ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು ಹೋಗುತ್ತಿದ್ದ ಇತರ ಕೂಲಿಯಾಳುಗಳಂತೆಯೇ ಸಂತಾನಪ್ಪ ದಂಪತಿಯನ್ನೂ ಕಡೆಗಣಿಸಿದ್ದ.    ಆದರೆ ಅದೇ ಸಂತಾನಪ್ಪ, ಡೇಸಾರ ಮನೆ ಸೇರಿಕೊಂಡಿದ್ದನ್ನೂ ಅವರ ಐಶ್ವರ್ಯವೆಲ್ಲ ಅವನ ಪಾಲಾದುದನ್ನೂ ಮತ್ತು ಆನಂತರ ಅವನು ತನ್ನೆದುರಿಗೇ ಆಗರ್ಭ ಶ್ರೀಮಂತನಂತೆ ಮೆರೆಯತೊಡಗಿದ್ದನ್ನೂ ಕಾಣುತ್ತ ಬಂದ ಶಂಕರ ಯದ್ವಾತದ್ವ ಹೊಟ್ಟೆ ಉರಿಸಿಕೊಂಡ. ಅಷ್ಟಲ್ಲದೇ ಅವನೂ ತನ್ನಂತೆ ಮನೆ, ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳಲಾರಂಭಿಸಿದ್ದಂತೂ ಶಂಕರನನ್ನು ರೊಚ್ಚಿಗೆಬ್ಬಿಸಿಬಿಟ್ಟಿತು. ಆದ್ದರಿಂದ, ಒಂದೆರಡು ವರ್ಷಗಳ ಹಿಂದಷ್ಟೇ ಯಾವನೋ ಭಿಕಾರಿಯೊಬ್ಬ ತನ್ನಲ್ಲಿಗೆ ಕೂಲಿನಾಲಿಗೆ ಬಂದು, ತನಗೆ ಸಲಾಂ ಹೊಡೆಯುತ್ತಿದ್ದಂಥವನು ಇವತ್ತು ತನಗೇ ಪ್ರತಿಸ್ಪರ್ಧಿಯಾಗಿ ನಿಂತಿದ್ದಾನೆ ಮಾತ್ರವಲ್ಲದೇ ನಮ್ಮೂರಿವರ ಆಸ್ತಿಪಾಸ್ತಿಯನ್ನೇ ಲಪಟಾಯಿಸಿ ತನ್ನ ಕಣ್ಣಮುಂದೆಯೇ ಮೆರೆದಾಡುತ್ತಿದ್ದಾನೆಂದರೆ ಅವನಿಗೆಷ್ಟು ಅಹಂಕಾರವಿರಬೇಕು! ಅಂಥವನನ್ನು ಸುಮ್ಮನೆ ಬಿಡಲಿಕ್ಕುಂಟಾ? ಈಶ್ವರಪುರದ ಜನರು ನಾವೆಲ್ಲ ಅಷ್ಟೊಂದು ಮೂರ್ಖರೆಂದು ಭಾವಿಸಿದನೇ ಆ ಬೋಳಿಮಗ! ಈ ಊರಲ್ಲೇ ಹುಟ್ಟಿ ಬೆಳೆದವನು ನಾನು. ನನ್ನ ಈಗಿನ ಹಂತಕ್ಕೆ ತಲುಪಬೇಕಾದರೆ ಅದೆಷ್ಟು ಕಷ್ಟಪಟ್ಟಿದ್ದೇನೆ! ಆದರೂ ಒಂದೊಳ್ಳೆಯ ತೃಪ್ತಿಯ ಮಟ್ಟಕ್ಕಿನ್ನೂ ಬೆಳೆಯಲಾಗಲಿಲ್ಲ. ಅಂಥದ್ದರಲ್ಲಿ ಯಾವನೋ ಒಬ್ಬ ಲಾಟರಿ ಹೊಡೆದಂತೆ ತನ್ನ ಕಣ್ಣೆದುರೇ ಇನ್ನೊಬ್ಬರ ಸಂಪತ್ತನ್ನು ಅನುಭವಿಸಲು ಬಿಟ್ಟೇನೇ…? ಅದೂ ತನ್ನ ಶತ್ರುವಿನ ಸಂಗ ಮಾಡಿದಂಥವನಿಗೆ! ಖಂಡಿತಾ ಇಲ್ಲ. ಹೇಗಾದರೂ ಮಾಡಿ ಅವನಿಂದ ಡೇಸಾರ ಆಸ್ತಿಯ ಸಣ್ಣ ಕವಡೆಯನ್ನೂ ಬಿಡದೆ ಕಿತ್ತುಕೊಳ್ಳಬೇಕು! ಎಂದು ಶಂಕರ ಒಮ್ಮೆ ಉದ್ರಿಕ್ತನಾಗಿ ಯೋಚಿಸಿದವನು ಸಂತಾನಪ್ಪನನ್ನು ಹೊಸಕಿ ಹಾಕಲು ವ್ಯವಸ್ಥಿತ ಸಂಚೊಂದನ್ನು ರೂಪಿಸಿದ. ಸಂತಾನಪ್ಪನಂತೆಯೇ ತನ್ನ ಕೈಕೆಳಗೆ ನೂರಾ ಒಂದನೆಯ ಆಳಾಗಿ ದುಡಿಯುತ್ತ ಕಾರಣವಿಲ್ಲದೆ ತನ್ನಿಂದ ಒದೆಸಿಕೊಳ್ಳುತ್ತ ಕೊನೆಗೊಮ್ಮೆ ರೋಸಿ ಓಡಿ ಹೋಗಿದ್ದಂಥ ಹನುಮಪ್ಪ ಎಂಬವನಿಂದ ತನ್ನ ಕಾರ್ಯ ಸಾಧಿಸಿಕೊಳ್ಳಲು ಮುಂದಾದ. ಆದ್ದರಿಂದ ಒಬ್ಬ ಕೂಲಿಯಾಳಿನೊಂದಿಗೆ, ಹನುಮಪ್ಪ ಕೂಡಲೇ ತನ್ನನ್ನು ಕಾಣಲು ಬರುವಂತೆ ಹೇಳಿ ಕಳುಹಿಸಿದ.    ಆದರೆ ಶಂಕರನ ಕಿಡಿಗೇಡಿತನದ ಅರಿವಿದ್ದ ಹನುಮಪ್ಪನಿಗೆ ಅವನ ಹೆಸರೆತ್ತುತ್ತಲೇ ಚೇಳು ಕುಟುಕಿದಂತಾಯಿತು. ಅವನು ಹೇಳಿಕೆ ತಂದವನನ್ನು ಕೋಪದಿಂದ ಧುರುಗುಟ್ಟುತ್ತ, ‘ಹೇ, ಹೋಗಲೇ ಅವನೌವ್ವನಾ! ಸತ್ತರೂ ಇನ್ನೊಂದ್ ದಪಾ ಆ ಹಡೀ ಸೂಳೀಮಗನ ಮಖಾ ನೋಡಕ್ಕಿಲ್ಲಂತ ಓಗೇಳು ಅವ್ನುಗೇ…!’ ಎಂದು ಗದರಿಸಿಬಿಟ್ಟ. ಕೆಲಸದಾಳು ಹಾಗೆಯೇ ಹಿಂದಿರುಗಿದ. ಆದರೆ ಹನುಮಪ್ಪ ಬೈದುದನ್ನು ಶಂಕರನಿಗೆ ಹೇಳಲಿಲ್ಲ. ಬದಲಿಗೆ, ‘ಅವ್ನು ಬರಾಕಿಲ್ಲಾಂದ ಧಣೇರಾ…!’ ಎಂದಷ್ಟೆ ಹೇಳಿದ. ತನ್ನ ಆದೇಶವನ್ನು ತಿರಸ್ಕರಿಸಿದ ಹನುಮಪ್ಪನ ಕೊಬ್ಬನ್ನು ನೆನೆದ ಶಂಕರನಿಗೆ, ಈ ಕ್ಷಣವೇ ಹೋಗಿ ಆ ಬೇವರ್ಸಿಯನ್ನು ಹೊತ್ತು ತಂದು ತುಳಿದು ಹಾಕಲಾ…? ಎಂದೆನ್ನಿಸಿತು. ಆದರೂ ‘ಕಾರ್ಯವಾಸಿ ಕತ್ತೆ ಕಾಲು!’ ಎಂದುಕೊಂಡು ಅವುಡುಗಚ್ಚಿದ. ಆವತ್ತೊಂದು ಭಾನುವಾರ ಸಂಜೆ ತಾನೇ ಖುದ್ದಾಗಿ ಮಸಣದಗುಡ್ಡೆಯ ಹನುಮಪ್ಪನ ಗುಡಿಸಲಿನತ್ತ ಹೊರಟ. ಹನುಮಪ್ಪ ಆಹೊತ್ತು ಕುಡಿದು ಮತ್ತನಾಗಿ ತನ್ನ ಕಾಲೋನಿಯ ಅಶ್ವತ್ಥಮರದ ಕಟ್ಟೆಯಲ್ಲಿ ಕುಳಿತುಕೊಂಡು ನೆರೆಕರೆಯವರೊಡನೆ ಪಟ್ಟಾಂಗ ಹೊಡೆಯುತ್ತಿದ್ದ. ಶಂಕರನ ಕಾರು ಬಂದು ಮರದ ಹತ್ತಿರ ನಿಲ್ಲುತ್ತಲೇ ಬೆಚ್ಚಿಬಿದ್ದು ಎದ್ದು ನಿಂತ. ‘ಮೊನ್ನೆ ತಾನು ಸಿಟ್ಟಿನ್ ಬರದಾಗ ಈ ದುಷ್ಟನಿಗೆ ಬೈದಿದ್ದನ್ನು ಇವನ ಎಂಚಿಲು ನೆಕ್ಕುವ ಆ ನಾಯಿ ಹಾಗೆಯೇ ಒದರಿಬಿಟ್ನೇನೋ! ಇವ ಮೊದಲೇ ತಲೆಕೆಟ್ಟ ಮುಳ್ಳುಹಂದಿ. ಈಗ ನೆರೆಕರೆಯವರ ಮುಂದೆ ಅದೇನ್ ಮಾಡ್ತಾನೋ…?’ ಎಂದು ಯೋಚಿಸಿ ತಣ್ಣಗೆ ಬೆವರಿದ.    ಶಂಕರ ಗಂಭೀರವಾಗಿ ಕಾರಿನಿಂದಿಳಿದವನು ಹನುಮಪ್ಪನನ್ನೊಮ್ಮೆ ದುರುಗುಟ್ಟಿ ನೋಡಿದ. ಆಗ ಇನ್ನಷ್ಟು ಕುಗ್ಗಿದ ಅವನ ದೃಷ್ಟಿಯು ತಟ್ಟನೆ ನೆಲಕಚ್ಚಿತು. ‘ಲೇ, ಮಗನಾ ಲಘೂನ ಓಡಿ ಹೋಗಲೇ ಇಲ್ಲಿಂದ…!’ ಎಂದು ಅವನೊಳಗೆ ಯಾರೋ ಕೂಗಿ ಹೇಳಿದಂತಾಯಿತು. ಪಟ್ಟನೇ ತಲೆ ಎತ್ತಿ ಶಂಕರನತ್ತ ನೋಡಿದ. ಆದರೆ ಅವನಾಗಲೇ ಇವನೆದುರು ಬಂದು ನಿಂತಿದ್ದ. ಹನುಮಪ್ಪ ದೆವ್ವ ದರ್ಶನವಾದಂತೆ ಬೆದರಿ ಕುಸಿದು ಬೀಳುವುದೊಂದೇ ಬಾಕಿಯಿತ್ತು! ಅದೇ ಹೊತ್ತಿಗೆ ಅವನೊಂದಿಗೆ ಕುಳಿತಿದ್ದ ನೆರೆಕರೆಯವರು, ‘ಈಗೇನೋ ಗಮ್ಮತ್ತು ನಡೆಯಕೈತಿ!’ ಎಂದು ಕುತೂಹಲ, ಭಯದಿಂದ ರಪ್ಪನೆದ್ದವರು ಶಂಕರನತ್ತ ಹಲ್ಲು ಗಿಂಜುತ್ತ ಹಿಂದೆ ಸರಿದು ನಿಂತು ಅವನಾಟಕ್ಕೆ ಅನುವು ಮಾಡಿಕೊಟ್ಟರು. ‘ಯಾಕಾ ಹನುಮಪ್ಪಾ ಆವತ್ತು ಹೇಳದೆ ಕೇಳದೆ ಕೆಲಸ ಬಿಟ್ಟು ಹೋದವನದ್ದು ಆಮೇಲೆ ಪತ್ತೇನೇ ಇಲ್ಲವಲ್ಲಾ ಮಾರಾಯಾ?’ ಎಂದು ಶಂಕರ ಮುಗುಳ್ನಗುತ್ತ ಪ್ರಶ್ನಿಸಿದ. ಆಗ ಹನುಮಪ್ಪನಿಗೆ ಜೀವ ಬಂದಂತಾಯಿತು. ಆದರೂ ವಿಪರೀತ ಭಯಪಟ್ಟಿದ್ದರಿಂದಲೋ ಏನೋ ಅವನ ಯೋಚನೆಯೇ ನಿಂತುಹೋಗಿತ್ತು. ಶಂಕರನ ಮಾತಿಗೆ ಪಕ್ಕನೇ ಏನುತ್ತರಿಸಬೇಕೆಂದು ತಿಳಿಯದೆ, ‘ಹ್ಞಾಂ… ಅದೂ, ಹಾಗೇನಿಲ್ರೀ ಧಣೇರಾ…!’ ಎಂದು ಹಲ್ಲು ಗಿಂಜಿದ. ‘ಎಂಥದು ಹಾಗೇನಿಲ್ಲ? ನನ್ನೊಂದಿಗೆ ನೀನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದಿ ಮಾರಾಯಾ? ಆದರೂ ನನ್ನ ಸ್ವಭಾವ ಎಂಥದ್ದು ಅಂತ ಅರ್ಥವಾಗಲಿಲ್ಲವಲ್ಲಾ ನಿಂಗೆ…? ಆವತ್ತೇನೋ ಕೋಪದ ಭರದಲ್ಲಿ ಎರಡೇಟು ಹೊಡೆದುಬಿಟ್ಟೆ. ಅಷ್ಟಕ್ಕೇ ಎದ್ದು ಹೋಗಿಬಿಡುವುದಾ! ಆನಂತರ ನಾನೆಷ್ಟು ಸಂಕಟಪಟ್ಟೆ ಅಂತ ನಿನಗೇನಾದರೂ ಗೊತ್ತುಂಟಾ?’ ಎಂದು ವಿಷಾದ ವ್ಯಕ್ತಪಡಿಸಿದ. ಶಂಕರನ ಕುತಂತ್ರ ಅರಿಯದ ಅಮಾಯಕ ಹನುಮಪ್ಪ ಅವನ ಶರಣಾಗತಿಯನ್ನು ಕಂಡು ವಿಸ್ಮಯಗೊಂಡ. ಬಳಿಕ, ‘ಎಷ್ಟಾದರೂ ಕಷ್ಟಕಾಲದಲ್ಲಿ ಕೆಲ್ಸ ಕೊಟ್ಟು ಕಾಪಾಡ್ದ ಧಣಿ ಇವ್ರು. ಅಷ್ಟಲ್ಲದೇ ಸ್ವತಃ ತಾವೇ ಹುಡುಕೊಂಬಂದು ತಪ್ಪೊಪ್ಕೊಂಡಿದ್ದಾರೆ. ಇಂಥವರನ್ನು ಬೈದ್ ಬಿಟ್ನಲ್ಲ!’ ಎಂದು ಕೊರಗಿ, ಸಂಕೋಚದಿಂದ ಹಿಡಿಯಾಗಿ ಏನೋ ಹೇಳಲು ಬಾಯಿ ತೆರೆದ. ಅಷ್ಟರಲ್ಲಿ, ‘ನೋಡು ಹನುಮಪ್ಪ, ಇನ್ನೇನೂ ಮಾತಾಡಬೇಡ. ನನಗೆ ನಿನ್ನ ಅವಶ್ಯಕತೆ ತುಂಬಾ ಇದೆ. ನಾಳೆಯಿಂದ ಮರುಮಾತಾಡದೆ ಕೆಲಸಕ್ಕೆ ಬಂದುಬಿಡು. ಹ್ಞಾಂ, ಇನ್ನೊಂದು ಮಾತು. ಇಷ್ಟು ವರ್ಷ ನನ್ನೊಂದಿಗೆ ಕೂಲಿಯವನಾಗಿ ದುಡಿದೆ. ಆದರೆ ನಾಳೆಯಿಂದ ಮೇಸ್ತ್ರಿಯಾಗಿ ದುಡಿಯಬೇಕು. ಅದು ನಿನ್ನಿಂದ ಸಾಧ್ಯವಾ?’ ಎಂದು ಹಸಿದ ನಾಯಿಯ ಮುಂದೆ ಮಾಂಸದ ಚೂರನ್ನೆಸೆದಂತೆ ಆಸೆ ತೋರಿಸಿದ. ಮೇಸ್ತ್ರಿ ಎಂದ ಕೂಡಲೇ ಹನುಮಪ್ಪ ಖುಷಿಯಿಂದ ಆಕಾಶಕ್ಕೆ ನೆಗೆದುಬಿಟ್ಟ. ಏಕೆಂದರೆ ಅವನು ಈಶ್ವರಪುರಕ್ಕೆ ಕಾರ್ಮಿಕನಾಗಿ ಬಂದು ದುಡಿಯಲಾಂಭಿಸಿ ಹದಿನೈದು ವರ್ಷಗಳು ಕಳೆದಿದ್ದವು. ಮನೆ, ಕಟ್ಟಡ ಕಟ್ಟುವ ಕೆಲಸವೆಲ್ಲವನ್ನೂ ಕಲಿತಿದ್ದ. ಇಂದಲ್ಲ ನಾಳೆ ದೊಡ್ಡ ಮೇಸ್ತ್ರಿಯಾಗಬೇಕು ಎಂಬ ಕನಸನ್ನೂ ಕಾಣುತ್ತಿದ್ದ. ಅದಕ್ಕಾಗಿ ಹಲವು ಗುತ್ತಿಗೆದಾರರೊಡನೆ ಆಗಾಗ ಅಂಗಲಾಚುತ್ತಲೂ ಇದ್ದ. ಆದರೆ ಅವರು ಯಾರೂ ಇವನ ಕೆಲಸದ ಮೇಲೆ ವಿಶ್ವಾಸಬಾರದೆ ನಿರಾಕರಿಸುತ್ತಿದ್ದರು. ಹಾಗಾಗಿ ಹೊಟ್ಟೆಪಾಡಿಗೆ ಮಾತ್ರವೇ ಎಂಬಂತೆ ದುಡಿಯಲು ಹೋಗುತ್ತಿದ್ದ. ಇಂದು ಶಂಕರನಂಥ ದೊಡ್ಡ ಗುತ್ತಿಗೆದಾರನೊಬ್ಬ, ‘ನನ್ನ ಮೇಸ್ತ್ರಿಯಾಗುತ್ತೀಯಾ?’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಆನಂದದಿಂದ ಉಬ್ಬಿ ಹೋದ.    ನಿಜ ಹೇಳಬೇಕೆಂದರೆ ಆಗ ಶಂಕರನಿಗೂ ಮೇಸ್ತ್ರೀಗಳ ಜರೂರತ್ತಿತ್ತು. ಆದ್ದರಿಂದಲೇ ಅವನು ಒಂದೇ ಹೊಡೆತಕ್ಕೆ ಎರಡು ಮಿಕಗಳನ್ನು ಹೊಡೆಯುವ ಹುನ್ನಾರದಿಂದ ಬಂದಿದ್ದ. ಆದರೆ ಕುಕ್ಕುಟಗಳಂತೆ ತಂತಮ್ಮ ಕಾಲ ಬುಡಕ್ಕೇ ಕೆದಕಿಕೊಳ್ಳುವಂಥ ಬಂಡವಾಳಶಾಹಿಗಳ ಸ್ವಾರ್ಥ, ಕುತ್ಸಿತ ಬುದ್ಧಿಯನ್ನು ಒಂದಷ್ಟು ಬಡವರ್ಗವು ಎಂದೂ ತಿಳಿಯುವ ಗೋಜಿಗೆ ಹೋಗುವುದಿಲ್ಲ ಅಥವಾ ತಿಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ಹನುಮಪ್ಪನೂ ಹಿಂದುಮುಂದು ಯೋಚಿಸದೆ, ‘ಇಲ್ಲ ಧಣೇರಾ, ಆವತ್ತು ನೀವೊಂದೇಟು ಬಡ್ದದ್ದು ನನ್ನ ಒಳ್ಳೆಯದಕ್ಕಾತು ಅಂತ ತಿಳಕೊಂಡಿನ್ರೀ. ಆತ್ರಿಯಪ್ಪಾ, ನಾಳಿಂದ ನಾ ಮೇಸ್ತ್ರೀಯಾಗೇ ನಿಮ್ಮ ಕೂಡೆ ಕೆಲಸಕ್ಕ ಬರ್ತೀನ್ರೀ. ನೀವೀಗ ಲಘೂನ ಮನಿ ಕಡೀ ಹೊಂಡ್ರೀ ಧಣೇರಾ…!’ ಎಂದು ಸೌಜನ್ಯದಿಂದ ಕೈಮುಗಿಯುತ್ತ ಅಂದ. ‘ಹಾಗೆ ಹೇಳು ಮತ್ತೆ…! ಸರಿ ಹಾಗಾದರೆ, ನಾಳೆ ಬೆಳಿಗ್ಗೆ ಮನೆಯ ಕಡೆ ಬಂದುಬಿಡು. ಕೆಲಸ ಎಲ್ಲೀಂತ ಹೇಳುತ್ತೇನೆ’ ಎಂದ ಶಂಕರ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿ ನಗುತ್ತ ಹಿಂದಿರುಗಿದ. ತಾನು ಅಂದಂತೆಯೇ ಮರುದಿನ ಅವನಿಗೆ ಮೇಸ್ತ್ರಿ ಕೆಲಸವನ್ನು ಕೊಟ್ಟವನು, ಕೆಲವೇ ದಿನದೊಳಗೆ ಅವನ ಆಪ್ತತೆಯನ್ನೂ ಗಳಿಸಿಕೊಂಡ. ಕಾರಣ ಹನುಮಪ್ಪ, ಸಂತಾನಪ್ಪನ ಸಮೀಪದ ಬಂಧುವೂ ಮೇಲಾಗಿ ಆತ್ಮೀಯ ಮಿತ್ರನೂ ಆಗಿದ್ದ. ಆದ್ದರಿಂದ ಶಂಕರ ಹನುಮಪ್ಪನ ಸಹಾಯದಿಂದಲೇ ಸಂತಾನಪ್ಪನ ವಿಶ್ವಾಸವನ್ನು ಮರಳಿ ಗಳಿಸಿ, ತನ್ನ ಕಾರ್ಯ ಸಾಧಿಸಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಸಂತಾನಪ್ಪನ ವೃತ್ತಿನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಹನುಮಪ್ಪನೊಡನೆ ಮಿತಿಮೀರಿ ಹೊಗಳುತ್ತ ತನ್ನ ಸಾರಾಯಿ ಪಾರ್ಟಿಗಳಿಗೆ ಅವನನ್ನು ಉಪಾಯವಾಗಿ ಆಹ್ವಾನಿಸತೊಡಗಿದ. ಆದರೆ ಶಂಕರ ಹೇಗೆ ಹೇಗೆ ಪ್ರಯತ್ನಿಸಿದರೂ ಸಂತಾನಪ್ಪ ಅವನನ್ನು ನಂಬಲು ತಯಾರಿರಲಿಲ್ಲ. ಕಾರಣ ಶಂಕರ ಮಹಾದುಷ್ಟನೆಂಬ ಭಯವೊಂದು ಕಡೆಯಾದರೆ ಹಿಂದೆ ಒಂದಷ್ಟು ಕಾಲವಾದರೂ ತನಗೂ, ತನ್ನ ಸಂಸಾರಕ್ಕೂ ಅನ್ನ ನೀಡಿದ ಧಣಿಯೆಂಬ ಗೌರವಕ್ಕೋ ಏನೋ ಅವನು ಶಂಕರನ ಸ್ನೇಹದ ಹಸ್ತವನ್ನು ಪುರಸ್ಕರಿಸಲು ಇಷ್ಟಪಡಲಿಲ್ಲ. ಆದರೂ ಹನುಮಪ್ಪನ ಮೂಲಕ ಶಂಕರನ ನಿರಂತರ ಪ್ರಯತ್ನವು ಕೊನೆಗೂ ಒಮ್ಮೆ ಸಂತಾನಪ್ಪನ ಬುದ್ಧಿಯನ್ನು ಮಂಕು ಬಡಿಸಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ಶಂಕರನೂ ಕೊನೆಯ ಪ್ರಯತ್ನವೆಂಬಂತೆ ಆವತ್ತು ಕಡೆಪಾಡಿಬೆಟ್ಟಿನ ತನ್ನ ಹೊಸ ಫ್ಲ್ಯಾಟ್‍ನಲ್ಲಿ ಸಂತಾನಪ್ಪನಿಗಾಗಿಯೇ ಸಣ್ಣದೊಂದು ಔತಣ ಕೂಟವನ್ನು ಆಯೋಜಿಸಿ ಅವನನ್ನು ವಿಶೇಷ ಆದರದಿಂದ ಆಹ್ವಾನಿಸಿದ.    ಸಂತಾನಪ್ಪ ಒಲ್ಲದ ಮನಸ್ಸಿನಿಂದ ಹನುಮಪ್ಪನೊಂದಿಗೆ ಶಂಕರನ ಫ್ಲ್ಯಾಟ್‍ಗೆ ಆಗಮಿಸಿದ. ಶಂಕರನ ಊರ ಐವರು ಆಪ್ತ ಸ್ನೇಹಿತರೊಂದಿಗೆ ಬರೇ ಎಂಟು ಜನರಿಂದ ಕೂಡಿದ ಸಣ್ಣ ಔತಣಕೂಟ ಅದಾಗಿದ್ದರಿಂದ ಸಂತಾನಪ್ಪನೂ ಮುಜುಗರ ಬಿಟ್ಟು ಅವರೊಂದಿಗೆ ಬೆರೆತ. ವಿದೇಶಿ ಮದ್ಯದ ಬಾಟಲಿಗಳು ಮತ್ತು ಆಡು, ಕೋಳಿಯ ಹುರಿದ ಮಾಂಸದ ಖಾದ್ಯಗಳು ಕೋಣೆಯೊಳಗೆಲ್ಲ ಘಮಘಮಿಸುತ್ತ ಹಭೆಯಾಡುತ್ತಿದ್ದವು. ಶಂಕರ ಎಲ್ಲರೊಂದಿಗೆ ಸಂತಾನಪ್ಪನಿಗೂ ಸಾರಾಯಿ ಕೊಟ್ಟ. ಸಂತಾನಪ್ಪ ಸಂಕೋಚದಿಂದ ಒಂದು ಪೆಗ್ಗು ಹೊಟ್ಟೆಗಿಳಿಸಿದ. ತುಸು ಮತ್ತೇರುತ್ತಲೇ ನಿರ್ಭಿಡೆಯಿಂದ ಕೈಕಾಲು ಚಾಚಿ ಕುಳಿತು ಶಂಕರ ಬಗ್ಗಿಬಗ್ಗಿಸಿ ಕೊಡುತ್ತಿದ್ದ ಪೆಗ್ಗನ್ನು ಅಡಿಗಡಿಗೆ ಹೀರುತ್ತ ಗತ್ತಿನಿಂದ ಎಲ್ಲರೊಂದಿಗೆ ಹರಟತೊಡಗಿದ. ಶಂಕರ, ಸಂತಾನಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಾದ ಕಬ್ಬಿಣ ಬಡಿಯಲು ಇದೇ ಸರಿಯಾದ ಸಮಯ ಎಂದು ಖಚಿತವಾಗುತ್ತಲೇ, ‘ಏನೋ ಸಂತಾನಪ್ಪಾ ನನ್ನ ಮೇಲೆ ನಿನಗಿನ್ನೂ ಹಿಂದಿನ ಬೇಸರ ಹೋಗಲಿಲ್ಲವಾ ಮಾರಾಯ? ನನ್ನ ಸ್ನೇಹ ಮಾಡಲೇ ಹೆದರುವಂಥ ದ್ರೋಹವನ್ನು ನಿನಗೆ ನಾನು ಮಾಡಿದ್ದಾದರೂ ಏನು ಹೇಳು…?’ಎಂದು ಬೇಸರದ ಧ್ವನಿಯಿಂದ ಕೇಳಿದ. ಶಂಕರನ ಆ ಬಗೆಯ ಆತ್ಮೀಯತೆಯ ಮಾತನ್ನು ಕೇಳಿದ ಸಂತಾನಪ್ಪನಿಗೆ ರಪ್ಪನೆ ಉತ್ತರಿಸಲು ತುಸು ಸಂಕೋಚವಾಯಿತು. ಆದರೆ ಈಗ ತಾನೂ ಶಂಕರನಷ್ಟೇ ಶ್ರೀಮಂತನಲ್ಲವೇ! ಎಂದುಕೊಂಡವನು ಅದೇ ವರ್ಚಸ್ಸಿನಿಂದ, ‘ಹೇ, ಹಾಗೇನಿಲ್ರೀ ಶಂಕ್ರಣ್ಣಾ, ನಿಮ್ಮ್ ಮ್ಯಾಲೆ ಈವಾಗ ನಂಗೇನೂ ಬ್ಯಾಸರ ಇಲ್ಲ ಬಿಡ್ರೀ…!’ ಎಂದ ನಗುತ್ತ. ‘ಹಾಗಾದರೆ ಮತ್ಯಾಕೆ ಆವತ್ತು ಹನುಮಪ್ಪನೊಡನೆ ನಾನು ಎಷ್ಟೊಂದು ಬಾರಿ ಹೇಳಿ ಕಳುಹಿಸಿದರೂ ನೀನು ಬರಲಿಲ್ಲ ಯಾಕೆ ಮಾರಾಯಾ? ಅದರರ್ಥ ನನ್ನ ಮೇಲೆ ನಿನಗಿನ್ನೂ ವಿಶ್ವಾಸ ಬಂದಿಲ್ಲ ಎಂದೇ ಅಲ್ಲವಾ?’ ‘ಯಪ್ಪಾ ವಿಶ್ವಾಸ ಅದೇರೀ… ಆದ್ರಾ ಒಂದ್ಕಾಲದಾಗ ನೀವ್ ನಮ್ ಧಣಿಯಾಗಿದ್ರಲ್ರೀ, ಅದಕ್ಕಾ ಸ್ವಲ್ಪ ಮುಜುಗರ ಆಗ್ತಿತ್ತ್ ಅಷ್ಟೇರೀ!’ ‘ಓಹೋ ಅಷ್ಟೇನಾ ವಿಷ್ಯಾ. ನೋಡು ಸಂತಾನಪ್ಪ ಈ ಹಿಂದೆ ನೀನು ನನ್ನೊಂದಿಗೆ ಕೂಲಿಯವನಾಗಿ ದುಡಿದಿದ್ದಿ ಅಂತ ನಿನ್ನ ಮನಸ್ಸಿನಲ್ಲಿದ್ದರೆ ಅದನ್ನೀಗಲೇ ತೆಗೆದು ಹಾಕು ಮಾರಾಯಾ. ಯಾಕೆಂದರೆ ನೀನೂ ನನ್ನ ಮಟ್ಟಕ್ಕೆ ಬೆಳೆಯಲು ಕಷ್ಟಪಟ್ಟಿದ್ದಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಬೆಳೆದುಬಿಟ್ಟಿದ್ದಿ ನೋಡು. ಹೀಗಿರುವಾಗ ಆವತ್ತಿನ ಭೇದಭಾವವನ್ನು ಇನ್ನೂ ಇಟ್ಟುಕೊಳ್ಳುವುದರಲ್ಲಿ ಅರ್ಥ ಉಂಟಾ ಹೇಳು?

Read Post »

ಇತರೆ

ಮಹಿಳೆ ಎಷ್ಟು ಸುರಕ್ಷಿತಳು?

ಹೆಣ್ಣು ಎಂಬ ಕಾರಣಕ್ಕೆ ಆಕೆ ಮನೆಯಿಂದ ಹೊರಗೆ ಹೋಗುವುದನ್ನು ಮತ್ತು ದೂರದ ಊರುಗಳಿಗೆ ಪಯಣಿಸುವುದನ್ನು ನಿರ್ಬಂಧಿಸಲಾಗುತ್ತದೆ. ಸಂಪ್ರದಾಯವಾದಿಗಳು ಶಾಲೆಗೆ ಹೋಗದಂತೆ ತಡೆಯುತ್ತಿದ್ದಾರೆ. ದಾಖಲಾದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಾರೆ.

ಮಹಿಳೆ ಎಷ್ಟು ಸುರಕ್ಷಿತಳು? Read Post »

ಇತರೆ

ಪರಿಷತ್ತಿಗೆ ಚುನಾವಣೆ

ವಿಶೇಷ ಲೇಖನ ಕನ್ನಡ ಘಟಾನುಘಟಿಗಳ ಪ್ರಚಾರ ಶುರು..! ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕøತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇಚ್ಛಾಶಕ್ತಿಯೊಂದಿಗೆ ಉದಯಿಸಿದ್ದೇ ಕನ್ನಡ ಸಾಹಿತ್ಯ ಪರಿಷತ್. ಪರಿಷತ್ತಿನ ಆರಂಭ ಕಾಲದಿಂದಲೂ 1940 ರವರೆಗೂ ಅಧ್ಯಕ್ಷರನ್ನು ಅವರ ಸಾಹಿತ್ಯ, ಕನ್ನಡ ನಾಡು-ನುಡಿಯ ಬಗೆಗಿನ ಸೇವೆ, ಬದ್ಧತೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರವೇ ಪರಿಷತ್ತಿಗೂ ಚುನಾವಣೆಯ ಪದ್ಧತಿ ಜಾರಿಗೊಂಡಿತು. ತಿರುಮಲೆ ತಾತಾಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಗೊ.ರು ಚನ್ನಬಸಪ್ಪ, ಸಾ.ಶಿ.ಮರಳಯ್ಯ, ಡಾ.ಹಂಪ ನಾಗರಾಜಯ್ಯ, ಜಿ.ನಾರಾಯಣ, ಚಂದ್ರಶೇಖರ ಪಾಟೀಲರಂತಹ ಸಾರಸ್ವತ ದಿಗ್ಗಜರು ಪರಿಷತ್ತಿನ ಆಡಳಿತ ಚುಕ್ಕಾಣಿ ಹಿಡಿದು ಕನ್ನಡದ ಕೈಂಕರ್ಯಕ್ಕೆ ತಮ್ಮದೇ ಕೊಡುಗೆ ನೀಡಿದವರು. ಬಹುತೇಕ ಸಾಹಿತಿಗಳು; ಹೋರಾಟಗಾರರೇ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಿರಿ ಅಲಂಕರಿಸುತ್ತ ಬಂದರೂ ಡಾ. ನಲ್ಲೂರು ಪ್ರಸಾದ್ ಆರ್. ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿಯಂತಹ ಸಾಹಿತ್ಯಾಸಕ್ತರು ಆಯ್ಕೆಯಾಗುವ ಮೂಲಕ ಹೊಸ ಶಕೆಗೆ ನಾಂದಿ ಹಾಡಿದರು. ಇದೀಗ ಮುಂದುವರೆದು ನಿವೃತ್ತ ಅಧಿಕಾರಿ ವರ್ಗವೂ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗಳತ್ತ ಆಸಕ್ತವಾಗಿವೆ. ಮನು ಬಳಿಗಾರ್ ಅವರು ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಈ ಪರಂಪರೆಗೆ ನಾಂದಿ ಹಾಡಿದರು. 5 ವರ್ಷಗಳ ಕಾಲ ಅಧ್ಯಕ್ಷಗಾದಿ ಅಲಂಕರಿಸಿದ ಅವರ ಆಡಳಿತಾವಧಿ 2021 ಮಾರ್ಚ್-3ಕ್ಕೆ ಅಂತ್ಯವಾಗಲಿದ್ದು ಈಗಿನಿಂದಲೇ ಆಕಾಂಕ್ಷಿಗಳ ಚುನಾವಣಾ ತಯಾರಿ ಚುರುಕುಗೊಂಡಿದೆ. ವಾಡಿಕೆಯಂತೆ ಕಸಾಪಗೆ ಅಧ್ಯಕ್ಷರ ಆಡಳಿತಾವಧಿ 3 ವರ್ಷಕ್ಕೆ ಸೀಮಿತವಾಗಿತ್ತು. ಪ್ರಸ್ತುತ ಅಧ್ಯಕ್ಷರಾದ ಮನು ಬಳಿಗಾರ್ ಅವರು, 5 ವರ್ಷಕ್ಕೆ ಏರಿಕೆ ಮಾಡಿದ ಪರಿಣಾಮ ಅವರಿಗೆ ಎರಡು ವರ್ಷಗಳ ಹೆಚ್ಚುವರಿ ಅವಧಿ ಲಭಿಸಿತು. ಇವರು ಸರ್ಕಾರದ ಅಧಿಕಾರಿಯಾಗಿದ್ದರೂ ಕೂಡ ಕವಿಗಳು ಎಂದು ಮುದ್ದಾಮ್ ಸಾಹಿತಿ ಎಂದು ಗುರುತಿಸಲ್ಪಡುವ ಅವರು, ಸಾಹಿತಿಗಳಾಗಿ ರಾಜ್ಯದ ವಿವಿಧೆಡೆ ಅಖಿಲ ಭಾರತ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಯೂ ಇವರಿಗಿದೆ. ಈಗ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತುದ ಹಾಲಿ ಗೌರವ ಕಾರ್ಯದರ್ಶಿ ವಾ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳದ ಶೇಖರಗೌಡ ಮಾಲೀ ಪಾಟೀಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅಖಾಡದಲ್ಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆಲವರು ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ. ಅಧ್ಯಕ್ಷರ ಅವಧಿ 3 ವರ್ಷಕ್ಕೆ ಮುಗಿಯುತ್ತದೆ ಎಂದು ತಿಳಿದು ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲೇ ಆಕಾಂಕ್ಷಿಗಳು ಪ್ರಚಾರ ಕಾರ್ಯ ಬಿರುಸಿನಿಂದ ನಡೆಸಿದ್ದರು. ಆದರೆ ಅಧ್ಯಕ್ಷರ ಅಧಿಕಾರವಧಿ 2 ವರ್ಷ ಮುಂದಕ್ಕೆ ಹೋದ ಪರಿಣಾಮ ಇವರು ಪ್ರಚಾರದಿಂದ ಹಿಂದೆ ಸರಿಯಬೇಕಾಯಿತು. ಈಗ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. 3 ಲಕ್ಷಕ್ಕೂ ಅಧಿಕ ಮತದಾರರು– ಕಳೆದ ಐದು ವರ್ಷಗಳ ಹಿಂದೆಯೇ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ 30 ಜಿಲ್ಲೆಗಳು, 5 ಗಡಿನಾಡು ಘಟಕಗಳು ಒಟ್ಟು ಸೇರಿ ಸುಮಾರು 1.87 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಎಲ್ಲಾ ಘಟಕಗಳಲ್ಲಿ ಹೊಸದಾಗಿ 1.24 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, 3,25,098 ಮಂದಿ ಸದಸ್ಯರು ಸದಸ್ಯತ್ವ ಪಡೆದಂತಾಗಿದೆ. ಪರಿಷತ್ತಿಗೆ ಇಷ್ಟು ಸಂಖ್ಯೆಯ ಜನರು ಸದಸ್ಯರಾಗಿರುವುದು ಇದೇ ಮೊದಲು. ಅಷ್ಟೇ ಅಲ್ಲ; ಈ ಹಿಂದೆ ಬೆಂಗಳೂರಿನಲ್ಲಿ ಒಂದೇ ಕಡೆ ಮತದಾನ ನಡೆಯುತ್ತಿತ್ತು. ಈಗ ಕ್ಷೇತ್ರವಾರು ಅಂದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ಈ ನವೆಂಬರ್‌ನಲ್ಲೇ ಮನು ಬಳಿಗಾರ್ ಅವರು ಪತ್ರ ಬರೆಯಲಿದ್ದು; ಆ ನಂತರವೇ ಚುನಾವಣಾಧಿಕಾರಿಗಳು ನೇಮಕಗೊಳ್ಳುತ್ತಿದ್ದಂತೆಯೇ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ಕನಿಷ್ಟ ಮೂರು ವರ್ಷ ಸದಸ್ಯರಾಗಿರುವವರು ಮತದಾನಕ್ಕೆ ಅರ್ಹರಾಗಿರುತ್ತಾರೆ. ಅಧ್ಯಕ್ಷರ ಆಯ್ಕೆ ಜೊತೆ ಎಲ್ಲಾ 30 ಜಿಲ್ಲೆ ಹಾಗೂ 5 ಗಡಿನಾಡು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಚುನಾವಣೆಗೆ ಸ್ಪರ್ಧೆ ಸುಲಭವಲ್ಲ– ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಗೆ ಸ್ಪರ್ಧಿಸುವುದು ಪ್ರಸ್ತುತ ಸಂದರ್ಭದಲ್ಲಿ ಸುಲಭದ ಮಾತಲ್ಲ. 3.25 ಲಕ್ಷ ಮತದಾರರನ್ನು ಸಂಪರ್ಕಿಸಬೇಕಾದರೆ ಹಣಬಲ ಇರಲೇ ಬೇಕು. ಇಡೀ ರಾಜ್ಯದಾದ್ಯಂತ ಸಂಚರಿಸಿ ಮತದಾರರ ಓಲೈಕೆ ಮಾಡಬೇಕು. ಜಾತಿ ರಾಜಕಾರಣವೂ ಇಲ್ಲಿ ಮುಖ್ಯವಾಗುತ್ತದೆ. ಹಣ, ಜಾತಿ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಬಡ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಯ ಕನಸು ಕಾಣುವುದು ದುಸ್ತರವೇ ಸರಿ. ಮಹಿಳೆಯರಿಗೆ ಅವಕಾಶ ನೀಡಿ– ಶತಮಾನಗಳ ಇತಿಹಾಸವಿರುವ ಪರಿಷತ್ತಿಗೆ ಈವರೆಗೂ ಒಬ್ಬ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿಲ್ಲ. ಹೀಗಾಗಿಯೇ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಏಕೆ ಮಹಿಳಾ ಸಾಹಿತಿಯೊಬ್ಬರ ಸಾರಥ್ಯಕ್ಕೆ ಸಿಗಬಾರದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ವಚನ ಸಾಹಿತ್ಯದಿಂದ ಇತ್ತೀಚಿನ ನವ ಸಾಹಿತ್ಯದ ವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳಾ ಲೇಖಕಿಯರಿಗೆ ಕೊರತೆಯಿಲ್ಲ. ಗಟ್ಟಿತನದ ಸಾಹಿತ್ಯ ರಚನೆಯಲ್ಲೂ ಮಹಿಳೆಯರು ತೊಡಗಿದ್ದಾರೆ. ಹಾಗಾಗಿಯೇ ಈ ಬಾರಿ ಮಹಿಳೆಯರಿಗೆ ಸ್ಥಾನ ಸಿಗಲಿ ಎಂಬ ಒತ್ತಾಯಗಳೂ ಕೇಳಿ ಬರುತ್ತಿವೆ. ಒಟ್ಟಾರೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಜಿದ್ದಾಜಿದ್ದಿನ ಕಣವಾಗಲಿದ್ದು, ಯಾವುದೇ ರಾಜಕೀಯ ಚುನಾವಣೆಗಳಿಗೂ ಕಡಿಮೆ ಇಲ್ಲದಂತೆ ನಡೆಯುವ ಮುನ್ಸೂಚನೆಗಳೂ ಹೆಚ್ಚಾಗಿವೆ. ಕನ್ನಡ ಸಾರಸ್ವತ ಸಂಸ್ಥೆಗೆ ನೂತನ ಸಾರಥಿಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೇ ನಾವು..! ********************************* ಕೆ.ಶಿವು.ಲಕ್ಕಣ್ಣವರ

ಪರಿಷತ್ತಿಗೆ ಚುನಾವಣೆ Read Post »

ಇತರೆ, ಲಹರಿ

ಬಣ್ಣಗಳ ದಂಡು

ಲಹರಿ ಬಣ್ಣಗಳ ದಂಡು ಶಿವಲೀಲಾ ಹುಣಸಗಿ ಹೇಗೆ ಹೇಳಲಿ ಮನದ ತಳಮಳವ ಸಖಾ.ಬಲ್ಲೆ ನೀನು ನನ್ನಂತರಂಗವ.ನಿನ್ನ ಕಾಣುವ ಕೌತುಕಕೇ ಮೋಡಗಳು ತೊರಣ ಕಟ್ಟಿದಂತೆ ಇಳೆಯತ್ತ ಬಾಗಿವೆ.ಮಿಂಚುಗಳು ಆಗಾಗ ಹೃದಯ ಕಂಪನ ಮಾಡಿ ನಸುನಕ್ಕಿವೆ.ಹನಿಗಳೋ ಮದಿರೆಯಗುಂಗಿನಲಿ ಅವಿತು ನನ್ನ ತಣಿಸಲು ತವಕಿಸು ತಿವೆ.ಬಾನಿಗೆಲ್ಲ ಹಣತೆ ಹಚ್ಚಿ ನನ್ನಾಗಮನಕೆ ಕಾದಂತಿದೆ. ಪ್ರೀತಿ ತುಂಬಿದ ಹೃದಯವ ಬೊಗಸೆಯಲ್ಲಿ ಹಿಡಿದು ನಿಂ ತಂತೆ.ನಯನಗಳ ಪ್ರತಿಬಿಂಬಕೆ ನಿನೊಂದೆ ಉತ್ತರ ಸಖಾ.ನಿನ್ನ ಪ್ರೇಮದ ಶರವೇಗಕೆ ಎದೆಗೂಡು ತಲ್ಲಣಿಸಿದೆ. ನಿನ್ನಧರದ ಅಬ್ಬರಕೆ ಜೇನಹನಿಗಳು ತೊಟ್ಟಿಕ್ಕುತ್ತಿವೆ. ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ. ಬಣ್ಣಗಳ ದಂಡು ಮುಂಬಾಗಿಲಿಗೆ ಬಂದಿದೆ.ರಂಗೇರುವ ಕ್ಷಣ ಗಣನೆ.ನೀ ಇಲ್ಲದೆ ಕೆನ್ನೆಗೆ ರಂಗು ಬರದು.ನಿನ್ನ ಸ್ಪರ್ಶವಿರದೇ ಯಾವ ಬಣ್ಣವು ನನ್ನ ಸಂತೈಸದು. ಅಂದು ನೀ  ಕೊಟ್ಟ ನವಿಲುಗರಿಯೊಂದು ಚಿಗುರೊಡೆದಿದೆ. ಮನದಲಿಗ ಮೈದೆಳೆದು ನವಿರಾಗಿ ಗರಿಬಿಚ್ಚಿದೆ.ಆಗೊಮ್ಮೆ ಈಗೊಮ್ಮೆ ಇಣುಕುವ ಸವಿನೆನಪಂತೆ.ತೂಗು ಮಂಚದಲಿ ಎದೆಗೊರಗಿ ಕಾಡಿದಾಗೆಲ್ಲ,ಗಲ್ಲದ ತುಂಬ ನನ್ನ ಬಣ್ಣ ಮೆತ್ತಿ ದ್ದು ನೆನಪಾಗದೇ ಸಖಾ? ಪುಟಗಳಾಚೆ ಇಣುಕಿ ನಗಿಸುವ ನೀನು ಹೊಂಬೆಳಕಂತೆ ನನಗೆ.ಓಕುಳಿಯಾಡುವ ಪಿಚಕಾರಿಯಲ್ಲಿ ಅವಿತಂತೆ ನೀನು.ಮೈಮನಕೆ ಸೋಕಿದಾಗ ಅದ್ಭುತ ಸಾಂಗತ್ಯ ನಮ್ಮದು.ಬಾನು,ಭೂವಿಯು ನಾಚಿ ನೀರಾದಂತೆ ನಮ್ಮ ಪ್ರೇಮದ ಸಿಂಚನ.ಹೃದಯಕ್ಕೊಂದು ಜೀವಮಿಡಿತ ನೀನು.ನಿನ್ನೆದೆಯ ತುಡಿತ ನಾನು. ಹಕ್ಕಿಯಂ ತೆ ಗರಿಗೆದರಿ ಬಾನೆತ್ತರಕ್ಕೆ ಹಾರುವಷ್ಟು.ಗೂಡಿನೊಳಗೊಂ ದು ಗೂಡು ನಮ್ಮದು.ಕಣ್ಣಿಗೆ ಕಾಣದ ಪ್ರೇಮಲೋಕ. ನಮ್ಮೊಳಗಿನ ಸ್ವಪ್ನಲೋಕ.ಕಾಮನ ಬಿಲ್ಲಿನ ಪಲ್ಲಕ್ಕಿಯಲಿ ನಮ್ಮ ಪ್ರೇಮೋತ್ಸವ.ಕಡುಬಣ್ಣದಲಿ ಗಾಢವಾದ ನಿತ್ಯೋತ್ಸವ.ಕಾದ ಗಳಿಗೆಯೆಲ್ಲವೂ ನಿನಗರ್ಪಿತ ಸಖಾ. ಪ್ರೇಮವೆಂದರೆ ಅಮೂರ್ತಗಳ ಹೂ ಗುಚ್ಛ.ನಿನ್ನಾತ್ಮದ ಪ್ರತಿಬಿಂಬದಂತೆ.ನಿನ್ನ ವಿರಹದ ತಾಪದಲಿ.ದಾರಿ ದೂರ ವಾದರೂ ತಡೆದೆನು.ಮನಸಿಗೆ ದೂರವಾದರೆ ಬದುಕ ಲಾರೆ.ಕಾಡುವ ಗಳಿಗೆಗೆ ನೀ ಬೆಂದಿರಬಹುದು.ನೆನಪಿನ ಮಲ್ಲಿಗೆಯ ಮುಡಿಸಿ ಮರೆಯಾಗದಿರು.ಮೂರ್ತ ರೂಪವಾಗಿ ಪ್ರಕೃತಿಯ ಬಣ್ಣವಾಗಿ ಮೇಳೈಸು….ಕಾದಿರುವೆ ನೆನಪುಗಳ ಜಪಮಾಲೆ ಜಪಿಸುತ….. **************************************

ಬಣ್ಣಗಳ ದಂಡು Read Post »

ಇತರೆ, ದಾರಾವಾಹಿ

ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ

Read Post »

ಇತರೆ

ಪದಗಳು

ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. ಒಂದೇ ಘಟನೆಯ ಮೇಲೆ ನಡೆಯುವ ಕಥನ ಗೀತೆಗೆ ಮಾತ್ರ ಇದನ್ನು ಅನ್ವಯಿಸಬಹುದು. ಆದರೆ ದೀರ್ಘಕಾವ್ಯಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ. ಆಶುರಚನೆ ಮತ್ತು ಸಂಪ್ರದಾಯಗಳು ಎರಡು ಸೂತ್ರಗಳು. ಲಾವಣಿ:- ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ (ಗುಲ್ಬರ್ಗಾ), ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ಲಾವಣಿ ಎಂಬ ಒಂದು ಪ್ರಕಾರವಿದ್ದರೂ ಉತ್ತರದಷ್ಟೂ ವೈವಿದ್ಯ ಅದಕ್ಕಿಲ್ಲ.      ಸಾಂಪ್ರದಾಯಿಕವಾಗಿ ಲಾವಣಿಗಳನ್ನು ಬಯಲು ಲಾವಣಿ ಮತ್ತು ಮೇಳ ಲಾವಣಿಯೆಂದೂ ಕರೆಯಲಾಗುತ್ತದೆ. ಬಯಲು ಲಾವಣಿಯಲ್ಲಿ ಹೆಸರೇ ಹೇಳುವಂತೆ ಒಬ್ಬನೇ ಲಾವಣಿಯನ್ನ ಹೇಳುತ್ತಾನೆ. ಅಂತಾ ಸಂದರ್ಭ ಈಗಲೂ ಇದೆ. ಆದರೆ ಮೇಳ ಲಾವಣಿಯಲ್ಲಿ ಡಪ್ಪು, ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.         ಇದು ಉತ್ತರ ಭಾಗದ ಒಂದು ಜನಪ್ರಿಯ ಸಂಪ್ರದಾಯ ಲಾವಣಿಗಳನ್ನು ಗೀಗಿ ಡಿಪ್ಪಿನ ಹಾಡು, ಹಾಡಕ್ಕಿ, ಶಾಯರಿ, ಹರದೇಶಿ – ನಾಗೇಶಿ, ಕಲ್ಗಿ – ತುರಾಯಿ, ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅವುಗಳಲ್ಲಿ ಹರದೇಶಿ -ನಾಗೇಶಿ ಸಂಪ್ರದಾಯವನ್ನೆ ಕಲ್ಲಿ ತುರಾ ಸವಾಲ್ – ಜವಾಬು ಪದಗಳು ಎಂದು ಕರೆಯಲಾಗುತ್ತದೆ. ಕನ್ನಡದ ಲಾವಣಿಯ ಇತಿಹಾಸವನ್ನು ಮರಾಠಿಯ ಪೇಶ್ವೆಯ ಕಾಲಕ್ಕೆ ಕೊಂಡೊಯ್ಯೊಲಾಗುತ್ತದೆ. ಪೇಶ್ವೆಯರ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಪೊವಾಡಗಳೆಂಬ ವೀರರ ಕಥನ ಕವನಗಳೇ ಆಗಿದೆ. ನಮ್ಮಲ್ಲಿಯೂ ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ, ಸರ್ಜಪ್ಪ ನಾಯಕ ಮುಂತಾದ ಅನೇಕ ಲಾವಣಿಗಳು ಈ ಮಾದರಿಯವು ಎಂದು ಮೇಲ್ಮಟ್ಟಕ್ಕೆ ಒಪ್ಪಿಕೊಳ್ಳಬಹುದಾದರೂ, ಮರಾಠಿಯ ಪೋವಾಡಗಳು ಕನ್ನಡದಲ್ಲಿರುವಂತೆ ಜಾನಪದೀಯ ರಚನೆಗಳು.        ಲಾವಣಿ ಹಾಡುಗಳು ಬಹಳ ವಿಸ್ತಾರವಾದವುಗಳಲ್ಲಿ ಮಹಾಕಾವ್ಯದ ವ್ಯಾಪ್ತಿ ಇದಕ್ಕೆ ಹೊರತಾದುದು. ಹೆಚ್ಚೆಂದರೆ ಒಂದು ಗಂಟೆಯ ಅವಧಿಯಲ್ಲಿ ಒಂದು ಸಖಿ ಮುಖ್ಯ. ಹಾಡು ಹಾಗೂ ಖ್ಯಾಲಿಯನ್ನು ಬಳಸಬೇಕಾಗುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು. ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ಅದು ಸವಾಲ್ ಜವಾಬ್ ವಿಚಾರದಲ್ಲಿ ಅದರ ಕಾಲವನ್ನು ಒಂದು ಗಂಟೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಂದರ್ಭಾನುಸಾರ ಬೆಳೆಯುತ್ತದೆ. ಲಾವಣಿ ಸಾಹಿತ್ಯ ಪರಂಪರೆಯಲ್ಲಿ ಬೀಬೀ ಇಂಗಳಗಿ ಭಾಗದ ಲಾವಣಿಕಾರರು, ತೇರದಾಳ ಭಾಗದ ಲಾವಣಿಕಾರರು, ಹಲಕುಂದ ಭಾಗದ ಲಾವಣಿಕಾರರು ಎಂಬ ಪ್ರದೇಶಿಕ ವಿವರಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಗೀಗೀಪದ :-         ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಗೀಯ ಗೀಯ ಗೀಗೀ ಹರೇ ಗೀಯ ಗಾ ಎಂಬ ಪಲ್ಲವಿಯೊಂದಿಗೆ ಹಾಡುವ ಒಂದು ಜನಪದ ಗೀತಸಂಪ್ರದಾಯ.          ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು. ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ           ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.          ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಮಹಿಳೆಯರು .ಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ… (ಸಂಗ್ರಹ) ಗೀಗೀ ಪದ ಬಂದಾರ ಬರ್ರಿ ತಂದೀನಿ ಕಥೆಯನ್ನಕಿವಿಗೊಟ್ಟು ಕೇಳ್ರಿ ಮಾತಾ, ಮರೆತ, ನೀವಾ ಮಾತಾ ಮರೆತಾssಗೀಯ ಗೀಯಾ ಗಾ ಗೀಯ ಗೀಯಾ|| ಚೀನಾಕ ಹುಟ್ಟಿ ವಿಶ್ವವನ್ನೆ ಮೆಟ್ಟಿ ನಿಂತಾ,ಬಣ್ಣದ್ಬದುಕು ಮಣ್ಣಾಗಿ ಹೋದ್ಹಂತ,ಕಂತಿ ಕುಂತಿ ಕನಸೆಲ್ಲ ಕದಡಿದ್ಹಾಂಗ ನೀರಾಗ,ನಾ ನೀ ಅನ್ನೊ ಸೊಕ್ಕಿನ ಮಂದೀಗಾ,ಮಿಗಿಲೀನ ಬಾಳಪಾಠ ಕಲಿಸಿದಂತಾ,ಕೊರೋನಾ  ಕಥಿಯನ್ನಾss,ಅರೇ!ಗೀಯ ಗೀಯಾ ಗಾಗಿಯ ಗೀಯಾ…||೧|| ಮುಟಿಗಿವಳಗ ಬಾಳ್ ಐತಿ ಮೂರಾದಿನದಾಗ ನಿಂತೈತಿಸಾವಿನ ಮುಂದ ಸಣ್ಣವರು ನಾವೆಲ್ಲ,ಮನೆ ಮಾರು ತೊರೆದ ಮಕ್ಕಳನ್ನಮರಳಿ ಮನೆಗೆ ಸೇರಿಸಿ,ಇರೋದ್ರಾಗ ನೆಮ್ಮದಿಯಾಗಿರಿಯಂತಾ, ಹೇಳಿದ ಕೊರೋನಾ ಕಥಿಯನ್ನಾss ಅರೆ! ಗೀಯ ಗೀಯಾ ಗಾಗಿಯ ಗೀಯಾ…||೨|| ಬಣ್ಣದ ಬದುಕು ಬಯಲಿಗಾತುಸುಣ್ಣದ ಬಾಳು ಸವಾಲಾಯ್ತುಮೇಲು ಕೀಳು ಬಡವ ಬಲ್ಲಿದಅಂಬೋ ಮಾತು ಬಲಿಯಾಯ್ತು,ನಾವೆಲ್ಲ ಒಂದೆಂಬ,ಮಾನವೀಯತೆಹರಿಸಿ, ಮನುಕುಲಕ ನಾವ್ಯರಂತ,ಹೇಳಿದ ಕೊರೋನಾ ಕಥಿಯನ್ನಾssಅರೆ! ಗೀಯ ಗೀಯಾ ಗಾಗಿಯ ಗೀಯಾ||೩|| ತಿಂದು ತೇಗಿದ ಮಂದಿಗೆ ಅರೆಹೊಟ್ಟೆ ಮಾಡಿ, ದುಡ್ಡೇ ದೊಡ್ಡಪ್ಪನಲ್ಲಾ,ಅತಿಯಾದ ಜೀವನದ್ಮತಿಗೆಅವನತಿಯೇ ಸೂತ್ರವಿದಂತ,ಮುಖಕೆ ನಿಜದ ಮುಖ್ವಾಡ ಹಾಕಿದೇಹ ಮನಸ್ಸು ಶುದ್ದ ಮಾಡೋ ,ಸರಳಾss ಸಮ್ಮಾನ ಸ್ಯಾನಿಟೈಸರ್ ಹಾಕಿದಂತಾssಕೊರೋನಾ ಕಥಿಯನ್ನಾssಅರೆ ಗೀಯ ಗೀಯ ಗಾಗಿಯ ಗೀಯಾ||೪|| ಕಹಿಸತ್ಯ ಆದ್ರೂನು ಸಿಹಿಯಾಗಿ ಉಣಬೇಕ್ರಿಜೀವದಾಗ ಏನೈತಿ,ಎನ್ ಕಟಕೊಂಡುಸಾಯೊದೈತಿ ,ನಂದಾs ಎಲ್ಲ ಅಂಬೋ ಮಾತು ಸುಳ್ಳೈತಿ, ಸರಳ ಸತ್ಯ ತಿಳಿರಿ,ನಂಬಿಕೇನೆ ಜೀವನದ ಜೀವಾಳಂತ ಬಾಳ ಗೆಲಿರೀ, ಹೇಳಿದ ಕೊರೋನಾ ಕಥಿಯನ್ನಾsss…||೫|| ಶಾರು *******************************************************

ಪದಗಳು Read Post »

ಇತರೆ

ನೋಟ

ನೋಟ ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ. ಈ ವಚನದತಿರುಳು: ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ. ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ. ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ. ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು. ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು.. ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು! ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು! ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ. *********************************************************************                                                

ನೋಟ Read Post »

You cannot copy content of this page

Scroll to Top