.ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ನಿಧಾನವಾಗಿ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ತಾಳ್ಮೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳುತ್ತಾರೆ. ಭಾವನಾತ್ಮಕ ಮತ್ತು ವಾಸ್ತವ ಜಗತ್ತಿನ ನಡುವಿನ ಅಂತರವನ್ನು ಕಂಡುಕೊಳ್ಳುತ್ತಾರೆ. ಬದುಕೇ ಬೇರೆ ಭಾವನೆಗಳೇ ಬೇರೆ ಎಂಬ ಅರಿವನ್ನು ಹೊಂದುತ್ತಾರೆ. *ಸಹವಾಸ…. ಸಮಾನ ಮನಸ್ಕರ ಸಹವಾಸಕ್ಕಿಂತ ಬದುಕಿನಲ್ಲಿ ಉತ್ತಮ ಗುರಿ, ಶ್ರದ್ಧೆ ಹೊಂದಿರುವ ಸ್ನೇಹಿತರ ಜೊತೆಗೆ ಸ್ನೇಹವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಹೂವಿನ ಜೊತೆ ನಾರು ಕೂಡ ಸ್ವರ್ಗಕ್ಕೆ ಹೋಗುತ್ತದೆ ಎಂದು ಹೇಳುತ್ತಾರಲ್ಲವೇ ಹಾಗೆಯೇ ಉತ್ತಮರ ಒಡನಾಟ ಬದುಕಿನಲ್ಲಿ ಉನ್ನತವಾದದನ್ನು ಸಾಧಿಸಲು ಅವಶ್ಯಕ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕು. * ನುರಿತ ತಜ್ಞ ವೈದ್ಯರಿಂದ, ಸಮಾಲೋಚಕರಿಂದ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸಬೇಕು. ದೇಹ ಮತ್ತು ಮನಸ್ಸುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ತಮ್ಮ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುವ ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಹೊಣೆಗಾರಿಕೆಯ ಅರಿವನ್ನು ಮೂಡಿಸಬೇಕು. * ಒಂದೊಮ್ಮೆ ತಪ್ಪು ಮಾಡಿದ್ದೆ ಆದರೆ ಅದರ ಪರಿಣಾಮಗಳ ಅರಿವನ್ನು ಕೂಡ ಗೊತ್ತು ಪಡಿಸಬೇಕು.  ಇದೆಲ್ಲದರ ಹೊರತಾಗಿಯೂ ನಮ್ಮ ನೆಲದ ಕಾನೂನಿನ ಕುರಿತು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ  ಇರಲೇಬೇಕು. ಪ್ರೊಟೆಕ್ಷನ್ ಆಫ್ ಚೈಲ್ಡ್ ಫ್ರಮ್ ಸೆಕ್ಷುಯಲ್ ಆಫೆನ್ಸಸ್ (POCSO) ಕಾಯ್ದೆಯ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯ ಕುರಿತು ಮುಕ್ತವಾಗಿ ಅವರೊಂದಿಗೆ ಮಾತನಾಡುವ ಚರ್ಚಿಸುವ ಸಮಾಲೋಚಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅರಿವಿಗೆ ಬರುವ ಮುನ್ನವೇ ಸಂಭವಿಸಬಹುದಾದ ಅಪರಾಧಗಳ ಸುಳಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡಬಾರದು ಅಲ್ಲವೇ? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು, ಸಾಮಾಜಿಕ ಮನ ಶಾಸ್ತ್ರ ಪರಿಣತರು, ಶಿಕ್ಷಣ ತಜ್ಞರೊಂದಿಗೆ ಸರಕಾರಗಳು ಸಮಾಲೋಚನೆ ಮಾಡಿ ಮುಂದುವರೆಯಬೇಕು. ಮಕ್ಕಳ ಭವಿಷ್ಯಕ್ಕೆ ಹೊಸ ಹಾದಿಯನ್ನು ತೋರಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ

ಸ್ಫೂರ್ತಿ ಸಂಗಾತಿ “ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!”  ಜಯಶ್ರೀ.ಜೆ. ಅಬ್ಬಿಗೇರಿ ಏಕೋ ಏನೋ ಗೊತ್ತಿಲ್ಲ  ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ.ಅನ್ನೋದು ಬಹುತೇಕ ಜನರ  ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ.  ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಸ್ವಯಂ ಸ್ಪೂರ್ತಿ ಇರದಿದ್ದರೆ  ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ.ಜೀವನವನ್ನು ನಿಸ್ಸಾರಗೊಳಿಸುತ್ತವೆ.ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ.ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ ಅವಮಾನದ ಪೆಟ್ಟಿನ ಅನುಭವ ಎದೆಗೆ ಬಿಸಿ ನೀರಾಗಿಸಿ ಹುಯ್ಯುತ್ತದೆ. ಸದಾ ನಮ್ಮನ್ನು ನಾವು ಸ್ಪೂರ್ತಿಯುತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಮಾರ್ಗ ಮನಸ್ಸಿದ್ದಲ್ಲಿ ಮಾರ್ಗ ತಾನಾಗಿ ಕಾಣುತ್ತದೆ. ಆದರೂ ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಬದಲಾಗದಿದ್ದರೆ ‘ಆಯುಧವು ತನ್ನ ಯಜಮಾನನಿಗೂ ಶತ್ರುವೇ ಆಗಿದೆ’ಎಂಬಂತಾಗುತ್ತದೆ. ಕಲ್ಲಾಗಿರುವ ಮನಸ್ಸೆಂಬ ಆಯುಧವನ್ನು ಹೂವಿನಂತೆ ಮೆದುವಾಗಿಸಬೇಕು.ಹೊರಗಿನ ವಸ್ತುಗಳನ್ನು ಉಪಯೋಗಿಸಿ ಒಳ ಮನಸ್ಸನ್ನು ಹದಗೊಳಿಸಿ ಸ್ವಯಂ ಸ್ಪೂರ್ತಿಗೊಳಿಸಿಕೊಳ್ಳುವುದು ಹೇಗೆೆ ಎಂಬುದನ್ನು ನೋಡೋಣ ಬನ್ನಿಶಕ್ತಿ ತುಂಬುವ ವಸ್ತುಗಳನ್ನು ಬಳಸಿನಿಮಗೆ ಹಿತ ನೀಡುವ, ಇಷ್ಟವಾಗುವ, ನೀವು ಪ್ರೀತಿಸುವ, ವಸ್ತುಗಳು ನಿಮಗೆ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಇವುಗಳಿಗೆ ನಿಮ್ಮ ಸುತ್ತಲೂ ಜಾಗ ನೀಡಿ. ಅವು ತಾಜಾ ಹೂಗಳು, ಸುಂದರ ಪೆಂಟಿಗ್ಸ್ ಇಲ್ಲವೇ ನುಡಿಮುತ್ತುಗಳಾಗಿರಬಹುದು. ಇವು ನಿಮ್ಮನ್ನು ಸ್ಪೂರ್ತಿಗೊಳಿಸಲು ತುದಿಗಾಲಲ್ಲೇ ನಿಂತಿರುತ್ತವೆ. ನೀರಸಗೊಂಡ ಮನಸ್ಸು ತಕ್ಷಣಕ್ಕೆ ಉತ್ಸಾಹದಿಂದ ಎದ್ದು ನಿಲ್ಲುತ್ತದೆ.ಒಂದು ನವಿಲು ತನ್ನ ಗೆರೆಗಳನ್ನು ತೆರೆದಿಟ್ಟಾಗ ಮತ್ತು ನವಿಲಿನಂತೆ ನಡೆದಾಗ ಮಾತ್ರ ಸುಂದರವಾಗಿ ಆಕರ್ಷಕವಾಗಿ ಕಾಣಬಲ್ಲದು. ಅಂತೆಯೇ ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಬಯಸುವುದನ್ನೆಲ್ಲ ಸುತ್ತುವರಿಸಿಕೊಂಡರೆ ಮನಾನಂದ ನೀಡುವದರ ಜೊತೆಗೆ ಮನಸ್ಸನ್ನು ಮಹತ್ತರ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಇದರತ್ತ ಅತೀ ಕಡಿಮೆ ಗಮನ ನೀಡುತ್ತಿದ್ದೇವೆ. ಇವುಗಳತ್ತ ಚಿತ್ತ ಹರಿಸಿದರೆ ಕಾಲದ ಗತಿಯಲ್ಲಿ ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿ ಸ್ಪೂರ್ತಿ ಮನೆ ಮಾಡುತ್ತದೆ. ಯಾವಾಗಲೂ ಸುಂದರ ವಸ್ತುಗಳು ನಿಮ್ಮ ಕಣ್ಣ ಮುಂದಿರಲಿ. ಹೆಚ್ಚಿನ ಸಮಯ ಓದಿ ಓದು ಬಹಳಷ್ಟನ್ನು ಕಲಿಸುತ್ತದೆ. ಹೊಸ ಹೊಸ ಆಲೋಚನೆಗಳು ಮನಸ್ಸನ್ನು ಪ್ರವೇಶಿಸುತ್ತವೆ. ಕಥೆ, ಕಾದಂಬರಿ, ಸದಭಿರುಚಿ ಪುಸ್ತಕಗಳ ಓದಿನಲ್ಲಿ ನಿರತರಾದರೆ ಸ್ಪೂರ್ತಿಯ ಮಟ್ಟ ಏರುತ್ತದೆ. ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಓದಿನಲ್ಲಿಯ ಯಾವುದೇ ಒಂದು ವಿಚಾರ ನಿಮ್ಮಲ್ಲಿ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಹುದು.ಓದಿನ ಮೌಲ್ಯವನ್ನು ಅರಿತು ಅನುಸರಿಸಿದರೆ ಸ್ಪೂರ್ತಿಗೆ ಮಹಾನ್ ಪಾಠ ದೊರೆಯುವುದು. ಈಗಿನ ಗ್ಯಾಜೆಟ್ ದುನಿಯಾದಲ್ಲಿ ಪುಸ್ತಕ ಓದುವದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುವುದೇ ಹೆಚ್ಚಾಗುತ್ತಿದೆ. ಇದು ಒಂಟಿತನಕ್ಕೆ ಜಾರಿಸುತ್ತಿದೆ. ‘ಎಲ್ಲ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ.’ ಸ್ಪೂರ್ತಿಯಿದ್ದಲ್ಲಿ ನಮ್ಮೆಲ್ಲ ಕನಸುಗಳನ್ನು ಬೆನ್ನಟ್ಟಿ ಗೆಲ್ಲಬಹುದು. ಎಂಬುದು ಓದಿನಿಂದ ಬಹು ಬೇಗ ಅರ್ಥವಾಗುತ್ತದೆ.ಒಬ್ಬ ಒಳ್ಳೆಯ ಓದುಗನು ಅವಕಾಶಗಳನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಯಾವಾಗಲಾದ್ರೂ ಓದಿದ್ರಾಯ್ತು ಎಂದು ಉದಾಸೀನ ಮಾಡಿದರೆ ಜೀವನ ಸ್ಪೂರ್ತಿಯನ್ನು ಸವಿಯಲಾಗುವುದಿಲ್ಲ. ಸಂಗೀತ ಆಲಿಸಿ ‘ನಾನು ಮೂರು ದಿನ ಸಂಗೀತ ಅಭ್ಯಾಸ ಮಾಡದಿದ್ದರೆ ನನ್ನ ಗಾಯನದಲ್ಲೇನೋ ಕೊರತೆಯಿದೆ ಎಂದು ನನ್ನ ಮನೆಯಾಕೆಗೆ ತಿಳಿಯುತ್ತದೆ. ಎರಡು ದಿನ ಅಭ್ಯಾಸ ಬಿಟ್ಟರೆ ತಟ್ಟನೆ ನನ್ನ ಅಭಿಮಾನಿಗಳು ಗುರುತಿಸಬಲ್ಲರು. ಇಲ್ಲ ಒಂದೇ ಒಂದು ದಿನ ಅಭ್ಯಾಸವನ್ನು ಬಿಟ್ಟರೂ ನನ್ನ ಆಲಾಪದಲ್ಲೇನೋ ಕೊರತೆಯಿದೆ ಎಂದು ಖುದ್ದು ನನಗೆ ಗೊತ್ತಾಗುತ್ತದೆ. ’ಇದು ಸಂಗೀತದಂತೆದೈತ್ಯ ಪ್ರತಿಭೆ ಎಂದೇ ಖ್ಯಾತರಾದ ಜಗಜೀತ್ ಸಿಂಗ್ ತನ್ನ ಅಭ್ಯಾಸದ ಕುರಿತು ಸ್ವಾರಸ್ಯಕರವಾಗಿ ಹೇಳಿದ ರೀತಿ. ಸಂಗೀತವು ಮನಸ್ಸನ್ನು, ಸುಂದರ ಭಾವನೆಗಳನ್ನು ಅರಳಿಸುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಕಷ್ಟ ಪಟ್ಟು ಕೆಲಸ ಮಾಡಿದ ನಂತರ, ಅದನ್ನು ಸಂತೋಷದಿಂದ ಅನುಭವಿಸಲು ಸಮಯ ಪಡೆದುಕೊಳ್ಳಿ. ಗಜಿ ಬಿಜಿಯಾಗಿರುವ ಮನಸ್ಸಿಗೆ ವಿಶ್ರಾಂತಿ ನೀಡಿ ಮುದಗೊಳಿಸುತ್ತದೆ. ಸೂರ್ತಿಯತ್ತ ವಾಲಿಸುತ್ತದೆ. ದಿನಚರಿ ಬದಲಿಸಿ‘ಮಾಡಿದ್ದನ್ನೇ ಮಾಡುತ್ತ ವಿಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸುವುದು ಮೂರ್ಖತನ.’ ಎಂದು ಹೇಳಿದ್ದಾನೆ ಜಗತ್ತಿನ ಮೇದಾವಿ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್.  ದಿನ ನಿತ್ಯ ಅದೇ ಕೆಲಸ ಅದೇ ಜನರು ಅದೇ ಗೊಣಗಾಟ ಜಂಜಾಟ.  ಹೀಗಿದ್ದಾಗ್ಯೂ ದಿನಚರಿಯಲ್ಲಿ ಬದಲಾವಣೆಗೆ ಮನಸ್ಸು ಮಾಡುವುದು ಕಮ್ಮಿ. ಇಲ್ಲವೇ ಇಲ್ಲವೆನ್ನುವಷ್ಟು ಬದಲಾವಣೆಯನ್ನು ದೈನಂದಿನ ಕೆಲಸಗಳಲ್ಲಿ ತರುತ್ತೇವೆ. ನಿರಾಸಕ್ತಿಯಿಂದ ಅದನ್ನೇ ನಿಯಮಿತವಾಗಿ ಪಾಲಿಸುತ್ತೇವೆ. ಒಂದೇ ದಾರಿಯಲ್ಲೇ ಓಡಾಡುತ್ತೇವೆ. ಒಂದೇ ಹೊಟೆಲ್ಲಿನಲ್ಲಿ ಕಾಫೀ ಹೀರುತ್ತೇವೆ. ತಿನ್ನುವ ತಿಂಡಿ ತಿನಿಸು ಬದಲಿಸಲೂ ಹಿಂಜರಿಯುತ್ತೇವೆ. ಒಟ್ಟಿನಲ್ಲಿ ಏಕತಾನತೆಗೆ ಗಂಟು ಬಿದ್ದಿರುತ್ತೇವೆ. ಬದಲಾವಣೆ ಮನಸ್ಸಿಗೆ ಆಗಿ ಬರುವ ಮಾತಲ್ಲ.ದಿನಚರಿ ಬದಲಿಸಲುಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ. ಹೊಸ ಸವಾಲುಗಳು ತಲೆ ತಿನ್ನುವ ಸಮಸ್ಯೆಗಳೆನಿಸದೇ, ಹೊಸ ಆಯಾಮದಲ್ಲಿ ಹೊಸ ಅನುಭವಗಳಾಗಬೇಕೆಂದರೆ ಸೂರ್ತಿಯುತ ದಿನಚರಿಗೆ ಅಣಿಯಾಗಬೇಕು.  ‘ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಿದ್ದರೂ ಚುಕ್ಕಾಣಿ ಹಿಡಿಯಬಹುದು.’ ಮನಸ್ಸು ಶಾಂತವಾಗಿರುವಾಗ ಅದನ್ನು ಪುಟ್ಟ ಮಗುವನಂತೆ ಮುದ್ದಿಸಿ ಹೊಸ ಬದಲಾವಣೆಗೆ ಒಪ್ಪಿಸಬೇಕು. ’ಅತ್ಯುತ್ತಮ ದಿನಚರಿ ನಮ್ಮದಾಗಿದ್ದರೆ ಸ್ವಯಂ ಸ್ಪೂರ್ತಿಯ ಕಡಲು ನಮ್ಮ ಅಂಗೈಯಲ್ಲೇ ಇದೆ.ದೇಶ ಸುತ್ತಿಶೈಕ್ಷಣಿಕ ಪ್ರವಾಸ ಇಲ್ಲವೇ ಸಣ್ಣ ಪುಟ್ಟ ಪ್ರಯಾಣಗಳು ನವನವೀನ ಅನುಭವಗಳನ್ನು ನೀಡುತ್ತವೆ. ವಿಚಾರದ ದಿಕ್ಕನ್ನು ಉತ್ತಮತೆಯತ್ತ ಹೊರಳಿಸುತ್ತವೆ. ದೂರದ ದೇಶಕ್ಕೆ ಪಯಣಿಸಬೇಕೆಂದೇನೂ ಇಲ್ಲ. ವಾಸವಿರುವ ನಗರವನ್ನೇ ಸುತ್ತಬಹುದು. ನೀವಿನ್ನೂ ನೋಡಿರದ ಪಾರ್ಕ್ನಲ್ಲಿ ಸುತ್ತಾಡಿ. ಹೊಸ ಮಠ ಮಂದಿರಗಳಿಗೆ ಕುಟುಂಬ, ಗೆಳೆಯರೊಂದಿಗೆ ಹೋಗಿ ಬನ್ನಿ.ವಿವಿಧ ಹಾದಿ ಬೀದಿಗಳಲ್ಲಿ ತಿರುಗುವುದು ವಿಶಿಷ್ಟ ಸ್ಪೂರ್ತಿಗೆ ದಾರಿಯಾಗುತ್ತದೆ. ಪಕ್ಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ಲವಲವಿಕೆ ತುಂಬಿಕೊಳ್ಳುತ್ತದೆ. ಅಜ್ಞಾನದ ಅಂದಕಾರವನ್ನು ಕಡಿಮೆಗೊಳಿಸಿಜ್ಞಾನ ಕ್ಷಿತಿಜವನ್ನು ಅಗಲಿಸುತ್ತವೆ. ಎತ್ತರದ  ಗುರಿಯಿರಲಿತಮಗೆಲ್ಲ ಗೊತ್ತಿರುವಂತೆ ಓಲಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರೀಡಾಕೂಟ. ಆದರೆ ಲಕ್ಷಾಂತರಕ್ರೀಡಾ ಪಟುಗಳು ಓಲಂಪಿಕ್ಸ್ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿ ಗೆಲುವಿನ ರುಚಿ ನೋಡಲು ದಿನ ನಿತ್ಯ ಬೆವರು ಹರಿಸುತ್ತಿರುತ್ತಾರೆ. ಉಸೇನ್ ಬೋಲ್ಟ್ ನೂರು ಮೀಟರ್‌ನ್ನು ಕ್ರಮಿಸಲು ಬೇಕಾಗಿರುವ ಅವಧಿ ಬರೀ ಒಂಭತ್ತುವರಿ ಸೆಂಕೆಡುಗಳಷ್ಟೇ! ಆದರೆ ನಿತ್ಯದ ಅಭ್ಯಾಸ? ಉಳಿದ ಓಟಗಾರನಿಗಿಂತ ನೂರು ಪಟ್ಟು ಹೆಚ್ಚು ಮಾಡಲೇಬೇಕು. ಅಷ್ಟರ ಮಟ್ಟದ ಸ್ವಯಂ ಸ್ಪೂರ್ತಿ ಇರದಿದ್ದರೆ ಉಸೇನ್ ಬೋಲ್ಟ್ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಓಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂ ಸ್ಪೂರ್ತಿಯಿಲ್ಲದೇ ಗೆಲುವು ಕಂಡಿರುವ ವ್ಯಕ್ತಿ ಇರುವುದು ಅಸಾಧ್ಯ. ಕೊನೆ ಹನಿ ‘ಸಣ್ಣ ಗುರಿಗಳನ್ನು ಹೊಂದುವುದು ಅಪರಾಧ’ ಎಂದಿದ್ದಾರೆ ಅಬ್ದುಲ್ ಕಲಾಂ. ಎತ್ತರದ ಆಗಸಕ್ಕೆ ಹಾರುವುದು ನಮ್ಮ ಗುರಿಯಾಗಿರಬೇಕು. ನಾವು ಅಲ್ಲಿಗೆ ತಲುಪದಿರಬಹುದು ಆದರೆ ನಾವಿರುವ ಮಟ್ಟದಲ್ಲೇ ಇರುವ ವಸ್ತುವಿಗೆ ಗುರಿಯಿಟ್ಟರೆ ಹಾರುವ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ನಮ್ಮ ಗುರಿಯ ಬಾಣ ಹಾರುತ್ತದೆ. ಎಲ್ಲಿಯವರೆಗೂ ನಾವು ಸ್ವಯಂ ಸ್ಪೂರ್ತಿಗೆ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಗೆಲುವು ನಮಗೆ ದಕ್ಕುವುದಿಲ್ಲ. ನಾವು ಯಾವುದನ್ನಾದರೂ ಸಾಕಷ್ಟು ಪ್ರೀತಿಸಿದರೆ, ಅದು ತನ್ನ ರಹಸ್ಯಗಳನ್ನೆಲ್ಲ ಬಿಟ್ಟು ಕೊಡುತ್ತದೆ. ಆದ್ದರಿಂದ ಅಂಗೈಯಲ್ಲಿರುವ ಸ್ವಯಂ ಸ್ಪೂರ್ತಿಯನ್ನು ಪ್ರೀತ್ಸೋಣ ದೊಡ್ಡ ಗೆಲುವಿನ ನಗೆ ಬೀರೋಣ. ಜಯಶ್ರೀ.ಜೆ. ಅಬ್ಬಿಗೇರಿ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ Read Post »

You cannot copy content of this page

Scroll to Top