ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ

ಶ್ರದ್ಧಾಂಜಲಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ (ಒಂದು ಶ್ರದ್ಧಾಂಜಲಿ ) ಜಾನಕಿ ಅಮ್ಮ…. ಚಿಕ್ಕಂದಿನಲ್ಲಿ ನಾವು ರೇಡಿಯೋದಲ್ಲಿ ಕೇಳುತ್ತಿರುವಾಗ ಬಾಯಿ ಪಾಠವಾದ ನಿಮ್ಮ ಹೆಸರು ಇಂದಿಗೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತದೆ . ಚಲನಚಿತ್ರದ ಹಾಡಿನ ಗಾಯಕರು ಎಂದೊಡನೆ ನಾವು ಕೂಡ ನಿಮ್ಮ ಹೆಸರನ್ನು ಉದ್ಘೋಷಕರ ಜೊತೆಗೆ ಅದೆಷ್ಟು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆವು ಗೊತ್ತೇ?.ಹಾಗೆ ನಿಮ್ಮ ಸುಶಾವ್ಯವಾದ ಕಂಠಸಿರಿ, ಅತ್ಯಪರೂಪದ ಪ್ರತಿಭೆ, ಭಾವಪೂರ್ಣ ಗಾಯನಗಳಿಂದ ಇಡೀ ಭಾರತ ದೇಶದ ಹೆಮ್ಮೆಯ ಹಿನ್ನೆಲೆ ಗಾಯಕಿಯಾಗಿ ಗಾನ ಸರಸ್ವತಿಯಾದವರು ನೀವಲ್ಲವೇ? ಬಹುಶಹ ಅಂದಿನಿಂದ ಇಂದಿನವರೆಗೂ ನಿಮ್ಮದೇ ಹಾಡುಗಳನ್ನು ಕೇಳುತ್ತಲೇ  ಹುಟ್ಟಿ ಬೆಳೆದು ಅರಳಿ ದೊಡ್ಡವರಾಗಿ ಮಧ್ಯ ವಯಸ್ಸನ್ನು ತಲುಪಿದ್ದೇವೆ. ಪ್ರಸ್ತುತ ನೀವು ನಮ್ಮೊಂದಿಗಿಲ್ಲ, ನಿಜ….ಆದರೆ ನಿಮ್ಮ ಹಾಡುಗಳು…. ಎಂದೆಂದಿಗೂ  ಅಮರ… ಅತ್ಯಂತ ಸುಮಧುರ.1938ರ ಏಪ್ರಿಲ್ 23ರಂದು ನೀವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಟಣ ಗ್ರಾಮದಲ್ಲಿ ಜನಿಸಿದಿರಿ. ಶಾಸ್ತ್ರೀಯವಾಗಿ ಗಾಯನವನ್ನು ಕಲಿಯದೆ ಹೋದರೂ ಕೂಡ ನಿಮ್ಮ ಆಸಕ್ತಿ, ಶ್ರದ್ದೆ ಹಾಗೂ ನಿರಂತರ ಪರಿಶ್ರಮದ ಫಲವಾಗಿ 1957ರಲ್ಲಿ ಮೊತ್ತ ಮೊದಲ ಬಾರಿಗೆ ತೆಲುಗು ಚಿತ್ರರಂಗದ ಮೂಲಕ ಗಾಯನ ಪ್ರಪಂಚಕ್ಕೆ ಕಾಲಿಟ್ಟಿರಿ. ಮುಂದೆ ನಡೆದದ್ದು ಇತಿಹಾಸ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿಯಂತಹ ದೇಶಿ ಭಾಷೆಗಳಲ್ಲಿ, ಇಂಗ್ಲೀಷ್ ಜಪಾನಿ ಜರ್ಮನಿ, ಸಿಂಹಳೀಹಾಗೂ ಫ್ರೆಂಚ್ ಭಾಷೆಗಳನ್ನು ಸೇರಿದಂತೆ  ಸುಮಾರು 17 ಭಾಷೆಗಳಲ್ಲಿ ನೀವು ಹಾಡಿದಿರಿ…. ಆ ದೇವಗಂಗೆ ನಿರಂತರವಾಗಿ ಪುಣ್ಯ ಸಲಿಲವನ್ನು  ಹೊತ್ತು ಹರಿದರೆ  ನೀವು ನಿರಂತರವಾಗಿ ಹಾಡುಗಳ ಗಾಯನದ ಶರೀರವನ್ನು ಹೊತ್ತು ನಡೆದಿರಿ ಅಂತೆಯೇ ನೀವು…. ಗಾಯನ ಗಂಗೆ. ಭಕ್ತಿ ಗೀತೆಗಳು ಭಾವಗೀತೆಗಳು ವಿರಹ ಗೀತೆಗಳು ಪ್ರೀತಿ ಪ್ರೇಮ ಸರಸ ಸಲ್ಲಾಪ ಚೆಲ್ಲಾಟ ಹೀಗೆ ಹತ್ತು ಹಲವು ಭಾವಗಳನ್ನು ಸೂಸಿ ಹಾಡುವ ನಿಮ್ಮ ಗಾಯನ ಪ್ರತಿಭೆ ಅದ್ಭುತವಾದದ್ದು. ಭಾಷೆ ಯಾವುದೇ ಇರಲಿ ಭಾವಪೂರ್ಣವಾಗಿ ಹಾಡುವ ನಿಮ್ಮ ಕಲೆಗೆ ನೀವೇ ಸಾಟಿ… ಆದ್ದರಿಂದಲೇ ನೀವು ದಕ್ಷಿಣ ಭಾರತದ ಗಾನ ಸರಸ್ವತಿ ಎಂದರೆ ತಪ್ಪಿಲ್ಲ ಅಲ್ವೇ ಅಮ್ಮನೂರಾರು ಚಲನಚಿತ್ರಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ನಮ್ಮೆಲ್ಲರ ಮನೆ ಮನೆಗಳಲ್ಲಿ ನಿಮ್ಮದೇ ಆದ ಪ್ರೀತಿಯ ನೆಲೆಯನ್ನು ಕಂಡುಕೊಂಡಿರುವ ನೀವು ಹಾಡಿದ ಹಾಡುಗಳ ವಿನ: ನಮ್ಮ ಮುಂಜಾನೆಗಳು ಆರಂಭವಾಗುವುದಿಲ್ಲ ರಾತ್ರಿಗಳು ಕೊನೆಗೊಳ್ಳುವುದಿಲ್ಲ. ಯಾವುದೋ ಒಂದು ರೀತಿಯಲ್ಲಿ ನಿಮ್ಮ ದನಿ ನಮಗೆ ಕೇಳಿಸುತ್ತಲೇ ಇರುತ್ತದೆ. ಸರಿಸುಮಾರು ಆರು ದಶಕಗಳ ಕಾಲ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ನೀವಲ್ಲವೇ ಅಮ್ಮ ? ವಿವಿಧ ರಾಜ್ಯಗಳ ಒಟ್ಟು 33 ರಾಜ್ಯ ಪ್ರಶಸ್ತಿಗಳು,. ನಾಲ್ಕು ಬಾರಿ ಭಾರತ ದೇಶದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ನೀವು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಕೂಡ ನಿಮ್ಮ ಯಶಸ್ಸಿನ ಮುಕುಟದ ಗರಿಗೆ ಸಿಕ್ಕಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವವನ್ನು ಪಡೆದುಕೊಂಡವರು ನೀವು. ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಹಾಗೂ ಕರ್ನಾಟಕದ ಅತ್ಯುನ್ನತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು ಕೂಡ ನೀವೇ ಅಲ್ಲವೇ ಕನ್ನಡದಲ್ಲಿ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಯನ್ನು ನೀಡದೆ ಇರುವುದನ್ನು ವಿರೋಧಿಸಿ ಸರ್ಕಾರವನ್ನು ನಿಷ್ಟುರವಾಗಿ ಖಂಡಿಸಿದವರು. ಆದರೆ ಒಂದೊಮ್ಮೆ ನಿಮ್ಮ ನಿಷ್ಟುರತೆಯ ಹಿಂದಿರುವ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಲು ಆರಂಭಿಸಿದಾಗ ಅತಿ ಹೆಚ್ಚು ಸಂತಸ ಪಟ್ಟವರು ಕೂಡ ನೀವೇ ಅಲ್ಲವೇ ಅಮ್ಮ.?ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಭಾಷೆಗಳಿಗೆ ಇರುವುದು ಕೂಡ ಒಂದೇ ಭಾವ ಅದು ಮನದ ಭಾವ. ದೇಶ ಭಾಷೆ ಗಡಿಗಳನ್ನು ದಾಟಿ ಸಂಗೀತವು ಎಲ್ಲರ ಮನಗಳನ್ನು ತಲುಪುತ್ತದೆ ಎಂದು ನೀವು ಹೇಳಿರುವುದು ಅದೆಷ್ಟು ಸತ್ಯ ಅಲ್ಲವೇ ಅಮ್ಮ ? ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂದೇ ಎಂದು ನೀವು ಹೇಳಿದಾಗ ಖುದ್ದು ನಮ್ಮ ಅಮ್ಮನೇ ಹಾಡುತ್ತಿರುವಳೇನು ಎಂಬ ಭಾವ. ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ವಿನೂತನ ಜೀವಭಾವ ಎಂದು ನೀವು ಹಾಡಿದಾಗ ಹರೆಯದ ಹೆಣ್ಣು ಮಕ್ಕಳ ಮನದಲ್ಲಿ ಉಲ್ಲಾಸವನ್ನು ಕಾಣಬಹುದು ಅಲ್ಲವೇ ಅಮ್ಮ. ಎಳೆಯ ಬಾಲಕಿಯ ಧ್ವನಿಯಿಂದ ಹಿಡಿದು ಮುಪ್ಪಾನ ಮುದುಕಿಯವರೆಗೆ ಎಲ್ಲ ವಯೋಮಾನಕ್ಕೆ ಹೊಂದುವಂತೆ ನಿಮ್ಮ ಕಂಠ ಸಿರಿಯನ್ನು ಬದಲಿಸಿ ಹಾಡುವ ಕೌಶಲ್ಯ ನಿಮ್ಮದಾಗಿತ್ತು. ಇದರ ಸಂಪೂರ್ಣ ಲಾಭವನ್ನು ಪಡೆದ ನೀವು ಕಳೆದ ಹಲವಾರು ದಶಕಗಳಿಂದ ನಿಮ್ಮ ಹಾಡುಗಾರಿಕೆಯಿಂದ ನಮ್ಮನ್ನು ತಣಿಸುತ್ತಲೇ ಬಂದಿರುವಿರಿ. ನಿಮ್ಮ ಇಂಪಾದ ದನಿಯು ಬದುಕಿನಲ್ಲಿ ನೊಂದವರಿಗೆ ಸಮಾಧಾನ ಹೇಳುವ ಸ್ನೇಹಿತೆಯ ದನಿಯಾಗಿ ಬೆಂದವರಿಗೆ ಆಶಾ ದೀಪವಾಗಿಯೂ, ಪ್ರೇಮಿಗೆ ತನ್ನ ಪ್ರೀತಿಯ ದ್ಯೋತಕವಾಗಿಯೂ ತಾಯಿಗೆ ತನ್ನ ಅಕ್ಕರೆಯ ಪ್ರತೀಕವಾಗಿ ಮಗುವಿಗೆ ತನ್ನ ಅಮ್ಮನ ಮಮತೆಯ ಮಹಾಪೂರದಂತೆ ಭಾಸವಾಗುತ್ತದೆ. ಅಮ್ಮ ನಿಮ್ಮ ಭಕ್ತಿ ಗೀತೆಗಳು ನಮ್ಮನ್ನು ಭಾವ ಪರವಶರನ್ನಾಗಿಸಿದರೆ, ಪ್ರೇಮಗೀತೆಗಳು ಮನವನ್ನು  ಬೆಚ್ಚಗಾಗಿಸುತ್ತದೆ. ತುಂಟಾಟದ ಗೀತೆಗಳು ಆಪ್ತವೆನಿಸಿದರೆ ಭಾವಗೀತೆಗಳು ನಮ್ಮ ಎದೆಯಾಳದ ಭಾವಗಳನ್ನು ಬಗೆದು ತೋರುತ್ತವೆ. ನಮ್ಮ ಬದುಕಿನ ಮುಂಜಾನೆಯಿಂದ ಸಂಜೆಯವರೆಗಿನ ಪ್ರತಿ ಗಳಿಗೆಯಲ್ಲೂ, ನಮ್ಮೆದೆಯ ಜೀವ ಭಾವಗಳಲ್ಲಿ ನೀವು ನಿಮ್ಮ ಸಂಗೀತದ ಪ್ರತಿಭೆಯ ಮೂಲಕ ಹಾಡುಗಳ ಮೂಲಕ ಮಧುರ ಭಾವಗಳನ್ನು ತುಂಬಿರುವಿರಿ…… ಮುಂದೆಯೂ ಕೂಡ ಶತಶತಮಾನಗಳ ಕಾಲ ನಿಮ್ಮನ್ನು ನಾವು ಕೇಳುತ್ತೇವೆ. ನೀವಿಲ್ಲದ ಈ ಜಗತ್ತಿನಲ್ಲಿ ಕೂಡ ನೀವು ಅಜರಾಮರರಾಗಿರುವುದು ನಿಮ್ಮ ಸುಶ್ರಾವ್ಯ ಕಂಠದಿಂದ… ಅದರ ಸಿರಿಯ ಗರಿಮೆಯಿಂದ. ಹೋಗಿ ಬನ್ನಿ ಅಮ್ಮ ನಿಮ್ಮನ್ನು ನಾವು ಮರೆಯಲು ಸಾಧ್ಯವಿಲ್ಲ…. ಎಂದೆಂದಿಗೂ ನಿಮ್ಮ ಆರಾಧಕರಾಗಿ ನಾವು ಇದ್ದೇ ಇರುತ್ತೇವೆ…. ಮತ್ತೆ ನೀವು ಹುಟ್ಟಿ ಬರಲಿ ಎಂಬ ಆಶಯವನ್ನು ಹೊತ್ತು.  ವೀಣಾ ಹೇಮಂತ್ ಗೌಡ ಪಾಟೀಲ್

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು”

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ. “ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು”ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತಿಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ. ನಿನಗೆ ಅದರಿಂದ ಬೇಸರ ಆಗುವುದಿಲ್ಲವೇ?” ಜೇನು ಹುಳು ಹೇಳಿತು: ‘ಇಲ್ಲ ಜನರು ನನ್ನ ಜೇನನ್ನು ಕದಿಯಬಹುದು, ಆದರೆ ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.’  ಇದರ ಅರ್ಥ ಇಷ್ಟೇ ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ” ಪೂರ್ವ ವೈಭವ ಮೊದಲೆಲ್ಲ ನಮ್ಮ ತಾತ ಮುತ್ತಾಂದಿರು ನೂರು ವರ್ಷಗಳ ತುಂಬು ಜೀವನ ಸಂತೃಪ್ತಿಯಿoದ ಬಾಳಿ ಬದುಕುತ್ತಿದ್ದರು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮನೆ ಮನವನ್ನು ಬೆಳಗುವ ಜ್ಯೋತಿಯಾಗುತ್ತಿದ್ದರು. ಹೆಣ್ಣಾದರೆ ತವರು ಮನೆಯ ಕೀರ್ತಿಯನ್ನು ಬೆಳಗುವ ಸದಾಶಯದೊಂದಿಗೆ ಸದಾ ಜೀವವನ್ನು ಸವೆಸುತ್ತಿದ್ದಳು. ಬದುಕಿನ ಪಯಣದಲ್ಲಿ ಬರುವ ಎಲ್ಲ ನೋವನ್ನು ನುಂಗಿಕೊoಡು ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಳು. ಗಂಡಾದರೆ ಹೊಲದ ಕೃಷಿ ಕೆಲಸಗಳಲ್ಲಿ ವೃತ್ತಿ ವ್ಯಾಪಾರ ಕರ್ತವ್ಯದಲ್ಲಿ ಶ್ರಮವಹಿಸುತ್ತಿದ್ದರು. ಬದುಕು ಹೋರಾಟ ಎರಡೂ ಬೇರೆ ಬೇರೆ ಅಲ್ಲ ಎನ್ನುವ ತಲೆಮಾರಿಗೆ ಸೇರಿದವರಾಗಿದ್ದರು. ಅನನ್ಯ ಜೀವನದ ಅನುಭವವನ್ನು ಪಡೆಯುತ್ತಿದ್ದರು. ಬಹುಶಃ ಆ ತಲೆಮಾರಿನ ಕೊನೆಯ ಕೊಂಡಿಗಳು ಕಳಚಿ ಹೋಗಿವೆ. ನಮ್ಮ ಹಿರಿಯರ ಬದುಕು ನಮಗೆ ಜೀವನದ ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. .ಪೂರ್ವಜರ ಬದುಕು ಅವರ  ಪಾರಂಪರಿಕ ಜ್ಞಾನ ವಿಜ್ಞಾನವನ್ನು ಪರಿಚಯಿಸುತ್ತದೆ. ಜನಪದ ಸಾಹಿತ್ಯ ಅವರ ಅಗಾಧ ಜ್ಞಾನಕ್ಕೆ ತೋರುಬೆರಳಿನಂತಿದೆ. ಬದಲಾದ ಕಾಲ ಈಗ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಅಗಾಧವೆನಿಸುವಷ್ಟು ಬದಲಾಗಿದೆ. ವ್ಯಕ್ತಿತ್ವದ ವಕ್ರತೆಯನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ. ಒತ್ತಡ ದಾವಂತ ಹೆಚ್ಚಿದೆ. ಹೀಗಾಗಿ ನೂರು ವಸಂತಗಳನ್ನು ಸಂತಸದಿoದ  ಕಳೆಯುವುದು ದುರ್ಭರವಾಗಿದೆ. ಐಶಾರಾಮಿ ಬದುಕಿನ ಆಕರ್ಷಣೆಗೆ ಒಳಗಾಗಿ ಮೋಸ ವಂಚನೆ ದರೋಡೆ ಸುಲಿಗೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರಳ ಜೀವನವೇ ಸುಖೀ ಜೀವನವೆಂಬ ಕಲೆಯನ್ನು ಕಲಿತರೆ ಎತ್ರರವು ವಿಸಾರವೂ ಆಗಿರುವ ಅಮೂಲ್ಯ ಬದುಕನ್ನು ಸವಿಯಬಹುದು. ಜೀವನವೆಂದರೆ.. ಜೀವನಕ್ಕೆ ಒಂದೇ ಮುಖವಿಲ್ಲ.  ಹಲವಾರು ಮುಖಗಳಿವೆ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ.ಜೀವನವೆಂಬುದು ಒಂದು ಸಾಗರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಅದಕ್ಕೆ ದಾಸರು ‘ಈಸಬೇಕು ಇದ್ದು ಜಯಿಸಬೇಕು.’ ಎಂದು ಹೇಳಿದರು. ಈಸುವುದು ಬಲು ಕಠಿಣ. ಈಜಿ ದಡ ಸೇರುವುದೇ ಜೀವನ. ದಾರ್ಶನಿಕರು ಶರಣರು ಸಾಧು ಸಂತರು ತತ್ವಜ್ಞಾನಿಗಳು ಮೇದಾವಿಗಳು ತಾವು ಕಂಡoತೆ ಅದನ್ನು ವ್ಯಾಖ್ಯಾನಿಸಿದರು ಕೆಲವರು ಹೋರಾಟವೆಂದರು. ಇನ್ನೂ ಕೆಲವರು ಒಂದು ಆಟವೆಂದರು ನಾಟಕವೆಂದರು ಸವಾಲೆಂದರು. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಎನ್ನಬಹುದುಅನುಭವಿಸುವಂಥದ್ದುಜೀವನವೆoದರೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ. ಅನುಭವಿಸುವಂತದ್ದು. ಸೋಲು ಗೆಲುವು ಅಳುವು ನಗುವು ಜೀವನದ ಅವಿಭಾಜ್ಯ ಅಂಗಗಳು. ಸುಖ ದುಃಖಗಳು ಇದರ ಭಾಗಗಳು. ಅವು ಒಂದರ ನಂತರ ಒಂದು ಬರುತ್ತವೆ. ಸುಖ ದುಃಖಗಳನ್ನುಸಮಾನವಾಗಿ ಸ್ವೀಕರಿಸುವುದು  ಸಮಾಧಾನದಿಂದ ಇರುವುದೇ ಕಷ್ಟಗಳಿಗೆ ಮದ್ದು. ಬಲ್ಲವರು ಹೇಳಿದ ಮಾತಿನಂತೆ ’ಸೋಲಿನ ಪಾಠ ಚಂದ. ಹಸಿವಿನ ಊಟ ಚೆಂದ ಪ್ರೀತಿಯ ಕೋಪ ಚೆಂದ ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ.’ಜೀವಿಸುವುದು ಮುಖ್ಯವಲ್ಲಜೀವನದಲ್ಲಿ ಕೇವಲ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ನಮಗಾಗಿ ಜೀವಿಸುವುದಕ್ಕಿಂತ ನಮ್ಮವರಿಗಾಗಿ ಮತ್ತು ಬೇರೆಯವರಿಗಾಗಿ ಜೀವಿಸುವುದು ಹೆಚ್ಚು ಬೆಲೆಯನ್ನು ತರುತ್ತದೆ. ಬದುಕನ್ನು ಒಂದು ಕ್ಷಣದಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ, ಆ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸಬಲ್ಲದು. ಐದು ಸಂಗತಿಗಳು  ಹೇಳಿದ ವಿಷಯವನ್ನು ಬಿಟ್ಟು ಸಂಬoಧವೇ ಇಲ್ಲದ ಬೇರೆ ವಿಷಯದ ಬಗ್ಗೆ ಮಾತನಾಡುವುದು, ಮಾಡಿದ ಕೆಲಸವು ಸಮರ್ಪಕವಾಗಿದ್ದರೂ ಕಾರಣವಿಲ್ಲದೇ ದ್ವೇಷಿಸುವುದು, ಅವಶ್ಯವಾಗಿ ಇರಬೇಕಾದ ಸ್ಥಳದಲ್ಲಿ ಇಲ್ಲದೇ ಇರುವುದು, ತಮ್ಮ ಸಂಶಯ ನಿವಾರಣೆಗೆ ಯಾರೇ ಯಾವುದೋ ಒಂದು ಪ್ರಶ್ನೆ ಮಾಡಿದಾಗ ಉತ್ತರಿಸದೇ ಇರುವುದು ಮತ್ತು ಪ್ರೀತಿಯಿಂದ ಆಮಂತ್ರಣ ಕೊಟ್ಟಾಗ ಉಪೇಕ್ಷಾ ಭಾವದಿಂದ ಅಲ್ಲಿಗೆ ಹೋಗದೇ ಇರುವುದು ಈ ಐದು ಸಂಗತಿಗಳು ಗುಣರಹಿತನ ಲಕ್ಷಣಗಳಾಗಿವೆ.ಇವುಗಳ ಬಗ್ಗೆ ಅಲಕ್ಷö್ಯ ಮಾಡದೇ ಸದ್ಗುಣವಂತನಾಗಲು ಪ್ರಯತ್ನಿಸಬೇಕು ಅಪರಮಿತ ತ್ಯಾಗ ಮಾಡಿದ ಬದುಕಿಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಹಿಡಿ ಪ್ರೀತಿ ಮಾತಿಲ್ಲದಿದ್ದರೆ ಜೀವನವೇ ಮೂಕವಾಗುತ್ತದೆ. ಕೊಂಕು ಮಾತುಗಳು ಹೆಚ್ಚಾದರೆ ಮೂಕರೋಧನವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಬಯಸುವುದು ಒಂದು ಹಿಡಿ ಪ್ರೀತಿಯನ್ನು. ಮಾತೆಯ ಮಮತೆಯನ್ನು ಧಾರೆಯೆರೆಯುವ ಹೃದಯ ನಮ್ಮದಾಗಬೇಕು. ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸ ವಾತ್ಸಲ್ಯದೊಂದಿಗೆ ನಡೆದುಕೊಳ್ಳಬೇಕು. ಒಪ್ಪ ಓರಣ ಶಿಸ್ತು ಸಹನೆ ಕಲಿಯಬೇಕು. “ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ,”ಎಲ್ಲವನ್ನೂ ಅನುಭವಿಸುತ್ತ ಬಾಳುವುದೇ ಬದುಕು. ಕೈಯಲ್ಲಿ ಅಧಿಕಾರವಿರುವಾಗ ಸ್ಥಾನದ ಮಹತ್ವವನ್ನು ಅರಿಯದೆ, ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಅಧಿಕಾರವಿರುವಾಗ ಅರಿತು ನಡೆದುಕೊಳ್ಳಬೇಕು. ಹಣವಿದೆ ಆಸ್ತಿಯಿದೆ ಎಂಬ ಕಾರಣಕ್ಕೆ ಅಸಭ್ಯವಾಗಿ ವರ್ತಿಸುವುದು ಉಚಿತವಲ್ಲ. ಜಗಕೆ ಮಾದರಿಯಾಗಿ ಬಾಳಬೇಕು. ಸಭ್ಯ ಸಂಸ್ಕೃತಿಯ ಹರಿಕಾರರಾಗಬೇಕು. ಪ್ರತಿಯೊಬ್ಬರ ಅಭಿರುಚಿ ಆಸಕ್ತಿ ಹವ್ಯಾಸಗಳು ವಿಭಿನ್ನ.ಆದ್ದರಿಂದ ತಿಳಿದು ನಡೆಯಬೇಕು. ಸವಾಲುಗಳು ಸವಾಲುಗಳು ಏಕಾಏಕಿ ಹರಡಿಕೊಳ್ಳುತ್ತವೆ. ಇನ್ನೇನು ಜೀವನ ಮುಗಿದು ಹೋಯಿತಲ್ಲ ಎನ್ನುವಷ್ಟರಲ್ಲಿ ಭರವಸೆಯ ಬೆಳಕಿನ ಕಿರಣವೊಂದು ಮೂಡುತ್ತದೆ. ಬದುಕಿನ ಏರಿಳಿತಗಳು ಇತ್ತೀಚಿಗೆ ಮೈ ತಾಳಿದ ವಿದ್ಯಮಾನಗಳಲ್ಲ. ಅನಾದಿಕಾಲದಿಂದಲೂ ಈ ಜೀವನ ಇರುವುದೇ ಹೀಗೆ. ಸುಖ ದುಃಖಗಳು ಪ್ರತಿ ಕ್ಷಣವನ್ನು ವರ್ಣಮಯವಾಗಿಸುತ್ತದೆ. ಬದುಕು ನಮಗೆ ಬದುಕುವುದನ್ನು ಕಲಿಸುತ್ತದೆಯೇ? ಎಂಬ ಪ್ರಶ್ನೆ ಕೇಳಬಹುದು. ಬದುಕೇ ಅದಕ್ಕೆ ಉತ್ತರ ನೀಡುತ್ತದೆ. ಜೀವನದಲ್ಲಿ ಬಗೆಬಗೆಯ ಪಾಠಗಳಿವೆ.ಅವುಗಳ ಪಟ್ಟಿ  ನಮ್ಮ ಪದಕೋಶದಲ್ಲೇ ಇಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಜೀವನದಲ್ಲಿ ಕಹಿ ಅನುಭವಾದಾಗಲೇ ಆ ವ್ಯಕ್ತಿಗೆ ಹೊಸ ಜೀವನ ಶುರು ಆದಂತೆ.  ಹೇಗೆಂದರೆ ಇಲ್ಲಿ ಯಾರಿಗೆ ಯಾರೂ ಇಲ್ಲ. ನಮಗೆ ನಾವೇ ಎಲ್ಲ ಅನ್ನೋ ಸತ್ಯ ಆಗಲೇ ಸ್ಪಷ್ಟವಾಗಿ ಅರ್ಥವಾಗೋದು.’ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು. ಮುಳ್ಳಿನ ಗಿಡವಾಗುವುದಕ್ಕಿಂತ, ನೆರಳು ನೀಡುವ  ಫಲಭರಿತ ವೃಕ್ಷವಾಗಬೇಕು. ಕೊನೆ ಹನಿ ನಿನ್ನೆಯದನ್ನು ಚಿಂತಿಸಬಾರದು. ನಾಳೆ ಏನಾಗುತ್ತದೆಂದು ಅತಿಯಾಗಿ ಯೋಚಿಸಬಾರದು. ಇಂದಿನ ಬದುಕನ್ನು ವ್ಯಥೆಗೆ ದೂಡಿ ವ್ಯರ್ಥವಾಗಿ ಮಾಡಿಕೊಳ್ಳಬಾರದು. ವರ್ತಮಾನವೆಂಬುದು ಭಗವಂತನ ಮೌಲಿಕ ಕಾಣಿಕೆಯೆಂದು ಬಾಳಬೇಕು. ಇದೇ ಮಾತನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ ಹಾರಾಡಲಿ ಬಿಡಿ. ಆದರೆ, ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.’ ಜೀವನವೆಂಬುದು, ಹೆಮ್ಮರದ ತುದಿಯಲ್ಲಿ ಕಟ್ಟಿದ ಜೇನುಗೂಡುಗಳಿಂದ ತುಪ್ಪವನ್ನು ತೆಗೆಯುವಂತಿದೆ. ಆ ಕುಶಲತೆಯನ್ನು ಕಲಿತುಕೊಂಡರೆ ಜೀವನದ ಸವಿಜೇನು ಚಪ್ಪರಿಸಬಹುದು. ಜಯಶ್ರೀ.ಜೆ. ಅಬ್ಬಿಗೇರಿ.

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” Read Post »

ಇತರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಪ್ರೇಮ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಸ್ನೇಹದ ಪ್ರೀತಿ” ಒಲವಿನ ಸ್ನೇಹದ ಪ್ರೀತಿ ಅಂದ್ರೆ  ಬೆಳಗ್ಗೆ ಎದ್ದು “ಚಹ ಕುಡಿದೆಯಾ?”ಅಂತ ಕೇಳೋ ಸ್ನೇಹಿತ/ತೆನೀನು ಸುಮ್ನೆ ಇದ್ದಾಗ “ಏನಾಯ್ತು?”ಅಂತ ಅರ್ಥ ಮಾಡ್ಕೊಳ್ಳೊ ಮೌನ.   ಒಲವಿನ ಪ್ರೀತಿ ಸ್ನೇಹ ಅಂದ್ರೆ  ನೀನು ಸೋತಾಗ “ಪರವಾಗಿಲ್ಲ,ಮತ್ತೆ ಪ್ರಯತ್ನಿಸು” ಅಂತ ಹೇಳೋ ಧೈರ್ಯನೀನು ಗೆದ್ದಾಗ ಮೊದಲು ಚಪ್ಪಾಳೆ ತಟ್ಟುವ ಕೈ.   ಅದು ಹೂವಿನ ಹಾಗೆ ಗೊತ್ತಾ ನಿನಗೆ ಜೋರಾಗಿ ಕೂಗಲ್ಲ, ಆದ್ರೆ ಅದರ ವಾಸನೆಗೆ ಮನಸ್ಸು ಹಗುರ ಆಗುತ್ತೆಅದು ದೇವರ ಮುಂದೆ ಹಚ್ಚಿದ ದೀಪದ ಹಾಗೆ,ಜೋರಾಗಿ ಉರಿಯಲ್ಲ,ಆದ್ರೆ ಕತ್ತಲಲ್ಲಿ ದಾರಿ ತೋರಿಸುತ್ತೆ.   ಒಲವಿನ ಪ್ರೀತಿ ಕೇಳಲ್ಲ ಏನೂ,  ಸ್ನೇಹಕ್ಕೆ ಕೊಡೋದಷ್ಟೇ ಗೊತ್ತುಮನಸ್ಸು ತುಂಬಾ ಇದ್ದಾಗ ಹಂಚಿಕೊಳ್ಳೋಕೆ ಭುಜ, ಮನಸ್ಸು.ಖಾಲಿ ಇದ್ದಾಗ ತುಂಬೋಕೆ ಮಾತು.   ಆ ಪ್ರೀತಿ ಇದ್ದರೆ ಸಾಕು ಸಖಿ/ಖ ಬದುಕು ಎಷ್ಟೇ ಕಷ್ಟ ಆದ್ರೂ ಎದೆಯ ಒಂದು ಬೆಚ್ಚಗಿನ ಮೂಲೆಯಲ್ಲಿ  ನಾನು ಸುರಕ್ಷಿತವಾಗಿರುತ್ತೇನೆಎಂಬ ಭಾವ ಸ್ನೇಹಿತ/ತೆ ಎನಿಸಿಕೊಂಡ ಎಲ್ಲರಿಂದಲೂ ಪಡೆಯಲು ಸಾಧ್ಯವಿಲ್ಲ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಇತರೆ

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಸ್ಟಿಸ್ ಸಂದೀಪ್ ಮೆಹತಾ ಅವರು ನಿಮ್ಮ ಪತ್ನಿ ನಿಮ್ಮ ಕೆಲಸದಾಕೆ ಖಂಡಿತವಾಗಿಯೂ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 21ನೇ ಶತಮಾನದತ್ತ ಕಾಲಿಡುತ್ತಿರುವ ಭಾರತೀಯ ಕೌಟುಂಬಿಕ ಬದುಕಿನಲ್ಲಿ ಈ ಹೇಳಿಕೆಯು ಅತ್ಯಂತ ಮಹತ್ವದ್ದೆ೦ದು ದಾಖಲಿಸಬಹುದು.ಅವರ ಈ ಹೇಳಿಕೆಯು ಮದುವೆ ಎನ್ನುವುದು ಗಂಡ ಮತ್ತು ಹೆಂಡತಿ ಇಬ್ಬರ ಪರಸ್ಪರರ ಸಾಂಗತ್ಯದ ಬದುಕು… ಇದನ್ನು ಪರಸ್ಪರರಿಗೆ ಗೌರವ ನೀಡುವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ದಂಪತಿಗಳು ನಿರ್ವಹಿಸಬೇಕೇ ಹೊರತು 21ನೇ ಶತಮಾನಕ್ಕೆ ಅಥವಾ ಪ್ರಸ್ತುತ ದಿನಮಾನಗಳಿಗೆ ಹೊಂದದ ಲಿಂಗ ಸಂಬಂಧಿ ಜವಾಬ್ದಾರಿಗಳಂತೆ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.ಅವರ ಈ ಹೇಳಿಕೆಯು ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳು ಹಾಗೂ ಅದು ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕಾರಣ ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳದು ಎಂಬ ಪುರುಷ ಪಾರಮ್ಯದ ಭಾರತ ದೇಶದ ಲಿಖಿತ ನಿಯಮಗಳ ಕುರಿತು ಪ್ರಶ್ನೆ ಮಾಡುತ್ತಿದೆ. ಕಾನೂನಾತ್ಮಕ ಚೌಕಟ್ಟುಗಳು ಬದಲಾಗುತ್ತಿರುವ ಅಭಿವೃದ್ಧಿಪರ ಸಾಮಾಜಿಕ ಮೌಲ್ಯಗಳ ಜೊತೆಗೆ  ಹೊಂದಿಕೊಂಡು ನಡೆಯುತ್ತಿವೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನುಡಿಗಳು ಪ್ರತಿಪಾದಿಸುತ್ತಿದ್ದು ಪಿತೃ ಸತ್ತಾತ್ಮಕ ಯೋಚನೆಯ ಆಳವಾದ ಬೇರುಗಳನ್ನು ಬುಡ ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು ಸಾಮಾಜಿಕ ಕಾರ್ಯಕರ್ತರು ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ.ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಬೇಕು ಎಂದರೆ ಗೃಹ ಕೃತ್ಯದಲ್ಲಿ ಇರುವ ಘನತೆಯನ್ನುಉಳಿದವರೆಗೂ ಗೊತ್ತು ಮಾಡಿಕೊಡಬೇಕು ಹಾಗೂ ಗೃಹ ಕೃತ್ಯ ಎಂಬುದು ಕೇವಲ ಹೆಣ್ಣು ಮಕ್ಕಳ ಕರ್ತವ್ಯವಲ್ಲ ಬದಲಾಗಿ ಭೂಮಿಯ ಮೇಲೆ ಇರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಇದಾಗಿದೆ ಹಾಗೂ ಇದನ್ನು ಪಾಲಿಸುವುದನ್ನು ನಾವು ಕಲಿಯಲೇಬೇಕು… ಅದೆಷ್ಟೇ ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಕೌಟುಂಬಿಕವಾಗಿ ಗೃಹ ಕೃತ್ಯಗಳನ್ನು ಸಂಭಾಳಿಸಿಕೊಂಡು ನಡೆದರೆ ಮಾತ್ರ ಪುರುಷ ಈ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.ಆಹಾರವನ್ನು ಸೇವಿಸುವ, ಬಟ್ಟೆ ಬರೆಗಳನ್ನು ಧರಿಸುವ, ಮನೆಯೆಂಬ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರು ಕೂಡ ಈ ಮೂಲಭೂತ ಅವಶ್ಯಕತೆಯನ್ನು ಬದುಕಿನ ಭಾಗವಾಗಿ  ತಮ್ಮದಾಗಿಸಿಕೊಳ್ಳಲೇಬೇಕು.ಹೆಣ್ಣು ಮಕ್ಕಳ ಮೇಲೆ ಗೃಹಕೃತ್ಯದ ಭಾರವನ್ನು ಹೊರೆಸಿರುವ ಸಂಪ್ರದಾಯವಾದಿಗಳ ಮೇಲೆ ಸವಾಲೆಸೆಯುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದ್ದು ಗೃಹ ಕೃತ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲಿನ ಅನಗತ್ಯ ಹೊರೆಯನ್ನು ನಿವಾರಿಸಲು ಪ್ರಯತ್ನಿಸಲೇಬೇಕು. ನೋಡಿದಿರಾ ಸ್ನೇಹಿತರೆ! ಅಜ್ಞರ ನೂರಾರು ಮಾತುಗಳಿಗಿಂತ ಪ್ರಾಜ್ಞರ ಒಂದು ಮಾತು, ಒಂದು ವಾಕ್ಯ ಬೀರುವ ಪರಿಣಾಮ ಬಹಳ ಮೌಲಿಕವಾದದ್ದು ಗುರುತರವಾದದ್ದು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಒಂದು ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚಿಂತನೆಯ ಒಂದು ಕಿಡಿಯನ್ನು ಹಬ್ಬಿಸಿದ್ದು  ಹೆಣ್ಣು ಮಕ್ಕಳ ಹಿತರಕ್ಷಣೆಯ ಕಾನೂನುಗಳನ್ನು ರಕ್ಷಿಸುವಲ್ಲಿ  ಪರಸ್ಪರರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ನ್ಯಾಯಯುತವಾದ, ಸೌಹಾರ್ದತೆಯಿಂದ ಕೂಡಿದ ಹಾಗೂ ಸಮತೋಲನದಿಂದ ಕೂಡಿದ ಸಾಂಗತ್ಯದ ವೈವಾಹಿಕ  ಬಂಧನಗಳು ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಲ್ಲವು.ಹೊಸ ಬಗೆಯ ವಿವಾಹಗಳು ಲಿಂಗ ಸಮಾನತೆಯನ್ನು ಹೊಂದಿದ್ದು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಹಂಚಲ್ಪಡುವ ನಿಟ್ಟಿನಲ್ಲಿ ಭಾರತ ದೇಶವು ಬದಲಾಗುತ್ತಿರುವುದು ಸ್ವಾಗತಾರ್ಹವಾಗಿದೆ.ಲಿಂಗ ಸಮಾನತೆಯ ಕೂಗು ಕಳೆದ ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿದ್ದರು ಕೂಡ ಈ ಕುರಿತು ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ…. ಪ್ರಸ್ತುತ ದಿನಮಾನಗಳಲ್ಲಿ ಪುರುಷನಷ್ಟೇ ವಿದ್ಯಾರ್ಹತೆಯನ್ನು ಹೊಂದಿರುವ ಮಹಿಳೆ  ಆತನಷ್ಟೇ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿ ತನ್ನ ಮೇಲೆ ಅಧಿಕಾರ ಚಲಾಯಿಸುವ ಗಂಡನಾಗದೆ, ಬದುಕನ್ನು ಹಂಚಿಕೊಳ್ಳುವ ಸಂಗಾತಿಯಾಗಲಿ ಎಂದು ಆಕೆ ಬಯಸುತ್ತಾಳೆ. ತನ್ನ ಹಕ್ಕುಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುವ ಆಕೆ ಪುರುಷ ಪ್ರಧಾನ ಸಮಾಜದ ಬಹುತೇಕ  ರೀತಿ ನೀತಿಗಳನ್ನು ಈಗಾಗಲೇ ಧಿಕ್ಕರಿಸುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾನತೆಯ ಬದುಕನ್ನು ಹಂಚಿಕೊಂಡು ಬಾಳಲು ಇಚ್ಚಿಸುತ್ತಿದ್ದಾಳೆ. ಇದರ ನಿಜವಾದ ತತ್ವವನ್ನು ಅರಿತಿರುವ ಬುದ್ಧಿಜೀವಿಗಳು ಕೂಡ ಇದನ್ನು ಅನುಮೋದಿಸಿದ್ದು  ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ  ತನ್ನದೇ ಆದ ರೀತಿಯಲ್ಲಿ ಒಪ್ಪಿಗೆಯ ಮುದ್ರೆಯನ್ನು ಒತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀಣಾ ಹೇಮಂತಗೌಡ ಪಾಟೀಲ್

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ

“ದೊಡ್ಡ ಸಿರಿ – ಹೃದಯ ಸಿರಿ” ಜಯಶ್ರೀ.ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ದೊಡ್ಡ ಸಿರಿ – ಹೃದಯ ಸಿರಿ” ಒಬ್ಬ ವ್ಯಕ್ತಿ ಅವನ ಗೆಳೆಯನ ಮನೆಗೆ ಬಂದಿದ್ದ. ‘ಈ ಮನೆ ಯಾರದು?’ ಎಂದು ಗೆಳೆಯನಿಗೆ ಕೇಳಿದ. ವ್ಯಕ್ತಿ ಹೇಳಿದ ‘ಇದು ನನ್ನದೇ ಮನೆ ಎಂದು. ಅದನ್ನು ಕೇಳಿದ ಅಡುಗೆ ಮನೆಯಲ್ಲಿದ್ದ ಆ ವ್ಯಕ್ತಿಯ ಪತ್ನಿ ಮುಗುಳುನಗೆಯನ್ನು ಬೀರಿ ಸುಮ್ಮನಾದಳು. ಏಕೆಂದರೆ ಆ ಮನೆಯನ್ನು ಆಕೆಯ ತಂದೆ ಅಂದರೆ ಮಾವ ಕಾಣಿಕೆಯಾಗಿ ನೀಡಿದ್ದ. ಆದ್ದರಿಂದ ಆತನ ಪತ್ನಿ ಮುಗುಳ್ನಗೆ ಬೀರಿ ತನ್ನದೆಂದು ಹೇಳುತ್ತಾನೆ ಹೇಳಲಿ ಎಂದು ಮೌನವಾದಳು. ಹಾಗೆಯೇ ಎಲ್ಲವನ್ನೂ ನಾವು ನಿಸರ್ಗದಿಂದ ಪಡೆದು, ಈ ಮನೆ ನನ್ನದು ಈ ಹೊಲ ನನ್ನದು ಕಣ್ಣಿಗೆ ಕಂಡಿದ್ದೆಲ್ಲ ನನ್ನದು ಎಂದು ಹೇಳುತ್ತೇವೆ. ‘ನಾನು ಆಗರ್ಭ ಶ್ರೀಮಂತ.’ ಎಂದು ಜಂಭದಿAದ ಹೇಳಲು ಮುಂದಾಗುತ್ತೇವೆ. ಇದನ್ನು ಕೇಳಿದ ನಿಸರ್ಗದೇವತೆ ಮರಳು ಮಾನವ ಏನೂ ತಿಳಿಯದೇ ಹೇಳುತ್ತಾನೆಂದು ಮೌನ ವಹಿಸುತ್ತಾಳೆ.ಕೂಡಿಡುವ ಸ್ವಭಾವಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುವುದಿಲ್ಲ ಅಂತ ಗೊತ್ತಿದ್ದರೂ ಭೂಮಾತೆಯ ಗರ್ಭವನ್ನು ಬಗೆದು ಕಾಡುಗಳನ್ನು ಕಡಿದು ಪ್ರಾಣಿಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ಸ್ವಾರ್ಥ ಜೀವನ ನಡೆಸುವ ಪ್ರಕೃತಿ ಮಾತೆ ಮುನಿಸಿಕೊಂಡಾಗ ಮನುಷ್ಯನದ್ದು ಏನೂ ನಡೆಯುವುದಿಲ್ಲ. ಸೃಷ್ಟಿಯಲ್ಲಿರುವ ಯಾವ ಪ್ರಾಣಿಗಳು ತನಗೆ ಹೊಟ್ಟೆ ತುಂಬಿದ ಮೇಲೆ ಯಾವ ಪ್ರಾಣಿಗಳನ್ನು ಭೇಟಿ ಆಡಲು ಹೋಗುವುದಿಲ್ಲ. ತನ್ನ ಗಾತ್ರಕ್ಕಿಂತ ೧೫೦ ಪಟ್ಟು ಜಾಸ್ತಿ ಭಾರವನ್ನು ಹೊರುವ ಇರುವೆ ಸಕ್ಕರೆ ಡಬ್ಬದ ಸುತ್ತ ಸುತ್ತುತ್ತಿದ್ದರೂ ಸಕ್ಕರೆ ಡಬ್ಬಿಯನ್ನು ಹೊತ್ತಯ್ಯುವ ಯೋಜನೆ ಹಾಕುವುದಿಲ್ಲ. ಮಳೆಗಾಲದಲ್ಲಿ ಆಹಾರ ಅಭಾವ ಕಾಡುವುದೆಂದು ಮುಂದಾಲೋಚನೆಯಿAದ ಸಂಗ್ರಹ ಮಾಡುತ್ತದೆ. ಆದರೆ ಮುಂದಿನ ಪೀಳಿಗೆಗೆ ಆಗುವಷ್ಟು ಬೇಕೆಂದು ದುರಾಸೆಯಿಂದ ಹೆಚ್ಚೆಚ್ಚು ಕೂಡಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ಬೇಡವಾದಾಗಲೂ ತಿನ್ನುವ, ಅವಶ್ಯಕತೆ ಇಲ್ಲದಿರುವಾಗಲೂ ಕೊಳ್ಳುವ, ತನಗೆ ಎಲ್ಲವೂ ಸಿಗಬೇಕೆನ್ನುವ, ತನ್ನ ಹತ್ತಿರ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿರಬೇಕೆಂದು ಕೂಡಿಡುವ ಸ್ವಭಾವ ಹೊಂದಿದ್ದಾನೆ.ಹಣವಿದ್ದರೆ?ಅರೆ! ಇದೇನು ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ಅಂತಿರೇನು? ಪ್ರತಿಯೊಬ್ಬರೂ ಅದನ್ನು ತಮ್ಮದಾಗಿಸಿಕೊಳ್ಳಬೇಕೆಂದೇ ಹಗಲು ರಾತ್ರಿ ಹಂಬಲಿಸುತ್ತಾರೆ. ಬಹುಶಃ ಅದರ ಹಿಂದೆ ಬೀಳದವರು ಬಹುತೇಕ ಇಲ್ಲವೆಂದರೂ ಅತಿಶಯೋಕ್ತಿ ಏನಲ್ಲ. ಸಿರಿತನ ಒಂದಿದ್ದರೆ ಸಾಕು ಮನದಲ್ಲಿಯ ಬಯಕೆಗಳನ್ನೆಲ್ಲ ಈಡೇರಿಸಬಹುದು. ನಮ್ಮವರಿಗೆ ಏನೇನು ಬೇಕೋ ಅದನ್ನು ಅವರು ಬಾಯಿ ತೆಗೆಯುವ ಮುನ್ನವೇ ಕಣ್ಮುಂದೆ ಹಿಡಿಯಬಹುದು. ನಮ್ಮಲ್ಲಿ ಹಣವಿದ್ದರೆ ಎಲ್ಲ. ಇಲ್ಲದಿದ್ದರೇನೂ ಇಲ್ಲ ಎನ್ನುವ ಮನೋಭಾವ ಬೇರೂರಿ ಬಿಟ್ಟಿದೆ. ಲಕ್ಷಿö್ಮದೇವಿಯ ಮಹಿಮೆಗೆ ಮರಳಾಗದವರು ಯಾರಿದ್ದಾರೆ? ಹಣವಂತನ ಜೀವನದಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂಬ ಸುಳ್ಳು ಸಂಗತಿ ಬೇರೆ ತಲೆಯಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ. ಶ್ರೀಮಂತಿಕೆ.ಶ್ರೀಮAತಿಕೆ ಅನ್ನುವುದು ಗೆಲುವಿನಂತೆ ವ್ಯಾಖ್ಯಾನಿಸುವುದು ಸುಲಭವಲ್ಲ. ಏಕೆಂದರೆ ಒಬ್ಬೊಬ್ಬರು ಒಂದೊAದು ಅರ್ಥ ಕೊಡುತ್ತಾರೆ. ಸಾಮಾನ್ಯವಾಗಿ ಬಹುತೇಕರು ಹೇಳುವುದು ಕೈ ತುಂಬ ಹಣ ಕೈಗೊಂದು ಆಳು ಕಾಲಿಗೊಂದು ಆಳು ಇದ್ದರೆ ಅವರು ಶ್ರೀಮಂತರು. ಮನೆಯಲ್ಲಿ ಲಕ್ಚಿö್ಮÃ ನೆಲೆಸಿರಬೇಕು. ಸಿರಿ-ಸಂಪತ್ತು ಆಸ್ತಿ ಐಶ್ವರ್ಯ ಹಣಕಾಸಿನ ಸಮೃದ್ಧತೆ ಯಾವುದಕ್ಕೂ ಕೊರತೆ ಇರಬಾರದು. ಲೆಕ್ಕ ಹಾಕದೇ ಖರ್ಚು ಮಾಡುವಷ್ಟು ಹಣವಿರಬೇಕು. ಐಷಾರಾಮಿ ಬದುಕು ಸಾಗಿಸಲು ಯಾವುದೇ ಅಡೆತಡೆ ಇರಬಾರದು. ಏನೇ ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇರಬೇಕು. ಬಯಸಿದ್ದನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯವುದು. ಬಂಧು ಬಾಂಧವರ ಮುಂದೆ ನಾವು ಹೆಂಗಿದಿವಿ ನೋಡಿ ಅಂತ ಗರ್ವದಿಂದ ಮೆರೆಯಬೇಕು.ಮಾನದಂಡಹೀಗೆ ಶ್ರೀಮಂತಿಕೆಯ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ನೋಡಿದಾಗ ಶ್ರೀಮಂತಿಕೆ ಎಂಬುದು ಕೇವಲ ಹಣಕಾಸಿನ ಶ್ರೀಮಂತಿಕೆಯೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಶ್ರೀಮಂತಿಕೆಯನ್ನು ಅಳೆಯಲು ಹಣಕಾಸಿನ ಒಂದೇ ಒಂದು ಮಾನದಂಡ ಸಾಕೇ? ಎಂಬ ಪ್ರಶ್ನೆಯೂ ಅದರ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತದೆ. ದೈಹಿಕ, ಮಾನಸಿಕ ಸ್ಥಿತಿಗತಿ ಇವು ಯಾವವೂ ಲೆಕ್ಕಕ್ಕೆ ಬರುವುದಿಲ್ಲವೇ ಎಂಬ ಸಂದೇಹವೂ ಬರುತ್ತದೆ.ಆರೋಗ್ಯ ಸಂಪತ್ತುಮೇಲ್ನೋಟಕ್ಕೆ ಹಣಕಾಸಿನ ಸ್ಥಿತಿಗತಿ ಸಿರಿವಂತಿಕೆಯನ್ನು ನಿರ್ಧರಿಸುತ್ತದೆ ಹೌದಾದರೂ ವಾಸ್ತವವಾಗಿ ಹೇರಳ ಹಣವೊಂದೇ ಶ್ರೀಮಂತಿಕೆಯಲ್ಲ. ಕುಬೇರನ ವಂಶಸ್ತನೇ ಇರಬೇಕು ಎನ್ನುವಷ್ಟು ಶ್ರೀಮಂತಿಕೆ ಇದ್ದರೂ ದೇಹ ರೋಗದ ಗೂಡಾಗಿದ್ದರೆ ಬಯಸಿದ್ದನ್ನು ಬಾಯಿಗೆ ಹಾಕದೇ ಕೊರಗಬೇಕಾಗುತ್ತದೆ. ಕಣ್ಮುಂದೆ ಏನೆಲ್ಲ ಇದ್ದರೂ ತಿನ್ನುವ ಭಾಗ್ಯ ಅವನಿಗಿರುವುದಿಲ್ಲ. ಅವನ ಪಾಲಿಗೆ ಔಷಧಿಯೇ ಆಹಾರ ಇಲ್ಲಿ ನಾನು ಹೇಳ ಹೊರಟಿದ್ದು ಇಷ್ಟೆ ಹಣದಿಂದ ಔಷಧಿಯನ್ನು ಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಿರಿಯರು ಹೇಳಿದ್ದು ಆರೋಗ್ಯ ಸಂಪತ್ತಿಗಿAತ ದೊಡ್ಡ ಸಂಪತ್ತಿಲ್ಲವೆAದು.ಹಣವಿದ್ದೂ , , , ,ಹಣಕಾಸಿನ ಅನುಕೂಲತೆ ಇದ್ದು, ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಸಾಕ್ಷಾತ್ ನರಕ ದರ್ಶನ. ಹಣದಿಂದ ಒಂದೊಳ್ಳೆ ಹಾಸಿಗೆಯನ್ನು ಕೊಳ್ಳಬಹುದು. ಆದರೆ ನಿದ್ದೆಯನ್ನಲ್ಲ. ಒಳ್ಳೆಯ ಮನೆ ಕೊಂಡುಕೊಳ್ಳಬಹುದು. ಆತ್ಮೀಯರ ಪ್ರೀತಿ ವಿಶ್ವಾಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದು ಅದನ್ನು ಉಳಿಸುವ ಬೆಳೆಸುವ ಜ್ಞಾನವಿರದಿದ್ದರೆ ಸಿರಿವಂತಿಕೆ ಅಧೋಗತಿ ಕಾಣುವುದು ಖಂಡಿತ. ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ಜ್ಞಾನವನ್ನಲ್ಲ. ಇವೆಲ್ಲ ಉದಾಹರಣೆಗಳಿಂದ ತಿಳಿದು ಬರುವುದೇನೆಂದರೆ ಹಣವೊಂದೇ ಸಿರಿವಂತಿಕೆಯಲ್ಲ. ಯಾರಿಗೆ ಯಾವುದು ಇಲ್ಲವೋ ಅದನ್ನು ಪಡೆದುಕೊಳ್ಳಲು ಹೋರಾಡಿ ಪಡೆಯುವುದು ಶ್ರೀಮಂತಿಕೆ.ಕೃಷಿಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕದಿರುವ ಇರುವೆಯ ಬದುಕಿನಿಂದ ನಾವು ಕಲಿಯಬೇಕಾದ್ದು ಬಹಳ ಇದೆ. ಯಶಸ್ವಿ ಸಹಬಾಳ್ವೆ, ವ್ಯವಸ್ಥಿತ, ಅತ್ಯಂತ ಸಮರ್ಥ ಜೀವನ ಕೌಶಲವನ್ನು ಅಳವಡಿಸಿಕೊಳ್ಳಬೇಕಿದೆ. ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ೮೦೧ ಕೋಟಿ ಜನರ ಪ್ರತಿಯೊಬ್ಬರಿಗೂ ಸರಾಸರಿ ಹನ್ನೆರಡುವರೆ ಲಕ್ಷ ಇರುವೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಈ ಅಲ್ಪಗಾತ್ರದ ಜೀವಿ ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ. ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆಯೂ ಇದೆ. ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯೇತರ ಪ್ರಭೇದ ಇರುವೆ ಲೋಕದಲ್ಲಿದೆ. ರೈತ ಇರುವೆ ಎಂದೇ ಹೆಸರಾಗಿರುವ ಈ ಇರುವೆಗಳು ನಿಧಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂದ್ರಗಳನ್ನು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಧುನಿಕ ಮನುಷ್ಯ ಪ್ರಕೃತಿ ಪ್ರೇಮಿಯಾಗಿ ಬಾಳಬೇಕಿದೆ.ಕಾರಣಪರಿಸರ ಸ್ನೇಹಿ ಬದುಕನ್ನು ಬದುಕುವ ಇರುವೆಗಳಂತೆ ನಾವು ಆಪತ್ಕಾಲಕ್ಕೆ ಮಾತ್ರ ಕೂಡಿಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬಳಿ ಎಷ್ಟು ಹಣವಿದೆ ಎಂದು ನಮಗೆ ತಿಳಿರುತ್ತದೆ. ಆದರೆ ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ಸಮಯ ಬರುವ ಮುನ್ನ ಶ್ರೀಮಂತಿಕೆಯ ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಎಲ್ಲವೂ ನನಗೆ ಬೇಕು ಎಂಬ ಭಾನೆಯೇ ಕಾರಣವಾಗಿದೆ. ಈ ಭಾವ ನಾಶವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಮನಸ್ಸು ಸುಮಧುರ ಸ್ಥಿತಿಯಲ್ಲಿದ್ದಾಗ ಆರೋಗ್ಯಕರ ಭಾವನೆಗಳು ಹೊರಹೊಮ್ಮುತ್ತವೆ.ದೊಡ್ಡ ಸಿರಿ ಶ್ರೀಮಂತರೆAದು ಅಟ್ಟಹಾಸ ಮೆರೆದವರು ಯಾರೂ ಜನಮಾನಸದ ನೆನಪಿನಲ್ಲಿ ಉಳಿದಿಲ್ಲ. ಹೃದಯ ಸಿರಿವಂತರು ಮಾತ್ರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾವ ಮಾಧುರ್ಯದ ಶ್ರೀಮಂತಿಕೆಯಿAದ ಕೂಡಿರುವ ಜೀವನ ಜನಪ್ರಿಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಿರಿವಂತಿಕೆ ಕೇವಲ ಪಡೆಯುವುದರÀಲ್ಲಿಲ್ಲ. ಅವಶ್ಯವಿರುವವರಿಗೆ ದಾನ ಮಾಡುವುದರಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿದೆ. ಚೂರಾದ ಮನಗಳನ್ನು ಪೋಣಿಸೋಣ. ಇನ್ನಾದರೂ ಎಚ್ಚೆತ್ತುಕೊಂಡು ಹೃದಯಸಿರಿಯೇ ದೊಡ್ಡ ಸಿರಿಯೆಂದು ಸರಿಯಾಗಿ ತಿಳಿದುಕೊಂಡು ಒಬ್ಬರಿಗೊಬ್ಬರು ಅಕ್ಕರೆಯ ಸಕ್ಕರೆಯ ತಿನಿಸುತ್ತ ಮಾನವೀಯತೆಯ ಸಿರಿವಂತಿಕೆಯನ್ನು ಮೆರೆಯೋಣವಲ್ಲವೇ? ಜಯಶ್ರೀ.ಜೆ. ಅಬ್ಬಿಗೇರಿ

“ದೊಡ್ಡ ಸಿರಿ – ಹೃದಯ ಸಿರಿ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

“ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” ವಿಶೇಷ ಲೇಖನ ಎನ್.ವಿ.ರಮೇಶ್

ಮಹಿಳಾ ಸಂಗಾತಿ ಎನ್.ವಿ.ರಮೇಶ್ “ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” “ನಾವು ಹಿಂದಿನ ಗ್ರಾಮೀಣ ಮಹಿಳೆಯರಲ್ಲ – ಇಂದು ವಿಶ್ವ ಮಾನ್ಯತೆ ಪಡೆದವರು” “ಪುಟ್ಟಮರಿ ಪುಟ್ಟಮರಿ ಏನು ಮಾಡುವೆ?ಹಾಲು ಕುಡಿದು ಗಟ್ಟಿಯಾಗಿ ನಾನು ಆಡುವೆ” ಹಾಡಿನ ಈ ಸಾಲುಗಳನ್ನು ಕೇಳಿದಾಗ ನಿಮ್ಮ ಕಣ್ಣು ಮುಂದೆ ಏನು ಬರುತ್ತದೆ? ಕೃಷ್ಣನ ಬಾಲರೂಪದಲ್ಲಿ ನಾವು ಅನೇಕ ಚಿತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ, ಹಾಲು ಕುಡಿಯುತ್ತಾ, ಕೈಯಲ್ಲಿ ಬೆಣ್ಣೆ ಹಿಡಿದುಕೊಂಡಿರುವ ಮುದ್ದು ಬಾಲಕೃಷ್ಣನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹುಟ್ಟಿದ ನಂತರ ತಾಯಿಯ ಹಾಲು, ನಂತರ ಮೇಲಿನ(ಹಸುವಿನ) ಹಾಲು ಹಾಗೂ ಮೂರರಿಂದ ಐದು ವರ್ಷವಾಗುವವರೆಗೆ ಪ್ರತಿನಿತ್ಯ ಹಸಿವಿನ ಹಾಲನ್ನು ಕೊಡುತ್ತಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ಕೊಡುವ ತಾಯಂದಿರ ಜೊತೆಗೆ ಈ ಹಾಲು ಉತ್ಪಾದಿಸುವ ಹೈನುಗಾರಿಕೆಯ ಕ್ಷೇತ್ರದಲ್ಲಿ ಅನೇಕ ಭಾರತೀಯ ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣ ಎಂದು ಗಮನಿಸಿದಾಗ ಭಾರತದ ಸಾವಿರಾರು ಹಳ್ಳಿಗಳಲ್ಲಿ ಮಹಿಳೆಯರು ಹೈನುಗಾರಿಕೆ ಕ್ಷೇತ್ರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಸಹಕಾರ ತತ್ವದ ಡೈರಿಗಳ ಮೂಲಕ ತಾವು, ತಮ್ಮ ಕುಟುಂಬ, ತಮ್ಮ ಹಳ್ಳಿ ಇವುಗಳನ್ನು ಅಭಿವೃದ್ಧಿಪಡಿಸಿರುವುದಲ್ಲದೇ ರಾಷ್ಟಿçÃಯ ಅಭಿವೃದ್ಧಿಗೂ ಸತತ ತಮ್ಮ ಹಾಲು ಕೊಡುತ್ತಾ, ಪುರುಷರೊಂದಿಗೆ ಸರಿಸಮಾನವಾಗಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಅರಿಕಾರರಾಗಿದ್ದಾರೆ. ಈಗಲೂ ಎಷ್ಟೋ ಜನ ಬೆಳಗ್ಗೆ ಒಂದು ಗ್ಲಾಸ್ ಹಾಲು ಕುಡಿಯುತ್ತಾರೆ. ಹಾಗೂ ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಹಾಲನ್ನು ಕುಡಿದು ಮಲಗುವ ಪದ್ಧತಿ ಬಹಳ ಜನರಲ್ಲಿದೆ. ಸ್ವಲ್ಪ ನೆಗಡಿ, ಕೆಮ್ಮು, ಮೈಕೈನೋವಿದ್ದರೆ, ರಾತ್ರಿ ಮಲಗುವ ಮೊದಲು ಕುಡಿಯುವ ಒಂದು ಗ್ಲಾಸ್ ಹಾಲಿಗೆ ಕೊಂಚ ಅರಿಶಿನ, ಒಂದೆರಡು ಜಜ್ಜಿದ ಮೆಣಸು ಹಾಕಿ ಕುಡಿದರೆ, ಚೆನ್ನಾಗಿ ರಾತ್ರಿ ನಿದ್ದೆ ಬರುವುದಲ್ಲದೇ ಬೆಳಗ್ಗಿನ ಹೊತ್ತಿಗೆ ಆರೋಗ್ಯ ಸುಧಾರಿಸಿಕೊಳ್ಳುತ್ತದೆ ಎಂಬ ಅನುಭವ ನನ್ನಂತಹವರದು. ಆರೋಗ್ಯ ರಕ್ಷಣೆಗೆ ಹಾಲು ಪರಿಪೂರ್ಣ ಆಹಾರ ಎಂದು ತಜ್ಞರು ಹೇಳುತ್ತಾರೆ. ನಂತರದ ಕಾಲದಲ್ಲಿ ಹಸು/ಎಮ್ಮೆ ಹಾಲಿಗೆ ಪರ್ಯಾಯವಾಗಿ ಅನೇಕ ಕೃತಕ ಹಾಲಿನ ಪುಡಿಗಳು, ಸುವಾಸನೆ ಬೀರುವ ಹಾಲು, ಇವೆಲ್ಲಾ ಮಾರುಕಟ್ಟೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲಿ ಜೂನ್ ಒಂದರಂದು “ವಿಶ್ವ ಹಾಲಿನ ದಿನ”ವನ್ನು ಆಚರಿಸುತ್ತಾರೆ. ಹೀಗಾಗಿ ಈ ದಿನದ ಮಹತ್ವವನ್ನು ಸಂಕ್ಷಿಪ್ತವಾಗಿ ಈಗ ತಿಳಿಯೋಣ. ಜೂನ್ ಒಂದರಂದು ವಿಶ್ವದಾದ್ಯಂತ ಆಚರಿಸುವ ವಿಶ್ವ ಹಾಲು ದಿನಾಚರಣೆ ಯಂದು ಹಾಲು ಹಾಗೂ ಅದಕ್ಕೆ ಸಂಬಂಧಪಟ್ಟ ಹೈನುಗಾರಿಕೆ ವಿಭಾಗದ ಬಗ್ಗೆ ಕೊಂಚ ಗಮನಿಸೋಣ.ಈ ದಿನಾಚರಣೆಯ ಕೇಂದ್ರೀಕೃತ ಗಮನವು ಜನರ ಪಥ್ಯ-ಆಹಾರದಲ್ಲಿಯ ಹಾಲಿನ ಮಹತ್ವದ ಅರಿವಿನ ಬಗ್ಗೆ ಇದೆ. ಒಂದೆಡೆ ನಮ್ಮ ಆಹಾರ ಉತ್ಪಾದನೆಯ ಮೇಲೆ ಹಾಲಿನ ಪರಿಣಾಮ ಗಮನಿಸಿದರೇ ಇನ್ನೊಂದೆಡೆ ಹೈನುಗಾರಿಕೆಯಲ್ಲಿ ಇರುವವರ ಜೀವನ ಮಟ್ಟದ ಬಗ್ಗೆ ಇದೆ. ಹಾಲಿನ ಉತ್ಪನ್ನಗಳಾದ, ಮೊಸರು, ಬೆಣ್ಣೆ, ಚೀಸ್, ಪನ್ನೀರ್ ಇವೆಲ್ಲಾ ನಮ್ಮ ದೇಹಕ್ಕೆ ಅವಶ್ಯಕವಾದ ಜೀವಸತ್ವಗಳು, ಖನಿಜಗಳು, ಇವುಗಳನ್ನು ಪೂರೈಸಿ ನಮ್ಮ ಜೀವನಶೈಲಿಯನ್ನು ಆರೋಗ್ಯವಂತ ಜೀವನಕ್ಕೆ ಕೊಂಡೊಯ್ಯುವುದು. ಹಾಲು ನಮ್ಮ ಮೂಳೆಗಳ ರಕ್ಷಣೆಗೆ ಬೇಕಾದ ಕ್ಯಾಲ್ಸಿಯಂನ್ನು ಕೊಡುತ್ತದೆ. ಅಲ್ಲದೇ ನಮಗೆ ಬೇಕಾದ ಉತ್ತಮ ಗುಣಮಟ್ಟದ ಸಸಾರಜನಕ, ಅತ್ಯಾವಶ್ಯಕವಾದ ಬಿ-೧೨ ಹಾಗೂ ಡಿ ಜೀವಸತ್ವಗಳನ್ನು ಪೂರೈಸುತ್ತದೆ. ಅಲ್ಲದೇ ಇದು ಹೃದಯ ರೋಗ, ಮಂಡಿಯ ಮೂಳೆ ಸವೆಯುವುದು, ಹಾಗೂ ಮಧುಮೇಹ-೨ ಇವುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಹಾಲು ಪೋಟ್ಯಾಸಿಯಂದ ಉತ್ತಮ ಮೂಲವಾಗಿದ್ದು, ಇದು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ೨೦೨೫ರಲ್ಲಿ ಚಿಲಿ ದೇಶದ ಸಾಂಟಿಯಾಗೋದಲ್ಲಿ ನಡೆದ ಐ.ಡಿ.ಎಫ್. ವಿಶ್ವ ಹೈನುಗಾರಿಕೆ ಸಮಾವೇಶದಲ್ಲಿ, ಭಾರತದ ರಾಷ್ಟಿçÃಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮೀನೇಶ್ ಷಾಅವರು ತಮ್ಮ ಉಪನ್ಯಾಸದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿಯ ಮಹಿಳೆಯರ ಸಬಲೀಕರಣಕ್ಕಾಗಿ ಭಾರತ ದೇಶದ ಮುಖ್ಯ ಘಟ್ಟಗಳ ಬಗ್ಗೆ ಒತ್ತಿ ಹೇಳಿದರು. ಭಾರತ ದೇಶದಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದನೆಯನ್ನು ಸಾಧಿಸಿರುವುದರ ಜೊತೆಗೆ ದೇಶದಾದ್ಯಂತ ಗ್ರಾಮೀಣ ಸಮುದಾಯಗಳಲ್ಲಿಯ ಮಹಿಳೆಯರ ಸಾಮಾಜಿಕ ಪರಿವರ್ತನೆಗೆ ವೇಗ ದೊರತಿರುವುದರ ಬಗ್ಗೆ ಇವರು ವಿವರಿಸಿದರು. ನಮ್ಮ ದೇಶದಲ್ಲಿ ಸಣ್ಣ ಪ್ರಮಾಣದ ಕೃಷಿ ವ್ಯವಸ್ಥೆ ಇರುವುದರಿಂದ, ದೇಶದಲ್ಲಿಯ ೨,೩೦೦೦೦ ಗ್ರಾಮೀಣ ಹಾಲು ಸಹಕಾರ ಸಂಸ್ಥೆಗಳು ಹದಿನೆಂಟು ದಶಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಜೀವನ ನೀಡಿವೆ. ಸಹಕಾರಿ ಕ್ಷೇತ್ರದ ಸದಸ್ಯರಲ್ಲಿ ಮೊದಲು ೩೫% ಜನ ಮಹಿಳೆಯರಿದ್ದರು. ಇದು ಸತತವಾಗಿ ಬೆಳೆಯುತ್ತಾ ಒಟ್ಟೂ ಸದಸ್ಯತ್ವದಲ್ಲಿ ೫೦%ರಷ್ಟು ಈಗ ಮಹಿಳೆಯರಿದ್ದಾರೆ. ನಮ್ಮ ಪ್ರತಿನಿತ್ಯದ ಡೈರಿ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಇದು ಸಣ್ಣ ಪ್ರಮಾಣದ ಹೈನುಗಾರಿಕೆ ಕೃಷಿ ವ್ಯವಸ್ಥೆ. ಇಲ್ಲಿ ಉತ್ಪಾದನೆ ಮಾಡುವವರು ಸಹಸ್ರಾರು ಜನ ೯೨% ಪ್ರಮಾಣ ಹೈನುಗಾರಿಕೆ ಕೃಷಿ ಮಾಡುವವರಲ್ಲಿ ೯೨% ಜನ ಒಂದರಿAದ ನಾಲ್ಕು ಹಸು ಅಥವಾ ಎಮ್ಮೆ ಹೊಂದಿದ್ದಾರೆ. ಇದು ೮೦ ದಶಲಕ್ಷ ಗ್ರಾಮೀಣ ಮನೆಗಳ ಜೀವನಕ್ಕೆ ಅನುಕೂಲ ಒದಗಿಸಿ ಕೊಟ್ಟಿದ್ದು, ಹಾಲಿನಿಂದ ಕುಟುಂಬದ ಸದಸ್ಯರಿಗೆ ಪೌಷ್ಠಿಕತೆ ದೊರೆಯುತ್ತಿದೆ. ಸಹಕಾರ ತತ್ವದ ಈ ಮಾದರಿ ಸದ್ಯದಲ್ಲಿ ಮಹಿಳಾ ಸಬಲೀಕರಣದ ಒಂದು ದಾರಿಯಾಗಿದೆ. ಇದು ಅವರವರ ಮನೆಗಳಲ್ಲೇ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರö್ಯ ಹಾಗೂ ಅಧಿಕಾರ ಕೊಡಿಸಿದೆ. ಅಲ್ಲದೇ ಡಿಜಿಟಲೀಕರಣ ಇವರಿಗೆ ಬ್ಯಾಂಕ್ ಖಾತೆ ಸಂಪರ್ಕ, ಅನನ್ಯತೆಯ ದೃಢೀಕರಣ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಸಹಕಾರಿ ಸಂಸ್ಥೆಗಳ ಸದಸ್ಯರಾಗುತ್ತಿದ್ದಾರೆ. ಒಟ್ಟೂ ಸಹಕಾರಿ ಸಂಸ್ಥೆಗಳು ಪ್ರತಿದಿನ ೬೮ ದಶಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಮಹಿಳೆಯರು ೨೪ ದಶಲಕ್ಷ ಲೀಟರ್ ಹಾಲಿನ ತಮ್ಮ ಸಂಗ್ರಹದ ಪಾಲನ್ನು ಕೊಡುತ್ತಿದ್ದಾರೆ.ಮಹಿಳೆಯರಿಗೆ ಇದರಿಂದ ಸಂಪಾದನೆಗೆ ನೇರ ಮಾರ್ಗ ಸಿಕ್ಕಿದ್ದು, ಕುಟುಂಬದ ಕಲ್ಯಾಣಕ್ಕಾಗಿ, ಶಿಕ್ಷಣ, ಆರೋಗ್ಯ, ಉತ್ತಮ ಜೀವನ ಮಟ್ಟಗಳಿಗಾಗಿ ಅವರು ಈ ಹಣವನ್ನು ತೊಡಗಿಸಲು ಅವಕಾಶ ಸೃಷ್ಟಿಸಲಾಗಿದೆ. ಇದು ಮಹಿಳೆಯರ ವಿಶ್ವಾಸ ಹೆಚ್ಚು ಮಾಡಿ ಅವರು ಕುಟುಂಬ ಹಾಗೂ ಸಮುದಾಯಗಳ ವಿಷಯಗಳಲ್ಲಿ ನಿರ್ಧಾರ ಮಾಡುವ ಮುಖ್ಯ ಪಾತ್ರವನ್ನು ಕೊಟ್ಟಿದೆ. ಗಮನಿಸಿ ನೋಡಿದರೆ, ಹೈನುಗಾರಿಕೆಗೆ ಸಂಬAಧಪಟ್ಟ ಕೆಲಸಗಳಲ್ಲಿ ಶೇಕಡಾ ೬೦ ರಿಂದ ಶೇಕಡಾ ೯೫ ರವರೆಗೆ ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಶೇಕಡಾ ೫೦ ರಷ್ಟು ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಸಫಲರಾಗಿದ್ದಾರೆ.ಇಡೀ ಜಗತ್ತಿನಲ್ಲಿ ವಿಶ್ವ ಹಾಲು ದಿನಗಳಂದು ಹಾಲು ಕರೆಯುವ ಪ್ರದರ್ಶನಗಳು, ಕೃಷಿ ಭೂಮಿಗೆ ಭೇಟಿ, ಆಟಗಳು, ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮಗಳು, ಹಾಲಿನ ಉತ್ಪನ್ನಗಳ ಹಂಚಿಕೆ, ನಡೆಯುತ್ತವೆ. ಇದೇ ದಿನ ಹೆಚ್ಚಿನದನ್ನು ತಿಳಿದು ಕಲಿಯಲು ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಸಮಾವೇಶಗಳು ಹಾಗೂ ವಿಚಾರ ಸಂಕೀರ್ಣಗಳು ನಡೆಯುತ್ತವೆ.ನಮ್ಮ ದೇಶದಲ್ಲಿಯ ಹೈನುಗಾರಿಕೆ ವಿಭಾಗದಲ್ಲಿ ಮಹಿಳೆಯರ ಸಬಲೀಕರಣದ ಪ್ರಭಾವಕ್ಕೆ ಅಂತರ್ ರಾಷ್ಟಿçÃಯ ಮಾನ್ಯತೆ ಸಿಕ್ಕಿದ್ದು, ಐ.ಡಿ.ಎಫ್. ಸಂಶೋಧನಾ ಪ್ರಶಸ್ತಿ ಸಹ ಸಿಕ್ಕಿದೆ. ಸೃಜಾ ಉತ್ಪಾದನಾ ಸಂಘದ ಅಧ್ಯಕ್ಷರಾದ ಶ್ರೀದೇವಿ ಅವರನ್ನು ಗಮನಿಸಿದರೆ ಒಬ್ಬ ಸಾಮಾನ್ಯ ಹಾಲು ಉತ್ಪಾದಕರ ಸ್ಥಾನದಿಂದ ನಾಯಕರಾಗಿ ಮುಂದೆ ಬಂದಿರುವ ಇವರ ಪರಿವರ್ತನಾ ಪ್ರಯಾಣವನ್ನು ಗಮನಿಸಬಹುದು. ಇವರ ಮಗಳು ಈಗ ಅಮೆರಿಕಾದಲ್ಲಿ ಉಚ್ಛ ಶಿಕ್ಷಣ ಪಡೆಯುತ್ತಿದ್ದಾಳೆ. ಇಂತಹ ಹಲವಾರು ಉದಾಹರಣೆಗಳಿಂದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾತ್ರಗಳಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಗ್ರಾಮೀಣ ಉತ್ಪಾದನಾ ಕಾರ್ಯದ ಬೇರಿನಿಂದ ಹೊರಟು ವಿಶ್ವದ ಮಾನ್ಯತೆಯನ್ನು ಪಡೆದಿದ್ದಾರೆ. ಇವರ ಅನುಭವಗಳಿಂದ ತಿಳಿಯುವುದೇನೆಂದರೆ, ಆರ್ಥಿಕ ಸಬಲೀಕರಣದ ಪ್ರಭಾವದಿಂದ ವಿಶಾಲ ಸಾಮಾಜಿಕ ಪರಿಣಾಮವನ್ನು ಹೊಂದಿ ಮುಖ್ಯ ಕ್ಷೇತ್ರಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಸತತ ಬೆಂಬಲ ದೊರೆಯಲು ಇವು ಕಾರಣೀಭೂತವಾಗಿವೆ. ಎನ್.ವಿ.ರಮೇಶ್

“ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” ವಿಶೇಷ ಲೇಖನ ಎನ್.ವಿ.ರಮೇಶ್ Read Post »

ಇತರೆ, ಜೀವನ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

ಜೀವನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ “ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ” ಸಾಂಸಾರಿಕ ತಾಪತ್ರಯಗಳ ಬಿರುಗಾಳಿಗೆ ಸಿಲುಕಿದಾಗ, ಒಂಟಿತನ ಕಾಡುವುದು ಸಹಜ. ಅಂತಹ ಕಠಿಣ ಸಮಯದಲ್ಲಿ ಆತ್ಮೀಯ ಸ್ನೇಹಿತರು ಚಾಚುವ ಸಹಾಯದ ಹಸ್ತ ಮತ್ತು ಅವರು ತೋರುವ ಆತ್ಮೀಯತೆ ಒಬ್ಬ ವ್ಯಕ್ತಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆದರೆ, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಆ ಆತ್ಮೀಯತೆಯನ್ನು ಅಹಂಕಾರವಿಲ್ಲದೆ, ಹಾಗೆಯೇ ಅತಿಯಾದ ದೈನ್ಯತೆಯೂ ಇಲ್ಲದೆ ಹೇಗೆ ಗೌರವದಿಂದ ಸ್ವೀಕರಿಸಬೇಕು ಎಂಬುದನ್ನು ಕೆಲವೊಂದಿಷ್ಟು ವಾಕ್ಯಗಳಿಂದ ಅರ್ಥೈಸಿಕೊಳ್ಳಬಹುದು:,,” ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು” …ಕಷ್ಟಗಳು ಬಂದಾಗ “ನನಗೇ ಯಾಕೆ ಹೀಗಾಯಿತು?” ಎಂದು ಅಳುತ್ತಾ ಕೂರುವುದು ಜವಾಬ್ದಾರಿಯುತ ವ್ಯಕ್ತಿಯ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ ಹಗಲು-ರಾತ್ರಿಗಳು ಹೇಗೆ ಚಕ್ರಾಕಾರವಾಗಿ ಬರುತ್ತವೆಯೋ, ಕಷ್ಟ-ಸುಖಗಳೂ ಹಾಗೆಯೇ ಬರುತ್ತವೆ ಎಂಬುದನ್ನು ಅರಿಯಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ || ಈ ಶ್ಲೋಕವು ….ಸುಖದ ನಂತರ ದುಃಖ, ದುಃಖದ ನಂತರ ಸುಖ ಬರುವುದು ಪ್ರಕೃತಿಯ ನಿಯಮ. ಗಾಡಿಯ ಚಕ್ರವು ತಿರುಗುವಂತೆ ಸುಖ ಮತ್ತು ದುಃಖಗಳು ಜೀವನದಲ್ಲಿ ಸದಾ ಬದಲಾಗುತ್ತಾ ಇರುತ್ತವೆ. ಎಂಬುದನ್ನು ತಿಳಿಸುತ್ತದೆ.ಆದ್ದರಿಂದ ಕಷ್ಟ ಬಂದಾಗ ಇದು ಶಾಶ್ವತವಲ್ಲ, ಇದೂ ಕೂಡ ಕಳೆದುಹೋಗುತ್ತದೆ ಎಂಬ ದೃಢ ನಂಬಿಕೆ ಇರಬೇಕು. ಈ ಅರಿವು ವ್ಯಕ್ತಿಗೆ ತಾಪತ್ರಯಗಳ ನಡುವೆಯೂ ಶಾಂತವಾಗಿರಲು ನೆರವಾಗುತ್ತದೆ.*. “ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯ ಮಾಡಬೇಕು “ಸಾಂಸಾರಿಕ ಸಮಸ್ಯೆಗಳು ಎದುರಾದಾಗ ಅನೇಕರು “ನಾನು ಇಷ್ಟೆಲ್ಲಾ ಕಷ್ಟಪಟ್ಟರೂ ಏನೂ ಪ್ರಯೋಜನವಾಗುತ್ತಿಲ್ಲ” ಎಂದು ನಿರಾಶರಾಗುತ್ತಾರೆ. ಆದರೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನೀಡಿದ ಸಂದೇಶವೇ ಇದಕ್ಕೆ ಪರಮ ಔಷಧ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |ಮಾ ಕರ್ಮಫಲಹೇತುರ್ಭೂಮಾ ತೇ ಸಂಗೋಸ್ತ್ವಕರ್ಮಣಿ ||ಇದು ತಿಳಿಸುವ ವಿಷಯ ಏನಂದರೆ.. ನಿನಗೆ ಕರ್ತವ್ಯವನ್ನು ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಕರ್ಮಫಲಕ್ಕೆ ನೀನು ಕಾರಣನಾಗಬೇಡ, ಹಾಗೆಯೇ ಕರ್ಮವನ್ನು ಮಾಡದೆ ಕೂರಬೇಡ ಎಂದು.ಜವಾಬ್ದಾರಿಯುತ ವ್ಯಕ್ತಿಯಾದವನು ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ತನ್ನ ಪಾಲಿನ ಕರ್ತವ್ಯಗಳನ್ನು (ಕುಟುಂಬವನ್ನು ಸಾಕುವುದು, ದುಡಿಯುವುದು) ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಚಿಂತೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಕರ್ಮ ಮಾಡುವುದರಿಂದ ಮಾತ್ರ ದಾರಿ ಸಿಗುತ್ತದೆ.*. “ಧೈರ್ಯವೇ ಪರಮ ಆಸ್ತಿ”ಎಲ್ಲವೂ ಕೈಬಿಟ್ಟು ಹೋದಾಗಲೂ ಒಬ್ಬ ವ್ಯಕ್ತಿಯನ್ನು ಕೈಹಿಡಿದು ನಡೆಸುವ ಏಕೈಕ ಶಕ್ತಿ ಎಂದರೆ ಆತನ ಒಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ. ಆಪತ್ತು ಬಂದಾಗ ಧೈರ್ಯ ತಳೆಯುವುದು, ಐಶ್ವರ್ಯ ಬಂದಾಗ ಕ್ಷಮಾ ಗುಣವನ್ನು ಹೊಂದುವುದು, ಸಾಂಸಾರಿಕ ಆಪತ್ತುಗಳು ಬಂದಾಗ ಧೈರ್ಯವಾಗಿ ನಿಲ್ಲುವುದೇ ಒಬ್ಬ ನಿಜವಾದ ಗೃಹಸ್ಥನ ಲಕ್ಷಣ. ಧೈರ್ಯಗೆಟ್ಟರೆ ಬುದ್ಧಿ ಕೆಲಸ ಮಾಡುವುದಿಲ್ಲ. ನಿಶ್ಚಲ ಮನಸ್ಸಿನಿಂದ ಯೋಚಿಸಿದರೆ ಕಠಿಣ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ.*. ಸಂಕಷ್ಟದ ಸಮಯದಲ್ಲಿ ತಾಳ್ಮೆಯ ಮಹತ್ವಕಷ್ಟದ ಸಮಯದಲ್ಲಿ ಕೋಪ, ಉದ್ವೇಗ ಅಥವಾ ಆತುರದ ನಿರ್ಧಾರಗಳು ಸಾಂಸಾರಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಅಲ್ಲಿ ತಾಳ್ಮೆ ಅತ್ಯಂತ ಅಗತ್ಯ.ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||ಅಂದರೆ …ಧೈರ್ಯ (ತಾಳ್ಮೆ), ಕ್ಷಮೆ, ಮನಸ್ಸಿನ ನಿಗ್ರಹ, ಕದಿಯದಿರುವುದು, ಬಾಹ್ಯ-ಅಭ್ಯಂತರದ ಶುದ್ಧಿ, ಇಂದ್ರಿಯ ನಿಗ್ರಹ, ಬುದ್ಧಿವಂತಿಕೆ, ಜ್ಞಾನ, ಸತ್ಯ ಮತ್ತು ಕೋಪ ಮಾಡದಿರುವುದು – ಇವು ಧರ್ಮದ ಹತ್ತು ಲಕ್ಷಣಗಳು.ಇವುಗಳನ್ನು ಅರಿತು,ಸಾಂಸಾರಿಕ ತಾಪತ್ರಯಗಳಿದ್ದಾಗ ಮನೆಯವರ ಮೇಲೆ ಕೋಪಗೊಳ್ಳದೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂದ್ರಿಯ ನಿಗ್ರಹ ಮತ್ತು ಬುದ್ಧಿವಂತಿಕೆಯನ್ನು  ಬಳಸಬೇಕು. ಕೋಪವಿಲ್ಲದ ಜಾಗದಲ್ಲಿ ನೆಮ್ಮದಿ ಇರುತ್ತದೆ. ನಿಜವಾದ ಸ್ನೇಹಿತ(ತೆಯ)ನ ಪ್ರೀತಿ ಮತ್ತು ಆತ್ಮೀಯತೆಯ ಸ್ವೀಕಾರ”ಕಷ್ಟಕಾಲದಲ್ಲಿ ನಮ್ಮ ಜೊತೆ ನಿಲ್ಲುವವನೇ ನಿಜವಾದ ಮಿತ್ರ. ಇಂತಹ ಸಂದರ್ಭದಲ್ಲಿ ಸ್ನೇಹಿತರು ತೋರುವ ಪ್ರೀತಿಯನ್ನು “ನನ್ನ ಪರಿಸ್ಥಿತಿ ಹೀಗಾಗಿಬಿಟ್ಟಿತಲ್ಲ” ಎಂದು ಕೀಳರಿಮೆಯಿಂದ ನೋಡದೆ, ಅದನ್ನೊಂದು ದಿವ್ಯ ರಕ್ಷೆಯಾಗಿ ಸ್ವೀಕರಿಸಬೇಕು.ಪಾಪಾನ್ನಿವಾರಯತಿ ಯೋಜಯತೇ ಹಿತಾಯ |ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ ||ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ |ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತ: ||ತಪ್ಪು ದಾರಿಗೆ ಹೋಗದಂತೆ ತಡೆಯುವವನು, ಹಿತವನ್ನು ಬಯಸುವವನು, ರಹಸ್ಯಗಳನ್ನು ಕಾಪಾಡುವವನು, ಗೆಳೆಯನ ಒಳ್ಳೆಯ ಗುಣಗಳನ್ನು ಸಮಾಜದ ಮುಂದೆ ಕೊಂಡಾಡುವವನು, ಆಪತ್ತು ಬಂದಾಗ ಕೈಬಿಡದೆ ಸಮಯಕ್ಕೆ ಸರಿಯಾಗಿ ನೆರವಾಗುವವನು – ಇವನೇ ಸನ್ಮಿತ್ರ (ಆತ್ಮೀಯ ಸ್ನೇಹಿತ/ತೆ) ಎಂದು ಸಜ್ಜನರು ಹೇಳುತ್ತಾರೆ.ಸ್ವೀಕರಿಸುವ ಮಾರ್ಗ: ಸಾಂಸಾರಿಕ ಕಷ್ಟಗಳಲ್ಲಿದ್ದಾಗ ಸನ್ಮಿತ್ರನು ತೋರುವ ಆತ್ಮೀಯತೆ ಮತ್ತು ಕೊಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಬೇಕು. “ನನ್ನ ಕಷ್ಟವನ್ನು ಹಂಚಿಕೊಳ್ಳಲು ಒಬ್ಬನಿದ್ದಾನೆ” ಎಂಬ ಧೈರ್ಯವೇ ಅರ್ಧದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರ ಮುಂದೆ ಅಹಂಕಾರವನ್ನು ಬದಿಗಿಟ್ಟು ಮನಸ್ಸು ಬಿಚ್ಚಿ ಮಾತನಾಡುವುದು ಬುದ್ಧಿವಂತಿಕೆ.  “ಕೃತಜ್ಞತಾ ಭಾವ ಮತ್ತು ಸಂಬಂಧದ ಪಾವಿತ್ರ್ಯತೆ”ಸ್ನೇಹಿತರು ನೀಡುವ ಆರ್ಥಿಕ ಅಥವಾ ಮಾನಸಿಕ ಬೆಂಬಲವನ್ನು ಕೇವಲ ಸಹಾಯ ಎಂದು ತಿಳಿಯದೆ, ಅವರ ಪ್ರೀತಿಯ ಸಂಕೇತವೆಂದು ಭಾವಿಸಿ ಕೃತಜ್ಞತೆಯಿಂದ ಸ್ವೀಕರಿಸಬೇಕು.ಪ್ರಿಯಂಪ್ರೌಢಂ ಚ ವಚನಂ ಸ್ನೇಹಸೌಹಾರ್ದಲಕ್ಷಣಮ್ |ಸಂಗ್ರಹಶ್ಚ ಯಥಾಶಕ್ತ್ಯಾ ಕೃತಜ್ಞತ್ವಮಲೋಲುಪತಾ || ಮಧುರವಾದ ಮತ್ತು ಪ್ರೌಢವಾದ ಮಾತುಗಳು ಸ್ನೇಹ ಮತ್ತು ಸೌಹಾರ್ದತೆಯ ಲಕ್ಷಣಗಳಾಗಿವೆ. ಕಷ್ಟದಲ್ಲಿದ್ದಾಗ ಶಕ್ತ್ಯಾನುಸಾರ ಸಹಾಯ ಮಾಡುವುದು, ಅದನ್ನು ಕೃತಜ್ಞತೆಯಿಂದ ಸ್ವೀಕರಿಸುವುದು ಮತ್ತು ದುರಾಶೆ ಇಲ್ಲದಿರುವುದು ಉದಾತ್ತ ಸಂಬಂಧದ ಸಂಕೇತ. ಸ್ನೇಹಿತರು ತೋರುವ ಆತ್ಮೀಯತೆಯನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ಸದಾ ಕೃತಜ್ಞತೆ (Gratitude) ಇರಬೇಕು. ಇಂದು ಅವರು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಬಂದಿದ್ದಾರೆ ಎಂದರೆ, ಅದು ಅವರ ದೊಡ್ಡ ಗುಣ. ಆ ಸ್ನೇಹದ ಹಸ್ತವನ್ನು ನಮ್ರತೆಯಿಂದ ಹಿಡಿದು, “ಮುಂದೊಂದು ದಿನ ನಾನು ಚೇತರಿಸಿಕೊಂಡಾಗ ಈ ಸ್ನೇಹಕ್ಕೆ ಖಂಡಿತಾ ದ್ರೋಹ ಬಗೆಯುವುದಿಲ್ಲ, ನಾನೂ ಅವರ ಕಷ್ಟಕ್ಕೆ ನಿಲ್ಲುತ್ತೇನೆ” ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು.ಸಂಕ್ಷಿಪ್ತವಾಗಿ ಹೇಳುವುದಾದರೆ: ಸಂಸಾರದ ಕಷ್ಟಗಳು ಸುಡುತ್ತಿರುವಾಗ, ಆತ್ಮೀಯ ಸ್ನೇಹಿತರ ಸೌಹಾರ್ದತೆ ಎಂಬುದು ತಂಪಾದ ನೆರಳಿನಂತೆ. ಜವಾಬ್ದಾರಿಯುತ ವ್ಯಕ್ತಿಯಾದವನು ಆ ನೆರಳನ್ನು ಸಂಕೋಚವಿಲ್ಲದೆ ಸ್ವೀಕರಿಸಿ, ಮಾನಸಿಕ ಶಕ್ತಿಯನ್ನು ಮರಳಿ ಪಡೆದು, ಮತ್ತೆ ಸಂಸಾರದ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆ ಇಡಬೇಕು.ಒಟ್ಟಿನಲ್ಲಿ ಹೇಳಬೇಕೆಂದರೆ…ಸಾಂಸಾರಿಕ ಜೀವನ ಎಂಬುದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಅಲೆಗಳು ಏಳುವುದು ಸಹಜ. ಜವಾಬ್ದಾರಿಯುತ ವ್ಯಕ್ತಿಯಾದವನು ಅಲೆಗಳನ್ನು ನೋಡಿ ಹೆದರಿ ದೋಣಿಯನ್ನು ಮುಳುಗಿಸುವುದಿಲ್ಲ; ಬದಲಿಗೆ ದೋಣಿಯ ಚುಕ್ಕಾಣಿಯನ್ನು ಗಟ್ಟಿಯಾಗಿ ಹಿಡಿದು ತೀರದ ಕಡೆಗೆ ಮುನ್ನಡೆಸುತ್ತಾನೆ.ಕಷ್ಟಗಳು ನಮ್ಮನ್ನು ಕುಗ್ಗಿಸಲು ಬರುವುದಿಲ್ಲ, ಬದಲಿಗೆ ನಮ್ಮೊಳಗಿನ ನೈಜ ಶಕ್ತಿಯನ್ನು ನಮಗೆ ನೆನಪಿಸಲು ಬರುತ್ತವೆ. ಧರ್ಮ, ಧೈರ್ಯ, ಕರ್ತವ್ಯ ಪ್ರಜ್ಞೆ ಮತ್ತು ಪರಿಶ್ರಮ ಎಂಬ ನಾಲ್ಕು ಚಕ್ರಗಳ ಸಹಾಯದಿಂದ ಸಾಂಸಾರಿಕ ತಾಪತ್ರಯಗಳ ಕಠಿಣ ಹಾದಿಯನ್ನೂ ಸುಲಭವಾಗಿ ದಾಟಬಹುದು ಎಂಬುದೇ ಜ್ಞಾನಿಗಳ ಸಂದೇಶ. ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ Read Post »

ಇತರೆ

“ಕಾಣೆಯಾಗಿದೆ….” ಲೇಖನ, ಕೆ.ಎಂ. ಕಾವ್ಯ ಪ್ರಸಾದ್

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಕಾಣೆಯಾಗಿದೆ….” ಕಾಣೆಯಾಗುವುದು ಮನುಷ್ಯರಲ್ಲ; ಉಳಿದ ಬದುಕಿನ ಅರ್ಥವೇ!*  ಬದುಕಿನ ಕನ್ನಡಿಯಾದ ಒಂದು ವಿಶೇಷ ಲೇಖನ* ಕೆಲವು ಪದಗಳು ಕೇವಲ ಅಕ್ಷರಗಳಾಗಿರುವುದಿಲ್ಲ. ಅವು ಬದುಕಿನ ಅನೇಕ ಅಧ್ಯಾಯಗಳನ್ನು ತೆರೆದುಬಿಡುವ ಕೀಲಿಕೈಗಳಾಗಿರುತ್ತವೆ. “ಕಾಣೆಯಾಗಿದ” ಎಂಬ ಒಂದೇ ಪದದಲ್ಲೂ ಅಸಂಖ್ಯಾತ ನೆನಪುಗಳು, ಸಾವಿರಾರು ಕಣ್ಣೀರುಗಳು, ಹೇಳಲಾಗದ ಭಾವನೆಗಳು, ಮರಳಿ ಬಾರದ ಕ್ಷಣಗಳು ಮತ್ತು ಕಾಲದ ನಿರ್ದಯ ಹೆಜ್ಜೆಗಳ ಸದ್ದು ಅಡಗಿದೆ. ಒಬ್ಬ ವ್ಯಕ್ತಿ ಕಾಣೆಯಾಗುತ್ತಾನೆ ಎಂದರೆ ಅವನ ದೇಹ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಬದುಕಿನಲ್ಲಿ ಇನ್ನೂ ಭಯಾನಕವಾದ ಒಂದು ಕಾಣೆಯಾಗುವಿಕೆ ಇದೆ. ಅದು ಕಣ್ಣಿಗೆ ಕಾಣುವುದಿಲ್ಲ; ಆದರೆ ಪ್ರತಿಯೊಂದು ಮನೆಯ ಗೋಡೆಯೊಳಗೂ, ಪ್ರತಿಯೊಂದು ಹೃದಯದ ಮೌನದಲ್ಲೂ, ಪ್ರತಿಯೊಂದು ಸಂಬಂಧದ ಬಿರುಕುಗಳಲ್ಲೂ ಜೀವಂತವಾಗಿದೆ. ಅದು ಮಾನವೀಯತೆಯ ಕಾಣೆಯಾಗುವಿಕೆ. ಇಂದಿನ ಮನುಷ್ಯ ಚಂದ್ರನನ್ನು ತಲುಪಿದ್ದಾನೆ. ಸಮುದ್ರದ ಆಳವನ್ನು ಅಳೆಯುತ್ತಿದ್ದಾನೆ. ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಿದ್ದಾನೆ. ಆದರೆ ತನ್ನ ಮನೆಯಲ್ಲೇ ಮೌನವಾಗಿ ಅಳುತ್ತಿರುವ ಹೃದಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಇದು ಅಭಿವೃದ್ಧಿಯಲ್ಲ; ಇದು ಆತ್ಮೀಯತೆಯ ಕುಸಿತ. ಒಂದು ಕಾಲದಲ್ಲಿ ಮನೆ ಎಂದರೆ ನಾಲ್ಕು ಗೋಡೆಗಳಲ್ಲ; ನಾಲ್ಕು ಹೃದಯಗಳ ಸಂಗಮವಾಗಿತ್ತು. ಸಂಜೆ ಮನೆಗೆ ಬಂದಾಗ ಮಕ್ಕಳ ನಗು, ತಾಯಿಯ ಕರೆಯುವ ಧ್ವನಿ, ತಂದೆಯ ಅನುಭವದ ಮಾತು, ಅಜ್ಜ-ಅಜ್ಜಿಯ ಕಥೆಗಳು – ಇವೆಲ್ಲ ಸೇರಿ ಒಂದು ಕುಟುಂಬವನ್ನು ಕಟ್ಟುತ್ತಿದ್ದವು. ಇಂದು ಅದೇ ಮನೆಯಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಒಂದು ಮೊಬೈಲ್ ಇದೆ; ಆದರೆ ಒಬ್ಬರ ಮನಸ್ಸಿನ ಬಾಗಿಲು ಮತ್ತೊಬ್ಬರಿಗೆ ಮುಚ್ಚಿದೆ. ಮಾತುಗಳು ಕಡಿಮೆಯಾಗಿವೆ. ಸಂದೇಶಗಳು ಹೆಚ್ಚಾಗಿವೆ. ಭೇಟಿಗಳು ಕಡಿಮೆಯಾಗಿವೆ. ವಿಡಿಯೋ ಕರೆಗಳು ಹೆಚ್ಚಾಗಿವೆ. ಹೃದಯದ ಸ್ಪರ್ಶ ಕಡಿಮೆಯಾಗಿದೆ. ಪರದೆಯ ಬೆಳಕು ಹೆಚ್ಚಾಗಿದೆ. ಈ ಬೆಳಕಿನ ನಡುವೆ ಸಂಬಂಧಗಳ ಉಷ್ಣತೆ ನಿಧಾನವಾಗಿ ತಣ್ಣಗಾಗುತ್ತಿದೆ. “ನಂತರ ಮಾತಾಡೋಣ” ಎಂಬ ಒಂದು ವಾಕ್ಯ, ಎಷ್ಟೋ ಸಂಬಂಧಗಳನ್ನು ಅರ್ಧದಲ್ಲೇ ನಿಲ್ಲಿಸಿದೆ. “ಸಮಯ ಇಲ್ಲ” ಎಂಬ ಎರಡು ಪದಗಳು ಎಷ್ಟೋ ತಂದೆ-ತಾಯಿಯ ನಿರೀಕ್ಷೆಯನ್ನು ಮುರಿದಿವೆ. “ನಾನೇನು ತಪ್ಪು ಮಾಡಿಲ್ಲ” ಎಂಬ ಅಹಂಕಾರ ಎಷ್ಟೋ ದಾಂಪತ್ಯಗಳನ್ನು ಒಡೆದಿದೆ. “ಮೊದಲು ಅವನೇ ಬರಲಿ” ಎಂಬ ಹಠ ಎಷ್ಟೋ ಸ್ನೇಹಗಳನ್ನು ಸಮಾಧಿ ಮಾಡಿದೆ. ಕಾಣೆಯಾಗುವುದು ಎಂದರೆ ಯಾವಾಗಲೂ ದೇಹವಲ್ಲ. ಕೆಲವರು ನಮ್ಮ ಎದುರೇ ಇರುತ್ತಾರೆ. ಅವರೊಂದಿಗೆ ಒಂದೇ ಮನೆಯಲ್ಲಿರುತ್ತೇವೆ. ಒಂದೇ ಊಟ ಮಾಡುತ್ತೇವೆ. ಒಂದೇ ಪ್ರಯಾಣ ಮಾಡುತ್ತೇವೆ. ಆದರೂ ಅವರು ನಮ್ಮ ಜೀವನದಿಂದ ಬಹಳ ಹಿಂದೆಯೇ ಕಾಣೆಯಾಗಿರುತ್ತಾರೆ. ಏಕೆಂದರೆ ಹೃದಯಗಳ ನಡುವಿನ ಸೇತುವೆ ಕುಸಿದು ಹೋಗಿರುತ್ತದೆ. ಮಾನವ ಜೀವನದಲ್ಲಿ ಸಂಬಂಧಗಳು ಗಿಡಗಳಂತಿವೆ. ಅವುಗಳಿಗೆ ಪ್ರತಿದಿನ ಪ್ರೀತಿಯ ನೀರು ಬೇಕು. ನಂಬಿಕೆಯ ಗೊಬ್ಬರ ಬೇಕು. ಕ್ಷಮೆಯ ನೆರಳು ಬೇಕು. ಸಮಯದ ಬೆಳಕು ಬೇಕು. ಇವುಗಳಲ್ಲಿ ಒಂದಾದರೂ ಇಲ್ಲದಿದ್ದರೆ ಸಂಬಂಧ ಒಣಗಲು ಆರಂಭಿಸುತ್ತದೆ. ಒಣಗಿದ ಗಿಡಕ್ಕೆ ನೀರು ಹಾಕಿದರೂ ಅದು ಮೊದಲಿನ ಹಸಿರನ್ನು ಮರಳಿ ಪಡೆಯುವುದಿಲ್ಲ. ಹಾಗೆಯೇ ಒಡೆದ ನಂಬಿಕೆಯನ್ನು ಮತ್ತೆ ಕಟ್ಟುವುದು ಅತ್ಯಂತ ಕಷ್ಟ. ಪ್ರೀತಿಯ ಭಾಷೆ ಯಾವತ್ತೂ ದೊಡ್ಡ ಮಾತುಗಳಲ್ಲಿ ಇರುವುದಿಲ್ಲ. ಕೆಲವೊಮ್ಮೆ ಮೌನದಲ್ಲೇ ಅದು ಹೆಚ್ಚು ಮಾತನಾಡುತ್ತದೆ. ಅಳುವವನ ಪಕ್ಕದಲ್ಲಿ ಮಾತಿಲ್ಲದೆ ಕುಳಿತುಕೊಳ್ಳುವುದು ಪ್ರೀತಿ. ಕೋಪದಲ್ಲಿದ್ದರೂ ಕೈ ಬಿಡದೆ ನಿಲ್ಲುವುದು ಪ್ರೀತಿ. “ನಾನು ಇದ್ದೇನೆ” ಎಂದು ಹೇಳದೆ ಅದನ್ನು ಅನುಭವಿಸುವಂತೆ ಮಾಡುವುದು ಪ್ರೀತಿ. ಆದರೆ ಇಂದು ಪ್ರೀತಿಗೂ ಬೆಲೆ ಕಟ್ಟಲಾಗುತ್ತಿದೆ. ಸಂಬಂಧಗಳಿಗೂ ಲಾಭ-ನಷ್ಟದ ಲೆಕ್ಕ ಹಾಕಲಾಗುತ್ತಿದೆ. ಮನುಷ್ಯನ ಮೌಲ್ಯವನ್ನು ಅವನ ಹೃದಯದಿಂದಲ್ಲ, ಅವನ ಹುದ್ದೆಯಿಂದ ಅಳೆಯಲಾಗುತ್ತಿದೆ. ಹಣ ಹೆಚ್ಚಾದಂತೆ ಆತ್ಮೀಯತೆ ಕಡಿಮೆಯಾಗುತ್ತಿದೆ. ಸೌಲಭ್ಯಗಳು ಹೆಚ್ಚಾದಂತೆ ಸಂತೋಷ ಕಡಿಮೆಯಾಗುತ್ತಿದೆ. ಒಂದು ಮಗು ಹುಟ್ಟಿದಾಗ ಅದು ಯಾವುದೇ ಭಾಷೆಯನ್ನು ತಿಳಿಯುವುದಿಲ್ಲ. ಆದರೆ ತಾಯಿಯ ಸ್ಪರ್ಶವನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ವೃದ್ಧನು ಮರಣದ ಹಾಸಿಗೆಯಲ್ಲಿದ್ದಾಗ ಅವನಿಗೆ ಹಣದ ಲೆಕ್ಕ ನೆನಪಾಗುವುದಿಲ್ಲ; ತನ್ನವರ ಮುಖಗಳು ಮಾತ್ರ ನೆನಪಾಗುತ್ತವೆ. ಬದುಕಿನ ಆರಂಭವೂ ಸಂಬಂಧ, ಅಂತ್ಯವೂ ಸಂಬಂಧ. ಮಧ್ಯದಲ್ಲಿ ಮಾತ್ರ ನಾವು ಸಂಬಂಧಗಳಿಗಿಂತ ಸಂಪತ್ತನ್ನು ದೊಡ್ಡದು ಎಂದು ಭ್ರಮಿಸುತ್ತೇವೆ. ಪ್ರಕೃತಿಯೂ ಇದೇ ಪಾಠವನ್ನು ಕಲಿಸುತ್ತದೆ. ಮರ ತನ್ನ ಹಣ್ಣುಗಳನ್ನು ತನ್ನಿಗೋಸ್ಕರ ಉಳಿಸಿಕೊಳ್ಳುವುದಿಲ್ಲ. ನದಿ ತನ್ನ ನೀರನ್ನು ತನ್ನಿಗೋಸ್ಕರ ಹರಿಸುವುದಿಲ್ಲ. ಸೂರ್ಯ ತನ್ನ ಬೆಳಕಿಗೆ ಬೆಲೆ ಕೇಳುವುದಿಲ್ಲ. ಪ್ರಕೃತಿಯ ಪ್ರತಿಯೊಂದು ಅಂಶವೂ ಕೊಡುವುದನ್ನೇ ಕಲಿಸುತ್ತದೆ. ಮನುಷ್ಯ ಮಾತ್ರ ಪಡೆಯುವುದನ್ನು ಕಲಿತು, ಕೊಡುವುದನ್ನು ಮರೆತಿದ್ದಾನೆ. ಇಂದು ಸಮಾಜದಲ್ಲಿ ಮತ್ತೊಂದು ಮೌನದ ದುರಂತ ನಡೆಯುತ್ತಿದೆ. ಬದುಕಿರುವವರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅವರ ದೇಹ ನಮ್ಮೊಂದಿಗೆ ಇದೆ; ಆದರೆ ಅವರ ಮನಸ್ಸು ಏಕಾಂತದಲ್ಲಿ ಮುಳುಗಿದೆ. ಎಷ್ಟೋ ತಂದೆ-ತಾಯಿಗಳು ಮಕ್ಕಳಿಗಾಗಿ ಕಾಯುತ್ತಿದ್ದಾರೆ. ಎಷ್ಟೋ ಮಕ್ಕಳು ಪೋಷಕರ ಒಂದು ಮುದ್ದಿನ ಮಾತಿಗಾಗಿ ಕಾಯುತ್ತಿದ್ದಾರೆ. ಎಷ್ಟೋ ಹೆಂಡತಿಯರು ಗಂಡನ ಒಂದು ಕ್ಷಣದ ಗಮನಕ್ಕಾಗಿ ಕಾಯುತ್ತಿದ್ದಾರೆ. ಎಷ್ಟೋ ಗಂಡಂದಿರು ಹೆಂಡತಿಯ ಒಂದು ನಂಬಿಕೆಯ ಮಾತಿಗಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆಗಳೇ ಒಂದು ದಿನ ನೆನಪುಗಳಾಗಿ ಉಳಿಯುತ್ತವೆ. ನಂತರ ಕಣ್ಣೀರು ಕೇಳುತ್ತದೆ – “ಇಷ್ಟೊಂದು ಹತ್ತಿರ ಇದ್ದರೂ ನಾವು ಹೇಗೆ ದೂರವಾದೆವು?” ಜೀವನದ ಅತ್ಯಂತ ದೊಡ್ಡ ದುರಂತ ಮರಣವಲ್ಲ. *ಬದುಕಿದ್ದಾಗಲೇ ಒಬ್ಬರ ಹೃದಯದಿಂದ ಮತ್ತೊಬ್ಬರು ಕಾಣೆಯಾಗುವುದು. ಅದೇ ಈ ಕಾಲದ ನಿಜವಾದ ದುರಂತ.* ಕೆಲವೊಮ್ಮೆ ಜೀವನ ನಮ್ಮ ಕೈಯಲ್ಲಿ ಒಂದು ಹೂವನ್ನು ಇಡುತ್ತದೆ. ಅದರ ಪರಿಮಳವನ್ನು ಅನುಭವಿಸುವ ಮುನ್ನವೇ ಕಾಲ ಅದನ್ನು ನಮ್ಮಿಂದ ಕಸಿದುಕೊಳ್ಳುತ್ತದೆ. ಆಗ ನಾವು ಅರಿಯುವುದು, ಕಳೆದುಹೋದ ಹೂವಿನ ಬೆಲೆಯಲ್ಲ; ಅದನ್ನು ಪ್ರೀತಿಸಲು ನಾವು ತೆಗೆದುಕೊಂಡ ವಿಳಂಬದ ಬೆಲೆ. ಮನುಷ್ಯನ ಜೀವನದಲ್ಲಿ “ನಂತರ” ಎಂಬ ಪದಕ್ಕಿಂತ ಅಪಾಯಕಾರಿ ಮತ್ತೊಂದು ಪದವಿಲ್ಲ. “ನಂತರ ಭೇಟಿಯಾಗೋಣ”, “ನಂತರ ಮಾತನಾಡೋಣ”, “ನಂತರ ಕ್ಷಮೆ ಕೇಳೋಣ”, “ನಂತರ ಸಮಯ ಕೊಡೋಣ” ಎಂದು ಮುಂದೂಡುತ್ತಾ ಬದುಕುವಾಗ, ಒಂದು ದಿನ ಜೀವನವೇ ನಮ್ಮನ್ನು ಕೇಳುತ್ತದೆ – “ಈಗ ಸಮಯ ಎಲ್ಲಿದೆ?” ಕಾಲ ಎಂದಿಗೂ ಹಿಂದಿರುಗುವುದಿಲ್ಲ. ಅದು ಮುಂದೆ ಸಾಗುತ್ತದೆ. ಆದರೆ ಅದು ಬಿಟ್ಟುಹೋದ ನೆನಪುಗಳು ಮಾತ್ರ ನಮ್ಮ ಮನಸ್ಸಿನ ಬಾಗಿಲನ್ನು ಮತ್ತೆ ಮತ್ತೆ ತಟ್ಟುತ್ತಲೇ ಇರುತ್ತವೆ. ಕೆಲವೊಮ್ಮೆ ಒಂದು ಹಳೆಯ ಫೋಟೋ, ಒಂದು ಪತ್ರ, ಒಂದು ಹಾಡು, ಒಂದು ಪರಿಮಳ, ಒಂದು ಖಾಲಿ ಕುರ್ಚಿ – ಇವು ಸಾಕು, ವರ್ಷಗಳ ಹಿಂದೆ ಮರೆತುಹೋದ ಭಾವನೆಗಳು ಮತ್ತೆ ಜೀವಂತವಾಗಲು. ನೆನಪುಗಳು ಮನುಷ್ಯನ ದೊಡ್ಡ ಸಂಪತ್ತೂ ಹೌದು, ದೊಡ್ಡ ಶಿಕ್ಷೆಯೂ ಹೌದು. ಸುಂದರ ನೆನಪುಗಳು ಬದುಕಲು ಶಕ್ತಿ ಕೊಡುತ್ತವೆ. ನಿರ್ಲಕ್ಷಿಸಿದ ಕ್ಷಣಗಳ ನೆನಪುಗಳು ಜೀವಮಾನವಿಡೀ ಕಾಡುತ್ತವೆ. ಅದಕ್ಕಾಗಿಯೇ ಹಿರಿಯರು ಹೇಳುತ್ತಿದ್ದರು – “ಮಾತು ಆಡಲು ಮುನ್ನ ಯೋಚಿಸು; ಆದರೆ ಪ್ರೀತಿಯನ್ನು ಹೇಳಲು ತಡ ಮಾಡಬೇಡ.” ಇಂದಿನ ಸಮಾಜದಲ್ಲಿ ಕ್ಷಮೆ ಕೇಳುವುದು ದುರ್ಬಲತೆ ಎಂಬ ತಪ್ಪು ಕಲ್ಪನೆ ಬೆಳೆದಿದೆ. ಆದರೆ ನಿಜವಾದ ಶಕ್ತಿ ಅಹಂಕಾರದಲ್ಲಲ್ಲ, ಕ್ಷಮೆಯಲ್ಲಿದೆ. “ನನ್ನಿಂದ ತಪ್ಪಾಯಿತು” ಎಂದು ಹೇಳುವ ಧೈರ್ಯ ಎಲ್ಲರಲ್ಲೂ ಇರುವುದಿಲ್ಲ. ಅದೇ ರೀತಿ “ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಮನಸ್ಸು ತೆರೆಯುವ ಹೃದಯವೂ ಅಪರೂಪ. ಒಂದು ಕುಟುಂಬವನ್ನು ನಾಶಮಾಡುವುದು ದೊಡ್ಡ ಜಗಳವಲ್ಲ. ಪ್ರತಿದಿನದ ಸಣ್ಣ ಸಣ್ಣ ನಿರ್ಲಕ್ಷ್ಯಗಳು. ಕೇಳದ ಪ್ರಶ್ನೆಗಳು. ಹೇಳದ ಉತ್ತರಗಳು. ಗಮನಿಸದ ಕಣ್ಣೀರು. ಮೆಚ್ಚದ ಪ್ರಯತ್ನಗಳು. ಇವೆಲ್ಲವೂ ಸೇರಿ ಒಂದು ದಿನ ಪ್ರೀತಿಯ ಗೋಡೆಯನ್ನು ಕುಸಿಯಿಸುತ್ತವೆ. ತಾಯಿಯನ್ನು ನೋಡಿ. ಅವಳು ತನ್ನ ಮಗುವಿನ ಮೊದಲ ಅಳುವಿನಿಂದ ಕೊನೆಯ ನಗುವಿನವರೆಗೂ ಬದುಕುತ್ತಾಳೆ. ಮಗುವಿಗೆ ಜ್ವರ ಬಂದರೆ ಅವಳಿಗೆ ನಿದ್ರೆ ಬರುವುದಿಲ್ಲ. ಮಗು ನಗಿದರೆ ಅವಳ ದಣಿವು ಮಾಯವಾಗುತ್ತದೆ. ಆದರೆ ದೊಡ್ಡವನಾದ ಮಗು ತನ್ನ ಜೀವನದಲ್ಲಿ ಬ್ಯುಸಿಯಾಗುತ್ತದೆ. ಒಂದು ದಿನ ತಾಯಿಯ ಕಣ್ಣಲ್ಲಿ ಕಾಣುವ ಕಾಯುವಿಕೆಯನ್ನು ಅವನು ಗಮನಿಸುವುದೇ ಇಲ್ಲ. ಅದು ತಾಯಿಯ ನೋವಲ್ಲ; ಅದು ಸಮಾಜದ ಸೋಲು. ತಂದೆಯ ಬದುಕು ಇನ್ನೂ ವಿಚಿತ್ರ. ಅವನು ತನ್ನ ಕನಸುಗಳನ್ನು ಬಿಟ್ಟು ಮಕ್ಕಳ ಕನಸುಗಳನ್ನು ಕಟ್ಟುತ್ತಾನೆ. ತನ್ನ ಆಸೆಗಳನ್ನು ಮರೆತು ಕುಟುಂಬದ ಅಗತ್ಯಗಳನ್ನು ಪೂರೈಸುತ್ತಾನೆ. ತನ್ನ ನೋವನ್ನು ಯಾರಿಗೂ ಹೇಳದೆ ಮೌನವಾಗಿ ಬದುಕುತ್ತಾನೆ. ಆದರೆ ವೃದ್ಧಾಪ್ಯದಲ್ಲಿ ಅವನಿಗೆ ಬೇಕಾಗಿರುವುದು ದುಬಾರಿ ಉಡುಗೊರೆಗಳಲ್ಲ; ಮಕ್ಕಳೊಂದಿಗೆ ಕೆಲವು ನಿಮಿಷಗಳ ಮಾತುಕತೆ. ದಾಂಪತ್ಯವೂ ಹಾಗೆಯೇ. ಮದುವೆ ಎರಡು ಕೈಗಳನ್ನು ಮಾತ್ರ ಸೇರಿಸುವುದಿಲ್ಲ; ಎರಡು ಮನಸ್ಸುಗಳು, ಎರಡು ಕುಟುಂಬಗಳು, ಎರಡು ಕನಸುಗಳು, ಎರಡು ಬದುಕುಗಳನ್ನು ಜೋಡಿಸುತ್ತದೆ. ಆ ಬಂಧ ಉಳಿಯಬೇಕಾದರೆ ಪ್ರೀತಿಗಿಂತ ಹೆಚ್ಚಾಗಿ ಪರಸ್ಪರ ಗೌರವ ಬೇಕು. ಕೇಳುವ ಮನಸ್ಸು ಬೇಕು. ತಪ್ಪನ್ನು ಒಪ್ಪಿಕೊಳ್ಳುವ ವಿನಯ ಬೇಕು. ಇಂದು ನಾವು ಯಶಸ್ಸಿನ ವ್ಯಾಖ್ಯಾನವನ್ನೇ ಬದಲಾಯಿಸಿದ್ದೇವೆ. ದೊಡ್ಡ ಸಂಬಳ, ದೊಡ್ಡ ಮನೆ, ದೊಡ್ಡ ಕಾರು – ಇವುಗಳನ್ನು ಯಶಸ್ಸು ಎಂದು ಕರೆಯುತ್ತಿದ್ದೇವೆ. ಆದರೆ ರಾತ್ರಿ ಮಲಗುವಾಗ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ, ಮನೆಯೊಳಗೆ ನಗುವಿಲ್ಲದಿದ್ದರೆ, ಮಕ್ಕಳೊಂದಿಗೆ ಮಾತನಾಡಲು ಸಮಯವಿಲ್ಲದಿದ್ದರೆ, ಆ ಯಶಸ್ಸು ಯಾರಿಗಾಗಿ? ಪ್ರಕೃತಿಯ ಕಡೆಗೆ ನೋಡಿದರೆ ಬದುಕಿನ ಉತ್ತರಗಳು ಸಿಗುತ್ತವೆ. ಎಲೆ ಮರದಿಂದ ಉದುರಿದಾಗ ಮರ ಅದನ್ನು ಹಿಡಿದುಕೊಳ್ಳುವುದಿಲ್ಲ. ನದಿ ಹರಿಯುವಾಗ ಹಿಂದಿರುಗಿ ನೋಡುವುದಿಲ್ಲ. ಸೂರ್ಯ ಮುಳುಗಿದರೂ ನಾಳೆ ಮತ್ತೆ ಉದಯಿಸುತ್ತಾನೆ. ಪ್ರಕೃತಿ ನಮಗೆ ಕಲಿಸುವುದು ಒಂದೇ – ಬದಲಾವಣೆ ಅನಿವಾರ್ಯ. ಆದರೆ ಆ ಬದಲಾವಣೆಯ ನಡುವೆ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ನಾವು ಬದುಕಿನಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತೇವೆ. ಆದರೆ ಕೊನೆಯ ಕ್ಷಣದಲ್ಲಿ ನಮ್ಮ ಜೊತೆ ಬರುವುದು ಯಾವುದೂ ಅಲ್ಲ. ನಮ್ಮ ಹಿಂದೆ ಉಳಿಯುವುದು ನಮ್ಮ ಮನೆಗಳಲ್ಲ, ನಮ್ಮ ಆಸ್ತಿ ಅಲ್ಲ, ನಮ್ಮ ಹುದ್ದೆಯೂ ಅಲ್ಲ. ನಮ್ಮ ಬಗ್ಗೆ ಜನರು ಹೇಳುವ ಎರಡು ಒಳ್ಳೆಯ ಮಾತುಗಳು ಮಾತ್ರ. ಆದ್ದರಿಂದ ಬದುಕನ್ನು ದೊಡ್ಡದಾಗಿಸುವುದಕ್ಕಿಂತ, ಹೃದಯವನ್ನು ದೊಡ್ಡದಾಗಿಸಬೇಕು. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಪ್ರೀತಿಯನ್ನು ವ್ಯಕ್ತಪಡಿಸಬೇಕು. ಕ್ಷಮೆಯನ್ನು ಕಲಿಯಬೇಕು. ಸಮಯವನ್ನು ಕೊಡಬೇಕು. ಏಕೆಂದರೆ ಇವೆಲ್ಲವೂ ಒಮ್ಮೆ ಕಾಣೆಯಾಗಿದರೆ, ಮತ್ತೆ ಹುಡುಕಿದರೂ ಸಿಗುವುದಿಲ್ಲ. ಕಾಲ ಬದಲಾಗುತ್ತದೆ. ಋತುಗಳು ಬದಲಾಗುತ್ತವೆ. ಮನುಷ್ಯನ ವಯಸ್ಸು ಬದಲಾಗುತ್ತದೆ. ಆದರೆ ಬದಲಾಗಬಾರದ ಒಂದು ಸಂಗತಿ ಇದೆ—ಅದು ಮಾನವೀಯತೆ. ದುರದೃಷ್ಟವಶಾತ್, ಇಂದಿನ ಸಮಾಜದಲ್ಲಿ ಮೊದಲು ಕಾಣೆಯಾಗುತ್ತಿರುವುದೇ ಅದಾಗಿದೆ. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಿದೆ. ಆದರೆ ಮನಸ್ಸುಗಳನ್ನು ಹತ್ತಿರ ತಂದಿದೆಯೇ? ಸಾವಿರಾರು ಸ್ನೇಹಿತರ ಪಟ್ಟಿಯಿರುವ ಒಬ್ಬ ವ್ಯಕ್ತಿ, ತನ್ನ ನೋವನ್ನು ಹಂಚಿಕೊಳ್ಳಲು ಒಬ್ಬ ನಿಜವಾದ ಸ್ನೇಹಿತನಿಗಾಗಿ ಹುಡುಕುತ್ತಿರುವುದು ಇಂದಿನ ಕಹಿ ಸತ್ಯ. ಪರದೆಯ ಮೇಲಿನ ನಗುವಿನ ಚಿಹ್ನೆಗಳು ಹೆಚ್ಚಾಗಿವೆ; ಆದರೆ ಮುಖಾಮುಖಿಯಾಗಿ ನಗುವ ಮುಖಗಳು ಕಡಿಮೆಯಾಗಿವೆ. ಇಂದಿನ ಮಕ್ಕಳು ಆಟದ ಮೈದಾನಕ್ಕಿಂತ ಮೊಬೈಲ್ ಪರದೆಯನ್ನು ಹೆಚ್ಚು ನೋಡುತ್ತಿದ್ದಾರೆ. ಮರದ ನೆರಳಿನಲ್ಲಿ ಕಥೆ ಕೇಳುತ್ತಿದ್ದ ಬಾಲ್ಯ ಈಗ ಕೃತಕ ಬೆಳಕಿನೊಳಗೆ ಸೆರೆಯಾಗಿದೆ. ಪಕ್ಷಿಗಳ ಕಲರವ ಕೇಳುತ್ತಿದ್ದ ಬೆಳಗ್ಗೆ ಈಗ ಅಧಿಸೂಚನೆಗಳ ಶಬ್ದದಲ್ಲಿ ಆರಂಭವಾಗುತ್ತಿದೆ. ಈ ಬದಲಾವಣೆ ಕೇವಲ ಜೀವನಶೈಲಿಯಲ್ಲ; ಅದು ಮನಸ್ಸಿನ ಸಂಸ್ಕೃತಿಯ ಬದಲಾವಣೆ. ಯುವಜನತೆ ಕನಸುಗಳನ್ನು ಕಾಣುವುದು ತಪ್ಪಲ್ಲ. ಸಾಧನೆ ಮಾಡುವುದು ತಪ್ಪಲ್ಲ. ಆದರೆ ಸಾಧನೆಯ ಓಟದಲ್ಲಿ ಸಂಬಂಧಗಳನ್ನು ಕಳೆದುಕೊಳ್ಳುವುದು ಮಾತ್ರ ದೊಡ್ಡ ನಷ್ಟ. ಯಶಸ್ಸಿನ ಶಿಖರದಲ್ಲಿ ನಿಂತರೂ, ಕೆಳಗೆ ನಮ್ಮವರೇ ಇಲ್ಲದಿದ್ದರೆ ಆ ಶಿಖರದ ಎತ್ತರಕ್ಕೂ ಅರ್ಥವಿರುವುದಿಲ್ಲ. ಏಕಾಂತ ಎಂಬುದು ಜನರಿಲ್ಲದ ಸ್ಥಳವಲ್ಲ. ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಮನಸ್ಸು ಇಲ್ಲದ ಸ್ಥಳವೇ ನಿಜವಾದ ಏಕಾಂತ. ಅನೇಕರು ಜನಸಂದಣಿಯ ಮಧ್ಯೆಯೇ ಒಂಟಿಯಾಗಿದ್ದಾರೆ. ನಗುವ ಮುಖದ ಹಿಂದೆ ಅಳುವ ಹೃದಯವನ್ನು

“ಕಾಣೆಯಾಗಿದೆ….” ಲೇಖನ, ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು

ವಿಶೇಷ ಸಂಗಾತಿ ಗೊರೂರು ಅನಂತರಾಜು “ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.”  ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ ೧೨೨ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವತಿಯಿಂದ ಹಾಸನದ ಟೈಮ್ಸ್ ಪಿಯು ಕಾಲೇಜು, ಸತ್ಯಮಂಗಲ ಇಲ್ಲಿ ಮದ್ಯಾಹ್ನ ೨ ಗಂಟೆಗೆ ಡಾ.ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂದರ್ಭ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರÀ ಪುತ್ರಿ ಸಧ್ಯ ಕೆನಡದ ವಾಸಿ ಗೊರೂರು ವಸಂತಿಮೂರ್ತಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭ ಡಾ. ಗೊರೂರರ ಬದುಕು ಬರಹ ಗಾಂಧೀಜಿ ಪ್ರಭಾವ ಗ್ರಾಮನೋಟದ ಒಂದು ಕಿರು ಅವಲೋಕನ ಈ ಲೇಖನ. ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು. ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ ಇದ್ದರೆ ಬೆಳೆಯುತ್ತಾ ಆ ವ್ಯಕ್ತಿತ್ವ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಅದು ಅವರ ಗಾಂಧಿ ಜೀವನ ಚಿಂತನೆ. ಡಾ. ಗೊರೂರರ ಜೀವಸತ್ವ ಇರುವುದು ಹಳ್ಳಿ ಮತ್ತು ಗಾಂಧಿ ಚಿಂತನೆಯ ರಚನಾತ್ಮಕ ಸಂಯೋಗದಿAದ. ಅವರು ಶಾಲಾ ಕಾಲೇಜಿನ ಶಿಕ್ಷಣವಿಲ್ಲದೆ ಜೀವನದಲ್ಲಿ ಕಲಿತ್ತಿದ್ದೆ ಹೆಚ್ಚು. ದೇಶಸೇವೆಗೆ ಸಂಬAಧಿಸಿದ ಅನೇಕ ಕೆಲಸ ಮಾಡುತ್ತಾ ಅನುಭವ ಗಳಿಸಿ ಪುಸ್ತಕ ಬರೆಯುತ್ತಾ ಕೀರ್ತಿವಂತರಾದರು. ಒಬ್ಬ ವ್ಯಕ್ತಿಯಿಂದ ಒಂದು ಗೊರೂರು ಧನ್ಯತೆ ಪಡೆದಿದೆ.ತಾ. ೪-೭-೨೦೦೪ರಂದು ಜನಿಸಿದ ಜಿ.ಕೆ.ರಾಮಸ್ವಾಮಿ ಅವರ ೧ ರಿಂದ ೫ ಕನ್ನಡ ಲೋಯರ್ ಸೆಕಂಡರಿವರೆಗಿನ ವಿದ್ಯಾಭ್ಯಾಸ ಗೊರೂರಿನಲ್ಲಿ ನಡೆಯಿತು. ಆ ಕಾಲದಲ್ಲಿ ಚಿಕ್ಕ ಹಳ್ಳಿಯಾಗಿದ್ದ ಗೊರೂರಿನಲ್ಲಿ ಇದ್ದಿದ್ದು ಇಷ್ಟೇ ತರಗತಿ. ೫ನೇ ಫಾರಂ ಓದುತ್ತಿರುವಾಗಲೇ ರಾಮಸ್ವಾಮಿಯವರು ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೇಳಿದ್ದರು. ತಮಗೆ ಗಾಂಧೀಜಿಯ ಬಗ್ಗೆ ಅಧಿಕೃತ ವಿಷಯ ಗೊತ್ತಾದ ಬಗ್ಗೆ ಒಂದು ಕಡೆ ಹೀಗೆ ಬರೆಯುತ್ತಾರೆ.ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಮರ‍್ನಾಲ್ಕು ವರ್ಷ ಕಳೆದಿದ್ದರು. ಮೊದಲು ಗಾಂಧೀಜಿಯ ಹೆಸರು ನನ್ನ ಕಣ್ಣಿಗೆ ಬಿದ್ದುದು ಅವರೊಬ್ಬ ರಾಜಕೀಯ ಪವಾಡ ಪುರುಷರೆಂಬುದಾಗಿಯೇ. ಅಲ್ಲಿಯವರೆಗೆ ನಾನು ಹೆಚ್ಚಾಗಿ ಕೇಳಿದ್ದುದು ಬಾಲಗಂಗಾಧರ ತಿಲಕರ ಹೆಸರನ್ನು ಮಾತ್ರ. ಅಂದಿನ ದಿನಗಳಲ್ಲಿ ಬ್ರಿಟಿಷ್ ಆಡಳಿತದ ದೌರ್ಜನ್ಯ ಕುರಿತಂತೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು. ರೌಲತ್ ಆಕ್ಟ್, ಜಲಿನ್‌ವಾಲ ಹತ್ಯಾಕಾಂಡ ಇವು ಭಾರತೀಯರನ್ನು ರೊಚ್ಚಿಗೆಬ್ಬಿಸಿದ್ದವು. ೧೯೨೯ ಆಗಸ್ಟ್ ೭ ರಂದು ಲೋಕಮಾನ್ಯ ಟಳಕರು ನಿಧನರಾದರು. ನಾನು ಕ್ಲಾಸ್‌ನ್ನು ಬಿಟ್ಟು ಇತರ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಮೆರವಣಿಗೆ ಹೊರಟೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದೇಶಿ ಬಟ್ಟೆ ಸುಟ್ಟು ಎಲ್ಲಾ ವಿದ್ಯಾರ್ಥಿಗಳು ಖಾದಿ ತೊಟ್ಟೆವು. ಗಾಂಧೀಜಿ ರಾಷ್ಟçನಾಯಕರಾಗಿ ಮುಂದಾಳತ್ವ ವಹಿಸಿಕೊಂಡರು. ೧೯೧೯ರಲ್ಲಿ ರಾಷ್ಟಿçÃಯ ಚಳುವಳಿ ಮುಗಿಲು ಮುಟ್ಟಿತು. ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಗುಜರಾತ್ ವಿದ್ಯಾಪೀಠ ಸೇರಿ ಆಶ್ರಮದಲ್ಲಿ ಇರುವ ಯೋಚನೆ ಬರುತ್ತಿದ್ದಂತೆ ಗೊರೂರರು ಅಹಮದಾಬಾದಿಗೆ ಹೊರಟರು. ಗುಜರಾತ್ ವಿದ್ಯಾಪೀಠದಲ್ಲಿ ವ್ಯಾಸಂಗಕ್ಕೆ ಸೇರಿದರು. ನಾನು (ಗೊರೂರು ಅನಂತರಾಜು) ಗುಜರಾತ್ ಪ್ರವಾಸ ಹೋಗಿದ್ದಾಗ ಗುಜರಾತ್ ವಿದ್ಯಾಪೀಠ ವೀಕ್ಷಿಸುವಾಗ ತಟ್ಟನೆ ಡಾ.ಗೊರೂರರು ನೆನಪಾಗಿ ಟೂರಿಸ್ಟ್ಗಳಿಗೆಲ್ಲಾ ಆ ವಿಷಯ ತಿಳಿಸಿ ನಾವೆಲ್ಲಾ ಅಲ್ಲಿ ನಿಂತು ಪೋಟೋ ತೆಗೆಸಿಕೊಂಡೆವು. ಡಾ.ಗೊರೂರರು ಇಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಗಾಂಧೀಜಿ ನನ್ನ ಹೃದಯದಲ್ಲಿಯೇ ಕುಳಿತಿದ್ದ ಜ್ಯೋತಿ ಆಗಿದ್ದರು ಎಂದು ಗೊರೂರರು ಮಹಾತ್ಮರನ್ನು ಸ್ಮರಿಸಿದ್ದಾರೆ. ಗಾಂಧೀಜಿ ೧೯೪೬ ರಲ್ಲಿ ಮದ್ರಾಸಿನಲ್ಲಿದ್ದಾಗ ಅವರೊಂದಿಗೆ ಹತ್ತು ದಿನ ಕಳೆದರು. ಅನಂತರ ಪಳನಿ, ಮಧುರೈ ಮೊದಲಾದ ಕ್ಷೇತ್ರಗಳಲ್ಲಿ ಗಾಂಧೀಜಿಯವರೊAದಿಗೆ ಪ್ರವಾಸ ಕೈ ಗೊಂಡರು. ಈ ಪ್ರವಾಸ ಕಥನ ಗಾಂಧೀಜಿಯವರ ದಕ್ಷಿಣ ಯಾತ್ರೆ ಪುಸ್ತಕದಲ್ಲಿದೆ.ನವಜೀವನ ಯಂಗ್ ಇಂಡಿಯ ಪತ್ರಿಕೆಗಳಿಗೆ ಕಂಪೋಜಿಟರ್ ಆಗಿ ಕೆಲಸಕ್ಕೆ ಸೇರಿ ಮದರಾಸ್ ಲೋಕಮಿತ್ರ ಪತ್ರಿಕೆಯ ಉಪ ಸಂಪಾದಕರಾಗಿ, ಬೆಂಗಳೂರು ಕೆಂಗೇರಿಯಲ್ಲಿ ಗುರುಕುಲಾಶ್ರಮದ ವ್ಯವಸ್ಥಾಪಕರಾಗಿ ಮಾಸ್ತರಾಗಿದ್ದರು. ಖಾದಿ ವಸ್ತಾçಲಯದಲ್ಲಿ ಮಾರಾಟಗಾರರಾಗಿ ಖಾದಿ ಬೋರ್ಡಿನಲ್ಲಿ ಮ್ಯಾನೇಜರ್ ಆಗಿದ್ದರು.೧೯೩೮ ರಲ್ಲಿ ಗೊರೂರಿನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕೃಷಿಕ ಜೀವನದೊಂದಿಗೆ ಸಾಹಿತ್ಯ ಕೃಷಿ ಪ್ರಾರಂಭಿಸಿ ಗೊರೂರಿನಲ್ಲಿ ಯುವಕರನ್ನು ಸಂಘಟಿಸಿ ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆ ಮೊದಲಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಎಣ್ಣೆಗಾಣ, ಕೈಕಾಗದ, ಮೂಳೆಪುಡಿ, ಬೆಲ್ಲ, ಕೊಟ್ಟದ ಅಕ್ಕಿ, ಜೇನು ಸಾಕಣೆ, ಕಿತ್ತಳೆನಾರಿನ ಪ್ಯಾಕಿಂಗ್ ದಾರ, ತಾಟಿಬೆಲ್ಲ, ಚಾಪೆ ತಯಾರಿಸುವ ಗ್ರಾಮೋದ್ಯೋಗ ಆರಂಭವಾಯಿತು. ಗೊರೂರರ ಈ ಎಲ್ಲ ಕೆಲಸಗಳಲ್ಲಿ ಮತ್ತೋರ್ವ ಸ್ವಾತಂತ್ರö್ಯ ಹೋರಾಟಗಾರರು ಸಾಹುಕಾರ್ ಸಂಪತ್ತಯ್ಯAಗಾರ್ ಮತ್ತು ಗ್ರಾಮದ ಪ್ರಮುಖರು ಬೆಂಬಲ ನೀಡಿದರು. ಗೊರೂರಿನಲ್ಲಿ ೪೦ ದಿವಸ ವಯಸ್ಕರ ಶಿಕ್ಷಣ ಶಿಬಿರ ಏರ್ಪಡಿಸಿ ಪುತಿನ, ತೀನಂಶ್ರೀ ಕರೆಸಿದರು. ಆಗ ಸರ್ಕಾರ ಗೊರೂರರನ್ನು ಜಿಲ್ಲಾ ಆಡಳಿತ ಸಮಿತಿಗೆ, ಸ್ಥಳೀಯ ಶಿಕ್ಷಣ ಸಮಿತಿಗೆ ನಾಮಕರಣ ಮಾಡಿತು. ೧೯೩೯ ರಲ್ಲಿ ಸತ್ಯಾಗ್ರಹ ಕಾಲದಲ್ಲಿ ಸಲಹೆ ಕೊಡಲು ಗೊರೂರರೂ ಒಬ್ಬ ಸದಸ್ಯರಾಗಿದ್ದರು. ೧೯೪೧ ರಲ್ಲಿ ವಾರ್ಧಾದಲ್ಲಿ ಜರುಗಿದ ಎಐಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಕ್ವಿಟ್ ಇಂಡಿಯ ಚಳವಳಿಯಲ್ಲಿ ಪೊಲೀಸರು ಗೊರೂರರನ್ನು ಬಂಧಿಸಿ ಹಾಸನ, ಶಿವಮೊಗ್ಗ, ಸಾಗರ ಮತ್ತು ಬೆಂಗಳೂರು ಸೆರೆಮನೆಗಳಲ್ಲಿ ೧೪ ತಿಂಗಳು ಜೈಲಿನಲ್ಲಿ ಕಳೆದರು. ಸೆರೆಮನೆಯಲ್ಲಿ ಇದ್ದಾಗ ಹಳ್ಳಿಯ ಬಾಳು ಕೃತಿ ಅಚ್ಚಾಗುತ್ತಿತ್ತು. ಸೆರೆಮನೆ ಸೇರಿ ಮೂರು ವಾರಗಳಲ್ಲಿ ಟಾಲ್‌ಸ್ಟಾಯ್‌ರವರ ಕಾಸಕ್ಸ್ ಕಾದಂಬರಿಯನ್ನು ಮಲೆನಾಡವರು ಎಂಬ ಹೆಸರಿನಿಂದ ಅನುವಾದಿಸಿದರು. ಒಂದು ವಾರದೊಲ್ಲಿ ಪುಜರ್ನನ್ಮ ಕಾದಂಬರಿ ಬರೆದರು. ಸ್ವಾತಂತ್ರö್ಯವೇ ಧರ್ಮ ಎಂಬ ಕೃತಿಯ ಬಹುಭಾಗ ೧೯೪೨ ರಲ್ಲಿ ಸೆರೆಮನೆಯಲ್ಲಿ ಬರೆದಿದ್ದು. ಇವರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಸಂಪಾದಿಸಿದ ಇನ್ನೊಂದು ಮುಖ್ಯ ಸಂಗ್ರಹ ಕೋಲಾಟದ ಪದಗಳು. ವಾರದ ಬಿಡುವಿನ ದಿನದಲ್ಲಿ ಕೈದಿಗಳೆಲ್ಲರೂ ಒಟ್ಟಾಗಿ ಸೇರಿ ಭಜನೆ ಕೀರ್ತನೆ ಕೋಲಾಟದ ಪದ ಹಾಡುತ್ತಿದ್ದರು. ಗೊರೂರರು ನಾಲ್ಕಾರು ವಾರ ಅವರನ್ನು ಆಶ್ರಯಿಸಿ ಈ ಹಾಡುಗಳನ್ನು ಬರೆದುಕೊಂಡರು. ಸೆರೆಮನೆಯಿಂದ ಬಿಡುಗಡೆಯಾಗಿ ಜನಜಾಗೃತಿಗಾಗಿ ರಾಷ್ಟಿçÃಯ ಗ್ರಂಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಷ್ಟಿçÃಯ ಸಾಹಿತ್ಯ ಸಮಿತಿ ಸ್ಥಾಪಿಸಿದರು. ಸತಿ ಕಸ್ತೂರಿಬಾ, ಮಹದೇವ ದೇಸಾಯಿಯವರ ಕೃತಿಗಳು, ಮೌಲನಾ ಅಬುಲ್‌ಕಲಾಂ ಅಜಾದ್, ಸ್ವಾತಂತ್ರö್ಯವೇ ಧರ್ಮ, ತಾಯ್ನುಡಿಯಲ್ಲಿ ಶಿಕ್ಷಣ ಇವೇ ಗ್ರಂಥಗಳನ್ನು ಪ್ರಕಟಿಸಿದರು.ಭಾರತಕ್ಕೆ ಸ್ವಾತಂತ್ರö್ಯ ಬಂದರೂ ದೇಶೀಯ ಸಂಸ್ಥಾನಗಳ ಮಹಾರಾಜರು ತಮ್ಮ ಪ್ರಜೆಗಳಿಗೆ ಸ್ವಾತಂತ್ರö್ಯ ಕೊಡಲಿಲ್ಲ. ಅದಕ್ಕಾಗಿ ಬೇರೆ ಚಳವಳಿ ಬಲಿದಾನಗಳೇ ಬೇಕಾದವು. ಚಲೋಪ್ಯಾಲೆಸ್ ಚಳವಳಿಯಲ್ಲಿ ಗೊರೂರರ ಹಿರಿಯ ಮಗ ರಾಮಚಂದ್ರ ತುಮಕೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ವಿಷಯ ತಿಳಿದ ಗೊರೂರರು ನನ್ನ ಮಗ ಹುತಾತ್ಮನಾಗಿದ್ದಾನೆ. ಮುಂದಿನ ತಲೆಮಾರು ಅವನನ್ನು ನೆನೆಯುತ್ತದೆ ಎಂದರು. ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪನೆಯಾದ ಮೇಲೆ ಗೊರೂರು ೧೨ ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಈ ಸಂದರ್ಭ ಗೊರೂರರು ಮಾಡಿದ ಕೆಲಸಗಳಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣ, ಕನ್ನಡ ನಿಘಂಟು ಕನ್ನಡ ವಿಶ್ವಕೋಶ ಇವುಗಳ ರಚನೆಗಾಗಿ ಮಸೂದೆ ಮಂಡಿಸಿ ಕರ‍್ಯಗತ ಮಾಡಿಸಿದ್ದು.ಗೊರೂರರು ಒಂದು ಕಡೆ ಹೀಗೆ ಹೇಳುತ್ತಾರೆ. ನನ್ನ ಬಾಳನ್ನು ನಾನು ಹಿಂದಿಗುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ ತ್ಯಾಗ ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನಸಾಮಾನ್ಯರ ಜಾನಪದವೆಂದರೆ ನನಗೆ ಅವರಲ್ಲಿ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದು ಎಂಬುದು ನನ್ನ ನಂಬಿಕೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ.

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು Read Post »

ಇತರೆ, ಶಿಕ್ಷಣ

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ.

ಶಿಕ್ಷಣ ಸಂಗಾತಿ ಜಯಲಕ್ಷ್ಮಿ ಕೆ. “ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..”   ಶಿಕ್ಷಣ, ಉದ್ಯೋಗ, ಆರೋಗ್ಯ ಸಂವಹನ ಹೀಗೆ  ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಂತ್ರಜ್ಞಾನದ್ದೇ ಮೇಲುಗೈ. ವಿಜ್ಞಾನ  ತಂತ್ರಜ್ಞಾನವಿಲ್ಲದೆ  ನಮ್ಮ ಬದುಕೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ . ರಾಷ್ಟ್ರದ ಅಭಿವೃದ್ಧಿಯ ಮಾನದಂಡವೇ ತಂತ್ರಜ್ಞಾನವಾಗಿದೆ. ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ  ಮಕ್ಕಳಿಗಾಗಲಿ  ಅವರ ಪೋಷಕರಿಗಾಗಲೀ ಮಾನವೀಯ ಶಾಸ್ತ್ರಗಳ ಅಧ್ಯಯನ ಇಷ್ಟವಾಗುವುದಿಲ್ಲ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ತೀರಾ ಕಡಿಮೆ ಎಂದೇ ಹೇಳಬಹುದು.  ಎಷ್ಟೋ ಖಾಸಗಿ  ಕಾಲೇಜುಗಳಲ್ಲಿ ವಿಜ್ಞಾನ ವಾಣಿಜ್ಯ ವಿಭಾಗಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ.  ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಡುತ್ತಾ, ಗೆಡ್ಡೆ ಗೆಣಸು ಹಸಿ ಮಾಂಸಗಳನ್ನು ತಿನ್ನುತ್ತಾ, ವನ್ಯ ಮೃಗಗಳಂತೆ ಗುಹೆಗಳಲ್ಲಿ ಬದುಕುತ್ತಿದ್ದ ಮಾನವ  ಒಂದೆಡೆ ನೆಲೆ ನಿಂತು ಬಾಳಲು ಕಲಿತದ್ದೇ  ಒಂದು ಸುದೀರ್ಘ ಇತಿಹಾಸ. ಅನಾಗರಿಕತೆಯಿಂದ ಹಂತ ಹಂತವಾಗಿ  ಅಭಿವೃದ್ಧಿ ಹೊಂದುತ್ತಾ  ನಾಗರಿಕತೆಯೆಡೆಗೆ  ಸಾಗಿ ಬಂದ ಮಾನವ ಜೀವಯಾನದ ಕಥೆಗಳಲ್ಲಿ ಕಷ್ಟ -ಸುಖ, ಸೋಲು -ಗೆಲುವುಗಳ ಪಾಠವಿದೆ. ಮಾನವನ ಅಸ್ಥಿತ್ವ, ಸಂಸ್ಕೃತಿ ಮತ್ತು ಸಮಾಜದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವಂತಹ ಇತಿಹಾಸವೇ ಮೊದಲಾದ ಮಾನವೀಯ ಶಾಸ್ತ್ರಗಳ ಅಧ್ಯಯನ ಇಂದು ಬಲು ದೂರ ಸರಿದಿದೆ.  ಭೂತಕಾಲವನ್ನು ಅರ್ಥೈಸಿಕೊಂಡು ಭವಿಷ್ಯದ ಬಗೆಗೆ ಚಿಂತನೆಗೈಯುತ್ತಾ  ವರ್ತಮಾನದಲ್ಲಿ ಬದುಕುವ ಕಲೆಗಾರಿಕೆಯನ್ನು ಕಲಿಸಿಕೊಡುವ ಇತಿಹಾಸದ ಅಧ್ಯಯನವಾಗಲೀ . ಪ್ರಜೆಗಳ ಹಕ್ಕು ಕರ್ತವ್ಯ, ಸರಕಾರದ ನೀತಿ ನಿಯಮ, ಉದಾತ್ತ ವ್ಯಕ್ತಿಗಳ ಜೀವನ- ಸಾಧನೆ, ಪರಸ್ಪರರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವ ಜೀವನ ಕ್ರಮ, ಮನುಷ್ಯ ತನ್ನ ಸಮಾಜದೊಂದಿಗೆ ಮಾಡಿಕೊಳ್ಳಲೇ ಬೇಕಾದ ಹೊಂದಾಣಿಕೆ ಇತ್ಯಾದಿಗಳನ್ನು ತಿಳಿಸಿಕೊಡುವಂತಹ  ಇತರ ಮಾನವ ಶಾಸ್ತ್ರಗಳ ಅಧ್ಯಯನವಾಗಲೀ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿಲ್ಲ .  ಶ್ರುತಿ  ಮತ್ತು ಸ್ಮೃತಿ ಆಧಾರಿತ ಗುರುಕುಲ ಶಿಕ್ಷಣ ಪದ್ಧತಿ ಬದಲಾವಣೆ ಹೊಂದುತ್ತಾ ಹೊಂದುತ್ತಾ “ತಂತ್ರಜ್ಞಾನವೇ ಶಿಕ್ಷಣದ ಜೀವಾಳ ” ” ಶಿಕ್ಷಣ ಎಂದರೆ   ವಿಜ್ಞಾನ -ತಂತ್ರಜ್ಞಾನ ಎನ್ನುವಲ್ಲಿಗೆ ನಮ್ಮ ಶಿಕ್ಷಣ ಕ್ರಮ ಬಂದು ತಲುಪಿದೆ. ಗುರು-ಶಿಷ್ಯ ಸಂಬಂಧ, ಕಲಿಕಾ ಕ್ರಮ, ಪಠ್ಯಕ್ರಮ, ಕಲಿಕೆಯ ಉದ್ದೇಶ, ಬೋಧನಾ ವಿಧಾನ, ಎಲ್ಲವೂ ಬದಲಾಗಿದೆ.  ಕಲಿಕಾ ವಾತಾವರಣವಷ್ಟೇ ಅಲ್ಲ, ಶಿಕ್ಷಣದ ಮೂಲೋದ್ದೇಶವೇ  ಬದಲಾಗಿರುವ ಯುಗವಿದು. ಶಿಕ್ಷಣದೊಂದಿಗೇ ಬೆಸೆದು ಹೋಗಿದ್ದ ಅಧ್ಯಾತ್ಮ ಇಂದು ಶಿಕ್ಷಣ ವ್ಯವಸ್ಥೆಯಿಂದ  ಕಾಣೆಯೇ ಆಗಿದೆ ಎಂದರೂ ತಪ್ಪಾಗಲಾರದು. ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಜಾಗತಿಕ ವೃತ್ತಿ ಜೀವನಕ್ಕೆ ತಯಾರಿಗೊಳಿಸುವ ಭರದಲ್ಲಿ ತಾಂತ್ರಿಕ ಶಿಕ್ಷಣಕ್ಕೇ ಆಧ್ಯತೆ ನೀಡುತ್ತಿರುವ ನಾವು ಮಾನವೀಯ ಶಾಸ್ತ್ರಗಳನ್ನೇ ಮರೆತಿದ್ದೇವೆ. ಇತಿಹಾಸ, ತತ್ವಜ್ಞಾನ,ಅರ್ಥಶಾಸ್ತ್ರ ಮನಃಶಾಸ್ತ್ರ,ಸಮಾಜಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡುವ  ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ . ಪ್ರಾಥಮಿಕ ಪ್ರೌಢ ಹಂತದಲ್ಲಿ ಅಂಕಗಳಿಕೆ, ನಂತರ ಮೆಡಿಕಲ್ ಇಂಜಿನಿಯರಿಂಗ್ ಸೀಟ್ ಗಳಿಕೆ ತದನಂತರ ಹೆಚ್ಚು ಸಂಬಳದ ಉದ್ಯೋಗ  ಗಳಿಕೆ ಈ ಮೂರನ್ನೇ ಶಿಕ್ಷಣದ ಉದ್ದೇಶ ಎಂದು ಪರಿಭಾವಿಸಿದ್ದರ ಪರಿಣಾಮ ಮಾನವ ಶಾಸ್ತ್ರಗಳ ಅಧ್ಯಯನ ದೂರ ಉಳಿಯಿತು. ಇದರ ಜೊತೆಗೆ ಮೌಲ್ಯಾಧರಿತ ಶಿಕ್ಷಣವೂ…. ವಿಜ್ಞಾನ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ  ಗಳಿಸಿ ಐಟಿ ಬಿಟಿ  ಕಂಪನಿಗಳಲ್ಲಿ   ಉದ್ಯೋಗ ಗಳಿಸಿಕೊಂಡಿರುವ ಯುವ ಜನಾಂಗ  ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಪರಿಸರ, ಸ್ನೇಹಿತ ವರ್ಗದಿಂದ  ಹಂತ ಹಂತವಾಗಿ ದೂರವಾಗುತ್ತಿದ್ದು, ಅವರು ಭಾವನಾತ್ಮಕವಾಗಿ ಬಡವಾಗುತ್ತಿದ್ದಾರೆ. ಈ ನಡುವೆ ತಂತ್ರಜ್ಞಾನದ ಬಳಕೆಯಿಂದ  ಅಮಾಯಕರನ್ನು ಭಾವನಾತ್ಮಕವಾಗಿ ಬೆದರಿಸಿ ಹಣ ಲೂಟಿ ಮಾಡುವ ಸಣ್ಣ ವಯಸ್ಸಿನ ವಿಪರೀತಮತಿಗಳು  ಅಲ್ಲಲ್ಲಿ ತಲೆಯೆತ್ತಿವೆ . ಇಂತಹ ಅಪರಾಧಿಗಳನ್ನು ಕಂಡುಹಿಡಿಯುವುದೇ ಸರಕಾರಕ್ಕೊಂದು ದೊಡ್ಡ ಸವಾಲಾಗಿದೆ. ವಿಜ್ಞಾನ ತಂತ್ರಜ್ಞಾನ ವರಿಯದ ಕಳ್ಳನೊಬ್ಬ ನಮ್ಮ ಹಣ ವಾಚು,ಚಿನ್ನ ಇತ್ಯಾದಿ ಬೌತಿಕ ವಸ್ತುಗಳನ್ನಷ್ಟೇ ಕದ್ದರೆ ತಂತ್ರಜ್ಞಾನದಲ್ಲಿ ಪಳಗಿದ ಕಳ್ಳ ನಮ್ಮ ಹಣ ಸಂಪತ್ತುಗಳ  ಜೊತೆ ಜೊತೆಗೆ  ನಮ್ಮ ಆರೋಗ್ಯ,ಮಾನ, ಕೊನೆಗೆ ಜೀವವನ್ನೇ  ಕಸಿದುಕೊಳ್ಳುತ್ತಾನೆ. ” ಯಂತ್ರಗಳಿಗೆ ಅಂತಃಕರಣವಿಲ್ಲ ” ನಿಜ. ಆದರೆ ಯಾಂತ್ರಿಕ ಬದುಕು ನಡೆಸುತ್ತಿರುವ ಇಂದಿನ ಅದೆಷ್ಟೋ ಯುವಕ ಯುವತಿಯರಿಗೆ ಪ್ರೀತಿ, ಕರುಣೆ, ಸಹನೆ, ಸಹಾನುಭೂತಿ, ಕೃತಜ್ಞತಾ ಭಾವ ಇವಾವುವೂ ಇಲ್ಲ. ಇದಕ್ಕೆ ಇತ್ತೀಚೆಗೆ ಸುದ್ದಿ ಯಾಗುತ್ತಿರುವ ಅವರ ವರ್ತನೆಗಳೇ ಸಾಕ್ಷಿ. ತಮ್ಮ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾದರೆ ಹೊತ್ತ ತಂದೆಯೋ, ಹೆತ್ತ ತಾಯಿಯೋ, ರಕ್ತ ಹಂಚಿಕೊಂಡು ಹುಟ್ಟಿದ ಅಕ್ಕ ತಂಗಿಯರೋ.. ಯಾರಾಗಿದ್ದರೂ ಸರಿಯೇ, ಅವರನ್ನು ಕೊಚ್ಚಿ ಕೊಲ್ಲುವಷ್ಟು ಕ್ರೌರ್ಯ, ಮೃಗೀಯ ವರ್ತನೆ ತೋರಿಬಿಡುತ್ತಾರೆ. ಆಟಿಕೆಗಳನ್ನು ಒಗೆದಂತೆ  ತಮ್ಮೊಡನೆಯೇ ಇದ್ದ ಜೀವಗಳನ್ನು ಕಂದಕಕ್ಕೆ ನೂಕಿ ಬದುಕಿನಲ್ಲಿ ನಲಿವು ಕಾಣಬೇಕೆಂದು ಹಂಬಲಿಸುತ್ತಾರೆ!  ಅಂತಃಕರಣ ಅರಳಿಸುವ ಶಿಕ್ಷಣ, ಕೂಡಿ ಬಾಳುವ ಮನೋಭಾವ ಶಾಲಾ ಕಾಲೇಜುಗಳಲ್ಲಿ ಕಲಿತಿಲ್ಲ. ಸೋಲು ಗೆಲುವುಗಳಲ್ಲಿ ಸಮತೋಲನವನ್ನು ಸಾಧಿಸುವ ಕಲೆಗಾರಿಕೆಯನ್ನು ರೂಢಿ ಮಾಡಿಕೊಂಡಿಲ್ಲ. ಮನೆಯಲ್ಲಿ ಮಾನವಿಕ ಶಾಸ್ತ್ರ ಗಳನ್ನು ಹೇಳಲು – ಕೇಳಲು ಯಾರಿಗೂ ಬಿಡುವಿಲ್ಲ. ದೊಡ್ಡವರನ್ನು ನೋಡಿ ಕಲಿಯಲು ಕೂಡು ಕುಟುಂಬ ವ್ಯವಸ್ಥೆ ಮೊದಲೇ ಇಲ್ಲ. ಸಮಾಜಮುಖಿಯಾಗಿ ಬೆಳೆಯಲು ಇಂದಿನ ಮಕ್ಕಳಿಗೆ ಯೋಗ್ಯ ಅವಕಾಶಗಳಾಗಲೀ, ಸಾಮಾಜಿಕ ಭದ್ರತೆಯಾಗಲೀ ಇಲ್ಲ. ಹಸಿವು, ಬಡತನ,ಕಷ್ಟ, ಇತ್ಯಾದಿಗಳ ಅರಿವಿಲ್ಲದೆ’ ಬದುಕೆಂದರೆ ತಮ್ಮ ವೈಯಕ್ತಿಕ ಸುಖ  ಸಂತೋಷಗಳ ಒಂದು ಮೊತ್ತ ‘ ಎಂದೇ ಭಾವಿಸಿಕೊಂಡಿರುವ ಯುವ ಮನಸುಗಳು ಆ ಸುಖ ಸಾಧನೆಗಾಗಿ ಯಾರಿಗೆ ಯಾವ ಕೆಡುಕು ಮಾಡುವುದಕ್ಕೂ ಹೇಸುವುದಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನ  ಕೂಡಾ ಅವರಲ್ಲಿದೆ!! ಹುಟ್ಟಿ ಬೆಳೆದ ಸಮಾಜದ ಋಣ ತನ್ನ ಮೇಲಿದೆ, ಆದ ಕಾರಣ  ಇತರರಿಗೆ ಬಾಳಗೊಡುತ್ತಾ  ತಾನು ಬಾಳಬೇಕು ಎನ್ನುವ ಸಾಮಾನ್ಯ ಜ್ಞಾನವಿಲ್ಲ ಮಾತ್ರ ಇಲ್ಲ!!!ಅವಿದ್ಯಾವಂತರು ಮಾಡುವ ಮೋಸ ವಂಚನೆಗಳಿಗಿಂತ ವಿದ್ಯಾವಂತ (ಅ ) ನಾಗರಿಕರು ಮಾಡುವ ಮೋಸ ವಂಚನೆಗಳು ಘನ ಘೋರ !!  ಸಾಮಾನ್ಯವಾಗಿ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವ ಹಂತಕ್ಕೆ ಬಂದಾಗ ಅವರ ಜೊತೆಗಿನ ಪೋಷಕರ ಓಟ – ಒಡನಾಟ ನಿಧಾನವಾಗುತ್ತದೆ ಅಥವಾ ಅನಿವಾರ್ಯ  ಪರಿಸ್ಥಿತಿಗಳಿಂದಾಗಿ  ನಿಂತೇ ಹೋಗುತ್ತದೆ. ಆದರೆ ಮಕ್ಕಳ  ನಿಜವಾದ  ಬದುಕು ಆರಂಭವಾಗುವುದೇ ಅಲ್ಲಿಂದ. ತನ್ನನ್ನು  ಪ್ರತ್ಯೇಕವೆಂದು ಭಾವಿಸದೆ ತಾನೂ ಸಮಾಜದ ಒಂದು ಭಾಗ ಎಂದು ಅರಿತುಕೊಳ್ಳುತ್ತಾ, ಭಾವನಾತ್ಮಕವಾಗಿ ಪರಿ ಪರಿಪಕ್ವತೆಯನ್ನು ಪಡೆದುಕೊಳ್ಳುತ್ತಾ  ಯುವ ಜನತೆ ದೇಶದ ಆಸ್ತಿಯಾಗಿ ಉಳಿಯಬೇಕಾದರೆ  ತಂತ್ರಜ್ಞಾನದ ಜೊತೆ ಜೊತೆಗೆ ಮಾನವ ಶಾಸ್ತ್ರಗಳ ಅಧ್ಯಯನವೂ  ಶಿಕ್ಷಣದಲ್ಲಿ ಮಿಳಿತಗೊಂಡಿರಬೇಕು. ಜಯಲಕ್ಷ್ಮಿ ಕೆ ಮಡಿಕೇರಿ.

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ. Read Post »

You cannot copy content of this page

Scroll to Top