ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
“ಶೂನ್ಯದ ಸವಿ”


ನಿದ್ದೆ ಸುಲಭದಿ ಒಲಿದರೆ ವರ
ಕಳೆವುದು ಬಾಳಿನ ದಿನದ ಭಾರ
ಕನಸ ಕಂಗಳಿಗೆ ಈತ ಸರದಾರ
ಮಂಜಿನಷ್ಟು ಈಗ ಮನ ಹಗುರ.
ಕುಳಿತಲ್ಲೇ ತೂಕಡಿಕೆಯ ತಡವರಿಕೆ
ಬೇಸರ ತೀರದ ಬವಣೆಯ ಹರಕೆ
ತಂಗಾಳಿಯ ಸವಿಯ ಬೀಸಣಿಕೆ
ಇರದು ಸಂಕೋಲೆಗಳ ಎಣಿಕೆ.
ಜಗವ ಮರೆತು ಶೂನ್ಯವಾಗಿ
ಕಂಡ ಕಲ್ಪನೆಯ ಮಗುವಾಗಿ
ಹಿತವಾಗಿ ಉಸಿರನೇರಿ ಸಾಗಿ
ರೋಗಿಯೂ ಆಗುವನು ಭೋಗಿ.
ಕಾಯಕ್ಕಿರಲಿ ವಿರಾಮದ ಜಾಗ
ನಿರಂತರತೆ ತರುವುದು ರೋಗ
ಅಲ್ಪಕಾಲದ ಈ ವೈಭೋಗ
ಸಿಗದಿದ್ದರೆ ಇರದು ಸುಯೋಗ.
ನಿರಂಜನ ಕೇಶವ ನಾಯಕ



