́ಕನಸಾಗಿಯೇ ಉಳಿದ ಅಂಬೇಡ್ಕರ್ ಕನಸಿನ ಸಾಮಾಜಿಕ ನ್ಯಾಯʼ ಮೇಘ ರಾಮದಾಸ್ ಜಿ

ಅಂಬೇಡ್ಕರ್ ಕನಸಿನ ಸಾಮಾಜಿಕ ನ್ಯಾಯ ಕನಸಾಗಿಯೇ ಉಳಿದಿದೆ
ಧ್ರುವ ದಲಿತ ಕುಟುಂಬಕ್ಕೆ ಸೇರಿದ ಮೂರು ವರ್ಷದ ಚುರುಕಾದ ಮಗು. ಅವನು ಆಟ ಆಡಲು ಸದಾ ಸಹಪಾಠಿಗಳ ಜೊತೆಯನ್ನು ಬಯಸುತ್ತಿದ್ದನು. ಅವನ ಎಲ್ಲಾ ಗೆಳತಿ/ಯರು ಅವನನ್ನು ಯಾವುದೇ ಭೇದ ಭಾವವಿಲ್ಲದೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಆಕೆಯ ತಂದೆ ತಾಯಿ. ಅವರಿಬ್ಬರ ಬಗೆಗೆ ಗ್ರಾಮದಲ್ಲಿ ಉತ್ತಮ ಅಭಿಪ್ರಾಯವಿತ್ತು. ಆದ್ದರಿಂದ ಅವರ ಮಗನಾದ ಧ್ರುವನಿಗೂ ಅಷ್ಟೇ ಪ್ರೀತಿ ಸಿಗುತ್ತಿತ್ತು. ಧ್ರುವನ ಮನೆಯ ಎದುರಿಗೆ ಸವರ್ಣಿಯರೊಬ್ಬರ ಮನೆ ಇತ್ತು. ಬೇಸಿಗೆ ರಜೆಯ ಕಾರಣಕ್ಕೆ ಆ ಮನೆಗೂ ಒಬ್ಬ ಪುಟ್ಟ ಹುಡುಗ ರಜೆ ಕಳೆಯಲು ಬಂದಿದ್ದ. ಧ್ರುವನಿಗೋ ಮೊದಲೇ ಗೆಳೆಯರೆಂದರೆ ಬಲು ಒಲವು. ಅವನು ತನ್ನೆಲ್ಲ ಸಹಪಾಠಿಗಳ ಜೊತೆಗೆ ಆಡುವ ರೀತಿಯಲ್ಲಿಯೇ ಆ ಹುಡುಗನ ಜೊತೆಗೂ ಆಡಲು ಅವನ ಮನೆಗೆ ಓಡಿದನು. ಆದರೆ ಅವನನ್ನು ಮನೆಯ ಬಾಗಿಲಲ್ಲಿಯೇ ತಡೆದು ನಿಲ್ಲಿಸಿದರು ಆ ಸವರ್ಣೀಯ ಕುಟುಂಬದ ಹಿರಿಯರು. ಮನೆಯ ಒಳಗೆ ಹೋಗಲು ಕೊಸರುತ್ತಿದ್ದ ಧ್ರುವನನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿದ್ದರು. ಇತ್ತಾ ಧ್ರುವನ ತಂದೆ ಅವನನ್ನು ಹುಡುಕುತ್ತಾ ಬಂದು ಆ ದೃಶ್ಯವನ್ನು ನೋಡಿದರು. ಅವರ ಮನಸ್ಸು ಒದ್ದೆಯಾಯಿತು. ಆದರೆ ಏನು ಮಾತನಾಡದೆ ಧ್ರುವನನ್ನು ಮನೆಗೆ ಕರೆದೊಯ್ದರು.


ಈ ಘಟನೆ ಸವರ್ಣೀಯರಿಗೆ ಸಾಮಾನ್ಯವಾದರೂ ದಲಿತರು ಪ್ರತಿ ಕ್ಷಣ ಅನುಭವಿಸುತ್ತಿರುವ ನೋವಿನ ಸತ್ಯ. ಶತಮಾನಗಳಿಂದಲೂ ತುಳಿತಕ್ಕೆ, ಅಸಮಾನತೆಗೆ, ದೌರ್ಜನ್ಯಕ್ಕೆ, ಅಸ್ಪೃಶ್ಯತೆಗೆ ಒಳಗಾಗುತ್ತಿರುವ ದಲಿತರ ಜೀವನ ಬದಲಾಗಬೇಕಿದೆ. ಬಹುಶಃ ಈ ಅಸಮಾನತೆ ಅಳಿಯುವುದು ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಆಶಯದ ಸಾಮಾಜಿಕ ನ್ಯಾಯ ಜನಮಾನಸದಲ್ಲಿ ಬೇರೂರಿದಾಗ ಮಾತ್ರ. ಬಾಬಾ ಸಾಹೇಬರ ಪ್ರಕಾರ ಸಾಮಾಜಿಕ ನ್ಯಾಯ ಎಂದರೆ ತಾಯಿಯ ಗರ್ಭದಲ್ಲಿನ ಭ್ರೂಣದಿಂದ ಆರಂಭವಾಗಿ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸಮತೆಯ ಜೀವನ ಇರಬೇಕು. ಎಲ್ಲರಿಗೂ ವ್ಯಕ್ತಿ ಗೌರವ ಹಾಗೂ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಬಂಧುತ್ವಗಳೆ, ಸಾಮಾಜಿಕ ನ್ಯಾಯದ ಆಧಾರ ಸ್ತಂಭಗಳಾಗಿವೆ. ಈ ಮೂರು ಮೌಲ್ಯಗಳು ಇಲ್ಲವಾದಲ್ಲಿ ಸಾಮಾಜಿಕ ನ್ಯಾಯದ ಆಶಯ ಕನಸಾಗಿಯೇ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.


ಪ್ರಸ್ತುತ ದೇಶದ ಸ್ಥಿತಿಗತಿ ಗಮನಿಸಿದರೆ ಈ ಮೂರು ಮೌಲ್ಯಗಳು ನಿಧಾನಗತಿಯಲ್ಲಿ ಮರೆಯಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಸರ್ವ ಧರ್ಮಶಾಂತಿಯ

ತೋಟವಾದ ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಹಾಗೂ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದರೂ ಸಹ ಬಾಬಾ ಸಾಹೇಬರ ಆಶಯದ ಸಾಮಾಜಿಕ ನ್ಯಾಯದ ಕನಸು ಇನ್ನೂ ಮರೀಚಿಕೆಯಾಗಿದೆ. ಸಂವಿಧಾನದ ಮುನ್ನುಡಿಯಾದ ಪ್ರಸ್ತಾವನೆಯಲ್ಲಿ ಬಾಬಾ ಸಾಹೇಬರು “ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು ಒದಗಿಸಬೇಕು “ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದರಲ್ಲಿಯೂ ಸಾಮಾಜಿಕ ನ್ಯಾಯ ಎಲ್ಲಕ್ಕಿಂತ ಮುಖ್ಯವಾದದ್ದು ಎಂದವರು ಸ್ಪಷ್ಟವಾಗಿ ತಿಳಿಸಿದ್ದರು. ಕಾರಣ ಸಾಮಾಜಿಕವಾಗಿ ಸಮಾನತೆ ಲಭಿಸಿದ್ದಲ್ಲಿ ಪ್ರಜೆಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಬಲರಾಗಲು ಸಮಾಜವೇ ಸಹಕಾರಿಯಾಗುತ್ತದೆ. ಶತಮಾನಗಳಿಂದ ಜೀತದಾಳುಗಳಾಗಿ ಜೀವನ ಸವೆಸುತ್ತಿರುವ ದಲಿತರಿಗೆ ಸಾಮಾಜಿಕ ನ್ಯಾಯದ ಮೂಲಕ ಸ್ಥಾನಮಾನ ದೊರಕದಲ್ಲಿ ಅವರ ಬದುಕು ಬದಲಾಗುವುದು ನಿಶ್ಚಿತ. ಅವರಿಗೆ ಸಿಗಬೇಕಾಗಿರುವ ಎಷ್ಟೋ ಅವಕಾಶಗಳು ಅಸ್ಪೃಶ್ಯತೆಯ ಕಾರಣಕ್ಕೆ ಅವರಿಂದ ದೂರವಾಗುತ್ತಿವೆ. ಈ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲರಿಗೂ ಸಮಾನ ರಕ್ಷಣೆ ಹಾಗೂ ಅವಕಾಶಗಳನ್ನು ಒದಗಿಸುವುದು ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಇಂದಿಗೂ ಅದು ಸಂಪೂರ್ಣವಾಗಿ ಸಾಧ್ಯವಾಗದೇ ಇರುವುದು ದುರಾದೃಷ್ಟ. ದೇಶದ ಪ್ರಮುಖ ಹುದ್ದೆಗಳಲ್ಲಿ, ಸಾಕ್ಷರತೆಯ ಪ್ರಮಾಣದಲ್ಲಿ, ರಾಜಕೀಯದಲ್ಲಿ, ನ್ಯಾಯ ಪಡೆಯುವಲ್ಲಿ, ಸ್ಪೃಶ್ಯ ಸಮಾಜದ ಸರಿಸಮವಾಗಿ ನಿಲ್ಲುವಲ್ಲಿ, ಆರ್ಥಿಕತೆಯಲ್ಲಿ ದಲಿತರು ಬಹಳವೇ ಹಿಂದುಳಿದಿರುವುದು ಇಂದಿಗೂ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದಕ್ಕೆ ಮುಖ್ಯ ಸಾಕ್ಷಿಯಾಗಿದೆ. ಈ ಕೆಳಗಿರುವ ಕೆಲವೊಂದು ಅಂಕಿ ಅಂಶಗಳು ಈ ಹೇಳಿಕೆಗೆ ಪುಷ್ಟಿ ನೀಡುತ್ತವೆ.

  1. ಜನಸಂಖ್ಯೆ
    ಭಾರತ ರೈತರ ದೇಶ. ಪೌರೋಹಿತ್ಯ, ವ್ಯಾಪಾರಸ್ಥ ಸಮುದಾಯಗಳಿಗಿಂತ ಭೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯುವ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಸಮುದಾಯದ ಜನರೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ದೇಶ ನಮ್ಮದು. ಇಂತಹ ದೇಶದಲ್ಲಿ ಜಾತೀಯ ಕಾರಣಕ್ಕೆ ಎಷ್ಟೋ ಮಾನವನ್ನು ಬಲಿ ಹಾಕುತ್ತಿರುವ ದಾರುಣ ವಿಚಾರಗಳನ್ನು ನಾವು ಪ್ರತಿದಿನ ಕೇಳುತ್ತಾ ನೋಡುತ್ತಾ ಇದ್ದೇವೆ. ಹಿಂದುಗಳೇ ಬಹುಸಂಖ್ಯಾತರಾಗಿರುವ ಕಾರಣದಿಂದ ನಮ್ಮದು ಹಿಂದೂ ರಾಷ್ಟ್ರ ಆಗಬೇಕು ಎಂದು ಬೊಬ್ಬೆ ಹೊಡೆಯುವ ಜನರಿಗೆ ದಲಿತರು ಕೂಡ ಹಿಂದುಗಳೆಂಬುದನ್ನು ನೆನಪಿಸುವ ಕಾಲ ಬಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆ ಹೊಂದಿರುವ ಸಮುದಾಯವೇ ದಲಿತ ಸಮುದಾಯ. ಹೀಗಿದ್ದರೂ ಸಹ ಈ ಸಮುದಾಯದ ಮೇಲೆ ಆಗುತ್ತಿರುವ ಶೋಷಣೆಗೆ ಮಿತಿಯೇ ಇಲ್ಲ. ಮರ್ಯಾದ ಗೇಡು ಹತ್ಯೆಗಳು ಸಹ ದಲಿತರ ಮೇಲಿನ ಶೋಷಣೆಗೆ ಒಂದು ದೊಡ್ಡ ಉದಾಹರಣೆಗಳಾಗಿವೆ.
  2. ಸಾಕ್ಷರತಾ ಪ್ರಮಾಣ
    ಭಾರತ ಸಂವಿಧಾನವನ್ನು ಬಾಬಾ ಸಾಹೇಬರು ಭಾರತದ ವೈವಿಧ್ಯತೆಗೆ ಅನುಸಾರವಾಗಿ ಬರೆದು ಅದರಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ, ಹಾಗೂ ಸಮಾನ ಗೌರವಕ್ಕೆ ಆದ್ಯತೆ ಕೊಟ್ಟಿದ್ದಾರೆ. ಈ ಆದ್ಯತೆ ಕಾನೂನಾತ್ಮಕವಾಗಿ ಸಿಗದಿದ್ದಲ್ಲಿ ಬಹುಶಃ ದಲಿತ ಸಮಾಜ ಶಿಕ್ಷಣ ಪಡೆಯಲು ಈಗಲೂ ಹೋರಾಟ ಮಾಡುವ ಪರಿಸ್ಥಿತಿ ಇರುತ್ತಿತ್ತೇನೋ. ಜೀತಾ ಎಂಬುದು ದಲಿತರ ಕೌಟುಂಬಿಕ ವೃತ್ತಿಯಾಗಿಯೇ ಇರುತ್ತಿತ್ತು. ಯಾವುದೇ ಅಡ್ಡಿ ಇಲ್ಲದೆ ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತಿರುವುದು ಸಂವಿಧಾನದಿಂದಲೇ. ಆದರೆ ಇಂದಿಗೂ ದಲಿತರು ಯಾವುದೇ ಎಂಥದ್ದೇ ದೊಡ್ಡ ಹುದ್ದೆಗೆರಿದರು ಅವರನ್ನು ಕೀಳಾಗಿ ನೋಡುವ, ಅಗೌರವ ತೋರಿಸುವ ಮನುಷ್ಯರು ಇಂದಿಗೂ ಇದ್ದಾರೆ. ಹಾಗಾಗಿ ಶಿಕ್ಷಣ ಹಕ್ಕಾಗಿ ಲಭಿಸಿದ್ದರು ಸಮಾಜಿಕ ಗೌರವ ಹಾಳೆಯಲ್ಲಿನ ಪದವಾಗಿದೆ.
  3. ರಾಜಕೀಯ ಪ್ರಾತಿನಿಧ್ಯ
    ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಸಾರ ರಾಜಕೀಯ ಪ್ರಾತಿನಿಧ್ಯಕ್ಕೆ ಬುನಾದಿಯೇ ಸಾಮಾಜಿಕ ನ್ಯಾಯ. ಸಾಮಾಜಿಕ ಮಾನ್ಯತೆ, ಪ್ರಾತಿನಿಧ್ಯ ಎಲ್ಲವೂ ರಾಜಕೀಯ ಕ್ಷೇತ್ರಕ್ಕೆ ಬಹಳ ಮುಖ್ಯವಾದ ಅಂಶಗಳಾಗಿವೆ. ಆದರೆ ಈ ಅಂಶಗಳು ಇಂದಿಗೂ ದಲಿತರ ಜೀವನದಲ್ಲಿ ಪರಿಪೂರ್ಣವಾಗಿ ಲಭಿಸಿಲ್ಲ. ಪ್ರಭಾವಿ ರಾಷ್ಟ್ರ ಮಟ್ಟದ ಪಕ್ಷಗಳಲ್ಲಿ ಗುರುತಿಸಿಕೊಂಡರು ಸಹ ದಲಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದು ಮೀಸಲು ಕ್ಷೇತ್ರಗಳಲ್ಲಿ ಮಾತ್ರವೇ. ಇದೊಂದು ವಿಚಾರ ದಲಿತರ ರಾಜಕೀಯ ಪ್ರಾತಿನಿಧ್ಯವನ್ನು ಸೂಚಿಸುತ್ತದೆ. ರಾಷ್ಟ್ರದ ದೊಡ್ಡ ದೊಡ್ಡ ಹುದ್ದೆಗಳಲ್ಲಿ ದಲಿತರು ಸ್ಥಾನ ಪಡೆದಿರುವುದು ಕೇವಲ ಬೆರಳೆಣಿಕೆ ಅಷ್ಟು ಮಾತ್ರ. ಭಾರತಕ್ಕೆ ಸ್ವತಂತ್ರ ಬಂದ ನಂತರ ಒಟ್ಟು 15 ಮಂದಿ ರಾಷ್ಟ್ರಪತಿಗಳಾಗಿದ್ದಾರೆ. ಅವರಲ್ಲಿ ಕೇವಲ ಇಬ್ಬರೂ ಪರಿಶಿಷ್ಟ ಜಾತಿ ಹಾಗೂ ಒಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇದನ್ನು ಗಮನಿಸಿದರೆ ಈಗಲೂ ದೇಶದಲ್ಲಿ ಇನ್ನೂ ಸಾಮಾಜಿಕ ನ್ಯಾಯ ನೆಲೆಗೊಂಡಿಲ್ಲ ಎಂಬುದು ಅರಿವಾಗುತ್ತದೆ.
  4. ಅಟ್ರಾಸಿಟಿ ಪ್ರಕರಣಗಳು
    ಅಟ್ರಾಸಿಟಿ ಕಾಯ್ದೆಯು ಭಾರತದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಕಾಯ್ದೆಯಾಗಿದೆ. ಇದನ್ನು ಭಾರತದ ಸಂಸತ್ತು 1989ರಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆಯ ಅನುಸಾರ ದಲಿತರನ್ನು ಜಾತಿ ಹೆಸರಲ್ಲಿ ಬೈಯುವುದು, ಅವಮಾನಿಸುವುದು, ಕೊಲೆ ಪ್ರಯತ್ನ, ಹಿಂಸೆ, ದೌರ್ಜನ್ಯ ನಡೆಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ ಇದೆ ಎಂದು ತಿಳಿದಿದ್ದರೂ ಸಹ ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ ಹೊರತು ನಿಲ್ಲುತ್ತಿಲ್ಲ. ಆದ್ದರಿಂದ ಏನೇ ಸಂವಿಧಾನ ಕಾನೂನು ಇದ್ದರೂ ಸಹ ದಲಿತರ ಪರಿಸ್ಥಿತಿ ಈಗಲೂ ಹೀನಾಯವಾಗಿಯೇ ಇದೆ ಎಂಬುದು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತದೆ. ದಲಿತರಿಗಿರುವ ಮೀಸಲಾತಿ ಸಾಮಾಜಿಕ ನ್ಯಾಯದ ಸಣ್ಣ ಭಾಗವೇ ಹೊರತು ಮೀಸಲಾತಿಯೆ ಸಾಮಾಜಿಕ ನ್ಯಾಯವಲ್ಲ. ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಎಂಬುದು ಕೂಡ ಸತ್ಯವಲ್ಲ.

ಬಾಬಾ ಸಾಹೇಬರ ಆಶಯದ ಸಾಮಾಜಿಕ ನ್ಯಾಯವು ಜಾರಿಗೆ ಬರುವುದು ಜನರ ಮನ ಪರಿವರ್ತನೆಯಿಂದಲೇ ಹೊರತು ಕಾನೂನು ಅಥವಾ ವಿಧಿಗಳಿಂದಲ್ಲ. ಆದರೆ ಆ ಮನ ಪರಿವರ್ತನೆಗೆ ಸಂವಿಧಾನದಲ್ಲಿನ ಮೌಲ್ಯಗಳು ಬುನಾದಿ ಆಗಬೇಕಿದೆ. ಸಂವಿಧಾನ ಅರಿವು ಮತ್ತಷ್ಟು ವ್ಯಾಪಕವಾಗಿ ಹರಡಬೇಕಿದೆ. ಬುದ್ಧನ ಮನ ಪರಿವರ್ತನಾ ತತ್ವ ಬೆಳೆಯಬೇಕಿದೆ. ಬಾಬಾ ಸಾಹೇಬರ ಸಮತೆಯ ಕನಸು ನನಸಾಗಬೇಕಿದೆ. ಆಗ ಸಾಮಾಜಿಕ ನ್ಯಾಯದ ನೈಜ ದೃಶ್ಯ ದೇಶದಲ್ಲಿ ಕಾಣಸಿಗಬಹುದಾಗಿರುತ್ತದೆ.


Leave a Reply

Back To Top