ಮಹಿಳಾ ದಿನದ ವಿಶೇಷ
ವಿಮಲಾರುಣ ಪಡ್ಡoಬೈಲು
ಅವಳದೇ ಧ್ಯಾನ


ಅವಳ ನೆನಪುಗಳೇ ಹಾಗೆ
ಎಳೆದಷ್ಟು ತುದಿ ದಕ್ಕುವುದಿಲ್ಲ
ಅಳೆದಷ್ಟು ತಾಳ್ಮೆ ಬರಿದಾಗುತ್ತಿರಲಿಲ್ಲ
ಮೌನದಲ್ಲಿ ಬದುಕಿನ ಸೂತ್ರ ಹೆಣೆದಿದ್ದಳು.
ಕೋಪ ತಾಪದ ಧಗೆ ಎಂದೂ ಹಚ್ಚಲಿಲ್ಲ
ನಾಜೂಕಲ್ಲಿ ತಯಾರಿಸುತ್ತಿದ್ದಳು
ಸೌದೆ ಒಲೆಯಲಿ ರುಚಿಯಾದ ಅಡುಗೆ
ಆ ಪರಿಮಳವೆಂದೂ ಅಳಿಯದಂತೆ
ಇರಿಸಿ ಹೋದಳು ಮೂಗಿನೊರಳಲಿ.
ಕರುಳ ಬಳ್ಳಿಗಳ ಕುಳ್ಳಿರಿಸಿ
ಬಿಸಿ ಆರುವ ಮುನ್ನ ನಲ್ಮೆಯಿಂದ
ತುತ್ತು ಬಡಿಸಿ
ಕಥೆ ಹೆಣೆಯುತಿದ್ದಳು
ಮಾಸಲಿಲ್ಲ ಇಂದಿಗೂ ಆ ಧ್ಯಾನ.
ಚಿಮಿಣಿ ದೀಪ ಮನೆ ಮನದ ಆಶ್ರಯ
ಸಹಭಾಗಿತ್ವದ ಪಾಠ ಕಲಿಸಿದ್ದಳು
ತನ್ನ ತಾನೇ ಸುಟ್ಟುಕೊಂಡ ಸೊಡರು
ಹಣೆಬರಹವ ತಿದ್ದಿ ತೀಡುತಾ
ಬದುಕಿನ ಸಾರ್ಥಕತೆ ಸಾರಿತು.
ಆದರಿಂದು ಅದೆಲ್ಲ ಮರೆಯಾದವು
ಅವಿಶ್ರಾಂತದ ಹಿಂದಿನ ಬದುಕಿನ
ಆ ಶಕ್ತಿ ಆ ಪ್ರೀತಿ ಬಹು ದೂರ ಸಾಗಿದವೇ
ಹಳೆಯ ಜೀವನಾಡಿಗಳೆಲ್ಲ ಮೂಲೆ ಸೇರಿದವೇ
ಆಧುನಿಕತೆಯ ಅಬ್ಬರದಲ್ಲಿ
ಒಲವು ಕೂಡ ಕಲಬೆರಕೆಯಾಯಿತೇ… ?

ವಿಮಲಾರುಣ ಪಡ್ಡoಬೈಲು




ಅರ್ಥಪೂರ್ಣ ಕವನ