ಧಾರಾವಾಹಿ ಸಂಗಾತಿ
ಕಂತು-ಎಂಟು
ಸವಿತಾ ದೇಶಮುಖ ಅವರಿಂದ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ
ಲೇ-ಸವಿತಾ ದೇಶಮುಖ
ಜಯದೇವಿತಾಯಿಲಿಗಾಡೆಯವರ ಮೊಮ್ಮಗಳು

೧೯೩೨ರ ಸಮಯ….. ಜಯದೇವಿ ತಾಯಿಯವರು ತಮ್ಮ 20ನೆಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು……
ಮೂರು ಮಕ್ಕಳ ತಾಯಿಯಾಗಿ ಜೀವನದ ಕೆಲವು ಹಂತಗಳಲ್ಲಿ ತೇರ್ಗಡೆಯಾದ ನಂತರ…ಮನೆ, ಮಕ್ಕಳು, ಜವಾಬ್ದಾರಿಗಳ ಮಧ್ಯೆ … ಬಿಡುವಿನ ಸಮಯ ಸಿಕ್ಕಾಗಲೆಲ್ಲ ಜಯದೇವಿತಾಯಿಯ ಹೃದಯದಲ್ಲಿ ಒಂದು ಹೊಸ ಆಸೆ ಮೊಳಕೆಯೊಡೆದು ಅದು ಫಲ ಕೊಡುವ ಕಾಲ ಬಂದಿತ್ತು …
ಮರಾಠಿ ಭಾಷೆ ಬರೆಯಲು ಓದಲು ಕಲಿತವರಾಗಿದ್ದರು .ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದವರು,ಹಾಡುವರು.. ಮನೆಯ ಕೆಲಸ ಆಳುಗಳ ವಹಿವಾಟುವೂ ಕನ್ನಡದಲ್ಲಿ ನಡೆದಿರುತ್ತಿತ್ತು.ಮಕ್ಕಳೊಂದಿಗೂ ಕನ್ನಡ ಭಾಷೆಯಲಿ ಮಾತನಾಡುತಿದ್ದರು…….
ಆದರೆ ಮನದೊಳಗೊಂದು ಅತಿ ದೊಡ್ಡ ಕೊರಗು —
“ಕನ್ನಡ ಭಾಷೆ ಓದಲು ಬರೆಯಲು ಬರದ ಕೊರಗು ….??!!
ಆ ಸಮಯದಲ್ಲಿ ಪ್ರತಿದಿನ “ವಾರದ” ಪಾಠಶಾಲೆಯಿಂದ ಇಬ್ಬರು ಜಂಗಮರು ಪ್ರಸಾದಕ್ಕೆ ಎಂದು ಮನೆಗೆ ಬರುತ್ತಿದ್ದರು. ಜಂಗಮ ವಿದ್ಯಾರ್ಥಿಳಿಗೆ ತಮಗೆ ಕನ್ನಡ ಭಾಷೆಯ ಜ್ಞಾನವನ್ನು ಕೊಡಬೇಕು ಎಂದು ಕೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು .
*ಕೇವಲ ಎಂಟು ದಿನಗಳಲ್ಲಿ ಕನ್ನಡದ ಅಕ್ಷರ ಮಾಲೆಗಳನ್ನು ಅವರು ಕಲಿತರು ಮೂರು ಮಕ್ಕಳು ಆದ ನಂತರ…!!!*
“ಜಂಗಮರು ಹಾಕಿ ಕೊಡುತ್ತಿದ್ದ ಅಕ್ಷರವನ್ನು ಬಹಳ ಸರಾಗವಾಗಿ, ಸರಳ- ಸಹಜವಾಗಿ ಕನ್ನಡವನ್ನು ನಾನು ಕಲಿತೆ ಅದು ನನ್ನ ತಾಯಿ ಭಾಷೆಯ ಮರ್ಮ…. ಬಲು ಬೇಗ ಒತ್ತಕ್ಷರಗಳನ್ನು ವರ್ಣಮಾಲೆಗಳನ್ನು ಬರೆಯಲು ಪ್ರಾರಂಭಿಸಿದೆ” ಅಂತ ಹೇಳ್ತಿದ್ದರು.
ಕಲಿತ ಕನ್ನಡ ಭಾಷೆಯನ್ನು ಅದೆಷ್ಟು ಸಂಭ್ರಮಿಸಿದರು ಅಂದರೆ ಕೈಗೆ ಸಿಕ್ಕ ಎಲ್ಲ ವಚನಗಳ ಪುಸ್ತಕಗಳನ್ನು ತೆಗೆದುಕೊಂಡು ಓದಲು ಶುರು ಮಾಡಿದರು ಅವುಗಳನ್ನು ಚೆನ್ನಾಗಿ ಓದುತ್ತಿದ್ದೇನಾ ಇಲ್ಲವಾ ಅನ್ನೋದನ್ನ ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ ಅಂತ ಹೇಳುವರು…
ಮೊದಲ ದಿನ ಕನ್ನಡದ “ಅ” ಅಕ್ಷರವನ್ನು ಬರೆಯುವಾಗ ಅವರ ಕೈ ಕಂಪಿಸಿತು…ವಯಸ್ಸು ಅಡ್ಡಬಂತು…ಮಕ್ಕಳು ನಗಬಹುದು ಅತ್ತೆ ಗಂಡ ಮುನಿಸಿಕೊಳ್ಳಬಹುದು ಎನ್ನುವ ಭಯವೂ ಬಂದಿತು…ಆದರೆ ಹೃದಯದ ಉತ್ಸಾಹ ಆ ಭಯಕ್ಕಿಂತ ದೊಡ್ಡದಾಗಿತ್ತು.
“ಸಿದ್ದರಾಮ” ಎಂಬ ಪದವನ್ನು ಕನ್ನಡದಲ್ಲಿ ಓದಿದಾಗಅವರು ಕಣ್ಣೀರಿಟ್ಟರು…ಅದು ಕೇವಲ ಪದವಲ್ಲ,ಅದು ಅವರ “ಗುರುವಿನ ನಾಮ”…. “ಭಕ್ತಿಯ ರೂಪ ಒಡಮೂಡಿ ಕನ್ನಡ ಭಾಷೆಯಲ್ಲಿ ನೋಡಿ ಸಂತೋಷವಾಯಿತು…..
ಆ ದಿನ ಅವರು ಮತ್ತೆ ಒಂದು ಬಾಲಕಿ ಆಗಿದ್ದರು —
ಹೊಸ ಅಕ್ಷರಗಳ ಮುಂದೆ ಕುತೂಹಲದಿಂದ
ಪ್ರತಿ ಪದವು ಮುತ್ತಿನಂತೆ ಸಂಗ್ರಹಿಸುತ್ತಿದ್ದರು.
ಕನ್ನಡದಲ್ಲಿ ಮೊದಲ ಅಕ್ಷರ ಮಾಲೆಗಳ ನೋಡಿ ಕ್ಷಣ
ಅವರ ಮುಖದಲ್ಲಿ ಮೂಡಿದ ಆ ನಗು
ಮಕ್ಕಳು ಹುಟ್ಟಿದಾಗ ಕಂಡ ನಗುವಿನಷ್ಟೇ ಪವಿತ್ರವಾಗಿತ್ತು.
ಅದು ಕೇವಲ ಭಾಷೆ ಕಲಿತ ಸಂತಸವಲ್ಲ…
ಅದು ತನ್ನ ಆತ್ಮವನ್ನು ಶರಣ ಸಂಸ್ಕೃತಿಗೆ- ಜೋಡಿಸಿದ ಸಂತಸ,ವಚನಗಳ ಹೆದ್ದಾರಿ,ತನ್ನ ಅನುಭಾವದ ಬಾಗಿಲು ತೆರೆದ ಸಂತಸ,
…..ತಾನು ತಾಯಿಯಾಗಿದ್ದರೂ ತಾನೂ ಇನ್ನೂ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸದ ಜಯಘೋಷ ಸಾರಿತ್ತು.
….ಅದೇಷ್ಟೋತ್ತು ಕಂಬನಿ ಸುರಿದವು ಅಂತ ಅಭಿಮಾನದಿಂದ ಹೇಳುತಿದ್ದರು.ಕಣ್ಣೀರಿನಲ್ಲಿ ಹೆಮ್ಮೆ ಇತ್ತು.
ಮರಾಠಿಯ ಮಗಳಾಗಿ,,ಕನ್ನಡದ ಸೊಸೆಯಾಗಿ….,ಎರಡು ಭಾಷೆಗಳ ಸೇತುವೆಯಾದರು ಮುಂದೆ ….ಕನ್ನಡಿಗರ ತಾಯಾಗಿ ನಿಂದರು ಅಂತೇನು ಹೇಳಬೇಕಾಗಿ ಆಗಿಲ್ಲವೇ..!!
ಎಲ್ಲ ಬಲ್ಲವಳೆಂಬ /ಇಲ್ಲವದು ಭ್ರಮೆಯೆನಗೆ
ಬಲ್ಲವರ ಪಾದಹಿಡಿಯುವೆ -ಬಲ್ಲಿದರು
ಕಲಿಸಿರಿ ಮತ್ತು ನುಡಿಸಿರಿ!! ಅಂತ ಹೇಳತಾ
ಬಲ್ಲವರಿಂದ ಕಲಿಯುತ ಮುಂದೆ ನಡೆದರು.
16-09-1895 ರಲ್ಲಿ ಸೊಲ್ಲಾಪುರದ ಮಹಾದಾನಿಯಾದ ರಾವ್ ಬಹದ್ದೂರ್ ಮಲ್ಲಪ್ಪ ವಾರದರು “ಸರಸ್ವತಿ ಸದನ “.ಎಂಬ ಶೈಕ್ಷಣಿಕ ಸಂಸ್ಕೃತಿಕ ಸಂಸ್ಥೆ ಸ್ಥಾಪನೆ ಮಾಡಿದ್ದರು .

ಸರಸ್ವತಿ ಸದನ
ಇಲ್ಲಿ ಮಹಿಳೆಯರಲ್ಲಿ ಸ್ವಾವಲಂಬಿ ಜೀವನದ ಅರಿವು, ಶಿಕ್ಷಣದ ಮಹತ್ವ,ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿತ್ತು.
೧೯೧೦ ರಲ್ಲಿ ಸರಸ್ವತಿ ಸದನ ಮೂರು ವಿಭಾಗದಲ್ಲಿ ತನ್ನ ಕೆಲಸ ಹಮ್ಮಿಕೊಂಡಿತ್ತು.
ಕನ್ನಡ ಮಾತನಾಡುವವರಿಗಾಗಿ ವಾರದ ಮಲ್ಲಪ್ಪನವರ ಮನೆಯಲ್ಲಿ “ವೀರಶೈವ ಮಹಿಳಾ ಜ್ಞಾನ” ಮಂದಿರ ಕಟ್ಟಲಾಗಿತ್ತು.
ಇನ್ನು ಮರಾಠಿ ಮಾತನಾಡುವವರಿಗಾಗಿ ಶ್ರೀ ಶಂಕರ ರಾವ ದೇವಾಂಕರ್ ಅವರ ಮನೆಯಲ್ಲಿ “ಸರಸ್ವತಿ ಮಂದಿರ “ಕಟ್ಟಲಾಗಿತ್ತು .
ಗುಜರಾತಿ ಭಾಷಿಕರಿಗಾಗಿ ಹಿರಾಚಂದ್ರ ನೇಮಿಚಂದ್ರ ಮನೆಯಲ್ಲಿ ಶ್ರಾವೀಕಾಶ್ರಮ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು.
ಮಹಿಳೆಯರ ಒಳತಿಗಾಗಿ ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ.. ಮೊದಮೊದಲಿಗೆ ಅರಿಶಿಣ ಕುಂಕುಮ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಎಡಬಿಡದೆ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ಪ್ರಾರ್ಥನೆ, ಕೀರ್ತನೆ ,ಪುರಾಣ ಪ್ರವಚನ ಸಂಪ್ರದಾಯ ಮಡಿ-ಮೈಲಿಗೆ ಅಂಥ ಮೂಢ ನಂಬಿಕೆಗಳಿಂದ ಮುಕ್ತರಾಗಿ ..ಧಾರ್ಮಿಕ ಸರಿಯಾದ ತಿಳುವಳಿಕೆ ಕೊಡುವುದು…ಅವರ ಕಾಳಜಿ ಅವರೇ ವಹಿಸುವುದನ್ನು ಕಲಿಸುತ್ತಿದ್ದರು.
ಸ್ವಾವಲಂಬನೆಯ ಜೀವನ ನಡೆಸುವುದು ಬಗ್ಗೆ ತಿಳುವಳಿಕೆಯನ್ನು ಹೇಳಿಕೊಡಲಾಗುತ್ತಿತ್ತು .
ವಾರದ ಮಲ್ಲಪ್ಪನವರ ಪತ್ನಿಯರಾದ ಗೌರವ್ವಬಾಯಿ ಮತ್ತು ಬಸವ್ವಬಾಯಿ ಹಾಗೂ ಅವರ ಮಗಳು ಸಂಗವ್ವನವರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು.
ತಾಯಿಯೊಂದಿಗೆ ಜಯದೇವಿ ತಾಯಿಯವರು ಸರಸ್ವತಿ ಸದನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.
ಮುಂದೆ 1932 ರಲ್ಲಿ ಮಹಿಳಾ ಜ್ಞಾನ ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಏಕೆಂದರೆ ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರು ತಾಯಿಯವರ ಹೆಸರ ಮೇಲೆ ಜಗವನ್ನು ಖರೀದಿಸಿ ತಾಯಿಯವರ ಹೆಸರಿನಲ್ಲಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು.
ಈ ಶಾಲೆಯು ಸೊಲ್ಲಾಪುರದಲ್ಲಿ 25 ವರ್ಷಗಳ ಕಾಲ ತಾಯಿಯವರ ಹೆಸರಿನಲ್ಲಿಯೇ ನಡೆದಿತ್ತು. ತಾಯಿಯವರು ಈ ಶಾಲೆ ಗೆ ಸಿದ್ದರಾಮನ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. “ಸಿದ್ದೇಶ್ವರ” ಶಾಲೆಯಾಗಿ ಪರಿವರ್ತನೆಗೊಂಡಿತು. ಈ ಶಾಲೆಯಲ್ಲಿ ಅವಿಶ್ರಾಂತವಾಗಿ ಓದುವುದನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಂಡರು.
ಸಿದ್ದೇಶ್ವರ ಕನ್ಯಾ ಪಾಠಶಾಲೆ

ಸಿದ್ದೇಶ್ವರ ಕನ್ಯಾ ಪಾಠಶಾಲೆ
ಜಯದೇವಿತಾಯಿಯವರ ಕಾರ್ಯ ಮಾಡುವ ಮುಖ್ಯವಾದ ಕಾರ್ಯ ಕ್ಷೇತ್ರಗಳು ಅಂದರೆ …ವಾರದ ಸಂಸ್ಕೃತ ಪಾಠಶಾಲೆ ,ಮಹಿಳಾ ಜ್ಞಾನ ಮಂದಿರ, ಸರಸ್ವತಿ ಸದನ ಹಾಗೂ ಸಿದ್ದೇಶ್ವರ ಕನ್ಯಾ ಶಾಲೆ, ಬಾಲ ಶ್ರಾವಿಕಾಶ್ರಮ ಮಂದಿರ ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ದುಡಿದರು .ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.
ಮಹಿಳೆಯರಲ್ಲಿ ಶಿಕ್ಷಣದ ಅರಿವು ,ರಾಷ್ಟ್ರೀಯ ಚಿಂತನೆ ,ನಾಡ ನುಡಿ ಪ್ರಜ್ಞೆ ಸಮಾಜದ ಚಟುವಟಿಕೆಯ ಮೂಲಕ ಸ್ವಾವಲಂಬನೆಯ ಬದುಕು, ದೇಶಿಯ ಚಿಂತನೆಗಳನ್ನು ಬೆಳೆಸುತ್ತಿದ್ದರು.
ಈ ಕಾಲಕ್ಕೆ ಗಾಂಧೀಜಿಯವರು ಭಾರತಾರದಾದ್ಯಂತ ಸ್ವಾತಂತ್ರ್ಯದ ಹೋರಾಟದಲ್ಲಿ ಜನರನ್ನು ಒಂದು ಗುಡಿಸುತ್ತಿದ್ದರು ಅವರ ಅಹಿಂಸಾವಾದ ,ಸ್ವದೇಶಿ ಚಿಂತನೆಯ ಚಟುವಟಿಕೆಗಳಲ್ಲಿ ಜಯದೇವಿ ತಾಯಿಯವರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು.
ಗಾಂಧೀಜಿ ಚಿಂತನೆಗಳು ಜಯದೇವಿಯವರಿಗೆ ತುಂಬಾ ಆಕರ್ಷಣೆ ಮಾಡಿದ್ದವು .
ಇದೇ ಕಾಲಕ್ಕೆ ತಿಲಕರು ಸ್ವದೇಶಿ ಚಳುವಳಿಯ ನಾಲ್ಕು ಅಂಕಗಳಾದ ಸ್ವರಾಜ್ಯ ,ರಾಷ್ಟ್ರೀಯ ಶಿಕ್ಷಣ, ಸ್ವದೇಶಿ ಚಳುವಳಿ ,ವಿದೇಶಿ ಬಹಿಷ್ಕಾರ …..ಮೌಲ್ಯಗಳ ಪ್ರಚಾರಕ್ಕಾಗಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರು
ಆ ಕಾಲದಲ್ಲಿ ತಿಲಕರು ವಾರದವರ ಮನೆತನದಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿರುವುದನ್ನು ನೋಡಿ ತಿಲಕರು ಸಾಮೂಹಿಕವಾಗಿ ಈ ರೀತಿಯಲ್ಲಿ ಗಣೇಶನನ್ನು ಪೂಜಿಸಿದರೆ ಸ್ವಾತಂತ್ರ ಹೋರಾಟದಲಿ ಎಲ್ಲ ಮತೀಯರು ಎಲ್ಲ ಜಾತಿಯವರು ಒಂದು ಸೇರಿ ಭಾರತೀಯರು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬಹುದು ಎನ್ನುವ ವೈಚಾರಿಕತೆಯನ್ನು ಪಡೆದುಕೊಳ್ಳುತ್ತಾರೆ. ಭಾರತದಾದ್ಯಂತ ಗಣೇಶ ಉತ್ಸವವನ್ನು ಪ್ರಾರಂಭಿಸುವುದನ್ನು ಶುರು ಮಾಡಿದರು. ತಿರಕರು ವಾರದ ಮಲ್ಲಪ್ಪನವರಿಗೆ ಧನ್ಯವಾದ ಹೇಳಿರುವ ಆಕರ ಲಭ್ಯವಾಗಿವೆ.
ಅಂತೆಯೇ ಜಯದೇವಿ ತಾಯಿಯವರು ಕೂಡ ಗಣೇಶನ ಪೂಜೆಯನ್ನು ಅತಿ ಸಂಭ್ರಮದಿಂದ ಅನುಸರಿಸುತ್ತಿದ್ದರು ಹಾಗೆ ಗಾಂಧೀಜಿಯವರ ಆಚಾರ ವಿಚಾರಗಳನ್ನು ಕಾರ್ಯರೂಪದಲ್ಲಿ ತರುತ್ತಿದ್ದರು .
ಅವರಲ್ಲಿಯ ರಾಷ್ಟ್ರ ಪ್ರೇಮವು ಉತ್ಕಟವಾಗಿತ್ತು. ರಾಷ್ಟ್ರೀಯ ಚಟುವಟಿಕೆ ಹಾಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು .
ಕರ್ನಾಟಕದಲ್ಲಿ ಸುಮಾರು 48 ರಾಷ್ಟ್ರೀಯ ಶಾಲೆಗಳದ್ದವು. ಜಯದೇವಿ ತಾಯಿಯವರು ರಾಷ್ಟ್ರೀಯ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದರು…
ಸೊಲ್ಲಾಪುರದಲ್ಲಿ ಬಾಲ “ವಿದ್ಯಾ ಮಂದಿರ, ಶ್ರಾವಿಕಾಶ್ರಮ ಶಾಲೆ ,ಹುಬ್ಬಳ್ಳಿಯಲ್ಲಿ ‘ಭಾರತೀಯ ಹೈಸ್ಕೂಲ್,” ಧಾರವಾಡದಲ್ಲಿ “ಜಯದೇವಿತಾಯಿ ಲಿಗಾಡೆ” ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿದ್ದರು. ಅಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು.
*ಸರಸ್ವತಿ ವಿದ್ಯಾ ಮಂದಿರ*
ತಾಯಿ ಸಂಗವ್ವ ಮಡಿಕೆ ,ಭಾಗೀರಥಿಬಾಯ್, ಪಂಚವ್ವಬಾಯಿ ಅವರು ಅಸಹಕಾರ ಚಳುವಳಿಯಲ್ಲಿ ಧುಮುಕಿದ್ದರೂ ಅದೇ ರೀತಿಯಾಗಿ ತಾಯಿಯವರು ಗಂಡನ ಮನೆಯಲ್ಲಿ ಇದ್ದುಕೊಂಡು ಗಾಂಧೀಜಿಯವರು ಕರೆ ಕೊಡುತ್ತಿದ್ದ ಎಲ್ಲ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.
ಕನ್ನಡವನ್ನು ಕಲಿಯುತ್ತಲೇ ಮುಂದೆ ಕನ್ನಡದ ವೇಧಾವಿ ಭಾಷಣಕಾರ್ತಿಯಾಗಿ ಪರಿವರ್ತಿಸಿದರು.
ಮೊಟ್ಟ ಮೊದಲ ಬಾರಿ ಜಯದೇವಿ ತಾಯಿಯವರು ಭಾಷಣವನ್ನು ಮಾಡಿದ ನೆನಪನ್ನು ಮಾಡಿಕೊಳ್ಳುತ್ತಿದ್ದರು……
*ಮೊಟ್ಟ ಮೊದಲ ಬಾರಿ ಭಾಷಣ ಮಾಡಿದ ವಾರದ ವಾಡೆ*

ಮೊದಲಸಲ ಬಾಷಣ ಮಾಡಿದ ವಾಡೆ
ಮನೆಯ ಎದುರುಗಡೆ ಸ್ಥಿತವಾದ ವಾರದವರ ಮನೆಯಲ್ಲಿ ತಿಂಗಳಿಗೊಮ್ಮೆ ಅಕ್ಕಮಹಾದೇವಿಯ ಪುರಾಣ ಪಠಣ ಮಾಡಿದ ಗುರುಗಳು ಜಯದೇವಿ ತಾಯಿಯವರನ್ನು ಕರೆದು “ನಾಳೆ ನೀನೇ ಭಾಷಣವನ್ನು ಮಾಡಿ ಪುರಾಣದ ಸಮಾಪ್ತಿಯನ್ನು ಮಾಡಬೇಕು “ಎಂದು ಕೇಳಿಕೊಂಡರು…
ಜಯದೇವಿ ತಾಯಿಯವರಿಗೆ ಕೈ ಕಾಲು ಕಂಪಿಸಿದವು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂಗ ಆಯಿತುಅಂತ ಹೇಳುತ್ತಿದ್ದರು.
ಮೊಟ್ಟ ಮೊದಲ ಬಾರಿಗೆ ಭಾಷಣ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ ಏಕೆಂದರೆ ಕೇವಲ ತಾಯಿ ಭಾಷಣ ಮಾಡುವುದನ್ನು ಕೇಳುತ್ತಿದ್ದರು… ಆದರೆ ಭಾಷಣ ಮಾಡಿದವರಾಗಿರಲಿಲ್ಲ..
ತಂದೆಯ ಹತ್ತಿರ ಹೋಗಿ ಏನನ್ನು ಮಾತನಾಡಬೇಕು ಅನ್ನೋದನ್ನ ಸುಮಾರು 9 -10 ಪುಟಗಳಷ್ಟು ಭಾಷಣವನ್ನು ಬರೆದುಕೊಂಡು ಬಂದು…. ಪುಟಗಳಲ್ಲಿನ ಒಂದು ಅಕ್ಷರವನ್ನು ಕೂಡ ಬಿಡದಂತೆ ಮರು ದಿವಸವೇ ಭಾಷಣ ಮಾಡಿದರು.
ಆ ಭಾಷಣವು ಎಲ್ಲರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಹಾಗೂ ಪೂರ್ತಿಯಾಗಿ ಎಲ್ಲರ ಮನ ಗೆದ್ದಿದ್ದರು.
ತಾಯಿಯವರು ಮಾಡುತ್ತಿದ್ದ ಭಾಷಣವನ್ನು ಕೇಳಿದ ತಂದೆ ಕಣ್ಣುನೀರು ಉರಿದವು… ತಾಯಿ ಮಗಳನ್ನು ತಬ್ಬಿಕೊಂಡಿದ್ದರು .ಹಾಗೆ ಗೌರವ್ವಬಾಯಿಯು ಬೆರಳುಗಳಿಂದ ನಿವಾಳಿಸಿ ಲಟ್ಟಿ ಮುರದಿದ್ದರು.
ಇನ್ನೂ ಸಮಾಜದ ಸ್ತ್ರೀಯರೆಲ್ಲರೂ …ಬಂದಂತಹ ಎಲ್ಲ ಅತಿಥಿಗಳು ಅತ್ಯಂತ ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಮನಸ್ಸಿಗೆ ಬಹಳ ಪ್ರಫುಲ್ಲತೆ ತಂದಿದ್ದು …..
ಮನದಲ್ಲಿ ಸಾವಿರ ಬಾರಿ ಸಿದ್ದರಾಮಯ್ಯನವರು ನೆನೆಸಿ ಧನ್ಯವಾದಗಳು ಹೇಳಿದ್ದರು.ಹಾಗೆ ಅತ್ತೆಯು ಭಾಷಣಗಾರತೀಯ ಮಗಳು ಅಂತ ಅಣುಕಿಸುತ್ತಿರುವ ಮಾತುಗಳು ಕೂಡ ನೆನಪಿಗೆ ಬಾರದೇ ಇರಲಿಲ್ಲ ಅಂತ ಹೇಳಿದರು.
ಮುಂದೆ ಪ್ರಯಾಗಬಾಯಿ ಅತ್ತೆಯು ಕೂಡ ತಾಯಿಯವರು ಮಾಡುವ ಭಾಷಣದ ಅಭಿಮಾನಿಗಳಾದರು.
ಗಂಡ ಚೆನ್ನಮಲ್ಲಪ್ಪನವರು ತುಂಬಾ ಅಭಿಮಾನ ಪಡುವಂತ ಆಯ್ತು.
*ಶರಣರ ಕರುಣೆಯು ಕಾಸರ
ಕವಲೊಡೆದು ಹರೆದು ಹಾಯದಿತ್ತ
ಎನ ಮೇಲೆ ಸಿದ್ದನ ವರವಾಗಿತ್ತು ..*…
ಮುಂದೆ ಅವರ ಜನಜಾಗೃತಿಯ ಕಾರ್ಯ-ಭಾಷಣ ಗಾರ್ತಿಯ ಪಯಣ ಸಾಗುತ್ತಲೇ ನಡೆಯಿತು. ಅಲ್ಲಲ್ಲಿ ಎಲ್ಲ ಸಮಾಜದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಸುತ್ತಲಿನ ಹಳ್ಳಿಗಳಿಂದ ಊರುಗಳಿಂದ ಭಾಷಣ ಮಾಡುವುದಕ್ಕಾಗಿ ಆಮಂತ್ರಣ ಬರಲಾರಂಸಿದವು .
ಅನೇಕ ಶರಣ ಅನುಭಾವಿಗಳ ಒಡನಾಟ ಬೆಳೆಯ ಲಾರಂಭಿಸಿತು.
ಕನ್ನಡ ಮೇರು ಸಾಹಿತ್ಯದ ಅಧ್ಯಯನ, ಶರಣ ಸಂಸ್ಕೃತಿಯ ಪರಂಪರೆಯ ಆಚರಣೆಮಾಡುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಹೋಗಿ ಭಾಷಣವನ್ನು ಕೊಡುವುದು ಸಮಾಜದ ಸೇವೆಯನ್ನು ಮಾಡುವುದು ರಾಜ್ಯದ ರಾಷ್ಟ್ರದ ಅನೇಕ ಸಂತರು ಮಹಾತ್ಮರು, ಶಿವಯೋಗಿಗಳು, ಮಹಾನುಭಾವರೊಂದಿಗೆ ಜೊತೆ ಗೂಡಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಬಿಸಿದರು.
ಜಯದೇವಿ ತಾಯಿ ಅವರ ಸರ್ವತೋಮುಖ ಸಮಾಜದ ಕಾರ್ಯಗಳಿಗೆ ಹೇಗೆ ಮುಂದುವರೆದವು ಅನ್ನುವದ ಮುಂದಿನ ವಾರ ನೋಡೋಣ ಬನ್ನಿ…..
ಸವಿತಾ ದೇಶಮುಖ




