ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಥಾಗುಚ್ಛ

 ಶ್ರೀದೇವಿ. ಮ. ಗುಮ್ಮಗೋಳ ಅವರ ಸಣ್ಣಕಥೆ “ಬಾಡಿದ ಮೊಗ್ಗು ಅರಳಿತು”

ಕಥಾ ಸಂಗಾತಿ  ಶ್ರೀದೇವಿ. ಮ. ಗುಮ್ಮಗೋಳ “ಬಾಡಿದ ಮೊಗ್ಗು ಅರಳಿತು” pic=chat gpt ಅಂದು ನಾನು ಯುನಿವರ್ಸಿಟಿ ಕ್ಲಾಸ್ ಮುಗಿಸಿ ಮನೆಗೆ ಹೋಗಲು ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಹಿಂದಿನಿಂದ ಬೆನ್ನಿಗೆ ಯಾರೊ ಗುದ್ದಿದಂತಾಯಿತು‌. ಹೊರಳಿ ನೋಡಿದೆ. “ಎಯ್ ಭಾರತಿ…. ಹೇಗಿದ್ದಿಲೇ…. ನಾನು ಸುಜಾತಾ. ಎಷ್ಟ ವರಷ ಆತು ನಿನ್ನ ನೋಡಿ….. ಹೆಂಗದ್ದಿ ಹಂಗ ಇದಿ….. ಒಂಚೂರು ಬದಲಾಗಿಲ್ಲ” ಎಂದ ಅವಳನ್ನೆ ದಿಟ್ಟಿಸಿ ನೋಡತೊಡಗಿದೆ.  ಗುಲಾಬಿ ಬಣ್ಣದ ಸೀರೆ ಉಟ್ಟು ಬಿಳಿ ಬಣ್ಣದ ರವಿಕೆ ತೊಟ್ಟಿದ್ದಳು. ಮುಖ ನೋಡಿ ಗುರುತು ಹಿಡಿದೆ. ಅವಳು ನನ್ನ ಪ್ರೈಮರಿ ಸ್ಕೂಲಿನ ಸ್ನೇಹಿತೆ ಕ್ಲಾಸ್ ಮೇಟ್ ಸುಜಾತಾ. ಆಗ ನಾವು ಹಳ್ಳಿಯಲ್ಲಿದ್ದೇವು. ನಮ್ಮ ತಂದೆ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಪ್ರೈಮರಿ ಎಜುಕೇಶನ್ ಹಳ್ಳಿಯಲ್ಲೆ ಆಯಿತು. ನಂತರ ನಮ್ಮ ತಂದೆಗೆ ವರ್ಗವಾಗಿ ನಗರಕ್ಕೆ ಬಂದೇವು.    “ಓ… ನೀನಾ ಅರಾಮ ಅದೇನಿ.   ನೀನು ಇಲ್ಲಿ….. ಕಾಲೇಜ ಅಡ್ಮಿಶನ್ ಮಾಡ್ಸಿದಿಯಾ….?  ನಾನು ಎಂ.ಏ ಎಕ್ಸಟರ್ನಲ್ ಮಾಡಾಕ್ಕತ್ತೇನಿ… ನಿನ್ನ ನೋಡಿ ಎಷ್ಟೊ ವರಷಗಳಾದವು ಬಾ ಇಲ್ಲಿ ಕೂತು ಮಾತಾಡೋಣ” ಎಂದು ಪಕ್ಕದಲ್ಲೆ ಇದ್ದ ಪಾರ್ಕಗೆ ಕರೆದುಕೊಂಡು ಹೋದೆ. ಸಮೀಪದಲ್ಲೆ ಇದ್ದ ಒಂದು ಬೆಂಚ್ ಮೇಲೆ‌ ಇಬ್ಬರು ಕುಳಿತೇವು.  ಒಬ್ಬರಿಗೊಬ್ಬರು ಕುಶಲೋಪಚರಿ ಮಾತನಾಡಿದೇವು. ಅವಳು ಸಮೀಪದ ಒಂದು ಹಳ್ಳಿಯಲ್ಲಿ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದಳು. “ಲೇ… ಅಂದು ನೀನು ನನಗೆ ಸಹಾಯ ಮಾಡದ ಇದ್ದಿದ್ದರ ನಾ ಇವತ್ತು ಟೀಚರ್ ಆಗಿರ್ತಿದ್ದಿಲ್ಲ. ನನ್ನ ಮಾವನ ಊರಲ್ಲಿ ಪಾತ್ರೆ ಮುಸುರೆ ತಿಕ್ಕುತ ನಾಲ್ಕೈದು ಮಕ್ಕಳ ತಾಯಿಯಾಗಿ ಹಳ್ಳಿಯಲ್ಲಿ ಕೆಲಸಕ್ಕೆ ಬಾರದವಳಾಗಿ ಬದಕ್ತಿದ್ನಿ. ಶಿಕ್ಷಣದಿಂದ ವಂಚಿತಳಾಗ್ತಾ ಇದ್ನಿ. ನನ್ನ ಮದುವೆಯೊಳಗ ಆದ ಘಟನೆಯಿಂದ ಮನಿಯವರಿಗೂ ತಿಳುವಳಿಕೆ ಬಂದು ನನಗ ಓದು ಮುಂದ ವರಿಸಿದರು.  ಈಗ ಟೀಚರಾಗಿ ಹಳ್ಳಿಯಲ್ಲಿ ಕೆಲಸಾ ಮಾಡಕ್ಕತ್ತೇನಿ. ಅದಕ ನೀನ.. ಕಾರಣ ನಿನಗ.. ಎಷ್ಟ ಥ್ಯಾಂಕ್ಸ ಹೇಳಿದರು ಸಾಲದು….” ಅಂದ್ಲು. “ಎಯ್ ಬಿಡ ಸುಜಾತಾ… ಆ ಟೈಮ್ನಾಗ ನನಗ ಏನೊ ತಿಳಿತೊ… ಏನೊ ಒಟ್ಟನಲ್ಲಿ ನೀನು ಶಿಕ್ಷಣದಿಂದ ವಂಚಿತಳಾಗುದು ತಪ್ಪತು ಅನ್ನುದು ನನಗ ಬಾಳ ಖುಷಿ ಅನಸ್ತದ….. ನಡಿ ನಮ್ಮನಿಗ ಹೋಗುನ ನಿನ್ನ ನೋಡಿ ಮನಿಯೊಳಗ ಅಪ್ಪ ಅವ್ವನು ಖುಷಿ ಪಡತಾರ” ಅಂದೆ. “ಇಲ್ಲ ಇನ್ನೊಂದಿನ ಬರತೇನಿ ನಿನ್ನ ಅಡ್ರೆಸ್ ಕೊಡು.” ಎಂದು ನನ್ನ ವಿಳಾಸ ಇಸಿದುಕೊಂಡಳು. ನನ್ನ ನೆನಪುಗಳು ಬಾಲ್ಯ ದಿನಗಳತ್ತ ಜಾರಿದವು. ************ ಸುಜಾತಾ ಮತ್ತು ನಾನು ಒಂದೇ ತರಗತಿಯಲ್ಲಿ ಓದುತಾ ಇದ್ವಿ. ಸುಜಾತಾ ಅಪ್ಪ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತುಂಬಾ ಬಡವರು. ಇಬ್ಬರು ಅಣ್ಣಂದಿರು.  ಸುಜಾತಾ ಓದುವದರಲ್ಲಿ ಮುಂದಿದ್ದಳು. ಯಾವಾಗಲೂ ಕ್ಲಾಸಿಗೆ ಫಸ್ಟ ಬರುತ್ತಿದ್ದಳು. ಮಾಸ್ತರು “ನೋಡ್ರಿ ಸುಜಾತನ ನೋಡಿ ಕಲಿರಿ…. ಅವರಪ್ಪ ಕೂಲಿ ಕೆಲಸಾ ಮಾಡತಾನು. ಆದರೂ… ಹೆಂಗ ಕಷ್ಟ ಪಟ್ಟ ಓದತಾಳು.” ಎಂದು ಹೇಳುತ್ತಿದ್ದರು.  ನಾವಿಬ್ಬರೂ ಆಗ ಏಳನೇ ತರಗತಿಯಲ್ಲಿದ್ದಿವಿ. ಸಜಾತಾ ಒಂದು ವಾರ ಶಾಲೆಗೆ ಬರಲಿಲ್ಲ. ಅವರಜ್ಜಿ ತೀರಿಕೊಂಡಿದ್ದರು. ಮೂರ್ನಾಲ್ಕು ತಿಂಗಳಿಗೆ ಪರೀಕ್ಷೆ ಇತ್ತು.  ಶಾಲೆಗೆ ಬರಲು ಶುರು ಮಾಡಿದ ಮೇಲೆ ಯಾಕೊ ಸುಜಾತ ಮೊದಲಿನ ತರಹ ಲವಲವಿಕೆಯಿಂದ ನಗನಗತಾ ಇರಲಿಲ್ಲ. ಯಾವಾಗಲೂ ಒಬ್ಬಂಟಿಯಾಗಿ ಮೌನವಾಗಿರ ತೊಡಗಿದಳು. ನಾನು ಆಟಕ್ಕೆಲ್ಲಾ ಅವಳನ್ನು ಒತ್ತಾಯದಿಂದ ಹಿಡಿದೇಳದುಕೊಂಡು ಹೋಗುತ್ತಿದ್ದೆ. ಅವಳ ಬದಲಾಗಿರುವದನ್ನು ನೋಡಿ ಒಂದ ದಿನ ಕೇಳಿದೆ “ಸುಜಿ…ಯಾಕೆ ಒಂತಾರ ಅದಿ. ಹಿಂಗ್ಯಾಕ ಮಾಡಕ್ಕತ್ತಿ….. ನನ್ನ ಜೊತಿ ಆಟನು ಅಡವಲ್ಲಿ.‌‌‌‌ ಚಂದಂಗ….. ಮಾತಾಡುವಲ್ಲಿ ಹಂಗಂದರ…‌ ನಾನ ನಿನ್ನ ಚಾಳಿ ಟೂ ಬಿಡತೇನಿ ನೋಡ ಮತ್ತ…” ಆಗ ಸುಜಾತ ಅಳತೊಡಗಿದಳು. ನಾನು ಅವಳನ್ನು ಗಟ್ಡಿಯಾಗಿ ಹಿಡಿದು ತಬ್ಬಿಕೊಂಡು “ಯಾಕ ಸುಜಿ…ಯಾಕ ಅಳಾತಿ…. ಏನ ಆತು ಹೇಳು..” “ಲೇ ಭಾರಿ… ನಮ್ಮನ್ಯಾಗ ನಮ್ಮಾವನ ಜೋಡಿ ನನಗ ಮದ್ವಿ…..ಮಾಡತರಂತ ನನಗ ಇಷ್ಟ ಇಲ್ಲ ನಾನ ಓದಬೇಕು. ಸಾಲಿ ಕಲಿಬೇಕು” ಅಂದು ಒಂದೇ ಸವನೇ ಅಳತೊಡಗಿದಳು. ನನಗೂ ಅಳು ಬಂದಂಗ ಆತು. “ಲೇ ಹಂಗರ ನೀನು… ನನ್ನ ಬಿಟ್ಟ ಹೋಗ್ತಿ… ನೀನು ಹೋಗುದ ಬ್ಯಾಡ. ಸ್ಯಾಣ ಅದಿ ನೀ… ಸಾಲಿ ಕಲಿಬೇಕು” ಎಂದೆ. ಇಬ್ಬರು ಒಬ್ಬರಿಗೊಬ್ಬರು ಸಮಾದಾನ ಮಾಡಿಕೊಂಡು ಮನಿಗೆ ಹೋದೆವು. ಮುಂದಿನ ವಾರ ಅವಳ ಮದುವೆ ಇತ್ತು. ಏಕೊ ನನಗೂ ಪಾಪ ಅನಿಸಿತ್ತು. ಎನ ಮಾಡೊದು ತಿಳಿಯಲಿಲ್ಲ. ಹಿರಿಯರನ್ನು ಎದುರಿಸಿ ನಡೆಯುವಂತ ದಿನಗಳು ಆಗಿರಲಿಲ್ಲ. ಮನೆಯಲ್ಲಿ ನನ್ನ ಅಪ್ಪ ಅಮ್ಮ ಸುಶಿಕ್ಷಿತರಾಗಿದ್ದರು. ಶಾಲೆಯ ಎಲ್ಲ ವಿಷಯಗಳನ್ನ ನಾನು ಮನೆಯಲ್ಲಿ ಹೇಳತಾ ಇದ್ದೆ. ಮರುದಿನ ಊಟಕ್ಕೆ ಕೂತಾಗ ಅಪ್ಪ ಅಮ್ಮನಿಗೆ “ಅಪ್ಪ ಅಮ್ಮಾ ಪಾಪ ಸುಜಾತನ್ನ ಮದ್ವಿ ಮಾಡತಾರಂತ….ಅವಳಗ ಮದ್ವಿ ಆಗಾಕ ಇಷ್ಟನ ಇಲ್ಲಂತ‌. ಪಾಪ ಅಳಾಕ್ಕತ್ತಿದ್ಲು. ಅಕೀನ ಮದ್ವಿ ನಿಲ್ಲಸಾಕ ಬರುದಿಲ್ಲಾ? ” ಅಂತ ಕೇಳದೆ.  ನಮ್ಮ ತಂದೆ “ಅಯ್ಯೊ! .. ಇಷ್ಟ ಸಣ್ಣ ವಯಸ್ಸಿಗೆ ಮದುವಿ ಮಾಡಾಕತ್ತಾರು….. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ದಂಡ ಮತ್ತು ಶಿಕ್ಷೆ‌ ಐತಿ… ಏನ್ ತಿಳಲಾರದ ಅನಕ್ಷರಸ್ಥರು…. ಹಿಂಗ… ಮಕ್ಕಳ ಭವಿಷ್ಯನ ಹಾಳ ಮಾಡತಾರು…. ನನ್ನ ಸ್ನೇಹಿತನೊಬ್ಬ ಮಕ್ಕಳ ಮತ್ತು ಕಲ್ಯಾಣ ಇಲಾಖೆಯೊಳಗ ಕೆಲಸಾ ಮಾಡತಾನು ನಾನು ವಿಚಾರಸತೇನಿ” ಅಂದರು. “ಅಪ್ಪಾ …ಅಪ್ಪಾ ಹೆಂಗರ ಮಾಡಿ ಸುಜಾತನ ಮದ್ವಿ ನಿಲ್ಲುಂಗ ಮಾಡು” ಅಂತ ಗೋಗರದೆ. ನನ್ನಪ್ಪ ಪೊನಿನಲ್ಲಿ ಯಾರದೊ ಜೊತೆ ಮಾತನಾಡಿದರು. ******* ಅಂದು ಮನೆಯ ಮುಂದೆ ಸುಜಾತಳ ಮದುವೆ ನಡೆಯುತ್ತಿತ್ತು. ಸುಜಾತ ಕೆಂಪು ಸೀರೆಯನ್ನು ಉಟ್ಟು, ಹಣೆಗೆ ಕುಂಕುಮ ಕೈ ತುಂಬ ಹಸಿರು ಬಳೆ ತೊಟ್ಟು ವಧುವಿನಂತೆ ಶೃಂಗಾರಗೊಂಡಿದ್ದಳು. ಆದರೆ ಮುಖದಲ್ಲಿ ಹರ್ಷವಿರಲಿಲ್ಲ. ಅಳು ಒತ್ತಿ ಒತ್ತಿ ಬರುತ್ತಿತ್ತು. ಅಲಂಕರಿಸಿದ ತಾಟಿನಲ್ಲಿ ಬಾಡಿದ ಹೂವನ್ನು ಇಟ್ಟಂತೆ ಬಾಸವಾಗುತ್ತಿತ್ತು.  ಅರಳುತಿರುವ ಮೊಗ್ಗನ್ನು ಚಿವುಟಿದಂತೆನಿಸಿತು. ಅವಳ ಸೋದರ ಮಾವನಿಗೆ ಅವಳು ಬುಜಕ್ಕಿಂತಲೂ ಕೆಳಗೆ ಅವನ ಮೊಣಕೈ ಗೆ ಬರುತ್ತಿದ್ದಳು. ನಾನು ಒಳಗೊಳಗೆ ವ್ಯಥೆ ಪಡುತ್ತಿದ್ದೆ ಅಪ್ಪನಿಗೆ ಹೇಳಿದ್ದೆ. ಅಪ್ಪನಿಂದ ಮದುವೆ ನಿಲ್ಲಸಲು ಆಗುವದಿಲ್ಲವೆಂದು ಕಾಣಿಸುತ್ತದೆ. ಇಲ್ಲವಾದರೆ ಇಷ್ಟೊತ್ತಿಗೆ ಅಪ್ಪ ಸುಜಾತಳ ತಂದೆ ತಾಯಿಗೆ ತಿಳಿ ಹೇಳಿ ಮದುವೆ ನಿಲ್ಲಿಸಿತ್ತಿದ್ದರು. ಪಾಪ ಸುಜಾತಾಳನ್ನು ತಾನಿನ್ನು ಶಾಲಿಯಲ್ಲಿ ನೋಡಲು ಸಾದ್ಯವಿಲ್ಲ ಎಂದುಕೊಂಡು ಒಳಗೆ ಮನಸ್ಸಿಗೆ ನೋವಾಯಿತು.  ಅಷ್ಟರಲ್ಲಿ ಯಾವುದೊ ಗಾಡಿಯೊಂದು ಜನರ ಮಧ್ಯೆ ಬಂದು ನಿಂತಿತು. ತಿರುಗಿ ನೋಡಿದೆ ಜೀಪಿನಿಂದ ಸೀರೆಯುಟ್ಟ ಇಬ್ಬರು ಹೆಂಗಸರು ಒಬ್ಬ ಪೊಲಿಸ್ ಮತ್ತು ಮತ್ತೊಬ್ಬ ದಡೂತಿ ಮನುಷ್ಯನಿದ್ದ. ಪೊಲಿಸ್ ನನ್ನು ನೋಡಿ ಜನರೆಲ್ಲಾ ಗಾಬರಿಯಾದರು. ಅವರು ಸುಜಾತಳ ತಂದೆ ತಾಯಿಯನ್ನು ಕರೆಯಿಸಿದರು. ಪೊಲಿಸ್ “ನೋಡಮ್ಮಾ ಹದಿನೆಂಟು ವರುಷದ ಒಳಗಿನ ಹೆಣ್ಣು ಮಕ್ಕಳನ್ನ ಮದುವೆ ಮಾಡು ಹಾಗಿಲ್ಲ. ಅದರಲ್ಲೂ ಇನ್ನೂ ಸಾಲಿ ಕಲಿಯುತ್ತಿರುವ ಇಂತಹ ಪುಟ್ಟ ಮಕ್ಕಳನ್ನು ಮದುವೆ ಮಾಡಿಸುವದು ಅಪರಾಧ. ಮೊದಲು ಮದುವೆಯನ್ನು ನಿಲ್ಲಿಸಿ ಇಲ್ಲಾ ಅಂದರೆ ಜೈಲಗೆ ಹೋಗಬೇಕಾಗುತ್ತದೆ ದಂಡ ಕಟ್ಟಬೇಕಾಗುತ್ತದೆ.” ಎಂದು ಗದರಿಸಿದ. ಇಬ್ಬರು ಹೆಂಗಸರು ಬಂದು ಸುಜಾತಳನ್ನು ಮದುವೆ ಮಂಟಪದಿಂದ ಹೊರಗೆ ಕರೆದು ಕೊಂಡು ಬಂದು ಅವಳ ಉಡುಗೆ ತೊಡುಗೆಗಳನ್ನು ಬದಲಾಯಿಸಲು ಹೇಳಿದರು. ಹೆದರಿದ ಸುಜಾತಳ ತಂದೆ ತಾಯಿ ಅವರು ಹೇಳಿದಂತೆ ಮದುವೆ ನಿಲ್ಲಿಸಿದರು. ನಾನು ನನ್ನ ಗೆಳತಿ ಸುಜಾತಳನ್ನು ಹೋಗಿ ತಬ್ಬಿಕೊಂಡೆ. ಬಾಡಿದ ಅವಳ ಮುಖದಲ್ಲಿ ಮಂದಹಾಸವನ್ನು ಕಂಡೆ. ಬಾಡಿದ ಮೊಗ್ಗು ಸಂತೊಷದಿಂದ ಹಿರಿ ಹಿರಿ ಹಿಗ್ಗಿತು. ನಳನಳಸಿತು.……. ಅದರ ಮುಂದಿನ ವರುಷ ನಮ್ಮ ತಂದೆಗೆ ನಗರಕ್ಕೆ ವರ್ಗವಾಗಿ ನಾವು ಊರು ಬಿಟ್ಟು ಹೋದೇವು.  ಸುಜಾತ ಮತ್ತು ನನ್ನ ಸಂಪರ್ಕವೇ ಇರಲಿಲ್ಲ. ಈಗ ಅವಳು ಸಿಕ್ಕಿದ್ದು ನನಗೆ ಬಹಳವೇ ಸಂತೋಷ ತಂದಿತ್ತು. ಅಂದೇನಾದರೂ ಅವಳ ಮದುವೆ ನಿಲ್ಲದಿದ್ದರೆ ಮೊಗ್ಗಾಗಿದ್ದ ಸುಜಾತ ಹೂವಾಗಿ ಅರಳುವ ಮುಂಚೆಯೇ ಬಾಡಿ ಹೋಗುತ್ತಿದ್ದಳು. ಇಂದು ಅವಳ ಮುಖ ನೋಡಿ ಬಾಡಿದ ಮೊಗ್ಗು ಅರಳಿ ನಕ್ಕಂತೆ ಕಂಡಿತು.  ಶ್ರೀದೇವಿ. ಮ. ಗುಮ್ಮಗೋಳ

 ಶ್ರೀದೇವಿ. ಮ. ಗುಮ್ಮಗೋಳ ಅವರ ಸಣ್ಣಕಥೆ “ಬಾಡಿದ ಮೊಗ್ಗು ಅರಳಿತು” Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು ” ಇದ್ದಿಲು ಮತ್ತು ಪ್ರೇಮ” ಕಡು ಕಪ್ಪಿನರಾಶಿ ರಾಶಿ ಇದ್ದಿಲಿನ ಚೂರುಗಳಿಗೆಬೆಂಕಿ ತಾಕಿಸಿ ಮತ್ತೆ ಉರಿಸುವಂತೆಎದೆಯಾಳದಲ್ಲಿಬೆಂದು ಬೂದಿಯಾಗದೆಉಳಿದಿರುವ ನಿನ್ನ ನೆನಪುಗಳಿಗೆವಿನಾಕಾರಣ ತನ್ನಷ್ಟಕ್ಕೆ ತಾನೇಸಣ್ಣ ಕಿಡಿಯೊಂದುಹೊತ್ತಿಕೊಂಡು ಬಿಡುತ್ತದೆ..! ನಿನ್ನ ನೆನಪಿನ ಹೊಗೆಯೇಳುತ್ತದೆನನ್ನ ಉಚ್ಛ್ವಾಸ ನಿಸ್ವಾಸಗಳತಲೆಕೆಳಗಾಗಿಸಿ ಉಸಿರುಗಟ್ಟಿಸುತ್ತದೆಜೀವ ಹಿಂಡಿ ಪ್ರಾಣ ಹಾರಿತುಎನ್ನುವ ಹೊತ್ತಿಗೆಹೃದಯ ಬಗ್ಗನೇ ಉರಿದುಉಗುಳುತ್ತದೆಪ್ರೇಮವಿಲಾಪದ ಕೆಂಡದುಂಡೆಗಳವೈಶಾಖದ ಸೂರ್ಯನಂತೆ..! ತುದಿ ಮೊದಲಿಲ್ಲದಅನಂತ ನೆನಪುಗಳ ರಾಶಿಯಲ್ಲಿಛಿದ್ರಗೊಳ್ಳುವ  ಹೃದಯಚೂರಾದ ಇದ್ದಿಲುಗಳಂತೆಹಗುರವಾಗಿಮುಕ್ತಿ ದೊರಕದೆನಾಮಾವಶೇಷವಾಗುತ್ತದೆ..! ಅರಳುವುದಿಲ್ಲ ಮತ್ತೆಂದೂ..ಬೆಂದ ಎದೆಯ ಬನದಲ್ಲಿನವ ಪ್ರೇಮದ ಚಿಗುರು..!ಉರಿದ ಇದ್ದಿಲುಗಳ ರಾಶಿಯನ್ನೇನಿನ್ನ ಪ್ರೇಮದ ನೆನಪುಗಳಲ್ಲಿಮತ್ತೆ ಹೊತ್ತಿಸುತ್ತೇನೆ..! ಬೆಂದು ಬೂದಿಯಾಗಿ ಬಿಡಬೇಕೆಂಬಜಿದ್ದಿಗೆ ಬೀಳದೆನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿಕಡುಕಪ್ಪು ಇದ್ದಿಲಿನಂತಾಗುವಕಳಂಕವನ್ನುಸುಲಭದಲ್ಲಿ ಕಳಚಿಕೊಳ್ಳಲಾಗದೆಪ್ರೇಮದ ಹೆಸರಲ್ಲಿಸುಮ್ಮನೆ ಉರಿಯುತ್ತೇನೆ..! ಎಷ್ಟೇ ಬೆಂದರೂ ನೊಂದರೂಭುಗಿಲೇಳುವಪ್ರೇಮದ ಜ್ವಾಲೆಯಂತಾಗದೆಇಷ್ಟಿಷ್ಟೇ ಉರಿವಇದ್ದಿಲುಗಳ ಚೂರಾಗುತ್ತೇನೆ..! ಕಡೆಗೊಮ್ಮೆಈ ಬದುಕು ಥೇಟ್ ಇದ್ದಿಲಿನಂತೆಇಷ್ಟಿಷ್ಟೇ ನಶಿಸಿ ಹೋಗುತ್ತಿರುವಹೊತ್ತಿನಲ್ಲೂನಿನ್ನಂತೆ ನೂರೆಂಟು ಬಣ್ಣ ಬದಲಿಸದೆಮೂಲದಲ್ಲೇ ಕ್ಷಯವಾಗುವಅದರ ಅಸಲಿಯತ್ತಿಗೆತಲೆಬಾಗುತ್ತಾ… ಅಳಿದುಳಿದಪ್ರೇಮದ ಪಳೆಯುಳಿಕೆಗಳನ್ನುಒಟ್ಟುಗೂಡಿಸಿ ಸುಟ್ಟುಕೊಳ್ಳುತ್ತಾ  ನನ್ನನ್ನು ನಾನೇಎಂದಾದರೊಮ್ಮೆನಿನ್ನನ್ನು ಪ್ರೇಮಿಸಿದ ತಪ್ಪಿಗೆಬೆಂದುರಿದ ಗುರುತು ಸಿಗದಂತೆನಿಚ್ಚಳವಾಗಿಕೊನೆಗಾಣಿಸಿಕೊಳ್ಳುತ್ತೇನೆಅದೇ ಇದ್ದಿಲಿನ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ” Read Post »

ಕಾವ್ಯಯಾನ

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಉಕ್ಕಿಹೋದ ಹಾಲು ಹೆಕ್ಕಿ ತೆಗೆಯುವುದು ಹೇಗೆಮಿಕ್ಕಿ ಹೋದ ಕಾಲ ಹೊಕ್ಕು ಬಗೆಯುವುದು ಹೇಗೆ ಸವಿಸವಿ ಕ್ಷಣಗಳ ಚಿಕ್ಕ ಪಾಲೂ ಇಲ್ಲವೆಸವಿಯದ ಸಿಹಿಯನು ನೆಕ್ಕಿ ಜಗಿಯುವುದು ಹೇಗೆ ಹಾಲೆರೆದು ಹಾವಿನ ಜೊತೆಯಲಿ ನಡೆದಿದೆ ಸರಸವಿಧಿ ಕೊಟ್ಟ ವಿಷವನು ಮುಕ್ಕಿ ಉಗಿಯುವುದು ಹೇಗೆ ಬೆಂಕಿಕಡ್ಡಿ ಮಕ್ಕಿನಲಿ ಅಡಗಿ ಕಾದಿದೆ ಕಿಡಿದಕ್ಕದ  ಪ್ರೀತಿಯನು ತಿಕ್ಕಿ ಮೊಗೆಯುವುದು ಹೇಗೆ ಸಾರಾಯಿ ಕುಡಿದ ಮಂಗನಂತಾಗಿದೆ ಮನವುಹಕ್ಕಿ ರೆಕ್ಕೆ ಬೀಸಿ ಸೊಕ್ಕಿ ನೆಗೆಯುವುದು ಹೇಗೆ ಬೇಡೆಂದರೂ ಕಾಡಿವೆ ಅರಿವಿನ ಘಳಿಗೆಗಳುಕಹಿ ಕಹಿ ನೆನಪುಗಳ ಕಕ್ಕಿ ಹುಗಿಯುವುದು ಹೇಗೆ ಕಲ್ಲು ಕುಕ್ಕಿ ಜ್ಯೋತಿಯ ಕೊಕ್ಕು ರಗುತಾಗಿದೆಬದುಕಿನ ಭವಣೆಗಳ ಲೆಕ್ಕ ಮುಗಿಯುವುದು ಹೇಗೆ  ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಹನ್ನೆರಡನೆಯ ಶತಮಾನದ  ಶರಣರು  ಜಗತ್ತಿಗೆ ಸತ್ಯ ಸಮತೆ ಶಾಂತಿ ಪ್ರೀತಿ ನೀಡಿ ಸಾರ್ವಕಾಲಿಕ ಸಮಾನತೆ ಸಾರಿಧ ದಾರ್ಶನಿಕರು.  ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ಲಿಂಗಾಯತ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವ ಇವರು ಸ್ಥಾಪಿಸಿದ ಜನಮುಖಿ ಸಾಮಾಜಿಕ ಸೇವೆಯ ಪರಂಪರೆಯನ್ನು ಮುಂದಿನ ಶರಣ ಧರ್ಮದ ಸ್ವಾಮಿಗಳು   ನಿರಂತವಾಗಿ ನಡೆಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಪರಮ ಪೂಜ್ಯ ತೋಂಟದ ಎಡೆಯೂರಿ ಶ್ರೀ ಸಿದ್ಧಲಿಂಗ ಶಿವಯೋಗಿಗಳು, ಜೇವರಗಿ ಷಣ್ಮುಖ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು, ಮುರುಗೋಡ ಶ್ರೀ ಮಹಾಂತಪ್ಪಜ್ಜನವರು,  ಗಚ್ಚಿನ ಮಠದ ಶ್ರೀ ಸಿದ್ಧಲಿಂಗಪ್ಪನವರು ಜಯದೇವ ಜಗದ್ಗುರುಗಳು , ಇಂತವರ ಸಾಲಿನಲ್ಲಿ ನಿಲ್ಲುವವರು ನಮ್ಮ ಬಂಥನಾಳ ಶ್ರೀ ಸಂಗನಬಸವ ಸ್ವಾಮಿಗಳು.  ಬಾರದ ನೆಲದಲ್ಲಿ ಬದುಕಿನ ಭರವಸೆಯನ್ನು ನೀಡಿದ ಅಪ್ರತಿಮ ಶಿವಯೋಗ ಸಾಧಕರು.   ಜನನಮತ್ತುಬಾಲ್ಯ————————————ಬಂಥನಾಳ ಸಂಗನಬಸವ ಶಿವಯೋಗಿಗಳ ಜನನವು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಶರಣ ದಂಪತಿಗಳಾದ ಗೌರಾಂಬೆ ಮತ್ತು ಪರುತಯ್ಯ ನವರ ಪುತ್ರರಾಗಿ 1900 ರ ಜುಲೈ 27ರಂದು ಜನಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಬಾಲ್ಯದಲ್ಲೆ ಪುರಾಣ ಪ್ರವಚಣ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಗೂಡಿಸಿಕೊಂಡು ಬೆಳೆದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. 6ನೇ ತರಗತಿಯಲ್ಲಿ‘ರಾಜಾ ಸತ್ಯಹರಿಶ್ಚಂದ್ರ’ ಎಂಬ ಪೌರಾಣಿಕ ನಾಟಕದಲ್ಲಿ ತಾರಾಮತಿ ಪಾತ್ರಧಾರಿಯಾಗಿ ಅಭಿನಯಿಸಿ ಸುತ್ತಲ ಗ್ರಾಮಸ್ಥರ ಮೆಚ್ಚುಗೆ ಪಡೆದರು. 1913ರಲ್ಲಿ ಯರನಾಳ ಮಠದ ಪಂಪಾಪತಿ ಸ್ವಾಮೀಜಿ ಅವರು 11 ವರ್ಷದ ಸಂಗನಬಸವ ಶಿವಯೋಗಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವಿಕರಿಸಿದರು. ಮುಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮಠದ ಶಾಂತವೀರ ಶ್ರೀಗಳ ಸಮ್ಮುಖದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯದ ಮೇಲೆ ಅಪಾರ ಪಾಂಡಿತ್ಯ ಸಂಪಾದಿಸಿದರು. ಕೆಲವು ದಿನಗಳು ಗತಿಸಿದ ನಂತರ ಬಂಥನಾಳ ಮಠದ ಹಿಂದಿನ ಪೀಠಾಧಿಪತಿ ಚನ್ನಬಸವ ಶ್ರೀಗಳ ಅಪ್ಪಣೆಯಂತೆ ಸಂಗನಬಸವ ಶ್ರೀಗಳು 1916ರಲ್ಲಿ ಬಂಥನಾಳ ಮಠದ 4ನೇ ಪೀಠಾಧಿಪತಿಗಳನ್ನಾಗಿ ನಿಯೋಜಿಸುವಲ್ಲಿ ಲಚ್ಯಾಣ ಸಿದ್ದಲಿಂಗ ಮಹಾರಾಜರು ಶ್ರಮಿಸಿದರು. ನಂತರ ಕೆಲವು ದಿನ ಭೀಮಾ ತೀರದ ಭೀಮೇಶ್ವರ ಬೆಟ್ಟದಲ್ಲಿ ಶಿವಧ್ಯಾನ, ಶಿವಚಿಂತನೆ, 30 ದಿನ ಮೌನಾಚರಣೆ ವ್ರತ ಕೈಗೊಂಡರು. ಪೀಠಾಧಿಪತಿಯಾಗಿಆಯ್ಕೆ—————————————ವೃಷವಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀಮಠವು ಧಾರ್ಮಿಕ ಮತ್ತು ರಾಷ್ಟ್ರಧರ್ಮದ ಕಾರ್ಯಗಳಿಂದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸಂಗನಬಸವ ಸ್ವಾಮೀಜಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳಿಂದ ಸಂಸೃತ ಕಲಿತು 1916ರಲ್ಲಿ ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಯಾಗಿ ನಿಯೊಜನೆಗೊಂಡರು. ಶಿಕ್ಷಣಸೇವೆ————————-ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಅವುಗಳು ಇಂದು ಶತಮಾನ ಸಂಭ್ರಮದಲ್ಲಿದ್ದು ಶ್ರೀಗಳ ಕೀರ್ತಿ ಕಿರೀಟಗಳು. ವಿಜಯಪುರ ಜಿಲ್ಲೆಯಲ್ಲಿ ಇಂದು‌ ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ತಲೆ ಎತ್ತಲು ಕಾರಣವಾದವು.   ಅವರು ಅಂದು ಕೊಟ್ಟ ಸ್ಪೂರ್ತಿಯ ಕರೆ. ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ‌ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನವಸವ ಶಿವಯೋಗಿಗಳು. 1923ರಲ್ಲಿ ಕರ್ನಾಟಕದ ಗಾಂದಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರದೀಕ್ಷೆ ಪಡೆದರು. ಹರ್ಡೆಕರ್ ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜಾರೋಹಣ ಮಾಡಲು ಪ್ರಾರಂಬಿಸಿದರು.ಸಮಾಜಸೇವೆ1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಕಟ್ಟಿದ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾಗಿ  ಶೈಕ್ಷಣಿಕ‌ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950 ರಲ್ಲಿ ಲಚ್ಯಾಣ  ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 ಮತ್ತು  1963ರಲ್ಲಿ ಮಂಟಪ‌ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೇರವೇರಿಸಿದರು ಈ ಮಹಾತ್ಕಾರ್ಯದ ಸ್ಮರಣಾರ್ಥ ಬ್ರಹತ್   ಲಿಂಗದಾಕಾರದ ಮಂದಿರಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ. ಈ ಲಿಂಗದ ಗುಡಿ ಇಂದು ಲಕ್ಷಾಂತರ ಭಕ್ತರ ಶೃದ್ಧಾಕೇಂದ್ರವೆನಿಸಿದೆ. ಲಚ್ಯಾಣದಲ್ಲಿ ಅಮರಗಣಾಧೀಶ್ವರ ಪೂಜೆ ಲಕ್ಷದೀಪೋತ್ಸವದಂತ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇದ್ರಗಳತ್ತ ಸೆಳೆದಿದ್ದಾರೆ. ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಿಸಿದ್ದಾರೆ ಹಲವಾರು ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೂಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಶ್ರೀ ಮಠದಲ್ಲಿ ಆಶ್ರಯ, ನೆಲೆ ನೀಡಿ ರಕ್ಷಿಸಿದ್ದಾರೆ. ಶ್ರೀಗಳು ದಾಸೋಹ, ಶೈಕ್ಷಣಿಕ, ರಾಷ್ಟ್ರಭಕ್ತಿ, ಧರ್ಮಜಾಗೃತಿ ನಡೆಸಿದ್ದಾರೆ.ಶೈಕ್ಷಣಿಕಕ್ರಾಂತಿಯಹರಿಕಾರ——————————————ವಿದ್ಯಾರ್ಥಿಗಳೇ ದೇವರ, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. 18ನೇ ಶತಮಾನದಲ್ಲಿ ವೃಷಭಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಬಂಥನಾಳ ಮಠದ ಕೊಡುಗೆ ಅನನ್ಯ. ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶಿವಯೋಗಿಗಳು, ಚನ್ನಬಸವ ಶಿವಯೋಗಿಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸಲು ಶ್ರಮಿಸಿದರು. ಬಸವಾದಿ ಪ್ರಮತರ ದಾರಿ ಕ್ರಮಿಸಿದರು. ತದನಂತರ ಬಂದ ಪೀಠಾಧಿಪತಿ ಸಂಗನಬಸವ ಮಹಾಶಿವಯೋಗಿಗಳ ಸಮಾಜ ಮುಖಿ ಕಾರ್ಯಗಳಿಂದ ಮಠದ ಕೀರ್ತಿ ಮುಗಿಲೆತ್ತರಕ್ಕೆರಿದೆ. ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರು. ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದರು. ಪರಿಣಾಮ ವಿಜಯಪುರ ಜಿಲ್ಲೆಯಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತವು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಬಡ ವಿದ್ಯಾರ್ಥಿಗಳು ನಾಡಿನ ನಾನಾ ಭಾಗದಲ್ಲಿ ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುತ್ತ, ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ. ಲಿಂಗೈಕ್ಯ ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು 1972 ಮೇ 7ರಂದು ಲಿಂಗೈಕ್ಯರಾದರು. *ಪ್ರಮುಖಘಟನಾವಳಿಗಳು* 1923 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕಾರ. 1925 ರಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ. 1950 ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜನೆ.1953 ರಲ್ಲಿ ಸೊನ್ನದಲ್ಲಿ 63 ಪುರಾತನ ಮಂಟಪ ಪೂಜೆ. 1954 ರಲ್ಲಿ ವಿಜಯಪುರ ನಗರದಲ್ಲಿ 770 ಅಮರಗಣಾಧೀಶ್ವರರ ಪೂಜೆ. 1968 ರಲ್ಲಿ ವೃಷಭಲಿಂಗ ಮಹಾಶಿವಯೋಗಿಗಳನ್ನು ಬಂಥನಾಳ – ಲಚ್ಯಾಣ ಮಠದ ಪೀಠಾಧಿಪತಿಗಳನ್ನಾಗಿ ನೇಮಕ. 1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣದಿಶ್ವರರ ಪೂಜೆ, ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ. 1972 ರ ಮೇ 7 ರಂದು ಬಂಥನಾಳದಲ್ಲಿ ಲಿಂಗೈಕ್ಯ.  ಬಡತನ ಅಕ್ಷರವಂಚಿತ ಬರಗಾಲ ಪೀಡಿತ ಪ್ರದೇಶವೆಂದು ಕೆಟ್ಟ ಹೆಸರಿಗೆ ಕಾರಣವಾದ ವಿಜಯಪುರಕ್ಕೆ ಹೊಸ ಕಾಯಕಲ್ಪ ಕಲ್ಪಿಸಿಕೊಟ್ಟವರು ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳು. ಇಂತಹ  ಪರಮ ಪೂಜ್ಯರ ಮೆಟ್ಟಿದಾನೆಲವೆ ಪಾವನ. ಪೂಜ್ಯರ ಕನಸುಗಳು ನನಸಾಗಿ ವಿಜಯಪುರವು ಸಕಲ  ಐಭೋಗಳ ಐಸಿರಿಯ ರಾಜಧಾನಿಯಾಗಲಿ. ಶ್ರೇಷ್ಠ ಶಿವಯೋಗ ಸಾಧಕರಾದ ಪರಮ ಪೂಜ್ಯ ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳಲ್ಲಿ ಭಕ್ತಿ ಪೂರ್ವಕ ಶರಣಾರ್ಥಿಗಳು ಡಾಶಶಿಕಾಂತಪಟ್ಟಣರಾಮದುರ್ಗಪುಣೆ

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top