ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಗಾಂಧಿ ವಿಶೇಷ

ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ,ಡಾ.ಎಸ್.ಬಿ. ಬಸೆಟ್ಟಿ

ಪುಸ್ತಕ ಸಂಗಾತಿ ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ “ನನ್ನ ಜೀವನವೇ ನನ್ನ ಸಂದೇಶ”-ಮಹಾತ್ಮ ಗಾಂಧೀಜಿ. ‘ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ ಅಥವಾ ಆತ್ಮಚರಿತ್ರೆ’ ಎಂಬ ಪುಸ್ತಕವು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯಾಗಿದ್ದು, ಇದು ಪ್ರಕಟಗೊಂಡು ೨೦೨೫ಕ್ಕೆ ನೂರು ವರ್ಷಗಳಾಗಿವೆ. ಇಂದು ಈ ಆತ್ಮಚರಿತ್ರೆ  ಶತಮಾನ ಪೂರ್ಣಗೊಂಡ ಸಂದರ್ಭದಲ್ಲಿ, ಅದು ಮಾನವ ಸಮಾಜದ ಅಕ್ಕಸಾಕ್ಷಾತ್ಕಾರದ ದಾರಿದೀಪವಾಗಿದೆ. ಗಾಂಧಿಯವರು ‘ನನ್ನ ಸತ್ಯದ ಪ್ರಯೋಗಗಳು’ ಎಂದು ಹೆಸರಿಸಿದ್ದ ಆತ್ಮಚರಿತ್ರೆಯನ್ನು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತ್ಯಂತ ಪ್ರಭಾವಶಾಲಿ ಪುಸ್ತಕಗಳಲ್ಲಿ ಒಂದೆಂದು ಪರಿಗಣಿಸಬಹುದು. ಸ್ವಾಮಿ ಆನಂದ್ ಮತ್ತು ಗಾಂಧೀಜಿಯವರ ಇತರ ನಿಕಟ ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ಇದನ್ನು ಬರೆಯಲಾಗಿದೆ. ಇದು ಬಾಲ್ಯದಿಂದ ೧೯೨೧ರವರೆಗಿನ ಅವರ ಜೀವನವನ್ನು ಒಳಗೊಂಡಿದೆ. ಇದನ್ನು ಸಾಪ್ತಾಹಿಕ ಕಂತುಗಳಲ್ಲಿ ಬರೆಯಲಾಯಿತು ಮತ್ತು ೧೯೨೫ ರಿಂದ ೧೯೨೯ ರವರೆಗೆ ಅವರ ‘ನವಜೀವನ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಇದರ ಇಂಗ್ಲಿಷ್ ಅನುವಾದವು ಅವರ ಇನ್ನೊಂದು ಜರ್ನಲ್ ‘ಯಂಗ್ ಇಂಡಿಯಾ’ದಲ್ಲಿಯೂ ಕಂತುಗಳಲ್ಲಿ ಪ್ರಕಟವಾಯಿತು. ೧೯೯೮ರಲ್ಲಿ ಜಾಗತಿಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಧಿಕಾರಿಗಳ ಸಮಿತಿಯು ಈ ಪುಸ್ತಕವನ್ನು “೨೦ ನೇ ಶತಮಾನದ ೧೦೦ ಅತ್ಯುತ್ತಮ ಆಧ್ಯಾತ್ಮಿಕ ಪುಸ್ತಕಗಳಲ್ಲಿ” ಒಂದೆಂದು ಹೆಸರಿಸಿತು.ಈ ಆತ್ಮಚರಿತ್ರೆಯನ್ನು ಗಾಂಧೀಜಿಯವರ ಅಪ್ತ ಶಿಷ್ಯ ಮಹಾದೇವ ದೇಸಾಯಿ ಗುಜರಾತಿಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಬಳಿಕ ಪ್ರಸಿದ್ದ ಸಾಹಿತಿ ಹಾಗೂ ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ ಅದನ್ನು ಕನ್ನಡಕ್ಕೆ ಅನುವಾದಿಸಿದರು. ಗೊರೂರು ಅವರ ಅನುವಾದ ಕೇವಲ ಭಾಷಾಂತರವಲ್ಲ, ಅದು ಗಾಂಧೀಜಿಯ ಚಿಂತನೆಯ “ಸತ್ಯ”ವನ್ನು ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಶ್ರೇಷ್ಠ ಸೇವೆ ಎಂದು ಹೇಳಬಹುದು. ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.ಮುನ್ನುಡಿಯಲ್ಲಿ ಗಾಂಧಿಯವರು ಹೀಗೆ ಹೇಳುತ್ತಾರೆ: “ನಿಜವಾದ ಆತ್ಮಚರಿತ್ರೆಯನ್ನು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ಸತ್ಯದೊಂದಿಗಿನ ನನ್ನ ಪ್ರಯೋಗಗಳ ಕಥೆಯನ್ನು ನಾನು ಹೇಳಲು ಬಯಸುತ್ತೇನೆ, ಮತ್ತು ನನ್ನ ಜೀವನವು ಪ್ರಯೋಗಗಳನ್ನು ಮಾತ್ರ ಒಳಗೊಂಡಿರುವುದರಿಂದ, ಕಥೆಯು ಆತ್ಮಚರಿತ್ರೆಯ ರೂಪವನ್ನು ಪಡೆಯುತ್ತದೆ ಎಂಬುದು ನಿಜ. ಆದರೆ ಅದರ ಪ್ರತಿಯೊಂದು ಪುಟವು ನನ್ನ ಪ್ರಯೋಗಗಳ ಬಗ್ಗೆ ಮಾತ್ರ ಮಾತನಾಡುತ್ತದೆಯೇ ಎಂದು ನನಗೆ ಅಭ್ಯಂತರವಿಲ್ಲ.”ಆತ್ಮಚರಿತ್ರೆಯ ಪರಿಚಯವನ್ನು ಅಧಿಕೃತವಾಗಿ ಗಾಂಧಿಯೇ ಬರೆದಿದ್ದಾರೆ, ಅದರಲ್ಲಿ ಯೆರ್ವಾಡಾ ಸೆಂಟ್ರಲ್ ಜೈಲಿನಲ್ಲಿ ತಮ್ಮ ಜೊತೆ ಕೈದಿಯಾಗಿದ್ದ ಜೈರಾಮ್‌ದಾಸ್ ದೌಲತ್ರಾಮ್ ಅವರ ಒತ್ತಾಯದ ಮೇರೆಗೆ ಅವರು ತಮ್ಮ ಆತ್ಮಚರಿತ್ರೆಯನ್ನು ಹೇಗೆ ಮತ್ತೆ ಬರೆಯಲು ಪ್ರಾರಂಭಿಸಿದ್ದಾರೆಂದು ಉಲ್ಲೇಖಿಸಿದ್ದಾರೆ. ಆತ್ಮಚರಿತ್ರೆ ಬರೆಯುವ ಬಗ್ಗೆ ಸ್ನೇಹಿತರೊಬ್ಬರು ಕೇಳಿದ ಪ್ರಶ್ನೆಯ ಬಗ್ಗೆ ಅವರು ಯೋಚಿಸುತ್ತಾರೆ, ಇದು ಪಾಶ್ಚಿಮಾತ್ಯ ಅಭ್ಯಾಸ, ಇದು “ಪೂರ್ವದಲ್ಲಿ ಯಾರೂ ಮಾಡುವುದಿಲ್ಲ” ಎಂದು ಪರಿಗಣಿಸುತ್ತಾರೆ. ಗಾಂಧಿಯವರು ತಮ್ಮ ಆಲೋಚನೆಗಳು ನಂತರದ ಜೀವನದಲ್ಲಿ ಬದಲಾಗಬಹುದು ಎಂದು ಒಪ್ಪುತ್ತಾರೆ. ಆದರೆ ಅವರ ಚರಿತ್ರೆಯ ಉದ್ದೇಶ ಜೀವನದಲ್ಲಿ ಸತ್ಯದೊಂದಿಗಿನ ಅವರ ಪ್ರಯೋಗಗಳನ್ನು ಹೇಳುವುದು ಮಾತ್ರ. ಈ ಪುಸ್ತಕದ ಮೂಲಕ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ತಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಪ್ರಯೋಗಗಳನ್ನು ಹೇಳಲು ಬಯಸುತ್ತಾರೆ. ಕೆಲ ಸಹಸಚರರು “ಆತ್ಮಚರಿತ್ರೆಯ ಬರೆಯುವುದು ಪಾಶ್ಚಾತ್ಯ ಪದ್ದತಿ” ಎಂದು ವಿರೋಧಿಸಿದರೂ ಗಾಂಧೀಜಿಯವರು ಅದನ್ನು ವೈಯಕ್ತಿಕ ಕೀರ್ತಿಗಾಗಿ ಅಲ್ಲಾ, ಬದಲಿಗೆ “ಸತ್ಯದೊಂದಿಗೆ ನನ್ನ ಪ್ರಯೋಗಗಳ ದಾಖಲೆಯಾಗಿರಲಿ” ಎಂದು ಸ್ಪಷ್ಟಪಡಿಸಿದರು. ನವಜೀವನ ಪತ್ರಿಕೆಯ ಮುಖಾಂತರ ಅವರು ದಕ್ಷಿಣ ಆಫ್ರಿಕಾದ ಸತ್ಯಾಗ್ರಹ ಹೋರಾಟದ ಕುರಿತು ಬರೆದ ಲೇಖನಗಳೇ ನಂತರ ಈ ಮಹತ್ವದ ಕೃತಿಗೆ ಆಧಾರವಾದವು. ೧೯೧೫ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಗ್ಪುರ ಅಧಿವೇಶನದ ಚರ್ಚೆಯ ನಂತರ ಪುಸ್ತಕವು ಕೊನೆಗೊಳ್ಳುತ್ತದೆ.ಗಾಂಧಿಯವರು ಜನನ ಮತ್ತು ಪೋಷಕರಿಂದ ಪ್ರಾರಂಭಿಸಿ, ಗಾಂಧಿಯವರು ಬಾಲ್ಯ, ಬಾಲ್ಯವಿವಾಹ, ಪತ್ನಿ ಮತ್ತು ಪೋಷಕರೊಂದಿಗಿನ ಸಂಬಂಧ, ಶಾಲೆಯಲ್ಲಿನ ಅನುಭವಗಳು, ಲಂಡನ್‌ಗೆ ಅವರ ಅಧ್ಯಯನ ಪ್ರವಾಸ, ಇಂಗ್ಲಿಷ್ ಸಂಭಾವಿತ ವ್ಯಕ್ತಿಯಂತೆ ಇರಲು ಮಾಡಿದ ಪ್ರಯತ್ನಗಳು, ಆಹಾರ ಪದ್ಧತಿಯಲ್ಲಿನ ಪ್ರಯೋಗಗಳು, ದಕ್ಷಿಣ ಆಫ್ರಿಕಾಕ್ಕೆ ಅವರ ಪ್ರಯಾಣ, ವರ್ಣ ಪೂರ್ವಾಗ್ರಹದ ಅನುಭವಗಳು, ಧರ್ಮದ ಅನ್ವೇಷಣೆ, ಆಫ್ರಿಕಾದಲ್ಲಿ ಸಾಮಾಜಿಕ ಕೆಲಸ, ಭಾರತಕ್ಕೆ ಮರಳುವಿಕೆ, ರಾಜಕೀಯ ಜಾಗೃತಿ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಅವರ ನಿಧಾನ ಮತ್ತು ಸ್ಥಿರವಾದ ಕೆಲಸದ ನೆನಪುಗಳನ್ನು ನೀಡುತ್ತಾರೆ.ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸೇರಿ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ-ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ‍್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ `ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ‍್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.ಗಾಂಧಿ ಆತ್ಮಚರಿತ್ರೆಯ ಒಂದು ಮುಖ್ಯ ಘಟನೆಯೆಂದರೆ ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ ಒಡನಾಡುವಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಚರಿತ್ರೆಯಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ- ಇಂತಹ ಅನೇಕ ಆತ್ಮಾವಲೋಕನ ಮತ್ತು ಮಂಥನಗಳಿಂದ ಗಾಂಧಿ ಆತ್ಮಚರಿತ್ರೆಯ ವೈರುಧ್ಯಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ. ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಹೀಗಾಗಿ ಈ ಕೃತಿ ಗಾಂಧೀಜಿಯ ಅಂತರಂಗಕ್ಕೆ ಹಿಡಿದಂತಹ ಕನ್ನಡಿ ಸತ್ಯವನ್ನು ಹುಡುಕುವ ಮನುಷ್ಯನ ಅಂತರ್ಯಾನದ ದಾಖಲೆಯಾಗಿದೆ.೧೯೨೦ರ ದಶಕದ ಆರಂಭದಲ್ಲಿ ಗಾಂಧಿಯವರು ಹಲವಾರು ನಾಗರಿಕ ಅಸಹಕಾರ ಅಭಿಯಾನಗಳನ್ನು ನಡೆಸಿದರು. ಶಾಂತಿಯುತವಾಗಿರಬೇಕೆಂಬ ಅವರ ಉದ್ದೇಶದ ಹೊರತಾಗಿಯೂ, ಹಲವಾರು ಸಂದರ್ಭಗಳಲ್ಲಿ ಹಿಂಸಾಚಾರದ ಘಟನೆಗಳು ಭುಗಿಲೆದ್ದವು. ಗಾಂಧಿಯವರು ೧೯೨೧ರ ಹಿಂದೆಯೇ ತಮ್ಮ ಆತ್ಮಚರಿತ್ರೆಯನ್ನು ಬರೆಯಲು ಪ್ರಾರಂಭಿಸಿದ್ದರು ಆದರೆ ಅವರ ರಾಜಕೀಯ ಕಾರ್ಯಗಳಿಂದಾಗಿ ಆ ಕೆಲಸವನ್ನು ಪಕ್ಕಕ್ಕೆ ಇಡಬೇಕಾಯಿತು ಎಂದು ನೆನಪಿಸಿಕೊಂಡರು. ಅವರ ಹಿನ್ನೆಲೆ ಮತ್ತು ಜೀವನದ ಬಗ್ಗೆ ಏನಾದರೂ ಹೇಳಬೇಕೆಂಬ ಬಯಕೆಯನ್ನು ಸಹೋದ್ಯೋಗಿಗಳು ವ್ಯಕ್ತಪಡಿಸಿದ ನಂತರ ಅವರು ಆ ಕೆಲಸವನ್ನು ವಹಿಸಿಕೊಂಡರು ಎಂದು ಅವರು ತಿಳಿಸುತ್ತಾರೆ. ವಸಾಹತುಶಾಹಿ ಅಧಿಕಾರಿಗಳು ೧೯೨೨ರಲ್ಲಿ ಅವರ ಮೇಲೆ ಪ್ರಚೋದನೆ ಮತ್ತು ನಿರ್ದಿಷ್ಟವಾಗಿ ಸರ್ಕಾರದ ವಿರುದ್ಧ ದ್ವೇಷವನ್ನು ಹುಟ್ಟುಹಾಕಿದ ಆರೋಪ ಹೊರಿಸಿದರು ಮತ್ತು ಇದರ ಪರಿಣಾಮವಾಗಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು ಕೇವಲ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಅನಾರೋಗ್ಯದ ಕಾರಣದಿಂದ ಬೇಗನೆ ಬಿಡುಗಡೆಯಾದರು.೧೯೨೫ರವರೆಗಿನ ಗಾಂಧೀಜಿಯವರ ಆತ್ಮಚರಿತ್ರೆ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ. ‘ನಾನು ಕಟ್ಟಿಕೊಡುತ್ತಿರುವ ಕಥನಗಳು  ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.ಈ ಆತ್ಮಚರಿತ್ರೆಯನ್ನು ೨೫ ನವೆಂಬರ್, ೧೯೨೫ ರಿಂದ ೩ ಫೆಬ್ರವರಿ, ೧೯೨೯ ರವರೆಗೆ ೧೬೬ ಕಂತುಗಳಲ್ಲಿ ಬರೆಯಲಾಯಿತು. ಆರಂಭದಲ್ಲಿ ಅವರು ಪುಸ್ತಕ ಸ್ವರೂಪವನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರು, ಆದರೆ ನಂತರ ಅದನ್ನು ವಾರಕ್ಕೊಮ್ಮೆ ಪ್ರಕಟವಾಗುವ ಪ್ರತ್ಯೇಕ ಅಧ್ಯಾಯಗಳೊಂದಿಗೆ ಧಾರಾವಾಹಿ ರೂಪದಲ್ಲಿ ಬರೆಯಲು ಒಪ್ಪಿಕೊಂಡರು. ಇದು ನವಜೀವನದಲ್ಲಿ ಕಾಣಿಸಿಕೊಂಡಿತು. ಅನುಗುಣವಾದ ಇಂಗ್ಲಿಷ್ ಅನುವಾದಗಳನ್ನು ಯಂಗ್ ಇಂಡಿಯಾದಲ್ಲಿ ಮುದ್ರಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ಒಪೀನಿಯನ್ ಮತ್ತು ಅಮೇರಿಕನ್ ಜರ್ನಲ್ ಯೂನಿಟಿಯಲ್ಲಿ ಮರುಮುದ್ರಣ ಮಾಡಲಾಯಿತು. ಹಿಂದಿ ಅನುವಾದವನ್ನು ನವಜೀವನದ ಹಿಂದಿ ಆವೃತ್ತಿಯಲ್ಲಿ ಬಹುತೇಕ ಏಕಕಾಲದಲ್ಲಿ ಪ್ರಕಟಿಸಲಾಯಿತು. ಪುಸ್ತಕದ ಮೂಲ ಇಂಗ್ಲೀಷ್ ಆವೃತ್ತಿಯು ಎರಡು ಸಂಪುಟಗಳನ್ನು ಒಳಗೊಂಡಿತ್ತು, ಅದರಲ್ಲಿ ಮೊದಲನೆಯದು ೧-೩ ಭಾಗಗಳನ್ನು ಒಳಗೊಂಡಿತ್ತು, ಆದರೆ ಎರಡನೆಯದು ೪-೫ ಭಾಗಗಳನ್ನು  ಒಳಗೊಂಡಿತ್ತು. ಮೂಲ ಗುಜರಾತಿ ಆವೃತ್ತಿಯನ್ನು ಸತ್ಯ ನಾ ಪ್ರಯೋಗೋ (ಲಿಟ್. ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್) ಎಂದು ಪ್ರಕಟಿಸಲಾಯಿತು, ಇದು ಆತ್ಮಕಥಾ (ಲಿಟ್. ದಿ ಸ್ಟೋರಿ ಆಫ್ ಎ ಸೋಲ್) ಎಂಬ ಉಪಶೀರ್ಷಿಕೆಯನ್ನು ಹೊಂದಿತ್ತು. ಇಂಗ್ಲಿಷ್ ಆವೃತ್ತಿಯಾದ ಆನ್ ಆಟೋಬಯಾಗ್ರಫಿ, ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್ ಎಂಬ ಉಪಶೀರ್ಷಿಕೆಯನ್ನು ಹೊಂದಿತ್ತು.ಗಾಂಧಿ ಆತ್ಮಚರಿತ್ರೆ ಅವಧಿ ೫೬ ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು ೧೮೬೯ರ ಅಕ್ಟೋಬರ್ ೨ರಂದು. ಆತ್ಮಚರಿತ್ರೆ ಹೊರಬಂದದ್ದು ೧೯೨೫ರ ನವೆಂಬರ್ ತಿಂಗಳಲ್ಲಿ. ಆನಂತರ ೨೩ ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ ೨೩ ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮದೊರಕಿದ್ದು, ಇದೇ ಅವಧಿಯಲ್ಲಿ. ಆತ್ಮಚರಿತ್ರೆ ಫೆಬ್ರವರಿ ೧೯೨೯ರಲ್ಲಿ ಪೂರ್ಣಗೊಂಡಿತು.ದಕ್ಷಿಣ ಆಫ್ರೀಕಾದಿಂದ ಭಾರತಕ್ಕೆ ಮರಳಿದನಂತರ, ಗಾಂಧೀಜಿ ಸ್ವಾತಂತ್ರ‍್ಯವನ್ನು ಮತ್ತು ಸತ್ಯದ ಶಕ್ತಿಯಿಂದ ಸಾಧಿಸಬೇಕೆಂಬ ದ್ರಢ ಸಂಕಲ್ಪ ಕೈಕೊಂಡರು. ತಮ್ಮ ಸಹಚರರೊಂದಿಗೆ ಶಾಂತಿ, ನೈತಿಕ ಜೀವನವನ್ನು ನಡೆಸಲು ಗುಜರಾತಿನ ಅಹಮದಾಬಾದನ ಕರ‍್ಚರಬ್ ಪ್ರದೇಶದಲ್ಲಿ ಮೊದಲ ಆಶ್ರಮವನ್ನು ಸ್ಥಾಪಿಸಿದರು. ನಂತರ ಆಶ್ರಮವನ್ನು ಸಾಬರಮತಿ ತೀರಕ್ಕೆ ಸ್ತಳಾಂತರಿಸಿ  ಸ್ವಾವಲಂಬನೆ ಮತ್ತು ಶುದ್ಧ ಜೀವನದ ತತ್ವಗಳನ್ನು ಕಾಯಕದ ಮೂಲಕ ಅನುಷ್ಟಾನಗೊಳಿಸಿದರು. ಸಾಬರಮತಿ ಆಶ್ರಮವು ಗಾಂಧೀಜಿಯವರ ಚಿಂತನೆÀಗಳ ಜೀವಂತ ಕರ್ಮಭೂಮಿಯಾಗಿ, ಭಾರತದ ನೈತಿಕ ಪುನರುತ್ಥಾನದ ಕೇಂದ್ರವಾಗಿ ರೂಪುಗೊಂಡಿತು. “ಸತ್ಯದೊಂದಿಗೆ ನನ್ನ ಪ್ರಯೋಗಗಳು” ೧೮೬೯ ರಿಂದ ೧೯೨೫ ರವರಗೆ ಅಂದರೆ ಗಾಂಧೀಜಿ ೫೬ ವರ್ಷಗಳ ಜೀವನಯಾನದ ದಾಖಲೆ ಆಗಿದೆ. ಈ ಅವಧಿಯಲ್ಲಿ ಅವರು ಸತ್ಯ, ಅಹಿಂಸೆ, ಸ್ವಾಲಂಭನೆ ಮತ್ತು ಮಾನವತೆಯ ಮೌಲ್ಯಗಳ ಮೇಲೆ ಮಾಡಿದ ಪ್ರಯೋಗಗಳೆಲ್ಲ ಈ

ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ,ಡಾ.ಎಸ್.ಬಿ. ಬಸೆಟ್ಟಿ Read Post »

ಇತರೆ, ಮಕ್ಕಳ ವಿಭಾಗ

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್

ಮಕ್ಕಳ ಸಂಗಾತಿ ಕಂಚುಗಾರನಹಳ್ಳಿ ಸತೀಶ್ ತುಂ ತುಂ ಚಬೂರ್(ಮಕ್ಕಳ ಕಥೆ ) ಭೀಮನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಪ್ಪ ಎಂಬ ರೈತ ವಾಸವಾಗಿದ್ದನು. ಅವನಿಗೆ ಧನಪಾಲ ಮತ್ತು ಲೋಕಪಾಲನೆಂಬ ಇಬ್ಬರು ಗಂಡು ಮಕ್ಕಳಿದ್ದರು. ಧನಪಾಲ ವಿದ್ಯಾವಂತ ಹಾಗೂ ಬುದ್ಧಿವಂತನಾಗಿದ್ದ. ಆದರೆ ಲೋಕಪಾಲ ವಿದ್ಯೆ ತಲೆಗೆ ಹತ್ತದೆ, ಇತ್ತ ವಿದ್ಯಾವಂತನೂ ಆಗದೆ ಅತ್ತ ಬುದ್ಧಿವಂತನೂ ಆಗದೆ ಸೋಮಾರಿತನ ಮೈಗೂಡಿಸಿಕೊಂಡಿದ್ದ. ಆದರ್ಶ ರೈತನಾಗಿದ್ದ ರಾಮಪ್ಪ ತನ್ನ ಇಳಿವಯಸ್ಸಿನಲ್ಲಿ ವ್ಯವಸಾಯ ಮಾಡಲಾಗದೆ, ತನ್ನ ಇಬ್ಬರು ಮಕ್ಕಳಿಗೆ ಅಂದದ ಹೆಣ್ಣನ್ನು ಹುಡುಕಿ ಮದುವೆ ಮಾಡಿದ, ಇದ್ದ ಹತ್ತು ಎಕರೆ ಜಮೀನನ್ನು ಮಕ್ಕಳಿಗೆ ಸಮನಾಗಿ ಹಂಚಿ, ಶ್ರಮವಹಿಸಿ ದುಡಿದು ಬದುಕಿ ಎಂದು ಹೇಳಿ ಕೆಲವೇ ದಿನಗಳಲ್ಲಿ ಮರಣವನ್ನು ಹೊಂದಿದ.ವಿದ್ಯಾವಂತ, ಬುದ್ಧಿವಂತನಾದ ಧನಪಾಲ ತಂದೆ ನೀಡಿದ ಐದು ಎಕರೆ ಜಮೀನಿನಲ್ಲಿ ತಾನು ಕಲಿತ ಅಲ್ಪ ಸ್ವಲ್ಪ ವಿದ್ಯೆಯಿಂದ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ. ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ, ಹೊಸ ಬಗೆಯ ಬೀಜ, ಗೊಬ್ಬರಗಳನ್ನು ಬಳಸಿ, ಬೆಳೆ ಬೆಳೆಯಲು ಪ್ರಾರಂಭಿಸಿದ. ಇದರ ಪರಿಣಾಮ ಸಹಜವಾಗಿ ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಗಳಿಸಿದ. ಬಂದ ಲಾಭವನ್ನು ದುಂದು ವೆಚ್ಚ ಮಾಡದೆ ಕೂಡಿಡುತ್ತಾ ಹೋದ. ಕೂಡಿಟ್ಟ ಹಣದಲ್ಲಿ ಪ್ರತಿವರ್ಷ ಒಂದೊಂದು ಎಕರೆ ಜಮೀನು ಖರೀದಿಸುತ್ತಾ 5 ರಿಂದ 10 ಎಕರೆ, 10 ರಿಂದ 20 ಎಕರೆ ಹೀಗೆ ಖರೀದಿಸುತ್ತಾ ಧನಪಾಲ ಭಾರೀ ಶ್ರೀಮಂತನಾದ. ಆದರೆ ಹುಟ್ಟಿನಿಂದಲೇ ಸೋಮಾರಿಯಾಗಿದ್ದ ಲೋಕಪಾಲ, ತಂದೆ ಕೊಟ್ಟಿದ್ದ 5 ಎಕರೆ ಜಮೀನಿನಲ್ಲಿ ಶ್ರಮಪಟ್ಟು ದುಡಿಯದೇ ದುಂದು ವೆಚ್ಚ ಮಾಡುತ್ತಾ ಪ್ರತಿವರ್ಷ ಒಂದೊಂದೇ ಎಕರೆ ಜಮೀನು ಮಾರಿ ಜೀವನ ಸಾಗಿಸುತ್ತಾ ಬಂದ. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ಇದ್ದ 5 ಎಕರೆ ಜಮೀನನ್ನು ಕಳೆದುಕೊಂಡು ತುತ್ತು ಕೂಳಿಗೂ ಸಂಚಕಾರ ತಂದುಕೊಂಡ. ಅಣ್ಣ ಧನಪಾಲನ ಶ್ರೀಮಂತಿಕೆ, ವೈಭವದ ಜೀವನ ನೋಡಿ ಲೋಕಪಾಲ ಮತ್ತು ಅವನ ಹೆಂಡತಿಗೆ ಸಹಿಸಲಾಗದಷ್ಟು ಅಸೂಯೆ ಮೂಡತೊಡಗಿತು. ಆದರೆ ಅಣ್ಣ ಧನಪಾಲ ಶ್ರಮಪಟ್ಟು ಬೆವರು ಸುರಿಸಿ ದುಡಿಯುತ್ತಾ ಹೊಸ ಮನೆ, ಕಾರು, ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡ. ಬುದ್ಧಿವಂತನಾಗಿದ್ದ ಧನಪಾಲ ಬಂದ ಲಾಭವನ್ನೆಲ್ಲ ಕೂಡಿಡಲು ಆಧುನಿಕ ಶೈಲಿಯ ತಿಜೋರಿ ತರಲು ನಿರ್ಧರಿಸಿದ. ಕಳ್ಳ ಕಾಕರ ಭಯದಿಂದ ವಿಶೇಷ ರೀತಿಯ ಸೀಕ್ರೆಟ್ ಸೌಂಡ್ ಲಾಕರ್ ಇರುವ ತಿಜೋರಿ ತಂದು ತುಂ ತುಂ ಚಬೂರ್ ಎನ್ನುವ ಸೌಂಡ್ ಅನ್ನು ಸೀಕ್ರೆಟ್ ಲಾಕ್ ಗೆ ಅಳವಡಿಸಿದ. ಬಾಗಿಲು ತೆರೆಯುವ ಮುನ್ನ ತುಂ ತುಂ ಚಬೂರ್ ಎಂದರೆ ಬಾಗಿಲು ತೆರೆಯುತ್ತಿತ್ತು. ಬಾಗಿಲು ಮುಚ್ಚಲು ಪುನಃ ತುಂ ತುಂ ಚಬೂರ್ ಎಂದರೆ ಬಾಗಿಲು ಮುಚ್ಚುತ್ತಿತ್ತು.ತಿಜೋರಿ ತಂದ ಧನಪಾಲ ಸಂಪಾದಿಸಿದ ಹಣವನ್ನೆಲ್ಲ ಇಟ್ಟು ತುಂ ತುಂ ಚಬೂರ್ ಎಂದು ಪರೀಕ್ಷಿಸಿದ. ಆಗ ತಿಜೋರಿಯ ಬಾಗಿಲುಗಳು ಮುಚ್ಚಿದವು. ಪುನಃ ತುಂ ತುಂ ಚಬೂರ್ ಎಂದಾಗ ಬಾಗಿಲುಗಳು ತೆರೆದವು. ಮತ್ತೊಮ್ಮೆ ತುಂ ತುಂ ಚಬೂರ್ ಎಂದ ಬಾಗಿಲು ಮುಚ್ಚಿದವು ಆಗ ನೆಮ್ಮದಿಯ ನಿದ್ರೆಗೆ ಜಾರಿದನು.ಕೆಲವೇ ದಿನಗಳಲ್ಲಿ ತಿಜೋರಿಯ ವಿಷಯ ಲೋಕಪಾಲನ ಹೆಂಡತಿಗೆ ತಲುಪಿತು. ಅಸೂಯೆಯಿಂದ ಹೊಂಚು ಹಾಕುತ್ತಿದ್ದ ಅವಳು ಗಂಡನ ತಲೆಯಲ್ಲಿ ವಿಷ ಬೀಜ ಬಿತ್ತಿ, ಹೇಗಾದರೂ ಮಾಡಿ ತಿಜೋರಿಯಲ್ಲಿರುವ ಹಣವನ್ನು ಕಳ್ಳತನ ಮಾಡುವಂತೆ ದಿನೇ ದಿನೇ ಗಂಡನನ್ನು ಪೀಡಿಸುತ್ತಿದ್ದಳು. ಹೆಂಡತಿಯ ಮಾತು ಕೇಳಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದನು. ಎಳ್ಳಷ್ಟು ಕೆಟ್ಟದ್ದನ್ನು ಬಯಸದ ಧನಪಾಲನ ಮನೆಗೆ ಕುಂಟು ನೆಪವೊಡ್ಡಿ ಮನೆಯ ಕಷ್ಟವನ್ನೆಲ್ಲ ಹೇಳಿ ಸಾಲ ಕೇಳಿದ. ಏನು ಅರಿಯದ ಧನಪಾಲ ತಮ್ಮನ ಹೀನಾಯ ಸ್ಥಿತಿಗೆ ಮರುಗಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ತಮ್ಮನನ್ನು ಮಂಚದ ಮೇಲೆ ಕೂರಿಸಿದ. ತಿಜೋರಿ ಬಳಿ ಹೋಗಿ ತುಂ ತುಂ ಚಬೂರ್ ಎಂದು ಹೇಳಿದ. ತುಂ ತುಂ ಚಬೂರ್ ಎಂದ ತಕ್ಷಣ ತಿಜೋರಿಯ ಬಾಗಿಲುಗಳು ತೆರೆದವು. ದೂರದಿಂದಲೇ ಇಣುಕಿ ನೋಡಿದ ಲೋಕಪಾಲನಿಗೆ ತಿಜೋರಿಯಲ್ಲಿನ ಹಣ, ಬೆಳ್ಳಿ, ಬಂಗಾರ ನೋಡಿ ಮತ್ತಷ್ಟು ಆಸೆ ಹೆಚ್ಚಾಯಿತು. ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ. ಅಣ್ಣ ಹತ್ತು ಸಾವಿರದ ಒಂದು ಕಂತೆಯನ್ನು ತೆಗೆದುಕೊಂಡು ತುಂ ತುಂ ಚಬೂರ್ ಎಂದ, ಪುನಃ ಬಾಗಿಲು ಮುಚ್ಚಿದವು. ಇದನ್ನು ಗಮನಿಸುತ್ತಿದ್ದ ಲೋಕಪಾಲ ಮನಸ್ಸಿನಲ್ಲಿಯೇ ಎರಡು ಮೂರು ಸಲ ತುಂ ತುಂ ಚಬೂರ್ ಎಂದು ಹೇಳಿಕೊಂಡು ಅಣ್ಣ ಕೊಟ್ಟ ಹತ್ತು ಸಾವಿರ ರೂಪಾಯಿ ಕಂತೆಯನ್ನು ತೆಗೆದುಕೊಂಡು ಮನೆಗೆ ಬಂದ. ಬಕಪಕ್ಷಿಯಂತೆ ಕಾಯುತ್ತಿದ್ದ ಹೆಂಡತಿಗೆ ಹಣದ ಕಂತೆಯನ್ನು ಕೊಟ್ಟು ನಡೆದ ಘಟನೆಯನ್ನು ವಿವರಿಸಿದ. ನಾಳೆ ಮಧ್ಯಾಹ್ನ ಅಣ್ಣ-ಅತ್ತಿಗೆ ಹೊಲಕ್ಕೆ ಹೋದಾಗ ತಿಜೋರಿ ಕಳ್ಳತನ ಮಾಡುವುದಾಗಿ ತಿಳಿಸಿದ. ಅದೇ ಗುಂಗಿನಲ್ಲಿ ಗಂಡ-ಹೆಂಡತಿ ಪಿಸುಗುಡುತ್ತಾ ನಿದ್ರೆಗೆ ಜಾರಿದರು. ಬೆಳಗಾಗುತ್ತಲೇ ಅಣ್ಣ-ಅತ್ತಿಗೆ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಲು ಹೊರಟರು. ಹೊಲಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಲೋಕಪಾಲ, ಅಕ್ಕಪಕ್ಕದ ಮನೆಯವರು ಯಾರು ಇಲ್ಲದ ಸಮಯ ನೋಡಿ ಮನೆಯ ಬೀಗ ಮುರಿದು ಕಳ್ಳ ಬೆಕ್ಕಿನಂತೆ ನಿಧಾನವಾಗಿ ಒಳಗೆ ಹೋಗಿ ತಿಜೋರಿ ಮುಂದೆ ನಿಂತು ತುಂ ತುಂ ಢಮಾರ್ ಎನ್ನುವನು. ಬಾಗಿಲು ತೆರೆಯಲೇ ಇಲ್ಲ ಮತ್ತೆ ತುಂ ತುಂ ಡಿಮೀರ್ ಎನ್ನುವನು. ಆಗಲು ತಿಜೋರಿಯ ಬಾಗಿಲು ತೆರೆಯಲೇ ಇಲ್ಲ. ಗಲಿಬಿಲಿಗೊಂಡ ಲೋಕಪಾಲ ಮತ್ತೊಮ್ಮೆ ತುಂ ತುಂ ಘಮಾರ್ ಎಂದ ಬಾಗಿಲು ತೆಗೆಯಲೇ ಇಲ್ಲ. ಅಯ್ಯೋ! ಅಣ್ಣ ಹೇಳಿದ ಸೀಕ್ರೆಟ್ ಕೋಡ್ ಮರೆತೇ ಹೋಗಿದೆ ಎಂದು ನಿರಾಸೆಯಾಗಿ ಮನೆಗೆ ಹೋದನು. ಹಣ ತರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿಗೆ ಪಿತ್ತ ನೆತ್ತಿಗೇರಿ ಒಂದು ಹೆಸರು ನೆನಪಿಡೋಕೆ ಆಗಲ್ವಾ? ಎಂದು ಕೆನ್ನೆಗೆ ತಿವಿಯುತ್ತಾಳೆ. ಆಗ ಅಯ್ಯೋ! ನಾನೇನು ಮಾಡಲಿ? ಅದೇನೋ ತುಂ ತುಂ ಢಮಾರ್ ಎಂದು ಅಣ್ಣ ಹೇಳಿದ್ದ. ನಾನು ಅದನ್ನೇ ಹೇಳಿದೆ ಆದರೆ ತೆರೆಯಲಿಲ್ಲ ಅಣ್ಣ ಹೇಳಿದ ಮಂತ್ರ ಮರತೇ ಹೋಯಿತು ಎಂದನು. ಕೋಪಗೊಂಡ ಹೆಂಡತಿ ಅದೆಲ್ಲ ನಂಗೆ ಗೊತ್ತಿಲ್ಲ. ನಿಮ್ಮ ಅಣ್ಣನಿಗಿಂತ ನಾವು ಶ್ರೀಮಂತರಾಗಬೇಕು ಎಂದು ಹಠ ಮಾಡುತ್ತಾಳೆ. ಹೆಂಡತಿಯ ಹಠಕ್ಕೆ ಕಟ್ಟುಬಿದ್ದು ತಮ್ಮ ಊರಲ್ಲೇ ಇದ್ದ ದೊಡ್ಡ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ. ಅವತ್ತು ರಾತ್ರಿ ಒಂದು ದೊಡ್ಡ ಚೀಲದೊಂದಿಗೆ ಚಿನ್ನದ ಅಂಗಡಿಗೆ ಹೋಗಿ ಬೀಗ ಮುರಿದು ಚಿನ್ನದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಳ್ಳುತ್ತಿರುವಾಗ ಗಡಿಬಿಡಿಯಲ್ಲಿ ಆಭರಣದ ಪೆಟ್ಟಿಗೆ ಜಾರಿ ನೆಲಕ್ಕೆ ಬಿದ್ದುಬಿಡುತ್ತದೆ. ನಿಶ್ಯಬ್ದವಾದ ರಾತ್ರಿಯಲ್ಲಿ ಆಭರಣದ ಸದ್ದಿಗೆ ಬೀದಿ ನಾಯಿಯೊಂದು ಒಂದೇ ಸಮನೆ ಬೊಗಳುತ್ತದೆ. ನಾಯಿ ಬೊಗಳುವ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಆಭರಣ ಕದಿಯುತ್ತಿದ್ದ ಲೋಕಪಾಲನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುತ್ತಾರೆ. ಬೆಳಗಾಗುತ್ತಿದ್ದಂತೆ ವಿಷಯ ತಿಳಿದ ಲೋಕಪಾಲನ ಹೆಂಡತಿ ಧನಪಾಲನ ಬಳಿ ಹೋಗಿ ಅಂಗಲಾಚಿ ಗಂಡನನ್ನು ಬಿಡಿಸುವಂತೆ ಕೇಳಿಕೊಳ್ಳುತ್ತಾಳೆ. ಮೃದು ಹೃದಯಿ ಧನಪಾಲ ತಮ್ಮನ ತಪ್ಪನ್ನು ಮನ್ನಿಸಿ ಜಾಮೀನು ಕೊಟ್ಟು ಬಿಡಿಸುತ್ತಾನೆ. ಹೆಂಡತಿ ಮಾತು ಕೇಳಿ ನಿನಗಿಂತ ಶ್ರೀಮಂತನಾಗಲು ನಿನ್ನ ಮನೆಗೂ ಕಳ್ಳತನ ಮಾಡಲು ಬಂದಿದ್ದೆ. ಆದರೆ ತಿಜೋರಿಯ ಸೀಕ್ರೆಟ್ ಕೋಡ್ ಮರೆತು ಹೋಗಿ ಬಾಗಿಲು ತೆರೆಯಲಿಲ್ಲ. ನನ್ನ ಹೆಂಡತಿ ನಾವು ನಿಮ್ಮ ಅಣ್ಣನಿಗಿಂತ ಹೆಚ್ಚು ಶ್ರೀಮಂತರಾಗಬೇಕು ಎಂದು ದುಂಬಾಲು ಬಿದ್ದಿದ್ದಳು. ಅವಳ ಒತ್ತಾಯಕ್ಕೆ ಮಣಿದು ಕೆಟ್ಟದಾರಿ ಹಿಡಿದು ಅವತ್ತೇ ರಾತ್ರಿ ನಮ್ಮೂರಿನ ಚಿನ್ನದ ಅಂಗಡಿಗೆ ಕಳ್ಳತನ ಮಾಡಲು ಬಂದೆ. ನಮ್ಮ ಅತಿಯಾಸೆಯಿಂದಾಗಿ ಜೈಲು ಸೇರುವಂತಾಯಿತು. ಪರರ ಸ್ವತ್ತು ಎಂದೂ ದಕ್ಕದು. ನನ್ನದು ತಪ್ಪಾಯಿತು ಅಣ್ಣ ಎಂದು ಅಣ್ಣ ಧನಪಾಲನ ಕಾಲಿಗೆ ಬೀಳುವನು. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಬಾ ಇಬ್ಬರೂ ಸೇರಿ ಒಟ್ಟಿಗೆ ದುಡಿಯೋಣ ಎಂದ ಅಣ್ಣ ತನ್ನ ತಮ್ಮ ಲೋಕಪಾಲನನ್ನು ಕರೆದುಕೊಂಡು ಹೋಗುವನು. ಹಳೆಯ ಕಹಿ ನೆನಪುಗಳನ್ನು ಮರೆತು ಅಂದಿನಿಂದ ಇಬ್ಬರೂ ಒಟ್ಟಾಗಿ ಶ್ರಮವಹಿಸಿ ದುಡಿಯುವರು. ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಮಾದರಿ ರೈತರಾಗುವರು. ಕಂಸ( ಕಂಚುಗಾರನಹಳ್ಳಿ ಸತೀಶ್ )

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್ Read Post »

ಇತರೆ

“ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ”ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ” ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯದ ಕುರಿತು ಮಾತನಾಡುವ ಮುನ್ನ ಸ್ತ್ರೀ ಸಂವೇದನೆ ಎಂಬ ಪದದ ಅರ್ಥವನ್ನು ನೋಡೋಣ. ಸ್ತ್ರೀಯರ ತಮ್ಮ ಬದುಕಿನಲ್ಲಿ ಎದುರಿಸುವ ಅನುಭವಗಳು, ಸವಾಲುಗಳು ಮತ್ತು ಆಶಯಗಳಿಗೆ ಸಂಬಂಧಿಸಿದ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಅರಿವನ್ನು ಸಂವೇದನೆ ಎಂದು ಹೇಳಬಹುದು. ಸ್ತ್ರೀಪರ ಸಂವೇದನೆ ಎಂದ ಕೂಡಲೇ ಅದನ್ನು ಪುರುಷದ್ವೇಷ ಎಂದು ಅರ್ಥೈಸಿಕೊಳ್ಳುವ ಬದಲು ಮಹಿಳೆಯರ ದೃಷ್ಟಿಕೋನ, ಭಾವನೆಗಳು ಹಾಗೂ ಪ್ರತಿರೋಧಗಳನ್ನು ಕುರಿತ ಭಾವಗಳು ಎಂದು ತಿಳಿಯಬೇಕು.  ಜಾತಿ, ವರ್ಗ, ಲಿಂಗ ತಾರತಮ್ಯ, ಶೋಷಣೆ ಮತ್ತು ಸಾಂಪ್ರದಾಯಿಕ ಪಾತ್ರಗಳ ಮಿತಿಗಳನ್ನು ಪ್ರಶ್ನಿಸುವುದನ್ನು ಕೂಡ ಸ್ತ್ರೀ ಸಂವೇದನೆಯು ಒಳಗೊಂಡಿರುತ್ತದೆ. ತನ್ನ ನಿಲುಕಿನಲ್ಲಿ ಬರುವ ಸಾಮಾಜಿಕ ಅರಿವು, ವ್ಯಕ್ತಪಡಿಸುವಿಕೆ, ಸಾಮಾಜಿಕ ಗೌರವ ಮತ್ತು ಸಮಾನತೆ, ಸಾಮಾಜಿಕ ಸ್ವಾವಲಂಬನೆ ಮತ್ತು ಸಬಲೀಕರಣ ಇವುಗಳ ಕುರಿತು ಮಹಿಳೆ ಹೊಂದಿರುವ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯವೂ ಆಯಾ ಕಾಲದ ಸಾಮಾಜಿಕ ವಾಸ್ತವಗಳಿಗೆ ಮುಖಾಮುಖಿಯಾಗುತ್ತದೆ ಎಂಬುದು ಕುತೂಹಲದ ಸಂಗತಿ ಆದರೂ ಕೂಡ ಆಯಾ ಕಾಲ ಘಟ್ಟದ ಒತ್ತಡಗಳಿಗೆ ಪ್ರತಿ ಸ್ಪಂದಿಸುವ, ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಇಲ್ಲವೇ ವಿರೋಧಿಸುವ, ಕೆಲ ನಿಯಮಗಳನ್ನು ಮುರಿಯುವ ಮತ್ತೆ ಕೆಲ ನಿಯಮಗಳನ್ನು ಮುರಿದು ಕಟ್ಟುವ ಅಂತಿಮವಾಗಿ ಮೌಲ್ಯಗಳನ್ನು ಪ್ರತಿಪಾದಿಸುವ ಸಂವೇದನೆಗಳನ್ನು ಸ್ತ್ರೀ ಸಂವೇದನೆ ಎಂದು ನಾವು ಕರೆಯಬಹುದು. ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಸಾಮಾಜಿಕ ಅರಿವಿನ ಸಂವೇದನೆಯಾದರೆ ಇದರಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ ಅನುಭವಿಸುವ ಸವಾಲುಗಳು  ದೈಹಿಕ ಶ್ರಮ,ಕೌಟುಂಬಿಕ ಸಂಬಂಧಗಳು ಹಾಗೂ ಅವುಗಳಲ್ಲಿ ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳನ್ನು ನಾವು ನೋಡಬಹುದು.ತಮ್ಮ ಭಾವನೆಗಳನ್ನು ಯೋಚನೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ತಮ್ಮದೇ ಆದ ಶೈಲಿಯಲ್ಲಿ ವ್ಯಕ್ತಪಡಿಸಲು ಇರುವ ಅವಕಾಶಗಳು ಮಹಿಳೆಗೆ ಸಾಕಷ್ಟು ಇದ್ದು ಆಕೆ ಸಾಹಿತ್ಯ ಕಲೆ ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಭಾಗವಹಿಸುವ ಮೂಲಕ ಈ ವ್ಯಕ್ತಪಡಿಸುವಿಕೆಯನ್ನು ಕಾಣಬಹುದು. ಲಿಂಗ ಸಮಾನತೆ ಹಾಗೂ ಪುರುಷ ಸಮಾನ ಹಕ್ಕುಗಳನ್ನು ಮಹಿಳೆಯರು ಬಯಸುವುದು ಸ್ತ್ರೀ ಸಂವೇದನೆಯ ಮೂಲ ಉದ್ದೇಶವಾಗಿದೆ. ಇನ್ನು ಮುಖ್ಯವಾಗಿ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆಯನ್ನು ಹೇಳುವುದಾದರೆ ನಾವು ಅದರ ಹಿಂದಿನ ಯುಗಗಳ ಕುರಿತ ಹಿನ್ನೋಟವನ್ನು ಅರಿಯಲೇಬೇಕು.  ಬಸವಾದಿ ಶರಣರ ಶರಣ ಸಂಸ್ಕೃತಿಯ ಕಾಲ ಘಟಕ ಮುನ್ನ  ಆದಿಯುಗದಲ್ಲಿ ಮಹಿಳೆಯ ಸರ್ವತಂತ್ರ ಸ್ವತಂತ್ರಳಾಗಿದ್ದಳು. ವೇದ, ಆಗಮ, ಉಪನಿಷತ್ತು ಪುರಾಣ ಹೀಗೆ ಎಲ್ಲ 64 ವಿದ್ಯೆಗಳನ್ನು ಕಲಿಯುವ ಅವಕಾಶ ಆಕೆಗಿತ್ತು. ಖುದ್ದು ಆಕೆಯ ಪಾಲಕರಿಗೂ ಕೂಡ ಆಕೆಯನ್ನು ನಿಯಂತ್ರಿಸುತ್ತಿರಲಿಲ್ಲ. ತನ್ನ ಬದುಕಿನ ಯಾವುದೇ ನಿರ್ಣಯಗಳಿಗೆ ಆಕೆ ಬಾಧ್ಯಳಾಗಿದ್ದಳು. ಇದಕ್ಕೆ ಸಾಕ್ಷಿಯಾಗಿ ನಾವು ಅಂದಿನ ಕಾಲದ ಹೆಣ್ಣು ಮಕ್ಕಳು ಶಾಸ್ತ್ರಾರ್ಥಗಳಲ್ಲಿ, ನಿರ್ಣಾಯಕ ಪಾತ್ರ ವಹಿಸಿದ ಲೋಪ ಮುದ್ರಾ, ಅಪಾಲ,  ಗಾರ್ಗಿ, ಮೈತ್ರೇಯಿ, ವಿಶ್ವವರರಂತಹ ರಿಷಿಕುಮಾರಿಯರನ್ನು ನೋಡಬಹುದು. ಭಗವಾನ್ ಶಂಕರ ಮತ್ತು ಮಂಡನ ಮಿಶ್ರರ ನಡುವೆ ನಡೆದ ಶಾಸ್ತ್ರಾರ್ಥದಲ್ಲಿ ಮಂಡನ ಮಿಶ್ರ ಪತ್ನಿ ಉಭಯ ಭಾರತಿ ದೇವಿ ನಿರ್ಣಾಯಕಿಯಾಗಿ ಕಾರ್ಯನಿರ್ವಹಿಸಿರು ವುದನ್ನು ಕೂಡ ನಾವು ಕೇಳಿದ್ದೇವೆ.  ಈ ಕಾಲಘಟ್ಟದಲ್ಲಿ ಕೆಲ ಮಹಿಳೆಯರು ತಮಗೆ ಇದ್ದ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ದುರುಪಯೋಗ ಪಡಿಸಿಕೊಂಡರು ಎಂಬ ಕಾರಣಕ್ಕಾಗಿ ಮಧ್ಯಯುಗದಲ್ಲಿ ಇವರ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಯಿತು. ಅದೇ ಸಮಯದಲ್ಲಿ ಭಾರತ ದೇಶಕ್ಕೆ ವಿದೇಶಿ ಆಕ್ರಮಣಕಾರರು ದಂಡೆತ್ತಿ ಬಂದ ಕಾರಣ ಈ ನಿರ್ಬಂಧಗಳು ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರಿ ಎಂಬ ಭಾವ ಜನರಲ್ಲಿ ತಲೆದೋರಿತು.. ಪರಿಣಾಮವಾಗಿ ಹೆಣ್ಣು ಮಕ್ಕಳು ಸಾಮಾಜಿಕ ಸಂಕೋಲೆಗಳಲ್ಲಿ ಬಂದಿಯಾಗಬೇಕಾಯಿತು. ಕುಟುಂಬದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆಕೆ ತನ್ನ ಪತಿಯ ಜೊತೆಗೆ ಪಾಲ್ಗೊಳ್ಳಬಹುದಾದರೂ ಶಿಕ್ಷಣ, ಅಧ್ಯಯನ, ಬದುಕು, ಸಂಗಾತಿಯನ್ನು ಆಯ್ದುಕೊಳ್ಳುವ ಆಕೆಯ ಹಕ್ಕುಗಳಿಗೆ ಚ್ಯುತಿ ಉಂಟಾಯಿತು. ಮುಖ್ಯವಾಗಿ ಪುರುಷನ ಆಧೀನದಲ್ಲಿ ಹೆಣ್ಣು ದಾಸ್ಯದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು. ತನ್ನ ಎದುರಿಗಿರುವ ವ್ಯಕ್ತಿಯನ್ನು ಯಜಮಾನ ಎಂದು ಒಪ್ಪಿಕೊಳ್ಳಬೇಕಾದರೆ ಆಕೆ ಆತನ ಸೇವಕಿ ಎಂಬುದು ಅನಿವಾರ್ಯದ ಒಪ್ಪಿಗೆಯಾಯಿತು. ಪುರುಷಸ್ವಾಮ್ಯದ ಮುಂದೆ ಸ್ತ್ರೀತ್ವದ ಪರಿಭಾಷೆ ಮಂಡಿಯೂರಿ  ಅಡಿಯಾಳಾಯಿತು ಎಂದರೆ ತಪ್ಪಿಲ್ಲ. ನಂತರ ಬಂದದ್ದೇ ಶರಣ ಸಂಸ್ಕೃತಿಯ ಸುವರ್ಣ ಯುಗಶರಣರ ಕಾಲ 12ನೇ ಶತಮಾನ. ಈ ಸಮಯದಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ವಿಶ್ವಗುರು, ಜಗಜ್ಯೋತಿ, ಎಂದೆಲ್ಲಾ ಹೆಸರಾದ ಕ್ರಾಂತಿಯೋಗಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣ ಸಂಕುಲವು ಅನುಭವ ಮಂಟಪದಲ್ಲಿಯಾವುದೇ ರೀತಿಯ ಜಾತಿ, ಲಿಂಗ, ಮತಗಳ ಭೇದವಿಲ್ಲದೆ ‘ಮಾನವ ಜಾತಿ ತಾನೊಂದೇ ವಲಂ’ ಎಂಬ ವಿಶ್ವ ಬಂಧುತ್ವದ, ವಿಶ್ವ ಭ್ರಾತೃತ್ವದ ಭಾವದ ಅಡಿಯಲ್ಲಿ ಕಾಯಕ, ದಾಸೋಹ, ಲಿಂಗ ನಿಷ್ಠೆಗಳನ್ನು ಬದುಕಿನ ಮೂಲ ಧ್ಯೇಯಗಳನ್ನಾಗಿ ಬದುಕಿದರು.  ಈ ಸಮಯದಲ್ಲಿ ಅದುವರೆಗೂ ಪುರುಷದಾಸ್ಯದ ಸಂಕೋಲೆಯಲ್ಲಿ ತಮ್ಮೆಲ್ಲ ಮನದ ಭಾವನೆಗಳನ್ನು  ಬರಡಾಗಿಸಿಕೊಂಡ ಮಹಿಳೆಯರು ಸ್ವಾತಂತ್ರ್ಯದ ತಿಳಿ ಗಾಳಿಯನ್ನು ಸವಿದರು. ಕಲ್ಲರಳಿ ಹೂವಾದ ಸುಣ್ಣದ ಕಲ್ಲಿನಂತೆ ತಮ್ಮೆಲ್ಲ ಮನದ ಭಾವಗಳನ್ನು ಬಿಚ್ಚಿ ವಚನಗಳ ಮೂಲಕ ಪ್ರಸ್ತುತ ಪಡಿಸಿದರು. ವೀರ ವಿರಾಗಿಣಿಯಾದ ಅಕ್ಕಮಹಾದೇವಿ ತಾಯಿ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಕದಿರ ರೆಮ್ಮವ್ವೆ ಕನ್ನಡಿ ಕಾಯಕದ ರೆಮ್ಮವ್ವೆ, ಕೇತಲದೇವಿ, ಗೊಗ್ಗವ್ವೆ ಬಂತಾದೇವಿ ದುಗ್ಗಳೆ ಮುಂತಾದ 33ಕ್ಕೂ ಹೆಚ್ಚು ವಚನಕಾರ್ತಿಯರು ಅತ್ಯಂತ ನಿರ್ಭಿಡೆಯಿಂದ ಆದರೆ ಅಷ್ಟೇ ಸರಳ ಹಾಗೂ ಮುಕ್ತ ಮನದಿಂದ ವಚನಗಳನ್ನು ರಚಿಸಿದರು. ಅವರ ವಚನಗಳಲ್ಲಿ ಹೆಚ್ಚು ಧೈರ್ಯ ಚಲ ನಿಷ್ಠುರತೆ ಆಧ್ಯಾತ್ಮ ಅಭಿಮಾನ ವಿಡಂಬನೆ ಹಾಗೂ ಕಟು ಟೀಕೆಗಳು ಮುಕ್ತವಾಗಿ ಮೂಡಿಬಂದಿವೆ. ಶರಣ ಸಂಸ್ಕೃತಿಯ ಹೆಣ್ಣು ಮಕ್ಕಳು ಸ್ತ್ರೀ ಸಹಜ ಮಾತೃತ್ವ, ಮಮತೆ, ದಯಾಪರತೆಯ ಜೊತೆ ಜೊತೆಗೆ ನೇರ ನಿಷ್ಠುರವಾದ ನುಡಿಗಳಿಗೂ ಹೆಸರಾಗಿದ್ದರು. ಅಮೆರಿಕಾದ ಖ್ಯಾತ ಸಮಾಜಶಾಸ್ತ್ರಜ್ಞೆ ಶೋ ವಾಲ್ತರ್ ಹೇಳುವ ಪ್ರಕಾರ 19ನೇ ಶತಮಾನದಲ್ಲಿ ಇಡೀ ಜಗತ್ತಿನ ಮಹಿಳಾ ಸಂಕುಲದಲ್ಲಿ ಫೆಮಿನೈನ್, ಫೆಮಿನಿಸ್ಟ್ ಹಾಗೂ ಫೆಮಿನಾ ಎಂಬ ಮೂರು ಬಗೆಯ ಸ್ತ್ರೀಯರ ಗುಂಪುಗಳನ್ನು ಕಾಣಬಹುದಾಗಿತ್ತು. 1840 ರಿಂದ 1880ರ ಕಾಲಘಟ್ಟದಲ್ಲಿ ಫೆಮಿನೈನ್ ಎಂದು ಕರೆಯಲ್ಪಡುವ ಸ್ತ್ರೀಯರು ಪುರುಷರನ್ನು ಅನುಕರಿಸುತ್ತಿದ್ದರು. ಪುರುಷರ ನಾಮಧೇಯಗಳನ್ನು ಇಟ್ಟುಕೊಂಡು ಬರೆಯುವ, ಚಿತ್ರಗಳನ್ನು ರಚಿಸುವ  ಪುರುಷರ ವಸ್ತ್ರಗಳನ್ನು ಧರಿಸುವ ಮೂಲಕ ಅವರನ್ನು ಅನುಕರಿಸುವ ರೀತಿಯಲ್ಲಿ ಬದುಕುತ್ತಿದ್ದರು.   1880 ರಿಂದ 1920ರ ಕಾಲ ಘಟ್ಟದಲ್ಲಿ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಪುರುಷರದ್ದು ಎಂದು ಕರೆಯಲ್ಪಡುವ ಎಲ್ಲ ರೀತಿಯ ಪುರುಷ ಮಾನದಂಡಗಳನ್ನು ತಿರಸ್ಕರಿಸಿ ತಮ್ಮದೇ ಆದ ಅಸ್ಮಿತೆಯನ್ನು ತೋರ್ಪಡಿಸುವ ರೀತಿಯಲ್ಲಿ ಬದುಕಲು ಆರಂಭಿಸಿದರು. ಇವರನ್ನು ಸಮಾಜ ಫೆಮಿನಿಸ್ಟ್ ಎಂದು ಕರೆಯುತು. ಮುಂದೆ 1920 ರಿಂದ ಮುಂದೆ 1960 ರವರೆಗೆ ಹೊಸ ರೀತಿಯ ಫೆಮಿನ ಎಂಬ ಸ್ತ್ರೀ ಸಮುದಾಯ ಹುಟ್ಟಿಕೊಂಡಿತು. ಸ್ತ್ರೀತ್ವದ ಮಹತ್ವಕ್ಕೆ ಹೊಸ ಭಾಷೆಯನ್ನು ಬರೆದ  ಈ ಸಮುದಾಯವು ಹೆಣ್ಣು ಮಕ್ಕಳು ಪುರುಷರ ಮೇಲೆ ಹೊಂದಿದ್ದ ಎಲ್ಲ ರೀತಿಯ ಪರಾವಲಂಬನವನ್ನು ಮೀರಿ ಬೆಳೆಯುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯ ಬದುಕನ್ನು ಕಂಡುಕೊಂಡರು. ಇವರು ಪುರುಷ ದ್ವೇಷಿಗಳಾಗದೆ, ಆದರೆ ಅದೇ ಸಮಯದಲ್ಲಿ ಪುರುಷರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುತ್ತಾ ತಮ್ಮ ವೈಯುಕ್ತಿಕ  ನಿಲುವುಗಳಿಗೆ ಬದ್ಧರಾಗಿ ನಿಂತರು.  19ನೇ ಶತಮಾನದಲ್ಲಿ ಸ್ತ್ರೀ ಸಮುದಾಯದಲ್ಲಿ ಆದ ಈ ಬದಲಾವಣೆಯನ್ನು ಸುಮಾರು ಎಂಟು ಶತಮಾನಗಳ ಹಿಂದೆಯೇ ನಾವು ಅಣ್ಣ ಬಸವಣ್ಣನವರ ಶರಣ ಸಂಸ್ಕೃತಿಯ ಕಾಲಘಟ್ಟದಲ್ಲಿ ನೋಡಬಹುದಾಗಿತ್ತು ಎಂದು ಓರ್ವ ಪಾಶ್ಚಾತ್ಯ ಸಮಾಜ ಶಾಸ್ತ್ರಜ್ಞ ಶೋ ವಾಲ್ತರ್  ಅಭಿಪ್ರಾಯ ಪಡುತ್ತಾಳೆ ಎಂದರೆ ಶರಣ ಸಂಸ್ಕೃತಿಯ ಕಾಲದ ಸ್ತ್ರೀಶಕ್ತಿಯ  ಉಚ್ಛ್ರಾಯ ಸ್ಥಿತಿಯನ್ನು ನಾವು ಅರಿತುಕೊಳ್ಳಬಹುದು ಅಲ್ಲವೇ.  ಮೊಲೆ ಮುಡಿ ಬಂದರೆ ಹೆಣ್ಣೆಂಬರುಗಡ್ಡ ಮೀಸೆ ಬಂದರೆ ಗಂಡೆಂಬರುನಡುವೆ ಸುಳಿವ ಆತ್ಮಹೆಣ್ಣುಾ ಅಲ್ಲ ಗಂಡೂ ಅಲ್ಲಕಾಣಾ ರಾಮನಾಥ ಎಂಬ ಜೇಡರ ದಾಸಿಮಯ್ಯನವರ ವಚನವು ದೇಹದ ಲಕ್ಷಣಗಳ ಮೇಲೆ ಆಧಾರಿತ ಲಿಂಗ ತಾರತಮ್ಯವನ್ನು ಪ್ರಶ್ನಿಸುತ್ತದೆ. ಶರಣರು  ಪುರುಷರಷ್ಟೇ ಮಹಿಳೆಯರು ಸಬಲರು ಎಂದು ಸ್ತ್ರೀ ಪುರುಷ ಸಮಾನತೆಯನ್ನು ಸಾರಿದರು. ಶರಣ ಸಂಸ್ಕೃತಿಯಲ್ಲಿ ದಾಂಪತ್ಯ ಎಂಬುದು ಸಹಬಾಳ್ವೆಯ ಕುರುಹಾಗಿದ್ದು ದಂಪತಿಗಳು ಸಮಾನ ಸ್ಥಾಯಿ ಭಾವವನ್ನು ಹೊಂದಿದ್ದರು ಎಂಬುದಕ್ಕೆ ತನ್ನ ಪತಿ ಶರಣ ಆಯ್ದಕ್ಕಿ ಮಾರಯ್ಯನವರು  ತಂದ ಹೆಚ್ಚಿನ ಅಕ್ಕಿಯನ್ನು ಕಂಡು ಆಸೆಯೆಂಬುದು ಅರಸಂಗಲ್ಲದೇ ಶಿವ ಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ?ಇದನ್ನು ಈಶ್ವರನು ಒಪ್ಪ ಎಂದು ಪತಿಗೆ ತಿಳಿ ಹೇಳಿ ದಿಟ್ಟತನವನ್ನು ಮೆರೆದ ಆಯ್ದಕ್ಕಿ ಲಕ್ಕಮ್ಮ ಆ ಅಕ್ಕಿಯನ್ನು ಮರಳಿಸಲು ಪತಿಗೆ ಹೇಳುತ್ತಾಳೆ. ಆಗ ತುಸು ಹಿಂಜರಿದ ತನ್ನ ಪತಿಗೆ ‘ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೇ’  ಎಂದು ಹೇಳುವ ದಾಷ್ಟಿಕತೆಯನ್ನು ತೋರುತ್ತಾಳೆ. ಇದು ಶರಣ ಸಂಸ್ಕೃತಿಯಲ್ಲಿರುವ ದಾಂಪತ್ಯದಲ್ಲಿ ಪತಿ-ಪತ್ನಿಯರ ಸಮಾನತೆಯ ಲಕ್ಷಣವಾಗಿತ್ತು.  ಇನ್ನು ನೂಲುವ ಕಾಯಕದ ಕದಿರ ರೆಮ್ಮವ್ವೆ  ನಾ ತಿರುಗುವ ರಾಟೆಯ ಕುಲ ಜಾತಿ ಕೇಳಿರಣ್ಣ ಅಡಿಯ ಹಲಗೆ ಬ್ರಹ್ಮ ತೋರಣ ವಿಷ್ಣು ನಿಂದ ಬೊಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿಸುತ್ತಿತ್ತು ನೂಲು ಕದಿರು ತುಂಬಿತ್ತು ರಾಟೆಯ ತಿರುವಲಾರೆ ನನ್ನ ಗಂಡ ಕೊಟ್ಟಿಹ ಇನ್ನೇವೇ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ ಎಂದು ತನ್ನ ಕಾಯಕದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸಮನ್ವಯಗೊಳಿಸಿ ಆಧ್ಯಾತ್ಮ ಬೆರೆಸಿದ ಬೆಡಗಿನ ವಚನಗಳನ್ನು ರಚಿಸಿದ್ದು ಕುಲ ಜಾತಿಯ ಕುರಿತು ಪ್ರಶ್ನಿಸುವವರ ಮುಖದ ಮೇಲಿನ ನೀರನ್ನು ಇಳಿಸಿದ್ದಾಳೆ.  ಬಸವಕಲ್ಯಾಣವನ್ನು ತೊರೆದು ಕಪ್ಪಡಿ ಸಂಗಮದಲ್ಲಿ ನೆಲೆಸಿದ್ದ ಬಸವಣ್ಣನವರ ಆಶಯದಂತೆ ಅವರೊಂದಿಗೆ ಸಂಗಮಕ್ಕೆ ಬಂದು ನೆಲೆಸಲು ನೀಲಾಂಬಿಕೆ ತಾಯಿಯನ್ನು  ಹಡಪದ ಅಪ್ಪಣ್ಣನವರು ಕೇಳಿಕೊಂಡಾಗ ತಾಯಿ ನೀಲಾಂಬಿಕೆ  ನೋಡು ನೋಡು ನೋಡು ನೋಡು ಲಿಂಗವೇನೋಡು ಬಸವಯ್ಯನವರು ಮಾಡಿದಾಟುವ ಅಲ್ಲಿಗೆ ನಮ್ಮನ್ನು ಬರಲು ಹೇಳಿದರಂತೆಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೇ ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವೇಕೆ ? ಬಲ್ಲಿದ ಶರಣರಿಗೆ ಇದು ತರವೇ ಎಂದು  ತಮ್ಮ ಎದೆಯ ಮೇಲಿನ  ಲಿಂಗವನ್ನು ತೋರಿ ಹೇಳುವ ದಾಷ್ಟಿಕತೆ ಅಂದಿನ ಸ್ತ್ರೀಯರಿಗೆ ಇತ್ತು  ಎಂಬುದಕ್ಕೆ ಇದಕ್ಕಿಂತ ಏನು ಹೇಳಬೇಕು. ಅಂದಿನ ಕಾಲದ ಶಿವಶರಣೆಯರು ತಮ್ಮ ಕೊರಳಲ್ಲಿರುವ ಲಿಂಗವನ್ನು ಶರಣಪತಿ ಎಂದು ಒಪ್ಪಿಕೊಂಡವರು. ಇಹದ ಗಂಡರನ್ನು ಒಯ್ದು ಒಲೆಯಲಿ ಇಕ್ಕು ಎಂದು ಹೇಳಿದ್ದು ವೀರ ವಿರಾಗಿಣಿ ಅಕ್ಕಮಹಾದೇವಿ ತಾಯಿ. ಅಂದಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ತನ್ನ ಬದುಕಿನ ಧ್ಯೇಯ ಚನ್ನ ಮಲ್ಲಿಕಾರ್ಜುನನನ್ನು ಒಂದಾಗುವ ಆಶ್ರಯವನ್ನು ಪೂರೈಸಿಕೊಂಡ, ಇಡೀ ಜಗತ್ತಿಗೆ ಅಕ್ಕನಾಗಿ ಸ್ತ್ರೀ ಕುಲದ ಉದ್ಧಾರವನ್ನು ಮಾಡಿದ ಹೆಣ್ಣು ಮಗಳು ಅಕ್ಕಮಹಾದೇವಿ ತಾಯಿ. ಆಧ್ಯಾತ್ಮದ ಔನ್ನತ್ಯ ಶಿಖರವನ್ನೇರಿದ ಕದಳಿಯ ಕರ್ಪೂರ ವೈರಾಗ್ಯನಿಧಿ  ಅಕ್ಕಶರಣ ಸಂಸ್ಕೃತಿಯ ಸ್ತ್ರೀಪರ ಸಂವೇದನೆಗಳ ಅದ್ಭುತ ವಚನಗಳ ಕರ್ತೃ. ಇನ್ನು ಈ ಸಾಲಿನಲ್ಲಿ ಶರಣ ಸಂಸ್ಕೃತಿಯ ಗಂಗಮ್ಮ ಆವ ಕಾಯಕ ಮಾಡಿದರು ಒಂದೇ ಕಾಯಕ ಎಂದು ಹೇಳಿದರೆ,  ಬತ್ತವನ್ನು  ಕುಟ್ಟುವ ಕಾಯಕದ  ಕೊಟ್ಟಣದ ಸೋಮವ್ವ ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿ ಇಲ್ಲ ವ್ರತ ಹೀನನ ಬೆರೆಯ ನರಕವಲ್ಲದೆ ಮುಕ್ತಿ ಇಲ್ಲ ಎಂದು  ಕಾಯಕದ ದೃಷ್ಟಾಂತವನ್ನು ಹೇಳಿದ್ದಾರೆ. ಓರ್ವ ಪ್ರಾಮಾಣಿಕ ಸತ್ಯಸಾಧಕಿಯಾಗಿದ್ದ ಶರಣಿ ಸತ್ಯಕ್ಕ  ಅರ್ಚನೆ ಪೂಜೆ ನೇಮವಲ್ಲ ಮಂತ್ರ ತಂತ್ರ ನಿಯಮವಲ್ಲ ಧೂಪ ದೀಪ ಆರತಿ ನೇಮವಲ್ಲ ಪರಸ್ತ್ರೀಪರ ದೈವಂಗಳಿಗೆರೆಗ ಲೇಕೆದಿಪ್ಪುದೆ ನೇಮಶಂಬುಜಕ್ಕೇಶ್ವರನಲ್ಲಿ ಇವನು ಕಾಣೆರನ್ನ ಇವೆ ನಿತ್ಯ ನಿಯಮ ಎಂದು ಡಾಂಭಿಕ ಭಕ್ತಿಯನ್ನು ತೋರುವ ಭಕ್ತರಿಗೆ ನೇರವಾಗಿ ಉತ್ತರಿಸಿದ್ದಾಳೆ. ಹೀಗೆ

“ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ”ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

” ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ, 2025, ಒಂದು ವಿಶ್ಲೇಷಣೆ.” ವಿಜಯ ಅಮೃತರಾಜ್.

ಕಾನೂನು ಸಂಗಾತಿ ವಿಜಯ ಅಮೃತರಾಜ್. ” ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ, 2025, ಒಂದು ವಿಶ್ಲೇಷಣೆ.” ಡಿಸೆಂಬರ್ 8 ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಸದರಿ ಬಿಲ್ ಸರಕಾರ ಮಂಡಿಸಲಿರುವ ಕರ್ನಾಟಕ ರಾಜ್ಯದಲ್ಲಿ ದ್ವೇಷ ಭಾಷಣ (Hate Speech) ಮತ್ತು ದ್ವೇಷ ಅಪರಾಧಗಳನ್ನು (Hate Crimes) ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ನಿಯಂತ್ರಿಸಲು, ಹಾಗೆಯೇ ವ್ಯಕ್ತಿಗಳು, ಗುಂಪುಗಳು ಮತ್ತು ಸಮಾಜಗಳ ಮೇಲೆ ಅವುಗಳ ನಕಾರಾತ್ಮಕ ಪರಿಣಾಮಗಳನ್ನು ನಿಗ್ರಹಿಸಲು ಹಾಗೂ ಸ್ವಾಯತ್ತತೆ, ಘನತೆ ಮತ್ತು ಸಮಾನತೆಯ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಈ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.ಇದು ಇನ್ನೂ ಮಸೂದೆಯ ಹಂತದಲ್ಲಿದ್ದು, ಸಂಪೂರ್ಣ ಕಾಯಿದೆಯಾಗಲು ಶಾಸನಸಭೆಯ ಅನುಮೋದನೆ ಅಗತ್ಯವಿದೆ. ಪ್ರಮುಖ ಅಂಶಗಳು (Key Provisions)ಈ ಮಸೂದೆಯಲ್ಲಿ ದ್ವೇಷ ಅಪರಾಧ (Hate Crime) ಮತ್ತು ದ್ವೇಷ ಭಾಷಣವನ್ನು (Hate Speech) ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಅವುಗಳಿಗೆ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. 1. ದ್ವೇಷ ಅಪರಾಧ (Hate Crime)ವ್ಯಾಖ್ಯಾನ (Definition): ಧರ್ಮ, ಜನಾಂಗ, ಜಾತಿ/ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವೈಕಲ್ಯ ಅಥವಾ ಬುಡಕಟ್ಟು ಜನಾಂಗದವರಂತಹ ನಿರ್ದಿಷ್ಟ ಗುಣಲಕ್ಷಣಗಳನ್ನು ಆಧರಿಸಿ, ಯಾವುದೇ ವ್ಯಕ್ತಿಗೆ ಪೂರ್ವಾಗ್ರಹ ಅಥವಾ ಅಸಹಿಷ್ಣುತೆಯ ಕಾರಣದಿಂದಾಗಿ ಹಾನಿ ಉಂಟುಮಾಡುವುದು, ಹಾನಿ ಮಾಡಲು ಪ್ರಚೋದಿಸುವುದು ಅಥವಾ ದ್ವೇಷವನ್ನು ಪ್ರಚಾರ ಮಾಡುವುದನ್ನು ದ್ವೇಷ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಶಿಕ್ಷೆ (Punishment): ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದು ನಾನ್-ಕಾಗ್ನಿಜೆಬಲ್ (Non-Cognizable) ಮತ್ತು ನಾನ್-ಬೇಲೆಬಲ್ (Non-Bailable) ಅಪರಾಧವಾಗಿದೆ. 2. ದ್ವೇಷ ಭಾಷಣ (Hate Speech)ವ್ಯಾಖ್ಯಾನ (Definition): ಮೇಲೆ ತಿಳಿಸಿದ ಅದೇ ನಿರ್ದಿಷ್ಟ ಗುಣಲಕ್ಷಣಗಳ ಆಧಾರದ ಮೇಲೆ ಹಾನಿ ಉಂಟುಮಾಡುವ ಅಥವಾ ದ್ವೇಷವನ್ನು ಪ್ರಚಾರ ಮಾಡುವ ಸ್ಪಷ್ಟ ಉದ್ದೇಶವನ್ನು ತೋರಿಸುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಯಾವುದೇ ವಿಷಯವನ್ನು ಪ್ರಕಟಿಸುವುದು, ಪ್ರಚಾರ ಮಾಡುವುದು ಅಥವಾ ಸಂವಹನ ಮಾಡುವುದನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ. ವಿನಾಯಿತಿ (Exemptions): ಸದುದ್ದೇಶದ ಕಲಾತ್ಮಕ ಸೃಜನಶೀಲತೆ, ಶೈಕ್ಷಣಿಕ/ವೈಜ್ಞಾನಿಕ ವಿಚಾರಣೆ, ಸಾರ್ವಜನಿಕ ಹಿತಾಸಕ್ತಿಯ ವರದಿಗಾರಿಕೆ, ಅಥವಾ ಯಾವುದೇ ಧಾರ್ಮಿಕ ತತ್ವದ ಸದುದ್ದೇಶದ ವ್ಯಾಖ್ಯಾನ/ಪ್ರಚಾರಕ್ಕೆ ಈ ನಿಬಂಧನೆಗಳು ಅನ್ವಯಿಸುವುದಿಲ್ಲ (ಆದರೆ ಇದು ಹಾನಿ ಉಂಟುಮಾಡುವ ದ್ವೇಷಕ್ಕೆ ಪ್ರಚೋದನೆಯಾಗಬಾರದು). ಶಿಕ್ಷೆ (Punishment): ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದು ಸಹ ನಾನ್-ಕಾಗ್ನಿಜೆಬಲ್ ಮತ್ತು ನಾನ್-ಬೇಲೆಬಲ್ ಅಪರಾಧವಾಗಿದೆ. 3. ಸಹಾಯ ಅಥವಾ ಪ್ರಚೋದನೆ (Aid, Abetment or Assistance) ದ್ವೇಷ ಅಪರಾಧ ಅಥವಾ ದ್ವೇಷ ಭಾಷಣಕ್ಕೆ ತಿಳಿದೋ/ತಿಳಿಯದೆಯೋ ಸಹಾಯ ಮಾಡುವ, ಪ್ರಚೋದಿಸುವ ಅಥವಾ ಹಣಕಾಸು ಒದಗಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಂತಹ ಅಪರಾಧಗಳನ್ನು ಮಾಡಲು ತಮ್ಮ ವೇದಿಕೆಯನ್ನು ಒದಗಿಸುವ ಇಂಟರ್‌ಮೀಡಿಯರಿಗಳಿಗೂ (ಸಾಮಾಜಿಕ ಮಾಧ್ಯಮ, ಟೆಲಿಕಾಂ ಸೇವೆ ಒದಗಿಸುವವರು ಇತ್ಯಾದಿ) ಇದೇ ಶಿಕ್ಷೆಯನ್ನು ವಿಧಿಸಲಾಗುತ್ತದೆ. 4. ಸಂತ್ರಸ್ತರ ಪರಿಣಾಮ ಮೌಲ್ಯಮಾಪನ (Victim Impact Assessment) ಪ್ರಾಸಿಕ್ಯೂಷನ್ (ಅಭಿಯೋಜನೆ) ಸಂದರ್ಭದಲ್ಲಿ, ಸಂತ್ರಸ್ತರ ಹಿತಾಸಕ್ತಿಗಳನ್ನು ಮತ್ತು ಅಪರಾಧದ ಪರಿಣಾಮವನ್ನು ಪರಿಗಣಿಸಿ ನ್ಯಾಯಾಲಯಕ್ಕೆ ಸಂತ್ರಸ್ತರ ಪರಿಣಾಮ ಹೇಳಿಕೆಯನ್ನು (Victim Impact Statement) ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 5. ತಡೆಗಟ್ಟುವಿಕೆ (Prevention) ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ (District Magistrate) ಒಂದು ಪ್ರದೇಶದಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದ್ದರೆ, ಯಾವುದೇ ಕಾಯಿದೆಯನ್ನು ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ. ಸಮರ್ಥ ಪ್ರಾಧಿಕಾರವು (Competent Authority) ಮೆರವಣಿಗೆಗಳು/ಸಭೆಗಳ ನಿಯಂತ್ರಣ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತದೆ. 6. ಜಾಗೃತಿ ಮತ್ತು ತರಬೇತಿ (Awareness, Education and Training) ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣವನ್ನು ತಡೆಯಲು ಮತ್ತು ಎದುರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಅಧಿಕಾರಿಗಳಿಗೆ ತರಬೇತಿ ನೀಡಲು ಮತ್ತು ಸಂತ್ರಸ್ತರಿಗೆ ಸಹಾಯ ಒದಗಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಮಸೂದೆಯ ಅನುಕೂಲಗಳು (Advantages) ಸಾಮಾಜಿಕ ಸಾಮರಸ್ಯ ರಕ್ಷಣೆ: ನಿರ್ದಿಷ್ಟ ಗುಂಪುಗಳ ವಿರುದ್ಧದ ದ್ವೇಷ ಮತ್ತು ಹಿಂಸೆಯನ್ನು ತಡೆಗಟ್ಟಲು ಬಲವಾದ ಕಾನೂನು ಚೌಕಟ್ಟನ್ನು ಒದಗಿಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಸ್ಪಷ್ಟ ವ್ಯಾಖ್ಯಾನಗಳು: ದ್ವೇಷ ಅಪರಾಧ ಮತ್ತು ದ್ವೇಷ ಭಾಷಣದ ಪರಿಕಲ್ಪನೆಗಳನ್ನು, ಅದರಲ್ಲೂ ವಿಶೇಷವಾಗಿ ವಿಭಿನ್ನ ಆಧಾರಗಳ ಮೇಲೆ (ಧರ್ಮ, ಜಾತಿ, ಲಿಂಗ ಇತ್ಯಾದಿ) ಆಗುವ ಅಪರಾಧಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಬಲಿಪಶುಗಳ ರಕ್ಷಣೆ: ಸಂತ್ರಸ್ತರ ಪರಿಣಾಮ ಮೌಲ್ಯಮಾಪನವು ಅಪರಾಧದ ನೈಜ ಪರಿಣಾಮವನ್ನು ನ್ಯಾಯಾಲಯದ ಮುಂದೆ ತರಲು ಮತ್ತು ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆ: ಸಾಮಾಜಿಕ ಮಾಧ್ಯಮದಂತಹ ಇಂಟರ್‌ಮೀಡಿಯರಿಗಳನ್ನು (Intermediaries) ಹೊಣೆಗಾರರನ್ನಾಗಿ ಮಾಡುವುದರಿಂದ ಆನ್‌ಲೈನ್ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಪೂರ್ವಾಗ್ರಹ ಆಧಾರಿತ ಅಪರಾಧಗಳ ನಿಯಂತ್ರಣ: ದ್ವೇಷವು ಈ ಅಪರಾಧಗಳ ಹಿಂದಿನ ಪ್ರಮುಖ ಅಂಶ ಎಂಬುದನ್ನು ಗುರುತಿಸಿ, ಅಂತಹ ಪೂರ್ವಾಗ್ರಹವನ್ನು ಗುರಿಯಾಗಿಸಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಈ ಮಸೂದೆಯ ಅನಾನುಕೂಲಗಳು ಮತ್ತು ಸವಾಲುಗಳು (Disadvantages and Challenges) ವಾಕ್ ಸ್ವಾತಂತ್ರ್ಯದ ಮೇಲಿನ ಪರಿಣಾಮ: ‘ದ್ವೇಷ ಭಾಷಣ’ದ ವ್ಯಾಖ್ಯಾನದ ಅಸ್ಪಷ್ಟತೆಯಿಂದಾಗಿ, ಇದು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ (Right to Freedom of Speech and Expression – Article 19(1)(a)) ದುರುಪಯೋಗಕ್ಕೆ ಅಥವಾ ಅತಿಯಾದ ನಿರ್ಬಂಧಕ್ಕೆ ಕಾರಣವಾಗಬಹುದು. ದುರ್ಬಳಕೆಯ ಸಾಧ್ಯತೆ: ಈ ಕಾಯಿದೆಯನ್ನು ರಾಜಕೀಯ ಪ್ರತಿಸ್ಪರ್ಧಿಗಳು, ಸಾಮಾಜಿಕ ಕಾರ್ಯಕರ್ತರು ಅಥವಾ ವಿಮರ್ಶಕರ ವಿರುದ್ಧ ದುರ್ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ವಿನಾಯಿತಿಗಳ ವ್ಯಾಖ್ಯಾನ: “ಸದುದ್ದೇಶದ ಕಲಾತ್ಮಕ ಸೃಜನಶೀಲತೆ” ಅಥವಾ “ನ್ಯಾಯಸಮ್ಮತ ಮತ್ತು ನಿಖರವಾದ ವರದಿಗಾರಿಕೆ” ಯಂತಹ ವಿನಾಯಿತಿಗಳ ಅಂತಿಮ ವ್ಯಾಖ್ಯಾನವು ನ್ಯಾಯಾಂಗದ ವ್ಯಾಖ್ಯಾನದ ಮೇಲೆ ಅವಲಂಬಿತವಾಗಿರುತ್ತದೆ, ಇದು ಗೊಂದಲಕ್ಕೆ ಕಾರಣವಾಗಬಹುದು. ನಾನ್-ಕಾಗ್ನಿಜೆಬಲ್ ಅಪರಾಧ: ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣವನ್ನು ನಾನ್-ಕಾಗ್ನಿಜೆಬಲ್ ಎಂದು ವರ್ಗೀಕರಿಸಲಾಗಿದೆ. ಇದರರ್ಥ ಪೊಲೀಸರು ನ್ಯಾಯಾಧೀಶರ ಅನುಮತಿಯಿಲ್ಲದೆ ತನಿಖೆ ಪ್ರಾರಂಭಿಸಲು ಅಥವಾ ಬಂಧಿಸಲು ಸಾಧ್ಯವಿಲ್ಲ. ಇದು ತಕ್ಷಣದ ಮತ್ತು ಗಂಭೀರ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಅಡ್ಡಿಯಾಗಬಹುದು. ಅಪರಾಧದ ತೀವ್ರತೆಗೆ ಕಡಿಮೆ ಶಿಕ್ಷೆ: ಅತ್ಯಂತ ಗಂಭೀರವಾದ ದ್ವೇಷದ ಅಪರಾಧಗಳಿಗೂ ಕೇವಲ 3 ವರ್ಷಗಳ ಗರಿಷ್ಠ ಶಿಕ್ಷೆ ಮತ್ತು ₹5000 ದಂಡವನ್ನು ನಿಗದಿಪಡಿಸಿರುವುದು ಅಪರಾಧದ ತೀವ್ರತೆಗೆ ಹೋಲಿಸಿದರೆ ಕಡಿಮೆಯಾಗಿದೆ ಎಂಬ ವಾದವಿದೆ. ಕೊನೆಯದಾಗಿ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ, 2025 ರ ಉದ್ದೇಶವು ಪ್ರಶಂಸನೀಯವಾಗಿದೆ ಮತ್ತು ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ. ಇದು ದ್ವೇಷ ಆಧಾರಿತ ಅಪರಾಧಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಅವುಗಳನ್ನು ನಿಭಾಯಿಸಲು ಒಂದು ವ್ಯವಸ್ಥಿತ ಚೌಕಟ್ಟನ್ನು ಒದಗಿಸುತ್ತದೆ. ಆದಾಗ್ಯೂ, ಇದರ ಯಶಸ್ಸು ಅದರ ನಿಬಂಧನೆಗಳನ್ನು ಜಾರಿಗೊಳಿಸುವಲ್ಲಿರುವ ಸಮತೋಲನದ ಮೇಲೆ ಅವಲಂಬಿತವಾಗಿದೆ. ಒಂದು ಕಡೆ, ದ್ವೇಷ ಮತ್ತು ಪೂರ್ವಾಗ್ರಹ ಆಧಾರಿತ ಹಿಂಸೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬೇಕು. ಮತ್ತೊಂದೆಡೆ, ಪ್ರಜಾಪ್ರಭುತ್ವದ ಮೂಲಾಧಾರವಾದ ನಾಗರಿಕರ ಕಾನೂನುಬದ್ಧ ವಾಕ್ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಮಸೂದೆಯನ್ನು ಅಂತಿಮಗೊಳಿಸುವ ಮೊದಲು ಈ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ಮತ್ತು ಪರಿಷ್ಕರಣೆ ಅಗತ್ಯವಿದೆ. ವಿಜಯ ಅಮೃತರಾಜ್.

” ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ, 2025, ಒಂದು ವಿಶ್ಲೇಷಣೆ.” ವಿಜಯ ಅಮೃತರಾಜ್. Read Post »

ಇತರೆ

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್

ಜೀವನ ಸಂಗಾತಿ ಪೃಥ್ವಿ ಬಸವರಾಜ್ “ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಜೀವನವನ್ನು ರೂಪಿಸುವುದು ನಮ್ಮ ನಿರ್ಧಾರಗಳುಮಾನವ ಜೀವನವು ಒಂದು ಅದ್ಭುತ ಪ್ರಯಾಣ. ಜನ್ಮದಿಂದ ಸಾವುತನಕ ನಾವೆಂದೂ ಒಂದೊಂದು ಆಯ್ಕೆಯನ್ನು ಮಾಡುತ್ತಲೇ ಬದುಕುತ್ತೇವೆ. ಯಾವ ದಾರಿಯಲ್ಲಿ ನಡೆಯಬೇಕು, ಯಾರೊಡನೆ ಮಿಶ್ರವಾಗಿ ಬದುಕಬೇಕು, ಯಾವ ಕೆಲಸವನ್ನು ಮಾಡಬೇಕು, ಯಾವುದನ್ನು ಬಿಡಬೇಕು — ಇವೆಲ್ಲವೂ ನಮ್ಮದೇ ಕೈಯಲ್ಲಿರುವ ನಿರ್ಧಾರಗಳು. ಆದರೆ, ಅನೇಕರಿಗೆ ಒಂದು ತಪ್ಪು ಕಲ್ಪನೆ ಇರುತ್ತದೆ: “ಜೀವನ ನನ್ನನ್ನು ಎಲ್ಲಿ ಕೊಂಡೊಯ್ದರೂ ಹೋಗಬೇಕು” ಎಂದು. ಆದರೆ ನಿಜಕ್ಕೆ ಬಂದರೆ ನಾವು ಜೀವಿಸುವ ದಾರಿ, ಬದುಕುವ ರೀತಿಯಲ್ಲಿರುವ ಬದಲಾವಣೆ, ನಮ್ಮ ಜೀವನದ ಗುಣಮಟ್ಟ—ಇವೆಲ್ಲವೂ ನಮ್ಮ ಆಯ್ಕೆಯ ಮೇಲೆ ನಿಂತಿರುತ್ತವೆ. ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳುವುದೇ ಮುಖ್ಯ. ಆದರೆ ಈ ಆರಿಸುವ ಕಾರ್ಯ ಸುಲಭವಲ್ಲ. ಯಾಕೆಂದರೆ ನಮ್ಮ ಮುಂದಿರುವ ಪ್ರತಿಯೊಂದು ಆಯ್ಕೆಯೂ ಆಕರ್ಷಕವಾಗಿ ಕಾಣಬಹುದು, ಯಾವುದು ಲಾಭ, ಯಾವುದು ನಷ್ಟ ಎಂಬುದನ್ನು ಕೆಲವೊಮ್ಮೆ ತಿಳಿದುಕೊಳ್ಳಲು ಕಷ್ಟವಾಗಬಹುದು. ಆದರೂ, “ಯೋಗ್ಯವಾದ ಆಯ್ಕೆ” ಮಾಡುವ ಕೌಶಲ್ಯವನ್ನು ರೂಢಿಸಿಕೊಂಡರೆ ಜೀವನ ಹೆಚ್ಚು ಸುಂದರವಾಗುತ್ತದೆ. ಆಯ್ಕೆಗಳು — ನಮ್ಮ ಜೀವನದ ಹಾದಿಯನ್ನು ನಿರ್ಧರಿಸುವ ಶಕ್ತಿ ನಾವೆಲ್ಲರೂ ಬೆಳಿಗ್ಗೆ ಎದ್ದ ಕ್ಷಣದಿಂದಲೇ ಆಯ್ಕೆಗಳು ಆರಂಭವಾಗುತ್ತವೆ:ಬೇಗ ಎದ್ದು ದಿನವನ್ನು ಉತ್ತಮವಾಗಿ ಪ್ರಾರಂಭಿಸಬೇಕೋ,ಅಥವಾಇನ್ನೂ ಸ್ವಲ್ಪ ಮಲಗಬೇಕೋ?ಆರೋಗ್ಯಕರ ಆಹಾರ ತಿನಬೇಕೋ,junk food ತಿನಬೇಕೋ?ವ್ಯರ್ಥವಾಗಿ ಫೋನ್ ನಲ್ಲಿ ಸಮಯ ಕಳೆಯಬೇಕೋ,ಅಥವಾ ಉಪಯುಕ್ತವಾದ ಪುಸ್ತಕ ಓದಬೇಕೋ? ಈ ಉದಾಹರಣೆಗಳು ಸರಳ, ಆದರೆ ದಿನನಿತ್ಯ ನಮ್ಮನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸಣ್ಣ ಆಯ್ಕೆಗಳಿಂದಲೇ ದೊಡ್ಡ ಫಲಿತಾಂಶಗಳು ಹುಟ್ಟುತ್ತವೆ. ಒಳ್ಳೆಯ ಅಭ್ಯಾಸ ಮತ್ತು ಕೆಟ್ಟ ಅಭ್ಯಾಸ – ಆಯ್ಕೆ ನಮ್ಮದೇಮಕ್ಕಳು ಇರಲಿಲ್ಲವ ಮನೆಯಲ್ಲಿಯೇ ತಂದೆ-ತಾಯಿಗಳು ಹೇಳುವಂತೆ,“ಮಗು ಏನನ್ನೇ ನೋಡುತ್ತದೋ ಅದನ್ನೇ ಕಲಿಯುತ್ತದೆ.” ಆದರೆ ವಯಸ್ಸಾದ ನಂತರ ನಾವು ಯಾರನ್ನೂ ಹೊಣೆ ಮಾಡಲಾರೆ.ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳುವುದೂ, ಕೆಟ್ಟ ಅಭ್ಯಾಸಗಳನ್ನು ಬೆಳೆಸುವುದೂ ನಮ್ಮದೇ ಆಯ್ಕೆ.ಬಹಳ ಜನರು ಸಲಹೆ ನೀಡುತ್ತಾರೆ: ದಿನನಿತ್ಯ ವ್ಯಾಯಾಮ ಮಾಡಿಸದಾಚಾರವನ್ನು ರೂಢಿಸಿಕೊಳ್ಳಿಸುಳ್ಳು ಹೇಳಬೇಡಿಒಳ್ಳೆಯ ಸ್ನೇಹಿತರ ಜೊತೆಯಲ್ಲಿರಿಸಮಯ ವ್ಯಯ ಮಾಡಬೇಡಿಕೋಪ, ಅಸೂಯೆ ಇವುಗಳಿಂದ ದೂರವಿರಿ ಆದರೆ ಅವರು ಹೇಳುವುದರಿಂದ ಏನೂ ಆಗುವುದಿಲ್ಲ.ಅದರಲ್ಲಿರುವ ಯೋಗ್ಯ ಎದ್ದುಕೊಳ್ಳುವುದು ನಮ್ಮ ಹೊಣೆ.ಯಾಕೆಂದರೆ ಜೀವನವನ್ನು ನಾವು ಬದುಕುತ್ತೇವೆ, ಸಲಹೆ ನೀಡುವವರು ಅಲ್ಲ. ಒಂದು ಸ್ಪಷ್ಟ ಕಥೆ: ಇಬ್ಬರು ಸಹೋದರರ ಜೀವನದ ದಾರಿಇದನ್ನು ಒಂದು ನಿಜವಾದ ಜೀವನಪ್ರೇರಿತ ಕಥೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಒಂದು ಊರಿನಲ್ಲಿ ಇಬ್ಬರು ಸಹೋದರರು ಇದ್ದರು — ಅಜಯ್ ಮತ್ತು ವಿಜಯ್.ಇವರಿಬ್ಬರಿಗೂ ಒಂದೇ ಮನೆ, ಒಂದೇ ತಂದೆ-ತಾಯಿ, ಒಂದೇ ಪರಿಸರ.ಶಾಲೆ ಕೂಡ ಒಂದೇ.ಆದರೆ ಇವರಿಬ್ಬರ ಜೀವನ ಸಂಪೂರ್ಣವಾಗಿ ವಿಭಿನ್ನ ಮಾರ್ಗಗಳತ್ತ ನಡೆದು ಹೋಯಿತು. ಅಜಯ್‌ನ ಆಯ್ಕೆಗಳುಬೆಳಿಗ್ಗೆ ಬೇಗ ಎದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ,ಅವನು ಯಾವಾಗಲೂ ತಡವಾಗಿ ಎದ್ದ.ಸ್ನೇಹಿತರ ಜೊತೆ ಆಟಗಳಾಡುವುದನ್ನು ಅವನು ಮುಖ್ಯವಾಗಿ ಇಟ್ಟ.ಅಧ್ಯಯನಕ್ಕೆ ಸಮಯ ನೀಡಲಿಲ್ಲ.“ಇನ್ನು ಮುಂದೆ ಓದುತ್ತೇನೆ” ಎಂಬ ಮುಂಗಾರು ಮಾತುಗಳಷ್ಟೇ.Social media ಯಲ್ಲಿ ಗಂಟೆಗಳ ಕಾಲ ಕಾಲಹರಣ.ಪರೀಕ್ಷೆಗೆ ಹೊತ್ತಿಗೆ ಸರಿ ಓದದೆ, ಕೊನೆಯ ಕ್ಷಣದಲ್ಲಿ ಕಲಿಯುವ ಪ್ರಯತ್ನ.ಕೆಲವು ತಪ್ಪು ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಸಿಗರೇಟ್, ನಶೆಯಿಂದ ದೂರ ಉಳಿಯಲಿಲ್ಲ.ಮತ್ತು ಅಂತಿಮವಾಗಿಅವನ ವಿದ್ಯಾಭ್ಯಾಸ ಕುಸಿಯಿತು.ಕುಟುಂಬದವರ ವಿಶ್ವಾಸ ಕಳೆದುಕೊಂಡ.ಆರೋಗ್ಯವೂ ಹದಗೆಟ್ಟಿತು.ಉದ್ಯೋಗ ಹುಡುಕುವಾಗ ಎಲ್ಲೆಡೆ ತಿರಸ್ಕಾರ.ಅವನು ಮಾಡಿದ ಆಯ್ಕೆಗಳಿಂದ ಅವನ ಬದುಕು ಬಿರುಕು ಬೀಳಿತು. ವಿಜಯ್‌ನ ಆಯ್ಕೆಗಳುಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡ.ದಿನಕ್ಕೆ ಕನಿಷ್ಠ ಎರಡು ಗಂಟೆ ಓದುವ ಗುರಿ ಇಟ್ಟುಕೊಂಡ.ಕೆಟ್ಟ ಸ್ನೇಹ, ಕೆಟ್ಟ ಅಭ್ಯಾಸ—ಇವೆಲ್ಲದರ ಬಗ್ಗೆ ಜಾಗರೂಕ.ಉದ್ದೇಶಪೂರ್ಣ ಜೀವನ ನಡೆಸಲು ಮುಂದಾಗಿದ್ದ.Social media ಗೆ ಸಮಯವನ್ನು ನಿಗದಿಪಡಿಸಿದ್ದ.ಯಾರಿಗೆ ಬೇಕಾದರೂ ಸಹಾಯ ಮಾಡುವ ಒಳ್ಳೆಯ ಗುಣ.ಫಲಅವನು ಕಾಲೇಜು ಮೊದಲನೇ ಸ್ಥಾನ.ಶಿಕ್ಷಕರ ಮೆಚ್ಚುಗೆ, ಕುಟುಂಬದ ಹೆಮ್ಮೆ.ಒಳ್ಳೆಯ ಉದ್ಯೋಗದಿಂದ ಉತ್ತಮ ಆದಾಯ.ದೇಹ, ಮನಸೂ ಆರೋಗ್ಯಕರ.ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿ. ಗಮನಿಸಿಇಬ್ಬರಿಗೂ ಒಂದೇ ಪರಿಸರ, ಒಂದೇ ಕುಟುಂಬ, ಒಂದೇ ಅವಕಾಶ.ಪರಿಣಾಮ ಮಾತ್ರ ವಿಭಿನ್ನ.ಏಕೆ? ಆಯ್ಕೆಗಳು ವಿಭಿನ್ನವಾದ್ದರಿಂದ.ಅಜಯ್‌ನ ಆಯ್ಕೆಗಳು ಅವನನ್ನು ನಾಶದ ಕಡೆಗೆ ಕರೆದರೆ,ವಿಜಯ್‌ನ ಆಯ್ಕೆಗಳು ಅವನನ್ನು ಯಶಸ್ಸಿನ ದಿಕ್ಕಿಗೆ ಕರೆದೊಯ್ದವು. ಜೀವನದಲ್ಲಿ ಆಯ್ಕೆಯ ಮಹತ್ವ ಏಕೆ ಇಷ್ಟು ದೊಡ್ಡದು?1. ಆಯ್ಕೆ ನಮ್ಮ ಸ್ವಭಾವವನ್ನು ರೂಪಿಸುತ್ತದೆನಾವು ಯಾವ ದಾರಿಯನ್ನು ಆರಿಸುತ್ತೇವೋ, ನಮ್ಮ ಜೀವನಶೈಲಿ ಕೂಡ ಅದೇ ದಾರಿಯಲ್ಲಿ ಸಾಗುತ್ತದೆ.2. ಆಯ್ಕೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆಇಂದಿನ ನಿರ್ಧಾರಗಳು ನಾಳೆಯ ಫಲಿತಾಂಶ.ಇಂದೇ ಮಾಡಿದ ತಪ್ಪು ಆಯ್ಕೆಗಳ ಪಶ್ಚಾತ್ತಾಪ ಜೀವನಪೂರ್ತಿ ಕಾಡಬಹುದು.3. ಆಯ್ಕೆ ನಮ್ಮ ಸಂಬಂಧಗಳನ್ನು ಕಟ್ಟುತ್ತದೆ ಅಥವಾ ಧ್ವಂಸಮಾಡುತ್ತದೆಯಾರ ಜೊತೆಯಲ್ಲಿ ಇರಬೇಕು ಎಂಬುದು ತುಂಬಾ ದೊಡ್ಡ ನಿರ್ಧಾರ.ಒಳ್ಳೆಯವರೊಂದಿಗೆ ಹೋದರೆ ಜೀವನ ಸುಂದರವಾಗುತ್ತದೆ;ತಪ್ಪು ಸ್ನೇಹಿತರ ಜೊತೆ ಹೋದರೆ ಸಂಕಷ್ಟ ಅನಿವಾರ್ಯ.4. ಆಯ್ಕೆ ನಮ್ಮ ಆರೋಗ್ಯಕ್ಕೂ ಪರಿಣಾಮಕಾರಿಯೇಅನಾರೋಗ್ಯಕರ ಆಹಾರ, ನಿದ್ರೆಕಾರಕ, ನಶೆ—ಇವು ಆಯ್ಕೆಯೇ.ಆರೋಗ್ಯ ಕಾಪಾಡುವುದು ಕೂಡ ಆಯ್ಕೆಯೇ.5. ಆಯ್ಕೆ ನಮ್ಮ ಮಾನಸಿಕ ಶಾಂತಿಯನ್ನು ನಿರ್ಧರಿಸುತ್ತದೆಚಿಕ್ಕ ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದೂ,ಕ್ಷಮಿಸುವುದೂ—ಎಲ್ಲವೂ ನಮ್ಮ ಆಯ್ಕೆ. ನಮ್ಮ ಆಯ್ಕೆಯನ್ನು ಉತ್ತಮಗೊಳಿಸಲು 5 ಸರಳ ವಿಧಾನಗಳು 1. ಆಯ್ಕೆ ಮಾಡುವ ಮುನ್ನ ಯೋಚನೆ ಮಾಡಿಒಂದು ಕ್ಷಣ ತಡೆದು,“ಈ ಆಯ್ಕೆ ನನ್ನ ಭವಿಷ್ಯಕ್ಕೆ ಯೋಗ್ಯವೇ?” ಎಂದು ಕೇಳಿಕೊಳ್ಳಿ.2. ಒಳ್ಳೆಯವರ ಸಲಹೆ ಕೇಳಿತಂದೆ-ತಾಯಿ, ಶಿಕ್ಷಕರು, ತಿಳಿದವರು ನೀಡುವ ಸಲಹೆಗಳಲ್ಲಿ ಜ್ಞಾನ ಇದೆ.ಆದರೆ ಅಂತಿಮವಾಗಿ ಆಯ್ಕೆ ನಮ್ಮದೇ.3. ಗುರಿ ಇಟ್ಟು ಬದುಕಿಗುರಿಯಿಲ್ಲದವನು ಎಲ್ಲ ದಾರಿಯಲ್ಲೂ ಹೋಗಿ ತಪ್ಪಿ ಹೋಗುತ್ತಾನೆ.ಗುರಿಯಿರುವವನು ಯಾವ ದಾರಿಯನ್ನು ಆರಿಸಿಕೊಳ್ಳಬೇಕೆಂಬುದು ತಿಳಿದಿರುತ್ತಾನೆ.4. ಕೆಟ್ಟ ಅಭ್ಯಾಸಗಳನ್ನು ಹಂತ ಹಂತವಾಗಿ ಬಿಡಿಒಮ್ಮೆಲ್ಲಾ ಬಿಟ್ಟೇ ಬಿಡಲು ಸಾಧ್ಯವಿಲ್ಲ.ಪ್ರತಿದಿನ ಸ್ವಲ್ಪ.ಆದರೆ ಬಿಟ್ಟೇ ಬಿಡಿ — ಅದು ನಿಮ್ಮ ಉತ್ತಮ ಆಯ್ಕೆ.5. ಒಳ್ಳೆಯವನಾಗಲು ಪ್ರಯತ್ನಿಸಿಪ್ರತಿ ದಿನ,ಪ್ರತಿ ಕ್ಷಣ,ತನ್ನ ಹಳೆಯತನಕ್ಕಿಂತ ಒಳ್ಳೆಯವನಾಗಲು ಪ್ರಯತ್ನಿಸುವವನುಸರಿ ಆಯ್ಕೆಗಳು ಮಾಡುವವನಾಗುತ್ತಾನೆ. ಜೀವನ ಯಾವಾಗಲೂ ನಮ್ಮ ಕೈಯಲ್ಲಿಲ್ಲ, ಆದರೆ ಆಯ್ಕೆ ಯಾವಾಗಲೂ ನಮ್ಮ ಕೈಯಲ್ಲೇಜೀವನದಲ್ಲಿ ಬರುವ ಕೆಲವು ವಿಷಯಗಳು ನಮ್ಮ ನಿಯಂತ್ರಣಕ್ಕೆ ಹೊರತಾಗಿರುತ್ತವೆ:ಜನನಸಾವುಇತರರ ವರ್ತನೆಪರಿಸ್ಥಿತಿಗಳ ಬದಲಾವಣೆ ಇವುಗಳಲ್ಲಿ ನಮ್ಮ ಕೈಯಲ್ಲಿರುವುದೇನೂ ಇಲ್ಲ. ಆದರೆ…ಈ ಎಲ್ಲ ಪರಿಸ್ಥಿತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು 100% ನಮ್ಮ ಆಯ್ಕೆ.ಅದೇ ನಮ್ಮನ್ನು ಬೆಳೆಸುತ್ತದೆ, ಬಲಗೊಳಿಸುತ್ತದೆ. ಪೃಥ್ವಿ ಬಸವರಾಜ್

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್ Read Post »

ಇತರೆ

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು Read Post »

ಇತರೆ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ Read Post »

ಇತರೆ

ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ-ವೀಣಾ ಹೇಮಂತ್‌ ಗೌಡ ಪಾಟೀಲ್

ಲೇಖನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ- ಯಾವುದೇ ಸಮಾರಂಭಕ್ಕೆ ಹೋಗಲಿ ಅಲ್ಲಿ ನಾವು ಊಟದ ತಟ್ಟೆಯ ಜೊತೆಗೆ ಪಡೆಯುವ ಟಿಶ್ಯೂ ಪೇಪರನಿಂದ ತಟ್ಟೆಯನ್ನು ಒರೆಸಿ ಎಸೆದು ಮತ್ತೊಂದನ್ನು ಕೇಳಿ ಪಡೆಯುತ್ತೇವೆ. ಇನ್ನು ಹೋಟೆಲ್ಗಳಿಗೆ ಹೋದಾಗಲಂತೂ ಒಂದು ಬಳಸುವ ಕಡೆ ನಾಲ್ಕೈದು ಟಿಶ್ಯೂ ಪೇಪರ್ ಗಳನ್ನು ಬಳಸಿ ಇಡುತ್ತೇವೆ. ಮುಖದ ಮೇಲಿನ ಎಣ್ಣೆಯ ಪಸೆಯನ್ನು ಹೋಗಲಾಡಿಸಲು, ಧೂಳಿನ ಕಣಗಳನ್ನು ಹಾಗೂ  ಬೆವರನ್ನು ಒರೆಸಿಕೊಳ್ಳಲು. ಟೇಬಲ್, ಲ್ಯಾಪ್ಟಾಪ್, ಡೆಸ್ಕ ಟಾಪ್  ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ  ಮೇಲ್ಮೈಗಳನ್ನು ಸ್ವಚ್ಛಗೊಳಿಸಲು, ವಾಶ್ರೂಮ್ ಗಳಲ್ಲಿ ಹೀಗೆ ಹತ್ತು ಹಲವು ಕಡೆ ನಾವು ಕೇವಲ ಒಂದು ಬಾರಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತೇವೆ. ಬಳಸುವುದಕ್ಕಿಂತ ಬಿಸಾಡುವುದೇಹೆಚ್ಚಾಗಿದೆ. ಖರ್ಚಿನ ಬಾಬತ್ತು ಎಂದು ಇನ್ನೂ ಕೆಲ ಮನೆಗಳಲ್ಲಿ ಟಿಶ್ಯೂ ಪೇಪರ್ ದೈನಂದಿನ ಬದುಕಿನಲ್ಲಿ ಕಾಲಿಟ್ಟಿಲ್ಲ ನಿಜ ಆದರೆ ಕೆಲವರ ಮನೆಗಳಲ್ಲಿ ಈ ಟಿಶ್ಯೂ ಪೇಪರ್ಗಳನ್ನೇ ಬಹಳಷ್ಟು ಬಾರಿ ಬಳಸುತ್ತಾರೆ. ಈ ಹಿಂದೆಯೂ ನಾವು ಕಾರ್ಯಕ್ರಮಗಳಿಗೆ ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಅತಿಯಾದ ಸ್ವಚ್ಛತೆಯ ಪರಿಕಲ್ಪನೆ ತೊಳೆದಿದ್ದೆಲ್ಲವೂ ಸ್ವಚ್ಛವಾಗಿಲ್ಲ ಎಣ್ಣೆಯ ಜಿಡ್ಡಿನಿಂದ ಕೂಡಿದೆ ಎಂಬ ಭಾವ ( ಅದು ಸ್ವಲ್ಪಮಟ್ಟಿಗೆ ನಿಜವು ಕೂಡ!) ಟಿಶ್ಯೂ ಪೇಪರ್ ಬಳಸಿ ತಟ್ಟೆಯನ್ನು ಒರೆಸಲು ಕಾರಣವಾಗುತ್ತದೆ. ಹಾಗಾದರೆ ಈ ಟಿಶ್ಯೂ ಪೇಪರ್ ಗಳನ್ನು ಬಳಸಬಾರದೇ ಎಂದು ಆಶ್ಚರ್ಯಸೂಚಕ ಧ್ವನಿಯಲ್ಲಿ ನಿಮ್ಮ ಪ್ರಶ್ನೆ ಬಂದರೆ ಪರಿಸರ ಪ್ರೇಮಿಗಳ ಉತ್ತರ ಹೀಗಿರುತ್ತದೆ…. ತೀರ ಅವಶ್ಯಕತೆ ಇದ್ದರೆ ಮಾತ್ರ ಬಳಸಿ ಎಂದು. ಅನವಶ್ಯಕವಾಗಿ ಟಿಶ್ಯೂ ಪೇಪರ್ ಗಳನ್ನು ಬಳಸುವ ಮೂಲಕ ಪರಿಸರವನ್ನು ಹಾನಿಗೊಳಿಸದಿರಿ ಎಂಬುದು ಅವರ ಕಳಕಳಿಯ ಮನವಿಯಾಗಿರುತ್ತದೆ. ಟಿಶ್ಯೂ ಪೇಪರ್ ಬಳಕೆಗೂ ಪರಿಸರದ ಹಾನಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಭಯಾನಕ ಸತ್ಯ ಕಣ್ಣಿಗೆ ಬೀಳುತ್ತದೆ. ನಮ್ಮ ದೇಶದಲ್ಲಿ ಈ ಹಿಂದೆ ಮರದಿಂದ ಬೇರೆಯಾಗಿ ಬಿದ್ದ ಕಟ್ಟಿಗೆಯ ತುಂಡುಗಳನ್ನು ಉರುವಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಕಾಗದ ತಯಾರಿಕೆಗೆ ಶೇಕಡ 35ರಷ್ಟು ಕಟ್ಟಿಗೆಯನ್ನು ಬಳಸಲಾಗುತ್ತಿದೆ. ಅದರಲ್ಲೂ ಕಾಗದಕ್ಕಿಂತ ಹೆಚ್ಚಾಗಿ  ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಹೆಚ್ಚು ಬಳಸಲಾಗುತ್ತಿದೆ.ಪ್ರಾರಂಭದಲ್ಲಿ ಅಷ್ಟೇನೂ ಉತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬರುತ್ತಿರಲಿಲ್ಲ. ಜನರ ಆಧ್ಯತೆ ಬದಲಾಗುತ್ತಾ ಹೋದಂತೆ ಅತ್ಯುತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬೇಕು ಎಂಬ ಕಾರಣವನ್ನು ಒಡ್ಡಿಕಾಗದದ ಮರುಬಳಕೆಯನ್ನು ತಡೆಹಿಡಿದರು. ಅತ್ಯಂತ ನಯವಾದ ಮೇಲ್ಮೈಯುಳ್ಳ ಟಿಶ್ಯೂ ಪೇಪರ್ ಗಳು ತಯಾರಾಗತೊಡಗಿದವು. ಹೀಗೆ ತಯಾರಾಗುತ್ತಿರುವ ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಅತ್ಯವಶ್ಯಕ ಮೂಲ ವಸ್ತುವಾಗಿ ಒಣಗಿದ ಮರದ ತುಂಡಿನ ಬದಲಾಗಿ ಹಸಿ ಮರವನ್ನು ಕಡಿದು ಬಳಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 27 ಸಾವಿರಕ್ಕೂ ಹೆಚ್ಚು ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಸಲು ಕಡಿಯಲಾಗುತ್ತಿದೆ. ಹೀಗೆ ಕಡಿಯುವ ಒಟ್ಟು ಮರಗಳ ಸಂಖ್ಯೆ ವರ್ಷಕ್ಕೆ ಸುಮಾರು ಒಂದು ಕೋಟಿಯಷ್ಟು. ಕೇವಲ ಟಿಶ್ಯೂ ಪೇಪರ್ ಗಳನ್ನು ತಯಾರಿಸಲು ಕೋಟಿ ಸಂಖ್ಯೆಯಲ್ಲಿ ಮರಗಳನ್ನು ಬಳಸಲಾಗುತ್ತಿದೆ ಎಂದರೆ ನಾವು ಅವುಗಳ ಮೇಲೆ ಅದೆಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ಯೋಚಿಸಿ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ನೂರು ವರ್ಷಗಳಲ್ಲಿ ನಾವು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಸಿರಿಲ್ಲದೆ ನಮಗೆ ಉಸಿರು ದೊರೆಯುವುದಾದರೂ ಹೇಗೆ?ಮರಗಳನ್ನು ಕಡಿಯುತ್ತಾ ಹೋದರೆ ಅದೇ ಪ್ರಮಾಣದಲ್ಲಿ ಬೆಳೆಸಲು ಸಾಧ್ಯವೇ? ಕ್ಷಣಮಾತ್ರದಲ್ಲಿ ಕೊಡಲಿಯ ಏಟಿನಿಂದ ನಾವು ಮರವೊಂದನ್ನು ಉರುಳಿಸಬಹುದು, ಆದರೆ ಅದೇ ಮರ ಬೆಳೆಯಲು ವರ್ಷಗಳೇ ಬೇಕು. ಇಡೀ ಭಾರತ ದೇಶದ ಪ್ರಜೆಗಳು ಮೊಣಕಾಲೂರಿ ಪ್ರಾರ್ಥಿಸಿದರೂ, ಅತ್ತು ಗೋಗರೆದರೂ ಕೂಡ ಒಂದೇ ಒಂದು ಗಿಡ ಒಂದಡಿಯಷ್ಟು ಕೂಡ ಬೆಳೆಸಲು ಒಂದು ದಿನಕ್ಕೆ ಸಾಧ್ಯವಾಗುವುದಿಲ್ಲ….. ಜೀವದಾಯಿನಿಯಾಗಿರುವ ಹಸಿರು ಮರಗಳನ್ನು ಬೆಳೆಸಿದ ನಾವು ಅವುಗಳನ್ನು ಕಡಿಯಲು ಯಾವ ಹಕ್ಕನ್ನು ಹೊಂದಿದ್ದೇವೆ ನೀವೇ ಹೇಳಿ? ಹಾಗಾದರೆ ನಾವು ಟಿಶ್ಯೂ ಪೇಪರ್ ಗಳ ಬಳಕೆಯನ್ನು ಹೇಗೆ ತಡೆ ಹಿಡಿಯಬಹುದು? ಮೊದಲನೆಯದಾಗಿ ಸದಾ ನಮ್ಮ ಜೊತೆ ಒಂದು ಕರ ವಸ್ತ್ರ, ನಮ್ಮ ಪ್ಯಾಂಟುಗಳ ಜೇಬುಗಳಲ್ಲಿ, ಹ್ಯಾಂಡ್ ಬ್ಯಾಗುಗಳಲ್ಲಿ ಇರಲೇಬೇಕು. ಇನ್ನು ನಾವು ಟಿಶ್ಯೂ ಪೇಪರ್ಗಳನ್ನು ಬಳಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಒಂದೊಂದು ಬಟ್ಟೆಯ ನ್ಯಾಪ್ಕಿನಗಳನ್ನು ಇಡಬೇಕು. ಅಡುಗೆ ಮನೆಯಲ್ಲಿ ಬಚ್ಚಲುಮನೆ, ವಾಶ್  ಬೇಸಿನ್ಗಳ ಬಳಿ, ಊಟದ ಮೇಜಿನ ಬಳಿ, ಕಾರುಗಳಲ್ಲಿ ಸಾಧ್ಯವಾದಷ್ಟು ಬಟ್ಟೆಯನ್ಯಾಪ್ಕಿನ್ಗಳನ್ನು ಬಳಕೆ ಮಾಡಬೇಕು. ಕಾಗದದ ಹಾಳೆಯಿಂದ ತಯಾರಿಸಲಾಗುವ ಟಿಶ್ಯೂ ಪೇಪರಗಳ ಬಳಕೆಯನ್ನು ತೀರಾ ಅನಿವಾರ್ಯವಲ್ಲದ ಹೊರತು ಮಾಡಲೇಬಾರದು. ನಮ್ಮ ಬಳಿ ಬಟ್ಟೆ ಇಲ್ಲವೇ ಇಲ್ಲ, ಕೈ ತೊಳೆಯಲು ನೀರು ಕೂಡ ದೊರೆಯುತ್ತಿಲ್ಲ ಎಂಬ ಸಮಯದಲ್ಲಿ ಮಾತ್ರ ಟಿಶ್ಯೂ ಪೇಪರನ್ನು ಬಳಸಿ. ಕಳೆದ ಕೆಲವೇ ವರ್ಷಗಳಿಂದ ತುಸು ಹೆಚ್ಚೇ ಚಾಲ್ತಿಯಲ್ಲಿರುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತಿರುವ ನಾವು ಊಟದ ಮೊದಲು ಹಾಗೂ ಊಟದ ನಂತರ ಕೈ ತೊಳೆಯುವುದನ್ನು ರೂಢಿಸಿಕೊಳ್ಳೋಣ. ನೀರು ಎಷ್ಟೊಂದು ಬಳಕೆಯಾಗುತ್ತದಲ್ಲವೇ ಅಂತ ನೀವು ಕೇಳಬಹುದು, ಆದರೆ ಸಂಶೋಧನೆಗಳ ಪ್ರಕಾರ ಒಂದು ಟಾಯ್ಲೆಟ್ ಪೇಪರ್ ನ ಸುರುಳಿಯನ್ನು ತಯಾರಿಸಲು ಸುಮಾರು 37 ಗ್ಯಾಲನ್ ನಷ್ಟು ನೀರನ್ನು ಬಳಸಲಾಗುತ್ತದೆ ಮತ್ತು ಇದರ ಜೊತೆಗೆ ಸಾಕಷ್ಟು ಪ್ರಮಾಣದ ಮರಗಳನ್ನು ಕಡಿಯುವುದು ಕೂಡ ಸೇರಿದೆ. ಈಗ ಹೇಳಿ… ಕೈ ತೊಳೆಯುವುದು ಒಳ್ಳೆಯದೋ ಟಿಶ್ಯೂ ಪೇಪರ್ ಬಳಕೆಯೋ ಎಂದು. ನಮ್ಮ ನಾಡಿನ ಭವ್ಯ ಭವಿಷ್ಯಕ್ಕೆ ಒಳ್ಳೆಯ ಪರಿಸರವನ್ನು ಹೊಂದಲು ತೀರ ಅನಿವಾರ್ಯವಲ್ಲದ ಹೊರತು  ನಾವು ಸಾಧ್ಯವಾದಷ್ಟು ಟಿಶ್ಯೂ ಪೇಪರ್ ಗಳ ಬಳಕೆಯನ್ನು ನಿಲ್ಲಿಸೋಣ.ಏನಂತೀರಾ ಸ್ನೇಹಿತರೆ? ————– ವೀಣಾ ಹೇಮಂತಗೌಡ ಪಾಟೀಲ್ ʼ “

ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ-ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

” ಕರ್ನಾಟಕ ಶಾಸನಗಳು : ಕಾನೂನು ದೃಷ್ಠಿಯಲ್ಲಿ ಅಧ್ಯಯನ”. ವಿಜಯ್‌ ಅಮೃತ್‌ ರಾಜ್

” ಕರ್ನಾಟಕ ಶಾಸನಗಳು : ಕಾನೂನು ದೃಷ್ಠಿಯಲ್ಲಿ ಅಧ್ಯಯನ”. ವಿಜಯ್‌ ಅಮೃತ್‌ ರಾಜ್

” ಕರ್ನಾಟಕ ಶಾಸನಗಳು : ಕಾನೂನು ದೃಷ್ಠಿಯಲ್ಲಿ ಅಧ್ಯಯನ”. ವಿಜಯ್‌ ಅಮೃತ್‌ ರಾಜ್ Read Post »

You cannot copy content of this page

Scroll to Top